ಸೆರ ಬಡೋಲಿಯಲ್ಲಿ ಆಗ, ಆಗಸ್ಟ್‌ ಮಾಸದ ಬೆಚ್ಚನೆಯ ನಡುಹಗಲು. ರಸ್ತೆಯು ನಿರ್ಜನವಾಗಿತ್ತು. ಉತ್ತರಾಖಂಡದ ಅಲ್ಮೋರಾ ಮತ್ತು ಪಿತೌರಾಗಢ್‌ ಜಿಲ್ಲೆಗಳ ನಡುವಿನ ಸರಹದ್ದನ್ನು ರೂಪಿಸಿದ ಸರಯು ನದಿಯ ಮೇಲಿನ ಸೇತುವೆಯಾಚೆಗಿನ ಸುಮಾರು ಒಂದು ಕಿ.ಮೀ.ನಲ್ಲಿ ನಾವು ಬಿಸಿಲಿನಲ್ಲಿ ಮಿರುಗುತ್ತಿದ್ದ ಕೆಂಪು ಅಂಚೆ ಪೆಟ್ಟಿಗೆಯನ್ನು ಗುರುತಿಸಿದೆವು.

ಆ ಪ್ರದೇಶದಲ್ಲಿನ ಏಕೈಕ ಕೆಂಪು ಅಂಚೆ ಪೆಟ್ಟಿಗೆಯು ಬೇರೆಡೆಯಲ್ಲಿ ಸಾಧಾರಣ ವಿಷಯವೆನಿಸಬಹುದಾದರೂ, ಅದೊಂದು ದೊಡ್ಡ ಹೆಜ್ಜೆ. ಕುಮಾವೂನಲ್ಲಿನ ಈ ಭಾಗದ ಮೊದಲ ಅಂಚೆ ಕಚೇರಿಯ ಹೊಸ ವಿಭಾಗವು, 2016ರ ಜೂನ್‌ 23ರಂದು ಸೆರ ಬಡೋಲಿಯಲ್ಲಿ ಉದ್ಘಾಟನೆಯಾಯಿತು. ಈಗ ಅದು, ಭನೋಲಿ ಸೆರ ಗುಂಠ್‌, ಸೆರ (ಉರುಫ್‌) ಬಡೋಲಿ, ಚೌನಾಪಾಟಲ್‌, ನೈಲಿ, ಬಡೋಲಿ ಸೆರ ಗುಂಠ್‌ ಮತ್ತು ಸರ್‌ತೋಲ ಎಂಬ ಆರು ಗ್ರಾಮಗಳಿಗೆ ಸೇವೆ ಸಲ್ಲಿಸುತ್ತಿದೆ. ಈ ಹಳ್ಳಿಗಳಲ್ಲಿನ ಬಹುತೇಕ ಜನರು ರೈತರು.

ಸ್ಥಳೀಯ ಅಂಚೆ ಕಚೇರಿಯ ಅನುಪಸ್ಥಿತಿಯಲ್ಲಿ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನು ಬರೆದ ‘The last post – and a bridge too far’ ಎಂಬ ಕಥಾನಕವು ʼಪರಿʼಯಲ್ಲಿ ಪ್ರಕಟಗೊಂಡ ಎರಡು ದಿನಗಳ ತರುವಾಯ ಇದು ಘಟಿಸಿತು. ಈಗ, ಸೆರ ಬಡೋಲಿಯ ಹೆಮ್ಮೆಯ ಪಿನ್‌ ಕೋಡ್‌, 262532.

ಈ ಆರು ಹಳ್ಳಿಗಳು ಪಿತೌರಗಢ್‌ನ ಗಂಗೊಲಿಹಾಟ್‌ ವಲಯದಲ್ಲಿವೆಯಾದರೂ ಅವರ ಅಂಚೆ ಕಚೇರಿಯು ಸೇತುವೆಯ ಮತ್ತೊಂದು ಬದಿಗಿದ್ದು, ಐದು ಕಿ.ಮೀ. ಆಚೆಗೆ, ಅಲ್ಮೋರಾ ಜಿಲ್ಲೆಯ ಭಸಿಯಾಚನಾ ವಲಯದಲ್ಲಿದೆ. ನಾನು ಮೊದಲು ಭೇಟಿಯಿತ್ತಾಗ, “ಎಂಥ ವಿಪರ್ಯಾಸ, ಅವರಿನ್ನೂ ನಮ್ಮನ್ನು ಪಿತೋರಾಗಢ್‌ ಜಿಲ್ಲೆಯ ಭಾಗವೆಂಬುದಾಗಿ ಭಾವಿಸುವುದಿಲ್ಲ. ಇದು ಹೇಗಿದೆಯೆಂದರೆ, ನಾವು ಪಿತೋರಾಗಢ್‌ನಲ್ಲಿ ವಾಸವಾಗಿದ್ದರೂ ನಮ್ಮ ವಿಳಾಸ ಅಲ್ಮೋರಾದಲ್ಲಿದ್ದಂತೆ” ಎಂದಿದ್ದರು ಭನೋಲಿ ಗುಂಠ್‌ನ ಮದನ್‌ ಸಿಂಗ್‌.

ʼಪರಿʼಯ ವರದಿಯು ಕಾಣಿಸಿಕೊಂಡ ಕೆಲವು ವಾರಗಳ ನಂತರ, ಹೊಸ ಅಂಚೆ ಕಚೇರಿಯನ್ನು ನೋಡಲು ವಾಪಸ್ಸು ಬಂದೆ. ಇಲ್ಲಿಯವರೆಗೂ ಹತ್ತಿರದ ಭಸಿಯಾಚನಾ ಅಂಚೆ ಕಚೇರಿಯಿಂದ ಟಪಾಲು ಬರಲು, ೧೦ ದಿನಗಳವರೆಗೆ ಹಾಗೂ ತಮ್ಮದೇ ಜಿಲ್ಲೆಯಾದ ಪಿತೌರಾಗಢ್‌ ಪ್ರಧಾನ ಕಚೇರಿಯಿಂದ ಪತ್ರ ಅಥವಾ ಮನಿ ಆರ್ಡರ್‌ಗಾಗಿ ಒಂದು ತಿಂಗಳವರೆಗೂ ಕಾಯಬೇಕಿದ್ದ ಗ್ರಾಮೀಣರಲ್ಲಿ ಎಷ್ಟು ಬದಲಾವಣೆಯಾಗಿದೆ? ವಿಳಂಬಗಳ ದೆಸೆಯಿಂದಾಗಿ, ಇವರಿಗೆ ಆಗಾಗ್ಗೆ ನಿರ್ಣಾಯಕ ಸಂದರ್ಶನಗಳು ಮತ್ತು ಅತ್ಯಂತ ಪ್ರಮುಖ ಘಟನೆಗಳು ತಪ್ಪಿಹೋಗುತ್ತಿದ್ದವು. ಕೆಲವೊಮ್ಮೆ, ಅವರು ಅಲ್ಮೋರಾಕ್ಕೆ 7೦ ಕಿ.ಮೀ. ಪ್ರಯಾಣಿಸಿ, ಅಂಚೆ ಕಚೇರಿಯಿಂದ ಖುದ್ದಾಗಿ ಪ್ರಮುಖ ಟಪಾಲುಗಳನ್ನು ಪಡೆದುಕೊಳ್ಳುತ್ತಿದ್ದರು.

ಹೊಸ ಅಂಚೆ ಕಚೇರಿಯ ಸೇವೆಯು ಲಭ್ಯವಾಗುವ ಆರು ಗ್ರಾಮಗಳ ನಿವಾಸಿಗಳು ಸಿಹಿಯನ್ನು ಹಂಚುವ ಮೂಲಕ ಅದರ ಉದ್ಘಾಟನೆಯನ್ನು ಸಂಭ್ರಮಿಸಿದೆವೆಂಬುದಾಗಿ ನನಗೆ ತಿಳಿಸಿದರು. “ಉಳಿದೆಡೆಗಳಲ್ಲಿ, ಜನರು ಹೊಸ ಟಪಾಲು ಮತ್ತು ನೇಮಕಾತಿಗಳು ತಲುಪಿದಾಗ ಸಂಭ್ರಮಿಸುತ್ತಾರೆ. ನಾವು, ಅಂಚೆ ಪೆಟ್ಟಿಗೆಯ ಆಗಮನವನ್ನು ಸಂಭ್ರಮಿಸಿದೆವು! ನಮ್ಮ ಜೀವನವಿನ್ನು ಹಿಂದಿನಂತಿರುವುದಿಲ್ಲ” ಎಂದ ಸೆರ ಬಡೋಲಿಯ ಮೋಹನ್‌ ಚಂದ್ರ ಜೋಶಿ ಮುಗುಳ್ನಕ್ಕರು.

ನಾಲ್ಕು ಕುರ್ಚಿಗಳು ಮತ್ತು ಒಂದು ಉಕ್ಕಿನ ಕಪಾಟು ಹಾಗೂ ಮೇಜನ್ನು ಒಳಗೊಂಡ ಒಂದು ಚಿಕ್ಕ ಕೊಠಡಿಯೇ ಅಂಚೆ ಕಚೇರಿ. ಕೈಲಾಶ್‌ ಚಂದ್ರ ಉಪಾಧ್ಯಾಯ್‌, ಅಂಚೆಪೇದೆ ಹಾಗೂ ಅಂಚೆ ಕಚೇರಿಯನ್ನು ನೋಡಿಕೊಳ್ಳುವ ಅಧಿಕಾರಿಯ ಎರಡೂ ಕೆಲಸಗಳನ್ನು ನಿಭಾಯಿಸುವ ಇಲ್ಲಿನ ಏಕೈಕ ಸಿಬ್ಬಂದಿ. ಇವರು, ಸೆರ ಬಡೋಲಿಯಿಂದ ಸುಮಾರು ೧೨ ಕಿ.ಮೀ. ದೂರದ ಗನೈ ಅಂಚೆ ಕಚೇರಿಗೆ ನಿಯೋಜಿತರಾಗಿದ್ದು, ಯಾರನ್ನಾದರೂ ನೇಮಿಸುವವರೆಗೂ ಈ ಹೊಸ ಶಾಖೆಯನ್ನು ನೋಡಿಕೊಳ್ಳುವಂತೆ ಅವರಿಗೆ ತಿಳಿಸಲಾಗಿದೆ. ಇಲಾಖೆಯು, “ಒಂದು ಅಥವಾ ಎರಡು ತಿಂಗಳಲ್ಲಿ, ಒಬ್ಬ ಅಂಚೆಪೇದೆ ಮತ್ತು ಅಂಚೆ ಕಚೇರಿಯನ್ನು ನೋಡಿಕೊಳ್ಳುವ ಅಧಿಕಾರಿಯನ್ನು ನೇಮಿಸಲಾಗುತ್ತದೆಯೆಂದು ತಿಳಿಸಿದೆ” ಎಂದರು ಉಪಾಧ್ಯಾಯ್‌. ಗನೈನಿಂದ ಪ್ರತಿ ಮುಂಜಾನೆ ಟಪಾಲನ್ನು ಸಂಗ್ರಹಿಸುವ ಅವರು, ಸೆರ ಬಡೋಲಿಗೆ ಹೋಗುವ ಮಾರ್ಗದಲ್ಲಿ ಅದನ್ನು ವಿತರಿಸುತ್ತಾರೆ.

PHOTO • Arpita Chakrabarty

ಏಕೈಕ ಸಿಬ್ಬಂದಿ ಕೈಲಾಶ್‌ ಚಂದ್ರ ಚಕ್ರವರ್ತಿ ಅವರು ಅಂಚೆಪೇದೆ ಹಾಗೂ ಅಂಚೆ ಕಚೇರಿಯನ್ನು ನೋಡಿಕೊಳ್ಳುವ ಅಧಿಕಾರಿಯ ಎರಡೂ ಕೆಲಸಗಳನ್ನು ನಿಭಾಯಿಸುತ್ತಾರೆ

ಆಧಾರ್‌ ಕಾರ್ಡುಗಳು ಈಗ ಸರಿಯಾದ ವಿಳಾಸಕ್ಕೆ ಬಟವಾಡೆಯಾಗುತ್ತಿರುವುದು, ಅಂಚೆ ಕಚೇರಿಯ ಆರಂಭದ ನಂತರದ ಮಹತ್ತರ ಬದಲಾವಣೆ ಎನ್ನುತ್ತಾರೆ ಊರಿನ ಜನ. ಈ ಹಿಂದೆ, ಕಾರ್ಡುಗಳು ಭಸಿಯಾಚನಾ ಅಂಚೆ ಕಚೇರಿ, ಅಲ್ಮೋರಾ ಜಿಲ್ಲೆ ಎಂಬ ವಿಳಾಸವನ್ನು ಹೊತ್ತು ಬಟವಾಡೆಯಾಗುತ್ತಿದ್ದವು. “ಆದರೆ, ನಾವು ಅಲ್ಮೋರಾ ಜಿಲ್ಲೆಯ ನಿವಾಸಿಗಳಲ್ಲ. ನಮ್ಮ ವಾಸ, ಪಿತೌರಾಗಢ್‌ನಲ್ಲಿ. ಆಧಾರ್‌ ಕಾರ್ಡಿನಲ್ಲಿ ತಿದ್ದುಪಡಿಗಾಗಿ ವಿನಂತಿಸಿದಾಗ, ಕಾರ್ಡುಗಳು ಗನೈ ಅಂಚೆ ಕಚೇರಿಗೆ ಹೋಗುತ್ತಿದ್ದವು. ಗನೈನಿಂದ ಯಾವುದೇ ಅಂಚೆಪೇದೆಯು ಬರುತ್ತಿರಲಿಲ್ಲವಾಗಿ, ನಾವು ಖುದ್ದಾಗಿ ಅವನ್ನು ಪಡೆದುಕೊಳ್ಳಬೇಕಿತ್ತು. ಆದರೀಗ ಎಲ್ಲ ಆಧಾರ್‌ ಕಾರ್ಡುಗಳನ್ನು ಸರಿಯಾದ ವಿಳಾಸದೊಂದಿಗೆ ಕಳುಹಿಸುತ್ತಿದ್ದು, ನಮ್ಮ ಮನೆಗಳಿಗೆ ತಲುಪಿಸಲಾಗುತ್ತಿದೆ” ಎನ್ನುತ್ತಾರೆ ಬಡೋಲಿ ಸೆರಾ ಗುಂಠ್‌ನಲ್ಲಿನ ಸುರೇಶ್‌ ಚಂದ್ರ.

ಹೊಸ ಕಚೇರಿಯು ಉಳಿತಾಯ ಬ್ಯಾಂಕ್‌ ಮತ್ತು ಪುನರಾವರ್ತಕ ಠೇವಣಿಯ ಸೇವೆಯನ್ನು ಸಹ ಆರಂಭಿಸಿದೆ. ಸೆರಾ ಬಡೋಲಿಯಲ್ಲಿ 25 ಉಳಿತಾಯ ಖಾತೆಗಳು ಮತ್ತು ಐದು ಪುನರಾವರ್ತಕ ಠೇವಣಿ ಖಾತೆಗಳು ಪ್ರಾರಂಭಗೊಂಡಿವೆ. “ಖಾತೆದಾರರು ಜಮಾ ಮಾಡಿದ ಹಣವನ್ನಿಡಲು ಇಲ್ಲಿ ತಿಜೋರಿಯಿಲ್ಲದ ಕಾರಣ, ಅದನ್ನು ನನ್ನೊಂದಿಗೆ ಇರಿಸಿಕೊಂಡಿದ್ದೇನೆ” ಎಂದರು ಕೈಲಾಶ್‌ ಚಂದ್ರ.

ಅಂಚೆಯ ಮೂಲಕ ಪಿಂಚಣಿಯನ್ನು ಒದಗಿಸುವ ಸಾಧ್ಯತೆಯೂ ಇದೆ ಎಂದು ಅವರು ನಮಗೆ ತಿಳಿಸಿದರು. ಅಲ್ಲಿಯವರೆಗೆ, ಪಾರ್ವತಿ ದೇವಿಯಂತಹ ಹಿರಿಯ ನಾಗರಿಕರು ತಮ್ಮ ಪಿಂಚಣಿಯನ್ನು ಪಡೆಯಲು ಗನೈಗೆ ಪ್ರಯಾಣಿಸಬೇಕು.

ಅಂಚೆ ಕಚೇರಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸ್ವಲ್ಪ ಕಾಲ ಹಿಡಿಯುವುದಂತೂ ಸ್ಪಷ್ಟ.

ಜನರ ಉದ್ಯೋಗಕ್ಕೆ ಸಂಬಂಧಿಸಿದ ಪತ್ರಗಳು ತಡವಾಗಿ ತಲುಪುವ ಕಾರಣ, ಅವರಿಗೆ ಈಗಲೂ ತಮ್ಮ ಸಂದರ್ಶನವು ತಪ್ಪಿಹೋಗುತ್ತಿದೆ. “ನಮ್ಮ ನೆರೆಯವರ ಮಗನಿಗೆ ಸರ್ಕಾರಿ ಅನುದಾನಿತ ಶಾಲೆಯಲ್ಲಿನ ಉದ್ಯೋಗವು ತಪ್ಪಿಹೋಯಿತು; ಈ ಉದ್ಯೋಗದ ಸಂದರ್ಶನವು ಜೂನ್‌ 29ರಂದು ನಿಗದಿಯಾಗಿದ್ದು, ಪತ್ರವು ತಲುಪಿದ್ದು ಜುಲೈ 3ರಂದು” ಎಂಬುದಾಗಿ ಬಡೋಲಿ ಸೆರಾ ಗುಂಠ್‌ನ ಪದ್ಮ ದತ್ತ ನಿಯುಲಿಯ ತಿಳಿಸಿದರು. “ಅನೇಕರಿಗೆ ನಮ್ಮ ವಿಳಾಸವು ಬದಲಾಗಿರುವುದು ತಿಳಿದಿಲ್ಲ. ಅವರು ಹಳೆಯ ವಿಳಾಸವನ್ನು ಭಸಿಯಾಚನಾ ಪಿನ್‌ ಕೋಡ್‌ನೊಂದಿಗೆ ಬರೆಯುತ್ತಾರೆ. ಹೀಗಾಗಿ ಆ ಪತ್ರಗಳು ತಲುಪಲು ಈಗಲೂ ಸುಮಾರು ಒಂದು ತಿಂಗಳು ಹಿಡಿಯುತ್ತದೆ. ಗ್ರಾಮದ ಜನರು ಅಂಚೆ ಇಲಾಖೆಯು ಪತ್ರಗಳನ್ನು ಹೊಸ ಅಂಚೆ ಕಚೇರಿಗೆ ರವಾನಿಸುತ್ತದೆಂದು ಭಾವಿಸುತ್ತಾರೆ. ಆದರೆ ಅದು ಈಡೇರುತ್ತಿಲ್ಲ. ಇಲಾಖೆಯು ಬದಲಾವಣೆಯ (ಪಿನ್‌ ಕೋಡ್‌) ಬಗ್ಗೆ ನಮಗೆ ಅರಿವನ್ನು ನೀಡಿರುವುದಿಲ್ಲ. ಗ್ರಾಮದ ಜನತೆಗೆ ನಾವೇ ಸ್ವತಃ ಮಾಹಿತಿ ನೀಡಬೇಕು.”

ಏತನ್ಮಧ್ಯೆ, ಭಸಿಯಾಚನಾ ಅಂಚೆ ಪೇದೆ, ಮೆಹೆರ್‌ ಸೀಂಗ್‌ ಅವರು, “ಪ್ರತಿ ದಿನ ಆ ಆರು ಹಳ್ಳಿಗಳ ಸುಮಾರು ಆರು ಪತ್ರಗಳನ್ನು ನಾವು ಪಡೆಯುತ್ತೇವೆ. ಸೆರಾ ಬಡೋಲಿಯಲ್ಲಿ ಅಂಚೆ ಕಚೇರಿಯು ಪ್ರಾರಂಭವಾಗಿದ್ದರೂ ಸಹ ಜನರು ಭಸಿಯಾಚನಾ ಅಂಚೆ ಕಚೇರಿಗೆ ಟಪಾಲನ್ನು ಕಳುಹಿಸುತ್ತಾರೆ. ಪತ್ರಗಳ ಸಂಖ್ಯೆ ಐದಿರಲಿ, ಹದನೈದಿರಲಿ, ನಾನು ಟಪಾಲನ್ನು ವಿತರಿಸುತ್ತ ಹಳ್ಳಿಯಿಂದ ಹಳ್ಳಿಗೆ ಹೋಗಬೇಕು. ನಾವು ಬೆಟ್ಟದ ಕತ್ತೆಗಳಂತೆ.”

ಆದರೂ, ಬಹಳಷ್ಟು ಬದಲಾಗಿದೆ. ಸೆರಾ ಬಡೋಲಿಯಿಂದ ಪಿತೌರಾಗಢ್‌ಗೆ ಪತ್ರವು ತಲುಪಲು ಈ ಮೊದಲು 20 ದಿನಗಳು ಹಿಡಿಯುತ್ತಿದ್ದು, ಈಗ ಕೇವಲ ನಾಲ್ಕು ದಿನಗಳು ಹಿಡಿಯುತ್ತವಷ್ಟೇ. ಜೂನ್‌ 21ರ ಪರಿಯಲ್ಲಿನ ಕಥಾನಕವು ಸಾಕಷ್ಟು ಕುತೂಹಲವನ್ನು ಮೂಡಿಸಿ, ಅನೇಕ ಓದುಗರು ಅದನ್ನು ಟ್ವೀಟ್‌ ಮಾಡಿದರು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ರವಿ ಶಂಕರ್‌ ಪ್ರಸಾದ್‌ ಅವರು ಸಹ ಈ ಹಳ್ಳಿಗಳ ಸಂವಹನ ಸೇವೆಗಳ ಬಗ್ಗೆ ಗಮನಹರಿಸುವುದಾಗಿ ಭರವಸೆಯಿತ್ತರು. ಮೋಹನ್‌ ಅವರನ್ನೊಳಗೊಂಡಂತೆ ಯುವ ಪೀಳಿಗೆಯು, ಶಾಖಾ ಕಚೇರಿಯನ್ನು ಅಂತರ್ಜಾಲದ ಮೂಲಕ ಗನೈ ಮತ್ತು ಇತರೆ ಅಂಚೆ ಕಚೇರಿಗಳಿಗೆ ಸಂಪರ್ಕಿಸಲಾಗುತ್ತದೆಯೆಂಬ ವಿಶ್ವಾಸದಲ್ಲಿದ್ದಾರೆ.

ಅನುವಾದ: ಶೈಲಜಾ ಜಿ.ಪಿ.

Arpita Chakrabarty

Arpita Chakrabarty is a Kumaon-based freelance journalist and a 2017 PARI fellow.

Other stories by Arpita Chakrabarty
Translator : Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Shailaja G. P.