ಏಪ್ರಿಲ್ ಮಧ್ಯದಲ್ಲಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಲಾಗುವುದೆಂದು ಖಚಿತವಾದಾಗ ಗೋಪಾಲ್ ಗುಪ್ತಾ ಒಂದು ವರ್ಷದಲ್ಲಿ ಎರಡನೇ ಬಾರಿಗೆ ಮುಂಬೈಯನ್ನು ತೊರೆಯಲು ನಿರ್ಧರಿಸಿದ್ದರು.

ಆದರೆ, ಮಾರ್ಚ್ ಅಂತ್ಯದಲ್ಲಿ, ಅವರ ಕುಟುಂಬವು ಅವರ ಚಿತಾಭಸ್ಮವಿದ್ದ ಸಣ್ಣ ಕೆಂಪು ಮಣ್ಣಿನ ಮಡಕೆಯೊಂದಿಗೆ ರೈಲನ್ನು ಹತ್ತಿದರು, ಅದನ್ನು ಉತ್ತರ ಪ್ರದೇಶದ ತಮ್ಮ ಗ್ರಾಮವಾದ ಕುಸೌರಾ ತಾಲೂಕು ಸಹತ್ವಾರ್‌ಗೆ ತೆಗೆದುಕೊಂಡುಗೋಗುವುದು ಅವರ ಉದ್ದೇಶವಾಗಿತ್ತು.

"ನನ್ನ ತಂದೆಯ ಸಾವಿಗೆ ನಾನು ಕರೋನಾವನ್ನು ಮಾತ್ರ ದೂಷಿಸಬಹುದೆಂದು ಭಾವಿಸುವುದಿಲ್ಲ... ಅವರು ಬದುಕಿದ್ದರೂ ಸಹ, ಒಂದು ಕಾಲಿಲ್ಲದೇ ಇರುತ್ತಿದ್ದರು" ಎಂದು ಗೋಪಾಲ್ ಅವರ 21 ವರ್ಷದ ಮಗಳು ಜ್ಯೋತಿ ಹೇಳುತ್ತಾರೆ.

ಕಲ್ಯಾಣ್‌ನಲ್ಲಿ ತರಕಾರಿ ಮಾರಾಟಗಾರರಾಗಿರುವ 56 ವರ್ಷದ ಗೋಪಾಲ್‌ಗೆ ಮಾರ್ಚ್‌ ಮೊದಲ ವಾರದಲ್ಲಿ ಸ್ವಲ್ಪ ಕೆಮ್ಮು-ನೆಗಡಿ ಕಾಣಿಸಿಕೊಂಡಾಗ, ಪಲವಾನಿ ಪ್ರದೇಶದ ಬಸ್ತಿಯಲ್ಲಿದ್ದ ಚಿಕಿತ್ಸಾಲಯದಿಂದ ಕೆಲವು ಔಷಧಿಗಳನ್ನು ಪಡೆದ ನಂತರ ಆರೋಗ್ಯವು ಸುಧಾರಿಸಿತ್ತು. ಈ ಪ್ರದೇಶದಲ್ಲಿ ಅವರ ಕುಟುಂಬವು ಎರಡು ಬಾಡಿಗೆ ಕೋಣೆಗಳ ವಿಭಾಗವೊಂದರಲ್ಲಿ ವಾಸವಾಗಿತ್ತು.

ಅವರು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಬನ್ಸ್ದಿಹ್ ತಾಲ್ಲೂಕಿನ ತಮ್ಮ ಗ್ರಾಮದಿಂದ ಜನವರಿಯಲ್ಲಿ ಹಿಂದಿರುಗಿ ಕೇವಲ ಎರಡು ತಿಂಗಳಾಗಿತ್ತು. ಆದರೆ ಕೆಲಸ ಪ್ರಾರಂಭವಾಗುತ್ತಿದ್ದಂತೆ, ಎರಡನೇ ಕೋವಿಡ್ ಉಲ್ಬಣಗೊಳ್ಳತೊಡಗಿತು. "ನನ್ನ ತಂದೆ ಕಳೆದ ವರ್ಷದಂತೆ ಮತ್ತೆ ಕಾದು ನೋಡುವ ಅಪಾಯವನ್ನು ಬಯಸಲಿಲ್ಲ" ಎಂದರು ಜ್ಯೋತಿ. ಆದ್ದರಿಂದ ಕುಟುಂಬವು ಮತ್ತೆ ತಮ್ಮ ಹಳ್ಳಿಗೆ ಹೋಗಲು ತಯಾರಿ ನಡೆಸಿತು.

ಆದರೆ ಮಾರ್ಚ್ 10ರಂದು ಮುಂಜಾನೆ 5 ಗಂಟೆ ಸುಮಾರಿಗೆ ಗೋಪಾಲ್ ಅವರಿಗೆ ಉಸಿರುಗಟ್ಟಲು ಶುರುವಾಯಿತು. ಸ್ಥಳೀಯ ಚಿಕಿತ್ಸಾಲಯಕ್ಕೆ ಕರೆದೊಯ್ದಾಗ, ಅವರು ಕೋವಿಡ್-ಪಾಸಿಟಿವ್ ಎಂಬುದಾಗಿ ತಿಳಿದು ಬಂದಿತು. ಕುಟುಂಬವು ಅವರನ್ನು ತ್ವರಿತವಾಗಿ ಕೆಡಿಎಂಸಿ (ಕಲ್ಯಾಣ್ ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಗಷನ್) ಮೈದಾನಕ್ಕೆ ಕರೆದೊಯ್ದಿತು, ಅದನ್ನು 'ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ (ಕೋವಿಡ್‌ಗೆ ಮೀಸಲಿರಿಸಿದ ಆರೋಗ್ಯ ಕೇಂದ್ರ)' ಆಗಿ ಪರಿವರ್ತಿಸಲಾಗಿತ್ತು. (ಕಲ್ಯಾಣ್‌ ಮತ್ತು ಡೊಂಬಿವಲಿ ಮುಂಬೈ ಮಹಾನಗರ ಪ್ರದೇಶದ ನಗರಗಳು). ಆದರೆ ಅವರ ಸ್ಥಿತಿ ಹದಗೆಟ್ಟಿತು. ಆರೋಗ್ಯ ಕೇಂದ್ರದ ಸಿಬ್ಬಂದಿಯು ಉತ್ತಮ ಸುಸಜ್ಜಿತ ಸೌಲಭ್ಯಕ್ಕೆ ಅವರನ್ನು ಸ್ಥಳಾಂತರಿಸುವಂತೆ ಗೋಪಾಲ್‌ ಅವರ ಕುಟುಂಬಕ್ಕೆ ತಿಳಿಸಿದರು. ಅಂದು ಮಧ್ಯಾಹ್ನ ಅವರನ್ನು ಕಲ್ಯಾಣ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

"ಎಲ್ಲಿಗೆ ಹೋಗಬೇಕೆಂದು ನಮಗೆ ನಿಜವಾಗಿಯೂ ತಿಳಿದಿರಲಿಲ್ಲ. ನಮಗೆ ಯೋಚಿಸಲು ಸ್ವಲ್ಪವೂ ಸಮಯವಿರಲಿಲ್ಲ. ನನ್ನ ತಂದೆಯ ಹದಗೆಡುತ್ತಿದ್ದ ಆರೋಗ್ಯ ಮತ್ತು ಸಹೋದರನ ಪರಿಸ್ಥಿತಿಯಿಂದ ಭಯಭೀತರಾಗಿದ್ದೆವು,” ಎಂದು ಜ್ಯೋತಿ ವಿವರಿಸಿದರು. ಅವರ ಸಹೋದರ, 26ರ ವಿವೇಕ್ ಸಹ ಕೋವಿಡ್‌ ಪಾಸಿಟಿವ್‌ ಎಂಬುದಾಗಿ ತಿಳಿದುಬಂದಿದ್ದು, ಹತ್ತಿರದ ಭಿವಂಡಿಯ ಕೇಂದ್ರದಲ್ಲಿ 12 ದಿನಗಳ ಕಾಲ ಇತರರೊಂದಿಗೆ ಸಂಪರ್ಕರಹಿತವಾಗಿ ಇರುವಂತೆ ಅವರಿಗೆ ತಿಳಿಸಲಾಗಿತ್ತು.

Jyoti (with Gopal and Shashikala): 'We had little time to think and were scared with my father's condition getting bad'
PHOTO • Courtesy: Gupta family
Jyoti (with Gopal and Shashikala): 'We had little time to think and were scared with my father's condition getting bad'
PHOTO • Courtesy: Gupta family

ಜ್ಯೋತಿ (ಗೋಪಾಲ್ ಮತ್ತು ಶಶಿಕಲಾ ಜೊತೆ): ' ನಮಗೆ ಯೋಚಿಸಲು ಹೆಚ್ಚು ಸಮಯವಿ ರಲಿಲ್ಲ. ನನ್ನ ತಂದೆಯ ಸ್ಥಿತಿ ಹದಗೆಡುತ್ತಿ ದ್ದ ಕಾರಣ, ಹೆದ ರಿ ದ್ದೆವು'

ಖಾಸಗಿ ಆಸ್ಪತ್ರೆ ತಲುಪಿದ ಬಳಿಕ ಕುಟುಂಬಕ್ಕೆ ರೂ. 50,000 ನಗದನ್ನು ಮುಂಗಡವಾಗಿ ಪಾವತಿಸಲು ತಿಳಿಸಲಾಯಿತು. ಗೋಪಾಲ್ ಅವರನ್ನು ತೀವ್ರ ನಿಗಾ ಘಟಕಕ್ಕೆ ಕರೆದೊಯ್ದರು. ಹೆಚ್ಚಿನ ಬೆಲೆಯ ಔಷಧಿಗಳನ್ನು ಪಡೆಯಲು ಕುಟುಂಬವು ಆಸ್ಪತ್ರೆಯ ಅಂಗಡಿಗೆ ದೌಡಾಯಿಸಿತು. "ನಾವು ನಮ್ಮಲ್ಲಿರುವ ಸ್ವಲ್ಪ ಉಳಿತಾಯವನ್ನು ಬಳಸಲು ಪ್ರಾರಂಭಿಸಿದೆವು. ಪ್ರತಿದಿನ ನಾವು ಪಾವತಿಸಬೇಕಾದ ಹೊಸ ಬಿಲ್ ಪಡೆಯುತ್ತಿದ್ದಂತೆಯೇ, ನಮ್ಮ ಪರಿಸ್ಥಿತಿಯು ಸಹ ಹದಗೆಡತೊಡಗಿತು”ಎಂದು ಕುಟುಂಬದ ವ್ಯಾಪಾರದಲ್ಲಿ ಸಹ ತೊಡಗಿಸಿಕೊಂಡು, ಮಂಡಿಗಳಿಂದ ತರಕಾರಿಗಳನ್ನು ತರುತ್ತಿದ್ದ ಗೃಹಿಣಿ, ಗೋಪಾಲ್ ಅವರ ಪತ್ನಿ ಶಶಿಕಲಾ ಹೇಳುತ್ತಾರೆ.

ಗೋಪಾಲ್ ಮತ್ತು ಅವರ ಮಗ ವಿವೇಕ್ ಇಬ್ಬರೂ ತರಕಾರಿಗಳನ್ನು ಮಾರಾಟ ಮಾಡಿದರು, ಕಳೆದ ವರ್ಷ ಲಾಕ್‌ಡೌನ್‌ಗೆ ಮೊದಲು ಇಬ್ಬರೂ ಸೇರಿ ದಿನಕ್ಕೆ 300-700 ರೂ.ಗಳನ್ನು ಗಳಿಸಿದ್ದರು. ಇದು ಅವರ ಆರು ಜನರ ಕುಟುಂಬದ ಖರ್ಚನ್ನು ನಿಭಾಯಿಸಿದೆ. ಅವರು ಟೆಲಿ ಸಮುದಾಯಕ್ಕೆ [OBC (ಇತರೆ ಹಿಂದುಳಿದ ಜನಾಂಗ)] ಸೇರಿದವರು. 2013-14ರಲ್ಲಿ ಪದವಿ ಮುಗಿಸಿದ ವಿವೇಕ್, ನವಿ ಮುಂಬೈನ ಸಣ್ಣ ಮಾಲ್‌ನಲ್ಲಿ ಕ್ಯಾಷಿಯರ್ನ ಉದ್ಯೋಗವೊಂದನ್ನು ಕಂಡುಕೊಂಡಿದ್ದು, ತಿಂಗಳಿಗೆ 12,000 ರೂ.ಗಳನ್ನು ಗಳಿಸುತ್ತಿದ್ದನು. ಆದರೆ ಮಾಲ್ ಮುಚ್ಚಿದಾಗ, ಆತನು ಸಹ ತನ್ನ ತಂದೆಯೊಂದಿಗೆ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದನು.

12ನೇ ತರಗತಿಯನ್ನು ಪ್ರಾರಂಭಿಸಬೇಕಿದ್ದ ಗೋಪಾಲ್ ಮತ್ತು ಶಶಿಕಲಾ ಅವರ ಕಿರಿಯ ಮಗ 19 ವರ್ಷದ ದೀಪಕ್, 2020ರ ಲಾಕ್‌ಡೌನ್ ಸಮಯದಲ್ಲಿ ತನ್ನ ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಜ್ಯೋತಿ ಅವರು ತಮ್ಮ ಮೂರನೇ ವರ್ಷದ ಬಿ.ಕಾಮ್ ಕೋರ್ಸ್ ಶುಲ್ಕವನ್ನು ನಿಭಾಯಿಸಿದ್ದಲ್ಲದೆ ಸರ್ಕಾರೇತರ ಸಂಸ್ಥೆ ಮತ್ತು ಸ್ನೇಹಿತರ ಸಹಾಯದಿಂದ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ಆಕೆಯ ಸಹೋದರಿ, 22 ವರ್ಷದ ಖುಷ್ಬೂ, ಕುಟುಂಬದಲ್ಲಿನ ಹಿಂದಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ 9ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಶಾಲೆಯನ್ನು ತೊರೆದಿದ್ದರು. "ನನ್ನ ತಂದೆ ಇದನ್ನು ಎಂದಿಗೂ ಬಯಸಲಿಲ್ಲ ಆದರೆ ನಮಗೆ ಯಾವುದೇ ಆಯ್ಕೆ ಇರಲಿಲ್ಲ..." ಎಂದರು ಜ್ಯೋತಿ. ಆಕೆಯ ಇತರ ಇಬ್ಬರು ಸಹೋದರಿಯರು ಮದುವೆಯಾಗಿ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಕಳೆದ ವರ್ಷ, ಜೂನ್ ವೇಳೆಗೆ, ಅವರು ತಮ್ಮ ಹಳ್ಳಿಗೆ ಹೊರಟು, ದಾದಾಜಿಯ ಸಣ್ಣ ಮನೆಯಲ್ಲಿ ಉಳಿದರು. ನವೆಂಬರ್‌ನಲ್ಲಿ, ಜ್ಯೋತಿಗೆ ತನ್ನ ಐದನೇ ಸೆಮಿಸ್ಟರ್ ಪರೀಕ್ಷೆಗಳಿದ್ದ ಕಾರಣ, ವಿವೇಕ್‌ನೊಂದಿಗೆ ಮುಂಬೈಗೆ ಮರಳಿದಳು. ಆತನು ತರಕಾರಿ ಮಾರಾಟವನ್ನು ಪುನರಾರಂಭಿಸಿ ದಿನಕ್ಕೆ ರೂ. 200-300 ರೂ.ಗಳ ಸಂಪಾದನೆಯನ್ನು ನಿಭಾಯಿಸತೊಡಗಿದ. ಜ್ಯೋತಿ ಅವರು ಕಲ್ಯಾಣ್‌ನಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾತ್ಕಾಲಿಕ ಉದ್ಯೋಗವನ್ನು ಕಂಡುಕೊಂಡಳು. ಮಕ್ಕಳಿಗೆ ಪೋಲಿಯೊ ಹನಿಗಳನ್ನು ನೀಡಲು ಮನೆ ಮನೆಗೆ ಹೋಗಿ, ಸಂಭವನೀಯ ಕೋವಿಡ್ -19 ತಾಪಮಾನ ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುವ ಕೆಲಸವನ್ನು ನಿರ್ವಹಿಸತೊಡಗಿದಳು. ಹೀಗೆ ಮೂರು ತಿಂಗಳ ಕಾಲ ಕೆಲಸವನ್ನು ನಿಭಾಯಿಸಿದ ಆಕೆಗೆ ಒಟ್ಟು ರೂ. 2,500ನ್ನು ಪಾವತಿಸಲಾಯಿತು.

ಜನವರಿ 2021ರಲ್ಲಿ, ಗೋಪಾಲ್ ಮತ್ತು ಕುಟುಂಬದ ಉಳಿದವರು ಮುಂಬೈಗೆ ಮರಳಿದರು - ಗ್ರಾಮದಲ್ಲಿ ಯಾವುದೇ ಕೆಲಸವಿರಲಿಲ್ಲ ಮತ್ತು ಅವರ ಉಳಿತಾಯವು ಬರಿದಾಗುತ್ತಿತ್ತು. ಕಳೆದ ವರ್ಷ, ಅವರ ಕುಟುಂಬವು ಸರ್ಕಾರೇತರ ಸಂಸ್ಥೆಯೊಂದರಿಂದ ಪಡಿತರ ಪರಿಹಾರವನ್ನು ಪಡೆಯಿತು. ಆದರೆ ಮನೆ ಬಾಡಿಗೆ ರೂ. 3,000 ಮತ್ತು ವಿದ್ಯುತ್ ಮತ್ತು ಇತರ ಬಿಲ್‌ಗಳು ಬಾಕಿಯಿದ್ದು, ಇದಕ್ಕಾಗಿಯೂ ಅವರು ಉಳಿತಾಯವನ್ನು ಬಳಸುತ್ತಿದ್ದರು.

With their savings draining out even last year, Jyoti found a temporary job going door-to-door giving polio drops to children and doing Covid checks
PHOTO • Courtesy: Gupta family
With their savings draining out even last year, Jyoti found a temporary job going door-to-door giving polio drops to children and doing Covid checks
PHOTO • Courtesy: Gupta family

ಕಳೆದ ವರ್ಷವೂ ಅವರ ಉಳಿತಾಯವು ಖಾಲಿಯಾಗುತ್ತಿದ್ದ ಕಾರಣ, ಜ್ಯೋತಿಯು ಮನೆ ಮನೆಗೆ ಹೋಗಿ ಮಕ್ಕಳಿಗೆ ಪೋಲಿಯೊ ಹನಿಗಳನ್ನು ನೀಡುವ ಮತ್ತು ಕೋವಿಡ್ ತಪಾಸಣೆ ಮಾಡುವ ತಾತ್ಕಾಲಿಕ ಕೆಲಸವೊಂದನ್ನು ಕಂಡುಕೊಂಡರು

ನಂತರ ಮಾರ್ಚ್‌ನಲ್ಲಿ, ಖಾಸಗಿ ಆಸ್ಪತ್ರೆಯಲ್ಲಿ ಗೋಪಾಲ್ ಅವರ 10 ದಿನಗಳ ವಾಸ್ತವ್ಯದೊಂದಿಗೆ, ಸುಮಾರು 221,850 ರೂ.ಗಳ ಆಸ್ಪತ್ರೆಯ ಬಿಲ್‌ ಹಾಗೂ 158,000 ರೂ.ಗಳ ಔಷಧಿಯ ವೆಚ್ಚವನ್ನು ಒಳಗೊಂಡಂತೆ ಚಿಕಿತ್ಸೆಯ ಶುಲ್ಕವು ನಂಬಲಾಗದಷ್ಟು ತೀವ್ರ ಏರಿಕೆಯನ್ನು ಕಂಡಿತು. (ಈ ವರದಿಗಾರನು ಎಲ್ಲಾ ಬಿಲ್‌ಗಳನ್ನು ನೋಡಿದ್ದಾನೆ.). ನಂತರ CT-ಸ್ಕ್ಯಾನ್ಗಳು, ಪ್ಲಾಸ್ಮಾ ಇನ್ಫ್ಯೂಷನ್, ಲ್ಯಾಬ್ ಪರೀಕ್ಷೆಗಳು, ಆಂಬ್ಯುಲೆನ್ಸ್ ವೆಚ್ಚ ಇವೆಲ್ಲವೂ ಸೇರಿ ಒಟ್ಟಾರೆ ಸುಮಾರು 90,000 ರೂ.ಗಳಷ್ಟು ಖರ್ಚಾಯಿತು.

ಕಳೆದ ವರ್ಷದ ಲಾಕ್‌ಡೌನ್‌ನ ನಂತರ ಈಗಾಗಲೇ ಹೆಣಗಾಡುತ್ತಿರುವ ತರಕಾರಿ ಮಾರಾಟಗಾರರ ಕುಟುಂಬವು ಗೋಪಾಲ್ ಅವರ ಚಿಕಿತ್ಸೆಗೆ ಸುಮಾರು 5 ಲಕ್ಷ ರೂ.ಗಳನ್ನು ಖರ್ಚುಮಾಡಿತು.

ಮೇ 2020ರಲ್ಲಿ, ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ಮಹಾತ್ಮಾ ಜ್ಯೋತಿರಾವ್ ಫುಲೆ ಜನ್ ಆರೋಗ್ಯ ಯೋಜನೆಯ (MJP-JAY) ಅನುಸಾರ, ರಾಜ್ಯದ ಎಲ್ಲಾ ಕೋವಿಡ್ -19 ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಘೋಷಿಸಿದ್ದಾರೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಕಲ್ಯಾಣ್ ಪ್ರದೇಶದ ವ್ಯಾಪ್ತಿಯು ಈ ಯೋಜನೆಯಡಿಯಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು (ಮತ್ತು ಒಂದು ಸರ್ಕಾರಿ ಆಸ್ಪತ್ರೆ) ಹೊಂದಿದೆ. "ನಮಗೆ ತಿಳಿದಿದ್ದರೆ, ನಾವು ಬೇರೆ ಯಾವುದೇ ಆಸ್ಪತ್ರೆಗೇಕೆ ಹೋಗುತ್ತಿದ್ದೆವು? ನಮ್ಮಲ್ಲಿ ಯಾರಿಗೂ ಇದರ ಬಗ್ಗೆ ತಿಳಿದಿರಲಿಲ್ಲ” ಎಂದರು ಜ್ಯೋತಿ.

ಮೇ 2020ರಲ್ಲಿ, ಮಹಾರಾಷ್ಟ್ರ ಸರ್ಕಾರವು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆಯ ಶುಲ್ಕವನ್ನು ತೀವ್ರ ನಿಗಾ ಘಟಕದ (ICU) ಹಾಸಿಗೆಗೆ (ಬೆಡ್‌ಗೆ) ದಿನಕ್ಕೆ 7,500 ರೂ. ಮತ್ತು ವೆಂಟಿಲೇಟರ್ ಹೊಂದಿರುವ ಒಬ್ಬರಿಗೆ 9,000 ರೂ.ಗಳಿಗೆ ಮಿತಿಗೊಳಿಸಿತು.

MJP-JAY ಯೋಜನೆ ಮತ್ತು ಸಬ್ಸಿಡಿ ದರಗಳ ಕುರಿತು ಮಾತನಾಡುತ್ತಾ, ಕಲ್ಯಾಣ್-ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಆಯುಕ್ತ ವಿಜಯ್ ಸೂರ್ಯವಂಶಿ ನನಗೆ ಹೀಗೆ ಹೇಳಿದರು: “ಯೋಜನೆಯಡಿ ನೋಂದಣಿಗಾಗಿ ಅನುಸರಿಸಬೇಕಾದ ಕೆಲವು ಷರತ್ತುಗಳಿವೆ ಮತ್ತು ಕಳೆದ ವರ್ಷ ನಾವು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನೋಂದಾಯಿಸಲು ಮನವಿ ಮಾಡಿದ್ದೇವೆ [ಕೆಡಿಎಂಸಿಯ ಅಧಿಕಾರ ವ್ಯಾಪ್ತಿಯಲ್ಲಿ]. ಆದರೆ ಅವರಲ್ಲಿ ಕೆಲವರು ಈ ಯೋಜನೆಯನುಸಾರ ಪೂರೈಸಬೇಕಾದ ಆ ಷರತ್ತುಗಳನ್ನು ಪೂರೈಸದಿರಬಹುದು. ಮತ್ತು ಸಬ್ಸಿಡಿ ದರವು [ಖಾಸಗಿ ಆಸ್ಪತ್ರೆಗಳಿಗೆ] ಈಗಲೂ ಕಡಿಮೆ-ಆದಾಯದ ಗುಂಪುಗಳಿಗೆ ಹೆಚ್ಚು ಸಹಾಯ ಮಾಡುತ್ತಿಲ್ಲ.”

ಅಂತಹ ಯೋಜನೆಗಳ ಕುರಿತು ತಿಳಿಸುವ ಇಂಡಿಯಾ ಎಕ್ಸ್‌ಕ್ಲೂಷನ್ ರಿಪೋರ್ಟ್ನ 2019-2020ರ ಟಿಪ್ಪಣಿಗಳು ಹೀಗಿವೆ: “ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PM-JAY)ಯಂತಹವುಗಳ ಉಪಸ್ಥಿತಿಯ ಹೊರತಾಗಿಯೂ, ಆರೋಗ್ಯದ ರಕ್ಷಣೆಯ ನಿಟ್ಟಿನ ಬಡವರ ವೆಚ್ಚವು ಕಡಿಮೆಯಾಗಿರುವುದು ಗೋಚರವಾಗಿಲ್ಲ.” ನವದೆಹಲಿಯ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ನ ವರದಿಯು ಸಹ ಹೀಗೆ ಹೇಳುತ್ತದೆ: "...ಸಾರ್ವಜನಿಕ ಆರೋಗ್ಯ ಸೇವೆಯನ್ನು ಒದಗಿಸುವ ಕೇಂದ್ರಗಳ ದೊಡ್ಡ ಜಾಲದ ಅನುಪಸ್ಥಿತಿ ಮತ್ತು ದುಬಾರಿ ಖಾಸಗಿ ಆಸ್ಪತ್ರೆಗಳ ಉಪಸ್ಥಿತಿಯು... ಬಡವರಿಗೆ ಬೇರೆ ಯಾವುದೇ ಆಯ್ಕೆಯಿಲ್ಲವೆಂದು ಖಚಿತಪಡಿಸುತ್ತದೆ."

ಕೆಡಿಎಂಸಿ, ಸಾರ್ವಜನಿಕ ಆರೋಗ್ಯ ಸೇವೆಗಾಗಿ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ ಮತ್ತು ಕಳೆದ ವರ್ಷದ ಕೇವಲ ಎರಡು ಸಾರ್ವಜನಿಕ ಆಸ್ಪತ್ರೆಗಳಿಂದ ಈಗ ಆರು ಕೇಂದ್ರಗಳಿಗೆ ಆ ಸೌಲಭ್ಯವು ಏರಿಕೆಯಾಗಿದೆ ಎಂದು ಸೂರ್ಯವಂಶಿ ಹೇಳುತ್ತಾರೆ. "ನಾವು ಹೆಚ್ಚು ICU ಹಾಸಿಗೆಗಳು, ವೆಂಟಿಲೇಟರ್‌ಗಳು ಮತ್ತು O2 ಹಾಸಿಗೆಗಳನ್ನು ಪಡೆಯುತ್ತಿದ್ದೇವೆ" ಎಂದು ಸಹ ಅವರು ಹೇಳಿದರು.

At KEM, Jyoti stayed in the hospital (near the ICU unit in the photo), while her siblings were in Kalyan looking after their mother
PHOTO • Aakanksha

ಕೆಇಎಮ್‌ ನಲ್ಲಿ , ಜ್ಯೋತಿ ಆಸ್ಪತ್ರೆಯಲ್ಲಿ ಉಳಿದುಕೊಂಡ ರು (ಫೋಟೋದಲ್ಲಿ ICU ಘಟಕದ ಬಳಿ) , ಅವರ ಒಡಹುಟ್ಟಿದವರು ಕಲ್ಯಾಣ್‌ನಲ್ಲಿ ತಮ್ಮ ತಾಯಿಯನ್ನು ನೋಡಿಕೊಳ್ಳುತ್ತಿದ್ದರು

ಕೆಡಿಎಂಸಿ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳು ಅಧಿಕ ಶುಲ್ಕ ವಸೂಲಿ ಮಾಡುವುದನ್ನು ಲೆಕ್ಕ ಪರಿಶೋಧಕರ ತಂಡವು ಪರಿಶೀಲಿಸುತ್ತದೆ ಎಂದು ಸಹ ಅವರು ತಿಳಿಸಿದರು. ಆದರೆ, “ಕೆಲವು ಖಾಸಗಿ ಆಸ್ಪತ್ರೆಗಳು ವ್ಯಾಪಕವಾಗಿ ಬಳಸುತ್ತಿರುವ ಲೋಪದೋಷವಿನ್ನೂ ಇದೆ. ಸರ್ಕಾರದ ದರಗಳು ಪ್ರತಿ ಪರೀಕ್ಷೆ ಮತ್ತು ಔಷಧಿಗಳನ್ನು ಒಳಗೊಂಡಿರುವುದಿಲ್ಲ [ಅಥವಾ CT-ಸ್ಕ್ಯಾನ್‌ಗಳಂತಹ ತಪಾಸಣೆಗಳು] ಮತ್ತು ಕೆಲವು ಆಸ್ಪತ್ರೆಗಳು ಈ ಬಿಲ್‌ಗಳನ್ನು ಹೆಚ್ಚಿಸಿವೆ. ಖಾಸಗಿ ಆಸ್ಪತ್ರೆಗಳಿಗೆ ತೆರಳಿ, ಅತ್ಯಂತ ಹೆಚ್ಚಿನ ಮೊತ್ತದ ಬಿಲ್‌ಗಳ ಪ್ರಕರಣಗಳು ಮತ್ತು ಸೂಚಿಸಿದ ಔಷಧಗಳು ಅಗತ್ಯವೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನಾವು ಕಾರ್ಯಪಡೆಯೊಂದನ್ನು ನೇಮಿಸಿದ್ದೆವು. ಇದೊಂದು ಸಂದೇಹಾಸ್ಪದ ಕ್ಷೇತ್ರ. ಪ್ರಶ್ನಿಸುವುದು ಕಷ್ಟ. ಆದರೆ ಕನಿಷ್ಠ ಪಕ್ಷ, ನಾವು ಪರಿಶೀಲಿಸಬಹುದು. ಅಂತಹ ಸಂದರ್ಭಗಳಲ್ಲಿ, ಕುಟುಂಬವು ಮರುಪಾವತಿಯನ್ನು ಪಡೆಯಬಹುದು” ಎಂದು ಅವರು ಹೇಳುತ್ತಾರೆ.

ಮಾರ್ಚ್‌ನಲ್ಲಿ, ಗೋಪಾಲ್ ಅವರ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಹೆಣಗಾಡುತ್ತಿದ್ದಾಗ, ಶಶಿಕಲಾ ಅವರು ತಮ್ಮ ಎರಡು ಜೊತೆ ಚಿನ್ನದ ಕಿವಿಯೋಲೆಗಳನ್ನು ಕಲ್ಯಾಣ್‌ನಲ್ಲಿರುವ ಅಂಗಡಿಯೊಂದಕ್ಕೆ ರೂ. 9,000ಕ್ಕೆ ಮಾರಿದರು. ತಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸಿ, ನೆರೆಹೊರೆಯವರು, ಸ್ನೇಹಿತರು ಮತ್ತು ಸಂಬಂಧಿಕರಿಂದ ಕುಟುಂಬವು ಸಾಲವನ್ನು ಪಡೆಯಿತು. “ಪ್ರತಿದಿನ ನಾವು ಒಂದಲ್ಲ ಒಂದು ಬಿಲ್ ಅನ್ನು ಪಾವತಿಸುತ್ತಿದ್ದೆವು. "ಶೀಘ್ರದಲ್ಲೇ ಅವರು [ಗೋಪಾಲ್] ನಮ್ಮೊಂದಿಗೆ ಇರಬೇಕೆಂಬ ಉದ್ದೇಶದಿಂದ,” ನಮಗೆ ಗೊತ್ತಿರುವ ಪ್ರತಿಯೊಬ್ಬರ ಬಳಿಯೂ 100-200 ರೂಪಾಯಿಗಳ ಸಹಾಯವನ್ನಾದರೂ ಮಾಡುವಂತೆ ಕೇಳಿಕೊಂಡೆವು ಎಂದು ಶಶಿಕಲಾ ಕಣ್ಣೀರು ಸುರಿಸುತ್ತ ಫೋನ್‌ನಲ್ಲಿ ಅಳಲು ತೋಡಿಕೊಂಡರು. ನಾನು ಎಲ್ಲಾ ಸಮಯದಲ್ಲೂ ಭಯದಲ್ಲಿದ್ದೆ. ವಿವೇಕ್ ಇನ್ನೂ [ಕ್ವಾರಂಟೈನ್] ಕೇಂದ್ರದಲ್ಲಿದ್ದದ್ದು, ಅವನೂ ಈ ಹಂತಕ್ಕೆ ಬರಬಾರದು ಎಂದು ನಾನು ಆಶಿಸುತ್ತಿದ್ದೆ. ನನಗೆ ಬಿಲ್‌ಗಳ ಬಗ್ಗೆ ಚಿಂತೆಯಿರಲಿಲ್ಲ. ಒಮ್ಮೆ ಎಲ್ಲರ ಪರಿಸ್ಥಿತಿಯೂ ಸುಧಾರಿಸಿದರೆ, ಹೆಚ್ಚಿನ ಶ್ರಮವಹಿಸಿ ಎಲ್ಲವನ್ನೂ ಮತ್ತೆ ರೂಪಿಸುತ್ತಿದ್ದೆವು. ಆದರೆ ಎಲ್ಲವೂ ಸ್ವಲ್ಪ ಸ್ವಲ್ಪವಾಗಿ ಕುಸಿಯುತ್ತಿತ್ತು.

ಮಾರ್ಚ್ 18ರಂದು, ಕಲ್ಯಾಣ್‌ನ ಖಾಸಗಿ ಆಸ್ಪತ್ರೆಗೆ ದಾಖಲಾದ ಎಂಟು ದಿನಗಳ ನಂತರ, ಗೋಪಾಲ್ ತೀವ್ರ ನೋವಿನಲ್ಲಿದ್ದಾರೆ ಎಂದು ಕುಟುಂಬಕ್ಕೆ ರಾತ್ರಿಯ ಸಮಯದಲ್ಲಿ ಕರೆ ಬಂದಿತು. ತಪಾಸಣೆಯಲ್ಲಿ ಸೋಂಕು ಪತ್ತೆಯಾಗಿತ್ತು. "ಇದಕ್ಕೆ ಕಾರಣವೇನು ಎಂದು ನಮಗೆ ತಿಳಿದಿರಲಿಲ್ಲ. ತಕ್ಷಣದ ಚಿಕಿತ್ಸೆ ಅಗತ್ಯವಿದ್ದು, ಇದಕ್ಕೆ ರೂ. 2 ಲಕ್ಷದಷ್ಟು ಖರ್ಚಾಗುತ್ತದೆಯೆಂದು ಅವರು ತಿಳಿಸಿದರು,'' ಎಂದಳು ಜ್ಯೋತಿ. "ನಾವು ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ನಾವು ಹೇಳಿದಾಗ, ಸಾರ್ವಜನಿಕ ಆಸ್ಪತ್ರೆಗೆ ಹೋಗಲು ನಮಗೆ ತಿಳಿಸಲಾಯಿತು. ಆದರೆ ಅದಕ್ಕೂ ಮೊದಲು ನಾವು ನಮ್ಮ ಎಲ್ಲಾ ಬಿಲ್‌ಗಳನ್ನು ಪಾವತಿಸಬೇಕಿತ್ತು.

(ನಾನು ಆಸ್ಪತ್ರೆಯ ಪ್ರತಿನಿಧಿಗಳನ್ನು ಸಂಪರ್ಕಿಸಿದಾಗ, ಅವರು ಖುದ್ದಾಗಿ ಮತ್ತು ಕುಟುಂಬದ ಸದಸ್ಯರೊಬ್ಬರ ಉಪಸ್ಥಿತಿಯಲ್ಲಿ ಮಾತ್ರ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಒಪ್ಪಿಕೊಂಡರು, ಆದರೆ ಗುಪ್ತಾ ಕುಟುಂಬವು ಇನ್ನೂ ಉತ್ತರ ಪ್ರದೇಶದಲ್ಲಿಯೇ ಇದೆ).

ಆಸ್ಪತ್ರೆಯು ಅಂತಿಮ ಬಿಲ್‌ನಲ್ಲಿ ಅತ್ಯಲ್ಪ ರಿಯಾಯಿತಿಯನ್ನು ನೀಡಿತು. ಕುಟುಂಬವು ಮೇ 19ರ ಇಡೀ ದಿನ ಹಣವನ್ನು ಸಂಗ್ರಹಿಸುವುದರಲ್ಲೇ ಕಳೆಯಿತು. ಅಷ್ಟೇನೂ ಪರಿಚಿತರಲ್ಲದ ಜನರಲ್ಲಿ ಸಹ ಅವರು ಹಣವನ್ನು ಯಾಚಿಸಿದರು. ಜ್ಯೋತಿ ಮತ್ತು ಆಕೆಯ ತಾಯಿ ಸ್ಥಳೀಯ ನಗರಾಡಳಿತಕ್ಕೆ ಮೊರೆಯಿಟ್ಟರು, ಆದರೆ ಅದು ಯಾವುದೇ ಸಹಾಯವನ್ನು ನೀಡಲಿಲ್ಲ. ಆದರೂ ಕುಟುಂಬವು ಹೇಗೋ ಹಣವನ್ನು ಪಾವತಿಸಿತು. "ನಾವು ಏನನ್ನು ಅನುಭವಿಸಿದೆವು ಎಂಬುದು ನಮಗೆ ಮಾತ್ರ ತಿಳಿದಿದೆ. ನಮ್ಮ ತಂದೆಯನ್ನು ಉಳಿಸಲು ನಾವು ದಿನಗಟ್ಟಲೆ ಆಹಾರವಿಲ್ಲದೆ ಇದ್ದೆವು,” ಎಂಬುದಾಗಿ ಜ್ಯೋತಿ ತಿಳಿಸಿದಳು..

In the daytime, she 'attended' online classes in the hospital staircase near the ICU, and at night slept on the footpath outside
PHOTO • Aakanksha

ಆಕೆಯು ಹಗಲಿನಲ್ಲಿ , ಐಸಿಯು ಬಳಿಯ ಆಸ್ಪತ್ರೆಯ ಮೆಟ್ಟಿಲಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿ ದ್ದು, ರಾತ್ರಿ ಹೊರಗೆ ಫುಟ್‌ಪಾತ್‌ನಲ್ಲಿ ಮಲ ಗುತ್ತಿ ದ್ದ ರು

ಮಾರ್ಚ್ 20ರಂದು, ಬಿಲ್ ಅನ್ನು ಸಂಪೂರ್ಣವಾಗಿ ಪಾವತಿಸಿದ ನಂತರ, ಆಮ್ಲಜನಕ ಸೌಲಭ್ಯವಿರುವ ಖಾಸಗಿ ಆಂಬ್ಯುಲೆನ್ಸ್ ಗೋಪಾಲ್ ಅವರನ್ನು ಸೆಂಟ್ರಲ್ ಮುಂಬೈನಲ್ಲಿರುವ ಸರ್ಕಾರಿ ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲು ಅವರಿಂದ 9,000 ರೂ.ಗಳನ್ನು ಪಡೆಯಿತು. ಅಲ್ಲಿನ ವೈದ್ಯಕೀಯ ತಪಾಸಣೆಗಳು ಗೋಪಾಲ್ ಇನ್ನೂ ಕೋವಿಡ್-ಪಾಸಿಟಿವ್ ಎಂದು ತೋರಿಸಿದವು. ಅವರನ್ನು ಐಸಿಯುಗೆ ಕಳುಹಿಸಲಾಯಿತು. ಒಬ್ಬ KEM ವೈದ್ಯರು (ಹೆಸರು ಹೇಳಲು ಇಚ್ಛಿಸದ) ನನಗೆ ಹೀಗೆ ಹೇಳಿದರು: “ರೋಗಿಯು ಬಂದಾಗ, ಅವರಿಗೆ ಥ್ರೋಂಬೋಸಿಸ್ ಇತ್ತು [ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಧಮನಿಗಳಲ್ಲಿ ಅಡಚಣೆ] ಇದು ರಕ್ತ ಪೂರೈಕೆಯನ್ನು ತಡೆಯುತ್ತಿದ್ದು, ಗ್ಯಾಂಗ್ರೀನ್‌ಗೆ ಕಾರಣವಾಗಿದೆ [ಅಲ್ಲಿ ದೇಹದ ಅಂಗಾಂಶದ ಗಣನೀಯ ಭಾಗವು ಸಾಯುತ್ತದೆ]. ಸೋಂಕು ಹರಡುತ್ತಿದ್ದು, ಅವರ ಎಡಗಾಲನ್ನು ಕತ್ತರಿಸಬೇಕಾಗುತ್ತದೆ.”

"ನನ್ನ ತಂದೆಗೆ ಗ್ಯಾಂಗ್ರೀನ್‌ ಇದೆ ಎಂದು ನನಗೆ ಮೊದಲ ಬಾರಿಗೆ ತಿಳಿಯಿತು" ಎಂದು ಜ್ಯೋತಿ ಹೇಳುತ್ತಾಳೆ. "ಅವರಿಗೆ ಎಂದಿಗೂ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿರಲಿಲ್ಲ. ಅವರು ಮಾರ್ಚ್ 10ರಂದು ಸ್ಥಳೀಯ ಚಿಕಿತ್ಸಾಲಯಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರು ತಮ್ಮ ಕಾಲು ಕಳೆದುಕೊಳ್ಳಲಿದ್ದಾರೆಯೇ? ಇದನ್ನು ಕೇಳಿ ನಿಜವಾಗಿಯೂ ನಮ್ಮೆಲ್ಲರಿಗೂ ಆಘಾತವಾಯಿತು.

ಈ ವೇಳೆ, ಶಶಿಕಲಾ ಅವರಿಗೆ ಪದೇ ಪದೇ ಮೂರ್ಛೆ, ಗಾಬರಿ ಉಂಟಾಗುತ್ತಿತ್ತು. ಕೆಇಎಂ ಆಸ್ಪತ್ರೆಯು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಉಳಿಯಲು ಅನುಮತಿ ನೀಡಿತು ಮತ್ತು ವಿವೇಕ್ ಇನ್ನೂ ಕ್ವಾರಂಟೈನ್ ಕೇಂದ್ರದಿಂದ ಹಿಂತಿರುಗಿರಲಿಲ್ಲ. ಆದ್ದರಿಂದ ಮುಂದಿನ ವಾರ, ಜ್ಯೋತಿ ಆಸ್ಪತ್ರೆಯಲ್ಲಿಯೇ ಉಳಿದಳು, ಅವರ ಇತರ ಇಬ್ಬರು ಒಡಹುಟ್ಟಿದವರು ಕಲ್ಯಾಣ್‌ನಲ್ಲಿ ತಮ್ಮ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.

ಅವಳು ಐಸಿಯು ಹತ್ತಿರ ಆಸ್ಪತ್ರೆಯ ಮೆಟ್ಟಿಲುಗಳ ಮೇಲೆ ಸಮಯವನ್ನು ಕಳೆದಳು. ಅಂತಿಮ ಪರೀಕ್ಷೆಗಳು ಸಮೀಪಿಸುತ್ತಿದ್ದು, ಆನ್‌ಲೈನ್ ತರಗತಿಗಳಿಗೆ ಹಗಲಿನಲ್ಲಿ 'ಹಾಜರಾಗುತ್ತಿದ್ದಳು' ಮತ್ತು ವೈದ್ಯರು ಯಾವುದಾದರೂ ಔಷಧಿಗಳನ್ನು ಸೂಚಿಸಿದಾಗಲೆಲ್ಲಾ ಒಳಹೊರಗೆ ದೌಡಾಯಿಸುತ್ತಿದ್ದಳು. “ಇಲ್ಲಿ ಅವರು ನಮಗೆ ಯಾವುದೇ ಹಣವನ್ನು ಪಾವತಿಸುವಂತೆ ಕೇಳಲಿಲ್ಲ. ನಾನು ಕೆಲವೊಮ್ಮೆ ಮಾತ್ರ ಔಷಧಿಗಳನ್ನು ತರಬೇಕಿತ್ತು,” ಎಂದರು ಜ್ಯೋತಿ, ಕೆಲವು ದಿನಗಳಿಗೊಮ್ಮೆ 800-1,000 ರೂ.ಗಳು ಖರ್ಚಾಗುತ್ತಿತ್ತು. ರಾತ್ರಿ ಆಸ್ಪತ್ರೆಯ ಹೊರಗಿನ ಫುಟ್‌ಪಾತ್ ಮೇಲೆ ಮಲಗುತ್ತಿದ್ದಳು. ಕೆಇಎಂ ಕ್ಯಾಂಟೀನ್‌ನಲ್ಲಿ ರಿಯಾಯಿತಿ ದರದ ಊಟ ಮಾಡಿ ಆಸ್ಪತ್ರೆಯ ಶೌಚಾಲಯವನ್ನು ಬಳಸುತ್ತಿದ್ದಳು.

“ನಾನು ಹೆದರಿದ್ದೆನಾದ್ದರಿಂದ ಮನೆಗೆ ಹೋಗಲಿಲ್ಲ. ತಂದೆಗೆ ನನ್ನ ಅಗತ್ಯವಿದ್ದು, ನಾನು ಅಲ್ಲಿಲ್ಲದಿದ್ದರೆ? ಮನೆಯಿಂದ ಕೆಇಎಮ್ ಅನ್ನು ತಲುಪಲು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ. ನಾನು ಒಂದು ನಿಮಿಷವನ್ನೂ ವ್ಯರ್ಥ ಮಾಡಲು ಬಯಸಲಿಲ್ಲ,” ಎಂದರಾಕೆ.

"ನನಗೆ ನನ್ನ ತಂದೆಯನ್ನು ಭೇಟಿಯಾಗಲು ಅಥವಾ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಅವರು ನನ್ನೊಂದಿಗೆ ಮತ್ತು ನಮ್ಮ ಕುಟುಂಬದೊಂದಿಗೆ ಫೋನ್ ಮೂಲಕ ಸಂವಹನ ನಡೆಸಿದರು. ನಮ್ಮ ಕೊನೆಯ ಸಂಭಾಷಣೆಯ ರೆಕಾರ್ಡಿಂಗ್ ನನ್ನ ಬಳಿ ಇದೆ. ಅವರಿಗೆ ಬಾಯಾರಿಕೆಯಾಗಿದ್ದು, ಬೆಳಿಗ್ಗೆ ನನ್ನನ್ನು ನೀರಿಗಾಗಿ ಕರೆದರು. ನಾನು ತಕ್ಷಣ ಕೆಳಗೆ ಓಡಿ ಅಂಗಡಿಯಿಂದ ಬಾಟಲಿಯನ್ನು ತೆಗೆದುಕೊಂಡೆ. ಆದರೆ ಸಿಬ್ಬಂದಿ ಅವರಿಗೆ ಒಳಗೆ [ವಾರ್ಡ್] ನೀರು ನೀಡಲಾಗುವುದು ಎಂದು ಹೇಳಿದರು.

ತಂದೆ ಮತ್ತು ಮಗಳ ನಡುವಿನ ಈ ಕೊನೆಯ ಸಂಭಾಷಣೆ ಮಾರ್ಚ್ 28ರಂದು ಬೆಳಿಗ್ಗೆ 7 ಗಂಟೆಗೆ ನಡೆಯಿತು, ಮಧ್ಯಾಹ್ನದ ವೇಳೆಗೆ ವೈದ್ಯರು ಹೊರಗೆ ಬಂದು ಗೋಪಾಲ್ ಅವರ ಬದುಕುವ ಸಾಧ್ಯತೆಗಳು ಕಡಿಮೆಯಿದ್ದು, ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಜ್ಯೋತಿಗೆ ತಿಳಿಸಿದರು. "ಎರಡು ಗಂಟೆಗಳ ನಂತರ ಅವರು ನನಗೆ ಆ ಬಗ್ಗೆ ಹೇಳಿದರು [ಗೋಪಾಲ್ ಅವರ ಸಾವು]... ನಾನು ಇದನ್ನು ಕೇಳಲು ಬಯಸುತ್ತಿರಲಿಲ್ಲ. ನನ್ನ ಕಿವಿಗಳನ್ನು ಮುಚ್ಚಿಕೊಳ್ಳುವಂತೆ ಅಥವಾ ಓಡಿಹೋಗುವಂತಾಯಿತು. ನಾನು ನನ್ನ ಮನೆಯವರಿಗೆ ವಿಷಯ ತಿಳಿಸಲು ಅವರಿಗೆ ಕರೆ ಮಾಡಿದೆ.

Family photo: Vivek, Shashikala, Khushboo, Jyoti, Deepak. Right: 'If I got medals in sports or 85 per cent in 12th, he would go and show my medals and marksheet to everyone in the village. He said study so much that you don’t need to bow down before anyone'
PHOTO • Courtesy: Gupta family
Family photo: Vivek, Shashikala, Khushboo, Jyoti, Deepak. Right: 'If I got medals in sports or 85 per cent in 12th, he would go and show my medals and marksheet to everyone in the village. He said study so much that you don’t need to bow down before anyone'
PHOTO • Courtesy: Gupta family

ಕುಟುಂಬದ ಛಾಯಾಚಿತ್ರ: ವಿವೇಕ್ , ಶಶಿಕಲಾ , ಖುಷ್ಬೂ , ಜ್ಯೋತಿ , ದೀಪಕ್. ಬಲ ಕ್ಕೆ : ' ನಾನು ಕ್ರೀಡೆಯಲ್ಲಿ ಪದಕಗಳನ್ನು ಅಥವಾ 1 2ನೇ ಕ್ಲಾಸಿನ ಲ್ಲಿ ಶೇ. 85ರಷ್ಟು ಅಂಕ ಗಳನ್ನು ಪಡೆದರೆ , ಅವರು ಹೋಗಿ ನನ್ನ ಪದಕ ಮತ್ತು ಅಂಕಪಟ್ಟಿಯನ್ನು ಹಳ್ಳಿಯಲ್ಲಿ ಎಲ್ಲರಿಗೂ ತೋರಿಸು ತ್ತಿದ್ದ . ಯಾರ ಮುಂದೆಯೂ ತಲೆಬಾಗುವ ಅವಶ್ಯಕತೆ ಇಲ್ಲದಷ್ಟು ಅಧ್ಯಯನ ಮಾಡು ಎಂ ದು ಅವರು ಹೇಳುತ್ತಿದ್ದರು

ದಾದರ್ ಸ್ಮಶಾನದಲ್ಲಿ ಗೋಪಾಲ್ ಅವರ ಅಂತ್ಯಕ್ರಿಯೆ ನಡೆಯಿತು. ಕೊನೆಯ ಧಾರ್ಮಿಕ ಕ್ರಿಯೆಗಳಿಗಾಗಿ ಉತ್ತರ ಪ್ರದೇಶಕ್ಕೆ ಹೋಗಲು ಜ್ಯೋತಿಯ ಸಂಬಂಧಿಕರು ಕುಟುಂಬದ ರೈಲು ಟಿಕೆಟ್‌ಗಳ ಹಣವನ್ನು ಪಾವತಿಸಿದ್ದಾರೆ. ಅವರು ಮಾರ್ಚ್ 30ರಂದು ಹೊರಟು, ಚಿತಾಭಸ್ಮದೊಂದಿಗೆ ಏಪ್ರಿಲ್ 1ರಂದು ತಮ್ಮ ಗ್ರಾಮವನ್ನು ತಲುಪಿದರು. ಅವರಿನ್ನೂ ಮುಂಬೈಗೆ ಹಿಂತಿರುಗಿಲ್ಲ.

ಜ್ಯೋತಿ ಇನ್ನೂ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. "ನಾನು ಅಧ್ಯಯನದಲ್ಲಿ ನಿರತಳಾಗಿರುತ್ತೇನೆ" ಎಂದು ತಿಳಿಸಿದಳಾಕೆ . “ತಂದೆ ತೀರಿಕೊಂಡ ನಂತರ ನನ್ನ ತಂದೆಗೆ ಓದಲು ಸಾಧ್ಯವಾಗಲಿಲ್ಲ, ಅವರು 9 ಅಥವಾ 10 ವರ್ಷದವರಾಗಿದ್ದಾಗ ಕೆಲಸ ಮಾಡಲು ಪ್ರಾರಂಭಿಸಿದರು. ನಾವು ಓದಬೇಕೆಂದು ಬಯಸಿದ್ದ ಅವರು, ತನ್ನ ಎಲ್ಲಾ ಮಕ್ಕಳಿಗೆ ಕಲಿಸಲು ಸಾಧ್ಯವಾಗದ್ದಕ್ಕಾಗಿ ಬೇಸರಿಸಿದ್ದರು, ಅವರು ಯಾವಾಗಲೂ ನನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಿದ್ದರು, ಅದು ಚಿಕ್ಕದಾದರೂ ಸರಿಯೇ. ನಾನು ಕ್ರೀಡೆಯಲ್ಲಿ ಪದಕವನ್ನು ಅಥವಾ 12ನೇ ತರಗತಿಯಲ್ಲಿ ಶೇ. 85ರಷ್ಟು ಅಂಕವನ್ನು ಪಡೆದರೆ ನನ್ನ ಪದಕ ಹಾಗೂ ಅಂಕಪಟ್ಟಿಯನ್ನು ಊರಿನ ಎಲ್ಲರಿಗೂ ತೋರಿಸಲು ಹೋಗುತ್ತಿದ್ದರು. ನೀವು ಯಾರ ಮುಂದೆಯೂ ತಲೆಬಾಗುವ ಅಗತ್ಯವಿಲ್ಲದಷ್ಟು ಹೆಚ್ಚಿನ ಅಧ್ಯಯನ ಮಾಡಿ ಎಂದು ಹೇಳುತ್ತಿದ್ದರು” ಎಂದಳು ಜ್ಯೋತಿ

ಜ್ಯೋತಿಯು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದಳು, ಆದರೆ ತರಬೇತಿ ತರಗತಿಗಳ ವೆಚ್ಚವನ್ನು ತಿಳಿದಿದ್ದ ಆಕೆ, ಈ ಮಾರ್ಗವನ್ನು ಪ್ರಯತ್ನಿಸಲಿಲ್ಲ. "ಈಗ ನಾನು ಯಾವುದಾದರೂ ಕೆಲಸವನ್ನು ಹುಡುಕಿ, ಹಣವನ್ನು ಗಳಿಸಬೇಕು" ಎಂದು ಹೇಳಿದರು. ಎಲ್ಲಾ ಸಾಲವನ್ನು ನಾವು ಮರುಪಾವತಿಸಬೇಕಿದೆ. ಭಾಯಿ [ವಿವೇಕ್] ಮುಂಬೈಗೆ ಹಿಂತಿರುಗಲು ಮತ್ತು ಕೆಲಸ ಮಾಡಲು ಬಯಸುತ್ತಾನೆ. ಇಲ್ಲಿ [ಗ್ರಾಮದಲ್ಲಿ] ಕೆಲಸ ಸಿಗುವುದು ಕಷ್ಟ. ನಾವು ಹಣವನ್ನು ಹಿಂದಿರುಗಿಸಬೇಕಾದ ಪ್ರತಿಯೊಬ್ಬ ವ್ಯಕ್ತಿಯ ಪಟ್ಟಿ ಮಾಡಬೇಕಿದೆ. ಪಟ್ಟಿ ಉದ್ದವಾಗಿದೆ” ಎಂದರಾಕೆ.

ಸದ್ಯಕ್ಕೆ, ಜ್ಯೋತಿಯ ಹಿರಿಯ ಅಕ್ಕನ ಪತಿಯು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ. ಮುಂಬೈನ ಮನೆಯ ಬಾಡಿಗೆ ತಿಂಗಳುಗಟ್ಟಲೆ ಬಾಕಿ ಇದೆ.

ಈಕೆಯ ತಾಯಿ ಶಶಿಕಲಾ ಇನ್ನೂ ಆಘಾತದಲ್ಲಿದ್ದಾರೆ. "ಎಲ್ಲವನ್ನೂ ನಮ್ಮಿಂದ ಕಿತ್ತುಕೊಳ್ಳಲಾಗಿದೆ, ನಾವು ರೂಪಿಸಿದ್ದ ಅಲ್ಪಸ್ವಲ್ಪವನ್ನು ಸಹ, "ನಾವು ಏನು ಮಾಡಿದ್ದಲ್ಲಿ, ಇಂದು ಅವರು ನಮ್ಮೊಂದಿಗಿರುತ್ತಿದ್ದರು ಎಂದು ನಾನು ಯೋಚಿಸುತ್ತಲೇ ಇದ್ದೇನೆ. ನಾವು ಸರಳ ಜೀವನವನ್ನು ನಡೆಸುತ್ತಿದ್ದು, ಸಣ್ಣ ಕನಸುಗಳನ್ನು ಹೊಂದಿದ್ದೆವು, ಆದರೆ ನಾವು ಅದಕ್ಕೆ ಅರ್ಹರೇ?

ವರದಿಗಾರರ ಟಿಪ್ಪಣಿ: ನಾವು ಭಾಗವಹಿಸಿದ ಕಾರ್ಯಾಗಾರದ ನಂತರ 2020ರ ಆರಂಭದಿಂದಲೂ ನನಗೆ ಜ್ಯೋತಿ ಗುಪ್ತಾಳ ಪರಿಚಯವಿದೆ. ಆಕೆ ಮತ್ತು ಆಕೆಯ ತಾಯಿಯನ್ನು ಈ ಕಥಾನಕ್ಕಾಗಿ ಫೋನ್‌ನಲ್ಲಿ ಸಂದರ್ಶಿಸಲಾಯಿತಲ್ಲದೆ, ಆಸ್ಪತ್ರೆಯಲ್ಲಿ ಕೆಇಎಂ ವೈದ್ಯರೊಂದಿಗೆ ಮಾತುಕತೆ ನಡೆಯಿತು.

ಅನುವಾದ: ಶೈಲಜಾ ಜಿ.ಪಿ

Aakanksha

ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.

Other stories by Aakanksha
Editor : Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Other stories by Sharmila Joshi
Translator : Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Shailaja G. P.