ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.

ಗುಣ್‍ವಂತ್ ನ ಗುಡಿಸಲಿನ ಸೂರು ಆತನ ಮೇಲೆ ಬೀಳದಿದ್ದರೂ, ಹೊಲದ ಸುತ್ತ ತನ್ನನ್ನು ಅಟ್ಟಾಡಿಸಿದ ಆ ಚಿತ್ರವು, ಆತನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ. "ನಮ್ಮ ಜಮೀನಿನ ಅಂಚಿನಲ್ಲಿದ್ದ ಗುಡಿಸಲಿನ ತಗಡಿನ ಸೂರು ಕಳಚಿ, ನನ್ನತ್ತ ಹಾರಿ ಬಂದಿತು. ನಾನು ಹುಲ್ಲಿನ ಮೆದೆಯೊಂದರಲ್ಲಿ ಅಡಗಿ ಕುಳಿತು ಯಾವುದೇ ಗಾಯಗಳಿಲ್ಲದೆ ಹೊರಬಂದೆ", ಎಂದು ಆತ ನೆನಪಿಸಿಕೊಳ್ಳುತ್ತಾನೆ.

ಗುಣ್‍ವಂತ್ ಹುಲ್ಸುಲ್ಕರ್ ಅಂಬಲ್ಗ ಗ್ರಾಮದಲ್ಲಿ ಓಡುತ್ತಾ ತಪ್ಪಿಸಿಕೊಂಡ ಆ ಸೂರು, ಈ ಏಪ್ರಿಲ್ ‍ನಲ್ಲಿ ಆಲಿಕಲ್ಲು ಮಳೆಯಿಂದ ಕೂಡಿದ ತೀವ್ರ ಸ್ವರೂಪದ ಗಾಳಿಯ ಹೊಡೆತಕ್ಕೆ ಛಿದ್ರಗೊಂಡಿತು.

ಹುಲ್ಲಿನ ಮೆದೆಯಿಂದ ಹೊರಬಂದ 36 ರ ಗುಣವಂತ ನಿಲಂಗ ತಾಲ್ಲೂಕಿನ ತನ್ನ ಹೊಲವನ್ನು ಗುರುತಿಸದಾದರು. ಮರಗಳ ಮೇಲಿನ ಆಲಿಕಲ್ಲು ಮಳೆಯ ಗುರುತುಗಳನ್ನು ತೋರಿಸುತ್ತಾ, "ಆಲಿಕಲ್ಲು ಮಳೆಯ ಅವಧಿಯು 18-20 ನಿಮಿಷಕ್ಕಿಂತಲೂ ಹೆಚ್ಚಿರಲಿಲ್ಲವಾದರೂ, ಮರಗಳು ಉರುಳಿ ಬಿದ್ದವು, ಪಕ್ಷಿಗಳ ಕಳೇಬರಗಳು ಸುತ್ತಲೂ ಚದುರಿದಂತೆ ಹರಡಿದವಲ್ಲದೆ, ನಮ್ಮ ಜಾನುವಾರುಗಳು ಸಹ ತೀವ್ರ ಹಾನಿಗೀಡಾಗಿದವು", ಎಂದು ಅವರು ತಿಳಿಸುತ್ತಾರೆ.

ಕಲ್ಲು ಹಾಗೂ ಗಾರೆಯಿಂದ ನಿರ್ಮಿಸಿದ ಎರಡು ಕೊಠಡಿಗಳ ತನ್ನ ಮನೆಯ ಹೊರಗೆ ಮಟ್ಟಿಲುಗಳ ಮೇಲೆ ಕುಳಿತ ಆತನ ತಾಯಿ, ಧೊಂಡಬಾಯಿ "ಪ್ರತಿ 16-18 ತಿಂಗಳಿಗೆ ಆಲಿಕಲ್ಲುಗಳಿಂದ ಕೂಡಿದ ಅಥವ ಸಮಯಾನುಕೂಲವಲ್ಲದ ಮಳೆಯಾಗುತ್ತದೆ", ಎಂದು ತಿಳಿಸಿದರು. 2001 ರಲ್ಲಿ ಆಕೆಯ ಕುಟುಂಬದವರು ತಮ್ಮ 11 ಎಕರೆ ಹೊಲದಲ್ಲಿ ದ್ವಿದಳ ಧಾನ್ಯದ (ಉದ್ದು ಮತ್ತು ಹೆಸರು ಕಾಳು) ಕೃಷಿಯ ಬದಲಿಗೆ ಮಾವು ಮತ್ತು ಸೀಬೆಹಣ್ಣನ್ನು ಬೆಳೆಯತೊಡಗಿದರು. "ವರ್ಷಾದ್ಯಂತ ನಾವು ಮರಗಳ ಮುತುವರ್ಜಿ ವಹಿಸುತ್ತೇವೆ. ಆದರೆ ಕೆಲವೇ ನಿಮಿಷಗಳ ಹವಾಮಾನ ವೈಪರೀತ್ಯವು ನಮ್ಮ ಇಡೀ ಬಂಡವಾಳವನ್ನೇ ನಾಶಮಾಡಿತು", ಎಂದು ಅವರು ಅಲವತ್ತುಕೊಳ್ಳುತ್ತಾರೆ.

ಇದು ಈ ವರ್ಷದಲ್ಲಿ ಘಟಿಸಿದ ಏಕಮಾತ್ರ ಘಟನೆಯಲ್ಲ. ಕಳೆದ ದಶಕದಿಂದಲೂ ಮಹಾರಾಷ್ಟ್ರದ ಲಾತೂರಿನ ಈ ಭಾಗದಲ್ಲಿ ಆಲಿಕಲ್ಲು ಮಳೆ ಮತ್ತು ಧಾರಾಕಾರ ಮಳೆಯನ್ನೊಳಗೊಂಡ ಹವಾಮಾನದ ವೈಪರೀತ್ಯದ ಘಟನೆಗಳು ನಡೆಯುತ್ತಲೇ ಇವೆ. ಅಂಬಲ್ಗದಲ್ಲಿನ ಉದ್ಧವ್ ಬಿರಾದರ್ ‍ನ ಒಂದು ಎಕರೆಯ ಚಿಕ್ಕ ಮಾವಿನ ತೋಟವು 2014 ರ ಆಲಿಕಲ್ಲಿನ ಮಳೆಯಿಂದಾಗಿ ನಾಶವಾಯಿತು. "ಆ ಬಿರುಗಾಳಿಯಲ್ಲಿ ನನ್ನ ಬಳಿಯಿದ್ದ 10-15 ಮರಗಳು ನಾಶವಾದವು. ಅವನ್ನು ಪುನಶ್ಚೇತನಗೊಳಿಸುವ ಯಾವುದೇ ಪ್ರಯತ್ನವನ್ನು ನಾನು ನಡೆಸಲಿಲ್ಲ", ಎನ್ನುತ್ತಾರೆ ಆತ.

"ಆಲಿಕಲ್ಲು ಮಳೆ ಮುಂದುವರಿಯುತ್ತಲೇ ಇದೆ", ಎನ್ನುವ 37 ರ ಬಿರಾದರ್, 2014 ರ ಬಿರುಗಾಳಿಯ ನಂತರ ಮರಗಳ ದುಸ್ಥಿತಿಯನ್ನು ನೋಡಿದರೆ ಬಹಳ ಸಂಕಟವೆನಿಸುತ್ತಿತ್ತು. ಗಿಡಗಳನ್ನು ನೆಟ್ಟು ಅವುಗಳ ಮುತುವರ್ಜಿ ವಹಿಸುತ್ತೇವೆ. ಆದರೆ ನಿಮಿಷಮಾತ್ರದಲ್ಲಿ ಅವು ನಾಶವಾಗುತ್ತವೆ. ನನಗೆ ಇದನ್ನೆಲ್ಲ ಮತ್ತೆ ಭರಿಸಲು ಸಾಧ್ಯವಾಗಲಾರದು. ಎಂದು ನಿಡುಸುಯ್ದರು.

PHOTO • Parth M.N.

ಗುಣವಂತ್ ಹುಲ್ಸುಲ್ಕರ್ (ಮೇಲಿನ ಸಾಲಿನ ಎಡಕ್ಕೆ), ಆತನ ತಾಯಿ ಧೊಂಡಬಾಯಿ (ಮೇಲಿನ ಸಾಲಿನ ಬಲಕ್ಕೆ) ಮತ್ತು ಮಧುಕರ್ (ಕೆಳಗಿನ ಸಾಲಿನ ಬಲಕ್ಕೆ), ಅಪರಿಹಾರ್ಯವಾದ ಈ ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕೆಯನ್ನು ತೊರೆಯುವ ಯೋಚನೆಯಲ್ಲಿದ್ದಾರೆ. ಸುಭಾಷ್ ಶಿಂಧೆ (ಕೆಳಗಿನ ಸಾಲಿನ ಎಡಕ್ಕೆ), ಈ ಬಾರಿ ಖಾರಿಫ್ ಋತುವಿನಿಂದ ಒಟ್ಟಾರೆ ದೂರವೇ ಉಳಿಯುವುದಾಗಿ ತಿಳಿಸುತ್ತಾರೆ.

ಆಲಿಕಲ್ಲು ಮಳೆ? ಮರಾಠವಾಡ ಪ್ರದೇಶದ ಲಾತೂರ್ ಜಿಲ್ಲೆಯಲ್ಲಿ? ವರ್ಷದ ಅರ್ಧ ಭಾಗದಲ್ಲಿ ಪಾದರಸದ ಮಟ್ಟವು 32 ಡಿಗ್ರಿ ಸೆಲ್ಶಿಯಸ್‍ಗಿಂತಲೂ ಹೆಚ್ಚಿರುತ್ತಿದ್ದ ಸ್ಥಳವಿದು. ಈ ವರ್ಷದ ಏಪ್ರಿಲ್ ಮೊದಲ ವಾರದಲ್ಲಿ ತಾಪಮಾನವು 41 ರಿಂದ 43 ಡಿಗ್ರಿಗಳ ನಡುವಿನಲ್ಲಿದ್ದಾಗ ಆಲಿಕಲ್ಲು ಮಳೆ ಸುರಿಯಿತು.

ಇಲ್ಲಿನ ಹವಾಮಾನದ ಬಗ್ಗೆ ಪ್ರತಿಯೊಬ್ಬ ರೈತನೂ ಉದ್ರೇಕಿತನಾಗಿ ಮಾತನಾಡುತ್ತಿದ್ದು, ಇಲ್ಲಿನ ತಾಪಮಾನ, ಹವಾಮಾನ ಮತ್ತು ವಾತಾವರಣದ ಸ್ವರೂಪವನ್ನು ಅಂದಾಜಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ವರ್ಷಂಪ್ರತಿ ಮಳೆ ಬೀಳುವ ದಿನಗಳ ಸಂಖ್ಯೆಯು ಕುಂಠಿತಗೊಂಡಿದ್ದು; ಶಾಖದಿಂದ ಕೂಡಿದ ದಿನಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಅವರು ಗ್ರಹಿಸಿದ್ದಾರೆ. ಧೊಂಡಬಾಯಿ ಹುಟ್ಟಿದ 1960 ರಲ್ಲಿ, ಲಾತೂರಿನಲ್ಲಿ ವರ್ಷಂಪ್ರತಿ 147 ದಿನಗಳಲ್ಲಿನ ತಾಪಮಾನವು 32 ಡಿಗ್ರಿಗಿಂತಲೂ ಹೆಚ್ಚಿರುತ್ತಿತ್ತು ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್‍ನಿಂದ ಪ್ರಕಟಿತಗೊಂಡ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನವನ್ನು ಕುರಿತ ಆ್ಯಪ್‍ ನ ದತ್ತಾಂಶಗಳಿಂದ ತಿಳಿದುಬರುತ್ತದೆ. ಈ ವರ್ಷ, ಇದು 188 ದಿನಗಳೆಂದು ಪರಿಗಣಿಸಲಾಗಿದೆ. ಧೊಂಡುಬಾಯಿಗೆ 80 ವರ್ಷವಾದಾಗ ತಾಪಮಾನದ ದಿನಗಳು 211 ಎಂದು ಅಂದಾಜಿಸಬಹುದು.

ಕಳೆದ ತಿಂಗಳು ಅಂಬಲ್ಗದಲ್ಲಿನ ಸುಭಾಷ್ ಶಿಂಧೆಯವರ 15 ಎಕರೆ ಜಮೀನಿಗೆ ಭೇಟಿಯಿತ್ತಾಗ ಅವರು, "ನಾವು ಜುಲೈ ಅಂತಿಮ ಭಾಗದಲ್ಲಿದ್ದೇವೆಂದು ನಂಬಲೇ ಆಗುತ್ತಿಲ್ಲ", ಎಂದರು. ಜಮೀನು ಬಂಜರಾಗಿದ್ದು, ಹಸಿರಿನ ಸುಳಿವೇ ಇಲ್ಲದಂತಾಗಿದೆ. 63 ರ ಶಿಂಧೆ, ತಮ್ಮ ಕುರ್ತಾದಿಂದ ಬಿಳಿಯ ಅಂಗವಸ್ತ್ರವನ್ನು ತೆಗೆದು ಬೆವರನ್ನು ಒರೆಸುತ್ತಾ, "ಜೂನ್ ಮಧ್ಯಂತರದಲ್ಲಿ ಸಾಮಾನ್ಯವಾಗಿ ನಾನು ಸೋಯಾಬೀನ್ ಬಿತ್ತನೆ ಮಾಡುತ್ತಿದ್ದೆ. ಈ ಬಾರಿಯ ಖಾರಿಫ್ ಋತುವಿನಲ್ಲಿ ನಾನು ದೂರವೇ ಉಳಿದುಬಿಡುತ್ತೇನೆ", ಎಂದರು.

ದಕ್ಷಿಣ ಲಾತೂರನ್ನು ತೆಲಂಗಾಣದ ಹೈದರಾಬಾದಿಗೆ ಸಂಪರ್ಕಿಸುವ ಈ 150 ಕಿ.ಮೀ.ಗಳ ಮಾರ್ಗದಲ್ಲಿ, ಶಿಂಧೆಯಂತಹ ರೈತರು, ಸೋಯಾಬೀನ್ ‍ಅನ್ನು ಪ್ರಮುಖವಾಗಿ ಬೆಳೆಯುತ್ತಾರೆ. 1998 ರವರೆಗೂ ಜೋಳ, ಉದ್ದು ಮತ್ತು ಹೆಸರು ಕಾಳುಗಳು ಇಲ್ಲಿನ ಪ್ರಮುಖ ಖಾರಿಫ್ ಬೆಳೆಗಳಾಗಿದ್ದವು. "ಇವಕ್ಕೆ ಏಕರೂಪದ ಮಳೆಯ ಅವಶ್ಯಕತೆಯಿದ್ದು; ಸೂಕ್ತ ಪ್ರಮಾಣದ ಫಸಲಿಗೆ ಸಕಾಲದಲ್ಲಿನ ಮಾನ್ಸೂನ್ ಅತ್ಯವಶ್ಯ."

ಸೋಯಾಬೀನ್ ಹವಾಮಾನದ ಸ್ವಲ್ಪ ಮಟ್ಟಿನ ಬದಲಾವಣೆಯನ್ನು ತಡೆದುಕೊಳ್ಳುತ್ತದೆಯೇ ಹೊರತು ನಾಶಹೊಂದುವುದಿಲ್ಲ. ಇದು ವಾತಾವರಣಕ್ಕೆ ಹೊಂದಿಕೊಳ್ಳುವ ಬೆಳೆಯಾಗಿದ್ದು; 2000 ದ ವರ್ಷದಲ್ಲಿ ಶಿಂಧೆ ಹಾಗೂ ಇತರೆ ಹಲವರು ಸೋಯಾಬೀನ್ ಕೃಷಿಗೆ ಹೊರಳಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಇದು ಆಕರ್ಷಣೆಯನ್ನು ಉಳಿಸಿಕೊಂಡಿದೆ. ಋತುವಿನ ಕೊನೆಗೆ ನಾವು ಸ್ವಲ್ಪ ಹಣವನ್ನೂ ಉಳಿಸಬಹುದು. ಅಲ್ಲದೆ ಸುಗ್ಗಿಯ ನಂತರದಲ್ಲಿ ಉಳಿಯುವ ಸೋಯಾಬೀನ್ ‍ಅನ್ನು ಜಾನುವಾರುಗಳ ಮೇವಿಗೆ ಬಳಸಬಹುದಾಗಿದೆ. ಆದರೆ ಕಳೆದ 10-15 ವರ್ಷಗಳಿಂದಲೂ, ಸೋಯಾಬೀನ್‍ಗೂ ಸಹ ಈ ಅನಿಯಮಿತ ಮಾನ್ಸೂನ್ ಅನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಲಾತೂರಿನಲ್ಲಿನ ಇತ್ತೀಚಿನ ಆಲಿಕಲ್ಲು ಮಳೆಯಿಂದ ಸಂಭವಿಸಿದ ವ್ಯಾಪಕ ಅವಘಡಗಳು: ನೆಲಕಚ್ಚಿದ ಸೂರ್ಯಕಾಂತಿ (ಮೇಲಿನ ಸಾಲಿನ ಎಡಕ್ಕೆ; ಛಾಯಾಚಿತ್ರ: ನಾರಾಯರ್ಣ ಪವಲೆ); ಆಲಿಕಲ್ಲು ಮಳೆ ಸುರಿದ ನಂತರದ ಜಮೀನು (ಮೇಲಿನ ಸಾಲಿನ ಬಲಕ್ಕೆ; ಛಾಯಾಚಿತ್ರ: ನಿಶಾಚಿತ್ ಭದ್ರೇಶ್ವರ್); ಹಾನಿಗೀಡಾದ ಕಲ್ಲಂಗಡಿ (ಕೆಳ ಸಾಲಿನ ಎಡಕ್ಕೆ; ಛಾಯಾಚಿತ್ರ: ನಿಶಾಚಿತ್ ಭದ್ರೇಶ್ವರ್); ಸೊರಗಿದ ಜೋಳ (ಕೆಳ ಸಾಲಿನ ಬಲಕ್ಕೆ; ಛಾಯಾಚಿತ್ರ: ಮನೋಜ್ ಆಖಡೆ)

"ಮೊದಲ ಮಳೆಯ ನಂತರದ ಒಣ ಹವೆಯಿಂದಾಗಿ" ಈ ವರ್ಷ, "ಬೆಳೆಯನ್ನು ಬಿತ್ತಿದವರೆಲ್ಲ ಪೇಚಾಡುತ್ತಿದ್ದಾರೆ," ಎನ್ನುತ್ತಾರೆ ಲಾತೂರ್ ಜಿಲ್ಲೆಯ ಕಲೆಕ್ಟರ್ ಜಿ. ಶ್ರೀಕಾಂತ್. ಜಿಲ್ಲೆಯಾದ್ಯಂತ ಒಟ್ಟಾರೆ ಕೇವಲ ಶೇ. 64 ರಷ್ಟು ಬಿತ್ತನೆಯನ್ನು ಕೈಗೊಳ್ಳಲಾಗಿದೆ. ನೀಲಂಗ ತಾಲ್ಲೂಕಿನಲ್ಲಿ, ಇದರ ಪ್ರಮಾಣ ಶೇ. 66 ರಷ್ಟಿದೆ. ಹೀಗಾಗಿ, ಜಿಲ್ಲೆಯ ಒಟ್ಟಾರೆ ಕೃಷಿ ಭೂಮಿಯ ಶೇ. 50 ರಷ್ಟಿದ್ದ ಸೋಯಾಬೀನ್ ಕೃಷಿಗೆ ಇದರಿಂದ ತೀವ್ರ ಸ್ವರೂಪದ ಹಾನಿಯುಂಟಾಗಿದೆ.

ಮರಾಠವಾಡದ ಕೃಷಿ ಕ್ಷೇತ್ರವಾದ ಲಾತೂರ್‍ನಲ್ಲಿ ವಾರ್ಷಿಕವಾಗಿ ಸರಾಸರಿ 700 ಎಂ.ಎಂ ಮಳೆ ಸುರಿಯುತ್ತದೆ. ಈ ವರ್ಷ ಜೂನ್ 25 ರಂದು ಮಾನ್ಸೂನ್ ಪ್ರವೇಶವಾಗಿದ್ದು, ಅಂದಿನಿಂದಲೂ ಇದರ ಸ್ವರೂಪವು ಅನಿಯಮಿತವಾಗಿಯೇ ಸಾಗುತ್ತಿದೆ. ಜುಲೈ ಅಂತಿಮ ಭಾಗದಲ್ಲಿ, ಸದರಿ ಅವಧಿಯಲ್ಲಿನ ಮಳೆಯ ಪ್ರಮಾಣದಲ್ಲಿ ಶೇ. 47 ರಷ್ಟು ಕಡಿಮೆಯಾಗಿದೆ ಎಂಬುದಾಗಿ ಶ್ರೀಕಾಂತ್ ತಿಳಿಸುತ್ತಾರೆ.

2000 ದ ಇಸವಿಯ ಪೂರ್ವಾರ್ಧದಲ್ಲಿ, ಸುಮಾರು 4 ಸಾವಿರ ರೂ. ಗಳನ್ನು ವ್ಯಯಿಸಿ, ಒಂದು ಎಕರೆಯಲ್ಲಿ, 10-12 ಕ್ವಿಂಟಲ್ ಸೋಯಾಬೀನ್ ಫಸಲನ್ನು ಪಡೆಯಬಹುದಿತ್ತು. ಸುಮಾರು ಎರಡು ದಶಕಗಳ ನಂತರ, ಸೋಯಾಬೀನ್ ಬೆಲೆಯು ಕ್ವಿಂಟಲ್‍ಗೆ 1,500 ರೂ. ಗಳಿಂದ 3,000 ರೂ. ಗಳಷ್ಟು ದ್ವಿಗುಣಗೊಂಡಿದ್ದರೂ, ಇದರ ಕೃಷಿಯ ವೆಚ್ಚವು ಮೂರು ಪಟ್ಟು ಹೆಚ್ಚಾಗಿದ್ದು, ಎಕರೆವಾರು ಉತ್ಪನ್ನವು ಅರ್ಧಕ್ಕಿಳಿದಿದೆ ಎನ್ನುತ್ತಾರೆ ಸುಭಾಷ್ ಶಿಂಧೆ.

ರಾಜ್ಯದ ಕೃಷಿ ಮಾರುಕಟ್ಟೆ ಮಂಡಳಿಯ ದತ್ತಾಂಶವೂ ಸಹ ಶಿಂಧೆಯವರ ಅಭಿಪ್ರಾಯವನ್ನು ಬೆಂಬಲಿಸುತ್ತದೆ. 2010-11 ರಲ್ಲಿ, ಒಟ್ಟಾರೆ 1.94 ಲಕ್ಷ ಹೆಕ್ಟೇರ್‍ ನಲ್ಲಿನ ಸೋಯಾಬೀನ್ ಕೃಷಿಯಿಂದ 4.31 ಲಕ್ಷ ಟನ್ ‍ಗಳ ಉತ್ಪನ್ನವು ದೊರೆಯುತ್ತಿತ್ತೆಂಬುದಾಗಿ ಮಂಡಳಿಯ ವೆಬ್‍ಸೈಟ್‍ನಿಂದ ತಿಳಿದುಬರುತ್ತದೆ. 2016 ರಲ್ಲಿ, 3.67 ಲಕ್ಷ ಹೆಕ್ಟೇರ್‍ನ ಸೋಯಾಬೀನ್ ಕೃಷಿಯಿಂದಾಗಿ ಉತ್ಪನ್ನದ ಪ್ರಮಾಣ ಕೇವಲ 3.08 ಲಕ್ಷ ಟನ್‍ ಗಳಷ್ಟಿದ್ದು, ಎಕರೆವಾರು ಕೃಷಿ ಭೂಮಿಯಲ್ಲಿನ ಶೇ. 89 ರಷ್ಟು ಏರಿಕೆಯ ಹೊರತಾಗಿಯೂ ಕೇವಲ 3.08 ಲಕ್ಷ ಟನ್‍ಗಳ ಉತ್ಪನ್ನವು ದೊರೆತಿದ್ದು; ಉತ್ಪನ್ನದ ಪ್ರಮಾಣದಲ್ಲಿ ಶೇ. 28.5 ರಷ್ಟು ಇಳಿಕೆಯಾಗಿದೆ.

ಧೊಂಡಬಾಯಿಯವರ ಪತಿ, 63 ರ ಮಧುಕರ್ ಹುಲ್ಸುಲ್ಕರ್, ಈ ದಶಕದ ಮತ್ತೊಂದು ವಿಷಯದತ್ತ ಗಮನಸೆಳೆಯುತ್ತಾರೆ. "2012 ರಿಂದ ಕ್ರಿಮಿನಾಶಕಗಳ ಬಳಕೆಯು ಹೆಚ್ಚಾಗಿದ್ದು, ಈ ವರ್ಷ ನಾವು 5 ರಿಂದ 7 ಬಾರಿ ಅದನ್ನು ಬಳಸಬೇಕಾಯಿತು", ಎನ್ನುತ್ತಾರೆ.

ಬದಲಾಗುತ್ತಿರುವ ಭೂ ದೃಶ್ಯವನ್ನು ಕುರಿತಂತೆ ಮತ್ತಷ್ಟು ಒಳನೋಟಗಳನ್ನು ದೊರಕಿಸಿದ ಧೊಂಡಬಾಯಿ, "ಇದಕ್ಕೂ ಮೊದಲು, ಹದ್ದು, ಗುಬ್ಬಚ್ಚಿ ಹಾಗೂ ಗಿಡುಗಗಳ ದೃಶ್ಯವು ಸಾಮಾನ್ಯವಾಗಿತ್ತು. ಆದರೆ ಕಳೆದ ಸುಮಾರು ಹತ್ತು ವರ್ಷಗಳಿಂದ, ಅವು ದುರ್ಲಭವಾಗಿವೆ", ಎನ್ನುತ್ತಾರೆ.

PHOTO • Parth M.N.

ತಮ್ಮ ಮಾವಿನ ಮರದ ಕೆಳಗೆ ನಿಂತಿರುವ ಮಧುಕರ್ ಹುಲ್ಸುಲ್ಕರ್: ‘2012 ರಿಂದ, ಕ್ರಿಮಿನಾಶಕದ ಬಳಕೆಯು ಹೆಚ್ಚಾಗುತ್ತಿದ್ದು, ಈ ವರ್ಷ ನಾವು 5 ರಿಂದ 7 ಬಾರಿ ಅದನ್ನು ಸಿಂಪಡಿಸಬೇಕಾಯಿತು’.

ಲಾತೂರಿನ ಪರಿಸರ ಪತ್ರಕರ್ತರಾದ ಅತುಲ್ ದಲ್ಗಾಂಕರ್, "ಭಾರತದಲ್ಲಿನ ಕ್ರಿಮಿನಾಶಕದ ಬಳಕೆಯ ಪ್ರಮಾಣವು ಇನ್ನೂ ಪ್ರತಿ ಎಕರೆಗೆ ಒಂದು ಕೆ.ಜಿ.ಯಷ್ಟಿದೆ", ಎನ್ನುತ್ತಾರೆ. "ಅಮೆರಿಕ, ಜಪಾನ್ ಮುಂತಾದ ಮುಂದುವರಿದ ಕೈಗಾರಿಕಾ ಕ್ಷೇತ್ರವನ್ನುಳ್ಳ ದೇಶಗಳಲ್ಲಿನ ಇದರ ಬಳಕೆಯ ಪ್ರಮಾಣ 8 ರಿಂದ 10 ರಷ್ಟು ಹೆಚ್ಚಾಗಿದ್ದಾಗ್ಯೂ, ಅವರು ಅದನ್ನು ಹತೋಟಿಯಲ್ಲಿಟ್ಟಿದ್ದು, ನಮ್ಮಲ್ಲಿ ಆ ವ್ಯವಸ್ಥೆಯಿಲ್ಲ. ನಮ್ಮಲ್ಲಿನ ಕ್ರಿಮಿನಾಶಕಗಳಲ್ಲಿ ಕ್ಯಾನ್ಸರ್‍ಕಾರಕ ಅಂಶಗಳಿದ್ದು, ಜಮೀನುಗಳಲ್ಲಿನ ಪಕ್ಷಿಗಳು ಇದರಿಂದಾಗಿ ಸಾವಿಗೀಡಾಗುತ್ತಿವೆ.”

ಹವಾಮಾನದಲ್ಲಿನ ತೀವ್ರ ಬದಲಾವಣೆಗಳಿಂದಾಗಿ ಉತ್ಪನ್ನದಲ್ಲಿ ಇಳಿಕೆಯುಂಟಾಗುತ್ತಿದೆ ಎನ್ನುವ ಶಿಂಧೆ, "4 ಮಾಸಗಳ ಮಾನ್ಸೂನ್‍ನಲ್ಲಿ 70-75 ದಿನಗಳ ಕಾಲ ಮಳೆ ಸುರಿಯುತ್ತಿತ್ತು (ಜೂನ್-ಸೆಪ್ಟೆಂಬರ್)", ಎಂದು ತಿಳಿಸುತ್ತಾರೆ. "ಸೋನೆ ಮಳೆಯು ಒಂದೇ ಸಮ ಶಾಂತವಾಗಿ ಸುರಿಯುತ್ತಿತ್ತಾದರೂ, ಕಳೆದ 15 ವರ್ಷಗಳಿಂದ, ಮಳೆಯ ದಿನಗಳು ಅರ್ಧದಷ್ಟು ಕಡಿಮೆಯಾಗಿವೆ. ಮಳೆ ಸುರಿದದ್ದೇ ಆದರೆ ಹುಚ್ಚುಚ್ಚಾರ ಸುರಿಯುತ್ತದೆ. ಅದರ ನಂತರದಲ್ಲಿ ಒಣ ಹವೆಯು ಅದನ್ನು ಹಿಂಬಾಲಿಸುತ್ತದೆ. ಇಂತಹ ವಾತಾವರಣದಲ್ಲಿ ಕೃಷಿಯು ಅಸಾಧ್ಯ.”

ಪವನಶಾಸ್ತ್ರ ಇಲಾಖೆಯ ದತ್ತಾಂಶವು ಅವರ ಈ ಅಭಿಪ್ರಾಯವನ್ನು ಬೆಂಬಲಿಸುತ್ತದೆ. 2014 ರಲ್ಲಿ, ಮಾನ್ಸೂನ್ ‍ನ ನಾಲ್ಕು ತಿಂಗಳ ಅವಧಿಯಲ್ಲಿ, 400 ಮಿ. ಮೀ. ಮಳೆಯಾಗಿದೆ. ನಂತರದ ವರ್ಷದಲ್ಲಿ, ಇದರ ಪ್ರಮಾಣ 317 ಮಿ. ಮೀ.ನಷ್ಟಿದ್ದು, 2016 ರಲ್ಲಿ ಜಿಲ್ಲೆಯಲ್ಲಿನ ನಾಲ್ಕು ತಿಂಗಳ ಅವಧಿಯ ಮಳೆಯು 1010 ಮಿ.ಮೀ. ನಷ್ಟಿದೆ. 2017 ರಲ್ಲಿ ಇದರ ಪ್ರಮಾಣ 760 ಮಿ.ಮೀ.ಗಳು. ಕಳೆದ ವರ್ಷ, ಲಾತೂರಿನಲ್ಲಿ ಮಾನ್ಸೂನ್‍ನಲ್ಲಿ 530 ಮಿ. ಮೀ. ಮಳೆಯಾಗಿದ್ದು, ಇದರಲ್ಲಿನ 252 ಮಿ. ಮೀ. ಮಳೆಯು ಜೂನ್ ತಿಂಗಳೊಂದರಲ್ಲೇ ದಾಖಲಾಗಿದೆ. ಜಿಲ್ಲೆಯಲ್ಲಿ ಎಂದಿನಂತೆ ಮಳೆ ಬೀಳುವ ವರ್ಷಗಳಲ್ಲೂ, ಮಳೆಯ ವ್ಯಾಪ್ತಿ ಹಾಗೂ ಹಂಚಿಕೆಯು ಅತ್ಯಂತ ಅನಿಯಮಿತ ಸ್ವರೂಪದಲ್ಲಿರುವುದು ಕಂಡುಬಂದಿದೆ.

ಅಂತರ್ಜಲ ಸರ್ವೇಕ್ಷಣೆ ಮತ್ತು ಅಭಿವೃದ್ಧಿ ಏಜೆನ್ಸಿಯ ಹಿರಿಯ ಭೂವಿಜ್ಞಾನಿ ಚಂದ್ರಕಾಂತ್ ಭೋಯರ್, "ಸೀಮಿತ ಅವಧಿಯ ಧಾರಾಕಾರ ಮಳೆಯು ಭೂ ಸವೆತಕ್ಕೆ ಕಾರಣವಾಗುತ್ತದೆ. ಒಂದೇ ಸಮನಾಗಿ ಸುರಿಯುವ ಸೋನೆ ಮಳೆಯು ಅಂತರ್ಜಲದ ಮರುಪೂರಣಕ್ಕೆ ಸಹಕಾರಿ", ಎನ್ನುತ್ತಾರೆ.

ಶಿಂಧೆಯವರ ನಾಲ್ಕು ಬೋರ್‍ವೆಲ್‍ಗಳು ಅನೇಕ ಬಾರಿ ಒಣಗಿಹೋಗುವುದರಿಂದ ಅವರು ಅಂತರ್ಜಲವನ್ನು ಇನ್ನು ಅವಲಂಬಿಸುವಂತಿಲ್ಲ. "ನಮಗೆ 50 ಅಡಿಯಲ್ಲೇ ನೀರು ದೊರೆಯುತ್ತಿತ್ತು. ಈಗ 500 ಅಡಿಗಳ ಆಳದ ಬೋರ್‍ವೆಲ್‍ ಗಳೂ ಒಣಗಿವೆ", ಎನ್ನುತ್ತಾರವರು.

ಇದರಿಂದ ಇನ್ನೂ ಹಲವು ಸಮಸ್ಯೆಗಳು ತಲೆದೋರುತ್ತವೆ. "ನಾವು ಸೂಕ್ತ ಪ್ರಮಾಣದ ಬಿತ್ತನೆ ನಡೆಸದಿದ್ದಲ್ಲಿ, ಜಾನುವಾರುಗಳಿಗೆ ಮೇವು ಇಲ್ಲದಂತಾಗುತ್ತದೆ", ಎನ್ನುತ್ತಾರೆ ಶಿಂಧೆ. "ನೀರು ಹಾಗೂ ಮೇವಿಲ್ಲದೆ ರೈತರು ಅವರ ಜಾನುವಾರುಗಳನ್ನು ನಿಭಾಯಿಸಲಾರರು. 2009 ರವರೆಗೂ ನನ್ನ ಬಳಿ 20 ಎತ್ತುಗಳಿದ್ದು, ಈಗ ಕೇವಲ ಒಂಭತ್ತು ಎತ್ತುಗಳಿವೆ", ಎನ್ನುತ್ತಾರವರು.

2014 hailstorm damage from the same belt of Latur mentioned in the story
PHOTO • Nishant Bhadreshwar
2014 hailstorm damage from the same belt of Latur mentioned in the story
PHOTO • Nishant Bhadreshwar
2014 hailstorm damage from the same belt of Latur mentioned in the story
PHOTO • Nishant Bhadreshwar

ಆರು ತಿಂಗಳಿಗೂ ಹೆಚ್ಚಿನ ಅವಧಿಯವರೆಗೂ 32 ಡಿಗ್ರಿ ಸೆಲ್ಶಿಯಸ್ ತಪಮಾನವಿದ್ದ ಮರಾಠವಾಡದ ಲಾತೂರ್ ಜಿಲ್ಲೆಯ ಚಿತ್ರ. ಈ ವರ್ಷದ ಏಪ್ರಿಲ್ ತಿಂಗಳಲ್ಲಿನ 41-43 ಡಿಗ್ರಿಗಳ ನಡುವಿನ ತಾಪಮಾನದಲ್ಲಿ, ಇತ್ತೀಚೆಗೆ ಅಲ್ಲಿ ಆಲಿಕಲ್ಲು ಮಳೆ ಸುರಿದಿದೆ.

95 ರ ವಯಸ್ಸಿನಲ್ಲೂ, ಚೈತನ್ಯದಿಂದಿರುವ ಶಿಂಧೆಯ ತಾಯಿ ಕಾವೇರಿಬಾಯಿ, "1905 ರಲ್ಲಿ ಲೋಕಮಾನ್ಯ ತಿಲಕರು ಇಲ್ಲಿ ಹತ್ತಿಯನ್ನು ಪರಿಚಯಿಸಿದಾಗಿನಿಂದಲೂ ಲಾತೂರ್ ಹತ್ತಿಯ ಕೇಂದ್ರ ಸ್ಥಾನವಾಗಿತ್ತು. ಅದರ ಕೃಷಿಗೆ ನಮಗೆ ಹೇರಳವಾದ ಮಳೆಯು ಲಭ್ಯವಿತ್ತು. ಇಂದು ಅದರ ಜಾಗವನ್ನು ಸೋಯಾಬೀನ್ ಆಕ್ರಮಿಸಿದೆ", ಎನ್ನುತ್ತಾರೆ. ನೆಲದ ಮೇಲೆ ಕಾಲನ್ನು ಮಡಿಚಿ ಕೂರುವ ಇವರಿಗೆ ಎದ್ದು ನಿಲ್ಲಲು ಯಾವುದೇ ಸಹಾಯದ ಅಗತ್ಯವಿಲ್ಲ.

ಎರಡು ದಶಕದ ಹಿಂದೆ ಆಲಿಕಲ್ಲಿನ ಮಳೆಯು ಪ್ರಾರಂಭಗೊಳ್ಳುವ ಮೊದಲೇ ತಮ್ಮ ತಾಯಿಯು ಕೃಷಿಯನ್ನು ತೊರೆದದ್ದು, ಶಿಂಧೆಗೆ ಸಂತೋಷದ ವಿಷಯ. "ಕೆಲವೇ ನಿಮಿಷಗಳಲ್ಲಿ ಅದು ಜಮೀನನ್ನು ಧ್ವಂಸಗೊಳಿಸುತ್ತದೆಯಾಗಿ, ತೋಟಗಳ ಮಾಲೀಕರು ಹೆಚ್ಚಿನ ತೊಂದರೆಯನ್ನು ಅನುಭವಿಸುತ್ತಾರೆ."

ಉತ್ತಮ ಪರಿಸ್ಥಿತಿಯಿದ್ದ ದಕ್ಷಿಣದ ಭಾಗದಲ್ಲಿನ ತೋಟಗಾರರು ವಿಶೇಷವಾಗಿ ಹಾನಿಗೊಳಗಾಗಿದ್ದಾರೆ. ಮಧುಕರ್ ಹುಲ್ಸುಲ್ಕರ್ ಅವರ ತೋಟದಲ್ಲಿ ಅನೇಕ ಮರಗಳಲ್ಲಿ ಹಳದಿ ಚುಕ್ಕೆಗಳು ಕಂಡುಬರುತ್ತವೆ. "ಈ ವರ್ಷದ ಏಪ್ರಿಲ್ ‍ನಲ್ಲಿ ಆಲಿಕಲ್ಲಿನ ಮಳೆ ಸುರಿದಿತ್ತು" ಎನ್ನುವ ಅವರು, "ನನಗೆ 1.5 ಲಕ್ಷದಷ್ಟು ಬೆಲೆಯ ಹಣ್ಣುಗಳು ನಷ್ಟವಾದವು. 2000 ರಲ್ಲಿ 90 ಮರಗಳಿದ್ದು, ಈಗ ಅವು ಐವತ್ತಕ್ಕಿಳಿದಿವೆ", ಎಂದು ತಿಳಿಸುತ್ತಾರೆ. "ಆಲಿಕಲ್ಲಿನ ಮಳೆಯು ಅಪರಿಹಾರ್ಯವಾದುದರಿಂದ" ತೋಟದ ಕೃಷಿಯನ್ನು ತೊರೆಯುವ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ.

ಲಾತೂರಿನ ಬೆಳೆಯ ಪ್ರಕಾರಗಳಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಒಂದೊಮ್ಮೆ ಜೋಳ ಹಾಗೂ ಇತರೆ ಧಾನ್ಯಗಳನ್ನು ಪ್ರಧಾನವಾಗಿಯೂ, ಮೆಕ್ಕೆಜೋಳವನ್ನು ಸ್ವಲ್ಪ ಪ್ರಮಾಣದಲ್ಲಿಯೂ ಬೆಳೆಯಲಾಗುತ್ತಿದ್ದ ಆ ಪ್ರದೇಶದಲ್ಲಿ; 1905 ರಲ್ಲಿ ಹತ್ತಿಯ ಕೃಷಿಯನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಲಾಯಿತು.

ನಂತರ 1970 ರಲ್ಲಿ ಕಬ್ಬಿನ ಕೃಷಿಯನ್ನು ಆರಂಭಿಸಿ ಸ್ವಲ್ಪಮಟ್ಟಿನ ಸೂರ್ಯಕಾಂತಿಯ ಜೊತೆಗೆ 2000 ರಲ್ಲಿ ಸೋಯಾಬೀನ್ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಾರಂಭಿಸಲಾಯಿತು. 2018-19 ರಲ್ಲಿ ಕಬ್ಬು ಹಾಗೂ ಸೋಯಾಬೀನ್ ವ್ಯಾಪಕವಾಗಿ ಹರಡಿತೆಂದು ಹೇಳಬಹುದು. ಪುಣೆಯ ವಸಂತ್‍ದಾದ ಶುಗರ್ ಇನ್‍ಸ್ಟಿಟ್ಯೂಟ್ ‍ನ ದತ್ತಾಂಶದ ಪ್ರಕಾರ, ಇದರ ಸಾಗುವಳಿಯು 67,000 ಹೆಕ್ಟೇರ್ ಭೂಮಿಯನ್ನು ವ್ಯಾಪಿಸಿದೆ. 1982 ರಲ್ಲಿ ಲಾತೂರ್‍ನಲ್ಲಿ ಒಂದು ಸಕ್ಕರೆ ಕಾರ್ಖಾನೆಯಿದ್ದು; ಅವುಗಳ ಸಂಖ್ಯೆ ಈಗ 11 ಕ್ಕೇರಿದೆ. ವಾಣಿಜ್ಯ ಬೆಳೆಗಳ ದೆಸೆಯಿಂದಾಗಿ, ಬೋರ್‍ವೆಲ್ ‍ಗಳ ಮಹಾಸ್ಫೋಟವೇ ಆಯಿತೆನ್ನಬಹುದು. ಎಷ್ಟು ಬೋರ್‍ವೆಲ್‍ ಗಳನ್ನು ಅಗೆಯಲಾಯಿತೆಂಬ ಲೆಕ್ಕವೇ ಇಲ್ಲದಂತಾಯಿತಲ್ಲದೆ, ಅಂತರ್ಜಲದ ಅತೀವ ಬಳಕೆ ಪ್ರಾರಂಭಗೊಂಡಿತು. ಸುಮಾರು 100 ವರ್ಷಗಳಲ್ಲಿ; ಬಹಳ ಕಾಲದಿಂದಲೂ ಕಾಳುಗಳ ಕೃಷಿಗೆ ಬಳಕೆಯಾಗುತ್ತಿದ್ದ ಭೂಮಿಯ ಜಲ ಸಂಪತ್ತು, ಮಣ್ಣು, ತೇವಾಂಶ ಹಾಗೂ ಸಸ್ಯವರ್ಗಗಳ ಮೇಲೆ ವಾಣಿಜ್ಯ ಬೆಳೆಗಳು ಅಪಾರ ಪರಿಣಾಮವನ್ನು ಬೀರಿದವು.

ರಾಜ್ಯ ಸರ್ಕಾರದ ವೆಬ್‍ಸೈಟ್ ಪ್ರಕಾರ, ಲಾತೂರಿನಲ್ಲಿ ಅರಣ್ಯ ಕ್ಷೇತ್ರವು ಕೇವಲ ಶೇ. 0.54 ರಷ್ಟಿದೆ. ಮರಾಠವಾಡದಾದ್ಯಂತ  ಸರಾಸರಿ ಶೇ. 0.9 ರಷ್ಟು ಅರಣ್ಯ ಕ್ಷೇತ್ರವಿದ್ದು, ಇದು ಕರುಣಾಜನಕ ಸ್ಥಿತಿಯಲ್ಲಿದೆ.

Kaveribai
PHOTO • Parth M.N.
Madhukar and his son Gunwant walking through their orchards
PHOTO • Parth M.N.

ಎಡಕ್ಕೆ: ‘ಲಾತೂರ್ ಹತ್ತಿಯ ಕೇಂದ್ರಸ್ಥಾನವಾಗಿತ್ತು... ಅದರ ಕೃಷಿಗೆ ನಮಗೆ ಹೇರಳವಾದ ಮಳೆಯೂ ಲಭ್ಯವಿತ್ತು. ಎನ್ನುತ್ತಾರೆ’, 95 ರ ಕಾವೇರಿಬಾಯಿ ಶಿಂಧೆ. ಬಲಕ್ಕೆ: ಹವಾಮಾನದ ದೆಸೆಯಿಂದಾಗಿ, ಮಧುಕರ್ ಹುಲಸುಲ್ಕರ್ ಮತ್ತು ಆತನ ಮಗ ಗುಣವಂತ್, ಕೃಷಿಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತಿದ್ದಾರೆಯೇ?

"ಈ ಎಲ್ಲ ಪ್ರಕ್ರಿಯೆಗಳು ಹಾಗೂ ಹವಾಮಾನ ಬದಲಾವಣೆಗಳ ಬಗ್ಗೆ ಸಂಕ್ಷಿಪ್ತವಾಗಿ ಸಮೀಕರಿಸುವುದು ತಪ್ಪಾಗಬಹುದು", ಎನ್ನುತ್ತಾರೆ ಅತುಲ್ ದಲ್ಗಾಂಕರ್. "ಇದಕ್ಕೆ ವಸ್ತುಶಃ ಸಾಕ್ಷಿಗಳನ್ನು ಒದಗಿಸುವುದೂ ಕಷ್ಟವೇ." ಅಲ್ಲದೆ, ಸದರಿ ಬದಲಾವಣೆಗಳ ಭೂ ವ್ಯಾಪ್ತಿಯು ಬೃಹತ್ ಪ್ರಮಾಣದಲ್ಲಿದ್ದು; ಜಿಲ್ಲೆಯೊಂದರ ಮಾನವ ನಿರ್ಮಿತ ಗಡಿಗೆ ಮಾತ್ರವೇ ಸೀಮಿತವಾಗಿಲ್ಲ. ಮರಾಠವಾಡದ ಚಿಕ್ಕ ಭಾಗವಾದ ಲಾತೂರಿನಲ್ಲಿ ಅಗಾಧವಾದ ಬದಲಾವಣೆಗಳಾಗುತ್ತಿದ್ದು, ಅವು ಕೃಷಿ ಸಂಬಂಧಿತ ಪರಿಸರವನ್ನು ಏರುಪೇರುಗೊಳಿಸಿವೆ.

"ಭೂಮಿಯ ವಿಸ್ತøತ ಭಾಗಗಳಲ್ಲಿನ ಈ ವಿವಿಧ ಪ್ರಕ್ರಿಯೆಗಳ ನಡುವೆ ಸಂಬಂಧವಿರುವಂತೆ ತೋರುತ್ತಿದೆ. ನಾವು ಇತರೆ ಬೆಳೆಗಳಿಗೆ ಹೊರಳಿದ ಹಾಗೂ ಭೂಮಿಯ ಬಳಕೆ ಹಾಗೂ ತಾಂತ್ರಿಕತೆಯಲ್ಲಿ ಮಾರ್ಪಾಡುಗಳನ್ನು ಕೈಗೊಂಡ ಒಂದು ದಶಕದ ನಂತರ ಹವಾಮಾನದಲ್ಲಿನ ತೀವ್ರ ಬದಲಾವಣೆಯ ಪ್ರಕರಣಗಳು ಹಾಗೂ ಆಲಿಕಲ್ಲು ಮಳೆಯ ಅಲ್ಲೋಲಕಲ್ಲೋಲಗಳು ಕಂಡುಬರುತ್ತಿರುವುದು ಆಸಕ್ತಿಕರವೂ ಹೌದು."

ಹವಾಮಾನದಲ್ಲಿನ ವ್ಯೆಪರೀತ್ಯಗಳ ಸಂಖ್ಯೆಯು ಏರುಗತಿಯಲ್ಲಿ ಸಾಗುತ್ತಿದ್ದು; ಜನರು ಅಪ್ರತಿಭರಾಗಿದ್ದಾರೆ.

"ಪ್ರತಿಯೊಂದು ಕೃಷಿಯ ಆವರ್ತನವೂ (ಅಗ್ರಿಕಲ್ಚರಲ್ ಸೈಕಲ್) ರೈತರನ್ನು ಹೆಚ್ಚಿನ ಒತ್ತಡಕ್ಕೀಡುಮಾಡುತ್ತದೆ", ರೈತರ ಆತ್ಮಹತ್ಯೆಯ ಹಿಂದಿನ ಕಾರಣಗಳಲ್ಲಿ ಇದೂ ಒಂದು. ನನ್ನ ಮಕ್ಕಳು ಸರ್ಕಾರಿ ಕಛೇರಿಗಳಲ್ಲಿ ಗುಮಾಸ್ತರಾಗಿರುತ್ತಿದ್ದರೆ ಎಷ್ಟೋ ಒಳ್ಳೆಯದಿತ್ತು” ಎನ್ನುತ್ತಾರೆ ಗುಣ್‍ವಂತ್ ಹುಲ್ಸುಲ್ಕರ್. ಹವಾಮಾನದೊಂದಿಗೆ ಕೃಷಿಯನ್ನು ಕುರಿತ ಅವರ ದೃಷ್ಟಿಕೋನವೂ ಮಾರ್ಪಾಡಾಗಿದೆ.

"ಬರಬರುತ್ತ ಕೃಷಿಯಿಂದಾಗಿ ಸಮಯ, ಹಣ ಹಾಗೂ ಶಕ್ತಿಗಳು ವ್ಯರ್ಥವಾಗುತ್ತಿವೆ", ಎನ್ನುತ್ತಾರೆ ಸುಭಾಷ್ ಶಿಂಧೆ. ಅವರ ತಾಯಿಯ ಕಾಲದಲ್ಲಿ ಹೀಗಿರಲಿಲ್ಲ. "ಕೃಷಿಯು ನಮ್ಮ ಸ್ವಾಭಾವಿಕ ಆಯ್ಕೆಯಾಗಿತ್ತು", ಎನ್ನುತ್ತಾರೆ ಚೈತನ್ಯದ ಚಿಲುಮೆಯಂತಿರುವ ಕಾವೇರಿಬಾಯಿ.

ನಾನು ನಮಸ್ತೆಯೊಂದಿಗೆ ಕಾವೇರಿಬಾಯಿಯನ್ನು ಬೀಳ್ಕೊಡುತ್ತಿರುವಾಗ, ಅವರು ನನಗೆ ಹಸ್ತಲಾಘವವನ್ನಿತ್ತರು. ಹೆಮ್ಮೆಯ ನಗುವಿನೊಂದಿಗೆ, "ಕಳೆದ ವರ್ಷ ನನ್ನ ಮೊಮ್ಮಗ ಹಣವನ್ನುಳಿಸಿ, ನನ್ನನ್ನು ವಿಮಾನದಲ್ಲಿ ಕರೆದೊಯ್ದಿದ್ದ. ಆಗ ವಿಮಾನದಲ್ಲಿ ಯಾರೋ ನನ್ನನ್ನೂ ಹೀಗೆಯೇ ಹಸ್ತಲಾಘವದೊಂದಿಗೆ ಅಭಿವಂದಿಸಿದ್ದರು. ಹವಾಮಾನ ಬದಲಾಗುತ್ತಿದೆ. ನಮ್ಮ ಅಭಿವಂದನೆಯ ರೂಢಿಗಳೂ ಬದಲಾಗತಕ್ಕದ್ದೆಂದು ನನಗನಿಸುತ್ತದೆ", ಎಂದರವರು.

ಮುಖಪುಟ ಚಿತ್ರ (ಲಾತೂರಿನ ಆಲಿಕಲ್ಲು ಮಳೆಯಿಂದಾದ ಹಾನಿ): ನಿಶಾಂತ್ ಭದ್ರೇಶ್ವರ್.

ದೇಶಾದ್ಯಂತ ಪರಿಸರದಲ್ಲಿ ಬದಲಾವಣೆಗಳಾಗುತ್ತಿವೆ. ಯುಎನ್‍ಡಿಪಿ ಆಶ್ರಯದಲ್ಲಿ ಪರಿಯ ವತಿಯಿಂದ ಅವನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ: [email protected] with a cc to [email protected] .

ಅನುವಾದ: ಶೈಲಜ ಜಿ. ಪಿ.

Reporter : Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Other stories by Parth M.N.

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Series Editors : Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Other stories by Sharmila Joshi
Translator : Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Shailaja G. P.