ಫುಲಾಬಾಯಿ ಭೋಂಗ್ ಆಷಾಢ ಏಕಾದಶಿಯ ಪವಿತ್ರ ದಿನದಂದು ಭಗವಂತ ವಿಠ್ಠಲನ ಭಕ್ತರು ಆಚರಿಸುವ ಉಪವಾಸದ ಕುರಿತು ಈ ಸಂಚಿಕೆಯಲ್ಲಿ ಹಾಡಿದ್ದಾರೆ. ಈ ಉಪವಾಸವು ಆತ್ಮವನ್ನು ಜೀವನ ಮತ್ತು ಸಾವಿನ ಚಕ್ರದಿಂದ ಬಿಡುಗಡೆ ಮಾಡುತ್ತದೆನ್ನುವುದು ಭಕ್ತರ ನಂಬಿಕೆ
ಈ ವರ್ಷದ ಜುಲೈ 20ರಂದು ಬರುವ ಆಷಾಢ ಏಕಾದಶಿಯಂದು - ಧಾರ್ಮಿಕ ನಿಷ್ಠಾವಂತ ಹಿಂದೂಗಳು ಇಡೀ ದಿನ ಗುಟುಕು ನೀರನ್ನು ಮಾತ್ರ ಕುಡಿಯುವು ಮೂಲಕ ಉಪವಾಸ ಮಾಡುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ, ದೀರ್ಘಕಾಲ ಹಸಿದಿರಲು ಸಾಧ್ಯವಾಗದವರು ಈಗ ತಮಾಷೆಯಾಗಿ "ಮರಾಠಿ ಫಾಸ್ಟ್ ಫುಡ್" ಎಂದು ಕರೆಯಲ್ಪಡುವ ಆಹಾರವನ್ನು ತಿನ್ನುತ್ತಾರೆ. ಅಂದು ಸಾಬುದಾನ ಖಿಚಡಿಯಂತಹಹ ಸರಳ ಆದರೆ ರುಚಿಕರವಾದ ಭಕ್ಷ್ಯಗಳು, ಮರಗೆಣಸು, ಆಲೂಗಡ್ಡೆ ಮತ್ತು ಕಡಲೆಕಾಯಿಗಳಂತಹ ಆಹಾರವನ್ನು ಉಪವಾಸಮಾಡುವಾಗ ಸೇವಿಸಲು "ಅನುಮತಿಸಲಾಗಿರುವ" ಪದಾರ್ಥಗಳೊಂದಿಗೆ ಬೇಯಿಸಿ ತಿನ್ನಲಾಗುತ್ತದೆ.
ಪುಣೆಯ ಇಂದಾಪುರ ತಾಲ್ಲೂಕಿನ ನಿಂಗಾಂವ್ ಕೆಟ್ಕಿ ಗ್ರಾಮದ ಫುಲಬಾಯಿ ಭೋಂಗ್ ಅವರು ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ (ಜಿಎಸ್ ಪಿ)ನ ಈ ಕಂತಿನಲ್ಲಿ ಆಷಾಢ ಏಕಾದಶಿ ಉಪವಾಸದ ಕುರಿತು ಐದು ಓವಿಗಳನ್ನು ಹಾಡಿದ್ದಾರೆ. ಹಿಂದೂ ಪಂಚಾಂಗದ ಚಾಂದ್ರಮಾನ ಮಾಸದ ಹನ್ನೊಂದನೇ ದಿನದಂದು ದಿನವಿಡೀ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡುವುದರಿಂದ ಮುಕ್ತಿ ದೊರೆಯುತ್ತದೆ ಮತ್ತು ಜನನ, ಜೀವನ ಮತ್ತು ಮರಣದ ಚಕ್ರದಿಂದ ತಮ್ಮ ಆತ್ಮವನ್ನು ಈ ಉಪವಾಸ ಬಿಡುಗಡೆ ಮಾಡುತ್ತದೆ ಎಂದು ಭಕ್ತರು ನಂಬುತ್ತಾರೆ.
ದೇವರಾದ ವಿಠ್ಠಲನೂ ಈ ದಿನದಂದು ಉಪವಾಸವನ್ನು ಮಾಡುತ್ತಾನೆಂದು ಗಾಯಕಿ ತನ್ನ ಹಾಡಿನಲ್ಲಿ ಹೇಳುತ್ತಾರೆ. ರುಕ್ಮಿಣಿ ದೇವಿಯು ತನ್ನ ಔಷಧೀಯ ಬಳಕೆಗೆ ಹೆಸರುವಾಸಿಯಾದ ಸಣ್ಣ ಹಸಿರು ಹಣ್ಣು ಗೋವಿಂದ ಫಲವನ್ನು ಹೊಂದಿರುವ ಎತ್ತರದ ವಾಘತಿ ಬಳ್ಳಿ (ಗಜ್ಜುಗದ ಬಳ್ಳಿ) ಹಬ್ಬಿರುವ ಮರಕ್ಕೆ ಏಣಿಗಳನ್ನು ಕಟ್ಟುತ್ತಾಳೆ ಎಂದು ಅವರು ನಮಗೆ ಹೇಳುತ್ತಾರೆ. ಉಪವಾಸವನ್ನು ಮುರಿಯಲು ಏಕಾದಶಿಯ ಮರುದಿನ ಈ ಹಣ್ಣನ್ನು ಬೇಯಿಸಿ ತಿನ್ನಲಾಗುತ್ತದೆ.





