"ಇದು ಶಾಲೆ" ಎಂದ ಅತುಲ್ ಭೋಸಲೆ ಅವರ ತೋರು ಬೆರಳು ಮಹಾರಾಷ್ಟ್ರದ ಗುಂಡೇಗಾಂವ್ ಗ್ರಾಮದ ಅಂಚಿನಲ್ಲಿರುವ ಬಂಜರು ಹೊಲಗಳ ಮಧ್ಯೆ ನಿಂತಿರುವ ಸಣ್ಣ, ಎರಡು ಕೋಣೆಗಳ ಕಾಂಕ್ರೀಟ್ ರಚನೆಯನ್ನು ತೋರಿಸುತ್ತಿದ್ದವು. ಈ ಹಳ್ಳಿಯ ಕೆಸರು ರಸ್ತೆಯ ಮೂಲಕ ನಡೆದುಕೊಂಡು ಹೋಗುವಾಗ ನೀವು ಅದನ್ನು ನೋಡದೆ ಇರಲಾಗದು. ಈ ದಾರಿಯ ಇನ್ನೊಂದು ಕೊನೆ ನಿಮ್ಮನ್ನು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಸಣ್ಣ ಪಾರ್ಧಿ ನೆಲೆಯ ಪ್ರದೇಶಕ್ಕೆ ಕರೆದೊಯ್ಯುತ್ತದೆ.

ನೀಲಿ ಕಿಟಕಿಗಳು, ವರ್ಣರಂಜಿತ ಕಾರ್ಟೂನ್ ಚಿತ್ರಗಳು ಮತ್ತು ಗೋಡೆಗಳ ಮೇಲೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ವರ್ಣರಂಜಿತ ಮುಖಗಳ ಸಾಲುಗಳನ್ನು ಹೊಂದಿರುವ ತಿಳಿ-ಹಳದಿ ಕಾಂಕ್ರೀಟ್ ರಚನೆಯು ನಿಮ್ಮ ಗಮನವನ್ನು ಸೆಳೆಯುತ್ತದೆ. ಇಲ್ಲಿನ 20 ಪಾರ್ಧಿ ಕುಟುಂಬಗಳ ಮನೆಗಳಾದ ಟಾರ್ಪಾಲಿನ್ ಛಾವಣಿಗಳನ್ನು ಹೊಂದಿರುವ ತಾತ್ಕಾಲಿಕ ಗುಡಿಸಲುಗಳು ಮತ್ತು ಮಣ್ಣಿನ ಮನೆಗಳಿಗೆ ವಿರುದ್ಧವಾಗಿ ಇದು ಇನ್ನೂ ಎದ್ದು ಕಾಣುತ್ತದೆ.‌

“ಅತಾ ಅಮ್ಚ್ಯಾಕಡೆ ವಿಕಾಸ್‌ ಮಂಜೆ ನಿ ಶಲಾಚ್‌ ಆಹೆ. ವಿಕಾಸಾಚಿ ನಿಶಾನಿ [ಅಭಿವೃದ್ಧಿಯ ಹೆಸರಿನಲ್ಲಿ ನಮಗೆ ಸಿಕ್ಕಿರುವ ಏಕೈಕ ಸೌಲಭ್ಯವೆಂದರೆ ಈ ಶಾಲೆ]" ಎಂದು 46 ವರ್ಷದ ಅತುಲ್ ಭೋಸಲೆ ಹೇಳುತ್ತಾರೆ. ಅವರು ಅಹ್ಮದ್‌ ನಗರ ಜಿಲ್ಲೆಯ ನಗರ ತಾಲ್ಲೂಕಿನ ಪೌಟ್ಕವಸ್ತಿ ಎನ್ನುವ ಕುಗ್ರಾಮಕ್ಕೆ ಸೇರಿದವರು.

“ದೂಸ್ರಾ ಕಾಯ್‌ ನಾಯ್.‌ ವಸ್ತಿತ್‌ ಯಾಯ್ಲಾ ರಾಸ್ತಾ ನಾಯ್‌, ಪಾನಿ ನಾಯ್‌, ಲೈಟ್‌ ನಾಯ್‌ ಕಾಯ್‌, ಪಕ್ಕಿ ಘರ್‌ ನಾಅಯಿ [ಬೇರೆ ಏನೂ ಇಲ್ಲ. ರಸ್ತೆಗಳಿಲ್ಲ. ನೀರಿಲ್ಲ. ವಿದ್ಯುತ್ ಇಲ್ಲ. ಪಕ್ಕಾ ಮನೆಗಳು ಇಲ್ಲ]. ಶಾಲೆಯು ಹತ್ತಿರದಲ್ಲಿದೆ, ಹಾಗಾಗಿ ನಮ್ಮ ಮಕ್ಕಳು ಕನಿಷ್ಠ ಓದಲು ಮತ್ತು ಬರೆಯಲು ಕಲಿಯುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. ಈ ಸಣ್ಣ ಕಲಿಕೆಯ ಸ್ಥಳದ ಬಗ್ಗೆ ಅತುಲ್ ಹೆಮ್ಮೆಪಡುತ್ತಾರೆ. ಅವರ ಮಕ್ಕಳಾದ ಸಾಹಿಲ್ ಮತ್ತು ಶಬ್ನಮ್ ಇತರ 16 ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಮಾಡುತ್ತಿರುವ ಸ್ಥಳ ಇದು - ಏಳು ಹುಡುಗಿಯರು ಮತ್ತು ಒಂಬತ್ತು ಹುಡುಗರು.

ಈಗ ಇದೇ ಶಾಲೆಯನ್ನು ರಾಜ್ಯ ಸರ್ಕಾರವು ಬೇರೆಡೆಗೆ ಸ್ಥಳಾಂತರಿಸಿ ವಿಲೀನಗೊಳಿಸಲು ಯೋಜಿಸುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಈ ಸಮುದಾಯಕ್ಕೆ ಇದು ಆಘಾತಕಾರಿ ಸುದ್ದಿ. ಅಲೆಮಾರಿ ಗುಂಪು ಮತ್ತು ಡಿನೋಟಿಫೈಡ್ ಬುಡಕಟ್ಟು ಜನಾಂಗವಾದ ಪಾರ್ಧಿ ಸಮುದಾಯನ್ನು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ.

ಈ ಬುಡಕಟ್ಟು ಜನಾಂಗವು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲದಿಂದ ತೀವ್ರ ತಾರತಮ್ಯ ಮತ್ತು ವಂಚನೆಗೆ ಒಳಗಾಗಿದೆ. 1871ರಲ್ಲಿ, ಬ್ರಿಟಿಷ್ ಆಡಳಿತವು ಸುಮಾರು 200 ಆದಿವಾಸಿ ಗುಂಪುಗಳು ಮತ್ತು ಇತರ ಜಾತಿಗಳನ್ನು ದಮನಿಸುವ ಉದ್ದೇಶದಿಂದ 'ಕ್ರಿಮಿನಲ್ ಬುಡಕಟ್ಟುಗಳ ಕಾಯ್ದೆ' (ಸಿಟಿಎ) ಜಾರಿಗೆ ತಂದಿತು . ಅದರಡಿಯಲ್ಲಿ ಪಾರ್ಧಿ ಸಮುದಾಯವನ್ನೂ ಪಟ್ಟಿ ಮಾಡಲಾಗಿತ್ತು. ಈ ಕಾಯಿದೆಯ ಮೂಲ ಕಲ್ಪನೆಯೆಂದರೆ, ಈ ಪಟ್ಟಿಯಲ್ಲಿನ ಯಾವುದೇ ಗುಂಪಿನಲ್ಲಿ ಜನಿಸಿದರೆ ನೀವು ಹುಟ್ಟಿನಿಂದಲೇ ಅಪರಾಧಿ. ಸ್ವತಂತ್ರ ಭಾರತದಲ್ಲಿ 1952ರಲ್ಲಿ ಸಿಟಿಎ ಕಾಯ್ದೆಯನ್ನು ರದ್ದುಪಡಿಸಲಾಯಿತು, ಬಲಿಪಶು ಸಮುದಾಯಗಳನ್ನು ಡಿನೋಟಿಫೈ ಮಾಡಲಾಯಿತು. ಆದರೆ ಆ ಹಳೆಯ ಕಳಂಕ ಇಂದಿಗೂ ಕಡಿಮೆಯಾಗಿಲ್ಲ. ಪಾರ್ಧಿಗಳಿಗೆ ನಿಯಮಿತ ಉದ್ಯೋಗ ಸಿಗುವುದಿಲ್ಲ. ಸಾಮಾನ್ಯ ಶಾಲೆಗಳಿಗೆ ಹಾಜರಾಗಲು ಪ್ರಯತ್ನಿಸುವ ಅವರ ಮಕ್ಕಳನ್ನು ಬೆದರಿಸಲಾಗುತ್ತದೆ ಮತ್ತು ಕೆಲವೊಮ್ಮೆ ಹೊಡೆಯಲಾಗುತ್ತದೆ.

PHOTO • Jyoti Shinoli
PHOTO • Jyoti Shinoli

ಎಡ : ಅತುಲ್ ಮತ್ತು ರೂಪಾಲಿ ಭೋಸಲೆ ತಮ್ಮ ಮಕ್ಕಳಾದ ಸಾಹಿಲ್ ಮತ್ತು ಶಬ್ನಮ್ ಅವರೊಂದಿಗೆ ಅಹ್ಮದ್ ನಗರದ ನಗರ ತಾಲ್ಲೂಕಿನ ಪೌಟ್ಕವಸ್ತಿ ಕುಗ್ರಾಮದಲ್ಲಿರುವ ತಮ್ಮ ಮನೆಯ ಮುಂದೆ . ಬಲ : ಸಾಹಿಲ್ ಮತ್ತು ಶಬ್ನಮ್ ಓದುತ್ತಿರು ಪ್ರಾಥಮಿಕ ಜಿಲ್ಲಾ ಪರಿಷತ್ ಶಾಲೆ . ʼ ದೂಸ್ರಾ ಕಾಯ್‌ ನಾಯ್.‌ ವಸ್ತಿತ್‌ ಯಾಯ್ಲಾ ರಾಸ್ತಾ ನಾಯ್‌, ಪಾನಿ ನಾಯ್‌, ಲೈಟ್‌ ನಾಯ್‌ ಕಾಯ್‌, ಪಕ್ಕಿ ಘರ್‌ ನಾಯಿ [ ಬೇರೆ ಏನೂ ಇಲ್ಲ . ರಸ್ತೆಗಳಿಲ್ಲ . ನೀರಿಲ್ಲ . ವಿದ್ಯುತ್ ಇಲ್ಲ . ಪಕ್ಕಾ ಮನೆಗಳು ಇಲ್ಲ ] ʼ ಎನ್ನುತ್ತಾರೆ ಅತುಲ್‌

ಈ ಅಂಚಿನಲ್ಲಿರುವ ಸಮುದಾಯದ ಪಾಲಿಗೆ, ಆ ಶಾಲೆಯೆಂದರೆ ಕೇವಲ ಕೇರಿಯಲ್ಲಿನ ಏಕೈಕ ಪಕ್ಕಾ ರಚನೆ ಮಾತ್ರವಲ್ಲ, ಅದು ಅದನ್ನೂ ಮೀರಿದ್ದು. ಇದು ಅವರ ಪಾಲಿಗೆ ದೊರಕಿರುವ ಮಾನವ ಅಭಿವೃದ್ಧಿಯ ಒಂದು ಅಮೂಲ್ಯ ತುಣುಕು. ಅದು ಕೇವಲ ಸರ್ಕಾರಿ ಅಭಿವೃದ್ಧಿಯ ಸಂಕೇತವಲ್ಲ. ಈ ಶಾಲೆ ಅವರ ಮಕ್ಕಳಿಗೆ ಯೋಗ್ಯವಾದ ಉದ್ಯೋಗದ ಕೊಡಿಸಬಲ್ಲ ಮಾರ್ಗ. 'ಮುಖ್ಯವಾಹಿನಿ' ಶಿಕ್ಷಣದಿಂದ ಇಷ್ಟು ದೀರ್ಘಕಾಲದವರೆಗೆ ಕ್ರೂರವಾಗಿ ಹೊರಗಿಡಲ್ಪಟ್ಟ ಒಂದು ಸಾಮಾಜಿಕ ಗುಂಪು ಮಾತ್ರವೇ ಒಂದು ಶಾಲೆ ಇಲ್ಲವಾಗುವುದೆಂದರೆ ಏನು ಎನ್ನುವುದನ್ನು ತಿಳಿಸಿ ಹೇಳಬಲ್ಲದು.

"ನನ್ನ ಮಕ್ಕಳು ಮರಾಠಿಯಲ್ಲಿ ಸ್ಪಷ್ಟವಾಗಿ ಮಾತನಾಡಬಲ್ಲರು. ಅವರು ಓದಬಲ್ಲರು. ನಮಗೆ ಅದು ಸಾಧ್ಯವಿಲ್ಲ" ಎಂದು ಅತುಲ್ ಅವರ ಪತ್ನಿ 41 ವರ್ಷದ ರೂಪಾಲಿ ಭೋಸಲೆ ಹೇಳುತ್ತಾರೆ. "ಆದರೆ ಸರ್ಕಾರವು ಶಾಲೆಯನ್ನು ಕಿತ್ತುಕೊಳ್ಳಲಿದೆ ಎಂದು ನಾನು [ಶಿಕ್ಷಕರಿಂದ] ಕೇಳಿದ್ದೇನೆ" ಎಂದು ಅವರು ಹೇಳುತ್ತಾರೆ.

ಅಪನಂಬಿಕೆ ಮತ್ತು ಆತಂಕ ಅತುಲ್ ಅವರ ಧ್ವನಿಯಲ್ಲೂ ಸಮಾನವಾಗಿ ಪ್ರತಿಧ್ವನಿಸುತ್ತದೆ. “ಅವರು ನಿಜವಾಗಿಯೂ ಹಾಗೆ ಮಾಡುತ್ತಾರೆಯೇ?” ಎಂದು ಅವರು ಕೇಳುತ್ತಾರೆ.

ದುರದೃಷ್ಟವಶಾತ್, ಸರ್ಕಾರ ಇದನ್ನು ನಿಜವಾಗಿಯೂ ಮಾಡುತ್ತದೆ. ಮಹಾರಾಷ್ಟ್ರ ಸರ್ಕಾರವು ತನ್ನ ಪ್ರಸ್ತುತ ಯೋಜನೆಗಳನ್ನು ಮುಂದುವರಿಸಿದರೆ ಪೌಟ್ಕವಸ್ತಿ ಶಾಲೆ ಮಾತ್ರವಲ್ಲ, ರಾಜ್ಯದ 14,000ಕ್ಕೂ ಹೆಚ್ಚು ಶಾಲೆಗಳು ಮುಚ್ಚುವಿಕೆ, ಸ್ಥಳಾಂತರ ಮತ್ತು ವಿಲೀನಗಳಿಗೆ ಸಾಕ್ಷಿಯಾಗಲಿವೆ.

*****

ಈ ಶಾಲೆವಯ ಹೆಸರನ್ನು ಮುಂಭಾಗದ ಗೋಡೆಯ ಮೇಲೆ ಕೆಂಪು ಬಣ್ಣದ ಪೇಂಟ್‌ ಬಳಸಿ ಮರಾಠಿ ಭಾಷೆಯಲ್ಲಿ ಪೌಟ್ಕವಸ್ತಿ ಗುಂಡೇಗಾಂವ್ ಪ್ರಾಥಮಿಕ ಜಿಲ್ಲಾ ಪರಿಷತ್ ಶಾಲೆ ಎಂದು ಬರೆದಿರುವುದನ್ನು ಕಾಣಬಹುದು.  17 ವರ್ಷಗಳ ನಂತರವೂ ಆ ಪೇಯಿಂಟ್‌ ಹಾಗೆಯೇ ಉಳಿದಿದೆ. ಭಾರತ ಸರ್ಕಾರದ ಪ್ರಮುಖ ಶಿಕ್ಷಣ ಕಾರ್ಯಕ್ರಮವಾದ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ 2007ರಲ್ಲಿ ಈ ಶಾಲೆಯನ್ನು ನಿರ್ಮಿಸಲಾಯಿತು ಮತ್ತು ಇದು ಈ ಕೇರಿಯ ಮಕ್ಕಳಿಗೆ 1ರಿಂದ 4ನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣವನ್ನು ಒದಗಿಸುತ್ತಿದೆ. ಶಾಲೆಯ ಗೋಡೆಯ ಮೇಲೆ ಆ ಶಾಲೆಯ ಪರಿಕಲ್ಪನೆಯನ್ನು ಹೀಗೆ ಬರೆಯಿಸಲಾಗಿದೆ: ಪ್ರತ್ಯೇಕ್ ಮುಲ್ ಶಾಲೇತ್ ಜಾಯಿಲ್, ಏಖಿ ಮುಲ್ ಘರಿ ನಾ ರಾಹಿಲ್ (ಪ್ರತಿ ಮಗು ಶಾಲೆಗೆ ಹೋಗುತ್ತದೆ, ಒಂದೇ ಒಂದು ಮಗುವೂ ಮನೆಯಲ್ಲಿ ಉಳಿಯುವುದಿಲ್ಲ).

ಆ ಸಮಯದಲ್ಲಿ ಇದೊಂದು ಉತ್ತಮ ಉಪಾಯವಾಗಿ ಕಂಡಿತ್ತು.

ಆದರೆ ಸೆಪ್ಟೆಂಬರ್ 21, 2023ರ ಇತ್ತೀಚಿನ ಅಧಿಕೃತ ಸುತ್ತೋಲೆಯು , ಶೈಕ್ಷಣಿಕ ಗುಣಮಟ್ಟ, 'ಸಮಗ್ರ ಅಭಿವೃದ್ಧಿ ಮತ್ತು ಮಕ್ಕಳಿಗೆ ಸಾಕಷ್ಟು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ' ಹಿತದೃಷ್ಟಿಯಿಂದ, ಕೆಲವು ಪ್ರದೇಶಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳನ್ನು ದೊಡ್ಡ 'ಕ್ಲಸ್ಟರ್ ಶಾಲೆ' ಅಥವಾ ಸಮುದಾಯ ಶಾಲೆಯಲ್ಲಿ ವಿಲೀನಗೊಳಿಸಲಾಗುವುದು ಎಂದು ಹೇಳುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕಲಂ 7ರ ಅಡಿಯಲ್ಲಿ ಸಣ್ಣ ಶಾಲೆಗಳನ್ನು ಒಂದೇ ಕ್ಲಸ್ಟರ್ ಶಾಲೆಗೆ ತರುವ ಈ ಪ್ರಕ್ರಿಯೆಯನ್ನು ಜಾರಿಗೆ ತರಲಾಗುತ್ತಿದೆ.

PHOTO • Jyoti Shinoli
PHOTO • Jyoti Shinoli

ಶಾಲೆಯ ತರಗತಿಯ ಗೋಡೆಗಳ ಮೇಲೆ ಭಾರ ತದ ಸ್ವಾತಂತ್ರ್ಯ ಹೋರಾಟಗಾರರ ( ಎಡ ) ಮುಖಗಳನ್ನು ಸಾಲಾಗಿ ಚಿತ್ರಿಸಲಾಗಿದೆ . ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ 2007 ರಲ್ಲಿ ನಿರ್ಮಿಸಲಾದ ಶಾಲೆಯ ಗೋಡೆಯ ಮೇಲೆ ʼ ಪ್ರ ತ್ಯೇ ಕ್ ಮುಲ್ ಶಾ ಲೇತ್ ಜಾಯಿಲ್ , ಏಖಿ ಮುಲ್ ಘರಿ ನಾ ರಾಹಿಲ್ [ ಪ್ರತಿ ಮಗು ಶಾಲೆಗೆ ಹೋಗುತ್ತದೆ , ಒಂದೇ ಒಂದು ಮಗುವೂ ಮನೆಯಲ್ಲಿ ಉಳಿಯುವುದಿಲ್ಲ ] ʼ ಎಂಬ ಘೋಷಣೆಯನ್ನು ಬರೆಯಲಾಗಿದೆ

ಪೌಟ್ಕವಸ್ತಿ ಸರ್ಕಾರಿ ಜಿಲ್ಲಾ ಪರಿಷದ್‌ ಶಾಲೆಯ ಪ್ರಾಂಶುಪಾಲರಾದ ಕುಸಾಲ್ಕರ್ ಗಂಗಾರಾಮ್ ಅವರಿಗೆ ತಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಒಟ್ಟು ಸಂಖ್ಯೆಯನ್ನು ಸೂಚಿಸುವಂತೆ ಸರ್ಕಾರ ಈಗಾಗಲೇ ಸೂಚಿಸಿದೆ. ಅವರು ನೀಡುವ ಅಂಕಿ-ಸಂಖ್ಯೆಗಳನ್ನು ಅವಲಂಬಿಸಿ ಸರ್ಕಾರವು ಅದನ್ನು ಕ್ಲಸ್ಟರ್ ಶಾಲೆಯಾಗಿ ವಿಲೀನಗೊಳಿಸುವ ಸಾಧ್ಯತೆಯನ್ನು ನಿರ್ಣಯಿಸಲಿದೆ. ಈ ಕುರಿತು ಅವರೂ ಆತಂಕಿತರಾಗಿದ್ದಾರೆ, “"ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಸಂಖ್ಯೆಗಳು, ಇಂಗ್ಲಿಷ್-ಮರಾಠಿ ವರ್ಣಮಾಲೆಗಳು, ಕವಿತೆಗಳು. ಅವರು ಓದಬಲ್ಲರು.

"ನಮಗೆ ಶಾಲೆಯಲ್ಲಿ ಶೌಚಾಲಯಗಳಿಲ್ಲ, ಕುಡಿಯುವ ನೀರಿನ ನಲ್ಲಿಗಳಿಲ್ಲ" ಎಂದು ಅವರು ಬಹುತೇಕ ತಪ್ಪಿತಸ್ಥ ಭಾವದಲ್ಲಿ ಹೇಳುತ್ತಾರೆ. "ಆದರೆ ಈ ಸೌಲಭ್ಯಕ್ಕೆ ಹಣವನ್ನು ಖರ್ಚು ಮಾಡುವುದಕ್ಕೆ ಸಂಪೂರ್ಣವಾಗಿ ಹೊಸ, ದೊಡ್ಡ ರಚನೆಯನ್ನು ನಿರ್ಮಿಸುವುದಕ್ಕಿಂತ ಕಡಿಮೆ ವೆಚ್ಚವಾಗುತ್ತದೆ. ಮನೇಮಾಲಾ ವಸ್ತಿ ಶಾಲೆ ಮತ್ತು ಇತರ ಕೆಲವು ಶಾಲೆಗಳಲ್ಲಿಯೂ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಇವೆಲ್ಲವನ್ನೂ ವಿಲೀನಗೊಳಿಸುವುದು ಕಾರ್ಯಸಾಧ್ಯವಲ್ಲ. ಈ ಶಾಲೆಯು ಇಲ್ಲಿ, ಮಕ್ಕಳಿಗೆ ಹತ್ತಿರದಲ್ಲೇ ಇರಬೇಕು", ಎಂದು ಅವರು ಹೇಳುತ್ತಾರೆ, ಅವರ ಧ್ವನಿ ಈಗ ಅವರ ಆಲೋಚನೆಗಳಷ್ಟೇ ಸ್ಪಷ್ಟವಾಗಿತ್ತು.

"ಶಿಕ್ಷಕರಾದ ನಾವು ಈ ಮಕ್ಕಳಲ್ಲಿ ಕಲಿಕೆಯ ಅಭ್ಯಾಸವನ್ನು ಬೆಳೆಸಲು ಕಠಿಣ ಪರಿಶ್ರಮವನ್ನು ಹಾಕಿದ್ದೇವೆ" ಎಂದು ಗಂಗಾರಾಮ್ ಹೇಳುತ್ತಾರೆ. "ಸರ್ಕಾರಿ ಜಿಲ್ಲಾ ಪರಿಷದ್‌ ಶಾಲೆ ನಡಿಗೆಯ ದೂರದ ಆಚೆಗಿದ್ದರೆ, ಈ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುತ್ತಾರೆ" ಎಂದು ಅವರು ಹೇಳುತ್ತಾರೆ.

ಹೊಸ ಕ್ಲಸ್ಟರ್ ಶಾಲೆಯ ದೂರವು "ಬಸ್ ಪ್ರಯಾಣದ ಮೂಲಕ ಹೋಗುವುದಾದರೆ ಅದು 40 ನಿಮಿಷಗಳಿಗಿಂತ ಕಡಿಮೆ ಅವಧಿಯ ದಾರಿಯಾಗಿರಬೇಕು" ಮತ್ತು ಸರ್ಕಾರ ಮತ್ತು ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಧಿಯಿಂದ ಉಚಿತ ಬಸ್ ಪ್ರಯಾಣವನ್ನು ಒದಗಿಸಲಾಗುವುದು ಎಂದು ಅಧಿಕೃತ ಸುತ್ತೋಲೆಯಲ್ಲಿ ತಿಳಿಸಲಾಗಿದೆ. "ಅಂತರದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. 40 ನಿಮಿಷಗಳ ಅರ್ಥವೇನು? ನಿಖರವಾಗಿ ಎಷ್ಟು ದೂರದಲ್ಲಿ? ಇದು ಖಂಡಿತವಾಗಿಯೂ ಒಂದು ಕಿಲೋಮೀಟರ್ ಗಿಂತಲೂ ಹೆಚ್ಚು ಇರುತ್ತದೆ" ಎಂದು ಕುಸಾಲ್ಕರ್ ಹೇಳಿದರು. ಉಚಿತ ಬಸ್ ಸೇವೆಗಳ ಭರವಸೆ ಅವರಿಗೆ ಮನವರಿಕೆಯಾಗುವಂತೆ ಕಾಣುತ್ತಿಲ್ಲ.

"ಹೈಸ್ಕೂಲ್ ಈ ಪ್ರದೇಶದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಮಕ್ಕಳು ಅಲ್ಲಿಗೆ ಹೋಗಲು ನಿರ್ಜನ ರಸ್ತೆಗಳ ಮೂಲಕ ನಡೆಯಬೇಕು ಮತ್ತು ಅವರಲ್ಲಿ ಅನೇಕರು, ವಿಶೇಷವಾಗಿ ಹುಡುಗಿಯರು ಸುರಕ್ಷತೆಯ ಕಳವಳದಿಂದಾಗಿ ಶಾಲೆಯನ್ನು ಬಿಡುತ್ತಾರೆ. ಉಚಿತ ಬಸ್ ಪ್ರಯಾಣ ಎಲ್ಲಿದೆ?” ಎಂದು ಗಂಗಾರಾಮ್ ಪ್ರಶ್ನಿಸುತ್ತಾರೆ. ಕಳೆದ ವರ್ಷ, ಏಳೆಂಟು ವಿದ್ಯಾರ್ಥಿಗಳು 4ನೇ ತರಗತಿಯ ನಂತರ ತಮ್ಮ ಓದನ್ನು ಮುಂದುವರಿಸಲಿಲ್ಲ ಎಂದು ಅವರು ಹೇಳುತ್ತಾರೆ. ಅವರು ಈಗ ತಮ್ಮ ಹೆತ್ತವರೊಂದಿಗೆ ಕೆಲಸಕ್ಕೆ ಹೋಗುತ್ತಾರೆ.

ಸಾರ್ವಜನಿಕ ಸಾರಿಗೆಯ ಕೊರತೆ ಮತ್ತು ಮನೆ ಮತ್ತು ಶಾಲೆಯ ನಡುವಿನ ಅಂತರವೇ ದೊಡ್ಡ ಸವಾಲು ಎಂದು ನೀವು ಭಾವಿಸಬಹುದು, ಆದರೆ ಇನ್ನೂ ದೊಡ್ಡ ಸಮಸ್ಯೆಗಳು ಇಲ್ಲಿವೆ. ಈ ವಿದ್ಯಾರ್ಥಿಗಳ ಪೋಷಕರು ಕೆಲಸಕ್ಕೆ ಹೋಗಬೇಕು - ಮತ್ತು ಆಗಾಗ ಅದನ್ನು ಹುಡುಕಿಕೊಂಡು ದೂರದ ಊರುಗಳಿಗೆ ವಲಸೆ ಹೋಗುತ್ತಾರೆ. ಮಳೆಗಾಲದಲ್ಲಿ, ಅವರಲ್ಲಿ ಹೆಚ್ಚಿನವರು ಹತ್ತಿರದ ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಾರೆ. ಮತ್ತು ಕೆಲವೊಮ್ಮೆ ಹತ್ತಿರದಲ್ಲಿ ಕೆಲಸ ಸಿಗುವುದಿಲ್ಲ. ವರ್ಷದ ಉಳಿದ ದಿನಗಳಲ್ಲಿ, ಅವರು 34 ಕಿ.ಮೀ ದೂರದಲ್ಲಿರುವ ಅಹ್ಮದ್‌ನಗರ ಪಟ್ಟಣದ ನಿರ್ಮಾಣ ಸ್ಥಳಗಳಲ್ಲಿ ಕೆಲಸವನ್ನು ಹುಡುಕುತ್ತಾರೆ.

"ಇಲ್ಲಿ ಸರ್ಕಾರಿ ಬಸ್ಸುಗಳು ಅಥವಾ ಶೇರಿಂಗ್ ಜೀಪ್‌ ಸೇವೆ ಲಭ್ಯವಿಲ್ಲ. ಕೆಲಸಕ್ಕೆ ಹೋಗಲು ಯಾವುದಾದರೂ ವಾಹನ ಹುಡುಕಿಕೊಂಡು ನಾವು ಮುಖ್ಯ ರಸ್ತೆಗೆ ಹೋಗಲು 8-9 ಕಿಲೋಮೀಟರ್ ನಡೆಯುತ್ತೇವೆ" ಎಂದು ಅತುಲ್ ಹೇಳುತ್ತಾರೆ. "ನೀವು ಸಮಯಕ್ಕೆ ಸರಿಯಾಗಿ ಎಂದರೆ ಬೆಳಿಗ್ಗೆ 6 ಅಥವಾ 7ರೊಳಗೆ ಆ ಲೇಬರ್ ನಾಕಾದಲ್ಲಿ ಇರಬೇಕು. ನಮ್ಮ ಮಕ್ಕಳು ದೂರದ ಶಾಲೆಗೆ ಹೋಗಬೇಕಾಗಿ ಬಂದರೆ ಅದು ನಮ್ಮ ಪಾಲಿಗೆ ಕಠಿಣ ಆಯ್ಕೆ" ಎಂದು ರೂಪಾಲಿ ಹೇಳುತ್ತಾರೆ. "ನಾವು ಇಡೀ ವರ್ಷ ಪ್ರತಿದಿನ, ಕೆಲಸವನ್ನು ಹುಡುಕಬೇಕು." ರೂಪಾಲಿ ಮತ್ತು ಅತುಲ್ ಇಬ್ಬರೂ ಒಟ್ಟಾಗಿ ದಿನಕ್ಕೆ 400-450 ರೂಪಾಯಿಗಳಿಗಿಂತ ಹೆಚ್ಚು ಸಂಪಾದಿಸುವುದಿಲ್ಲ - ಮತ್ತು ಅದು ಸುಮಾರು 150 ದಿನಗಳಷ್ಟು ಅವಧಿಗೆ. ಹೀಗಾಗಿ ವರ್ಷದ ಉಳಿದ ದಿನಗಳಲ್ಲಿ ಬದುಕು ನಡೆಸಲು ಎಲ್ಲಿ ಸಾಧ್ಯವೋ ಅಲ್ಲಿ ಹೆಚ್ಚಿನ ಕೆಲಸವನ್ನು ಹುಡುಕುವುದು ಅತ್ಯಗತ್ಯ.

PHOTO • Jyoti Shinoli
PHOTO • Jyoti Shinoli

ತಾತ್ಕಾಲಿಕ ಗುಡಿಸಲುಗಳು ಮತ್ತು ಟಾರ್ಪಾಲಿನ್ ಛಾವಣಿಗಳನ್ನು ಹೊಂದಿರುವ ಮಣ್ಣಿನ ಮನೆಗಳು ಪೌಟ್ಕವಸ್ತಿಯ 20 ಪಾರ್ಧಿ ಕುಟುಂಬಗಳ ವಸತಿ ವ್ಯವಸ್ಥೆ . ಈ ಅಂಚಿನಲ್ಲಿರುವ ಸಮುದಾಯ ದ ಪಾಲಿಗೆ, ಆ ಶಾಲೆಯೆಂದರೆ ಕೇವಲ ಕೇರಿಯಲ್ಲಿನ ಏಕೈಕ ಪಕ್ಕಾ ರಚನೆ ಮಾತ್ರವಲ್ಲ, ಅದು ಅದನ್ನೂ ಮೀರಿದ್ದು. ಇದು ಅವರ ಪಾಲಿಗೆ ದೊರಕಿರುವ ಮಾನವ ಅಭಿವೃದ್ಧಿಯ ಒಂದು ಅಮೂಲ್ಯ ತುಣುಕು

ಎನ್ಇಪಿ 2020 ಕಾಯ್ದೆಯ ದಾಖಲೆಯು ಸಣ್ಣ ಶಾಲೆಗಳನ್ನು ನಿರ್ವಹಿಸುವುದು ಸರ್ಕಾರಕ್ಕೆ ಕಷ್ಟ ಎಂದು ಹೇಳುತ್ತದೆ. ಅವುಗಳ ಗಾತ್ರವು ಅವುಗಳನ್ನು "ಶಿಕ್ಷಕರ ನಿಯೋಜನೆ ಮತ್ತು ನಿರ್ಣಾಯಕ ಭೌತಿಕ ಸಂಪನ್ಮೂಲಗಳನ್ನು ಒದಗಿಸುವ ವಿಷಯದಲ್ಲಿ, ಆರ್ಥಿಕವಾಗಿ ಅಧೀನವಾಗಿಸುತ್ತವೆ ಮತ್ತು ಕಾರ್ಯನಿರ್ವಹಣೆಯಲ್ಲಿ ಸಂಕೀರ್ಣವಾಗಿಸುತ್ತದೆ." "ಭೌಗೋಳಿಕ ಪ್ರಸರಣ, ಸವಾಲಿನ ಪ್ರವೇಶ ಪರಿಸ್ಥಿತಿಗಳು ಮತ್ತು ಹೆಚ್ಚಿನ ಸಂಖ್ಯೆಯ ಶಾಲೆಗಳು ಎಲ್ಲಾ ಶಾಲೆಗಳನ್ನು ಸಮಾನವಾಗಿ ತಲುಪುವುದನ್ನು ಕಷ್ಟಕರವಾಗಿಸುವುದರಿಂದ ಅವು ಆಡಳಿತ ಮತ್ತು ನಿರ್ವಹಣೆಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತವೆ.”

ಸಣ್ಣ ಶಾಲೆಗಳು ವಿವಿಧ ಸವಾಲುಗಳನ್ನು ಎದುರಿಸಬಹುದಾದರೂ, ಅವುಗಳ ವಿಲೀನವೂ ಪರಿಣಾಮಕಾರಿ ಪರಿಹಾರಗಳನ್ನು ನೀಡುವಂತೆ ಕಂಡುಬರುವುದಿಲ್ಲ. ಪುಣೆಯ ಪನ್ಶೆಟ್ ಗ್ರಾಮದಲ್ಲಿ ಮಹಾರಾಷ್ಟ್ರ ಸರ್ಕಾರದ ಆರಂಭಿಕ ಪ್ರಯತ್ನದಲ್ಲಿ ಇದು ಸ್ಪಷ್ಟವಾಗಿದೆ. ಸರ್ಕಾರವು ಈ ಉಪಕ್ರಮದ ರಾಜ್ಯಾದ್ಯಂತ ವಿಸ್ತರಣೆಗೆ ಪ್ರತಿಪಾದಿಸಿದರೂ, ವೆಲ್ಹೆ ತಾಲೂಕಿನಲ್ಲಿ ಕ್ಲಸ್ಟರ್ ಶಾಲೆಯಾಗಿ ರೂಪಾಂತರಗೊಂಡ ಮೊದಲ ಸಂಸ್ಥೆಯು ಸಿಬ್ಬಂದಿ ಕೊರತೆ ಮತ್ತು ಅಸಮರ್ಪಕ ಮೂಲ ಸೌಕರ್ಯಗಳೊಂದಿಗೆ ಹೋರಾಡುತ್ತಿದೆ ಎಂದು ವರದಿಯಾಗಿದೆ .

"ಗುಡ್ಡಗಾಡು ಪ್ರದೇಶಗಳು ಮತ್ತು ಪ್ರತ್ಯೇಕ ಸ್ಥಳಗಳಲ್ಲಿನ ಸಣ್ಣ ಶಾಲೆಗಳು ನಿಜಕ್ಕೂ ಗಂಭೀರ ವಿಷಯವಾಗಿದೆ. ಆದರೆ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಆ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡಲು ಬೇರೆ ಯಾವುದೇ ಮಾರ್ಗವಿಲ್ಲ ಎಂದು ತೋರುತ್ತದೆ" ಎಂದು ಶೈಕ್ಷಣಿಕ ಅರ್ಥಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಪ್ರಸಿದ್ಧ ವಿದ್ವಾಂಸ ಜಂಧ್ಯಾಲ ಬಿ ಜಿ ತಿಲಕ್ ಹೇಳುತ್ತಾರೆ. ಪರಿ ಅವರಿಗೆ ಇಮೇಲ್ ಮಾಡಿದ ಪ್ರಶ್ನಾವಳಿಗೆ ಅವರು ಉತ್ತರಿಸಿದ್ದರು.

"ವಿಲೀನಗಳು ಶಿಕ್ಷಣ ಹಕ್ಕಿನ (ಆರ್‌ಟಿಇ) ಮಾನದಂಡಗಳಿಗೆ ವಿರುದ್ಧವಾಗಿವೆ" ಎಂದು ಅವರು ಹೇಳುತ್ತಾರೆ. 1ರಿಂದ 5ನೇ ತರಗತಿಯ ಮಕ್ಕಳಿಗೆ, ಶಾಲೆಯು ಅವರ ನೆರೆಹೊರೆಯಿಂದ ಒಂದು ಕಿಲೋಮೀಟರ್ ಒಳಗೆ ಇರಬೇಕು ಎಂದು ಕಾಯ್ದೆ ಆದೇಶಿಸುತ್ತದೆ. ಮತ್ತು ಶಾಲೆಯು 6-11 ವರ್ಷ ವಯಸ್ಸಿನ ಕನಿಷ್ಠ 20 ಮಕ್ಕಳನ್ನು ಹೊಂದಿರಬಹುದು.

“ಕೇವಲ 2-3 ಶಿಕ್ಷಕರನ್ನು ಹೊಂದಿರುವ ಮತ್ತು ಕೇವಲ 5-10 ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು (ಆರ್‌ಟಿಇ) ಅಡಿಯಲ್ಲಿ ಖಾತರಿಪಡಿಸಿದ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ 'ಪೂರ್ಣ' ಶಾಲೆಯನ್ನು ನಿರ್ವಹಿಸುವುದು ಅತಾರ್ಕಿಕವೆಂದು ತೋರುತ್ತದೆ. ಈ ಕಾಳಜಿಯನ್ನು ಆಡಳಿತಗಾರರು ಆಗಾಗ್ಗೆ ಎತ್ತಿ ತೋರಿಸುತ್ತಾರೆ. ಹೊಸ ಪರಿಹಾರಗಳನ್ನು ಪರಿಗಣಿಸುವುದು ಅತ್ಯಗತ್ಯ. ಈ ವಿಲೀನಗಳು ಆಕರ್ಷಕವಾಗಿ ಕಂಡರೂ, ಅವು ಪರಿಣಾಮಕಾರಿ ಪರಿಹಾರವಲ್ಲ ಎಂದು ತಿಲಕ್ ವಿವರಿಸುತ್ತಾರೆ.

*****

ಆದರೆ ಮಹಾರಾಷ್ಟ್ರ ರಾಜ್ಯ ಶಿಕ್ಷಣ ಇಲಾಖೆಯ ಮಟ್ಟಿಗೆ ಈ ಪ್ರಶ್ನೆ ಪೌಟ್ಕವಸ್ತಿ ಶಾಲೆಗೆ ಸೀಮಿತವಾಗಿಲ್ಲ. 2023ರ ಸುತ್ತೋಲೆಯ ಪ್ರಕಾರ, '1ರಿಂದ 20' ವಿದ್ಯಾರ್ಥಿಗಳನ್ನು ಹೊಂದಿರುವ '14,783 ಶಾಲೆಗಳು' ರಾಜ್ಯಾದ್ಯಂತ ಒಟ್ಟು 1,85,467 ವಿದ್ಯಾರ್ಥಿಗಳನ್ನು ಹೊಂದಿದ್ದು, ಅವುಗಳನ್ನು ದೊಡ್ಡ ಕ್ಲಸ್ಟರ್‌ಗಳಾಗಿ ವಿಲೀನಗೊಳಿಸಬೇಕಾಗಿದೆ. ಈ ವಿದ್ಯಾರ್ಥಿಗಳ ಪಾಲಿಗೆ, ಅನಿಶ್ಚಿತತೆ ದೊಡ್ಡ ಮಟ್ಟದಲ್ಲಿ ಎದುರಾಗಿದೆ.

PHOTO • Jyoti Shinoli

ನಗರ ತಾಲ್ಲೂಕಿನ ವಾಲುಂಜ್ ಗ್ರಾಮದ ಬಳಿಯ ಪಾರ್ಧಿ ಕೇರಿಯ ಮಕ್ಕಳು ತಮ್ಮ ಶಾಲಾ ಶಿಕ್ಷಕರಿಗಾಗಿ ಕಾಯುತ್ತಿದ್ದಾರೆ . ' ನಮ್ಮ ಶಾಲೆ 10 ಗಂಟೆಗೆ ಪ್ರಾರಂಭವಾಗುತ್ತದೆ . ನಾವು ಅದಕ್ಕೂ ಮೊದಲು ಬರುತ್ತೇವೆ ' ಎಂದು ಏಳು ವರ್ಷದ ಆಯೇಷಾ ಹೇಳುತ್ತಾ ಳೆ

"ಈ ಶಾಲೆಗಳು ವಿವಿಧ ಕಾರಣಗಳಿಗಾಗಿ ಚಿಕ್ಕವು" ಎಂದು ಸಣ್ಣ ಶಾಲೆಗಳ ಇತಿಹಾಸದ ಬಗ್ಗೆ ಮಾತನಾಡುತ್ತಾ ಗೀತಾ ಮಹಾಶಬ್ಡೆ ಹೇಳುತ್ತಾರೆ. ಅವರು ನವನಿರ್ಮಾಣ ಲರ್ನಿಂಗ್ ಫೌಂಡೇಶನ್ ಎನ್ನುವ ಸರ್ಕಾರೇತರ ಸಂಸ್ಥೆಯ ನಿರ್ದೇಶಕರು.

2000 ಇಸವಿಯಲ್ಲಿ, ಮಹಾರಾಷ್ಟ್ರ ಸರ್ಕಾರವು ವಸ್ತಿ ಶಾಲಾ ಯೋಜನೆಯನ್ನು ಪ್ರಾರಂಭಿಸಿತು, ಇದು ಸರ್ವ ಶಿಕ್ಷಣ ಅಭಿಯಾನದ ಭಾಗವಾಗಿ ಪೌಟ್ಕವಸ್ತಿಯಂತಹ ಸಣ್ಣ ಸಮುದಾಯ ಸ್ಥಳಗಳಲ್ಲಿ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮ. ಶಿಕ್ಷಣವನ್ನು ಪಡೆಯದ ಮಕ್ಕಳನ್ನು ಗುರುತಿಸುವುದು ಮತ್ತು ಅವರ ಸ್ವಂತ ಹಳ್ಳಿಗಳಲ್ಲಿ ಅಥವಾ ತಲುಪಲು ಕಷ್ಟಕರವಾದ ಪರ್ವತ ಪ್ರದೇಶಗಳಲ್ಲಿ ಅವರಿಗಾಗಿ ಹೊಸ ಶಾಲೆಗಳನ್ನು ರಚಿಸುವುದು ಈ ಸರ್ಕಾರದ ಉಪಕ್ರಮದ ಉದ್ದೇಶವಾಗಿತ್ತು. ಈ ಉಪಕ್ರಮವನ್ನು ಮಹಾತ್ಮಾ ಫುಲೆ ಶಿಕ್ಷಣ ಹಾಮಿ ಕೇಂದ್ರ ಯೋಜನೆ ಎಂದೂ ಕರೆಯಲಾಗುತ್ತದೆ” ಎಂದು ಗೀತಾ ವಿವರಿಸುತ್ತಾರೆ.

ಈ ಯೋಜನೆಯ ಪ್ರಕಾರ, ವಸ್ತಿ  ಶಾಲೆಯಲ್ಲಿ 1ರಿಂದ 4ನೇ ತರಗತಿಯವರೆಗೆ ಸುಮಾರು 15 ವಿದ್ಯಾರ್ಥಿಗಳು ಇರಬಹುದು. ಜಿಲ್ಲಾ ಪರಿಷತ್ ಅಥವಾ ಪುರಸಭೆಯ ಕಾರ್ಯಕಾರಿ ಸಮಿತಿಯ ಅನುಮೋದನೆಯೊಂದಿಗೆ ಸಂಖ್ಯೆಗಳನ್ನು ಸಡಿಲಿಸಬಹುದು. ಅಸಾಧಾರಣ ಸಂದರ್ಭಗಳಲ್ಲಿ, ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತಲೂ ಕಡಿಮೆ ಇರಬಹುದು.

ಅದರಂತೆ, ರಾಜ್ಯ ಸರ್ಕಾರವು 2000 ಮತ್ತು 2007ರ ನಡುವೆ ಸುಮಾರು ಎಂಟು ಸಾವಿರ ವಸ್ತಿ ಶಾಲೆಗಳನ್ನು ಪ್ರಾರಂಭಿಸಿತು.

ಅದೇನೇ ಇದ್ದರೂ, ಮಾರ್ಚ್ 2008ರಲ್ಲಿ, ಸರ್ಕಾರವು ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತು, ಅದು ಇದನ್ನು 'ತಾತ್ಕಾಲಿಕ ವ್ಯವಸ್ಥೆ' ಎಂದು ಕರೆದಿತು.

ಈ ಶಾಲೆಗಳ ಸ್ಥಿತಿಯನ್ನು ನಿರ್ಣಯಿಸಲು ಮತ್ತು ಶಿಫಾರಸುಗಳನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರವು ಸಮಿತಿಯನ್ನು ಸ್ಥಾಪಿಸಿತು ಎಂದು ಗೀತಾ ಹೇಳುತ್ತಾರೆ. ಈ ಸಮಿತಿಯ ಸದಸ್ಯರಾಗಿ, ಕೆಲವು ಶಾಲೆಗಳನ್ನು ಪ್ರಮಾಣಿತ ಪ್ರಾಥಮಿಕ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಅದು ಸೂಚಿಸಿದೆ ಎಂದು ಅವರು ಗಮನಿಸಿದರು. 2008ರಿಂದ 2011ರವರೆಗೆ, ರಾಜ್ಯ ಸರ್ಕಾರವು 6,852 ವಸ್ತಿ ಶಾಲೆಗಳನ್ನು ಪ್ರಾಥಮಿಕ ಶಾಲೆಗಳಾಗಿ ಕ್ರಮಬದ್ಧಗೊಳಿಸಲು ನಿರ್ಧರಿಸಿತು ಮತ್ತು 686 ಇತರ ಶಾಲೆಗಳನ್ನು ಮುಚ್ಚಿತು.

PHOTO • Jyoti Shinoli

ಪಾರ್ಧಿ ಕೇರಿ ಗಳಲ್ಲಿನ ಮಕ್ಕಳ ಪೋಷಕರು ಮನೆಯಿಂದ ದೂರವಿರಬೇಕಾಗುತ್ತದೆ , ಮತ್ತು ಹೆಣ್ಣುಮಕ್ಕಳು ಅಡುಗೆ ಮತ್ತು ಮನೆಯನ್ನು ನೋಡಿಕೊಳ್ಳು ವುದು ಮತ್ತು ಕಿರಿಯ ಒಡಹುಟ್ಟಿದವರ ನ್ನು ನೋಡಿಕೊಳ್ಳುವುದಕ್ಕೆ ಸೀಮಿತರಾಗುತ್ತಾರೆ

ವಸ್ತಿ ಶಾಲಾ ಯೋಜನೆಯಡಿ 2000ರಿಂದ 2007ರವರೆಗೆ ರಾಜ್ಯ ಸರ್ಕಾರವು ಸರಿಸುಮಾರು ಎಂಟು ಸಾವಿರ ವಸ್ತಿ ಶಾಲೆಗಳನ್ನು ಸ್ಥಾಪಿಸಿತು. ಆದರೆ, ಮಾರ್ಚ್ 2008ರಲ್ಲಿ, ಸರ್ಕಾರವು ಯೋಜನೆಯನ್ನು ಕೊನೆಗೊಳಿಸಲು ನಿರ್ಧರಿಸಿತು, ಇದನ್ನು 'ತಾತ್ಕಾಲಿಕ ವ್ಯವಸ್ಥೆ' ಎಂದು ಉಲ್ಲೇಖಿಸಿತು

ಇಂದಿನಿಂದ ಇನ್ನೂ ಹತ್ತು ವರ್ಷಗಳ ನಂತರ, ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಬಹುದು. ಎನ್ಇಪಿ 2020 ಚೌಕಟ್ಟಿನ ಅಡಿಯಲ್ಲಿ ಕ್ರಮಬದ್ಧಗೊಳಿಸಲಾದ ಶಾಲೆಗಳನ್ನು ಸಹ ಮುಚ್ಚುವ ಸಾಧ್ಯತೆಯತ್ತ ಮಾತುಕತೆ ಈಗ ತಿರುಗಿದೆ. ಗೀತಾ, "ಕ್ರಮಬದ್ಧಗೊಳಿಸಿದ ಶಾಲೆಗಳನ್ನು ಮುಚ್ಚಲು ಯಾವುದೇ ಸಮರ್ಥನೆ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ಸಮುದಾಯವಿದೆ, ಮತ್ತು ಆ ಪ್ರದೇಶಗಳಲ್ಲಿನ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಯಾವುದೇ ಪರ್ಯಾಯ ಮಾರ್ಗಗಳಿಲ್ಲ” ಎಂದು ಹೇಳುತ್ತಾರೆ.

"ಪಡ್ಘಮ್ ವರ್ತಿ ತಿಪ್ರಿ ಪಡ್ಲಿ, ತದಮ್ ತಟ್ಟಾಡ್ ತದಮ್... (ಡೋಲಿನ ಮೇಲೆ ಹೊಡೆದಾಗ ತದಮ್ ತಟ್ಟಾಡ್ ತದಮ್ ಎಂದು ಸದ್ದು ಬರುತ್ತದೆ). ಅತುಲ್ ಅವರ ಎಂಟು ವರ್ಷದ ಮಗಳು ಶಬ್ನಮ್ ತನ್ನ ಕಲಿಕೆಯನ್ನು ಪ್ರದರ್ಶಿಸಲು ಸಿಕ್ಕ ಅವಕಾಶದಿಂದ ಉತ್ಸುಕಳಾಗಿದ್ದಳು. "ನಾನು ಕವಿತೆಗಳನ್ನು ಓದಲು ಇಷ್ಟಪಡುತ್ತೇನೆ" ಎಂದು ಅವಳು ಹೇಳುತ್ತಾ ತನ್ನ 3ನೇ ತರಗತಿಯ ಮರಾಠಿ ಪಠ್ಯಪುಸ್ತಕದಿಂದ ಪಾಠವೊಂದನ್ನು ನಮ್ಮೆದುರು ಓದಿದಳು.

"ನನಗೆ ಕಳೆಯುವ ಲೆಕ್ಕ ಬರುತ್ತದೆ, ಮೈನಸ್, ಪ್ಲಸ್ ಎಲ್ಲ ಬರುತ್ತದೆ. ನನಗೆ 5ರವರೆಗೆ ಮಗ್ಗಿ ಗೊತ್ತು. ಪಾಚ್ ಈಕೆ ಪಾಚ್, ಪಾಚ್ ದೂನೆ ದಾಹ...." [ಐದು ಒಂದ್ಲ ಐದು; ಐದು ಎರಡ್ಲ ಹತ್ತು] ಸಾಹಿಲ್ ತನ್ನ ಸಹೋದರಿಯನ್ನು ಮೀರಿಸುವ ಪ್ರಯತ್ನದಲ್ಲಿ ಮಧ್ಯಪ್ರವೇಶಿದ.

ಈ ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ಇಷ್ಟ, ಮತ್ತು ಅವರ ಉತ್ಸಾಹವು ಕವಿತೆ ಮತ್ತು ಗಣಿತವನ್ನು ಮೀರಿದ್ದು. "ಶಾಲೆಯಲ್ಲಿ ನಮ್ಮ ವಸ್ತಿಯ [ಕೇರಿ] ಎಲ್ಲಾ ಮಕ್ಕಳೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ, ಮತ್ತು ನಮ್ಮ ವಿರಾಮದ ಸಮಯದಲ್ಲಿ ನಾವು ಲಾಂಗ್ಡಿ [ಕುಂಟಾಬಿಲ್ಲೆ ಆಟ] ಮತ್ತು ಖೋ-ಖೋದಂತಹ ಆಟಗಳಲ್ಲಿ ತೊಡಗುತ್ತೇವೆ. ಹೀಗಾಗಿ ಶಾಲೆಯೆಂದರೆ ಇಷ್ಟ" ಎಂದು ಸಾಹಿಲ್ ಹೇಳುತ್ತಾನೆ. ಪೌಟ್ಕವಸ್ತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳೂ ಶಾಲೆಯ ಮೆಟ್ಟಿಲು ಹತ್ತಿದ ಮೊದಲ ತಲೆಮಾರು.

ತಮ್ಮ ಮಣ್ಣಿನ ಗುಡಿಸಲಿನ ಹೊರಗೆ ಕುಳಿತಿರುವ ಅವರ ತಾಯಿ ರೂಪಾಲಿಯವರಿಗೆ ಶಿಕ್ಷಣದ ಬಗೆಗಿನ ಮಕ್ಕಳ ಉತ್ಸಾಹವನ್ನು ಗಮನಿಸುವುದು ಬಹಳ ಸಂತೋಷವನ್ನು ತರುತ್ತದೆ. ಆದರೆ ಶಾಲೆಯನ್ನು ಮುಚ್ಚುವ ಬೆದರಿಕೆಯು ಅವರ ಸಂತೋಷದ ಮೇಲೆ ಕರಿ ನೆರಳು ಬೀರುತ್ತಿದೆ. ರೂಪಾಲಿಗಾಗಲೀ ಅಥವಾ ಅವರ ಪತಿ ಅತುಲ್ ಅವರಿಗಾಗಲೀ ಶಾಲೆಗೆ ಹೋಗುವ ಅವಕಾಶ ಸಿಕ್ಕಿಲ್ಲ. ಪಾರ್ಧಿ ಸಮುದಾಯವು ಶಿಕ್ಷಣ ಸೌಲಭ್ಯ ಪಡೆಯುವಲ್ಲಿ ನಿರಂತರವಾಗಿ ಗಮನಾರ್ಹ ಅಡೆತಡೆಗಳನ್ನು ಎದುರಿಸುತ್ತಿದೆ. 2011ರ ಜನಗಣತಿಯ ಪ್ರಕಾರ, ಮಹಾರಾಷ್ಟ್ರದಲ್ಲಿ 223,527 ಪಾರ್ಧಿ ಸಮುದಾಯದ ಜನರಿದ್ದಾರೆ. ವರ್ಷಗಳಲ್ಲಿ ಹಲವಾರು ಸರ್ಕಾರಿ ಪ್ರಯತ್ನಗಳ ಹೊರತಾಗಿಯೂ, ಪಾರ್ಧಿ ಸಮುದಾಯದ ಅನೇಕ ಮಕ್ಕಳು ಇನ್ನೂ ಪ್ರಾಥಮಿಕ ಶಿಕ್ಷಣಕ್ಕೆ ಪ್ರವೇಶವನ್ನು ಪಡೆದಿಲ್ಲ.

PHOTO • Jyoti Shinoli

' ನಾನು ಪದ್ಯಗಳನ್ನು ಓದುವು ದೆಂದರೆ ಇಷ್ಟ ' ಎಂದು ಎಂಟು ವರ್ಷದ ಶಬ್ನಮ್ ( ಕೆಂಪು ಸ್ಕರ್ಟ್ ) ಹೇಳುತ್ತಾ ಳೆ . ಪೌಟ್ಕವಸ್ತಿ ಗುಂಡೇಗಾಂವ್ ಜಿಲ್ಲಾ ಪರಿಷತ್ ಶಾಲೆಯ ಮಕ್ಕಳೆಲ್ಲರೂ ಶಾಲೆಯ ಮೆಟ್ಟಿಲು ಹತ್ತಿದ ಕುಟುಂಬದ ಮೊದಲನೇ ತಲೆಮಾರು

*****

"ಇಲ್ಲಿ ಯಾರೂ ಶಾಲೆಗೆ ಹೋಗುವುದಿಲ್ಲ" ಎಂದು 10 ವರ್ಷದ ಬಾಲಕ ಆಕಾಶ್ ಬಾರ್ಡೆ ಅಸಡ್ಡೆಯಿಂದ ಹೇಳುತ್ತಾನೆ. ಅವನು ಪೌಟ್ಕವಸ್ತಿಯಿಂದ ಸುಮಾರು 76 ಕಿಲೋಮೀಟರ್ ದೂರದಲ್ಲಿರುವ ಶಿರೂರ್ ತಾಲ್ಲೂಕಿನೊಳಗಿನ ಇನ್ನೊಂದು ಪಾರ್ಧಿ ಕೇರಿಯಲ್ಲಿರುವುದು. ಹತ್ತಿರದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಕುಕಾಡಿ ನದಿಯ ದಡದಲ್ಲಿದೆ. ಇದುವ ಅವನ ಮನೆಯಿರುವ ಶಿಂಡೋಡಿ ಕಾಲೋನಿಯಿಂದ ಮೂರು ಕಿಲೋಮೀಟರ್ ದೂರದಲ್ಲಿವೆ, ನಡೆದುಕೊಂಡು ಹೋಗಲು ಬಹಳ ದೂರ. "ನಾನು ಕೆಲವೊಮ್ಮೆ ಮೀನು ಹಿಡಿಯುತ್ತೇನೆ. ಮೀನುಗಾರಿಕೆ ನನಗೆ ಇಷ್ಟ" ಎಂದು ಅವನು ಹೇಳುತ್ತಾನೆ. "ನನ್ನ ಪೋಷಕರು ಇಟ್ಟಿಗೆ ಗೂಡುಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ, ಆಗಾಗ ಮೂರರಿಂದ ನಾಲ್ಕು ತಿಂಗಳವರೆಗೆ ಕೂಲಿ ಕೆಲಸಕ್ಕಾಗಿ ನನ್ನನ್ನು ಬಿಟ್ಟು ದೂರದ ಊರುಗಳಿಗೆ ಹೋಗುತ್ತಾರೆ. ಅವರು ನನ್ನ ಬಳಿ ಶಾಲೆಯ ಕುರಿತು ಪ್ರಸ್ತಾಪಿಸಿದ್ದು ನನಗೆ ನೆನಪಿಲ್ಲ, ಅಥವಾ ನನಗೂ ಆ ಕುರಿತು ಆಸಕ್ತಿಯಿಲ್ಲ."

ಈ ಕೇರಿಯ 5-14 ವಯೋಮಾನದ 21 ಮಕ್ಕಳಲ್ಲಿ ಯಾರೂ ಶಾಲೆಗೆ ಹೋಗುವುದಿಲ್ಲ.

ಮಹಾರಾಷ್ಟ್ರದ ಅಲೆಮಾರಿ ಮತ್ತು ಡಿನೋಟಿಫೈಡ್ ಟ್ರೈಬ್ಸ್ ಜನಾಂಗಗಳ ಶೈಕ್ಷಣಿಕ ಸ್ಥಿತಿ ಕುರಿತಾದ 2015ರ ಸಮೀಕ್ಷೆಯ ಪ್ರಕಾರ, 2006-07 ಮತ್ತು 2013-14ರ ನಡುವೆ, ಈ ಗುಂಪುಗಳ ಒಟ್ಟು 2.2 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗಳಿಗೆ ದಾಖಲಾಗಿಲ್ಲ.

PHOTO • Jyoti Shinoli
PHOTO • Jyoti Shinoli

ಪೌಟ್ಕವಸ್ತಿಯಿಂದ ಸುಮಾರು 76 ಕಿ . ಮೀ ದೂರದಲ್ಲಿರುವ ಶಿರೂರ್ ತಾಲ್ಲೂಕಿನ ಮತ್ತೊಂದು ಪಾರ್ಧಿ ಕುಗ್ರಾಮವಾದ ಶಿಂ ದೋ ಡಿ ಕಾಲೋನಿ 10 ವರ್ಷದ ಆಕಾಶ್ ಬಾರ್ಡೆ ( ಕೆಂಪು ಅಂಗಿ ) ' ಇಲ್ಲಿ ಯಾರೂ ಶಾಲೆಗೆ ಹೋಗುವುದಿಲ್ಲ ' ಎನ್ನುತ್ತಾನೆ. ಶಿಂ ದೋ ಡಿಯ ಮಕ್ಕಳು ಹೆಚ್ಚಿನ ಸಮಯವನ್ನು ನದಿ ಮತ್ತು ದೋಣಿಯ ಬಳಿ ಆಡುತ್ತಾ ಕಳೆಯುತ್ತಾರೆ. ಈ ಕೇರಿಯ 5-14 ವಯೋಮಾನದ 21 ಮಕ್ಕಳಲ್ಲಿ ಯಾರೂ ಶಾಲೆಗೆ ಹೋಗುವುದಿಲ್ಲ

PHOTO • Jyoti Shinoli

' ನನಗೆ ಶಾಲೆಯ ಬಗ್ಗೆ ಗೊತ್ತಿಲ್ಲ . ಅದರ ಬಗ್ಗೆ ಎಂ ದೂ ಯೋಚಿ ಸಿ ಲ್ಲ . ಸಮವಸ್ತ್ರದಲ್ಲಿ ರುವ ಹುಡುಗಿಯರನ್ನು ನೋಡಿದ್ದೇನೆ . ಅವರು ಚೆನ್ನಾಗಿ ಕಾಣುತ್ತಾರೆ ' ಎಂದು ಸಾಹಿಲ್ ಮತ್ತು ಟ್ವಿಂಕಲ್ ಅವರೊಂದಿಗೆ ಆಡು ತ್ತಿದ್ದ ಅಶ್ವಿನಿ ( ಮಧ್ಯ ) ಹೇಳುತ್ತಾ ಳೆ

"ಈ ಮಕ್ಕಳಲ್ಲಿ ಅನೇಕರ ಪೋಷಕರು ಹೊರಗೆ, ಮುಂಬೈ ಅಥವಾ ಪುಣೆಯಲ್ಲಿ ಕೆಲಸ ಮಾಡುತ್ತಾರೆ. ಮಕ್ಕಳು ಒಬ್ಬಂಟಿಯಾಗಿ ಉಳಿಯುತ್ತಾರೆ, ಅವರಲ್ಲಿ ಕೆಲವರು ತಮ್ಮ ಹೆತ್ತವರೊಂದಿಗೆ ಹೋಗುತ್ತಾರೆ", ಎಂದು 58 ವರ್ಷದ ಕಾಂತಾಬಾಯಿ ಬಾರ್ಡೆ ಹೇಳುತ್ತಾರೆ. ಕಾಂತಾಬಾಯಿ ಸಹ ತನ್ನ ಒಂಬತ್ತು ವರ್ಷದ ಮೊಮ್ಮಕ್ಕಳಾದ ಅಶ್ವಿನಿ ಮತ್ತು ಆರು ವರ್ಷದ ಟ್ವಿಂಕಲ್ ಇಬ್ಬರನ್ನೂ ಬಿಟ್ಟು ತನ್ನ ಮಗ ಮತ್ತು ಸೊಸೆಯೊಂದಿಗೆ ಸಾಂಗ್ಲಿಯ ಕಬ್ಬಿನ ಹೊಲಗಳಲ್ಲಿ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಇಬ್ಬರೂ ಬಾಲಕಿಯರೂ ಶಾಲೆಗೆ ದಾಖಲಾಗಿಲ್ಲ.

ಟ್ವಿಂಕಲ್ ತಾನು ಕಬ್ಬಿನ ಹೊಲದಲ್ಲಿ ಜನಿಸಿದ್ದಾಗಿ ಹೇಳುತ್ತಾಳೆ. ಆಕೆಯ ಕುಟುಂಬವು ಅವಳನ್ನು ಶಾಲೆಗೆ ದಾಖಲಿಸಲು ಪ್ರಯತ್ನಿಸಿದಾಗ, ದಾಖ್ಲಾ (ಜನನ ಪ್ರಮಾಣಪತ್ರ) ನೀಡುವಂತೆ ಕೇಳಲಾಯಿತು. ಕಾಂತಾಬಾಯಿ ವಿವರಿಸುತ್ತಾರೆ, "ಯಾವುದೇ ಆಶಾ ಕಾರ್ಯಕರ್ತೆ ಈ ಪ್ರದೇಶಕ್ಕೆ ಭೇಟಿ ನೀಡುವುದಿಲ್ಲ. ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಎಲ್ಲರೂ ಮನೆಯಲ್ಲಿಯೇ ಹೆರಿಗೆಯಾಗಿ ಹುಟ್ಟುತ್ತಾರೆ. ನಮ್ಮ ಬಳಿ ದಾಖ್ಲಾ ಇಲ್ಲ."

"ನಾನು ಹೆಚ್ಚಾಗಿ ನನ್ನ ಸಹೋದರಿಯೊಂದಿಗೆ ಏಕಾಂಗಿಯಾಗಿ ಇರುತ್ತೇನೆ" ಎಂದು ಯುವ ಅಶ್ವಿನಿ ಹೇಳುತ್ತಾರೆ. "ಮೋಠಿ ಆಯಿ (ಅಜ್ಜಿ) ನಮ್ಮನ್ನು ನೋಡಿಕೊಳ್ಳಲು ಕೆಲವು ವಾರಗಳವರೆಗೆ ಬರುತ್ತಾರೆ. ನಾನು ಎಲ್ಲ ಅಡುಗೆ ಅಡುಗೆ ಗೊತ್ತು, ಭಕ್ರಿ ಕೂಡ. ನನಗೆ ಶಾಲೆಯ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಎಂದಿಗೂ ಯೋಚಿಸಿಲ್ಲ. ನಾನು ಸಮವಸ್ತ್ರದಲ್ಲಿ ಹುಡುಗಿಯರನ್ನು ನೋಡಿದ್ದೇನೆ. ಅವರು ಸುಂದರವಾಗಿ ಕಾಣುತ್ತಾರೆ" ಎಂದು ಅವರು ನಗುತ್ತಾ ಹೇಳುತ್ತಾಳೆ.

2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್ಎಸ್ಎಸ್) ಪ್ರಕಾರ, ಶಿಂದೋಡಿಯ ಆಕಾಶ್, ಅಶ್ವಿನಿ ಮತ್ತು ಟ್ವಿಂಕಲ್ ಅವರಂತೆ, ಗ್ರಾಮೀಣ ಭಾರತದಾದ್ಯಂತ 3-35 ವರ್ಷದೊಳಗಿನ ಸುಮಾರು 13 ಪ್ರತಿಶತ ಪುರುಷರು ಮತ್ತು 19 ಪ್ರತಿಶತ ಮಹಿಳೆಯರು ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾಗಿಲ್ಲ.

"ಜನರು ನಮ್ಮನ್ನು ಚೋರ್ (ಕಳ್ಳ) ಎಂದು ಕರೆಯುತ್ತಾರೆ. ಅವರು ನಮ್ಮನ್ನು ಗಲೀಜು ಎಂದು ಕರೆಯುತ್ತಾರೆ ಮತ್ತು ಅವರ ಹಳ್ಳಿಗೆ ನಮ್ಮನ್ನು ಬಿಡುವುದಿಲ್ಲ. ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ?” ಎಂದು ಕೇಳುವ ಕಾಂತಾಬಾಯಿ ತನ್ನ ಸಮುದಾಯದ ಮಕ್ಕಳಿಗೆ ಶಾಲೆಗಳು ಸುರಕ್ಷಿತ ಸ್ಥಳ ಎಂದು ಭಾವಿಸುವುದಿಲ್ಲ.

ಕ್ರಿಮಿನಲ್ ಬುಡಕಟ್ಟುಗಳ ಕಾಯ್ದೆಯನ್ನು ರದ್ದುಪಡಿಸಿದ ದಶಕಗಳ ನಂತರವೂ, ಪಾರ್ಧಿಗಳು ಆ ಹಣೆಪಟ್ಟಿಯ ಹೊರೆಯನ್ನು ಹೊರುತ್ತಲೇ ಇದ್ದಾರೆ. (ಓದಿ: ಮಾಡದ ತಪ್ಪಿಗೆ ಮುಗಿಯದ ಶಿಕ್ಷೆ ). ಜನನ ಪ್ರಮಾಣಪತ್ರಗಳು, ಆಧಾರ್ ಕಾರ್ಡ್, ಮತದಾರರ ಚೀಟಿ ಮತ್ತು ಹೆಚ್ಚಿನವುಗಳಂತಹ ಪ್ರಮುಖ ದಾಖಲೆಗಳ ಕೊರತೆಯಿಂದಾಗಿ ಅವರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ (ಓದಿ: 'ಒಂದು ದಿನ ನನ್ನ ಮೊಮ್ಮಕ್ಕಳು ಅವರ ಸ್ವಂತ ಮನೆಯನ್ನು ಕಟ್ಟಲಿದ್ದಾರೆ ' ಮತ್ತು ಪ್ರಾಸ್ಪರಿಟಿ ಹೆದ್ದಾರಿಯಿಂದಾಗಿ ನೆಲಸಮವಾದ ಫಾನ್ಸೆ ಪಾರ್ಧಿ ಶಾಲೆ ). ಮತ್ತು ಸಮುದಾಯದ ಮಕ್ಕಳು ಶಾಲೆಗೆ ಬಂದರೂ ಸಹ ಶಾಲೆಯಿಂದ ಹೊರಗುಳಿಯುವಂತೆ ಮಾಡುವುದೂ ಇದೇ ಕಳಂಕ.

PHOTO • Jyoti Shinoli
PHOTO • Jyoti Shinoli

ಎಡ : ಕಾಂತಾಬಾಯಿ ( ನೇರಳೆ ಬಣ್ಣದ ಸೀರೆ ) ತನ್ನ ಸಮುದಾಯದ ಮಕ್ಕಳಿಗೆ ಶಾಲೆಗಳನ್ನು ಸುರಕ್ಷಿತ ಸ್ಥಳವೆಂದು ಭಾವಿಸು ವುದಿಲ್ಲ : ʼ ಜನ ರು ನಮ್ಮನ್ನು ಚೋರ್ ( ಕಳ್ಳ ) ಎಂದು ಕರೆಯುತ್ತಾರೆ . ಅವರು ನಮ್ಮನ್ನು ಗಲೀಜು ಎಂದು ಕರೆಯುತ್ತಾರೆ ಮತ್ತು ಅವರ ಹಳ್ಳಿ ಗೆ ನಮ್ಮನ್ನು ಬಿಡು ವುದಿಲ್ಲ . ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಕಾಂತಾಬಾಯಿ ತನ್ನ ಸಮುದಾಯದ ಮಕ್ಕಳಿಗೆ ಶಾಲೆಗ ಳು ಸುರಕ್ಷಿತ ಸ್ಥಳ ಎಂದು ಭಾವಿಸುವುದಿಲ್ಲ. ಬಲ : ದಿವ್ಯಾ ಮಾಲಿ , ಮೀನಾ ಪವಾರ್ ಮತ್ತು ಮೋನಿಕಾ ಧುಲೆ ( ಎಡದಿಂದ ಬಲಕ್ಕೆ ) ಶಾಲೆ ಯ ಮೆಟ್ಟಿಲು ಹತ್ತಿದವರಲ್ಲ . ' ಮೀನಾಳ ಮದುವೆ ನಿಶ್ಚಯವಾಗಿದೆ . ಅವ ಳಿಗೆ ವರ್ಷ ಮದುವೆಯಾ ಗಲಿದೆ . ನಮ್ಮ ಪೋಷಕರು ಸಹ ಗಂಡು ಹುಡುಕುತ್ತಿದ್ದಾರೆ . ಬಹುಶಃ ಶಾಲೆ ನಮ್ಮ ಪಾಲಿಗಿ ಲ್ಲ ' ಎಂದು ಮೋನಿಕಾ ಹೇಳುತ್ತಾ ಳೆ

ಮಹಾರಾಷ್ಟ್ರದ 25 ಜಿಲ್ಲೆಗಳ ಡಿನೋಟಿಫೈಡ್, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಜನಾಂಗಗಳ ಬಗ್ಗೆ ಹೈದರಾಬಾದ್ನ ಕೌನ್ಸಿಲ್ ಫಾರ್ ಸೋಷಿಯಲ್ ಡೆವಲಪ್ಮೆಂಟ್ ನಡೆಸಿದ 2017ರ ಸಮೀಕ್ಷೆಯು , 199 ಪಾರ್ಧಿ ಕುಟುಂಬಗಳಲ್ಲಿ 38 ಪ್ರತಿಶತದಷ್ಟು ಮಕ್ಕಳು ತಾರತಮ್ಯ, ಭಾಷಾ ಅಡೆತಡೆಗಳು, ಮದುವೆ ಮತ್ತು ಶಿಕ್ಷಣದ ಪ್ರಾಮುಖ್ಯತೆಯ ಕುರಿತಾದ ಕಡಿಮೆ ಜಾಗೃತಿಯಿಂದಾಗಿ ಪ್ರಾಥಮಿಕ ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಹೇಳುತ್ತದೆ.

“ಶಿಕ್ಷಣ ನಮ್ಮ ಮಕ್ಕಳಿಗಲ್ಲ. ಸಮಾಜ ಈಗಲೂ ನಮ್ಮನ್ನು ಒಪ್ಪಿಕೊಂಡಿಲ್ಲ. ಇದು ಬದಲಾಗಬಹುದೆನ್ನುವ ನಂಬಿಕೆಯೂ ನನಗಿಲ್ಲ” ಎಂದು ಕಾಂತಾಬಾಯಿ ನೋವಿನಿಂದ ಹೇಳುತ್ತಾರೆ.

ದುರಂತವೆಂದರೆ ಅಂಕಿಅಂಶಗಳೂ ಅವರ ಮಾತನ್ನೇ ಸಮರ್ಥಿಸುತ್ತವೆ. 1919ರಲ್ಲಿ ಮಹಾರಾಷ್ಟ್ರದ ಮಹಾನ್ ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ ಕರ್ಮವೀರ್ ಭೌರಾವ್ ಪಾಟೀಲ್ ಶಿಕ್ಷಣವನ್ನು ರೈಯತ್ (ಜನಸಾಮಾನ್ಯರ) ಬಳಿ ಕೊಂಡೊಯ್ಯಲು ನಿರ್ಧರಿಸಿದರು ಮತ್ತು ವಸ್ತಿ ತಿಥೆ ಶಾಲೆ (ಪ್ರತಿ ಕೇರಿಯಲ್ಲಿ ಒಂದು ಶಾಲೆ) ಗಾಗಿ ಪ್ರತಿಪಾದಿಸಿದರು. ಇಂದು, 105 ವರ್ಷಗಳ ನಂತರವೂ ಶಾಲೆಯೊಂದು ಇನ್ನೂ ಶಿಂದೋಡಿಯನ್ನು ತಲುಪಿಲ್ಲ. ಪೌಟ್ಕವಸ್ತಿಯನ್ನು ತಲುಪಲು ಒಬ್ಬರು 90 ವರ್ಷಗಳನ್ನು ತೆಗೆದುಕೊಂಡಿತು - ಮತ್ತು ಕಾನೂನು ಬಿರುಗಾಳಿಯ ಹಿನ್ನೆಲೆಯಲ್ಲಿ ಅದು ಈಗ ಕಣ್ಮರೆಯಾಗುವ ಅಪಾಯದಲ್ಲಿದೆ, ಸಮುದಾಯದ ಮಕ್ಕಳು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ.

ಜಿಲ್ಲಾ ಪಂಚಾಯತ್ ಪೌಟ್ಕವಸ್ತಿ ಶಾಲೆಯ ಗೋಡೆಯ ಮೇಲೆ ಹೀಗೆ ಬರೆಯಲಾಗಿದೆ:

ಶಿಕ್ಷಣ ಹಕ್ಕಾಚಿ ಕಿಮ್ಯಾ ನ್ಯಾರಿ,
ಶಿಕ್ಷಣ ಗಂಗಾ ಆತಾ ಘರೋಘರಿ.

(ಶಿಕ್ಷಣ ಹಕ್ಕೆನ್ನುವ ಮಾಂತ್ರಿಕ ಶಕ್ತಿ ಶಿಕ್ಷಣವನ್ನು ಮನೆ ಮನೆಗೂ ತರುತ್ತಿದೆ.)

ಆ ಮಾತುಗಳು ನಿಜವಾಗಲು ಎಷ್ಟು ಸಮಯ ಬೇಕು?

ಅನುವಾದ: ಶಂಕರ. ಎನ್. ಕೆಂಚನೂರು

ಜ್ಯೋತಿ ಶಿನೋಲಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Other stories by Jyoti Shinoli

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru