“ನನ್ನ ಕುಟುಂಬದವರಷ್ಟೇ ನನ್ನನ್ನು ಸ್ವೀಕರಿಸಲು ಹಿಂಜರಿದರು. ಈ ಮೀನುಗಾರರಲ್ಲ. ದೋಣಿ ಮಾಲಿಕರು ನನ್ನನ್ನು ಕೈರಾಸಿ (ಅದೃಷ್ಟದ ಕೈ) ಯಾಗಿ ನೋಡುತ್ತಾರೆ” ಎನ್ನುತ್ತಾರೆ ಮನೀಷಾ. ಟ್ರಾನ್ಸ್‌ ಮಹಿಳೆಯಾಗಿ ಗುರುತಿಸಿಕೊಳ್ಳುವ ಅವರು, ಈ ಬಂದರಿನಲ್ಲಿ ಮೀನು ಹರಾಜುಗಾರರಾಗಿ ಕೆಲಸ ಮಾಡುತ್ತಾರೆ. “ಅವರು ನನ್ನನ್ನು ತಿರಸ್ಕರಿಸಲಿಲ್ಲ. ಅವರಿಗೆ ನಾನು ಯಾರೆನ್ನುವುದು ಸಮಸ್ಯೆಯಲ್ಲ. ಅವರಿಗೆ ಬೇಕಿರುವುದು ಅವರ ಮೀನು ಮಾರಾಟವಾಗುವುದು ಮಾತ್ರ” ಎಂದು ಅವರು ಸಂತೋಷದಿಂದ ಹೇಳುತ್ತಾರೆ.

ಕಡಲೂರು ಓಲ್ಡ್ ಟೌನ್ ಬಂದರಿನಲ್ಲಿ ಕೆಲಸ ಮಾಡುತ್ತಿರುವ ಸುಮಾರು 30 ಮಹಿಳಾ ಹರಾಜುದಾರರಲ್ಲಿ 37 ವರ್ಷದ ಮನೀಷಾ ಕೂಡ ಒಬ್ಬರು. "ನಾನು ದೊಡ್ಡ ದನಿಯಲ್ಲಿ ಹರಾಜು ಮಾಡಲು ಸಾಧ್ಯವಿರುವ ಕಾರಣ ಹೆಚ್ಚಿನ ಬೆಲೆಯನ್ನು ಪಡೆಯಬಹುದು. ಅನೇಕರು ನನ್ನಿಂದ ಮೀನುಗಳನ್ನು ಖರೀದಿಸಲು ಬಯಸುತ್ತಾರೆ" ಎಂದು ಅವರು ಹೇಳುತ್ತಾರೆ, ಖರೀದಿದಾರರನ್ನು ಕರೆಯುವಾಗ ಅವರ ಧ್ವನಿ ಇತರ ಮಾರಾಟಗಾರರಿಗಿಂತ ಎತ್ತರದ ಸ್ತರದಲ್ಲಿರುತ್ತದೆ.

ಮನೀಷಾ ಅವರು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲೇ ಮೀನು ಹರಾಜುಗಾರ್ತಿ ಮತ್ತು ಒಣ ಮೀನು ವ್ಯಾಪಾರಿಯಾಗಿದ್ದರು. ಈ ಜೀವನೋಪಾಯಕ್ಕಾಗಿ ಅವರು ಪ್ರತಿದಿನ ದೋಣಿ ಮಾಲೀಕರು ಮತ್ತು ಮೀನುಗಾರರೊಂದಿಗೆ ಸಂವಹನ ನಡೆಸಬೇಕಾಗುತ್ತದೆ. "ಅವರಿಗೆ ನನ್ನೊಂದಿಗೆ ಯಾವುದೇ ಸಮಸ್ಯೆ ಇಲ್ಲ. ನಾನು ಇತರರಿಗಿಂತ ಉತ್ತಮವಾಗಿ ಮೀನುಗಳನ್ನು ಹರಾಜು ಹಾಕುತ್ತೇನೆ."

ದೋಣಿ ಮಾಲೀಕರ ನೈತಿಕ ಬೆಂಬಲವಿಲ್ಲದೆ ಹೋಗಿದ್ದರೆ ತಾನು 2012ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ಅವರಲ್ಲಿ ಅವರ ನಂಬಿಗಸ್ತ ಆಪ್ತ ಸ್ನೇಹಿತ ಕೂಡಾ ಸೇರಿದ್ದಾರೆ, ಮನೀಷಾ ಅವರನ್ನು ಆಪರೇಷನ್‌ ಮುಗಿದ ನಂತರ ಸ್ಥಳೀಯ ದೇವಾಲಯದಲ್ಲಿ ವಿವಾಹವಾದರು.

Maneesha (right) is a fish auctioneer and dry fish trader. Seen here close to Cuddalore Old Town harbour (left) where she is one among 30 women doing this job
PHOTO • M. Palani Kumar
PHOTO • M. Palani Kumar

ಎಡ: ಮನೀಷಾ ಮೀನು ಹರಾಜುದಾರರು ಮತ್ತು ಒಣ ಮೀನು ವ್ಯಾಪಾರಿ. ಕಡಲೂರು ಓಲ್ಡ್ ಟೌನ್ ಬಂದರಿನ ಸಮೀಪ ನಿಂತಿದ್ದಾರೆ. ಇಲ್ಲಿನ ಮೂವತ್ತು ಹರಾಜುದಾರ ಮಹಿಳೆಯರಲ್ಲಿ ಅವರೂ ಒಬ್ಬರು

No one discriminates against her, says Maneesha, a trans woman who interacts every day with boat owners and fishermen: 'They don’t have a problem '
PHOTO • M. Palani Kumar
No one discriminates against her, says Maneesha, a trans woman who interacts every day with boat owners and fishermen: 'They don’t have a problem '
PHOTO • M. Palani Kumar

ದೋಣಿ ಮಾಲೀಕರು ಮತ್ತು ಮೀನುಗಾರರೊಂದಿಗೆ ಪ್ರತಿದಿನ ಸಂವಹನ ನಡೆಸುವ ಟ್ರಾನ್ಸ್‌ ಮಹಿಳೆ ವ್ಯಕ್ತಿ ಮನೀಷಾ ಹೇಳುತ್ತಾರೆ: 'ಅವರಿಗೆ ನನ್ನ ಕುರಿತು ಯಾವುದೇ ದೂರುಗಳಿಲ್ಲ'

ತನ್ನ 17ನೇ ವಯಸ್ಸಿನಲ್ಲಿ ಒಣ ಮೀನು ವ್ಯಾಪಾರ ಆರಂಭಿಸಿದ ಮನೀಷಾ ನಂತರ ವ್ಯಾಪಾರದಲ್ಲಿನ ಕೌಶಲಗಳನ್ನು ಕರಗತ ಮಾಡಿಕೊಂಡು ಒಂದು ದಶಕದ ನಂತರ ತನ್ನದೇ ಆದ ವ್ಯವಹಾರವನ್ನು ಆರಂಭಿಸಿದರು. “ಈ ವ್ಯವಹಾರದ ಮೂಲಕ ನಾನು ಅನೇಕ ಜನರ ಸಂಪರ್ಕಕ್ಕೆ ಬಂದೆ. ಅವರಲ್ಲಿ ಕೆಲವರು ಬಿಸಿಲಿನಲ್ಲಿ ಮೀನು ಒಣಗಿಸುವ ಬದಲು ಹರಾಜಿನ ಕೆಲಸ ಮಾಡುವಂತೆ ಸಲಹೆ ನೀಡಿದರು. ನಿಧಾನವಾಗಿ ನಾನು ಆ ಕೆಲಸದತ್ತ ವಾಲಿದೆ.”

ಮೀನು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು, ಹರಾಜುದಾರರು ದೋಣಿ ಮಾಲಿಕರಿಗೆ ಮುಂಗಡ ನೀಡಬೇಕಿರುತ್ತದೆ. ಈ ಬಂದರಿನಲ್ಲಿ ಹರಾಜು ಕೂಗುವವರಲ್ಲಿ 90 ಪ್ರತಿಶತದಷ್ಟು ಮಹಿಳೆಯರಿದ್ದಾರೆ. “ನಾನು ನಾಲ್ಕು ದೋಣಿಗಳ ಮೀನನ್ನು ಹರಾಜು ಮಾಡುತ್ತಿದ್ದೇನೆ. ಎಲ್ಲವೂ ರಿಂಗ್‌ ಸೀನ್‌ ಬಲೆ ಬಳಸುವ ದೋಣಿಗಳು. ಅವರಿಗೆ ತಲಾ ಮೂರು-ನಾಲ್ಕು ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಕೊಟ್ಟು ನನ್ನ ವ್ಯವಹಾರ ಆರಂಭಿಸಿದೆ. ನನ್ನ ಬಳಿ ಒಂದಷ್ಟು ಉಳಿತಾಯದ ಹಣವಿತ್ತು. ಉಳಿದಿದ್ದನ್ನು ನನ್ನ ಸ್ನೇಹಿತರಿಂದ ಸಾಲ ಪಡೆದೆ.” ಎನ್ನುವ ಮನೀಷಾ "ಒಣ ಮೀನು ವ್ಯಾಪಾರ ಮತ್ತು ಹರಾಜು ಎರಡರಿಂದಲೂ ಬಂದ ಲಾಭವನ್ನು ಸಾಲವನ್ನು ಮರುಪಾವತಿಸಲು ಬಳಸಿದೆ" ಎನ್ನುತ್ತಾರೆ.

ದೋಣಿಗಳು ಮೀನಿನೊಂದಿಗೆ ಬಂದರಿನಲ್ಲಿ ಲಂಗರು ಹಾಕಿದಾಗ ಮನೀಷಾ ಅವರಂತ ಹರಾಜುದಾರರ ಕೆಲಸ ಆರಂಭಗೊಳ್ಳುತ್ತದೆ. ಇಲ್ಲಿನ ಹೆಚ್ಚಿನ ದೋಣಿಗಳು ರಿಂಗ್‌ ಸೀನ್‌ ಬಲೆಗಳನ್ನು ಬಳಸುತ್ತವೆ (ಸುರುಕುವಲೈ/ ತಳ ಸಣ್ಣದಾಗುತ್ತ ಹೋಗುವ ಬಲೆ). ಕೆಲವೊಮ್ಮೆ ಮುಖ್ಯವಾಗಿ ಕುಟುಂಬ ಘಟಕಗಳು ನಿರ್ವಹಿಸುವ ಸಣ್ಣ ಫೈಬರ್-ಬಲವರ್ಧಿತ ದೋಣಿಗಳ ಗುಂಪು ಸಹ ಮೀನುಗಳನ್ನು ತರುತ್ತವೆ.

"ಮೀನು ಹಾಳಾಗಿದ್ದರೆ, ಅದನ್ನು ಕೋಳಿ ಆಹಾರ ತಯಾರಿಕೆಗಾಗಿ ಒಣಗಿಸುತ್ತೇನೆ, ಇಲ್ಲದಿದ್ದರೆ ಅಡುಗೆಗೆ ಬಳಸಬಹುದಾದ ಒಣ ಮೀನುಗಳನ್ನು ತಯಾರಿಸುತ್ತೇನೆ" ಎಂದು ಅವರು ವಿವರಿಸುತ್ತಾರೆ. ಬಂದ ಲಾಭವನ್ನು ವ್ಯವಹಾರದಲ್ಲೇ ತೊಡಗಿಸಿದ ಮನೀಷಾ ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡರು.

Auctioneers like Maneesha get to work once the fish comes into the harbour. Some fish need to be kept in a ice box to prevent them from getting spoilt while some are kept in the open (left)
PHOTO • M. Palani Kumar
Auctioneers like Maneesha get to work once the fish comes into the harbour. Some fish need to be kept in a ice box to prevent them from getting spoilt while some are kept in the open (left)
PHOTO • M. Palani Kumar

ಮೀನು ಬಂದರಿಗೆ ಬಂದ ನಂತರ ಮನೀಷಾ ಅವರಂತಹ ಹರಾಜುದಾರರ ಕೆಲಸ ಪ್ರಾರಂಭಿಸುತ್ತಾರೆ. ಅಲ್ಲಿ ಅವರು ಮೀನುಗಳನ್ನು ಬೇರ್ಪಡಿಸಿ ಜೋಡಿಸುತ್ತಾರೆ. ಕೆಲವು ಮೀನುಗಳು ಹಾಳಾಗದಂತೆ ತಡೆಯಲು ಅವುಗಳನ್ನು ಐಸ್ ಬಾಕ್ಸಿನಲ್ಲಿ ಇಡಬೇಕಾಗುತ್ತದೆ, (ಎಡ) ಎನ್ನೂ ಕೆಲವನ್ನು ಹಾಗೇ ಇರಿಸಲಾಗುತ್ತದೆ

Left: Maneesha waits with other women for the fish auction to begin. Right: All sellers leave the bridge around 5 p.m.
PHOTO • M. Palani Kumar
Left: Maneesha waits with other women for the fish auction to begin. Right: All sellers leave the bridge around 5 p.m.
PHOTO • M. Palani Kumar

ಎಡ: ಇತರ ಮಹಿಳೆಯರೊಂದಿಗೆ ಮೀನು ಹರಾಜು ಪ್ರಾರಂಭವಾಗುವುದನ್ನು ಕಾಯುತ್ತಿರುವುದು. ಬಲ: ಸಂಜೆ 5 ಗಂಟೆ ಸುಮಾರಿಗೆ ಎಲ್ಲಾ ವ್ಯಾಪಾರಸ್ಥರು ಸೇತುವೆಯಿಂದ ಹೊರಡುತ್ತಾರೆ

ಐದು ವರ್ಷಗಳ ಹಿಂದೆ ಮನೀಷಾ ಅವರು ಮೀನು ಒಣಗಿಸುತ್ತಿದ್ದ ಸ್ಥಳವನ್ನು ಮುಂಬರುವ ಬಂದರಿನ ಬೋಟ್‌ ಹೌಸ್‌ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಯಿತು. ಇದರೊಂದಿಗೆ ಅವರ ಬದುಕಿನ ದಿಕ್ಕೂ ಬದಲಾಯಿತು. ಅವರ ವ್ಯವಹಾರಕ್ಕೆ ಹಿಂದೆಯೂ ಬೆದರಿಕೆಗಳು ಇದ್ದವಾದರೂ ಅವುಗಳಿಂಧ ಅವರು ಹೇಗೋ ಪಾರಾಗಿದ್ದರು. ಮನೆಯ ಬಳಿ ದುರ್ವಾಸನೆ ಬರುತ್ತದೆ ಹಾಗೂ ಗಲೀಜಾಗುತ್ತದೆ ಎನ್ನುವ ಲಿಖಿತ ದೂರುಗಳನ್ನು ಸ್ಥಳೀಯ ಜನರು ಸಲ್ಲಿಸಿದ್ದರು. ಮೀನು ಸಂಗ್ರಹಿಸಲು ಮತ್ತು ವ್ಯವಹಾರ ನಡೆಸಲು ಜಾಗ ಸಿಗದ ಕಾರಣ ಅವರು ಆ ವ್ಯವಹಾರವನ್ನು ನಿಲ್ಲಿಸಿದರು.

*****

2020ರಲ್ಲಿ, ಕೋವಿಡ್ -19 ಅಪ್ಪಳಿಸಿದ ಸಂದರ್ಭದಲ್ಲಿ ಸಾರಿಗೆ ಮತ್ತು ಪೂರೈಕೆ ಸರಪಳಿಗಳಿಗೆ ಉಂಟಾದ ಅಡೆತಡೆಗಳಿಂದಾಗಿ ಬಂದರಿಗೆ ಬರುವ ದೋಣಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ತಮಿಳುನಾಡು ಸಾಗರ ಮೀನುಗಾರಿಕೆ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ಮಾಡಿದ ನಂತರ 2021ರಲ್ಲಿ ಪರ್ಸೀನ್ ಬಲೆಗಳ ಮೇಲಿನ ನಿಷೇಧವು ಎರಡನೇ ಹೊಡೆತವನ್ನು ನೀಡಿತು. ಓದಿ: ಒಣಗುವ ಮೀನು, ಕ್ಷೀಣಿಸುವ ಭವಿಷ್ಯ

ಮನೀಷಾ ಆಗಷ್ಟೇ ತನ್ನ ಗಂಡನ ಸ್ಟೀಲ್‌ ದೋಣಿಯಲ್ಲಿ ಹೂಡಿಕೆ ಮಾಡಿದ್ದರು. “ಈ ದೋಣಿ ಖರಿದಿಗಾಗಿ ನಮಗೆ ಹಲವರು ಸಾಲ ನೀಡಿದ್ದರು ಎಂದು ಅವರು ಹೇಳುತ್ತಾರೆ. "ನಮ್ಮಲ್ಲಿ ದೋಣಿಗಳಿವೆ, ನಾನು ನಾಲ್ಕು ದೋಣಿಗಳಲ್ಲಿ ತಲಾ 20 ಲಕ್ಷ ಹೂಡಿಕೆ ಮಾಡಿದ್ದೇನೆ, ಆದರೆ ಸರ್ಕಾರದ ನಿಷೇಧಿಸಿರುವ ಕಾರಣ ಯಾರೂ ಅವುಗಳನ್ನು ನಮ್ಮಿಂದ ಖರೀದಿಸುವುದಿಲ್ಲ. ಮತ್ತು ದೋಣಿಗಳು ಮೀನುಗಾರಿಕೆಗೆ ಹೋಗದಿದ್ದರೆ ನಮಗೆ ಸಂಪಾದನೆಯಿರುವುದಿಲ್ಲ. ಈಗ ನಾವು ಸಾಲ ತೀರಿಸುವುದು ಹೇಗೆ?"

ಆದರೆ ಜನವರಿ 2023 ರಲ್ಲಿ, ಸುಪ್ರೀಂ ಕೋರ್ಟ್ ತಮಿಳುನಾಡಿನ ಪ್ರಾದೇಶಿಕ ಜಲಪ್ರದೇಶವನ್ನು ಮೀರಿ, ಆದರೆ ಷರತ್ತುಗಳೊಂದಿಗೆ ವಿಶೇಷ ಆರ್ಥಿಕ ವಲಯದೊಳಗೆ ಪರ್ಸೀನ್ ಮೀನುಗಾರಿಕೆಗೆ ಅನುಮತಿ ನೀಡಿತು. ಕಡಲೂರಿನಲ್ಲಿ ರಿಂಗ್-ಸೀನ್ ತಂತ್ರಜ್ಞಾನದ ಸುತ್ತ ಮೀನುಗಾರರ ಸಂಘರ್ಷದಿಂದಾಗಿ, ಮನೀಷಾ ಹರಾಜು ಹಾಕುತ್ತಿದ್ದ ದೋಣಿಗಳು ಈಗ ಪುದುಚೇರಿಯಲ್ಲಿ ಲಂಗರು ಹಾಕುತ್ತಿವೆ. ತನ್ನ ಆಭರಣಗಳನ್ನು (105 ಸವರನ್) ಮಾರಾಟ ಮಾಡಿ, ತನ್ನ ಮೂರು ಕೋಣೆಗಳ ಕಾಂಕ್ರೀಟ್ ಮನೆಯನ್ನು ಬ್ಯಾಂಕಿಗೆ ಅಡವಿಟ್ಟ ನಂತರವೂ, ಅವರು 25 ಲಕ್ಷ ರೂ.ಗಳ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ.

Maneesha in front of the house (left) she built with her earnings. She also keeps cows (right), goats and chickens to supplement her income from selling fish
PHOTO • M. Palani Kumar
Maneesha in front of the house (left) she built with her earnings. She also keeps cows (right), goats and chickens to supplement her income from selling fish
PHOTO • M. Palani Kumar

ಮನೀಷಾ ತನ್ನ ಸಂಪಾದನೆಯಿಂದ ನಿರ್ಮಿಸಿದ ಮನೆಯ ಮುಂದೆ (ಎಡಕ್ಕೆ). ಮೀನು ಮಾರಾಟದಿಂದ ಬರುವ ಆದಾಯಕ್ಕೆ ಪೂರಕವಾಗಿ ಅವರು ಹಸುಗಳು (ಬಲ), ಆಡುಗಳು ಮತ್ತು ಕೋಳಿಗಳನ್ನು ಸಹ ಸಾಕುತ್ತಾರೆ

ಕಡಲೂರು ಓಲ್ಡ್ ಟೌನ್ ವಾರ್ಡಿನಲ್ಲಿ 20 ಸ್ವಸಹಾಯ ಗುಂಪುಗಳು (ಎಸ್‌ಎಚ್‌ಜಿ) ಇದ್ದರೂ, ಅವರು ತಮ್ಮ ಹೂಡಿಕೆಗಾಗಿ ಖಾಸಗಿಯವರಿಂದಲೇ ಸಾಲ ಪಡೆದಿದ್ದಾರೆ ಮತ್ತು ಸಂಘಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀಡಲು ಅವರು ತಯಾರಿದ್ದರೂ, "ಅವರೆಲ್ಲರೂ ನನ್ನನ್ನು ಸ್ವೀಕರಿಸಲು ನಿರಾಕರಿಸುತ್ತಾರೆ" ಎಂದು ಅವರು ಹೇಳುತ್ತಾರೆ. "ನಾನು ತೃತೀಯ ಲಿಂಗಿಯಾಗಿರುವುದರಿಂದ ಯಾವುದೇ ಬ್ಯಾಂಕ್ ನನಗೆ ಸಾಲ ನೀಡಿಲ್ಲ. ಅವರು ನನ್ನನ್ನು ನಂಬುವುದಿಲ್ಲ."

ಬ್ಯಾಂಕ್ ಸಾಲ ಮತ್ತು ಸರ್ಕಾರದ ಕೆಲವು ಬೆಂಬಲ ದೊರಕಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಅವರ ಅಭಿಪ್ರಾಯ. "ತಿರುಮಣಿಕುಳಿಯಲ್ಲಿ ಸುಮಾರು 70 ಟ್ರಾನ್ಸ್‌ಜೆಂಟರ್‌ ವ್ಯಕ್ತಿಗಳಿಗೆ ಸರ್ಕಾರವು ಒಂದು ಕೋಣೆಯ ಮನೆಗಳನ್ನು ನೀಡಿತು, ಆದರೆ ಅದು ಇದ್ದಿದ್ದು ಕಾಡಿನ ಮಧ್ಯೆ, ಅಲ್ಲಿ ನೀರು ಅಥವಾ ಸಾರಿಗೆ ಸೌಲಭ್ಯವಿಲ್ಲ. ಅಲ್ಲಿಗೆ ಯಾರು ಹೋಗುತ್ತಾರೆ? ಮನೆಗಳು ಚಿಕ್ಕದಾಗಿದ್ದವು ಮತ್ತು ದೂರ ದೂರದಲ್ಲಿದ್ದವು, ಯಾರಾದರೂ ನಮ್ಮನ್ನು ಕೊಂದರೂ ಇನ್ನೊಬ್ಬರಿಗೆ ತಿಳಿಯುತ್ತಿರಲಿಲ್ಲ; ನಾವು ಕೂಗಿದರೂ ಯಾರಿಗೂ ಕೇಳುವುದಿಲ್ಲ. ಕೊನೆಗೆ ಮನೆಯ ಪಟ್ಟಾಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದೆವು."

*****

ಹುಟ್ಟಿನಿಂದ ಗಂಡಾಗಿದ್ದ ಮನೀಷಾ ತನ್ನ ಐದು ಜನ ಒಡಹುಟ್ಟಿದವರಲ್ಲಿ ಕಿರಿಯವರು. ಅವರು ತನ್ನ 15ನೇ ವಯಸ್ಸಿನಲ್ಲಿ ದುಡಿಯಲಾರಭಿಸಿದರು. ಅವರ ತಂದೆ ಕಸ್ಟಮ್ಸ್ ಅಧಿಕಾರಿಯಾಗಿದ್ದರು, ಮೂಲತಃ ಪುದುಚೇರಿ ಬಳಿಯ ಪಿಳ್ಳೈಚಾವಡಿ ಗ್ರಾಮದವರಾದ ಅವರು ಕಡಲೂರು ಓಲ್ಡ್ ಟೌನ್ ಬಂದರಿನಲ್ಲಿ ನೇಮಕಗೊಂಡಿದ್ದರು. ಮನಿಷಾರ ತಾಯಿ ಅವರ ತಂದೆಗೆ ಎರಡನೇ ಹೆಂಡತಿಯಾಗಿದ್ದರು. ಅವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದು ಹತ್ತಿರದಲ್ಲಿಯೇ ಚಹಾ ಅಂಗಡಿಯನ್ನು ನಡೆಸುತ್ತಿದ್ದರು.

ಮನೀಷಾ ಅವರ ತಂದೆಯ ಮೊದಲ ಪತ್ನಿ ಮತ್ತು ಮಕ್ಕಳು ಅವರ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮದ್ಯವ್ಯಸನಿಯಾಗಿದ್ದ ಅವರು ಕಡಲೂರಿನಲ್ಲಿ ಎರಡನೇ ಕುಟುಂಬದ ನಿರ್ವಹಣೆಗೆ ಹಣವನ್ನು ನೀಡುತ್ತಿರಲಿಲ್ಲ. ಮನೀಷಾ ಅವರ ಹಿರಿಯ ಅಣ್ಣ 50 ವರ್ಷದ ಸೌಂದರರಾಜನ್ ತಮ್ಮ ತಾಯಿ ಮತ್ತು ಒಡಹುಟ್ಟಿದವರನ್ನು ಪೋಷಿಸಲು 15ನೇ ವಯಸ್ಸಿನಲ್ಲಿ ಮೀನುಗಾರಿಕೆಯನ್ನು ಪ್ರಾರಂಭಿಸಿದರು. ಅವರಿಗೆ ಶಕುಂತಲಾ (45), ಶಕೀಲಾ (43) ಮತ್ತು ಆನಂದಿ (40) ಎಂಬ ಮೂವರು ಸಹೋದರಿಯರಿದ್ದಾರೆ. ಶಕೀಲಾ ಮೀನು ಮಾರಾಟಗಾರರಾಗಿದ್ದು, ಉಳಿದವರು ಮದುವೆಯಾಗಿ ಸ್ವಂತ ಮನೆಗಳನ್ನು ನಡೆಸುತ್ತಿದ್ದಾರೆ.

Besides fish, Maneesha also sells milk (right)
PHOTO • M. Palani Kumar
Besides fish, Maneesha also sells milk (right)
PHOTO • M. Palani Kumar

ಮೀನು ವ್ಯಾಪಾರದ ಹೊರತಾಗಿ, ಮನೀಷಾ ಹಾಲನ್ನು ಸಹ ಮಾರಾಟ ಮಾಡುತ್ತಾರೆ (ಬಲಕ್ಕೆ)

ಅವರ ಎಲ್ಲಾ ಒಡಹುಟ್ಟಿದವರು 15ನೇ ವಯಸ್ಸಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದರು. ಮನೀಷಾರ ತಾಯಿ ಮತ್ತು ಅಕ್ಕ ಬಂದರಿನಲ್ಲಿ ತಿಂಡಿ ಮತ್ತು ಚಹಾ ಮಾರಾಟ ಮಾಡುತ್ತಿದ್ದರು. ಮನೀಷಾ ಕಿರಿಯವರಾಗಿದ್ದರಿಂದ, ಅಮ್ಮ ಹೇಳಿದ ಕೆಲಸಗಳನ್ನು ಮಾಡುತ್ತಿದ್ದರು. 2002ರಲ್ಲಿ, ಅವರು 16 ವರ್ಷದವರಿದ್ದಾಗ, ಕಡಲೂರಿನ ಇಂಡಿಯನ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ (ಐಟಿಐ)ಗೆ ಸೇರಿ ವೆಲ್ಡಿಂಗ್ ವಿಷಯದಲ್ಲಿ ಒಂದು ವರ್ಷದ ಕೋರ್ಸ್ ಪೂರ್ಣಗೊಳಿಸಿದರು. ನಂತರ ಒಂದು ತಿಂಗಳ ಕಾಲ ವೆಲ್ಡಿಂಗ್ ವರ್ಕ್‌ಶಾಪ್‌ ಒಂದರಲ್ಲಿ ಕೆಲಸ ಮಾಡಿದರುಳು, ಆದರೆ ಅವರಿಗೆ ಅದು ಇಷ್ಟವಾಗಲಿಲ್ಲ.

ಅವರು ಒಣ ಮೀನು ಉದ್ಯಮದಲ್ಲಿ ದುಡಿಯಲು ಆರಂಭಿಸಿದ ದಿನಗಳಲ್ಲಿ ದಿನಕ್ಕೆ 75 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು. ಮೀನನ್ನು ಹೊತ್ತು ಲೋಡ್‌ ಮಾಡುವುದು, ಸ್ವಚ್ಛಗೊಳಿಸುವುದು, ಉಪ್ಪೂಡುವುದು ಮತ್ತು ಒಣಗಿಸುವ ಕೆಲಸವನ್ನು ಇದು ಒಳಗೊಂಡಿತ್ತು.

ಒಣ ಮೀನು ವ್ಯವಹಾರದ ಒಳ ಹೊರಗುಗಳನ್ನು ತಿಳಿಉಕೊಂಡ ನಂತರ ಅವರು ತನ್ನ 20ನೇ ವಯಸ್ಸಿನಲ್ಲಿ, 2006ರಲ್ಲಿ ತೆರೆದ ಕಾಡೊಂದನ್ನು ತೆರವುಗೊಳಿಸಿ ಅಲ್ಲಿ ಮೀನುಗಳನ್ನು ಒಣಗಿಸುವ ಮೂಲಕ ವ್ಯವಹಾರ ಆರಂಭಿಸಿದರು. ಇಬ್ಬರು ಅಕ್ಕಂದಿರ ಮದುವೆಯ ನಂತರ ಸಾಲದ ಹೊರೆ ಹೆಚ್ಚಾಗತೊಡಗಿತು. ಆಗ ಮನೀಷಾ ಮೀನು ವ್ಯಾಪಾರದ ಜೊತೆಗೆ ಎರಡು ಹಸುಗಳನ್ನು ಖರೀದಿಸಿ ಅವುಗಳ ಹಾಲನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಪ್ರಸ್ತುತ ಅವರು ಮೀನು ಹರಾಜಿನೊಂದಿಗೆ ಜೊತೆಗೆ ಐದು ಹಸುಗಳು, ಏಳು ಆಡುಗಳು ಮತ್ತು 30 ಕೋಳಿಗಳನ್ನು ಸಾಕುತ್ತಿದ್ದಾರೆ.

*****

ತನ್ನ 10ನೇ ವಯಸ್ಸಿನಲ್ಲೇ ತನ್ನ ಲೈಂಗಿಕ ಗುರುತಿನ ಕುರಿತು ಅವರಿಗೆ ಅಸಮಾಧಾನವಿತ್ತಾದರೂ, ಅವರು ಆ ಕುರಿತು ಮಾತನಾಡಲಾರಂಭಿಸಿದ್ದು ಹದಿಹರೆಯಕ್ಕೆ ಬಂದ ನಂತರವೇ. ತನ್ನ ತಾಯಿ ಮತ್ತು ಅಕ್ಕಂದಿರಿಗಾಗಿ ಸೀರೆ ಒಡವೆಯನ್ನು ಖರೀದಿಸುವಾಗ ಅವರು ತನಗೂ ಒಂದಷ್ಟನ್ನು ಖರೀದಿಸುತ್ತಿದ್ದರು. 20ನೇ ವಯಸ್ಸಿನಲ್ಲಿ ಅವರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ತೀರ್ಮಾನಿಸಿದರು.

Maneesha with a friend (left) after work and outside her home (right)
PHOTO • M. Palani Kumar
Maneesha with a friend (left) after work and outside her home (right)
PHOTO • M. Palani Kumar

ಎಡ: ಮನೀಷಾ ತನ್ನ ಸ್ನೇಹಿತೆಯೊಂದಿಗೆ. ಬಲ: ಅವರ ಮನೆಯ ಹೊರಗೆ

ಇದರ ನಂತರ ಅವರು ಟ್ರಾನ್ಸ್‌ಜೆಂಡರ್‌ ಸಮುದಾಯದೊಡನೆ ಬೆರೆಯಲಾರಂಭಿಸಿದರು. ಅವರ ಸ್ನೇಹಿತರೊಬ್ಬರು ಶಸ್ತ್ರಚಿಕಿತ್ಸೆ ಮಾಡಲು ಮುಂಬೈಗೆ ಹೋದರು. ಅವರು ಮತ್ತೆ ಕಡಲೂರಿಗೆ ಮರಳುವ ಮೊದಲು 15 ವರ್ಷ ಅಲ್ಲೇ ಉಳಿದಿದ್ದರು. ಆಕೆ ಮನೀಷಾರಿಗೆ ಸಹಾಯ ಒದಗಿಸಲು ಸಿದ್ಧರಿದ್ದರು. ಆದರೆ ಮನೀಷಾರಿಗೆ ಕಡಲೂರು ಬಿಡುವ ಮನಸ್ಸಿರಲಿಲ್ಲ.

ಅವರು ಕಡಲೂರಿನಲ್ಲೇ ಆಸ್ಪತ್ರೆಯೊಂದಕ್ಕೆ ಹೋದರು. ಅಲ್ಲಿ ಅವರು ಮನೋವೈದ್ಯರು ಮತ್ತು ವಕೀಲರಿಂದ ಪ್ರಮಾಣಪತ್ರಗಳನ್ನು ಒದಗಿಸಬೇಕಾಗಿತ್ತು, ಜೊತೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಬಯಸಲು ಇರುವ ಕಾರಣಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಬೇಕಾಗಿತ್ತು. ಮನೀಷಾ ತನ್ನ ವ್ಯವಹಾರಗಳಿಂದ ಗಳಿಸದ್ದ ಹಣದಲ್ಲೇ ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಭರಿಸಿದರು. ಇಡೀ ಪ್ರಕ್ರಿಯೆಯನ್ನು ಒಬ್ಬರೇ ನಿಭಾಯಿಸಿದರು.

ಲಿಂಗ ಪರಿವರ್ತನೆಯ ನಂತರದ ದಿನಗಳಲ್ಲಿ ಕುಟುಂಬದೊಂದಿಗಿನ ಸಂಬಂಧದಲ್ಲಿ ಬಿರುಕುಂಟಾಗಿತ್ತು. ಶಸ್ತ್ರಚಿಕಿತ್ಸೆಯಾದ ಹಲವು ವರ್ಷಗಳ ತನಕ ಅವರ ಅಮ್ಮ ಮತ್ತು ಅಕ್ಕಂದಿರು ಅವರೊಡನೆ ಮಾತನಾಡಿರಲಿಲ್ಲ. ಆದರೂ ಅವರು ಮನೆಯ ಪಕ್ಕದಲ್ಲೇ ತನಗೊಂದು ಮನೆ ಕಟ್ಟಿಕೊಂಡು ವಾಸಿಸತೊಡಗಿದರು. ಇದೆಲ್ಲದರಿಂದ ಬಹಳವಾಗಿ ನೊಂದಿದ್ದ ಅವರ ತಾಯಿ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. ಮನಿಷಾರಿಗೆ ಅವರ ತಾಯಿ ಇತರ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳಂತೆ ಬೀದಿಯಲ್ಲಿ ಭಿಕ್ಷೆ ಬೇಡದಿರುವಂತೆಯೂ ತಿಳಿಸಿದರು.

ಕೆಲವು ವರ್ಷಗಳ ಹಿಂದೆ, ಮನೀಷಾ ಅವರ ತಾಯಿಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆಕೆಯ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಗಾಗಿ ಅವರು 3 ಲಕ್ಷ ರೂ.ಗಳನ್ನು ಖರ್ಚು ಮಾಡಿದರು,. ಇದಾದ ನಂತರವೇ ತಾಯಿ ಮಗಳು ರಾಜಿಯಾಗಿದ್ದು. ಅದಾದ ಒಂದು ವರ್ಷದ ನಂತರ ಅವರ ತಾಯಿ ತೀರಿಕೊಂಡರು. ಆದರೆ ಮನೀಷಾ ತನ್ನ ತಾಯಿಯ ಕಾಳಜಿ ಮಾಡಿದ್ದು ಅವರಿಗೆ ತನ್ನ ಒಡಹುಟ್ಟಿದವರೊಂದಿಗಿನ ಸಂಬಂಧವನ್ನು ಮರಳಿಸಿತು.

ಹೆಚ್ಚಿನ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳು ಇತರರಂತೆ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಿದ್ದಾರೆ ಆದರೆ ಸರ್ಕಾರದ ಬೆಂಬಲದ ಕೊರತೆಯು ಅವರನ್ನು ನಿಂದನೆಗೆ ಗುರಿಯಾಗುವಂತೆ ಮಾಡುತ್ತಿದೆ ಎಂದು ಮನೀಷಾ ಒತ್ತಿಹೇಳುತ್ತಾರೆ. "ಕೆಲವೊಮ್ಮೆ ಈ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಬಾಗಿಲು ತೆರೆಯಲು ಹೆದರಿಕೆಯಾಗುತ್ತದೆ" ಎಂದು ಅವರು ಹೇಳುತ್ತಾರೆ. "ನನ್ನ ಅಕ್ಕಂದಿರು೯ತರಗ್ದೆ ಹತ್ತಿರದಲ್ಲಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ನಾನು ಅವರನ್ನು ಕರೆದರೆ, ಅವರು ತಕ್ಷಣ ಬರುತ್ತಾರೆ."

ಅನುವಾದ: ಶಂಕರ. ಎನ್. ಕೆಂಚನೂರು

Nitya Rao

ನಿತ್ಯಾ ರಾವ್ ಅವರು, ಜೆಂಡರ್ ಎಂಡ್ ಡೆವಲಪ್ಮೆಂಟ್, ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ, ನಾರ್ವಿಚ್, ಯುಕೆಯ ಪ್ರೊಫೆಸರ್ ಆಗಿದ್ದು. ಕಳೆದ ಮೂರು ದಶಕಗಳಿಂದ ಮಹಿಳಾ ಹಕ್ಕುಗಳು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧಕರಾಗಿ, ಶಿಕ್ಷಕಿಯಾಗಿ ಮತ್ತು ವಕೀಲರಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.

Other stories by Nitya Rao
Photographs : M. Palani Kumar

ಪಳನಿ ಕುಮಾರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಟಾಫ್ ಫೋಟೋಗ್ರಾಫರ್. ದುಡಿಯುವ ವರ್ಗದ ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ದಾಖಲಿಸುವುದರಲ್ಲಿ ಅವರಿಗೆ ಆಸಕ್ತಿ. ಪಳನಿ 2021ರಲ್ಲಿ ಆಂಪ್ಲಿಫೈ ಅನುದಾನವನ್ನು ಮತ್ತು 2020ರಲ್ಲಿ ಸಮ್ಯಕ್ ದೃಷ್ಟಿ ಮತ್ತು ಫೋಟೋ ದಕ್ಷಿಣ ಏಷ್ಯಾ ಅನುದಾನವನ್ನು ಪಡೆದಿದ್ದಾರೆ. ಅವರು 2022ರಲ್ಲಿ ಮೊದಲ ದಯನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಪಡೆದರು. ಪಳನಿ ತಮಿಳುನಾಡಿನ ಮ್ಯಾನ್ಯುವಲ್‌ ಸ್ಕ್ಯಾವೆಂಜಿಗ್‌ ಪದ್ಧತಿ ಕುರಿತು ಜಗತ್ತಿಗೆ ತಿಳಿಸಿ ಹೇಳಿದ "ಕಕ್ಕೂಸ್‌" ಎನ್ನುವ ತಮಿಳು ಸಾಕ್ಷ್ಯಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Other stories by M. Palani Kumar
Editor : Shaoni Sarkar

ಶಾವೋನಿ ಸರ್ಕಾರ್ ಕೋಲ್ಕತ್ತಾ ಮೂಲದ ಸ್ವತಂತ್ರ ಪತ್ರಕರ್ತೆ.

Other stories by Shaoni Sarkar
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru