"ಈಗ, ನಾವು ಪ್ರತಿದಿನ ಕನಿಷ್ಠ 25 ಮನೆಗಳಿಗೆ ಭೇಟಿ ನೀಡಬೇಕಿದೆ, ಪ್ರತಿ ಮನೆಗೆ ತಿಂಗಳಿಗೆ ಕನಿಷ್ಠ ನಾಲ್ಕು ಬಾರಿ" ಎಂದು ಸುನೀತಾ ರಾಣಿ ಹೇಳುತ್ತಾರೆ, "ಕೊರೋನಾ ವೈರಸ್ ಸಮೀಕ್ಷೆ ನಡೆಸಲು." ಅವರು ಈ ತಿರುಗಾಟವನ್ನು ಕಳೆದ 10 ದಿನಗಳಿಂದ ಮಾಡುತ್ತಿದ್ದಾರೆ, ಆದರೆ ಹರಿಯಾಣದಲ್ಲಿ ಪಾಸಿಟಿವ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಏಪ್ರಿಲ್ 14ರ ಹೊತ್ತಿಗೆ, 180ಕ್ಕೂ ಹೆಚ್ಚು ದೃಢಪಟ್ಟ ಪ್ರಕರಣಗಳು ಮತ್ತು ಎರಡು ಸಾವುಗಳು ಸಂಭವಿಸಿವೆ.
"ಜನರು ಈ ರೋಗದಿಂದ ಭಯಭೀತರಾಗಿದ್ದಾರೆ. ಇದು ಸ್ಪರ್ಶದ ಮೂಲಕ ಹರಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಮಾಧ್ಯಮಗಳಲ್ಲಿ 'ಸಾಮಾಜಿಕ ಅಂತರ' ಎಂದು ಹೇಳುತ್ತಲೇ ಇರುತ್ತಾರೆ. ಕೊರೋನಾ ವೈರಸ್ ಎಂದರೇನು ಮತ್ತು ಅವರು ಹೇಗೆ ಪ್ರತ್ಯೇಕವಾಗಿರಬೇಕು ಎಂಬುದನ್ನು ನಾನು ವಿವರಿಸಿದ ನಂತರವೂ "ಏಳು ಜನರು ಒಟ್ಟಿಗೆ ವಾಸಿಸುವ 10X10 ಅಡಿ ಮನೆಯಲ್ಲಿ ಸಾಮಾಜಿಕ ಅಂತರವೆಂದರೇನು?" ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಅವರ ಕಣ್ಣಿನಲ್ಲಿ ಕಣ್ಣಿಡುವುದು ನನಗೆ ಕಷ್ಟವಾಗುತ್ತದೆ ಎಂದು ಸುನೀತಾ ಹೇಳುತ್ತಾರೆ.
39 ವರ್ಷದ ಸುನೀತಾ ಹರಿಯಾಣದ ಸೋಣಿಪತ್ ಜಿಲ್ಲೆಯ ನಾಥುಪೂರ್ ಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ). ಭಾರತದ ಗ್ರಾಮೀಣ ಜನಸಂಖ್ಯೆಯನ್ನು ಅದರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸಂಪರ್ಕಿಸುವ 10 ಲಕ್ಷಕ್ಕೂ ಹೆಚ್ಚು ಆಶಾಗಳಲ್ಲಿ ಇವರೂ ಒಬ್ಬರು. ಕೋವಿಡ್-19 ಅತಿದೊಡ್ಡ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಬಿಕ್ಕಟ್ಟಿನೊಂದಿಗೆ, ನವಜಾತ ಶಿಶುಗಳಿಗೆ ಲಸಿಕೆ ಹಾಕುವುದರಿಂದ ಹಿಡಿದು ಮಹಿಳೆಯರ ಕಾಳಜಿ ನೋಡಿಕೊಳ್ಳುವುದು ಮತ್ತು ಕುಟುಂಬ ಯೋಜನೆಯ ಬಗ್ಗೆ ಅವರಿಗೆ ಸಲಹೆ ನೀಡುವವರೆಗೆ - 60ಕ್ಕೂ ಹೆಚ್ಚು ಕಾರ್ಯಗಳಲ್ಲಿ ಅವರು ಬಿಡುವಿಲ್ಲದೆ ತೊಡಗಿಸಿಕೊಂಡಿರುತ್ತಾರೆ.
ಹರಿಯಾಣದಲ್ಲಿ ಮಾರ್ಚ್ 17ರಂದು ಗುರುಗ್ರಾಮದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆಯಾದಾಗ ಸೋಣಿಪತ್‌ನ ಆಶಾ ಕಾರ್ಯಕರ್ತರು ರೋಗದ ಬಗ್ಗೆ ತಮ್ಮ ಮೇಲ್ವಿಚಾರಕರಿಂದ ಯಾವುದೇ ಸೂಚನೆಗಳನ್ನು ಸ್ವೀಕರಿಸಿರಲಿಲ್ಲ. ನಾಲ್ಕು ದಿನಗಳ ನಂತರ, ಸೋಣಿಪತ್‌ನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿತು. ಆಗಲೂ, ಅವರು ಅನುಸರಿಸಬೇಕಾದ ಹೊಸ ಸುರಕ್ಷತಾ ಪದ್ಧತಿಗಳ ಬಗ್ಗೆ ಅಥವಾ ಗ್ರಾಮಸ್ಥರಿಗೆ ಅರಿವು ಮೂಡಿಸುವ ಬಗ್ಗೆ ಅವರ ಮೇಲ್ವಿಚಾರಕರಿಂದ ಯಾವುದೇ ಸೂಚನೆ ಇರಲಿಲ್ಲ. ಏಪ್ರಿಲ್ 2ರಂದು, ಸುನೀತಾ ಮತ್ತು ಸೋಣಿಪತ್‌ನ 1,270 ಆಶಾ ಕಾರ್ಯಕರ್ತರಿಗೆ ಮಾರಣಾಂತಿಕ SARS-CoV-2 (ಸಾರ್ಸ್-ಕೊವಿ-2) ವೈರಸ್ ವಿರುದ್ಧ ಜಾಗೃತಿ ಮೂಡಿಸಲು ಮುಂಚೂಣಿಯಲ್ಲಿ ನಿಲ್ಲಲು ತರಬೇತಿ ನೀಡುತ್ತಿದ್ದಾಗ, ರಾಷ್ಟ್ರವ್ಯಾಪಿ ಲಾಕ್ ಡೌನ್ ನಡೆಯುತ್ತಿತ್ತು ಮತ್ತು ಕೋವಿಡ್-19ರ ನಂತರ ಮೊದಲ ಸಾವನ್ನು ರಾಜ್ಯವೂ ದಾಖಲಿಸಿತ್ತು.
ತನ್ನ ಹಳ್ಳಿಯಲ್ಲಿ ಸುಮಾರು 1,000 ಜನರ ಉಸ್ತುವಾರಿ ವಹಿಸಿರುವ ಸುನೀತಾ ಅವರ ಹೊಸ ಜವಾಬ್ದಾರಿಗಳಲ್ಲಿ, ಕ್ಯಾನ್ಸರ್, ಕ್ಷಯ ಅಥವಾ ಹೃದಯ ಕಾಯಿಲೆಗಳಿರುವ ರೋಗಿಗಳಂತಹ ಕೋವಿಡ್-19 ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿರುವವರ ಆರೋಗ್ಯ ಸ್ಥಿತಿ ಮತ್ತು ದೇಶದ ಹೊರಗಿನಿಂದ ಯಾರಾದರೂ ಮರಳಿದ್ದಾರೆಯೇ ಎಂಬ ಬಗ್ಗೆ ತಿಳಿದುಕೊಳ್ಳುವುದು, ಅವರ ವ್ಯಾಪ್ತಿಯೊಳಗಿನ ಪ್ರತಿಯೊಂದು ಮನೆಯ ಎಲ್ಲಾ ಕುಟುಂಬ ಸದಸ್ಯರ ವಯಸ್ಸು ಸೇರಿದಂತೆ ವಿವರವಾದ ದಾಖಲೆಯನ್ನು ರಚಿಸುವುದು ಅವರ ಜವಬ್ದಾರಿಯಾಗಿತ್ತು. "ಇನ್‌ಫ್ಲುಯೆನ್ಝಾದಂತಹ ರೋಗಲಕ್ಷಣಗಳು ಅಥವಾ ಕೊರೋನಾ ವೈರಸ್‌ನ ರೋಗಲಕ್ಷಣಗಳನ್ನು ಯಾರು ಹೊಂದಿದ್ದಾರೆಂದನ್ನು ನಾನು ಪರಿಶೀಲಿಸುತ್ತೇನೆ ಮತ್ತು ಟಿಪ್ಪಣಿ ಮಾಡುತ್ತೇನೆ. ಇದೆಲ್ಲವೂ ಕಷ್ಟವಲ್ಲ. ನಾನು ವಿವರವಾದ ದಾಖಲೆ-ನಿರ್ವಹಣೆಯನ್ನು ಅಭ್ಯಾಸ ಮಾಡಿಕೊಂಡಿದ್ದೇನೆ, ಆದರೆ ಪರಿಸ್ಥಿತಿಗಳು ಸಂಪೂರ್ಣವಾಗಿ ಬದಲಾಗಿವೆ" ಎಂದು ಸುನೀತಾ ಹೇಳುತ್ತಾರೆ.




