ರೂಪೇಶ್ ಮೊಹರ್ಕರ್ ಅವರು 20ರ ಹರೆಯದ ಯುವಕ ಯುವತಿಯರನ್ನು ತಮ್ಮ ಸ್ಪೂರ್ತಿದಾಯಕ ಭಾಷಣದ ಮೂಲಕ ಪ್ರಚೋದಿಸಿ ಒಂದುಗೂಡಿಸುತ್ತಾರೆ.

ಯುವಕರು ಅವರ ಮಾತುಗಳನ್ನು ಕೇಳುತ್ತಿರುವಾಗ 31 ವರ್ಷ ವಯಸ್ಸಿನ ರೂಪೇಶ್ "ಗಮನದಲ್ಲಿ ಇಟ್ಟುಕೊಳ್ಳಿ" ಎಂದು ಎಚ್ಚರಿಸುತ್ತಾರೆ, ಈಗ ಮಾತ್ರವಲ್ಲ, ಎಂದೆಂದಿಗೂ "ಆಲಸ್ಯಕ್ಕೆ ಜಾಗವಿಲ್ಲ!" ಎಂದು ಯುವಕರಿಗೆ ನೆನಪಿಸುತ್ತಾರೆ.

ಒಪ್ಪಿಕೊಂಡಂತೆ ತಲೆಯಾಡಿಸುತ್ತಾ, ಮುಖಗಳು ಗಂಭೀರವಾಗಿಸಿಕೊಂಡು ಆ ಯುವ ಗುಂಪು ಗೆಲುವಿನ ಘೋಷಣೆ ಕೂಗುತ್ತದೆ. ಎಲ್ಲರನ್ನೂ ಉತ್ತೇಜಿಸಲಾಗಿದೆ. ನಂತರ ಆ ಗುಂಪು ತಾನು ಒಂದು ತಿಂಗಳಿಂದ ಮಾಡುತ್ತಿರುವ ದೈಹಿಕ-ತರಬೇತಿಯಾದ ಸ್ಪ್ರಿಂಟಿಂಗ್, ರನ್ನಿಂಗ್ ಮತ್ತು ಸ್ಟ್ರೆಚಿಂಗ್ ಮಾಡಲು ಹಿಂತಿರುಗಿತು.

ಇದು ಏಪ್ರಿಲ್ ತಿಂಗಳ ಆರಂಭ, ಬೆಳಿಗ್ಗೆ 6 ಗಂಟೆ. ನಗರದ ಏಕೈಕ ಸಾರ್ವಜನಿಕ ಮೈದಾನ - ಭಂಡಾರಾದ ಶಿವಾಜಿ ಕ್ರೀಡಾಂಗಣ ಯುವಕರ ಅಬ್ಬರದಿಂದ ತುಂಬಿಹೋಗಿದೆ.ಇ ಲ್ಲಿ ಬೆವರು ಸುರಿಸುತ್ತಾ 100 ಮೀಟರ್, 1,600 ಮೀಟರ್ ಓಡುತ್ತಾ, ಶಾರ್ಟ್‌ಪುಟ್ ಅಭ್ಯಾಸ ಮಾಡುತ್ತಿದ್ದಾರೆ. ಶಕ್ತಿ ಹೆಚ್ಚಲು ಇತರ ಡ್ರಿಲ್‌ಗಳನ್ನು ಮಾಡುತ್ತಿದ್ದಾರೆ.

ಅವರ ಮನಸ್ಸಿನಲ್ಲಿರುವ ಅತ್ಯಂತ ಕೊನೆಯ ಸಂಗತಿಯೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಲೋಕಸಭಾ ಚುನಾವಣೆ. ಭಂಡಾರಾ-ಗೊಂಡಿಯಾ ಸಂಸದೀಯ ಕ್ಷೇತ್ರದಲ್ಲಿ ಏಪ್ರಿಲ್ 19, 2024 ರಂದು ಮೊದಲ ಹಂತದಲ್ಲಿ ದೀರ್ಘವಾದ, ಬೆವರಿಳಿಸುವ ಮತದಾನ ನಡೆಯಲಿದೆ.

ಚುನಾವಣೆಯ ಈ ಕದನದಿಂದ ದೂರ ಉಳಿದಿರುವ, ಈ ಯುವಕ-ಯುವತಿಯರು ಮುಂದಿನ ರಾಜ್ಯ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದಾರೆ, ಅರ್ಜಿಗಳು ಏಪ್ರಿಲ್ 15ರಂದು ಕೊನೆಗೊಳ್ಳುತ್ತವೆ. ಪರೀಕ್ಷೆಯಲ್ಲಿ ದೈಹಿಕ ಮತ್ತು ಲಿಖಿತ ಪರೀಕ್ಷೆ- ಇವೆರಡೂ ಸೇರಿವೆ. ಈ ಪರೀಕ್ಷೆಗಳು ಪೊಲೀಸ್ ಕಾನ್ಸ್‌ಟೇಬಲ್‌ಗಳು, ಕಾನ್‌ಸ್ಟೆಬಲ್ ಚಾಲಕರು, ರಾಜ್ಯ ಮೀಸಲು ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್‌ಮನ್‌ಗಳು ಮತ್ತು ಜೈಲು ಕಾನ್‌ಸ್ಟೆಬಲ್‌ಗಳ ಖಾಲಿ ಹುದ್ದೆಗಳನ್ನು ತುಂಬಲು ಒಂದೆರಡು ತಿಂಗಳುಗಳಲ್ಲಿ ನಡೆಯಲಿವೆ.

PHOTO • Jaideep Hardikar
PHOTO • Jaideep Hardikar

ರೂಪೇಶ್ ಮೊಹರ್ಕರ್ (ಎಡ) ಪೂರ್ವ ಮಹಾರಾಷ್ಟ್ರದ ಭಂಡಾರಾದ ಓರ್ವ ರೈತನ ಮಗ, ರಾಜ್ಯ ಪೊಲೀಸ್‌ ಇಲಾಖೆಗೆ ಸೇರುವ ಕೊನೆಯ ಅವಕಾಶಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಇವರು ಶಾಶ್ವತ ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯುವ ಗುರಿ ಹೊಂದಿರುವ ಭಂಡಾರಾ ಮತ್ತು ಗೊಂಡಿಯಾ ಜಿಲ್ಲೆಗಳ ಸಣ್ಣ ಸಣ್ಣ ರೈತರ ಮಕ್ಕಳಿಗೆ ತರಬೇತಿ ನೀಡುತ್ತಾರೆ

ಭಾರತದ ಯುವಜನರಲ್ಲಿ ಸುಮಾರು ಶೇಕಡಾ 83ರಷ್ಟು‌ ಜನ ನಿರುದ್ಯೋಗಿಗಳು, ಆದರೆ 2000ರಲ್ಲಿ ಇದ್ದ ಶೇಕಡಾ 54.2ರಷ್ಟು ನಿರುದ್ಯೋಗಿಗಳಲ್ಲಿ ಮಾಧ್ಯಮಿಕ ಅಥವಾ ಉನ್ನತ ಶಿಕ್ಷಣ ಹೊಂದಿರುವವರ ಪ್ರಮಾಣ 2022ರಲ್ಲಿ ಶೇಕಡಾ 65.7ಕ್ಕೆ ಏರಿಕೆಯಾಗಿದೆ ಎಂದು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್‌ಒ) ಮತ್ತು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಡೆವಲಪ್ಮೆಂಟ್ (ಐಎಚ್‌ಡಿ) ಇತ್ತೀಚೆಗೆ ಬಿಡುಗಡೆ ಮಾಡಿರುವ 2024 ರ ಭಾರತದ ನಿರುದ್ಯೋಗ ವರದಿ ಹೇಳುತ್ತದೆ.

ಗ್ರಾಮೀಣ ಪ್ರದೇಶದ ಯುವಕರ ನಿರುದ್ಯೋಗ ಮತ್ತು ಅವರೊಳಗೆ ಕುದಿಯುತ್ತಿರುವ ಆತಂಕಕ್ಕೆ ಒಂದು ಮುಖವೆಂಬುದು ಇದ್ದರೆ, ಅದನ್ನು ಪರಸ್ಪರ ಪೈಪೋಟಿ ನಡೆಸುತ್ತಿರುವ ಶಿವಾಜಿ ಕ್ರೀಡಾಂಗಣದಂತ ಸ್ಥಳಗಳಲ್ಲಿ ಕಾಣಬಹುದು. ಆದರೆ ಇದು ಕಠಿಣ ಎಂಬುದು ಕೆಲವರಿಗೆ ಮಾತ್ರ ಗೊತ್ತು. ಕೆಲವೇ ಕೆಲವು ಖಾಲಿ ಹುದ್ದೆಗಳಿಗೆ ಲಕ್ಷಗಟ್ಟಲೆ ಜನ ಪೈಪೋಟಿ ನಡೆಸುತ್ತಿದ್ದಾರೆ.

ಭಂಡಾರಾ ಮತ್ತು ಗೊಂಡಿಯಾ ಸಮೃದ್ಧವಾದ ಕಾಡನ್ನು ಹೊಂದಿರುವ ಹೆಚ್ಚು ಮಳೆ ಬೀಳುವ ಜಿಲ್ಲೆಗಳು, ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ, ಆದರೆ ಗಣನೀಯ ಪ್ರಮಾಣದಲ್ಲಿರುವ ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳ ಜನರ ಬದುಕನ್ನು ಹೀರಿಕೊಳ್ಳುವಂತ ಯಾವುದೇ ದೊಡ್ಡ ಕೈಗಾರಿಕೆಗಳು ಇಲ್ಲಿಲ್ಲ. ಕಳೆದ ಎರಡು ದಶಕಗಳಲ್ಲಿ ಈ ಜಿಲ್ಲೆಗಳಿಂದ ಸಣ್ಣ, ಅತಿ ಸಣ್ಣ ಮತ್ತು ಭೂರಹಿತ ರೈತರು ಬೇರೆ ರಾಜ್ಯಗಳಿಗೆ ಭಾರೀ ಪ್ರಮಾಣದಲ್ಲಿ ವಲಸೆ ಹೋಗಿದ್ದಾರೆ.

ಮಹಾರಾಷ್ಟ್ರ ಗೃಹ ಇಲಾಖೆ ಜಿಲ್ಲಾವಾರು ಕೋಟಾದೊಂದಿಗೆ 17,130 ಖಾಲಿ ಹುದ್ದೆ ಗಳನ್ನು ಭರ್ತಿ ಮಾಡಲು ನೇಮಕಾತಿ ಅಭಿಯಾನವ ನ್ನು ಆರಂಭಿಸಿದೆ. ಭಂಡಾರ ಪೊಲೀಸರಿಗೆ 60 ಹುದ್ದೆಗಳಿದ್ದು, ಅದರಲ್ಲಿ 24 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಗೊಂಡಿಯಾಗೆ ಸುಮಾರು 110 ಹುದ್ದೆ ಗಳನ್ನು ನೀಡಲಾಗಿದೆ.

ಇವುಗಳಲ್ಲಿ ಒಂದು ಹುದ್ದೆಗೆ ರೂಪೇಶ್ ಪ್ರಯತ್ನ ನಡೆಸುತ್ತಿದ್ದಾರೆ. ಬಾಲ್ಯದಲ್ಲಿಯೇ ತಂದೆ ತೀರಿಕೊಂಡ ನಂತರ ರೂಪೇಶ್ ಅವರನ್ನು ಅವರ ತಾಯಿ ಬೆಳೆಸಿದರು. ಈ ಕುಟುಂಬಕ್ಕೆ ಭಂಡಾರಾ ಬಳಿಯ ಸೋನುಲಿ ಗ್ರಾಮದಲ್ಲಿ ಒಂದು ಎಕರೆ ಜಮೀನಿದೆ. ಈ ಹುದ್ದೆಯನ್ನು ಪಡೆಯಲು ಮತ್ತು ವರ್ದಿ (ಸಮವಸ್ತ್ರ) ಧರಿಸಲು ಇದು ಅವರಿಗೆ ಇರುವ ಕೊನೆಯ ಅವಕಾಶವಾಗಿದೆ.

"ನನ್ನಲ್ಲಿ ಯಾವುದೇ ಪ್ಲಾನ್ ಬಿ ಇಲ್ಲ."

PHOTO • Jaideep Hardikar

ಭಂಡಾರದ ಶಿವಾಜಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ತರಬೇತಿಯ ವೇಳೆ ರೂಪೇಶ್ ಮೊಹರ್ಕರರ ಸುಮಾರು 50 ಯುವಕ - ಯುವತಿಯರು ಇರುವ ತಂಡ

ಅವರು ತಮ್ಮ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಲೇ, ಪೂರ್ವ ಮಹಾರಾಷ್ಟ್ರದ ಆರ್ಥಿಕವಾಗಿ ಹಿಂದುಳಿದಿರುವ ಈ ಜಿಲ್ಲೆಯ ಸುಮಾರು 50 ಯುವಕ - ಯುವತಿಯರಿಗೆ ಮಾರ್ಗದರ್ಶನ ನೀಡುತ್ತಾರೆ.

ರೂಪೇಶ್ ತಮ್ಮ ಸ್ವಂತ ಹೋರಾಟದ ನಂತರ ಹೆಸರಿಗೆ ತಕ್ಕಂತೆ 'ಸಂಘರ್ಷ್' ಎಂದು ಹೆಸರಿನ ಅಕಾಡೆಮಿಯನ್ನು ನಡೆಸುತ್ತಾರೆ. ಅವರ ತಂಡ ಪ್ರತಿಯೊಬ್ಬ ಸದಸ್ಯರೂ ಭಂಡಾರಾ ಮತ್ತು ಗೊಂಡಿಯಾ ಜಿಲ್ಲೆಗಳ ಹಳ್ಳಿಗಳಿಂದ ಬಂದವರು, ಸಣ್ಣ ಸಣ್ಣ ರೈತರ ಮಕ್ಕಳು. ಇವರಿಗೆ ಇರುವ ಗುರಿ ಒಂದೇ - ಶಾಶ್ವತ ಉದ್ಯೋಗವನ್ನು ಪಡೆಯುವುದು, ಸಮವಸ್ತ್ರವನ್ನು ಧರಿಸಿ ತಮ್ಮ ಕುಟುಂಬದ ಹೊರೆಗಳನ್ನು ಕಡಿಮೆ ಮಾಡುವುದು. ಅವರಲ್ಲಿ ಪ್ರತಿಯೊಬ್ಬರೂ ಹೈಯರ್ ಸೆಕೆಂಡರಿ ಶಾಲೆಯ ವರೆಗೆ ಉತ್ತೀರ್ಣರಾಗಿದ್ದಾರೆ, ಕೆಲವೇ ಕೆಲವರು ಪದವಿ ಪಡೆದಿದ್ದಾರೆ.

ಅವರಲ್ಲಿ ಎಷ್ಟು ಮಂದಿ ಹೊಲದಲ್ಲಿ ಕೆಲಸ ಮಾಡಿದ್ದಾರೆ? ಎಲ್ಲರೂ ಕೈ ಎತ್ತುತ್ತಾರೆ.

ಅವರಲ್ಲಿ ಎಷ್ಟು ಮಂದಿ ಕೆಲಸಕ್ಕಾಗಿ ಬೇರೆ ಕಡೆಗೆ ವಲಸೆ ಹೋಗಿದ್ದಾರೆ? ಅವರಲ್ಲಿ ಕೆಲವರು ಅದನ್ನೂ ಈ ಹಿಂದೆ ಮಾಡಿದ್ದರು.

ಅವರಲ್ಲಿ ಹೆಚ್ಚಿನವರು ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಅಡಿಯಲ್ಲಿ ಕೆಲಸ ಮಾಡಿದ್ದಾರೆ.

ಇದು ಕೇವಲ ಒಂದು ಗುಂಪು ಅಷ್ಟೇ. ಕ್ರೀಡಾಂಗಣದಲ್ಲಿ ಇಂತಹ ಹಲವಾರು ಅನೌಪಚಾರಿಕ ಅಕಾಡೆಮಿ ತಂಡಗಳಿವೆ.ಇವರಲ್ಲಿ ಹೆಚ್ಚಿನ ತಂಡಗಳನ್ನು ರೂಪೇಶ್ ಅವರಂತೆ ಪರೀಕ್ಷೆಯಲ್ಲಿ ವಿಫಲ ಪ್ರಯತ್ನಗಳನ್ನು ಮಾಡಿದವರು ಮುನ್ನಡೆಸುತ್ತಿದ್ದಾರೆ.

PHOTO • Jaideep Hardikar
PHOTO • Jaideep Hardikar

ಭಂಡಾರಾ ನಗರದ ಏಕೈಕ ಸಾರ್ವಜನಿಕ ಮೈದಾನದಲ್ಲಿ, ಇಪ್ಪತ್ತರ ಹರೆಯದ ಯುವಕ-ಯುವತಿಯರು ರಾಜ್ಯ ಪೊಲೀಸ್ ನೇಮಕಾತಿ ಅಭಿಯಾನ 2024 ಕ್ಕಾಗಿ ಬೆವರು ಸುರಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಮೊದಲ ಅಥವಾ ಎರಡನೇ ಬಾರಿಗೆ ಮತದಾನ ಮಾಡುತ್ತಿದ್ದಾರೆ, ತಮ್ಮ ಭವಿಷ್ಯದ ಬಗ್ಗೆ ಆತಂಕ ಹೊಂದಿದ್ದಾರೆ

ಇಲ್ಲಿ ದೈಹಿಕ ಕಸರತ್ತು ನಡೆಸುತ್ತಿರುವ ಯುವಸಮೂಹದಲ್ಲಿ ಮೊದಲ ಅಥವಾ ಎರಡನೇ ಬಾರಿ ಮತದಾನ ಮಾಡುತ್ತಿರುವವರು ಇದ್ದಾರೆ. ಅವರಲ್ಲಿ ಆಕ್ರೋಶ ತುಂಬಿದೆ, ಆದರೆ ತಮ್ಮ ವೃತ್ತಿಜೀವನ ಮತ್ತು ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ಇವರು ಇತರ ಕ್ಷೇತ್ರಗಳಲ್ಲೂ ಸುರಕ್ಷಿತವಾದ ಉದ್ಯೋಗಗಳನ್ನು, ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ, ಹಳ್ಳಿಗಳಲ್ಲಿ ಉತ್ತಮ ಜೀವನ ಮತ್ತು ಸಮಾನ ಅವಕಾಶಗಳನ್ನು ಪಡೆಯಲು ಬಯಸುತ್ತಾರೆ ಎಂದು ಪರಿಗೆ ತಿಳಿಸಿದ್ದಾರೆ. ಅವರು ಸ್ಥಳೀಯ ನಿವಾಸಿಗಳಿಗೆ ಜಿಲ್ಲಾ ಪೊಲೀಸ್ ಖಾಲಿ ಹುದ್ದೆಗಳಲ್ಲಿ ಕೋಟಾವನ್ನು ನೀಡಲು ಒತ್ತಾಯಿಸುತ್ತಿದ್ದಾರೆ.

"ಈ ನೇಮಕಾತಿ ಮೂರು ವರ್ಷಗಳ ನಂತರ ನಡೆಯುತ್ತಿದೆ," ಎಂದು ಗುರುದೀಪ್ ಸಿಂಗ್ ಬಚ್ಚಿಲ್ ಹೇಳುತ್ತಾರೆ. ಇವರು ಮಹತ್ವಾಕಾಂಕ್ಷೆಯನ್ನು ಹೊಂದಿರುವ 32 ವರ್ಷ ವಯಸ್ಸಿನ ಯುವಕ. ರೂಪೇಶ್ ಅವರಂತೆ ಇವರೂ ಕೊನೆಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಿವೃತ್ತ ಪೊಲೀಸ್ ಪೇದೆಯೊಬ್ಬರ ಮಗನಾಗಿರುವ ರೂಪೇಶ್ ಅವರು ಪೊಲೀಸ್ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ದಶಕದಿಂದ ಪ್ರಯತ್ನಿಸುತ್ತಿದ್ದಾರೆ. "ನಾನು ದೈಹಿಕ ಪರೀಕ್ಷೆಗಳಲ್ಲಿ ಪಾಸಾದರೂ, ಲಿಖಿತ ಪರೀಕ್ಷೆಯಲ್ಲಿ ಬಾಕಿಯಾಗುತ್ತೇನೆ,” ಎಂದು ಆಕಾಂಕ್ಷಿಗಳಿಂದ ತುಂಬಿರುವ ಕ್ರೀಡಾಂಗಣದಾದ್ಯಂತ ನಡೆಯುತ್ತಾ ಹೇಳುತ್ತಾರೆ.

ಮತ್ತೊಂದು ಸಮಸ್ಯೆಯಿದೆ: ಮಹಾರಾಷ್ಟ್ರದ ಮುಂದುವರಿದ ಪ್ರದೇಶಗಳಿಂದ ಒಳ್ಳೆಯ ರೀತಿಯಲ್ಲಿ ತಯಾರಾಗಿರುವ ಆಕಾಂಕ್ಷಿಗಳು ಭಂಡಾರಾ ಮತ್ತು ಗೊಂಡಿಯಾದಂತಹ ಹಿಂದುಳಿದ ಪ್ರದೇಶಗಳಲ್ಲಿ ಇರುವ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಇವರು ಸ್ಥಳೀಯರನ್ನು ಹಿಂದಿಕ್ಕುತ್ತಾರೆ. ಇದರಿಂದ ಹೆಚ್ಚಿನ ಆಕಾಂಕ್ಷಿಗಳು ದುಃಖಕ್ಕೆ ಒಳಗಾಗುತ್ತಾರೆ. ಎಡಪಂಥೀಯ-ತೀವ್ರವಾದ (ಎಲ್‌ಡಬ್ಲ್ಯೂಇ) ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಗಡ್ಚಿರೋಲಿಯಲ್ಲಿ ಸ್ಥಳೀಯ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಿ, ಪೊಲೀಸ್ ಉದ್ಯೋಗಗಳನ್ನು ಪಡೆಯಬಹುದು. ಹೀಗಾಗಿ ರೂಪೇಶ್ ಮತ್ತು ಇತರರ ಮುಂದೆ ಸವಾಲುಗಳಿವೆ.

ಆದ್ದರಿಂದ, ಅವರೆಲ್ಲರೂ ಅಭ್ಯಾಸ ಮಾಡುತ್ತಾರೆ ಮತ್ತು ಶ್ರಮಪಟ್ಟು ಅಭ್ಯಾಸ ಮಾಡುತ್ತಾರೆ.

ಕ್ರೀಡಾಂಗಣದ ಗಾಳಿ ನೂರು ಕಾಲುಗಳ ಓಟದಿಂದ ಎದ್ದ ಕೆಂಪು ಧೂಳಿನಿಂದ ತುಂಬಿ ಹೋಗಿದೆ. ಆಕಾಂಕ್ಷಿಗಳು ಸಾಧಾರಣ ಟ್ರ್ಯಾಕ್-ಸೂಟ್‌ಗಳು ಅಥವಾ ಪ್ಯಾಂಟ್‌ಗಳನ್ನು ಧರಿಸಿದ್ದಾರೆ; ಅವರಲ್ಲಿ ಕೆಲವರು ಮಾತ್ರ ಬೂಟುಗಳನ್ನು ಧರಿಸಿದ್ದಾರೆ, ಇತರರು ಬರಿ ಪಾದಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ಭವಿಷ್ಯವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಅಡೆತಡೆಯೂ ಅವರನ್ನು ವಿಚಲಿತಗೊಳಿಸುವುದಿಲ್ಲ, ಇಲ್ಲಿ ಚುನಾವಣೆಗಳು ಕೂಡ ತುಂಬಾ ದೂರದಲ್ಲಿ ಇವರಿಗೆ ಕಾಣುತ್ತವೆ.

PHOTO • Jaideep Hardikar
PHOTO • Jaideep Hardikar

ಎಡ: ರೂಪೇಶ್ ಮೊಹರ್ಕರ್ ಭಂಡಾರಾದಲ್ಲಿ ತನ್ನ ಚಿಕ್ಕಮ್ಮನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಬಾಲ್ಯದಲ್ಲಿಯೇ ತಂದೆ ತೀರಿಕೊಂಡಿದ್ದರಿಂದ, ಇವರ ತಾಯಿಯೇ ಇವರನ್ನು ಬೆಳೆಸಿದರು. ಇವರ ಕುಟುಂಬಕ್ಕೆ ಭಂಡಾರ ಸಮೀಪದ ಸೋನುಲಿ ಗ್ರಾಮದಲ್ಲಿ ಒಂದು ಎಕರೆ ಜಮೀನು ಇದೆ. ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಇದು ಅವರಿಗೆ ಇರುವ ಕೊನೆಯ ಅವಕಾಶ. ಅವರು ದೈಹಿಕ ತರಬೇತಿ ನೀಡುತ್ತಿರುವ ಯುವಕರು ಬೆಳಗಿನ ತರಗತಿಯಲ್ಲಿ ತಂತ್ರಗಳ ಬಗ್ಗೆ, ತಮ್ಮ ನ್ಯೂನತೆಗಳ ಬಗ್ಗೆ ಚರ್ಚಿಸುತ್ತಿರುವಂತೆ ಕಾಣುತ್ತದೆ

ರೂಪೇಶ್ ಅವರು ಭಂಡಾರಾದಲ್ಲಿರುವ ತನ್ನ ಚಿಕ್ಕಮ್ಮನ ಅಂಗಡಿಯಲ್ಲಿ ತಮ್ಮ ಜಾತಿಯದಲ್ಲದ ಕಸಾಯಿ ಕೆಲಸವನ್ನು ಮಾಡುತ್ತಾರೆ. ಅದು ಅವರ ಚಿಕ್ಕಮ್ಮ ಪ್ರಭಾ ಶೇಂದ್ರೆಯವರ ಕುಟುಂಬಕ್ಕೆ ಅವರು ನೀಡುತ್ತಿರುವ ಸೇವೆ. ಏಪ್ರನ್ ಧರಿಸಿ ತಜ್ಞರಂತೆ ಕೋಳಿಗಳನ್ನು ಹಿಡಿಯುತ್ತಾರೆ, ಜೊತೆ ಜೊತೆಗೆ ಗ್ರಾಹಕರೊಂದಿಗೆ ವ್ಯವಹರಿಸುತ್ತಾರೆ. ಒಂದಲ್ಲ ಒಂದು ದಿನ ಖಾಕಿ ಯೂನಿಫಾರಂ ಸಿಗುತ್ತದೆ ಎಂಬ ಕನಸು ಕಂಡ ಇವರು ಏಳು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ.

ಹೆಚ್ಚಿನ ಆಕಾಂಕ್ಷಿಗಳ ಪರಿಶ್ರಮ ಅವರ ಬಡತನವನ್ನು ತೋರಿಸುತ್ತದೆ.

ರೂಪೇಶ್ ಹೇಳುವಂತೆ, ಕಠಿಣ ದೈಹಿಕ ಕಸರತ್ತುಗಳನ್ನು ಮಾಡಲು ಕೋಳಿ, ಮೊಟ್ಟೆ, ಮಟನ್, ಹಾಲು, ಹಣ್ಣುಗಳು.. ಮೊದಲಾದ ಉತ್ತಮ ಆಹಾರದ ಅಗತ್ಯವಿದೆ. "ನಮ್ಮಲ್ಲಿ ಹೆಚ್ಚಿನವರಿಗೆ ಒಳ್ಳೆಯ ಊಟವನ್ನು ಪಡೆಯಲು ಸಾಧ್ಯವಿಲ್ಲ," ಎಂದು ಅವರು ಹೇಳುತ್ತಾರೆ.

*****

ಭಂಡಾರವು ಬಡ ಗ್ರಾಮೀಣ ಯುವಕ-ಯುವತಿಯರು ಬಂದು, ಉಳಿದುಕೊಂಡು ಪೊಲೀಸ್ ನೇಮಕಾತಿಗೆ ತಯಾರಿ ನಡೆಸುವ ಕೇಂದ್ರವಾಗಿದೆ.

ಶಿವಾಜಿ ಸ್ಟೇಡಿಯಂನಲ್ಲಿ ನೂರುಕೋಟಿ ಕನಸುಗಳು ಒಂದಕ್ಕೊಂದು ಜಗಳವಾಡುತ್ತಿವೆ. ದಿನ ಕಳೆದಂತೆ ಜಿಲ್ಲೆಯಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಯುವಜನತೆ ಮೈದಾನಕ್ಕೆ ಬರುತ್ತಿದ್ದಾರೆ. ಇಂತವರಲ್ಲಿ ಒಬ್ಬರು ಗಡ್ಚಿರೋಲಿಯ ಗಡಿಯಲ್ಲಿರುವ ಗೊಂಡಿಯಾದ ಅರ್ಜುನಿ ಮೋರ್ಗಾಂವ್ ತಹಸಿಲ್‌ನಲ್ಲಿರುವ ಅರಕ್ತೊಂಡಿ ಗ್ರಾಮದಲ್ಲಿ ನರೇಗಾ ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ನಾವು ಬೇಟಿಯಾದ ಮೇಘಾ ಮೇಶ್ರಾಮ್. 24 ವರ್ಷ ಪ್ರಾಯದ ಇವರು ಒಬ್ಬರು ಪದವೀಧರೆ. ಇವರು ತಮ್ಮ ತಾಯಿ ಸರಿತಾ ಮತ್ತು ಸುಮಾರು 300 ಗ್ರಾಮಸ್ಥರೊಂದಿಗೆ ರಸ್ತೆಯಲ್ಲಿ ಮರಳು ಮತ್ತು ಜಲ್ಲಿಕಲ್ಲುಗಳನ್ನು ಸಾಗಿಸುವ ಕೆಲಸ ಮಾಡುತ್ತಾರೆ. ಹಾಗೆಯೇ 23 ವರ್ಷ ಪ್ರಾಯದ ಮೇಘಾ ಆಡೆ ಕೂಡ. ಮೊದಲಿನವರು ದಲಿತ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದರೆ, ಎರಡನೆಯವರು ಆದಿವಾಸಿ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದವರು.

"ನಾವು ಬೆಳಿಗ್ಗೆ ಮತ್ತು ಸಂಜೆ ಹಳ್ಳಿಯಲ್ಲಿ ಓಡಿ, ಡ್ರಿಲ್ ಮಾಡುತ್ತೇವೆ‌," ಎಂದು ಮೇಘಾ ಮೇಶ್ರಾಮ್ ತಮ್ಮ ದೃಢವಾದ ಧ್ವನಿಯಲ್ಲಿ ಹೇಳುತ್ತಾರೆ. ಅವರು ದಟ್ಟವಾದ ಕಾಡಿನಲ್ಲಿ ವಾಸಿಸುತ್ತಾರೆ, ಮತ್ತು ದಿನವಿಡೀ ತನ್ನ ಹೆತ್ತವರಿಗೆ ನೆರವಾಗುತ್ತಾರೆ, ದಿನನಿತ್ಯ ಕೂಲಿ ಸಂಪಾದಿಸುತ್ತಾರೆ. ಇಬ್ಬರೂ ಮೇಘಾರಿಗೆ ಭಂಡಾರ ಅಕಾಡೆಮಿಗಳ ಬಗ್ಗೆ ತಿಳಿದಿದ್ದು, ಮೇ ತಿಂಗಳಿನಲ್ಲಿ ಪೊಲೀಸ್ ಪಡೆಗೆ ಸೇರುವ ಹಂಬಲವಿರುವ ನೂರಾರು ಮಂದಿಯಂತೆ ತಾವೂ ಸೇರಲು ಯೋಚಿಸುತ್ತಿದ್ದಾರೆ. ಅವರು ತಮ್ಮ ಖರ್ಚುಗಳನ್ನು ಭರಿಸಲು ತಮ್ಮ ಸಂಬಳವನ್ನು ಉಳಿಸುತ್ತಿದ್ದಾರೆ.

PHOTO • Jaideep Hardikar
PHOTO • Jaideep Hardikar

ಎಡ: ಮೇಘಾ ಮೇಶ್ರಾಮ್ ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದಾರೆ; ದಲಿತ ಸಮುದಾಯದ ಈ ಯುವತಿ ಸದ್ಯ ತಮ್ಮ ಹಳ್ಳಿಯಲ್ಲಿರುವ ನರೇಗಾ ಸೈಟ್‌ನಲ್ಲಿ ತನ್ನ ತಾಯಿ ಸರಿತಾರಿಗೆ ಸಹಾಯ ಮಾಡುತ್ತಾರೆ. ಬಲ: ಮೇಘಾ ಆಡೆ ಜೊತೆಗೆ ಇರುವ ಮೇಘಾ ಮೇಶ್ರಾಮ್, ಇಬ್ಬರೂ ನರೇಗಾ ಸೈಟ್‌ನಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತೆಯರು. ಇಬ್ಬರೂ ಪದವೀಧರೆಯರು ಮತ್ತು 2024 ರ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ಪೊಲೀಸ್ ಪಡೆಗೆ ಸೇರಲು ಬಯಸುತ್ತಿದ್ದಾರೆ

ಅಲ್ಲಿಗೆ ಬಂದ ನಂತರ ಅವರೆಲ್ಲಾ ರೂಮುಗಳನ್ನು ಬಾಡಿಗೆಗೆ ಪಡೆದು, ಗುಂಪಾಗಿ ವಾಸಿಸುತ್ತಾರೆ. ಒಟ್ಟಿಗೆ ಅಡುಗೆ ಮಾಡುತ್ತಾ, ಪರೀಕ್ಷೆಗೆ ಒಟ್ಟಾಗಿ ತಯಾರಿ ನಡೆಸುತ್ತಾರೆ. ಯಾರಾದರೂ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅವರೆಲ್ಲರೂ ಸಂಭ್ರಮಿಸುತ್ತಾರೆ. ಇತರರು ಮರುದಿನ ಬೆಳಿಗ್ಗೆ ಟ್ರ್ಯಾಕ್‌ಗಳಿಗೆ ಮರಳಿ ಅಭ್ಯಾಸವನ್ನು ಮುಂದುವರಿಸುತ್ತಾರೆ, ಮುಂದಿನ ನೇಮಕಾತಿಯ ವರೆಗೆ ಕಾಯುತ್ತಾರೆ.

ಯುವತಿಯರು ಯುವಕರಿಗಿಂತ ಹಿಂದೆ ಬಿದ್ದಿಲ್ಲ, ಕಷ್ಟಗಳ ಬಗ್ಗೆ ಎಂದಿಗೂ  ತಲೆ ಕೆಡಿಸಿಕೊಂಡಿಲ್ಲ.

"ನಾನು ನನ್ನ ಎತ್ತರದ ಕಾರಣಕ್ಕೆ ಫೇಲ್‌ ಆಗುತ್ತೇನೆ," ಎಂದು 21 ವರ್ಷದ ವೈಶಾಲಿ ಮೇಶ್ರಾಮ್ ತಮ್ಮ ಮುಜುಗರವನ್ನು ಮರೆಮಾಚುತ್ತಾ ನಗುವಿನೊಂದಿಗೆ ಹೇಳುತ್ತಾರೆ. ಅದು ಅವರ ಕೈಯಲ್ಲಿಲ್ಲ, ಎಂದು ಅವರು ಹೇಳುತ್ತಾರೆ. ಆದ್ದರಿಂದ ಅವರು 'ಬ್ಯಾಂಡ್ಸ್‌ಮೆನ್' ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಅಲ್ಲಿ ಅವರ ದೇಹದ ಎತ್ತರ ಅಡಚಣೆಯಾಗುವುದಿಲ್ಲ.

ವೈಶಾಲಿ ಇನ್ನೋರ್ವ ಪೊಲೀಸ್ ಕೆಲಸದ ಆಕಾಂಕ್ಷಿಯೂ, ತಮ್ಮ ತಂಗಿಯೂ ಆದ ಗಾಯತ್ರಿ ಹಾಗೂ ಇನ್ನೊಂದು ಹಳ್ಳಿಯ ಮಯೂರಿ ಘರಾಡೆ (21) ಅವರೊಂದಿಗೆ ಸಿಟಿಯಲ್ಲಿ ಒಂದೇ ಕೋಣೆಯಲ್ಲಿ ವಾಸಿಸುತ್ತಾರೆ. ತಮ್ಮ ಅಚ್ಚುಕಟ್ಟಾದ ಕೋಣೆಯಲ್ಲಿ ಒಬ್ಬರ ನಂತರ ಒಬ್ಬರು ಸರದಿಯಲ್ಲಿ ಅಡುಗೆ ಮಾಡುತ್ತಾರೆ. ಅವರ ತಿಂಗಳ ಖರ್ಚು ಕನಿಷ್ಠ 3,000 ರುಪಾಯಿ. ಅವರು ಪ್ರೋಟೀನ್‌ಗಾಗಿ ಕಾಳು ಮತ್ತು ಧಾನ್ಯಗಳನ್ನು ಸೇವಿಸುತ್ತಾರೆ.

ಗಗನಕ್ಕೇರುತ್ತಿರುವ ಬೆಲೆ ಅವರ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ, "ಎಲ್ಲವೂ ದುಬಾರಿಯಾಗಿದೆ," ಎಂದು ವೈಶಾಲಿ ಹೇಳುತ್ತಾರೆ.

ಅವರ ದೈನಂದಿನ ವೇಳಾಪಟ್ಟಿ ತುಂಬಾ ಒತ್ತಡದಿಂದ ಕೂಡಿದೆ. ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತಾರೆ, ದೈಹಿಕ ತರಬೇತಿಗಾಗಿ ಮೈದಾನದಲ್ಲಿ ಸೈಕಲ್‌ ಓಡಿಸುತ್ತಾರೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಹತ್ತಿರದ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಾರೆ. ರೂಪೇಶ್ ಮಾಂಸದ ಅಂಗಡಿಯ ತನ್ನ ಕೆಲಸದ ನಡುವೆ ಇಲ್ಲಿಗೆ ಬರುತ್ತಾರೆ ಮತ್ತು ಮಾಕ್ ಟೆಸ್ಟ್ ಪೇಪರ್ ಡ್ರಿಲ್‌ಗಳೊಂದಿಗೆ ಅವರಿಗೆ ತರಬೇತಿ ನೀಡುತ್ತಾರೆ. ಸಂಜೆ ಅವರು ದೈಹಿಕ ಡ್ರಿಲ್‌ ಮಾಡಲು ಗ್ರೌಂಡಿಗೆ ಹೋಗಿ ಪರೀಕ್ಷೆಯ ತಯಾರಿ ಮಾಡುತ್ತಾ ದಿನ ಕಳೆಯುತ್ತಾರೆ.

PHOTO • Jaideep Hardikar
PHOTO • Jaideep Hardikar

ಫೋಟೋದಲ್ಲಿರುವ ಇತರ ಯುವತಿಯರಂತೆ ವೈಶಾಲಿ ತುಳಶಿರಾಮ್ ಮೆಶ್ರಾಮ್ (ಎಡ) ಕೂಡ ರಾಜ್ಯ ಪೊಲೀಸ್ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರ ಪೊಲೀಸ್ ನೇಮಕಾತಿ ಡ್ರೈವ್ 2024 ರಲ್ಲಿ ಉದ್ಯೋಗ ಪಡೆಯುವ ಗುರಿಯನ್ನು ಹೊಂದಿರುವ ತಮ್ಮ ರೂಮ್‌ಮೇಟ್ ಮಯೂರಿ ಘರಾಡೆ (ಬಲ) ಜೊತೆಗೆ ಇರುವ ವೈಶಾಲಿ

ರೂಪೇಶ್ ಅಥವಾ ವೈಶಾಲಿಯಂತಹ ಯುವಕರು ನಿಜಾರ್ಥದಲ್ಲಿ ಕೃಷಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಕೃಷಿಯಲ್ಲಿ ತಮ್ಮ ಭವಿಷ್ಯವನ್ನು ಅವರು ನೋಡುವುದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ಹೆತ್ತವರು ಯಾವುದೇ ಪ್ರತಿಫಲವಿಲ್ಲದೆ ಹೊಲಗಳಲ್ಲಿ ಕಠಿಣ ಪರಿಶ್ರಮ ಪಡುವುದನ್ನು ನೋಡುತ್ತಾರೆ. ಕಾರ್ಮಿಕರಂತೆ ಇವರಿಗೆ ದೂರದೂರಿಗೆ ವಲಸೆ ಹೋಗಲು ಇಷ್ಟವಿಲ್ಲ.

ವಯಸ್ಸಾದಂತೆ ಇವರಿಗೆಲ್ಲಾ ಸುರಕ್ಷಿತ ಉದ್ಯೋಗಗಳನ್ನು ಪಡೆಯದೆ ಹತಾಶೆ ಕಾಡಲಾರಂಭಿಸಿದೆ. ಆ ಉದ್ಯೋಗಗಳೇ ಗೌರವಾನ್ವಿತ ಜೀವನೋಪಾಯ ಎಂದು ಭಾವಿಸುತ್ತಾರೆ. ಆದರೆ ಖಾಸಗಿ ವಲಯ ಮತ್ತು ಸರ್ಕಾರದಲ್ಲಿ ಉದ್ಯೋಗಗಳನ್ನು ಪಡೆಯುವುದು ದೂರದ ಮಾತಾಗಿದೆ. 2024 ರ ಚುನಾವಣೆಗಳು ಪ್ರಾರಂಭವಾಗುತ್ತಿದ್ದಂತೆ, ಸದ್ಯದ ಆಡಳಿತ ವ್ಯವಸ್ಥೆ ತಮ್ಮ ಭವಿಷ್ಯದ ಬಗ್ಗೆ ಮಾತನಾಡುತ್ತಿಲ್ಲ ಎಂದು ಹತಾಶರಾಗಿದ್ದಾರೆ. 12 ನೇ ತರಗತಿ ಉತ್ತೀರ್ಣರಾಗಿರುವ, ಹೆಚ್ಚಿನ ಅರ್ಹತೆಗಳನ್ನು ಹೊಂದಿರದವರಿಗೆ ಈ ಪೊಲೀಸ್ ನೇಮಕಾತಿಯೇ ಏಕೈಕ ಅವಕಾಶವಾಗಿದೆ.

ಮುಂಬರುವ ಚುನಾವಣೆಯಲ್ಲಿ ಅವರು ಯಾರಿಗೆ ಮತ ಹಾಕುತ್ತಾರೆ?

ಆ ಪ್ರಶ್ನೆಗೆ ದೀರ್ಘ ಮೌನವೇ ಉತ್ತರ. ಇದು ಔಟ್‌ ಆಫ್‌ ಸಿಲೇಬಸ್ ಪ್ರಶ್ನೆ!

ಅನುವಾದ: ಚರಣ್‌ ಐವರ್ನಾಡು

Jaideep Hardikar

ನಾಗಪುರ ಮೂಲದ ಪತ್ರಕರ್ತರೂ ಲೇಖಕರೂ ಆಗಿರುವ ಜೈದೀಪ್ ಹಾರ್ದಿಕರ್ ಪರಿಯ ಕೋರ್ ಸಮಿತಿಯ ಸದಸ್ಯರಾಗಿದ್ದಾರೆ.

Other stories by Jaideep Hardikar
Editor : Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Other stories by Priti David
Translator : Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Charan Aivarnad