“ಮೊದಲ ಬಾರಿ ಡೋಕ್ರಾ ಕಲೆ ನೋಡಿದಾಗ ಯಾವುದೋ ನೋಡುತ್ತಿರುವಂತೆ ಭಾಸವಾಗಿತ್ತು” ಎನ್ನುತ್ತಾರೆ 41 ವರ್ಷದ ಪಿಜೂಷ್‌ ಮೊಂಡಲ್.‌ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಈ ಕುಶಲಕರ್ಮಿ ಈಗ ಸುಮಾರು 12 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯು ಸಿಂಧೂ ಕಣಿವೆ ನಾಗರಿಕತೆಯ ಹಿಂದಿನ ಭಾರತದ ಅತ್ಯಂತ ಹಳೆಯ ಸಾಂಪ್ರದಾಯಿಕ ಲೋಹವನ್ನು ಎರಕ ಹೊಯ್ಯುವ ವಿಧಾನಗಳಲ್ಲಿ ಒಂದಾದ ಲಾಸ್ಟ್-ವ್ಯಾಕ್ಸ್‌ (lost-wax) ತಂತ್ರವನ್ನು ಒಳಗೊಂಡಿದೆ.

ಡೋಕ್ರಾ ಅಥವಾ ಧೋಕ್ರಾ ಎಂಬ ಪದವು ಮೂಲತಃ ಅಲೆಮಾರಿ ಕುಶಲಕರ್ಮಿಗಳ ಗುಂಪಿನ ಹೆಸರಾಗಿದೆ, ಅವರು ಒಂದು ಕಾಲದಲ್ಲಿ ಪೂರ್ವ ಭಾರತದ ಒಂದು ತುದಿಯಿಂದ ಇನ್ನೊಂದು ತುದಿಗೆ ತಿರುಗಾಡುತ್ತಿದ್ದರು.

ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಾದ್ಯಂತ ಹರಡಿರುವ ಛೋಟಾನಾಗ್‌ಪುರ ಪ್ರಸ್ಥಭೂಮಿಯ ಅಡಿಭಾಗದಲ್ಲಿ ತಾಮ್ರದ ಅಪಾರ ನಿಕ್ಷೇಪಗಳಿವೆ. ಡೋಕ್ರಾ ವಿಗ್ರಹಗಳನ್ನು ತಾಮ್ರದ ಉತ್ಪನ್ನಗಳಾದ ಹಿತ್ತಾಳೆ ಮತ್ತು ಕಂಚಿನಿಂದ ತಯಾರಿಸಲಾಗುತ್ತದೆ. ಡೋಕ್ರಾ ಉದ್ಯಮವು ಭಾರತದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿದೆಯಾದರೂ, ಬಂಕುರಾ, ಬುರ್ದ್ವಾನ್ ಮತ್ತು ಪುರುಲಿಯಾ ಜಿಲ್ಲೆಗಳಲ್ಲಿ ತಯಾರಾಗುವ 'ಬಂಗಾಳ ಡೋಕ್ರಾ' GI ಪ್ರಮಾಣಪತ್ರವನ್ನು ಪಡೆದುಕೊಂಡಿದೆ.

ಡೋಕ್ರಾ ಶಿಲ್ಪಕಲೆಯ ಮೊದಲ ಹಂತವೆಂದರೆ ಪ್ರತಿಮೆಯ ಆಕಾರವನ್ನು ಆಧರಿಸಿ ಮಣ್ಣಿನ ಆಕೃತಿಯನ್ನು ರಚಿಸುವುದು. ಸೂಕ್ಷ್ಮವಾದ ವಿನ್ಯಾಸವನ್ನು ರಚಿಸಲು ಈ ಆಕೃತಿಯನ್ನು ನಂತರ ಜೇನುಮೇಣದೊಂದಿಗೆ ಧುನೋ (ಸಾಲ್‌ ಮರದ ರಾಳ) ಬೆರೆಸಿ ಮುಚ್ಚಲಾಗುತ್ತದೆ. ಮತ್ತೊಂದು ಮಣ್ಣಿನ ಪದರವನ್ನು ಇಡೀ ಆಕೃತಿಯ ಮೇಲೆ ಒತ್ತಲಾಗುತ್ತದೆ. ಕುದಿಯುವ ಲೋಹವನ್ನು ಸುರಿದಾಗ ಅಂಟು ಹೊರಗೆ ಬರುವಂತೆ ಒಂದೆರಡು ಕಡೆ ರಂಧ್ರಗಳನ್ನು ಬಿಟ್ಟಿರಲಾಗುತ್ತದೆ. ಅದರ ಮೂಲಕವೇ ಲೋಹದ ಎರಕವನ್ನು ಹುಯ್ಯಲಾಗುತ್ತದೆ.

“ಈ ಕಲೆಯ ಪ್ರಕ್ರಿಯೆಯಲ್ಲಿ ಪ್ರಕೃತಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ” ಎನ್ನುತ್ತಾರೆ ಸೀಮಾ ಪಾಲ್‌ ಮೊಂಡಲ್.‌ “ಸಾಲ್‌ ಮರಗಳು ಇಲ್ಲದೆ ಹೋದರೆ ಮೇಣದ ಮಿಶ್ರಣ ತಯಾರಿಸುವಾಗ ಬೇಕಾಗುವ ಮರದ ರಾಳ ಸಿಗುವುದಿಲ್ಲ. ಜೇನುನೊಣಗಳು ಮತ್ತು ಅವುಗಳ ಗೂಡುಗಳಿಲ್ಲದೆ ಹೋದರೆ ನನಗೆ ಮೇಣ ಸಿಗುವುದಿಲ್ಲ.”  ಜೊತೆಗೆ ಡೋಕ್ರಾ ಅಚ್ಚು ಎರೆಯುವಿಕೆಯು ವಿವಿಧ ಬಗೆಯ ಮಣ್ಣುಗಳ ಲಭ್ಯತೆ ಹಾಗೂ ಸೂಕ್ತ ವಾತಾವರಣವೂ ತಮ್ಮದೇ ಆದ ಪ್ರಮುಖ ಪಾತ್ರಗಳನ್ನು ಹೊಂದಿವೆ.

ಪಿಯೂಷ್ ಅವರ ಸ್ಟುಡಿಯೋ ಅಥವಾ ಕಾರ್ಯಾಗಾರದಲ್ಲಿ ಇಟ್ಟಿಗೆ ಮತ್ತು ಮಣ್ಣಿನಿಂದ ಮಾಡಿದ 3-5 ಅಡಿ ಆಳದ ಎರಡು ಗೂಡುಗಳಿವೆ. ವಿಗ್ರಹದ ಮೇಲಿನ ಪದರವು ಒಣಗಿದ ತಕ್ಷಣ, ಪಿಯೂಷ್ ತನ್ನ ಸಹಾಯಕರೊಂದಿಗೆ ಅವುಗಳನ್ನು ಎರಡು ಗೂಡುಗಳಲ್ಲಿ ಒಂದರಲ್ಲಿ ಸುಡಲು ಅವಕಾಶ ಮಾಡಿಕೊಡುತ್ತಾರೆ. ಜೇಡಿಮಣ್ಣು ಸುಟ್ಟು ನಂತರ ಮೇಣವು ಕರಗುತ್ತದೆ, ನಂತರ ಕರಗಿದ ಲೋಹವನ್ನು ಸುರಿಯಲಾಗುತ್ತದೆ. ಅಚ್ಚನ್ನು ಒಂದು ದಿನದ ಕಾಲ ತಣ್ಣಗಾಗಲು ಬಿಡಲಾಗುತ್ತದೆ, ಆದರೆ ಬೇಡಿಕೆ ತುರ್ತಿನದ್ದಾದರೆ ಅದನ್ನು 4-5 ಗಂಟೆಗಳ ಒಳಗೆ ತಣ್ಣಗಾಗಿಸಲಾಗುತ್ತದೆ. ನಂತರ ಮಣ್ಣಿನಿಂದ ಶಿಲ್ಪವನ್ನು ಹೊರತೆಗೆಯಲಾಗುತ್ತದೆ.

ವಿಡಿಯೋ ನೋಡಿ: ಡೋಕ್ರಾ, ಎನ್ನುವ ಅದ್ಭುತ ಶಿಲ್ಪಕಲೆ

ಅನುವಾದ: ಶಂಕರ. ಎನ್. ಕೆಂಚನೂರು

Sreyashi Paul

ಶ್ರೇಯಶಿ ಪಾಲ್ ಪಶ್ಚಿಮ ಬಂಗಾಳದ ಶಾಂತಿನಿಕೇತನ ಮೂಲದ ಸ್ವತಂತ್ರ ವಿದ್ವಾಂಸರು ಮತ್ತು ಸೃಜನಶೀಲ ಬರಹಗಾರರು.

Other stories by Sreyashi Paul
Text Editor : Swadesha Sharma

ಸ್ವದೇಶ ಶರ್ಮಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಂಶೋಧಕ ಮತ್ತು ವಿಷಯ ಸಂಪಾದಕರಾಗಿದ್ದಾರೆ. ಪರಿ ಗ್ರಂಥಾಲಯಕ್ಕಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಾರೆ.

Other stories by Swadesha Sharma
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru