“ಒಂದು ಕಾಲದಲ್ಲಿ ಪಟ್ನಾದಲ್ಲಿ ವಾರವಿಡೀ ಗಾಳಿಪಟ ಸ್ಪರ್ಧೆಗಳು ನಡೆಯುತ್ತಿದ್ದವು. ಲಕ್ನೋ, ದೆಹಲಿ, ಮತ್ತು ಹೈದರಬಾದಿನ ಕಡೆಯಿಂದೆಲ್ಲ ಸ್ಪರ್ಧಿಗಳು ಬರುತ್ತಿದ್ದರು. ಅದೊಂದು ಹಬ್ಬದ ಹಾಗೆ ನಡೆಯುತ್ತಿತ್ತು” ಎನ್ನುತ್ತಾರೆ ಸೈಯದ್‌ ಫೈಜಾನ್‌ ರಜಾ. ನಾವು ಆಕಾಶದ ನೀಲಿಯನ್ನು ಪ್ರತಿಫಲಿಸುತ್ತಾ ಹರಿಯುತ್ತಿದ್ದ ಗಂಗಾ ತೀರದ ಗುಂಟ ನಡೆಯುತ್ತಾ ಮಾತನಾಡುತ್ತಿರುವಾಗ, ಒಂದು ಕಾಲದಲ್ಲಿ ಇಲ್ಲಿ ಸಾವಿರಾರು ಗಾಳಿಪಟಗಳು ಆಗಸವನ್ನು ಚುಂಬಿಸುತ್ತಿದ್ದವು ಎಂದು ಹೇಳಿದರು.

ಪಟ್ನಾ ನದಿ ತೀರದಲ್ಲಿರುವ ಧೂಲಿಘಾಟ್‌ ಪ್ರದೇಶದ ಹಿರಿಯ ನಿವಾಸಿಯಾದ ರಜಾ ಅವರು, ಇಲ್ಲಿನ ಶ್ರೀಮಂತರಿಂದ ಹಿಡಿದು ತವಾಯಿಫ್‌ಗಳ ತನಕ ಎಲ್ಲಾ ಸಾಮಾಜಿಕ ವರ್ಗದ ಜನರೂ ಈ ಕ್ರೀಡೆಗೆ ಬೆಂಬಲ ನೀಡಿದ್ದರು ಎನ್ನುತ್ತಾರೆ. “ಬಿಸ್ಮಿಲ್ಲಾ ಜಾನ್‌ (ತವಾಯಿಫ್) ಆಶ್ರಯ ನೀಡುತ್ತಿದ್ದರು, ಹಾಗೂ ಮೀರ್ ಅಲಿ ಜಮೀನ್ ಮತ್ತು ಮೀರ್ ಕೆಫಾಯತ್ ಅಲಿ ಪಟಾಂಗ್-ಸಾಜಿ [ಗಾಳಿಪಟಗಳನ್ನು ತಯಾರಿಸುವುದು] ಮತ್ತು ಪತಂಗ್-ಬಾಜಿ [ಗಾಳಿಪಟ ಹಾರಿಸುವ ಕ್ರೀಡೆ] ಯ ಕೆಲವು ಪ್ರಸಿದ್ಧ ಉಸ್ತಾದರು."

ಪಟ್ನಾದ ಗುಡ್‌ಹಟ್ಟಾ ಪ್ರದೇಶ ಮತ್ತು ಅಶೋಕ ರಾಜಪಥದ ಬಳಿಯ ಖ್ವಾಜಾಕಲಾ ನಡುವಿನ ಪ್ರದೇಶವು (ಸುಮಾರು 700-800 ಮೀಟರ್ ದೂರ) ಈ ಕ್ರೀಡೆಗೆ ಬೇಕಾದ ಸರಕುಗಳನ್ನು ಪೂರೈಸುವ ಅಂಗಡಿಗಳಿಂದ ತುಂಬಿತ್ತು. ಅವರ ಅಂಗಡಿಗಳ ಹೊರಗೆ ಬಣ್ಣ ಬಣ್ಣದ ಪಟಗಳು ಗ್ರಾಹಕರನ್ನು ಆಹ್ವಾನಿಸುತ್ತಾ ನೇತಾಡುತ್ತಿದ್ದವು. “ಪಟ್ನಾದಲ್ಲಿ ಗಾಳಿಪಟಗಳಿಗೆ ಬಳಸಲಾಗುವ ದಾರವು ಇತರೆಡೆಗಳಿಗಿಂತಲೂ ದಪ್ಪವಿರುತ್ತಿತ್ತು. ನಾಖ್‌ ಎನ್ನುವ ಹೆಸರಿನಿಂದ ಜನಪ್ರಿಯವಾಗಿರುವ ಇದನ್ನು ಹತ್ತಿ ಮತ್ತು ರೇಶ್ಮೆಯನ್ನು ಸೇರಿಸಿ ಹೆಣೆಯಲಾಗುತ್ತಿತ್ತು” ಎಂದು ಅವರು ಹೇಳುತ್ತಾರೆ.

ಬಲ್ಲೌ ಎನ್ನುವ ಮಾಸಿಕ ಪತ್ರಿಕೆ ತನ್ನ 1868ರ ಪ್ರತಿಯೊಂದರಲ್ಲಿ ಪಟ್ನಾ ಗಾಳಿಪಟಗಳಿಗೆ ಹೆಸರುವಾಸಿಯಾದ ಊರು ಎನ್ನುತ್ತದೆ. “ಯಾರಾದರೂ ವ್ಯವಹಾರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಬಯಸಿದ್ದಲ್ಲಿ ಈ ಊರಿನಲ್ಲಿ ಒಂದು ಗಾಳಿಪಟದ ಅಂಗಡಿಯನ್ನು ತೆರೆಯಬೇಕು. ಇಲ್ಲಿನ ಪ್ರತಿ ಹತ್ತು ಅಂಗಡಿಗಳಿಗೆ ಒಂದರಂತೆ ಗಾಳಿಪಟ ಮಾರುವ ಅಂಗಡಿಗಳಿವೆ. ಇದನ್ನು ನೋಡಿದರೆ ಊರಿಗೆ ಊರೇ ಗಾಳಿಪಟ ಹಾರಿಸುತ್ತದೆಯೇನೋ ಎನ್ನಿಸತೊಡಗುತ್ತದೆ. ಪಟವು ವಜ್ರದ ಆಕಾರದಲ್ಲಿರುತ್ತದೆ. ಗರಿಯಷ್ಟೇ ಹಗುರವಾಗಿರುವ ಇದಕ್ಕೆ ಬಾಲವಿರುವುದಿಲ್ಲ ಮತ್ತು ಸಾಧ್ಯವಿರುವಷ್ಟು ಹಗುರವಾಗಿರುವ ದಾರ ಬಳಸಿ ಇವುಗಳನ್ನು ಹಾರಿಸಲಾಗುತ್ತದೆ.”

ಆದರೆ ಈಗ ನೂರು ವರ್ಷಗಳ ನಂತರ ಇಲ್ಲಿನ ಸಂಗತಿಗಳು ಬದಲಾಗಿವೆ. ಆದರೆ ಪಟ್ನಾದ ತಿಲಂಗಿಗಳು ತಮ್ಮ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡಿವೆ – ಬಾಲವಿಲ್ಲದ ಗಾಳಿಪಟ ಎನ್ನುವುದು. “ದುಮ್‌ ತೋ ಕುತ್ತೇ ಕಾ ನಾ ಹೋತಾ ಹೈ ಜೀ, ತಿಲಂಗ್‌ ಕಾ ಥೋಡೆ [ಬಾಲ ನಾಯಿಗಳಿಗೆ ಚಂದ, ಪಟಗಳಿಗಲ್ಲ]” ಎಂದು ನಗುತ್ತಾ ಹೇಳುತ್ತಾರೆ ಪಟ ತಯಾರಿಸುವ ಕಸುಬು ಮಾಡುವ ಶಬೀನಾ. ಪ್ರಸ್ತುತ ಬದುಕಿನ ಏಳನೇ ದಶಕದಲ್ಲಿರುವ ಅವರು ತಮ್ಮ ಕಣ್ಣುಗಳು ಮಂಜಾದ ಕಾರಣ ಈಗ ಕೆಲವು ಸಮಯದ ಹಿಂದೆ ಪಟ ತಯಾರಿಸುವುದನ್ನು ನಿಲ್ಲಿಸಿದರು.

PHOTO • Ali Fraz Rezvi
PHOTO • Courtesy: Ballou’s Monthly Magazine

ಎಡ : ಗಾಳಿಪಟದ ವಿವಿಧ ಭಾಗಗಳನ್ನು ತೋರಿಸುವ ಚಿತ್ರ . ಬಲ : ಬಲ್ಲೌ ಮಾಸಿ ಕದ 1868 ಪ್ರತಿ ಆಯ್ದ ಭಾಗ

PHOTO • Ali Fraz Rezvi

ಪಟ್ನಾದ ಅಶೋಕ ರಾಜಪಥ ಪ್ರದೇಶವು ಒಂದು ಕಾಲದಲ್ಲಿ ಗಾಳಿಪಟ ವ್ಯಾಪಾರಿಗಳ ಕೇಂದ್ರವಾಗಿತ್ತು. ಅಲ್ಲಿನ ಅಂಗಡಿಗಳ ಹೊರಗೆ ಬಣ್ಣ ಬಣ್ಣದ ಗಾಳಿಪಟಗಳು ತಮ್ಮನ್ನು ಕೊಳ್ಳುವಂತೆ ಹೋಗಿ ಬರುವವರನ್ನು ಆಹ್ವಾನಿಸುತ್ತಿದ್ದವು

ಪಟ್ನಾ ಇಂದಿಗೂ ಗಾಳಿಪಟ ತಯಾರಿಕೆ ಹಾಗೂ ಪೂರೈಕೆಯ ವಿಷಯದಲ್ಲಿ ಕೇಂದ್ರವಾಗಿಯೇ ಉಳಿದಿದೆ. ಇಲ್ಲಿಂದ ಗಾಳಿಪಟ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳು ಬಿಹಾರದೆಲ್ಲೆಡೆ ಹಾಗೂ ನೆರೆಯ ರಾಜ್ಯಗಳಿಗೆ ಸರಬರಾಜು ಆಗುತ್ತವೆ. ಪರೇತಿ ಹಾಗೂ ತಿಲಂಗಿ ಎರಡನ್ನೂ ಸಿಲಿಗುರಿ, ಕೋಲ್ಕತಾ, ಮಾಲ್ಡಾ, ರಾಂಚಿ, ಹಜಾರಿಬಾಗ್, ಜೌನ್ಪುರ್, ಕಠ್ಮಂಡು, ಉನ್ನಾವೊ, ಝಾನ್ಸಿ, ಭೋಪಾಲ್ ಮತ್ತು ಪುಣೆ ಮತ್ತು ನಾಗ್ಪುರದವರೆಗೂ ಕಳುಹಿಸಲಾಗುತ್ತದೆ.

*****

“ತಿಲಂಗಿ ಬನಾನೇ ಕೆಲಿಯೇ ಭೀ ಟೈಮ್‌ ಚಾಹಿಯೇ ಔರ್‌ ಉಡಾನೇ ಕೇಲಿಯೇ ಭೀ [ಗಾಳಿಪಟ ತಯಾರಿಸುವುದಕ್ಕೂ ಸಮಯ ಬೇಕು, ಹಾರಿಸುವುದಕ್ಕೂ ಸಮಯ ಬೇಕು]” ಎಂದು ಅಶೋಕ ಶರ್ಮಾ ತಮ್ಮ ತಂದೆಯವರನ್ನು ನೆನಪಿಸಿಕೊಂಡು ಹೇಳುತ್ತಾರೆ. “ಈಗ ಸಮಯವೆನ್ನುವುದು ಈ ನಗರದಲ್ಲಿನ ದುಬಾರಿ ವಸ್ತುಗಳಲ್ಲೇ ದುಬಾರಿ.”

ಶರ್ಮಾ ಅವರು ಮೂರನೇ ತಲೆಮಾರಿನ ತಿಲಂಗಿ (ಗಾಳಿಪಟ) ತಯಾರಕ ಹಾಗೂ ಮಾರಾಟಗಾರ. ಮಣ್ಣಿನ ಗೋಡೆ ಹಾಗೂ ಮಣ್ಣಿನ ಹೆಂಚಿನ ಛಾವಣಿಯನ್ನು ಹೊಂದಿರುವ ಅವರ ಅಂಗಡಿ ಪಟ್ನಾ ನಗರದ ಹೃದಯಭಾಗದಲ್ಲಿದೆ. ಈ ಅಂಗಡಿ ಅಶೋಕ ರಾಜಪಥದಲ್ಲಿನ ಬಿಹಾರದ ಅತ್ಯಂತ ಹಳೆಯ ಚರ್ಚ್‌ ಪಾದ್ರಿ ಕೀ ಹವೇಲಿಯಿಂದ 100 ಮೀಟರ್‌ ದೂರದಲ್ಲಿದೆ. ಇವರು ಪೆರೇತಿಗಳನ್ನು (ಗಾಳಿಪಡದ ದಾರವನ್ನು ಹಿಡಿದಿಡುವ ಬಿದಿರಿನ ರಾಟೆ) ತಯಾರಿಸುವ ಪರಿಣತಿ ಹೊಂದಿರುವ ಕೆಲವೇ ಕೆಲವು ಕಸುಬುದಾರರಲ್ಲಿ ಒಬ್ಬರು. ಮಾಂಜಾ ಅಥವಾ ನಖ್‌ ಎಂದು ಕರೆಯಲಾಗುವ ಗಾಳಿಪಟದ ದಾರಗಳನ್ನು ಈಗ ಚೈನಾದಿಂದ ತರಿಸಲಾಗುತ್ತದೆ ಅಥವಾ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ. ಮತ್ತು ಈಗಿನ ದಾರ ಮೊದಲಿಗಿಂತಲೂ ಇನ್ನಷ್ಟು ತೆಳುವಾಗಿವೆ.

ನನ್ನ ಮುಂದೆ ಕುಳಿತು ಮಾತನಾಡುತ್ತಿದ್ದ ಶರ್ಮಾರ ಕೈಗಳು ಕೆಲಸದಲ್ಲಿ ನಿರತವಾಗಿದ್ದವು. ಅವರು ಇನ್ನೊಂದು ಗಂಟೆಯಲ್ಲಿ ಹಳ್ಳಿಯೊಂದಕ್ಕೆ 150 ಪರೇತಿಗಳನ್ನು ಪೂರೈಸಬೇಕಿತ್ತು.

ಪರೇತಿ ತಯಾರಿಸಲು ಗಟ್ಟಿಯಾದ ಮರದ ಕಡ್ಡಿಗಳನ್ನು ಬಾಗಿಸಿ ಕಟ್ಟಬೇಕು. ಈ ಕೆಲಸಕ್ಕೆ ಪಟ ತಯಾರಿಸುವುದಕ್ಕಿಂತಲೂ ಹೆಚ್ಚು ಕೌಶಲ ಬೇಕು. ಶರ್ಮಾ ಈ ಕೆಲಸದಲ್ಲಿ ಇಲ್ಲಿ ಹೆಸರುವಾಸಿ. ಇಲ್ಲಿನ ಇತರ ಕಸುಬುದಾರರಂತೆ ಶರ್ಮಾ ತಾನು ಗಾಳಿಪಟ, ಅದರ ಕಡ್ಡಿಗಳ ತಯಾರಿಕೆಯನ್ನು ಉಪ ಗುತ್ತಿಗೆ ನೀಡುವುದಿಲ್ಲ. ಅವರು ತಾನು ತಯಾರಿಸಿದ್ದನ್ನು ಅವರೇ ಮಾರುತ್ತಾರೆ.

PHOTO • Ali Fraz Rezvi
PHOTO • Ali Fraz Rezvi

ಅಶೋಕ್ ಶರ್ಮಾ ಪರೇತಿ ಮತ್ತು ತಿಲಂಗಿಗಳಿಗೆ ಕೋಲುಗಳನ್ನು ಕತ್ತರಿಸುತ್ತಿದ್ದಾರೆ. ಪರೇತಿಗಳನ್ನು (ಗಾಳಿಪಟಗಳಿಗೆ ಜೋಡಿಸಲಾದ ದಾರವನ್ನು ಹಿಡಿದಿಡುವ ಬಿದಿರಿನ ರಾಟೆ) ತಯಾರಿಸುವ ಕೆಲವೇ ಪರಿಣಿತರಲ್ಲಿ ಅವರೂ ಒಬ್ಬರು

PHOTO • Ali Fraz Rezvi
PHOTO • Ali Fraz Rezvi

ಎಡ: ಅಶೋಕ್ ಅವರ ಅಂಗಡಿಯೆದುರು ಹೊಸದಾಗಿ ತಯಾರಿಸಿಟ್ಟಿರುವ ಪರೇತಿಗಳು. ಬಲ: ಅಂಗಡಿಯಲ್ಲಿ ಕುಳಿತಿರುವ ಅಶೋಕ್ ಅವರ ಸ್ನೇಹಿತ ಮತ್ತು ಅನುಭವಿ ಕೆಲಸಗಾರ

ತಿಲಂಗಿ ಹಾಗೂ ಪರೇತಿಗಳಿಂದ ತುಂಬಿದ್ದ ಕತ್ತಲೆ ಕೋಣೆಗೆ ಅದರ ಹಿಂಬಾಗ ಗೋಡೆಯ ಸಣ್ಣ ತೆರೆದ ಭಾಗದಿಂದ ಒಂದಷ್ಟು ಬೆಳಕು ಬರುತ್ತದೆ. ಅಲ್ಲಿಯೇ ಕುಳಿತು ಅವರ 30 ವರ್ಷದ ಮೊಮ್ಮಗ ಕೌಟಿಲ್ಯ ಕುಮಾರ್‌ ಶರ್ಮಾ ತಮ್ಮ ಅಕೌಂಟ್ಸ್‌ ಕೆಲಸವನ್ನು ಮಾಡುತ್ತಿದ್ದರು. ಹಲವು ತಲೆಮಾರುಗಳಿಂದ ಕುಟುಂಬವು ಈ ಉದ್ಯಮದಲ್ಲಿ ತೊಡಗಿಕೊಂಡಿದೆಯಾದರೂ ತನ್ನ ಮಗ ಮತ್ತು ಹಾಗೂ ಮೊಮ್ಮಗನಿಗೆ ಇದನ್ನು ಮುಂದುವರೆಸುವ ಆಸಕ್ತಿ ಇಲ್ಲ ಎನ್ನುತ್ತಾರೆ ಶರ್ಮಾ.

ಶರ್ಮಾ ಈ ತಿಲಂಗಿ ಮತ್ತು ಪರೇತಿ ಕಸುಬನ್ನು ಕಲಿಯಲು ಆರಂಭಿಸಿದಾಗ ಅವರಿಗೆ 12 ವರ್ಷ. “ದುಖಾನ್‌ ಪರ್‌ ಆ ಕರ್‌ ಬೇಠ್‌ ಗಯೇ, ಫಿರ್‌ ಕೈಸಾ ಬಚ್ಪನ್‌, ಕೈಸಾ ಜವಾನಿ? ಸಬ್‌ ಯಹೀಂ ಬೀತ್‌ ಗಯಾ. ತಿಲಂಗಿ ಬನೀ ಬಹುತ್‌ ಉಡಾಯಿ ನಹೀ [ಸಣ್ಣವನಿದ್ದಾಗಲೇ ಬಂದು ಅಂಗಡಿಯಲ್ಲಿ ಕುಳಿತೆ. ಮತ್ತೆ ಎಲ್ಲಿಯ ಯೌವನ, ಎಲ್ಲಿಯ ಬಾಲ್ಯ? ಎಲ್ಲವೂ ಈ ಕೆಲಸದಲ್ಲೇ ಕಳೆದುಹೋಯಿತು. ನಾನು ಬಹಳಷ್ಟು ತಿಲಂಗಿ ತಯಾರಿಸಿದ್ದೇನೆ ಆದರೆ ಇದುವರೆಗೂ ಒಂದನ್ನೂ ಹಾರಿಸಿಲ]” ಎನ್ನುತ್ತಾರೆ ಈ ಅನುಭವಿ ಕಸುಬುದಾರ.

"ಗಾಳಿಪಟ ತಯಾರಿಕೆಯನ್ನು ನಗರದ ಗಣ್ಯರು ಮತ್ತು ಶ್ರೀಮಂತರು ಮೇಲ್ವಿಚಾರಣೆ ಮಾಡುತ್ತಿದ್ದರು. ಅವರ ಪ್ರೋತ್ಸಾಹ ಗಾಳಿಪಟ ತಯಾರಕರ ಪಾಲಿಗೆ ವರದಾನವಾಗಿತ್ತು" ಎಂದು ಅಶೋಕ್ ಶರ್ಮಾ ಹೇಳುತ್ತಾರೆ. "ಪಟ್ನಾದಲ್ಲಿ ಮಹಾಶಿವರಾತ್ರಿಯವರೆಗೆ ಗಾಳಿಪಟ ಹಾರಿಸಲಾಗುತ್ತಿತ್ತು. ಆದರೆ ಈ ದಿನಗಳಲ್ಲಿ ಸಂಕ್ರಾಂತಿಯಂದು (ಸಾಂಪ್ರದಾಯಿಕವಾಗಿ ಗಾಳಿಪಟ ಹಾರಿಸುವ ಸುಗ್ಗಿ ಹಬ್ಬ) ಸಹ ಗ್ರಾಹಕರನ್ನು ಹುಡುಕುವುದು ಕಷ್ಟ.”

*****

ಗಾಳಿಪಟ ಸಾಮಾನ್ಯವಾಗಿ ವಜ್ರಾಕೃತಿಯಲ್ಲಿರುತ್ತದೆ. ಹಿಂದೆ ಗಾಳಿಪಟವನ್ನು ಪೇಪರ್‌ ಬಳಸಿ ಮಾಡಲಾಗುತ್ತಿತ್ತು. ಆದರೆ ಈಗ ಪೂರ್ತಿಯಾಗಿ ಪ್ಲಾಸ್ಟಿಕ್‌ ಬಳಸಿ ಮಾಡಲಾಗುತ್ತಿದೆ, ಜೊತೆಗೆ ಬೆಲೆಯೂ ಈಗ ಅರ್ಧಕ್ಕೆ ಇಳಿದಿದೆ. ಕಾಗದದ ತಿಲಿಂಗಿಗಳು ಸುಲಭವಾಗಿ ಹರಿದುಹೋಗುತ್ತವೆ ಮತ್ತು ಅವುಗಳ ಬಳಕೆಯೂ ಕಷ್ಟ. ಒಂದು ಕಾಗದ ಬಳಸಿ ಮಾಡಿದ ಸಾಮಾನ್ಯ ಗಾಳಿಪಟಕ್ಕೆ 5 ರೂಪಾಯಿ ಬೆಲೆಯಿದ್ದರೆ, ಪ್ಲಾಸ್ಟಿಕ್‌ ಪಟ 3 ರೂಪಾಯಿಗೆ ದೊರೆಯುತ್ತದೆ.

ಇವುಗಳ ಗಾತ್ರ ಸಾಮಾನ್ಯವಾಗಿ 12 x 12 ಮತ್ತು 10 x 10-ಇಂಚಿನ ತನಕ ಇರುತ್ತವೆ, ಆದರೆ 18 x 18 ಮತ್ತು 20 x 20 ಅಳತೆಯ ಪಟಗಳನ್ನು ಸಹ ತಯಾರಿಸಲಾಗುತ್ತದೆ. ಗಾತ್ರ ಹೆಚ್ಚಾದಂತೆ ಮತ್ತು ವಿನ್ಯಾಸ ಸಂಕೀರ್ಣವಾಗುತ್ತಿದ್ದಂತೆ ಬೆಲೆಯೂ ಹೆಚ್ಚಾತ್ತದೆ - ನಿರ್ದಿಷ್ಟ ಕಾರ್ಟೂನ್ ಅಥವಾ ಚಲನಚಿತ್ರ ಪಾತ್ರಗಳು ಅಥವಾ ಸಂಭಾಷಣೆಗಳುಳ್ಳ ಪಟಕ್ಕೆ 25 ರೂಪಾಯಿಯ ತನಕ ಬೆಲೆಯಿದೆ. ಆದರೆ ರಾಜ್ಯದ ಹೊರಗಿನ ಬೇಡಿಕೆಗಳಿಗೆ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಾಳೆಗಳೊಂದಿಗೆ ಬೆಲೆಗಳು 80ರಿಂದ 100 ರೂಪಾಯಿಯ ತನಕ ಇರುತ್ತದೆ. ಇದರಲ್ಲಿ ಉತ್ತಮ ಗುಣಮಟ್ಟದ ತೀಲಿ ಮತ್ತು ಖಡ್ಡಾಗಳನ್ನು ಬಳಸಲಾಗುತ್ತದೆ. ಜೊತೆಗೆ ಒಳ್ಳೆ ಲೇಯಿ (ಅನ್ನದಿಂದ ತಯಾರಿಸಲಾದ ಅಂಟು) ಬಳಸಲಾಗುತ್ತದೆ.

ಸಂಜಯ್ ಜೈಸ್ವಾಲ್ ಅವರ ಕಿಟಕಿಗಳಿಲ್ಲದ 8 ಚದರ ಅಡಿ ವಿಸ್ತೀರ್ಣದ ಅಂಗಡಿಯಲ್ಲಿ, ಮರ ಕತ್ತರಿಸುವ ಯಂತ್ರ, ಅನೇಕ ಬಿದಿರಿನ ಕಡ್ಡಿಗಳು ಮತ್ತು ತಿಲಂಗಿ ತಯಾರಿಸಲು ಬಳಸುವ ಇತರ ವಸ್ತುಗಳು ಸುತ್ತಲೂ ಹರಡಿಕೊಂಡಿದ್ದವು.

PHOTO • Ali Fraz Rezvi
PHOTO • Ali Fraz Rezvi

ಎಡ: ಮನ್ನಾನ್ (ಕುರ್ಚಿಯ ಮೇಲೆ ಕುಳಿತಿರುವವರು) ತನ್ನ ಅಂಗಡಿಯಲ್ಲಿ, ಕಾರ್ಮಿಕರ ಮೇಲ್ವಿಚಾರಣೆ ಮಾಡುತ್ತಿರುವುದು. ಬಲ: ಮೊಹಮ್ಮದ್ ಅರ್ಮಾನ್ ಪ್ಲಾಸ್ಟಿಕ್ ಹಾಳೆಗಳನ್ನು ಎಣಿಸುತ್ತಿದ್ದಾರೆ, ಅದನ್ನು ಬಿದಿರಿನ ಖಡ್ಡಾ ಅಂಟಿಸಲು ಮಹಿಳಾ ಕಾರ್ಮಿಕರಿಗೆ ಕಳುಹಿಸಲಾಗುತ್ತದೆ

PHOTO • Ali Fraz Rezvi
PHOTO • Ali Fraz Rezvi

ಎಡ : ಕಾರ್ಮಿಕರು ಕೋಲುಗಳನ್ನು ಕಟ್ಟು ಮಾಡುತ್ತಿರುವುದು . ಬಲ : ಯಂತ್ರದಲ್ಲಿ ಬಿದಿರನ್ನು ಕತ್ತರಿಸಲಾಗುತ್ತಿದೆ

“ನಮ್ಮ ವರ್ಕ್‌ಶಾಪಿಗೆ ಯಾವುದೇ ಹೆಸರಿಲ್ಲ” ಎನ್ನುತ್ತಾರೆ ಮನ್ನಾನ್‌ ಎಂದು ಇಲ್ಲಿ ಕರೆಯಲ್ಪಡುವ ಸಂಜಯ್.‌ ಆದರೆ ಅವರ ಮಟ್ಟಿಗೆ ಇದೊಂದು ಸಮಸ್ಯೆಯೇ ಅಲ್ಲ. ಏಕೆಂದರೆ ಅವರು ಪ್ರಾಯಶಃ ಈ ನಗರದ ಅತಿದೊಡ್ಡ ಗಾಳಿಪಟ ಪೂರೈಕೆದಾರ. “ಬೇ-ನಾಮ್‌ ಹೈ, ಗುಮ್ನಾಮ್‌ ಥೋಡೇ ಹೈ [ಹೆಸರಿಲ್ಲದಿರಬಹುದು ಆದರೆ ನಾವೇನೂ ಅಪರಿಚಿತರಲ್ಲ]” ಎಂದು ಅವರು ತಮ್ಮ ಕೆಲಸಗಾರರೊಂದಿಗೆ ನಗುತ್ತಾ ಹೇಳುತ್ತಾರೆ.

ಗುಡ್‌ಹಟ್ಟಾ ಪ್ರದೇಶದ ಮೊಹಲ್ಲಾ ದೀವಾನ್‌ ಬಳಿ ಇರುವ ಅವರ ವರ್ಕ್‌ಶಾಪ್‌ ಒಂದು ತೆರೆದ ಪ್ರದೇಶದಲ್ಲಿದೆ. ಬಿದಿರಿನ ಕಂಬಗಳ ಸಹಾಯದಲ್ಲಿ ನಿಂತಿರುವ ಸಿಮೆಂಟ್‌ ಶೀಟಿನ ರಚನೆ ಮತ್ತು ಅದರ ಪಕ್ಕದಲ್ಲೊಂದು ಸಣ್ಣ ಕೋಣೆಯನ್ನು ನಿರ್ಮಿಸಲಾಗಿದೆ. ಈ ಕೆಲಸದ ಸ್ಥಳದಲ್ಲಿ ಅವರು ಸುಮಾರು 11 ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಉಳಿದ ಕೆಲಸಗಳನ್ನು "ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಮನೆಯಿಂದ ಕೆಲಸ ಮಾಡುವ" ಮಹಿಳೆಯರಿಗೆ ಉಪ ಗುತ್ತಿಗೆ ನೀಡಲಾಗುತ್ತದೆ.

55 ವರ್ಷದ ಮೊಹಮ್ಮದ್ ಶಮೀಮ್ ಇಲ್ಲಿನ ಅತ್ಯಂತ ಹಿರಿಯ ಕುಶಲಕರ್ಮಿ. ಪಟ್ನಾದ ಛೋಟಿ ಬಜಾರ್ ಪ್ರದೇಶದವರಾದ ಅವರು ತಾನು ಕೋಲ್ಕತ್ತಾದ ಉಸ್ತಾದ್ ಒಬ್ಬರಿಂದ ಗಾಳಿಪಟ ತಯಾರಿಕೆಯ ಕಲೆಯನ್ನು ಕಲಿತಿದ್ದಾಗಿ ಹೇಳುತ್ತಾರೆ. ಅವರು ಕೋಲ್ಕತ್ತಾ, ಅಲಹಾಬಾದ್, ಮುಂಬೈ ಮತ್ತು ಬನಾರಸ್ ನಗರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಶಾಶ್ವತ ಕೆಲಸದ ಸ್ಥಳದ ಹುಡುಕಾಟದ ಭಾಗವಾಗಿ ಕೊನೆಗೆ ತಮ್ಮ ನಗರಕ್ಕೆ ಮರಳಿದರು.

ತೀಲಿಗಳನ್ನು ಅಂಟಿಸುತ್ತಾ ಮಾತನಾಡಿದ ಅವರು, ಕಳೆದ 22 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದಎಉ. ಗಟ್ಟಿಯಾದ ಬಿದಿರಿನ ಕಡ್ಡಿಗಳನ್ನು ಬಾಗಿಸಿ ಅದನ್ನು ಅಂಟು ಬಳಸಿ ಅಂಟಿಸುವಲ್ಲಿ ಅವರನ್ನು ಪರಿಣಿತರೆಂದು ಪರಿಗಣಿಸಲಾಗಿದೆ. ಶಮೀಮ್ ಒಂದು ದಿನದಲ್ಲಿ ಸುಮಾರು 1,500 ಪಟಗಳ ತೀಲಿಯನ್ನು ತಯಾರಿಸುತ್ತಾರೆ, ಆದರೆ ಇದೊಂದು ಹೊಟ್ಟೆಪಾಡಿನ ಓಟವಾಗಿದೆ.

"ಕೋಶಿಶ್ ಹೋತಾ ಹೈ ಕೇ ದಿನ್ ಕಾ 200 ರುಪ್ಯಾ ತಕ್ ಕಮಾ ಲೇ ತೋ ಮಹೀನೆ ಕಾ 6000 ಬನ್ ಜಾಯೇಗಾ. [ದಿನಕ್ಕೆ 200 ರೂಪಾಯಿಗಳನ್ನು ಗಳಿಸುವ ಗುರಿಯನ್ನು ಹೊಂದುತ್ತೇನೆ, ಇದು ತಿಂಗಳಿಗೆ 6,000 ರೂಪಾಯಿಗಳಷ್ಟಾಗುತ್ತದೆ]" ಎಂದು ಶಮೀನ್ ಹೇಳುತ್ತಾರೆ. 1,500 ಗಾಳಿಪಟಗಳಿಗೆ, ಅವರು ತೀಲಿಯನ್ನು ಅಂಟಿಸಿ ನಂತರ ಸಂಜೆಯ ವೇಳೆಗೆ ಅದನ್ನು ಟೇಪ್ ಬಳಸಿ ಭದ್ರಪಡಿಸುತ್ತಾರೆ. "ಇಸ್ ಹಿಸಾಬ್ ಸೇ 200-210 ರುಪ್ಯಾ ಬನ್ ಜಾತಾ ಹೈ [ಈ ರೀತಿಯಾಗಿ ನಾನು ದಿನಕ್ಕೆ 200-210 ಗಳಿಸಬಹುದು]" ಎಂದು ಅವರು ಹೇಳುತ್ತಾರೆ.

ಈ ವರ್ಷದ ಮೇ ತಿಂಗಳಲ್ಲಿ ಪರಿ ಅವರ ಕೆಲಸದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೊರಗಿನ ತಾಪಮಾನವು ಆಗಲೇ 40 ಡಿಗ್ರಿ ಸೆಲ್ಸಿಯಸ್ ಮೀರಿತ್ತು. ಆದರೆ ಗಾಳಿಪಟಗಳನ್ನು ತಯಾರಿಸಲು ಬಳಸುವ ತೆಳುವಾದ ಪ್ಲಾಸ್ಟಿಕ್‌ ಹಾಳೆಗಳು ಹಾರಿ ಹೋಗುತ್ತವೆ ಎನ್ನುವ ಕಾರಣಕ್ಕಾಗಿ ಅವರು ಅಲ್ಲಿ ಫ್ಯಾನ್‌ ಕೂಡಾ ಬಳಸುವಂತಿರಲಿಲ್ಲ.

PHOTO • Ali Fraz Rezvi
PHOTO • Ali Fraz Rezvi

ಎಡಕ್ಕೆ : ಕಾರ್ಮಿಕರು ತಿ ಲಂಗಿ ತಯಾರಿಸಲು ಕಡ್ಡಿ ಗಳನ್ನು ಕತ್ತರಿಸು ತ್ತಿರುವುದು . ಬಲ : ಅಶೋಕ್ ಪಂಡಿತ್ ( ಕಪ್ಪು ಟೀ ಶರ್ಟ್ ) ಗಾಳಿಪಟಗಳ ಮೇಲೆ ಕಡ್ಡಿ ಗಳನ್ನು ಅಂಟಿಸುತ್ತಿದ್ದರೆ , ಸುನಿಲ್ ಕುಮಾರ್ ಮಿಶ್ರಾ ಪ್ಲಾಸ್ಟಿಕ್ ಹಾಳೆಗಳನ್ನು ಕತ್ತರಿಸುತ್ತಿದ್ದಾರೆ

PHOTO • Ali Fraz Rezvi
PHOTO • Ali Fraz Rezvi

ಎಡ : ಮೊಹಮ್ಮದ್ ಶಮೀಮ್ ತೀ ಲಿ ಅಂಟಿಸುತ್ತಿದ್ದಾರೆ . ಬಲ : ಸುನಿಲ್ ಪ್ಲಾಸ್ಟಿಕ್ ಹಾಳೆಗಳ ಕೆಲಸ ಮಾಡು ತ್ತಿದ್ದಾರೆ

ಪ್ಲಾಸ್ಟಿಕ್ ಹಾಳೆಯನ್ನು ಸಣ್ಣ ಚೌಕಗಳಾಗಿ ಕತ್ತರಿಸುತ್ತಿದ್ದ ಸುನಿಲ್ ಕುಮಾರ್ ಮಿಶ್ರಾ, ಕರವಸ್ತ್ರದಿಂದ ಬೆವರು ಒರೆಸಿಕೊಂಡರು. "ಗಾಳಿಪಟ ತಯಾರಿಸುವ ಕೆಲಸದಿಂದ ದುಡಿದ ಹಣದಲ್ಲಿ ನೀವು ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಯಾವುದೇ ಕಾರ್ಮಿಕರು ತಿಂಗಳಿಗೆ 10,000 ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುತ್ತಿಲ್ಲ" ಎಂದು ಅವರು ನಮಗೆ ತಿಳಿಸಿದರು.

ಹಾಜಿಗಂಜ್ ಮೊಹಲ್ಲಾದ ನಿವಾಸಿಯಾದ ಅವರು, ಈ ಪ್ರದೇಶವು ಒಂದು ಕಾಲದಲ್ಲಿ ನಗರದ ಗಾಳಿಪಟ ತಯಾರಿಸುವ ಸಮುದಾಯದ ಕೇಂದ್ರವಾಗಿದ್ದ ಕಾರಣ ಗಾಳಿಪಟಗಳನ್ನು ತಯಾರಿಕೆಯನ್ನು ನೋಡುತ್ತಾ ಬೆಳೆದರು. ಕೋವಿಡ್ -19 ಸಮಯದಲ್ಲಿ ಅವರ ಹೂವಿನ ಬಾಡಿದ ಕಾರಣ ಅವರು ಬಾಲ್ಯದಲ್ಲಿ ನೋಡಿದ್ದ ಈ ವೃತ್ತಿಗೆ ಬಂದು ಸೇರಿಕೊಂಡರು.

ಸುನಿಲ್ ಪೂರ್ಣಕಾಲಿಕ ಉದ್ಯೋಗಿಯಾಗಿದ್ದರೂ, ಅವರಿಗೂ ಗಾಳಿಪಟಗಳ ಸಂಖ್ಯೆಯನ್ನು ಆಧರಿಸಿ ಸಂಬಳ ನೀಡಲಾಗುತ್ತದೆ. "ಎಲ್ಲರೂ ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ಕೆಲಸ ಮಾಡುತ್ತೇವೆ ಮತ್ತು ಸಾಧ್ಯವಾದಷ್ಟೂ ಸಾವಿರಕ್ಕೂ ಹೆಚ್ಚು ಪಟಗಳನ್ನು ತಯಾರಿಸಲು ಪ್ರಯತ್ನಿಸುತ್ತೇವೆ" ಎಂದು ಅವರು ಹೇಳುತ್ತಾರೆ.

*****

ಮನೆಗಳಲ್ಲಿ ಗಾಳಿಪಟಗಳನ್ನು ತಯಾರಿಸುವ ಕೆಲಸದಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ – ಇಡೀ ಗಾಳಿಪಟ ಅಥವಾ ಅದರ ಭಾಗಗಳು. ಆಯಿಷಾ ಪರ್ವೀನ್ ತನ್ನ ನಾಲ್ಕು ಸದಸ್ಯರ ಕುಟುಂಬವನ್ನು ಪೋಷಿಸುವ ಸಲುವಾಗಿ ತಿಲಂಗಿ ತಯಾರಿಸುವ ಕಲೆಯನ್ನು ಕಲಿತರು. ಕಳೆದ 16 ವರ್ಷಗಳಿಂದ, ಆಯಿಷಾ ತನ್ನ ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಒಂದು ಕೋಣೆ-ಅಡುಗೆಮನೆಯ ರಚನೆಯಲ್ಲೇ ಗಾಳಿಪಟಗಳನ್ನು ತಯಾರಿಸುತ್ತಿದ್ದಾರೆ. "ಸ್ವಲ್ಪ ಸಮಯದ ಹಿಂದೆ ನಾನು ವಾರಕ್ಕೆ 9,000ಕ್ಕೂ ಹೆಚ್ಚು ತಿಲಾಂಗಿಗಳನ್ನು ತಯಾರಿಸುತ್ತಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಈಗ 2,000 ಗಾಳಿಪಟಗಳಿಗೆ ಆರ್ಡರ್ ಪಡೆಯುವುದು ದೊಡ್ಡ ವಿಷಯವಾಗಿದೆ" ಎಂದು ಅವರು ಹೇಳುತ್ತಾರೆ.

"ತಿಲಂಗಿಯನ್ನು ಏಳು ಭಾಗಗಳಲ್ಲಿ ತಯಾರಿಸಲಾಗುತ್ತದೆ ಮತ್ತು ಪ್ರತಿ ಭಾಗವನ್ನು ಪ್ರತ್ಯೇಕ ಕೆಲಸಗಾರರು ಮಾಡುತ್ತಾರೆ" ಎಂದು ಆಯಿಷಾ ಹೇಳುತ್ತಾರೆ. ಒಬ್ಬ ಕೆಲಸಗಾರನು ಅಗತ್ಯವಿರುವ ಗಾತ್ರಕ್ಕೆ ಅನುಗುಣವಾಗಿ ಪ್ಲಾಸ್ಟಿಕ್ ಹಾಳೆಯನ್ನು ಅನೇಕ ಚೌಕಗಳಾಗಿ ಕತ್ತರಿಸುತ್ತಾನೆ. ಏತನ್ಮಧ್ಯೆ ಇಬ್ಬರು ಕಾರ್ಮಿಕರು ಬಿದಿರನ್ನು ಸಣ್ಣ ತೀಲಿ ಮತ್ತು ಖಡ್ಡಾಗಳಾಗಿ ಕತ್ತರಿಸುತ್ತಾರೆ – ಅವುಗಳಲ್ಲಿ ಒಂದು ಉದ್ದವಾಗಿದ್ದರೆ ಇನ್ನೊಂದು ತುಲನಾತ್ಮಕವಾಗಿ ದಪ್ಪಗೆ ಚಿಕ್ಕದಾಗಿರುತ್ತದೆ. ಇನ್ನೊಬ್ಬ ಕೆಲಸಗಾರನು ಕತ್ತರಿಸಿದ ಪ್ಲಾಸ್ಟಿಕ್ ಚೌಕಗಳ ಮೇಲೆ ಖಡ್ಡಾ ಅಂಟಿಸಿ ಅದನ್ನು ಬಾಗಿದ ತೀಲಿಗಳನ್ನು ಅಂಟಿಸುವ ಕೆಲಸಗಾರನಿಗೆ ರವಾನಿಸುತ್ತಾನೆ.

ಇದೆಲ್ಲ ಮುಗಿದ ನಂತರ ಕೊನೆಯ ಇಬ್ಬರು ಕೆಲಸಗಾರರು ಪಟವನ್ನು ಪರಿಶೀಲಿಸಿ ಅದಕ್ಕೆ ಒಂದು ಗಮ್‌ ಟೇಪ್‌ ಅಂಟಿಸಿ ಮುಂದಿನ ಕೆಲಸಗಾರನಿಗೆ ಕೊಡುತ್ತಾರೆ. ಅವರು ಪಟಕ್ಕೆ ರಂಧ್ರ ಕೊರೆದು ದಾರ ಕಟ್ಟುತ್ತಾರೆ. ಈ ಪ್ರಕ್ರಿಯೆಯನ್ನು ಕಣ್ಣಾ ಎಂದು ಕರೆಯಲಾಗುತ್ತದೆ.

PHOTO • Ali Fraz Rezvi
PHOTO • Ali Fraz Rezvi

ತಮನ್ನಾ ಪ್ಲಾಸ್ಟಿಕ್ ಹಾಳೆಗಳ ಮೇಲೆ ಖಡ್ಡಾ (ಎಡ) ಅಂಟಿಸುವಲ್ಲಿ ನಿರತರಾಗಿದ್ದಾರೆ. ಅದು ಮುಗಿದ ನಂತರ ಅವರು ಪಟವನ್ನು ಸೂರ್ಯನ ಬಿಸಿಲಿಗೆ ಹಿಡಿದು ಪರಿಶೀಲನೆ ಮಾಡುತ್ತಾರೆ

ಪ್ಲಾಸ್ಟಿಕ್ ಕತ್ತರಿಸುವವರು 1,000 ಗಾಳಿಪಟಗಳಿಗೆ 80 ರೂ.ಗಳನ್ನು ಗಳಿಸಿದರೆ, ಬಿದಿರು ಕತ್ತರಿಸುವವರು 100 ರೂ.ಗಳನ್ನು ಗಳಿಸುತ್ತಾರೆ. ಈ ಕೆಲಸದಲ್ಲಿನ ಉಳಿದವರು ಅದೇ ಸಂಖ್ಯೆಗೆ ಸುಮಾರು 50 ರೂಪಾಯಿ ಗಳಿಸುತ್ತಾರೆ. ಕಾರ್ಮಿಕರ ಒಂದು ಗುಂಪು ದಿನಕ್ಕೆ 1,000 ಗಾಳಿಪಟಗಳನ್ನು ತಯಾರಿಸಬಹುದು,  ಗುಂಪು ಬೆಳಗ್ಗೆ 9ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತದೆ, ನಡುವೆ ಸಣ್ಣ ವಿರಾಮಗಳಷ್ಟೇ ಇರುತ್ತವೆ.

"ಒಂದು ತಿಲಂಗಿ ತಯಾರಿಕೆಯಲ್ಲಿ ಏಳು ಜನರ ಶ್ರಮ ಸೇರಿರುತ್ತದೆ, ಅದನ್ನು ಮಾರುಕಟ್ಟೆಯಲ್ಲಿ ಎರಡರಿಂದ ಮೂರು ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ" ಎಂದು ಆಯಿಷಾ ಹೇಳಿದರು. ಒಟ್ಟು ತಯಾರಿಕೆ ವೆಚ್ಚವು 1,000 ಗಾಳಿಪಟಗಳಿಗೆ 410 ರೂಪಾಯಿಯ ತನಕ ಇರುತ್ತದೆ ಮತ್ತು ಈ ಹಣವನ್ನು ಏಳು ಜನರ ನಡುವೆ ವಿಂಗಡಿಸಲಾಗುತ್ತದೆ. "ರುಕ್ಸಾನಾ [ಅವರ ಮಗಳು] ಈ ಗಾಳಿಪಟ ತಯಾರಿಕೆಯ ವ್ಯವಹಾರದಲ್ಲಿ ತೊಡಗುವುದನ್ನು ನಾನು ಬಯಸುವುದಿಲ್ಲ" ಎಂದು ಅವರು ಹೇಳುತ್ತಾರೆ.

ಆದರೆ ಇತರ ಅನೇಕ ಮಹಿಳಾ ಕುಶಲಕರ್ಮಿಗಳಂತೆ, ಅವರು ಮನೆಯಿಂದ ಹೊರಗೆ ಹೋಗದೆ ಸಂಪಾದಿಸುವ ಕುರಿತು ಸಂತೋಷ ಹೊಂದಿದ್ದಾರೆ, ಆದರೆ ಗಳಿಕೆ ತುಂಬಾ ಕಡಿಮೆ, "ಆದರೆ ಮೊದಲಿಗೆ ಕೆಲಸವಾದರೂ ನಿಯಮಿತವಾಗಿ ಸಿಗುತ್ತಿತ್ತು" ಎಂದು ಹೇಳುತ್ತಾರೆ. 2,000 ಗಾಳಿಪಟಗಳಿಗೆ ಖಡ್ಡಾ ಅಂಟಿಸಿ ಕನ್ನಾ ಕಟ್ಟಲು ಆಯಿಷಾರಿಗೆ 180 ರೂ.ಗಳನ್ನು ನೀಡಲಾಗುತ್ತದೆ - 100 ಗಾಳಿಪಟಗಳಿಗೆ ಎರಡೂ ಕೆಲಸಗಳನ್ನು ಪೂರ್ಣಗೊಳಿಸಲು ಸುಮಾರು 4-5 ಗಂಟೆ ಬೇಕಾಗುತ್ತದೆ.

ದೀವಾನ್‌ ಮೊಹಲ್ಲಾ ಪ್ರದೇಶದಲ್ಲಿ ವಾಸಿಸುವ ತಮನ್ನಾ ಸಹ ತಿಲಂಗಿ ತಯಾರಿಸುವ ಕೆಲಸವನ್ನು ಮಾಡುತ್ತಾರೆ. "ಈ ಕೆಲಸವನ್ನು [ಹೆಚ್ಚಾಗಿ] ಮಹಿಳೆಯರು ಮಾಡಲು ಕಾರಣವೆಂದರೆ ಇದು ಗಾಳಿಪಟ ಉದ್ಯಮದಲ್ಲಿ ಅತ್ಯಂತ ಕಡಿಮೆ ಸಂಬಳದ ಉದ್ಯೋಗವಾಗಿದೆ" ಎಂದು 25 ವರ್ಷದ ಅವರು ಹೇಳುತ್ತಾರೆ. "ಖಡ್ಡಾ ಅಂಟಿಸುವುದು ಮತ್ತು ತೀಲಿ ಕಟ್ಟುವುದರಲ್ಲಿ ಅಂತಹ ವಿಶೇಷ ಏನೂ ಇಲ್ಲ, ಆದರೆ ಮಹಿಳೆಗೆ 1,000 ಖಡ್ಡಾ ಅಂಟಿಸಿದರೆ 50 ರೂಪಾಯಿ ಸಿಗುತ್ತದೆ ಮತ್ತು ಗಂಡಸು 1,000 ತೀಲಿಗೆ 100 ರೂಪಾಯಿಗಳನ್ನು ಪಡೆಯುತ್ತಾನೆ.”

PHOTO • Ali Fraz Rezvi

ರುಕ್ಸಾನಾ ತಾನು ತಯಾರಿಸಿದ ತಿಲಾಂಗಿಯನ್ನು ತೋರಿಸುತ್ತಿದ್ದಾರೆ

ಪಟ್ನಾ ಇಂದಿಗೂ ಗಾಳಿಪಟ ತಯಾರಿಕೆ ಹಾಗೂ ಪೂರೈಕೆಯ ವಿಷಯದಲ್ಲಿ ಕೇಂದ್ರವಾಗಿಯೇ ಉಳಿದಿದೆ. ಇಲ್ಲಿಂದ ಗಾಳಿಪಟ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಬಿಹಾರದಾದ್ಯಂತ ಹಾಗೂ ಸಿಲಿಗುರಿ, ಕೋಲ್ಕತಾ, ಮಾಲ್ಡಾ, ರಾಂಚಿ, ಹಜಾರಿಬಾಗ್, ಜೌನ್ಪುರ್, ಕಠ್ಮಂಡು, ಉನ್ನಾವೊ, ಝಾನ್ಸಿ, ಭೋಪಾಲ್ ಮತ್ತು ಪುಣೆ ಮತ್ತು ನಾಗ್ಪುರದವರೆಗೂ ಕಳುಹಿಸಲಾಗುತ್ತದೆ

ಆಯಿಷಾ ಅವರ 17 ವರ್ಷದ ಮಗಳು ರುಕ್ಸಾನಾ ಖಡ್ಡಾ-ಮಾಸ್ಟರ್ - ಅವರು ತೆಳುವಾದ ಬಿದಿರಿನ ಕಡ್ಡಿಗಳನ್ನು ಜಾರುವ ತೆಳುವಾದ ಪ್ಲಾಸ್ಟಿಕ್ ಹಾಳೆಗಳ ಮೇಲೆ ಅಂಟಿಸುತ್ತಾರೆ. ಶಾಲೆಯಲ್ಲಿ 11ನೇ ತರಗತಿಗೆ ದಾಖಲಾದ ಈ ವಾಣಿಜ್ಯ ವಿಣಾಗದ ವಿದ್ಯಾರ್ಥಿ ಗಾಳಿಪಟ ತಯಾರಿಕೆಯಲ್ಲಿ ತನ್ನ ತಾಯಿಗೆ ಸಹಾಯ ಮಾಡಲು ಸಮಯವನ್ನು ಮಾಡಿಕೊಳ್ಳುತ್ತಾರೆ.

ಅವರು ತಮ್ಮ 12ನೇ ವಯಸ್ಸಿನಲ್ಲಿ ತಮ್ಮ ತಾಯಿಯಿಂದ ಈ ಕಲೆಯನ್ನು ಕಲಿತರು. "ಅವಳು ಚಿಕ್ಕವಳಿದ್ದಾಗ ಗಾಳಿಪಟಗಳೊಂದಿಗೆ ಆಡುತ್ತಿದ್ದಳು ಮತ್ತು ಗಾಳಿಪಟ ಹಾರಿಸುವುದರಲ್ಲಿ ಪರಿಣಿತಳಾಗಿದ್ದಳು" ಎಂದು ಆಯಿಷಾ ಹೇಳುತ್ತಾರೆ, ಇದನ್ನು ಗಂಡುಮಕ್ಕಳ ಆಟ ಎಂದು ಕರೆಯಲಾಗುವ ಕಾರಣ ಈಗೀಗ ಅವಳನ್ನು ಆಡದಂತೆ ನಾನೇ ತಡೆಯುತ್ತೇನೆ ಎಂದು ಅವರು ಹೇಳುತ್ತಾರೆ.

ಆಯಿಷಾ ಮೊಹಲ್ಲಾ ದೀವಾನ್ ಶೀಶ್ ಮಹೇಲ್ ಪ್ರದೇಶದ ತನ್ನ ಬಾಡಿಗೆ ಕೋಣೆಯ ಪ್ರವೇಶದ್ವಾರದ ಬಳಿ ಹೊಸದಾಗಿ ತಯಾರಿಸಿದ ತಿಲಂಗಿಗಳನ್ನು ಜೋಡಿಸಿಡುತ್ತಿದ್ದರು. ರುಕ್ಸಾನಾ ಗಾಳಿಪಟಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದರು. ಅವುಗಳನ್ನು ಸಂಗ್ರಹಿಸಲು ಗುತ್ತಿಗೆದಾರ ಶಫೀಕ್ ಬರುವದನ್ನು ಅವರು ಕಾಯುತ್ತಿದ್ದರು.

"2,000 ಗಾಳಿಪಟಗಳಿಗೆ ಬೇಡಿಕೆ ಬಂದಿದೆ ಆದರೆ ನಾನು ನನ್ನ ಮಗಳಿಗೆ ತಿಳಿಸಲು ಮರೆತಿದ್ದೆ. ಅವಳು ಉಳಿದ ವಸ್ತುಗಳನ್ನು ಬಳಸಿ 300 ಹೆಚ್ಚುವರಿ ಪಟಗಳನ್ನು ಮಾಡಿದಳು" ಎಂದು ಆಯಿಷಾ ಹೇಳುತ್ತಾರೆ.

"ಆದರೆ ಚಿಂತಿಸಬೇಕಾಗಿಲ್ಲ, ನಾವು ಅದನ್ನು ಮುಂದಿನ ಬೇಡಿಕೆಗೆ ಬಳಸಿಕೊಳ್ಳುತ್ತೇವೆ" ಎಂದು ಅವರ ಮಗಳು ರುಕ್ಸಾನಾ ನಮ್ಮ ಸಂಭಾಷಣೆಯನ್ನು ಕೇಳುತ್ತಾ ಹೇಳುತ್ತಾರೆ.

“ಒಂದು ವೇಳೆ ಇನ್ನೊಂದು ಬೇಡಿಕೆ ಬಂದರೆ ಮಾತ್ರ” ಎಂದರು ಆಯಿಷಾ.

ಈ ಕಥಾನಕವನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲದೊಂದಿಗೆ ವರದಿ ಮಾಡಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Ali Fraz Rezvi

ಅಲಿ ಫ್ರಾಜ್ ರೆಜ್ವಿ ಓರ್ವ ಸ್ವತಂತ್ರ ಪತ್ರಕರ್ತ ಮತ್ತು ರಂಗಭೂಮಿ ಕಲಾವಿದ. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.

Other stories by Ali Fraz Rezvi
Editor : Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Other stories by Priti David
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru