ʻಸ್ವಾತಂತ್ರ್ಯದ ಚಳವಳಿಯ ಸಮಯದಲ್ಲಿಯೂ, ಪರಿಸ್ಥಿತಿ ಕ್ಷೀಣವಾಗಿ ಕಾಣುತ್ತಿದ್ದ ಸಂದರ್ಭಗಳೂ ಇದ್ದವು. ನೀವು ಜಗತ್ತಿನ ಅತಿದೊಡ್ಡ ಸಮ್ರಾಜ್ಯದ ವಿರುದ್ಧ ನಿಂತಿದ್ದೀರಿ. ನೀವು ಗೆಲ್ಲಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಆದರೆ ನಾವು ಆ ಎಲ್ಲ ಎಚ್ಚರಿಕೆ ಹಾಗೂ ಬೆದರಿಕೆಯನ್ನು ಮೀರಿ ನಿಂತೆವು. ಹೋರಾಡಿದೆವು. ಆದ ಕಾರಣವೇ ನಾವು ಇಂದು ಇಲ್ಲಿದ್ದೇವೆ.ʼ

- ಆರ್‌. ನಲ್ಲಕಣ್ಣು

*****

ʻಹಳದಿ ಪೆಟ್ಟಿಗೆಗೆ ಮತ ಹಾಕಿʼ ʻಶುಭ ಮಂಜಲ್ ಪೆಟ್ಟಿಯನ್ನು ಆಯ್ಕೆ ಮಾಡಿʼ ಘೋಷಣೆಗಳು ಮೊಳಗುತ್ತಿದ್ದವು.

ಇದು ಆಗಿದ್ದು ಬ್ರಿಟಿಷರ ಆಡಳಿತದಡಿಯಲ್ಲಿ 1937 ರಲ್ಲಿ, ಮದ್ರಾಸ್‌ ಪ್ರಾಂತ್ಯದಲ್ಲಿ ಜರುಗಿದ ಸ್ಥಳೀಯ ಚುನಾವಣೆಯ ಸಂದರ್ಭ.

ಡೋಲು ಬಡಿಯುತ್ತಿದ್ದ ಯುವಕರ ಗುಂಪಿನ ನಡುವಿನಿಂದ ಈ ಘೋಷಣೆ ಮೊಳಗುತ್ತಿತ್ತು. ಅದರಲ್ಲಿ ಹಲವರಿಗೆ ಮತದಾನ ಮಾಡುವ ವಯಸ್ಸೇ ಆಗಿರಲಿಲ್ಲ. ವಯಸ್ಸಿನ ಅರ್ಹತೆ ಇದ್ದರೂ ಸಹಾ ಮತದಾನ ಮಾಡುವ ಹಕ್ಕು ಇರಬೇಕೆಂದಿರಲಿಲ್ಲ.

ಆಗ  ಎಲ್ಲಾ ವಯಸ್ಕರಿಗೂ ಮತದಾನ ಮಾಡುವ ಹಕ್ಕಿರಲಿಲ್ಲ. ಯಾಕೆಂದರೆ ಮತದಾನದ ನಿರ್ಬಂಧಗಳು ಭೂ ಮಾಲೀಕರ, ಆಸ್ತಿವಂತರ ಪರವಾಗಿ, ಗ್ರಾಮೀಣ ಪ್ರದೇಶದಲ್ಲಿ ಶ್ರೀಮಂತ ರೈತರ ಪರವಾಗಿ ಇದ್ದವು.

ಹೀಗೆ ಮತ ಇಲ್ಲದ ಯುವಜನರು ಮಹಾ ಉತ್ಸಾಹದಿಂದ ಪ್ರಚಾರ ನಡೆಸುವ ದೃಶ್ಯ ಅಲ್ಲಿಗೆ ಹೊಸತೇನೂ ಆಗಿರಲಿಲ್ಲ.

1935 ರ ಜುಲೈನಲ್ಲಿ ಜಸ್ಟಿಸ್‌ ಪಾರ್ಟಿಯ ಮುಖವಾಣಿಯಾಗಿದ್ದ ʻಜಸ್ಟಿಸ್‌ʼ ಪತ್ರಿಕೆಯಲ್ಲಿ ತೀರಾ ಅಸಡ್ಡೆಯಿಂದ ಹಾಗೂ ಒಂದಿಷ್ಟೂ ಮುಜುಗರವಿಲ್ಲದೆ ಹೀಗೆ ಬರೆಯಲಾಗಿತ್ತು –

ʻನೀವು ಯಾವುದೇ ಗ್ರಾಮ ಹಾಗೂ ಹೊರವಲಯಗಳಿಗೆ ಭೇಟಿ ಕೊಟ್ಟರೆ, ಕಾಂಗ್ರೆಸ್‌ನ ಖಾದಿ ಸಮವಸ್ತ್ರ ಹಾಗೂ ಗಾಂಧಿ ಟೋಪಿ ತೊಟ್ಟು, ತ್ರಿವರ್ಣ ಧ್ವಜವನ್ನು ಹಿಡಿದ ಪುಂಡರನ್ನು ಕಾಣುತ್ತೀರಿ. ಇವರಲ್ಲಿ ಶೇಕಡ 80 ರಷ್ಟು ಪುರುಷರು, ಕಾರ್ಮಿಕರು ಹಾಗೂ ಕಾರ್ಯಕರ್ತರು ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಕರೆತಂದ ಮತ ಇಲ್ಲದ, ಆಸ್ತಿ ಇಲ್ಲದ, ನೂರಾರು ನಿರುದ್ಯೋಗಿಗಳು…ʼ

1937 ರಲ್ಲಿ ಈ ಯುವಕರ ಗುಂಪಿನಲ್ಲಿದ್ದವರೊಬ್ಬರು ಆರ್‌. ನಲ್ಲಕುನ್ನು. ಆಗ ಅವರಿಗೆ ಕೇವಲ 12 ವರ್ಷ. ಈಗ 2022 ರಲ್ಲಿ 97 ನೆಯ ವಯಸ್ಸಿನಲ್ಲಿರುವ ಅವರು ‘ತಾವೂ ಸಹಾ ಆ ಪುಂಡರ ಪೈಕಿ ಒಬ್ಬರು’ ಎಂದು ನಗುತ್ತಾ ಆ ಪ್ರಹಸನವನ್ನು ಬಿಚ್ಚಿಟ್ಟರು. ʻಯಾರಿಗೆ ಜಮೀನು ಇತ್ತೋ, ಹತ್ತು ರೂ ಅಥವಾ ಅದಕ್ಕಿಂತ ಹೆಚ್ಚು ಭೂ ತೆರಿಗೆ ಕಟ್ಟುತ್ತಿದ್ದರೋ ಅವರಿಗೆ ಮಾತ್ರ ಮತದಾನ ಮಾಡಲು ಹಕ್ಕಿತ್ತುʼ ಎಂದು ಅವರು ನೆನಪಿಸಿಕೊಂಡರು. ʻ1937 ರ ಚುನಾವಣೆಯಲ್ಲಿ ಮತದಾನದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಯಿತು. ಆದರೂ ಇದು ಶೇ.15 ರಿಂದ 20 ವಯಸ್ಕರಿಗಷ್ಟೇ ಮತದಾನ ಮಾಡುವ ಅವಕಾಶ ಕೊಟ್ಟಿತ್ತು.ʼ ಎಂದರು. ʻಯಾವುದೇ ಒಂದು ಕ್ಷೇತ್ರದಲ್ಲಿ ಒಂದು ಸಾವಿರದಿಂದ ಎರಡು ಸಾವಿರ ಅಷ್ಟೇ ಮತದಾನವಾಗುತ್ತಿತ್ತು. ಅದಕ್ಕಿಂತ ಹೆಚ್ಚಿರಲಿಲ್ಲʼ.

R. Nallakannu's initiation into struggles for justice and freedom began in early childhood when he joined demonstrations of solidarity with the mill workers' strike in Thoothukudi
PHOTO • M. Palani Kumar

ತೂತುಕುಡಿಯಲ್ಲಿ ಗಿರಣಿ ಕಾರ್ಮಿಕರ ಮುಷ್ಕರಕ್ಕೆ ಬೆಂಬಲವಾಗಿ ನಿಲ್ಲುವುದರೊಂದಿಗೆ ಆರ್. ನಲ್ಲಕಣ್ಣು ಅವರು ಬಾಲ್ಯದಲ್ಲಿಯೇ ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನು ರೂಢಿಸಿಕೊಂಡು ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು

ನಲ್ಲಕಣ್ಣುಅವರು ಆಗ ತಿರುನೆಲ್ವೇಲಿ ಜಿಲ್ಲೆಯಲ್ಲಿದ್ದ ಶ್ರೀವೈಕುಂಠಂನಲ್ಲಿ ಜನಿಸಿದರು. ಈಗ ಅದು ತಮಿಳುನಾಡಿನ ತೂತ್ತುಕುಡಿ ಜಿಲ್ಲೆಗೆ ಸೇರುತ್ತದೆ. (1997 ರವರೆಗೆ ಇದನ್ನು ಟ್ಯೂಟಿಕಾರ್ನ್‌ ಎಂದು ಕರೆಯುತ್ತಿದ್ದರು)

ನಲ್ಲಕಣ್ಣುಅವರ ಚಟುವಟಿಕೆಗಳು ತುಂಬಾ ಬೇಗನೆ ಶುರುವಾದವು.

ʻನಾನು ಚಿಕ್ಕವನಿದ್ದಾಗ ನಮ್ಮ ಊರಿಗೆ ಸಮೀಪವಿದ್ದ ತೂತ್ತುಕುಡಿಯಲ್ಲಿ ಗಿರಣಿ ಕಾರ್ಮಿಕರು ಕೆಲಸವನ್ನು ಸ್ಥಗಿತಗೊಳಿಸಿದರು. ಅದು ಹಾರ್ವೆ ಮಿಲ್ಸ್‌ ಬಳಗದ್ದು. ಇದು ಮುಂದೆ ಪಾಂಚಾಲೈ (ಹತ್ತಿ ಗಿರಣಿ) ಕಾರ್ಮಿಕರ ಮುಷ್ಕರ ಎಂದೇ ಹೆಸರಾಯಿತು.

ಅವರನ್ನು ಬೆಂಬಲಿಸಲು ನಮ್ಮ ಊರಿನ ಪ್ರತೀ ಮನೆಯಿಂದ ಅಕ್ಕಿಯನ್ನು ಸಂಗ್ರಹಿಸಿ, ತೂತ್ತುಕುಡಿಯಲ್ಲಿ ಮುಷ್ಕರ ಹೂಡಿದ್ದ ಕುಟುಂಬಗಳಿಗೆ ಪೆಟ್ಟಿಗೆಯಲ್ಲಿ ಕಳಿಸಲಾಗುತ್ತಿತ್ತು. ನನ್ನಂತಹ ಚಿಕ್ಕವರು ಈ ರೀತಿ ಅಕ್ಕಿ ಸಂಗ್ರಹಿಸಲು ಹೋಗುತ್ತಿದ್ದೆವು. ಜನರು ತೀರಾ ಬಡವರಿದ್ದರು. ಆದರೂ ಸಹಾ ಪ್ರತೀ ಮನೆಯವರೂ ಏನನ್ನಾದರೂ ಕೊಡುತ್ತಿದ್ದರು. ಆಗ ನನಗೆ 5 ಅಥವಾ 6  ವರ್ಷ ಇರಬೇಕು. ಈ ಮುಷ್ಕರನಿರತ ಕಾರ್ಮಿಕರಿಗೆ ಬೆಂಬಲಿಸಿದ ಈ ಘಟನೆ ನನ್ನ ಮೇಲೆ ಆಳವಾದ ಪ್ರಭಾವ ಬೀರಿತು. ಇದು ನಾನು ತೀರಾ ಬೇಗನೇ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಇದು ಮೆಟ್ಟಿಲಾಯಿತು. ಆರಂಭಿಸುವುದಾಗಿತ್ತುʼ.

ಮಂಜಲ್ ಪೆಟ್ಟಿ ಅಥವಾ ಹಳದಿ ಪೆಟ್ಟಿಗೆಗೆ ಮತಹಾಕುವುದು ಎಂದರೆ ಏನು? ಎಂದು ಕೇಳುವುದರ ಮೂಲಕ ನಾವು ಅವರನ್ನು ಮತ್ತೆ 1937 ರ ಆ ಚುನಾವಣೆಯತ್ತ ಸೆಳೆದೆವು.

ʻಆಗ ಮದ್ರಾಸ್‌ನಲ್ಲಿ ಮುಖ್ಯವಾಗಿ ಎರಡು ಪಕ್ಷಗಳು ಮಾತ್ರ ಇದ್ದವು. ಕಾಂಗ್ರೆಸ್‌ ಹಾಗೂ ಜಸ್ಟಿಸ್‌ ಪಾರ್ಟಿ. ಆಗ ಪಕ್ಷಗಳನ್ನು ಚಿಹ್ನೆಯ ಬದಲು ಒಂದು ಬಣ್ಣದ ಮತಪೆಟ್ಟಿಗೆಯ ಮೂಲಕ ಗುರುತಿಸಲಾಗುತ್ತಿತ್ತು. ನಾವು ಆಗ ಪ್ರಚಾರ ಮಾಡಿದ ಕಾಂಗ್ರೆಸ್‌ ಪಕ್ಷಕ್ಕೆ ಹಳದಿ ಪೆಟ್ಟಿಗೆ ನೀಡಲಾಗಿತ್ತು. ಜಸ್ಟಿಸ್‌ ಪಕ್ಷಕ್ಕೆ ಹಸಿರು ಪೆಟ್ಟಿಗೆ. ಮತದಾರ ತಾನು ಯಾವ ಪಕ್ಷವನ್ನು  ಬೆಂಬಲಿಸುತ್ತಿದ್ದೇನೆ ಎಂದು ತಿಳಿಯಲು ಅದು ಉತ್ತಮ ವಿಧಾನವಾಗಿತ್ತುʼ.

ʻಆಗಲೂ ಚುನಾವಣೆ ಸಾಕಷ್ಟು ವರ್ಣರಂಜಿತ ಹಾಗೂ ನಾಟಕೀಯವಾಗಿಯೇ ಇತ್ತು. ʻದಿ ಹಿಂದೂʼ ಪತ್ರಿಕೆಯ ವರದಿಯೊಂದರ ಪ್ರಕಾರ ದೇವದಾಸಿ ಪ್ರಚಾರಕಿಯಾದ ತಂಜಾವೂರು ಕಾಮುಕಣ್ಣಮಲ್‌ ಪ್ರತಿಯೊಬ್ಬರಿಗೂ ನಶ್ಯದ ಪೆಟ್ಟಿಗೆಗೆ ಮತ ಹಾಕುವಂತೆ ಕೇಳುತ್ತಿದ್ದರು. ಆ ಕಾಲದಲ್ಲಿನ ನಶ್ಯ ಪೆಟ್ಟಿಗೆಗಳ ಬಣ್ಣ ಚಿನ್ನ ಅಥವಾ ಹಳದಿಯದ್ದಾಗಿರುತ್ತಿತ್ತು. ʻದಿ ಹಿಂದೂʼ ಪತ್ರಿಕೆ ಸಹಾಯ ತನ್ನ ಓದುಗರಿಗೆ ಹಳದಿ ಪೆಟ್ಟಿಗೆಯನ್ನು ತುಂಬಿ ಎಂದು ಕರೆ ನೀಡಿತ್ತುʼ.

ʻ12 ವರ್ಷ ಮಾತ್ರವಾಗಿದ್ದ ನಾನು ಆ ವಯಸ್ಸಿನಲ್ಲಿ ಮತದಾನ ಮಾಡುವಂತಿರಲಿಲ್ಲ. ಆದರೆ ನಾನು ಆ ಚುನಾವಣೆಯಲ್ಲಿ ಎಷ್ಟು ತೀವ್ರವಾಗಿ ಪ್ರಚಾರ ಮಾಡಬಹುದೋ ಅಷ್ಟು ಮಾಡಿದೆʼ ಎಂದರು ನಲ್ಲಕುನ್ನು. ಮೂರು ವರ್ಷಗಳ ನಂತರ ಅವರು ಚುನಾವಣೆ ಅಲ್ಲದೆ ಅದರಾಚೆಗೂ ಎಲ್ಲಾ ರಾಜಕೀಯ ಪ್ರಚಾರಗಳಲ್ಲಿ ಭಾಗವಹಿಸುತ್ತಿದ್ದರು. ಡೋಲು ಬಡಿಯುತ್ತಾ, ಘೋಷಣೆ ಕೂಗುತ್ತಾ.

Nallakannu with T. K. Rangarajan, G. Ramakrishnan and P. Sampath of the CPI(M). Known as ‘Comrade RNK’, he emerged as a top leader of the Communist movement in Tamil Nadu at quite a young age
PHOTO • PARI: Speical arrangement

ಸಿಪಿಎಂ ಪಕ್ಷದ ಟಿ.ಕೆ.ರಂಗರಾಜನ್, ಜಿ.ರಾಮಕೃಷ್ಣನ್ ಮತ್ತು ಪಿ.ಸಂಪತ್ ಅವರೊಂದಿಗೆ ನಲ್ಲಕಣ್ಣು. 'ಕಾಮ್ರೇಡ್ ಆರ್‌ಎನ್‌ಕೆ' ಎಂದು ಕರೆಯಲ್ಪಡುವ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮಿಳುನಾಡಿನ ಕಮ್ಯುನಿಸ್ಟ್ ಚಳವಳಿಯ ಉನ್ನತ ನಾಯಕರಾಗಿ ಹೊರಹೊಮ್ಮಿದರು

ಆದರೆ, ಇವರು ಆ ವೇಳೆಗೆ ಕಾಂಗ್ರೆಸ್‌ ಬೆಂಬಲಿಗರಾಗಿರಲಿಲ್ಲ. ʻನನ್ನ 15 ನೆಯ ವಯಸ್ಸಿನಿಂದ ನಾನು ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಜೊತೆಗಿದ್ದೆʼ ಎನ್ನುತ್ತಾರೆ ನಲ್ಲಕುನ್ನು. ಗೆಳೆಯರ ಪಾಲಿಗೆ ಇವರು ʻಕಾಮ್ರೇಡ್‌ ಆರ್‌ಎನ್‌ಕೆʼ. ಪಕ್ಷದ ಅಧಿಕೃತ ಸದಸ್ಯತ್ವ ಸಿಗಲು ಇವರು ತಕ್ಕ ವಯಸ್ಸಿನವರೆಗೂ ಕಾಯಬೇಕಾಯಿತು. ಆನಂತರದಲ್ಲಿ ಆರ್‌ಎನ್‌ಕೆ ಅವರು ಹಲವು ದಶಕಗಳ ಕಾಲ ತಮಿಳುನಾಡಿನ ಕಮ್ಯುನಿಸ್ಟ್‌ ಚಳವಳಿಯ ಒಬ್ಬ ಮುಖ್ಯ ವ್ಯಕ್ತಿಯಾಗಿ ಹೊರಹೊಮ್ಮಿದರು. ಅವರು ಆಗ  ಹಳದಿ ಪೆಟ್ಟಿಗೆಗಲ್ಲ, ಕೆಂಪು ಬಾವುಟಕ್ಕೆ ಬೆಂಬಲ ಯಾಚಿಸುತ್ತಿದ್ದಿರಬೇಕು. ಹಲವು ಬಾರಿ ಯಶಸ್ವಿಯಾಗಿಯೂ ಸಹಾ.

*****

ʻತಿರುನೆಲ್ವೆಲಿಯ ನಮ್ಮ ಭಾಗದಲ್ಲಿ ಒಂದೇ ಒಂದು ಶಾಲೆ ಇತ್ತು. ಹಾಗಾಗಿ ಅದಕ್ಕೆ ಬೇರೆ ಯಾವ ಹೆಸರೂ ಇರಲಿಲ್ಲ. ಬರೀ  ಸ್ಕೂಲ್‌ ಅಂತ ಅಷ್ಟೇ ಕರೆಯುತ್ತಿದ್ದರು.’

ನಲ್ಲಕಣ್ಣುಅವರು ಚೆನ್ನೈನ ತಮ್ಮ ಮನೆಯಲ್ಲಿಯೇ ಇರುವ ಪುಟ್ಟ ಕಚೇರಿಯಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಅವರ ಮೇಜಿನ ಬದಿಯಲ್ಲಿ ಒಂದಿಷ್ಟು ಪ್ರತಿಮೆಗಳಿದ್ದವು. ಅವರ ತೀರಾ ಸನಿಹದಲ್ಲಿ ಲೆನಿನ್‌, ಮಾರ್ಕ್ಸ್‌ ಹಾಗೂ ಪೆರಿಯಾರ್‌ ಪ್ರತಿಮೆಗಳಿದ್ದವು. ಅವರ ಹಿಂದೆ, ತಮಿಳು ಕವಿ ಸುಬ್ರಮಣಿಯನ್‌ ಭಾರತಿ ಅವರ ದೊಡ್ಡ ಭಾವಚಿತ್ರದ ಮುಂದೆ ಅಂಬೇಡ್ಕರ್‌ ಅವರ ಎತ್ತರದ ಹೊಂಬಣ್ಣದ ಪ್ರತಿಮೆ ಇತ್ತು. ಪೆರಿಯಾರ್‌ ಅವರು ಪುಟ್ಟ ಪ್ರತಿಮೆಯ ಹಿಂದೆ ಭಗತ್‌ಸಿಂಗ್‌, ರಾಜಗುರು ಹಾಗೂ ಸುಖದೇವ್‌ ಅವರ ಫೋಟೋ ಆಧರಿಸಿ ಚಿತ್ರಿಸಿದ್ದ ಒಂದು ರೇಖಾಚಿತ್ರ ಇತ್ತು. ಈ ಎಲ್ಲದರ ಪಕ್ಕದಲ್ಲಿ ಇದ್ದ ಕ್ಯಾಲೆಂಡರ್‌ ಒಂದು ನಮ್ಮೆಲ್ಲರಿಗೂ ‘ನೀರನ್ನು ಮಿತವಾಗಿ ಬಳಸಿʼ ಎಂದು ಹೇಳುತ್ತಿತ್ತು.

ಅಲ್ಲಿ ಪ್ರದರ್ಶಿತವಾಗಿದ್ದ ಎಲ್ಲವೂ ಒಂದು ಕಣ್ಣೋಟದಲ್ಲಿ ನಾವು ಈಗ ಮೂರನೆಯ ಬಾರಿಗೆ ಮಾತನಾಡುತ್ತಿರುವ ಈ ವ್ಯಕ್ತಿ  ಬೌದ್ಧಿಕವಾಗಿ ನಡೆದು ಬಂದ ದಾರಿಯನ್ನು ಬಿಡಿಸಿ ಹೇಳುವಂತಿತ್ತು.

ʻಭಾರತಿಯಾರ್‌ ನನ್ನ ಪ್ರಮುಖ ಸ್ಫೂರ್ತಿಸೆಲೆ. ಅವರ ಕವಿತೆಗಳನ್ನು, ಹಾಡುಗಳನ್ನು ಆಗೀಗ ನಿಷೇಧಿಸುತ್ತಲೇ  ಇರುತ್ತಾರೆʼ ಎಂದ ನಲ್ಲಕಣ್ಣುಅವರು ಭಾರತಿಯಾರ್‌ ಅವರ ಒಂದು ವಿಶೇಷ ಕವಿತೆ ಸುತಿಂತರ ಪಲ್ಲುವಿನ (ಸ್ವಾತಂತ್ರ್ಯ ಗೀತೆ) ಕೆಲವು ಸಾಲುಗಳನ್ನು ಹೇಳಿದರು. ಅವರು ಈ ಕವಿತೆಯನ್ನು ಬಹುಶಃ 1909 ರಲ್ಲಿ ಬರೆದಿದ್ದಾರೆನಿಸುತ್ತದೆ. ಅಂದರೆ, 1947 ರಲ್ಲಿ ನಮಗೆ ಸ್ವಾತಂತ್ರ್ಯ ಬರುವ 38 ವರ್ಷಗಳ ಮುಂಚೆಯೇ ಅವರು ಸ್ವಾತಂತ್ರ್ಯವನ್ನು ಸಂಭ್ರಮಿಸಿದ್ದಾರೆʼ.

ʻನಾವು ಕುಣಿಯೋಣ, ನಾವು ಹಾಡೋಣ,
ಸ್ವಾತಂತ್ರ್ಯದ ಸಂತಸವನ್ನು ನಾವು ಸಾಧಿಸಿದ್ದಕ್ಕಾಗಿ
ಬ್ರಾಹ್ಮಣರನ್ನು ನಾವು ʻಸರ್‌ʼ ಎಂದು ಕರೆಯುವ ಕಾಲ ಹೋಯಿತು.
ಬಿಳಿ ತೊಗಲಿನವರನ್ನು ʻಲಾರ್ಡ್‌ʼ ಎಂದು ಕರೆಯುವ ಕಾಲ ಹೋಯಿತು.
ನಮ್ಮಿಂದಲೇ ಭಿಕ್ಷೆ ಪಡೆದವರಿಗೆ ಸಲಾಮು ಹಾಕುವ ಕಾಲ ಹೋಯಿತು.
ನಮ್ಮನ್ನೇ ಗೇಲಿ ಮಾಡಿದವರ ಸೇವೆ ಮಾಡುತ್ತಿದ್ದ ಕಾಲ ಹೋಯಿತು.
ಈಗೆಲ್ಲಾ ಕಡೆ ಸ್ವಾತಂತ್ರ್ಯದ ಬಗ್ಗೆಯೇ ಮಾತು…ʼ

The busts, statuettes and sketches on Nallakanu’s sideboard tell us this freedom fighter’s intellectual history at a glance
PHOTO • P. Sainath

ನಲ್ಲಕನ್ನು ಅವರ ಸೈಡ್‌ ಬೋರ್ಡಿನಲ್ಲಿರುವ ಪ್ರತಿಮೆಗಳು, ರೇಖಾಚಿತ್ರಗಳೇ ಅವರ ಬೌದ್ಧಿಕ ಇತಿಹಾಸವನ್ನು ನಮಗೆ ಒಂದು ನೋಟದಲ್ಲಿ ನೀಡುತ್ತವೆ

ಭಾರತಿ ಅವರು 1921 ರಲ್ಲಿ ನಿಧನ ಹೊಂದಿದರು. ನಲ್ಲಕಣ್ಣುಅವರು ಜನಿಸಿದ ನಾಲ್ಕು ವರ್ಷಗಳ ಮುಂಚೆ. ಈ ಹಾಡನ್ನು ಅದಕ್ಕೂ ಮುನ್ನವೇ ಬರೆಯಲಾಗಿತ್ತು. ಆದರೆ ಆ ಹಾಡು ಹಾಗೂ ಅವರ ಇನ್ನೂ ಎಷ್ಟೋ ಹಾಡುಗಳು ನಲ್ಲಕಣ್ಣುಅವರಿಗೆ  ಅವರ ಹೋರಾಟದ ಬದುಕಿನುದ್ದಕ್ಕೂ ಪ್ರೇರೇಪಣೆ ನೀಡಿವೆ. ನಲ್ಲಕಣ್ಣುಅವರಿಗೆ 12 ವರ್ಷ ತುಂಬುವ ಮುಂಚೆಯೇ ಅವರಿಗೆ ಭಾರತಿ ಅವರ ಅನೇಕ ಕವಿತೆಗಳು, ಹಾಡುಗಳು ಗೊತ್ತಿತ್ತು. ಇಂದಿಗೂ ಸಹಾ ನಲ್ಲಕಣ್ಣುಅವರು ಭಾರತಿ ಅವರ ಕೆಲವು ಕವಿತೆ ಹಾಗೂ ಹಾಡುಗಳ ಸಾಲುಗಳನ್ನು ನೆನಪಿಸಿಕೊಡು ಹೇಳಬಲ್ಲವರಾಗಿದ್ದರು. ʻಇವುಗಳಲ್ಲಿ ಕೆಲವನ್ನು ನಾನು ಶಾಲೆಯಲ್ಲಿ ನಮ್ಮ ಹಿಂದಿ ಅಧ್ಯಾಪಕರಾದ ಪಂಡಿತ ಪಲ್ಲವೇಸಂ ಚೆಟ್ಟಿಯಾರ್‌ ಅವರಿಂದ ಕಲಿತೆʼ ಎಂದರು. ಇವುಗಳ್ಯಾವುವೂ ಅವರ ಪಠ್ಯಪುಸ್ತಕದಲ್ಲಿ ಇರಲಿಲ್ಲ.

ʻಎಸ್‌. ಸತ್ಯಮೂರ್ತಿ ಅವರು ಶಾಲೆಗೆ ಬಂದಿದ್ದಾಗ ನಾನು ಅವರಿಂದ ಭಾರತಿಯಾರ್‌ ಅವರ ಬರಹಗಳ ಪುಸ್ತಕವನ್ನು ಪಡೆದೆ. ಅದು ಅವರ ಕವಿತೆಗಳ ಸಂಕಲನ ʻತೇಸಿಯ ಗೀತಂ’ʼ. ಸತ್ಯಮೂರ್ತಿ ಅವರು ಸ್ವಾತಂತ್ರ್ಯ ಹೋರಾಟಗಾರರು, ರಾಜಕಾರಣಿ ಹಾಗೂ ಕಲೆಯ ಪ್ರೋತ್ಸಾಹಕರು. ಭಾರತಿ ಅವರು, 1917 ರಲ್ಲಿ ರಷ್ಯಾದಲ್ಲಿ ಜರುಗಿದ ಅಕ್ಟೋಬರ್‌ ಕ್ರಾಂತಿಯನ್ನು ಮೆಚ್ಚಿದ ಮೊದಲಿಗರಲ್ಲೊಬ್ಬರು. ಕ್ರಾಂತಿಯನ್ನು ಶ್ಲಾಘಿಸಿ ಅವರು ಕವಿತೆಯನ್ನೂ ಬರೆದಿದ್ದರು.

ಭಾರತಿ ಅವರ ಕವಿತೆಗಳೆಡೆಗಿನ ಇವರ ಮೋಹ ಹಾಗೂ ಎಂಟು ದಶಕಗಳ ಕಾಲ ಇವರು ಸಕ್ರಿಯವಾಗಿ ಭಾಗವಹಿಸಿದ್ದ ಕೃಷಿ ಹಾಗೂ ಕಾರ್ಮಿಕ ವರ್ಗದ ಚಳವಳಿಯ ಮೂಲಕ ನಲ್ಲಕಣ್ಣುಅವರನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

ಇಲ್ಲದಿದ್ದಲ್ಲಿ, ʻಕಾಮ್ರೇಡ್‌ ಆರ್‌ಎನ್‌ಕೆʼ ಅವರ ಕಥೆಯನ್ನು ಹೇಳುವುದು ನಿಜಕ್ಕೂ ಕಷ್ಟವೇ. ನಾನು ಭೇಟಿ ಮಾಡಿದ್ದವರ ಪೈಕಿ ಸದಾ ಎಲೆ ಮರೆಯಲ್ಲೇ ಉಳಿಯಲು ಬಯಸುವ ವ್ಯಕ್ತಿ ಇವರು. ಇವರು ನಮಗೆ ಹೇಳುವ ಯಾವುದೇ ಮಹಾನ್ ಘಟನೆ, ಮುಷ್ಕರ, ಹರತಾಳದ ಕೇಂದ್ರದಲ್ಲಿ ಇವರನ್ನು ಇರಿಸಿಕೊಳ್ಳಲು ಮೃದುವಾಗಿ ಆದರೆ, ದೃಢವಾಗಿ ನಿರಾಕರಿಸುತ್ತಾರೆ. ಈ ಹಲವು ಘಟನೆಗಳಲ್ಲಿ ಪ್ರಧಾನ ಪಾತ್ರವನ್ನು ಇವರೇ ವಹಿಸಿದ್ದರೂ ಅದನ್ನು ನಿರಾಕರಿಸುತ್ತಾರೆ. ಅವರಿಂದ ಬೇರೊಂದು ರೀತಿಯ ನಿರೂಪಣೆಯನ್ನು ನಾವು ಕೇಳಲು ಸಾಧ್ಯವೇ ಇಲ್ಲ.

ʻಕಾಮ್ರೇಡ್‌ ಆರ್‌ಎನ್‌ಕೆ ಅವರು ನಮ್ಮ ರಾಜ್ಯದ ರೈತ ಚಳವಳಿಯ ಸ್ಥಾಪಕ ನಾಯಕರುಗಳಲ್ಲಿ ಒಬ್ಬರುʼ ಎಂದು ಜಿ. ರಾಮಕೃಷ್ಣನ್‌ ಹೇಳುತ್ತಾರೆ. ʻಜಿಆರ್‌ʼ ಅವರು ಸಿಪಿಎಂನ ರಾಜ್ಯ ಸಮಿತಿ ಸದಸ್ಯ ಆದರೆ, ಈ 97 ವರ್ಷದ ಈ ಸಿಪಿಐ ನಾಯಕರ ಪಾತ್ರ ಹಾಗೂ ಕೊಡುಗೆಯನ್ನು ಮುಕ್ತವಾಗಿ ಪ್ರಶಂಸಿಸುತ್ತಾರೆ. ಶ್ರೀನಿವಾಸ ರಾವ್ ಅವರ ಜೊತೆ ಸೇರಿ ದಶಕಗಳ ಕಾಲ ಎಲ್ಲೆಡೆ ಸುತ್ತಿ ರಾಜ್ಯಾದ್ಯಂತ ಕಿಸಾನ್‌ ಸಭಾವನ್ನು ಸಂಘಟಿಸಿದವರು ಇವರೇ. ತಾವು ಇನ್ನೂ ಹದಿಹರಯಕ್ಕೆ ಕಾಲಿಡುತ್ತಿದ್ದ ಕಾಲದಿಂದಲೂ ಸಂಘಟನೆಗೆ ಶ್ರಮಿಸಿದ್ದಾರೆ. ಈ ಎಲ್ಲಾ ಕೆಲಸಗಳು ಇಂದಿಗೂ ಎಡ ಚಳವಳಿಗೆ ಮೂಲ ಆಧಾರ ಶಕ್ತಿಯಾಗಿದೆ. ತಮಿಳುನಾಡಿನಾದ್ಯಂತ ದಣಿವರಿಯದ ಪ್ರಚಾರ ಹಾಗೂ ಹೋರಾಟಗಳ ಮೂಲಕ ನಲ್ಲಕಣ್ಣುಇದನ್ನು ಆಗುಮಾಡಲು ಶ್ರಮಿಸಿದ್ದಾರೆʼ ಎಂದರು.

ನಲ್ಲಕಣ್ಣುಅವರ ಅಂತ್ಯವಿಲ್ಲದ ಹೋರಾಟಗಳು ರೈತ ಹೋರಾಟಗಳನ್ನು ವಸಾಹತುಶಾಹಿ ವಿರುದ್ಧದ ಹೋರಾಟದೊಂದಿಗೆ ಬೆಸೆಯಿತು. ಇನ್ನೂ ಮುಖ್ಯವಾಗಿ ಆ ಕಾಲಕ್ಕೆ ತಮಿಳುನಾಡಿಗೆ ಅತಿ ಮುಖ್ಯವಾಗಿದ್ದ ಪಾಳೆಯಗಾರಿ ವಿರುದ್ಧದ ಹೋರಾಟವನ್ನು ನಡೆಸಿತು. 1947 ರ ನಂತರವೂ ಇಂತಹ ಹೋರಾಟವೂ ಮುಂದುವರಿಯಿತು. ಇವರ ಹೋರಾಟ ಹಲವು ಮರೆತು ಹೋದ ಸ್ವಾತಂತ್ರ್ಯ ಹೋರಾಟಗಳಲ್ಲಿ ಒಂದು. ಕೇವಲ ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯವಲ್ಲ.

Left: Nallakannu with P. Sainath at his home on December 12, 2022 after the release of The Last Heroes where this story was first featured .
PHOTO • Kavitha Muralidharan
Right: Nallakannu with his daughter Dr. Andal
PHOTO • P. Sainath

ಎಡ: ಈ ಕಥೆ ಮೊದಲು ಪ್ರಕಟಗೊಂಡ ದಿ ಲಾಸ್ಟ್ ಹೀರೋಸ್ ಪುಸ್ತಕ ಬಿಡುಗಡೆಯಾದ ನಂತರ ಡಿಸೆಂಬರ್ 12, 2022ರಂದು ನಲ್ಲಕಣ್ಣು ಅವರ ಮನೆಯಲ್ಲಿ ಪಿ.ಸಾಯಿನಾಥ್ ಅವರೊಂಧಿಗೆ. ಬಲ: ನಲ್ಲಕಣ್ಣು ಮತ್ತು ಅವರ ಮಗಳು ಡಾ. ಆಂಡಾಳ್

ʻನಾವು ರಾತ್ರಿಯ ಹೊತ್ತು ಅವರ ಜೊತೆ ಗುದ್ದಾಡುತ್ತಿದ್ದೆವು. ಕಲ್ಲುಗಳೇ ನಮ್ಮ ಅಸ್ತ್ರ. ಅವರ ಮೇಲೆ ಕಲ್ಲುಗಳನ್ನು ತೂರಿ ಕಾಲ್ಕೀಳುವಂತೆ ಮಾಡುತ್ತಿದ್ದೆವು. ಕೆಲವೊಮ್ಮೆ ಯೋಜಿತ ದಾಳಿ ನಡೆಯುತ್ತಿತ್ತು. 1940 ರ ದಶಕದಲ್ಲಿ ಜರುಗಿದ ಹಲವು   ಪ್ರತಿಭಟನೆಗಳಲ್ಲಿ ಈ ರೀತಿಯ ಹೋರಾಟ ಹಲವು ಬಾರಿ ಜರುಗಿತು. ಆಗ ನಾವಿನ್ನೂ ಬಾಲಕರು. ಆದರೆ ನಾವು ಹೋರಾಡಿದೆವು. ನಮ್ಮ ಆ ಅಸ್ತ್ರವನ್ನು ಹಿಡಿದು ನಾವು ಹಗಲೂ ರಾತ್ರಿ ಹೋರಾಡಿದೆವು!ʼ

ಯಾರ ಜೊತೆ ಹೋರಾಟ? ಏನನ್ನು, ಎಲ್ಲಿಂದ  ಓಡಿಸಿದ್ದು?

ʻಉಪ್ಪಿನಾಗಾರಗಳಿಂದ. ನನ್ನ ಊರಿನ ಬಳಿಯಿದ್ದ ಉಪ್ಪಿನಾಗಾರಗಳು ಬ್ರಿಟಿಷರ ಹತೋಟಿಯಲ್ಲಿದ್ದವು. ಕೆಲಸಗಾರರ ಸ್ಥಿತಿ ಶೋಚನೀಯವಾಗಿತ್ತು. ದಶಕಗಳ ಹಿಂದೆ ಬೃಹತ್ ಹೋರಾಟ ಜರುಗಿತ್ತಲ್ಲಾ ಆ ಗಿರಣಿಗಳಲ್ಲಿ ಪರಿಸ್ಥಿತಿ ಹೇಗಿತ್ತೋ ಅದೇ ರೀತಿ ಈ ಉಪ್ಪಿನಾಗರಗಳ ಸ್ಥಿತಿ ಇತ್ತು. ಪ್ರತಿಭಟನೆಗಳು ಜರುಗಿದವು. ಇದಕ್ಕೆ ಸಾಕಷ್ಟು ಸಾರ್ವಜನಿಕ ಸಹಾನುಭೂತಿ ಹಾಗೂ ಬೆಂಬಲ ಸಿಕ್ಕಿತುʼ.

ʻಪೊಲೀಸರು ಉಪ್ಪಿನಗಾರಗಳ ಮಾಲೀಕರ ಏಜೆಂಟರುಗಳಂತೆ ವರ್ತಿಸಿದರು. ಒಂದು ಘರ್ಷಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬ ಮೃತಪಟ್ಟ. ಅಲ್ಲಿನ ಪೊಲೀಸ್ ಠಾಣೆಯ ಮೇಲೆ ಸಹಾಯ ದಾಳಿ ನಡೆಯಿತು. ಅದರ ನಂತರ ಅವರು ಸಂಚಾರಿ ಪೊಲೀಸ್‌ ದಳ ರಚಿಸಿದರು. ಬೆಳಗಿನ ಹೊತ್ತು ಅವರು ಉಪ್ಪಿನಗಾರಗಳ ಬಳಿ ಹೋಗಿ ರಾತ್ರಿ ವೇಳೆ ನಮ್ಮ ಗ್ರಾಮಗಳಲ್ಲಿ ಬೀಡು ಬಿಡುತ್ತಿದ್ದರು. ಆಗಲೇ ನಾವು ಅವರ ಜೊತೆ ಹೋರಾಡಿದ್ದುʼ. ಈ ಪ್ರತಿಭಟನೆ ಹಾಗೂ ಘರ್ಷಣೆ ಕೆಲವು ವರ್ಷಗಳ ಕಾಲ ಆಗೀಗ ಜರುಗುತ್ತಲೇ ಇತ್ತು. ಆದರೆ, 1942 ರ ಸಮಯದಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಕಾರಣದಿಂದಾಗಿ ಈ ಚಳವಳಿ ಬಳಗೊಂಡಿತು.

Despite being one of the founders of the farmer's movement in Tamil Nadu who led agrarian and working class struggles for eight long decades, 97-year-old Nallakannu remains the most self-effacing leader
PHOTO • PARI: Speical arrangement
Despite being one of the founders of the farmer's movement in Tamil Nadu who led agrarian and working class struggles for eight long decades, 97-year-old Nallakannu remains the most self-effacing leader
PHOTO • M. Palani Kumar

ಎಂಟು ದಶಕಗಳ ಕಾಲ ಕೃಷಿ ಮತ್ತು ಕಾರ್ಮಿಕ ವರ್ಗದ ಹೋರಾಟಗಳನ್ನು ಮುನ್ನಡೆಸಿದ ತಮಿಳುನಾಡಿನ ರೈತ ಚಳವಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದರೂ, 97 ವರ್ಷದ ನಲ್ಲಕಣ್ಣು ಅವರು ಇಂದಿಗೂ ಅತ್ಯಂತ ನಿಸ್ವಾರ್ಥಿ ನಾಯಕರಲ್ಲಿ ಒಬ್ಬರಾಗಿ ಉಳಿದಿದ್ದಾರೆ

ಈ ಎಲ್ಲದರಲ್ಲೂ ಆಗಿನ್ನೂ ಯುವಕರಾಗಿದ್ದ ನಲ್ಲಕಣ್ಣುಭಾಗವಹಿಸಿದ್ದು ಅವರ ತಂದೆ ರಾಮಸ್ವಾಮಿ ತೇವರ್‌ ಅವರಿಗೆ ಹಿಡಿಸಲಿಲ್ಲ. ಕೃಷಿಕರಾಗಿದ್ದ ರಾಮಸ್ವಾಮಿ ಅವರಿಗೆ ನಾಲ್ಕೈದು ಎಕರೆ ಹೊಲ ಇತ್ತು. ಆರು ಜನ ಮಕ್ಕಳಿದ್ದರು. ಆರ್‌ಎನ್‌ಕೆಯನ್ನು ಮನೆಯಲ್ಲಿ ಶಿಕ್ಷಿಸಲಾಗುತ್ತಿತ್ತು. ಕೆಲವೊಮ್ಮೆ ಅವರ ತಂದೆ ಶಾಲೆಯ ಶುಲ್ಕವನ್ನೇ ಕಟ್ಟುತ್ತಿರಲಿಲ್ಲ.

ʻಜನರು ಅವರನ್ನು ನಿಮ್ಮ ಮಗ ಓದುವುದಿಲ್ಲವೇನು? ಯಾವಾಗ ನೋಡಿದರೂ ಹೊರಗಡೆ ಘೋಷಣೆ ಕೂಗುತ್ತಾ ಇರುತ್ತಾನೆ. ಅವನು ಹೋಗಿ ಆಗಲೇ ಕಾಂಗ್ರೆಸ್‌ ಸೇರಿರುವಂತೆ ಕಾಣುತ್ತದೆʼ ಎಂದು ಕೇಳುತ್ತಿದ್ದರು. ಶಾಲೆಗೆ ಶುಲ್ಕ ಕಟ್ಟುವ ಅವಧಿ ಪ್ರತೀ ತಿಂಗಳು 14 ರಿಂದ 24 ರ ನಡುವೆ ಬೀಳುತ್ತಿತ್ತು. ನಾನೇನಾದರೂ ಅವರ ಬಳಿ ಫೀಸ್‌ ಕೇಳಲು ಹೋದರೆ ಅವರು ನನ್ನ ಮೇಲೆ ಕೂಗಾಡುತ್ತಿದ್ದರು. ‘ನೀನು ಶಾಲೆ ಬಿಟ್ಟು ಹೊಲದಲ್ಲಿ ಚಿಕ್ಕಪ್ಪಂದಿರಿಗೆ ಸಹಾಯ ಮಾಡಲು ಹೋಗುʼ ಎನ್ನುತ್ತಿದ್ದರು.

ʻಫೀಸ್ ಕಟ್ಟುವ ಸಮಯ ಮುಗಿಯಲು ಬರುತ್ತಿದ್ದಂತೆ ನನ್ನ ತಂದೆಯ ಆಪ್ತರು ಬಂದು ಅವರನ್ನು ಸಮಾಧಾನಪಡಿಸುತ್ತಿದ್ದರು.  ಇನ್ನು ಮೇಲೆ ಅವನು ಮೊದಲು ಮಾಡುತ್ತಿದ್ದಂತೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಿದ್ದರು. ಆನಂತರವಷ್ಟೇ ಅವರು ಫೀಸ್‌ ತುಂಬುತ್ತಿದ್ದದ್ದುʼ.

ʻಆದರೆ, ಅವರು ಹಾಗೆ ನನ್ನ ಬದುಕನ್ನು, ನನ್ನ ರೀತಿಯನ್ನು ವಿರೋಧಿಸಿದಷ್ಟೂ ನನ್ನೊಳಗೆ ಬಂಡಾಯ ಮೊಳೆಯಿತು. ಮಧುರೈನ ದಿ ಹಿಂದೂ ಕಾಲೇಜಿನಲ್ಲಿ ಪ್ರೌಢ ಶಿಕ್ಷಣದವರೆಗೆ ತಮಿಳಿನಲ್ಲಿ ವ್ಯಾಸಂಗ ಮಾಡಿದೆ. ಅದು ತಿರುನೆಲ್ವೇಲಿ ಜಂಕ್ಷನ್‌ನಲ್ಲಿದೆ. ಆದರೆ, ಅದನ್ನು ಮಧುರೈ ಹಿಂದೂ ಕಾಲೇಜ್‌ ಎಂದೇ ಕರೆಯುತ್ತಿದ್ದರು. ನಾನು ಅಲ್ಲಿ ಎರಡು ವರ್ಷ ಮಾತ್ರ ಓದಿದೆ. ಮುಂದೆ ಓದಲಾಗಲಿಲ್ಲʼ.

ಅವರು ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದರಿಂದ ಹಾಗೂ ಅವರು ಹೇಳಿಕೊಳ್ಳಲು ಇಷ್ಟಪಡದಿದ್ದರೂ ಅವರೇ ಅದನ್ನು ಸಂಘಟಿಸಲು ಆರಂಭಿಸಿದ್ದರಿಂದ ವ್ಯಾಸಂಗ ಮುಂದುವರಿಯಲಿಲ್ಲ. ಆರ್‌ಎನ್‌ಕೆ ಅತಿವೇಗವಾಗಿ ಯುವ ನಾಯಕರಾಗಿ ಬೆಳೆಯಲು ಆರಂಭಿಸಿದರು. ಆದರೆ, ಅವರು ಎಂದೂ ತಮ್ಮ ಮೇಲೆ ಗಮನ ಬೀಳಲಿ ಎಂದು ಬಯಸಲಿಲ್ಲ. ಬದಲಿಗೆ ಅದರಿಂದ ಆದಷ್ಟೂ ದೂರವೇ ಇರಲು ಯತ್ನಿಸಿದರು.

The spirit of this freedom fighter was shaped by the lives and writings of Lenin, Marx, Periyar, Ambedkar, Bhagat Singh and others. Even today Nallakannu recalls lines from songs and poems by the revolutionary Tamil poet Subramania Bharti, which were often banned
PHOTO • PARI: Speical arrangement
The spirit of this freedom fighter was shaped by the lives and writings of Lenin, Marx, Periyar, Ambedkar, Bhagat Singh and others. Even today Nallakannu recalls lines from songs and poems by the revolutionary Tamil poet Subramania Bharti, which were often banned
PHOTO • PARI: Speical arrangement

ಈ ಸ್ವಾತಂತ್ರ್ಯ ಹೋರಾಟಗಾರನ ಹೋರಾಟದ ಬದುಕು ಲೆನಿನ್, ಮಾರ್ಕ್ಸ್, ಪೆರಿಯಾರ್, ಅಂಬೇಡ್ಕರ್, ಭಗತ್ ಸಿಂಗ್ ಮತ್ತು ಇತರರ ಜೀವನ ಮತ್ತು ಬರಹಗಳಿಂದ ರೂಪುಗೊಂಡಿತು. ಇಂದಿಗೂ ನಲ್ಲಕಣ್ಣು ಕ್ರಾಂತಿಕಾರಿ ತಮಿಳು ಕವಿ ಸುಬ್ರಮಣ್ಯ ಭಾರತಿಯವರ ಹಾಡುಗಳು ಮತ್ತು ಕವಿತೆಗಳ ಸಾಲುಗಳನ್ನು ನೆನಪಿಸಿಕೊಳ್ಳುತ್ತಾರೆ, ಅವುಗಳನ್ನು ಆ ಕಾಲದಲ್ಲಿ ಮತ್ತೆ ಮತ್ತೆ ನಿಷೇಧಿಸಲಾಗುತ್ತಿತ್ತು

ನಲ್ಲಕಣ್ಣುಅವರು ತಮ್ಮನ್ನು ತೊಡಗಿಸಿಕೊಂಡಿದ್ದ ಕಾರ್ಯಾಚರಣೆಗಳು ಹಾಗೂ ಕಾರ್ಯಕ್ರಮಗಳ ಸರಿಯಾದ ಪಟ್ಟಿ ಇಡುವುದು ತೀರಾ ಕಷ್ಟ. ಯಾಕೆಂದರೆ, ಅವರು ಲೆಕ್ಕವಿರದಷ್ಟು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಅದೂ ಹಲವು  ರಂಗಗಳಲ್ಲಿ..

ಸ್ವಾತಂತ್ರ್ಯ ಹೋರಾಟದಲ್ಲಿ ಅವರಿಗೆ ತುಂಬಾ ಮುಖ್ಯ ಎನಿಸಿದ ಕ್ಷಣಗಳನ್ನು ಅವರು ಸರಳವಾಗಿ ಕ್ವಿಟ್ ಇಂಡಿಯಾ ಚಳವಳಿಯ ಸುತ್ತ ಜರುಗಿದ ಘಟನೆಗಳು ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿದರು. ಅವರಿಗೆ ಆಗ ಇನ್ನೂ 17 ವರ್ಷ  ತುಂಬಿರಲಿಲ್ಲ. ಆದರೆ, ಆ ವೇಳೆಗಾಗಲೇ ಅವರು ಪ್ರತಿಭಟನೆಗಳಲ್ಲಿ ತೀರಾ ಮುಖ್ಯವಾದ ವ್ಯಕ್ತಿಯಾಗಿದ್ದರು. ಅವರ 12 ರಿಂದ 15 ವರ್ಷದ ನಡುವಿನ ಕಾಲ ಅವರು ಕಾಂಗ್ರೆಸ್ಸಿನಿಂದ ಕಮ್ಯುನಿಸ್ಟ್‌ ಆಗುವ ಕಡೆಗೆ ಹೊರಳಿದ ಕಾಲವೂ ಹೌದು.

ಯಾವ ರೀತಿಯ ಪ್ರತಿಭಟನಾ ಸಭೆಗಳನ್ನು ಇವರು ಸಂಘಟಿಸಲು ಸಹಾಯ ಮಾಡುತ್ತಿದ್ದರು ಅಥವಾ ಭಾಗವಹಿಸುತ್ತಿದ್ದರು?

ʻಮೊದಲು ತಗಡಿನಿಂದ ಮಾಡಿದ ಮೆಗಾಫೋನ್‌ಗಳಿರುತ್ತಿದ್ದವು. ನಾವು ಹಳ್ಳಿ ಅಥವಾ ಪಟ್ಟಣದಲ್ಲಿ ಎಲ್ಲಿ ಸಾಧ್ಯವಾಗುತ್ತಿತತೋ ಅಲ್ಲಿಂದ ಟೇಬಲ್‌ ಹಾಗೂ ಕುರ್ಚಿಗಳನ್ನು ಸಂಗ್ರಹಿಸಿ ತಂದಿಟ್ಟು ಹಾಡಲು ಆರಂಭಿಸುತ್ತಿದ್ದೆವು. ಭಾಷಣಕಾರ ಹತ್ತಿ ನಿಂತು ಜನರನ್ನು ಉದ್ದೇಶಿಸಿ ಮಾತನಾಡಲು ಟೇಬಲ್‌ ಬಳಸುತ್ತಿದ್ದೆವು. ನೆನಪಿರಲಿ. ಜನರು ಸೇರಿಯೇ ಸೇರುತ್ತಿದ್ದರುʼ. ಜನರನ್ನು ಸಂಘಟಿಸುವಲ್ಲಿ ಅವರು ವಹಿಸುತ್ತಿದ್ದ ಮುಖ್ಯ ಪಾತ್ರದ ಬಗ್ಗೆ ಮತ್ತೆ ಅವರು ಏನನ್ನೂ ಹೇಳಿಕೊಳ್ಳಲು ಹೋಗಲಿಲ್ಲ. ಅವರಂತಹ ಕಾಲಾಳು ಯೋಧರೇ ಇದನ್ನೆಲ್ಲಾ ಸಾಧ್ಯ ಮಾಡುತ್ತಿದ್ದರು ಸಹಾ.

ನಂತರ ಜೀವಾನಂದಂರಂತಹ ಭಾಷಣಕಾರರು ಆ ಟೇಬಲ್‌ನ ಮೇಲೆ ಹತ್ತಿ ನಿಂತು ಸಾಕಷ್ಟು ದೊಡ್ಡದಾಗಿಯೇ ಸೇರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅದೂ ಮೈಕ್‌ ಇಲ್ಲದೆ. ಅವರಿಗೆ ಅದು ಬೇಕಾಗಿಯೂ ಇರಲಿಲ್ಲ.

ʻದಿನಕಳೆದಂತೆ ನಾವು ಮೈಕ್‌ ಹಾಗೂ ಧ್ವನಿವರ್ಧಕಗಳನ್ನು ತರಲು ಶುರು ಮಾಡಿದೆವು. ಆಗ ತುಂಬಾ ಬೇಡಿಕೆಯಲ್ಲಿದ್ದದ್ದು ಚಿಕಾಗೋ ಮೈಕ್‌ಗಳು. ಅಥವಾ ಚಿಕಾಗೋ ರೇಡಿಯೋ ಸಿಸ್ಟಮ್‌. ನಮಗೆ ಅದನ್ನು ಪ್ರತೀ ಬಾರಿ ತರಲು ಆಗುತ್ತಿರಲಿಲ್ಲʼ.

RNK has been a low-key foot soldier. Even after playing a huge role as a leader in many of the important battles of farmers and labourers from 1940s to 1960s and beyond, he refrains from drawing attention to his own contributions
PHOTO • M. Palani Kumar
RNK has been a low-key foot soldier. Even after playing a huge role as a leader in many of the important battles of farmers and labourers from 1940s to 1960s and beyond, he refrains from drawing attention to his own contributions
PHOTO • M. Palani Kumar

ಆರ್‌ಎನ್‌ಕೆ ಸಾಮಾನ್ಯ ಕಾರ್ಯಕರ್ತನಾಗಿದ್ದರು. 1940ರಿಂದ 1960ರ ದಶಕದವರೆಗೆ ಮತ್ತು ಅದರಾಚೆಗಿನ ರೈತ ಮತ್ತು ಕಾರ್ಮಿಕ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ಪ್ರಮುಖ ಹೋರಾಟಗಳಲ್ಲಿ ನಾಯಕರಾಗಿ ದೊಡ್ಡ ಪಾತ್ರವನ್ನು ವಹಿಸಿದ ನಂತರವೂ, ಅವರು ಹೋರಾಟಕ್ಕೆ ತಮ್ಮ ಕೊಡುಗೆಗಳ ಕುರಿತು ಪ್ರಚಾರ ಬಯಸಲಿಲ್ಲ

ಬ್ರಿಟಿಷರು ದಾಳಿ ಮಾಡಿದಾಗ ಪರಿಸ್ಥಿತಿ ಹೇಗಿರುತ್ತಿತ್ತು? ಅವರು ಹೇಗೆ ಸಂವಹನ ಮಾಡಿಕೊಳ್ಳುತ್ತಿದ್ದರು?

ʻಆ ರೀತಿಯ ತುಂಬಾ ಸಂದರ್ಭಗಳಿದ್ದವು. 1946 ರಲ್ಲಿನ ರಾಯಲ್‌ ಇಂಡಿಯನ್‌ ನೇವಿ (ಆರ್‌ಐಎನ್‌) ಸಶಸ್ತ್ರ ಬಂಡಾಯದ ನಂತರ ಕಮ್ಯುನಿಸ್ಟರ ಮೇಲೆ ಮಹಾ ದಾಳಿ ನಡೆಯಿತು. ಆ ಮೊದಲೂ ದಾಳಿ ನಡೆಯುತ್ತಿತ್ತು. ಗ್ರಾಮದಲ್ಲಿದ್ದ ಪಕ್ಷದ ಎಲ್ಲಾ ಕಚೇರಿಯನ್ನು ಬ್ರಿಟಿಷರು ಬಿಡದಂತೆ ಶೋಧಿಸಿದರು. ಸ್ವಾತಂತ್ರ್ಯ ಬಂದ ನಂತರವೂ, ಪಕ್ಷದ ಮೇಲೆ ನಿಷೇಧ ಹೇರಿದಾಗ  ಇವು ಮುಂದುವರೆದವು. ನಮ್ಮ ಬಳಿ ‘ಜನಶಕ್ತಿ’ಯಂತಹ ನಿಯತಕಾಲಿಕೆಗಳು ಹಾಗೂ ವಾರ್ತಾಪತ್ರಗಳಿದ್ದವು. ಇದಲ್ಲದೆ, ಇನ್ನೂ ಅನೇಕ ರೀತಿಯ ಸಂವಹನ ರೀತಿಗಳಿದ್ದವು. ಕೆಲವೊಂದಂತೂ ಶತಮಾನದಷ್ಟೂ ಹಳೆಯದಾದ ಸರಳ ಸಂಕೇತಗಳುʼ.

ʻಬ್ರಿಟಿಷರ ವಿರುದ್ಧ ಹೋರಾಡಿದ 18 ನೆಯ ಶತಮಾನದ ಮಹಾನ್‌ ವ್ಯಕ್ತಿ ಕಟ್ಟಾಬೊಮ್ಮನ್‌ ಕಾಲದಿಂದಲೂ ತಮ್ಮ ಮನೆಯ ಮುಂದೆ ಬೇವಿನಕಡ್ಡಿಗಳನ್ನು ಇಡುತ್ತಿದ್ದರು. ಇದು ಮನೆಯಲ್ಲಿರುವ ಯಾರಿಗೋ ಸಿಡುಬು ಅಥವಾ ಇನ್ನೇನೋ ಖಾಯಿಲೆಯಾಗಿದೆ ಎನ್ನುವುದರ ಸಂಕೇತ. ಇದನ್ನೇ ನಾವು ಒಳಗೆ ಒಂದು ಗುಪ್ತ ಸಭೆ ನಡೆಯುತ್ತಿದೆ ಎನ್ನುವುದನ್ನು ಸಂಕೇತಿಸಲೂ ಬಳಸಿದೆವು.ʼ

ʻಒಳಗೆ ಮಗು ಅಳುವ ಶಬ್ದ ಏನಾದರೂ ಕೇಳಿ ಬರುತ್ತಿದ್ದರೆ, ಸಭೆ ಇನ್ನೂ ಜರುಗುತ್ತಿದೆ. ಮನೆಯ ಮುಂದಿನ ಸೆಗಣಿ ಇನ್ನೂ ಹಸಿಯಾಗಿದ್ದರೆ ಸಭೆಯಿನ್ನೂ ಮುಗಿದಿಲ್ಲ. ಸೆಗಣಿಯೇನಾದರೂ ಒಣಗಿದ್ದರೆ, ಅದು ಏನೋ ಅಪಾಯ ಇದೆ ಹೊರಡಿ ಅಥವಾ ಸಭೆ ಮುಗಿದಿದೆ ಎಂದು ಸೂಚಿಸುತ್ತಿತ್ತು.ʼ

ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಆರ್‌ಎನ್‌ಕೆ ಅವರಿಗೆ ಯಾವುದು ಪ್ರಧಾನ ಸ್ಫೂರ್ತಿಯ ಸೆಲೆಯಾಗಿತ್ತು?

ʻಕಮ್ಯುನಿಸ್ಟ್‌ ಪಕ್ಷ ನಮ್ಮ ಮಹಾನ್‌ ಸ್ಫೂರ್ತಿಯ ಸೆಲೆಯಾಗಿತ್ತುʼ.

Nallakannu remained at the forefront of many battles, including the freedom movement, social reform movements and the anti-feudal struggles. Being felicitated (right) by comrades and friends in Chennai
PHOTO • PARI: Speical arrangement
Nallakannu remained at the forefront of many battles, including the freedom movement, social reform movements and the anti-feudal struggles. Being felicitated (right) by comrades and friends in Chennai
PHOTO • PARI: Speical arrangement

ಸ್ವಾತಂತ್ರ್ಯ ಚಳವಳಿ, ಸಾಮಾಜಿಕ ಸುಧಾರಣಾ ಚಳುವಳಿಗಳು ಮತ್ತು ಊಳಿಗಮಾನ್ಯ ವಿರೋಧಿ ಹೋರಾಟಗಳು ಸೇರಿದಂತೆ ಅನೇಕ ಹೋರಾಟಗಳಲ್ಲಿ ನಲ್ಲಕಣ್ಣು ಮುಂಚೂಣಿಯಲ್ಲಿದ್ದರು. ಚೆನ್ನೈಯಲ್ಲಿ ಸಂಗಾತಿಗಳು ಮತ್ತು ಸ್ನೇಹಿತರಿಂದ ಅವರನ್ನು (ಬಲಕ್ಕೆ) ಸನ್ಮಾನಿಸಲಾಗುತ್ತಿದೆ

*****

ʻನನ್ನನ್ನು ಅರೆಸ್ಟ್‌ ಮಾಡಿದಾಗ ನಾನು ನನ್ನ ಮೀಸೆಯನ್ನು ಏಕೆ ತೆಗೆದೆ? ʼ ಎಂದು ಆರ್‌ಎನ್‌ಕೆ ನಗುತ್ತಾ ಕೇಳಿದರು. ʻನಾನು ಎಂದೂ ಹಾಗೆ ಮಾಡಲಿಲ್ಲ. ಮೊದಲಿಗೆ ನನ್ನ ಗುರುತು ಮರೆಮಾಚಬೇಕು ಎಂದು ನಾನು ಅದನ್ನು ಬೆಳಸಲಿಲ್ಲ. ಹಾಗಿದ್ದ ಪಕ್ಷದಲ್ಲಿ ಅದನ್ನು ಯಾಕಾದರೂ ಬೆಳೆಸುತ್ತಿದ್ದೆ? ʼ

‘ಪೊಲೀಸರು ನನ್ನ ಮೀಸೆಯನ್ನು ಸಿಗರೇಟ್‌ನಿಂದ ಸುಟ್ಟು ಹಾಕಿದರು. ಮದ್ರಾಸ್‌ನಲ್ಲಿ ಕೃಷ್ಣಮೂರ್ತಿ ಎನ್ನುವ ಇನ್‌ಸ್ಪೆಕ್ಟರ್‌ ನನಗೆ ನೀಡಿದ ಹಿಂಸೆ ಅದು. ರಾತ್ರಿ 2 ಗಂಟೆಯಲ್ಲಿ ಆತ ನನ್ನ ಕೈಗಳನ್ನು ಕಟ್ಟಿಹಾಕಿದ. ಬೆಳಗ್ಗೆ ಹತ್ತು ಗಂಟೆಗೆ ಬಂದು ಅದನ್ನು ಬಿಚ್ಚಿ ಲಾಠಿಯಿಂದ ದೀರ್ಘಕಾಲ ಹೊಡೆದʼ.

ಈ ಎಲ್ಲವನ್ನೂ ನಲ್ಲಕಣ್ಣುಅವರು ಇತರ ಸ್ವಾತಂತ್ರ್ಯ ಯೋಧರುಗಳಂತೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲದಂತೆ ನೆನಪಿಸಿ ಕೊಳ್ಳುತ್ತಿದ್ದರು. ತಮಗೆ ನೀಡಿದ ಹಿಂಸೆಯ ಬಗ್ಗೆಯೂ ಅವರಿಗೆ ಯಾವುದೇ ನಂಜಿರಲಿಲ್ಲ. ಆನಂತರದ ದಿನಗಳಲ್ಲಿ ಆ ಇನ್‌ಸ್ಪೆಕ್ಟರ್‌ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಆರ್‌ಎನ್‌ಕೆ ಅವನನ್ನೇನೂ ಹುಡುಕಲು ಹೋಗಲಿಲ್ಲ. ಹಾಗೆ ಮಾಡಬೇಕೆಂದು ಅವರಿಗೆ ಒಮ್ಮೆಯೂ ಅನಿಸಲಿಲ್ಲʼ.

ಇದು ಜರುಗಿದ್ದು 1948 ರಲ್ಲಿ, ಭಾರತ ಸ್ವಾತಂತ್ರ್ಯ ಪಡೆದ ನಂತರ. ʻಮದ್ರಾಸ್‌ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಪಕ್ಷವನ್ನು ನಿಷೇಧಿಸಲಾಗಿತ್ತು. 1951 ರವರೆಗೂ ಅದು ಹಾಗೆಯೇ ಮುಂದುವರಿಯಿತುʼ.

Nallakannu remains calm and sanguine about the scary state of politics in the country – 'we've seen worse,' he tells us
PHOTO • M. Palani Kumar

ನಲ್ಲಕಣ್ಣು ದೇಶದ ರಾಜಕೀಯದ ಭಯಾನಕ ಸ್ಥಿತಿಯ ಕುರಿತು ಆಶಾವಾದಿಯಾಗಿದ್ದಾರೆ. ತಾನು ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿಯನ್ನು ನೋಡಿರುವುದಾಗಿ ಅವರು ಹೇಳುತ್ತಾರೆ

ʻಆದರೆ, ನೆನಪಿರಲಿ. ನಾವು ಬೆಲೆ ತೆತ್ತಬೇಕಾಗಿ ಬಂದ ಇನ್ನೂ ಅನೇಕ ಪಾಳೆಯಗಾರಿ ವಿರೋಧಿ ಸಂಘರ್ಷಗಳು ಬಾಕಿ ಇದ್ದವು. ಇದು 1947 ಕ್ಕೂ ಎಷ್ಟೋ ಮುಂಚೆ ಆರಂಭವಾಗಿ ಸ್ವಾತಂತ್ರ್ಯ ಬಂದ ನಂತರದಲ್ಲೂ ಮುಂದುವರಿಯಿತುʼ.

ʻನಾವು ಸ್ವಾತಂತ್ರ್ಯ ಚಳವಳಿ, ಸಮಾಜ ಸುಧಾರಣೆ, ಪಾಳೆಯಗಾರಿಕೆಯ ವಿರುದ್ಧ ಹೋರಾಟ ಎಲ್ಲವನ್ನೂ ಒಟ್ಟಿಗೇ ಸೇರಿಸಿದೆವು. ನಾವು ಕೆಲಸ ಮಾಡುತ್ತಿದ್ದುದೇ ಹಾಗೆ.

ನಾವು ಉತ್ತಮ ಹಾಗೂ ಸಮಾನ ವೇತನಕ್ಕಾಗಿ ಹೋರಾಡಿದೆವು. ಅಸ್ಪೃಶ್ಯತೆ ಅಳಿಸಲು ಹೋರಾಡಿದೆವು. ನಾವು ದೇಗುಲ ಪ್ರವೇಶ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದೆವುʼ

ʻಜಮೀನ್ದಾರಿ ಪದ್ಧತಿ ಕಿತ್ತು ಹಾಕಲು ನಡೆಸಿದ ಪ್ರಚಾರಾಂದೋಲನ ತಮಿಳುನಾಡಿನ ಮುಖ್ಯ ಚಳವಳಿಗಳಲ್ಲೊಂದು. ರಾಜ್ಯದಲ್ಲಿ ಹಲವು ಪ್ರಮುಖ ಜಮೀನ್ದಾರರಿದ್ದರು. ನಾವು ತಲಾತಲಾಂತರವಾಗಿ ಬಂದ ʻಮೀರಸ್ದಾರಿʼ ಜಮೀನು ಹಾಗೂ ರಾಜರುಗಳಿಂದ ಇನಾಮಾಗಿ ಪಡೆದ ʻಇನಾಂದಾರಿʼ ಜಮೀನು ಎರಡೂ ವ್ಯವಸ್ಥೆಯ ವಿರುದ್ಧ ಹೋರಾಡಿದೆವು. ಈ ಹೋರಾಟಗಳ ಮುಂಚೂಣಿಯಲ್ಲಿದ್ದದ್ದು ಕಮ್ಯುನಿಸ್ಟರು. ಹಲವು ಬಲಶಾಲಿ ಜಮೀನ್ದಾರರನ್ನು ಎದುರು ಹಾಕಿಕೊಳ್ಳಬೇಕಿತ್ತು.   ಅವರ ಶಸ್ತ್ರ ಸಮೇತವಾದ ಖಾಸಗಿ ಗೂಂಡಾ ಪಡೆ, ಕೊಲೆಗಡುಕರನ್ನು ನಾವು ಎದುರಿಸಬೇಕಿತ್ತುʼ.

ಪುನ್ನಿಯೂರು ಸಾಂಬಸಿವ ಅಯ್ಯರ್‌, ನೆಡುಮಾನಂ ಸಾಮಿಯಪ್ಪ ಮೊದಲಿಯಾರ್‌, ಪೂಂಡಿ ವಂಡಿಯಾರ್‌ರಂತಹ ಜಮೀನ್ದಾರರಿದ್ದರು. ಅವರು ಸಾವಿರಾರು ಎಕರೆ ಫಲವತ್ತಾದ ಜಮೀನನ್ನು ಹೊಂದಿದ್ದರು.

ನಾವು ಈಗ ಚರಿತ್ರೆಯ ಒಂದು ಕುತೂಹಲಕಾರಿ ಹಂತವನ್ನು ಗೊತ್ತು ಮಾಡಿಕೊಳ್ಳುತ್ತಿದ್ದೆವು. ಆ ಚರಿತ್ರೆಯನ್ನು ಆಗುಮಾಡಲು ಸಹಾಯ ಮಾಡಿದ ವ್ಯಕ್ತಿಯ ಜೊತೆಯೇ ಕುಳಿತುʼ.

PHOTO • PARI: Speical arrangement

ʼಸ್ವಾತಂತ್ರ್ಯ, ಸಾಮಾಜಿಕ ಸುಧಾರಣೆ, ಊಳಿಗಮಾನ್ಯ ವಿರೋಧಿ, ಉತ್ತಮ ಮತ್ತು ಸಮಾನ ವೇತನಕ್ಕಾಗಿ ಹೋರಾಟ, ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ದೇವಾಲಯ ಪ್ರವೇಶ ಚಳವಳಿಯಲ್ಲಿ ಗಂಭೀರ ಪಾತ್ರವನ್ನು ವಹಿಸಿದ್ದೆವುʼ

ʻಇದಲ್ಲದೆ ಶತಮಾನಗಳಷ್ಟು ಹಳೆಯದಾದ ಬ್ರಾಹ್ಮತೇಯಮ್‌ ಹಾಘೂ ತೇವತಾನಮ್‌ನಂತಹ ಅಳೆಯ ಆಚರಣೆಗಳೂ ಇದ್ದವುʼ.

ʻಬ್ರಾಹ್ಮತೇಯಮ್‌ನಲ್ಲಿ ರಾಜರುಗಳು ಬ್ರಾಹ್ಮಣರಿಗೆ ಉಚಿತವಾಗಿ ಭೂಮಿಯನ್ನು ಕೊಡುತ್ತಿದ್ದರು. ಅವರು ಆ ಭೂಮಿಯಿಂದ ಲಾಭ ಮಾಡಿಕೊಳ್ಳುತ್ತಿದ್ದರು. ಅವರು ನೇರವಾಗಿ ಅದನ್ನು ಉಳುತ್ತಿರಲಿಲ್ಲ. ಆದರೆ, ಅದರ ಲಾಭ ಅವರಿಗೆ ಹೋಗುತ್ತಿತ್ತು. ತೇವತಾನಮ್‌ನಲ್ಲಿ ದೇವಸ್ಥಾನಗಳಿಗೆ ಜಮೀನನ್ನು ನೀಡಲಾಗುತ್ತಿತ್ತು. ಕೆಲವೊಮ್ಮೆ ಇಡೀ ಗ್ರಾಮವನ್ನೇ ಚಳವಳಿಯನ್ನಾಗಿ ಕೊಡಲಾಗುತ್ತಿತ್ತು. ಸಣ್ಣ ಹಿಡುವಳಿದಾರರು, ಕೆಲಸಗಾರರು ಅವರ ಕೃಪೆಯಲ್ಲಿ ಬದುಕಬೇಕಾಗಿತ್ತು. ಯಾರಾದರೂ ಪ್ರತಿಭಟಿಸಿದರೆ ಅವರನ್ನು ಊರಿನಿಂದಲೇ ಹೊರಹಾಕಲಾಗುತ್ತಿತ್ತುʼ.

ʻಇಂತಹ ಮಠಗಳು ಆರು ಲಕ್ಷ ಎಕರೆ ಭೂಮಿಯನ್ನು ಹೊಂದಿದ್ದವು ಎನ್ನುವುದು ನೆನಪಿರಲಿ. ಬಹುಶಃ ಈಗಲೂ ಹಾಗೇ ಇರಬಹುದು. ಆದರೆ, ಹಲ್ಲು ಕಚ್ಚಿ ನಡೆಸಿದ ಪ್ರಬಲ ಜನ ಹೋರಾಟಗಳ ಮೂಲಕ ಅದರ ಪ್ರಭಾವವನ್ನು ಇನ್ನಿಲ್ಲದಂತೆ ತಗ್ಗಿಸಲಾಗಿದೆʼ.

ʻತಮಿಳುನಾಡು ಜಮೀನ್ದಾರಿ ನಿವಾರಣಾ ಕಾಯಿದೆ 1948 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಕಾಯಿದೆಯಡಿ ಜಮೀನ್ದಾರರು ಹಾಗೂ ದೊಡ್ಡ ಭೂಮಾಲೀಕರಿಗೆ ಪರಿಹಾರ ನೀಡಲಾಯಿತೇ ಹೊರತು ಅವರ ಜಮೀನಿನಲ್ಲಿ ದುಡಿದವರಿಗಲ್ಲ. ಪ್ರಭಾವಿ ಗೇಣಿದಾರರು ಒಂದಿಷ್ಟು ಪರಿಹಾರ ಪಡೆದರು. ಆದರೆ, ಜಮೀನಿನಲ್ಲಿ ಕೆಲಸ ಮಾಡಿದ ಬಡವರಿಗೆ ಏನೂ ಸಿಗಲಿಲ್ಲ. 1947 ಹಾಗೂ 49 ರ ನಡುವೆ ಇಂತಹ ದೇವಸ್ಥಾನಗಳ ಜಮೀನಿನಿಂದ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಒಕ್ಕಲೆಬ್ಬಿಸಲಾಯಿತು. ಆಗ ನಾವು ‘ಯಾವಾಗ ರೈತರು ಭೂ ಒಡೆಯರಾಗುತ್ತಾರೋ ಆಗಮಾತ್ರ ಅವರು ಚೆನ್ನಾಗಿ ಬದುಕಲು ಸಾಧ್ಯ’ ಎಂಬ ಘೋಷಣೆಯೊಂದಿಗೆ ಬೃಹತ್‌ ಹೋರಾಟ ಸಂಘಟಿಸಿದೆವುʼ.

ʻಇವು ನಮ್ಮ ಹೋರಾಟಗಳು. 1948 ರಿಂದ 1960 ರವರೆಗೂ ಜರುಗಿದ ಈ ಹೋರಾಟಗಳಲ್ಲಿ ನಾವು ನಮ್ಮ ಹಕ್ಕುಗಳನ್ನು ಪಡೆಯುವವರೆಗೂ ಹೋರಾಟ ನಡೆಸಿದೆವು. ಆಗ ಮುಖ್ಯಮಂತ್ರಿಯಾಗಿದ್ದ ಸಿ. ರಾಜಗೋಪಾಲಾಚಾರಿಯವರು ಭೂಮಾಲೀಕರು ಹಾಗೂ ಮಠಗಳ ಪರವಾಗಿ ನಿಂತರು. ನಾವು ʻಉಳುವವನೇ ಹೊಲದೊಡೆಯʼ ಎಂದೆವು. ರಾಜಾಜಿ ಅವರು ಯಾರ ಬಳಿ ದಾಖಲೆಗಳಿವೆಯೋ ಅವರೇ ಒಡೆಯರು ಎಂದರು. ಆದರೆ, ಇಷ್ಟು ಮಾತ್ರ ನಿಜ. ನಮ್ಮ ಹೋರಾಟ ಈ ದೇವಸ್ಥಾನ ಹಾಗೂ ಮಠಗಳು ಹೊಂದಿದ್ದ ಅಧಿಕಾರವನ್ನು ತೊಡೆದು ಹಾಕಿತು. ನಾವು ಅವರ ಬೆಳೆ ಹಾಗೂ ಇತರ ನಿಯಮಗಳನ್ನು ಮುರಿದು ಹಾಕಿದೆವು. ನಾವು ಗುಲಾಮರಾಗಿ ಉಳಿಯಲು ಇಚ್ಛಿಸಲಿಲ್ಲʼ.

ʻಈ ಎಲ್ಲ ಹೋರಾಟಗಳನ್ನೂ ನಾವು ನಡೆಸುತ್ತಿದ್ದ ಸಾಮಾಜಿಕ ಹೋರಾಟಗಳಿಂದ ಪ್ರತ್ಯೇಕಿಸಲು ಬರುವುದಿಲ್ಲʼ.

ʻಒಂದು ರಾತ್ರಿ ದೇವಸ್ಥಾನದಲ್ಲಿ ಆ ರೀತಿಯ ಒಂದು ಪ್ರತಿಭಟನೆಯನ್ನು ನೋಡಿದ ನೆನಪಿದೆ. ಎಲ್ಲಾ ದೇವಸ್ಥಾನದಲ್ಲೂ ರಥೋತ್ಸವವಿರುತ್ತದೆ. ರಥಗಳನ್ನು ಬಲವಾದ ಹಗ್ಗಗಳಿಂದ ಎಳೆಯುವವರು ಅಲ್ಲಿನ ರೈತರೇ. ರೈತರನ್ನು ಹೀಗೆ ಒಕ್ಕಲೆಬ್ಬಿಸಿದರೆ, ಅವರು ರಥವನ್ನು ಎಳೆಯಲು ಬರುವುದಿಲ್ಲ ಎಂದು ನಾವು ಘೋಷಿಸಿದೆವು. ಇಷ್ಟೇ ಅಲ್ಲದೆ ಹೊಲದಲ್ಲಿ  ಬೇಕಾದ ಧಾನ್ಯವನ್ನು ಕೊಂಡೊಯ್ಯುವ ನಮ್ಮ ಹಕ್ಕನ್ನು ಸಹಾ ನಾವು ಪ್ರತಿಪಾದಿಸಿದೆವುʼ.

R. Nallakannu accepted the government of Tamil Nadu's prestigious Thagaisal Thamizhar Award on August 15, 2022, but immediately donated the cash prize of Rs. 10 lakhs to the Chief Minister’s Relief Fund, adding another 5,000 rupees to it
PHOTO • M. Palani Kumar
R. Nallakannu accepted the government of Tamil Nadu's prestigious Thagaisal Thamizhar Award on August 15, 2022, but immediately donated the cash prize of Rs. 10 lakhs to the Chief Minister’s Relief Fund, adding another 5,000 rupees to it
PHOTO • P. Sainath

ನಲ್ಲಕಣ್ಣು ಅವರು ಆಗಸ್ಟ್ 15, 2022ರಂದು ತಮಿಳುನಾಡು ಸರ್ಕಾರದ ಪ್ರತಿಷ್ಠಿತ ತಗೈಸಲ್ ತಮಿಳರ್ ಪ್ರಶಸ್ತಿಯನ್ನು ಸ್ವೀಕರಿಸಿದರು, ಆದರೆ ತಕ್ಷಣವೇ ಆ 10 ಲಕ್ಷ ರೂ.ಗಳ ನಗದು ಬಹುಮಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು

ನಲ್ಲಕಣ್ಣುಅವರು ಈಗ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಅನೇಕ ಘಟನೆಗಳನ್ನು ಕಲಸಿ ಹೇಳುತ್ತಿದ್ದರು. ಒಂದು ರೀತಿಯಲ್ಲಿ ಅದು ಗೊಂದಲಕರವಾಗಿತ್ತು. ಇನ್ನೊಂದು ರೀತಿಯಲ್ಲಿ ಅದು ಆ ಕಾಲದ ಸಂಕೀರ್ಣತೆಯನ್ನು ಬಿಂಬಿಸುತ್ತಿತ್ತು. ಅಲ್ಲಿ ಹಲವು ರೀತಿಯ ಸ್ವಾತಂತ್ರ್ಯಗಳು ಅಡಕವಾಗಿದ್ದವು. ಅದರಲ್ಲಿ ಕೆಲವಕ್ಕೆ ಸ್ಪಷ್ಟ ಆರಂಭ ಹಾಗೂ ಅಂತ್ಯದ ದಿನಾಂಕಗಳಿರಲಿಲ್ಲ. ಆ ಸ್ವಾತಂತ್ರ್ಯವನ್ನು ಪಡೆಯುವ ನಿಟ್ಟಿನ ಹಾದಿಯಲ್ಲಿ ಆರ್ ಎನ್ ಕೆ ಯಂತಹವರು ದೃಢವಾಗಿ ನಿಂತರು.

ʻನಾವು ಆ ದಶಕಗಳುದ್ದಕ್ಕೂ ಕಾರ್ಮಿಕರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯದ ವಿರುದ್ಧವೂ ಹೋರಾಡಿದೆವುʼ.

ʻ1943 ರಲ್ಲಿ ದಲಿತ ಕಾರ್ಮಿಕರಿಗೆ ಇನ್ನೂ ಛಡಿಯೇಟು ನೀಡುತ್ತಿದ್ದರು. ಹಾಗೂ ಅದರಿಂದ ಆದ ಗಾಯಗಳ ಮೇಲೆ ಸೆಗಣಿ ನೀರನ್ನು ಹಾಕುತ್ತಿದ್ದರು. ಬೆಳಿಗ್ಗೆ 4 ಹಾಗೂ 5 ರ ವೇಳೆಗೆ ಕೋಳಿ ಯಾವಾಗ ಕೂಗುತ್ತದೋ ಆ ಹೊತ್ತಿಗೆ ಅವರು ಜಮೀನ್ದಾರರ ಜಮೀನಿನಲ್ಲಿ ಇರಬೇಕಿತ್ತು. ಹಸುವಿನ ಮೈ ತೊಳೆದು, ಸೆಗಣಿ ಬಾಚಿ, ಹೊಲಕ್ಕೆ ನೀರು ಹಾಕಲು ಹೋಗಬೇಕಿತ್ತು. ಆಗ ತಂಜಾವೂರು ಜಿಲ್ಲೆಯಲ್ಲಿದ್ದ ತಿರುತರೈಪೂಂಡಿ ಬಳಿ ಒಂದು ಗ್ರಾಮವಿತ್ತು. ಅಲ್ಲಿಯೇ ನಾವು ಪ್ರತಿಭಟನೆ ನಡೆಸಿದ್ದುʼ.

ʻಕಿಸಾನ್‌ ಸಭಾದ ಶ್ರೀನಿವಾಸರಾವ್‌ ಅವರ ನೇತೃತ್ವದಲ್ಲಿ ಒಂದು ಬೃಹತ್‌ ಪ್ರತಿಭಟನೆ ನಡೆಯಿತು. ಕೆಂಪು ಬಾವುಟ ಹಿಡಿದಿದ್ದಕ್ಕಾಗಿ ನಿಮಗೆ ಹೊಡೆದರೆ, ಮುಲಾಜಿಲ್ಲದೆ ಮರು ಹೊಡೆತ ನೀಡಿ ಎನ್ನುವುದು ಈ ಪ್ರತಿಭಟನೆಯ ಹುಮ್ಮಸ್ಸಾಗಿತ್ತು.  ಕೊನೆಗೆ ಮಿರಾಸ್‌ದಾರರು, ಮೊದಲಿಯಾರ್‌ಗಳು ನಾವು ಇನ್ನೂ ಛಡಿಯೇಟು ನೀಡುವುದಿಲ್ಲ. ಸೆಗಣಿ ನೀರು ಎರಚುವುದಿಲ್ಲ ಹಾಗೂ ಅಂತಹ ಯಾವುದೇ ಬರ್ಬರ ಕೃತ್ಯ ನಡೆಸುವುದಿಲ್ಲ ಎಂಬ ಒಪ್ಪಂದಕ್ಕೆ ತಿರುತೊರೈಪೂಂಡಿಯಲ್ಲಿ ಸಹಿ ಹಾಕಿದರುʼ.

1940 ರಿಂದ 60 ರ ದಶಕಗಳಲ್ಲಿ ಹಾಗೂ ನಂತರದಲ್ಲಿ ನಡೆಸಿದ ಇಂತಹ ಮಹಾ ಹೋರಾಟಗಳಲ್ಲಿನ ತಮ್ಮ ಪಾತ್ರವನ್ನು ಆರ್‌ಎನ್‌ಕೆ ದೊಡ್ಡದು ಮಾಡುವುದಿಲ್ಲ. ಶ್ರೀನಿವಾಸರಾವ್‌ ಅವರ ನಂತರ ತಮಿಳುನಾಡಿನಲ್ಲಿ ಅಖಿಲ ಭಾರತ ಕಿಸಾನ್‌ ಸಭಾವನ್ನು (ಎಐಕೆಎಸ್‌) ಅವರು ಮುನ್ನಡೆಸಿದರು. 1947 ರ ನಂತರದ ದಶಕಗಳಲ್ಲಿ ಈ ಸದ್ದಿಲ್ಲದ ಕಾಲಾಳು ಯೋಧ, ರೈತ, ಕಾರ್ಮಿಕರ ಹೋರಾಟಗಳ ಮಹಾನಾಯಕರಾಗಿ ಹೊರಹೊಮ್ಮಿದರು.

*****

ನಾವು ಸಿಪಿಎಂ ನಾಯಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎನ್‌. ಶಂಕರಯ್ಯ ಅವರ ಮನೆಯಲ್ಲಿ ಸಂದರ್ಶನ ನಡೆಸುತ್ತಿದ್ದಾಗ ಅವರಿಬ್ಬರೂ ತುಂಬಾ ಭಾವುಕರಾಗಿದ್ದರು. ನಾವು ಇಬ್ಬರನ್ನೂ ಒಟ್ಟಿಗೇ ಮಾತನಾಡಿಸುತ್ತಿದ್ದೆವು. ಎಂಟು ದಶಕಗಳ ಆ ಒಡನಾಡಿಗಳು ಪರಸ್ಪರ ಶುಭ ಕೋರಿದ ರೀತಿಯಂತೂ ಆ ಕೊಠಡಿಯಲ್ಲಿದ್ದ ನಮ್ಮೆಲ್ಲರ ಮನಸ್ಸನ್ನು ತಟ್ಟಿತು.

PHOTO • M. Palani Kumar
PHOTO • M. Palani Kumar

ಸುಮಾರು 60 ವರ್ಷಗಳ ಹಿಂದೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಎರಡು ಭಾಗಗಳಾಗಿ ವಿಭಜನೆಯಾದಾಗ ಎಂಟು ದಶಕಗಳ ಒಡನಾಡಿಗಳಾದ 97 ವರ್ಷದ ನಲ್ಲಕಣ್ಣು ಮತ್ತು 101 ವರ್ಷದ ಕಾಮ್ರೇಡ್ ಶಂಕರಯ್ಯ ಬೇರ್ಪಟ್ಟಿರಬಹುದು, ಆದರೆ ಅವರು ಸ್ವಾತಂತ್ರ್ಯ ಮತ್ತು ನ್ಯಾಯದ ಹೋರಾಟಗಳಲ್ಲಿ ಒಟ್ಟಿಗಿದ್ದರು

60 ವರ್ಷಗಳ ಹಿಂದೆ ಕಮ್ಯುನಿಸ್ಟ್‌ ಪಕ್ಷ ಇಬ್ಭಾಗವಾಗಿ, ಈ ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ನಡೆದು ಹೋದಾಗ ಅವರ ನಡುವೆ  ಕಹಿ ಭಾವನೆ ಅಥವಾ ದುಃಖ ಇರಲಿಲ್ಲವೇ? ಅದು ಒಳ್ಳೆಯ ಬೇರ್ಪಡುವಿಕೆಯಂತೂ ಆಗಿರಲಿಲ್ಲ.

ʻಆದರೆ, ಆನಂತರವೂ ನಾವು ಹಲವು ವಿಷಯಗಳ ಬಗ್ಗೆ ಹಾಗೂ ಹೋರಾಟಗಳಲ್ಲಿ ಒಟ್ಟಿಗೇ ಕೆಲಸ ಮಾಡಿದ್ದೇವೆ ಮೊದಲು  ಯಾವ ರೀತಿಯಲ್ಲಿದ್ದೆವೋ ಅದೇ ರೀತಿಯಲ್ಲಿಯೇʼ ಎಂದರು ನಲ್ಲಕುನ್ನು.

ʻನಾವಿಬ್ಬರೂ ಒಟ್ಟಿಗೇ ಸೇರಿದಾಗ ನಾವು ಒಂದೇ ಪಕ್ಷʼ ಎಂದರು ಶಂಕರಯ್ಯ.

ಅವರು ಈಗ ಉಲ್ಬಣಗೊಂಡಿರುವ ಕೋಮು ಹಿಂಸಾಚಾರ ಹಾಗೂ ದ್ವೇಷಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಯಾವ ದೇಶದ ಸ್ವಾತಂತ್ರ್ಯವನ್ನು ಪಡೆಯಲು ಅವರು ಸಹಾಯ ಮಾಡಿದ್ದರೋ ಆ ದೇಶದ ಉಳಿವಿನ ಬಗ್ಗೆ ಅವರಿಗೆ ಆತಂಕವಿದೆಯೇ?

ʻಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಪರಿಸ್ಥಿತಿ ನಿರಾಶಾದಾಯಕವಾಗಿದೆ ಎನ್ನುವ ಸಂದರ್ಭಗಳೂ ಇದ್ದವು. ನೀವು ಗೆಲ್ಲಲು ಸಾಧ್ಯವೇ ಇಲ್ಲ. ಏಕೆಂದರೆ ನೀವು ತಿರುಗಿ ಬಿದ್ದಿರುವುದು ಅತಿ ದೊಡ್ಡ ಸಾಮ್ರಾಜ್ಯದ ವಿರುದ್ಧ ಎನ್ನುತ್ತಿದ್ದರು. ನಮ್ಮನ್ನು ಹೋರಾಟದಿಂದ ದೂರ ಇರಿಸುವಂತೆ ನಮ್ಮ ಕೆಲವು ಮನೆಗಳವರಿಗೆ ತಾಕೀತು ಸಹಾ ಮಾಡಿದ್ದರು. ಆದರೆ, ನಾವು ಆ ಎಲ್ಲಾ ಎಚ್ಚರಿಕೆ, ಬೆದರಿಕೆಯನ್ನು ಮೀರಿ ಹೋರಾಟ ನಡೆಸಿದೆವು. ಹಾಗಾಗಿಯೇ ನಾವು ಇಂದು ಇಲ್ಲಿದ್ದೇವೆʼ ಎಂದರು ನಲ್ಲಕುನ್ನು.

ನಾವು ಈ ಮೊದಲಿನಂತೆ ಜನರ ಬಳಿ ಹೋಗಿ ಅವರಿಂದ ತಿಳಿಯಲು ವಿಶಾಲ ಮೈತ್ರಿಯನ್ನು ರೂಪಿಸುವ ಆಗತ್ಯ ಇದೆ ಎಂದು ಇಬ್ಬರೂ ಅಭಿಪ್ರಾಯಪಟ್ಟರು. ʻನನಗೆ ಗೊತ್ತಿರುವ ಪ್ರಕಾರ ಇಎಂಎಸ್‌ (ಇಎಂಎಸ್‌ ನಂಬೂದರಿಪಾಡ್‌) ಅವರ ಕೊಠಡಿಯಲ್ಲಿಯೂ ಗಾಂಧೀಜಿಯವರ ಚಿತ್ರವಿದೆʼ ಎಂದರು ಆರ್‌ಎನ್‌ಕೆ.

ನಮ್ಮ ನಡುವಿನ ಲಕ್ಷಾಂತರ ಜನರನ್ನು ಭೀತಿಗೆ ತಳ್ಳಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಅವರಿಬ್ಬರೂ ಅದು ಹೇಗೆ ಅಷ್ಟು ಶಾಂತಚಿತ್ತವಾಗಿ ಹಾಗೂ ಆಶಾವಾದಿಗಳಾಗಿ ಉಳಿಯಲು ಸಾಧ್ಯ?.  ನಲ್ಲಕಣ್ಣುಹೇಳಿದರು, ʻನಾವು ಇದಕ್ಕಿಂತಾ ಭೀಕರವಾದದ್ದನ್ನು ಕಂಡಿದ್ದೇವೆʼ.

ಷರಾ:

2022 ರ ಸ್ವಾತಂತ್ರ್ಯ ದಿನದಂದು - ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ ಈಗಾಗಲೇ ಮುದ್ರಣಾಲಯಕ್ಕೆ ಹೋಗಿತ್ತು, ಆ ಸಮಯದಲ್ಲಿ ತಮಿಳುನಾಡು ಸರ್ಕಾರವು ಆರ್‌ಎನ್‌ಕೆ ಅವರಿಗೆ ತಗೈಸಲ್ ತಮಿಳರ್ ಪ್ರಶಸ್ತಿಯನ್ನು ನೀಡಿತು. ಈ ಪ್ರಶಸ್ತಿಯನ್ನು 2021ರಲ್ಲಿ ಸ್ಥಾಪಿಸಲಾಗಿದ್ದು, ರಾಜ್ಯ ಹಾಗೂ ತಮಿಳು ಸಮುದಾಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಗಣ್ಯರಿಗೆ ಇದನ್ನು ನೀಡಲಾಗುತ್ತದೆ. 10 ಲಕ್ಷ ರೂಪಾಯಿಗಳ ನಗದು ಬಹುಮಾನ ಹೊಂದಿರುವ ಈ ಪ್ರಶಸ್ತಿಯನ್ನು ತಗೈಸಲ್ ತಮಿಳರ್ ಪ್ರಶಸ್ತಿಯನ್ನು ನೀಡಿತು. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಸೇಂಟ್ ಜಾರ್ಜ್ ಕೋಟೆಯ ಮೇಲಿನಿಂದ ಆರ್‌ಎನ್‌ಕೆ ಅವರಿಗೆ ಅರ್ಪಿಸಿದರು.

ಅನುವಾದ: ಜಿ ಎನ್ ಮೋಹನ್

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : G N Mohan

ಜಿ.ಎನ್.ಮೋಹನ್ ಬೆಂಗಳೂರು ಮೂಲದ ಹಿರಿಯ ಪತ್ರಕರ್ತ. ಈಟಿವಿ ಮತ್ತು ನ್ಯೂಸ್ 18 ಚಾನೆಲ್‌ಗಳ ಮಾಜಿ ಪ್ರಧಾನ ಸಂಪಾದಕರಾಗಿದ್ದ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ಸ್' ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

Other stories by G N Mohan