“ನನ್ನ ಭಯವನ್ನು ನಾನು ಹೇಗೆ ಹೇಳಲಿ? ನನ್ನ ಹೃದಯ ಭಯದಿಂದ ಬಡಿದುಕೊಳ್ಳುತ್ತಿದೆ. ನಾನು ಯಾವಾಗ ಓಡಿ ಯಾವುದಾದರೂ ತೆರೆದ ಸ್ಥಳಕ್ಕೆ ಹೋಗುತ್ತೇನೋ ಎಂದೇ ಯೋಚಿಸುತ್ತಿದ್ದೆ," ಎಂದು ಸುಂದರಬನ್ಸ್ ನ ದಟ್ಟ ಮ್ಯಾಂಗ್ರೋವ್ ಕಾಡುಗಳಲ್ಲಿ ಏಡಿ ಹಿಡಿಯಲು ಹೋಗುವಾಗ ತಾವು ಅನುಭವಿಸುವ ತಣ್ಣಗಿನ ಭಯದ ಬಗ್ಗೆ 41 ವರ್ಷ ಪ್ರಾಯದ ಏಡಿ ಮತ್ತು ಮೀನು ಹಿಡಿಯುವ ಮಹಿಳೆ ಪಾರುಲ್ ಹಲ್ದಾರ್ ಹೇಳುತ್ತಾರೆ. ಏಡಿ-ಬೇಟೆಯ ಸೀಸನ್‌ನಲ್ಲಿ ಅವರು ಮ್ಯಾಂಗ್ರೋವ್ ಕಾಡಿನ ಮೂಲಕ ನದಿಗಳು ಮತ್ತು ತೊರೆಗಳ ಮೇಲೆ ಕೆಳಕ್ಕೆ ದೋಣಿಯನ್ನು ಓಡಿಸುವಾಗ ಕದ್ದು ಕುಳಿತಿರುವ ಹುಲಿಗಳ ಬಗ್ಗೆ ಎಚ್ಚರದಿಂದ ಇರುತ್ತಾರೆ.

ಈಗ ತನ್ನ ಮರದ ದೋಣಿಯನ್ನು ಗರಲ್ ನದಿಯ ಕೆಳಗೆ ಹುಟ್ಟು ಹಾಕುತ್ತಾ ಲಕ್ಸ್‌ಬಗನ್ ಗ್ರಾಮದ ನಿವಾಸಿ ಪಾರುಲ್ ಮರೀಚ್‌ಜಾಪಿ ಕಾಡನ್ನು ದಾಟಿ ಕ್ರಿಸ್-ಕ್ರಾಸ್ ನೆಟ್ ಬೇಲಿಯ ಕಡೆಗೆ ಕಣ್ಣು ಹಾಯಿಸುತ್ತಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಬ್ಲಾಕ್‌ನಲ್ಲಿರುವ ಅವರ ಹಳ್ಳಿಯ ಸಮೀಪವಿರುವ ಈ ಕಾಡಿನಲ್ಲಿಯೇ ಪಾರುಲ್ ಅವರ ಪತಿ ಇಶಾರ್ ರೊಣೋಜಿತ್ ಹಲ್ದಾರ್ ಅವರನ್ನು ಏಳು ವರ್ಷಗಳ ಹಿಂದೆ ಹುಲಿಯೊಂದು ಸಾಯಿಸಿತ್ತು.

ಅವರು ತನ್ನ 56 ವರ್ಷ ಪ್ರಾಯದ ಅವರ ತಾಯಿ ಲೋಖಿ ಮೊಂಡಲ್ ಜೊತೆಗೆ ಸುಡು ಬೇಸಿಗೆಯ ದಿನದಂದು ದೋಣಿಯ ಅಂಚಿನಲ್ಲಿ ಹುಟ್ಟುಗಳನ್ನು ಹಾಕುತ್ತಾ ಸಾಗುತ್ತಾಳೆ. ಮಗಳಂತೆಯೇ ಲೋಖಿ ಕೂಡ ಓರ್ವ ಮೀನುಗಾರರು.

ಇಶಾರವರನ್ನು ಮದುವೆಯಾದಾಗ ಪಾರುಲ್ ಗೆ ಕೇವಲ 13 ವರ್ಷ ಪ್ರಾಯ. ಅವರದ್ದು ಬಡ ಕುಟುಂಬ, ಆದರೆ ಅವರು ಎಂದಿಗೂ ಮೀನು ಅಥವಾ ಏಡಿಗಳನ್ನು ಹಿಡಿಯಲು ಕಾಡಿಗೆ ಹೋಗಿರಲಿಲ್ಲ. "ನಾನು ಅವತ್ತು ಅವರನ್ನು ಒಪ್ಪಿಸಿ ಕಾಡಿಗೆ ಕರೆತಂದಿದ್ದೆ. ಹದಿನೇಳು ವರ್ಷಗಳ ನಂತರ ಅವರು ಅದೇ ಕಾಡಿನಲ್ಲಿ ಸತ್ತುಹೋದರು," ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಪಾರುಲ್ ಎಲ್ಲವನ್ನೂ ನೆನೆದುಕೊಂಡು ಮೌನವಾದರು. ಇಶಾರ್ ಅವರು ಸಾಯುವಾಗ ಅವರಿಗೆ 45 ವರ್ಷ ವಯಸ್ಸು. ಪಾರುಲ್ ಅವರೇ ನಾಲ್ಕು ಹೆಣ್ಣು ಮಕ್ಕಳನ್ನು ಬೆಳೆಸಿದರು.

ಪಾರುಲ್ ಮತ್ತು ಲೋಖಿ ಮತ್ತೆ ಮತ್ತೆ ಭಾರವಾದ ಹುಟ್ಟುಗಳನ್ನು ಎಳೆದು ಬೆವರಿ ಹೋಗಿದ್ದರು. ಈ ಹೆಂಗಸರು ಈಗ ಮೀನುಗಾರಿಕೆ ನಿಷೇಧಿಸಿರುವ ಮ್ಯಾಂಗ್ರೋವ್ ಕಾಡಿನಿಂದ ದೋಣಿಯನ್ನು ಸುರಕ್ಷಿತ ಅಂತರದಲ್ಲಿ ಓಡಿಸುತ್ತಾರೆ. ಮೀನುಗಳ ಸಂತಾನೋತ್ಪತ್ತಿಯ ಸಮಯ ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಕಾಲ ಮ್ಯಾಂಗ್ರೋವ್ ಕಾಡಿನಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಪಾರುಲ್ ಜೀವನ ನಡೆಸಲು ತಮ್ಮದೇ ಕೊಳದಿಂದ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಾರೆ.

Left: Parul Haldar recalls the death of her husband, Ishar Haldar.
PHOTO • Urvashi Sarkar
Right: A picture of Ishar Ronojit Haldar who was killed by a tiger in 2016
PHOTO • Urvashi Sarkar

ಎಡ: ಪಾರುಲ್ ಹಲ್ದಾರ್ ತನ್ನ ಪತಿ ಇಶಾರ್ ಹಲ್ದಾರ್ ಅವರ ಮರಣವನ್ನು ನೆನಪಿಸಿಕೊಳ್ಳುತ್ತಾರೆ. ಬಲ: 2016 ರಲ್ಲಿ ಹುಲಿಯಿಂದ ಕೊಲ್ಲಲ್ಪಟ್ಟ ಇಶಾರ್ ರೊಣೋಜಿತ್ ಹಲ್ದಾರ್ ಅವರ ಭಾವಚಿತ್ರ

Left: A cross netted fence, beyond which lie the Marichjhapi forests in South 24 Parganas district.
PHOTO • Urvashi Sarkar
Right: Parul (background) learned fishing from her mother and Lokhi (yellow sari foreground) learned it from her father
PHOTO • Urvashi Sarkar

ಎಡಕ್ಕೆ: ಈ ಅಡ್ಡ ಜಾಲರಿ ಬೇಲಿಯ ಆಚೆಗೆ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮರಿಚ್‌ಜಾಪಿ ಕಾಡುಗಳಿವೆ. ಬಲ: ಪಾರುಲ್ (ಹಿನ್ನೆಲೆ) ತನ್ನ ತಾಯಿಯಿಂದ ಮೀನುಗಾರಿಕೆ ಕಲಿತರು ಮತ್ತು ಲೋಖಿ (ಹಳದಿ ಸೀರೆ ಮುಂಭಾಗ) ಅದನ್ನು ತನ್ನ ತಂದೆಯಿಂದ ಕಲಿತರು

"ತುಂಬಾ ಅನಾಹುತಗಳಾಗುತ್ತಿವೆ," ಎಂದು ಹುಲಿಗಳು ವಾಸಿಸುವ ವಿಶ್ವದ ಏಕೈಕ ಮ್ಯಾಂಗ್ರೋವ್ ಅರಣ್ಯವಾದ ಸುಂದರಬನ್ಸ್‌ನಲ್ಲಿ ಬಂಗಾಳ ಹುಲಿಗಳ ದಾಳಿಯನ್ನು ಉದ್ದೇಶಿಸಿ ಪಾರುಲ್ ಹೇಳುತ್ತಾರೆ. "ಅನೇಕ ಜನರು ಕಾಡಿನೊಳಗೆ ಬರುತ್ತಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅರಣ್ಯ ಅಧಿಕಾರಿಗಳು ನಮ್ಮನ್ನು ಕಾಡಿನೊಳಗೆ ಬಿಡದಿರಲು ಇದೊಂದು ಕಾರಣವಾಗಿದೆ,” ಎನ್ನುತ್ತಾರೆ.

ಹುಲಿಯಿಂದ ಸಂಭವಿಸುವ ಸಾವುಗಳು, ಅದರಲ್ಲೂ ಮೀನುಗಾರಿಕೆಯ ಸಮಯದಲ್ಲಿ ಸುಂದರಬನ್ಸ್‌ನಲ್ಲಿ ಸಾಮಾನ್ಯವೇನಲ್ಲ. 2018 ಮತ್ತು ಜನವರಿ 2023 ರ ನಡುವೆ ಸುಂದರಬನ್ಸ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ 12 ಸಾವುಗಳನ್ನು ಸರ್ಕಾರ ವರದಿ ಮಾಡಿದೆ. ಆದರೆ ಸ್ಥಳೀಯ ನಿವಾಸಿಗಳು ದಾಳಿಯ ಹೆಚ್ಚಿನ ಘಟನೆಗಳನ್ನು ಹೇಳುವುದರಿಂದ ನಿಜವಾದ ಸಾವಿನ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು.

ಸರ್ಕಾರದ ಹುಲಿಗಳ ಸ್ಥಿತಿಗತಿ ವರದಿಯ ಪ್ರಕಾರ 2018 ರಲ್ಲಿ 88 ಕ್ಕೆ ಹೋಲಿಸಿದರೆ ಸುಂದರಬನ್ಸ್ 2022 ರಲ್ಲಿ 100 ಹುಲಿಗಳಿಗೆ ನೆಲೆಯಾಗಿದೆ.

*****

ಪಾರುಲ್ ತನ್ನ 23ನೇ ವಯಸ್ಸಿನಲ್ಲಿ ಮೀನು ಹಿಡಿಯುವುದನ್ನು ತನ್ನ ತಾಯಿಯಿಂದ ಕಲಿತರು.

ಲೋಖಿ ಕೇವಲ ಏಳು ವರ್ಷದ ಬಾಲಕಿಯಾಗಿದ್ದಾಗ ತನ್ನ ತಂದೆಯೊಂದಿಗೆ ಕಾಡಿಗೆ ಹೋಗಿ ಮೀನು ಹಿಡಿಯಲು ಪ್ರಾರಂಭಿಸಿದರು. ಅವರ ಪತಿ 64 ವರ್ಷ ಪ್ರಾಯದ ಸಂತೋಷ್ ಮೊಂಡಲ್ 2016 ರಲ್ಲಿ ಹುಲಿಯೊಂದಿಗೆ ಕಾದಾಡಿ ಜೀವಂತವಾಗಿ ಮನೆಗೆ ಬಂದಿದ್ದರು.

“ಅವರ ಕೈಯಲ್ಲಿ ಚಾಕು ಇದ್ದರಿಂದ ಹುಲಿಯೊಂದಿಗೆ ಹೋರಾಡಿದರು. ಆದರೆ ಆ ಘಟನೆಯ ನಂತರ ಅವರ ಧೈರ್ಯವೆಲ್ಲಾ ಕುಂದಿಹೋಯಿತು ಮತ್ತು ಮುಂದೆಂದೂ ಕಾಡಿಗೆ ಹೋಗುವುದಿಲ್ಲ ಎಂದು ತೀರ್ಮಾನಿಸಿದರು,”ಎಂದು ಲೋಖಿ ಹೇಳುತ್ತಾರೆ. ಆದರೂ ಲೋಖಿ ನಿಲ್ಲಿಸಲಿಲ್ಲ. ಪತಿ ಹೋಗುವುದನ್ನು ನಿಲ್ಲಿಸಿದ ನಂತರ ಪಾರುಲ್ ಮತ್ತು ನಿಧನ ಹೊಂದಿರುವ ಆಕೆಯ ಅಳಿಯ ಇಶಾರ್ ಅವರೊಂದಿಗೆ ಲೋಖಿ ಕಾಡಿಗೆ ಹೋಗಲು ಪ್ರಾರಂಭಿಸಿದರು.

“ನನಗೆ ಬೇರೆಯವರೊಂದಿಗೆ ಕಾಡಿಗೆ ಹೋಗುವ ಧೈರ್ಯವಿಲ್ಲ. ಹಾಗೆಯೇ ನಾನು ಪಾರೂಲ್ ಒಬ್ಬಳನ್ನೇ ಹೋಗಲು ಬಿಡುವುದಿಲ್ಲ. ನಾನು ಬದುಕಿರುವವರೆಗೂ ನಾನು ಅವಳೊಂದಿಗೆ ಇರುತ್ತೇನೆ. ನಿಮ್ಮ ಸ್ವಂತ ರಕ್ತ ಸಂಬಂಧಿಗಳು ಮಾತ್ರ ಕಾಡಿನಲ್ಲಿ ನಿಮ್ಮನ್ನು ರಕ್ಷಿಸುತ್ತಾರೆ,” ಎಂದು ಅವರು ಹೇಳುತ್ತಾರೆ.

As the number of crabs decrease, Parul and Lokhi have to venture deeper into the mangrove forests to find them
PHOTO • Urvashi Sarkar

ಏಡಿಗಳ ಸಂಖ್ಯೆ ಕಡಿಮೆಯಾದಂತೆ ಅವುಗಳನ್ನು ಹುಡುಕಲು ಪಾರುಲ್ ಮತ್ತು ಲೋಖಿ ಮ್ಯಾಂಗ್ರೋವ್ ಕಾಡುಗಳ ಆಳಕ್ಕೆ ಹೋಗಬೇಕಾಗುತ್ತದೆ

Parul and Lokhi rowing across the River Garal
PHOTO • Urvashi Sarkar

ಪಾರುಲ್ ಮತ್ತು ಲೋಖಿ ಗರಲ್ ನದಿಗೆ ಅಡ್ಡಲಾಗಿ ರೋಯಿಂಗ್ ಮಾಡುತ್ತಿದ್ದಾರೆ

ಇಬ್ಬರು ಹೆಂಗಸರು ಮಾತನಾಡದೆ ಜೊತೆಯಾಗಿ ಸಾಲಿನಲ್ಲಿ ನಿಲ್ಲುತ್ತಾರೆ. ಏಡಿ ಬೇಟೆಯ ಅವಧಿ ಪ್ರಾರಂಭವಾದ ನಂತರ ಅವರು ಅರಣ್ಯ ಇಲಾಖೆಯಿಂದ ಪಾಸ್‌ಗಳನ್ನು ಪಡೆಯಬೇಕು ಮತ್ತು ಅರಣ್ಯಕ್ಕೆ ಹೋಗಲು ದೋಣಿ ಬಾಡಿಗೆಗೆ ಪಡೆಯಬೇಕಾಗುತ್ತದೆ.

ಪಾರುಲ್ ದಿನಕ್ಕೆ 50 ರುಪಾಯಿ ಬಾಡಿಗೆ ಕೊಡುತ್ತಾರೆ. ಸಾಮಾನ್ಯವಾಗಿ ಇವರಿಬ್ಬರ ಜೊತೆಗೆ ಮೂರನೇ ಮಹಿಳೆಯೊಬ್ಬರು ಸೇರಿಕೊಳ್ಳುತ್ತಾರೆ. ಮೂವರು ಮಹಿಳೆಯರು ಕನಿಷ್ಠ 10 ದಿನಗಳ ಕಾಲ ಕಾಡಿನಲ್ಲಿ ಇರಬೇಕು. “ನಾವು ದೋಣಿಯಲ್ಲಿ ಮಲಗುತ್ತೇವೆ, ತಿನ್ನುತ್ತೇವೆ ಮತ್ತು ನಮ್ಮ ಊಟವನ್ನು ಅದರ ಮೇಲೆಯೇ ತಯಾರಿಸುತ್ತೇವೆ. ನಾವು ಅಕ್ಕಿ ಮತ್ತು ಬೇಳೆಯನ್ನು ಜೊತೆಗೆ ಒಯ್ಯುತ್ತೇವೆ, ಡ್ರಮ್‌ನಲ್ಲಿ ನೀರು ಮತ್ತು ಸಣ್ಣ ಸ್ಟವ್‌ ತೆಗೆದುಕೊಂಡು ಹೋಗುತ್ತೇವೆ. ನಾವು ಯಾವುದೇ ಪರಿಸ್ಥಿತಿ ಎದುರಾದರೂ ದೋಣಿಯನ್ನು ಮಾತ್ರ ಬಿಡುವುದಿಲ್ಲ, ಶೌಚಾಲಯಕ್ಕೂ ಹೋಗುವುದಿಲ್ಲ,” ಎಂದು ಪಾರುಲ್ ಹೇಳುತ್ತಾರೆ. ಹುಲಿ ದಾಳಿ ಹೆಚ್ಚಲು ಇವೇ ಮುಖ್ಯ ಕಾರಣ ಎಂದು ಅವರು ಹೇಳುತ್ತಾರೆ

“ಹುಲಿಗಳು ಈಗ ದೋಣಿಗಳಿಗೆ ಹತ್ತಿ ಮನುಷ್ಯರನ್ನು ಕಚ್ಚಿಕೊಂಡು ಹೋಗುತ್ತಿವೆ. ನನ್ನ ಗಂಡನ ಮೇಲೆ ದೋಣಿಯಲ್ಲಿಯೇ ಹುಲಿ ದಾಳಿ ಮಾಡಿತ್ತು.”

ಮೀನುಗಾರಿಕೆ ಮಾಡುವ ಹತ್ತು ದಿನ ಮಹಿಳೆಯರು ಮಳೆಯಲ್ಲೂ ದೋಣಿಯಲ್ಲೇ ದಿನ ಕಳೆಯುತ್ತಾರೆ. "ಏಡಿಗಳ ರಾಶಿ ದೋಣಿಯ ಒಂದು ಮೂಲೆಯಲ್ಲಿದ್ದರೆ, ಮನುಷ್ಯರು ಇನ್ನೊಂದು ಮೂಲೆಯಲ್ಲಿ ಮತ್ತು ಅಡುಗೆ ಸಾಮಾನು ಮೂರನೇ ಮೂಲೆಯಲ್ಲಿರುತ್ತವೆ" ಎಂದು ಲೋಖಿ ಹೇಳುತ್ತಾರೆ.

"We do not leave the boat under any circumstances, not even to go to the toilet,” says Parul
PHOTO • Urvashi Sarkar

'ನಾವು ಯಾವುದೇ ಪರಿಸ್ಥತಿ ಎದುರಾದರೂ ದೋಣಿಯನ್ನು ಮಾತ್ರ ಬಿಡುವುದಿಲ್ಲ, ಶೌಚಾಲಯಕ್ಕೂ ಹೋಗುವುದಿಲ್ಲ,' ಎಂದು ಪಾರುಲ್ ಹೇಳುತ್ತಾರೆ

Lokhi Mondal demonstrating how to unfurl fishing nets to catch crabs
PHOTO • Urvashi Sarkar

ಏಡಿಗಳನ್ನು ಹಿಡಿಯಲು ಮೀನು ಹಿಡಿಯುವ ಬಲೆಗಳನ್ನು ಬಿಚ್ಚುವುದು ಹೇಗೆ ಎಂಬುದನ್ನು ಲೋಕಿ ಮೊಂಡಲ್ ತೋರಿಸುತ್ತಿದ್ದಾರೆ

ಪುರುಷರಂತೆ ಮೀನುಗಾರ್ತಿಯರೂ ಕಾಡಿಗೆ ಹೋಗುವುದರಿಂದ ಹುಲಿಗಳ ದಾಳಿಗೆ ಒಳಗಾಗುತ್ತಾರೆ. ಆದಾಗ್ಯೂ, ಮನುಷ್ಯ-ಪ್ರಾಣಿ ಸಂಘರ್ಷದ ಹಾಟ್‌ಸ್ಪಾಟ್‌ ಎಂದೇ ಗುರುತಿಸಲಾಗಿರುವ ಸುಂದರಬನ್ಸ್‌ನಲ್ಲಿ ಎಷ್ಟು ಮಹಿಳೆಯರು ಸತ್ತಿದ್ದಾರೆ ಎಂಬುದಕ್ಕೆ ಲೆಕ್ಕವಿಲ್ಲ.

"ದಾಖಲಾಗಿರುವ ಹೆಚ್ಚಿನ ಸಾವುಗಳು ಪುರುಷರದ್ದಾಗಿವೆ. ಮಹಿಳೆಯರ ಮೇಲೂ ಹುಲಿಗಳ ದಾಳಿ ನಡೆದಿವೆಯಾದರೂ ಮಾಹಿತಿ ಸಂಗ್ರಹಿಸಿಲ್ಲ. ಮಹಿಳೆಯರು ಸಹಜವಾಗಿಯೇ ಕಾಡಿಗೆ ಹೋಗುತ್ತಾರೆ, ಆದರೆ ಪುರುಷರಿಗೆ ಹೋಲಿಸಿದರೆ ಕಡಿಮೆ,” ಎಂದು ಸಣ್ಣ ಪ್ರಮಾಣದ ಮೀನು ಕಾರ್ಮಿಕರ ರಾಷ್ಟ್ರೀಯ ವೇದಿಕೆಯ ಸಂಚಾಲಕ ಪ್ರದೀಪ್ ಚಟರ್ಜಿ ಹೇಳುತ್ತಾರೆ. ಕಾಡು ಹತ್ತಿರ ಇರುವುದು ಒಂದು ಪ್ರಮುಖ ಅಂಶವಾಗಿದೆ. ಕಾಡಿನಿಂದ ದೂರದಲ್ಲಿರುವ ಗ್ರಾಮಗಳ ಮಹಿಳೆಯರು ಹೋಗುವುದಿಲ್ಲ. ಬೇರೆ ಮಹಿಳೆಯರು ಹೋಗುವಾಗ ಮಾತ್ರ ಹೋಗುತ್ತಾರೆ.

2011 ರ ಜನಗಣತಿಯ ಪ್ರಕಾರ ಪಾರುಲ್ ಮತ್ತು ಲೋಖಿಯವರ ಊರು ಲಕ್ಸ್‌ಬಗನ್‌ನ ಜನಸಂಖ್ಯೆ 4,504. ಇದರಲ್ಲಿ ಸರಿಸುಮಾರು 48 ಪ್ರತಿಶತ ಮಹಿಳೆಯರನ್ನು ಒಳಗೊಂಡಂತೆ, ಪ್ರತಿಯೊಂದು ಮನೆಯಲ್ಲಿ ಹಳ್ಳಿಯಿಂದ ಕೇವಲ 5 ಕಿಮೀ ದೂರದಲ್ಲಿರುವ ಮರೀಚ್‌ಜಾಪಿ ಕಾಡಿಗೆ ಹೋಗುವ ಮಹಿಳೆಯರಿದ್ದಾರೆ.

ಏಡಿಗಳಿಗೆ ಒಳ್ಳೆಯ ಬೆಲೆ ಇರುವುದರಿಂದ ಈ ಅಪಾಯಕಾರಿ ಕೆಲಸಕ್ಕೆ ಕೈ ಹಾಕುತ್ತಾರೆ. “ಮೀನು ಮಾರುವುದರಿಂದ ನನಗೆ ಹೆಚ್ಚು ಆದಾಯ ಬರುವುದಿಲ್ಲ. ಏಡಿಗಳು ಹೆಚ್ಚು ಆದಾಯವನ್ನು ತರುತ್ತವೆ. ನಾನು ಕಾಡಿಗೆ ಹೋದರೆ ಗಳಿಸುವ 300-500 ರುಪಾಯಿಯಲ್ಲಿ ಏನು ಬೇಕಾದರೂ ತೆಗೆದುಕೊಳ್ಳಬಹುದು,” ಎಂದು ಪಾರುಲ್‌ ಹೇಳುತ್ತಾರೆ. ದೊಡ್ಡ ಏಡಿಗಳಿಗೆ. ಒಂದು ಕೆಜಿಗೆ 400-600 ರುಪಾಯಿ. ಚಿಕ್ಕದು ಕೆಜಿಗೆ 60-80 ರುಪಾಯಿಗೆ ಮಾರಾಟವಾಗುತ್ತವೆ. ಮೂರು ಜನ ಮಹಿಳೆಯರು ಹೋದರೆ 20-40 ಕೆಜಿ ಸಿಗುತ್ತದೆ.

*****

ಹುಲಿಗಳಿಂದ ಉಂಟಾಗುವ ಅಪಾಯದ ಹೊರತಾಗಿ, ಸುಂದರಬನ್ಸ್‌ನಲ್ಲಿ ಏಡಿ ಹಿಡಿಯುವವರು ಎದುರಿಸುತ್ತಿರುವ ಮತ್ತೊಂದು ದೊಡ್ಡ ಸವಾಲೆಂದರೆ ಕಡಿಮೆಯಾಗುತ್ತಿರುವ ಏಡಿಗಳ ಸಂಖ್ಯೆ. “ಹೆಚ್ಚು ಜನರು ಏಡಿಗಳನ್ನು ಹಿಡಿಯಲು ಕಾಡಿಗೆ ಬರುತ್ತಿದ್ದಾರೆ. ಈ ಹಿಂದೆ ಏಡಿಗಳು ಯಥೇಚ್ಛವಾಗಿ ಇರುತ್ತಿದ್ದವು, ಈಗ ಅವುಗಳನ್ನು ಹುಡುಕಲು ನಾವು ಶ್ರಮ ಪಡಬೇಕು,” ಎಂದು ಪಾರುಲ್ ಹೇಳುತ್ತಾರೆ.

ಏಡಿಗಳ ಸಂಖ್ಯೆ ಕುಗ್ಗಿದಂತೆ, ಮೀನುಗಾರ ಮಹಿಳೆಯರು ಕಾಡುಗಳ ತುಂಬಾ ಒಳಗೆ ಹೋಗುತ್ತಾರೆ. ಅಲ್ಲಿ ಹುಲಿ ದಾಳಿಯ ಅಪಾಯ ಹೆಚ್ಚು.

ಈ ಪ್ರದೇಶದ ಮೀನುಗಾರರು ಸಾಕಷ್ಟು ಪ್ರಮಾಣದ ಮೀನು ಅಥವಾ ಏಡಿಗಳನ್ನು ಹುಡುಕಲು ಮ್ಯಾಂಗ್ರೋವ್ ಕಾಡುಗಳಿಗೆ ತುಂಬಾ ಒಳಗೆ ಹೋಗಲು ಪ್ರಾರಂಭಿಸಿದ್ದಾರೆ ಮತ್ತು ಅಲ್ಲಿ ಅವರಿಗೆ ಹುಲಿಗಳು ಎದುರಾಗುತ್ತವೆ ಎಂದು ಚಟರ್ಜಿ ಹೇಳುತ್ತಾರೆ. “ಅರಣ್ಯ ಅಧಿಕಾರಿಗಳು ಹುಲಿ ಸಂರಕ್ಷಣೆಯತ್ತ ಮಾತ್ರ ಗಮನಹರಿಸುತ್ತಾರೆ. ಆದರೆ ಮೀನುಗಳು ಉಳಿಯದಿದ್ದರೆ ಹುಲಿಗಳೂ ಉಳಿಯುವುದಿಲ್ಲ,” ಎಂದು ಚಟರ್ಜಿ ಹೇಳುತ್ತಾರೆ. ನದಿಗಳಲ್ಲಿ ಮೀನು ಹೆಚ್ಚಾದರೆ ಮಾನವ-ವನ್ಯಜೀವಿ ಸಂಘರ್ಷ ಕಡಿಮೆಯಾಗಬಹುದು.

ನದಿಯಿಂದ ಹಿಂತಿರುಗಿದ ನಂತರ ಪಾರುಲ್ ಊಟ ಮಾಡುವುದರಲ್ಲಿ ತಲ್ಲೀನರಾದರು. ಅವರು ತಮ್ಮದೇ ಕೊಳದಿಂದ ಹಿಡಿದ ಮೀನುಗಳನ್ನು ಬೇಯಿಸಿ, ಅಕ್ಕಿಯನ್ನು ಕುದಿಸುತ್ತಾ ಸಕ್ಕರೆಯನ್ನು ಮಾವಿನಕಾಯಿಯ ಚಟ್ನಿಯಲ್ಲಿ ಬೆರೆಸಿದರು.

ಅವರಿಗೆ ಏಡಿಗಳನ್ನು ತಿನ್ನಲು ಇಷ್ಟವಿಲ್ಲ ಎಂದು ಅವರೇ ಹೇಳುತ್ತಾರೆ. ಅವರ ತಾಯಿ ಲೋಖಿ ಮಾತುಕತೆಗೆ ಸೇರಿಕೊಂಡರು. "ನಾನು ಮತ್ತು ನನ್ನ ಮಗಳು ಏಡಿಗಳನ್ನು ತಿನ್ನುವುದಿಲ್ಲ" ಎಂದು ಅವರು ಹೇಳುತ್ತಾರೆ. ಏಕೆ ಎಂದು ಕೇಳಿದಾಗ ಅವರಲ್ಲಿ ವಿವರಣೆ ಏನೂ ಇರಲಿಲ್ಲ, ಆದರೆ "ಅಪಘಾತಗಳು" ಎಂದು ಉಲ್ಲೇಖಿಸುತ್ತಾರೆ. ಇದು ಅವರ ಅಳಿಯ ಇಶಾರ್ ಸಾವಿನ ಕುರಿತಾಗಿದೆ.

Parul at home in her village Luxbagan, South 24 Parganas. None of her daughters work in the forest
PHOTO • Urvashi Sarkar
Parul at home in her village Luxbagan, South 24 Parganas. None of her daughters work in the forest
PHOTO • Urvashi Sarkar

ದಕ್ಷಿಣ 24 ಪರಗಣಗಳ ಲಕ್ಸ್‌ಬಗನ್‌ನಲ್ಲಿರುವ ಹಳ್ಳಿಯ ತನ್ನ ಮನೆಯಲ್ಲಿ ಪಾರುಲ್ ಇದ್ದಾರೆ. ಅವರ ಹೆಣ್ಣುಮಕ್ಕಳು ಯಾರೂ ಕಾಡಿನಲ್ಲಿ ಕೆಲಸ ಮಾಡುವುದಿಲ್ಲ

ಪಾರುಲ್ ಅವರ ನಾಲ್ವರು ಪುತ್ರಿಯರಾದ ಪುಷ್ಪಿತಾ, ಪರೋಮಿತಾ, ಪಾಪಿಯಾ ಮತ್ತು ಪಾಪ್ರಿ, ಇವರ್ಯಾರೂ ಕಾಡಿಗೆ ಕೆಲಸಕ್ಕೆ ಹೋಗುವುದಿಲ್ಲ. ಪುಷ್ಪಿತಾ ಮತ್ತು ಪಾಪಿಯಾ ಪಶ್ಚಿಮ ಬಂಗಾಳದ ಇತರ ಜಿಲ್ಲೆಗಳ ಮನೆಗಳಲ್ಲಿ ಮನೆಕೆಲಸ ಮಾಡುತ್ತಾರೆ. ಪರೋಮಿತಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವ 13 ವರ್ಷದ ಕಿರಿಯ ಪುತ್ರಿ ಪಾಪ್ರಿ ಲಕ್ಸ್ಬಗನ್ ಹತ್ತಿರದ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಾಳೆ. “ಪಾಪ್ರಿಗೆ ಟೈಫಾಯಿಡ್ ಮತ್ತು ಮಲೇರಿಯಾ ಇತ್ತು, ಹಾಗಾಗಿ ನಾನು ಅವಳ ಚಿಕಿತ್ಸೆಗೆ 13,000 ರುಪಾಯಿ ಖರ್ಚು ಮಾಡಬೇಕು. ನಾನು ಪ್ರತಿ ತಿಂಗಳು ಅವಳ ಹಾಸ್ಟೆಲ್ ಶುಲ್ಕ 2,000 ರುಪಾಯಿ ಕೂಡ ಕೊಡಬೇಕು,” ಪಾರುಲ್ ಹೇಳುತ್ತಾರೆ.

ಪಾರೂಲ್ ಅವರಿಗೂ ಆರೋಗ್ಯ ಸರಿಯಿಲ್ಲ. ಅವರಿಗೆ ಎದೆನೋವು ಇದೆ. ಈ ವರ್ಷ ಮೀನು ಮತ್ತು ಏಡಿ ಹಿಡಿಯಲು ಹೋಗಲು ಸಾಧ್ಯವಿಲ್ಲ. ಈಗ ಅವರು ತಮ್ಮ ಮಗಳು ಪರೋಮಿತಾ ಮಿಸ್ತ್ರಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

“ಕೋಲ್ಕತ್ತಾದ ವೈದ್ಯರೊಬ್ಬರು ನನಗೆ ಎಂಆರ್‌ಐ ಸ್ಕ್ಯಾನ್ ಮಾಡಲು ಹೇಳಿದರು, ಆದರೆ ಅದಕ್ಕೆ 40,000 ರುಪಾಯಿ ಬೇಕು. ನನ್ನ ಬಳಿ ಅಷ್ಟು ಹಣವಿಲ್ಲ,” ಎಂದು ಹೇಳುತ್ತಾರೆ. ಅವರು ದಕ್ಷಿಣ ಭಾರತದ ಸಿಟಿಗೆ ಹೋಗಲು ನಿರ್ಧರಿಸಿದರು ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ತನ್ನ ಮಗಳು ಮತ್ತು ಅಳಿಯನೊಂದಿಗೆ ವಾಸಿಸಲು ತೀರ್ಮಾನಿಸಿದರು. ಪಾರುಲ್ ಬೆಂಗಳೂರಿನಲ್ಲಿ ವೈದ್ಯರಿಗೆ ತಮ್ಮನ್ನು ತೋರಿಸಿಕೊಂಡಿದ್ದು ವೈದ್ಯರು ಆರು ತಿಂಗಳ ಕಾಲ ವಿಶ್ರಾಂತಿ ಮತ್ತು ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ.

"ನಾನು ನಿರಂತರವಾಗಿ ಭಯವನ್ನು ಅನುಭವಿಸುವುದರಿಂದ, ಅದರಲ್ಲೂ ಕಾಡಿಗೆ ಹೋಗುವಾಗ ಆಗುವ ಭಯದಿಂದ ಎದೆನೋವು ಬಂದಿದೆ ಅಂದುಕೊಂಡೊದ್ದೇನೆ. ನನ್ನ ಗಂಡನನ್ನು ಹುಲಿ ಕೊಂದಿತು, ನನ್ನ ತಂದೆಯ ಮೇಲೂ ದಾಳಿಯಾಯಿತು. ಅದೇ ನನ್ನ ಎದೆನೋವಿಗೆ ಕಾರಣ, ”ಎಂದು ಅವರು ಹೇಳುತ್ತಾರೆ.

ಅನುವಾದ: ಚರಣ್‌ ಐವರ್ನಾಡು

ಇಂಡಿಪೆಂಡೆಂಟ್ ಜರ್ನಲಿಸ್ಟ್ ಆಗಿರುವ ಊರ್ವಶಿ ಸರ್ಕಾರ್ 2016 ರ ಪರಿ ಫೆಲೋ ಕೂಡ ಹೌದು.

Other stories by Urvashi Sarkar
Editor : Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Other stories by Kavitha Iyer
Translator : Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Charan Aivarnad