ಮಣಿರಾಮನ ಜೀವವನ್ನು ಉಳಿಸಿದ್ದು ವತ್ಸಲಾ.

“ಅಂದು ನಾವು ಪಾಂಡವ್‌ ಜಲಪಾತದ ಬಳಿ ಹೋಗಿದ್ದೆವು. ವತ್ಸಲಾ ಮೇಯಲು ಹೋಗಿದ್ದಳು. ನಾನು ಅವಳನ್ನು ಹುಡುಕಿಕೊಂಡು ಹೋಗುವ ದಾರಿಯಲ್ಲೇ ನನಗೆ ಹುಲಿ ಎದುರಾಗಿತ್ತು” ಎಂದು ಮಣಿರಾಮ್‌ ಕತೆ ಆರಂಭಿಸುತ್ತಾರೆ.

ನಾನು ಸಹಾಯಕ್ಕಾಗಿ ಕೂಗಿಕೊಂಡ ತಕ್ಷಣ ಓಡಿ ಬಂದ ವತ್ಸಲಾ ತನ್ನ ಕಾಲನ್ನು ಬಾಗಿಸಿ ನನ್ನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡಳು. ನಾನು ಕುಳಿತುಕೊಂಡ ನಂತರ ಅವಳು ತನ್ನ ಕಾಲಿನಿಂದ ಮರವೊಂದನ್ನು ಅಲ್ಲಾಡಿಸಿ ಬೀಳಿಸಿದಳು. ಟೈಗರ್‌ ಭಾಗ್ ಗಯಾ [ಇದರಿಂದ ಭಯಗೊಂಡ ಹುಲಿ ಅಲ್ಲಿಂದ ಕಾಲ್ಕಿತ್ತಿತು]” ಎಂದು ನಿರಾಳತೆಯ ದನಿಯಲ್ಲಿ ಈ ಮಾವುತ (ಮಹವತ್) ಹೇಳುತ್ತಾರೆ.

ಪನ್ನಾ ಹುಲಿ ಮೀಸಲು ಪ್ರದೇಶದ ಹಿರಿಯ ಜೀವವಾದ ವತ್ಸಲಾ 100 ವರ್ಷಗಳಿಗಿಂತಲೂ ಹಿರಿಯಳು ಎಂದು ಹೇಳಲಾಗುತ್ತದೆ - ಇದು ವಿಶ್ವದ ಅತ್ಯಂತ ಹಿರಿಯ ಜೀವಂತ ಆನೆ. "ಕೆಲವರು ಆಕೆಗೆ 110 ವರ್ಷ ಎಂದು ಹೇಳುತ್ತಾರೆ, ಕೆಲವರು ಆಕೆಗೆ 115 ವರ್ಷ ಎಂದು ಹೇಳುತ್ತಾರೆ. ಇದು ನಿಜವಿರಬಹುದು ಎನ್ನಿಸುತ್ತದೆ" ಎಂದು 1996ರಿಂದ ವತ್ಸಲಾಳ ಆರೈಕೆ ಮಾಡುತ್ತಿರುವ ಗೊಂಡ್ ಆದಿವಾಸಿ ಮಣಿರಾಮ್ ಹೇಳುತ್ತಾರೆ.

ವತ್ಸಲಾ ಕೇರಳ ಮತ್ತು ಮಧ್ಯಪ್ರದೇಶದಕ್ಕೆ ಸೇರಿದ ಏಷ್ಯಾಟಿಕ್ ಆನೆ (ಎಲಿಫಾಸ್ ಮ್ಯಾಕ್ಸಿಮಸ್). ಮಣಿರಾಮ್ ಅವಳು ಈಗ ಬಹಳ ಸೌಮ್ಯ ಸ್ವಭಾವದವಳು ಆದರೆ ತನ್ನ ಯೌವನದ ದಿನಗಳಲ್ಲಿ ವತ್ಸಲಾ ತುಂಟಿಯಾಗಿದ್ದಿರಬಹುದು ಎನ್ನುತ್ತಾರೆ. ವತ್ಸಲಾಳ ಕಣ್ಣು ಮತ್ತು ಕಿವಿ ಮಂದವಾಗಿದ್ದರೂ ಅಪಾಯ ಎದುರಾದಾಗ ತನ್ನ ಹಿಂಡನ್ನು ಎಚ್ಚರಿಸುವುದರಲ್ಲಿ ಅವಳು ಇಂದಿಗೂ ಮುಂದೆ.

ಮಣಿರಾಮ್‌ ಹೇಳುವಂತೆ ಈ ಆನೆಯ ವಾಸನೆಯ ಬಲ ಈಗಲೂ ಬಲವಾಗಿದ್ದು, ಅದು ಇನ್ನೊಂದು ಪ್ರಾಣಿಯ ಇರುವಿಕೆಯನ್ನು ಕ್ಷಣ ಮಾತ್ರದಲ್ಲೇ ಗ್ರಹಿಸಬಲ್ಲದರು ಎನ್ನುತ್ತಾರೆ. ಅಂತಹ ಸಂದರ್ಭಗಳಲ್ಲಿ ವತ್ಸಲಾ ಕೂಡಲೇ ತನ್ನ ಗುಂಪನ್ನು ಬಳಿಗೆ ಕರೆದು, ವಿಶೇಷವಾಗಿ ಮರಿಗಳನ್ನು ಸುರಕ್ಷಿತವಾಗಿಸುತ್ತಾಳೆ. “ಒಂದು ವೇಳೆ ಎದುರಿಗಿರುವ ಪ್ರಾಣಿ ದಾಳಿಗೆ ಮುಂದಾದರೆ ಅವಳು ಕಲ್ಲು, ಕೋಲು ಅಥವಾ ಮರದ ಕೊಂಬೆಯನ್ನು ಹಿಡಿದು ಅದನ್ನು ಓಡಿಸುತ್ತಾಳೆ” ಎಂದು ಮಣಿರಾಮ್‌ ಹೇಳುತ್ತಾರೆ. “ಪೆಹಲೇ ಬಹುತ್‌ ತೇಜ್‌ ಥೀ [ಮೊದಲು ಬಹಳ ಚುರುಕಾಗಿದ್ದಳು].”

PHOTO • Priti David
PHOTO • Priti David

ಎಡ : ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ವತ್ಸಲಾ ಮತ್ತು ಅವ ಮಾವುತ ಮಣಿರಾಮ್ . ಬಲ : ವತ್ಸಲಾ ನ್ನು ವಿಶ್ವದ ಅತ್ಯಂತ ಹಿರಿಯ ಆನೆ ಎಂದು ಗುರುತಿಸಲಾಗಿದೆ , ಅವ ಳಿಗೆ ಈ 100 ವರ್ಷಕ್ಕಿಂತ ಲೂ ಹೆಚ್ಚು ವಯ ಸ್ಸಾಗಿದೆ

PHOTO • Sarbajaya Bhattacharya
PHOTO • Sarbajaya Bhattacharya

ವತ್ಸಲಾ ಏಷ್ಯಾಟಿಕ್ ಆನೆ (ಎಲಿಫಾಸ್ ಮ್ಯಾಕ್ಸಿಮಸ್). ಅವಳು ಕೇರಳದಲ್ಲಿ ಜನಿಸಿದಳು ಮತ್ತು ಅವಳನ್ನು 1993ರಲ್ಲಿ ಮಧ್ಯಪ್ರದೇಶದ ಹೋಶಂಗಾಬಾದ್ (ಈಗಿನ ನರ್ಮದಾಪುರಂ) ಗೆ ಕರೆತರಲಾಯಿತು

ವತ್ಸಲಾಳ ಹಾಗೆಯೇ ಮಣಿರಾಮ್‌ ಕೂಡಾ ಹುಲಿ ಸೇರಿದಂತೆ ಯಾವುದೇ ಕಾಡುಪ್ರಾಣಿಗಳಿಗೆ ಹೆದರುವುದಿಲ್ಲ. 2022ರ ಈ ವರದಿಯ ಪ್ರಕಾರ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ಸುಮಾರು 57ರಿಂದ 60 ಹುಲಿಗಳಿವೆ. "ಹಾಥಿ ಕೆ ಸಾಥ್ ರೆಹತೇ, ತೋ ಟೈಗರ್ ಕಾ ಡರ್ರ್ ನಹೀ ರೆಹ್ತಾ ಥಾ [ಆನೆಯೊಂದಿಗೆ ಇರುತ್ತಿದ್ದ ಕಾರಣ ಹುಲಿಯ ಭಯ ಇರುತ್ತಿರಲಿಲ್ಲ]” ಎಂದು ಅವರು ಹೇಳುತ್ತಾರೆ.

ಪನ್ನಾ ಹುಲಿ ಮೀಸಲು ಪ್ರದೇಶದ ಹಿನಾವುತಾ ಗೇಟ್‌ ಬಳಿಯಲ್ಲಿರುವ ಆನೆ ಆವರಣದ ಬಳಿ ಪರಿ ಅವರೊಂದಿಗೆ ಮಾತನಾಡುತ್ತಿತ್ತು. ಅಲ್ಲಿ ಒಂದು ಮರಿ ಸೇರಿದಂತೆ ಸುಮಾರು 10 ಆನೆಗಳು ಆ ದಿನದ ಮೊದಲ ಊಟಕ್ಕಾಗಿ ಕಾಯುತ್ತಿದ್ದವು. ಮಣಿರಾಮ್ ನಮ್ಮನ್ನು ಮರದ ಕೆಳಗೆ ನಿಂತಿದ್ದ ವತ್ಸಲಾ ಬಳಿಗೆ ಕರೆದೊಯ್ದರು. ಆನೆಯ ಕಾಲುಗಳಿಗೆ ಸರಪಳಿ ಬಿಗಿದು ಅಲ್ಲೇ ಬಿದ್ದಿದ್ದ ಮರದ ದಿಮ್ಮಿಯೊಂದಕ್ಕೆ ಕಟ್ಟಲಾಗಿತ್ತು. ವತ್ಸಲಾಳ ಪಕ್ಕದಲ್ಲೇ ಕೃಷ್ಣಕಾಳಿ ತನ್ನ ಎರಡು ತಿಂಗಳ ಮರಿಯೊಂದಿಗೆ ನಿಂತಿದ್ದಳು.

ವತ್ಸಲಾಳಿಗೆ ಸ್ವಂತ ಮಕ್ಕಳಿಲ್ಲ. "ಆದರೆ ಅವಳು ಯಾವಾಗಲೂ ಇತರ ಆನೆಗಳ ಮರಿಗಳನ್ನು ನೋಡಿಕೊಳ್ಳುತ್ತಾಳೆ. ದೂಸ್ರಿ ಕಿ ಬಚ್ಚಿಯಾಂ ಬಹುತ್ ಚಾಹ್ತಿ ಹೈ [ಅವಳು ಆನೆ ಮರಿಗಳನ್ನು ತುಂಬಾ ಪ್ರೀತಿಸುತ್ತಾಳೆ]" ಎಂದು ಮಣಿರಾಮ್ ದುಃಖಭರಿತ ನಗುವಿನೊಂದಿಗೆ ಹೇಳುತ್ತಾರೆ, "ಅವಳು ಮರಿಗಳೊಂದಿಗೆ ಆಡುತ್ತಾಳೆ."

*****

ವತ್ಸಲಾ ಮತ್ತು ಮಣಿರಾಮ್ ಇಬ್ಬರೂ ಮಧ್ಯಪ್ರದೇಶದ ಈಶಾನ್ಯ ಪ್ರದೇಶದ ಪನ್ನಾ ಜಿಲ್ಲೆಯ ಮಟ್ಟಿಗೆ ವಲಸಿಗರು, ಅಲ್ಲಿನ ಶೇಕಡಾ 50ಕ್ಕೂ ಹೆಚ್ಚು ಪ್ರದೇಶ ಕಾಡುಗಳಿಂದ ಆವೃತವಾಗಿದೆ. ಕೇರಳದಲ್ಲಿ ಜನಿಸಿದ ವತ್ಸಲಾಳನ್ನು 1993ರಲ್ಲಿ ಮಧ್ಯಪ್ರದೇಶದ ಹೋಶಂಗಾಬಾದ್ (ಈಗಿನ ನರ್ಮದಾಪುರಂ) ಪ್ರದೇಶಕ್ಕೆ ಕರೆತರಲಾಯಿತು. ಮಣಿರಾಮ್ ಇಲ್ಲಿಯೇ ಹುಟ್ಟಿ ಬೆಳೆದವರು ಮತ್ತು ವತ್ಸಲಾಳನ್ನು ಇಲ್ಲಿಯೇ ಅವರು ಮೊದಲ ಬಾರಿಗೆ ಭೇಟಿಯಾಗಿದ್ದು.

“ನನಗೆ ಮೊದಲಿನಿಂದಲೂ ಆನೆಗಳೆಂದರೆ ಪ್ರೀತಿ” ಎಂದು 50 ವರ್ಷದ ಮಣಿರಾಮ ಹೇಳುತ್ತಾರೆ. ಅವರ ಕುಟುಂಬದಲ್ಲಿ ಯಾರು ಮಾವುತನ ಕೆಲಸ ಮಾಡಿಲ್ಲ. ಅವರ ತಂದೆ ತಮ್ಮ ಐದು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು ಮತ್ತು ಮಣಿರಾಮ್ ಅವರ ಮಗನೂ ಈಗ ಕೃಷಿಕ. "ನಾವು ಗೇಹೂಂ [ಗೋಧಿ],ಚನಾ [ಕಡಲೆ] ಮತ್ತು ತಿಲಿ [ಎಳ್ಳು] ಬೆಳೆಯುತ್ತೇವೆ" ಎಂದು ಅವರು ಹೇಳುತ್ತಾರೆ.

ವತ್ಸಲಾಳ ಬದುಕಿನ ಒಂದು ದಿನವನ್ನು ನೋಡಿ

ವತ್ಸಲಾಳಿಗೆ 100 ವರ್ಷಗಳಿಗಿಂತಲೂ ಹೆಚ್ಚು ವಯಸ್ಸಾಗಿದೆ ಎಂದು ಹೇಳಲಾಗುತ್ತದೆ - ಇದು ವಿಶ್ವದ ಅತ್ಯಂತ ಹಳೆಯ ಜೀವಂತ ಆನೆ ಎಂದು ಅವಳ ಮಾವುತ ಗೊಂಡ್ ಆದಿವಾಸಿ ಸಮುದಾಯಕ್ಕೆ ಸೇರಿದ ಮಣಿರಾಮ್ ಹೇಳುತ್ತಾರೆ

ವತ್ಸಲಾ ಹೋಶಂಗಾಬಾದ್‌ಗೆ ಬಂದ ಹೊಸದರಲ್ಲಿ ಮಣಿರಾಮ್‌ ಮಹಾವತ್‌ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. “ಅವಳನ್ನು ದಿಮ್ಮಿಗಳನ್ನು ಲಾರಿಗೆ ಲೋಡ್‌ ಮಾಡುವ ಕೆಲಸಕ್ಕೆ ನೇಮಿಸಲಾಗಿತ್ತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಒಂದೆರಡು ವರ್ಷಗಳ ನಂತರ, ವತ್ಸಲಾ ಪನ್ನಾ ಅರಣ್ಯಕ್ಕೆ ತೆರಳಿದಳು. "ನಂತರ, ಕೆಲವು ವರ್ಷಗಳ ನಂತರ, ಪನ್ನಾದ ಮಹಾವತ್ ವರ್ಗಾವಣೆ ತೆಗೆದುಕೊಂಡು ತನ್ನ ಹುದ್ದೆಯನ್ನು ತೊರೆದರು, ಆ ಹುದ್ದೆಗೆ ನನ್ನನ್ನು ನೇಮಿಸಿದರು” ಎಂದು ಮಣಿರಾಮ್ ಹೇಳುತ್ತಾರೆ. ಅಂದಿನಿಂದ, ಅವರು ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿನ ತಮ್ಮ ಎರಡು ಕೋಣೆಗಳ ವಸತಿಗೃಹದಲ್ಲಿ ಉಳಿದುಕೊಂಡು ಈ ಹಿರಿಯ ಆನೆಯನ್ನು ನೋಡಿಕೊಳ್ಳುತ್ತಿದ್ದಾರೆ.

ತನ್ನ ಸ್ನೇಹಿತನಂತೆ, ಮಣಿರಾಮ್ ಅರಣ್ಯ ಇಲಾಖೆಯ ಖಾಯಂ ಉದ್ಯೋಗಿಯಲ್ಲ.  "ಜಬ್ ಶಾಸನ್ ರಿಟೈರ್‌ ಕರಾ ದೇಂಗೆ, ತಬ್ ಚಲೇ ಜಾಯೆಂಗೆ [ಸರ್ಕಾರ ನನ್ನನ್ನು ಬಿಡುಗಡೆ ಮಾಡಿದಾಗ, ನಾನು ಹೋಗುತ್ತೇನೆ]" ಎಂದು ಅವರು ಹೇಳುತ್ತಾರೆ. ತಿಂಗಳಿಗೆ 21,000 ರೂ.ಗಳ ಅವರ ಒಪ್ಪಂದವನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತದೆ ಮತ್ತು ಅವರು ಎಷ್ಟು ಕಾಲ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಅವರಿಗೆ ಖಚಿತವಿಲ್ಲ.

"ನನ್ನ ದಿನ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ" ಎಂದು ಮಣಿರಾಮ್ ಹೇಳುತ್ತಾರೆ. "ನಾನು ದಾಲಿಯಾ [ಗೋಧಿ ಕಡಿ] ಬೇಯಿಸುತ್ತೇನೆ, ವತ್ಸಲಾಗೆ ಆಹಾರವನ್ನು ನೀಡುತ್ತೇನೆ ಮತ್ತು ಅವಳನ್ನು ಕಾಡಿಗೆ ಕಳುಹಿಸುತ್ತೇನೆ." ಮಣಿರಾಮ್ ಹೇಳುವಂತೆ ಆನೆಯು ಇತರ ಆನೆಗಳೊಂದಿಗೆ ಕಾಡಿನಲ್ಲಿ ಮೇಯುತ್ತಿರುವಾಗ ಅವರ ಆನೆಯ ಲಾಯವನ್ನು ಸ್ವಚ್ಛಗೊಳಿಸುತ್ತಾರೆ. ನಂತರ ಆನೆಗಾಗಿ 10 ಕೇಜಿ ಡಾಲಿಯಾ ಬೇಯಿಸಿ, ತಮಗೆ ರೋಟಿ ಅಥವಾ ಚಾವಲ್ ತಯಾರಿಸಿಕೊಳ್ಳುತ್ತಾರೆ.‌ ಆನೆಗಳು ಸಂಜೆ 4 ಗಂಟೆಗೆ ಹಿಂತಿರುಗುತ್ತವೆ ಮತ್ತು ನಂತರ ವತ್ಸಲಾಗೆ ಸ್ನಾನ ಮಾಡಿಸಿ ಊಟ ನೀಡಲಾಗುತ್ತದೆ.

"ಅವಳು ಅನ್ನ ತಿನ್ನುವುದನ್ನು ಇಷ್ಟಪಡುತ್ತಿದ್ದಳು. ಅವಳು ಕೇರಳದಲ್ಲಿದ್ದಾಗ, ಅದನ್ನೇ ತಿನ್ನುತ್ತಿದ್ದಳು" ಎಂದು ಮಣಿರಾಮ್ ಹೇಳುತ್ತಾರೆ. ಆದರೆ 15 ವರ್ಷಗಳ ಹಿಂದೆ ರಾಮ್ ಬಹದ್ದೂರ್ ಎಂಬ ಗಂಡು ಆನೆ ಸುಮಾರು 90ರಿಂದ 100 ವರ್ಷ ವಯಸ್ಸಿನ ವತ್ಸಲಾ ಮೇಲೆ ದಾಳಿ ಮಾಡಿದ ನಂತರ ಪರಿಸ್ಥಿತಿ ಬದಲಾಯಿತು. ಅದರಿಂದಾಗಿ ಆಕೆಯ ಬೆನ್ನು ಮತ್ತು ಹೊಟ್ಟೆಗೆ ಗಾಯಗಳಾದವು. ವೈದ್ಯರನ್ನು ಕರೆಸಲಾಯಿತು. "ಡಾಕ್ಟರ್ ಸಾಬ್ ಮತ್ತು ನಾನು ಅವಳನ್ನು ನೋಡಿಕೊಳ್ಳುತ್ತಿದ್ದೆವು" ಎಂದು ಮಣಿರಾಮ್ ಹೇಳುತ್ತಾರೆ. ಆದರೆ ದಾಳಿಯು ಅವಳನ್ನು ಬಹಳವಾಗಿ ದುರ್ಬಲಗೊಳಿಸಿತು ಮತ್ತು ಅವಳು ಕಳೆದುಕೊಂಡ ಶಕ್ತಿಯಲ್ಲಿ ಒಂದಷ್ಟನ್ನು ಮರಳಿ ಪಡೆಯಲು ಸಹಾಯ ಮಾಡಲು ಆಹಾರದಲ್ಲಿ ಬದಲಾವಣೆ ಮಾಡುವ ಅಗತ್ಯವಿತ್ತು.

PHOTO • Priti David
PHOTO • Sarbajaya Bhattacharya

ಎಡ: ಅರಣ್ಯ ಉಸ್ತುವಾರಿ ಆಶಿಶ್ ಆನೆಗಳಿಗೆ ಡಾಲಿಯಾವನ್ನು ಸಿದ್ಧಪಡಿಸುತ್ತಿದ್ದಾರೆ. ಬಲ: ಮಣಿರಾಮ್ ವತ್ಸಲಾಳನ್ನು ಉಪಾಹಾರ ತಿನ್ನಿಸಲು ಕರೆದೊಯ್ಯುತ್ತಿದ್ದಾರೆ

PHOTO • Priti David
PHOTO • Sarbajaya Bhattacharya

15 ವರ್ಷಗಳ ಹಿಂದೆ ರಾಮ್ ಬಹದ್ದೂರ್ ಎಂಬ ಗಂಡು ಆನೆ ಸುಮಾರು 90ರಿಂದ 100 ವರ್ಷ ವಯಸ್ಸಿನ ವತ್ಸಲಾ ಮೇಲೆ ದಾಳಿ ಮಾಡಿದ ನಂತರ ಪರಿಸ್ಥಿತಿ ಬದಲಾಯಿತು. ಅದರಿಂದಾಗಿ ಆಕೆಯ ಬೆನ್ನು ಮತ್ತು ಹೊಟ್ಟೆಗೆ ಗಾಯಗಳಾದವು. ʼದಾಳಿಯು ಅವಳನ್ನು ಬಹಳ ದುರ್ಬಲಗೊಳಿಸಿತು ಮತ್ತು ಅವಳು ಕಳೆದುಕೊಂಡ ಶಕ್ತಿಯಲ್ಲಿ ಒಂದಿಷ್ಟನ್ನು ಮರಳಿ ಪಡೆಯಲು ಸಹಾಯ ಮಾಡಲು ಆಹಾರದಲ್ಲಿ ಬದಲಾವಣೆ ಮಾಡಲಾಯಿತುʼ ಎಂದು ಮಾವುತ ಹೇಳುತ್ತಾರೆ

ಮುಂದೆ ಆನೆ ಕೆಲಸದಿಂದ ನಿವೃತ್ತಿ ಹೊಂದಿತು. ಅಂದಿನಿಂದ ಆನೆಗೆ ಮರಗಳನ್ನು ತುಂಬಿಸುವ ಕೆಲಸದ ಬದಲು ಹುಲಿಗಳನ್ನು ಪತ್ತೆಹಚ್ಚುವುದು ಮತ್ತು ಕಾಡಿನಲ್ಲಿ ಗಸ್ತು ತಿರುಗುವುದಕ್ಕೆ ನೇಮಿಸಿಕೊಳ್ಳಲಾಯಿತು.

ಇವರಿಬ್ಬರು ಸ್ನೇಹಿತರು ಪರಸ್ಪರ ದೂರವಿದ್ದಾಗ ಒಬ್ಬರು ಇನ್ನೊಬ್ಬರಿಗಾಗಿ ಬಹಳವಾಗಿ ಹಂಬಲಿಸುತ್ತಾರೆ. “ಮನೆಯಲ್ಲಿದ್ದಾಗ ನನಗೆ ಅವಳ ನೆನಪು ಕಾಡುತ್ತದೆ. ಅವಳು ಏನು ಮಾಡುತ್ತಿದ್ದಾಳೋ, ಸರಿಯಾಗಿ ತಿಂದಳೋ ಇಲ್ಲವೋ ಎನ್ನುವ ಯೋಚನೆ ಕಾಡುತ್ತದೆ…” ಆನೆಯೂ ಅವರನ್ನು ಅಷ್ಟೇ ಹಚ್ಚಿಕೊಂಡಿದೆ. ಅದು ಈ ಮಾವುತ ವಾರಕ್ಕಿಂತಲೂ ಹೆಚ್ಚು ಕಾಲ ದೂರವಿದ್ದರೆ ಸರಿಯಾಗಿ ತಿನ್ನುವುದಿಲ್ಲ.

"ಉಸ್ಕೊ ಪತಾ ಚಲ್ತಿ ಹೈ ಕಿ ಅಬ್ ಮಹಾವತ್ ಸಾಬ್ ಆ ಗಯೇ [ಮಾವುತ ಹಿಂತಿರುಗಿದ್ದಾನೆಂದು ಅವಳಿಗೆ ತಿಳಿಯುತ್ತದೆ]" ಎಂದು ಮಣಿರಾಮ್ ಹೇಳುತ್ತಾರೆ. ಅವರು ಸುಮಾರು ನಾನೂರರಿಂದ ಐನೂರು ಮೀಟರ್ ದೂರದಲ್ಲಿರುವ ಗೇಟ್ ಬಳಿ ನಿಂತರೂ, ಬರುವಿಕೆಯನ್ನು ಗುರುತಿಸಿ ಆನೆ ಕೂಗತೊಡಗುತ್ತದೆ.

ಹಲವು ವರ್ಷಗಳ ಕಾಲದ ಅವರ ಬಂಧ ಈಗ ಬಹಳ ಗಟ್ಟಿಯಾಗಿದೆ "ಮೇರಿ ದಾದಿ ಜೈಸಿ ಲಗ್ತಿ ಹೈ [ಅವಳು ನನ್ನ ಅಜ್ಜಿಯಂತೆ]" ಎನ್ನುತ್ತಾ ಅವರು ನಗುತ್ತಾರೆ.

ಈ ಲೇಖನದ ವರದಿಗಾರಿಕೆಯ ಸಮಯದಲ್ಲಿ ನೀಡಿದ ಸಹಾಯಕ್ಕಾಗಿ ವರದಿಗಾರರು ದೇವಶ್ರೀ ಸೋಮಾನಿಯವರಿಗೆ ಧನ್ಯವಾದವನ್ನು ತಿಳಿಸಲು ಬಯಸುತ್ತಾರೆ

ಅನುವಾದ: ಶಂಕರ. ಎನ್. ಕೆಂಚನೂರು

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Other stories by Sarbajaya Bhattacharya
Editor : Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Other stories by Priti David
Photographs : Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Other stories by Sarbajaya Bhattacharya
Photographs : Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Other stories by Priti David
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru