"ನರ್ಕ್ ಹೈ ಎಹ್ [ಇದೊಂದು ನರಕ]."

ಕಾಶ್ಮೀರಾ ಬಾಯಿಯವರು ಕೈಗಾರಿಕೆಗಳ ತ್ಯಾಜ್ಯದಿಂದ ಕಲುಷಿತವಾಗಿರುವ ಬುಡ್ಡ ನಾಲೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಹಳ್ಳಿಯ ಉದ್ದಕ್ಕೂ ಹರಿಯುವ ಈ ಹೊಳೆ, ಇವರ ಮನೆಯಿಂದ ನೂರು ಮೀಟರ್‌ ದೂರದಲ್ಲಿ ಸಟ್ಲೇಜ್‌ ನದಿಯನ್ನು ಸೇರುತ್ತದೆ.

ನಲವತ್ತರ ಹರೆಯದ ಕಾಶ್ಮೀರಾ ಬಾಯಿ ಒಂದೊಮ್ಮೆ ಜನರು ಕುಡಿಯಲು ಬಳಸುವಷ್ಟು ಶುದ್ಧವಾಗಿದ್ದ ಆ ಹೊಳೆಯನ್ನು ನೆನಪಿಸಿಕೊಳ್ಳುತ್ತಾರೆ. ಲುಧಿಯಾನದ ಕೂಮ್‌ಕಲಾನ್ ಗ್ರಾಮದಲ್ಲಿ ಹುಟ್ಟುವ ಬುಡ್ಡ ನಾಲೆಯು ಲುಧಿಯಾನದ ಮೂಲಕ 14 ಕಿಲೋಮೀಟರ್‌ಗಳವರೆಗೆ ಹರಿದು ಕಾಶ್ಮೀರಾ ಅವರ ಊರಾದ ವಾಲಿಪುರ್‌ ಕುಲಾನ್‌ನ ಬಳಿ ಸಟ್ಲೆಜ್‌ ನದಿಯನ್ನು ಸೇರುತ್ತದೆ.

“ಆಸಿನ್ ತಾನ್ ನರ್ಕ್ ವಿಚ್ ಬೈಟೆ ಹಾನ್ [ನಾವು ನರಕದಲ್ಲಿ ಕೂತಿದ್ದೇವೆ]. ಪ್ರವಾಹ ಉಕ್ಕಿ ಬಂದಾಗ ಗಲೀಜು ಕಪ್ಪು ನೀರು ನಮ್ಮ ಮನೆಗಳಿಗೂ ಬರುತ್ತದೆ. ಪಾತ್ರೆಯಲ್ಲಿ ಆ ನೀರನ್ನು ಇಟ್ಟರೆ ರಾತ್ರಿಯಾದಂತೆ ಅದು ಹಳದಿ ಬಣ್ಣಕ್ಕೆ ತಿರುಗುತ್ತದೆ, ” ಎನ್ನುತ್ತಾರೆ ಅವರು.

PHOTO • Arshdeep Arshi
PHOTO • Arshdeep Arshi

ಎಡ: ಲುಧಿಯಾನದ ಕೂಮ್‌ಕಲಾನ್ ಗ್ರಾಮದಲ್ಲಿ ಹುಟ್ಟುವ ಬುಡ್ಡ ನಾಲೆಯು ಲುಧಿಯಾನದ ಮೂಲಕ 14 ಕಿಲೋ ಮೀಟರ್‌ ಹರಿದು ವಾಲಿಪುರ್ ಕಲಾನ್ ಗ್ರಾಮದಲ್ಲಿ ಸಟ್ಲೆಜ್‌ ನದಿಯನ್ನು ಸೇರುತ್ತದೆ. ಬಲ: 'ಪ್ರವಾಹ ಉಕ್ಕಿ ಬಂದಾಗ ಗಲೀಜು ಕಪ್ಪು ನೀರು ನಮ್ಮ ಮನೆಗಳಿಗೂ ಬರುತ್ತದೆ,' ಎಂದು ವಾಲಿಪುರ್ ಕಲಾನ್‌ನ‌ ನಿವಾಸಿ ಕಾಶ್ಮೀರಾ ಬಾಯಿ ಹೇಳುತ್ತಾರೆ

2024 ರ ಆಗಸ್ಟ್ ತಿಂಗಳ 24 ರಂದು, ಈ ಗಲೀಜು ನೀರಿನಿಂದ ಸಂಕಷ್ಟಕ್ಕೆ ಈಡಾಗುತ್ತಿರುವ ಜನರ ಬಗ್ಗೆ ರಾಜ್ಯ ಸರ್ಕಾರ ತಳೆದಿರುವ ನಿರ್ಲಕ್ಷ್ಯವನ್ನು ವಿರೋಧಿಸಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ನೂರಾರು ಜನರು ಲುಧಿಯಾನದಲ್ಲಿ ಪ್ರತಿಭಟನೆಗೆ ಇಳಿದರು. 'ಕಾಲೇ ಪಾನಿ ದ ಮೋರ್ಚಾ' (ಜಲ ಮಾಲಿನ್ಯದ ವಿರುದ್ಧ ಪ್ರತಿಭಟನೆ) ಬ್ಯಾನರ್ ಅಡಿಯಲ್ಲಿ, ಸಟ್ಲೆಜ್ ನದಿಯ ಉದ್ದಕ್ಕೂ ಇರುವ ಪ್ರದೇಶಗಳ ಸಂತ್ರಸ್ತರು ಅಲ್ಲಿ ಜಮಾಯಿಸಿದ್ದರು.

‘ಬುಡ್ಡ ದರಿಯಾ [ಹೊಳೆ]ವನ್ನು ಉಳಿಸಿ! ಸಟ್ಲೆಜನ್ನು ಉಳಿಸಿ.’

ಮಲಿನಗೊಳ್ಳುತ್ತಿರುವ ಬುಡ್ಡ ನಾಲೆಯನ್ನು ಉಳಿಸಲು ನಡೆಯುತ್ತಿರುವ ಗಲಾಟೆ ಇದೇ ಮೊದಲನೆಯದೇನಲ್ಲಾ, ಅದನ್ನು ಸ್ವಚ್ಛಗೊಳಿಸುವ ಯೋಜನೆ ಹಾಕಿಕೊಳ್ಳುತ್ತಿರುವುದು ಕೂಡ ಇದೇ ಮೊದಲ ಬಾರಿಯೇನಲ್ಲ. ಮೂರು ದಶಕಗಳಿಂದ ಈ ಸಂಘರ್ಷ ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 1996 ರಲ್ಲಿ ಮೊದಲ ಬಾರಿಗೆ ʼ‌ಆಕ್ಷನ್‌‌ ಪ್ಲಾನ್ ಫಾರ್ ಕ್ಲೀನ್‌‌ ರಿವರ್ ಸಟ್ಲೆಜ್ʼ ಆರಂಭಿಸಲಾಯಿತು. ಇದರ ಅಡಿಯಲ್ಲಿ ಜಮಾಲ್‌ಪುರ, ಭಟ್ಟಿಯಾನ್ ಮತ್ತು ಬಲ್ಲೊಕೆ ಗ್ರಾಮಗಳಲ್ಲಿ ಮೂರು ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ನಿರ್ಮಿಸಲಾಯಿತು.

2020 ರಲ್ಲಿ, ಪಂಜಾಬ್ ಸರ್ಕಾರವು ಬುಡ್ಡ ನಾಲೆಯನ್ನು ಸ್ವಚ್ಛಗೊಳಿಸಲು 650 ಕೋಟಿ ರುಪಾಯಿಗಳ ಎರಡು ವರ್ಷಗಳ ಪುನಶ್ಚೇತನ ಯೋಜನೆಯನ್ನು ಆರಂಬಿಸಿತು. ಹಿಂದಿನ ಸರ್ಕಾರವನ್ನು ದೂರುತ್ತಲೇ ಮುಖ್ಯಮಂತ್ರಿ ಭಗವಂತ್ ಮಾನ್, ಜಮಾಲ್‌ಪುರದಲ್ಲಿ ರಾಜ್ಯದ ಅತಿದೊಡ್ಡ ಎಸ್‌ಟಿಪಿ ಮತ್ತು ಬುಡ್ಡ ನಾಲೆ ಸ್ವಚ್ಛಗೊಳಿಸಲು 315 ಕೋಟಿ ರೂಪಾಯಿಗಳ ಇತರ ಯೋಜನೆಗಳನ್ನು ಉದ್ಘಾಟಿಸಿದರು.

ದೋಷಾರೋಪಣೆಯ ಹಗ್ಗಜಗ್ಗಾಟ ಇನ್ನೂ ನಡೆಯುತ್ತಿದ್ದರೂ, ಸರ್ಕಾರವಾಗಲೀ, ಯಾವುದೇ ರಾಜಕೀಯ ಪಕ್ಷಗಳಾಗಲೀ ಈ ಸಮಸ್ಯೆಯನ್ನು ಬಗೆಹರಿಸಲು ಏನೂ ಮಾಡಿಲ್ಲ ಎಂದು ಕಾಶ್ಮೀರಾ ಬಾಯಿ ಹೇಳುತ್ತಾರೆ. ಲುಧಿಯಾನದ ಸಾಮಾಜಿಕ ಕಾರ್ಯಕರ್ತರು ಪದೇ ಪದೇ ಪಂಜಾಬ್ ಸರ್ಕಾರದ ಮುಂದೆ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಬಂದಿದ್ದಾರೆ, ಆದರೆ ಕೋಟಿಗಟ್ಟಲೆ ಖರ್ಚು ಮಾಡಿಯೂ ನಾಲೆ ಮಾತ್ರ ಕಲುಷಿತವಾಗಿಯೇ ಇದೆ. ಇದರಿಂದಾಗಿ ಜನರು ಪ್ರತಿನಿತ್ಯ ಬೀದಿಗಿಳಿದು ಹೋರಾಡುವಂತಾಗಿದೆ.

60 ವರ್ಷ ಪ್ರಾಯದ ಮಲ್ಕೀತ್ ಕೌರ್ ಅವರು ಮಾನ್ಸಾ ಜಿಲ್ಲೆಯ ಅಹ್ಮದ್‌ಪುರದಿಂದ ಪ್ರತಿಭಟನೆಗೆ ಬಂದಿದ್ದಾರೆ. “ಕೈಗಾರಿಕೆಗಳು ಕಲುಷಿತ ನೀರನ್ನು ನೆಲಕ್ಕೆ ಬಿಡುತ್ತಿರುವುದೇ ನಮ್ಮನ್ನು ಕಾಡುತ್ತಿರುವ ಹಲವಾರು ಕಾಯಿಲೆಗಳಿಗೆ ಕಾರಣವಾಗಿದೆ. ನೀರು ಬದುಕಿನ ಮೂಲಭೂತ ಅವಶ್ಯಕತೆ, ನಮಗೆ ಶುದ್ಧ ನೀರು ಸಿಗಲೇ ಬೇಕು ಎಂದು ಅವರು ಹೇಳುತ್ತಾರೆ.

PHOTO • Arshdeep Arshi
PHOTO • Arshdeep Arshi

ಎಡ: ಪ್ರತಿಭಟನಾ ಮೆರವಣಿಗೆ, ಕಾಲೇ ಪಾನಿ ದಾ ಮೋರ್ಚಾ (ಜಲ ಮಾಲಿನ್ಯದ ವಿರುದ್ಧ ಪ್ರತಿಭಟನೆ) ವನ್ನು 2024 ರ ಆಗಸ್ಟ್ 24 ರಂದು ಆಯೋಜಿಸಲಾಯಿತು. ಬುಡ್ಡ ನಾಲೆ ಕಾಲೋಚಿತ ನೀರಿನ ಹರಿವಾಗಿದ್ದು, ಲುಧಿಯಾನ ಮೂಲಕ ಹರಿದು ಸಟ್ಲೆಜ್ ನದಿಯನ್ನು ಸೇರುತ್ತದೆ. ಬಲ: ಪ್ರತಿಭಟನಾ ಮೆರವಣಿಗೆಯಲ್ಲಿ ರಾಜಸ್ಥಾನದ ಸಾಮಾಜಿಕ ಕಾರ್ಯಕರ್ತರೂ ಪಾಲ್ಗೊಂಡಿದ್ದರು

PHOTO • Arshdeep Arshi
PHOTO • Arshdeep Arshi

ಎಡ: 'ನಲ್ ಹೈ ಲೇಕಿನ್ ಜಲ್ ನಹೀ' (ನಲ್ಲಿ ಇದೆ ಆದರೆ ನೀರಿಲ್ಲ) ಎಂದು ಬರೆದಿರುವ ಪೋಸ್ಟರ್ ಹಿಡಿದುಕೊಂಡಿರುವ ಸಾಮಾಜಿಕ ಕಾರ್ಯಕರ್ತರು. ಬಲ: ಮಲ್ಕೀತ್ ಕೌರ್ (ಎಡದಿಂದ ನಾಲ್ಕನೆಯವರು) ಪ್ರತಿಭಟನೆಯಲ್ಲಿ ಭಾಗವಹಿಸಲು ಮಾನ್ಸಾ ಜಿಲ್ಲೆಯ ಅಹ್ಮದ್‌ಪುರದಿಂದ ಬಂದಿದ್ದಾರೆ. 'ಕೈಗಾರಿಕೆಗಳು ಕಲುಷಿತ ನೀರನ್ನು ನೆಲಕ್ಕೆ ಬಿಡುತ್ತಿರುವುದೇ ನಮ್ಮನ್ನು ಕಾಡುತ್ತಿರುವ ಹಲವಾರು ಕಾಯಿಲೆಗಳಿಗೆ ಕಾರಣವಾಗಿದೆ. ನೀರು ಬದುಕಿನ ಮೂಲಭೂತ ಅವಶ್ಯಕತೆ, ನಮಗೆ ಶುದ್ಧ ನೀರು ಸಿಗಲೇ ಬೇಕು,' ಎಂದು ಅವರು ಹೇಳುತ್ತಾರೆ

ವಾಲಿಪುರ ಕಲಾನ್‌ನ ಕಾಶ್ಮೀರಾ ಬಾಯಿಯವರು ತಮ್ಮ ಇಡೀ ಗ್ರಾಮ ಅಂತರ್ಜಲವನ್ನೇ ನಂಬಿ ಬದುಕುತ್ತಿದೆ ಎನ್ನುತ್ತಾರೆ. ನೀರಿಗಾಗಿ 300 ಅಡಿಗಳ ವರೆಗೆ ಬೋರ್‌ಗಳನ್ನು ಕೊರೆಯಬೇಕು, ಇದಕ್ಕೆ 35,000 ಯಿಂದ 40,000 ರುಪಾಯಿಗಳ ವರೆಗೆ ಖರ್ಚಾಗುತ್ತದೆ. ಆದರೂ ಶುದ್ಧ ನೀರು ಸಿಗುತ್ತದೆ ಎಂಬ ನಂಬಿಕೆ ಇಲ್ಲ ಎಂದು ಕಾಶ್ಮೀರಾ ಬಾಯಿ ಹೇಳುತ್ತಾರೆ. ಈ ಗ್ರಾಮದ ಸ್ಥಿತಿವಂತರ ಮನೆಗಳು ಶುದ್ಧ ಕುಡಿಯುವ ನೀರಿಗಾಗಿ ಮನೆಯಲ್ಲಿಯೇ ಫಿಲ್ಟರ್‌ ಹಾಕಿಸಿಕೊಂಡಿದ್ದಾರೆ ,ಆದರೆ ಅವುಗಳನ್ನೂ ಆಗಾಗ ರಿಪೇರಿ ಮಾಡುತ್ತಲೇ ಇರಬೇಕಾಗಿದೆ.

ಅದೇ ಗ್ರಾಮದ ಐವತ್ತರ ಹರೆಯದ ಬಲ್ಜೀತ್ ಕೌರ್ ಅವರ ಒಬ್ಬ ಮಗ  ಹೆಪಟೈಟಿಸ್ ಸಿ ಯಿಂದ ಮರಣಹೊಂದಿದರು. "ನನ್ನ ಇಬ್ಬರು ಗಂಡು ಮಕ್ಕಳು ಹೆಪಟೈಟಿಸ್ ಸಿ ಯಿಂದ ಬಳಲುತ್ತಿದ್ದರು, ಅವರಲ್ಲಿ ಒಬ್ಬ ಸತ್ತ," ಎನ್ನುತ್ತಾ, ಈ ಊರು ಮತ್ತು ಸುತ್ತಮುತ್ತಲಿನ ಊರಿನಲ್ಲಿ ಅನೇಕರು ರೋಗಗಳಿಗೆ ತುತ್ತಾಗಿದ್ದಾರೆ ಎಂದು ಕೌರ್ ಹೇಳುತ್ತಾರೆ.

"ನಾವಿನ್ನೂ ಎಚ್ಚರಗೊಳ್ಳದಿದ್ದರೆ, ಮುಂದಿನ ತಲೆಮಾರಿಗೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹೀಗಾಗಿ ನಾವು ಪ್ರತಿಭಟನೆಗೆ ಇಳಿದಿದ್ದೇವೆ,” ಎಂದು ಬಟಿಂಡಾದ ಗೋನಿಯಾನ ಮಂಡಿಯ 45 ವರ್ಷ ಪ್ರಾಯದ ರಾಜ್‌ವಿಂದರ್ ಕೌರ್ ಹೇಳುತ್ತಾರೆ. “ಪರಿಸರ ಮಾಲಿನ್ಯದಿಂದಾಗಿ ಈಗ ಪ್ರತಿ ಮನೆ ಮನೆಯಲ್ಲೂ ಕ್ಯಾನ್ಸರ್ ರೋಗಿಗಳಿದ್ದಾರೆ. ಮೊದಲು ಸಟ್ಲೆಜ್ ನದಿಯ ನೀರನ್ನು ಕಲುಷಿತ ಮಾಡುವ ಈ ಕಾರ್ಖಾನೆಗಳಿಗೆ ಬೀಗ ಜಡಿಯಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಉಳಿಗಾಲ,” ಎಂದು ಅವರು ಹೇಳುತ್ತಾರೆ.

"ಎಹ್ ಸಡಿ ಹೊಂದ್ ದಿ ಲಡಾಯಿ ಹೆ [ಇದು ನಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟ]. ಮುಂದಿನ ಪೀಳಿಗೆಯನ್ನು ಉಳಿಸುವ ಹೋರಾಟ ಇದು," ಎಂದು ಲುಧಿಯಾನದಲ್ಲಿ ಕಾಲೇ  ಪಾನಿ ದ ಮೋರ್ಚಾಕ್ಕೆ ಬಂದಿರುವ ಸಾಮಾಜಿಕ ಕಾರ್ಯಕರ್ತೆ ಬೀಬಿ ಜೀವನಜೋತ್ ಕೌರ್ ಹೇಳುತ್ತಾರೆ.

PHOTO • Arshdeep Arshi
PHOTO • Arshdeep Arshi

ಎಡ: ಬಲ್ಜೀತ್ ಕೌರ್ ಅವರು ಹೆಪಟೈಟಿಸ್ ಸಿ ನಿಂದಾಗಿ ತಮ್ಮ ಒಬ್ಬ ಮಗನನ್ನು ಕಳೆದುಕೊಂಡಿದ್ದಾರೆ. ಬಲ: 'ನಾವಿನ್ನೂ ಎಚ್ಚರಗೊಳ್ಳದಿದ್ದರೆ, ಮುಂದಿನ ತಲೆಮಾರಿಗೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹೀಗಾಗಿ ನಾವು ಪ್ರತಿಭಟನೆಗೆ ಇಳಿದಿದ್ದೇವೆ,' ಎಂದು ಬಟಿಂಡಾದ ಗೋನಿಯಾನಾ ಮಂಡಿಯ ರಾಜ್‌ವಿಂದರ್ ಕೌರ್ (ಗುಲಾಬಿ ಬಣ್ಣದ ದುಪಟ್ಟಾ) ಹೇಳುತ್ತಾರೆ

PHOTO • Arshdeep Arshi
PHOTO • Arshdeep Arshi

ಎಡಕ್ಕೆ: 'ಆವೋ ಪಂಜಾಬ್ ದೇ ದರಿಯಾವಾನ್ ದೆ ಝೆಹ್ರಿ ಕಾಲೇ ಪರ್ದೂಶನ್ ನು ರೋಕಿಯೇ' (ಪಂಜಾಬ್‌ನ ನದಿಗಳ ವಿಷಕಾರಿ ಮಾಲಿನ್ಯವನ್ನು ನಿಲ್ಲಿಸೋಣ) ಎಂದು ಬರೆದಿರುವ ಬ್ಯಾನರ್‌ನೊಂದಿಗೆ ಮೆರವಣಿಗೆಯಲ್ಲಿ ಬರುತ್ತಿರುವ ಪ್ರತಿಭಟನಾಕಾರರು. ಬಲ: ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೃಷಿ ತಜ್ಞ ದೇವಿಂದರ್ ಶರ್ಮಾ, ʼಕೈಗಾರಿಕೆಗಳು 40 ವರ್ಷಗಳಿಂದ ನಮ್ಮ ನದಿಗಳನ್ನು ಮಲಿನ ಮಾಡುತ್ತಿವೆ, ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ’ ಎಂದು ಹೇಳಿದರು

ಅಮನ್‌ದೀಪ್ ಸಿಂಗ್ ಬೇನ್ಸ್ ಈ ಚಳವಳಿಯ ಮುಂಚೂಣಿಯಲ್ಲಿರುವ ಸಾಮಾಜಿಕ ಕಾರ್ಯಕರ್ತ. ಇವರು, “ಸಮಸ್ಯೆಯ ಮೂಲ ಕಾರಣವನ್ನು ಇನ್ನೂ ಬಗೆಹರಿಸಲಾಗಿಲ್ಲ. ಸರ್ಕಾರ ನದಿಯನ್ನು ಸ್ವಚ್ಛಗೊಳಿಸಲು ಯೋಜನೆಗಳನ್ನು ತರುತ್ತದೆ, ಆದರೆ ಕೈಗಾರಿಕೆಗಳಿಗೆ ಕಲುಷಿತ ನೀರನ್ನು ನದಿಗೆ ಬಿಡಲು ಯಾಕೆ ಬಿಡುತ್ತಾರೆ? ಮಾಲಿನ್ಯಕಾರಕಗಳು ದರಿಯಾ [ಹೊಳೆ] ಅನ್ನು ಸೇರಲು ಬಿಡಲೇ ಬಾರದು,” ಎಂದು ಅವರು ಹೇಳುತ್ತಾರೆ.

ಲುಧಿಯಾನ ಮೂಲದ ವಕೀಲರಾಗಿರುವ ಇವರು, "ಡೈಯಿಂಗ್ ಕಾರ್ಖಾನೆಗಳನ್ನು ಮೊದಲು ಮುಚ್ಚಬೇಕು," ಎನ್ನುತ್ತಾರೆ.

ಲುಧಿಯಾನದಲ್ಲಿ ಸುಮಾರು 2,000 ಕೈಗಾರಿಕಾ ಎಲೆಕ್ಟ್ರೋಪ್ಲೇಟಿಂಗ್ ಘಟಕಗಳೂ, 300 ಡೈಯಿಂಗ್ ಘಟಕಗಳೂ ಇವೆ. ಬುಡ್ಡ ನಾಲೆಯ ಮಾಲಿನ್ಯದ ವಿಚಾರದಲ್ಲಿ ಇವರು ಒಬ್ಬರನ್ನೊಬ್ಬರು ದೂರುತ್ತಿದ್ದಾರೆ. ಲುಧಿಯಾನ ಮೂಲದ ಕೈಗಾರಿಕೋದ್ಯಮಿ ಬಾದೀಶ್ ಜಿಂದಾಲ್ ಅವರು ಪರಿಗೆ, “ಪಂಜಾಬ್ ವಿಷಗಳ ಸ್ವಾಧೀನ ಮತ್ತು ಮಾರಾಟ ನಿಯಮಗಳು, 2014 ರ ಪ್ರಕಾರ, ಆಡಳಿತ ವ್ಯವಸ್ಥೆ ಯಾವುದೇ ವಿಷಕಾರಿ ರಾಸಾಯನಿಕಗಳ ಮಾರಾಟ ಹಾಗೂ ಖರೀದಿಯ ಬಗೆಗಿನ ದಾಖಲೆಯನ್ನು ಇಟ್ಟುಕೊಳ್ಳಬೇಕು. ಆದರೆ ಆಡಳಿತದ ಬಳಿ ಅಂತಹ ಯಾವುದೇ ದಾಖಲೆಗಳಿಲ್ಲ,” ಎಂದು ಹೇಳಿದರು.

ಕೈಗಾರಿಕೆಗಳು ವೇಸ್ಟ್ ನೀರನ್ನು ಸಂಸ್ಕರಿಸಲು  ಝೀರೋ ಲಿಕ್ವಿಡ್ ಡಿಸ್ಚಾರ್ಜ್ (ಝಡ್‌ಎಲ್‌ಡಿ) ಅನ್ನು  ಅಳವಡಿಸಿಕೊಳ್ಳಬೇಕು,  "ಯಾವುದೇ ಕಾರ್ಖಾನೆಯೂ ತ್ಯಾಜ್ಯ, ಸಂಸ್ಕರಿಸಿದ ಅಥವಾ ಸಂಸ್ಕರಿಸದ ನೀರನ್ನು ಬುಡ್ಡ ನಾಲೆಗೆ ಬಿಡಲೇ ಬಾರದು,” ಎಂದು ಅವರು ಹೇಳುತ್ತಾರೆ.

ಮಾಲಿನ್ಯಕಾರಕ ಕಾರ್ಖಾನೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಕೃಷಿ ತಜ್ಞ ದೇವಿಂದರ್ ಶರ್ಮಾ ಕರೆ ನೀಡಿದರು. ಪರಿಯೊಂದಿಗೆ ಮಾತನಾಡುತ್ತಾ, “ಕೈಗಾರಿಕೆಗಳು 40 ವರ್ಷಗಳಿಂದ ನಮ್ಮ ನದಿಗಳನ್ನು ಮಲಿನ ಮಾಡುತ್ತಿವೆ, ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಮಗೆ ಈ ಗಲೀಜು ಕಾರ್ಖಾನೆಗಳನ್ನು ಯಾಕೆ ಬೇಕು? ಕೇವಲ ಹೂಡಿಕೆಯ ಕಾರಣಕ್ಕೋ? ಸರ್ಕಾರಗಳು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಬೇಕು,” ಎಂದು ಹೇಳಿದರು.

PHOTO • Arshdeep Arshi
PHOTO • Arshdeep Arshi

ಕಲುಷಿತ ನೀರಿನಿಂದ ಬಾಧಿತವಾಗಿರುವ (ಬಲ) ವಾಲಿಪುರ್ ಕಲಾನ್ ಗ್ರಾಮದ (ಎಡದಿಂದ ಬಲಕ್ಕೆ) ನಾರಂಗ್ ಸಿಂಗ್, ದೇವಿಂದರ್ ಸಿಂಗ್, ಜಗಜೀವನ್ ಸಿಂಗ್ ಮತ್ತು ವಿಶಾಖಾ ಸಿಂಗ್ ಗ್ರೆವಾಲ್

PHOTO • Arshdeep Arshi
PHOTO • Arshdeep Arshi

ಲುಧಿಯಾನದಲ್ಲಿ ಸುಮಾರು 2,000 ಕೈಗಾರಿಕಾ ಎಲೆಕ್ಟ್ರೋಪ್ಲೇಟಿಂಗ್ ಘಟಕಗಳೂ, 300 ಡೈಯಿಂಗ್ ಘಟಕಗಳೂ ಇವೆ. ಬುಡ್ಡ ನಾಲೆಯ ಮಾಲಿನ್ಯದ ವಿಚಾರದಲ್ಲಿ ಇವರು ಒಬ್ಬರನ್ನೊಬ್ಬರು ದೂರುತ್ತಿದ್ದಾರೆ. ಲುಧಿಯಾನ ಜಿಲ್ಲೆಯ ಘೌನ್ಸ್‌ಪುರ್ ಗ್ರಾಮದ (ಬಲ) ಪಕ್ಕದಲ್ಲಿಯೇ ಬುಡ್ಡ ನಾಲೆ ಹರಿಯುತ್ತದೆ

ಯಾವುದೇ ದ್ರವ ವಸ್ತುವನ್ನು, ಸಂಸ್ಕರಿಸಿದ ತ್ಯಾಜ್ಯ/ನೀರನ್ನು ಕೂಡ ಬುಡ್ಡ ನಾಲೆಗೆ ಬಿಡದಂತೆ ಡೈಯಿಂಗ್ ಕಾರ್ಖಾನೆಗಳಿಗೆ ಸ್ಪಷ್ಟ ಆದೇಶವಿದೆ ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದರು. ಎನ್‌ಜಿಟಿ ವಿಚಾರಣೆ ವೇಳೆ ಇತ್ತೀಚೆಗೆ ಕಂಡು ಬಂದ ದಾಖಲೆಗಳಲ್ಲಿ ಇದು ಗೊತ್ತಾಗಿದೆ. ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿ(ಪಂಜಾಬ್‌ ಪೊಲ್ಯೂಷನ್‌ ಕಂಟ್ರೋಲ್‌ ಬೋರ್ಡ್- ಪಿಪಿಸಿಬಿ)‌ ಹತ್ತು ಹನ್ನೊಂದು ವರ್ಷಗಳಿಂದ ಈ ಬಗ್ಗೆ ಯಾಕೆ ಚಕಾರ ಎತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಕೇಳುತ್ತಿದ್ದಾರೆ.

ಪಂಜಾಬ್‌ನ ಸಾಮಾಜಿಕ ಕಾರ್ಯಕರ್ತರು, "ತ್ರಿಪುರಾ ರಾಜ್ಯಕ್ಕೆ ಮಾಲಿನ್ಯಕಾರಕ ಕೈಗಾರಿಕೆಗಳನ್ನು ನಿಷೇಧಿಸಲು ಸಾಧ್ಯವಾದರೆ, ಪಂಜಾಬಿಗೆ ಯಾಕೆ ಸಾಧ್ಯವಿಲ್ಲ?” ಎಂದು ಪ್ರಶ್ನಿಸುತ್ತಿದ್ದಾರೆ.

*****

ಬುಡ್ಡ ನಾಲೆಯ ಶುದ್ಧ ನೀರು ಲುಧಿಯಾನ ಮತ್ತು ಆನಂತರದ ಊರುಗಳಲ್ಲಿ ಹರಿದು ಹೋಗುವಾಗ ಕರ್ರಗಿನ ಹೊಳೆಯಾಗಿ ಬದಲಾಗುತ್ತದೆ. ಸಂಪೂರ್ಣ ಕಪ್ಪಗಿನ ಬಣ್ಣವನ್ನು ಹೊತ್ತು ಕೊನೆಯಲ್ಲಿ ಸಟ್ಲೆಜ್ ನದಿಯನ್ನು ಸೇರುತ್ತದೆ. ಈ ಜಿಡ್ಡು ಜಿಡ್ಡಾದ ದ್ರವ ಪಾಕಿಸ್ತಾನಕ್ಕೆ ಹೋಗಿ ಅರಬ್ಬಿ ಕಡಲನ್ನು ಸೇರುವ ಮೊದಲು ರಾಜಸ್ಥಾನದವರೆಗೆ ಹರಿಯುತ್ತದೆ. ಉಪಗ್ರಹ ಚಿತ್ರಣವು ಹರಿಕೆ ಪಟ್ಟಣ್ (ಒಡ್ಡು) ನಲ್ಲಿ ಸಂಧಿಸುವ ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನೀರಿನಲ್ಲಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತದೆ.

PHOTO • Courtesy: Trolley Times
PHOTO • Courtesy: Trolley Times

ಸಮಸ್ಯೆಯ ಮೂಲ ಕಾರಣವನ್ನು ಇನ್ನೂ ಬಗೆಹರಿಸಲಾಗಿಲ್ಲ, ಸರ್ಕಾರ ನದಿಯನ್ನು ಸ್ವಚ್ಛಗೊಳಿಸಲು ಯೋಜನೆಗಳನ್ನು ತರುತ್ತದೆ, ಆದರೆ ಕೈಗಾರಿಕೆಗಳಿಗೆ ಕಲುಷಿತ ನೀರನ್ನು ನದಿಗೆ ಬಿಡಲು ಬಿಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ. ಬಲ: ಬುಡ್ಡ ನಾಲೆಯ ನೀರು ಸಟ್ಲೆಜ್‌ ನದಿಯನ್ನು ಸೇರುತ್ತಿರುವುದು (2022 ರ ಫೋಟೋ)

2024 ರ ಆಗಸ್ಟ್ 13 ರಂದು  ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸೆಂಟ್ರಲ್‌ ಪೊಲ್ಯೂಷನ್‌ ಕಂಟ್ರೋಲ್‌ ಬೋರ್ಡ್‌ - ಸಿಪಿಸಿಬಿ) ಬುಡ್ಡ ನಾಲೆಯ ಮಾಲಿನ್ಯದ ಸ್ಥಿತಿಯ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ನ್ಯಾಷನಲ್‌ ಗ್ರೀನ್‌ ಟ್ರಿಬ್ಯುನಲ್‌ - ಎನ್‌ಜಿಟಿ) ಉತ್ತರವನ್ನು ನೀಡಿದೆ (ಇದರ ನಕಲು ಪರಿಯಲ್ಲಿದೆ). ನಗರದಲ್ಲಿರುವ ಮೂರು ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು (ಕಾಮನ್‌ ಎಫ್ಲೂಯೆಂಟ್‌ ಟ್ರೀಟ್‌ಮೆಂಟ್ ಪ್ಲಾಂಟ್- ಸಿಇಟಿಪಿ) "ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನೀಡಿದ ಪರಿಸರ ಅನುಮತಿಯಲ್ಲಿ ನಿಗದಿಪಡಿಸಲಾಗಿರುವ ವಿಲೇವಾರಿ ಷರತ್ತುಗಳನ್ನು ಅನುಸರಿಸುತ್ತಿಲ್ಲ" ಎಂದು ಅದು ಉಲ್ಲೇಖಿಸಿದೆ.

2024 ರ ಆಗಸ್ಟ್ 12 ರಂದು "ಪರಿಸರ ಪರಿಹಾರವನ್ನು ಭರಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಿ,” ಎಂದು ಪಿಪಿಸಿಬಿಗೆ  ನಿರ್ದೇಶನಗಳನ್ನು ನೀಡಿರುವುದಾಗಿ ಸಿಪಿಸಿಬಿಯು ಎನ್‌ಜಿಟಿಗೆ ತಿಳಿಸಿದೆ.  ಬುಡ್ಡ ನಾಲೆಯ ನೀರು ನೀರಾವರಿಗೆ ಯೋಗ್ಯವಲ್ಲ ಎಂದು ಪಿಪಿಸಿಬಿ ಹಿಂದಿನ ವರದಿಯಲ್ಲಿ ಒಪ್ಪಿಕೊಂಡಿದೆ. "ಈ ನೀರು ಕೃಷಿ ಕೆಲಸಕ್ಕೇ ಬಳಸಲು ಯೋಗ್ಯವಲ್ಲದಿದ್ದರೆ, ಅದೇ ನೀರನ್ನು ಕುಡಿಯಬಹುದು ಎಂದು ನೀವು ಭಾವಿಸುತ್ತೀರಾ?" ಸಾಮಾಜಿಕ  ಕಾರ್ಯಕರ್ತರು ಪ್ರಶ್ನಿಸುತ್ತಾರೆ.

ಪ್ರತಿಭಟನಾ ಮೆರವಣಿಗೆಯ ಆಯೋಜಕರು ತಮ್ಮ ಜಂಟಿ ಹೇಳಿಕೆಯಲ್ಲಿ ಸೆಪ್ಟೆಂಬರ್ 15 ರಂದು  ಬುಡ್ಡ ನಾಲೆಯನ್ನು ತೋಡುವ ಯೋಜನೆಯನ್ನು ಘೋಷಿಸಿದರು, ಆ ನಂತರ ಆ ಕೆಲಸವನ್ನು 2024 ರ  ಅಕ್ಟೋಬರ್ 1 ಕ್ಕೆ ಮುಂದೂಡಲಾಯಿತು. ಇವೆಲ್ಲದರ ಪರಿಣಾಮವಾಗಿ,  ಸೆಪ್ಟೆಂಬರ್ 25 ರಂದು  ಪಿಪಿಸಿಬಿ ಮೂರು ಸಿಇಟಿಪಿಗಳಿಗೆ ಬುಡ್ಡ ನಾಲೆಗೆ ಸಂಸ್ಕರಿಸಿದ ತ್ಯಾಜ್ಯವನ್ನು ಹಾಕುವುದನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶವನ್ನು ನೀಡಿತು. ಆದರೆ, ವರದಿಗಳ ಪ್ರಕಾರ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ.

ಹೊಳೆಯನ್ನು ತೋಡುವ ಬದಲು ಸಾಮಾಜಿಕ ಕಾರ್ಯಕರ್ತರು ಅಕ್ಟೋಬರ್ 1 ರಂದು ಲುಧಿಯಾನದ ಫಿರೋಜ್‌ಪುರ ರಸ್ತೆಯಲ್ಲಿ ಮತ್ತೆ ಧರಣಿ ಕೂತು, 2024 ರ  ಡಿಸೆಂಬರ್ 3 ರೊಳಗೆ ಎಲ್ಲಾ ಕ್ರಮಗಳನ್ನೂ ಜಾರಿಗೊಳಿಸಬೇಕು ಎಂಬ ಆಗ್ರಹವನ್ನು ಸರ್ಕಾರದ ಮುಂದಿಟ್ಟರು.

“ಆಗಾಗ ಯಾರಾದರೊಬ್ಬರು ಬಂದು ಬುಡ್ಡ ನಾಲೆಯ ನೀರಿನ ಮಾದರಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಆದರೆ ಹುಂಡ ಕುಚ್ ನಹೀ [ ಆಗಿದ್ದೇನೂ ಇಲ್ಲ]. ಒಂದೋ ಈ ಮಾಲಿನ್ಯವನ್ನು ನಿಲ್ಲಿಸಬೇಕು, ಇಲ್ಲವೇ ನಮ್ಮ ಮುಂದಿನ ಪೀಳಿಗೆ ಜೀವಿಸಲು ಶುದ್ಧ ನೀರನ್ನು ಕೊಡಬೇಕು,” ಎಂದು ಸರ್ಕಾರದ ಸಮೀಕ್ಷೆಗಳು ಮತ್ತು ಭರವಸೆಗಳಿಂದ ಬೇಸತ್ತಿರುವ ಬಲ್ಜೀತ್ ಕೌರ್ ತಮ್ಮ ಅಸಮಧಾನವನ್ನು ಹೊರಹಾಕುತ್ತಾರೆ.

ಕನ್ನಡ ಅನುವಾದ: ಚರಣ್‌ ಐವರ್ನಾಡು

Arshdeep Arshi

ಅರ್ಷ್‌ದೀಪ್ ಅರ್ಶಿ ಚಂಡೀಗಢ ಮೂಲದ ಸ್ವತಂತ್ರ ಪತ್ರಕರ್ತರು ಮತ್ತು ಅನುವಾದಕರು. ಇವರು ನ್ಯೂಸ್ 18 ಪಂಜಾಬ್ ಮತ್ತು ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಕೆಲಸ ಮಾಡಿದ್ದಾರೆ. ಅವರು ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಫಿಲ್ ಪಡೆದಿದ್ದಾರೆ.

Other stories by Arshdeep Arshi
Editor : Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Other stories by Priti David
Translator : Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Charan Aivarnad