ಸಾರ್ವಜನಿಕ ಸ್ವಾಮ್ಯದ ಹರಿಯಾಣ ರೋಡ್ ವೇಸ್ ಸಂಸ್ಥೆಯಲ್ಲಿ ಗುಮಾಸ್ತರಾಗಿದ್ದ ಭಗತ್ ರಾಮ್ ಯಾದವ್ ನಿವೃತ್ತರಾದಾ ನಂತರ, ಆರಾಮದ ನಿವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. "ಆದರೆ ನನ್ನೊಳಗೆ ಒಂದು ಜುನೂನ್ [ಉತ್ಸಾಹ] ಉಳಿದಿತ್ತು" ಎಂದು ಪ್ರಶಸ್ತಿ ವಿಜೇತ ಮಾದರಿ ಉದ್ಯೋಗಿಯಾಗಿದ್ದ 73 ವರ್ಷದ ಅವರು ಹೇಳುತ್ತಾರೆ.

ಈ ಉತ್ಸಾಹವು ಅವರನ್ನು ತನ್ನ ತಂದೆಯಾದ ಗುಗನ್‌ ರಾಮ್‌ ಅವರು ಬಾಲ್ಯದಲ್ಲಿ ಕಲಿಸಿದ್ದ ಕರಕುಶಲ ಕಲೆಯಲ್ಲಿ ಒಂದು ಕೈ ನೋಡಲು ಪ್ರೇರೇಪಿಸಿತು. ಇದರೊಂದಿಗೆ ಅವರು ಚಾರ್ಪಾಯ್‌ (ಹಗ್ಗದ ಮಂಚ) ಮತ್ತು ಪಿಡ್ಡಾ (ಹಗ್ಗದ ಸ್ಟೂಲ್)‌ ತಯಾರಿಸಲು ಆರಂಭಿಸಿದರು.

ಅರ್ಧ ಶತಮಾನದ ಹಿಂದೆ, ಕೇವಲ 15 ವರ್ಷದ ಯುವಕರಾಗಿದ್ದ ಭಗತ್ ತನ್ನ ಮೂವರು ಸಹೋದರರೊಂದಿಗೆ ಕುಳಿತು, ಅವರ ತಂದೆ ತಮ್ಮ ಮನೆಗೆ ಚಾರ್ಪಾಯಿಗಳನ್ನು ಕೌಶಲದಿಂದ ತಯಾರಿಸುವುದನ್ನು ನೋಡುವ ಮೂಲಕ ಅವರ ಕಲಿಕೆ ಪ್ರಾರಂಭವಾಯಿತು. ಅವರ ತಂದೆ 125 ಎಕರೆ ಭೂಮಿಯನ್ನು ಹೊಂದಿದ್ದರು ಮತ್ತು ಗೋಧಿ ಕೊಯ್ಲಿನ ನಂತರ ಬೇಸಿಗೆಯ ತಿಂಗಳುಗಳನ್ನು ಈ ಗಟ್ಟಿಮುಟ್ಟಾದ ಮಂಚಗಳನ್ನು ತಯಾರಿಸಲು ಮೀಸಲಿಟ್ಟಿದ್ದರು. ಅವರು ಕೈಯಿಂದ ತಯಾರಿಸಿದ ಸುನ್ ಸೆಣಬು (ಕ್ರೊಟಾಲೇರಿಯಾ ಜುನ್ಸಿಯಾ), ಸೂಟ್ (ಹತ್ತಿ ಹಗ್ಗ) ಮತ್ತು ಸಾಲ್ (ಶೋರಿಯಾ ರೊಬಸ್ಟಾ) ಮತ್ತು ಶೀಶಮ್ (ನಾರ್ತ್‌ ಇಂಡಿಯನ್ ರೋಸ್ ವುಡ್) ಮರಗಳನ್ನು ಈ ಕೆಲಸದಲ್ಲಿ ಬಳಸುತ್ತಿದ್ದರು. ಅವರ ಕೆಲಸದ ಸ್ಥಳವೆಂದರೆ ಅವರ ಬೈಠಕ್, ತೆರೆದ ಕೋಣೆ, ಅಲ್ಲಿ ಜನರು ಮತ್ತು ಜಾನುವಾರುಗಳು ದಿನದ ಹೆಚ್ಚಿನ ಭಾಗವನ್ನು ಕಳೆಯುತ್ತಿದ್ದರು.

ಭಗತ್ ರಾಮ್ ತನ್ನ ತಂದೆಯನ್ನು "ಏಕ್ ನಂಬರ್ ಕಾ ಆರಿ" ಎಂದು ನೆನಪಿಸಿಕೊಳ್ಳುತ್ತಾರೆ - ಒಬ್ಬ ಮಹಾನ್ ಕುಶಲಕರ್ಮಿ - ಅವರು ತಮ್ಮ ಉಪಕರಣಗಳ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. "ಚಾರ್ಪಾಯಿಗಳನ್ನು ತಯಾರಿಸುವ ಕೌಶಲವನ್ನು ಕಲಿಯುವ ವಿಷಯದಲ್ಲಿ ನನ್ನ ತಂದೆ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. "ಇದನ್ನು ಕಲಿಯಿರಿ; ಇದು ಮುಂದೆ ನಿಮಗೆ ಸಹಾಯಕ್ಕೆ ಬರುತ್ತದೆ" ಎಂದು ಅವರು ಹೇಳುತ್ತಿದ್ದ ದಿನಗಳನ್ನು ಭಗತ್ ರಾಮ್ ನೆನಪಿಸಿಕೊಳ್ಳುತ್ತಾರೆ.

ಆದರೆ ಚಿಕ್ಕ ಹುಡುಗರಾಗಿದ್ದ ಅವರು ಫುಟ್ಬಾಲ್, ಹಾಕಿ ಅಥವಾ ಕಬಡ್ಡಿ ಆಡಲು ಓಡಿಹೋಗುತ್ತಿದ್ದರು, ಮಂಚ ತಯಾರಿಸುವುದು ಬೇಸರದ ಕೆಲಸವೆನ್ನಿಸಿ ಅದರಿಂದ ತಪ್ಪಿಸಿಕೊಳ್ಳುತ್ತಿದ್ದರು. "ನಮ್ಮ ತಂದೆ ನಮ್ಮನ್ನು ಬೈಯುತ್ತಿದ್ದರು, ಹೊಡೆಯುತ್ತಿದ್ದರು, ಆದರೆ ನಾವು ತಲೆಕೆಡಿಸಿಕೊಳ್ಳಲಿಲ್ಲ" ಎಂದು ಅವರು ಹೇಳುತ್ತಾರೆ. "ನಾವು ಕೆಲಸ ಹುಡುಕಿಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದೆವು. ನಮ್ಮ ತಂದೆಯ ಭಯದಿಂದಷ್ಟೇ ನಾವು ಈ ಕೌಶಲವನ್ನು ಕಲಿತೆವು, ನಮಗೆ ಗೊಂದಲವಾದಾಗ ಅವರ ಬಳಿ ವಿನ್ಯಾಸವನ್ನು ರಚಿಸಲು ಹಗ್ಗವನ್ನು ಹೇಗೆ ಸರಿಸುವುದು ಎಂದು ಕೇಳಿ ತಿಳಿದುಕೊಳ್ಳುತ್ತಿದ್ದೆವು."

PHOTO • Naveen Macro
PHOTO • Naveen Macro

ಎಡಕ್ಕೆ: ಭಗತ್ ರಾಮ್ ಯಾದವ್ ತಾನು ತಯಾರಿಸಿದ ಚಾರ್ಪಾಯಿಯ ಮೇಲೆ ಕುಳಿತಿದ್ದಾರೆ. ಬಲ: ಅವರು ತಮ್ಮ ವರ್ಷಗಳ ಕಾಲದ ಸೇವೆಗಾಗಿ ಹರಿಯಾಣ ರಸ್ತೆ ಸಾರಿಗೆ ಇಲಾಖೆಯಿಂದ ಪಡೆದ ಉಂಗುರಗಳಲ್ಲಿ ಒಂದನ್ನು ಈಗಲೂ ಧರಿಸುತ್ತಾರೆ

ಭಗತ್ ರಾಮ್ ದುಡಿಮೆಗೆ ಇಳಿಯುವ ಸಮಯ ಬಂದಾಗ, ಆರಂಭದಲ್ಲಿ ರಾಜಸ್ಥಾನದಲ್ಲಿ ಖಾಸಗಿ ಬಸ್ ಸೇವೆಯೊಂದರಲ್ಲಿ ಕಂಡಕ್ಟರ್ ಸ್ಥಾನ ಪಡೆದರು, ನಂತರ 1982ರಲ್ಲಿ ಹರಿಯಾಣ ರೋಡ್‌ವೇಸ್‌ನಲ್ಲಿ ಕ್ಲರ್ಕ್ ಉದ್ಯೋಗ ದೊರಕಿತು. ಅವರು "ಎಂದಿಗೂ ತಪ್ಪು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಡಿ" ಎಂಬ ತತ್ವಕ್ಕೆ ಬದ್ಧರಾಗಿದ್ದರು. ಇದರ ಪರಿಣಾಮವಾಗಿ ಅವರು ಮೂರು ಪ್ರಶಸ್ತಿಗಳನ್ನು ಪಡೆದರು; ತನಗೆ ನೀಡಲಾದ ಉಂಗುರಗಳಲ್ಲಿ ಒಂದನ್ನು ಅವರು ಈಗಲೂ ಹೆಮ್ಮೆಯಿಂದ ಧರಿಸುತ್ತಾರೆ. ಡಿಸೆಂಬರ್ 2009ರಲ್ಲಿ, ಅವರು ತಮ್ಮ 58ನೇ ವಯಸ್ಸಿನಲ್ಲಿ ನಿವೃತ್ತರಾದರು. ತಮ್ಮ ಕುಟುಂಬದ ಜಮೀನಿನ 10-ಎಕರೆ ಭಾಗದಲ್ಲಿ ಹತ್ತಿ ಕೃಷಿಯಲ್ಲಿ ಸಣ್ಣ ಪ್ರಯತ್ನವನ್ನು ಮಾಡಿದರದಾರೂ, ಜೀವನದ ಆ ಹಂತದಲ್ಲಿ ಈ ಕೆಲಸವನ್ನು ಬಹಳ ಕಷ್ಟವಾಗುತ್ತಿತ್ತು. 2012ರಲ್ಲಿ, ಅವರು ತಮ್ಮ ಹದಿಹರೆಯದ ವರ್ಷಗಳಲ್ಲಿ ಕಲಿತ ಕರಕುಶಲ ಕಲೆಗೆ ಮರಳಿದರು.

ಇಂದು, ಅಹಿರ್ ಸಮುದಾಯಕ್ಕೆ ಸೇರಿದ ಭಗತ್ ರಾಮ್ (ರಾಜ್ಯದ ಇತರ ಹಿಂದುಳಿದ ವರ್ಗಗಳಡಿ ಪಟ್ಟಿ ಮಾಡಲಾಗಿದೆ) ಇಂದು ಹಳ್ಳಿಯ ಏಕೈಕ ಚಾರ್ಪಾಯ್‌ ತಯಾರಕ.

*****

ಹರಿಯಾಣದ ಹಿಸಾರ್ ಜಿಲ್ಲೆಯ ಧಾನ ಖುರ್ದ್ ಗ್ರಾಮದ ನಿವಾಸಿ, ಭಗತ್ ರಾಮ್ ಸ್ಥಿರವಾದ ದೈನಂದಿನ ದಿನಚರಿಯನ್ನು ಹೊಂದಿದ್ದಾರೆ. ಪ್ರತಿ ದಿನ ಬೆಳಿಗ್ಗೆ, ಅವರು ಸರಿಸುಮಾರು 6 ಗಂಟೆಗೆ ಎದ್ದು ಎರಡು ಚೀಲಗಳನ್ನು ತುಂಬಿಸುತ್ತಾರೆ: ಒಂದು ಬಾಜ್ರಾ (ಸಜ್ಜೆ) ಮತ್ತು ಇನ್ನೊಂದು ಚಪಾತಿಗಳಿಂದ ತುಂಬಿರುತ್ತದೆ. ನಂತರ ಅವರು ತನ್ನ ಹೊಲದತ್ತ ನಡೆಯುತ್ತಾರೆ ಅಲ್ಲಿ ಅವರು ಪಾರಿವಾಳಗಳಿಗೆ ಧಾನ್ಯ ಮತ್ತು ಇರುವೆ, ನಾಯಿ ಮತ್ತು ಬೆಕ್ಕುಗಳಿಗೆ ಚಪಾತಿಗಳನ್ನು ಹಾಕುತ್ತಾರೆ.

"ಅದರ ನಂತರ, ನನ್ನ ಹುಕ್ಕಾ ಸಿದ್ಧಪಡಿಸಿ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಕುಳಿತುಕೊಳ್ಳುತ್ತೇನೆ." ಎಂದು ಭಗತ್ ಹೇಳುತ್ತಾರೆ. ತುರ್ತು ಬೇಡಿಕೆಯಿಲ್ಲದಿದ್ದರೆ ಅವರು ಮಧ್ಯಾಹ್ನದವರೆಗೆ ಕೆಲಸ ಮಾಡುತ್ತಾರೆ. "ನಂತರ ನಾನು ಸಂಜೆ 5 ಗಂಟೆಯವರೆಗೆ ಮತ್ತೆ ಒಂದು ಗಂಟೆ ಕೆಲಸ ಮಾಡುತ್ತೇನೆ." ತನ್ನ ಕೋಣೆಯಲ್ಲಿನ ತಾನೇ ತಯಾರಿಸಿದ ಹಗ್ಗದ ಮಂಚದ ಮೇಲೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಒಳಗೆ ಕಿಟಕಿಗಳಿಂದ ಬೆಳಕು ಹರಿಯುತ್ತಿತ್ತು ಮತ್ತು ಅವರು ತಮ್ಮ ಪಕ್ಕದಲ್ಲಿದ್ದ ಹುಕ್ಕಾದಿಂದ ಆಗಾಗ ಒಂದೊಂದು ಧಮ್‌ ಎಳೆದುಕೊಳ್ಳುತ್ತಿದ್ದರು.

ಜುಲೈ ತಿಂಗಳ ತಂಪಾದ ವಾತಾವರಣದಲ್ಲಿ ಪರಿ ಅವರ ಭೇಟಿಗೆಂದು ಹೋದ ಸಮಯದಲ್ಲಿ ಭಗತ್ ರಾಮ್ ತನ್ನ ತೊಡೆಯ ಮೇಲೆ ಪಿಡ್ಡಾ ಒಂದನ್ನು ಇಟ್ಟುಕೊಂಡು ಅದನ್ನು ಸೂಕ್ಷ್ಮ ಕೆಲಸವನ್ನು ಮಾಡುತ್ತಿದ್ದರು. "ನಾನು ಇದನ್ನು ಒಂದು ದಿನದಲ್ಲಿ ಮುಗಿಸಬಲ್ಲೆ" ಎಂದು ಅವರು ಶಾಂತ ಆತ್ಮವಿಶ್ವಾಸದಿಂದ ಹೇಳಿದರು. ಅವರ ಕೈಗಳು ಅನುಭವದ ನಿಖರತೆಯೊಂದಿಗೆ ಚಲಿಸುತ್ತವೆ, ದಾರಗಳನ್ನು ವಾರ್ಪ್ (ಉದ್ದ) ಮತ್ತು ವೆಫ್ಟ್ (ಅಡ್ಡ) ಬದಿಗಳಿಗೆ ಎಚ್ಚರಿಕೆಯಿಂದ ಜೋಡಿಸುತ್ತಿದ್ದವು, ಇದನ್ನು ಶೀಶಮ್ ಮರದ ಚೌಕಟ್ಟಿನ ಮೇಲೆ ಹೆಣೆಯಲಾಗುತ್ತಿತ್ತು.

ವಯಸ್ಸಾಗುತ್ತಿದ್ದಂತೆ ತನ್ನ ಕೆಲಸದ ವೇಗವೂ ನಿಧಾನಗೊಳ್ಳುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ಅವರು ಹೇಳುತ್ತಾರೆ. “ಈ ಕೆಲಸವನ್ನು ಮತ್ತೆ ಆರಂಭಿಸಿದ ಸಮಯದಲ್ಲಿ ನನ್ನ ಕೈಗಳು ಮತ್ತು ದೇಹ ಚಾರ್ಪಾಯ್‌ ತಯಾರಿಕೆ ಕೆಲಸಕ್ಕೆ ವೇಗವಾಗಿ ಸ್ಪಂದಿಸುತ್ತಿದ್ದವು. ಈಗ ಒಮ್ಮೆಗೆ ಎರಡರಿಂದ ಮೂರು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.”

ಒಂದು ಬದಿಯ ಹೆಣಿಗೆ ಮುಗಿದ ನಂತರ, ಪ್ರಕ್ರಿಯೆಯನ್ನು ಪುನರಾವರ್ತಿಸಲು ಅವರು ಸ್ಟೂಲನ್ನು ತಿರುಗಿಸಿ ಇಟ್ಟುಕೊಳ್ಳುತ್ತಾರೆ. ಮಾದರಿ ಎರಡೂ ಬದಿಗಳಲ್ಲಿ ಒಂದೇ ರೀತಿ ಇರುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. “ಪಿಡ್ಡಾ ಮಾಡುವಾಗ ಭರಾಯಿ [ತುಂಬಿಸುವಿಕೆ] ಎರಡೂ ಬದಿಗಳಲ್ಲಿ ಮಾಡಲಾಗುತ್ತದೆ. ಇದರಿಂದ ಪಿಡ್ಡಾ ಗಟ್ಟಿಯಾಗುತ್ತದೆ. ಬಾಳಿಕೆ ಹೆಚ್ಚುತ್ತದೆ. ಆದರೆ ಹೆಚ್ಚಿನ ಕುಶಲಕರ್ಮಿಗಳು ಅದನ್ನು ಮಾಡುವುದಿಲ್ಲ" ಎಂದು ಅವರು ವಿವರಿಸುತ್ತಾರೆ.

PHOTO • Naveen Macro
PHOTO • Naveen Macro

ಎಡ: ಪ್ರತಿ ಪಿಡ್ಡಾವನ್ನು ಕನಿಷ್ಠ ಎರಡು ಗಾಢ ಬಣ್ಣದ ಹಗ್ಗಗಳ ಸಂಯೋಜನೆಯಿಂದ ರಚಿಸಲಾಗುತ್ತದೆ. 'ಮಾರುಕಟ್ಟೆಯಲ್ಲಿ ಇಂತಹ ವರ್ಣರಂಜಿತ ಪಿಡ್ಡಾಗಳನ್ನು ನೀವು ಕಾಣಲಾರಿರಿ' ಎಂದು ಭಗತ್ ರಾಮ್ ಪರಿಗೆ ತಿಳಿಸಿದರು. ಬಲ: ಪಿಡ್ಡಾಗೆ, ಉತ್ತಮ ತಾಳಿಕೆಗಾಗಿ ಎರಡೂ ಬದಿಗಳಲ್ಲಿ ಭರ್ತಿ ಮಾಡುವ ಕೆಲವೇ ಕುಶಲಕರ್ಮಿಗಳಲ್ಲಿ ಭಗತ್ ರಾಮ್ ಒಬ್ಬರು

PHOTO • Naveen Macro
PHOTO • Naveen Macro

ಎಡಕ್ಕೆ: ಭಗತ್ ರಾಮ್ ಪಿಡ್ಡಾ ತಯಾರಿಸುತ್ತಾ, ದಾರಗಳನ್ನು ವಾರ್ಪ್ ಉದ್ದಕ್ಕೂ ಜೋಡಿಸುತ್ತಾರೆ ಮತ್ತು ಶೀಶಮ್ ಮರದ ಚೌಕಟ್ಟಿನ ಮೇಲೆ ಸುತ್ತಿದ ವೆಫ್ಟ್ ಅನ್ನು ಜೋಡಿಸುತ್ತಾರೆ. ಬಲ: ಒಂದು ಬದಿಯನ್ನು ಪೂರ್ಣಗೊಳಿಸಿದ ನಂತರ, ಹಿಂಭಾಗದಲ್ಲಿ ಪ್ರಕ್ರಿಯೆಯನ್ನು ಪುನರಾವರ್ತಿಸಲು ಅವರ ಅದನ್ನು ತಿರುಗಿಸುತ್ತಾರೆ

ಪ್ರತಿ ಬಾರಿ ಅವರು ಒಂದು ಬದಿಯಲ್ಲಿ ವೆಫ್ಟ್ ಪೂರ್ಣಗೊಳಿಸಿದ ನಂತರ ಭಗತ್ ದಾರವನ್ನು ಸರಿಹೊಂದಿಸಲು ಖುತಿ ಅಥವಾ ತೋಕ್ನಾ ಎನ್ನುವ ಉಪಕರಣವನ್ನು ಬಳಸುತ್ತಾರೆ - ಕೈ ಆಕಾರದ ಸಾಧನ. ತೋಕ್ನಾದ ಲಯಬದ್ಧ ಠಕ್ ಠಕ್ ಸದ್ದು, ಅದಕ್ಕೆ ಕಟ್ಟಲಾದ ಘುಂಗ್ರೂ (ಸಣ್ಣ ಲೋಹದ ಗಂಟೆಗಳು) ವಿನ ಕಣ್‌ ಕಣ್‌ ಕಣ್‌ ಕಣ್ ಸದ್ದಿನೊಂದಿಗೆ ಸಂಯೋಜಿಸಲ್ಪಟ್ಟು, ಅಲ್ಲೊಂದು ಸಂಗೀತ ಲೋಕವೂ ಸೃಷ್ಟಿಯಾಗುತ್ತದೆ.

ಅವರ ಬಳಿಯಿರುವ ತೋಕ್ನಾವನ್ನು ಅವರ ಊರಿನ ಕುಶಲಕರ್ಮಿಯೊಬ್ಬರು ಎರಡು ದಶಕಗಳ ಹಿಂದೆ ತಯಾರಿಸಿ ಕೊಟ್ಟಿದ್ದು. ಕೆತ್ತಿಸ ಹೂವುಗಳು ಮತ್ತು ಘುಂಗ್ರೂಗಳನ್ನು ನಂತರ ಅವರು ಅದಕ್ಕೆ ಅಲಂಕಾರವಾಗಿ ಸೇರಿಸಿಕೊಂಡಿದ್ದರು. ಅವರು ಶಾಲೆಗೆ ಹೋಗುವ ತಮ್ಮ ಇಬ್ಬರು ಮೊಮ್ಮಕ್ಕಳನ್ನು ಕರೆದು ನಮಗೆ ತೋರಿಸಲು ಇನ್ನಷ್ಟು ಸ್ಟೂಲ್‌ ತರುವಂತೆ ಹೇಳಿದರು. ನಂತರ ಅವರು ನಮ್ಮತ್ತ ಬಾಗಿ ರಹಸ್ಯವೊಂದನ್ನು ಬಯಲು ಮಾಡಿದರು: ಅವರು ತಾನು ತಯಾರಿಸುವ ಪ್ರತಿ ಪಿಡ್ಡಾದಲ್ಲೂ ಸುಮಾರು ಐದು ಘುಂಗ್ರೂಗಳನ್ನು ಜೋಡಿಸುತ್ತಾರೆ. ಇವು ಸಾಮಾನ್ಯವಾಗಿ ಬೆಳ್ಳಿ ಅಥವಾ ಹಿತ್ತಾಳೆಯಿಂದ ಮಾಡಲ್ಪಟ್ಟಿರುತ್ತವೆ. “ನನಗೆ ಬಾಲ್ಯದಿಂದಲೂ ಘುಂಗ್ರೂ ಸದ್ದೆಂದರೆ ಇಷ್ಟ” ಎಂದು ಭಗತ್ ರಾಮ್ ಹೇಳುತ್ತಾರೆ.

ಪ್ರತಿಯೊಂದೂ ಸ್ಟೂಲನ್ನೂ ಕನಿಷ್ಠ ಎರಡು ಬಣ್ಣಗಳ ಹಗ್ಗವನ್ನು ಬಳಸಿ ತಯಾರಿಸಲಾಗುತ್ತದೆ. “ಮಾರುಕಟ್ಟೆಯಲ್ಲಿ ನಿಮಗೆ ಇಂತಹ ವರ್ಣರಂಜಿತ ಪಿಡ್ಡಾಗಳು ಕಾಣಲು ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ.

ಅವರು ಗುಜರಾತಿನ ಭಾವನಗರ ಜಿಲ್ಲೆಯ ಮಹುವಾ ಪಟ್ಟಣದ ಪೂರೈಕೆದಾರರಿಂದ ಹಗ್ಗಗಳನ್ನು ತರಿಸುತ್ತಾರೆ. ಒಂದು ಕಿಲೋ ಹಗ್ಗದ ಬೆಲೆ ಸಾಗಣೆ ವೆಚ್ಚ ಸೇರಿದಂತೆ 330 ರೂಪಾಯಿಯಷ್ಟಾಗುತ್ತದೆ. ಅವರು ಹೆಚ್ಚಾಗಿ ವಿವಿಧ ಬಣ್ಣಗಳಲ್ಲಿ ಸುಮಾರು ಐದರಿಂದ ಏಳು ಕ್ವಿಂಟಾಲ್ ಹಗ್ಗಗಳನ್ನು ತರಿಸುತ್ತಾರೆ.

ಹಗ್ಗದ ಕೆಲವು ಕಟ್ಟುಗಳು ಅವರ ಹಿಂದಿನ ಮೇಜಿನ ಮೇಲೆ ಬಿದ್ದಿದ್ದವು. ಅವರು ಎದ್ದು ತನ್ನ ನಿಜವಾದ ಸಂಗ್ರಹವನ್ನು ತೋರಿಸಿದರು - ವರ್ಣರಂಜಿತ ಹಗ್ಗಗಳಿಂದ ತುಂಬಿದ ಕಪಾಟು.

ತಾನು ತಯಾರಿಸಿದ ಪಿಡ್ಡಾ ಒಂದನ್ನು ನಮಗೆ ನೀಡುತ್ತಾ, ಹಗ್ಗ ಎಷ್ಟು ಮುಲಾಯಮ್‌ (ನಯ) ಆಗಿದೆ ನೋಡಿ ಎಂದು ಹೇಳಿದರು. ಅದನ್ನು ಯಾವ ವಸ್ತು ಬಳಸಿ ತಯಾರಿಸಲಾಗಿದೆಯೆನ್ನುವುದು ಅವರಿಗೆ ತಿಳಿದಿಲ್ಲವಾದರೂ, ಅದು ಗಟ್ಟಿಯಾಗಿದೆ ಎನ್ನುವುದರ ಕುರಿತು ಅವರಿಗೆ ಖಾತರಿಯಿತ್ತು. ಮತ್ತು ಆ ಕುರಿತು ಅವರ ಬಳಿ ಸಾಕ್ಷಿಯೂ ಇತ್ತು. ಒಮ್ಮೆ ಒಬ್ಬ ಗ್ರಾಹಕ ತನ್ನ ವಸ್ತುಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಅವರು ಅವನ ಬಳಿ ಆ ಹಗ್ಗವನ್ನು ಬರಿಗೈಯಲ್ಲಿ ಹರಿದು ತೋರಿಸುವಂತೆ ಕೇಳಿದರು. ಆ ಗ್ರಾಹಕ ಮಾತ್ರವಲ್ಲ, ಮುಂದೊಂದು ದಿನ ಸೋನು ಪೆಹಲ್ವಾನ್‌ ಎನ್ನುವ ಪೊಲೀಸ್‌ ಅಧಿಕಾರಿ ಕೂಡ ಇದರಲ್ಲಿ ವಿಫಲರಾಗಿದ್ದರು.

PHOTO • Naveen Macro
PHOTO • Naveen Macro

ಖುಟಿ (ಎಡ) ಮತ್ತು ಟೋಕ್ನಾ (ಬಲ) ಭಗತ್ ರಾಮ್ ಬಳಸುವ ಎರಡು ಸಾಧನಗಳು. ಟೋಕ್ನಾ ಮೇಲಿನ ಗಂಟೆಗಳನ್ನು ಭಗತ್ ರಾಮ್ ಕಟ್ಟಿರುವುದು

PHOTO • Naveen Macro
PHOTO • Naveen Macro

ಎಡ ಮತ್ತು ಬಲ: ಭಗತ್ ರಾಮ್ ಯಾದವ್ ತನ್ನ ಬಳಿಯಿರುವ ವರ್ಣರಂಜಿತ ಹಗ್ಗಗಳನ್ನು ತೋರಿಸುತ್ತಿದ್ದಾರೆ

ಚಾರ್ಪಾಯ್ ತಯಾರಿಕೆಯಲ್ಲಿ, ಹಗ್ಗದ ಬಾಳಿಕೆ ಎಲ್ಲಕ್ಕಿಂತ ಹೆಚ್ಚು ಅಗತ್ಯ. ಇದು ಮಂಚದ ಅಡಿಪಾಯವನ್ನು ರೂಪಿಸುತ್ತದೆ, ಅಗತ್ಯ ಬೆಂಬಲವನ್ನು ಒದಗಿಸುತ್ತದೆ ಮತ್ತು ಅದರ ದೀರ್ಘಾಯುಷ್ಯವನ್ನು ಖಚಿತಪಡಿಸುತ್ತದೆ. ಅದರ ಮಜಬೂತುತನದಲ್ಲಿ ಮಾಡಿಕೊಳ್ಳುವ ಯಾವುದೇ ರಾಜಿಯು ಕುಳಿತುಕೊಳ್ಳಲು ಕಿರಿಕಿರಿಯೆನ್ನಿಸುವುದು ಅಥವಾ ಮಂಚದ ಒಡೆಯುವಿಕೆಗೆ ಕಾರಣವಾಗಬಹುದು.

ಭಗತ್ ರಾಮ್‌ ಪಾಲಿಗೆ ಇರುವ ಸವಾಲು ಕೇವಲ ಹಗ್ಗದ ಬಾಳಿಕೆಯನ್ನು ನಿರ್ಣಯಿಸುವುದೊಂದೇ ಅಲ್ಲ; ಇದು ಈ ಕರಕುಶಲತೆಯಲ್ಲಿ ಅವರ ಅಸಾಧಾರಣ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಪಂತವನ್ನು ಗೆದ್ದ ನಂತರ ಪೊಲೀಸ್‌ ಅಧಿಕಾರಿ ನಿಮಗೆ ಗೆದ್ದಿದ್ದಕ್ಕೆ ಏನು ಬೇಕೆಂದು ಕೇಳಿದಾಗ, ಭಗತ್‌ "ನೀವು ಇದರ ಗುಣಮಟ್ಟ ಒಪ್ಪಿಕೊಂಡು ಪಂದ್ಯದಲ್ಲಿ ಸೋತಿದ್ದೇ ಸಾಕು ಎಂದು ಹೇಳಿದರು. ಆದರೆ ಆ ಅಧಿಕಾರಿ ಭಗತಗ್‌ ಅವರಿಗೆ ಪ್ರೀತಿಯಿಂದ ದೊಡ್ಡ ಗಾತ್ರದ ಎರಡು ಗೊಹಾನಾ ಜಲೇಬಿಗಳನ್ನು ತಂದುಕೊಟ್ಟರು. ಅವು ಇಷ್ಟಿಷ್ಟು ದೊಡ್ಡಕ್ಕಿದ್ದವು ಎಂದು ಭಗತ್ ತಮ್ಮ ಎರಡೂ ಕೈಯನ್ನು ಚಾಚಿ ತೋರಿಸುತ್ತಾ ಸಂಭ್ರಮದಿಂದ ನೆನಪನ್ನು ಹಂಚಿಕೊಂಡರು.‌

ಆ ದಿನ ಪಾಠ ಕಲಿತವರು ಪೊಲೀಸ್ ಅಧಿಕಾರಿ ಮಾತ್ರವಲ್ಲ - ಭಗತ್ ರಾಮ್ ಕೂಡ ಕಲಿತರು. ಕರಕುಶಲ ಮೇಳಕ್ಕೆ ಭೇಟಿ ನೀಡಿದ ಹಿರಿಯ ಮಹಿಳೆಯರು ಎತ್ತರವಿಲ್ಲದ ಪಿಡ್ಡಾಗಳ ಮೇಲೆ ಕುಳಿತುಕೊಳ್ಳುವುದು ಅಹಿತಕರ ಮತ್ತು ಅದರಿಂದ ಮೊಣಕಾಲುಗಳು ನೋವು ಬರುತ್ತದೆಎಂದು ದೂರಿದರು. "ಅವರು ಸುಮಾರು 1.5 ಅಡಿ ಎತ್ತರದ ಪಿಡ್ಡಾಗಳನ್ನು ತಯಾರಿಸಲು ಹೇಳಿದರು" ಎಂದು ಭಗತ್ ರಾಮ್ ಹೇಳುತ್ತಾರೆ, ಅವರು ಈಗ ಸ್ಟೀಲ್ ಫ್ರೇಮ್ ಬಳಸಿ ತಯಾರಿಸುತ್ತಿರುವ ಎತ್ತರದ ಪಿಡ್ಡಾಗಳನ್ನು ತೋರಿಸಿದರು.

ಮಳೆ ಬೀಳಲು ಪ್ರಾರಂಭವಾಯಿತು, ಮತ್ತು ಅವನ ಹೆಂಡತಿ ಕೃಷ್ಣ ದೇವಿ ಬೇಗನೆ ಅಂಗಳದಲ್ಲಿದ್ದ ಪಿಡ್ಡಾಗಳನ್ನು ತಂದರು. 70 ವರ್ಷದ ಅವರು ಈ ಹಿಂದೆ ಧುರ್ರಿಗಳನ್ನು (ರಗ್ಗುಗಳು) ನೇಯುತ್ತಿದ್ದರು, ಆದರೆ ಸುಮಾರು ಐದು ವರ್ಷಗಳ ಹಿಂದೆ ನಿಲ್ಲಿಸಿದರು. ಅವರು ಮನೆಯಲ್ಲಿನ ಕೆಲಸ ಮತ್ತು ಜಾನುವಾರುಗಳನ್ನು ನೋಡಿಕೊಂಡು ದಿನ ಕಳೆಯುತ್ತಾರೆ.

ಭಗತ್ ರಾಮ್ ಅವರ ಮಕ್ಕಳಾದ ಜಸ್ವಂತ್ ಕುಮಾರ್ ಮತ್ತು ಸುನೇಹರಾ ಸಿಂಗ್ ಅವರು ಭಗತ್ ರಾಮ್ ಅವರ ಹೆಜ್ಜೆಗಳನ್ನು ಅನುಸರಿಸಿಲ್ಲ.  ಸುನೇಹರಾ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರೆ, ಜಸ್ವಂತ್ ಅವರು ಗೋಧಿ ಮತ್ತು ತರಕಾರಿಗಳನ್ನು ಬೆಳೆಯುವ ಕುಟುಂಬದ ಭೂಮಿಯನ್ನು ನಿರ್ವಹಿಸುತ್ತಾರೆ. "ಈ ಕಲೆಯೊಂದನ್ನೇ ನಂಬಿ ಬದುಕಲು ಸಾಧ್ಯವಿಲ್ಲ; ನಾನು ತಿಂಗಳಿಗೆ 25,000 ರೂ.ಗಳ ಪಿಂಚಣಿಯನ್ನು ಪಡೆಯುತ್ತಿರುವುದರಿಂದ, ನನಗೆ ಸಾಧ್ಯವಾಗುತ್ತಿದೆ" ಎಂದು ಅವರು ಹೇಳುತ್ತಾರೆ.

PHOTO • Naveen Macro
PHOTO • Naveen Macro

ಎಡ ಮತ್ತು ಬಲ: ಭಗತ್ ರಾಮ್ ನಿರ್ಮಿಸಿದ ಪಿಡ್ಡಾಗಳು

PHOTO • Naveen Macro
PHOTO • Naveen Macro

ಎಡ: ಭಗತ್ ರಾಮ್ ಯಾದವ್ ಅವರ ಪತ್ನಿ ಕೃಷ್ಣ ದೇವಿ, ಕಿರಿಯ ಮಗ ಸುನೇಹರಾ ಸಿಂಗ್ ಮತ್ತು ಮೊಮ್ಮಕ್ಕಳಾದ ಮನೀತ್ ಮತ್ತು ಇಶಾನ್. ಬಲ: ಸುನೇಹರಾ ಪಿಡ್ಡಾ ಒಂದಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ

*****

ಭಗತ್ ರಾಮ್ ಪಿಡ್ಡಾಗಳನ್ನು 2,500 ರಿಂದ 3,000 ರೂಪಾಯಿಗಳವರೆಗೆ ಮಾರುತ್ತಾರೆ. ಸಣ್ಣ ಸಣ್ಣ ವಿವರಗಳಿಗೂ ಹೆಚ್ಚು ಗಮನ ಹರಿಸುವುದರಿಂದಾಗಿ ಬೆಲೆ ಹೆಚ್ಚಾಗಿದೆ ಎಂದು ಅವರು ಹೇಳುತ್ತಾರೆ. "ಎಂಟು ಕಿಲೋಮೀಟರ್ ದೂರದಲ್ಲಿರುವ ಹನ್ಸಿಯಿಂದ ನಾವು ಖರೀದಿಸುವ ಪಾಯಿ [ಪಾದ] ಸೇರಿದಂತೆ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತದೆ. ನಾವು ಅದನ್ನು ಪೇಡಿ, ಮೋಟಾ ಪೇಡ್ ಅಥವಾ ದತ್ ಎಂದು ಕರೆಯುತ್ತೇವೆ. ನಂತರ ನಾವು ಅದನ್ನು ಕೆತ್ತಿ ಗ್ರಾಹಕರಿಗೆ ತೋರಿಸುತ್ತೇವೆ. ಅವರು ಒಪ್ಪಿಗೆ ನೀಡಿದ ನಂತರ, ಅದಕ್ಕೆ ಪಾಲಿಶ್ ಹಚ್ಚುತ್ತೇನೆ" ಎಂದು ಅವರು ಹೇಳುತ್ತಾರೆ.

ಚಾರ್ಪಾಯ್‌ ತಯಾರಿಸುವಾಗಲೂ ಇದೇ ರೀತಿಯ ನಿಖರತೆಯನ್ನು ಅನುಸರಿಸಲಾಗುತ್ತದೆ. ಒಂದು ಬಣ್ಣದ ಮಂಚ ಪೂರ್ಣಗೊಳ್ಳಲು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಂಡರೆ, ಡಿಸೈನರ್ ಚಾರ್ಪಾಯ್ ಪೂರ್ಣಗೊಳ್ಳಲು 15 ದಿನಗಳವರೆಗೆ ಹಿಡಿಯಬಹುದು.

ಚಾರ್ಪಾಯ್ ತಯಾರಿಸಲು, ಮರದ ಚೌಕಟ್ಟಿನೊಳಗೆ ಒಂದು ಅಡಿ ಜಾಗವನ್ನು ಬಿಟ್ಟು, ಭಗತ್ ರಾಮ್ ಎರಡೂ ಬದಿಗಳಲ್ಲಿ ಹಗ್ಗಗಳನ್ನು ಸಮತಲವಾಗಿ ಭದ್ರಪಡಿಸುವ ಮೂಲಕ ಪ್ರಾರಂಭಿಸುತ್ತಾರೆ, ಪ್ರತಿ ಬದಿಯಲ್ಲೂ ಎರಡರಿಂದ ಮೂರು ಗಂಟುಗಳಿಂದ ಅವುಗಳನ್ನು ಬಲಪಡಿಸುತ್ತಾರೆ. ನಂತರ ಹಗ್ಗಗಳನ್ನು ಉದ್ದವಾಗಿ ಕಟ್ಟಲು ಮುಂದುವರಿಯುತ್ತಾರೆ, ಮೊದಲಿಗೆ ವಾರ್ಪ್ ರಚಿಸುತ್ತಾಋ. ಅದೇ ಸಮಯದಲ್ಲಿ, ಕುಂಡ ಎಂಬ ಸಾಧನವನ್ನು ಬಳಸಿಕೊಂಡು, ಚಾರ್ಪಾಯಿಯನ್ನು ಮತ್ತಷ್ಟು ಬಲಪಡಿಸಲು ಗುಂಡಿ ಎಂಬ ತಂತ್ರವನ್ನು ಬಳಸಿಕೊಂಡು ನಿರ್ದಿಷ್ಟ ಹಗ್ಗ ಕಟ್ಟುವ ಕೆಲಸವನ್ನು ಮಾಡುತ್ತಾರೆ.

"ಚಾರ್ಪಾಯಿ ತಯಾರಿಸುವಾಗ ಗುಂಡಿ ಅವಶ್ಯಕ. ಅದು ಹಗ್ಗಗಳು ಸಡಿಲವಾಗದಂತೆ ತಡೆಯುತ್ತದೆ" ಎಂದು ಭಗತ್ ರಾಮ್ ವಿವರಿಸುತ್ತಾರೆ.

ವಾರ್ಪ್ ಹಗ್ಗಗಳನ್ನು ಹೊಂದಿಸಿದ ನಂತರ, ಅವರು ವಿನ್ಯಾಸಗಳನ್ನು ರಚಿಸಲು ಬಣ್ಣದ ಹಗ್ಗಗಳನ್ನು ವಿಲೋಮವಾಗಿ ತುಂಬಲು ಪ್ರಾರಂಭಿಸುತ್ತಾರೆ. ಈ ಹಗ್ಗಗಳನ್ನು ಸಹ ಗುಂಡಿಯನ್ನು ಬಳಸಿಕೊಂಡು ಬದಿಗಳಲ್ಲಿ ಭದ್ರಪಡಿಸಲಾಗುತ್ತದೆ. ಒಂದು ಹಗ್ಗದ ಮಂಚವನ್ನು ತಯಾರಿಸಲು ಸುಮಾರು 10ರಿಂದ 15 ಕಿಲೋಗ್ರಾಂ ಹಗ್ಗಗಳನ್ನು ಬಳಸಲಾಗುತ್ತದೆ.

ಬೇರೆ ಬೇರೆ ಬಣ್ಣದ ಹಗ್ಗವನ್ನು ಅಳವಡಿಸಿಕೊಂಡಾಗ, ಅವರು ಎರಡರ ತುದಿಗಳನ್ನು ಜೋಡಿಸಿ ಅವುಗಳನ್ನು ಸೂಜಿ ಮತ್ತು ದಾರ ಬಳಸಿ ಒಟ್ಟಿಗೆ ಭದ್ರಪಡಿಸುತ್ತಾರೆ. ಒಂದು ಹಗ್ಗದ ಮುಕ್ತಾಯದಲ್ಲಿ, ಅದೇ ಬಣ್ಣದ ದಾರವನ್ನು ಬಳಸಿಕೊಂಡು ನಂತರದ ಅದನ್ನು ಜೋಡಿಸುತ್ತಾರೆ. “ಕೇವಲ ಗಂಟು ಕಟ್ಟಿದರೆ, ಅದು ಚನ್ನದಂತೆ ಇರಿಯುತ್ತದೆ” ಎಂದು ಅವರು ಹೇಳುತ್ತಾರೆ.

PHOTO • Naveen Macro
PHOTO • Naveen Macro

ಎಡ : ಭಗತ್ ರಾಮ್ ಚಾರ್ಪಾಯಿಗಳನ್ನು ತಯಾರಿಸುವಾಗ ಹಗ್ಗಗ ಳ ವಿಷಯದಲ್ಲಿ ಒಂದು ನಿರ್ದಿಷ್ಟ ತಂತ್ರವನ್ನು ಬಳಸುತ್ತಾ ರೆ . ಬಲ : ಪ್ರತಿ ಬಾರಿ ಅವ ರು ಎರಡು ಹಗ್ಗಗಳ ತುದಿಗಳನ್ನು ಜೋಡಿ ಸಿದಾಗ , ಅವುಗಳನ್ನು ಸೂಜಿ ಮತ್ತು ದಾರ ಬಳಸಿ ಹೊಲಿ ಯು ತ್ತಾ ರೆ

PHOTO • Naveen Macro
PHOTO • Naveen Macro

ಎಡ : ಗುಂಡಿ , ಚಾರ್ಪಾಯಿಯನ್ನು ಮತ್ತಷ್ಟು ಬಲಪಡಿಸಲು ಕುಂಡವನ್ನು ಬಳಸಿಕೊಂಡು ನಿರ್ದಿಷ್ಟ ಹಗ್ಗ ಕಟ್ಟುವ ತಂತ್ರವನ್ನು ಬಳ ಲಾಗುತ್ತದೆ . ಬಲ : ಭಗತ್ ರಾಮ್ ಅವರ ಉಪಕರಣಗಳು

ಚಾರ್ಪಾಯಿಗಳನ್ನು ತಯಾರಿಕೆಯಲ್ಲಿನ ಅವರ ಸೃಜನಶೀಲ ಸ್ಫೂರ್ತಿಯ ಬಹುಪಾಲು ಪ್ರಾಚೀನ ಮನೆಗಳ ಮೇಲೆ ಕಂಡುಬರುವ ಸಂಕೀರ್ಣ ಕೆತ್ತನೆಗಳು ಮತ್ತು ಹಳ್ಳಿಯೊಳಗಿನ ಗೋಡೆಯ ವರ್ಣಚಿತ್ರಗಳಿಂದ ಮತ್ತು ಹರಿಯಾಣದ ವಿವಿಧ ಪ್ರದೇಶಗಳಲ್ಲಿನ ಸಂಬಂಧಿಕರನ್ನು ಭೇಟಿಯಾಗಲು ಹೋದಾಗ ಕಂಡ ಚಿತ್ರಗಳಿಂದ ಬಂದಿದೆ. "ನಾನು ನನ್ನ ಫೋನಿನಲ್ಲಿ ಚಿತ್ರಗಳನ್ನು ಸೆರೆಹಿಡಿದಿಟ್ಟುಕೊಂಡು, ನಂತರ ಅವುಗಳನ್ನು ನನ್ನ ಚಾರ್ಪಾಯ್‌ ತಯಾರಿಕೆಯಲ್ಲಿ ಮರುಸೃಷ್ಟಿಸುತ್ತೇನೆ" ಎಂದು ಭಗತ್ ರಾಮ್ ಹೇಳುತ್ತಾರೆ, ಅವರು ತಮ್ಮ ಫೋನಿನಲ್ಲಿದ್ದ ಚಾರ್ಪಾಯಿಯ ಚಿತ್ರವೊಂದನ್ನು ತೋರಿಸಿದರು. ಅದು ಸ್ವಸ್ತಿಕ ಮತ್ತು ಚೌಪರ್ ಆಟದಿಂದ ಸ್ಫೂರ್ತಿ ಪಡೆದ ವಿನ್ಯಾಸವನ್ನು ಹೊಂದಿತ್ತು. ಒಮ್ಮೆ ಹಗ್ಗದ ಮಂಚ ಅಥವಾ ಸ್ಟೂಲ್ ನಿರ್ಮಿಸಿದ ನಂತರ, ಅದರ ಬಾಯ್ (ಮಂಚದ ಉದ್ದಕ್ಕೆ ಬಳಸುವ ಮರದ ತುಂಡು) ಮತ್ತು ಶೇರು (ಅಗಲಕ್ಕೆ ಬಳಸುವ ತುಂಡುಗಳು) ಭಾಗಗಳನ್ನು ಸಾಲ್ ಮರದ ಮರದಿಂದ ವಿನ್ಯಾಸಗೊಳಿಸಲಾಗುತ್ತದೆ, ಆದರೆ ಪಾಯ್ (ಕಾಲುಗಳು) ಭಾಗವನ್ನು ಶೀಶಮ್ ಮರ ಬಳಸಿ ರಚಿಸಲಾಗುತ್ತದೆ, ಎಲ್ಲವನ್ನೂ ಸಣ್ಣ ಹಿತ್ತಾಳೆ ತುಂಡು ಬಳಸಿ ಅಲಂಕರಿಸಲಾಗುತ್ತದೆ.

ಭಗತ್ ರಾಮ್ ತಯಾರಿಸುವ ಹಗ್ಗದ ಮಂಚಗಳ ಗಾತ್ರವು ಸಾಮಾನ್ಯವಾಗಿ 8x6 ಅಡಿ, 10x8 ಅಡಿ ಅಥವಾ 10x10 ಅಡಿಗಳ ಗಾತ್ರವನ್ನು ಅವಲಂಬಿಸಿ 25,000 ರೂ.ಗಳಿಂದ 30,000 ರೂ.ಗಳವರೆಗೆ ಇರುತ್ತದೆ. ಪ್ರತಿ ಚಾರ್ಪಾಯ್ ಅಥವಾ ಪಿಡ್ಡಾ ತಯಾರಿಕೆಯ ಮೂಲಕ ಅವರು 500 ರೂ.ಗಳ ದೈನಂದಿನ ಸಂಪಾದನೆಯನ್ನು ಮಾಡುತ್ತಾರೆ, ತಿಂಗಳಿಗೆ ಒಟ್ಟು 5,000ರಿಂದ 15,000 ರೂ.ಗಳನ್ನು ಗಳಿಸುತ್ತಾರೆ. "ಯೇ ಸರ್ಕಾರ್ ಕಾ ಮೋಲ್ ತೋ ಹೈ ನಹೀ, ಮೇರೆ ಮನ್ ಕಾ ಮೋಲ್ ಹೈ, [ಇದು ಸರ್ಕಾರದ ಬೆಲೆಯಲ್ಲ; ಇದು ನನ್ನ ಸ್ವಂತ ಬೆಲೆ.]” ಎಂದು ಭಗತ್ ರಾಮ್ ಹೇಳುತ್ತಾರೆ.

ಅವರು ಸರ್ಕಾರದ ಅಧಿಕೃತ ಕರಕುಶಲ ಪಟ್ಟಿಯಲ್ಲಿ ಚಾರ್ಪಾಯಿಗಳಿಗೂ ಸ್ಥಾನ ಕೊಡಿಸುವ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. "ಸ್ಥಳೀಯ ಸುದ್ದಿ ವಾಹಿನಿಯೊಂದರ ವೀಡಿಯೊದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೇನೆ" ಎಂದು ಅವರು ಹೆಮ್ಮೆಯಿಂದ ಹೇಳಿದ ಅವರು, ತಮ್ಮ ಮೊಬೈಲ್ ಫೋನಿನಲ್ಲಿದ್ದ ವಿಡಿಯೋ ತುಣುಕನ್ನು ಪರಿಗೆ ತೋರಿಸಿದರು.

ವಾರ್ಷಿಕ ಕರಕುಶಲ ಮೇಳದಲ್ಲಿ ತಮ್ಮ ಕರಕುಶಲತೆಯನ್ನು ಪ್ರದರ್ಶಿಸಲು ಅವರು ತಮ್ಮ ಗ್ರಾಮದಿಂದ 200 ಕಿ.ಮೀ ದೂರದಲ್ಲಿರುವ ಫರಿದಾಬಾದ್ ನಗರದಲ್ಲಿ ನಡೆಯುವ ಸೂರಜಕುಂಡ್ ಮೇಳಕ್ಕೆ ಎರಡು ಬಾರಿ ಹೋಗಿದ್ದಾರೆ. ಆದರೆ ಮೊದಲ ಬಾರಿಗೆ, 2018ರಲ್ಲಿ, ಅವರ ಬಳಿ ಕುಶಲಕರ್ಮಿಗಳ ಕಾರ್ಡ್ ಇರಲಿಲ್ಲ ಮತ್ತು ಪೊಲೀಸರು ಅವರನ್ನು ಹೊರಹೋಗುವಂತೆ ಕೇಳಿಕೊಂಡರು. ಆದರೆ ಅದೃಷ್ಟ ಅವರ ಪರವಾಗಿತ್ತು. ಒಬ್ಬ ಸಬ್ ಇನ್ಸ್ಪೆಕ್ಟರ್ ಡೆಪ್ಯೂಟಿ ಸೂಪರಿಂಟೆಂಡೆಂಟ್‌ ಅವರಿಗೆ ಎರಡು ಚಾರ್ಪಾಯಿಗಳನ್ನು ಕೊಡುವಂತೆ ಕೇಳಿದರು. ಅದರ ನಂತರ ಯಾರೂ ಅವರಿಗೆ ತೊಂದರೆ ನೀಡಲಿಲ್ಲ. "ಎಲ್ಲರೂ, 'ತಾವ್ ತೋ ಡಿಎಸ್ಪಿ ಸಾಹೇಬ್ ಕಾ ಬೋಹೋತ್ ತಗ್ಡಾ ಜಾನ್ಕಾರ್ ಹೈ [ತಾತ ಡಿಎಸ್ಪಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ] ಎಂದರು " ಎಂದು ಭಗತ್ ಮುಗುಳ್ನಕ್ಕು ಹೇಳುತ್ತಾರೆ.

ಕುಶಲಕರ್ಮಿಗಳ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಜವಳಿ ಸಚಿವಾಲಯವು ಚಾರ್ಪಾಯಿಗಳನ್ನು ಕರಕುಶಲ ಕಲೆ ಎಂದು ಗುರುತಿಸುವುದಿಲ್ಲ ಎನ್ನುವುದು ಅವರ ಗಮನಕ್ಕೆ ಬಂತು. ಹೀಗಾಗಿ ರೇವಾರಿಯ ಸ್ಥಳೀಯ ಅಧಿಕಾರಿಗಳು ಕಾರ್ಡ್ ಫೋಟೋಗಾಗಿ ಧುರಿ ನೇಕಾರನಂತೆ ಪೋಸ್ ನೀಡುವಂತೆ ಸೂಚಿಸಿದರು.

2019ರಲ್ಲಿ ತಮ್ಮೊಂದಿಗೆ ಅವರು ಇದೇ ಕಾರ್ಡನ್ನು ತೆಗೆದುಕೊಂಡು ಹೋಗಿದ್ದರು. ಜಾತ್ರೆಯಲ್ಲಿದ್ದ ಪ್ರತಿಯೊಬ್ಬರೂ ಅವರ ಚಾರ್ಪಾಯಿಗಳನ್ನು ಶ್ಲಾಘಿಸಿದರಾದರೂ, ಅವರು ಸ್ಪರ್ಧೆಯಲ್ಲಿ ಭಾಗವಹಿಸಲು ಅಥವಾ ಅವರ ಕರಕುಶಲತೆಗೆ ಪ್ರಶಸ್ತಿಯನ್ನು ಗೆಲ್ಲಲು ಅರ್ಹರಾಗಿರಲಿಲ್ಲ. "ನನ್ನ ಕಲಾಕೃತಿಗಳನ್ನು ಪ್ರದರ್ಶಿಸಲು ಮತ್ತು ಪ್ರಶಸ್ತಿಯನ್ನು ಗೆಲ್ಲಲು ಬಯಸಿದ್ದೆ. ಅದು ಸಾಧ್ಯವಾಗದೆ ಹೋಗಿದ್ದು ನನಗೆ ಬೇಸರವಾಯಿತು" ಎಂದು ಭಗತ್ ರಾಮ್ ಹೇಳುತ್ತಾರೆ.

PHOTO • Naveen Macro
PHOTO • Naveen Macro

ಎಡ ಮತ್ತು ಬಲ : ಪಿಡ್ಡಾ ಮೇ ಲಿನ ಅಲಂಕಾರಗಳು

PHOTO • Naveen Macro
PHOTO • Naveen Macro

ಎಡಕ್ಕೆ : ಭಗತ್ ರಾಮ್ ಒಂದು ಚಾರ್ಪಾಯಿ ತಯಾರಿಸಲು ಸುಮಾರು 15 ದಿನ ತೆಗೆದುಕೊಳ್ಳುತ್ತಾ ರೆ . ಬಲ : ಗಾತ್ರವನ್ನು ಅವಲಂಬಿಸಿ ಅವುಗಳ ಬೆಲೆ ಸಾಮಾನ್ಯವಾಗಿ 25,000 - 30,000 ರೂ ಗಳ ತನಕ ಇರುತ್ತದೆ

*****

ಅವರಿಗೆ ಇದುವರೆಗೆ ಬೇಡಿಕೆಗಳಲ್ಲಿ ನೆನಪಿನಲ್ಲಿ ಉಳಿಯುವ ಬೇಡಿಕೆಯೆಂದರೆ 2021ರಲ್ಲಿ ಒಂದು ವರ್ಷ ಕಾಲ ನಡೆದ ಕೃಷಿ ಪ್ರತಿಭಟನೆಗಾಗಿ ತಯಾರಿಸಲಾದ 12 x 6.5 ಅಡಿ ಅಳತೆಯ ದೊಡ್ಡ ಚಾರ್ಪಾಯಿ. (ಪರಿಯ ಸಂಪೂರ್ಣ ಕವರೇಜ್ ಇಲ್ಲಿದೆ ಓದಿ). ಕಿಸಾನ್ ಆಂದೋಲನವನ್ನು ಚಾರ್ಪಾಯಿಯಲ್ಲಿ ಚಿತ್ರಿಸಿ ನೇಯುವಂತೆ ಭಗತ್ ಅವರ ಬಳಿ ಮನವಿ ಮಾಡಲಾಯಿತು.

ಸುಮಾರು 500 ಕಿಲೋ ತೂಕದ ಚಾರ್ಪಾಯಿ ತಯಾರಿಸಲು ಅವರಿಗೆ 150,000 ರೂ.ಗಳನ್ನು ನೀಡಲಾಯಿತು. "ಅದು ನನ್ನ ಕೋಣೆಗೆ ಹೊಂದಿಕೊಳ್ಳದ ಕಾರಣ ಅಂಗಳದಲ್ಲಿ ಇರಿಸಿ ಅಲ್ಲಿ ಕೆಲಸ ಮಾಡಬೇಕಾಗಿತ್ತು" ಎಂದು ಭಗತ್ ಹೇಳುತ್ತಾರೆ. ತಸ್ವೀರ್ ಸಿಂಗ್ ಅಹ್ಲಾವತ್ ಅವರ ಮನವಿಯ ಮೇರೆಗೆ ತಯಾರಿಸಲಾದ ಈ ಮಂಚವು ಅಹ್ಲಾವತ್ ಗುಂಪಿನೊಂದಿಗೆ ಭಗತ್ ಅವರ ಗ್ರಾಮದಿಂದ 76 ಕಿ.ಮೀ ದೂರದಲ್ಲಿರುವ ಹರಿಯಾಣದ ದಿಘಲ್ ಟೋಲ್ ಪ್ಲಾಜಾಗೆ ಪ್ರಯಾಣಿಸಿತು.

ಇದಲ್ಲದೆ ಅವರ ಕರಕುಶಲ ಕೌಶಲವು ದೆಹಲಿ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಕರ್ನಾಟಕದ ಗ್ರಾಹಕರನ್ನೂ ತಲುಪಿದೆ.

“ಇದೊಂದು ಎಲ್ಲರಲ್ಲೂ ಕಂಡುಬರದ ಶೌಕ್‌ [ತೀವ್ರ ಹಂಬಲ]” ಎನ್ನುವ ಭಗತ್‌ ರಾಮ್‌, ಹರಿಯಾಣದ ಜಾನುವಾರು ಕೃಷಿಕರೊಬ್ಬರು 35,000 ರೂ.ಗಳ ಮೌಲ್ಯದ ಚಾರ್ಪಾಯಿಯನ್ನು ಖರೀದಿಸಿದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. "ಅವರು ಕೇವಲ ಜಾನುವಾರು ಸಾಕಣೆದಾರ ಎಂದು ತಿಳಿದಾಗ, ನಾನು ಹಣವನ್ನು ಹಿಂದಿರುಗಿಸಲು ಮುಂದಾದೆ. ಆದರೆ ಅವರು ನಿರಾಕರಿಸಿದರು, ಮಂಚಕ್ಕೆ ಒಂದು ಲಕ್ಷ ಕೊಡುವುದಕ್ಕೂ ತಾನು ಸಿದ್ಧ ಎಂದು ಅವರು ಹೇಳಿದ್ದರು”

ಈ ನಡುವೆ, ಭಗತ್ ರಾಮ್ 2019ರಲ್ಲಿ ಎರಡನೇ ಬಾರಿಗೆ ಅಲ್ಲಿಗೆ ಭೇಟಿ ನೀಡಿದ ನಂತರ ವಾರ್ಷಿಕ ಕರಕುಶಲ ಮೇಳಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ, ಏಕೆಂದರೆ ಅದರಿಂದ ಹೆಚ್ಚಿನ ಆದಾಯವೇನೂ ಸಿಗುವುದಿಲ್ಲ. ಅವರಿಗೆ ಪ್ರಸ್ತುತ ಮನೆಯಲ್ಲಿಯೇ ಸಾಕಷ್ಟು ಕೆಲಸ ಲಭ್ಯವಿದೆ, ಮತ್ತು ಅವರ ಫೋನ್ ನಿರಂತರವಾಗಿ ಹೊಸ ಬೇಡಿಕೆಗಳಿಂದ ಗಿಜಿಗುಡುತ್ತಿದೆ. "ಯಾವಾಗಲೂ ಯಾರಾದರೂ ಕರೆ ಮಾಡುತ್ತಾರೆ, ಚಾರ್ಪಾಯಿ ಅಥವಾ ಪಿಡ್ಡಾ ಕೇಳುತ್ತಾರೆ" ಎಂದು ಭಗತ್ ರಾಮ್ ಹೆಮ್ಮೆಯಿಂದ ಹೇಳುತ್ತಾರೆ.

ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ ( ಎಂಎಂಎಫ್ ) ಫೆಲೋಶಿಪ್ ಬೆಂಬಲ ದೊರಕಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanskriti Talwar

ಸಂಸ್ಕೃತಿ ತಲ್ವಾರ್ ನವದೆಹಲಿ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು 2023ರ ಪರಿ ಎಂಎಂಎಫ್ ಫೆಲೋ.

Other stories by Sanskriti Talwar
Photographs : Naveen Macro

ನವೀನ್ ಮ್ಯಾಕ್ರೋ ದೆಹಲಿ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು 2023ರ ಪರಿ ಎಂಎಂಎಫ್ ಫೆಲೋ.

Other stories by Naveen Macro
Editor : Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Other stories by Sarbajaya Bhattacharya
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru