ಪುಣೆಯ ಕೊಲವಾಡೆ ಗ್ರಾಮದ ಇಬ್ಬರು ಮಹಿಳೆಯರು ಮುಂಬೈಗೆ ಉಗಿಬಂಡಿಯಲ್ಲಿ ಹೋಗುವ ಕುರಿತು ಮತ್ತು ದೊಡ್ಡ ನಗರದಲ್ಲಿ ಕಾಯುತ್ತಿರುವ ಜೀವನದ ಬಗ್ಗೆ ಹಾಡುತ್ತಾರೆ

ರೈಲಿನ ಎಂಜಿನ್ನಿಗೆ ಹಿತ್ತಾಳೆಯ ಕುತ್ತಿಗೆಯಿದೆ
ರೈಲು ಬರುತ್ತದ ಬೈಕುಲ್ಲಾ, ಬೋರಿ ಬಂದರಿನಿಂದ

ಈ ಓವಿಯ ಮೂಲಕ 72 ವರ್ಷದ ಗಾಯಕಿ ರಾಧಾ ಸಕ್ಪಾಲ್ ಅವರು "ಹಿತ್ತಾಳೆ ಕುತ್ತಿಗೆ" ಹೊಂದಿರುವ ರೈಲನ್ನು ವರ್ಣಿಸುತ್ತಿದ್ದಾರೆ. ರೈಲಿನ ಉಗಿ ಎಂಜಿನ್ನಿ ಹೊಗೆ ಉಗುಳುವ ಚಿಮಣಿಯನ್ನು ಅವರು ಅದರ ಕುತ್ತಿಗೆ ಎನ್ನುತ್ತಾ, ಅದು ಭಕ್ಕ, ಭಕ್ಕ, ಭಕ್ಕ, ಭಕ್ಕಾ ಎನ್ನುವ ಸದ್ದನ್ನು ಸಂಗೀತಕ್ಕೆ ಹೋಲಿಸುತ್ತಾರೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕೊಲವಾಡೆ ಗ್ರಾಮದ ರಾಧಾ ಸಕ್ಪಾಲ್ ಮತ್ತು ರಾಧಾ ಉಬೆ ಈ 13 ಪದ್ಯಗಳನ್ನು ಹಾಡಿದ್ದಾರೆ. ಬೀಸುಕಲ್ಲು ಬೀಸುತ್ತಾ ಹಾಡುವ ಈ ಮಹಿಳೆಯರು ಉಗಿಬಂಡಿ, ಅದರ ಪ್ರಯಾಣಿಕರು ಮತ್ತು ಮುಂಬೈ ನಗರಕ್ಕೆ ಅವರ ಪ್ರಯಾಣದ ಬಗ್ಗೆ ವರ್ಣಿಸುತ್ತಾರೆ. ಉದ್ಯೋಗ ಮತ್ತು ಆದಾಯದ ಮೂಲವನ್ನು ಹುಡುಕಿಕೊಂಡು ಅಲ್ಲಿಗೆ ವಲಸೆ ಹೋಗುವ ಜನರ ಪಾಲಿಗೆ ದೊಡ್ಡ ನಗರದಲ್ಲಿನ ಬದುಕು ಎಂದರೇನು ಎಂಬುದನ್ನು ಓವಿ ವಿವರಿಸುತ್ತದೆ.

ಒಂದು ದ್ವಿಪದಿಯಲ್ಲಿ, ಮಹಿಳೆಯೊಬ್ಬಳು ರೈಲು ಹತ್ತುವ ಮೊದಲು ತನ್ನ ಪತಿಯಿಂದ ವಿಚ್ಛೇದನ ಕೋರಿ ಸೋಡ್‌ಚೀಟಿ ಅಥವಾ ಪತ್ರವನ್ನು ಕೇಳುತ್ತಾಳೆ. ಇದು ದಂಪತಿಗಳಲ್ಲಿ ಒಬ್ಬರು ಕೆಲಸಕ್ಕಾಗಿ ಮುಂಬೈಗೆ ವಲಸೆ ಹೋಗುವುದರಿಂದ ದಂಪತಿಗಳ ನಡುವೆ ಹುಟ್ಟುವ ಪ್ರತ್ಯೇಕತೆಯ ಪರಿಣಾಮವಾಗಿರಬಹುದೇ? ಅಥವಾ, ದೊಡ್ಡ ನಗರದಲ್ಲಿ ಕಠಿಣ ಮತ್ತು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವ ಒತ್ತಡದ ಜೀವನದ ಪರಿಣಾಮವೇ? ಅಥವಾ, ಮೋಸ ಮಾಡುವ ಗಂಡನೊಂದಿಗೆ ವಾಸಿಸಲು ಮಹಿಳೆ ಬಯಸುತ್ತಿಲ್ಲವೆ?

ಓವಿಯ ಲೋಕದಲ್ಲಿ ರೈಲು ಚಲಿಸುತ್ತಿರುವಾಗ ಒಬ್ಬ ಮಹಿಳೆ ತನ್ನ ತನ್ನ ಸಹಪಯಣಿಗರ ಬಳಿ ಕೇಳುತ್ತಾಳೆ, "ನನ್ನಣ್ಣ ಈಗ ಯಾವ ಬೋಗಿಯಲ್ಲಿದ್ದಾನೆ?" ಆತಂಕಭರಿತ ದನಿಯಲ್ಲಿ ಇನ್ನೊಬ್ಬ ಮಹಿಳೆಯನ್ನು ಕೇಳುತ್ತಾಳೆ, "ಓ, ಅಕ್ಕಾ, ನನ್ನ ಮಗ ಯಾವ ಬೋಗಿಯಲ್ಲಿದ್ದಾನೆ?" ಈ ಓವಿಯು ಆ ಮಹಿಳೆ ತನ್ನ ಅಣ್ಣ ಮತ್ತು ಮಗನೊಡನೆ ರೈಲಿನಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳುತ್ತಿದೆ. ರೈಲಿನಲ್ಲಿ ಜೊತೆಗಿದ್ದವರು ಬೇರಾದಾಗ ಹುಟ್ಟು ಗಲಿಬಿಲಿ ಈ ಪದ್ಯದಲ್ಲಿ ಧ್ವನಿಸಿದೆ.

PHOTO • Swadesha Sharma

'ಇಲ್ಲಿದೆ ನೋಡಿ, ಭಕ್ಕ, ಭಕ್ಕಾ ಹೊಗೆಯುಗುಳುತ್ತಾ ಸಾಗುವ ರೈಲು'

ಮುಂದಿನ ಕೆಲವು ದ್ವಿಪದಿಗಳು ಗಮನಾರ್ಹ ರೂಪಕಗಳನ್ನು ಹೊಂದಿವೆ. ಅವುಗಳಲ್ಲಿ ರೈಲು ಉಗುಳುತ್ತಿರುವ ಹೊಗೆಯು "ನೀಲಿ ಮತ್ತು ಕಪ್ಪು" ಬಣ್ಣದಲ್ಲಿರುವುದು. ಹಾಗೂ ರೈಲಿನ ಶಿಳ್ಳೆ "ಗರ್ಜಿಸುತ್ತಿದೆ ಮತ್ತು ಅರಚುತ್ತಿದೆ." ಈ ಸಾಲುಗಳಲ್ಲಿನ ಶಬ್ದ ಮತ್ತು ಬಣ್ಣದ ಸಮೃದ್ಧಿಯು ಮಹಿಳೆಯ ಆತಂಕವನ್ನು ಪ್ರತಿನಿಧಿಸುತ್ತವೆ. ರೈಲಿನಲ್ಲಿ ಬೇರೆಯಾದ ತನ್ನ ಪರಿಚಿತರ ಕುರಿತಾದ ಆತಂಕವು ಅವಳನ್ನು ಇನ್ನಷ್ಟು ಹೆದರಿಸುತ್ತದೆ.

ಮರಾಠಿಯಲ್ಲಿ ಪ್ರತಿಯೊಂದು ವಸ್ತುವಿಗೂ ಲಿಂಗವಿದೆ; ಕುತೂಹಲಕಾರಿ ಅಂಶವೆಂದರೆ, ರೈಲನ್ನು ಸ್ತ್ರೀ ಎಂದು ಪರಿಗಣಿಸಲಾಗುತ್ತದೆ. ಪ್ರಯಾಣದ ಸಮಯದಲ್ಲಿನ ಗೊಂದಲವನ್ನು ಮಹಿಳೆ ತನ್ನ ಸಹಚರರಿಗಾಗಿ ಹುಡುಕುವುದಕ್ಕೆ ಹೋಲಿಸುತ್ತದೆ ಈ ಓವಿ.

ಮಹಿಳೆ ಬೋರಿಬಂದರ್ (ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಅನ್ನು ರೈಲಿನ ತವರು ಮತ್ತು ಗಂಡನ ಮನೆ ಎಂದು ಕರೆಯುತ್ತಾಳೆ. ಪ್ರಯಾಣಿಕರು ಇಳಿದು ಈ ಕೊನೆಯ ನಿಲ್ದಾಣದಲ್ಲಿ ಬೋಗಿಗಳನ್ನು ಖಾಲಿ ಮಾಡಿದಾಗ ರೈಲು ಕ್ಷಣಿಕವಾಗಿ ವಿಶ್ರಾಂತಿ ಪಡೆಯುತ್ತದೆ.

ಕೆಲವೇ ಹೊತ್ತಿನಲ್ಲಿ, ಹೊಸ ಪ್ರಯಾಣಿಕರ ಗುಂಪು ಹತ್ತುತ್ತದೆ. ರೈಲು ಅವರೆಲ್ಲರನ್ನೂ ಶ್ರದ್ಧೆಯಿಂದ ಅವರವರ ಗಮ್ಯಸ್ಥಾನಗಳಿಗೆ ಕರೆದೊಯ್ಯಬೇಕು - ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ತನ್ನ ಎಲ್ಲಾ ದೈನಂದಿನ ಕೆಲಸಗಳನ್ನು ನಿರ್ವಹಿಸುವ ಮಹಿಳೆಯಂತೆಯೇ ಇದರ ನಿರಂತರ ದಿನಚರಿ.

PHOTO • Samyukta Shastri

ಲ್ಯಾವೆಂಡರ್ ಬಣ್ಣದ ಸೀರೆಯಲ್ಲಿ ರಾಧಾ ಸಕ್ಪಾಲ್. ಫ್ಲೋರಲ್ ಪ್ರಿಂಟ್ ಸೀರೆಯಲ್ಲಿರುವ ವಯಸ್ಸಾದ ಮಹಿಳೆ ಅವರ ಅತ್ತೆ. ಅವರ ಹಿಂದಿನ ಗೋಡೆಯ ಮೇಲಿನ ಎರಡು ಛಾಯಾಚಿತ್ರಗಳು ರಾಧಾಬಾಯಿಯ ದಿವಂಗತ ಪತಿ ಮತ್ತು ಅವರ ಎರಡನೇ ಹೆಂಡತಿಯದ್ದಾಗಿವೆ

ಮತ್ತೊಂದು ದ್ವಿಪದಿಯಲ್ಲಿ, ರೈಲನ್ನು ನಿರ್ಮಿಸಲು ಸಾಕಷ್ಟು ಕಬ್ಬಿಣವನ್ನು ಕರಗಿಸುವ ಅಗತ್ಯವಿದೆ ಎಂದು ಗಾಯಕರು ಉಲ್ಲೇಖಿಸುತ್ತಾರೆ. ಈ ಸಂಗತಿಯು "ಮಗಳಿಲ್ಲದ ಮಹಿಳೆಗೆ" ಆಶ್ಚರ್ಯವನ್ನುಂಟು ಮಾಡುತ್ತದೆ ಎಂದು ಅವರು ಹೇಳುತ್ತಾರೆ, ಅಂದರೆ ಮಗಳನ್ನು ಬೆಳೆಸಲು ಪಿತೃಪ್ರಭುತ್ವದ ನಿರಂತರತೆಯ ಅಗತ್ಯವಿರುತ್ತದೆ ಎಂದು ಸೂಚಿಸುತ್ತದೆ. ಮಗಳನ್ನು ಬೆಳೆಸುವುದು ಮತ್ತು ಅವಳನ್ನು ಮದುವೆ ಮಾಡಿಕೊಟ್ಟು ಒಳ್ಳೆಯ ಕಡೆ ನೆಲೆಸುವುದನ್ನು ನೋಡಲು ಪೋಷಕರ ಸಾಕಷ್ಟು ಪ್ರಯತ್ನದ ಅಗತ್ಯವಿದೆ ಮತ್ತು ಹೆಣ್ಣು ಮಕ್ಕಳಿರುವ ಯಾರಿಗಾದರೂ ಇದು ಅರ್ತವಾಗುತ್ತದೆಯೆನ್ನುತ್ತಾರೆ ಈ ಮಹಿಳೆ.

ಓವಿಯ ನಿರೂಪಣೆ ಮುಂದುವರೆದಯ ಮುಂಬೈಗೆ ವಲಸೆ ಬಂದ ಮಹಿಳೆಯ ಜೀವನವನ್ನು ವರ್ಣಿಸುತ್ತದೆ. ಕೊನೆಯ ಐದು ದ್ವಿಪದಿಗಳು ಅವಳ ಉತ್ಸಾಹ ಮತ್ತು ಆತಂಕ ಎರಡನ್ನೂ ಗುರುತಿಸುತ್ತವೆ. "ಮುಂಬೈಗೆ ಹೋಗಲು, ಮಹಿಳೆಯನ್ನು ಅಲಂಕರಿಸಲಾಗಿತ್ತು" ಎಂದು ಓವಿ ವಿವರಿಸುತ್ತದೆ. ಖಂಡಾಲಾ ಘಾಟಿನ ಗುಡ್ಡಗಾಡು ಪ್ರದೇಶದ ಮೂಲಕ ರೈಲು ಹಾದುಹೋಗುವಾಗ, ಅವಳು ತನ್ನ ಹೆತ್ತವರನ್ನು ನೆನಪಿಸಿಕೊಳ್ಳುತ್ತಾಳೆ. ರೈಲು ಮಾರ್ಗದ ನಂಬಲಾಗದ ವಿಸ್ತರಣೆಯು ಅವಳ ಹೆತ್ತವರಿಂದ ದೂರವಿರಬೇಕಾದ ಕಷ್ಟಕರ ಜೀವನವನ್ನು ಅವಳ ಮನಸ್ಸಿಗೆ ತರುತ್ತದೆ.

ಮುಂಬೈಯಲ್ಲಿದ್ದಾಗ, ಅವಳಿಗೆ ತಿನ್ನಲು ಸಿಗುವ ಮೀನು ಇಷ್ಟವಾಗುವುದಿಲ್ಲ. ಅವಳು ತನ್ನ ಹಳ್ಳಿಯಲ್ಲಿನ ತನ್ನ ಜೀವನಶೈಲಿಯನ್ನು ಮಿಸ್ ಮಾಡಿಕೊಳ್ಳುತ್ತಾಳೆ, ಅಲ್ಲಿ ಅವಳು ಚಿಲಾ (ಬಿಳಿ ಹರಿವೆ ಸೊಪ್ಪು) ತಿನ್ನುತ್ತಿದ್ದಳು. ಅವಳು ತನ್ನ ಹಳ್ಳಿಗೆ ಹಿಂದಿರುಗಿದಾಗಲೆಲ್ಲಾ, ಅದನ್ನು ಹುಡುಕುತ್ತಾ ಪರಿಚಿತ ಹೊಲಗಳಲ್ಲಿ ಅಲೆದಾಡುವುದನ್ನು ನೆನಪಿಸಿಕೊಳ್ಳುತ್ತಾಳೆ.

ಮುಂಬೈಯಲ್ಲಿ ಮಹಿಳೆಯ ಜೀವನವು ಹೇಗೆ ಬದಲಾಗುತ್ತದೆ ಎಂಬುದನ್ನು ಓವಿ ವಿವರಿಸುತ್ತದೆ. ಅವಳು ಅಲ್ಲಿ ಸಣ್ಣ ಹೋಟೆಲ್ ನಡೆಸುತ್ತಾಳೆ ಮತ್ತು ತನ್ನ ಗ್ರಾಹಕರಿಗೆ, ಕೆಲವೊಮ್ಮೆ ವಲಸೆ ಬಂದ ಗಂಡಸರಿಗೆ ಅಡುಗೆ ಮಾಡುತ್ತಾ, ಅವರಿಗೆ ಬಡಿಸುತ್ತಾ ತನ್ನ ಬದುಕನ್ನು ಕಳೆಯುತ್ತಾಳೆ. ಮೊದಲಿಗೆ, ಅವಳು ಮುಂಬೈಯ ಜೀವನ ವಿಧಾನಗಳಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಾಳೆ – ಅವಳು ಈಗ ತನ್ನ ಕೂದಲಿಗೆ ಎಣ್ಣೆಯನ್ನು ಹಚ್ಚಿ ಅದನ್ನು ಅಚ್ಚುಕಟ್ಟಾಗಿ ಬಾಚಿಕೊಳ್ಳುತ್ತಾಳೆ, ಅವಳು ಇನ್ನು ಮೊದಲಿನಂತೆ ನೆಲದ ಮೇಲೆ ಕುಳಿತುಕೊಳ್ಳುವುದಿಲ್ಲ. ಅವಳು ತನ್ನ ಕೆಲಸದಲ್ಲಿ ಎಷ್ಟು ಮಗ್ನಳಾಗುತ್ತಾಳೆ ಎಂದರೆ ಅವಳಿಗೆ ಕೂದಲಿಗೆ ಎಣ್ಣೆ ಹಚ್ಚಲು ಅಥವಾ ತಿನ್ನಲು ಸಹ ಸಮಯವಿಲ್ಲ. ಹೋಟೆಲ್ಲಿನ ಕೆಲಸದೊಂದಿಗೆ ಹೆಣಗಾಡುತ್ತಿರುವ ಅವಳು ತನ್ನ ಗಂಡನನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾಳೆ - "ಅವಳು ತನ್ನ ಗಂಡನಿಗಿಂತ ಹೆಚ್ಚಾಗಿ ತನ್ನ ಗ್ರಾಹಕರಿಗೆ ಹೆಚ್ಚು ಗಮನ ನೀಡುತ್ತಾಳೆ" ಎಂದು ಮಹಿಳೆಯರು ಬೀಸುಕಲ್ಲಿನೆದುರು ಹಾಡುತ್ತಾರೆ.  ಈ ಕೊನೆಯ ದ್ವಿಪದಿಯು ವೈವಾಹಿಕ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನ ಪತ್ರವನ್ನು ಸೂಚಿಸುತ್ತದೆ, ಇದನ್ನು ಆರಂಭದಲ್ಲಿ ಸೂಚ್ಯವಾಗಿ ಹೇಳಳಾಗಿತ್ತು.

ಭಾರತದಲ್ಲಿನ ರೈಲುಗಳ ಸಂಕ್ಷಿಪ್ತ ಇತಿಹಾಸ

ರೈಲು ಮತ್ತು ಬದುಕಿನ ಪ್ರಯಾಣದ ಕುರಿತು ಹಾಡು ಕೇಳೋಣ

ಕೇಳಿ…

बाई आगीनगाडीचा, हिचा पितळंचा गळा
पितळंचा गळा, बोरीबंदर बाई, भाईखळा

बाई आगीनगाडीला हिची पितळीची पट्टी
पितळंची बाई पट्टी, नार मागती बाई सोडचिठ्ठी

बाई आगीनगाडीचा धूर, निघतो बाई भकभका
धूर निघतो भकभका, कंच्या डब्यात बाई माझा सखा

अशी आगीनगाडी हिचं बोरीबंदर बाई माहेयरु
बाई आता नं माझं बाळ, तिकीट काढून तयायरु

बाई आगीनगाडीचं, बोरीबंदर बाई सासयरु
बाई आता ना माझं बाळ,  तिकीट काढून हुशायरु

आगीनगाडी बाईला बहु लोखंड बाई आटयिलं
बाई जिला नाही लेक, तिला नवल बाई वाटयिलं

बाई आगीनगाडी कशी करती बाई आउबाउ
आता माझं बाळ, कंच्या डब्यात बाई माझा भाऊ

बाई आगीनगाडीचा धूर निघतो बाई काळा निळा
आत्ता ना बाई माझं बाळ, कंच्या डब्यात माझं बाळ

बाई ममईला जाया नार मोठी नटयली
खंडाळ्याच्या बाई घाटामधी बाबाबये आठवली

नार ममईला गेली नार, खाईना बाई म्हावयिरं
बाई चिलाच्या भाजीयिला, नार हिंडती बाई वावयिरं

नार ममईला गेली नार करिती बाई तेल-फणी
बाई नवऱ्यापरास खानावळी ना बाई तिचा धनी

नार ममईला गेली नार बसंना बाई भोईला
बाई खोबऱ्याचं तेल, तिच्या मिळंना बाई डोईला

नार ममईला गेली नार खाईना बाई चपायती
असं नवऱ्यापरास खाणावळ्याला बाई जपयती

ರೈಲಿನ ಎಂಜಿನ್ ಹಿತ್ತಾಳೆ ಚಿಮಣಿಯನ್ನು ಹೊಂದಿದೆ
ರೈಲು ಬೈಕುಲ್ಲಾದ ಬೋರಿಬಂದರಿನಿಂದ ಬರುತ್ತದೆ

ರೈಲು ತನ್ನ ಬದಿಯಲ್ಲಿ ಹಿತ್ತಾಳೆ ಪಟ್ಟಿಯನ್ನು ಹೊಂದಿದೆ
ಮಹಿಳೆ ತನ್ನ ಗಂಡನ ಬಳಿ ವಿಚ್ಛೇದನ ಕೇಳುತ್ತಿದ್ದಾಳೆ

ಭುಸ ಭುಸನೆ ಹೊಗೆಯುಗುಳುವ ರೈಲು ಇಲ್ಲಿದೆ!
ಓ ಅಣ್ಣಾ ನನ್ನ ಸಹಚರರ ಬಳಗ ಯಾವ ಬೋಗಿಯಲ್ಲಿದೆ?

ಬೋರಿಬಂದರು ರೈಲಿನ ತವರುಮನೆ
ನನ್ನ ಮಗ ಹೊರಟಿದ್ದಾನೆ ಟಿಕೇಟು ಖರೀಸಿ

ಬೋರಿಬಂದರು ರೈಲಿನ ಗಂಡನ ಮನೆ
ನನ್ನ ಹೊರಟಿದ್ದಾನೆ ಟಿಕೇಟು ಹಿಡಿದು ಕೈಯಲ್ಲಿ

ಸಾಕಷ್ಟ ಕಬ್ಬಿಣ ಕರಗಿಸಲಾಗಿದೆ ಈ ರೈಲು ಮಾಡಲು
ಹೆಣ್ಣು ಇಲ್ಲದವರಿಗೆ ಇದು ನಂಬಲಾಗದ ವಿಷಯ

ಓ, ಅಕ್ಕಾ, ರೈಲು ಘರ್ಜಿಸುತ್ತಾ ಕೂಗುತ್ತಿದೆ
ಈಗ ನನ್ನಣ್ಣನಿರುವ ಯಾವ ಬೋಗಿಯಲ್ಲಿ?

ಓ ಅಲ್ಲಿ ನೋಡಿ, ಕಪ್ಪು ಮತ್ತು ನೀಲಿ ಹೊಗೆಯುಗುಳುತ್ತಾ ಸಾಗಿದೆ ರೈಲು
ಓ, ಅಕ್ಕಾ, ಯಾವ ಬೋಗಿಯಲ್ಲಿದ್ದಾನೆ ನನ್ನ ಮಗ?

ಮುಂಬಯಿ ಹೋಗುವವಳೆಂದು ಅಲಂಕರಿಸಲಾಗಿದೆ
ಖಂಡಾಲ ಘಾಟಿನಲ್ಲಿ ತನ್ನ ತವರು ನೆನೆದಳು ಅವಳು

ಮುಂಬಯಿಗೆ ಹೋಗುವಳವಳು, ಮೀನು ತಿನ್ನುವವಳಲ್ಲ
ಗದ್ದೆಯಲ್ಲಿ ಹುಡುಕುತ್ತಿದ್ದ ಹರಿವೆ ನೆನಪು ಕಾಡುವುದು ಅವಳಿಗೆ

ಮುಂಬಯಿಗೆ ಹೋಗುತ್ತಾಳವಳು, ತಲೆಗೆ ಎಣ್ಣೆ ಹಚ್ಚಿ ಬಾಚುತ್ತಾಳವಳು
ತನ್ನ ಗಂಡನ ನಿರ್ಲಕ್ಷ್ಯ ಮಾಡಿ, ಗ್ರಾಹಕರ ಹೆಚ್ಚು ನೋಡುತ್ತಾಳವಳು

ಮುಂಬಯಿಗೆ ಹೋಗುತ್ತಾಳವಳು, ನೆಲದ ಮೇಲೆ ಕೂರುವುದಿಲ್ಲ ಅವಳು
ಹೆಣ್ಣೇ, ಅವಳಿಗೀಗ ಸಮಯವಿಲ್ಲ ತೆಂಗಿನೆಣ್ಣೆ ಹಚ್ಚಲು ತಲೆಗೆ

ಮುಂಬಯಿಗೆ ಹೋಗುತ್ತಾಳವಳು, ಚಪಾತಿ ತಿನ್ನಲು ಸಮಯವಿಲ್ಲ ಅವಳಿಗೆ
ತನ್ನ ಹೋಟೆಲ್ಲಿನ ಗಿರಾಕಿಗಳ ನಡುವೆ, ಗಂಡನ ನೆನಪಿಲ್ಲ ಅವಳಿಗೆ

PHOTO • Samyukta Shastri

ಪ್ರದರ್ಶಕರು/ ಗಾಯಕರು : ರಾಧಾಬಾಯಿ ಸಕ್ಪಾಲ್, ರಾಧಾ ಉಬೆ

ಗ್ರಾಮ : ಕೊಲಾವಾಡೆ

ಹ್ಯಾಮ್ಲೆಟ್ : ಖಡಕ್ವಾಡಿ

ತಾಲ್ಲೂಕು : ಮುಲ್ಶಿ

ಜಿಲ್ಲೆ : ಪುಣೆ

ಜಾತಿ : ಮರಾಠ

ದಿನಾಂಕ : ಈ ಹಾಡುಗಳು ಮತ್ತು ಕೆಲವು ಮಾಹಿತಿಯನ್ನು ಜನವರಿ 6, 1996ರಂದು ರೆಕಾರ್ಡ್ ಮಾಡಲಾಗಿದೆ. ಗಾಯಕರ ಛಾಯಾಚಿತ್ರಗಳನ್ನು ಏಪ್ರಿಲ್ 30, 2017ರಂದು ತೆಗೆದುಕೊಳ್ಳಲಾಗಿದೆ; ಆ ಸಮಯದಲ್ಲಿ, ರಾಧಾ ಉಬೆಯನ್ನು ಪತ್ತೆಹಚ್ಚಲು ನಮಗೆ ಸಾಧ್ಯವಾಗಲಿಲ್ಲ.

ಪೋಸ್ಟರ್: ಊರ್ಜಾ

ಹೇಮಾ ರಾಯ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಓದಿ .

ಅನುವಾದ: ಶಂಕರ ಎನ್‌. ಕೆಂಚನೂರು

ಬರಹಗಾರ್ತಿಯೂ, ಅನುವಾದಕರೂ ಆದ ನಮಿತ ವಾಯ್ಕರ್ ‘ಪರಿ’ಯ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ದ ಲಾಂಗ್ ಮಾರ್ಚ್’ ಎಂಬ ಇವರ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿದೆ.

Other stories by Namita Waikar
PARI GSP Team

ʼಪರಿʼ ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್ ತಂಡ: ಆಶಾ ಒಗಲೆ (ಅನುವಾದ); ಬರ್ನಾರ್ಡ್ ಬೆಲ್ (ಡಿಜಿಟಲೀಕರಣ, ಡೇಟಾಬೇಸ್ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆ); ಜಿತೇಂದ್ರ ಮೇಡ್ (ಪ್ರತಿಲೇಖನ, ಅನುವಾದ ಸಹಾಯ); ನಮಿತಾ ವಾಯ್ಕರ್ (ಪ್ರಾಜೆಕ್ಟ್ ಲೀಡ್ ಮತ್ತು ಕ್ಯುರೇಶನ್); ರಜನಿ ಖಲಡ್ಕರ್ (ಡೇಟಾ ಎಂಟ್ರಿ).

Other stories by PARI GSP Team
Illustrations : Swadesha Sharma

ಸ್ವದೇಶ ಶರ್ಮಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಂಶೋಧಕ ಮತ್ತು ವಿಷಯ ಸಂಪಾದಕರಾಗಿದ್ದಾರೆ. ಪರಿ ಗ್ರಂಥಾಲಯಕ್ಕಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಾರೆ.

Other stories by Swadesha Sharma
Editor : Dipanjali Singh

ದೀಪಾಂಜಲಿ ಸಿಂಗ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಅವರು ಪರಿ ಲೈಬ್ರರಿಗಾಗಿ ದಾಖಲೆಗಳನ್ನು ಸಂಶೋಧಿಸುತ್ತಾರೆ ಮತ್ತು ಸಂಗ್ರಹಿಸುತ್ತಾರೆ.

Other stories by Dipanjali Singh
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru