“ಮನೆಗೆಲಸಗಳಲ್ಲಿ ನಿರತರಾಗಿರುವ ಇವರ ದಿನನಿತ್ಯದ ಸಂಪಾದನೆಯಿಂದ, ಆಯಾ ದಿನದ ಖರ್ಚನ್ನು ಮಾತ್ರ ಭರಿಸಲು ಸಾಧ್ಯ. ಆದರೀಗ ಆ ಕೆಲಸವೂ ಇಲ್ಲದಂತಾಗಿದ್ದು, ನಮಗೆ ಹಣವು ದೊರೆಯುವುದಾದರೂ ಎಲ್ಲಿಂದ?” ಎಂಬುದಾಗಿ ಪುಣೆ ನಗರದ ಕೊಥುರ್ಡ್ ಆರಕ್ಷಕ ಠಾಣೆಯ ಸಮೀಪದ ಲಕ್ಷ್ಮಿ ನಗರದ ನಿವಾಸಿಯಾದ ಅಬೊಲಿ ಕಾಂಬ್ಲೆ ಪ್ರಶ್ನಿಸುತ್ತಾರೆ. “ಪಡಿತರ ಧಾನ್ಯಗಳೇ ದೊರೆಯುತ್ತಿಲ್ಲ. ಊಟವೇ ದೊರೆಯದಿದ್ದಲ್ಲಿ ಮಕ್ಕಳು ಬದುಕುವುದಾದರೂ ಹೇಗೆ?”
ಕೋವಿಡ್-19 ಲಾಕ್‌ಡೌನ್ ಘೋಷಣೆಯಾದ ಐದು ದಿನಗಳ ನಂತರ ಅಬೊಲಿಯವರ ಮಾತಿಯಲ್ಲಿ ಸಿಟ್ಟು ಹಾಗೂ ನಿರಾಸೆಯು ಸ್ಪಷ್ಟವಾಗಿ ಕಾಣಬಹುದಿತ್ತು. ಮಾರ್ಚ್ 30ರಂದು ಆಕೆಯು ವಾಸವಿರುವ ಕಾಲೋನಿಗೆ ನಾನು ಭೇಟಿ ನೀಡಿದ್ದೆ. “ಕನಿಷ್ಟ, ಇಂತಹ ಸಮಯದಲ್ಲಾದರೂ ನಮಗೆ ಆಹಾರ ಧಾನ್ಯಗಳು ಪಡಿತರದ ಅಂಗಡಿಯಲ್ಲಿ ದೊರೆಯಬೇಕಿತ್ತು. ಎಲ್ಲ ಹೆಂಗಸರೂ ಮನೆಯಲ್ಲೇ ಇದ್ದಾರೆ. ಪೊಲೀಸರು ನಮ್ಮನ್ನು ಹೊರಗೆ ಹೋಗಲು ಬಿಡುತ್ತಿಲ್ಲ. ನಾವು ಹೊರಗೆ ಹೋಗಿ ಕೆಲಸ ಮಾಡದಿದ್ದಲ್ಲಿ, ದಿನಸಿ ಸಾಮಾನುಗಳನ್ನು ಕೊಳ್ಳಲಾರೆವು. 1 ಮನೆಯನ್ನು ನಿಭಾಯಿಸುವುದಾದರೂ ಹೇಗೆಂಬ ಬಗ್ಗೆ ನಮಗೆ ಚಿಂತೆಯಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ನಮಗೆ ಆಹಾರ ಧಾನ್ಯಗಳು ದೊರೆಯದಿದ್ದಲ್ಲಿ, ಪ್ರಯೋಜನವಾದರೂ ಏನು? ಪಡಿತರವೇ ದೊರೆಯದೆ ನಾವು ನೇಣುಹಾಕಿಕೊಳ್ಳಬೇಕೇ?” ಎಂಬುದಾಗಿ 23ರ ಆಕೆ ಪ್ರಶ್ನಿಸುತ್ತಾರೆ. 995ರಲ್ಲಿ ಸೋಲಾಪುರ್ ಜಿಲ್ಲೆಯ ಅಕೊಲೆಕಟಿ ಹಳ್ಳಿಯಿಂದ ಅಬೊಲಿಯವರ ಕುಟುಂಬವು ಪುಣೆಗೆ ಬಂದಿತು. ಇವರ ವಿವಾಹವು ಏಪ್ರಿಲ್ 16ರಂದು ನೆರವೇರಬೇಕಿತ್ತು. ಆದರೀಗ ಅದು ಮುಂದೂಡಲ್ಪಟ್ಟಿದೆ.
ಏಳು ಛಾಳುಗಳಲ್ಲಿ 850 ಜನರು (ಸರ್ಕಾರೇತರ ಸಮೀಕ್ಷೆಯ ಅನುಸಾರ) ವಾಸಿಸುತ್ತಿರುವ ಕಾಲೋನಿಗೆ ನಾನು ಭೇಟಿಯಿತ್ತಾಗ, ಮನೆಗೆಲಸಗಳಲ್ಲಿ ನಿರತರಾಗಿರುವ ಅಲ್ಲಿನ ಬಹುತೇಕ ಮಹಿಳೆಯರು, ಆಹಾರ ಹಾಗೂ ಹಣದ ಅಭಾವಕ್ಕೆ ಪರಿಹಾರವನ್ನು ಕಂಡುಕೊಳ್ಳಲು, ಸಭೆಯೊಂದನ್ನು ಆಯೋಜಿಸಿದ್ದರು. ಲಕ್ಷ್ಮಿ ನಗರದ 190 ಕುಟುಂಬಗಳಲ್ಲಿನ ಬಹಳಷ್ಟು ಜನ, ಮಹಾರಾಷ್ಟ್ರದ ಅಹ್ಮದ್‌ನಗರ, ಬೀಡ್, ಸೋಲಾಪುರ್ ಹಾಗೂ ಲಾತೂರ್ ಜಿಲ್ಲೆಗಳು ಮತ್ತು ನೆರೆಯ ಕರ್ನಾಟಕದಿಂದ ಬಂದ ವಲಸೆಗಾರರು. ಇವರಲ್ಲಿನ ಅನೇಕರು, ಮಾತಂಗ ದಲಿತ ಸಮುದಾಯಕ್ಕೆ ಸೇರಿದವರು.
ಮಹಾರಾಷ್ಟ್ರದ ಹೊಸ ವರ್ಷ, ಗುಡಿ ಪಡ್ವದ ಹಿಂದಿನ ರಾತ್ರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 21 ದಿನಗಳ ಲಾಕ್‌ಡೌನ್ ಘೋಷಿಸಿದಾಗ, ಮಾರನೆಯ ದಿನದಂದು ಅಗತ್ಯ ವಸ್ತುಗಳು ದೊರೆಯುವ ಬಗ್ಗೆ ಯಾವುದೇ ಸ್ಪಷ್ಟತೆಯಿರಲಿಲ್ಲ. ಇನ್ನೂ ಬಾಗಿಲು ತೆರೆದಿದ್ದ ಅಂಗಡಿಗಳಿಂದ ಜನರು, ತಮಗೆ ಸಾಧ್ಯವಿರುವ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರಾದರೂ, ಅದಾಗಲೇ ಬೆಲೆಗಳು ಗಗನಕ್ಕೇರಿದ್ದವು.
ನಂತರದಲ್ಲಿ, ಆಹಾರ ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಲಭ್ಯಗೊಳಿಸುವುದಾಗಿ ಮತ್ತು ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಹೆಚ್ಚುವರಿಯಾಗಿ ಮೂರು ತಿಂಗಳ ಉಚಿತ ಪಡಿತರವನ್ನು ಪಡೆಯುತ್ತಾರೆಂಬುದಾಗಿ ಸರ್ಕಾರವು ಘೋಷಿಸಿತು.




