" ಏಕ್ ಮಿನಿಟ್ ಭೀ ಲೇಟ್ ನಹಿ ಹೋ ಸಕ್ತೆ ವರ್ನಾ ಹುಮರಿ ಕ್ಲಾಸ್ ಲಗ್ ಜಾಯೇಗಿ " ["ಒಂದು ನಿಮಿಷ ಕೂಡಾ ತಡವಾಗುವಂತಿಲ್ಲ, ಕ್ಲಾಸ್‌ ಶುರು ಮಾಡಿ ಬಿಡ್ತಾರೆ"], ಎನ್ನುತ್ತಾ ರೀಟಾ ಬಾಜಪೇಯಿ ಅವರು ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದ ಮಹಾನಗರ ಪಬ್ಲಿಕ್‌ ಇಂಟರ್ ಕಾಲೇಜಿನತ್ತ ಆತುರದಿಂದ ಹೆಜ್ಜೆ ಹಾಕಿದರು. ಅದು ಅವರನ್ನು ಕರ್ತವ್ಯದ ಮೇಲೆ ನಿಯೋಜಿಸಲಾಗಿದ್ದ ಮತದಾನ ಕೇಂದ್ರವಾಗಿತ್ತು - ಆದರೆ ಅವರು ಸ್ವತಃ ಮತ ಚಲಾಯಿಸುವ ಸ್ಥಳವಲ್ಲ. ಕಾಲೇಜು ಅವರ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ.

ಅವರು ಆ ದೂರವನ್ನು ಬೆಳಗಿನ 5:30ಕ್ಕೆ ನಡೆದು ಹೋಗುತ್ತಿದ್ದರು. ಅವರು ಡಿಜಿಟಲ್ ಥರ್ಮಾಮೀಟರ್, ಸ್ಯಾನಿಟೈಸರ್ ಬಾಟಲಿಗಳು, ಹಲವಾರು ಜೋಡಿ ಬಳಸಿ ಬಿಸಾಡಬಹುದಾದ ಕೈಗವಸುಗಳು ಮತ್ತು ಮುಖಗವಸುಗಳನ್ನು ಹೊಂದಿರುವ ದೊಡ್ಡ ಚೀಲವನ್ನು ಸ್ಥಳದಲ್ಲಿ ವಿತರಿಸಬೇಕಾಗಿತ್ತು. ಫೆಬ್ರವರಿ 23ರಂದು ಒಂಬತ್ತು ಜಿಲ್ಲೆಗಳ 58 ಇತರ ಕ್ಷೇತ್ರಗಳೊಂದಿಗೆ ಉತ್ತರ ಪ್ರದೇಶದ ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಮತ ಚಲಾಯಿಸಿರುವುದರಿಂದ, ಅದು ಅವರಿಗೆ ವಿಶೇಷ ಕಾರ್ಯನಿರತ ದಿನವಾಗಿತ್ತು.

ಉತ್ತರ ಪ್ರದೇಶದಲ್ಲಿ ಚುನಾವಣೆಗಳು ಮುಗಿದು ಫಲಿತಾಂಶವೂ ಹೊರಬಿದ್ದಿದೆ. ಆದರೆ ಆ ಚುನಾವಣೆಯಲ್ಲಿ ಕೆಲಸ ಮಾಡಿದ ಒಂದು ದೊಡ್ಡ ಗುಂಪಿನ ಮಹಿಳೆಯರಿಗೆ ಅವರ ಪಾಲಿನ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. ಆ ಫಲಿತಾಂಶವು ಬಹಳ ಸಂಕಟದಾಯಕ ಹಾಗೂ ಪ್ರಾಣಾಂತಿಕವೂ ಆಗಿರಬಲ್ಲದೆನ್ನುವುದು ಅವರಿಗೂ ತಿಳಿದಿದೆ. ಭಾರತದ ಅತ್ಯಂತ ಜನನಿಬಿಡ ರಾಜ್ಯದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಸಿಗಲಿರುವ ಫಲಿತಾಂಶ.

ಅವರೇ 163,407 ಮಂದಿ ಆಶಾ ಕಾರ್ಯಕರ್ತರು (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು). ಅವರನ್ನು ಯಾವುದೇ ಔಪಚಾರಿಕ ಲಿಖಿತ ಆದೇಶಗಳಿಲ್ಲದೆ ಮತದಾನ ಕೇಂದ್ರಗಳಲ್ಲಿ ಕೆಲಸ ಮಾಡಲು ಒತ್ತಾಯಪೂರ್ವಕವಾಗಿ ನಿಯೋಜಿಸಲಾಗಿತ್ತು. ಮತ್ತು ಅದಕ್ಕಿಂತಲೂ ವಿಪರ್ಯಾಸವೆಂದರೆ ಮತದಾನ ಕೇಂದ್ರಗಳಲ್ಲಿ ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅವರ ಕೆಲಸ. ಆದರೆ ಅವರಿಗೇ ವೈಯಕ್ತಿಕ ರಕ್ಷಣೆಯ ಖಾತರಿಯಿಲ್ಲ. ಅದೂ 2021ರ ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್-19 ಸಂಬಂಧಿತ ಸುಮಾರು 2,000 ಶಾಲಾ ಶಿಕ್ಷಕರ ಸಾವುಗಳನ್ನು ಕಂಡ ರಾಜ್ಯದಲ್ಲ. ಆ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ, ಅವರನ್ನು ಮಹಾಮಾರಿಯ ಉಲ್ಬಣಾವಸ್ಥೆಯ ನಡುವೆಯೂ ಮತದಾನ ಅಧಿಕಾರಿಗಳಾಗಿ ಅವರ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಶಿಕ್ಷಕರಿಗೆ ಆದೇಶಿಸಲಾಗಿತ್ತು.

Reeta Bajpai spraying sanitiser on a voter's hands while on duty in Lucknow Cantonment assembly constituency on February 23
PHOTO • Jigyasa Mishra

ಫೆಬ್ರವರಿ 22 ರಂದು ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರತ ರೀಟಾ ಬಾ ಜಪೇಯಿ ಮತದಾರರ ಕೈಗೆ ಸ್ಯಾನಿಟೈಸರ್ ಸಿಂಪಡಿಸುತ್ತಿ ರುವುದು

ತಮ್ಮ ಕುಟುಂಬದ ಸದಸ್ಯರ ಸಾವಿನಿಂದ ಜರ್ಜರಿತಗೊಂಡ ಕುಟುಂಬಗಳು ಪರಿಹಾರಕ್ಕಾಗಿ ಹೋರಾಡಿದವು. ಅವರಲ್ಲಿ ಕೆಲವರಿಗೆ ಹೋರಾಟದ ಫಲವಾಗಿ 30 ಲಕ್ಷ ರೂಪಾಯಿಗಳ ಪರಿಹಾರ ದೊರಕಿತ್ತು. ಆದರೆ ಆಶಾ ಕಾರ್ಯಕರ್ತೆಯರ ಬಳಿ ತಾವು ಶಿಕ್ಷೆಯಾಗಿ ಪರಿಗಣಿಸುವ ಕರ್ತವ್ಯಕ್ಕೆ ನಿಯೋಜಿಸಿರುವುದಕ್ಕೆ ಸಾಕ್ಷಿಯಾಗಿ ಯಾವುದೇ ಲಿಖಿತ ದಾಖಲೆಗಳಿಲ್ಲ. ಅಲ್ಲದೆ ಈ ಕೆಲಸದಿಂದಾಗಿ ಹಲವರಿಗೆ ಮತ ಚಲಾಯಿಸುವ ಅವಕಾಶವೂ ಇಲ್ಲದಂತಾಗಿತ್ತು.

ಅವರು ಹೆದರುತ್ತಿರುವುದು ಕೋವಿಡ್‌ - 19ರ ಫಲಿತಾಂಶಕ್ಕೆ. ಮತ್ತು ಅವರು ಇನ್ನೂ ಮೊದಲ ಹಂತದಲ್ಲಿ ಕೆಲಸ ಮಾಡಿದ ಆಶಾರ ಸ್ಥಿತಿ ಹೇಗಿದೆಯೆನ್ನವುದನ್ನು ಇನ್ನೂ ಅಳತೆ ಮಾಡಿಲ್ಲ.

*****

ಲಖನೌದಲ್ಲಿ 1,300ಕ್ಕೂ ಹೆಚ್ಚು ಆಶಾ ಕಾರ್ಯಕರ್ತರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಮೂಲಕ ಕೇವಲ ಮೌಖಿಕ ಆದೇಶಗಳು ಮತ್ತು ಕರ್ತವ್ಯ ಸೂಚನೆಗಳನ್ನು ನೀಡಿ ಮತದಾನ ಕೇಂದ್ರಗಳಲ್ಲಿ ನೇಮಿಸಲಾಯಿತು. ಅವರಿಗೆ ರಾಜ್ಯ ಆರೋಗ್ಯ ಇಲಾಖೆ ಚುನಾವಣಾ ಕರ್ತವ್ಯಗಳನ್ನು ನಿಯೋಜಿಸಿತು.

"ನಮ್ಮನ್ನು ಚಂದನ್ ನಗರ ಪಿಎಚ್‌ಸಿಗೆ ಕರೆಸಿ ಮತದಾನದ ದಿನದಂದು ಅಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಮೌಖಿಕ ಸೂಚನೆಗಳನ್ನು ನೀಡಲಾಯಿತು" ಎಂದು ರೀಟಾ ಹೇಳುತ್ತಾರೆ. ಸೋಂಕು ನಿವಾರಕಗಳನ್ನು ಸಿಂಪಡಿಸಲು, [ಮತದಾರರ] ತಾಪಮಾನವನ್ನು ಪರಿಶೀಲಿಸಲು ಮತ್ತು ಮುಖಗವುಸುಗಳನ್ನು ವಿತರಿಸಲು ನಮಗೆ ತಿಳಿಸಲಾಯಿತು."

ಫೆಬ್ರವರಿ 10 ಮತ್ತು ಮಾರ್ಚ್ 07, 2022ರ ನಡುವೆ ನಡೆದ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಆಶಾ ಕಾರ್ಯಕರ್ತರಿಗೆ ಉತ್ತರ ಪ್ರದೇಶದದುದ್ದಕ್ಕೂ ಇದೇ ರೀತಿಯ ಕರ್ತವ್ಯಗಳಿಗೆ ನಿಯೋಜಿಸಲಾಯಿತು.

"ಆಶಾ ಕಾರ್ಯಕರ್ತರ ಹೆಸರುಗಳು ಮತ್ತು ಅವರಿಗೆ ನಿಯೋಜಿಸಲಾದ [ಮತದಾನ] ಕೇಂದ್ರಗಳ ಹೆಸರಿರುವ ಒಂದು ಹಾಳೆ ಇತ್ತು, ಆದರೆ ಅದರಲ್ಲಿ ಸಹಿ ಇದ್ದಿರಲಿಲ್ಲ," ಎಂದು ಲಕ್ನೋದ ಸರ್ವಾಂಗೀಣ್ ವಿಕಾಸ್ ಇಂಟರ್ ಕಾಲೇಜು ಮತದಾನ ಕೇಂದ್ರದಲ್ಲಿ ಕರ್ತವ್ಯವನ್ನು ನಿಯೋಜಿಸಲಾಗಿದ್ದ 36 ವರ್ಷದ ಪೂಜಾ ಸಾಹು ಹೇಳುತ್ತಾರೆ.

"ಹೇಳಿ, ಮತದಾನ ಕೇಂದ್ರದಲ್ಲಿ ಕಾಲ್ತುಳಿತ ಸಂಭವಿಸಿದರೆ, ಅಥವಾ ನಮಗೆ ಏನಾದರೂ ಆದರೆ, ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?" ಎಂದು ಫೆಬ್ರವರಿ 27ರಂದು ಚಿತ್ರಕೂಟ ನಗರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ 41 ವರ್ಷದ ಶಾಂತಿ ದೇವಿ ಕೇಳುತ್ತಾರೆ. "ಲಿಖಿತ ಪತ್ರವಿಲ್ಲದೆ ನಮ್ಮನ್ನು ಕೆಲಸಕ್ಕೆ ಕರೆಯಲಾಗಿದೆ ಎಂದು ನಾವು ಹೇಗೆ ಸಾಬೀತುಪಡಿಸಲು ಸಾಧ್ಯ? ಆಶಾ ಕಾರ್ಯಕರ್ತರು ಈ ಕುರಿತು ಧ್ವನಿ ಎತ್ತಲು ಹೆದರುತ್ತಾರೆ. ಇಂತಹ ಸಮಯದಲ್ಲಿ ನಾನು ಹೆಚ್ಚು ಮಾತನಾಡಿದರೆ ನನಗೂ ಅಪಾಯ. ಅಲ್ಲದೇ ನಾನು ಒಬ್ಬಳೇ ಬಂದು ಹೋಗಬೇಕು.”

ASHA worker Shanti Devi in Chitrakoot: "Without a written letter how can we prove we were called on duty?"
PHOTO • Jigyasa Mishra

ಆಶಾ ಕಾರ್ಯಕರ್ತರಾದ ಶಾಂತಿ ದೇವಿ ಚಿತ್ರಕೂಟದಲ್ಲಿ: 'ಲಿಖಿತ ಪತ್ರವಿಲ್ಲದೆ ನಮ್ಮನ್ನು ಕೆಲಸಕ್ಕೆ ಕರೆಯಲಾಗಿದೆ ಎಂದು ನಾವು ಹೇಗೆ ಸಾಬೀತುಪಡಿಸಲು ಸಾಧ್ಯ?ʼ

ಆದರೂ, ಶಾಂತಿ ದೇವಿ ಪೋಲಿಂಗ್‌ ಬೂತಿನಲ್ಲಿದ್ದ ಇತರರು ಹಾಜರಿ ಹಾಳೆಯಲ್ಲಿ ಸಹಿ ಹಾಕುವುದನ್ನು ಕಂಡು ಅಲ್ಲಿನ ಮುಖ್ಯಾಧಿಕಾರಿಯನ್ನು ಆಶಾ ಕಾರ್ಯಕರ್ತೆಯರೂ ಸಹಿ ಮಾಡಬೇಕಿದೆಯೇ ಎಂದು ಕೇಳಿದರು. “ಆದರೆ ಅವರು ನಮ್ಮತ್ತ ನೋಡಿ ನಕ್ಕರು,” ಎನ್ನುತ್ತಾರವರು. “ನಮ್ಮನ್ನು ಚುನಾವಣಾ ಆಯೋಗ ನೇಮಿಸಿಲ್ಲದ ಕಾರಣ ನಾವು ಹಾಜಾರಾತಿಗೆ ಸಹಿ ಮಾಡಬೇಕಿಲ್ಲವೆಂದು ಅವರು ಹೇಳಿದರು.” ಇಂತಹ ಅನುಭವ ಎದುರಿಸಿದ ಚಿತ್ರಕೂಟ ಜಿಲ್ಲೆಯ 800 ಆಶಾ ಕಾರ್ಯಕರ್ತರಲ್ಲಿ ಶಾಂತಿ ಕೂಡಾ ಒಬ್ಬರು.

ಚಿತ್ರಕೂಟದ ಇನ್ನೊಬ್ಬ ಆಶಾ ಕಾರ್ಯಕರ್ತೆಯಾದ, 39 ವರ್ಷದ ಕಲವಂತಿ, ಪಿಎಚ್‌ಸಿ ಸಿಬ್ಬಂದಿ ಬಳಿ ತನ್ನ ಕರ್ತವ್ಯ ಪತ್ರವನ್ನು ಕೇಳಿದಾಗ ಅವರ ಬಾಯಿ ಮುಚ್ಚಿಸಲಾಯಿತು. "ನನ್ನ ಪತಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ ಮತ್ತು ನಾನು ಸುಮಾರು ಒಂದು ವಾರದ ಹಿಂದೆ ಅವರ ಕರ್ತವ್ಯ ಪತ್ರವನ್ನು ನೋಡಿದ್ದೆ" ಎಂದು ಅವರು ಹೇಳುತ್ತಾರೆ. "ನನ್ನನ್ನೂ ಕರ್ತವ್ಯದ ಮೇಲೆ ನಿಯೋಜಿಸಿದ್ದರಿಂದ ನನಗೂ ಒಂದು ಪತ್ರ ಸಿಗುತ್ತದೆ ಎಂದು ಭಾವಿಸಿದ್ದೆ. ಆದರೆ ಪಿಎಚ್‌ಸಿಯಿಂದ ಸ್ಯಾನಿಟೈಸಿಂಗ್ ಸಾಮಗ್ರಿಯನ್ನು ಸ್ವೀಕರಿಸಿದ ನಂತರ, ನಾನು ಲಿಖಿತ ಆದೇಶದ ಬಗ್ಗೆ ಕೇಳಿದಾಗ, ಪ್ರಭಾರಿ ಲಖನ್ ಗಾರ್ಗ್ (ಪಿಎಚ್‌ಸಿ ಉಸ್ತುವಾರಿ) ಮತ್ತು ಬಿಸಿಪಿಎಂ [ಬ್ಲಾಕ್ ಕಮ್ಯುನಿಟಿ ಪ್ರೊಸೆಸ್ ಮ್ಯಾನೇಜರ್] ರೋಹಿತ್ ಅವರು ಆಶಾ ಕಾರ್ಯಕರ್ತೆಯರಿಗೆ ಪತ್ರ ಸಿಗುವುದಿಲ್ಲ ಮತ್ತು ಕರ್ತವ್ಯಕ್ಕೆ ಬರಲು ಮೌಖಿಕ ಆದೇಶಗಳು ಸಾಕು ಎಂದು ಹೇಳಿದರು."

ಚುನಾವಣಾ ದಿನದಂದು, ಕಲವಂತಿ 12 ಗಂಟೆಗಳ ಕಾಲ ಮತದಾನ ಕೇಂದ್ರದಲ್ಲಿರಬೇಕಾಗಿತ್ತು. ಆದರೆ ಅವರ ಕರ್ತವ್ಯವು ಅಲ್ಲಿ ಕೊನೆಗೊಂಡಾಗ ಕೆಲಸ ಕೊನೆಗೊಳ್ಳಲಿಲ್ಲ. ಅವರಿಗೆ ಪಿಎಚ್‌ಸಿಯ ಆಕ್ಸಿಲರಿ ನರ್ಸ್ ಮಿಡ್ ವೈಫ್‌ನಿಂದ ಕರೆ ಸ್ವೀಬಂದಿತು. "ನಾನು ಮನೆಗೆ ಹಿಂದಿರುಗಿದ ನಂತರ, ಎಎನ್‌ಎಂ ನನಗೆ ಕರೆ ಮಾಡಿ ಇಡೀ ಹಳ್ಳಿಯ ಸಮೀಕ್ಷೆಯನ್ನು ಪೂರ್ಣಗೊಳಿಸಿ ಮರುದಿನದ ಅಂತ್ಯದೊಳಗೆ ವರದಿಯನ್ನು ಸಲ್ಲಿಸಬೇಕಾಗಿದೆ ಎಂದು ಅಂತಿಮ ಸೂಚನೆ ನೀಡಿದರು."

ಕಲಾವಂತಿಯವರು ಮತದಾನ ಕೇಂದ್ರಕ್ಕೆ ಹಾಜರಾಗುವುದನ್ನು ಕೆಲಸವೆಂದು ಪರಿಗಣಿಸಿರಲಿಲ್ಲ ಮಾತ್ರವಲ್ಲದೆ, ಆ ಕೆಲಸಕ್ಕೆಂದು ಅವರಿಗೆ ಹಣವನ್ನೂ ಪಾವತಿಸಲಾಗಿಲ್ಲ. ಅಲ್ಲಿದ್ದಕರ್ತವ್ಯದಲ್ಲಿರುವ ಇತರ ಸಿಬ್ಬಂದಿಯಷ್ಟೇ ಸಮಯ ಕೆಲಸ ಮಾಡಿದ್ದಕ್ಕಾಗಿ ಯಾವುದೇ ಸಂಭಾವನೆಯನ್ನು ಆಶಾ ಕಾರ್ಯಕರ್ತರಿಗೆ ನೀಡಲಾಗಿಲ್ಲ.  "ಅವರು ನಮಗೆ ಪತ್ರಗಳನ್ನು ನೀಡುವುದಿಲ್ಲ" ಎಂದು ಉತ್ತರ ಪ್ರದೇಶ ಆಶಾ ಒಕ್ಕೂಟದ ಅಧ್ಯಕ್ಷರಾದ ವೀಣಾ ಗುಪ್ತಾ ಹೇಳುತ್ತಾರೆ. "ಪತ್ರವನ್ನು ಕೊಟ್ಟರೆ ಭತ್ಯೆಗಳನ್ನು ಕೊಡಬೇಕಾಗುತ್ತದೆ. ಚುನಾವಣಾ ಕರ್ತವ್ಯದಲ್ಲಿದ್ದ ಎಲ್ಲಾ ಸಿಬ್ಬಂದಿಗೂ ಕೆಲವು ಭತ್ಯೆಗಳು ಸಿಕ್ಕವು, ಆದರೆ ಆಶಾಗಳು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸಿಗಲಿಲ್ಲ. ಅವರು ತಮ್ಮ ಸ್ವಂತ ಹಣವನ್ನು ಪ್ರಯಾಣಕ್ಕಾಗಿ ಖರ್ಚು ಮಾಡುವಂತೆ ಮಾಡಲಾಯಿತು ಮತ್ತು ಸಂಕ್ಷಿಪ್ತವಾಗಿ ಹೇಳುವುದಾದರೆ, ಶೋಷಣೆಗೆ ಒಳಗಾದರು," ಎಂದು ಅವರು ಮುಂದುವರೆದು ಹೇಳುತ್ತಾರೆ.

ಹೀಗಾಗುತ್ತಿರುವುದು ಇದೇ ಮೊದಲಲ್ಲ.

The Mahanagar Public Inter College polling station in Lucknow where Reeta Bajpai was posted to maintain sanitation and hygiene on election day. She worked for 10 hours that day
PHOTO • Jigyasa Mishra

ಚುನಾವಣಾ ದಿನದಂದು ನೈರ್ಮಲ್ಯ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ರೀಟಾ ಬಾ ಜಪೇಯಿ ಅವರನ್ನು ನೇಮಿಸಲಾದ ಲಕ್ನೋದ ಮಹಾನಗರ ಪಬ್ಲಿಕ್‌ ಇಂಟರ್‌ ಕಾಲೇಜ್ ಮತದಾನ ಕೇಂದ್ರ. ಅವ ರು ಆ ದಿನ ಅಲ್ಲಿ 10 ಗಂಟೆಗಳ ಕಾಲ ಕೆಲಸ ಮಾಡಿದ ರು

*****

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕಡಿಮೆ ಸಂಬಳಕ್ಕೆ ಹೆಚ್ಚಿನ ಕೆಲಸದ ಹೊರೆ ಹೊತ್ತಿರುವವರಲ್ಲಿ ಪ್ರಮುಖರಾದ ಆಶಾ ಕಾರ್ಯಕರ್ತರು 2005ರಿಂದ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಅವರು ಸರ್ಕಾರದ ನಿರ್ಲಕ್ಷ್ಯ, ನಿರಾಸಕ್ತಿ ಮತ್ತು ಕೆಲವೊಮ್ಮೆ ಸಂಪೂರ್ಣ ಅನ್ಯಾಯಕ್ಕೂ ಒಳಗಾಗುತ್ತಾರೆ.

ಕೊರೊನಾ ವೈರಸ್ ಮಹಾಮಾರಿಯು ದೇಶದಾದ್ಯಂತ ಉಲ್ಬಣಗೊಳ್ಳುತ್ತಿದ್ದಾಗ, ಮನೆಮನೆಗೆ ತೆರಳಿ ಪರೀಕ್ಷೆಗಳನ್ನು ನಡೆಸುವುದು, ವಲಸೆ ಕಾರ್ಮಿಕರ ಮೇಲೆ ನಿಗಾ ವಹಿಸುವುದು,‌ ಜನರು ಪ್ಯಾಂಡೆಮಿಕ್ ಶಿಷ್ಟಾಚಾರಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು, ರೋಗಿಗಳಿಗೆ ಕೋವಿಡ್-19 ಆರೈಕೆ ಮತ್ತು ಲಸಿಕೆಗಳನ್ನು ಪ್ರವೇಶಿಸಲು ಸಹಾಯ ಮಾಡುವುದು ಮತ್ತು ದತ್ತಾಂಶವನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಪಿಎಚ್‌ಸಿಗಳಿಗೆ ವರದಿ ಮಾಡುವುದು ಇವರ ಕೆಲಸವಾಗಿತ್ತು. ಅವರು ಆ ಸಮಯದಲ್ಲಿ  ಕಳಪೆ ಸುರಕ್ಷತಾ ಉಪಕರಣಗಳು ಮತ್ತು ವಿಳಂಬಪಾವತಿಗಳೊಂದಿಗೆ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದ್ದರು - ದಿನಕ್ಕೆ 8-14 ಗಂಟೆಗಳ ಕಾಲ ಕ್ಷೇತ್ರದಲ್ಲಿರುವುದರ ಅಗಾಧ ಎದುರಾಗಬಹುದಾ ವೈಯಕ್ತಿಕ ಅಪಾಯವನ್ನು ಉಲ್ಲೇಖಿಸಬೇಕಾಗಿಲ್ಲ , ವಾರಾಂತ್ಯದಲ್ಲಿ ಸಹ ಸರಾಸರಿ ಅವರು 25-50 ಮನೆಗಳಿಗೆ ಭೇಟಿ ನೀಡುತ್ತಿದ್ದರು.

"ಕಳೆದ ವರ್ಷದಿಂದ (2020) ನಮ್ಮ ಕೆಲಸದ ಹೊರೆ ಹೆಚ್ಚಾಗಿದೆ. ಹಾಗಾಗಿ ಹೆಚ್ಚುವರಿ ಕೆಲಸಕ್ಕೆ ನಮಗೆ ಹಣ ಸಿಗಬೇಕು, ಅಲ್ಲವೇ ?" ಎಂದು ಚಿತ್ರಕೂಟದಲ್ಲಿ ಆಶಾ ಕಾರ್ಯಕರ್ತೆಯಾಗಿರುವ 32 ವರ್ಷದ ರತ್ನ ಕೇಳುತ್ತಾರೆ. ಯುಪಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ಗೌರವಧನವಾಗಿ 2,200 ರೂ. ಹಾಗೂ ವಿವಿಧ ಆರೋಗ್ಯ ಯೋಜನೆಗಳಡಿಯಲ್ಲಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳೊಂದಿಗೆ, ಅವರು ಒಟ್ಟು 5,300 ರೂ. ಗಳಿಸಬಹುದು.

ಮಾರ್ಚ್ 2020ರ ಕೊನೆಯಲ್ಲಿ, ಕೋವಿಡ್-19 ಆರೋಗ್ಯ ವ್ಯವಸ್ಥೆ ಸನ್ನದ್ಧತೆ ಮತ್ತು ತುರ್ತು ಪ್ರತಿಕ್ರಿಯೆ ಪ್ಯಾಕೇಜ್ ಅಡಿಯಲ್ಲಿ, ಕೇಂದ್ರ ಸರ್ಕಾರವು ಆಶಾಗಳಿಗೆ ಮಾಸಿಕ 'ಕೋವಿಡ್ ಪ್ರೋತ್ಸಾಹಕ' ಧನವಾಗಿ 1,000 ರೂ.ಗಳನ್ನು ನಿಗದಿಪಡಿಸಿತು - ಇದನ್ನು  ಜನವರಿಯಿಂದ ಜೂನ್ 2020ರವರೆಗೆ ಪಾವತಿಸಬೇಕಾಗಿತ್ತು.  ತುರ್ತು ಪ್ಯಾಕೇಜನ್ನು  ವಿಸ್ತರಿಸಿದ್ದರಿಂದ ಮಾರ್ಚ್ 2021ರವರೆಗೆ ಪ್ರೋತ್ಸಾಹ ಧನ ಮುಂದುವರಿಯಿತು.

ಮೇ ತಿಂಗಳಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (ಎಂಒಎಚ್ ಎಫ್‌ಡಬ್ಲ್ಯೂ) ಹಿಂದಿನ ಹಣಕಾಸು ವರ್ಷದಿಂದ ಖರ್ಚು ಮಾಡದ ನಿಧಿ ಬಳಸಿ ಏಪ್ರಿಲ್‌ನಿಂದ ಸೆಪ್ಟೆಂಬರ್ 2021ರವರೆಗೆ ಕೋವಿಡ್ ಪ್ರೋತ್ಸಾಹ ಧನವನ್ನು ಪಾವತಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿತು  . ಆದರೆ ಜುಲೈ 1, 2021ರಿಂದ ಮಾರ್ಚ್ 31, 2022ರವರೆಗೆ ಜಾರಿಗೆ ಬಂದ ಕೋವಿಡ್ ತುರ್ತು ಪ್ಯಾಕೇಜಿನ ಎರಡನೇ ಹಂತದಲ್ಲಿ ಆಶಾಗಳು ಸೇರಿದಂತೆ ಮುಂಚೂಣಿ ಕಾರ್ಮಿಕರಿಗೆ ಪ್ರೋತ್ಸಾಹ ಧನ ನೀಡುವುದನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಏಪ್ರಿಲ್ 2020ರಲ್ಲಿ ನಡೆಸಲಾದ ಆಶಾ ಕಾರ್ಯಕರ್ತೆಯ ಕೆಲಸದ ಪರಿಸ್ಥಿತಿಗಳು ಮತ್ತು ಅವರ ಪಾವತಿಗಳ ಮೇಲಿನ ಸಮೀಕ್ಷೆಯು , 16 ರಾಜ್ಯಗಳಲ್ಲಿ 11 ರಾಜ್ಯಗಳು ಬಾಕಿ ಇರುವ ಕೋವಿಡ್ ಪ್ರೋತ್ಸಾಹ ಧನವನ್ನು ಪಾವತಿಸುವಲ್ಲಿ ವಿಫಲವಾಗಿವೆಯೆನ್ನುತ್ತದೆ. 52 ಆಶಾ ಕಾರ್ಯಕರ್ತರು ಮತ್ತು ಆಶಾ ಯೂನಿಯನ್ ಮುಖಂಡರೊಂದಿಗಿನ ಸಂದರ್ಶನಗಳನ್ನು ಆಧರಿಸಿ "ಮತ್ತು ಒಂದು ರಾಜ್ಯವೂ ಸಹ ಲಾಕ್‌ಡೌನ್ ಸಮಯದಲ್ಲಿ ಅಮಾನತುಗೊಳಿಸಲಾದ ಪ್ರತಿರಕ್ಷಣೆಯಂತಹ ಚಟುವಟಿಕೆಗಳಿಗೆ ನಿಯಮಿತ ಪ್ರೋತ್ಸಾಹ ಧನಗಳನ್ನು ಪಾವತಿಸುತ್ತಿಲ್ಲ" ಎಂದು ವರದಿ ಹೇಳುತ್ತದೆ.

Health workers from primary health centres in UP were put on election duty across UP. They had to spray disinfectants, collect the voters' phones, check their temperature and distribute masks
PHOTO • Jigyasa Mishra
Health workers from primary health centres in UP were put on election duty across UP. They had to spray disinfectants, collect the voters' phones, check their temperature and distribute masks
PHOTO • Jigyasa Mishra

ಉತ್ತರ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಸಿಬ್ಬಂದಿಗಳನ್ನು ಆ ರಾಜ್ಯದೆಲ್ಲೆಡೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಅವರು ಸೋಂಕುನಿವಾರಕಗಳನ್ನು ಸಿಂಪಡಿಸಬೇಕಾಗಿತ್ತು, ಮತದಾರರ ಫೋನುಗಳನ್ನು ಸಂಗ್ರಹಿಸಬೇಕಾಗಿತ್ತು, ಅವರ ದೇಹದ ತಾಪಮಾನವನ್ನು ಪರಿಶೀಲಿಸಬೇಕಾಗಿತ್ತು ಮತ್ತು ಮುಖಗವುಸುಗಳನ್ನು ವಿತರಿಸಬೇಕಾಗಿತ್ತು

ಕೊರೋನಾಕ್ಕೆ ಸಂಬಂಧಿಸಿದ ಎಲ್ಲಾ ಹೆಚ್ಚುವರಿ ಕೆಲಸಗಳನ್ನು ಮಾಡಿದ ನಂತರವೂ, ರತ್ನಾ ಅವರು ಜೂನ್ 2021ರಿಂದ 'ಕೋವಿಡ್ ಇನ್ಸೆಂಟಿವ್' ಪಡೆದಿಲ್ಲ. "ಕಳೆದ ವರ್ಷ [2021] ಏಪ್ರಿಲ್ ಮತ್ತು ಮೇ ತಿಂಗಳಿಗೆ ನಾನು ಕೇವಲ 2,000 ರೂಪಾಯಿಗಳನ್ನು ಸ್ವೀಕರಿಸಿದ್ದೇನೆ" ಎಂದು ಅವರು ಹೇಳುತ್ತಾರೆ. "ತಿಂಗಳಿಗೆ ಸಾವಿರದಂತೆ ಈಗ ನೀವು ಎಷ್ಟು ಬಾಕಿ ಉಳಿದಿದೆ ಎಂದು ಲೆಕ್ಕ ಹಾಕಬಹುದು." ರತ್ನಾ ಅವರಿಗೆ ಪಾವತಿಸದೆ ಉಳಿದಿರುವ ಇನ್ಸೆಂಟಿವ್ ಮೊತ್ತವು ಕನಿಷ್ಠ 4,000 ರೂಪಾಯಿಗಳಷ್ಟಾಗುತ್ತದೆ. ಮತ್ತು ಅದು ಸಿಗುವುದು ಅವರ ಪೇಮೆಂಟ್ ವೋಚರ್‌ಗಳನ್ನು ಎಎನ್‌ಎಂ ಸಹಿ ಮಾಡಿದ ನಂತರ – ಈ ಸಹಿ ಪಡೆಯುವುದು ಇನ್ನೊಂದು ಸಾಹಸ.

“ಎಎನ್‌ಎಮ್‌ಗಳಿಗೆ ನಮ್ಮ ಪೇಮೆಂಟ್ ವೋಚರ್‌ಗಳಿಗೆ ಸಹಿ ಮಾಡುವಂತೆ ಮತ್ತು ನಮಗೆ ಹೇಳಲಾದ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದ್ದೇವೆಂದು ಮನವರಿಕೆ ಮಾಡಿಸುವುದು ಎಷ್ಟು ಕಷ್ಟದ ಕೆಲಸವೆಂದು ಹೇಳಿದರೆ ನೀವು ನಂಬಲಿಕ್ಕಿಲ್ಲ.” ಎಂದು ರತ್ನ ಹೇಳುತ್ತಾರೆ. “ಕೆಲವು ತುರ್ತು ಪರಿಸ್ಥಿತಿ ಅಥವಾ ಆರೋಗ್ಯ ಸಮಸ್ಯೆಯಿಂದಾಗಿ ನಾನು ಒಂದು ದಿನ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಅವರು  'ಈ ತಿಂಗಳು ನೀವು ಸರಿಯಾಗಿ ಕೆಲಸ ಮಾಡಲಿಲ್ಲ' ಎಂದು ಹೇಳುತ್ತಾರೆ ಮತ್ತು ಆ ತಿಂಗಳ 1,000 ರೂಪಾಯಿ ಪ್ರೋತ್ಸಾಹ ಧನವನ್ನು ಕಡಿತಗೊಳಿಸುತ್ತಾರೆ, ಇದು ತಿಂಗಳ ಉಳಿದ 29 ದಿನಗಳ ಕೆಲಸದ ಅರ್ಹ ಪ್ರೋತ್ಸಾಹ ಧನ ಆಶಾ ಕಾರ್ಯಕರ್ತರಿಗೆ ಸಿಗದಂತೆ ಮಾಡುತ್ತದೆ,” ಎನ್ನುತ್ತಾರವರು.

ದೇಶದಾದ್ಯಂತ, 10 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮತ್ತು ನಗರಗಳ ಆಶಾ ಕಾರ್ಯಕರ್ತರು ತಮ್ಮ ಕಡಿಮೆ ಸಂಬಳದ ಕೆಲಸದಿಂದ ಅಭಿವೃದ್ಧಿ ಹೊಂದುತ್ತಿರುವ ವ್ಯವಸ್ಥೆಯ ವಿರುದ್ಧ ತಮ್ಮ ಕೆಲಸವನ್ನು ಗುರುತಿಸುವಂತೆ ಮಾಡಲು ಹೋರಾಡುತ್ತಿದ್ದಾರೆ. ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್‌ನ ವರದಿಯು ಹೇಳುವಂತೆ: "ಅವರು [ಆಶಾ ಕಾರ್ಯಕರ್ತರು] ಕನಿಷ್ಠ ವೇತನ ಕಾಯಿದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಮತ್ತು ಸಾಮಾನ್ಯ ಸರ್ಕಾರಿ ನೌಕರರಿಗೆ ನೀಡಲಾಗುವ ಹೆರಿಗೆ ಪ್ರಯೋಜನಗಳು ಮತ್ತು ಇತರ ಯೋಜನೆಗಳು ಅವರಿಗೆ ಅನ್ವಯಿಸುವುದಿಲ್ಲ."

ವಿಪರ್ಯಾಸವೆಂದರೆ, ಕೋವಿಡ್-19ರ ಸಮಯದಲ್ಲಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಂಕ್ರಾಮಿಕ ನಿಯಂತ್ರಣ ತಂತ್ರಗಳಲ್ಲಿ ನಿರ್ಣಾಯಕ ಕೊಂಡಿಯಾಗಿ ಕಾರ್ಯನಿರ್ವಹಿಸಿದರೆ, ಆಶಾ ಕಾರ್ಯಕರ್ತರಯ ಆಗಾಗ್ಗೆ ವೈದ್ಯಕೀಯ ನಿಗಾ ಮತ್ತು ಚಿಕಿತ್ಸೆಯ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ಯುಪಿಯ ಅನೇಕ ಆಶಾ ಕಾರ್ಯಕರ್ತತರು ಮಹಾಮಾರಿಯ ಸಮಯದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ನಿಧನರಾದರು.

"ಮಮ್ಮಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕಳೆದ ವರ್ಷ ಏಪ್ರಿಲ್ ಕೊನೆಯಲ್ಲಿ [2021] ಮನೆಯಿಂದ ನನಗೆ ಫೋನ್ ಕರೆ ಬಂದಿತ್ತು" ಎಂದು 23 ವರ್ಷದ ಸೂರಜ್ ಗಂಗ್ವಾರ್ ಅವರು ಮೇ 2021ರಲ್ಲಿ ತಮ್ಮ ತಾಯಿ ಶಾಂತಿ ದೇವಿಯನ್ನು ಕಳೆದುಕೊಳ್ಳುವ ಮೊದಲಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. "ಈ ವಿಷಯ ಕೇಳಿದ ತಕ್ಷಣ ನಾನು ದೆಹಲಿಯಿಂದ ಬರೇಲಿಗೆ ಧಾವಿಸಿದೆ. ಆಗಲೇ ಅಮ್ಮ ಆಸ್ಪತ್ರೆಯಲ್ಲಿದ್ದಳು." ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಸೂರಜ್ ದೆಹಲಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಈಗ ಮೂರು ಜನರ ಕುಟುಂಬದಲ್ಲಿ ಏಕೈಕ ಸಂಪಾದಿಸುವ ಸದಸ್ಯರಾಗಿದ್ದಾರೆ.

An ASHA worker in Chitrakoot, Chunki Devi, at her home with the dustbin, sanitisers and PPE kits she had to carry to the polling booth
PHOTO • Jigyasa Mishra

ಚಿತ್ರಕೂಟ ಲ್ಲಿ ಆಶಾ ಕಾರ್ಯಕರ್ತೆಯಾ ಗಿರುವ ಚುಂಕಿ ದೇವಿ ಅವರು ಕಸದ ಬುಟ್ಟಿ, ಸ್ಯಾನಿಟೈಸ ರ್‌ ಗಳು ಮತ್ತು ಪಿಪಿಇ ಕಿ ಟ್‌ ಳೊಡನೆ ತಮ್ಮ ಮನೆಯಲ್ಲಿ . ಅವರು ಅವುಗಳನ್ನು ಮತದಾನ ಕೇಂದ್ರಕ್ಕೆ ಸಾಗಿಸಬೇಕಾಗಿತ್ತು

"ನಾನು ಮನೆ ತಲುಪಿದಾಗ ಮಮ್ಮಿ ಕೋವಿಡ್-19 ಪಾಸಿಟಿವ್ ಎನ್ನುವ ಕುರಿತು ಯಾವುದೇ ಸುಳಿವು ಇದ್ದಿರಲಿಲ್ಲ. ಏಪ್ರಿಲ್ 29ರಂದು ಆರ್‌ಟಿ-ಪಿಸಿಆರ್ ಮಾಡಿದ ನಂತರವೇ ಆ ಕುರಿತು ನಮಗೆ ತಿಳಿದಿದ್ದು. ಆಗ ಆಸ್ಪತ್ರೆಯು ಅವಳನ್ನು ಉಳಿಸಿಕೊಳ್ಳಲು ನಿರಾಕರಿಸಿತು, ಮತ್ತು ನಾವು ಅವಳನ್ನು ಮನೆಗೆ ಕರೆದೊಯ್ಯಬೇಕಾಯಿತು. ಮೇ 14ರಂದು ಅವಳ ಆರೋಗ್ಯ ಸ್ಥಿತಿ ಹದಗೆಟ್ಟಾಗ, ನಾವು ಅವಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಪ್ರಯತ್ನಿಸಿದೆವು, ಆದರೆ ಅವಳು ನಮ್ಮನ್ನು ದಾರಿಯಲ್ಲಿಯೇ ಬಿಟ್ಟಗಲಿದಳು" ಎಂದು ಗಂಗ್ವಾರ್ ಹೇಳುತ್ತಾರೆ. ಪಾಸಿಟಿವ್ ಎಂದು ತಿಳಿದು ಬಂದ ಆದರೆ ಸಾರ್ವಜನಿಕ ಆರೋಗ್ಯ ಸೇವೆಗಳಿಂದ ಯಾವುದೇ ಚಿಕಿತ್ಸೆ ಪಡೆಯದ ಮತ್ತು ಸಾವನ್ನಪ್ಪಿದ ದೇಶದ ಅನೇಕ ಮುಂಚೂಣಿ ಕಾರ್ಯಕರ್ತರಲ್ಲಿ ಅವರ ತಾಯಿ ಒಬ್ಬರು.

ಜುಲೈ 23, 2021ರಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಖಾತೆ ಸಹಾಯಕ ಸಚಿವರಾದ ಭಾರತಿ ಪ್ರವೀಣ ಪವಾರ್, 2021ರ ಏಪ್ರಿಲ್ ತನಕ ಕೊರೊನಾ ವೈರಸ್ ನಿಂದಾಗಿ 109 ಆಶಾ ಕಾರ್ಯಕರ್ತರು ಸತ್ತಿದ್ದಾರೆ ಎಂದು ಹೇಳಿದರು - ಅಧಿಕೃತ ಎಣಿಕೆಯು ಉತ್ತರ ಪ್ರದೇಶದಲ್ಲಿ ಶೂನ್ಯ ಸಾವುಗಳನ್ನು ದಾಖಲಿಸಿದೆ. ಆದರೆ ಆಶಾ ಕಾರ್ಯಕರ್ತರ ಒಟ್ಟು ಕೋವಿಡ್-19 ಸಂಬಂಧಿತ ಸಾವುಗಳ ಸಂಖ್ಯೆಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ವಿಶ್ವಾಸಾರ್ಹ ದತ್ತಾಂಶ ಲಭ್ಯವಿಲ್ಲ. ಕೇಂದ್ರ ಸರ್ಕಾರವು ಮಾರ್ಚ್ 30, 2020ರಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಮುಂಚೂಣಿ ಕಾರ್ಮಿಕರ ಕೋವಿಡ್ ಸಂಬಂಧಿತ ಸಾವುಗಳಿಗೆ ೫೦ ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿತ್ತು, ಮತ್ತೆ ಅದು ಕೂಡಾ ಅವರಲ್ಲಿ ಅನೇಕರನ್ನು ತಲುಪಲಿಲ್ಲ.

"ನನ್ನ ತಾಯಿ ಒಂದು ದಿನವೂ ಕೆಲಸಕ್ಕಾಗಿ ಹೊರಹೋಗದೆ ಉಳಿದಿದ್ದಿಲ್ಲ, ಮತ್ತು ಆಶಾ ಆಗಿ ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು" ಎಂದು ಸೂರಜ್ ಹೇಳುತ್ತಾರೆ. “ಕೊರೋನಾ ಪಿಡುಗಿನ ಸಮಯದಲ್ಲಿ ಅಮ್ಮ ಸದಾ ಕೆಲಸದಲ್ಲಿರುತ್ತಿದ್ದಳು, ಆದರೆ ಈಗ ಅವಳು ಹೊರಟುಹೋಗಿದ್ದಾಳೆ, ಆರೋಗ್ಯ ಇಲಾಖೆ ಸ್ವಲ್ಪವೂ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ."

ಸೂರಜ್ ಮತ್ತು ಅವರ ತಂದೆ ಬರೇಲಿಯ ನವಾಬ್ ಗಂಜ್ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಮತ್ತು ಇತರ ಸಿಬ್ಬಂದಿಯನ್ನು ಭೇಟಿ ಮಾಡಿ ಮನವಿ ಮಾಡಲು ಪ್ರಯತ್ನಿಸಿದ್ದಾರೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. ತನ್ನ ತಾಯಿಯ ಆರ್‌ಟಿ-ಪಿಸಿಆರ್ ವರದಿ ಮತ್ತು ಮರಣ ಪ್ರಮಾಣಪತ್ರವನ್ನು ನಮಗೆ ತೋರಿಸುತ್ತಾ ಅವರು ಹೇಳುತ್ತಾರೆ: "ಕೋವಿಡ್-19ರಿಂದ ಅವಳು ಸತ್ತಿದ್ದಾಳೆಂದು ಉಲ್ಲೇಖಿಸಿರುವ ಆಸ್ಪತ್ರೆಯ ಮರಣ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರ ನಾವು ಪರಿಹಾರಕ್ಕೆ ಅರ್ಹರಾಗುತ್ತೇವೆ ಎಂದು ಸಿಎಂಒ ಹೇಳಿದ್ದಾರೆ. ಅವಳನ್ನು ಯಾವುದೇ ಆಸ್ಪತ್ರೆ ದಾಖಲಿಸಿಕೊಳ್ಳದಿರುವಾಗ ಈಗ ಅದನ್ನು ಎಲ್ಲಿಂದ ಪಡೆಯುವುದು? ಅಗತ್ಯವಿರುವವರಿಗೆ ಯಾವುದೇ ಸಹಾಯ ಸಿಗದಂತೆ ಮಾತ್ರವೇ ಖಾತರಿಗೊಳಿಸುವ ಇಂತಹ ನಕಲಿ ಯೋಜನೆಗಳ ಪ್ರಯೋಜನವೇನು?"

*****

ಕಳೆದ ವರ್ಷದ ಭೀಕರತೆಯ ನೆನಪುಗಳು ಮಸುಕಾಗುವ ಮೊದಲೇ,  ಉತ್ತರ ಪ್ರದೇಶದಲ್ಲಿ 160,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತರನ್ನು ಈ ವರ್ಷ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತೆ ಪಾವತಿಯಿಲ್ಲದ, ಆಗ್ರಹಪೂರ್ವಕ ಮತ್ತು ಅಪಾಯಕಾರಿ ಕೆಲಸಕ್ಕೆ ನಿಯೋಜಿಸಲಾಯಿತು. ಒಕ್ಕೂಟದ ಅಧ್ಯಕ್ಷ ವೀಣಾ ಗುಪ್ತಾ ಇದನ್ನು ಲೆಕ್ಕಾಚಾರದ ಕ್ರಮವೆಂದು ನೋಡುತ್ತಾರೆ. "ನೀವು ನನ್ನನ್ನು ಕೇಳಿದರೆ, ಈ 12 ಗಂಟೆಗಳ ಅವಧಿಯ ವೇತನರಹಿತ ಕರ್ತವ್ಯವು ಈ ಮಹಿಳೆಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ತಮ್ಮ ಮತಗಳನ್ನು ಚಲಾಯಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಕಾರ್ಯತಂತ್ರವಾಗಿದೆ - ಏಕೆಂದರೆ ಅವರು ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ನಿರ್ಲಕ್ಷಿಸಿರುವ ರೀತಿ ಮತ್ತು ಅವರು ನಮ್ಮ ಗೌರವ ಧನವನ್ನು ಪಾವತಿಸುತ್ತಿರುವ ರೀತಿಯನ್ನು ಗಮನಿಸಿದರೆ, ಕಾರ್ಯಕರ್ತರು ಅವರ ವಿರುದ್ಧ ಮತ ಚಲಾಯಿಸಬಹುದೆಂದು ಅವರು ಹೆದರುತ್ತಾರೆ."

ಆದರೂ ರೀಟಾ ಮತ ಚಲಾಯಿಸಲು ನಿರ್ಧರಿಸಿದರು. "ನಾನು ಸಂಜೆ ನಾಲ್ಕು ಗಂಟೆಗೆ ನನ್ನ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಲು ಯೋಜಿಸುತ್ತಿದ್ದೇನೆ" ಎಂದು ಅವರು ಆ ಸಮಯದಲ್ಲಿ ಪರಿಗೆ ತಿಳಿಸಿದ್ದರು. "ಆದರೆ ನನ್ನ ಅನುಪಸ್ಥಿತಿಯಲ್ಲಿ, ಸ್ವಲ್ಪ ಸಮಯದವರೆಗೆ ಕರ್ತವ್ಯವನ್ನು ನಿರ್ವಹಿಸಲು ಇನ್ನೊಬ್ಬ ಆಶಾ ಕಾರ್ಯಕರ್ತೆ ಇಲ್ಲಿಗೆ ಬಂದರೆ ಮಾತ್ರ ನಾನು ಹೋಗಬಹುದು. ಆ ಮತದಾನ ಕೇಂದ್ರವು ಇಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ" ಎಂದು ಅವರು ಹೇಳಿದರು. ಇತರ ಎಲ್ಲಾ ಆಶಾ ಕಾರ್ಯಕರ್ತರಂತೆ, ಅವರು ಆರೋಗ್ಯ ಇಲಾಖೆಯ ಯಾವುದೇ ಸಹಾಯವಿಲ್ಲದೆ ತನ್ನ ಬದಲಿಯನ್ನು ಸ್ವತಃ ಯೋಜಿಸಿಕೊಳ್ಳಬೇಕಿತ್ತು.

ಮುಂಜಾನೆ ಮತದಾನ ಕೇಂದ್ರಗಳಲ್ಲಿ ವರದಿ ಮಾಡಿಕೊ‍ಳ್ಳಲು ಹೇಳಿದವರು, ಆಶಾ ಕಾರ್ಯಕರ್ತರಿಗೆ ಉಪಾಹಾರ ಅಥವಾ ಊಟವನ್ನು ನೀಡಿಲ್ಲ. "ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಊಟದ ಪ್ಯಾಕೆಟುಗಳು ಬರುವುದನ್ನು ನಾನು ನೋಡಿದೆ ಮತ್ತು ಅವರು ಅದನ್ನು ನನ್ನ ಮುಂದೆಯೇ ತಿಂದರು ಆದರೆ ನನಗೆ ಅದರಲ್ಲಿ ಏನೂ ಸಿಗಲಿಲ್ಲ" ಎಂದು ಲಕ್ನೋದ ಆಲಂಬಾಗ್ ಪ್ರದೇಶದ ಆಶಾ ಕಾರ್ಯಕರ್ತೆ ಪೂಜಾ ಅವರು ಪರಿಗೆ ತಿಳಿಸಿದರು.

Messages from ASHAs in Lucknow asking for a lunch break as they weren't given any food at their duty station
PHOTO • Jigyasa Mishra
Veena Gupta, president of UP ASHA union, says the ASHAs were not given an allowance either, and had to spend their own money on travel
PHOTO • Jigyasa Mishra

ಎಡಕ್ಕೆ: ಲಕ್ನೋದ ಆಶಾ ಕಾರ್ಯಕರ್ತರಿಗೆ ತಮ್ಮ ಕರ್ತವ್ಯ ಕೇಂದ್ರದಲ್ಲಿ ಯಾವುದೇ ಆಹಾರ ನೀಡದ ಕಾರಣ ಊಟದ ವಿರಾಮವನ್ನು ಕೇಳಿ ಕಳುಹಿಸಲಾದ ಸಂದೇಶಗಳು. ಬಲ: ಯುಪಿ ಆಶಾ ಒಕ್ಕೂಟದ ಅಧ್ಯಕ್ಷರಾದ ವೀಣಾ ಗುಪ್ತಾ ಅವರು ಆಶಾ ಕಾರ್ಯಕರ್ತರಿಗೆ ಭತ್ಯೆಯನ್ನು ನೀಡಲಾಗಿಲ್ಲ ಮತ್ತು ಪ್ರಯಾಣಕ್ಕಾಗಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕಾಯಿತು ಎಂದು ಹೇಳುತ್ತಾರೆ

ಕರ್ತವ್ಯದಲ್ಲಿರುವ ಇತರ ಎಲ್ಲಾ ಸಿಬ್ಬಂದಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಊಟದ ಪ್ಯಾಕೇಟುಗಳನ್ನು ಪಡೆದರೆ, ಆಶಾ ಕಾರ್ಯಕರ್ತರಿಗೆ ಮನೆಗೆ ಹೋಗಿ ಊಟ ಮಾಡಲು ವಿರಾಮ ಸಿಗಲಿಲ್ಲ. "ದಯವಿಟ್ಟು ನಾವೆಲ್ಲರೂ ಊಟದ ವಿರಾಮವನ್ನು ಹೇಗೆ ಕೇಳುತ್ತಿದ್ದೇವೆ ಎಂಬುದನ್ನು ನೀವೇ ನೋಡಿ. ಅವರು ನಮ್ಮನ್ನು ಮನೆಗೆ ಹೋಗಿ ಊಟ ಮಾಡಿಕೊಂಡು ಬರಲು ಅನುಮತಿಸಬಹುದು. ನಮ್ಮ ಮನೆಗಳು ಬಹಳ ದೂರದಲ್ಲಿಲ್ಲ. ಪ್ರತಿಯೊಬ್ಬ ಆಶಾ ಕಾರ್ಯಕರ್ತೆ ತಮ್ಮ ಮನೆಯ ಹತ್ತಿರದಲ್ಲೇ ಕರ್ತವ್ಯಕ್ಕೆ ನಿಯೋಜನೆಗೊಂಡಿರುತ್ತಾರೆ," ಎಂದು ಪೂಜಾ ಅವರು ಆಲಂಬಾಗ್‌ನಲ್ಲಿರುವ ಆಶಾ ಕಾರ್ಯಕರ್ತರ ವಾಟ್ಸಪ್ ಗುಂಪಿನ ಸಂದೇಶಗಳನ್ನು ನಮಗೆ ತೋರಿಸಿದರು.

ಜನರಲ್ ನರ್ಸ್ ಮಿಡ್‌ವೈಫ್ ಅನ್ನು ಚೌಧರಿ ಅಥವಾ ಜಿಎನ್‌ಎಂ ಕೂಡ ಮತದಾನ ಕೇಂದ್ರದಲ್ಲಿ ರೀಟಾ ಅವರೊಂದಿಗೆ ಇದ್ದರು, ಪೊಲೀಸರು ಮತ್ತು ಕರ್ತವ್ಯದಲ್ಲಿದ್ದ ಇತರ ಸರ್ಕಾರಿ ಸಿಬ್ಬಂದಿ ಆಹಾರವನ್ನು ಪಡೆಯುತ್ತಿರುವಾಗ ತಮಗೆ ಸಿಗದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು. "ನಮಗೆ ಹೀಗೆ ಮಾಡುವುದು ನ್ಯಾಯವೆನ್ನಿಸುತ್ತದೆಯೇ ನಿಮಗೆ?" ಎಂದು ಅವರು ದೂರಿದರು. "ನಮ್ಮನ್ನು ಏನೂ ಅಲ್ಲವೆಂಬಂತೆ ಪರಿಗಣಿಸಲಾಗುತ್ತದೆ. ಕರ್ತವ್ಯದಲ್ಲಿರುವ ಇತರರಿಗೆ ಸಿಗುವ ಸೌಲಭ್ಯಗಳು ನಮಗೆ ಏಕೆ ಸಿಗುವುದಿಲ್ಲ?"

ಚಿತ್ರಕೂಟದ ಆಶಾ ಕಾರ್ಯಕರ್ತರ ಚುನಾವಣಾ ಕರ್ತವ್ಯಗಳ ಪಟ್ಟಿಗೆ ಮತ್ತೊಂದು ಕಾರ್ಯವನ್ನು ಸೇರಿಸಲಾಗಿತ್ತು: ಅದು ಕಸವನ್ನು ಹೊರತೆಗೆಯುವುದು. ಜಿಲ್ಲೆಯ ಅನೇಕ ಆಶಾ ಕಾರ್ಯಕರ್ತರಲ್ಲಿ ಒಬ್ಬರಾದ ಶಿವಾನಿ ಕುಶ್ವಾಹ ಅವರಿಗೂ ಪಿಎಚ್‌ಸಿಯಿಂದ ಕರೆಮಾಡಿ ಸ್ಯಾನಿಟೈಸಿಂಗ್ ವಸ್ತುಗಳೊಡನೆ ದೊಡ್ಡ ಕಸದ ಬುಟ್ಟಿಯನ್ನು ಸಹ ನೀಡಲಾಯಿತು. "ಅವರು ನಮಗೆ ಕೆಲವು ಪಿಪಿಇ ಕಿಟ್‌ಗಳನ್ನು ಸಹ ನೀಡಿದರು, ಅದನ್ನು ನಾವು ಮತದಾನ ಕೇಂದ್ರದಲ್ಲಿ ಕೋವಿಡ್-ಪಾಸಿಟಿವ್ ಇರುವ ಮತದಾರರಿಗೆ ನೀಡಬೇಕಾಗಿತ್ತು. ಮತ್ತು ನಿಯೋಜಿಸಲಾದ ಸ್ಟೇಷನ್ನಿನಲ್ಲಿ ದಿನವಿಡೀ, ಎಂದರೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಇರಲು ನಮಗೆ ಸೂಚಿಸಲಾಯಿತು. ಅದರ ನಂತರ, ನಾವು ಬಳಸಿದ ಅಥವಾ ಬಳಸದ ಪಿಪಿಇ ಕಿಟ್‌ಗಳೊಂದಿಗೆ ಕಸದ ಬುಟ್ಟಿಯನ್ನು ಖುಟಾವಾ ಉಪ ಕೇಂದ್ರದಲ್ಲಿ ತಂದು ಇಡಬೇಕಾಗಿತ್ತು." ಇದರರ್ಥ ಅವರು ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಲೋಮೀಟರ್ ನಡೆದು ತುಂಬಿದ ಬುಟ್ಟಿಗಳೊಂದಿಗೆ ಆವರಣವನ್ನು ತಲುಪಿದರು.

ಕುಶ್ವಾಹ ಮಾತನಾಡುವಾಗ ಅವರ ಧ್ವನಿ ಉದ್ವೇಗದಿಂದ ನಡುಗಿತು. "ನಾವು ಸ್ಯಾನಿಟೈಸೇಶನ್ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬೇಕು, ಆದ್ದರಿಂದ ಅದನ್ನು ಮಾಡುತ್ತೇವೆ. ಆದರೆ ನೀವು ಇತರ ಸಿಬ್ಬಂದಿಗೆ ನೀಡಿದಂತೆ ನಮಗೆ ಸರಿಯಾದ ಪತ್ರವನ್ನು ನೀಡಿ. ಮತ್ತು ಸರ್ಕಾರಿ ಸಿಬ್ಬಂದಿಗೆ ಸಿಗುವಾಗ ನಮಗೆ ಚುನಾವಣಾ ಕರ್ತವ್ಯಕ್ಕೆ ಯಾವುದೇ ಪಾವತಿಯನ್ನು ಏಕೆ ನೀಡುವುದಿಲ್ಲ? ಹಾಗಿದ್ದರೆ ನಾವು ಏನು, ಧರ್ಮಕ್ಕೆ ಕೆಲಸ ಮಾಡುವ ಸೇವಕರೇ, ಅಥವಾ ಇನ್ನೇನಾದರೂ?"

ಜಿಗ್ಯಾಸ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Jigyasa Mishra

Jigyasa Mishra is an independent journalist based in Chitrakoot, Uttar Pradesh.

यांचे इतर लिखाण Jigyasa Mishra
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru