ಉತ್ತರ-ಮಧ್ಯ ಬಿಹಾರದ ಚೌಮುಖ್ ಎಂಬ ತಮ್ಮ ಗ್ರಾಮದ ಪಾಳುಬಿದ್ದ ಮನೆಯ ವರಾಂಡದಲ್ಲಿ ಕುಳಿತಿದ್ದ ರಾಜೀವ್ ಕುಮಾರ್ ಓಜಾಗೆ ಉತ್ತಮ ಫಸಲನ್ನು ಪಡೆಯುವುದು ಒತ್ತಡದ ಕೆಲಸವೋ ಅಥವಾ ಹಾಗೆ ಕಷ್ಟಪಟ್ಟು ಗಳಿಸಿದ ಇಳುವರಿಯನ್ನು ಒಳ್ಳೆಯ ಬೆಲೆಗೆ ಮಾರುವುದು ಹೆಚ್ಚು ಒತ್ತಡದ ಕೆಲಸವೋ ಎನ್ನುವ ಗೊಂದಲ ಅವರನ್ನು ಕಾಡುತ್ತಿತ್ತು . “ನಿಮಗಿದು ತಮಾಷೆಯೆನ್ನಿಸಬಹುದು, ಆದರೆ , ನನ್ನ ಸಮಸ್ಯೆಗಳು ಸಾಮಾನ್ಯವಾಗಿ ಕೊಯ್ಲಿನ ಋತುವಿನ ಕೊನೆಯಲ್ಲಿ ಉತ್ತಮ ಫಸಲನ್ನು ಪಡೆದಾಗಲೇ ಆರಂಭವಾಗುತ್ತವೆ,” ಎಂದು ಹೇಳುತ್ತಾರೆ.

“ಮುಜಾಫರ್‌ಪುರ ಜಿಲ್ಲೆಯ ಬೊಚಾಹಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ 47 ವರ್ಷದ ಓಜಾ, ಖಾರಿಫ್ ಋತುವಿನಲ್ಲಿ (ಜೂನ್-ನವೆಂಬರ್) ಭತ್ತವನ್ನು ಬೆಳೆಯುತ್ತಾರೆ, ಮತ್ತು ರಾಬಿಯ ಸಮಯದಲ್ಲಿ (ಡಿಸೆಂಬರ್-ಮಾರ್ಚ್) ಗೋದಿ ಮತ್ತು ಮೆಕ್ಕೆ ಜೋಳವನ್ನು ಬೆಳೆಯುತ್ತಾರೆ. ಉತ್ತಮ ಫಸಲನ್ನು ಪಡೆಯಲು ಹವಾಮಾನ, ನೀರು, ಶ್ರಮ ಮತ್ತು ಇನ್ನೂ ಅನೇಕ ಸಂಗತಿಗಳು ನಮ್ಮ ಪರವಾಗಿರಬೇಕು" ಎಂದು ಅವರು ನನಗೆ ನವೆಂಬರ್ 2020ರಲ್ಲಿ ಹೇಳಿದ್ದರು. “ಆದರೆ ಅದಾದ ನಂತರವೂ ಮಾರುಕಟ್ಟೆಯಿಲ್ಲ. ನನ್ನ ದಾಸ್ತಾನನ್ನು ಹಳ್ಳಿಯ ಕಮಿಷನ್ ಏಜೆಂಟರಿಗೆ ಮಾರಾಟ ಮಾಡಬೇಕು, ಅವರು ಅದಕ್ಕೆ ನಿಗದಿಪಡಿಸಿದ ಬೆಲೆಗೆ ನಾನು ಮಾರಾಟ ಮಾಡಬೇಕು.” ಅದನ್ನು ಸಗಟು ವ್ಯಾಪಾರಿಗಳಿಗೆ ದಳ್ಳಾಲಿಗಳು ಕಮಿಷನ್ ಗೆ ಮಾರುತ್ತಾರೆ.

2019ರಲ್ಲಿ, ಓಜಾ ತನ್ನ ಕಚ್ಚಾ ಭತ್ತದ ದಾಸ್ತಾನು ಕ್ವಿಂಟಲ್‌ಗೆ 1,100 ರೂ.ಗಳಿಗೆ ಮಾರಾಟ ಮಾಡಿದ್ದರು– ಆಗ ಇದು 1815 ರೂ.ಗಳ ಕನಿಷ್ಠ ಬೆಂಬಲ ಬೆಲೆಗಿಂತ ಶೇ 39ರಷ್ಟು ಕಡಿಮೆಯಾಗಿತ್ತು. “ನನಗೆ ಬೇರೆ ಯಾವುದೇ ಆಯ್ಕೆಗಳು ಇದ್ದಿರಲಿಲ್ಲ. ಏಜೆಂಟರು ಯಾವಾಗಲೂ ಕಡಿಮೆ ದರದಲ್ಲಿ ಖರೀದಿಸುತ್ತಾರೆ, ಏಕೆಂದರೆ ಅವರಿಗೆ ನಾವು ಬೇರೆಲ್ಲಿಯೂ ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನುವುದು ತಿಳಿದಿದೆ. ಇದರಿಂದಾಗಿ ನಮಗೆ ಯಾವುದೇ ಲಾಭ ಸಿಗುವುದಿಲ್ಲ” ಎನ್ನುತ್ತಾರೆ.

ಬಿಹಾರದ ರೈತರೊಬ್ಬರು ಎಕರೆ ಭತ್ತದ ಮೇಲೆ 20,000 ರೂ ಬಂಡವಾಳವನ್ನು ಹೂಡುತ್ತಾರೆ ಎಂದು ಓಜಾ ಹೇಳುತ್ತಾರೆ. ”ನಾನು ಎಕರೆಗೆ 20-25 ಕ್ವಿಂಟಾಲ್ ಫಸಲನ್ನು ಪಡೆಯುತ್ತೇನೆ. ಕ್ವಿಂಟಲ್‌ಗೆ 1,100 ರೂಪಾಯಿಗಳಾದರೆ ಆರು ತಿಂಗಳ ಕಠಿಣ ಪರಿಶ್ರಮದ ನಂತರ ಎಕರೆಗೆ 2,000-7,000 ರೂಪಾಯಿಗಳ ಲಾಭವನ್ನು ಗಳಿಸಬಹುದು. ಇದನ್ನು ನೀವು ನ್ಯಾಯಯುತ ಒಪ್ಪಂದವೆಂದು ಭಾವಿಸುತ್ತೀರಾ?” ಎಂದು ಅವರು  ಪ್ರಶ್ನಿಸುತ್ತಾರೆ.

ಬಿಹಾರದಲ್ಲಿ ಓಜಾರಂತೆಯೇ, ಅನೇಕ ರೈತರು 2006ರಲ್ಲಿ ವಿಶೇಷವಾಗಿ ಬಿಹಾರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ 1960 ಅನ್ನು ರದ್ದುಗೊಳಿಸಿದ ನಂತರ ತಮ್ಮ ಫಸಲುಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಇದರ ಜೊತೆಗೆ ಬಿಹಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿ ವ್ಯವಸ್ಥೆಯನ್ನು ರದ್ದುಪಡಿಸಲಾಯಿತು.

Rajiv Kumar Ojha's five-acre farmland in Chaumukh village
PHOTO • Parth M.N.

ಚೌಮುಖ್ ಗ್ರಾಮದಲ್ಲಿರುವ ರಾಜೀವ್ ಕುಮಾರ್ ಓಜಾ ಅವರ ಐದು ಎಕರೆ ಕೃಷಿ ಭೂಮಿ

ಇದು ಸೆಪ್ಟೆಂಬರ್ 2020ರಲ್ಲಿ ಅಂಗೀಕರಿಸಲ್ಪಟ್ಟ ಮೂರು ಹೊಸ ಕೃಷಿ ಕಾನೂನುಗಳ ಮೂಲಕ ಭಾರತದ ಬಹುತೇಕ ರೈತರು ಎದುರಿಸಬಹುದಾದ ಸ್ಥಿತಿಯನ್ನು ಸೂಚಿಸುತ್ತದೆ. ಇದರಿಂದಾಗಿಯೇ 2020ರ ನವೆಂಬರ್ 26ರಿಂದ ದೆಹಲಿಯ ಗಡಿಯಲ್ಲದೆ ದೇಶಾದ್ಯಂತ ಲಕ್ಷಾಂತರ ರೈತರು ನೂತನ ಕೃಷಿ ಕಾನೂನುಗಳ ವಿರುದ್ಧ ಚಳುವಳಿಯನ್ನು ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕಾನೂನುಗಳೆಂದರೆ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ 2020 ; ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ-2020 ,ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 . ಅವುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳ ಮೂಲಕ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳ ರೂಪದಲ್ಲಿ ಪರಿಚಯಿಸಲಾಯಿತು, ಅದೇ ತಿಂಗಳ 20 ರಂದು ಅವುಗಳನ್ನು ಕಾಯ್ದೆ ರೂಪದಲ್ಲಿ ಪ್ರಸ್ತುತ ಸರ್ಕಾರವು ಜಾರಿಗೆ ತಂದಿತು.

ಈ ಪೈಕಿ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ 2020 ರಾಜ್ಯಗಳ ಎಪಿಎಂಸಿ ಕಾನೂನುಗಳನ್ನು ಅತಿಕ್ರಮಿಸುತ್ತದೆ. ಈ ಕಾಯ್ದೆಯು ರೈತರಿಗೆ ರಾಜ್ಯ ಸರ್ಕಾರಗಳು ನಿಯಂತ್ರಿಸುವ ಮಾರುಕಟ್ಟೆ (ಎಪಿಎಂಸಿ) ಹೊರಗಿನ ವ್ಯಾಪಾರ ಪ್ರದೇಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಇದು ಖಾಸಗಿ ಕಂಪನಿಗಳಿಗೆ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ದಾರಿ ಮಾಡಿಕೊಡುತ್ತದೆ. ಈ ನಡೆ ಮುಖ್ಯವಾಗಿ ಕೃಷಿ ಕ್ಷೇತ್ರವನ್ನು ಉದಾರೀಕರಣಗೊಳಿಸಲು ಹೊರಟಂತಿದೆ, ಮತ್ತು ಕಾನೂನುಗಳನ್ನು ಬೆಂಬಲಿಸುವ ರೈತರು ಇನ್ನು ಮುಂದೆ ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ.

ಇದೇ ಉದ್ದೇಶವನ್ನು ಇಟ್ಟುಕೊಂಡು ಬಿಹಾರ ಈ ಹಿಂದೆ ಎಪಿಎಂಸಿ ಕಾನೂನನ್ನು ರದ್ದುಗೊಳಿಸಿತ್ತು, ಆದರೆ ಅಂದಿನಿಂದ 14 ವರ್ಷಗಳಲ್ಲಿ ರೈತರ ಪರಿಸ್ಥಿತಿ ಹದಗೆಟ್ಟಿದೆ. ಜೊತೆಗೆ ಕೃಷಿ ಕುಟುಂಬದ ತಿಂಗಳದ ಆದಾಯ 5,000.ರೂ ಗಳಿಗಿಂತಲೂ ಕಡಿಮೆ ಇರುವ ಭಾರತದ ಆರು ರಾಜ್ಯಗಳಲ್ಲಿ ಬಿಹಾರ ಕೂಡ ಒಂದಾಗಿದೆ ಎಂದು 70 ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಹೇಳುತ್ತದೆ.

"ಬಿಹಾರ ರಾಜ್ಯವು ಭಾರತದಲ್ಲಿ ಹೊಸ ಮಾರುಕಟ್ಟೆ ಆಧಾರಿತ ಕ್ರಾಂತಿಯ ಮುಂಚೂಣಿಯಲ್ಲಿರಲಿದೆ. ಖಾಸಗಿ ಹೂಡಿಕೆಯು ರೈತರಿಗೆ ಉತ್ತಮ ಬೆಲೆಗಳನ್ನು ಖಚಿತಪಡಿಸುತ್ತದೆ.” ಎಂದು ಅನೇಕ ಅರ್ಥಶಾಸ್ತ್ರಜ್ಞರು ವಾದಿಸಿದ್ದರು. ಆದರೆ ವಾಸ್ತವದಲ್ಲಿ ಅಂತದ್ಯಾವುದು ಕೂಡ ಈಗ ಸಂಭವಿಸಿಲ್ಲ.” ಎಂದು ಚಂಡೀಗಡ ಮೂಲದ ಕೃಷಿ ಅರ್ಥಶಾಸ್ತ್ರಜ್ಞ ದೇವಿಂದರ್ ಶರ್ಮಾ ಹೇಳುತ್ತಾರೆ.

ಈ ಪರಿಸ್ಥಿತಿಯನ್ನು ಬಿಹಾರದ ಕೃಷಿ ಸಚಿವಾಲಯದ ಅಧಿಕಾರಿಯೊಬ್ಬರು ಖಚಿತಪಡಿಸುತ್ತಾ. “ದುರದೃಷ್ಟವಶಾತ್, 2006ರ ನಂತರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಖಾಸಗಿ ಹೂಡಿಕೆಯ ನಿಖರವಾದ ಅಂಕಿ ಅಂಶಗಳು ನಮ್ಮಲ್ಲಿಲ್ಲ. ಆದರೆ, ಎಪಿಎಂಸಿಗಳನ್ನು ರದ್ದುಗೊಳಿಸುವುದರೊಂದಿಗೆ ಬಿಹಾರದಲ್ಲಿ ಖಾಸಗಿಗೆ ಪೂರಕವಾದ ಮಾದರಿಯನ್ನು ಗಣನೀಯ ಮಟ್ಟದಲ್ಲಿ ಉತ್ತೇಜಿಸಲಾಗಿದೆ. ಉದಾಹರಣೆಗೆ, ಪರ್ನಿಯಾದಲ್ಲಿನ ರೈತರು ತಮ್ಮ ಬಾಳೆಹಣ್ಣಿನ ಉತ್ಪನ್ನಗಳನ್ನು ತಮ್ಮ ಮನೆ ಬಾಗಿಲಿಗೆ ಬರುವ ಹೊರ ರಾಜ್ಯದ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ” ಎಂದು ಅಧಿಕಾರಿ ಹೇಳುತ್ತಾರೆ.

ಬಿಹಾರದಲ್ಲಿ ಭತ್ತ, ಗೋಧಿ, ಮೆಕ್ಕೆಜೋಳ, ಬೇಳೆ, ಸಾಸಿವೆ ಮತ್ತು ಬಾಳೆಹಣ್ಣು ಸೇರಿದಂತೆ ಶೇ .90 ರಷ್ಟು ಫಸಲುಗಳನ್ನು ಗ್ರಾಮದೊಳಗಿನ ಕಮಿಷನ್ ಏಜೆಂಟರು ಮತ್ತು ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು 2019ರಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (NCAER) ಮೂಲಕ ಪ್ರಕಟಿಸಿರುವ Study on Agriculture Diagnostics for the State of Bihar in India ಎನ್ನುವ ವರದಿ ಹೇಳುತ್ತದೆ. "2006ರಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿದರೂ, ಹೊಸ ಮಾರುಕಟ್ಟೆಗಳ ರಚನೆ ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಯಲ್ಲಿನ ಸೌಲಭ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಗಮನಾರ್ಹವಾದ ಖಾಸಗಿ ಹೂಡಿಕೆ ಕೂಡ ಬಿಹಾರದಲ್ಲಿ ಆಗಿಲ್ಲ, ಇದರಿಂದಾಗಿ ಅಲ್ಲಿ ಮಾರುಕಟ್ಟೆಯ ಸಾಂದ್ರತೆ ಮಟ್ಟ ಕುಸಿದಿದೆ ಎಂದು ವರದಿ ಹೇಳುತ್ತದೆ.

A locked Primary Agriculture Credit Society (PACS) centre in Khapura, where farmers can sell their paddy. Procurement by the PACS centres has been low in Bihar
PHOTO • Parth M.N.
A locked Primary Agriculture Credit Society (PACS) centre in Khapura, where farmers can sell their paddy. Procurement by the PACS centres has been low in Bihar
PHOTO • Parth M.N.

ಖಾಪುರಾದಲ್ಲಿ ಬೀಗ ಹಾಕಿರುವ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ ಕೇಂದ್ರ. ಇದರಲ್ಲಿ ರೈತರು ತಮ್ಮ ಭತ್ತವನ್ನು ಮಾರಾಟ ಮಾಡುತ್ತಾರೆ. ಬಿಹಾರದಲ್ಲಿ ಪಿಎಸಿಎಸ್ ಕೇಂದ್ರಗಳ ಮೂಲಕ ಖರೀದಿಸುವ ಪ್ರಮಾಣ ಕಡಿಮೆ ಇದೆ.

ರೈತರು, ವ್ಯಾಪಾರಿಗಳು ಮತ್ತು ಕೃಷಿ ಸಹಕಾರ ಸಂಘಗಳಂತಹ ಏಜೆನ್ಸಿಗಳ ಚುನಾಯಿತ ಸಂಸ್ಥೆಗಳಾಗಿರುವ ಎಪಿಎಂಸಿಗಳು, ದೊಡ್ಡ ಖರೀದಿದಾರರಿಂದ ರೈತರು ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳುತ್ತವೆ. "ಅವುಗಳನ್ನು ನಾಶಪಡಿಸುವ ಬದಲು, ಹೆಚ್ಚಿನ ರೈತರಿಂದ ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳಲು ಎಪಿಎಂಸಿಗಳನ್ನು ಸುಧಾರಿಸಬೇಕು ಮತ್ತು ಅವರ ಜಾಲವನ್ನು ವಿಸ್ತರಿಸಬೇಕು. ಆದರೆ ಯಾವುದೇ ಪರ್ಯಾಯ ಮಾರ್ಗವಿಲ್ಲದೆ ಅವುಗಳನ್ನು ರದ್ದುಪಡಿಸುವ ನಡೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.” ಎಂದು ಐಐಎಂ ಅಹಮದಾಬಾದ್‌ನ ಕೃಷಿ ಕೇಂದ್ರ ನಿರ್ವಹಣಾ ಕೇಂದ್ರದ (ಸಿಎಂಎ) ಅಧ್ಯಕ್ಷರು ಹಾಗೂ ಎಪಿಎಂಸಿ ತಜ್ಞರೂ ಆಗಿರುವ ಪ್ರೊಫೆಸರ್ ಸುಖ್ಪಾಲ್ ಸಿಂಗ್ ಹೇಳುತ್ತಾರೆ.

ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿರುವ ನಡೆಯು ಬಿಹಾರದ ಮೇಲೆ ತೀವ್ರ ಪರಿಣಾಮವನ್ನು ಬಿರಿದೆ. ಎನ್‌ಸಿಎಇಆರ್ ವರದಿಯ ಪ್ರಕಾರ, ಒಂದೆಡೆ 2006ರ ನಂತರ ಪ್ರಮುಖ ಬೆಳೆಗಳ ಬೆಲೆ ಏರಿಕೆಯಾಗಿದೆ, ಜೊತೆಗೆ ಬೆಲೆಯಲ್ಲಿನ ಅಸ್ಥಿತಿರತೆಯೂ ಕೂಡ ಅಧಿಕಗೊಂಡಿದೆ. “ನಮಗೆ ಬೆಲೆಗಳು ಸ್ಥಿರವಾಗಿರಬೇಕು, ಅವು ಅಸ್ಥಿರವಾಗಕೂಡದು. ಇಲ್ಲದಿದ್ದರೆ, ನಮ್ಮ ಫಸಲನ್ನು ಅವಸರದಲ್ಲಿ ಮಾರಾಟ ಮಾಡಬೇಕಾಗುತ್ತದೆ,” ಎಂದು ಓಜಾ ಹೇಳುತ್ತಾರೆ. ಈ ನೂತನ ಕೃಷಿ ಕಾನೂನುಗಳು ಭಾರತದಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿದ್ದೆ ಆದಲ್ಲಿ, ರೈತರು ಇದೇ ರೀತಿಯ ಬೆಲೆಗಳ ಏರಿಳಿತಗಳನ್ನು ಕಾಣಬೇಕಾಗುತ್ತದೆಂದು ದೇವಿಂದರ್ ಶರ್ಮಾ ಕಳವಳ ವ್ಯಕ್ತಪಡಿಸುತ್ತಾರೆ.

ಈಗ ಓಜಾ ಅವರು ತಮ್ಮ ಭತ್ತದ ಬೆಳೆಯನ್ನು ಕಮಿಷನ್ ಏಜೆಂಟರಿಗೆ ಮಾರಾಟ ಮಾಡುವುದಲ್ಲದೆ, ಎಪಿಎಂಸಿ ಕಾಯ್ದೆ ರದ್ದುಪಡಿಸಿದ ನಂತರ ಬಿಹಾರದಲ್ಲಿ ಸ್ಥಾಪಿಸಿರುವ ಸರ್ಕಾರಿ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗೆ (ಪಿಎಸಿಎಸ್) ಮಾರಾಟ ಮಾಡಬಹುದು, ಇದು ಕೇಂದ್ರ ಸರ್ಕಾರವು ನಿಗದಿಪಡಿಸಿದ ಎಂಎಸ್‌ಪಿ ದರಲ್ಲಿಯೇ ಸಂಗ್ರಹಿಸುತ್ತದೆ. ಆದರೆ, ವಾಸ್ತವದಲ್ಲಿ ಬಿಹಾರದಲ್ಲಿ ಪಿಎಸಿಎಸ್ ಸಂಗ್ರಹ ಪ್ರಮಾಣವು ತೀರಾ ಕಡಿಮೆಯಾಗಿದೆ, 2019 ರಲ್ಲಿ ಎನ್‌ಸಿಎಇಆರ್ ಅಧ್ಯಯನದ ವರದಿ ಹೇಳುವಂತೆ ಶೇಕಡಾ 91.7 ರಷ್ಟು ಭತ್ತವನ್ನು ಕಮಿಷನ್ ಏಜೆಂಟರಿಗೆ ಮಾರಾಟ ಮಾಡಲಾಗಿದೆ.

"ಪಿಎಸಿಎಸ್ ಸಂಗ್ರಹ ಪ್ರಕ್ರಿಯೆ ಫೆಬ್ರವರಿ ತಿಂಗಳದವರೆಗೆ ಸಾಗುತ್ತದೆ, ನಾನು ನವೆಂಬರ್‌ನಲ್ಲಿ ಭತ್ತವನ್ನು ಕೊಯ್ಲು ಮಾಡುತ್ತೇನೆ. ಡಿಸೆಂಬರ್‌ನಲ್ಲಿ ಪ್ರಾರಂಭವಾಗುವ ರಾಬಿ ಋತುವಿಗೆ ಸಿದ್ಧತೆ ಮಾಡಿಕೊಳ್ಳಲು ಆಗ ನನಗೆ ಹಣದ ಅವಶ್ಯಕತೆ ಬೀಳುತ್ತದೆ. ಒಂದು ವೇಳೆ ಭತ್ತದ ದಾಸ್ತಾನನ್ನು ಸಂಗ್ರಹಿಸಿಟ್ಟುಕೊಂಡಿದ್ದಂತಹ ಸಂದರ್ಭದಲ್ಲಿ ಮಳೆಯಾದರೆ ಇಡೀ ಫಸಲು ನಾಶವಾಗುತ್ತದೆ. “ಇದು ತುಂಬಾ ಅಪಾಯದ ಸಂಗತಿಯಾಗಿದೆ.” ಎಂದು ಓಜಾ ಹೇಳುತ್ತಾರೆ. ಈಗ ಹೆಚ್ಚಿನ ಪ್ರಮಾಣದ ಶೇಖರಣಾ ಸೌಲಭ್ಯಗಳ ಕೊರತೆಯಿಂದಾಗಿ ಓಜಾ ಪಿಎಸಿಎಸ್‌ಗೆ ಮಾರಾಟ ಮಾಡುವುದಕ್ಕೆ ಹಿಂದೇಟು ಹಾಕುವಂತಾಗಿದೆ.

ಪಾಟ್ನಾದ ಜಿಲ್ಲಾಧಿಕಾರಿ ಕುಮಾರ್ ರವಿ ಮಾತನಾಡಿ, ಪಿಎಸಿಎಸ್ ಕೇಂದ್ರಗಳು ನವೆಂಬರ್‌ನಲ್ಲಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ. “ಚಳಿಗಾಲದಿಂದಾಗಿ ಸಾಮಾನ್ಯವಾಗಿ ಸಾಕಷ್ಟು ಭತ್ತ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದಾಗಿ ತಮ್ಮ ಫಸಲನ್ನು ಒಣಗಿಸಲು ಹೆಣಗಾಡುವ ರೈತರು ಕೊನೆಗೆ ಅದನ್ನು ಪಿಎಸಿಎಸ್‌ಗೆ ಮಾರಾಟ ಮಾಡುತ್ತಾರೆ, ಜಿಲ್ಲಾ ಆಡಳಿತ ಮತ್ತು ರಾಜ್ಯದ ಸಹಕಾರಿ ಇಲಾಖೆ ಅದನ್ನು ನೋಡಿಕೊಳ್ಳುತ್ತದೆ, ”ಎಂದು ಹೇಳುತ್ತಾರೆ.

ಫಸಲನ್ನು ಖರೀದಿಸಲು ಜಿಲ್ಲಾ ಆಡಳಿತ ನಿಗದಿತ ಪ್ರಮಾಣದ ಗುರಿಯನ್ನು ನಿಗದಿಪಡಿಸಿರುತ್ತದೆ ಎಂದು ಚೌಮುಖ್ ಗ್ರಾಮದ ಪಿಎಸಿಎಸ್ ಕೇಂದ್ರದ ಅಧ್ಯಕ್ಷ ಅಜಯ್ ಮಿಶ್ರಾ ಹೇಳುತ್ತಾರೆ. “ಪ್ರತಿ ಪಿಎಸಿಎಸ್‌ ಕೂಡ ತನ್ನ ಮೀತಿಯನ್ನು ಮೀರುವಂತಿಲ್ಲ ಎನ್ನುವ ನಿಯಮಾವಳಿ ಇದೆ.ಈ ಹಿಂದಿನ ಋತುವಿನಲ್ಲಿ (2019-20), ನಮ್ಮ ಮಿತಿ 1,700 ಕ್ವಿಂಟಾಲ್ ಗಳನ್ನು ಸಂಗ್ರಹಿಸುವುದಾಗಿತ್ತು,” ಚೌಮುಖ್ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 20,000 ಕ್ವಿಂಟಾಲ್ ಉತ್ಪಾದಿಸಲಾಗುತ್ತದೆ. ಹೀಗಾಗಿ ನಾನು ಸಂಕಷ್ಟದ ಸ್ಥಿತಿಯಲ್ಲಿದ್ದೆ, ಉಳಿದಿರುವ ರೈತರನ್ನು ದೂರವಿಟ್ಟಿದ್ದಕ್ಕಾಗಿ ನಾನು ಅವರಿಂದ ನಿಂದನೆಗೆ ಒಳಗಾಗಬೇಕಾಯಿತು. ಆದರೆ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿ ನಾನಿದ್ದೇನೆ.” ಎನ್ನುತ್ತಾರೆ.

Small and marginal farmers end up dealing with agents, says Ajay Mishra, chairman of the PACS centre in Chaumukh
PHOTO • Parth M.N.

ಸಣ್ಣ ಮತ್ತು ಅತಿಸಣ್ಣ ರೈತರು ಏಜೆಂಟರೊಂದಿಗೆ ವ್ಯವಹರಿಸುವುದಕ್ಕೆ ಸೀಮಿತಗೊಳ್ಳುತ್ತಾರೆ ಎಂದು ಚೌಮುಖ್‌ನ ಪಿಎಸಿಎಸ್ ಕೇಂದ್ರದ ಅಧ್ಯಕ್ಷ ಅಜಯ್ ಮಿಶ್ರಾ ಹೇಳುತ್ತಾರೆ .

2015-16ರ ವೇಳೆಗೆ, ಬಿಹಾರದಲ್ಲಿ ಸುಮಾರು ಶೇ 97ರಷ್ಟು ರೈತರು ಸಣ್ಣ ಮತ್ತು ಅಲ್ಪ ಪ್ರಮಾಣದ ಭೂಸ್ವಾಮ್ಯವನ್ನು ಹೊಂದಿದ್ದಾರೆ ಎಂದು ಎನ್‌ಸಿಎಇಆರ್ ವರದಿ ಹೇಳುತ್ತದೆ. ಈ ಅಂಕಿ ಅಂಶವು ಭಾರತದ ಸರಾಸರಿ ಶೇಕಡಾ 86.21 ಗಿಂತ ಹೆಚ್ಚಾಗಿದೆ. “ಸಣ್ಣ ಮತ್ತು ಅತಿಸಣ್ಣ ರೈತರು ಏಜೆಂಟರೊಂದಿಗೆ ವ್ಯವಹರಿಸಿದರೆ, ಅನುಕೂಲಸ್ಥ ರೈತರು ತಮ್ಮ ಫಸಲನ್ನು ಪಿಎಸಿಎಸ್‌ ಮಾರಾಟಕ್ಕೆ ಸೀಮಿತಗೊಳಿಸುತ್ತಾರೆ” ಎಂದು ಮಿಶ್ರಾ ಹೇಳುತ್ತಾರೆ.

ಪಿಎಸಿಎಸ್ ಕೇವಲ ಭತ್ತವನ್ನು ಮಾತ್ರ ಸಂಗ್ರಹಿಸುತ್ತದೆ, ಆದ್ದರಿಂದ ಓಜಾ ತಮ್ಮ ಗೋಧಿ ಮತ್ತು ಮೆಕ್ಕೆಜೋಳದ ಫಸಲನ್ನು ಎಂಎಸ್‌ಪಿಗಿಂತಲೂ ಕಡಿಮೆ ಬೆಲೆಗೆ ಏಜೆಂಟರಿಗೆ ಮಾರುತ್ತಾರೆ. “ನಾನು ನಾಲ್ಕು ಕಿಲೋ ಮೆಕ್ಕೆಜೋಳವನ್ನು ಮಾರಾಟ ಮಾಡಿದ ನಂತರ ಒಂದು ಕಿಲೋಗ್ರಾಂ ಆಲೂಗಡ್ಡೆಯನ್ನು ಖರೀದಿಸಬಹುದು. ಈ ವರ್ಷ (2020), ಲಾಕ್‌ಡೌನ್ ಹಿನ್ನಲೆಯಲ್ಲಿ ನನ್ನ ಮೆಕ್ಕೆ ಜೋಳವನ್ನು ಕ್ವಿಂಟಲ್‌ಗೆ 1,000 ರೂ.ದರದಲ್ಲಿ ಮಾರಿದ್ದೇನೆ. ಆದರೆ, ಕಳೆದ ವರ್ಷ ಇದು 2,200 ರೂ.ಗಳಾಗಿತ್ತು. ಈಗ ನಾವು ಒಂದು ರೀತಿ ಏಜೆಂಟರ ಕೃಪೆಯಲ್ಲಿದ್ದೇವೆ.” ಎಂದು ಓಜಾ ಹೇಳುತ್ತಾರೆ.

ಕಡಿಮೆ ಬೆಲೆಯನ್ನು ನೀಡುವುದರ ಜೊತೆಗೆ, ಏಜೆಂಟರು ಆಗಾಗ್ಗೆ ತೂಕದ ಮಾಪಕಗಳನ್ನು ತಿರುಚುತ್ತಾರೆ.“ಅವರು ಪ್ರತಿ ಕ್ವಿಂಟಾಲ್‌ನಿಂದ ಐದು ಕಿಲೋಗ್ರಾಂ ಕದಿಯುತ್ತಾರೆ. ಏಜೆಂಟರ ತೂಕದ ಯಂತ್ರಗಳು ಮತ್ತು ಎಪಿಎಂಸಿಯಲ್ಲಿರುವ ಯಂತ್ರಗಳು ಯಾವಾಗಲೂ ಒಂದೇ ದಾಸ್ತಾನಿಗೆ ವಿಭಿನ್ನ ತೂಕವನ್ನು ತೋರಿಸುತ್ತವೆ,” ಎಂದು ಪಾಟ್ನಾದ ಪಾಲಿಗಂಜ್ ತಾಲ್ಲೂಕಿನ ಖಪುರಾ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಹೊಂದಿರುವ 40 ವರ್ಷದ ರೈತ ಕಮಲ್ ಶರ್ಮಾ ಹೇಳುತ್ತಾರೆ.

“ಏಜೆಂಟರು ಒಬ್ಬ ರೈತನಿಗೆ ಮೋಸ ಮಾಡಿದರೆ, ಅವರು ಗ್ರಾಹಕ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಆದರೆ ಅದನ್ನು ಮಾಡಲು ಎಷ್ಟು ರೈತರು ಶಕ್ತರಾಗಿದ್ದಾರೆ? ಎಂದು ಸಿಎಂಎ ನ ಸಿಂಗ್ ಪ್ರಶ್ನಿಸುತ್ತಾರೆ. ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುವ ವ್ಯಾಪಾರಿಗಳಿಗೆ ಪರವಾನಗಿ ಇದೆ. ತಮ್ಮ ಕೃತ್ಯಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬಹುದು. “ನೀವು ನಿಯಂತ್ರಣ ವ್ಯವಸ್ಥೆ ಇಲ್ಲದೆ ಕೃಷಿ ಮಾರುಕಟ್ಟೆಗಳನ್ನು ಹೊಂದಲು ಸಾಧ್ಯವಿಲ್ಲ, ಇದು ಎಲ್ಲಾ ಪಾಲುದಾರರಿಗೆ ನ್ಯಾಯಯುತವಾದ ಕಾರ್ಯವಿಧಾನವಾಗಿದೆ. ಅಂತಹ ಒಂದು ನಿಯಂತ್ರಣ ವ್ಯವಸ್ಥೆಯನ್ನು ಈ ಎಪಿಎಂಸಿಗಳು ತಂದಿವೆ.” ಎಂದು ಅವರು ಹೇಳುತ್ತಾರೆ.

ಏಜೆಂಟರ ಈ ಅರೆ ಒಪ್ಪಂದವು ಅನೇಕರನ್ನು ಬಿಹಾರದಿಂದ ವಲಸೆ ಹೋಗುವಂತೆ ಮತ್ತು ಬೇರೆಡೆ ದುಡಿಯಲು ತೆರಳುವಂತೆ ಮಾಡುತ್ತದೆ. “ಅವರಿಗೆ ಯೋಗ್ಯ ವೇತನ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಗಳಿಕೆ ಇಲ್ಲ. ಇದರಿಂದಾಗಿ ಅವರು ಪಂಜಾಬ್ ಮತ್ತು ಹರಿಯಾಣಕ್ಕೆ ಹೋಗುತ್ತಾರೆ.” ಎಂದು ಕಮಲ್ ಶರ್ಮಾ ಹೇಳುತ್ತಾರೆ.

Left: Kamal Sharma in his farm in Khapura. Right: Vishwa Anand says farmers from Bihar migrate to work because they can't sell their crops at MSP
PHOTO • Parth M.N.
Left: Kamal Sharma in his farm in Khapura. Right: Vishwa Anand says farmers from Bihar migrate to work because they can't sell their crops at MSP
PHOTO • Parth M.N.

ಎಡಕ್ಕೆ: ಖಾಪುರದ ತಮ್ಮ ಗದ್ದೆಯಲ್ಲಿರುವ ಕಮಲ್ ಶರ್ಮಾ. ಬಲಕ್ಕೆ: ಎಂಎಸ್ಪಿ ದರದಲ್ಲಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲದ ಕಾರಣ ಬಿಹಾರದ ರೈತರು ಕೆಲಸಕ್ಕೆ ವಲಸೆ ಹೋಗುತ್ತಾರೆ ಎಂದು ವಿಶ್ವ ಆನಂದ್ ಹೇಳುತ್ತಾರೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆಯುವ ಹೆಚ್ಚಿನ ಗೋಧಿ ಮತ್ತು ಭತ್ತವನ್ನು ಈ ರಾಜ್ಯಗಳ ಸರ್ಕಾರಗಳು ಸಂಗ್ರಹಿಸುತ್ತವೆ. “ಅಲ್ಲಿನ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆ, ಆದ್ದರಿಂದ, ಅವರು ಕೃಷಿ ಕೂಲಿ ಕಾರ್ಮಿಕರಿಗೆ ಉತ್ತಮ ವೇತನವನ್ನು ನೀಡಬಹುದು. ಬಿಹಾರದಲ್ಲಿ ಕೆಲಸ ಮಾಡದಿರುವುದಕ್ಕೆ ನಾವು ಕೃಷಿ ಕೂಲಿ ಕಾರ್ಮಿಕರನ್ನು ದೂರಲು ಸಾಧ್ಯವಿಲ್ಲ. ರೈತರು ತಮ್ಮ ಬೆಳೆಗಳನ್ನು ಎಂಎಸ್‌ಪಿ ದರದಲ್ಲಿ ಮಾರಾಟ ಮಾಡಲು ಸಾಧ್ಯವಾದರೆ, ಅವರು ಇಲ್ಲಿಂದ ಬೇರೆಡೆಗೆ ವಲಸೆ ಹೋಗುವುದಿಲ್ಲ” ಎಂದು ಚೌಮುಖ್‌ನ ಕೃಷಿ ಕಾರ್ಯಕರ್ತ ವಿಶ್ವ ಆನಂದ್ ವಿವರಿಸುತ್ತಾರೆ.

2020ರ ಅಕ್ಟೋಬರ್-ನವೆಂಬರ್ ನಲ್ಲಿ ನಾನು ಮಾತನಾಡಿಸಿದ ಬಹುತೇಕ ಬಿಹಾರದ ಜಿಲ್ಲೆಗಳ ರೈತರು, ಎಂಎಸ್ಪಿ ದರದಲ್ಲಿ ಬೆಳೆಗಳನ್ನು ಖರೀದಿಸುವ ನಿಯಮವನ್ನು ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಹೇಳುತ್ತಾರೆ. ಇದೇ ಬೇಡಿಕೆ ದೆಹಲಿಯ ಹೊರಭಾಗದಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲೂ ಕೂಡ ವ್ಯಕ್ತವಾಗುತ್ತದೆ.

ರೈತರು ಈ ಕೃಷಿ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ಪರಿಗಣಿಸಿದ್ದಾರೆ.ಏಕೆಂದರೆ ಇದರಿಂದಾಗಿ ಬೃಹತ್ ಕಾರ್ಪೊರೇಟ್‌ ಕಂಪನಿಗಳು ಈಗ ರೈತರು ಹಾಗೂ ಕೃಷಿ ವಲಯದ ಮೇಲೆ ಇನ್ನೂ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸುತ್ತವೆ. ಈ ನೂತನ ಕೃಷಿ ಕಾನೂನುಗಳು ರೈತರಿಗೆ ಇರುವ ಪ್ರಮುಖ ಆಧಾರದ ಮೂಲಗಳನ್ನು ನಾಶಪಡಿಸುತ್ತವೆ . ಇವುಗಳಲ್ಲಿ ಪ್ರಮುಖವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಉತ್ಪನ್ನಗಳನ್ನು ಸರ್ಕಾರವೇ ಖರೀದಿಸುವುದು, ಇಂತಹ ಇನ್ನೂ ಹಲವು ಆಧಾರದ ಮೂಲಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ ಭಾರತೀಯ ಸಂವಿಧಾನದ 32 ನೇ ವಿಧಿಯನ್ನು ದುರ್ಬಲಗೊಳಿಸಿ, ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ನಿಷ್ಕ್ರಿಯಗೊಳಿಸುವ ನಡೆ ಪ್ರತಿಯೊಬ್ಬ ಭಾರತೀಯನ ಮೇಲೂ ಪರಿಣಾಮ ಬೀರುತ್ತದೆ ಎಂದು ಟೀಕಿಸಲಾಗುತ್ತದೆ.

“ಕೇಂದ್ರ ಸರ್ಕಾರವು ಬೆಲೆಯನ್ನು ನಿಗದಿಪಡಿಸುತ್ತದೆ. ನಂತರ, ಎಂಎಸ್‌ಪಿ ದರದಲ್ಲಿ ಮಾರಾಟ ಮಾಡಲಾಗದ ರೈತರ ಬಗ್ಗೆ ಮರೆತುಬಿಡುತ್ತದೆ. ಯಾರಾದರೂ ಎಂಎಸ್‌ಪಿ ದರಕ್ಕಿಂತ ಕಡಿಮೆ ದರದಲ್ಲಿ ಸಂಗ್ರಹಿಸಿದರೆ ಅದನ್ನು ಅಪರಾಧವೆಂದು ಸರ್ಕಾರಕ್ಕೆ ಘೋಷಿಸಲು ಸಾಧ್ಯವಿಲ್ಲವೇಕೆ?’ ವ್ಯಾಪಾರಿಗಳು ಮೋಸ ಮಾಡಿದರೆ ರೈತರು ಎಲ್ಲಿಗೆ ಹೋಗಬೇಕು?" ಎನ್ನುತ್ತಾರೆ ಆನಂದ್.

ಖಾಪುರಾದಲ್ಲಿ ಕಮಲ್ ಶರ್ಮಾ ಮತ್ತು ಅವರ ಪತ್ನಿ ಪೂನಮ್ ಅವರು 12 ವರ್ಷಗಳ ಹಿಂದೆ ವ್ಯಾಪಾರಿ ಅವರಿಂದ ಸಾಲವಾಗಿ ಪಡೆದ 2,500 ರೂಗಳನ್ನು ಹಿಂಪಡೆಯಬೇಕಾಗಿದೆ. “ಇದು ನಮ್ಮ ಭತ್ತದ ಫಸಲನ್ನು ತೆಗೆದುಕೊಂಡು ಹೋಗಲು ನೀಡಿದ ಮುಂಗಡ ಹಣವಾಗಿತ್ತು” ಎನ್ನುತ್ತಾರೆ ಕಮಲ್.

“ಇಂದಿಗೂ ಕೂಡ ಇದು ನಮಗೆ ದೊಡ್ಡ ಮೊತ್ತವಾಗಿದೆ, ಆದರೆ ಆಗ ಅದು ಇನ್ನೂ ದೊಡ್ಡದಾಗಿತ್ತು. ಈ ಹಿಂದೆ ಇದ್ದಂತಹ ಒಂದು ಪ್ಯಾಕೆಟ್ ಗೊಬ್ಬರದ ಬೆಲೆ ಈಗ ಐದು ಪಟ್ಟು ಅಧಿಕಗೊಂಡಿದೆ. ಆದರೆ ಬಿಹಾರದಲ್ಲಿ ಸಾಮಾನ್ಯವಾಗಿ ಇಂತಹ ನಿದರ್ಶನಗಳು ನಡೆಯುತ್ತಲೇ ಇರುತ್ತವೆ. ಆದರೆ ನಮಗೆ ಅದು ಇನ್ಮುಂದೆ ಅಚ್ಚರಿಯನ್ನುಂಟು ಮಾಡುವುದಿಲ್ಲ.” ಎಂದು ಪೂನಮ್ ಹೇಳುತ್ತಾರೆ.

ಅನುವಾದ: ಎನ್.ಮಂಜುನಾಥ್

Parth M.N.

पार्थ एम एन हे पारीचे २०१७ चे फेलो आहेत. ते अनेक ऑनलाइन वृत्तवाहिन्या व वेबसाइट्ससाठी वार्तांकन करणारे मुक्त पत्रकार आहेत. क्रिकेट आणि प्रवास या दोन्हींची त्यांना आवड आहे.

यांचे इतर लिखाण Parth M.N.
Translator : N. Manjunath