``ಇದು ಡೋಲೇನೂ ಅಲ್ಲ'', ಡೋಲನ್ನು ಕೈಯಿಂದ ಬೊಟ್ಟುಮಾಡಿ ತೋರಿಸುತ್ತಲೇ ಹೇಳುತ್ತಿದ್ದಾಳೆ ಸವಿತಾ.
ತಮ್ಮೆದುರಿಗಿದ್ದ ಸೀಮಿತ ಆಯ್ಕೆಗಳನ್ನು ನಿರಾಕರಿಸಿ, ಬಿಹಾರದ ಪಟ್ನಾ ಜಿಲ್ಲೆಯ ಢಿಬ್ರಾದ ಕೆಲ ಮಹಿಳೆಯರು ತಮ್ಮ ಜೀವನೋಪಾಯಕ್ಕಾಗಿ ಅಸಾಂಪ್ರದಾಯಿಕ ದಾರಿಯನ್ನು ಆರಿಸಿಕೊಂಡಿದ್ದಾರೆ. ದಿನಕಳೆದಂತೆ ಕುಗ್ಗುತ್ತಿರುವ ವ್ಯವಸಾಯ ಯೋಗ್ಯ ಭೂಮಿ ಮತ್ತು ಕೃಷಿ ಕಾರ್ಮಿಕರಾಗಿ ಒಂದಿಷ್ಟು ಬಿಡಿಗಾಸು ಸಂಪಾದಿಸುವ ಅವಕಾಶಗಳು ಕಮ್ಮಿಯಾದಂತೆಲ್ಲಾ ಈ ಮಹಿಳೆಯರು ಡೋಲು ಬಡಿಯುವ ಕೋಲನ್ನು ಹಿಡಿದಿದ್ದರು. ಅಂದಹಾಗೆ ಆರಂಭದಲ್ಲಿ ಹೀಗೆ ಕೋಲನ್ನು ಹಿಡಿದುಕೊಂಡಿದ್ದ ಮಹಿಳೆಯರ ಸಂಖ್ಯೆ ಹದಿನಾರು. ಆದರೆ ಕೌಟುಂಬಿಕ ಒತ್ತಡ, ಗ್ರಾಮಸ್ಥರ ಮುಗಿಯದ ಟೀಕೆ ಮತ್ತು ಕೊಂಕುಮಾತುಗಳಿಂದಾಗಿ ಆರು ಮಹಿಳೆಯರು ಸದ್ದಿಲ್ಲದೆ ಹಿಂದೆ ಸರಿಯಬೇಕಾಗಿ ಬಂದಿತ್ತು. ಹೀಗೆ ಕೊನೆಗೂ ಉಳಿದ, ದಾಸ್ ಪದವನ್ನು ಹೆಸರಿನ ಕೊನೆಯಲ್ಲಿ ಹೊಂದಿರುವ ಹತ್ತು ಮಹಿಳೆಯರು 2012 ರಲ್ಲಿ ರಾಜ್ಯದ ಪ್ರಪ್ರಥಮ ಮಹಿಳಾ ಬ್ಯಾಂಡ್ ಅನ್ನು ಆರಂಭಿಸಿದರು. ಅದುವೇ `ಸರ್ಗಮ್ ಮಹಿಳಾ ಬ್ಯಾಂಡ್'.
``ಈ ಕೈಗಳನ್ನೊಮ್ಮೆ ನೋಡಿ. ಗದ್ದೆಯಲ್ಲಿ ಕೆಲಸ ಮಾಡಿ ಮಾಡಿ ಅಚ್ಚೊತ್ತಿಬಿಡುವ ಕಲೆಗಳು ಈಗ ಕೈಗಳಲ್ಲಿಲ್ಲ. ನಮ್ಮಲ್ಲೀಗ ಹಣವಿದೆ. ಸಮಾಜದಲ್ಲಿ ಗೌರವವೂ ಇದೆ. ಇನ್ನೇನು ಬೇಕು ಹೇಳಿ'', 35 ರ ಹರೆಯದ, ಎರಡು ಮಕ್ಕಳ ತಾಯಿಯಾದ ದೋಮಿನಿ ದಾಸ್ ಕೇಳುತ್ತಿದ್ದಾಳೆ.
ಸವಿತಾ ಮತ್ತು ದೋಮಿನಿಯರಂತೆ ಸರ್ಗಮ್ ಮಹಿಳಾ ಬ್ಯಾಂಡ್ ನ ಉಳಿದ ಸದಸ್ಯರೆಂದರೆ ಪಂಚಮ್, ಅನಿತಾ, ಲಲ್ತಿ, ಮಾಲತಿ, ಸೋನಾ, ಬಿಜಂತಿ, ಚಿತ್ರೇಖ್ ಮತ್ತು ಛಾಟಿಯಾ. ಇವರೆಲ್ಲರೂ ಮಹಾದಲಿತರು. ಬಿಹಾರದಲ್ಲಿ `ಮಹಾದಲಿತ' ಎಂದರೆ ಕಡುಬಡವರಾದ ಮತ್ತು ಪರಿಶಿಷ್ಟ ಜಾತಿಗಳಲ್ಲಿರುವ ವಿಭಾಗಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಜಾತಿತಾರತಮ್ಯಕ್ಕೊಳಗಾದ ಸಮುದಾಯವಿದು. ರಾಜ್ಯದಲ್ಲಿರುವ 16.5 ಮಿಲಿಯನ್ ದಲಿತರಲ್ಲಿ ಮೂರನೇ ಒಂದು ಭಾಗದಷ್ಟಿದ್ದಾರೆ ಈ ಮಹಾದಲಿತರು. ಮಹಿಳಾ ಬ್ಯಾಂಡಿನಲ್ಲಿರುವ ಪ್ರತಿಯೊಬ್ಬ ಮಹಿಳೆಯ ಹಿಂದೆಯೂ ಅವಳ ಪೂರ್ವಜರ ಮೇಲೆ ಮೇಲ್ಜಾತಿಯ ಸಮುದಾಯಗಳು ನಡೆಸಿದ ಹಿಂಸೆ ಮತ್ತು ದೌರ್ಜನ್ಯದ ಕಥೆಗಳಿವೆ. ಇನ್ನು ವೈಯಕ್ತಿಕ ಮಟ್ಟದಲ್ಲೂ ಮೇಲ್ವರ್ಗದ ಸಮುದಾಯಗಳ ಜಮೀನ್ದಾರರಿಂದ ಮತ್ತು ಮನೆಯ ನಾಲ್ಕು ಗೋಡೆಗಳ ಮಧ್ಯೆ ತಮ್ಮ ಗಂಡಂದಿರಾದ ದೌರ್ಜನ್ಯಗಳ ಕರಾಳ ಅನುಭವಗಳು ಇವರಿಗಾಗಿದೆ. ಇವರೆಲ್ಲರೂ ಕೂಡ ದಾನಾಪುರ ಬ್ಲಾಕ್ ಜಮಸೌತ್ ಪಂಚಾಯತ್ ನ ಅಧೀನದಲ್ಲಿ ಬರುವ ಢಿಬ್ರಾದ ನಿವಾಸಿಗಳು.
50 ರ ಪ್ರಾಯದ ಚಿತ್ರೇಖ್ ತಾನು ಪ್ರತೀಬಾರಿ ಮನೆಯಿಂದಾಚೆ ಹೋಗಬಯಸುತ್ತಿದ್ದಾಗಲೂ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದ ಗಂಡನ ಬಗ್ಗೆ ಹೇಳುತ್ತಾರೆ. ``ಮನೆಯ ಕೆಲಸವನ್ನು ಮಾಡಿಕೊಂಡು ಬಿದ್ದಿರು'', ಎನ್ನುತ್ತಿದ್ದ ಆತ ಎಂದು ಹೇಳುವ ಚಿತ್ರೇಖ್ ಮುಂದುವರಿಸುತ್ತಾ ``ಕೆಲವೊಮ್ಮೆ ಏಕಾಏಕಿ ವಿಚಿತ್ರ ಬೇಡಿಕೆಗಳನ್ನೂ ಬೇರೆ ಇಡುತ್ತಿದ್ದ. ಈಗ ನನಗೆ ಹೊರಗೆ ಹೋಗಬೇಕೆಂದಿದ್ದರೆ ಅವನೇ ಸ್ವತಃ ಆದಷ್ಟು ಬೇಗ ಹೊರಡು, ಇಲ್ಲವಾದರೆ ತಡವಾಗುತ್ತದೆ ಎನ್ನುತ್ತಾನೆ. ಹೇಗೆ ಎಲ್ಲವೂ ಬದಲಾಗಿಬಿಟ್ಟಿತು ನೋಡಿ'', ಎಂದು ನಗುತ್ತಾರೆ.
ಡೋಲು ಬಾರಿಸುವ ವಿಚಾರವು ಈ ಮಹಿಳೆಯರಿಗೆ ತಾನಾಗೇ ಹೊಳೆದದ್ದೇನಲ್ಲ. ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದ ಇವರುಗಳು ಜೊತೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹಪ್ಪಳ ಮತ್ತು ಉಪ್ಪಿನಕಾಯಿ ಸಿದ್ಧಪಡಿಸುವುದನ್ನು ಬಿಟ್ಟು ಅದಕ್ಕಿಂತ ಹೆಚ್ಚಿನದೇನನ್ನಾದರೂ ಪ್ರಯತ್ನಿಸಬೇಕೆಂಬ ತುಡಿತವು ಈ ಮಹಿಳೆಯರಲ್ಲಿತ್ತು. ಹೀಗಿರುವಾಗಲೇ ನಾರಿ ಗುಂಜನ್ ಎಂಬ ಪಟ್ನಾ ಮೂಲದ ಸ್ವಸಹಾಯ ಗುಂಪೊಂದು ಬ್ಯಾಂಡ್ ಶುರುಮಾಡುವ ಸಲಹೆಯನ್ನು ಇವರಿಗೆ ಕೊಟ್ಟಿದ್ದಲ್ಲದೆ ತರಬೇತಿಗಾಗಿ ಒಬ್ಬ ಸಂಗೀತ ಶಿಕ್ಷಕನನ್ನೂ ಕೂಡ ನೇಮಿಸಿಬಿಟ್ಟಿತು. ಪಟ್ನಾದಿಂದ 20 ಕಿಲೋಮೀಟರ್ ದೂರದಲ್ಲಿದ್ದರೂ ಆದಿತ್ಯ ಕುಮಾರ್ ಗುಂಜನ್ ಎಂಬಾತ ಈ ಮಹಿಳೆಯರಿಗೆ ತರಬೇತಿ ನೀಡಲು ಪ್ರತಿನಿತ್ಯವೂ ಬರುತ್ತಿದ್ದ. ಒಂದೂವರೆ ವರ್ಷಗಳ ಕಾಲ ವಾರದ ಏಳು ದಿನವೂ ಅಷ್ಟು ದೂರದಿಂದ ಆಗಮಿಸಿ ಈ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದ ಆದಿತ್ಯ ಕುಮಾರ್ ಗುಂಜನ್.
30 ರಿಂದ 50 ರ ವಯಸ್ಸಿನ ನಡುವಿನವರಾಗಿದ್ದ ಗುಂಪಿನ ಸದಸ್ಯರಿಗೆ ಆರಂಭದ ದಿನಗಳು ಬಲು ಸವಾಲಿನದ್ದಾಗಿದ್ದವು. ಗಂಡಸರಂತಾಗುವ ವ್ಯರ್ಥಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಗ್ರಾಮಸ್ಥರ ಕೀಳುಮಟ್ಟದ ಕೊಂಕುಮಾತುಗಳನ್ನಲ್ಲದೆ ಕೋಲು ಹಿಡಿದು ನೋಯುತ್ತಿದ್ದ ಕೈ ಮತ್ತು ಚುಚ್ಚುತ್ತಿರುವ ಪಟ್ಟಿಯೊಂದರ ಸಮೇತವಾಗಿ ಡೋಲನ್ನು ಹಿಡಿದುಕೊಂಡಿದ್ದ ಭುಜದ ನೋವುಗಳನ್ನೂ ಇವರುಗಳು ಸಹಿಸಿಕೊಳ್ಳಬೇಕಿತ್ತು.
ಕ್ರಮೇಣ ಈ ಅಸಾಂಪ್ರದಾಯಿಕ ಮಹಿಳಾ ಡೋಲು ಸಂಗೀತ ತಂಡದ ವಿಷಯವು ಊರಿನ ಮೂಲೆಮೂಲೆಗೆ ಹರಡಿದಂತೆಲ್ಲಾ ಸ್ಥಳೀಯ ಕಾರ್ಯಕ್ರಮಗಳಿಗೆ ಬಂದು ಪ್ರದರ್ಶನವನ್ನು ನೀಡಬೇಕೆಂಬ ಆಹ್ವಾನಗಳು ಹೆಚ್ಚುತ್ತಲೇ ಹೋದವು. ಅಂದಿನಿಂದ ಈ ಮಹಿಳಾ ತಂಡವು ಸಾಕಷ್ಟು ದೂರವನ್ನು ಕ್ರಮಿಸಿದೆ. ಪಟ್ನಾ ಮತ್ತು ಆಸುಪಾಸಿನ ಜಿಲ್ಲೆಗಳಲ್ಲಿ ಪ್ರದರ್ಶನವನ್ನು ನೀಡಿದ್ದಲ್ಲದೆ ಒರಿಸ್ಸಾ, ದೆಹಲಿಗಳಂತಹ ದೂರದ ಪ್ರದೇಶಗಳಿಗೂ ಕೂಡ ಈ ತಂಡವು ಹೋಗಿಬಂದಿದೆ. ರಾಷ್ಟ್ರರಾಜಧಾನಿಯಲ್ಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ ನೆನಪು ಅವರ ಆಪ್ತ ನೆನಪುಗಳಲ್ಲೊಂದು.
ಕೆಲಸ ಮತ್ತು ಹಣಕಾಸುಗಳನ್ನು ಪ್ರತ್ಯೇಕವಾಗಿಯೇ ಇವರುಗಳು ನೋಡಿಕೊಳ್ಳುತ್ತಾರಂತೆ. ಸಂಭಾವನೆಯ ಮೊತ್ತವು ಸಮಾನವಾಗಿ ಎಲ್ಲಾ ಸದಸ್ಯರಿಗೂ ಹಂಚಲ್ಪಟ್ಟರೆ ಕೆಲಸಕ್ಕೆ ಹಾಜರಾಗದ ಸದಸ್ಯೆಗೆ ಸಂಬಳವಾಗಿ ಬರಬೇಕಾದ ಮೊತ್ತವನ್ನು ನೀಡಲಾಗುವುದಿಲ್ಲ. ಕೆಲಸದ ಒತ್ತಡಕ್ಕನುಗುಣವಾಗಿ ಅಭ್ಯಾಸದ ಅವಧಿಗಳು ಬದಲಾಗುತ್ತಿರುತ್ತವೆ (ಗ್ರಾಮಸ್ಥರಿಗೆ ತೊಂದರೆಯಾಗಬಾರದೆಂದು ಇವರುಗಳು ದೂರದ ಗದ್ದೆಗಳಲ್ಲಿ ಅಭ್ಯಾಸವನ್ನು ನಡೆಸುತ್ತಾರೆ). ವಿಸಿಟಿಂಗ್ ಕಾರ್ಡ್ ಅನ್ನು ತಂಡವು ಹೊಂದಿರುವುದಲ್ಲದೆ ತಮ್ಮನ್ನು ತಾವು ಪ್ರಸ್ತುತಪಡಿಸುವ ವಿಚಾರವಾಗಿ ಯಾವಾಗಲೂ ಮಟ್ಟಸವಾಗಿ ವಸ್ತ್ರಗಳನ್ನು ಧರಿಸಿರಬೇಕೆಂಬ ಕೋಡ್ ಗಳನ್ನೂ ಇವರು ರಚಿಸಿದ್ದಾರೆ. ಹಾಗೆಯೇ ಅದೇನು ವ್ಯವಹಾರಗಳಿದ್ದರೂ ಬ್ಯಾಂಡಿನ ನಾಯಕಿಯಾದ ಸವಿತಾಳೊಂದಿಗೇ ಮಾಡಬೇಕೆಂಬ ನಿಯಮವೂ ಕೂಡ ಇವರಲ್ಲಿ ನಿಶ್ಚಯವಾಗಿದೆ.
ಪ್ರತೀ ಮಹಿಳಾ ಸದಸ್ಯೆಯ ಸಂಪಾದನೆಯೂ ಕೂಡ ಅವಳಿಗೇ ಸೇರಿದ್ದು ಎಂಬ ಅಲಿಖಿತ ನಿಯಮವೂ ಇವರಲ್ಲಿದೆ. ``ಪತಿ ಕೋ ನಹೀ ದೇಂಗೇ (ನಮ್ಮ ಗಂಡಂದಿರಿಗೆ ನಾವು ಕೊಡೋದಿಲ್ಲ)'', ಎನ್ನುವುದು ಇವರ ಸ್ಪಷ್ಟ ನಿಲುವು. ``ನಾನು ಸಂಪಾದಿಸುವ ಹಣವನ್ನು ಮಕ್ಕಳ ಶಾಲಾ ಫೀಸ್ ಗೆ ಮತ್ತು ಅವರ ಪುಸ್ತಕಗಳಿಗಾಗಿ ಖರ್ಚು ಮಾಡುತ್ತೇನೆ. ಒಳ್ಳೆಯ ಆಹಾರವನ್ನು ನಾವೀಗ ತಿನ್ನುತ್ತಿದ್ದೇವೆ. ಇನ್ನು ಹಣವನ್ನು ಉಳಿಸುವುದಲ್ಲದೆ ಅಪರೂಪಕ್ಕೊಮ್ಮೆ ನಮ್ಮದೇ ಸಂತೋಷಕ್ಕಾಗಿ ಕೊಂಚ ಹೆಚ್ಚೇ ಖರ್ಚು ಮಾಡುತ್ತೇವೆ. ಈ ಸ್ವಾತಂತ್ರ್ಯವನ್ನು ಪಡೆಯಲು ನಮ್ಮ ಜೀವನದ ಬಹುಪಾಲನ್ನು ನಾವು ಸವೆಸಿಯಾಗಿದೆ. ಈಗ್ಯಾಕೆ ಇದನ್ನು ನಾವು ಬಿಟ್ಟುಕೊಡಬೇಕು?'', ಅನ್ನುತ್ತಿದ್ದಾಳೆ 32 ರ ಹರೆಯದ ಅನಿತಾ.
ಹಳೇಕಾಲದ ಜಾತಿಪದ್ಧತಿಯ ಹಂತಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಅನಿತಾ ಮತ್ತು ಅವಳ ಬ್ಯಾಂಡ್ ತಂಡದ ಇತರ ಸದಸ್ಯರ ಕೇವಲ ಇರುವಿಕೆಯೂ ಕೂಡ ಮೇಲ್ಜಾತಿಯವರ ವಿವಾಹ ಸಮಾರಂಭಗಳನ್ನು ಮತ್ತು ಇತರ ಕಾರ್ಯಕ್ರಮಗಳನ್ನು `ಮಲಿನ'ಗೊಳಿಸಲು ಸಾಕಾಗುತ್ತಿತ್ತು. ಆದರೆ ಇವರುಗಳೇ ಜೊತೆಯಾಗಿ ಸ್ವತಃ ಆಸ್ಥೆಯಿಂದ ರೂಪಿಸಿಕೊಂಡಿರುವ ಈ ಹೊಸ ಜಗತ್ತಿನಲ್ಲಿ ಜಾತಿಬೇಧಗಳಿಲ್ಲದೆ ಎಲ್ಲಾ ವರ್ಗದ ಜನರೂ ಕೂಡ ಇವರಲ್ಲಿರುವ ಪ್ರತಿಭೆಯನ್ನು ಮೆಚ್ಚಿ ತಮ್ಮ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದಾರೆ. ಇವರ ಖ್ಯಾತಿಯು ಎಷ್ಟರ ಮಟ್ಟಿಗೆ ಹಬ್ಬಿದೆಯೆಂದರೆ ತಂಡದ ಲಭ್ಯತೆಗಳಿಗನುಸಾರವಾಗಿ ಹಲವಾರು ಜನರು ಕಾರ್ಯಕ್ರಮಗಳ ದಿನಾಂಕಗಳನ್ನು ನಿರ್ಧರಿಸುವುದೂ ಕೂಡ ಉಂಟು. ಒಂದು ಕಾಲದಲ್ಲಿ ಕಣ್ಣೆತ್ತಿಯೂ ನೋಡಲು ಸಾಧ್ಯವಾಗದಿರುತ್ತಿದ್ದ ಹೋಟೇಲುಗಳ ಕಡೆ ಈಗ ಯಾವುದೇ ಹಿಂಜರಿಕೆಯಿಲ್ಲದೆ ಹೋಗುತ್ತಿರುವ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದಾರೆ ಈ ಮಹಿಳೆಯರು.
ದಿನವೊಂದಕ್ಕೆ ಏನಿಲ್ಲವೆಂದರೂ 10,000 ದಿಂದ 15,000 ರೂಪಾಯಿಗಳವರೆಗಿನ ಸಂಭಾವನೆಯನ್ನು ಈ ಮಹಿಳಾ ತಂಡವು ಪಡೆಯುತ್ತಿದೆ. ಮದುವೆಯ ಸೀಸನ್ನುಗಳಲ್ಲಿ ತಿಂಗಳಿಗೆ ಹತ್ತು ವಿವಾಹ ಸಮಾರಂಭಗಳಾದರೂ ಇರುತ್ತವಂತೆ. ಹೀಗಾಗಿ ಈ ದಿನಗಳಲ್ಲಿ ತಿಂಗಳಿಗೆ ಒಂದೂವರೆ ಲಕ್ಷಗಳಷ್ಟು ಸಂಪಾದನೆಯು ಇವರಿಗಾಗುತ್ತದೆ. ``ಹಣಕಾಸಿನ ವಿಚಾರದಲ್ಲಿ ಅಷ್ಟೇನೂ ಬಿಗಿಯಾಗಿ ನಾವು ನಿಲ್ಲುವುದಿಲ್ಲ. ಹೀಗಾಗಿ ಚೌಕಾಶಿಗಳಾಗುತ್ತವೆ'', ಎನ್ನುತ್ತಾಳೆ ಸವಿತಾ. ಇದನ್ನು ಹೊರತುಪಡಿಸಿದರೆ ಬ್ಯಾಂಡನ್ನು ಕರೆಸಿಕೊಳ್ಳುವಾಗ ಆತಿಥೇಯರು ಒಪ್ಪಲೇಬೇಕಾದ ಷರತ್ತುಗಳೆಂದರೆ: ಹಳ್ಳಿಯಿಂದ ಕರೆದುಕೊಂಡು ಹೋಗಲು ಮತ್ತು ಕೊನೆಯಲ್ಲಿ ಮರಳಿ ಹಳ್ಳಿಗೆ ಬಿಡುವ ವ್ಯವಸ್ಥೆ. ಹಾಗೆಯೇ ರಾತ್ರಿ ಉಳಿದುಕೊಳ್ಳಬೇಕಾದ ಸಂದರ್ಭಗಳು ಬಂದರೆ ಚೆನ್ನಾಗಿರುವ ವಸತಿ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು.
ಅವರ ಹಿಂದಿನ ದಿನಗೂಲಿಗಳಿಗೆ ಹೋಲಿಸಿದರೆ ಈ ಮಹಿಳೆಯರು ಜೀವನವು ಅದಷ್ಟು ಬದಲಾಗಿದೆ ಎಂದು ಕೇಳುತ್ತೀರಾ? MNREGA ಪ್ರಕಾರ ಈ ರಾಜ್ಯದಲ್ಲಿ ನಿಗದಿಪಡಿಸಲಾದ ದಿನಗೂಲಿಯ ಮೊತ್ತವು 168 ರೂಪಾಯಿಗಳು. ಮೇಲ್ನೋಟಕ್ಕೆಂದು ಪರಿಗಣಿಸಿದರೂ ಬ್ಯಾಂಡನ್ನು ಆರಂಭಿಸಿದ ಆ ದಿನಗಳಲ್ಲಿ ಅಗತ್ಯ ಕೌಶಲವಿಲ್ಲದ ಕಾರ್ಮಿಕನೊಬ್ಬನಿಗೆ ನಿಗದಿಪಡಿಸಲಾಗಿದ್ದ ದಿನಗೂಲಿಯ ಮೊತ್ತ 200 ರೂಪಾಯಿಗಳು. ಹೀಗಿರುವಾಗ 2012 ರಲ್ಲಿ ಮಹಿಳಾ ಕೃಷಿಕಾರ್ಮಿಕರಿಗೆ ದಿನಕ್ಕೆ 100 ರೂಪಾಯಿಗಿಂತ ಹೆಚ್ಚಿನ ದಿನಕೂಲಿಯನ್ನೇ ನೀಡಲಾಗುತ್ತಿರಲಿಲ್ಲ.
ಆರ್ಥಿಕ ಸ್ವಾತಂತ್ರ್ಯದ ಹಂಬಲವೆಂಬುದು ಹಳ್ಳಿಯಲ್ಲಿ ಕ್ರಮೇಣ ಅಪಾರದ ಗೌರವದ ರೂಪವನ್ನು ತಾಳಿತಾದರೂ (ತಾವೂ ಬ್ಯಾಂಡಿನ ಸದಸ್ಯರಾಗಬಹುದೇ ಎಂದು ಹಳ್ಳಿಯ ಹಲವು ಮಹಿಳೆಯರು ಈಗ ವಿಚಾರಿಸುತ್ತಿದ್ದಾರಂತೆ) ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನೇನೂ ಇವರುಗಳು ಮರೆತಿಲ್ಲ. ಕಿರುಕುಳ ನೀಡುವ ಗಂಡಂದಿರಿಂದ ಹಿಡಿದು ವರದಕ್ಷಿಣೆಯ ಹಿಂದೆ ಬಿದ್ದಿರುವ ಆಸೆಬುರುಕರವರೆಗೆ ಎಲ್ಲರನ್ನೂ ಇವರುಗಳು ಯಶಸ್ವಿಯಾಗಿ ಸಂಭಾಳಿಸಿದ್ದಾರೆ. ಕ್ರಮೇಣ ಢಿಬ್ರಾ ಮತ್ತು ಆಸುಪಾಸಿನ ಹಳ್ಳಿಗಳಲ್ಲಿ ಆಪ್ತ ಸಮಾಲೋಚಕರಾಗಿ, ಬಿಕ್ಕಟ್ಟುಗಳನ್ನು ಇತ್ಯರ್ಥಮಾಡಲು ಮಧ್ಯಸ್ಥಿಕೆ ಮಾಡುವವರಾಗಿನ ಮಟ್ಟಿಗೂ ಇವರ ಜನಪ್ರಿಯತೆಯು ಹಬ್ಬಿದೆ. ನೈಜ ಹೆಸರುಗಳನ್ನು ಬಹಿರಂಗ ಪಡಿಸಲು ಹೋಗದೇನೇ ಹೀಗೆ ಇತ್ಯರ್ಥಗೊಳಿಸಿದ ಹಲವು ಪ್ರಕರಣಗಳ ಉದಾಹರಣೆಗಳನ್ನು ನೀಡುತ್ತಾರೆ ಇವರು.
ಸದ್ಯ ಒಂಭತ್ತು ಡೋಲುಗಳನ್ನು ಹೊಂದಿರುವ ಬ್ಯಾಂಡಿಗಿರುವ ತಕ್ಷಣದ ಯೋಜನೆಗಳೆಂದರೆ ಬಾಸ್ ಡ್ರಮ್, ಕ್ಯಾಸಿಯೋ ಎಲೆಕ್ಟ್ರಾನಿಕ್ ಕೀಬೋರ್ಡ್ ಮತ್ತು ಒಂದು shaker (ಕೈಯಲ್ಲಿ ಹಿಡಿದು ಅಲ್ಲಾಡಿಸುತ್ತಾ ನಾದವನ್ನು ಹೊರಹೊಮ್ಮಿಸುವ ಒಂದು ಸಂಗೀತ ಸಾಧನ) ಗಳನ್ನು ತಮ್ಮ ವಾದ್ಯಸಂಗ್ರಹಕ್ಕೆ ಸೇರಿಸುವುದು. `ಭಾಂಗ್ರಾ'ದ ಲಯವು ಅವರಿಗೆ ಎಲ್ಲದಕ್ಕಿಂತ ಹೆಚ್ಚು ಪ್ರಿಯವಾಗಿರುವುದಾದರೂ ನಮ್ಮ ಸಂಗೀತ ಪ್ರಸ್ತುತಿಯನ್ನು ಮತ್ತಷ್ಟು ಸುಧಾರಿಸುವ ಯತ್ನದಲ್ಲಿದ್ದಾರೆ ಈ ಉತ್ಸಾಹಿಗಳು. ಟೋಪಿ ಮತ್ತು ಚಿಕ್ಕಚಿಕ್ಕ ತೂಗು ಚೀಲಗಳಂತಹ ಅಲಂಕಾರಗಳೊಂದಿಗೆ ನೋಡಲು `ಮಿಲಿಟರಿ ಬ್ಯಾಂಡಿನ ಸಮವಸ್ತ್ರ'ದಂತಿರುವ ಅಂಗಿ-ಪೈಜಾಮಾಗಳ ಸಮವಸ್ತ್ರವನ್ನು ಹೊಂದುವ ಗುರಿಯೂ ಈ ತಂಡದ್ದು. ತಮ್ಮನ್ನು ತಾವು ಮಿಲಿಟರಿ ಬ್ಯಾಂಡುಗಳೊಂದಿಗೆ ಇವರು ಹೋಲಿಸುವುದರಿಂದ ಅವರಂತೆಯೇ ಕಾಣಿಸಿಕೊಳ್ಳಬೇಕೆಂಬ ಹಂಬಲವೂ ಇವರಿಗಿದೆ.
ತಂಡದ ಇತರ ಸದಸ್ಯರಂತೆಯೇ ಸವಿತಾ ಕೂಡ ತಾನು ಸಾಗಿ ಬಂದ ಪಯಣವನ್ನು ಅಚ್ಚರಿಯಿಂದ ನೋಡುತ್ತಿದ್ದಾಳೆ. ಈ ಕಾರಣಗಳಿಂದಾಗಿಯೇ `ಡೋಲು' ಅನ್ನುವುದು ಅವಳಿಗೆ ಒಂದು ಯಕಶ್ಚಿತ್ ಸಂಗೀತದ ಸಾಧನಕ್ಕಿಂತಲೂ ಬಹುಪಾಲು ಹೆಚ್ಚಿನ ಮೌಲ್ಯವುಳ್ಳದ್ದು. ``ಪ್ರತೀ ಬಾರಿ ಇದನ್ನು ಬಾರಿಸುವಾಗಲೂ ನನ್ನನ್ನು ಹಿಮ್ಮೆಟ್ಟುವಂತೆ ಮಾಡಲು ಹಟಹಿಡಿದಿದ್ದ ಎಲ್ಲಾ ಸವಾಲುಗಳನ್ನೂ ಹೊಡೆದುರುಳಿಸಿದ ಭಾವ ನನ್ನಲ್ಲುಂಟಾಗುತ್ತದೆ'', ಎನ್ನುತ್ತಾರೆ ಆಕೆ.
ವಿಶಾಲ ಜಗತ್ತಿನ ಪುಟ್ಟ ಮೂಲೆಯೊಂದರಲ್ಲಿ `ಸರ್ಗಮ್ ಮಹಿಳಾ ಬ್ಯಾಂಡ್' ಎಂಬ ಹೆಸರಿನಿಂದಾಗಿ ಬದಲಾವಣೆಯು ಕಾಲಿಟ್ಟಿದೆ. ಒಂದೊಂದು ಬಾರಿಯ ಒಂದೊಂದು ಹೊಡೆತವೂ ಇಲ್ಲಿ ಹೊಸ ಭರವಸೆಗೊಂದು ಆಶಾಕಿರಣ.
ಚಿತ್ರಗಳು : ಪೂಜಾ ಅವಸ್ಥಿ