ನೀವು 6-14 ವರ್ಷ ವಯಸ್ಸಿನ ಮಕ್ಕಳಾಗಿದ್ದಲ್ಲಿ, ನಿಮಗೆ ನಿಮ್ಮ ನೆರೆಹೊರೆಯ ಶಾಲೆಗಳಲ್ಲಿ "ಉಚಿತ ಮತ್ತು ಕಡ್ಡಾಯ ಶಿಕ್ಷಣ" ಪಡೆಯುವ ಹಕ್ಕಿದೆ. ಇದನ್ನು ನಿರ್ಧರಿಸುವ ಕಾನೂನು - ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು ಕಾಯ್ದೆ (ಆರ್ ಟಿಇ) ಯನ್ನು ಭಾರತ ಸರ್ಕಾರವು 2009ರಲ್ಲಿ ಜಾರಿಗೆ ತಂದಿತು.

ಆದರೆ ಒಡಿಶಾದ ಜಜ್ಪುರ್ ಜಿಲ್ಲೆಯ ಒಂಬತ್ತು ವರ್ಷದ ಚಂದ್ರಿಕಾ ಬೆಹೆರಾ ಮನೆಗೆ ಹತ್ತಿರದಲ್ಲೆಲ್ಲೂ ಶಾಲೆಯಿಲ್ಲದಿರುವ ಕಾರಣ ಸುಮಾರು ಎರಡು ವರ್ಷಗಳಿಂದ ಶಾಲೆಯಿಂದ ಹೊರಗುಳಿದಿದ್ದಾಳೆ. ಶಾಲೆ ಅವಳ ಮನೆಯಿಂದ 3.5 ಕಿ,ಮೀ ದೂರದಲ್ಲಿದೆ.

ಗ್ರಾಮೀಣ ಪ್ರದೇಶದಲ್ಲಿ ಬೋಧನೆ ಮತ್ತು ಕಲಿಕೆಯ ಅಭ್ಯಾಸಗಳು ಸ್ಥಿರವಾಗಿಲ್ಲ. ಇಲ್ಲಿ ಕಾನೂನು ಮತ್ತು ನೀತಿಗಳು ಕೇವಲ ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿರುತ್ತವೆ. ಕೆಲವು ಸಂದರ್ಭಗಳಲ್ಲಿ ಶಿಕ್ಷಕರು ವೈಯಕ್ತಿಕ ಪ್ರಯತ್ನಗಳ ಮೂಲಕ ವ್ಯವಸ್ಥಿತ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರೆ. ಇದು ಕೆಲವೊಮ್ಮೆ ವ್ಯವಸ್ಥೆಯಲ್ಲಿ ನಿಜವಾದ ಬದಲಾವಣೆಯನ್ನು ತರುತ್ತದೆ.

ಉದಾಹರಣೆಗೆ, ಕಾಶ್ಮೀರದ ಅನಂತನಾಗ್ ಜಿಲ್ಲೆಯ ಈ ಶಿಕ್ಷಕರನ್ನೇ ತೆಗೆದುಕೊಳ್ಳಿ, ಅವರು ಈ ಅಲೆಮಾರಿ ಸಮುದಾಯದ ಚಿಕ್ಕ ಮಕ್ಕಳಿಗೆ ಕಲಿಸುವ ಸಲುವಾಗಿ ಲಿಡ್ಡರ್ ಕಣಿವೆಯ ಗುಜ್ಜರ್ ನೆಲೆಗೆ ನಾಲ್ಕು ತಿಂಗಳ ಕಾಲ ವಲಸೆ ಹೋಗುತ್ತಾರೆ. ಹಲವೆಡೆ ಶಿಕ್ಷಕರು ತಮ್ಮ ಸೀಮಿತ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಲು ಹೊಸ ಅವಿಷ್ಕಾರಗಳನ್ನು ಪ್ರಯತ್ನಿಸುತ್ತಿದ್ದಾರೆ. ಕೊಯಮತ್ತೂರಿನ ವಿದ್ಯಾವನಂ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳ ಬಗ್ಗೆ ಚರ್ಚಿಸುವಂತೆ ತಯಾರಿಸಿದ್ದಾರೆ. ಈ ಮಕ್ಕಳಲ್ಲಿ ಅನೇಕರು ಇಂಗ್ಲಿಷ್ ಜ್ಞಾನ ಪಡೆದ ಮೊದಲ ತಲೆಮಾರು. ಆದರೆ ಅವರು ಈಗ ಇಂಗ್ಲಿಷ್ ಭಾಷೆಯಲ್ಲಿ ಚರ್ಚಿಸಬಲ್ಲರು, ಈ ವಿದ್ಯಾರ್ಥಿಗಳೀಗ ಸಾವಯವ ಅಕ್ಕಿಯ ಮೌಲ್ಯ ಇತ್ಯಾದಿಯ ಕುರಿತು ಮಾತನಾಡುತ್ತಿದ್ದಾರೆ.

ಪರಿ ಲೈಬ್ರರಿಗೆ ಕಾಲಿಡುವ ಮೂಲಕ ನೀವು ಕಲಿಕೆಯ ಫಲಿತಾಂಶಗಳ ಕುರಿತಾದ ಹಲವು ನೋಟಗಳನ್ನು ಪಡೆಯಬಹುದು. ಮತ್ತು ಈ ಮೂಲಕ ನೀವು ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಸ್ಪಷ್ಟ ನೋಟವೊಂದನ್ನು ಗಳಿಸಿಕೊಳ್ಳಬಹುದು. ನಮ್ಮ ಲೈಬ್ರರಿಯಲ್ಲಿ ಗ್ರಾಮೀಣ ಶಿಕ್ಷಣದ ಸರ್ವಲಭ್ಯತೆ, ಅದರ ಗುಣಮಟ್ಟ ಮತ್ತು ಅಂತರಗಳ ಕುರಿತಾದ ವರದಿಗಳು ನಿಮ್ಮ ಓದಿ ಲಭ್ಯವಿವೆ. ಲೈಬ್ರರಿಯಲ್ಲಿನ ಪ್ರತಿ ದಾಖಲೆಯೂ ತನ್ನೊಂದಿಗೆ ಒಂದು ಸಾರಾಂಶ ರೂಪದ ಟಿಪ್ಪಣಿಯನ್ನು ಹೊಂದಿರುತ್ತದೆ. ಅದು ಆ ದಾಖಲೆಯಲ್ಲಿ ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತದೆ.

PHOTO • Design courtesy: Siddhita Sonavane

ಶಿಕ್ಷಣದ ಇತ್ತೀಚಿನ ವಾರ್ಷಿಕ ಸ್ಥಿತಿ (ಗ್ರಾಮೀಣ) ವರದಿಯ ಪ್ರಕಾರ, 2022ರಲ್ಲಿ, ಈ ದೇಶದ ಮಕ್ಕಳ ಮೂಲಭೂತ ಓದಿನ ಸಾಮರ್ಥ್ಯವು 2012ಕ್ಕಿಂತ ಹಿಂದಿನ ಮಟ್ಟಕ್ಕೆ ಇಳಿದಿದೆ - ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ. ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ತೋರಣ್ಮಲ್ ಪ್ರದೇಶದಲ್ಲಿ, 8 ವರ್ಷದ ಶರ್ಮಿಳಾ 2020ರ ಮಾರ್ಚ್‌ ತಿಂಗಳಿನಲ್ಲಿ ಶಾಲೆ ಮುಚ್ಚಲಾದ ಕಾರಣ ಅವಳು ಹೊಲಿಗೆ ಯಂತ್ರವನ್ನು ಬಳಸಲು ಕಲಿತಳು. ಅವಳೀಗ ಮರಾಠಿ ವರ್ಣಮಾಲೆಯಲ್ಲಿನ “ ಒಂದಕ್ಷರವೂ ನೆನಪಿಲ್ಲ ” ಎನ್ನುತ್ತಾಳೆ.

ಕೋವಿಡ್‌ - 19 ಪಿಡುಗಿನ ಹರಡುವಿಕೆಯು ರಾಜ್ಯಗಳಲ್ಲಿ ಶಿಕ್ಷಣ ಬಿಕ್ಕಟ್ಟಿನ ಉಲ್ಬಣಕ್ಕೆ ಕಾರಣವಾಯಿತು. 2021ರಲ್ಲಿ ನಡೆಸಲಾದ ಈ ಸಮೀಕ್ಷೆಯು ಆನ್ಲೈನ್‌ ಶಿಕ್ಷಣದ ಆಗಮನದೊಂದಿಗೆ ಈಗಾಗಲೇ ಶಿಕ್ಷಣ ಪಡೆಯಲು ಒದ್ದಾಡುತ್ತಿದ್ದ ಜನರು ಇನ್ನಷ್ಟು ಅಂಚಿಗೆ ತಳ್ಳಲ್ಪಟ್ಟರು ಎನ್ನುತ್ತದೆ. ಅದೇ ಸಮೀಕ್ಷೆಯು ನಗರ ಪ್ರದೇಶಗಳಲ್ಲಿ ಕೇವಲ 24 ಪ್ರತಿಶತ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 8 ಪ್ರತಿಶತದಷ್ಟು ಮಕ್ಕಳು ಮಾತ್ರ ʼಆನ್ಲೈನ್‌ ಶಿಕ್ಷಣಕ್ಕೆ ಸಾಕಷ್ಟು ಪ್ರವೇಶವನ್ನು ಹೊಂದಿದ್ದಾರೆ” ಎಂದು ಹೇಳುತ್ತದೆ.

PHOTO • Design courtesy: Siddhita Sonavane

1ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನೀಡಲಾಗುವ ಮಧ್ಯಾಹ್ನದ ಊಟದ ಯೋಜನೆಯು ಸುಮಾರು 11.80 ಕೋಟಿ ಮಕ್ಕಳನ್ನು ಒಳಗೊಂಡಿದೆ. ಗ್ರಾಮೀಣ ಪ್ರದೇಶದ ಸುಮಾರು 50 ಪ್ರತಿಶತದಷ್ಟು ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಉಚಿತ ಮಧ್ಯಾಹ್ನದ ಊಟವನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ - ಅವರಲ್ಲಿ 99.1 ಪ್ರತಿಶತದಷ್ಟು ಮಕ್ಕಳು ಸರ್ಕಾರಿ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ. ಛತ್ತೀಸ್ಗಢದ ಮಾಟಿಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪೂನಂ ಜಾಧವ್, "ಕೆಲವೇ ಪೋಷಕರು ತಮ್ಮ ಮಕ್ಕಳಿಗೆ ಈ ಮಧ್ಯಾಹ್ನದ ಊಟವನ್ನು ಭರಿಸಬಲ್ಲರು " ಎಂದು ಹೇಳುತ್ತಾರೆ. ಇಲ್ಲಿ ಶಾಲೆಗಳಲ್ಲಿ ಇಂತಹ ಕಲ್ಯಾಣ ಯೋಜನೆಗಳನ್ನು ನಿರಂತರವಾಗಿ ಬಲಪಡಿಸುವ ಅಗತ್ಯ ಸ್ಪಷ್ಟವಾಗಿ ಕಾಣುತ್ತದೆ.

ನಾನು ಈಗಾಗಲೇ ಸಾಕಷ್ಟು ಓದಿಯಾಗಿದೆ. ಇನ್ನೂ ಓದಿದರೆ ನಿನ್ನನ್ನು ಯಾರು ಮದುವೆಯಾಗುತ್ತಾರೆ ?” ಎಂದು ತನ್ನನ್ನು ಕೇಳುತ್ತಿರುತ್ತಾರೆ ಎನ್ನುತ್ತಾರೆ ಬಿಹಾರದ ಸಮಸ್ತಿಪುರ ಜಿಲ್ಲೆಯ ಶಿವಾನಿ ಕುಮಾರ್.‌ ಶಿಕ್ಷಣದಲ್ಲಿ ಲಿಂಗವು ಒಂದು ದೊಡ್ಡ ತಡೆಯಾಗಿದೆ. ಸಂಪನ್ಮೂಲ ಹಂಚಿಕೆಯ ವಿಷಯದಲ್ಲಿ ಹುಡುಗಿಯರು ಬಹಳ ಕೆಳಗಿದ್ದಾರೆ ಎನ್ನುತ್ತದೆ ಭಾರತದಲ್ಲಿ ಶಿಕ್ಷಣದ ಮೇಲೆ ಕೌಟುಂಬಿಕ ಸಾಮಾಜಿಕ ಬಳಕೆಯ ಪ್ರಮುಖ ಸೂಚಕಗಳು: ಎನ್ಎಸ್ಎಸ್ 75ನೇ ಸುತ್ತು (ಜುಲೈ 2017-ಜೂನ್ 2018) ವರದಿ. ಗ್ರಾಮೀಣ ಭಾರತದಲ್ಲಿ 3ರಿಂದ 35 ವರ್ಷ ವಯಸ್ಸಿನ ಸುಮಾರು 19 ಪ್ರತಿಶತದಷ್ಟು ಹುಡುಗಿಯರು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಎಂದು ವರದಿ ಹೇಳುತ್ತದೆ.

PHOTO • Design courtesy: Siddhita Sonavane

2020ರಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದ 4.13 ಕೋಟಿ ವಿದ್ಯಾರ್ಥಿಗಳಲ್ಲಿ, ಕೇವಲ 5.8 ಪ್ರತಿಶತದಷ್ಟು ವಿದ್ಯಾರ್ಥಿಗಳಷ್ಟೇ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಇದು ಭಾರತದ ಸಾಮಾಜಿಕ ಗುಂಪುಗಳ ನಡುವೆ ಶಿಕ್ಷಣಕ್ಕೆ ಪ್ರವೇಶ ಪಡೆಯುವ ವಿಷಯದಲ್ಲಿ ಇರುವ ಅಸಮತೋಲನವನ್ನು ಬಹಿರಂಗಪಡಿಸುತ್ತದೆ. "ಗ್ರಾಮೀಣ ಪ್ರದೇಶಗಳಲ್ಲಿ, ಖಾಸಗಿ ಶಾಲೆಗಳ ಸಂಖ್ಯೆಯಲ್ಲಿನ ಹೆಚ್ಚಳವು ಭಾರತದ ಅಂಚಿನಲ್ಲಿರುವ ಸಮುದಾಯಗಳಿಗೆ ಹೊಸ ಅವಕಾಶಗಳನ್ನು ತೆರೆಯುವ ಬದಲು ಸಾಮಾಜಿಕ, ಆರ್ಥಿಕ ಮತ್ತು ಜನಸಂಖ್ಯಾ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ" ಎಂದು ಆಕ್ಸ್ಫಾಮ್ ಇಂಡಿಯಾದ ವರದಿ ಹೇಳುತ್ತದೆ.

ಖಾಸಗಿ ಶಾಲೆಗಳತ್ತ ಮುಖ ಮಾಡಿದರೂ, ಅನೇಕರು ತಮ್ಮ ಶಿಕ್ಷಣಕ್ಕಾಗಿ ಸರ್ಕಾರದ ಬೆಂಬಲವನ್ನು ಅವಲಂಬಿಸಿದ್ದಾರೆ. ಕಾರಣಗಳು ಸ್ಪಷ್ಟವಾಗಿವೆ - ಪ್ರಾಥಮಿಕ ಹಂತದಲ್ಲಿ ಸರಾಸರಿ ವಾರ್ಷಿಕ ವೆಚ್ಚವು ಸರ್ಕಾರಿ ಶಾಲೆಗಳಲ್ಲಿ 1,253 ರೂ.ಗಳಾಗಿದ್ದರೆ, ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಇದಕ್ಕೆ ಅನುಗುಣವಾದ ವೆಚ್ಚವು 14,485 ರೂ. "ನಮಗೆ ಗೊತ್ತಿರುವುದು ಅಡುಗೆ ಮಾಡುವುದು ಮತ್ತು ಸ್ವಚ್ಛಗೊಳಿಸುವುದು ಮಾತ್ರ ಎಂದು ಖಾಸಗಿ ಶಾಲಾ ಶಿಕ್ಷಕರು ಭಾವಿಸುತ್ತಾರೆ. ಅವರ ಪ್ರಕಾರ ನನಗೆ ಪಾಠ ಮಾಡಿದ 'ಅನುಭವ' ಇಲ್ಲ" ಎಂದು ಬೆಂಗಳೂರಿನ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವ 40 ವರ್ಷದ ರಾಜೇಶ್ವರಿ ಹೇಳುತ್ತಾರೆ.

PHOTO • Design courtesy: Siddhita Sonavane

ಕುಡಿಯುವ ನೀರು ಮತ್ತು ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯು ರಾಜೇಶ್ವರಿಯವರಂತಹ ಶಾಲಾ ಶಿಕ್ಷಕರ ಕೆಲಸವನ್ನು ಕಷ್ಟಕರ ಮತ್ತಷ್ಟು ಕಷ್ಟಕರವಾಗಿಸಿ ಬಳಲಿಸುತ್ತವೆ. ಉದಾಹರಣೆಗೆ, ಒಸ್ಮಾನಾಬಾದ್ ಸಂಜಾ ಗ್ರಾಮದಲ್ಲಿರುವ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯನ್ನು ತೆಗೆದುಕೊಳ್ಳಿ. ಮಾರ್ಚ್ 2017ರಿಂದ ಮಹಾರಾಷ್ಟ್ರದ ಈ ಶಾಲೆಗೆ ವಿದ್ಯುತ್ ಸಂಪರ್ಕವಿಲ್ಲ. "ಸರ್ಕಾರದಿಂದ ಬರುವ ಹಣ ಸಾಕಾಗುವುದಿಲ್ಲ... ಶಾಲಾ ನಿರ್ವಹಣೆ ಮತ್ತು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಖರೀದಿಸಲು ನಾವು ವರ್ಷಕ್ಕೆ ಕೇವಲ 10,000 ರೂಪಾಯಿಗಳನ್ನು ಪಡೆಯುತ್ತೇವೆ " ಎಂದು ಶಾಲೆಯ ಪ್ರಾಂಶುಪಾಲರಾದ ಶೀಲಾ ಕುಲಕರ್ಣಿ ಹೇಳುತ್ತಾರೆ.

ಇದು ಅಪರೂಪದ ಪ್ರಕರಣವೇನಲ್ಲ - 2019ರ ಹೊತ್ತಿಗೆ, ಭಾರತದಲ್ಲಿ 23 ಮಿಲಿಯನ್ ಮಕ್ಕಳು ತಮ್ಮ ಶಾಲೆಗಳಲ್ಲಿ ಕುಡಿಯುವ ನೀರಿನ ಸೇವೆಗಳಿಗೆ ಪ್ರವೇಶವನ್ನು ಹೊಂದಿಲ್ಲ ಮತ್ತು 62 ಮಿಲಿಯನ್ ಮಕ್ಕಳು ತಮ್ಮ ಶಾಲೆಗಳಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿಲ್ಲ.

PHOTO • Design courtesy: Siddhita Sonavane

ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯು ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಆದರೆ ಗ್ರಾಮೀಣ ಶಿಕ್ಷಣದ್ದು ಕೇವಲ ಕೊರತೆಯ ಕಥೆಯಲ್ಲ: 2019-20ರಲ್ಲಿ 42,343ರಷ್ಟಿದ್ದ ಕಾಲೇಜುಗಳ ಸಂಖ್ಯೆ 2020-21ರಲ್ಲಿ 43,796ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ದೇಶದಲ್ಲಿ ಬಾಲಕಿಯರಿಗಾಗಿಯೇ 4,375 ಕಾಲೇಜುಗಳಿದ್ದವು.

ದೇಶಾದ್ಯಂತ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ, ಹುಡುಗಿಯರು ಉನ್ನತ ಶಿಕ್ಷಣದ ಅವಕಾಶವನ್ನು ಪಡೆಯಲು ಬಂಡಾಯ ಎದ್ದರು. ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ಕುಗ್ರಾಮದ ಜಮುನಾ ಸೋಲಂಕೆ ತನ್ನ ನಾಥಜೋಗಿ ಅಲೆಮಾರಿ ಸಮುದಾಯದಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣರಾದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. "ನಾನು ಬಸ್ ಕಂಡಕ್ಟರ್ ಅಥವಾ ಅಂಗನವಾಡಿ ಕಾರ್ಯಕರ್ತೆಯಾಗಬೇಕೆಂದು ಜನರು ಹೇಳುತ್ತಾರೆ ಏಕೆಂದರೆ ನನಗೆ ಬೇಗನೆ ಕೆಲಸ ಸಿಗುತ್ತದೆ. ಆದರೆ ನಾನು ಏನಾಗಬೇಕೆಂದು ಬಯಸುತ್ತೇನೋ ಅದೇ ಆಗುತ್ತೇನೆ " ಎಂದು ಜಮುನಾ ಒತ್ತಿ ಹೇಳುತ್ತಾರೆ.

ಮುಖ್ಯ ಚಿತ್ರ ವಿನ್ಯಾಸ: ಸ್ವದೇಶಾ ಶರ್ಮಾ

ಅನುವಾದ: ಶಂಕರ. ಎನ್. ಕೆಂಚನೂರು

Dipanjali Singh

ದೀಪಾಂಜಲಿ ಸಿಂಗ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಅವರು ಪರಿ ಲೈಬ್ರರಿಗಾಗಿ ದಾಖಲೆಗಳನ್ನು ಸಂಶೋಧಿಸುತ್ತಾರೆ ಮತ್ತು ಸಂಗ್ರಹಿಸುತ್ತಾರೆ.

Other stories by Dipanjali Singh
Editor : PARI Library Team

ದೀಪಾಂಜಲಿ ಸಿಂಗ್, ಸ್ವದೇಶ ಶರ್ಮಾ ಮತ್ತು ಸಿದ್ಧಿತಾ ಸೋನವಾಣೆ ಅವರ ಪರಿ ಲೈಬ್ರರಿ ತಂಡವು ಜನಸಾಮಾನ್ಯರ ಸಂಪನ್ಮೂಲ ಸಂಗ್ರಹವನ್ನು ರಚಿಸುವ ಪರಿಯ ಧ್ಯೇಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತದೆ.

Other stories by PARI Library Team
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru