ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಕಣ್ಣುಗಳಿಗೆ ವಿಶ್ರಾಂತಿ ಸಿಗುತ್ತದೆ ಆದರೆ ಕಿವಿಗಳಿಗೆ ಸಿಗುವುದಿಲ್ಲ. ಇಲ್ಲಿ ಹಕ್ಕಿಗಳು ಹಾಗೂ ಪ್ರಾಣಿಗಳು ನಮಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುತ್ತಿರುತ್ತವೆ. ಇವುಗಳ ನಡುವೆ ತಮಿಳುನಾಡಿನ ನೀಲಗಿರಿ ಪರ್ವತಗಳಲ್ಲಿ ವಾಸಿಸುವ ವಿವಿಧ ಬುಡಕಟ್ಟು ಜನಾಂಗದ ಭಾಷೆಗಳಿವೆ.

“ನಲೈಯವೊಡುತು” [ಹೇಗಿದ್ದೀರಿ]? ಎಂದು ಬೆಟ್ಟಕುರುಂಬರು ಕೇಳುತ್ತಾರೆ. ಇರುಳರು “ಸಂದಾಕಿದೈಯ?” ಎಂದು ಕೇಳುತ್ತಾರೆ.

ಎರಡೂ ಒಂದೇ ಅರ್ಥ ಕೊಡುವ ಉಭಯ ಕುಶಲೋಪರಿ.

Left: A Hoopoe bird after gathering some food.
PHOTO • K. Ravikumar
Right: After a dry spell in the forests, there is no grass for deer to graze
PHOTO • K. Ravikumar

ಎಡ: ಒಂದಷ್ಟು ಆಹಾರವನ್ನು ಸಂಗ್ರಹಿಸಿರುವ ಚಂದ್ರಮುಕುಟ ಪಕ್ಷಿ. ಬಲ: ಕಾಡುಗಳಲ್ಲಿ ಬಿಸಿಲಿನ ಕಾರಣದಿಂದಾಗಿ ಜಿಂಕೆಗಳಿಗೆ ಮೇಯಲು ಹುಲ್ಲು ಸಿಗುತ್ತಿಲ್ಲ

ಪಶ್ಚಿಮ ಘಟ್ಟಗಳ ಈ ದಕ್ಷಿಣ ಪ್ರದೇಶದ ಪ್ರಾಣಿಗಳು ಮತ್ತು ಜನರ ಮಧುರ ದನಿಯು ಬೇರೆಡೆಯ ವಾಹನಗಳು ಮತ್ತು ಯಂತ್ರಗಳ ಶಬ್ದಕ್ಕಿಂತ ಭಿನ್ನವಾಗಿರುತ್ತದೆ. ಇವು ಸ್ಥಳೀಯ ಶಬ್ದಗಳು.

ನಾನು ಪೊಕ್ಕಪುರಂ (ಅಧಿಕೃತವಾಗಿ ಬೊಕ್ಕಪುರಂ) ಗ್ರಾಮದ ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ, ಕುರುಂಬರ್ ಪಾಡಿ ಎಂಬ ಸಣ್ಣ ಬೀದಿಯವನು. ಫೆಬ್ರವರಿ ಅಂತ್ಯದಿಂದ ಮಾರ್ಚ್ ಆರಂಭದವರೆಗೆ, ಈ ಪ್ರಶಾಂತ ಸ್ಥಳವು ತೂಂಗಾ ನಗರಂ [ಎಂದಿಗೂ ಮಲಗದ ನಗರ] ಗೆ ಹೋಲುವ ಗದ್ದಲದ ಪಟ್ಟಣವಾಗಿ ರೂಪಾಂತರಗೊಳ್ಳುತ್ತದೆ, ಈ ಹೆಸರನ್ನು ದೊಡ್ಡ ನಗರವಾದ ಮಧುರೈಗೆ ಸಹ ಬಳಸಲಾಗುತ್ತದೆ. ಪೋಕಪುರಂ ಮಾರಿಯಮ್ಮನ್ ದೇವಿಗೆ ಸಮರ್ಪಿತವಾದ ದೇವಾಲಯದ ಉತ್ಸವದಿಂದಾಗಿ ಈ ಬದಲಾವಣೆ ಉಂಟಾಗುತ್ತದೆ. ಆರು ದಿನಗಳವರೆಗೆ, ಪಟ್ಟಣವು ಜನಸಂದಣಿ, ಉತ್ಸವ ಮತ್ತು ಸಂಗೀತದ ಸದ್ದಿನಲ್ಲಿ ಮುಳುಗಿರುತ್ತದೆ. ಆದರೂ, ನನ್ನ ಊರಿನ ಜೀವನದ ಬಗ್ಗೆ ಯೋಚಿಸಿ ನೋಡಿದಾಗ, ಇದು ಕಥೆಯ ಒಂದು ಭಾಗ ಮಾತ್ರ.

ಇದು ಹುಲಿ ಮೀಸಲು ಪ್ರದೇಶ ಅಥವಾ ನನ್ನ ಹಳ್ಳಿಯ ಕಥೆಯಲ್ಲ. ಇದು ನನ್ನ ಬದುಕಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಒಬ್ಬರ ಕತೆ. ತನ್ನ ಪತಿ ತೊರೆದ ನಂತರ ಐದು ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ಮಹಿಳೆಯ ಕತೆ. ಇದು ನನ್ನ ತಾಯಿಯ ಕಥೆ.

Left: Amma stops to look up at the blue sky in the forest. She was collecting cow dung a few seconds before this.
PHOTO • K. Ravikumar
Right: Bokkapuram is green after the monsoons, while the hills take on a blue hue
PHOTO • K. Ravikumar

ಎಡ: ಅಮ್ಮ ಆಕಾಶ ನೋಡಲೆಂದು ಒಂದು ಕ್ಷಣ ನಿಂತಿರುವುದು. ಇದಕ್ಕೂ ಕೆಲವು ಕ್ಷಣಗಳ ಮೊದಲು ಅವಳು ದನದ ಸಗಣಿ ಸಂಗ್ರಹಿಸುತ್ತಿದ್ದಳು. ಬಲ: ಬಲ: ಮಳೆಗಾಲದ ನಂತರ ಬೊಕ್ಕಪುರಂ ಹಸಿರಿನಿಂದ ಕೂಡಿರುತ್ತದೆ, ಆದರೆ ಬೆಟ್ಟಗಳು ನೀಲಿ ಬಣ್ಣದಿಂದ ಕಂಗೊಳಿಸುತ್ತವೆ

*****

ನನ್ನ ಅಧಿಕೃತ ಹೆಸರು ಕೆ.ರವಿಕುಮಾರ್, ಆದರೆ ನನ್ನ ಊರಿನ ಜನರು ಮಾರನ್ ಎಂದು ಕರೆಯುತ್ತಾರೆ. ನಮ್ಮ ಸಮುದಾಯವು ತನ್ನನ್ನು ಪೆಟ್ಟಕುರುಂಬರ್ ಎಂದು ಕರೆದುಕೊಳ್ಳುತ್ತದೆ, ಆದರೂ ಅಧಿಕೃತವಾಗಿ ನಮ್ಮನ್ನು ಬೆಟ್ಟಕುರುಂಬ ಎಂದು ಪಟ್ಟಿ ಮಾಡಲಾಗಿದೆ.

ಈ ಕಥೆಯ ನಾಯಕಿ, ನನ್ನ ಅಮ್ಮ; ಅವಳನ್ನು ಅಧಿಕೃತವಾಗಿ ಮತ್ತು ನಮ್ಮ ಜನರು 'ಮೇಥಿ' ಎಂದು ಕರೆಯುತ್ತಾರೆ. ನನ್ನ ಅಪ್ಪ ಕೃಷ್ಣನ್, ನಮ್ಮ ಸಮುದಾಯದಿಂದ ಕೇತನ್ ಎಂದು ಕರೆಯಲ್ಪಡುತ್ತಾರೆ. ಐದು ಜನ ಒಡಹುಟ್ಟಿದವರಲ್ಲಿ ನಾನೂ ಒಬ್ಬ: ನನ್ನ ಹಿರಿಯಕ್ಕ, ಚಿತ್ರಾ (ನಮ್ಮ ಸಮುದಾಯದಲ್ಲಿ ಕಿರ್ಕಾಲಿ); ನನ್ನ ಅಣ್ಣ ರವಿಚಂದ್ರನ್ (ಮಾಧನ್); ನನ್ನ ಎರಡನೇ ಅಕ್ಕ ಶಶಿಕಲಾ (ಕೇತಿ); ಮತ್ತು ನನ್ನ ತಂಗಿ ಕುಮಾರಿ (ಕಿನ್ಮರಿ). ನನ್ನ ಅಣ್ಣ ಮತ್ತು ಅಕ್ಕ ಮದುವೆಯಾಗಿ ತಮ್ಮ ಕುಟುಂಬಗಳೊಂದಿಗೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪಾಲವಾಡಿ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

ಅಪ್ಪ ಅಮ್ಮನ ಜೊತೆಗಿನ ನನ್ನ ಆರಂಭಿಕ ನೆನಪುಗಳೆಂದರೆ ಅವರಲ್ಲಿ ಒಬ್ಬರು ನನ್ನನ್ನು ಅಂಗನವಾಡಿಗೆ ಬಿಟ್ಟು ಬರುತ್ತಿದ್ದ ದಿನಗಳು. ಈ ಸರ್ಕಾರಿ ಮಕ್ಕಳ ಕಾಳಜಿ ಕೇಂದ್ರದಲ್ಲಿ ನನ್ನ ಸ್ನೇಹಿತರ ಜೊತೆಗಿನ ಸಾವಿರ ನೆನಪುಗಳಿವೆ. ಇಲ್ಲಿ ಖುಷಿ, ನೋವು ಸಿಟ್ಟು, ಸಂಭ್ರಮ ಎಲ್ಲವೂ ಇದ್ದವು. ಮಧ್ಯಾಹ್ನ 3 ಗಂಟೆ ಅಪ್ಪ ಅಥವಾ ಅಮ್ಮ ಬಂದು ನಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು.

ಮದ್ಯ ಅವರ ಬದುಕನ್ನು ಆಕ್ರಮಿಸುವ ಮೊದಲು, ಅಪ್ಪ ಬಹಳ ಪ್ರೇಮಮಯಿ ವ್ಯಕ್ತಿಯಾಗಿದ್ದರು. ಅವರು ಕುಡಿಯಲು ಪ್ರಾರಂಭಿಸಿದ ನಂತರ, ಬೇಜವಾಬ್ದಾರಿಯುತ ಮತ್ತು ಹಿಂಸಾತ್ಮಕ ವ್ಯಕ್ತಿಯಾಗಿ ಮಾರ್ಪಟ್ಟರು. "ಅವರ ಗೆಳೇಯರೊಂದಿಗಿನ ಕೆಟ್ಟ ಸಹವಾಸವೇ ಅವರ ನಡವಳಿಕೆಗೆ ಕಾರಣ" ಎಂದು ನನ್ನ ತಾಯಿ ಹೇಳುತ್ತಿದ್ದರು.

Left: My amma, known by everyone as Methi.
PHOTO • K. Ravikumar
Right: Amma is seated outside our home with my sister Kumari and my niece, Ramya
PHOTO • K. Ravikumar

ಎಡ: ನನ್ನ ಅಮ್ಮ, ಎಲ್ಲರೂ ಮೇತಿ ಎಂದು ಕರೆಯುತ್ತಾರೆ. ಬಲ: ಅಮ್ಮ ನನ್ನ ತಂಗಿ ಕುಮಾರಿ ಮತ್ತು ಸೊಸೆ ರಮ್ಯಾಳೊಂದಿಗೆ ನಮ್ಮ ಮನೆಯ ಹೊರಗೆ ಕುಳಿತಿದ್ದಾರೆ

ಒಂದು ದಿನ ಅಪ್ಪ ಕುಡಿದು ಬಂದು ಅಮ್ಮನ ಮೇಲೆ ಕಿರುಚಾಡಲು ಪ್ರಾರಂಭಿಸಿದಾಗ ಮನೆಯ ತೊಂದರೆಯ ನೆನಪು ನನ್ನ ಮೊದಲ ನೆನಪಾಯಿತು. ಅಪ್ಪ ಅಮ್ಮನ ಮೇಲೆ ಹಲ್ಲೆ ಮಾಡಿದರು ಮತ್ತು ಆ ಸಮಯದಲ್ಲಿ ನಮ್ಮೊಂದಿಗೆ ಇದ್ದ ಅಮ್ಮನ ಪೋಷಕರು ಮತ್ತು ಒಡಹುಟ್ಟಿದವರನ್ನು ಅತ್ಯಂತ ಆಕ್ರಮಣಕಾರಿ ಭಾಷೆಯಿಂದ ಅವಮಾನಿಸಿದರು. ಮಾತನ್ನು ಕೇಳಲೇಬೇಕಾಗಿದ್ದರೂ, ಅವರು ಅಪ್ಪನ ಮಾತುಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರು. ಇದರ ನಂತರ ಈ ಪ್ರಕೋಪಗಳು ದಿನನಿತ್ಯದ ಘಟನೆಗಳಾದವು.

ನಾನು 2ನೇ ತರಗತಿಯಲ್ಲಿದ್ದಾಗ ನಡೆದ ಒಂದು ಘಟನೆ ನನಗೆ ಸ್ಪಷ್ಟವಾಗಿ ನೆನಪಿದೆ. ಎಂದಿನಂತೆ, ಅಪ್ಪ ಕುಡಿದು ಕೋಪದಿಂದ ಮನೆಗೆ ಬಂದು, ಅಮ್ಮ, ನಂತರ ನನ್ನ ಒಡಹುಟ್ಟಿದವರು ಮತ್ತು ನನ್ನನ್ನು ಹೊಡೆದರು. ಅವರು ನಮ್ಮ ಬಟ್ಟೆಗಳು ಮತ್ತು ವಸ್ತುಗಳನ್ನು ಬೀದಿಗೆ ಎಸೆದು, ತನ್ನ ಮನೆಯಿಂದ ಹೊರಹೋಗುವಂತೆ ಕೂಗಿದರು. ಆ ಚಳಿಗಾಲದ ರಾತ್ರಿ, ಸಣ್ಣ ಮರಿಗಳು ತಮ್ಮ ತಾಯಂದಿರ ಬೆಚ್ಚನೆ ಅಪ್ಪುಗೆ ಬಯಸುವಂತೆ, ಬೀದಿಯಲ್ಲಿ ನಮ್ಮ ತಾಯಿಗೆ ಅಂಟಿಕೊಂಡಿದ್ದೆವು.

ನಾವು ಓದುತ್ತಿದ್ದ ಬುಡಕಟ್ಟು ಸರ್ಕಾರಿ ಸಂಸ್ಥೆ ಜಿಟಿಆರ್ ಮಾಧ್ಯಮಿಕ ಶಾಲೆಯಲ್ಲಿ ಊಟ ಮತ್ತು ಆಹಾರ ಸೌಲಭ್ಯಗಳು ಇದ್ದುದರಿಂದ, ನನ್ನ ಹಿರಿಯಣ್ಣ ಮತ್ತು ಸಹೋದರಿ ಅಲ್ಲಿಯೇ ಉಳಿಯಲು ನಿರ್ಧರಿಸಿದರು. ಆ ದಿನಗಳಲ್ಲಿ, ನಮ್ಮ ಬಳಿ ಹೆಚ್ಚುವರಿಯಾಗಿದ್ದದ್ದು ನಮ್ಮ ಅಳು ಮತ್ತು ಕಣ್ಣೀರು ಮಾತ್ರ. ನಾವು ನಮ್ಮ ಮನೆಯಲ್ಲಿಯೇ ಇದ್ದೆವು, ಆದರೆ ಅಪ್ಪ ಮಾತ್ರ ಹೊರಟು ಹೋದರು.

ನಾವು ಮುಂದೆ ಏನಾಗಬಹುದೆನ್ನುವ ಭಯದಲ್ಲೇ ಬದುಕುತ್ತಿದ್ದೆವು. ಒಂದು ದಿನ ಅಪ್ಪ ಕುಡಿದು ಬಂದು ಅಮ್ಮನ ತಮ್ಮನೊಂದಿಗೆ ಜಗಳಕ್ಕಿಳಿದು ಅವರ ಮೇಲೆ ಚೂರಿಯಿಂದ ಹಲ್ಲೆಗೆ ಪ್ರಯತ್ನಿಸಿದರು. ಆದರೆ ಅವರನ್ನು ಎಲ್ಲರೂ ಸೇರಿ ತಡೆಯಲು ಪ್ರಯತ್ನಿಸಿದರು. ಚೂರಿ ಮೊಂಡಾಗಿದ್ದ ಕಾರಣ ಅವರಿಗೆ ಗಾಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಅಮ್ಮನನ್ನು ತಂಗಿ ಹಿಡಿದುಕೊಂಡಿದ್ದಳು. ತಳ್ಳಾಟದಲ್ಲಿ ಬಿದ್ದು ಅಮ್ಮನಿಗೆ ಪೆಟ್ಟಾಯಿತು. ನಾನು ಅಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ಅರಗಿಸಿಕೊಳ್ಳಲಾಗದೆ ಅಸಹಾಯಕತೆಯಿಂದ ನಿಂತಿದ್ದೆ.

ಮರುದಿನ ಅಂಗಳದಲ್ಲಿ ನೋಡುವಾಗ ಅಲ್ಲಿ ನನ್ನ ಅಪ್ಪ ಮತ್ತು ಮಾವನ ಕಪ್ಪು, ಕೆಂಪು ಬಣ್ಣದ ರಕ್ತದ ಕಲೆಗಳಿದ್ದವು. ಮಧ್ಯರಾತ್ರಿಯ ಹೊತ್ತಿಗೆ ಅಪ್ಪ ನನ್ನ ಮತ್ತು ಅಕ್ಕನ ಕೈ ಹಿಡಿದು ತಾತನ ಮನೆಯ ಹೊರಗೆ ಎಳೆದುಕೊಂಡು ಬಂದರು. ಅಲ್ಲಿಂದ ನಮ್ಮ ಹೊಲದ ನಡುವೆ ಇದ್ದ ಅವರ ಸಣ್ಣ ಕೋಣೆಗೆ ಕರೆದೊಯ್ದರು. ಇದಾಗಿ ಕೆಲವು ತಿಂಗಳ ನಂತರ ಅಪ್ಪ ಅಮ್ಮ ಬೇರ್ಪಟ್ಟರು.

Left: My mother cutting dry wood with an axe. This is used as firewood for cooking.
PHOTO • K. Ravikumar
Right : The soft glow of the kerosene lamp helps my sister Kumari and my niece Ramya study, while our amma makes rice
PHOTO • K. Ravikumar

ಅಮ್ಮ ಗರಗಸ ಬಳಸಿ ಒಣ ಕಟ್ಟಿಗೆಯನ್ನು ಕತ್ತರಿಸುತ್ತಿರುವುದು. ಇದನ್ನು ಅಡುಗೆ ಒಲೆಗೆ ಸೌದೆಯಾಗಿ ಬಳಸಲಾಗುತ್ತದೆ. ಬಲ: ಸೀಮೆಎಣ್ಣೆ ದೀಪದ  ನಸುಕು ಬೆಳಕು ಅಮ್ಮ ಅಡುಗೆ ಮಾಡುತ್ತಿರುವಾಗ, ನನ್ನ ತಂಗಿಯರಾದ ಕುಮಾರಿ ಮತ್ತು ಸೊಸೆ ರಮ್ಯಾರ ಓದಿಗೆ ಸಹಾಯ ಮಾಡುತ್ತದೆ

ಗುಡಲೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ನಾನು ಮತ್ತು ನನ್ನ ಒಡಹುಟ್ಟಿದವರು ಅಮ್ಮನ ಜೊತೆಯಲ್ಲಿಯೇ ಉಳಿದುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದೆವು. ಕೆಲವು ದಿನಗಳ ತನಕ ನಾವು ಅಮ್ಮನ ತವರಿನಲ್ಲಿ ನಮ್ಮ ದಿನಗಳನ್ನು ಸಂತೋಷದಿಂದ ಕಳೆದೆವು. ಅಜ್ಜಿಯ ಮನೆ ನಮ್ಮ ಪೋಷಕರ ಮನೆಯಿದ್ದ ಬೀದಿಯಲ್ಲೇ ಇತ್ತು.

ಆದರೆ ನಮ್ಮ ಸಂಭ್ರಮ ಅಲ್ಪಾಯುಷಿಯಾಗಿತ್ತು. ಸ್ವಲ್ಪ ದಿನದಲ್ಲಿ ಆಹಾರವೇ ಒಂದು ಸಮಸ್ಯೆಯಾಗಿ ಕಾಣಿಸಿಕೊಂಡಿತು. ನನ್ನ ಅಜ್ಜನಿಗೆ ಸಿಗುತ್ತಿದ್ದ 40 ಕೇಜಿ ರೇಷನ್ ಎಲ್ಲರ ಊಟಕ್ಕೆ ಸಾಕಾಗುತ್ತಿರಲಿಲ್ಲ. ಬಹುತೇಕ ದಿನಗಳಲ್ಲಿ ತಾತ ನಾವು ಉಣ್ಣಲಿ ಎನ್ನುವ ಕಾರಣಕ್ಕೆ ರಾತ್ರಿ ತಾವು ಉಣ್ಣದೆ ಮಲಗುತ್ತಿದ್ದರು. ಅಸಹಾಯಕರಾದ ತಾತ ಕೆಲವು ದಿನ ನಮ್ಮ ಹೊಟ್ಟೆ ತುಂಬಿಸಲು ದೇವಸ್ಥಾನಗಳಿಂದ ಪ್ರಸಾದ ತೆಗೆದುಕೊಂಡು ಬರುತ್ತಿದ್ದರು. ಆಗಲೇ ಅಮ್ಮ ತಾನು ಕೂಲಿ ಕೆಲಸಕ್ಕೆ ಹೋಗಲು ತೀರ್ಮಾನಿಸಿದ್ದು.

*****

ಅಮ್ಮ ಮೂರನೇ ತರಗತಿಯ ತನಕವಷ್ಡೇ ಓದಿದ್ದರು. ಮನೆಯಲ್ಲಿ ಓದಿಸುವ ಶಕ್ತಿಯಿಲ್ಲದ ಕಾರಣ ಅವರು ಶಾಲೆ ಬಿಟ್ಟಿದ್ದರು. ಅವರು ತಮ್ಮ ಕಿರಿಯ ಒಡಹುಟ್ಟಿದವರನ್ನು ಕಾಳಜಿ ಮಾಡುತ್ತಾ ತಮ್ಮ ಬಾಲ್ಯವನ್ನು ಕಳೆದರು. ನಂತರ ಅವರಿಗೆ 18 ತುಂಬುತ್ತಿದ್ದ ಹಾಗೆ ನನ್ನಪ್ಪನಿಗೆ ಮದುವೆ ಮಾಡಿ ಕೊಡಲಾಯಿತು.

ಅಪ್ಪ ಕ್ಯಾಂಟೀನ್ ಒಂದಕ್ಕೆ ಸೌದೆ ಒಟ್ಟು ಮಾಡಿ ಕೊಡುವ ಕೆಲಸ ಮಾಡುತ್ತಿದ್ದರು. ಈ ಕ್ಯಾಂಟೀನ್ ನೀಲಗಿರಿಯ ಗುಡಲೂರು ಬ್ಲಾಕಿನ ಬೊಕ್ಕಪುರಂ ಬಳಿಯ ಸಿಂಗಾರ ಎನ್ನುವ ಹಳ್ಳಿಯ ದೊಡ್ಡ ಕಾಫಿ ಎಸ್ಟೇಟ್ ಒಂದಕ್ಕೆ ಸೇರಿದ್ದು.

ಈ ಪ್ರದೇಶದ ಹೆಚ್ಚಿನವರು ಈ ಎಸ್ಟೇಟಿನಲ್ಲೇ ಕೆಲಸ ಮಾಡುವುದು. ಮದುವೆಯಾದ ನಂತರ ಅಮ್ಮ ನಮ್ಮೆಲ್ಲರನ್ನು ನೋಡಿಕೊಳ್ಳಲು ಮನೆಯಲ್ಲೇ ಉಳಿದರು. ಅವರಿಬ್ಬರೂ ಬೇರೆಯಾದ ನಂತರ ಅಮ್ಮ ಸಿಂಗಾರ ಕಾಫಿ ಎಸ್ಟೇಟಿನಲ್ಲಿ ದಿನಕ್ಕೆ 150 ರೂಪಾಯಿ ಕೂಲಿಗೆ ಕೆಲಸ ಮಾಡತೊಡಗಿದರು.

Left: After quitting her work in the coffee estate, amma started working in her friends' vegetable garden.
PHOTO • K. Ravikumar
Right: Here, amma can be seen picking gourds
PHOTO • K. Ravikumar

ಎಡ: ಕಾಫಿ ಎಸ್ಟೇಟ್ ಕೆಲಸ ಬಿಟ್ಟ ನಂತರ ಅಮ್ಮ ಅವರ ಗೆಳತಿಯೊಬ್ಬರ ತರಕಾರಿ ತೋಟದಲ್ಲಿ ಕೆಲಸ ಮಾಡತೊಡಗಿದರು. ಬಲ: ಇಲ್ಲಿ ಅಮ್ಮ ತರಕಾರಿ ಕೀಳುತ್ತಿರುವುದನ್ನು ನೋಡಬಹುದು

ಅಮ್ಮ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಹೊರಡುತ್ತಿದ್ದರು. ಇಡೀ ದಿನ ಬಿಸಿಲು ಮಳೆಯೆನ್ನದೆ ದುಡಿಯುತ್ತಿದ್ದರು. "ಅವಳು ಊಟದ ಸಮಯದಲ್ಲಿ ಕೂಡಾ ಒಂದಷ್ಟು ವಿಶ್ರಾಂತಿ ಪಡೆಯುತ್ತಿರಲಿಲ್ಲ" ಎಂದು ಅಮ್ಮನ ಗೆಳತಿಯರು ಹೇಳುವುದನ್ನು ಕೇಳಿದ್ದೇನೆ. ಹೆಚ್ಚೂಕಮ್ಮಿ ಎಂಟು ವರ್ಷಗಳ ಕಾಲ ಅಮ್ಮ ಇದೇ ದುಡಿಮೆಯಿಂದ ಮನೆ ನಡೆಸಿದರು. ಒಂದೊಂದು ದಿನ ಅವರು ಸಂಜೆ 7:30ರ ತನಕ ದುಡಿದು ಮನೆಗೆ ಬಂದಿದ್ದನ್ನೂ ನೋಡಿದ್ದೇನೆ. ಅಷ್ಟು ಹೊತ್ತಿಗೆ ಅವಳ ಸೀರೆ ಪೂರ್ತಿ ನೆನೆದು ನಡುಗುತ್ತಾ ಇರುತ್ತಿದ್ದಳು. ತಲೆ ಮೇಲೊಂದು ಟವೆಲ್ ಬಿಟ್ಟರೆ ರಕ್ಷಣೆಗೆ ಇನ್ನೇನೂ ಇರುತ್ತಿರಲಿಲ್ಲ. ಅಂತಹ ಮಳೆಯ ದಿನಗಳಲ್ಲಿ ನಮ್ಮ ಮನೆ ಸೋರುತ್ತಿತ್ತು. ಅಮ್ಮ ಅತ್ತಿಂದಿತ್ತ ಓಡಾಡುತ್ತಾ ಸೋರುವ ಜಾಗದಲ್ಲಿ ಪಾತ್ರೆ ಇಡುತ್ತಿದ್ದರು.

ನಾನು ಅವರಿಗೆ ಬೆಂಕಿ ಉರಿಸಲು ಸಹಾಯ ಮಾಡುತ್ತಿದ್ದೆ. ಕುಟುಂಬದ ಉಳಿದವರು ಕುಳಿತು ರಾತ್ರಿ ಹನ್ನೊಂದು ಗಂಟೆಯ ತನಕ ಮಾತನಾಡುತ್ತಿದ್ದರು.

ಕೆಲವು ರಾತ್ರಿಯಲ್ಲಿ ನಾವು ಮಲಗಿದ ನಂತರ ನಿದ್ರೆ ಬರುವ ಮೊದಲು ಅಮ್ಮ ನಮ್ಮೊಂದಿಗೆ ಮಾತನಾಡುತ್ತಾ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಹಾಗೆ ಮಾತನಾಡುತ್ತಾ ಅತ್ತುಬಿಡುತ್ತಿದ್ದರು. ಒಂದು ವೇಳೆ ನಾವೂ ಅವರೊಂದಿಗೆ ಅತ್ತರೆ, ಏನಾದರೂ ತಮಾಷೆ ಮಾಡಿ ಮಾತು ಮರೆಸಿ ನಮ್ಮನ್ನು ನಗಿಸಿಬಿಡುತ್ತಿದ್ದರು. ಅಷ್ಟಕ್ಕೂ ಜಗತ್ತಿನಲ್ಲಿ ಯಾವ ತಾಯಿ ತಾನೇ ತನ್ನ ಮಕ್ಕಳು ಅಳುವುದನ್ನು ನೋಡಬಲ್ಲಳು?

Before entering the forest, amma likes to stand quietly for a few moments to observe everything around her
PHOTO • K. Ravikumar

ಕಾಡಿನ ಒಳಗೆ ಪ್ರವೇಶಿಸುವ ಮೊದಲು ಅಮ್ಮ ಒಂದೆರಡು ಕ್ಷಣ ಸುಮ್ಮನೆ ನಿಂತು ಸುತ್ತಲಿನ ವಾತಾವರಣದಲ್ಲಿ ಏನಾದರೂ ಇದೆಯೇ ಎಂದು ಗಮನಿಸುತ್ತಾರೆ

ಮುಂದೆ ನಾನು ಮಸಿನಗುಡಿಯಲ್ಲಿರುವ ಶ್ರೀ ಶಾಂತಿ ವಿಜಯ ಹೈಸ್ಕೂಲ್ ಸೇರಿದೆ. ಇದನ್ನು ನನ್ನ ಅಮ್ಮನ ಎಸ್ಟೇಟ್ ಮಾಲಿಕರು ನಡೆಸುತ್ತಿದ್ದರು. ಈ ಶಾಲೆಯನ್ನು ಅಲ್ಲಿ ಕೆಲಸ ಮಾಡುವವರ ಮಕ್ಕಳಿಗೆಂದೇ ಕಟ್ಟಿಸಲಾಗಿತ್ತು. ನನಗೆ ಅಲ್ಲಿನ ವಾತಾವರಣ ಜೈಲಿನಂತೆ ಅನ್ನಿಸತೊಡಗೊತು. ನನ್ನ ತಕರಾರುಗಳ ನಡುವೆಯೂ ಅಮ್ಮ ಅಲ್ಲಿಯೇ ಓದುವಂತೆ ಒತ್ತಾಯಿಸಿದರು. ನಾನು ಹಟ ಮಾಡಿದಾಗ ಹೊಡೆದಿದ್ದೂ ಉಂಟು ಈ ವಿಷಯದಲ್ಲಿ. ಮುಂದೆ ನಾವು ನಮ್ಮ ತಾತನ ಮನೆ ಬಿಟ್ಟು ಅಕ್ಕನ ಗಂಡನ ಮನೆ ಸೇರಿಕೊಂಡೆವು. ಅದೊಂದು ಎರಡು ಕೋಣೆಗಳ ಗುಡಿಸಲು. ನನ್ನ ತಂಗಿ ಕುಮಾರಿ ಜಿಟಿಆರ್ ಮಿಡ್ಲ್ ಸ್ಕೂಲಿನಲ್ಲೇ ಉಳಿದುಕೊಂಡಳು.

ಅಕ್ಕ ಶಶಿಕಲಾ ಹತ್ತನೇ ತರಗತಿಯ ಪರೀಕ್ಷೆಯ ಒತ್ತಡ ತಾಳಲಾರದೆ ಶಾಲೆ ಬಿಟ್ಟಳು. ಇದಾದ ನಂತರ ಅವಳು ಅಮ್ಮನಿಗೆ ಮನೆಗೆಲಸದಲ್ಲಿ ಸಹಾಯ ಮಾಡತೊಡಗಿದಳು. ಇದಾಗಿ ಒಂದು ವರ್ಷದ ನಂತರ ಶಶಿಕಲಾಳಿಗೆ ತಿರುಪ್ಪೂರಿನ ಜವಳಿ ಕಾರ್ಖಾನೆಯೊಂದರಲ್ಲಿ ಕೆಲಸ ಸಿಕ್ಕಿತು. ಅವಳು ವರ್ಷದಲ್ಲಿ ಒಮ್ಮೆ ಅಥವಾ ಎರಡು ಸಲ ಮನೆಗೆ ಬರುತ್ತಿದ್ದಳು. ಅವಳಿಗೆ ಬರುತ್ತಿದ್ದ ಮಾಸಿಕ 6,000 ರೂಪಾಯಿ ಸಂಬಳ ನಮಗೆ ಐದು ವರ್ಷಗಳ ಕಾಲ ಮನೆ ನಡೆಸಲು ಸಹಾಯ ಮಾಡಿತು. ಅಮ್ಮ ಮತ್ತು ನಾನು ಪ್ರತಿ ಮೂರು ತಿಂಗಳಿಗೊಮ್ಮೆತಿಂಗಳಿಗೊಮ್ಮೆ ಹೋಗಿ ಅವಳನ್ನು ಭೇಟಿಯಾಗುತ್ತಿದ್ದೆವು. ಆಗ ಅವಳು ತಾನು ಉಳಿಸಿದ ಹಣವನ್ನು ಕೊಡುತ್ತಿದ್ದಳು. ಅಕ್ಕ ಕೆಲಸ ಮಾಡಲು ಆರಂಭಿಸಿದ ವರ್ಷದ ನಂತರ ಅಮ್ಮ ಕಾಫಿ ಎಸ್ಟೇಟ್ ಕೆಲಸ ಬಿಟ್ಡರು. ಆಗ ಅಮ್ಮ ನಮ್ಮ ದೊಡ್ಡಕ್ಕ ಚಿತ್ರಾಳ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಮನೆಯನ್ನು ನೋಡಿಕೊಳ್ಳುವ ಮೂಲಕ ಸಮಯ ಕಳೆಯುತ್ತಿದ್ದರು.

ನಾನು ಹೇಗೋ ಶಾಂತಿ ವಿಜಯ ಹೈಸ್ಕೂಲಿನಲ್ಲಿ 10ನೇ ತರಗತಿ ಮುಗಿಸುವಲ್ಲಿ ಯಶಸ್ವಿಯಾದೆ. ಅದರ ನಂತರ ಕೋಟಗಿರಿಯಲ್ಲಿನ ಸರ್ಕಾರಿ ವಸತಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ತರಗತಿಗಳಿಗೆ ಸೇರಿಕೊಂಡೆ. ಅಮ್ಮ ಸೆಗಣಿಯ ಬೆರಣಿ ಮಾರಿ ನನ್ನ ಓದಿ ಖರ್ಚನ್ನು ಭರಿಸಿದರು. ಅವರು ನನಗೆ ಉತ್ತಮ ಅವಕಾಶ ಒದಗಿಸುವ ಕುರಿತು ದೃಢ ನಿಶ್ಚಯ ಹೊಂದಿದ್ದರು.

ಅಪ್ಪ ಹೋಗುವಾಗ ಮನೆಯನ್ನು ನಾಶಗೊಳಿಸಿದ್ದಲ್ಲದೆ, ವಿದ್ಯುತ್ ಸಂಪರ್ಕವನ್ನು ಸಹ ಕಡಿತಗೊಳಿಸಿ ಹೋಗಿದ್ದರು. ನಾವು ಸಾರಾಯಿ ಬಾಟಲಿಗೆ ಸೀಮೆಎಣ್ಣೆ ತುಂಬಿಸಿ ದೀಪ ತಯಾರಿಸಿ ಬೆಳಕು ಮಾಡಿಕೊಂಡಿದ್ದೆವು. ನಂತರ ಎರಡು ಸೆಂಬು [ತಾಮ್ರ] ದೀಪವನ್ನು ತಂದೆವು. ಈ ದೀಪಗಳು ಹತ್ತು ವರ್ಷಗಳ ಕಾಲ ನಮ್ಮ ಮನೆಯನ್ನು ಬೆಳಗಿದವು. ಕೊನೆಗೆ ನಾನು 12ನೇ ತರಗತಿಯಲ್ಲಿ ಇರುವಾಗ ಮನೆಗೆ ಮತ್ತೆ ವಿದ್ಯುತ್ ಸಂಪರ್ಕ ದೊರೆಯಿತು.

ಅಮ್ಮ ವಿದ್ಯುತ್ ಸಲುವಾಗಿ ಬಹಳವಾಗಿ ಹೋರಾಡಿದ್ದಾರೆ. ಸರಾಸರಿ ಅಧಿಕಾರಿಗಳ ಜೊತೆ ಬಡಿದಾಡುವುದು, ವಿದ್ಯುತ್ ಕುರಿತಾದ ತನ್ನ ಭಯದ ಜೊತೆ ಹೋರಾಡುವುದು ಸಹ ಇದರಲ್ಲಿ ಸೇರಿತ್ತು. ಯಾರೂ ಇಲ್ಲದಿರುವ ಹೊತ್ತಿನಲ್ಲಿ ಎಲ್ಲಾ ಸ್ವಿಚ್ಚುಗಳನ್ನು ಆರಿಸಿ ಎಣ್ಣೆ ದೀಪ ಹಚ್ಚಿಕೊಂಡು ಕೂರುತ್ತಿದ್ದರು. ಹೀಗ್ಯಾಕೆ ಮಾಡುತ್ತೀಯ ಎಂದು ಅಮ್ಮನನ್ನು ಒಮ್ಮೆ ಕೇಳಿದಾಗ ಅವರು ಹಿಂದೆ ಸಿಂಗಾರದಲ್ಲಿ ಮಹಿಳೆಯೊಬ್ಬರು ಶಾಕ್ ಹೊಡೆದು ಸತ್ತು ಹೋದ ಕತೆಯನ್ನು ಹೇಳಿದರು. ಅಂದಿನಿಂದ ಅವರಿಗೆ ವಿದ್ಯುತ್ ಎಂದರೆ ಎಲ್ಲಿಲ್ಲದ ಭಯ.

Left: Our old house twinkling under the stars.
PHOTO • K. Ravikumar
Right: Even after three years of having an electricity connection, there is only one light bulb inside our house
PHOTO • K. Ravikumar

ಎಡ: ನಮ್ಮ ಹಳೆಯ ಮನೆ ನಕ್ಷತ್ರಗಳ ಹೊಳಪಿನಡಿ ಮಿನುಗುತ್ತಿರುವುದು. ಬಲ: ಮನೆಗೆ ವಿದ್ಯುತ್ ಸಂಪರ್ಕ ದೊರೆತು ಮೂರು ವರ್ಷ ಆಗಿದ್ದರೂ ಇಂದಿಗೂ ನಮ್ಮ ಇಡೀ ಮನೆಯಲ್ಲಿ ಇರುವುದು ಒಂದೇ ಒಂದು ಬಲ್ಬ್

ನಾನು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಮ್ಮ ಜಿಲ್ಲಾ ಕೇಂದ್ರ ಉದಕಮಂಡಲ (ಊಟಿ) ಯಲ್ಲಿರುವ ಆರ್ಟ್ಸ್ ಕಾಲೇಜ್ ಸೇರಿಕೊಂಡೆ. ಅಮ್ಮ ಓದಿನ ಖರ್ಚು ಭರಿಸಲು ಲೋನ್ ಮಾಡಿದರು. ಅದೇ ಹಣದಿಂದ ನನಗೆ ಪುಸ್ತಕ ಮತ್ತು ಬಟ್ಟೆಗಳನ್ನು ಕೊಡಿಸಿದರು. ಈ ಸಾಲ ತೀರಿಸಲು ಅವರು ತರಕಾರಿ ತೋಟಗಳಲ್ಲಿ ಕೆಲಸ ಮಾಡುವುದು ಮತ್ತು ಒಣ ಸೆಗಣಿ ಬೆರಣಿ ಸಂಗ್ರಹಿಸುವುದನ್ನು ಮಾಡತೊಡಗಿದರು. ಮೊದಲಿಗೆ ಅಮ್ಮನೇ ನನಗೆ ಹಣ ಕಳುಹಿಸುತ್ತಿದ್ದರು. ನಂತರ ನಾನು ಕ್ಯಾಟರಿಂಗ್ ಸರ್ವೀಸ್ ಒಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿ ನನ್ನ ಖರ್ಚಿಗೆ ಮಾಡಿಕೊಂಡು ಜೊತೆಗೆ ಮನೆಗೂ ಒಂದಷ್ಟು ಕಳುಹಿಸುತ್ತಿದ್ದೆ. ಈಗ 50 ಮೀರಿ ವಯಸ್ಸಾಗಿರುವ ಅಮ್ಮ ಎಂದಿಗೂ ಯಾರಿಂದಲೂ ಹಣ ಸಹಾಯ ಕೇಳಿದವರಲ್ಲ. ಅವರು ಸದಾ ದುಡಿಯಲು ಸಿದ್ದರಿದ್ದರು. ಅದು ಯಾವ ಕೆಲಸವಾದರೂ ಸರಿಯೇ.

ಅಕ್ಕನ ಮಕ್ಕಳು ಒಂದಷ್ಟು ದೊಡ್ಡವರಾಗಿ ಅಂಗನವಾಡಿ ಹೋಗಲು ಆರಂಭಿಸಿದರು. ಅಮ್ಮ ಅವರನ್ನು ಅಲ್ಲಿಗೆ ಬಿಟ್ಟು ನಂತರ ಹೊಲಗಳಲ್ಲಿನ ಒಣಗಿದ ದನದ ಸಗಣಿ ಸಂಗ್ರಹಿಸಲು ಹೋಗುತ್ತಿದ್ದರು. ಹೀಗೆ ವಾರವಿಡೀ ಸಂಗ್ರಹಿಸಿದ ಸಗಣಿಯನ್ನು ಬಕೆಡ್ ಒಂದಕ್ಕೆ 80 ರೂಪಾಯಿಯಂತೆ ಮಾರುತ್ತಿದ್ದರು. ಬೆಳಗ್ಗೆ 9 ಗಂಟೆಗೆ ಹೋದರೆ ಸಂಜೆ ನಾಲ್ಕು 4 ಗಂಟೆಗೆ ಮನೆಗೆ ಮರಳುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ಕದಳಿಪಳಂ (ಒಂದು ಬಗೆಯ ಕಳ್ಳಿ ಹಣ್ಣು) ತಿಂದು ಸುಮ್ಮನಾಗುತ್ತಿದ್ದರು.

ಇಷ್ಟು ಕಡಿಮೆ ತಿಂದರೂ ನಿಮಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತದೆ ಎಂದು ನಾನು ಅಮ್ಮನ ಬಳಿ ಕೇಳುತ್ತಿದ್ದೆ. ಆಗೆಲ್ಲ ಅವರು, "ನಾನು ಚಿಕ್ಕವಳಿದ್ದಾಗ ತುಂಬಾ ಮಾಂಸ ತಿಂದಿದ್ದೆ, ಸೊಪ್ಪು, ತರಕಾರಿ, ಮತ್ತು ದಂಟುಗಳನ್ನು ಕಾಡು ಮತ್ತು ಪೊದೆಗಳಿಂದ ತಂದು ತಿನ್ನುತ್ತಿದ್ದೆವು. ಆ ದಿನಗಳಲ್ಲಿ ನಾನು ಮನೆಯಲ್ಲಿ ತಿಂದ ಆಹಾರ ನನ್ನ ಶಕ್ತಿಯ ಮೂಲ" ಎನ್ನುತ್ತಿದ್ದರು. ಅವರಿಗೆ ಕಾಡು ಸೊಪ್ಪುಗಳು ಎಂದರೆ ಪ್ರಾಣ! ಒಮ್ಮೊಮ್ಮೆ ಅಮ್ಮ ಕೇವಲ ಅನ್ನದ ಗಂಜಿ, ಬಿಸಿನೀರು, ಮತ್ತು ಉಪ್ಪು ಮಾತ್ರ ತಿಂದು ದಿನ ಕಳೆದಿದ್ದನ್ನೂ ನೋಡಿದ್ದೇನೆ.

ಅಮ್ಮ ನನಗೆ ಹಸಿವೆಯಾಗುತ್ತಿದೆ ಎಂದಿದ್ದು ಬಹಳ ಅಪರೂಪ. ಅವರು ತನ್ನ ಮಕ್ಕಳು ಉಣ್ಣುವುದನ್ನು ಕಂಡೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ನಮ್ಮ ಮನೆಯಲ್ಲಿ ಮೂರು ನಾಯಿಗಳಿವೆ. ದಿಯಾ, ಡಿಯೋ, ಮತ್ತು ರಾಸಾತಿ ಅವುಗಳ ಹೆಸರು. ಜೊತೆಗೆ ಆಡುಗಳು ಸಹ ಇವೆ. ಅವುಗಳನ್ನು ಅವುಗಳ ಮೈಬಣ್ಣವನ್ನು ಆಧರಿಸಿ ಕರೆಯುತ್ತೇವೆ. ಈ ಪ್ರಾಣಿಗಳು ಸಹ ನಮ್ಮ ಕುಟುಂಬದಲ್ಲಿ ನಮ್ಮಷ್ಟೇ ಪ್ರೀತಿಪಾತ್ರರು. ಅಮ್ಮ ಅವುಗಳನ್ನು ನಮ್ಮನ್ನು ಕಾಳಜಿ ಮಾಡುವಷ್ಟೇ ಕಾಳಜಿ ಮಾಡುತ್ತಾರೆ. ಅವು ಕೂಡಾ ಅವರಿಗೆ ಮರಳಿ ಅಷ್ಟೇ ಪ್ರೀತಿ ತೋರಿಸುತ್ತವೆ. ದಿನವೂ ಬೆಳಗ್ಗೆ ಅಮ್ಮ ಅವುಗಳಿಗೆ ನೀರು ಕೊಟ್ಟು ಮೇವು ಹಾಕುತ್ತಾರೆ. ಆಡುಗಳಿಗೆ ಹಸಿರು ಸೊಪ್ಪು, ಮತ್ತು ಅನ್ನದ ಗಂಜಿ ನೀರನ್ನು ಹಾಕಲಾಗುತ್ತದೆ.

Left: Amma collects and sells dry cow dung to the villagers. This helped fund my education.
PHOTO • K. Ravikumar
Right: The dogs and chickens are my mother's companions while she works in the house
PHOTO • K. Ravikumar

ಎಡ: ಅಮ್ಮ ಒಣಗಿದ ದನದ ಸಗಣಿ ಸಂಗ್ರಹಿಸಿ ಊರಿನ ಜನರಿಗೆ ಮಾರುತ್ತಾರೆ. ಇದು ನನ್ನ ಓದಿಗೆ ಸಹಾಯ ಮಾಡಿದೆ. ಬಲ: ಮನೆಯಲ್ಲಿ ಕೆಲಸ ಮಾಡುವಾಗ ಅಮ್ಮನಿಗೆ ನಾಯಿ ಮತ್ತು ಕೋಳಿಗಳೇ ಜೊತೆಗಾರರು

Left: Amma taking the goats into the forest to graze.
PHOTO • K. Ravikumar
Right: Amma looks after her animals as if they are her own children.
PHOTO • K. Ravikumar

ಎಡ: ಅಮ್ಮ ಆಡುಗಳನ್ನು ಮೇಯಿಸಲು ಕಾಡಿನತ್ತ ಹೊಡೆದುಕೊಂಡು ಹೋಗುತ್ತಿದ್ದಾರೆ. ಬಲ: ಅಮ್ಮ ತನ್ನ ಜಾನುವಾರುಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾರೆ

ಅಮ್ಮ ಬಹಳ ದೈವಭಕ್ತಿ ಉಳ್ಳವರು. ಅವರಿಗೆ ನಮ್ಮ ಸಾಂಪ್ರದಾಯಿಕ ದೇವರುಗಳಿಗಿಂತಲೂ ಜೆಡಸ್ವಾಮಿ ಮತ್ತು ಅಯ್ಯಪ್ಪನ್ ದೇವರುಗಳಲ್ಲಿ ಅಪರಿಮಿತ ಭಕ್ತಿ. ವಾರಕ್ಕೊಮ್ಮೆ ಮನೆಯನ್ನು ಪೂರ್ತಿಯಾಗಿ ಸ್ವಚ್ಛಗೊಳಿಸುವ ಅಮ್ಮ ಜೆಡ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ಅಲ್ಲಿ ಅವರು ತನ್ನ ನೆಚ್ಚಿನ ದೇವರೆದುರು ತನ್ನ ಕಷ್ಡ-ಸುಖಗಳನ್ನು ತೋಡಿಕೊಳ್ಳುತ್ತಾರೆ.

ಅಮ್ಮ ತನಗಾಗಿ ಸೀರೆ ಕೊಂಡಿದ್ದನ್ನು ನಾನು ಎಂದೂ ನೋಡಿಲ್ಲ. ಅವರ ಬಳಿಯಿರುವುದು ಕೇವಲ ಎಂಟು ಸೀರೆಗಳು. ಅದು ಕೂಡಾ ನನ್ನತ್ತೆ ಮತ್ತು ಹಿರಿಯಕ್ಕ ಕೊಡಿಸಿದ್ದು. ಅವರು ಅವುಗಳನ್ನೇ ಯಾವುದೇ ದೂರಾಗಲೀ, ನಿರೀಕ್ಷೆಯಾಗಲಿ ಇಲ್ಲದೆ ಉಡುತ್ತಾರೆ.

ಹಿಂದೆ ನಮ್ಮ ಕುಟುಂಬದಲ್ಲಿನ ನಿರಂತರ ಜಗಳಗಳ ಕುರಿತು ಊರಿನ ಜನರು ಮಾತನಾಡಿಕೊಳ್ಳುತ್ತಿದ್ದರು. ಇಂದು ಅವರೆಲ್ಲ ಇದೆಲ್ಲದರ ನಡುವೆಯೂ ನಾನು ಮತ್ತು ನನ್ನ ಒಡಹುಟ್ಟಿದವರು ಇದೆಲ್ಲ ಹೋರಾಟದ ನಡುವೆಯೂ ಬೆಳೆದು ನಿಂತ ರೀತಿಯನ್ನು ನೋಡಿ ಅಚ್ಚರಿಪಡುತ್ತಾರೆ. ಈಗ ಊರಿನ ಜನರು ತನ್ನ ಕಷ್ಟಗಳನ್ನು ಮಕ್ಕಳೆದುರು ತೋರಿಸಿಕೊಳ್ಳದೆ ಬೆಳೆಸಿದ್ದಕ್ಕಾಗಿ ಅಮ್ಮನನ್ನು ಅಭಿನಂದಿಸುತ್ತಾರೆ.

ಇಂದು ಕುಳಿತು ಯೋಚಿಸುವಾಗ ಅಮ್ಮ ನನ್ನನ್ನು ಬಲವಂತವಾಗಿ ಶಾಲೆಗೆ ಕಳುಹಿಸಿದ್ದು ಒಳ್ಳೆಯದೇ ಅಯಿತು ಎನ್ನಿಸುತ್ತದೆ. ಅಂದು ನಾನು ಶಾಂತಿ ವಿಜಯ ಹೈಸ್ಕೂಲ್ ಹೋಗದೆ ಇದ್ದಿದ್ದರೆ ಇಂದು ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ. ಅಲ್ಲಿಯೇ ನಾನು ಇಂಗ್ಲಿಷ್ ಕಲಿತಿದ್ದು. ಅಮ್ಮನ ಒತ್ತಾಯ ಇರದೆ ಹೋಗಿದ್ದರೆ ನನ್ನ ಹೈಯರ್ ಸೆಕೆಂಡರಿ ಓದು ಒಂದು ಹೋರಾಟವಾಗುತ್ತಿತ್ತು.  ಅಮ್ಮನ ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಈ ಬದುಕಿಡೀ ನಾನು ಅಮ್ಮನಿಗೆ ಋಣಿ.

ಈಗ ಕಷ್ಟದ ದಿನಗಳೆಲ್ಲ ಮುಗಿದಿರುವಾಗ ಅಮ್ಮನಿಗೆ ಕಾಲು ಚಾಚಿ ಕೂರಲು ಒಂದಷ್ಟು ಸಮಯ ದೊರಕಿದೆ. ಅವರು ಹಾಗೆ ಕುಳಿತಾಗ ನಾನು ಅವರ ಪಾದಗಳನ್ನೇ ನೋಡುತ್ತೇನೆ. ಬಿಸಿಲು ಮಳೆಯೆನ್ನದೆ ಅವರ ಕಾಲುಗಳು ವರ್ಷಗಳಿಂದ ದುಡಿಯುತ್ತಲೇ ಇವೆ. ಕೆಲಸದ ಸಲುವಾಗಿ ಗಂಟೆಗಳ ಕಾಲ ನೀರಿನಲ್ಲಿ ನಿಲ್ಲಬೇಕಾಗಿ ಬಂದರೂ ಇಲ್ಲವೆನ್ನದ ಕಾಲುಗಳು ಅವು. ಅವರ ಪಾದಗಳು ಈಗಲೂ ಬಂಜರು ನೆಲದಂತಿವೆ. ಎಲ್ಲೆಲ್ಲೂ ಬಿರುಕು. ಈ ಬಿರುಕುಗಳೇ ನಮ್ಮನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ ಎನ್ನುವುದನ್ನು ಮರೆಯಲಾಗದು.

No matter how much my mother works in the water, her cracked feet look like dry, barren land
PHOTO • K. Ravikumar

ಅಮ್ಮ ನೀರಿನಲ್ಲಿ ಎಷ್ಟೇ ಕೆಲಸ ಮಾಡಿರಬಹುದು, ಆದರೆ ಇಂದಿಗೂ ಅಮ್ಮನ ಪಾದಗಳು ಹಲವು ಬಿರುಕುಗಳೊಡನೆ ಬಾಯಿಬಿಟ್ಟುಕೊಂಡಿರುವ ಬಂಜರು ನೆಲದಂತೆಯೇ ಇವೆ

ಅನುವಾದ: ಶಂಕರ. ಎನ್. ಕೆಂಚನೂರು

K. Ravikumar

ರವಿಕುಮಾರ್ . ಕೆ ತಮಿಳುನಾಡಿನ ಮುದುಮಲೈ ಹುಲಿ ಮೀಸಲು ಪ್ರದೇಶದ ಬೊಕ್ಕಪುರಂ ಎಂಬ ಹಳ್ಳಿಯಲ್ಲಿ ವಾಸಿಸುವ ಮಹತ್ವಾಕಾಂಕ್ಷೆಯ ಛಾಯಾಗ್ರಾಹಕ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ. ಪರಿ ಛಾಯಾಗ್ರಾಹಕ ಪಳನಿ ಕುಮಾರ್ ನಡೆಸುತ್ತಿರುವ ಪಳನಿ ಸ್ಟುಡಿಯೋದಲ್ಲಿ ರವಿ ಛಾಯಾಗ್ರಹಣದ ಕಲಿತರು. ತನ್ನ ಬೆಟ್ಟಕುರುಂಬ ಬುಡಕಟ್ಟು ಸಮುದಾಯದ ಜೀವನ ಮತ್ತು ಜೀವನೋಪಾಯವನ್ನು ದಾಖಲಿಸುವುದು ರವಿಯವರ ಬಯಕೆ.

Other stories by K. Ravikumar
Editor : Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Vishaka George
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru