ಅಸಲಿಗೆ ಪ್ರಭುವಿನ ಬಗ್ಗೆ ಇದ್ದಷ್ಟೇ ಆಸಕ್ತಿಯು ಪಾರ್ವತಿಯ ಬಗ್ಗೆಯೂ ನಮಗಿತ್ತು. ಪಾರ್ವತಿ ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಆನೆಗಳಂತಿರದೆ ಕೊಂಚ ಭಿನ್ನವಾಗಿದ್ದಳು. ಸುರ್ಗುಜದ ಆನೆಗಳು ಯುದ್ಧ ಪ್ರಾವೀಣ್ಯತೆಗಾಗಿ ಇತಿಹಾಸದಲ್ಲಿ ಖ್ಯಾತಿಯನ್ನು ಪಡೆದಂಥವುಗಳು. ಇನ್ನು ಜಿಲ್ಲೆಯ ಐತಿಹಾಸಿಕ ದಾಖಲೆಗಳಲ್ಲಿ ಕಣ್ಣಾಡಿಸಿದರೆ ಮತ್ತಷ್ಟು ಸ್ವಾರಸ್ಯಕರವಾದ ಸಂಗತಿಗಳು ನಮಗೆ ಸಿಕ್ಕುತ್ತವೆ. ``ಮಿಡೀವಲ್ ಪೀರಿಯಡ್ ಎಂದು ಕರೆಯಲಾಗುವ ಮಧ್ಯಯುಗದ ಯುದ್ಧಗಳಲ್ಲಿ ಆನೆಗಳು ಸೈನ್ಯದ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದವು. ಹೀಗಾಗಿ ಸುರ್ಗುಜ ಪ್ರದೇಶದ ಆನೆಗಳಿಗೆ ಆ ಅವಧಿಯಲ್ಲಿ ಭಾರೀ ಬೇಡಿಕೆಯಿತ್ತು. ಅತ್ಯುತ್ತಮ ಆನೆಗಳ ಕೇಂದ್ರವೆಂದೇ ಖ್ಯಾತಿಯನ್ನು ಪಡೆದಿದ್ದ ಸುರ್ಗುಜದಿಂದಲೇ ಯುದ್ಧಕ್ಕಾಗಿ ಆನೆಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ಮಾಲ್ವಾದ ಸುಲ್ತಾನ ಮತ್ತು ಸುರ್ಗುಜದ ಸಾಮಂತರುಗಳ ಸಂಬಂಧದ ಭದ್ರ ತಳಹದಿಯೂ ಇಲ್ಲಿಯ ಆನೆಗಳೇ ಆಗಿದ್ದವು. ಮಾಲ್ವಾದ ಸುಲ್ತಾನರಿಗೆ ಆನೆಗಳನ್ನು ನಿಯಮಿತವಾಗಿ ಸರಬರಾಜು ಮಾಡುವಂತಹ ಪರಿಪಾಠವನ್ನು ಸುರ್ಗುಜದ ರಾಜರುಗಳು ಪರಿಪಾಲಿಸಿಕೊಂಡು ಬಂದಿದ್ದರು'', ಎಂದೇ ಈ ಹೊತ್ತಗೆಗಳಲ್ಲಿ ದಾಖಲಿಸಲಾಗಿದೆ.
ಈ ಒಂದು ಕಾರಣಕ್ಕಾಗಿಯೇ ಮಾಲ್ವಾದ ಸುಲ್ತಾನ ಸುರ್ಗುಜದ ಮೇಲಿದ್ದ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಂಡೇ ಬಂದಿದ್ದ. ಆದರೆ ಪ್ರಭು ಮತ್ತು ಪಾರ್ವತಿಯರನ್ನು ನೋಡುತ್ತಲಿದ್ದರೆ ಇವರ ಪೂರ್ವಜರೆಲ್ಲಾ ಒಂದು ಕಾಲದಲ್ಲಿ ನಿಜಕ್ಕೂ ಯುದ್ಧದಲ್ಲಿ ಕಾದಾಡುತ್ತಿದ್ದರೇ ಎಂದು ಅಚ್ಚರಿಯಿಂದ ಕೇಳುವವರಂತಿದ್ದರು. ಪ್ರಭುವಿನ ಪೂರ್ವಜರ ಕಥೆಗಳಲ್ಲಿ ಕೇಳಿ ತಿಳಿದಂತೆ ಅಂಥಾ ಕ್ಷಾತ್ರಕಳೆಯೇನೂ ಅವನ ಮುಖದಲ್ಲಿ ನಮಗೆ ಕಂಡುಬರಲಿಲ್ಲ. ಪಾರ್ವತಿಯಂತೂ ಆನೆಯ ಪ್ರಭೇದಕ್ಕೆ ತಕ್ಕಂತೆ ಗಾತ್ರದಲ್ಲಿ ದೊಡ್ಡದಾಗಿರುವುದನ್ನು ಬಿಟ್ಟರೆ ಸೌಮ್ಯ ಸ್ವಭಾವದ ಮೊಲದ ಮರಿಯಂತಿದ್ದಳು.
ಅಲೆಮಾರಿಗಳೊಂದಿಗಿನ ಅಲೆದಾಟ:
ಅಷ್ಟಕ್ಕೂ ನಾನು ಮತ್ತು ದಲೀಪ್ ಕುಮಾರ್ ಓಬೀರಾಯನ ಕಾಲದ ಪಳೆಯುಳಿಕೆಯಂತಿದ್ದ ಆ ಜೀಪಿನಲ್ಲಿ ಚಾಲಕನೊಂದಿಗೆ ತೆರಳುತ್ತಿದ್ದಿದ್ದು ಹಳ್ಳಿಯೊಂದರ ಕಡೆ. ಪ್ರಸ್ತುತ ಛತ್ತೀಸ್ ಗಢ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಅಂಬಿಕಾಪುರ***ದಲ್ಲಿ ಬಾಡಿಗೆಗೆಂದು ಪಡೆದುಕೊಂಡಿದ್ದ ನಮ್ಮ ಜೀಪು ಸಾಗುತ್ತಲೇ ಇದ್ದರೂ ಕೂಡ ತಲುಪಬೇಕಾದ ಜಾಗವನ್ನು ನಾವುಗಳು ಇನ್ನೂ ತಲುಪಿರಲಿಲ್ಲ. ಈ ಮಧ್ಯೆ ವಿಶ್ರಾಂತಿಗೆಂದು ಬಿರ್ಹರ್ ಕಾಲೋನಿಯೆಂದು ಕರೆಯಲಾಗುತ್ತಿದ್ದ ಚಿಕ್ಕ ಜಾಗವೊಂದರಲ್ಲಿ ನಾವು ಜೀಪನ್ನು ನಿಲ್ಲಿಸಿದ್ದೆವು. ಹೋ, ಸಂತಾಲ್, ಮುಂಡಾಸ್ ಗಳಂತೆಯೇ ಪ್ರಾಚೀನ ಆಸ್ಟ್ರೋ-ಏಷ್ಯಾಟಿಕ್ ಹಿನ್ನೆಲೆಯ ಬುಡಕಟ್ಟಿನವರೇ ಬಿರ್ಹರ್ ಆದಿವಾಸಿಗಳು. ಚೋಟಾ ನಾಗಪುರ್ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಬಿರ್ಹರ್ ಆದಿವಾಸಿಗಳು ಪಲಮು, ರಾಂಚಿ, ಲೋಹಾರ್ದಗ, ಹಝಾರಿಬಾಗ್, ಸಿಂಗ್ಭಮ್... ಇತ್ಯಾದಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಲೆಯುತ್ತಾ ಜೀವನವನ್ನು ಸಾಗಿಸುವ ಅಲೆಮಾರಿಗಳು. ಭಾರತದಲ್ಲಿ ಕಣ್ಮರೆಯಾಗುತ್ತಿರುವ ಅಸಂಖ್ಯಾತ ಆದಿವಾಸಿ ಜನಾಂಗಗಳಲ್ಲಿ ಬಿರ್ಹರ್ ಕೂಡ ಒಂದು. ಒಂದು ಲೆಕ್ಕಾಚಾರದ ಪ್ರಕಾರ ಪ್ರಸ್ತುತ ಬಿರ್ಹರ್ ಜನಾಂಗದಲ್ಲಿರುವ ಆದಿವಾಸಿಗಳ ಸಂಖ್ಯೆಯು ಎರಡು ಸಾವಿರಕ್ಕೂ ಕಮ್ಮಿ.
ಬಿರ್ಹರ್ ಆದಿವಾಸಿಗಳು ಒಂದು ಸ್ವಾರಸ್ಯಕರ ಹಳ್ಳಿಯೊಂದರ ಬಗ್ಗೆ ನಮಗೆ ಈ ಹಿಂದೆ ತಿಳಿಸಿದ್ದರು. ಇಲ್ಲೇ ಪಕ್ಕದಲ್ಲಿ ಇದೆ ಎಂದು ನಮಗೆ ದಾರಿಯನ್ನೂ ತೋರಿಸಿದ್ದರು. ಈ ಸೂಚನೆಯ ಪ್ರಕಾರವೇ ಮುನ್ನಡೆದಿದ್ದ ನಮಗೆ ಮೈಲುಗಟ್ಟಲೆ ಸಾಗಿದರೂ ನಮಗೆ ಬೇಕಾಗಿರುವ ಹಳ್ಳಿಯು ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಅಲೆಮಾರಿ ಜನಾಂಗಗಳ ``ಇಲ್ಲೇ ಪಕ್ಕದಲ್ಲಿ'' ಎನ್ನುವ ದೂರವನ್ನು ಅಳೆಯುವ ಲೆಕ್ಕಾಚಾರದ ಪರಿಣಾಮವನ್ನು ಕಣ್ಣಾರೆ ಕಂಡು, ಅನುಭವಿಸಿ ನಮಗೆ ಭ್ರಮನಿರಸನವಾಗಿತ್ತು. ಇವೆಲ್ಲವೂ ಕಮ್ಮಿಯೆಂಬಂತೆ ನಮ್ಮ ಜೀಪೂ ಕೂಡ ಕಾಟವನ್ನು ಕೊಡುತ್ತಿದ್ದುದರಿಂದ ಆ ಹಳೆಯ ಜೀಪನ್ನು ಬಿರ್ಹರ್ ಜನರ ಸಮೀಪವೇ ಬಿಟ್ಟು ಕಾಲ್ನಡಿಗೆಯಲ್ಲೇ ಮುಂದುವರಿಯುವ ಸ್ಥಿತಿಯು ಬೇರೆ ನಮಗೆ ಬಂದೊದಗಿತ್ತು.
ಅಂದಹಾಗೆ ಜೀಪಿನ ಚಾಲಕನೂ ಕೂಡ ನಮ್ಮೊಡನೆ ಕಾಲ್ನಡಿಗೆಯಲ್ಲಿ ಬರುವ ನಿರ್ಧಾರವನ್ನು ಮಾಡಿದ್ದ. ಆದರೆ ಬಿರ್ಹರ್ ಗಳ ರೂಪವು ಅವನಲ್ಲಿ ಭಯವನ್ನು ಹುಟ್ಟಿಸಿತ್ತು. ಏನೋ ವಿಚಿತ್ರವಾಗಿ ಕಾಣುತ್ತಾರಪ್ಪಾ ಎಂದು ಬಿರ್ಹರ್ ಗಳ ಬಗ್ಗೆ ಗೊಣಗಿದ್ದ ಆತ. ಈಗ ಪಾರ್ವತಿಯನ್ನು ಕಂಡ ನಂತರವಂತೂ ಅವನ ಭಯವು ಮತ್ತಷ್ಟು ಹೆಚ್ಚಾಗಿತ್ತು. ನನಗಂತೂ ನಮ್ಮ ಜೀಪು ಚಾಲಕನೇ ಎಲ್ಲರಿಗಿಂತ ಭಯಾನಕವಾಗಿ ಕಾಣಿಸುತ್ತಿದ್ದಾನೆ ಎಂದು ತಮಾಷೆಯಾಗಿ ನನ್ನಲ್ಲಿ ಹೇಳಿ ನಕ್ಕಿದ್ದ ದಲೀಪ್. ಕೊನೆಗೂ ಆತ ನಮ್ಮೊಂದಿಗೆ ಬರಲು ಒಪ್ಪಿಕೊಂಡಿದ್ದೇ ಒಂದು ದೊಡ್ಡ ವಿಷಯ.
ಮಾತುಮಾತಲ್ಲೇ ನಮ್ಮೊಂದಿಗೆ ಆತ್ಮೀಯನಂತೆ ಬೆರೆತಿದ್ದ ಪ್ರಭು ``ಬನ್ನಿ, ಒಂದು ರೌಂಡಿಗೆ ಹೋಗೋಣವಂತೆ'' ಎನ್ನುವ ಧಾಟಿಯಲ್ಲಿ ನಮಗೆ ಆಹ್ವಾನವನ್ನು ನೀಡಿದ್ದ. ಆನೆ ಸವಾರಿಯೆಂದು ನಾವೂ ತಕ್ಷಣ ಒಪ್ಪಿಕೊಂಡೆವು. 1993 ರ ಮಧ್ಯಭಾಗದಿಂದ ಶುರುವಾಗಿರುವ ನನ್ನ ಈ ಪ್ರಾಜೆಕ್ಟ್ ನನ್ನನ್ನು ಯಾವ್ಯಾವ ತರಹದ ವಾಹನಗಳಲ್ಲಿ ಕೂರಿಸಿದೆ ಎಂಬ ಯೋಚನೆಯೇ ನನ್ನನ್ನು ಪುಳಕಿತನಾಗಿಸಿತ್ತು. ದೋಣಿ, ರಾಫ್ಟ್‍ಗಳಿಂದ ಹಿಡಿದು ರೈಲುಬಂಡಿಯ ಮಾಡಿನವರೆಗೂ... ಹೀಗೆ ಎಲ್ಲೆಲ್ಲೋ ಕುಳಿತು ಅದೆಷ್ಟು ದೂರವನ್ನು ಸವೆಸಿಲ್ಲ ನಾನು! ಆದರೆ ಆನೆ ಸವಾರಿಯ ಅನುಭವವು ನನ್ನ ಮಟ್ಟಿಗೆ ಇದೇ ಮೊದಲ ಬಾರಿ. ಜುಮ್ಮನೆ ಕುಳಿತು ಕೊಂಚ ದೂರ ಸಾಗಿದ ನಾವು ನಂತರ ಕುಳಿತು ಹರಟೆ ಹೊಡೆಯುವಂತೆ ಪ್ರಭುವಿನೊಂದಿಗೆ ಮಾತಿಗಿಳಿದಿದ್ದೆವು. ನಾವು ಹೋಗಬೇಕಾಗಿದ್ದ ಹಳ್ಳಿಯು ನಮಗೆ ಬಹುತೇಕ ಮರೆತೇಹೋದಂತಾಗಿತ್ತು. ಆ ಹಳ್ಳಿಗಿಂತಲೂ ಕೌತುಕಮಯವಾದ ಹೊಸ ಸಂಗತಿಯೊಂದು ನಮಗೀಗ ಸಿಕ್ಕಿತ್ತು. ಅದೂ ಕೂಡ ``ಇಲ್ಲೇ ಪಕ್ಕದಲ್ಲೇ''. ಈ ಹೊಸ ಆಸಕ್ತಿಯ ಸಂಗತಿ `ಪ್ರಭು' ಅಲ್ಲದೆ ಇನ್ಯಾರು? ಪಾರ್ವತಿಯನ್ನು ಈತ ಹೇಗೆ ನೋಡಿಕೊಳ್ಳುತ್ತಿದ್ದಾನೆ, ಅವಳಿಗೆ ನಿತ್ಯದ ಆಹಾರವನ್ನು ಹೇಗೆ ಹೊಂದಿಸುತ್ತಾನೆ ಎಂಬಿತ್ಯಾದಿ ಪ್ರಶ್ನೆಗಳ ಹಿಂದೆ ನಾವೀಗ ಬಿದ್ದಿದ್ದೆವು.
ವ್ಯಕ್ತಿಗಳನ್ನು ಸಂದರ್ಶಿಸುವುದರಲ್ಲಿ ನಮಗಿರುವ ಪರಿಣತಿಯ ಹೊರತಾಗಿಯೂ ಸುಮಾರು ಒಂದರಿಂದ ಒಂದೂವರೆ ಘಂಟೆಗಳ ಸಂಭಾಷಣೆಯ ನಂತರವೂ ಉಪಯುಕ್ತವೆನಿಸುವಂಥಾ ಮಾಹಿತಿಗಳೇನೂ ನಮಗೆ ಸಿಗಲಿಲ್ಲ. ಪ್ರಭುವಿನ ಮಾತಿನಲ್ಲಿ ಸೌಜನ್ಯವಿತ್ತಾದರೂ ವಿಚಿತ್ರವಾದ ನಿಗೂಢತೆಯೊಂದನ್ನು ಆತ ತನ್ನಲ್ಲಿ ಉಳಿಸಿಕೊಂಡಿದ್ದ. ಸಹೃದಯಿ ಗ್ರಾಮಸ್ಥರಿಂದಲೋ, ಊರಜಾತ್ರೆಯಿಂದಾಗುವ ಸಂಪಾದನೆಯಿಂದಲೋ ಹೇಗೋ ಸುಮಾರಾಗಿ ಜೀವನವು ನಡೆಯುತ್ತಿದೆ ಎಂದಿದ್ದ ಪ್ರಭು. ದೇಶದ ಇನ್ಯಾವುದಾದರೂ ಭಾಗದಲ್ಲಿ ಇಂಥಾ ಮಾತುಗಳನ್ನು ಕೇಳಿದ್ದರೆ ನಾವು ಒಪ್ಪಿಕೊಳ್ಳುತ್ತಿದ್ದೆವೋ ಏನೋ. ಆದರೆ ಪ್ರಭು ಹೇಳುವಂತೆ ಸುರ್ಗುಜದಲ್ಲಿ ಅಂಥದ್ದೇನೂ ಇರಲಿಲ್ಲ ಎಂಬುದು ನಮಗೆ ತಿಳಿದಿತ್ತು. ``ಅದ್ಯಾಕಯ್ಯಾ ಸುಳ್ಳಾಡುತ್ತೀ? ನಿನ್ನೊಂದಿಗಿರುವ ಈ ದೈತ್ಯ ಜೀವಕ್ಕೆ ಕಮ್ಮಿಯೆಂದರೂ ದಿನಕ್ಕೆ ಇನ್ನೂರು ಕಿಲೋದಷ್ಟು ಹುಲ್ಲು ಬೇಕು. ಇನ್ನು ಆಹಾರದ ಲೆಕ್ಕ ಪ್ರತ್ಯೇಕ. ನೀನೇನು ಮಾಡುತ್ತಿ ಎಂದು ನಾನು ಹೇಳುತ್ತೇನೆ ಕೇಳು. ಈ ಊರಿನ ಆಸುಪಾಸಿನಲ್ಲಿರುವ ಗದ್ದೆಗಳಿಗೆ ಪಾರ್ವತಿಯನ್ನು ಬಿಟ್ಟು ಅವಳು ಬೇಕಾದಷ್ಟು ತಿಂದುಕೊಂಡಿರಲಿ ಎಂದು ನೀನು ಬಿಟ್ಟುಬಿಡುತ್ತೀಯಾ. ಹೌದೋ ಅಲ್ಲವೋ?'', ಎಂದು ತೀಕ್ಷ್ಣವಾಗಿಯೇ ಅವನಲ್ಲಿ ಕೇಳಿದ್ದ ದಲೀಪ್.
ಅಸಲಿಗೆ ದಲೀಪನ ಮಾತುಗಳಲ್ಲಿ ಸತ್ಯಾಂಶವಿತ್ತು. ಆದರೆ ಪ್ರಭು ದಲೀಪನ ವಾದವನ್ನು ಸಾರಾಸಗಾಟಾಗಿ ತಳ್ಳಿಹಾಕಿದ್ದ. ಅಷ್ಟಕ್ಕೇ ತನ್ನ ವಾದವನ್ನು ನಿಲ್ಲಿಸದ ದಲೀಪ್ ಮುಂದುವರೆದು, ``ನಿನ್ನ ಬದಲು ಈ ಆನೆಯ ಸಂದರ್ಶನವನ್ನು ತೆಗೆದುಕೊಂಡರೆ ಅದಾದರೂ ಸತ್ಯವನ್ನು ಹೇಳಬಹುದೋ ಏನೋ! ಆಹಾರಕ್ಕಾಗಿ ಪಾರ್ವತಿಯನ್ನು ದಟ್ಟ ಕಾಡಿನೊಳಗೆ ಕರೆದುಕೊಂಡು ಹೋಗುವುದು ನಿನ್ನಿಂದಾಗುವ ಕೆಲಸವಂತೂ ಅಲ್ಲ. ಇನ್ನು ಕಾಡಿನ ಗರ್ಭದಲ್ಲಿರುವ ಗಾತ್ರದಲ್ಲೂ, ಶಕ್ತಿಯಲ್ಲೂ ಕಟ್ಟುಮಸ್ತಾಗಿರುವ ಕಾಡಾನೆಗಳೊಂದಿಗೆ ಅಥವಾ ಇತರ ಕಾಡುಪ್ರಾಣಿಗಳೊಂದಿಗೆ ಕಾದಾಡುವಷ್ಟು ತಾಕತ್ತು ಪಾರ್ವತಿಗೂ ಇಲ್ಲ. ಹೀಗಾಗಿ ಪಾರ್ವತಿಯ ಆಹಾರಕ್ಕಾಗಿ ಗದ್ದೆಗಳನ್ನು ಲೂಟಿ ಮಾಡುವುದು ಬಿಟ್ಟರೆ ಬೇರೆ ಯಾವ ಆಯ್ಕೆಗಳೂ ನಿನಗಿಲ್ಲ. ನೀನು ಸ್ವತಃ ಪಾರ್ವತಿಯನ್ನು ಕಂಡವರ ಗದ್ದೆಗಳಿಗೆ ಕರೆದುಕೊಂಡು ಹೋಗುವುದಲ್ಲದೆ ಪಾರ್ವತಿಯು ಆ ಬೆಳೆಯನ್ನು ಎಗ್ಗಿಲ್ಲದೆ ನಾಶಮಾಡುವುದನ್ನು ಬೇರೆ ಕಣ್ಣಾರೆ ನೋಡುತ್ತೀಯಾ'', ಎಂದಿದ್ದ ದಲೀಪ್. ಹೀಗೆ ಪಾರ್ವತಿಯ ಆಹಾರ, ಅವಳ ದೈನಂದಿನ ಖರ್ಚುಗಳು ಇತ್ಯಾದಿಗಳ ಬಗ್ಗೆ ನಾವು ಪ್ರಭುವಿನೊಂದಿಗೆ ಗಂಭೀರವಾಗಿ ಚರ್ಚಿಸುತ್ತಿದ್ದರೆ ಪಾರ್ವತಿ ತನ್ನ ಸೊಂಡಿಲನ್ನು ಪ್ರಭುವಿನ ತಲೆಯ ಮೇಲೆ ನೇವರಿಸಿದಂತೆ ಆಡಿಸುತ್ತಾ ಆಟವಾಡುವುದರಲ್ಲೇ ತಲ್ಲೀನಳಾಗಿದ್ದಳು. ಪಾರ್ವತಿಯ ಚೇಷ್ಟೆಗಳನ್ನು ನೋಡುತ್ತಿದ್ದರೆ ಪ್ರಭುವಿನ ಮೇಲೆ ಅವಳಿಗಿರುವ ಅಪಾರವಾದ ಪ್ರೀತಿಯಂತೂ ನಿಚ್ಚಳವಾಗಿತ್ತು. ದಲೀಪ್ ಹೇಳುವಂತೆ ಪ್ರಭು ನಿಜಕ್ಕೂ ಅಮಾಯಕರ ಗದ್ದೆಗಳನ್ನು ನಾಶಪಡಿಸಿ ಪಾರ್ವತಿಯನ್ನು ಸಾಕುತ್ತಿದ್ದಿದ್ದು ಹೌದೇ ಆಗಿದ್ದರೆ ಆತ ಈ ಕೆಲಸದಲ್ಲಿ ಚಾಣಾಕ್ಷನಾಗಿದ್ದ ಅನ್ನುವುದನ್ನಂತೂ ಒಪ್ಪಿಕೊಳ್ಳಲೇಬೇಕಿತ್ತು.