ಮೀನಾ ಯಾದವ್ ಭೋಜಪುರಿ, ಬಾಂಗ್ಲಾ, ಮತ್ತು ಹಿಂದಿ ಬಳಸಿ ತಮ್ಮ ವ್ಯವಹಾರವನ್ನು ಸಂಭಾಳಿಸುತ್ತಾರೆ. ಅವರ ಸ್ನೇಹಿತರು, ಕೆರೆಗೆ ದಾರಿ ಕೇಳಿಕೊಂಡು ಬರುವ ಅಪರಿಚಿತರು ಹೀಗೆ ಎಲ್ಲರೊಡನೆಯೂ ಅವರು ಇದೇ ರೀತಿ ವ್ಯವಹರಿಸುತ್ತಾರೆ. ಅವರು ಇರುವುದು ಬಹುಭಾಷಿಕ ಜನರಿರುವ ದಕ್ಷಿಣ ಕೊಲ್ಕತಾದಲ್ಲಿ. “ಇದು [ಭಾಷೆ] ಕೊಲ್ಕತಾದಲ್ಲಿ ಒಂದು ಸಮಸ್ಯೆಯೇ ಅಲ್ಲ” ಎಂದು ವಲಸಿಗರು ತಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳನ್ನು ವಿವರಿಸುತ್ತಾ ಹೇಳುತ್ತಾರೆ.
“ಯೇ ಕೆಹನೇ ಕಾ ಬಾತ್ ಬಾತ್ ಹೈ ಕೀ ಬಿಹಾರಿ ಲೋಗ್ ಬಿಹಾರ್ ಮೇ ರಹೇಗಾ [ಬಿಹಾರದವರು ಬಿಹಾರದಲ್ಲೇ ಇರಬೇಕೆನ್ನುವುದು ಸುಲಭ]. ಸತ್ಯವೆಂದರೆ ಶ್ರಮದ ಕೆಲಸಗಳೆಲ್ಲವೂ ನಮ್ಮಿಂದಲೇ ಮಾಡಲ್ಪಡುತ್ತವೆ. ಎಲ್ಲ ಕೂಲಿಗಳು, ನೀರು ಸಾಗಿಸುವವರು, ಮತ್ತು ಕೂಲಿಗಳು ಬಿಹಾರಿಗಳೇ. ಇವೆಲ್ಲ ಬಂಗಾಳಿಗಳಿಂದ ಸಾಧ್ಯವಿಲ್ಲ. ನೀವು ಹೊಸ ಮಾರ್ಕೆಟ್, ಹೌರಾ, ಶೆಲ್ಡಾ… ಹೀಗೆ ಎಲ್ಲಿ ಬೇಕಾದರೂ ನೋಡಿ. ಅಲ್ಲಿ ಬಿಹಾರಿಗಳು ಭಾರದ ಮೂಟೆಗಳನ್ನು ಹೊರುತ್ತಿರುತ್ತಾರೆ. ಇಷ್ಟು ಶ್ರಮದ ದುಡಿಮೆಯನ್ನು ಮಾಡಿದರೂ ಅವರಿಗೆ ಗೌರವ ಸಿಗುವುದಿಲ್ಲ. ಬಿಹಾರಿಗಳು ಎಲ್ಲರನ್ನೂ ಬಾಬು… ಎಂದು ಕರೆಯುತ್ತಾರೆ. ಆದರೆ ಅವರನ್ನು ಕೆಳ ದರ್ಜೆಯ ಜನರಂತೆ ನೋಡಲಾಗುತ್ತದೆ. “ಮಾವಿನ ಹಣ್ಣಿನ ಖಂಡ ಬಂಗಾಳಿ ಬಾಬುಗಳಿಗೆ ಸಿಕ್ಕರೆ, ನಮಗೆ ಉಳಿಯುವುದು ಗೊರಟೆ ಮಾತ್ರ.” ಅವರು ಎಡೆಬಿಡದೆ ಮಾತನಾಡುತ್ತಲೇ ಇದ್ದರು.
ಮೀನಾ ಯಾದವ್ ರಾಜಕೀಯ ಮತ್ತು ಭಾಷಾ ಅಸ್ಮಿತೆಯ ನಡುವೆ ತಮ್ಮ ಮಾತನ್ನು ಬಹಳ ಜಾಣ್ಮೆಯಿಂದ ಬದಲಾಯಿಸುತ್ತಾರೆ.
ಚೆನೈಯಲ್ಲಿ ನಾವು ಭಾಷೆಯ ಸಮಸ್ಯೆ ಎದುರಿಸಿದ್ದೆವು. ಅಲ್ಲಿನ ಜನರು ಹಿಂದಿ ಅಥವಾ ಭೋಜಪುರಿಯಲ್ಲಿ ಉತ್ತರ ಕೊಡುವುದಿಲ್ಲ. ಅವರು ನಮಗೆ ಅರ್ಥವಾಗದ ಅವರ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ಇಲ್ಲಿ ಆ ಸಮಸ್ಯೆಯಿಲ್ಲ” ಎನ್ನುತ್ತಾರೆ ಮೀನಾ. “ನೋಡಿ ಬಿಹಾರಿ ಭಾಷೆಯೊಂದೇ ಅಲ್ಲ. ನಾವು ಮನೆಯಲ್ಲಿ ಮೂರ್ನಾಲ್ಕು ಭಾಷೆ ಮಾತನಾಡುತ್ತೇವೆ. ಒಮ್ಮೆ ಭೋಜಪುರಿ ಮಾತನಾಡಿದರೆ ಇನ್ನೊಮ್ಮೆ ಹಿಂದಿಯಲ್ಲಿ ಮಾತನಾಡುತ್ತೇವೆ. ಕೆಲವೊಮ್ಮೆ ಧರ್ಭಾಂಗಿಯಲ್ಲೂ (ಮೈಥಿಲಿ) ಮಾತನಾಡುವ ನಾವು ಇನ್ನೂ ಕೆಲವೊಮ್ಮೆ ಬಂಗಾಳಿಯಲ್ಲಿ ಮಾತನಾಡುತ್ತೇವೆ. ನಮಗೆ ಸುಲಭವೆನ್ನಿಸುವುದು ದರ್ಭಾಂಗಿಯಾ” ಎನ್ನುತ್ತಾರೆ ಬಿಹಾರದ ಛಪ್ರಾ ಮೂಲದ ಈ 45 ವರ್ಷದ ಜೋಳದ ವ್ಯಾಪಾರಿ ಮಹಿಳೆ.
"ನಾವು ಆರಾಹ್ ಮತ್ತು ಛಾಪ್ರಾ ಬೋಲಿಯನ್ನು ಸಹ ಬಳಸುತ್ತೇವೆ. ಯಾವುದೇ ಸಮಸ್ಯೆಯಿಲ್ಲ, ನಾವು ಯಾವುದೇ ಭಾಷೆಯಲ್ಲಿ ಮಾತನಾಡಲು ಬಯಸಿದರೂ, ಮಾತಾಡುತ್ತೇವೆ" ಎಂದು ಅವರು ಹೇಳುತ್ತಾರೆ. ಆದರೂ, ಇಷ್ಟೊಂದು ಭಾಷೆಗಳ ಅರಿವು ಅವರ ಅಸಾಧರಣ ಕೌಶಲದ ಒಂದು ಭಾಗ ಎಂದು ನಂಬಲು ಅವರು ಸಿದ್ಧರಿಲ್ಲ.


















