ಕಳೆದ 30 ವರ್ಷಗಳಿಂದಲೂ ದೇವು ಭೊರೆ ಹಗ್ಗಗಳನ್ನು ತಯಾರಿಸುತ್ತಿದ್ದಾರೆ. ಎಳೆದು ಹಿಗ್ಗಿಸಬಹುದಾದ ಹತ್ತಿಯ ದಾರವನ್ನು ದುರ್ಬಲ ಎಳೆಗಳಿಂದ ಬೇರ್ಪಡಿಸಲಾಗುತ್ತದೆ. ಎಳೆಯಬಲ್ಲ ದಾರದ ರಾಶಿಯನ್ನು ಆತನ ಮನೆಯ ನೆಲದಿಂದ ಸುಮಾರು ಒಂಭತ್ತು ಅಡಿ ಎತ್ತರದ ತಾರಸಿಯಲ್ಲಿನ ಕೊಕ್ಕೆಯವರೆಗೆ ಹಿಗ್ಗಿಸಿ ಒಂದೂವರೆಯಿಂದ ಎರಡು ಕೆ.ಜಿ. ತೂಕದ ದಾರದ ಎಳೆಗಳ ಕಟ್ಟುಗಳನ್ನು ಸಿದ್ಧಪಡಿಸುತ್ತಾರೆ. ವಾರಕ್ಕೆ ಮೂರು ಬಾರಿ ಏಳು ಗಂಟೆಗಳ ಅವಧಿಯಲ್ಲಿ ಇಂತಹ 10 ಕಟ್ಟುಗಳನ್ನು ತಯಾರಿಸಲಾಗುತ್ತದೆ.
ಕುಟುಂಬದ ಉದ್ದಿಮೆಗೆ ಹತ್ತಿಯ ಪ್ರವೇಶ ತಡವಾಯಿತು. ತಲೆಮಾರುಗಳಿಂದಲೂ ಆತನ ಮನೆತನವು ಅಗವೆ (ಭೂತಾಳೆ) ಸಸ್ಯವನ್ನು ಇದಕ್ಕಾಗಿ ಬಳಸುತ್ತಿತ್ತು. ಅದನ್ನು ಮುಂದುವರೆಸಲು ಸಾಧ್ಯವಾಗದ ಕಾರಣ, ಅವರು ಹತ್ತಿಯನ್ನು ಅವಲಂಬಿಸತೊಡಗಿದರು. ನೈಲಾನ್ ಹಗ್ಗದ ಪ್ರಸರಣದಿಂದಾಗಿ ಈಗ ಈ ಉದ್ಯಮವೂ ಸೊರಗುತ್ತಿದೆ.
ದೇವು ಚಿಕ್ಕ ಹುಡುಗನಿದ್ದಾಗ, ಅವರ ತಂದೆಯು ಮಹಾರಾಷ್ಟ್ರ-ಕರ್ನಾಟಕ ಗಡಿಯ ಹಳ್ಳಿಗಳಲ್ಲಿನ ಕಾಡುಗಳಲ್ಲಿ 10 ಕಿ.ಮೀ. ನಡೆದಾಡಿ, ಮರಾಠಿಯಲ್ಲಿ ಘೇಪತ್ ಎಂತಲೂ, ಸ್ಥಳೀಯವಾಗಿ ಫಡ್ ಎಂತಲೂ ಕರೆಯುವ ಅಗವೆ ಸಸ್ಯವನ್ನು ಸಂಗ್ರಹಿಸಿ, ಅವರು 15 ಕೆ. ಜಿ.ಯಷ್ಟು ಸರಕನ್ನು ತರುತ್ತಿದ್ದರು. ಎಲೆಗಳ ಅಂಚಿನ ಮುಳ್ಳನ್ನು ತೆಗೆದು, ಒಂದು ವಾರ ನೀರಲ್ಲಿ ನೆನೆಸಿ, ಎರಡು ದಿನಗಳವರೆಗೆ ಒಣಗಿಸಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಹಗ್ಗವನ್ನು ತಯಾರಿಸಲು 2 ಕೆ. ಜಿ.ಯಷ್ಟು ನಾರು ದೊರೆಯುತ್ತದೆ. ದೇವೂನ ತಾಯಿ ಮೈನಾಬಾಯಿಯೂ ಈ ಕೆಲಸದಲ್ಲಿ ತೊಡಗುತ್ತಿದ್ದರು. 10 ವರ್ಷದ ದೇವೂ ಸಹ ಕೆಲಸಕ್ಕೆ ಹಾಕುತ್ತಿದ್ದನು.
1990 ರ ಪ್ರಾರಂಭದಲ್ಲಿ ಭೊರೆ ಮತ್ತು ಇತರೆ ಮನೆಗಳವರು ಅಗವೆ ನಾರಿಗೆ ಬದಲಾಗಿ ಹತ್ತಿಯನ್ನು ಬಳಸತೊಡಗಿದರು. ಹತ್ತಿಯು ದೀರ್ಘಕಾಲ ಬಾಳಿಕೆ ಬರುತ್ತದೆ. "ಇದರೊಂದಿಗೆ, ಜನರು ಕಾಡುಗಳನ್ನು ಕಡಿದು ಹಾಕಿದರು. ಫಡ್‍ಗಿಂತಲೂ (ಇದನ್ನು ನೆನೆಸಿ, ಒಣಗಿಸುವುದು ದೀರ್ಘಕಾಲೀನ ಪ್ರಕ್ರಿಯೆ) ಇದರ ಎಳೆಗಳ ಬಳಕೆ ಸುಲಭ", ಎನ್ನುತ್ತಾರೆ ದೇವು.
ದೇವೂನ ಲೆಕ್ಕಾಚಾರದಲ್ಲಿ 1990ರ ಅಂತಿಮ ಭಾಗದವರೆಗೂ, ಆತನ ಹಳ್ಳಿಯ ಸುಮಾರು 100 ಮನೆಗಳವರು ಹಗ್ಗವನ್ನು ತಯಾರಿಸುತ್ತಿದ್ದರು. ಇವರು ಬೆಳಗಾಂ ಜಿಲ್ಲೆಯ ಚಿಕ್ಕೊಡಿ ತಾಲ್ಲೂಕಿನ ಬೊರಗಾಂವ್ ಹಳ್ಳಿಯಲ್ಲಿ ನೆಲೆಸಿದ್ದಾರೆ. ಕಡಿಮೆ ಬೆಲೆಯ ನೈಲಾನ್ ಹಗ್ಗಗಳಿಂದಾಗಿ ಸಿಗುವ ಲಾಭವು ಕಡಿಮೆಯಾಗತೊಡಗಿದಂತೆ, ಅನೇಕರು ಹತ್ತಿರದ ಹಳ್ಳಿಗಳಲ್ಲಿನ ಕೃಷಿ ಅಥವ ಪವರ್‍ಲೂಂಗಳ ಕೆಲಸಕ್ಕೆ ಅಥವ ಆಟೋ ಬಿಡಿಭಾಗಗಳ ವರ್ಕ್‍ಶಾಪ್‍ಗಳಿಗೆ ಹಾಗೂ ಇಚಲ್‍ಕರಂಜಿ ಮತ್ತು ಕಗಲ್ ಊರಿನ ಇನ್ನಿತರೆ ಕಾರ್ಖಾನೆಗಳಿಗೆ ತೆರಳಿದರು.















