ಅದು ಬೆಳಗಿನ 7 ಗಂಟೆ. ಅಷ್ಟೊತ್ತಿಗಾಗಲೇ ಡಾಲ್ಟನ್‌ ಗಂಜ್‌ ಪ್ರದೇಶದ ಸಾದಿಕ್‌ ಮಂಜಿಲ್‌ ಚೌಕ್‌ ಚಟುವಟಿಕೆಯಿಂದ ಗಿಜಿಗುಡುತ್ತಿತ್ತು. ಒಂದೆಡೆ ವಾಹನಗಳು ಗುರ್ರ್‌ ಎನ್ನುತ್ತಿದ್ದರೆ, ಅಂಗಡಿಗಳ ಬಾಗಿಲನ್ನು ಎತ್ತುವ ಸದ್ದು ಇನ್ನೊಂದು ಕಡೆಯಿಂದ ಕೇಳುತ್ತಿತ್ತು. ಅದರ ಜೊತೆಗೆ ಹತ್ತಿರದ ಹನುಮಾನ್‌ ದೇವಸ್ಥಾನದ ಮೈಕಿನಿಂದ ಹನುಮಾನ್‌ ಚಾಲಿಸಾದ ರೆಕಾರ್ಡ್‌ ಸೌಂಡ್‌ ತೇಲಿ ಬರುತ್ತಿತ್ತು.

ಅಂಗಡಿಯೊಂದರ ಮೆಟ್ಟಿಲಿನ ಕುಳಿತಿದ್ದ ರಿಷಿ ಮಿಶ್ರಾ ತನ್ನ ಸುತ್ತ ಕುಳಿತಿದ್ದ ಜನರೊಂದಿಗೆ ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದರು. ಅವರ ಮಾತುಕತೆ ಇತ್ತೀಚೆಗೆ ಮುಗಿದ ಚುನಾವಣೆಯ ಫಲಿತಾಂಶ ಮತ್ತು ಹೊಸ ಸರ್ಕಾರವನ್ನು ಯಾರು ರಚಿಸುತ್ತಾರೆ ಎನ್ನುವುದರ ಸುತ್ತ ಸುಳಿಯುತ್ತಿತ್ತು. ತನ್ನ ಸುತ್ತಲಿನ ಜನರ ಮಾತುಕತೆ ರಾಜಕೀಯದ ಸುತ್ತಲೇ ಸುತ್ತುತ್ತಿರುವುದನ್ನು ಗಮನಿಸಿದ ನಜರುದ್ದೀನ್ ಅಹ್ಮದ್ ಕೈಯಲ್ಲಿದ್ದ ತಂಬಾಕನ್ನು ಇನ್ನಷ್ಟು ತಿಕ್ಕುತ್ತಾ, ಅವರ ಮಾತಿನ ನಡುವೆ ಬಾಯಿ ಹಾಕಿ “ನೀವುಗಳು ಸುಮ್ಮನೆ ಯಾಕೆ ವಾದ ಮಾಡುತ್ತಿದ್ದೀರಿ? ಯಾರು ಸರ್ಕಾರ ಮಾಡಿದರೂ ನಮಗೆ ದುಡಿಯುವ ಹಣೆಬರಹ ತಪ್ಪುವುದಿಲ್ಲ” ಎಂದು ಹೇಳಿದರು.

'ಲೇಬರ್ ಚೌಕ್' ಎಂದೂ ಕರೆಯಲ್ಪಡುವ ಈ ಪ್ರದೇಶದಲ್ಲಿ ಪ್ರತಿದಿನ ಬೆಳಿಗ್ಗೆ ಸೇರುವ ಹಲವಾರು ದಿನಗೂಲಿ ಕಾರ್ಮಿಕರಲ್ಲಿ ರಿಷಿ ಮತ್ತು ನಜರುದ್ದೀನ್ ಕೂಡಾ ಸೇರಿದ್ದಾರೆ. ಪಲಾಮು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಜಾರ್ಖಂಡ್‌ ರಾಜ್ಯದ ಹತ್ತಿರದ ಹಳ್ಳಿಗಳ ಜನರು ಪ್ರತಿದಿನ ಬೆಳಗ್ಗೆ ಕೆಲಸ ಹುಡುಕಿಕೊಂಡು ಬಂದು ಸೇರುವ ಪಟ್ಟಣದ ಐದು ಚೌಕಗಳಲ್ಲಿ ಸಾದಿಕ್‌ ಮಂಜಿಲ್‌ ಕೂಡಾ ಒಂದು. ಅಂದು ಇಲ್ಲಿ ಸುಮಾರು 25-30 ಕಾರ್ಮಿಕರು ದೈನಂದಿನ ಕೂಲಿ ಕೆಲಸಕ್ಕಾಗಿ ಕಾಯುತ್ತಿದ್ದರು.

PHOTO • Ashwini Kumar Shukla
PHOTO • Ashwini Kumar Shukla

ಸಿಂಗ್ರಾಹ ಕಲಾನ್ ಗ್ರಾಮದ ರಿಷಿ ಮಿಶ್ರಾ (ಎಡ) ಮತ್ತು ಪ ಲಾ ಮು ಜಿಲ್ಲೆಯ ನಿಯೂ ರಾ ಗ್ರಾಮದ ನಜರುದ್ದೀನ್ (ಬಲ) ಸೇರಿದಂತೆ ಹಲವಾರು ದಿನಗೂಲಿ ಕಾರ್ಮಿಕರು ಪ್ರತಿದಿನ ಬೆಳಿಗ್ಗೆ ಡಾ ಲ್ಟನ್‌ ಗಂಜ್‌ ಪ್ರದೇಶದ ಸಾದಿಕ್ ಮಂಜಿ ಲ್‌ ಬಳಿ ಕೆಲಸ ಹುಡುಕಿಕೊಂಡು ಬಂದು ಸೇರುತ್ತಾರೆ. ತಮ್ಮ ಹಳ್ಳಿಗಳಲ್ಲಿ ಕೆಲಸ ಸಿಗುತ್ತಿ ಲ್ಲ ಎಂದು ಇಲ್ಲಿನ ಕಾರ್ಮಿಕರು ಹೇಳುತ್ತಾರೆ

PHOTO • Ashwini Kumar Shukla
PHOTO • Ashwini Kumar Shukla

' ಲೇಬರ್ ಚೌಕ್ ' ಎಂದೂ ಕರೆಯಲ್ಪಡುವ ಸಾದಿಕ್ ಮಂಜಿಲ್ ಬಳಿ ' ಪ್ರತಿದಿನ 500 ಜನರು ಕೆಲಸ ಹುಡುಕಿಕೊಂಡು ಬರುತ್ತಾರೆ. ಕೇವಲ 10 ಜನರಿಗೆ ಮಾತ್ರ ಕೆಲಸ ಸಿಗುತ್ತದೆ , ಉಳಿದವರು ಬರಿಗೈಯಲ್ಲಿ ಮನೆಗೆ ಹೋಗುತ್ತಾರೆ ' ಎಂದು ನಜರುದ್ದೀನ್ ಹೇಳುತ್ತಾರೆ . ಈ ನಗರದಲ್ಲಿ ಇಂತಹ ಇನ್ನೂ ನಾಲ್ಕು ಚೌಕಗಳಿವೆ

“ಎಂಟು ಗಂಟೆಯ ತನಕ ಇಲ್ಲೇ ಇದ್ದು ನೋಡಿ. ಇನ್ನೂ ಬಹಳ ಜನ ಬರುತ್ತಾರೆ. ಆಗ ಇಲ್ಲಿ ನಿಲ್ಲುವುದಕ್ಕೂ ಜಾಗವಿರುವುದಿಲ್ಲ” ಎಂದು ರಿಷಿ ತನ್ನ ಮೊಬೈಲ್‌ ಫೋನಿನಲ್ಲಿ ಸಮಯ ನೋಡುತ್ತಾ ಹೇಳಿದರು.

ರಿಷಿ 2014ರಲ್ಲಿ ಐಟಿಐ ತರಬೇತಿಯನ್ನು ಪೂರ್ಣಗೊಳಿಸಿದ್ದು ಡ್ರಿಲ್ಲಿಂಗ್ ಯಂತ್ರವನ್ನು ನಿರ್ವಹಿಸುವ ಕೌಶಲವನ್ನು ಹೊಂದಿದ್ದಾರೆ. ಇಂದು ಅದೇ ಕೆಲಸ ಸಿಗುವ ನಿರೀಕ್ಷೆಯಲ್ಲಿ ಅವರು ಇಲ್ಲಿಗೆ ಬಂದಿದ್ದಾರೆ. "ನಾವು ಉದ್ಯೋಗ ಸಿಗುವ ಭರವಸೆಯೊಂದಿಗೆ ಈ ಸರ್ಕಾರಕ್ಕೆ ಮತ ಹಾಕಿದ್ದೇವೆ. [ನರೇಂದ್ರ] ಮೋದಿ 10 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಎಷ್ಟು ಖಾಲಿ ಉದ್ಯೋಗಗಳನ್ನು ಘೋಷಿಸಲಾಗಿದೆ ಮತ್ತು ಎಷ್ಟು ನೇಮಕಾತಿಗಳನ್ನು ಮಾಡಲಾಗಿದೆ?" ಎಂದು ಸಿಂಗ್ರಾಹ ಕಲಾನ್ ಗ್ರಾಮದ ಈ 28 ವರ್ಷದ ಯುವಕ ಕೇಳುತ್ತಾರೆ. "ಈ ಸರ್ಕಾರ ಇನ್ನೂ ಐದು ವರ್ಷಗಳ ಕಾಲ ಇದ್ದರೆ, ನಮಗೆ ಕೆಲಸ ಸಿಗುತ್ತದೆ ಎನ್ನುವ ಯಾವುದೇ ಭರವಸೆ ಇಲ್ಲ" ಎಂದು ಅವರು ಹೇಳಿದರು.

45 ವರ್ಷದ ನಜರುದ್ದೀನ್ ಕೂಡ ಇದೇ ರೀತಿಯ ಭಾವನೆಯನ್ನು ಹೊಂದಿದ್ದಾರೆ. ನಿಯೂರಾ ಗ್ರಾಮಕ್ಕೆ ಸೇರಿದವರಾದ ಅವರು ಮೇಸ್ತ್ರಿ ಕೆಲಸ ಮಾಡುತ್ತಾರೆ. ತನ್ನ ಏಳು ಜನರ ಕುಟುಂಬದಲ್ಲಿ ಸಂಪಾದನೆ ಹೊಂದಿರುವ ಏಕೈಕ ಸದಸ್ಯರೆಂದರೆ ನಜರುದ್ದೀನ್‌ ಮಾತ್ರ. “ಬಡವರು ಮತ್ತು ರೈತರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ?” ಎಂದು ನಜರುದ್ದೀನ್ ಪ್ರಶ್ನಿಸುತ್ತಾರೆ. "ಪ್ರತಿದಿನ 500 ಜನರು ಇಲ್ಲಿಗೆ ಬರುತ್ತಾರೆ. ಕೇವಲ 10 ಜನರಿಗೆ ಮಾತ್ರ ಕೆಲಸ ಸಿಗುತ್ತದೆ, ಉಳಿದವರು ಬರಿಗೈಯಲ್ಲಿ ಮನೆಗೆ ಹೋಗುತ್ತಾರೆ.”

PHOTO • Ashwini Kumar Shukla
PHOTO • Ashwini Kumar Shukla

ಕೆಲಸಕ್ಕಾಗಿ ಕಾಯುತ್ತಿರುವ ಗಂಡಸರು ಮತ್ತು ಹೆಂಗಸರು, ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಯಾರಾದರೂ ಕಾಣಿಸಿಕೊಂಡ ತಕ್ಷಣ, ಆ ದಿನದ ಕೆಲಸವನ್ನು ಪಡೆಯುವ ಭರವಸೆಯಲ್ಲಿ ಈ ಜನರು ಅವರ ಸುತ್ತಲೂ ಜಮಾಯಿಸುತ್ತಾರೆ

ನಮ್ಮ ಮಾತುಕತೆ ನಡುವೆ ಮೋಟಾರುಬೈಕಿನಲ್ಲಿ ಒಬ್ಬ ವ್ಯಕ್ತಿ ಬಂದ. ಆತನ ಆಗಮನದ ನಂತರ ಸ್ವಲ್ಪ ಹೊತ್ತಿನ ಮಟ್ಟಿಗೆ ನಮ್ಮ ಮಾತುಕತೆ ನಿಂತುಹೋಯಿತು. ಆ ದಿನದ ಮಟ್ಟಿಗೆ ಕೆಲಸ ಸಿಗಬಹುದೆನ್ನುವ ಆಸೆಯೊಂದಿಗೆ ಆತನನ್ನು ಅಲ್ಲಿದ್ದವರು ಸುತ್ತುವರೆದರು. ಸಂಬಳ ಒಪ್ಪಿಗೆಯಾದ ನಂತರ ಯುವಕನೊಬ್ಬ ಬೈಕನ್ನು ಏರುವುದರೊಂದಿಗೆ ಬಂದಿದ್ದ ವ್ಯಕ್ತಿ ಬೈಕ್‌ ಮತ್ತು ಹಿಂಬದಿ ಸವಾರನೊಂದಿಗೆ ಅಲ್ಲಿಂದ ತೆರಳಿದ.

ರಿಷಿ ಮತ್ತು ಉಳಿದ ಕಾರ್ಮಿಕರು ಅಲ್ಲಿಂದ ಮತ್ತೆ ತಾವು ಇದ್ದಲ್ಲಿಗೆ ತೆರಳಿದರು. ಆಗ ರಿಷಿ “ಇದೆಂತಾ ತಮಾಷಾ [ಸರ್ಕಸ್] ನೋಡಿ. ಒಬ್ಬರು ಬರುತ್ತಿದ್ದ ಹಾಗೆ ಇಲ್ಲಿರುವವರೆಲ್ಲ ಕುಣಿಯಲು ಆರಂಭಿಸುತ್ತಾರೆ” ಎಂದು ಪೇಲವ ನಗು ನಗುತ್ತಾ ಹೇಳಿದರು.

ಮತ್ತೆ ಹೋಗಿ ಅದೇ ಸ್ಥಳದಲ್ಲಿ ಕುಳಿತ ರಿಷಿ, “ಯಾರು ಸರ್ಕಾರ ರಚಿಸಿದರೂ ಅದರಿಂದ ಬಡವರಿಗೆ ಸಹಾಯವಾಗಬೇಕು. ಮೆಹಂಗಾಯಿ [ಬೆಲೆಯೇರಿಕೆ] ಕಡಿಮೆಯಾಗಬೇಕು. ದೇವಸ್ಥಾನ ಕಟ್ಟುವುದರಿಂದ ಬಡವರ ಹೊಟ್ಟೆ ತುಂಬುತ್ತದೆಯೇ?” ಎಂದು ಕೇಳಿದರು.

ಅನುವಾದ: ಶಂಕರ. ಎನ್. ಕೆಂಚನೂರು

Ashwini Kumar Shukla

ಅಶ್ವಿನಿ ಕುಮಾರ್ ಶುಕ್ಲಾ ಜಾರ್ಖಂಡ್ ಮೂಲದ ಸ್ವತಂತ್ರ ಪತ್ರಕರ್ತ ಮತ್ತು ಹೊಸದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (2018-2019) ಕಾಲೇಜಿನ ಪದವೀಧರರು. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.

Other stories by Ashwini Kumar Shukla
Editor : Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Other stories by Sarbajaya Bhattacharya
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru