ಶೀತಲ್ ವಾಘ್ಮರೆ ಅವರು ಒಳಬರುವ ಫೋನ್ ಕರೆಯ ಶಬ್ದಕ್ಕೆ ಏಕಾಏಕಿ ಗಾಬರಿಯಾಗುತ್ತಾರೆ. ಹಲವು ದಿನಗಳವರೆಗೆ, ಅವರು ತಪ್ಪಿಸಲು ಬಯಸಿದ ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಶನ್ (MFI)ನ ಸಾಲ ವಸೂಲಿ ಪ್ರತಿನಿಧಿಯ ಸಂಖ್ಯೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸಂಖ್ಯೆ ಇದ್ದಲ್ಲಿ ಆಗ ಅವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. "ಅವರು ಕೊರೊನಾ ವೈರಸ್‌ಗೆ ಹೆದರುವುದಿಲ್ಲ" ಎಂದು 31 ವರ್ಷದ ಶೀತಲ್ ಹೇಳುತ್ತಾರೆ. ಪುಣ್ಯಕ್ಕೆ ಕಳೆದ ಒಂದು ವಾರದಿಂದ ಕರೆಗಳು ಕಡಿಮೆಯಾಗಿವೆ. ಅದು ಏಕೆಂದು ಇದುವರೆಗೆ ಶೀತಲ್ ಅವರಿಗೆ ತಿಳಿದಿಲ್ಲ. ಆದರೆ 'ಅವು ಮತ್ತೆ ಶುರುವಾಗುತ್ತವೆ' ಎಂದು ಅವರು ಹೇಳುತ್ತಾರೆ.

ವಾಘ್ಮರೆಯವರ ಕುಟುಂಬ ಸದಸ್ಯರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಾರೆ ಮತ್ತು ಮಹಾರಾಷ್ಟ್ರದ ಮರಾಠವಾಡದ ಕೃಷಿ ಪ್ರದೇಶದಲ್ಲಿರುವ ಒಸ್ಮಾನಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಜುಲೈ 2019ರಲ್ಲಿ, ಶೀತಲ್ ಅವರ ತಾಯಿ ಮಂಗಳಾ ಅವರು ಜನಲಕ್ಷ್ಮಿ ಫೈನಾನ್ಶಿಯಲ್ ಸರ್ವಿಸಸ್ ಎಂಬ ಕಿರು ಹಣಕಾಸು ಸಂಸ್ಥೆಯಿಂದ 60,000 ಸಾಲವನ್ನು ತೆಗೆದುಕೊಂಡಿದ್ದಾರೆ. "ನಾವು ಹೊಲಿಗೆ ಯಂತ್ರವನ್ನು ಖರೀದಿಸಿದೆವು, ಈಗ ನಾನು ಬ್ಲೌಸ್ ಹೊಲಿಯುವ, ಕಸೂತಿ ಹಾಕುವ ಕೆಲಸವನ್ನು ಮಾಡುತ್ತಿದ್ದೇನೆ.ನನ್ನ ಪತಿ ಮತ್ತು ನನ್ನ ಮಗ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ನಮಗೆ ನಮ್ಮದೇ ಆದ ಸ್ವಂತ ಜಮೀನು ಇಲ್ಲ” ಎಂದು 53 ವರ್ಷದ ಮಂಗಳಾ ಹೇಳುತ್ತಾರೆ.

ಅಂದಿನಿಂದ, ವಾಘ್ಮರೆ ಕುಟುಂಬವು ಶೇಕಡಾ 24 ಬಡ್ಡಿ ದರದ ಸಾಲದ ಮೇಲೆ ತಿಂಗಳಿಗೆ 3,230 ರೂ ದಂತೆ ಒಂದು ಕಂತನ್ನೂ ತಪ್ಪಿಸಿಲ್ಲ. "ಆದರೆ ಲಾಕ್‌ಡೌನ್‌ನಿಂದಾಗಿ ನಮ್ಮಲ್ಲಿ ಈಗ ಯಾವುದೇ ಸಂಪಾದನೆಯಿಲ್ಲ" ಎಂದು ಶೀತಲ್ ಹೇಳುತ್ತಾರೆ. "ನಮ್ಮ ಸುತ್ತಮುತ್ತ ಇರುವವರ ಬಳಿಯೂ ಹಣವಿಲ್ಲ. ಲಾಕ್‌ಡೌನ್ ಸಮಯದಲ್ಲಿ ಪ್ರತಿಯೊಬ್ಬರ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ (ಇದು ಮಾರ್ಚ್ 23ರಂದು ಮಹಾರಾಷ್ಟ್ರದಲ್ಲಿ ಆರಂಭವಾಯಿತು). ಯಾರೂ ನಮ್ಮನ್ನು ಕಾರ್ಮಿಕರನ್ನಾಗಿ ನೇಮಿಸಿಕೊಳ್ಳುವುದಿಲ್ಲ, ಮತ್ತು ಯಾರಿಗೂ ಕೂಡಾ ಬಟ್ಟೆಗಳನ್ನು ಹೊಲಿಸಿಕೊಳ್ಳುವ ಸಾಮರ್ಥ್ಯವೂ ಇಲ್ಲ” ಎಂದು ಹೇಳುತ್ತಾರೆ.

ಆದರೆ ಈ ಯಾವ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳದೆ ಎಮ್‌ಎಫ್‌ಐ ಸಾಲಗಾರರಿಗೆ ಫೋನ್‌ ಮಾಡುವುದು ಮತ್ತು ಅವರಿಗೆ ಕಂತುಗಳನ್ನು ಪಾವತಿಸಬೇಕೆಂದು ಒತ್ತಾಯಿಸುವ ಕಾರ್ಯ ಮಾತ್ರ ನಿಂತಿಲ್ಲ. "ಅವರು ಏನೇ ಆದರೂ ನಮಗೆ ಪಾವತಿಸಲು ಹೇಳುತ್ತಾರೆ. ನಿಮಗೆ ಬೇಕಾದುದನ್ನು ಮಾಡಿ, ಆದರೆ ತಿಂಗಳ ಕೊನೆಯಲ್ಲಿ ಪಾವತಿಸಿ ಎಂದು ಕಿರು ಬಂಡವಾಳ ಸಂಸ್ಥೆ ಪ್ರತಿನಿಧಿಗಳು ಹೇಳುತ್ತಾರೆ” ಎಂದು ಶೀತಲ್ ವಿವರಿಸಿದರು.

Sheetal Waghmare's home: the family has not missed a single instalment of the 24 per cent interest loan. 'But we have made absolutely no money since the lockdown', says Sheetal
PHOTO • Sheetal Waghmare

ಶೀತಲ್ ವಾಘ್ಮರೆ ಅವರ ಮನೆ: ಕುಟುಂಬವು ಶೇಕಡಾ 24ರ ಬಡ್ಡಿ ಸಾಲದ ಒಂದು ಕಂತನ್ನು ಕೂಡಾ ತಪ್ಪಿಸಿಲ್ಲ. 'ಆದರೆ ಲಾಕ್‌ಡೌನ್‌ನಿಂದ ನಮ್ಮಲ್ಲಿ ಯಾವುದೇ ಸಂಪಾದನೆ ಇಲ್ಲ' ಎಂದು ಶೀತಲ್ ಹೇಳುತ್ತಾರೆ

ಮಂಗಳಾ (ಮೇಲಿನ ಮುಖ್ಯ ಚಿತ್ರದಲ್ಲಿರುವವರು ) 24 ತಿಂಗಳು ಕಂತುಗಳನ್ನು ಪಾವತಿಸಬೇಕಾಗುತ್ತದೆ, ಮತ್ತು ಎರಡು ವರ್ಷಗಳ ಕೊನೆಯಲ್ಲಿ ಅವರು 77,520 ರೂ.ಪಾವತಿಸಬೇಕಾಗುತ್ತದೆ. ಆದರೆ ಅವರು (ಸಾಲ ಪಡೆದ ಮೊತ್ತ 60,000 ರೂ. ಆಗಿದ್ದರೂ), ಎಮ್‌ಎಫ್‌ಐ ಸಂಸ್ಕರಣಾ ಶುಲ್ಕ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ಅವರ ಕೈಗೆ ಸಾಲ ಬಂದಿದ್ದು  ಕೇವಲ 53,000 ರೂ. ಮಾತ್ರ.

ಈಗ ಅವರು 53,000 ರೂ. ಸಾಲಕ್ಕೆ ಮರುಪಾವತಿಯಾಗಿ 77,520 ರೂ.ಗಳನ್ನು ತುಂಬಬೇಕು, ಇದು ಸಾಲ ಪಡೆದ ಮೊತ್ತಕ್ಕಿಂತ ಶೇ 46ರಷ್ಟು ಅಧಿಕ ಎಂದು ಹೇಳಬಹುದು. ಆದರೆ ಅನೇಕರು ಅವು ಸುಲಭವಾಗಿ ಬರುತ್ತವೆ ಎನ್ನುವ ಕಾರಣಕ್ಕಾಗಿ ಅಂತಹ ಸಾಲಗಳಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ ಎಂದು ರೈತ ನಾಯಕ ಮತ್ತು ಸ್ವಾಭಿಮಾನಿ ಶೆತ್ಕಾರಿ ಸಂಘಟನೆಯ ಸಂಸ್ಥಾಪಕ ರಾಜು ಶೆಟ್ಟಿ ಹೇಳುತ್ತಾರೆ. ಅವರು ಮತ್ತು ಇತರರು ಹೇಳುವಂತೆ ಎಮ್‌ಎಫ್‌ಐಗಳು ಸಹಾಯವನ್ನು ನೀಡುವ ನೆಪದಲ್ಲಿ ಬಡವರನ್ನು ಶೋಷಿಸುತ್ತವೆ. ಈ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನಿಂದ ನಿಯಂತ್ರಿಸಲ್ಪಡುತ್ತವೆ. ಕಡಿಮೆ ಆದಾಯದ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಲು ಅವು ಸಾಲವನ್ನು ನೀಡುತ್ತವೆ.

"ಎಂಎಫ್‌ಐಗಳು ಭೂರಹಿತ ಕಾರ್ಮಿಕರು, ಸಣ್ಣ ಸಮಯದ ಗುತ್ತಿಗೆದಾರರು, ಸಣ್ಣ ಭೂ ಹಿಡುವಳಿದಾರ ರೈತರು ಮತ್ತು ಮುಂತಾದವರನ್ನು ಗುರಿಯಾಗಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಬ್ಯಾಂಕುಗಳು ಅವರಿಗೆ ಸಾಲ ನೀಡುವುದಿಲ್ಲ, ಏಕೆಂದರೆ ಅವರು ಯಾವುದೇ ಮೇಲಾಧಾರವನ್ನು ಹೊಂದಿರುವುದಿಲ್ಲ. ಎಂಎಫ್‌ಐಗಳು ಗುರುತಿನ ಪುರಾವೆಗಳನ್ನು ಮಾತ್ರ ಕೇಳುತ್ತವೆ ಮತ್ತು ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುತ್ತವೆ. ಬಹುತೇಕ ಜನ ಸಾಮಾನ್ಯರು ಮತ್ತು ಹತಾಶರಾಗಿರುವವರು ಸಾಮಾನ್ಯವಾಗಿ ಹೊಸ ಜೀವನದ ಮಾರ್ಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಆಶಾವಾದವನ್ನು ಹೊಂದಿರುತ್ತಾರೆ" ಎಂದು ಶೆಟ್ಟಿ ವಿವರಿಸಿದರು.

ವಾಘ್ಮರೆ ಅವರಿಗೂ ಈ ಭರವಸೆ ಇತ್ತು. ಅವರು ಕಂತುಗಳನ್ನು ಪಾವತಿಸುವಲ್ಲಿ ಯಶಸ್ವಿಯಾದರು. "ಆದರೆ ಸಾಂಕ್ರಾಮಿಕ ಕೊರೊನಾ ಬರುತ್ತೆಂದು ಯಾರು ತಾನೇ ನಿರೀಕ್ಷಿಸಿರುತ್ತಾರೆ ಹೇಳಿ" ಎಂದು ಶೀತಲ್ ಪ್ರಶ್ನಿಸುತ್ತಾರೆ, ಅವರ ತಂದೆ ವಸಂತ್ ಅವರಿಗೆ ಹೃದಯ ಸಂಬಂಧಿ ಖಾಯಿಲೆ ಇದೆ. "ಅವರು ಎರಡು ವರ್ಷಗಳ ಹಿಂದೆ ಆಂಜಿಯೋಪ್ಲಾಸ್ಟಿಗೆ ಒಳಗಾಗಬೇಕಾಯಿತು,  ಇದರಿಂದಾಗಿ ಅವರು ಇಂದಿಗೂ ನಿಯಮಿತ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದೆ. ಅವರು ಇಡೀ ದಿನ ಮನೆಯಲ್ಲಿ ಕುಳಿತು ಸುದ್ದಿಯನ್ನು ನೋಡುತ್ತಿರುತ್ತಾರೆ. ಕೊರೊನಾ ವೈರಸ್‌ನಿಂದಾಗಿ ವಾತಾವರಣವು ಉದ್ವಿಗ್ನವಾಗಿದೆ. ಲಾಕ್‌ಡೌನ್‌ನಿಂದಾಗಿ ಜನರು ಕೆಲಸ ಹುಡುಕುವ ಬಗ್ಗೆ ಚಿಂತಿತರಾಗಿದ್ದಾರೆ. ಮತ್ತು ನಾವು ಕೂಡ ಹೊರಗೆ ಹೋಗಲು ಸಾಧ್ಯವಿಲ್ಲ, ಒಂದು ವೇಳೆ ನಮಗೆ ಸೋಂಕು ತಗುಲಿದರೆ, ನಮ್ಮ ತಂದೆ ಗಂಭೀರ ಸಮಸ್ಯೆಗೆ ಸಿಲುಕುತ್ತಾರೆ ಎಂದು" ಅವರು ಹೇಳಿದರು .

ಶೀತಲ್ ಅವರಿಗೆ ತಮ್ಮ ಕುಟುಂಬವನ್ನು,  ಅದರಲ್ಲೂ ವಿಶೇಷವಾಗಿ ತಮ್ಮ ತಂದೆಯನ್ನು ರಕ್ಷಿಸುವುದು ಎಷ್ಟು ಮುಖ್ಯ ಎಂದು ಚೆನ್ನಾಗಿ ತಿಳಿದಿದೆ. ಅವರ ಕುಟುಂಬ ಮಹಾರ್ ಸಮುದಾಯಕ್ಕೆ ಸೇರಿದ್ದು, ದಲಿತ ಬಸ್ತಿಯಲ್ಲಿ ವಾಸುತ್ತಿದ್ದಾರೆ. ದಕ್ಷಿಣ ಒಸ್ಮಾನಾಬಾದ್‌ನ ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲಿಯೇ ಕಾಲೋನಿ ಇದೆ. ಇದು ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸಲು ಅಸಮರ್ಪಕವಾಗಿದೆ ಮತ್ತು ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಸೊಲ್ಲಾಪುರ ಪಟ್ಟಣದ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಶಿಫಾರಸ್ಸು ಮಾಡುತ್ತದೆ. "ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳು ಹೇಗಿವೆ ಎನ್ನುವುದು ನಿಮಗೆ ಗೊತ್ತೇ ಇದೆ ಮತ್ತು ಇದೀಗ ಆಸ್ಪತ್ರೆಗಳ ಆದ್ಯತೆಯು ಕೊರೊನಾ ವೈರಸ್ ಅನ್ನು ಎದುರಿಸುವುದಾಗಿದೆ." ಎಂದು ಶೀತಲ್ ಹೇಳುತ್ತಾರೆ.

Archana Hunde seeks an extension on paying her loan instalments
PHOTO • Sheetal Waghmare

ಅರ್ಚನಾ ಹುಂಡೆ ಅವರು ತಮ್ಮ ಸಾಲದ ಕಂತುಗಳನ್ನು ಪಾವತಿಸಲು ಕಾಲಾವಧಿಯನ್ನು ವಿಸ್ತರಿಸಲು ಕೋರಿದ್ದಾರೆ

ಸೊಲ್ಲಾಪುರ ಜಿಲ್ಲೆಯಲ್ಲಿ ಸುಮಾರು 100 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಪ್ರಕರಣಗಳು ಹೆಚ್ಚಾದ ನಂತರ ಅಧಿಕಾರಿಗಳು ಏಪ್ರಿಲ್ 24ರ ಮಧ್ಯರಾತ್ರಿಯಿಂದ ಮೂರು ದಿನಗಳ ಕಾಲ ಜಿಲ್ಲೆಯನ್ನು ಲಾಕ್ ಡೌನ್ ಮಾಡಿದರು. "ಇದರರ್ಥ ಒಸ್ಮಾನಾಬಾದ್‌ನಲ್ಲಿ ಪ್ರಕರಣಗಳು ಹೆಚ್ಚಾದರೆ [ಇಲ್ಲಿಯವರೆಗೆ ಕೆಲವೇ ಇವೆ], ರೋಗಿಗಳು ಸೊಲ್ಲಾಪುರಕ್ಕೆ ಹೋಗಲು ಮನಸ್ಸು ಮಾಡುವುದಿಲ್ಲ" ಎಂದು ಶೀತಲ್ ಹೇಳುತ್ತಾರೆ. "ಆದರೆ ಇದ್ಯಾವುದೂ ಕೂಡ ಕಿರು ಹಣಕಾಸು ಸಂಸ್ಥೆಯ ಏಜೆಂಟರುಗಳಿಗೆ ಮುಖ್ಯವಲ್ಲ." ಮಹಾರಾಷ್ಟ್ರದಾದ್ಯಂತ ಸುಮಾರು 42 ಎಂಎಫ್‌ಐಗಳು ಕಾರ್ಯನಿರ್ವಹಿಸುತ್ತವೆ ಎಂದು ಮಹಾರಾಷ್ಟ್ರದ ಮಾಜಿ ಕೃಷಿ ಸಚಿವ ಅನಿಲ್ ಬೋಂಡೆ ನನಗೆ ದೂರವಾಣಿಯಲ್ಲಿ ಹೇಳಿದರು. ಅವರ ಸಾಲ ಸಾವಿರಾರು ಕೋಟಿಗಳಾಗುತ್ತದೆ ಎಂದು ಶೆಟ್ಟಿ ಅಂದಾಜಿಸುತ್ತಾರೆ.

"ಮಹಿಳೆಯರಿಗೆ ಕಿರುಕುಳ ನೀಡುವುದು, ಬೆದರಿಕೆ ಹುಟ್ಟಿಸುವುದು ಇಂತಹ ಹಿನ್ನಲೆಯನ್ನು ಹೊಂದಿದ್ದಾರೆ. ಅವರು ತಮ್ಮ ಸಾಲಗಾರರ ಟ್ರಾಕ್ಟರುಗಳನ್ನು ತೆಗೆದುಕೊಂಡು ಹೋಗುತ್ತಾರೆ ಅಥವಾ ಅವರ ಕೃಷಿ ಉತ್ಪನ್ನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬೆದರಿಕೆ ನೀಡುತ್ತಾರೆ. ಮಹಾರಾಷ್ಟ್ರದಲ್ಲಿ ಎಷ್ಟು ಎಂಎಫ್‌ಐಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ರಾಜ್ಯವು ಪರಿಗಣಿಸಬೇಕು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಅವರ ಕೆಲಸವನ್ನು ನಿಲ್ಲಿಸಬೇಕು" ಎಂದು ಬೋಂಡೆ ಆಗ್ರಹಿಸುತ್ತಾರೆ.

ಕಳೆದ ದಶಕದಲ್ಲಿ, ಎಮ್‌ಎಫ್‌ಐಗಳು ಮಹಾರಾಷ್ಟ್ರದ 31 ಸಹಕಾರಿ ಬ್ಯಾಂಕುಗಳು ಸೃಷ್ಟಿಸಿದ ಶೂನ್ಯದಲ್ಲಿ ಪ್ರವರ್ಧಮಾನಕ್ಕೆ ಬಂದಿವೆ. ಅವುಗಳಲ್ಲಿ ಹೆಚ್ಚಿನವು, ಹಠಮಾರಿ ಸುಸ್ತಿದಾರರು ಮತ್ತು ದುರಾಡಳಿತದಿಂದಾಗಿ ಸಾಲಗಳನ್ನು ನೀಡಲು ಸಾಧ್ಯವಾಗಲಿಲ್ಲ. ಇನ್ನೊಂದು ಆಯ್ಕೆಯು ಹೆಚ್ಚಿನ ಬಡ್ಡಿಯ ಸಾಹುಕಾರ್‌ಗಳು (ಖಾಸಗಿ ಹಣದ ವ್ಯಾಪಾರಿಗಳು) ಆಗಿರುವುದರಿಂದ, ಎಂಎಫ್‌ಐಗಳನ್ನು ಮಧ್ಯಮ ಮಾರ್ಗವಾಗಿ ನೋಡಲಾಗುತ್ತದೆ ಎಂದು ಅಖಿಲ ಭಾರತ ಉದ್ಯೋಗಿಗಳ ಬ್ಯಾಂಕ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ದೇವಿದಾಸ್ ತುಳಜಾಪುರಕರ್ ಹೇಳುತ್ತಾರೆ. "ಆರ್‌ಬಿಐ ಉದ್ದೇಶಪೂರ್ವಕವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಪ್ರವರ್ಧಮಾನಕ್ಕೆ ತರಲು ಮತ್ತು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ" ಎಂದು ಅವರು ಹೇಳುತ್ತಾರೆ. "ಅವರು ಯಾವುದೇ ಭೀತಿಯಿಲ್ಲದೆ , ತಮ್ಮ ಸುಸ್ತಿದಾರರುಗಳಿಗೆ ಬೆದರಿಕೆ ಹಾಕುತ್ತಾರೆ ಮತ್ತು ವ್ಯವಸ್ಥೆಯಿಂದ ಕಾನೂನುಬದ್ಧಗೊಳಿಸಿದ ಸಾಹುಕಾರ್‌ಗಳಂತೆ ಕಾರ್ಯನಿರ್ವಹಿಸುತ್ತಾರೆ." ಎಂದು ಹೇಳುತ್ತಾರೆ.

ಏಪ್ರಿಲ್ 7ರಂದು, ಭಾರತದ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಕೂಡ ಕೊರೊನಾ ವೈರಸ್‌ನಿಂದ ಉಂಟಾದ ಆರ್ಥಿಕ ಕುಸಿತವನ್ನು ಪರಿಗಣಿಸಿ (ವಿವಾದಾತ್ಮಕ) ಚಟುವಟಿಕೆಗಳಿಗೆ ಮೂರು ತಿಂಗಳ ತಾತ್ಕಾಲಿಕ ತಡೆಯನ್ನು ನೀಡಿತು. ಆದರೆ ಎಮ್‌ಎಫ್‌ಐಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಹಾಗೆ ಕಾಣುತ್ತವೆ.

ಒಸ್ಮಾನಾಬಾದ್‌ನ ಜನಲಕ್ಷ್ಮಿ ಫೈನಾನ್ಸ್‌ನ ಪ್ರತಿನಿಧಿ ಈ ವರದಿಗಾರನ ಹಲವಾರು ಫೋನ್ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ.

ಮಂಗಳಾ ಅವರಂತೆಯೇ ಸ್ವ-ಸಹಾಯ ಗುಂಪಿನಲ್ಲಿ ಸಾಲ ತೆಗೆದುಕೊಂಡವರಲ್ಲಿ ಅರ್ಚನಾ ಹುಂಡೆ ಕೂಡ ಒಬ್ಬರು, ಅವರು ಪರಿಶಿಷ್ಟ ಜಾತಿಯ ಮಹಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ಪತಿ ಪಾಂಡುರಂಗ (40) ಅವರು ಸಣ್ಣ-ಪ್ರಮಾಣದ ಗುತ್ತಿಗೆದಾರರಾಗಿದ್ದು, ಒಸ್ಮಾನಾಬಾದ್ ಪಟ್ಟಣದಲ್ಲಿ ನಿರ್ಮಾಣ ಸ್ಥಳಗಳಲ್ಲಿ ಕಚ್ಚಾವಸ್ತು ಮತ್ತು ಕೆಲಸಗಾರರನ್ನು ಒದಗಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕ್ಷೇತ್ರ ಕಾರ್ಯಗಳನ್ನು ಈಗ ಸ್ಥಗಿತಗೊಳಿಸಲಾಗಿದೆ, ಮತ್ತು ಪಾಂಡುರಂಗ ಅವರಿಗೆ ಈಗ ಯಾವುದೇ ಕೆಲಸವಿಲ್ಲ. "ನಾವು ನಿಯಮಿತವಾಗಿ ಸಾಲವನ್ನು ಮರುಪಾವತಿಸುತ್ತಿದ್ದೇವೆ" ಎಂದು 37 ವರ್ಷದ ಅರ್ಚನಾ ಹೇಳುತ್ತಾರೆ, ಅವರ ಕಂತು ಮತ್ತು ಸಾಲದ ಮೊತ್ತವು ಮಂಗಳಾರಂತೆಯೇ ಇರುತ್ತದೆ. "ನಾವು ಸಾಲವನ್ನು ಮನ್ನಾ ಮಾಡಲು ಕೇಳುತ್ತಿಲ್ಲ. ನಾವು ಅವರಿಗೆ ಮನವಿ ಮಾಡುತ್ತಿರುವುದು ಮೂರು ತಿಂಗಳ ಕಾಲಾವಧಿಯ ವಿಸ್ತರಣೆ ಮಾತ್ರ. ಎರಡು ವರ್ಷಗಳಲ್ಲಿ ಕಂತುಗಳನ್ನು ಮುಗಿಸುವ ಬದಲು, ನಾವು ಎರಡು ವರ್ಷ ಮತ್ತು ಮೂರು ತಿಂಗಳಲ್ಲಿ ಮರುಪಾವತಿ ಮಾಡುತ್ತೇವೆ ಎಂದು ವಿನಂತಿಸಿಕೊಳ್ಳುತ್ತಿದ್ದೇವೆ. ಇದೇನು ಅತಿಯಾದ ಕೋರಿಕೆಯೇ? ಎಂದು ಅವರು ಪ್ರಶ್ನಿಸುತ್ತಾರೆ.

The Waghmare family lives in the Dalit basti right next to the district hospital in south Osmanabad
PHOTO • Sheetal Waghmare

ವಾಘ್ಮರೆ ಕುಟುಂಬವು ದಕ್ಷಿಣ ಉಸ್ಮಾನಾಬಾದ್‌ನ ಜಿಲ್ಲಾ ಆಸ್ಪತ್ರೆಯ ಪಕ್ಕದಲ್ಲಿರುವ ದಲಿತ ಬಸ್ತಿಯಲ್ಲಿ ವಾಸಿಸುತ್ತಿದೆ

ಲಾಕ್ ಡೌನ್ ನಲ್ಲಿ ಸರ್ಕಾರದಿಂದ ಮುಂಚಿತವಾಗಿ ಒಂದು ತಿಂಗಳ ಪಡಿತರ-ಗೋದಿ ಮತ್ತು ಅಕ್ಕಿಯನ್ನು ಪಡೆದಿರುವುದರಿಂದಾಗಿ  ದಲಿತ ಬಸ್ತಿಯಲ್ಲಿರುವ ಕುಟುಂಬಗಳು ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಹಸಿವಿನ ಸಮಸ್ಯೆಯನ್ನು ಎದುರಿಸಿಲ್ಲ ಎಂದು ಅರ್ಚನಾ ಹೇಳುತ್ತಾರೆ. "ಇಲ್ಲದಿದ್ದರೆ, ನಾವು ಆಹಾರವನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ಅವರು ಹೇಳುತ್ತಾರೆ. "ಕೈಯಲ್ಲಿ ಸ್ವಲ್ಪ ನಗದು ಪಡೆಯುವ ಬಯಕೆ ಹೇಗಿದೆಯೆಂದರೆ, ಹಣಕಾಸು ಸಚಿವರು ಘೋಷಿಸಿದಾಗಿನಿಂದ (ಮಾರ್ಚ್ 26ರಂದು) 500 ರೂಪಾಯಿಗಳನ್ನು ಮಹಿಳಾ ಜನ್ ಧನ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ, ಜನರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬ್ಯಾಂಕ್‌ಗಳು ಪ್ರತಿದಿನ ಕಿಕ್ಕಿರಿದು ತುಂಬಿರುತ್ತವೆ.

ಒಸ್ಮಾನಾಬಾದ್ ಪಟ್ಟಣದಿಂದ 58 ಕಿಲೋಮೀಟರ್ ದೂರದಲ್ಲಿರುವ ಲಾತೂರ್‌ನ ಖುಂತೆಫಾಲ್ ಹಳ್ಳಿಯಲ್ಲೂ  ಎಂಎಫ್‌ಐಗಳೊಂದಿಗೆ ವ್ಯವಹರಿಸುವ ಆತಂಕ ತೀವ್ರವಾಗಿದೆ. ಹಳ್ಳಿಯ ಹಲವರು, ನೆರೆಯ ಮಾತೆಫಾಲ್ ಹಳ್ಳಿಯ ಹಲವರು ಎಂಎಫ್‌ಐಗಳಿಂದ ಸಾಲ ಪಡೆದಿದ್ದಾರೆ ಎಂದು ಸ್ಥಳೀಯ ಕೃಷಿ ಕಾರ್ಯಕರ್ತರು ಹೇಳುತ್ತಾರೆ. ಅವರಲ್ಲಿ  35 ವರ್ಷದ ವಿಕಾಸ್ ಶಿಂಧೆ, ಅವರು ಈ ವರ್ಷ ಫೆಬ್ರವರಿಯಲ್ಲಿ 50,000 ರೂ.ಹಣವನ್ನು ಸಾಲವಾಗಿ ತಂದಿದ್ದಾರೆ. "ನಾನು 1.5 ಎಕರೆಗಳ ಸಣ್ಣ ಭೂಮಿಯನ್ನು ಹೊಂದಿದ್ದೇನೆ. ಜೀವನ ನಡೆಸಲು ಇದು ಸಾಕಾಗುವುದಿಲ್ಲ, ಹಾಗಾಗಿ ನಾನು ಕಾರ್ಮಿಕನಾಗಿಯೂ ಕೆಲಸವನ್ನು ಮಾಡುತ್ತೇನೆ. ಎರಡು ತಿಂಗಳ ಹಿಂದೆ, ನಾನು ಹಸುವನ್ನು ಖರೀದಿಸಲು ಮತ್ತು ಹೈನುಗಾರಿಕೆಯನ್ನು ಪ್ರಾರಂಭಿಸಲು ಆ ಸಾಲವನ್ನು ತೆಗೆದುಕೊಂಡೆ' ಎಂದು ಹೇಳುತ್ತಾರೆ.

ಈಗ, ಲಾಕ್‌ಡೌನ್‌ನೊಂದಿಗೆ, ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವ ವಿಕಾಸ್ ಅವರು,  3,200 ರೂ.ಗಳ ಮಾಸಿಕ ಕಂತನ್ನು ತುಂಬಲಾಗಲಿಲ್ಲ. "ಲಾಕ್‌ಡೌನ್‌ನಿಂದಾಗಿ, ನನ್ನ ರಬಿ ಫಸಲನ್ನು ಮಾರಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. "ಗೋಧಿ ಇನ್ನೂ ಜಮೀನಿನಲ್ಲಿಯೇ ಇದೆ. ನಮ್ಮ  ಫಸಲನ್ನು ಮಂಡಿಗೆ ಸಾಗಿಸುವುದು ಅಸಾಧ್ಯವಾಗಿದೆ. ಈಗ ನಾವೇನು ಮಾಡಬೇಕು ಹೇಳಿ?  ಎಂದು ಅವರು ಪ್ರಶ್ನಿಸುತ್ತಾರೆ.

ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ರೈತರು ಮತ್ತು ಕಾರ್ಮಿಕರನ್ನು ಬೆದರಿಸದಂತೆ ಮತ್ತು ಲೂಟಿ ಮಾಡದಂತೆ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಶೆಟ್ಟಿಯವರು ಆಗ್ರಹಿಸುತ್ತಾರೆ. "ಎಂಎಫ್‌ಐಗಳು ಬೇರೆ ಯಾವುದೇ ಭಾಷೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ" ಎಂದು ಅವರು ಹೇಳುತ್ತಾರೆ."ಅವರನ್ನು ಸರಿಯಾದ ದಾರಿಗೆ ತರಲು ಕಾನೂನನ್ನು ಬಳಸಬೇಕು."ಎಂದು ಅವರು ಹೇಳುತ್ತಾರೆ.

ಜನರು ಸಾಂಪ್ರದಾಯಿಕ ಹಣಕಾಸು ಸಂಸ್ಥೆಗಳಿಂದ (ಸಹಕಾರಿ ಬ್ಯಾಂಕುಗಳಂತಹ) ಸಾಲಗಳನ್ನು ಪಡೆಯುವಂತೆ ಮಾಡಲು ರಾಜ್ಯವು ಯಾವಾಗಲೂ ಪ್ರಯತ್ನಿಸುತ್ತದೆ ಎಂದು ಮಹಾರಾಷ್ಟ್ರದ ಕೃಷಿ ಮಂತ್ರಿ ದಾದಾ ಭುಸೆ ಅವರು ದೂರವಾಣಿಯಲ್ಲಿ ನನಗೆ ಹೇಳಿದರು."ಆದರೆ ಹಣವನ್ನು ಬಿಡುಗಡೆ ಮಾಡುವ ಸುಲಭ ಪ್ರಕ್ರಿಯೆಯಿಂದಾಗಿ ಹಲವಾರು ಜನರು ಎಂಎಫ್‌ಐಗಳಿಂದ ಸಾಲ ಪಡೆಯುತ್ತಾರೆ ಎಂಬುದು ನಿಜ.  ಈಗ ಜಿಲ್ಲಾಧಿಕಾರಿಗಳಿಗೆ ಇದನ್ನು ಪರಿಶೀಲಿಸಲು ಮತ್ತು ಈ ನಿಟ್ಟಿನಲ್ಲಿ ಪರಿಹರಿಸುವ ಸಾಧ್ಯತೆಯನ್ನು ಕಂಡಿಹಿಡಿಯಲು ಅವರನ್ನು ನಾನು ಕೇಳುತ್ತೇನೆ" ಎಂದು ಅವರು ಹೇಳಿದರು.

ಅಲ್ಲಿಯವರೆಗೆ, ಸಾಲಗಾರರಾದ ಶೀತಲ್ ಮತ್ತು ಅರ್ಚನಾ ಮತ್ತು ವಿಕಾಸ್ ಅವರು ತಮಗೆ ಯಾವಾಗ ಬೇಕಾದರೂ ಎಮ್‌ಎಫ್‌ಐ ವಸೂಲಿ ಏಜೆಂಟ್‌ನ ಕರೆ ಬರಬಹುದೆಂದು ಅವರು ಭಯ ಭೀತಿಯಲ್ಲಿದ್ದಾರೆ.

ಅನುವಾದ - ಎನ್. ಮಂಜುನಾಥ್

Parth M.N.

पार्थ एम एन हे पारीचे २०१७ चे फेलो आहेत. ते अनेक ऑनलाइन वृत्तवाहिन्या व वेबसाइट्ससाठी वार्तांकन करणारे मुक्त पत्रकार आहेत. क्रिकेट आणि प्रवास या दोन्हींची त्यांना आवड आहे.

यांचे इतर लिखाण Parth M.N.
Translator : N. Manjunath