ನ್ಯಾಯಾಧೀಶ: …ನೀವು ಯಾಕೆ ಕೆಲಸ ಮಾಡಿಲ್ಲ? ಈ ಬಗ್ಗೆ ನ್ಯಾಯಾಲಯಕ್ಕೆ ಉತ್ತರಿಸಿ.

ಬ್ರಾಡ್‌ಸ್ಕಿ: ನಾನು ಕೆಲಸ ಮಾಡಿದ್ದೇನೆ, ನಾನು ಕವಿತೆಗಳನ್ನು ಬರೆದಿದ್ದೇನೆ

ನ್ಯಾಯಾಧೀಶ: ಬ್ರಾಡ್‌ಸ್ಕಿ ನೀವು ಕೆಲಸದ ನಡುವಿನ ವಿರಾಮದ ಸಮಯದಲ್ಲಿ ಏಕೆ ಕೆಲಸ ಮಾಡಿಲ್ಲವೆನ್ನುವುದನ್ನು ನ್ಯಾಯಾಲಯಕ್ಕೆ ವಿವರಿಸಿದರೆ ಒಳ್ಳೆಯದು.
ಬ್ರಾಡ್‌ಸ್ಕಿ: ನಾನು ಕವಿತೆಗಳನ್ನು ಬರೆದಿದ್ದೇನೆ, ಕೆಲಸ ಮಾಡಿದ್ದೇನೆ

ಪತ್ರಕರ್ತೆ ಫ್ರೀಡಾ ವಿಗ್ಡೊರೊವಾ ಅವರು ದಾಖಲಿಸಿದ 1964ರಲ್ಲಿ ನಡೆದ ಎರಡು ಸುದೀರ್ಘ ವಿಚಾರಣೆಗಳ ವಿವರಗಳಲ್ಲಿ, 23 ವರ್ಷದ ರಷ್ಯಾದ ಕವಿ ಐಯೋಸಿಫ್ (ಜೋಸೆಫ್) ಅಲೆಕ್ಸಾಂಡ್ರೊವಿಚ್ ಬ್ರಾಡ್ಸ್ಕಿ ತನ್ನ ರಾಷ್ಟ್ರಕ್ಕೆ ಮತ್ತು ಭವಿಷ್ಯದ ಪೀಳಿಗೆಗೆ ತನ್ನ ಕಾವ್ಯ ಎಷ್ಟು ಉಪಯುಕ್ತತೆ ಎನ್ನುವುದನ್ನು ವಿವರಿಸಿ ನ್ಯಾಯಾಲಯದೆದುರು ಸಮರ್ಥಿಸುತ್ತಾನೆ. ಆದರೆ ನ್ಯಾಯಾಧೀಶರು ಆತನ ವಾದವನ್ನು ಒಪ್ಪಲಿಲ್ಲ ಮತ್ತು ದುರುದ್ದೇಶಪೂರಿತ ಸಾಮಾಜಿಕ ಪರಾವಲಂಬಿತನಕ್ಕಾಗಿ ಬ್ರಾಡ್ಸ್ಕಿಗೆ ಐದು ವರ್ಷಗಳ ಆಂತರಿಕ ಗಡೀಪಾರು ಮತ್ತು ಕಠಿಣ ಪರಿಶ್ರಮದ ಶಿಕ್ಷೆ ವಿಧಿಸಿದರು.

ಈಗ ಕೊನೆಗೊಳ್ಳುತ್ತಿರುವ ಈ ವರ್ಷದಲ್ಲಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಬಹು ಮಾಧ್ಯಮ ವೇದಿಕೆಯು ಬಹಳಷ್ಟು ಕವಿತೆಗಳನ್ನು ಪ್ರಕಟಿಸಿದೆ. ಸಾಕಷ್ಟು ಗಾಯಕರನ್ನು ಬೆಳಕಿಗೆ ತಂದಿದೆ. ಜಾನಪದ ಹಾಡುಗಳ ಹೊಸ ಆರ್ಕೈವ್ ಒಂದನ್ನು ಪ್ರಾರಂಭಿಸಿದ್ದೇವೆ. ಜೊತೆಗೆ ಈಗಾಗಲೇ ಇರುವ ಸಂಗ್ರಹಗಳಿಗೆ ಇನ್ನಷ್ಟು ಹಾಡುಗಳನ್ನು ಸೇರಿಸಿದ್ದೇವೆ.

ಹಾಗಾದರೆ, ನಾವು ಕಾವ್ಯಕ್ಕೆ ಅಷ್ಟೊಂದು ಪ್ರಾಮುಖ್ಯತೆ ಏಕೆ ನೀಡುತ್ತೇವೆ? ಕಾವ್ಯ ಸೃಷ್ಟಿಯೆನ್ನುವುದು ನಿಜವಾಗಿಯೂ 'ಕೆಲಸ'ವೇ? ಅಥವಾ ಬ್ರಾಡ್ಸ್ಕಿಯ ಪೀಡಕರು ಹೇಳಿದಂತೆ ಇದು ಸಾಮಾಜಿಕ ಪರಾವಲಂಬಿತನವೇ?

ತತ್ವಜ್ಞಾನಿಗಳು ಮತ್ತು ರಾಜಕಾರಣಿಗಳು ಕವಿಯ 'ಕೆಲಸದ' ಸಿಂಧುತ್ವ, ಪ್ರಸ್ತುತತೆ ಮತ್ತು ಮೌಲ್ಯವನ್ನು ಪ್ರಶ್ನಿಸುವುದು ಬಹಳ ಹಳೆಯ ವಿಷಯ. ಅಕಾಡೆಮಿಕ್ ಜಗತ್ತಿನವರು ಮತ್ತು ಅದರ ಹೊರಗಿನ ಅನೇಕರು ಸಹ ಕಾವ್ಯವನ್ನು ಬಹಳ ಬೇಗನೆ ಪಕ್ಕಕ್ಕೆ ತಳ್ಳುತ್ತಾರೆ, ಅದನ್ನು ಇತರ ವೈಜ್ಞಾನಿಕ, ಪುರಾವೆ ಆಧಾರಿತ ಜ್ಞಾನದ ಮಾರ್ಗಗಳಿಂದ ಪ್ರತ್ಯೇಕಿಸುತ್ತಾರೆ. ಗ್ರಾಮೀಣ ಪತ್ರಿಕೋದ್ಯಮದ ಲೈವ್ ಆರ್ಕೈವ್ ಒಂದರಲ್ಲಿ ಕವಿತೆ, ಸಂಗೀತ ಮತ್ತು ಹಾಡುಗಳ ಅಭಿವೃದ್ಧಿ ಹೊಂದುತ್ತಿರುವ ವಿಭಾಗಗಳನ್ನು ಹೊಂದಿರುವುದು ಸಾಕಷ್ಟು ವಿಶಿಷ್ಟ ಸಂಗತಿಯಾಗಿದೆ.

ಪರಿ ಎಲ್ಲಾ ರೀತಿಯ ಸೃಜನಶೀಲ ಅಭಿವ್ಯಕ್ತಿಗಳನ್ನು ಅಪ್ಪಿಕೊಳ್ಳುತ್ತದೆ, ಏಕೆಂದರೆ ಅವು ನಮಗೆ ಬೇರೆಯದೇ ಕಥೆಗಳನ್ನು ಹೇಳಬಲ್ಲವು ಮಾತ್ರವಲ್ಲ, ಅವು ಗ್ರಾಮೀಣ ಭಾರತದ ಜನರ ಅನುಭವಗಳು ಮತ್ತು ಜೀವನವನ್ನು ದಾಖಲಿಸುವ ಕಥೆ ಹೇಳುವ ಹೊಸ ವಿಧಾನಗಳನ್ನು ಪರಿಚಯಿಸುತ್ತವೆ. ಇಲ್ಲಿಯೇ, ವೈಯಕ್ತಿಕ ಅನುಭವಗಳು ಮತ್ತು ಸಾಮೂಹಿಕ ಸ್ಮರಣೆಯಿಂದ ತುಂಬಿದ ಸೃಜನಶೀಲ ಕಲ್ಪನೆಯಲ್ಲಿ, ಇತಿಹಾಸವನ್ನು ಮೀರಿ, ಪತ್ರಿಕೋದ್ಯಮವನ್ನು ಮೀರಿ ಮಾನವ ಜ್ಞಾನವನ್ನು ತಲುಪುವ ಮತ್ತೊಂದು ಮಾರ್ಗವನ್ನು ನಾವು ಕಂಡುಕೊಳ್ಳುತ್ತೇವೆ. ನಮ್ಮ ಕಾಲದ ಪ್ರಕ್ರಿಯೆಗಳನ್ನು ದಾಖಲಿಸುವ ಮತ್ತು ಸಂಗ್ರಹಿಸುವ ಮತ್ತೊಂದು ಮಾರ್ಗ - ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ - ಜನರ ಜೀವನದಲ್ಲಿ ಹೆಣೆದುಕೊಂಡಿದೆ.

ಈ ಬಾರಿ ಪರಿ ಹಲವು ಭಾಷೆಗಳಲ್ಲಿ ಕವಿತೆಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಪಂಚಮಹಾಲಿ ಭಿಲಿ, ಇಂಗ್ಲಿಷ್‌, ಹಿಂದಿ ಮತ್ತು ಬಂಗಾಳಿ ಸೇರಿವೆ. ವ್ಯಕ್ತಿಯ ಅನುಭವದಲ್ಲಿ ದೊಡ್ಡ ಘಟನೆಗಳು ದಾಖಲಾಗಿ ಈ ಕಾಲಘಟ್ಟದ ಸಾಕ್ಷಿಯಾಗಿ ಈ ಕವಿತೆಗಳು ಉಳಿಯಲಿವೆ. ಆದಿವಾಸಿಯೊಬ್ಬರ ಹಳ್ಳಿಯ ಹಂಬಲ ಎನ್ನುವ ಕವಿತೆಯಲ್ಲಿ ಒಬ್ಬರು ವೈಯಕ್ತಿಕ ಅನುಭವಗಳಲ್ಲಿ ಅಂತರ್ಗತವಾಗಿರುವ ಉದ್ವಿಗ್ನತೆ ಮತ್ತು ಅಸ್ಥಿರತೆಯನ್ನು ಹೊರತಂದಿದ್ದಾರೆ. ಇನ್ನೊಬ್ಬರು ಈ ಕವಿತೆಯಲ್ಲಿ ಭಾಷೆಗಳಲ್ಲಿನ ಪುರುಷಪ್ರಾಧಾನ್ಯತೆ ಕುರಿತು ಬರೆಯುತ್ತಾ ತಮ್ಮೊಳಗೆ ಹೊಸ ಪ್ರತಿರೋಧದ ತಾವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಅನ್ನದಾತ ಮತ್ತು ಸರ್ಕಾರ್‌ ಬಹಾದ್ದೂರ್ ಎನ್ನುವ ಇನ್ನೊಂದು ಕವಿತೆಯಲ್ಲಿ ಸರ್ವಾಧಿಕಾರದ ಸುಳ್ಳುಗಳನ್ನು ಬಹಿರಂಗಪಡಿಸಲಾಗಿದೆ. ಒಂದು ಪುಸ್ತಕ ಮತ್ತು ಮೂರು ನೆರೆಹೊರೆಯವರ ಕತೆ ಎನ್ನುವ ಮತ್ತೊಂದು ಕವಿತೆಯಲ್ಲಿ ಭಯವಿಲ್ಲದೆ ಐತಿಹಾಸಿಕ ಮತ್ತು ಸಾಮೂಹಿಕ ಸತ್ಯದ ಬಗ್ಗೆ ಮಾತನಾಡಲಾಗಿದೆ. ಹೀಗೆ ಕವಿತೆಗಳು ಸಮಾಜದೆದುರು ಸತ್ಯವನ್ನು ಹೇಳುವಲ್ಲಿ ತಮ್ಮದೇ ಪಾತ್ರವನ್ನು ಹೊಂದಿವೆ.

ಬರವಣಿಗೆಯೆನ್ನುವುದು ಒಂದು ರಾಜಕೀಯ ಕ್ರಿಯೆ. ನಮ್ಮ ಬೀಸುಕಲ್ಲಿನ ಪದಗಳ ಸಂಗ್ರಹವಾದ ದಿ ಗ್ರೈಂಡ್‌ ಮಿಲ್‌ ಸಾಂಗ್ಸ್ ಪ್ರಾಜೆಕ್ಟ್‌ ಸರಣಿಯಲ್ಲಿರುವ ಹಾಡುಗಳನ್ನು ಕೇಳಿದಾಗ ಕವಿತೆ, ಹಾಡು, ಓವಿಗಳನ್ನು ಹೆಣೆಯುವುದೆಂದರೆ ತೊಡಗಿಸಿಕೊಳ್ಳುವಿಕೆ, ಸಹೋದರಿತ್ವ ಮತ್ತು ಸಾಮೂಹಿಕ ಪ್ರತಿರೋಧದ ಕ್ರಿಯೆಯೂ ಹೌದು ಎನ್ನುವುದು ಅರ್ಥವಾಗುತ್ತದೆ. ಈ ಹಾಡುಗಳ ಒಬ್ಬರ ಜಗತ್ತನ್ನು ಅರಿಯುವ ಮಾರ್ಗದಂತೆ ಕೆಲಸ ಮಾಡುತ್ತವೆ. ಬಾಷೆಯೊಂದಿಗೆ ಹರಿಯುವ ಸಮಯ, ಸಂಸ್ಕೃತಿ, ಭಾವನೆಗಳನ್ನು ಈ ಹಾಡುಗಳು ಪುನರುಜ್ಜೀವನಗೊಳಿಸುತ್ತವೆ. 3,000 ಕ್ಕೂ ಹೆಚ್ಚು ಮಹಿಳೆಯರು ತಮ್ಮ ತತ್ಕ್ಷಣದ ಪ್ರಪಂಚದ ಬಗ್ಗೆ ವೈವಿಧ್ಯಮಯ ಥೀಮ್‌ಗಳಲ್ಲಿ ಹಾಡಿರುವ ಗ್ರಾಮೀಣ ಮಹಾರಾಷ್ಟ್ರ ಮತ್ತು ಕರ್ನಾಟಕದ 1,00,000 ಜಾನಪದ ಹಾಡುಗಳ ಈ  ಅಭಿವೃದ್ಧಿಶೀಲ ಸಂಗ್ರಹಕ್ಕೆ ಈ ವರ್ಷ ಪರಿ ಬಹಳಷ್ಟು ಹಾಡುಗಳನ್ನು ಸೇರಿಸಿದೆ.

ಕಚ್ಛೀ ಜಾನಪದ ಗೀತೆಗಳ ಸಂಗ್ರಹವಾದ ರಣ್‌ ಪ್ರದೇಶದ ಹಾಡುಗಳು ಪರಿಯ ವೈವಿಧ್ಯತೆಗೆ ಇನ್ನಷ್ಟು ಮೆರುಗನ್ನು ನೀಡಿವೆ. ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಸಹಯೋಗದೊಂದಿಗೆ ಪ್ರಾರಂಭವಾದ ಈ  ಸಂಗ್ರಹವು ಪ್ರೀತಿ, ಹಂಬಲ, ನಷ್ಟ, ಮದುವೆ, ಭಕ್ತಿ, ಮಾತೃಭೂಮಿ, ಲಿಂಗ ಜಾಗೃತಿ, ಪ್ರಜಾಪ್ರಭುತ್ವ ಹಕ್ಕುಗಳ ವಿಷಯಗಳ ಮೇಲೆ ಹಾಡುಗಳನ್ನು ಹೊಂದಿದೆ. ಈ ಸಂಗೀತ ಸಂಗ್ರಹವು ಅದು ತಾನು ಹುಟ್ಟಿರುವ ನೆಲದಷ್ಟೇ ವೈವಿಧ್ಯತೆಯನ್ನು ಹೊಂದಿದೆ. ಈ ಯೋಜನೆಯು 341 ಹಾಡುಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ, ಗುಜರಾತ್‌ನ 305 ತಾಳವಾದ್ಯಗಳು, ಗಾಯಕರು ಮತ್ತು ವಾದ್ಯಗಾರರ ಅನೌಪಚಾರಿಕ ಸಮೂಹವು ವಿವಿಧ ಸಂಗೀತ ಪ್ರಕಾರಗಳ ಮೂಲಕ ಈ ಸಂಗ್ರಹಕ್ಕೆ ಜೀವ ತುಂಬಿದ್ದಾರೆ. ಕಚ್ಛ್‌ ಪ್ರದೇಶದಲ್ಲಿ ಒಂದು ಕಾಲದಲ್ಲಿ ಮೆರೆಯುತ್ತಿದ್ದ ಈ ಹಾಡುಗಳು ಮತ್ತೆ ಪರಿಯಲ್ಲಿ ಜೀವ ತಳೆದಿವೆ.

ಪರಿ ಕಾವ್ಯವನ್ನು ಗಣ್ಯ ವರ್ಗದ ಜನರ ಸೊತ್ತೆನ್ನುವ ನಂಬಿಕೆಯ ಚೌಕಟ್ಟಿನಿಂದ ಹೊರತಂದಿದೆ. ಕಾವ್ಯವೆಂದರೆ ಕೇವಲ ವಾಕ್ಚಾತುರ್ಯ ಅಥವಾ ಭಾಷಾಭಿವೃದ್ಧಿಯ ವಿಷಯವಲ್ಲವೆನ್ನುವುದನ್ನು ಸಾಬೀತುಪಡಿಸಿದೆ. ಕಾವ್ಯ ಮತ್ತು ಜಾನಪದದ ನಡುವಿನ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಪರಿ ತನ್ನ ಹೆಜ್ಜೆಯನ್ನಿರಿಸಿದೆ. ಈ ನಿಟ್ಟಿನಲ್ಲಿ ಈ ವೈವಿಧ್ಯಮಯ ಸಂಪ್ರದಾಯದ ನಿಜವಾದ ರಕ್ಷಕರು ಮತ್ತು ನಿರ್ಮಾತೃಗಳನ್ನು ನಾವು ಗುರುತಿಸಿದ್ದೇವೆ. ನಮ್ಮ ಕಾವ್ಯದ ಪುಟಗಳಲ್ಲಿ ಎಲ್ಲಾ ವರ್ಗ, ಜಾತಿ, ಲಿಂಗದ ಸಾಮಾನ್ಯ ಜನರ ತನಕ ಎಲ್ಲರೂ ಇದ್ದಾರೆ. ಸಾಮಾನ್ಯ ಜನರ ನೋವು ಮತ್ತು ಹೋರಾಟಗಳ ಬಗ್ಗೆ ಮತ್ತು ಸಮಾನತೆ ಮತ್ತು ಅಂಬೇಡ್ಕರ್ ಅವರ ಬಗ್ಗೆ ಹಾಡುವ ಕಡೂಬಾಯಿ ಖಾರಟ್ v ಅಥವಾ ಜನಪ್ರಿಯ ರಾಜಕೀಯದ ಕವಿತೆಗಳನ್ನು ರಚಿಸುವು ಸಾಹಿರ್ ದಾದು ಸಾಳ್ವೆ ಅವರಂತಹ ಜನರು. ಶಾಂತಿಪುರದ ಲಂಕಾಪಾರಾದ ಸಾಮಾನ್ಯ ಎಳನೀರು ಮಾರಾಟಗಾರ ಸುಕುಮಾರ್ ಬಿಸ್ವಾಸ್ , ಇವರು 1971ರ ಬಾಂಗ್ಲಾದೇಶ ಯುದ್ಧದ ನಂತರ ಭಾರತದಲ್ಲಿ ನೆಲೆಸಿ ತನ್ನ ಅನುಭವದಿಂದ ಅದ್ಭುತ ಜ್ಞಾನದಿಂದ ಕೂಡಿರುವ ಸುಂದರವಾದ ಹಾಡುಗಳನ್ನು ಹಾಡುತ್ತಾರೆ. ಪಶ್ಚಿಮ ಬಂಗಾಳದ ಪಿರ್ರಾ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಲೋಖಿಕಾಂತೋ ಮಹತೋ , 97ನೇ ವಯಸ್ಸಿನಲ್ಲಿಯೂ ಪ್ರತಿಧ್ವನಿಸುವ ಧ್ವನಿ ಹೊಂದಿರುವ ಇವರ ಸಂಗೀತ ಮತ್ತು ಹಾಡುಗಳು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೇಗೆ ಅಗತ್ಯವಾದ ಭರವಸೆ ಮತ್ತು ಹುರುಪನ್ನು ತುಂಬಿವೆ ಎಂಬುದನ್ನು ತೋರಿಸುತ್ತದೆ.

ಆದರೆ ಕವಿತೆಗಳು ಮತ್ತು ಹಾಡುಗಳೆಂದರೆ ಕೇವಲ ಪದಗಳಷ್ಟೇ ಅಲ್ಲ. ಪರಿಯ ಪ್ರಕಟಿತ ಬರಹಗಳಿಗೆ ರಚಿಸಲಾದ ಅನೇಕೆ ಗೆರೆಗಳು ಮತ್ತು ಬಣ್ಣಗಳು ಬರಹಗಳಿಗೆ ಹೊಸದೊಂದು ದೃಷ್ಟಿಕೋನವನ್ನೇ ನೀಡಿವೆ. ಹಲವಾರು ಕಲಾವಿದರು, ಅವರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಪ್ರಚೋದನಕಾರಿ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಅವುಗಳು ಪರಿಯಲ್ಲಿ ಪ್ರಕಟವಾದ ಬರಹಗಳ ಭಾಗವಾಗಿವೆ.

ಪರಿಯಲ್ಲಿ ಕತೆ ಹೇಳಲು ಚಿತ್ರಗಳನ್ನು ಬಳಸಿಕೊಳ್ಳುವುದು ಹೊಸದೇನಲ್ಲ. ಚಿತ್ರಗಳ ಮೂಲಕ ಕತೆಯನ್ನು ಬಿಚ್ಚಿಡುವಂತಹ ಕಥನಗಳನ್ನು ಸಹ ನಾವು ಪ್ರಕಟಿಸಿದ್ದೇವೆ. ಕೆಲವು ಸಂದರ್ಭಗಳಲ್ಲಿ ನಾವು ಚಿತ್ರಗಳನ್ನು ನೈತಿಕ ಕಾರಣಗಳಿಗಾಗಿಯೂ ಬಳಸಿಕೊಂಡಿದ್ದೇವೆ. ಉದಾ: ಮಕ್ಕಳು ಕಾಣೆಯಾದ ಹೊತ್ತು… ಒಂದು ಬರಹದ ಸಂದರ್ಭದಲ್ಲಿ ಲೇಖಕರೇ ಚಿತ್ರಕಾರರೂ ಆಗಿದ್ದರು. ಅವರು ತಮ್ಮ ವರದಿಗೆ ಹೊಸ ನೋಟವನ್ನು ನೀಡಲು ಅದಕ್ಕೆ ಶಕ್ತಿ ತುಂಬಲು ಫೋಟೊಗಳ ಬದಲು ಚಿತ್ರಗಳನ್ನೇ ಬಳಸಲು ನಿರ್ಧರಿಸಿದರು. ಪರಿಯಲ್ಲಿ ಕಲಾವಿದರು ತಮ್ಮ ಚಿತ್ರಗಳ ಮೂಲಕ ಈಗಾಗಲೇ ಶ್ರೀಮಂತವಾಗಿರುವ ಬರಹ, ಲೇಖನಗಳಿಗೆ ಇನ್ನಷ್ಟು ಶ್ರೀಮಂತಿಕೆಯನ್ನು ತುಂಬುತ್ತಾರೆ.

ಇಲ್ಲಿ ನೀವು ಕೆಲವು ಅಂತಹ ಸುಂದರ, ಸಮೃದ್ಧ ಅನುಭವಗಳನ್ನು ಎದುರುಗೊಳ್ಳಬಹುದು.

ಲೇಖನಕ್ಕಾಗಿ ಚಿತ್ರಗಳನ್ನು ಸಂಪಾದಿಸಲು ಸಹಾಯ ಮಾಡಿದ ರಿಕಿನ್ ಸಂಕ್ಲೇಚಾ ಅವರಿಗೆ ತಂಡವು ಧನ್ಯವಾದಗಳನ್ನು ಅರ್ಪಿಸುತ್ತದೆ.

ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು [email protected] ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.

ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು,  ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್‌ ಕ್ಲಿಕ್ ಮಾಡಿ.

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Other stories by Pratishtha Pandya
Joshua Bodhinetra

ಜೋಶುವಾ ಬೋಧಿನೇತ್ರ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಯ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ವಿಷಯ ವ್ಯವಸ್ಥಾಪಕರು. ಅವರು ಕೋಲ್ಕತ್ತಾದ ಜಾದವಪುರ ವಿಶ್ವವಿದ್ಯಾಲಯದಿಂದ ತುಲನಾತ್ಮಕ ಸಾಹಿತ್ಯದಲ್ಲಿ ಎಂಫಿಲ್ ಪಡೆದಿದ್ದಾರೆ ಮತ್ತು ಬಹುಭಾಷಾ ಕವಿ, ಅನುವಾದಕ, ಕಲಾ ವಿಮರ್ಶಕ ಮತ್ತು ಸಾಮಾಜಿಕ ಕಾರ್ಯಕರ್ತರೂ ಹೌದು.

Other stories by Joshua Bodhinetra
Archana Shukla

ಅರ್ಚನಾ ಶುಕ್ಲಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಕಂಟೆಂಟ್ ಎಡಿಟರ್ ಮತ್ತು ಪಬ್ಲಿಷಿಂಗ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Archana Shukla
Illustration : Labani Jangi

ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

Other stories by Labani Jangi
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru