ಕೈಯಿಂದ ಎಳೆಯುವ ರಿಕ್ಷಾಗಳು ಹೋಗುವಷ್ಟು ಕಿರಿದಾಗಿರುವ ಉತ್ತರ ಕೋಲ್ಕತ್ತಾದ ಕುಮೋರ್ತುಲಿಯ ರಸ್ತೆಗಳಲ್ಲಿ ನಾವು ವಿಗ್ರಹಗಳನ್ನು ತಯಾರಿಸುವ ಕುಂಬಾರರನ್ನು ನೋಡಬಹುದು. ಇಲ್ಲಿಂದಲೇ ಪ್ರತೀ ವರ್ಷ ಇಡೀ ಕೋಲ್ಕತ್ತಾಕ್ಕೆ ದುರ್ಗಾ ದೇವಿ ಮತ್ತು ಇತರ ದೇವತೆಗಳ ವಿಗ್ರಹಗಳು ಹೋಗುತ್ತವೆ.
ಇಲ್ಲಿ ಕಾರ್ತಿಕ್ ಪಾಲ್ ಅವರ ಸ್ವಂತ ವರ್ಕ್ಶಾಪ್ ಇದೆ. ಬಿದಿರು ಮತ್ತು ಪ್ಲಾಸ್ಟಿಕ್ ಶೀಟ್ಗಳಿಂದ ಮಾಡಿರುವ ಈ ಶೆಡ್ಗೆ 'ಬ್ರಜೇಶ್ವರ್ ಅಂಡ್ ಸನ್ಸ್' ಎಂದು ತಮ್ಮ ತಂದೆಯ ಹೆಸರಿಟ್ಟಿದ್ದಾರೆ. ಅವರು ವಿಗ್ರಹವನ್ನು ತಯಾರಿಸುವ ವಿವಿಧ ಹಂತಗಳನ್ನು ಒಳಗೊಂಡ ಸುದೀರ್ಘವಾದ ಪ್ರಕ್ರಿಯೆಯ ಬಗ್ಗೆ ನಮಗೆ ಹೇಳಿದರು. ನದಿಯ ದಡದಿಂದ ತಂದ ಗಂಗೋ ಮಠಿ ಎಂಬ ಮಣ್ಣು ಮತ್ತು ಸೆಣಬಿನ ಕಣಗಳು ಹಾಗೂ ಗಂಗೋ ಮಾಠಿಯ ಮಿಶ್ರಣವಾದ ಪಾಟ್ ಮಾಠಿಯಂತಹ ಮಣ್ಣಿನ ವಿವಿಧ ಮಿಶ್ರಣಗಳನ್ನು ಈ ವಿಗ್ರಹವನ್ನು ಮಾಡುವ ವಿವಿಧ ಹಂತಗಳಲ್ಲಿ ಬಳಸುತ್ತಾರೆ.










