ಅದನ್ನು ನೋಡುವಾಗ ನಮಗೆ ಅದೊಂದು ಮಿತವ್ಯಯದ ಅವಿಷ್ಕಾರದಂತೆ ಕಾಣುತ್ತದೆ. ಆದರೆ 65 ವರ್ಷದ ನಾರಾಯಣ ದೇಸಾಯಿಯವರ ಪ್ರಕಾರ ಅದು ಕಲೆಯ ʼಸಾವುʼ. ನಾವು ಮಾತನಾಡುತ್ತಿರುವುದು ದೇಸಾಯಿಯವರ ಶಹನಾಯಿ ಕುರಿತು. ಈ ಮಿತವ್ಯಯದ ಅವಿಷ್ಕಾರ ಅಥವಾ ಕಲೆಯ ಸಾವು ಎನ್ನುವುದು ಶಹನಾಯಿಯ ವಿನ್ಯಾಸದಲ್ಲಿನ ಬದಲಾವಣೆಯ ವಿಷಯ. ಇದನ್ನು ಅವರು ಮಾರುಕಟ್ಟೆ ತಮ್ಮೆದುರು ತಂದೊಡ್ಡಿದ ವಾಸ್ತವದೆದುರು ಅವರು ಕಂಡುಕೊಂಡ ದಾರಿಯಾಗಿತ್ತು. ಇದು ಅವರ ಕಲೆಯ ಸಾವು-ಬದುಕಿನ ಪ್ರಶ್ನೆಯಾಗಿತ್ತು.

ಶಹನಾಯಿಯೆನ್ನುವುದು ಒಂದು ಗಾಳಿ ವಾದ್ಯವಾಗಿದ್ದು ಇದನ್ನು ಸ್ಥಳೀಯ ಕಾರ್ಯಕ್ರಮಗಳು ಮತ್ತು ಮದುವೆಗಳಲ್ಲಿ ಊದಲಾಗುತ್ತದೆ.

ಎರಡು ವರ್ಷಗಳ ಹಿಂದಿನವರೆಗೂ ನಾರಾಯಣ ದೇಸಾಯಿಯವರು ತಯಾರಿಸಿದ ಶಹನಾಯಿಯ ತುದಿಯಲ್ಲೊಂದು ಪಿತಲಿ (ಹಿತ್ತಾಳೆ) ಗಂಟೆ ನೇತಾಡುತ್ತಿತ್ತು. ಕೈಯಿಂದ ತಯಾರಿಸಲಾಗುವ ಶಹನಾಯಿಗಳ ತುದಿಯಲ್ಲಿನ ಈ ಗಂಟೆಯನ್ನು ಮರಾಠಿಯಲ್ಲಿ ವಾಟೀ ಎಂದು ಕರೆಯಲಾಗುತ್ತದೆ. ಇದು ಮರದ ಶಹನಾಯಿಗಳ ಸ್ವರಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ತಮ್ಮ ವೃತ್ತಿ ಬದುಕು ಉತ್ತುಂಗದಲ್ಲಿದ್ದ ಕಾಲವಾದ 70ರ ದಶಕದಲ್ಲಿ ದೇಸಾಯಿಯವರ ಬಳಿ ಹತ್ತು-ಹನ್ನೆರಡು ಗಂಟೆಗಳು ಇರುತ್ತಿದ್ದವು. ಅವರು ಅವುಗಳನ್ನುಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಿಂದ ಖರೀದಿಸಿ ತರುತ್ತಿದ್ದರು.

ಅದೇನೇ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅವರನ್ನು ಈ ಗಂಟೆಗಳನ್ನು ಬಳಸದಂತೆ ಎರಡು ವಿಷಯಗಳು ತಡೆದವು: ಹೆಚ್ಚುತ್ತಿರುವ ಹಿತ್ತಾಳೆಯ ಬೆಲೆ ಮತ್ತು ಉತ್ತಮ ಗುಣಮಟ್ಟದ ಶಹನಾಯಿ ತಯಾರಿಸಲು ತಗಲುವ ವೆಚ್ಚವನ್ನು ನೀಡಲು ತಯಾರಿರದ ಗ್ರಾಹಕರು.

“ಜನರು 300-400 ರೂಪಾಯಿಗಳಿಗೆ ಕೊಡುವಂತೆ ಕೇಳುತ್ತಿದ್ದರು” ಎನ್ನುತ್ತಾರವರು. ಆ ಬೆಲೆಗೆ ಕೊಡುವುದು ನಿಜಕ್ಕೂ ಅಸಾಧ್ಯವಾದ ವಿಚಾರ. ಇಂದಿನ ದಿನಗಳಲ್ಲಿ ಕೇವಲ ಹಿತ್ತಾಳೆ ಗಂಟೆಯೊಂದರ ಬೆಲೆಯೇ ಸುಮಾರು 500 ರೂಪಾಯಿಗಳಷ್ಟಿದೆ. ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡ ನಂತರ ದೇಸಾಯಿಯವರು ಹೊಸ ಉಪಾಯವೊಂದನ್ನು ಕಂಡುಕೊಂಡರು. “ನಾನು ಊರಿನ ಹಬ್ಬದಲ್ಲಿ ಪ್ಲಾಸ್ಟಿಕ್‌ ಪೀಪಿಗಳನ್ನು ಕೊಂಡು ಅವುಗಳ ತುದಿಯನ್ನು ಕತ್ತರಿಸಿ [ಹಿತ್ತಾಳೆಯ ಗಂಟೆಯ ಬದಲಿಗೆ] ಇವುಗಳನ್ನು [ಗಂಟೆಯ ಆಕಾರದವು] ಶಹನಾಯಿಯ ತುದಿಗೆ ಅಂಟಿಸಲಾರಂಭಿಸಿದೆ”

“ಇದು ಸ್ವರದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಆದರೆ ಜನರಿಗೆ ಅದರ [ಗುಣಮಟ್ಟ] ಕುರಿತು ಚಿಂತೆಯಿಲ್ಲ” ಎಂದು ಅವರು ವಿಷಾದದಿಂದ ಹೇಳುತ್ತಾರೆ. ಒಂದಷ್ಟು ತಿಳುವಳಿಕೆಯುಳ್ಳ ಗ್ರಾಹಕರ ಬಳಿ ಅವರು ವಾಟಿಯನ್ನು ನೀವೇ ತಂದು ಕೊಡಿ ಎಂದು ಹೇಳುತ್ತಾರೆ. ಈಗ ಅವರು ಬಳಸುತ್ತಿರುವ ಪ್ಲಾಸ್ಟಿಕ್‌ ಪರ್ಯಾಯವು ಕೇವಲ ಹತ್ತು ರೂಪಾಯಿಗಳಿಗೆ ಸಿಗುತ್ತಿದೆ. ಆದರೆ ತಮ್ಮ ಕೌಶಲದ ವಿಚಾರದಲ್ಲಿ ರಾಜಿಯಾಗಿರುವುದಕ್ಕೆ ಅವರು ಅನುಭವಿಸುತ್ತಿರುವ ನೋವಿಗೆ ಬೆಲ ಕಟ್ಟಲು ಸಾಧ್ಯವಿಲ್ಲ.

Narayan shows the plastic trumpet (left), which he now uses as a replacement for the brass bell (right) fitted at the farther end of the shehnai
PHOTO • Sanket Jain
Narayan shows the plastic trumpet (left), which he now uses as a replacement for the brass bell (right) fitted at the farther end of the shehnai
PHOTO • Sanket Jain

ಪ್ಲಾಸ್ಟಿಕ್‌ ಪೀಪಿಯನ್ನು ತೋರಿಸುತ್ತಿರುವ ನಾರಾಣ್‌ ದೇಸಾಯಿ (ಎಡ) ಪ್ರಸ್ತುತ ಈ ಪೀಪಿಯ ತುದಿಯನ್ನು ಹಿತ್ತಾಳೆಯ ಬದಲಿಯಾಗಿ ತಮ್ಮ ಶಹನಾಯಿ ಗಳಲ್ಲಿ ಬಳಸುತ್ತಿದ್ದಾರೆ

ಆದರೂ, ಅವರು ಈ ಪರಿಹಾರವನ್ನು ಕಂಡುಹಿಡಿಯದೆ ಹೋಗಿದ್ದರೆ, 8346 ಜನಸಂಖ್ಯೆಯನ್ನು ಹೊಂದಿರುವ ಮಹಾರಾಷ್ಟ್ರದ ಗಡಿಯಲ್ಲಿರುವ ಉತ್ತರ ಕರ್ನಾಟಕದ ಮಣಕಾಪುರ ಎಂಬ ಹಳ್ಳಿಯಲ್ಲಿ ಶಹನಾಯಿ ತಯಾರಿಸುವ ಕಲೆಯು ಸತ್ತು ಹೋಗಿರುತ್ತಿತ್ತು ಎಂದು ಅವರು ಒಪ್ಪಿಕೊಳ್ಳುತ್ತಾರೆ (ಜನಗಣತಿ 2011).

ಬೆಳಗಾವಿ ಮತ್ತು ಹತ್ತಿರದ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಮದುವೆಗಳು ಮತ್ತು ಕುಸ್ತಿ ಪಂದ್ಯಗಳಂತಹ ಶುಭ ಸಂದರ್ಭಗಳಲ್ಲಿ ಹಿಂದಿನಿಂದಲೂ ಶಹನಾಯಿಯನ್ನು ನುಡಿಸಲಾಗುತ್ತಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಇಂದಿಗೂ, ಕುಷ್ತಿ [ಜೇಡಿಮಣ್ಣಿನ ಕುಸ್ತಿ] ಪಂದ್ಯಗಳಲ್ಲಿ ಪ್ರದರ್ಶನ ನೀಡಲು ನಮ್ಮನ್ನು ಆಹ್ವಾನಿಸಲಾಗುತ್ತದೆ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. "ಈ ಸಂಪ್ರದಾಯ ಬದಲಾಗಿಲ್ಲ. ಶಹನಾಯಿ ನುಡಿಸುವವರಿಲ್ಲದೆ ಪಂದ್ಯ ಪ್ರಾರಂಭವಾಗುವುದಿಲ್ಲ.”

1960ರ ದಶಕದ ಉತ್ತರಾರ್ಧ ಮತ್ತು 70ರ ದಶಕದ ಆರಂಭದಲ್ಲಿ, ಅವರ ತಂದೆ ತುಕಾರಾಂ ಅವರು ದೂರದ ಸ್ಥಳಗಳ ಖರೀದಿದಾರರಿಗಾಗಿ ಪ್ರತಿ ತಿಂಗಳು 15ಕ್ಕೂ ಶಹನಾಯಿಗಳನ್ನು ತಯಾರಿಸುತ್ತಿದ್ದರು; ಈಗ 50 ವರ್ಷಗಳ ನಂತರ ದೇಸಾಯಿವರು ತಿಂಗಳಿಗೆ ಹೆಚ್ಚೆಂದರೆ ಎರಡು ಶಹನಾಯಿಗಳನ್ನು ತಯಾರಿಸುತ್ತಾರೆ. "ಅಗ್ಗದ ಪರ್ಯಾಯಗಳು ಈಗ ಮಾರುಕಟ್ಟೆಯಲ್ಲಿ ಅರ್ಧದಷ್ಟು ಬೆಲೆಗೆ ಲಭ್ಯವಿದೆ" ಎಂದು ಅವರು ಹೇಳುತ್ತಾರೆ.

ಯುವ ಪೀಳಿಗೆಯ ನಡುವೆ ಶಹನಾಯಿ ಕುರಿತು ಆಸಕ್ತಿ ಕ್ಷೀಣಿಸುತ್ತಿದೆ. ಆರ್ಕೆಸ್ಟ್ರಾಗಳು, ಮ್ಯೂಸಿಕಲ್ ಬ್ಯಾಂಡ್‌ಗಳು ಮತ್ತು ಎಲೆಕ್ಟ್ರಾನಿಕ್ ಸಂಗೀತ ಶಹನಾಯಿ ಸಂಗೀತದ ಸ್ಥಳವನ್ನು ಆಕ್ರಮಿಸುತ್ತಿವೆ. ಈ ನಿರಾಸಕ್ತಿ ಬೇಡಿಕೆಯ ಮೇಲೂ ಪರಿಣಾಮ ಬೀರುತ್ತಿದೆ. ಇಂದು ಮಣಕಾಪುರದ ಏಕೈಕ ಶಹನಾಯಿ ಕಲಾವಿದನೆಂದರೆ ಅವರ ಸೋದರಳಿಯ 27 ವರ್ಷದ ಅರ್ಜುನ್‌ ಜವೀರ್.‌ ಹಾಗೂ ಶಹನಾಯಿ ಮತ್ತು ಬಾನ್ಸುರಿ (ಕೊಳಲು) ಎರಡನ್ನೂ ಕೈಯಿಂದ ತಯಾರಿಸಬಲ್ಲ ಮಣಕಾಪುರದ ಏಕೈಕ ಕುಶಲಕರ್ಮಿಯೆಂದರೆ ಅದು ನಾರಾಯಣ್ ದೇಸಾಯಿ.

*****

ನಾರಾಯಣ ದೇಸಾಯಿ ಎಂದೂ ಶಾಲೆಗೆ ಹೋದವರಲ್ಲ. ಶಹನಾಯಿ ತಯಾರಿಕೆಯ ತರಬೇತಿ ಅವರ ತಂದೆ ಮತ್ತು ಅಜ್ಜ ದತ್ತುಬಾ ಅವರೊಂದಿಗೆ ಹಳ್ಳಿಯ ಜಾತ್ರೆಗಳಿಗೆ ಹೋಗುವಾಗ ಪ್ರಾರಂಭವಾಯಿತು. ಆಗ, ದತ್ತುಬಾ ಬೆಳಗಾವಿ ಜಿಲ್ಲೆಯ ಅತ್ಯುತ್ತಮ ಶಹನಾಯಿ ವಾದಕರಲ್ಲಿ ಒಬ್ಬರಾಗಿದ್ದರು. “ಅವರು ಶಹನಾಯಿ ನುಡಿಸುವಾಗ ನಾನು ನರ್ತಿಸುತ್ತಿದ್ದೆ” ಅವರು ಹನ್ನೆರಡು ವರ್ಷದವರಿದ್ದಾಗ ಅವರಿಗೆ ಈ ವೃತ್ತಿಯ ದೀಕ್ಷೆ ನೀಡಲಾಯಿತೆಂದು ನೆನಪಿಸಿಕೊಳ್ಳುತ್ತಾರೆ. “ಸಣ್ಣವರಿರುವಾಗ ವಾದ್ಯಗಳನ್ನು ನೋಡಿದರೆ ಅದನ್ನು ಊದುವುದು ಎನ್ನುವ ಕುತೂಹಲದಿಂದ ವಾದ್ಯವನ್ನು ಕುತೂಹಲದಿಂದ ಮುಟ್ಟಬೇಕೆನ್ನಿಸುತ್ತದೆ. ನನಗೂ ಹಾಗೇ ಅನ್ನಿಸಿತ್ತು.” ಎಂದು ಅವರು ಹೇಳುತ್ತಾರೆ. ಅವರು ಶಹನಾಯಿ ಮತ್ತು ಕೊಳಲು ನುಡಿಸುವುದನ್ನು ಕಲಿತಿದ್ದಾರೆ. “ಈ ವಾದ್ಯಗಳನ್ನು ನುಡಿಸಲು ಬಾರದೆ ಹೇಗೆ ತಯಾರಿಸುತ್ತೀರಿ?” ಎಂದು ನಗುತ್ತಾ ಪ್ರಶ್ನೆ ಎಸೆಯುತ್ತಾರೆ.

Some of the tools that Narayan uses to make a shehnai
PHOTO • Sanket Jain

ನಾರಾಯಣ ದೇಸಾಯಿಯವರು ಶಹನಾಯಿ ತಯಾರಿಸಲು ಬಳಸುವ ಕೆಲವು ಉಪಕರಣಗಳು

Narayan inspecting whether the jibhali ( reed) he crafted produces the right tones
PHOTO • Sanket Jain

ದೇಸಾಯಿವರು ತಾನು ತಯಾರಿಸಿದ ಝಿಬಾಲಿ (ಪೀಪಿ) ಸರಿಯಾಗಿ ಸ್ವರ ಹೊರಡಿಸುತ್ತಿದೆಯೇ ಎಂದು ಪರಿಶೀಲಿಸುತ್ತಿರುವುದು

ಅವರ ತಂದೆ ತೀರಿಕೊಂಡಾಗ ನಾರಾಯಣ ಭಾವು ಅವರಿಗೆ ಕೇವಲ 18 ವರ್ಷ. ಅವರು ತಮ್ಮ ಕಲೆ ಮತ್ತು ಪರಂಪರೆಯನ್ನು ತಮ್ಮ ಮಗನಿಗೆ ಬಿಟ್ಟುಹೋಗಿದ್ದರು. ನಾರಾಯಣ ದೇಸಾಯಿಯವರ ಮಾವ ಆನಂದ ಕೆನಗಾರ್ ಅವರು ಮಣಕಾಪುರದ ಇನ್ನೊಬ್ಬ ಪರಿಣಿತ ಶಹನಾಯಿ ಮತ್ತು ಕೊಳಲು ಕುಶಲಕರ್ಮಿ. ನಾರಾಯಣ ದೇಸಾಯಿ ಅವರ ಮಾರ್ಗದರ್ಶನದಲ್ಲಿ ತಮ್ಮ ಕಲೆಯನ್ನು ಪ್ರವರ್ಧಮಾನಕ್ಕೆ ತಂದರು.

ನಾರಾಯಣ ದೇಸಾಯಿಯವರು ಹೋಳರು ಎನ್ನುವ ದಲಿತ ಸಮುದಾಯಕ್ಕೆ ಸೇರಿದವರು. ಶಹನಾಯಿ ಮತ್ತು ತಂಬೂರಿ ನುಡಿಸುವುದು ಅವರ ಸಾಂಪ್ರದಾಯಿಕ ಉದ್ಯೋಗ. ನಾರಾಯಣ ದೇಸಾಯಿಯರಂತಹ ಕೆಲವರು ಸಂಗೀತ ವಾದ್ಯಗಳನ್ನು ತಯಾರಿಸುತ್ತಿದ್ದರು. ಆದರೆ ಇಂದಿಗೂ ಈ ಕಲೆ ಪುರುಷರ ಏಕಸ್ವಾಮ್ಯವನ್ನು ಹೊಂದಿದೆ. "ಹಿಂದೆ, ನಮ್ಮ ಗ್ರಾಮದಲ್ಲಿ ಶಹನಾಯಿ ತಯಾರಿಕೆಯಲ್ಲಿ ಗಂಡಸರು ಮಾತ್ರ ತೊಡಗಿಸಿಕೊಂಡಿದ್ದರು" ಎಂದು ಅವರು ಹೇಳುತ್ತಾರೆ. ಅವರ ತಾಯಿ ದಿವಂಗತ ತಾರಾಬಾಯಿ ಕೃಷಿ ಕಾರ್ಮಿಕರಾಗಿದ್ದರು ಮತ್ತು ಅವರು ಇಡೀ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಏಕೆಂದರೆ ಮದುವೆ, ಕುಸ್ತಿಯ ಸೀಜನ್ ಶುರುವಾದಾಗ ಮನೆಯ ಗಂಡಸರು ಆರು ತಿಂಗಳು ಮನೆಯಿಂದ ಹೊರಗೇ ಇರುತ್ತಿದ್ದರು.

ಯುವಕನಾಗಿದ್ದಾಗ ನಾರಾಯಣ್ ಪ್ರತಿ ವರ್ಷ 50 ಜಾತ್ರೆಗಳಿಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದರು. "ನಾನು ಗೋವಾಕ್ಕೆ ಹೋಗಿ ಬೆಳಗಾವಿ, ಸಾಂಗ್ಲಿ ಮತ್ತು ಕೊಲ್ಲಾಪುರದ ಹಳ್ಳಿಗಳ ಜಾತ್ರೆಗಳಲ್ಲಿ ವ್ಯಾಪಾರ ಮಾಡುತ್ತಿದ್ದೆ" ಎಂದು ಅವರು ಹೇಳುತ್ತಾರೆ.

ಪ್ರಸ್ತುತ ಶಹನಾಯಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದ್ದರೂ ನಾರಾಯಣ ಈಗಲೂ ತನ್ನ 8X8 ಅಡಿಯ ಕೆಲಸದ ಕೋಣೆಯಲ್ಲಿ ಕುಳಿತು ದಿನದ ಹಲವು ಗಂಟೆಗಳನ್ನು ಕಳೆಯುತ್ತಾರೆ. ಅವರ ಕೋಣೆಯ ತುಂಬ ಸಾಗುವಾನಿ, ಖೈರ್‌ [ಅಕೇಶಿಯಾ], ದೇವದಾರು ಮರಗಳ ವಾಸನೆ ತುಂಬಿಕೊಂಡಿರುತ್ತದೆ. “ ನನಗೆ ಇಲ್ಲಿ ಕುಳಿತುಕೊಳ್ಳುವುದೆಂದರೆ ಇಷ್ಟ. ಏಕೆಂದರೆ ಇಲ್ಲಿ ನನ್ನ ಬಾಲ್ಯದ ನೆನಪುಗಳಿವೆ” ಎಂದು ಅವರು ಹೇಳುತ್ತಾರೆ. ದಶಕಗಳಷ್ಟು ಹಳೆಯದಾದ ದುರ್ಗಾದೇವಿ ಮತ್ತು ಹನುಮಂತ ದೇವರ ಚಿತ್ರಗಳು, ಶಾಲು(ಜೋಳ) ಹುಲ್ಲಿನಿಂದ ಮಾಡಿದ ಗೋಡೆಯ ಮೇಲೆ ನೇತಾಡುತ್ತಿವೆ. ವರ್ಕ್ ಶಾಪಿನ ಮಧ್ಯದಲ್ಲಿರುವ ಉಂಬರ್ ಮರವು ಕೊಠಡಿಯ ಚಾವಣಿಯ ಭಾರವನ್ನು ಹೊತ್ತು ನಿಂತಿದೆ.

ಕಳೆದ ಐವತ್ತು ವರ್ಷಗಳಲ್ಲಿ ಇದೇ ಸ್ಥಳದಲ್ಲಿ ಕುಳಿತು ಅವರು ಕನಿಷ್ಠ 5,000 ಶಹನಾಯಿಗಳನ್ನು ತಯಾರಿಸಿದ್ದಾರೆ. ಆರಂಭದಲ್ಲಿ ಒಂದು ತಯಾರಿಸಲು ಅವರಿಗೆ ಆರು ಗಂಟೆಗಳ ಕಾಲ ಹಿಡಿಯುತ್ತಿತ್ತು. ಈಗ ನಾಲ್ಕು ಗಂಟೆಗಳಲ್ಲಿ ಒಂದು ಸಹ ನಾಯಿಯನ್ನು ತಯಾರಿಸುತ್ತಾರೆ.  ಶಹನಾಯಿ ತಯಾರಿಕೆಯ ಕೌಶಲವೆನ್ನುವುದು ಅವರಿಗೆ ನೀರು ಕುಡಿದಷ್ಟು ಸುಲಭ. “ನಿದ್ರೆಯಿಂದ ಎಬ್ಬಿಸಿ  ಶಹನಾಯಿ ತಯಾರಿಸಲು ಹೇಳಿದರೂ ಕೂಡಲೇ ನಾನು ತಯಾರಿಸಿಕೊಡಬಲ್ಲೆ.” ಎಂದು ಎಂದು ಹೇಳುವ ಅವರ ಮಾತುಗಳಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತದೆ.

After collecting all the raw materials, the first step is to cut a sagwan (teak wood) log with an aari (saw)
PHOTO • Sanket Jain

ಎಲ್ಲಾ ಸಾಮಗ್ರಿಗಳನ್ನು ಸಂಗ್ರಹಿಸಿದ ನಂತರ, ಮೊದಲ ಹಂತವಾಗಿ ತೇಗದ ಕೊಂಬೆಯನ್ನು ಗರಗಸದಿಂದ ಕತ್ತರಿಸುತ್ತಾರೆ

Left: After cutting a wood log, Narayan chisels the wooden surface and shapes it into a conical reed.
PHOTO • Sanket Jain
Right: Narayan uses a shard of glass to chisel the wood to achieve the required smoothness
PHOTO • Sanket Jain

ಎಡ: ಮರದ ತುಂಡನ್ನು ಕತ್ತರಿಸಿದ ನಂತರ ನಾರಾಯಣ ದೇಸಾಯಿ ಮರದ ಮೇಲ್ಮೈಯನ್ನು ನುಣುಪುಗೊಳಿಸಿ ಅದರಿಂದ ಶಂಕುವಿನಾಕಾರದ ಪೀಪಿಯನ್ನು ತಯಾರಿಸುತ್ತಾರೆ. ಬಲ: ಅಗತ್ಯವಿರುವ ನಯವನ್ನು ಸಾಧಿಸಲು ಮರವನ್ನು ಗಾಜಿನ ಚೂರುಗಳನ್ನು ಬಳಸಿ ಉಜ್ಜುತ್ತಾರೆ

ಮೊದಲಿಗೆ ಅವರು ಆರಿ (ಗರಗಸ) ಬಳಸಿ ತೇಗದ ಮರದ ತುಂಡನ್ನು ಕತ್ತರಿಸುತ್ತಾರೆ. ಈ ಮೊದಲಿವವರು ಇದಕ್ಕಾಗಿ ಅಕೇಶಿಯಾ, ಚಂದನ ಮತ್ತು ಶೀಶಮ್‌ ಮರಗಳನ್ನು ಬಳಸುತ್ತಿದ್ದರು. “. ಸುಮಾರು ಮೂರು ದಶಕಗಳ ಹಿಂದೆ ಮಣಕಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ಮರಗಳು ಬೇಕಾದಷ್ಟು ಸಿಗುತ್ತಿದ್ದರು ಈಗ ಬಹಳ ಅಪರೂಪ” ಎಂದು ಅವರು ಹೇಳುತ್ತಾರೆ. ಒಂದು ಘನ ಫೂಟ್ ( ಘನ ಅಡಿ) ಖೈರ್‌ ಮರದಿಂದ ಕನಿಷ್ಠ ನಾಯಿಗಳನ್ನು ತಯಾರಿಸಬಹುದಿತ್ತು. 45 ನಿಮಿಷಗಳ ಕಾಲ ಮರದ ಮೇಲ್ಮೈಯನ್ನು ರಾಂಡಾ (ಕೀಸುವ ಉಳಿ) ಬಳಸಿ ನ್ಯಗೊಳಿಸುತ್ತಾರೆ. “ಈ ಕೆಲಸದಲ್ಲಿ ತಪ್ಪಾದರೆ ಶಹನಾಯಿಯಿಂದ ಉತ್ತಮ ಸ್ವರ ಹೊರಡುವುದಿಲ್ಲ” ಎಂದು ಅವರು ತಮ್ಮ ಕೆಲಸದ ಗುಟ್ಟನ್ನು ಹೇಳುತ್ತಾರೆ.

ಆದರೆ, ಕೇವಲ ರಾಂಡಾ ಬಳಸಿ ತಾನು ಬಯಸಿದಷ್ಟು ಮರವನ್ನು ನಯವಾಗಿಸಲು ಸಾಧ್ಯವಾಗದಿದ್ದಾಗ ನಾರಾಯಣ ದೇಸಾಯಿ ಅವರು ಪಕ್ಕದಲ್ಲಿ ಇದ್ದ ಬಿಳಿ ಚೀಲದಿಂದ ಗಾಜಿನ ಬಾಟಲಿ ಒಂದನ್ನು ಕೈಗೆತ್ತಿಕೊಂಡರು. ಅದನ್ನು ಅಲ್ಲೇ ನೆಲದ ಮೇಲೆ ಹೊಡೆದು ಅದರ ಚೂರನ್ನು ಎತ್ತಿಕೊಂಡು ಅದರ ಮೂಲಕ ಮರವನ್ನು ನಯಗೊಳಿಸತೊಡಗಿದರು. ಅವರು ತಮ್ಮ ಈ ಉಪಾಯವನ್ನು ನೋಡಿ ಒಮ್ಮೆ ನಕ್ಕರು.

ಮುಂದಿನ ಹಂತದಲ್ಲಿ ಅವರು ಗಿರ್ಮಿಟ್ ಎಂದು ಕರೆಯಲ್ಪಡುವ ಕಬ್ಬಿಣದ ಸರಳುಗಳನ್ನು ಬಳಸಿ ಶಂಕುವಿನಾಕಾರದ ಮರದ ನಳಿಕೆಯ ಎರಡು ತುದಿಗಳಿಗೆ ರಂಧ್ರವನ್ನು ಕೊರೆಯುತ್ತಾರೆ. ಇಮ್ರಿ ಎನ್ನುವ 250 ರೂಪಾಯಿ ಬೆಲೆಯ ಸಾಣೆಕಲ್ಲಿನ ಮೇಲೆ ಅವರು ಸರಲುಗಳನ್ನು ಅರಿತಗೊಳಿಸುತ್ತಾರೆ. ಈ ಸಾಣೆ ಕಲ್ಲು ಮಹಾರಾಷ್ಟ್ರದ ಇಚಲಕರಂಜಿಯಲ್ಲಿ ದೊರೆಯುತ್ತದೆ. ಲೋಹದ ಉಪಕರಣಗಳನ್ನು ಹೊರಗೆ ಖರೀದಿಸುವುದು ದುಬಾರಿಯಾದ್ದರಿಂದ ಅವರು ಅವುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತಾರೆ. ನಂತರ ಅವರು ನಳಿಕೆ ಎರಡು ತುದಿಗಳಿಗೆ ಸರಳನ್ನು ತೂರಿಸುತ್ತಾರೆ. ಈ ಕೆಲಸವು ಅಪಾಯವನ್ನು ಹೊಂದಿದ್ದು ಚೂರು ಯಾಮಾರಿದರೂ ಬೆರಳುಗಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಆದರೆ ಅವರು ಅದಕ್ಕೆಲ್ಲ ಹೆದರುವುದಿಲ್ಲ. ಈ ಕೆಲಸ ಮುಗಿದ ನಂತರ ನಳಿಕೆಯ ಎರಡು ತುದಿಯನ್ನು ತೃಪ್ತಿಯಾಗುವ ತನಕ ನೋಡುತ್ತಾರೆ. ಇದರ ಮುಂದಿನ ಕೆಲಸ ಅತ್ಯಂತ ಕ್ಲಿಷ್ಟಕರವಾದುದು. ಅದು ನಳಿಕೆಯಲ್ಲಿ 7 ಸ್ವರಗಳನ್ನು ಹೊರಡಿಸುವ ರಂಧ್ರಗಳನ್ನು ಮೂಡಿಸುವುದು.

“ಅಳತೆಯಲ್ಲಿ ಒಂದು ಮಿಲಿ ಮೀಟರ್ ದೋಷವಾದರೂ ಕೆಟ್ಟ ಸ್ವರ ಹೊರಡುತ್ತದೆ” ಎಂದು ಅವರು ಹೇಳುತ್ತಾರೆ. “ಅದನ್ನು ಸರಿಪಡಿಸಲು ಸಾಧ್ಯವೇ ಇಲ್ಲ” ಇದನ್ನು ತಪ್ಪಿಸಲು ಅವರು ಮಗ್ಗಗಳಲ್ಲಿ ಬಳಸುವ ರಂಧ್ರಗಳಿರುವ ಪ್ಲಾಸ್ಟಿಕ್ ಉಪಕರಣವೊಂದನ್ನು ಬಳಸುತ್ತಾರೆ. ಇದಾದ ನಂತರ ಅವರು ಚೂಲಿ ( ಸಾಂಪ್ರದಾಯಿಕ ಒಲೆ) ಕಡೆ ಹೋಗುತ್ತಾರೆ. ಅಲ್ಲಿ 17 ಸೆಂಟಿಮೀಟರ್ ಉದ್ದದ‌ ಕಬ್ಬಿಣದ ಸರಳನ್ನು ಬಿಸಿ ಮಾಡಿಕೊಳ್ಳುತ್ತಾರೆ. “ನನ್ನಿಂದ ಡ್ರಿಲ್ಲಿಂಗ್ ಉಪಕರಣವನ್ನು ಖರೀದಿಸಲು ಸಾಧ್ಯವಿಲ್ಲದ ಕಾರಣ ಈ ಸಾಂಪ್ರದಾಯಿಕ ವಿಧಾನವನ್ನು ಬಳಸುತ್ತಿದ್ದೇನೆ.” ಈ ಸರಳುಗಳನ್ನು ಬಳಸಿ ಕೆಲಸ ಮಾಡುವುದು ಸುಲಭವಲ್ಲ ಎನ್ನುತ್ತಾ ಅವರು ಕೆಲಸದ ನಡುವೆ ಅವರು ಹಿಂದೆ ಮಾಡಿಕೊಂಡ ಗಾಯಗಳನ್ನು ನೆನಪಿಸಿಕೊಳ್ಳುತ್ತಾರೆ. “ನಮಗೆ ಸುಟ್ಟ ಗಾಯಗಳಾಗುತ್ತಿದ್ದವು” ಎನ್ನುತ್ತಾ ಅವರು ಚಕಚಕನೆ ಮೂರು ಸರಳುಗಳನ್ನು ಬಿಸಿ ಮಾಡಿದರು.

ಈ ಪ್ರಕ್ರಿಯೆಯು ಸುಮಾರು 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಸಾಕಷ್ಟು ಬಗ್ಗೆ ಅವರ ಉಸಿರಿನಲ್ಲಿ ಸೇರಿಕೊಳ್ಳುತ್ತದೆ. ಇದು ಅವರಿಗೆ ಕೆಮ್ಮನ್ನು ತರಿಸುತ್ತದೆ. ಆದರೆ ಅವರು ಒಂದು ಕ್ಷಣವೂ ವಿರಮಿಸುವುದಿಲ್ಲ. “ ಇದನ್ನು ಸರಳುಗಳು ತಣ್ಣಗಾಗುವ ಮೊದಲೇ ಮಾಡಿ ಮುಗಿಸಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಸರಳುಗಳನ್ನು ಬಿಸಿ ಮಾಡುತ್ತಾ ಇನ್ನಷ್ಟು ಹೊಗೆ ಕುಡಿಯಬೇಕಾಗುತ್ತದೆ.”

ಸ್ವರ ರಂಧ್ರಗಳನ್ನು ಕೊರೆಯುವ ಕೆಲಸ ಮುಗಿದ ನಂತರ ಅವರು ಸಹ ನಾಯಿಯನ್ನು ತೊಳೆಯುತ್ತಾರೆ. “. ಈ ಮರವು ನೀರು ನಿರೋಧಕ. ನಾನು ತಯಾರಿಸಿದ ಒಂದು ಶಹನಾಯಿ ಕನಿಷ್ಠ 20 ವರ್ಷಗಳ ಕಾಲ ಬಾಳಿಕೆ ಬರುತ್ತದೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

Narayan uses an iron rod to drill holes as he can't afford a drilling machine. It takes him around 50 minutes and has caused third-degree burns in the past
PHOTO • Sanket Jain
Narayan uses an iron rod to drill holes as he can't afford a drilling machine. It takes him around 50 minutes and has caused third-degree burns in the past
PHOTO • Sanket Jain

ತಮ್ಮಿಂದ ಡ್ರಿಲ್ಲಿಂಗ್ ಮಿಷನ್ ಖರೀದಿಸಲು ಸಾಧ್ಯವಿಲ್ಲದ ಕಾರಣ ನಾರಾಯಣ ದೇಸಾಯಿಕಬ್ಬಿಣದ ಸರಳುಗಳನ್ನು ಬಳಸುತ್ತಾರೆ. ಇದಕ್ಕೆ ಅವರಿಗೆ 50 ನಿಮಿಷಗಳ ಕೆಲಸ ಹಿಡಿಯುತ್ತದೆ ಮತ್ತು ಕೆಲವೊಮ್ಮೆ ಅದು ಮೈಮೇಲೆ ಸುಟ್ಟ ಗಾಯಗಳನ್ನು ಉಂಟುಮಾಡುತ್ತದೆ

Narayan marks the reference for tone holes on a plastic pirn used in power looms to ensure no mistakes are made while drilling the holes. 'Even a one-millimetre error produces a distorted pitch,' he says
PHOTO • Sanket Jain
Narayan marks the reference for tone holes on a plastic pirn used in power looms to ensure no mistakes are made while drilling the holes. 'Even a one-millimetre error produces a distorted pitch,' he says
PHOTO • Sanket Jain

ನಾರಾಯಣ್ ಅವರು ನಳಿಕೆಗೆ ರಂದ್ರ ಮಾಡಲು ಸರಿಯಾದ ಅಳತೆಗಾಗಿ ವಿದ್ಯುತ್ ಮಗ್ಗಗಳಲ್ಲಿ ಬಳಸುವ ರಂಧ್ರಗಳುಳ್ಳ‌ ಪ್ಲಾಸ್ಟಿಕ್ ಉಪಕರಣ ಒಂದನ್ನು ಬಳಸುತ್ತಾರೆ. ʼಈ ರಂಧ್ರಗಳ ಕೊರೆಯುವಿಕೆಯಲ್ಲಿ ಮಿಲಿಮೀಟರಿನಷ್ಟು ತಪ್ಪಾದರೂ ಶಹನಾಯಿಯಿಂದ ಕೆಟ್ಟ ಸ್ವರ ಬರುತ್ತದೆʼ ಎಂದು ಅವರು ಹೇಳುತ್ತಾರೆ

ನಂತರ ಅವರು ಸಹನಾಯಿಯ ಜಿಬಾಲಿ (ಪೀಪಿ) ತಯಾರಿಸಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಅವರು ಮರಾಠಿಯಲ್ಲಿ ತಡಚಾ ಪಾನ್ ಎಂದು ಕರೆಯಲ್ಪಡುವ ಜೊಂಡಿನ ಜಾತಿಯ ಬಿದಿರಿನ ಎಲೆಯನ್ನು ಬಳಸುತ್ತಾರೆ. ಈ ಎಲೆಗಳನ್ನು 20-25 ದಿನಗಳ ತನಕ ಒಣಗಿಸಬೇಕು. ನಂತರ ಅದರ ಉತ್ತಮ ಎಲೆಗಳನ್ನು 15 ಸೆಂಟಿಮೀಟರ್ ಉದ್ದಕ್ಕೆ ಕತ್ತರಿಸಲಾಗುತ್ತದೆ. ಇದನ್ನು ಅವರು ಬೆಳಗಾವಿ ಬಳಿಯ ಆದಿ ಎನ್ನುವ ಗ್ರಾಮದಿಂದ ಖರೀದಿಸುತ್ತಾರೆ. ಒಂದು ಡಜನ್ ಎಲೆಗೆ 50 ರೂಪಾಯಿಗಳಷ್ಟು ಬೆಲೆ ಇದೆ. “ಈ ದಿನಗಳಲ್ಲಿ ಉತ್ತಮ ಗುಣಮಟ್ಟದ ಪಾನ್ ಹುಡುಕುವುದು ಬಹಳ ಕಷ್ಟದ ಕೆಲಸವಾಗಿದೆ” ಎಂದು ಅವರು ಹೇಳುತ್ತಾರೆ.

ಈ ಎಲೆಯನ್ನು ನಾಲ್ಕು ಬಾರಿ ಮಡಚಿ ನಂತರ ಅವುಗಳನ್ನು ನೀರಿನಲ್ಲಿ ಅರ್ಧ ಗಂಟೆಯವರೆಗೆ ನೆನೆಸಿಡಲಾಗುತ್ತದೆ. ಸಹನಾಯಿ ತಯಾರಾದ ನಂತರ ಗಾಳಿಯು ಈ ಎಲೆಯ ಮೂಲಕ ಹಾದು ಹೋಗುತ್ತದೆ. ಅದು ಹುಟ್ಟಿಸುವ ಕಂಪನಗಳು ಬಯಸಿದ ಸ್ವರವನ್ನು ಹೊರ ತರುತ್ತದೆ. ಇದರ ನಂತರ ಗಾಳಿ ಊದಲು ಬೇಕಾಗುವ ಸ್ಥಳವನ್ನು ಬಿಟ್ಟು ತುದಿಗಳನ್ನು ಕತ್ತರಿಸಿ ಎಲೆಯನ್ನು ಹತ್ತಿಯ ದಾರದಿಂದ ಕಟ್ಟಲಾಗುತ್ತದೆ.

ಜಿಬಾಲಿ ಲಾ ಆಕಾರ್ ದ್ಯಾಯಿಚಾ ಕಠಿನ್ ಆಸ್ತೆ [ಪೀಪಿಯನ್ನು ರೂಪಿಸುವುದು ಕಷ್ಟ]" ಎಂದು ಅವರು ಹೇಳುತ್ತಾರೆ, ಅವರ ಮಾತನಾಡುತ್ತಿರುವಾಗ ಅವರ ಹಣೆಯಲ್ಲಿದ್ದ ಕುಂಕುಮವು ಕರಗಿ ಬೆವರಿನೊಡನೆ ಬೆರೆಯುತ್ತಿತ್ತು. ಚೂಪಾದ ಬ್ಲೇಡುಗಳಿಂದ ಅವರ ಕೈಯಲ್ಲಿ ಹಲವು ಗಾಯಗಳಾಗುತ್ತದೆಯಾದರೂ ಅವರು ಅವುಗಳತ್ತ ಹೆಚ್ಚು ಗಮನ ಕೊಡುವುದಿಲ್ಲ. “ಅದನ್ನೆಲ್ಲ ನೋಡುತ್ತಾ ಕುಳಿತರೆ ಶಹನಾಯಿ ತಯಾರಿಸುವುದು ಯಾವಾಗ?” ಎಂದು ಕೇಳುತ್ತಾ ನಗುತ್ತಾರವರು. ಇದೆಲ್ಲ ಮುಗಿದ ನಂತರ ದೇಸಾಯಿಯವರು ಶಹನಾಯಿಯ ತುದಿಗೆ ಪ್ಲಾಸ್ಟಿಕ್‌ ಪೀಪಿಯ ತುದಿಯ ಗಂಟೆಯಾಕಾರವನ್ನು ಸೇರಿಸುತ್ತಾರೆ. ಸಾಂಪ್ರಾದಾಯಿ ಶಹನಾಯಿಗಳಲ್ಲಿ ಈ ಪ್ಲಾಸ್ಟಿಕ್‌ ತುದಿಯ ಬದಲು ಹಿತ್ತಾಳೆಯದಿರುತ್ತದೆ.

ನಾರಾಯಣ್ ಅವರು 22, 18, ಮತ್ತು 9 ಇಂಚುಗಳ ಶಹನಾಯಿಗಳನ್ನು ತಯಾರಿಸುತ್ತಾರೆ. ಇವುಗಳನ್ನು ಕ್ರಮವಾಗಿ ರೂಪಾಯಿ 2000, ರೂಪಾಯಿ 1500 ಮತ್ತು ರೂಪಾಯಿ 400 ಕ್ಕೆ ಮಾರುತ್ತಾರೆ. “22 ಮತ್ತು 18 ಇಂಚುಗಳ ಶಹನಾಯಿಗೆ ಬೇಡಿಕೆ ಬರುವುದು ಅಪರೂಪ. ಕೊನೆಯ ಬಾರಿಗೆ ಅಂತಹ ಬೇಡಿಕೆ ಬಂದಿದ್ದು ಹತ್ತು ವರ್ಷಗಳ ಹಿಂದೆ” ಎಂದು ಅವರು ಹೇಳುತ್ತಾರೆ.

Narayan soaks tadacha paan (perennial cane) so it can easily be shaped into a reed. The reed is one of the most important element of shehnais, giving it its desired sound
PHOTO • Sanket Jain
Narayan soaks tadacha paan (perennial cane) so it can easily be shaped into a reed. The reed is one of the most important element of shehnais, giving it its desired sound
PHOTO • Sanket Jain

ನಾರಾಯಣ ದೇಸಾಯಿ ತಡಚಾ ಪಾನ್‌ ಎನ್ನುವ ಬೆತ್ತದ ಎಲೆಯನ್ನು ತನಗೆ ಬೇಕಾದ ಆಕಾರಕ್ಕೆ ತರಲು ನೀರಿನಲ್ಲಿ ನೆನೆಸಿಕೊಳ್ಳುತ್ತಾರೆ. ಶಹನಾಯಿಯಲ್ಲಿ ಬಯಸಿದ ಸ್ವರವನ್ನು ಹೊರಡಿಸಲು ಈ ಪೀಪಿಯು ಬಹಳ ಮುಖ್ಯ

Left: Narayan shapes the folded cane leaf into a reed using a blade.
PHOTO • Sanket Jain
Right: He carefully ties the reed to the mandrel using a cotton thread
PHOTO • Sanket Jain

ಎಡ: ನಾರಾಯಣ ಅವರು ಬ್ಲೇಡ್‌ ಬಳಸಿ ಎಲೆಯನ್ನು ತಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳುತ್ತಾರೆ. ಬಲ: ಪೀಪಿಯನ್ನು ಅವರು ಎಚ್ಚರಿಕೆಯಿಂದ ದಾರವನ್ನು ಬಳಸಿ ನಳಿಕೆಗೆ ಕಟ್ಟುತ್ತಾರೆ

ಕರಕುಶಲ ಮರದ ಕೊಳಲುಗಳ ಬೇಡಿಕೆಯಲ್ಲಿಯೂ ಸ್ಥಿರವಾದ ಕುಸಿತ ಕಂಡುಬಂದಿದೆ. "ಜನರು ಮರದವು ದುಬಾರಿ ಎಂದು ಹೇಳಿ ಅವುಗಳನ್ನು ಖರೀದಿಸುವುದಿಲ್ಲ." ಆದ್ದರಿಂದ, ಮೂರು ವರ್ಷಗಳ ಹಿಂದೆ, ಅವರು ಕೊಳಲುಗಳನ್ನು ತಯಾರಿಸಲು ಕಪ್ಪು ಮತ್ತು ನೀಲಿ ಪಿವಿಸಿ (ಪಾಲಿವಿನೈಲ್ ಕ್ಲೋರೈಡ್) ಪೈಪುಗಳನ್ನು ಬಳಸಲು ಪ್ರಾರಂಭಿಸಿದರು. ಪಿವಿಸಿ ಕೊಳಲುಗಳು ತಲಾ 50 ರೂ.ಗೆ ಮಾರಾಟವಾಗುತ್ತಿದ್ದರೆ, ಮರದ ಗುಣಮಟ್ಟ ಮತ್ತು ಗಾತ್ರವನ್ನು ಅವಲಂಬಿಸಿ ಮರದ ಆವೃತ್ತಿಯ ಬೆಲೆಗಳು 100 ರೂ.ಗಳಿಂದ ಪ್ರಾರಂಭವಾಗುತ್ತವೆ. ಆದಾಗ್ಯೂ, ನಾರಾಯಣ್ ಅವರಿಗೆ ವ್ಯಾಪಾರದಲ್ಲಿನ ಈ ರಾಜಿ ಸಂತೋಷ ತಂದಿಲ್ಲ. "ಮರದ ಕೊಳಲುಗಳು ಮತ್ತು ಪಿವಿಸಿ ಕೊಳಲುಗಳ ನಡುವೆ ಯಾವುದೇ ಹೋಲಿಕೆ ಇಲ್ಲ" ಎಂದು ಅವರು ಹೇಳುತ್ತಾರೆ.

ಶಹನಾಯಿ ಕರಕುಶಲತೆಯಲ್ಲಿನ ಶ್ರಮ, ಹೊಗೆಯಿಂದ ಉಂಟಾಗುವ ಉಬ್ಬಸ ನಳಿಕೆ ಬಾಗಿಸಲು ಬಾಗಿಕೊಂಡಿರುವುದರಿಂದ ಬರುವ ಬೆನ್ನು ನೋವು ಮತ್ತು ಜಾರುಹಾದಿಯಲ್ಲಿರುವ ಆದಾಯ ಈ ಕೌಶಲದತ್ತ ಯುವಕರು ಮುಖ ಹಾಕದಂತೆ ಮಾಡಿವೆ ಎನ್ನುತ್ತಾರೆ ನಾರಾಯಣ್.

ಶಹನಾಯಿ ತಯಾರಿಸುವುದು ಎಷ್ಟು ಕಷ್ಟವೋ ಅದರಿಂದ ಸಂಗೀತ ನುಡಿಸುವುದು ಕೂಡಾ ಅಷ್ಟೇ ಕಷ್ಟ. 2021ರಲ್ಲಿ ಅವರನ್ನು ಜೋತಿಬಾ ದೇವಸ್ಥಾನದಲ್ಲಿ ಪ್ರದರ್ಶನ ನೀಡಲೆಂದು ಕರೆಯಲಾಗಿತ್ತು. “ಪ್ರದರ್ಶನ ಆರಂಭಿಸಿದ ಒಂದೇ ಗಂಟೆಯಲ್ಲಿ ಕುಸಿದುಬಿದ್ದಿದ್ದೆ. ನಂತರ ಡ್ರಿಪ್ಸ್‌ ಹಾಕಿಸಿಕೊಳ್ಳಬೇಕಾಯಿತು” ಎಂದು ಅವರು ಹೇಳುತ್ತಾರೆ. ಈ ಘಟನೆಯ ನಂತರ ಅವರು ಶಹನಾಯಿ ಊದುವುದನ್ನು ಬಿಟ್ಟುಬಿಟ್ಟರು. “ಇದು ಸುಲಭದ ಕೆಲಸವಲ್ಲ. ಪ್ರತಿ ಪ್ರದರ್ಶನದ ನಂತರ ಉಸಿರಾಡಲು ಕಷ್ಟಪಡುವ ಪ್ರದರ್ಶಕನ ಮುಖವನ್ನು ನೋಡಿದರೆ ನಿಮಗಿದು ಅರ್ಥವಾಗುತ್ತದೆ.”

ಆದರೆ ಶಹನಾಯಿ ತಯಾರಿಸುವುದನ್ನು ನಿಲ್ಲಿಸುವ ಯಾವುದೇ ಯೋವನೆ ಅವರ ಬಳಿ ಸುಳಿದಿಲ್ಲ. "ಕಾಲೇತ್ ಸುಖ್ ಆಹೆ [ಈ ಕಲೆ ನನಗೆ ಸಂತೋಷವನ್ನು ನೀಡುತ್ತದೆ]” ಎಂದು ಅವರು ಹೇಳುತ್ತಾರೆ.

Left: Narayan started making these black and blue PVC ( Polyvinyl Chloride) three years ago as demand for wooden flutes reduced due to high prices.
PHOTO • Sanket Jain
Right: He is cutting off the extra wooden part, which he kept for margin to help correct any errors while crafting the shehnai
PHOTO • Sanket Jain

ಎಡ: ಹೆಚ್ಚಿನ ಬೆಲೆಯಿಂದಾಗಿ ಮರದ ಕೊಳಲುಗಳಿಗೆ ಬೇಡಿಕೆ ಕಡಿಮೆಯಾದ ಕಾರಣ ನಾರಾಯಣ್ ಮೂರು ವರ್ಷಗಳ ಹಿಂದೆ ಈ ಕಪ್ಪು ಮತ್ತು ನೀಲಿ ಪಿವಿಸಿ (ಪಾಲಿವಿನೈಲ್ ಕ್ಲೋರೈಡ್) ತಯಾರಿಸಲು ಪ್ರಾರಂಭಿಸಿದರು. ಬಲ: ಅವರು ಮರದ ಹೆಚ್ಚುವರಿ ಭಾಗವನ್ನು ಕತ್ತರಿಸುತ್ತಿದ್ದಾರೆ, ಈ ಹೆಚ್ಚುವರಿ ಭಾಗವನ್ನು ಅದರ ತಯಾರಿಕೆಯಲ್ಲಿ ದೋಷಗಳಾದರೆ ಅದನ್ನು ಸರಿಪಡಿಸಲು ಬಳಸಿಕೊಳ್ಳಲಾಗುತ್ತದೆ

Left: Narayan has made more than 5000 shehnais , spending 30,000 hours on the craft in the last five decades.
PHOTO • Sanket Jain
Right: Arjun Javir holding a photo of Maruti Desai, his late grandfather, considered one of the finest shehnai players in Manakapur
PHOTO • Sanket Jain

ಎಡ: ನಾರಾಯಣ್ ಅವರು ಕಳೆದ ಐದು ದಶಕಗಳಲ್ಲಿ 30,000 ಗಂಟೆಗಳ ಕಾಲ ಕರಕುಶಲ ಕೆಲಸ ಮಾಡುತ್ತಾ 5000ಕ್ಕೂ ಹೆಚ್ಚು ಶಹನಾಯಿಗಳನ್ನು ಮಾಡಿದ್ದಾರೆ. ಬಲ: ಅರ್ಜುನ್ ಜಾವೀರ್ ತನ್ನ ದಿವಂಗತ ಅಜ್ಜ ಮಾರುತಿ ದೇಸಾಯಿ ಅವರ ಫೋಟೋವನ್ನು ಹಿಡಿದಿದ್ದಾರೆ, ಅವರನ್ನು ಮಣಕಾಪುರದ ಅತ್ಯುತ್ತಮ ಶಹನಾಯಿ ವಾದಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ

*****

ಜೀವನೋಪಾಯಕ್ಕಾಗಿ ಕೇವಲ ಶಹನಾಯಿಗಳು ಮತ್ತು ಕೊಳಲುಗಳನ್ನು ಮಾತ್ರ ಅವಲಂಬಿಸಲು ಸಾಧ್ಯವಿಲ್ಲ ಎಂದು ನಾರಾಯಣ್ ಬಹಳ ಸಮಯದಿಂದ ತಿಳಿದಿದ್ದಾರೆ. ಅದಕ್ಕಾಗಿಯೇ, ಮೂರು ದಶಕಗಳ ಹಿಂದೆ, ಅವರು ತಮ್ಮ ಆದಾಯಕ್ಕೆ ಪೂರಕವಾಗಿ ವರ್ಣರಂಜಿತ ಬಣ್ಣದ ಚಕ್ರಗಳನ್ನು ತಯಾರಿಸಲು ಪ್ರಾರಂಭಿಸಿದರು. "ಗ್ರಾಮೀಣ ಜಾತ್ರೆಗಳಲ್ಲಿ, ಬಣ್ಣದ ಚಕ್ರಗಳಿಗೆ ಇನ್ನೂ ಬೇಡಿಕೆಯಿದೆ, ಏಕೆಂದರೆ ಪ್ರತಿಯೊಬ್ಬರೂ ಆಟಗಳನ್ನು ಆಡಲು ಸ್ಮಾರ್ಟ್ಫೋನ್ ಖರೀದಿಸಲು ಸಾಧ್ಯವಿಲ್ಲ." ತಲಾ 10 ರೂ.ಗಳ ಈ ಕಾಗದದ ಕಲಾಕೃತಿಗಳು ಜನರ ಬದುಕಿನಲ್ಲಿ ಸಂತೋಷವನ್ನು ತರುತ್ತವೆ - ಮತ್ತು ನಾರಾಯಣ್ ಅವರ ಮನೆಗೆ ಹೆಚ್ಚು ಅಗತ್ಯವಾದ ಆದಾಯವನ್ನು ತರುತ್ತವೆ.

ಅವರು ಈ ಬಣ್ಣದ ಚಕ್ರಗಳಲ್ಲದೆ ಕೆಲವು ಸ್ಪ್ರಿಂಗ್‌ ಆಟಿಕೆಗಳನ್ನು ಸಹ ತಯಾರಿಸುತ್ತಾರೆ. ಅವರ ಸಂಗ್ರಹದಲ್ಲಿ 20 ಕ್ಕೂ ಹೆಚ್ಚು ಬಗೆ ಕಾಗದದ ಹಕ್ಕಿಗಳ ಒರಿಗಾಮಿ ವಿನ್ಯಾಸಗಳಿವೆ. ಅವುಗಳನ್ನು 10- 20 ರೂಪಾಯಿಗಳಿಗೆ ಒಂದರಂತೆ ಮಾರಲಾಗುತ್ತದೆ. “ನಾನು ಕಲಾ ಶಾಲೆಗೆ ಹೋದವನಲ್ಲ ಆದರೆ ನನ್ನ ಕೈಗೆ ಕಾಗದ ಬಂದರೆ ಅದರಿಂದ ಏನಾದರೂ ಒಂದು ತಯಾರಿಸದೆ ಇರುವವನಲ್ಲ” ಎಂದು ಅವರು ಹೇಳುತ್ತಾರೆ.

ಕೋವಿಡ್ -19 ಅದರ ಪರಿಣಾಮವಾಗಿ ಹಳ್ಳಿಯ ಜಾತ್ರೆಗಳು ಮತ್ತು ಸಾರ್ವಜನಿಕ ಕೂಟಗಳ ಮೇಲಿನ ನಿಷೇಧವು ಈ ವ್ಯವಹಾರವನ್ನು ಅಂಚಿಗೆ ತಂದಿತು. "ನಾನು ಎರಡು ವರ್ಷಗಳವರೆಗೆ ಒಂದೇ ಒಂದು ಬಣ್ಣದ ಚಕ್ರವನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. ಮಾರ್ಚ್ 2022ರಲ್ಲಿ ಮಣಕಾಪುರದ ಮಹಾಶಿವರಾತ್ರಿ ಯಾತ್ರೆಯೊಂದಿಗೆ ಕೆಲಸ ಪುನರಾರಂಭಗೊಂಡಿತು. ಆದಾಗ್ಯೂ, ಹೃದಯಾಘಾತದ ನಂತರ ಕಳಪೆ ಆರೋಗ್ಯದಿಂದಾಗಿ ಪ್ರಯಾಣಿಸಲು ಕಷ್ಟವಾಗುವುದರಿಂದ, ಅವರು ಈಗ ತಮ್ಮ ಆಟಿಕೆಗಳನ್ನು ಮಾರಾಟ ಮಾಡಲು ಏಜೆಂಟರನ್ನು ಅವಲಂಬಿಸಿದ್ದಾರೆ. "ಮಾರಾಟವಾಗುವ ಪ್ರತಿ ಆಟಿಕೆಗೆ ನಾನು ಏಜೆಂಟರಿಗೆ ಮೂರು ರೂಪಾಯಿಗಳನ್ನು ಕಮಿಷನ್ ರೂಪದಲ್ಲಿ ನೀಡಬೇಕಾಗುತ್ತದೆ" ಎಂದು ಅವರು ಹೇಳುತ್ತಾರೆ. "ಇದು ನನಗೆ ಸಮಮ್ಮತವಲ್ಲ, ಆದರೆ ಇದು ಸ್ವಲ್ಪ ಆದಾಯವನ್ನು ತರುತ್ತದೆ" ಎಂದು ತಿಂಗಳಿಗೆ ಕೇವಲ 5000 ರೂ.ಗಳನ್ನು ಗಳಿಸುವ ನಾರಾಯಣ್ ಹೇಳುತ್ತಾರೆ.

Left: Sushila, Narayan's wife, works at a brick kiln and also helps Narayan in making pinwheels, shehnais and flutes.
PHOTO • Sanket Jain
Right: Narayan started making colourful pinwheels three decades ago to supplement his income
PHOTO • Sanket Jain

ಎಡ: ನಾರಾಯಣ್ ಅವರ ಪತ್ನಿ ಸುಶೀಲಾ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಬಣ್ಣದ ಚಕ್ರಗಳು, ಶಹನಾಯಿಗಳು ಮತ್ತು ಕೊಳಲುಗಳನ್ನು ತಯಾರಿಸಲು ನಾರಾಯಣ ದೇಸಾಯಿವರಿಗೆ ಸಹಾಯ ಮಾಡುತ್ತಾರೆ. ಬಲ: ನಾರಾಯಣ್ ತನ್ನ ಆದಾಯಕ್ಕೆ ಪೂರಕವಾಗಿ ಮೂರು ದಶಕಗಳ ಹಿಂದೆ ವರ್ಣರಂಜಿತ ಬಣ್ಣದ ಚಕ್ರಗಳನ್ನು ತಯಾರಿಸಲು ಪ್ರಾರಂಭಿಸಿದರು

Narayan marks the tone holes (left) of a flute using the wooden reference scale he made and then checks if it is producing the right tones (right)
PHOTO • Sanket Jain
Narayan marks the tone holes (left) of a flute using the wooden reference scale he made and then checks if it is producing the right tones (right)
PHOTO • Sanket Jain

ನಾರಾಯಣ್ ಅವರು ತಾನೇ ತಯಾರಿಸಿದ ಮರದ ಉಲ್ಲೇಖ ಮಾಪಕವನ್ನು ಬಳಸಿಕೊಂಡು ಕೊಳಲಿನ ಸ್ವರ ರಂಧ್ರಗಳನ್ನು (ಎಡ) ಗುರುತಿಸುತ್ತಾರೆ ಮತ್ತು ನಂತರ ಅದು ಸರಿಯಾದ ಸ್ವರವನ್ನು ಉತ್ಪಾದಿಸುತ್ತಿದೆಯೇ ಎಂದು ಪರಿಶೀಲಿಸುತ್ತಾರೆ (ಬಲ)

ಅವರ ಪತ್ನಿ ಸುಶೀಲಾ 40ರ ದಶಕದ ಮಧ್ಯದಲ್ಲಿದ್ದು, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ. ಕೆಲವೊಮ್ಮೆ, ಅವರು ಶಹನಾಯಿಗಳು ಮತ್ತು ಕೊಳಲುಗಳನ್ನು ತಯಾರಿಸಲು ಸಹಾಯ ಮಾಡುತ್ತಾರೆ, ಈ ಮೂಲಕ ಯುಗಾಂತರಗಳಿಂದ ಪುರುಷರು ಕಾವಲು ಕಾಯುತ್ತಿರುವ ಸ್ಥಳಕ್ಕೆ ಅವರು ಮೆಲ್ಲನೆ ಹೆಜ್ಜೆ ಹಾಕುತ್ತಿದ್ದಾರೆ. "ಸುಶೀಲಾ ನನಗೆ ಸಹಾಯ ಮಾಡದಿದ್ದರೆ, ಈ ಕಸುಬು ಹಲವಾರು ವರ್ಷಗಳ ಹಿಂದೆಯೇ ಸಾಯುತ್ತಿತ್ತು" ಎಂದು ನಾರಾಯಣ್ ಹೇಳುತ್ತಾರೆ. "ಅವಳು ಈ ಕುಟುಂಬವನ್ನು ನಡೆಸಲು ಸಹಾಯ ಮಾಡುತ್ತಾಳೆ."

"ನನಗೆ ಹೆಚ್ಚಿನ ಕೌಶಲಗಳು ತಿಳಿದಿಲ್ಲ. ನಾನು ಕೇವಲ ಒಂದು ಸ್ಥಳದಲ್ಲಿ ಕುಳಿತು ವಸ್ತುಗಳನ್ನು ತಯಾರಿಸುತ್ತೇನೆ" ಎಂದು ಅವರು ವಿನಮ್ರವಾಗಿ ಹೇಳುತ್ತಾರೆ. "ಆಮ್ಹಿ ಗೆಲೋ ಮ್ಹಾಂಜೆ ಗೆಲಿ ಕಲಾ [ಈ ಕಲೆ ನನ್ನೊಂದಿಗೆ ಸಾಯುತ್ತದೆ]" ಎಂದು ಅವರು ತಮ್ಮ ತಂದೆ ಮತ್ತು ಅಜ್ಜ ಶೆಹನಾಯಿ ನುಡಿಸುತ್ತಿರುವ ಫ್ರೇಮ್ ಮಾಡಿದ ಫೋಟೋವನ್ನು ತೆಗೆದುಕೊಳ್ಳುತ್ತಾ ಹೇಳುತ್ತಾರೆ.

ಈ ವರದಿಯು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಸರಣಿಯ ಒಂದು ಭಾಗವಾಗಿದೆ ಮತ್ತು ಮೃಣಾಲಿನಿ ಮುಖರ್ಜಿ ಫೌಂಡೇಶನ್ ಇದನ್ನು ಬೆಂಬಲಿಸುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Other stories by Sanket Jain
Editor : Sangeeta Menon

ಸಂಗೀತಾ ಮೆನನ್ ಮುಂಬೈ ಮೂಲದ ಬರಹಗಾರು, ಸಂಪಾದಕರು ಮತ್ತು ಸಂವಹನ ಸಲಹೆಗಾರರು.

Other stories by Sangeeta Menon
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru