ನಾವು ಆದಿವಾಸಿಗಳು ನವಜಾತ ಶಿಶುಗಳಿಗೆ ಹೆಸರನ್ನು ಇಡಲು ನಮ್ಮದೇ ಆದ ವಿಧಾನಗಳನ್ನು ಹೊಂದಿದ್ದೇವೆ. ನಾವು ನದಿಗಳು, ಕಾಡುಗಳು, ಅವುಗಳ ಭೂಮಿ, ವಾರದ ದಿನಗಳು, ಅಥವಾ ಒಂದು ನಿರ್ದಿಷ್ಟ ದಿನಾಂಕ ಅಥವಾ ಪೂರ್ವಜರ ಹೆಸರನ್ನು ಸಹ ಇಡುತ್ತೇವೆ. ಆದರೆ, ಸಮಯ ಕಳೆದಂತೆ, ನಾವು ಬಯಸಿದ ರೀತಿಯಲ್ಲಿ ನಮ್ಮನ್ನು ಹೆಸರಿಸುವ ನಮ್ಮ ಹಕ್ಕನ್ನು ನಮ್ಮಿಂದ ಕಸಿದುಕೊಳ್ಳಲಾಯಿತು. ಸಂಘಟಿತ ಧರ್ಮ ಮತ್ತು ಮತಾಂತರಗಳು ಈ ವಿಶಿಷ್ಟ ಹಕ್ಕನ್ನು ಕಸಿದುಕೊಂಡವು. ನಮ್ಮ ಹೆಸರುಗಳು ಬದಲಾಗುತ್ತಲೇ ಇದ್ದವು, ಮತ್ತು ಅವುಗಳನ್ನು ಮರು ನಿಯೋಜಿಸಲಾಯಿತು. ಆದಿವಾಸಿ ಮಕ್ಕಳು ನಗರದ ಆಧುನಿಕ ಶಾಲೆಗಳಿಗೆ ಹೋದಾಗ, ಸಂಘಟಿತ ಧರ್ಮವು ನಮ್ಮ ಹೆಸರುಗಳನ್ನು ಬದಲಾಯಿಸಿತು. ಅವರು ಪಡೆದ ಪ್ರಮಾಣಪತ್ರಗಳು ನಮ್ಮ ಮೇಲೆ ಬಲವಂತವಾಗಿ ಹೇರಲಾದ ಹೊಸ ಹೆಸರುಗಳಲ್ಲಿದ್ದವು. ನಮ್ಮ ಭಾಷೆಗಳು, ನಮ್ಮ ಹೆಸರುಗಳು, ನಮ್ಮ ಸಂಸ್ಕೃತಿ ಮತ್ತು ಇತಿಹಾಸಗಳು ಈ ರೀತಿಯಾಗಿ ಕೊಲ್ಲಲ್ಪಟ್ಟವು. ಈ ರೀತಿಯಾಗಿ ಹೆಸರಿಸುವುದರಲ್ಲಿ ಪಿತೂರಿ ಇದೆ. ಇಂದು ನಾವು ನಮ್ಮ ಬೇರುಗಳೊಂದಿಗೆ, ನಮ್ಮ ಇತಿಹಾಸದೊಂದಿಗೆ ಸಂಪರ್ಕ ಹೊಂದಿರುವ ಆ ಭೂಮಿಯನ್ನು ಹುಡುಕುತ್ತಿದ್ದೇವೆ. ನಮ್ಮ ಅಸ್ತಿತ್ವದೊಂದಿಗೆ ಗುರುತಿಸಲಾದ ಆ ದಿನಗಳು ಮತ್ತು ದಿನಾಂಕಗಳನ್ನು ನಾವು ಹುಡುಕುತ್ತಿದ್ದೇವೆ.
ಇದು ಯಾರ ಹೆಸರು?
ನಾನು ಸೋಮವಾರದಂದು
ಹುಟ್ಟಿದವ
ಅದಕ್ಕೇ ನನ್ನನ್ನು
ಸೋಮ್ರಾ ಎಂದು ಕರೆಯಲಾಗುತ್ತದೆ.
ಮಂಗಳವಾರ ಜನಿಸಿದ ನನ್ನನ್ನು
ಮಂಗಳ, ಮಂಗರ್ ಎಂದು ಕರೆಯಲಾಗುತ್ತದೆ.
ಬೃಹಸ್ಪತಿ ವಾರದ ದಿನ
ಜನಿಸಿದ ನಾನು ಬಿರ್ಸಾ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತೇನೆ.
ನಾನು ದಿನ, ತಾರೀಖುಗಳಂತೆ
ನನ್ನದೇ ಕಾಲದ ಮೇಲೆ
ನಿಂತಿದ್ದೆ
ಆದರೆ ಅವರು ಬಂದು ನನ್ನ
ಹೆಸರು ಬದಲಾಯಿಸಿದರು
ಹೆಸರಿನೊಂದಿಗೆ ನನ್ನ
ದಿನಗಳು, ತಾರೀಖುಗಳು ಅಳಿಸಿಹೋದವು
ಅವೆಲ್ಲವೂ ನನ್ನದಾಗಿತ್ತು,
ಅದು ನನ್ನ ಕಾಲವಾಗಿತ್ತು
ಈಗ ನಾನು
ರಮೇಶ್, ನರೇಶ್ ಅಥವಾ ಮಹೇಶ್ ಆಗಿದ್ದೇನೆ
ಅಥವಾ
ಆಲ್ಬರ್ಟ್, ಗಿಲ್ಬರ್ಟ್, ಆಲ್ಫ್ರೆಡ್.
ಈ ಹೆಸರುಗಳು ನನ್ನ ನೆಲದ ಹೆಸರುಗಳಲ್ಲ
ಈ ಹೆಸರುಗಳ ನೆಲ ನನ್ನನ್ನು ಸೃಷ್ಟಿಸಲಿಲ್ಲ
ಅವರ ಇತಿಹಾಸ ನನ್ನ ಇತಿಹಾಸವಲ್ಲ
ನಾನು ಅವರ
ಇತಿಹಾಸದೊಳಗೆ.
ನನ್ನ
ಇತಿಹಾಸಕ್ಕಾಗಿ ಹುಡುಕುತ್ತಿದ್ದೇನೆ
ಆದರೆ ಅಲ್ಲಿ ಕಾಣುವುದೇ ಬೇರೆ
ಪ್ರಪಂಚದ
ಪ್ರತಿಯೊಂದು ಮೂಲೆಯಲ್ಲಿ, ಎಲ್ಲೆಡೆ
ನನ್ನ ಕೊಲೆ
ಸರ್ವೇಸಾಮಾನ್ಯ.
ಮತ್ತು
ಪ್ರತಿಯೊಂದು ಕೊಲೆಗೂ ಒಂದು ಸುಂದರವಾದ ಹೆಸರಿರುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು