ಮಂಜಿತ್ ಕೌರ್ ಎರಡೂ ಕೈಗಳಿಂದ ದನದ ಕೊಟ್ಟಿಗೆಯ ಮಣ್ಣು ಮತ್ತು ಇಟ್ಟಿಗೆ ನೆಲದಿಂದ ಎಮ್ಮೆಯ ಸಗಣಿಯನ್ನು ಹೊರತೆಗೆಯುತ್ತಾರೆ. 48 ವರ್ಷದ ಮಹಿಳೆ ಕುಳಿತು, ನೆಲಕ್ಕೆ ಅಂಟಿದ ಸಗಣಿಯನ್ನು ಕೆರೆದು ನಂತರ ತನ್ನ ತಲೆಯ ಮೇಲೆ ಹೊತ್ತು ಸಾಗಿಸುವ ಬಾಲ್ಟಾ (ಟಬ್)ದಲ್ಲಿ ತುಂಬುತ್ತಾರೆ. ತನ್ನ ತಲೆಯ ಮೇಲಿನ ಹೊರೆಯನ್ನು ಜಾಗರೂಕತೆಯಿಂದ ಸಮತೋಲನಗೊಳಿಸುತ್ತಾ, ಮನೆಯ ಮರದ ಗೇಟುಗಳನ್ನು ದಾಟಿ, ಸುಮಾರು 50 ಮೀಟರ್ ದೂರದಲ್ಲಿರುವ ಸಗಣಿಯ ರಾಶಿಗೆ ನಡೆದರು. ರಾಶಿಯು ಆಕೆಯ ಎದೆಯ ಎತ್ತರಕ್ಕೆ ನಿಂತಿದೆ, ಇದು ಅವರ ತಿಂಗಳುಗಳ ಸುದೀರ್ಘ ದುಡಿಮೆಯ ಪುರಾವೆಯಾಗಿದೆ.
ಅದು ಸುಡುವ ಬಿಸಿಲಿನ ಏಪ್ರಿಲ್ ತಿಂಗಳ ಮಧ್ಯಾಹ್ನ. 30 ನಿಮಿಷಗಳಲ್ಲಿ, ಮಂಜಿತ್ ಈ ಸಣ್ಣ ತಿರುಗಾಟವನ್ನು ಎಂಟು ಬಾರಿ ಪುನರಾವರ್ತಿಸುತ್ತಾರೆ. ಅಂತಿಮವಾಗಿ, ತನ್ನ ಬರಿಗೈಗಳನ್ನು ಬಳಸಿ ಟಬ್ಬನ್ನು ನೀರಿನಿಂದ ತೊಳೆಯುತ್ತಾರೆ. ದಿನಕ್ಕೆ ಹೊರಡುವ ಮೊದಲು, ಅವರು ಅಲ್ಲಿಂದ ದಿನದ ಕೆಲಸ ಮುಗಿಸಿ ಹೊರಡುವ ಮೊದಲು ಸ್ಟೀಲ್ ಪಾತ್ರೆಯಲ್ಲಿ ತನ್ನ ಮೊಮ್ಮಗನಿಗಾಗಿ ಎಮ್ಮೆಯ ಹಾಲನ್ನು ಪಡೆದುಕೊಳ್ಳುತ್ತಾರೆ.
ಪಂಜಾಬಿನ ತರ್ನ್ ತರಣ್ ಜಿಲ್ಲೆಯ ಹವೇಲಿಂಯಾ ಎಂಬ ಹಳ್ಳಿಯಲ್ಲಿ ಪ್ರಬಲ ಜಾತಿಯ ಭೂಮಾಲೀಕರಾದ ಜಾಟ್ ಸಿಖ್ಖರ ಒಡೆತನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಅವರು ಕೆಲಸ ಮಾಡಿದ ಆರನೇ ಮನೆ ಇದಾಗಿದೆ.
"ಮಜಬೂರಿ ಹೈ" ಎಂದು ಅವರು ಹೇಳುತ್ತಾರೆ. ಅಸಹಾಯಕತೆಯು ಅವರನ್ನು ಜೀವನೋಪಾಯಕ್ಕಾಗಿ ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಲು ಪ್ರೇರೇಪಿಸುತ್ತದೆ. ಅವರು ಒಂದು ದಿನದಲ್ಲಿ ತನ್ನ ತಲೆಯ ಮೇಲೆ ಎಷ್ಟು ಸಗಣಿಯನ್ನು ಹೊರುತ್ತಾರೆಂದು ನಿಖರವಾಗಿ ತಿಳಿದಿಲ್ಲ, ಆದರೆ "ಬಡ್ಡಾ ಸರ್ ದುಖ್ದಾ ಹೈ, ಚುಕೆ ಚುಕಿ ಭಾರ್ [ತಲೆಯ ಮೇಲೆ ಅಷ್ಟೊಂದು ಭಾರವನ್ನು ಹೊರುವುದರಿಂದ ನನ್ನ ತಲೆ ತುಂಬಾ ನೋಯುತ್ತದೆ]" ಎಂದು ಹೇಳುತ್ತಾರೆ.
ಅವರು ಮನೆಗೆ ನಡೆದು ಹೋಗುವ ದಾರಿಯಲ್ಲಿ, ಬಂಗಾರ ಹಳದಿ ಬಣ್ಣದ ಗೋಧಿ ಹೊಲಗಳು ದಿಗಂತದವರೆಗೆ ವಿಸ್ತರಿಸಿವೆ. ಪಂಜಾಬಿನಲ್ಲಿ ಸುಗ್ಗಿಯ ಋತುವಿನ ಪ್ರಾರಂಭವನ್ನು ಸೂಚಿಸುವ ಏಪ್ರಿಲ್ ನಲ್ಲಿ ನಡೆಯುವ ಬೈಸಾಖಿ ಹಬ್ಬದ ನಂತರ ಅವುಗಳನ್ನು ಶೀಘ್ರದಲ್ಲೇ ಕಟಾವು ಮಾಡಲಾಗುತ್ತದೆ. ಹವೇಲಿಂಯಾದ ಜಾಟ್ ಸಿಖ್ಖರು ಗಂಡಿವಿಂಡ್ ಬ್ಲಾಕ್ನಲ್ಲಿ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿದ್ದಾರೆ, ಮುಖ್ಯವಾಗಿ ಅಕ್ಕಿ ಮತ್ತು ಗೋಧಿಯನ್ನು ಉತ್ಪಾದಿಸುತ್ತಾರೆ.















