1998ರ ಹಿಟ್ ಸಿನೆಮಾ ಎ ಬಗ್ಸ್ ಲೈಫ್‌ನ ಎರಡನೇ ಭಾಗದಂತಿದೆ ಈ ಕಥೆ. ಮೂಲ ಹಾಲಿವುಡ್ ಚಲನಚಿತ್ರದಲ್ಲಿ,  ಫ್ಲಿಕ್ ಎನ್ನುವ ಇರುವೆ ಇರುವೆ ದ್ವೀಪದಲ್ಲಿ ತನ್ನ ಸಾವಿರಾರು ರಕ್ತಸಂಬಂಧಿಗಳನ್ನು ಕೆಟ್ಟ ವ್ಯಕ್ತಿಗಳಿಂದ ರಕ್ಷಿಸಲು ಕಠಿಣ ಯೋಧರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ - ಆ ಕೆಟ್ಟ ವ್ಯಕ್ತಿಗಳೆಂದರೆ ಮಿಡತೆಗಳು.

ಭಾರತದಲ್ಲಿ ತೆರೆದುಕೊಳ್ಳುತ್ತಿರುವ ಈ ಕತೆಯ ನಿಜ ಜೀವನದ ಮುಂದಿನ ಭಾಗದಲ್ಲಿ ಪಾತ್ರವರ್ಗವು ಲಕ್ಷಾಂತರ ಕೋಟಿಗಳಷ್ಟಿದೆ, ಅವರಲ್ಲಿ 130 ಕೋಟಿ ಮಾನವರು. ಲೊಕಸ್ಟ್‌ ಎಂದು ಎಲ್ಲರಿಗೂ ಪರಿಚಿತವಾಗಿರುವ ಸಣ್ಣ-ಕೊಂಬಿನ ದಾಳಿಕೋರ ಮಿಡತೆ ಈ ವರ್ಷದ ಮೇನಲ್ಲಿ ಆಗಮಿಸಿದವು, ಇವುಗಳ ಪ್ರತಿ ಸಮೂಹವು ಲಕ್ಷಾಂತರ ಸಂಖ್ಯೆಯಲ್ಲಿ ಚಲಿಸುತ್ತದೆ. ಅವು ಬಿಹಾರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಸುಮಾರು ಒಂದು ಮಿಲಿಯನ್ ಎಕರೆ ಪ್ರದೇಶದಲ್ಲಿ ನಿಂತಿರುವ ಬೆಳೆಗಳನ್ನು ಧ್ವಂಸ ಮಾಡಿವೆಯೆಂದು ದೇಶದ ಕೃಷಿ ಆಯುಕ್ತರು ಹೇಳುತ್ತಾರೆ.

ಈ ವಾಯುಗಾಮಿ ಆಕ್ರಮಣಕಾರರಿಗೆ ರಾಷ್ಟ್ರೀಯ ಗಡಿಗಳು ಲೆಕ್ಕಕ್ಕಿಲ್ಲ. ವಿಶ್ವಸಂಸ್ಥೆಯ ಫುಡ್‌ ಎಂಡ್‌ ಅಗ್ರಿಕಲ್ಚರ್‌ ಆರ್ಗನೈಸೇಷನ್ (ಎಫ್‌ಎಒ) ಪ್ರಕಾರ, ಈ ಮಿಡತೆಗಳು 30 ದೇಶಗಳಲ್ಲಿ ಮತ್ತು ಪಶ್ಚಿಮ ಆಫ್ರಿಕಾದಿಂದ ಭಾರತದವರೆಗೆ 16 ದಶಲಕ್ಷ ಚದರ ಕಿಲೋಮೀಟರ್‌ಗಳಲ್ಲಿ ಅಸ್ತಿತ್ವದಲ್ಲಿವೆ. ಮತ್ತು  ಸುಮಾರು 40 ಮಿಲಿಯನ್ ಸದಸ್ಯರನ್ನು ಹೊಂದಿರುವ ಒಂದು ಸಣ್ಣ ಮಿಡತೆ ಸಮೂಹ 1 ಚದರ ಕಿಲೋಮೀಟರ್ ವ್ಯಾಪ್ತಿಯಷ್ಟಿರುತ್ತದೆ -‌ ಇವು ಒಂದು ದಿನದಲ್ಲಿ 35,000 ಜನರು, 20 ಒಂಟೆಗಳು ಅಥವಾ ಆರು ಆನೆಗಳು ತಿನ್ನಬಲ್ಲ ಆಹಾರವನ್ನು ಸೇವಿಸಬಲ್ಲವು.

ರಾಷ್ಟ್ರೀಯ ಮಿಡತೆ ಎಚ್ಚರಿಕೆ ಸಂಸ್ಥೆ, ಕೃಷಿ, ಗೃಹ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ, ವಾಯುಯಾನ ಮತ್ತು ದೂರಸಂಪರ್ಕ ಸಚಿವಾಲಯಗಳ ಸದಸ್ಯರನ್ನು ಮಿಡತೆಗಳನ್ನು ನಿಯಂತ್ರಿಸಲು ಸಹಾಯಕ್ಕಾಗಿ ವಿನಂತಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಈ ಹೊಸ ಕತೆಯಲ್ಲಿ ಮಿಡತೆಗಳು ಮಾತ್ರ ಖಳನಾಯಕರಲ್ಲ, ಏಕೆಂದರೆ ಇಲ್ಲಿ ಲಕ್ಷಾಂತರ ಕೀಟಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಅಪಾಯಕ್ಕೆ ಈಡುಮಾಡಲಾಗಿದೆ. ಭಾರತದಲ್ಲಿನ, ಕೀಟಶಾಸ್ತ್ರಜ್ಞರು, ಬುಡಕಟ್ಟು ಜನರು ಮತ್ತು ರೈತರು ಅವುಗಳ ಹೆಸರನ್ನು ಪಟ್ಟಿ ಮಾಡುತ್ತಾರೆ ಮತ್ತು ಇವುಗಳಲ್ಲದೆ ಕೆಲವೊಮ್ಮೆ ಹೊಸ ಪ್ರಭೇದಗಳು ಕೂಡ ಕಂಡುಬರುತ್ತವೆಯೆಂದು ಅವರು ಹೇಳುತ್ತಾರೆ. ಉತ್ತಮರಾದ - ಆಹಾರ ಉತ್ಪಾದನೆಗೆ ‘ಪ್ರಯೋಜನಕಾರಿ ಕೀಟಗಳು’ ಕೂಡ ಹವಾಮಾನ ಬದಲಾವಣೆಯಿಂದ ಅವುಗಳ ಆವಾಸಸ್ಥಾನವನ್ನು ಬದಲಿಸಿದಾಗ ಹಾನಿಕಾರಕ ಕೀಟಗಳಾಗಿ ಬದಲಾಗುತ್ತವೆ.

Even the gentle Red-Breasted Jezebel butterflies (left) are creating a flutter as they float from the eastern to the western Himalayas, staking new territorial claims and unseating 'good guy' native species, while the 'bad guys' like the Schistocerca gregaria locust (right) proliferate too. (Photos taken in Rajasthan, May 2020)
PHOTO • Courtesy: Butterfly Research Centre, Bhimtal, Uttarakhand
Even the gentle Red-Breasted Jezebel butterflies (left) are creating a flutter as they float from the eastern to the western Himalayas, staking new territorial claims and unseating 'good guy' native species, while the 'bad guys' like the Schistocerca gregaria locust (right) proliferate too. (Photos taken in Rajasthan, May 2020)
PHOTO • Rajender Nagar

ಹಳದಿ-ಎದೆಯ ಜೆಸ್ಸೆಲ್ ಚಿಟ್ಟೆಗಳು (ಎಡ) ಹಿಮಾಲಯದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹಾರಿ, ಹೊಸ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತವೆ ಮತ್ತು 'ಪ್ರಯೋಜನಕಾರಿ' ಸ್ಥಳೀಯ ಪ್ರಭೇದಗಳನ್ನು ನಾಶಮಾಡುತ್ತವೆ, ಆದರೆ ಮರುಭೂಮಿ ಮಿಡತೆಗಳಾದ ಸ್ಕಿಸ್ಟೊಕೆರ್ಕಾ ಗ್ರೆಗೇರಿಯಾ ಮಿಡತೆಯಂತಹ  (ಬಲ) ದುಷ್ಟ ಪ್ರಭೇದಗಳು ವೃದ್ಧಿಯಾಗುತ್ತವೆ. (ಮೇ 2020 ರಲ್ಲಿ ರಾಜಸ್ಥಾನದಲ್ಲಿ ತೆಗೆದ ಫೋಟೋಗಳು)

ಒಂದು ಡಜನ್ ಇರುವೆ ಪ್ರಭೇದಗಳು ಅಪಾಯಕಾರಿ ಕೀಟಗಳಾಗಿ ಮಾರ್ಪಟ್ಟಿವೆ, ಗದ್ದಲದ ಸಿಕಾಡಾಗಳು ಹೊಸ ಪ್ರದೇಶಗಳನ್ನು ಆಕ್ರಮಿಸುತ್ತಿವೆ, ತೀಕ್ಷ್ಣವಾದ ಬಾಯಿಯನ್ನು ಹೊಂದಿರುವ ಗೆದ್ದಲುಗಳು ಗಾಢ ಕಾಡುಗಳಿಂದ ಹೊರಹೊಮ್ಮಿ ಆರೋಗ್ಯವಾಗಿರುವ ಕಾಡುಗಳಲ್ಲಿನ ಮರಗಳನ್ನು ತಿನ್ನುತ್ತಿವೆ. ಮತ್ತು ಜೇನು ನೊಣಗಳು ಸಂಖ್ಯೆಯಲ್ಲಿ ಇಳಿಮುಖವಾಗುವುದರಿಂದ ಹಾಗೂ ಡ್ರ್ಯಾಗನ್‌ಫ್ಲೈಗಳು ಅಕಾಲದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಎಲ್ಲಾ ಜೀವಿಗಳ ಆಹಾರ ಸುರಕ್ಷತೆ ಅಪಾಯಕ್ಕೀಡಾಗುತ್ತಿದೆ. ಸೌಮ್ಯವಾದ ಕೆಂಪು-ಎದೆಯ ಜೆಜೆಬೆಲ್ ಚಿಟ್ಟೆಗಳು ಸಹ ಪೂರ್ವ ಹಿಮಾಲಯದಲ್ಲಿ ಪಶ್ಚಿಮ ಹಿಮಾಲಯದ ಕಡೆಗೆ ತೇಲುತ್ತವೆ. ಅವು ಅಲ್ಲಿಗೆ ಹೋಗಿ ಸ್ಥಳೀಯ ಜಾತಿಗಳನ್ನು ಓಡಿಸುತ್ತವೆ. ಈ ಯುದ್ಧಗಳು ದೇಶಾದ್ಯಂತ ನಡೆಯುತ್ತಿವೆ, ಕೀಟಗಳು ತಮ್ಮ ಕೊಂಬುಗಳನ್ನು ಬೀಸುತ್ತಿವೆ.

ದೇಶೀಯ ಕೀಟಗಳ ಕುಸಿತವು ಮಧ್ಯ ಭಾರತದಲ್ಲಿ ಜೇನು ಬೇಟೆಯನ್ನು ಕಡಿಮೆ ಮಾಡಿದೆ. “ಒಂದು ಕಾಲದಲ್ಲಿ ಬಂಡೆಯ ಮುಖಗಳಲ್ಲಿ ನೂರಾರು ಜೇನುಗೂಡುಗಳು ಇದ್ದವು. ಇಂದು ಇಂದು ಅವುಗಳನ್ನು ಹುಡುಕುವುದು ಕಷ್ಟ” ಎಂದು ಮಧ್ಯಪ್ರದೇಶದ ಸಿಂಧ್ವಾರ ಜಿಲ್ಲೆಯ ಬ್ರಿಜ್ ಕಿಶನ್ ಭಾರತಿ (40) ಹೇಳುತ್ತಾರೆ.

ಅವರು ಹಾಗೂ ಶ್ರೀಜೋಟ್ ಗ್ರಾಮದ ಜೇನು ಸಂಗ್ರಾಹಕರು, ಎಲ್ಲರೂ ಬಡತನ ರೇಖೆಗಿಂತ ಕೆಳಗಿರುವವರು - ಜೇನುತುಪ್ಪವನ್ನು ಸಂಗ್ರಹಿಸಲು ಹತ್ತಿರದ ಬಂಡೆಗಳ ಕಡೆ ಹೋಗಿ ಇಲ್ಲಿಂದ 20 ಕಿ.ಮೀ ದೂರದಲ್ಲಿರುವ ತಮಿಯಾ ತಾಲ್ಲೂಕಿನ ವಾರದ ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಅವರು ವರ್ಷಕ್ಕೆ ಎರಡು ಬ್ಯಾಚ್‌ಗಳಲ್ಲಿ ಜೇನು ಸಂಗ್ರಹ ಮಾಡುತ್ತಾರೆ, ಎರಡೂ ಋತುಗಳಲ್ಲಿಯೂ (ನವೆಂಬರ್-ಡಿಸೆಂಬರ್ ಮತ್ತು ಮೇ-ಜೂನ್) ಅವರು ಅನೇಕ ದಿನಗಳ ಕಾಲ ಅಲ್ಲಿಯೇ ಇರುತ್ತಾರೆ.

ಅವರ ಜೇನುತುಪ್ಪದ ಬೆಲೆ ಒಂದು ದಶಕದಲ್ಲಿ ಕೇಜಿಗೆ ರೂ. 60ರಿಂದ ರೂ. 400ರ ತನಕ ತಲುಪಿದೆ, ಆದರೆ, ಬ್ರಿಜ್ ಕಿಶನ್ ಅವರ 35 ವರ್ಷದ ಸಹೋದರ ಜೈ ಕಿಶನ್ ಹೇಳುತ್ತಾರೆ, “ನಮ್ಮಲ್ಲಿ ಪ್ರತಿಯೊಬ್ಬರಿಗೂ ಈ ತಿರುಗಾಟಗಳಲ್ಲಿ 25-30 ಕ್ವಿಂಟಾಲ್ ಜೇನುತುಪ್ಪ ಸಿಗುತ್ತಿತ್ತು, ಈಗ 10 ಕಿಲೋ ಸಿಕ್ಕರೆ ಅದೇ ಅದೃಷ್ಟ. ನೇರಳೆ, ಬೆಹೆರಾ, ಮಾವು ಮತ್ತು ಸಾಲ್‌ನಂತಹ ಕಾಡಿನ ಮರಗಳು ಕಡಿಮೆಯಾಗಿವೆ. ಮರಗಳು ಕಡಿಮೆಯಾಗುವುದೆಂದರೆ ಹೂವುಗಳು ಕಡಿಮೆಯಾಗುವುದು ಮತ್ತು ಜೇನುನೊಣಗಳು ಮತ್ತು ಇತರ ಕೀಟಗಳಿಗೆ ಆಹಾರ ಕಡಿಮೆಯಾಗುವುದು.” ಮತ್ತು ಇದರ ಪರಿಣಾಮವಾಗಿ ಜೇನು ಬೇಟೆಗಾರರಿಗೆ ಆದಾಯ ಕಡಿಮೆಯಾಗುವುದು.

Top row: 'Today, bee hives are difficult to find', say honey-hunters Brij Kishan Bharti (left) and Jai Kishan Bharti (right). Bottom left: 'We are seeing  new pests', says Lotan Rajbhopa. Bottom right: 'When bees are less, flowers and fruit will also be less', says Ranjit Singh
PHOTO • Priti David

ಮೇಲಿನ ಸಾಲು: ‘ಇತ್ತೀಚಿನ ದಿನಗಳಲ್ಲಿ ಜೇನುತುಪ್ಪವನ್ನು ಹುಡುಕುವುದು ಕಷ್ಟ’ ಎಂದು ಜೇನುತುಪ್ಪವನ್ನು ಸಂಗ್ರಹಿಸುವ ಬ್ರಿಜ್ ಕಿಶನ್ ಭಾರತಿ (ಎಡ) ಮತ್ತು ಜೈ ಕಿಶನ್ ಭಾರತಿ (ಬಲ) ಹೇಳುತ್ತಾರೆ. ಕೆಳಗಿನ ಎಡ ಚಿತ್ರ: ‘ಈಗೀಗ ಹೊಸ ಕೀಟಗಳು ಬರುತ್ತಿವೆ’ ಎಂದು ಲೋಟನ್ ರಾಜ್‌ಭೋಪಾ ಹೇಳುತ್ತಾರೆ. ಕೆಳಗಿನ ಬಲ ಚಿತ್ರ: ‘ಕಡಿಮೆ ಜೇನುನೊಣಗಳಿದ್ದರೆ ಕಡಿಮೆ ಹೂವುಗಳು ಮತ್ತು ಹಣ್ಣುಗಳು ಇರುತ್ತವೆ’ ಎಂದು ರಂಜಿತ್ ಸಿಂಗ್ ಹೇಳುತ್ತಾರೆ

ನಮ್ಮನ್ನು ಕಳವಳಕ್ಕೀಡಾಗಿಸುತ್ತಿರುವುದು ಕೇವಲ ಹೂಗಳ ಕುಸಿತ ಮಾತ್ರವಲ್ಲ "ಋತುಧರ್ಮದ ಅಸಮತೋಲನವನ್ನು ಕಾಣುತ್ತಿದ್ದೇವೆ ಅಲ್ಲಿ ಕೀಟಗಳ ಹೊರಹೊಮ್ಮುವಿಕೆ ಮತ್ತು ಹೂವುಗಳ ಅರಳುವಿಕೆಗೂ ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ" ಎಂದು ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಡಾ.ಜಯಶ್ರೀ ರತ್ನಂ ಹೇಳುತ್ತಾರೆ. ಎನ್‌ಸಿಬಿಎಸ್‌ನ ವನ್ಯಜೀವಿ ಜೀವಶಾಸ್ತ್ರ ಮತ್ತು ಸಂರಕ್ಷಣಾ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿರುವ ಡಾ. ರತ್ನಂ ಹೇಳುತ್ತಾರೆ, “ಅನೇಕ ಸಮಶೀತೋಷ್ಣ ಪ್ರದೇಶಗಳಲ್ಲಿ ವಸಂತಕಾಲವು ಬೇಗನೆ ಪ್ರಾರಂಭವಾಗುತ್ತದೆ, ಇದರಿಂದ ಹೂ ಅರಳುವಿಕೆಯು ಮೊದಲೇ ಪ್ರಾರಂಭವಾಗುತ್ತದೆ. ಆದರೆ ಪರಾಗಸ್ಪರ್ಶ ಮಾಡುವ ಕೀಟಗಳು ಯಾವಾಗಲೂ ಅವುಗಳ ವೇಳಾಪಟ್ಟಿಯನ್ನು ಬದಲಾಯಿಸುವುದಿಲ್ಲ. ಇದರರ್ಥ ಈ ಕೀಟಗಳು ಅವುಗಳಿಗೆ ಅಗತ್ಯವಾದ ಆಹಾರವನ್ನು, ಅಗತ್ಯವಿದ್ದಾಗ ಪಡೆಯುವುದಿಲ್ಲ. ಇವೆಲ್ಲವನ್ನೂ ಹವಾಮಾನ ಬದಲಾವಣೆಯೊಂದಿಗೆ ಜೋಡಿಸಿ ನೋಡಬಹುದಾಗಿದೆ.”

ಅವು ನಮ್ಮ ಆಹಾರ ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಮತ್ತು ರೋಮದಿಂದ ಕೂಡಿದ ಪ್ರಾಣಿಗಳ ಬಗ್ಗೆ ತೋರಿಸುವಷ್ಟು ಪ್ರೀತಿ ಕೀಟಗಳ ಬಗ್ಗೆ ಯಾರೂ ತೋರಿಸುವುದಿಲ್ಲ” ಎಂದು ಡಾ.ರತ್ನಂ ಹೇಳುತ್ತಾರೆ.

*****

“ನನ್ನ ಪೇರಲೆ ಮರ ಮಾತ್ರವಲ್ಲ, ನೆಲ್ಲಿ ಮತ್ತು ಮಾಹುವಾ ಮರಗಳಲ್ಲೂ ಕಡಿಮೆ ಹಣ್ಣುಗಳಾಗಿವೆ. ಆಚಾರ್ (ಅಥವಾ ಚಿರೋಂಜಿ) ಮರವು ಈಗ ಹಲವು ವರ್ಷಗಳಿಂದ ಹಣ್ಣು ಕೊಡುತ್ತಿಲ್ಲ ." ಎಂದು ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯ ಕಟಿಯದಾನ ಗ್ರಾಮದಲ್ಲಿನ 52 ವರ್ಷದ ರಂಜಿತ್ ಸಿಂಗ್ ಮಾರ್ಷ್ಕೋಲ್ ಹೇಳುತ್ತಾರೆ. ಇಲ್ಲಿ, ಈ ಗೊಂಡ್ ಆದಿವಾಸಿ ರೈತ ಪಿಪರಿಯಾ ತಹಸಿಲ್‌ನ ಮಟ್ಕುಲಿ ಗ್ರಾಮದ ಬಳಿ ತನ್ನ ಕುಟುಂಬದ ಒಂಬತ್ತು ಎಕರೆ ಪ್ರದೇಶದಲ್ಲಿ ಗೋಧಿ ಮತ್ತು ಕಡಲೆ ಬೆಳೆಯುತ್ತಾರೆ.

"ಜೇನುನೊಣಗಳು ಕಡಿಮೆಯಾದಾಗ, ಹೂವುಗಳು ಮತ್ತು ಹಣ್ಣುಗಳು ಸಹ ಕಡಿಮೆ ಇರುತ್ತದೆ" ಎಂದು ರಂಜಿತ್ ಸಿಂಗ್ ಹೇಳುತ್ತಾರೆ.

ಈ ಪರಾಗಸ್ಪರ್ಶಕ್ಕೆ ಕಾರಣವಾಗುವ ಇರುವೆಗಳು, ಜೇನುನೊಣಗಳು, ನೊಣಗಳು, ಕಣಜಗಳು, ಮೊಲಗಳು, ಪತಂಗಗಳು, ಚಿಟ್ಟೆಗಳು, ಜೀರುಂಡೆಗಳು ಮತ್ತು ಇತರ ಕೀಟಗಳ ಗರಿಗಳು, ಕಾಲುಗಳು, ಕುಟುಕುಗಳು ಮತ್ತು ಮೀಸೆಗಳ ಮೇಲೆ ನಮ್ಮ ಆಹಾರ ಸುರಕ್ಷತೆಯ ಮಹಲು ನಿಂತಿದೆ. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ (FAO), ವಿಶ್ವಾದ್ಯಂತ 20,000ಕ್ಕೂ ಹೆಚ್ಚು ಜಾತಿಯ  ಕಾಡು ಜೇನುನೊಣಗಳಿವೆ. ಇಜೊತೆಗೆ ಇತರ ಹಲವು ಪ್ರಭೇದಗಳು - ಪಕ್ಷಿಗಳು, ಬಾವಲಿಗಳು ಮತ್ತು ಇತರ ಪ್ರಾಣಿಗಳು - ಪರಾಗಸ್ಪರ್ಶಕ್ಕೆ ಕಾರಣವಾಗಿವೆ. ಎಲ್ಲಾ ಆಹಾರ ಬೆಳೆಗಳಲ್ಲಿ ಶೇಕಡಾ 75 ಮತ್ತು ಎಲ್ಲಾ ಕಾಡು ಸಸ್ಯಗಳು ಆ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಮತ್ತು ಜಾಗತಿಕವಾಗಿ ಪರಿಣಾಮ ಬೀರುತ್ತಿರುವ ಬೆಳೆಗಳ ವಾರ್ಷಿಕ ಮೌಲ್ಯವನ್ನು 235 ಡಾಲರ್‌ನಿಂದ  577 ಶತಕೋಟಿಗಳವರೆಗೆ ಡಾಲರ್‌ ತನಕ ನಿಗದಿಪಡಿಸಲಾಗಿದೆ.

ನಮ್ಮ ಆಹಾರ ಭದ್ರತೆಯು ಇರುವೆಗಳು, ಜೇನುನೊಣಗಳು, ನೊಣಗಳು, ಕಣಜಗಳು, ಗಿಡುಗ ಪತಂಗಗಳು, ಚಿಟ್ಟೆಗಳು, ಜೀರುಂಡೆಗಳು ಮತ್ತು ಇತರ ಕೀಟಗಳ ರೆಕ್ಕೆ, ಕಾಲುಗಳು, ಕೊಂಬುಗಳು ಮತ್ತು ಮೀಸೆಗಳನ್ನು ಅವಲಂಬಿಸಿದೆ.

ವೀಡಿಯೊ ವೀಕ್ಷಿಸಿ: ‘ಎಲ್ಲಾ ಮರಗಳು ಮತ್ತು ಸಸ್ಯಗಳ ಬೆಳವಣಿಗೆ ಕೀಟಗಳನ್ನು ಅವಲಂಬಿಸಿರುತ್ತದೆ’

ಆಹಾರ ಬೆಳೆಗಳನ್ನು ಪರಾಗಸ್ಪರ್ಶ ಮಾಡುವುದಲ್ಲದೆ ಮರದ ಕಾಂಡಗಳನ್ನು ಒಡೆಯುವುದು, ಮೃತದೇಹಗಳನ್ನು ತಿನ್ನುವುದು ಮತ್ತು ಬೀಜಗಳನ್ನು ಮಣ್ಣಿನಲ್ಲಿ ಹೂತುಹಾಕುವುದು ಮುಂತಾದ ಕಾರ್ಯಗಳ ಮೂಲಕ ಕೀಟಗಳು ಅರಣ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. 170,000 ಅರಣ್ಯ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಮತ್ತು ಇತರ ಸಮುದಾಯಗಳು ಕಾಡಿನಿಂದ ಉರುವಲು ಮತ್ತು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ, ಅದನ್ನು ತಮ್ಮ ಮನೆಗಳಿಗೆ ಬಳಸುತ್ತಾರೆ ಅಥವಾ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇದಲ್ಲದೆ, ದೇಶದಲ್ಲಿ ಸುಮಾರು 536 ಬಿಲಿಯನ್ ಜಾನುವಾರುಗಳು ತಮ್ಮ ಮೇವಿಗಾಗಿ ಈ ಕಾಡುಗಳನ್ನು ಅವಲಂಬಿಸಿವೆ.

"ಕಾಡು ಸಾಯುತ್ತಿದೆ" ಎಂದು ವಿಜಯ್‌ ಸಿಂಗ್‌ ನಮ್ಮೊಡನೆ ಹೇಳಿದರು. ಅವರು ಮರದ ನೆರಳಿನಲ್ಲಿ ಕುಳಿತಿದ್ದರು. ಸುತ್ತಲೂ ಅವರ ಎಮ್ಮೆಗಳು ಮೇಯುತ್ತಿದ್ದವು. 70ರ ಹರೆಯದ ಈ ಗೊಂಡ್ ರೈತ ಪಿಪರಿಯಾ ತಹಸಿಲ್‌ನ ಸಿಂಗನಾಮ ಗ್ರಾಮದಲ್ಲಿ 30 ಎಕರೆ ಭೂಮಿಯನ್ನು ಹೊಂದಿದ್ದು, ಒಂದು ಕಾಲದಲ್ಲಿ ಅವರು ಆ ಜಮೀನಿನಲ್ಲಿ ಕಡಲೆ ಮತ್ತು ಗೋದಿಯನ್ನು ಬೆಳೆಯುತ್ತಿದ್ದರು. ಕೆಲವು ವರ್ಷಗಳಿಂದ ಅವರ ಹೊಲ ಪಾಳು ಬಿದ್ದಿದೆ. "ಮಳೆಯ ಹನಿಗಳು ದೊಡ್ಡಗಾತ್ರದಲ್ಲಿರುತ್ತವೆ ಮತ್ತು ಬೇಗನೆ ಹರಿದು ಹೋಗಿಬಿಡುತ್ತದೆ. ಈ ಮಳೆ ಭೂಮಿಯನ್ನು ಅಷ್ಟಾಗಿ ತೇವಗೊಳಿಸುವುದಿಲ್ಲ." ಕೀಟಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಗಮನಿಸಿದ್ದಾರೆ. "ನೀರೇ ಇಲ್ಲ ಇರುವೆಗಳು ತಮ್ಮ ಮನೆಯನ್ನು ಎಲ್ಲಿ ಮಾಡಲು ಸಾಧ್ಯ?"

ಪಿಪರಿಯಾ ತಹಸಿಲ್‌ನ ಪಚ್‌ಮರಿ ಕಂಟೋನ್ಮೆಂಟ್ ಪ್ರದೇಶದಲ್ಲಿ, 45 ವರ್ಷದ ನಂದು ಲಾಲ್ ಧುರ್ಬೆ ಅವರು ಸಣ್ಣ ಮಣ್ಣಿನ ಒಂದು ರಂಧ್ರದ ಬಾಮಿಯನ್ನು [ಇರುವೆ ಮತ್ತು ಗೆದ್ದಲು ಮನೆಗಳಿಗೆ ಸ್ಥಳೀಯ ಹೆಸರು) ತೋರಿಸುತ್ತಾರೆ. “ಬಾಮಿಗೆ ಮೃದುವಾದ ಭೂಮಿ ಮತ್ತು ತಂಪಾದ ತೇವಾಂಶ ಬೇಕು. ಆದರೆ ಇನ್ನು ಮುಂದೆ ನಿರಂತರ ಮಳೆಯಾಗುವುದಿಲ್ಲ ಇದರಿಂದಾಗಿ ವಾತಾವರಣ ಬೆಚ್ಚಗಿರುತ್ತದೆ, ಹೀಗಾಗಿ ಇವುಗಳನ್ನು ಅಷ್ಟಾಗಿ ಮೊದಲಿನಂತೆ ಕಾಣಲು ಸಾಧ್ಯವಿಲ್ಲ."

"ಇತ್ತೀಚಿನ ದಿನಗಳಲ್ಲಿ ಹೂವು ಒಣಗುವುದು ಮತ್ತು ಅಕಾಲಿಕ ಮಳೆ ಅಥವಾ ಚಳಿಯಿಂದಾಗಿ ಬಾಡುವುದು ಅಥವಾ ಹೂಗಳ ಸಂಖ್ಯೆಯಲ್ಲಿನ ಕುಸಿತವನ್ನು ಕಾಣಬಹುದಾಗಿದೆ" ಎಂದು ಗೊಂಡ್ ಆದಿವಾಸಿ ಮತ್ತು ತನ್ನ ಪ್ರದೇಶದ ಪರಿಸರದ ಕುರಿತು ವ್ಯಾಪಕವಾದ ಜ್ಞಾನವನ್ನು ಹೊಂದಿರುವ ತೋಟಗಾರರಾದ ಧುರ್ಬೆ ಹೇಳುತ್ತಾರೆ. "ಇದರಿಂದಾಗಿ ಹಣ್ಣಿನ ಮರಗಳು ಕಡಿಮೆ ಹಣ್ಣುಗಳನ್ನು ನೀಡುತ್ತವೆ ಮತ್ತು ಕೀಟಗಳು ಆಹಾರದ ಕೊರತೆಯನ್ನು ಎದುರಿಸುತ್ತವೆ."

PHOTO • Priti David

ಬೆಚ್ಚಗಿನ ಮತ್ತು ಶುಷ್ಕ ವಾತಾವರಣದಿಂದಾಗಿ ‘ಬಾಮಿ’ ಅಥವಾ ಇರುವೆ ಮನೆ (ನಡುವೆ, ಮಧ್ಯಪ್ರದೇಶದ ಜುನಾರ್ಡಿಯೊ ತಹಸಿಲ್‌ನಲ್ಲಿ) ಈಗ ವಿರಳವಾಗಿ ಕಂಡುಬರುತ್ತದೆ ಎಂದು ನಂದು ಲಾಲ್ ಧುರ್ಬೆ (ಎಡ) ಹೇಳುತ್ತಾರೆ. 'ಕಾಡು ಸಾಯುತ್ತಿದೆ' ಎಂದು ಮಧ್ಯಪ್ರದೇಶದ ಪಿಪರಿಯಾ ತಹಸಿಲ್‌ನ ವಿಜಯ್ ಸಿಂಗ್ ಹೇಳುತ್ತಾರೆ

1,100 ಮೀಟರ್‌ ಎತ್ತರದಲ್ಲಿ ಸತ್ಪುರ ಶ್ರೇಣಿಯಲ್ಲಿರುವ ಪಚ್ಮರಿ ಯುನೆಸ್ಕೊ ಜೀವಜಾಲ ಮೀಸಲು ಪ್ರದೇಶವಾಗಿದ್ದು, ಇದು ರಾಷ್ಟ್ರೀಯ ಉದ್ಯಾನಗಳು ಮತ್ತು ಹುಲಿ ಅಭಯಾರಣ್ಯಗಳನ್ನು ಹೊಂದಿದೆ. ಈ ಮಧ್ಯ ಭಾರತದ ಗಿರಿಧಾಮವು ಬಯಲು ಸೀಮೆಯ ಸೆಕೆಯಿಂದ ಪಾರಾಗಲು ಜನರನ್ನು ವರ್ಷಪೂರ್ತಿ ಸೆಳೆಯುತ್ತದೆ. ಇದು ಸದಾ ಜನಸಂದಣಿಯಿಂದ ಕೂಡಿರುತ್ತದೆ. ಧುರ್ಬೆ ಮತ್ತು ವಿಜಯ್ ಸಿಂಗ್ ಗಮನಿಸಿದಂತೆ ಈಗ ಇಲ್ಲಿಯೂ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತು ಅವರ ಅಭಿಪ್ರಾಯಕ್ಕೆ ಸಾಕ್ಷ್ಯವೂ ಇದೆ.

ನ್ಯೂಯಾರ್ಕ್‌ ಟೈಮ್ಸ್‌ನ  ಜಾಗತಿಕ ತಾಪಮಾನ ಏರಿಕೆಯ ಕುರಿತ ಸಂವಾದಾತ್ಮಕ ಪೋರ್ಟಲ್‌ನ ದತ್ತಾಂಶವು 1960ರಲ್ಲಿ, ಪಿಪರಿಯಾದ ತಾಪಮಾನವು ವರ್ಷದಲ್ಲಿ 32 ಡಿಗ್ರಿ ಸೆಲ್ಸಿಯಸ್ ಇರುವ ದಿನಗಳ ಸಂಖ್ಯೆ 157 ದಿನಗಳನ್ನು ತಲುಪಿದೆ ಅಥವಾ ದಾಟಿದೆಯೆಂದು ತೋರಿಸುತ್ತದೆ. ಇಂದು ಸಂಖ್ಯೆ ವರ್ಷಕ್ಕೆ 205 ದಿನಗಳಿಗೆ ತಲುಪಿದೆ.

ರೈತರು ಮತ್ತು ವಿಜ್ಞಾನಿಗಳು ಗುರುತಿಸಿರುವ ಬದಲಾವಣೆಗಳು ಜೀವಿಗಳ ನಷ್ಟ ಮತ್ತು ಅಳಿವಿಗೆ ಕಾರಣವಾಗಿವೆ. ಒಂದು ಎಫ್‌ಎಒ ವರದಿಯು ಎಚ್ಚರಿಸಿರುವಂತೆ: “ವಿಶ್ವಾದ್ಯಂತ ಪ್ರಸ್ತುತ ಜೀವಿಗಳ ಅಳಿವಿನ ಪ್ರಮಾಣವು ಮಾನವನ ಪ್ರಭಾವದಿಂದಾಗಿ ಸಾಮಾನ್ಯಕ್ಕಿಂತ 100ರಿಂದ 1,000 ಪಟ್ಟು ಹೆಚ್ಚಾಗಿದೆ.”

*****

"ಇಂದು ಮಾರಾಟ ಮಾಡಲು ನನ್ನ ಬಳಿ ಸ್ವಲ್ಪವೂ ಇರುವೆಗಳಿಲ್ಲ" ಎಂದು ಛತ್ತೀಸ್‌ಗಡ್‌ನ  ನಾರಾಯಣಪುರ ಜಿಲ್ಲೆಯ ಛೋಟೆಡೊಂಗರ್‌ ಸಂತೆಯಲ್ಲಿ ಭೇಟಿಯಾದ ಗೊಂಡ್‌ ಆದಿವಾಸಿ ಮುನ್ನಿಬಾಯಿ ಕಚ್ಲಾನ್ ಹೇಳುತ್ತಾರೆ. ಐವತ್ತು ವರ್ಷ ಪ್ರಾಯದ ಮುನ್ನಿ ಸಣ್ಣ ಪ್ರಾಯದಿಂದಲೂ ಕಾಡಿನಿಂದ ಹುಲ್ಲು ಮತ್ತು ಇರುವೆಗಳನ್ನು ಸಂಗ್ರಹಿಸುತ್ತಿದ್ದಾರೆ. ಅವರು ನಾಲ್ಕು ಹೆಣ್ಣುಮಕ್ಕಳನ್ನು ಹೊಂದಿರುವ ವಿಧವೆ. ಇಲ್ಲಿಂದ ಒಂಬತ್ತು ಕಿಲೋಮೀಟರ್‌ ದೂರದಲ್ಲಿರುವ ರೋಹ್ತಾಡ್ ಗ್ರಾಮದಲ್ಲಿ ಎರಡು ಎಕರೆ ಭೂಮಿಯಲ್ಲಿ ಜೀವನಾಧಾರಕ್ಕಾಗಿ ವ್ಯವಸಾಯ ಮಾಡುತ್ತಿರುವ ಕೃಷಿಕ ಮಹಿಳೆ.

ತನ್ನ ಕೆಲವು ಅಗತ್ಯ ವಸ್ತುಗಳ ಖರೀದಿಗಾಗಿ ಬೇಕಾಗುವ 50-60 ರೂಪಾಯಿಗಳನ್ನು ಸಂಪಾದಿಸುವ ಸಲುವಾಗಿ ಅವರು ಸಂತೆಯಲ್ಲಿ ಪೊರಕೆ ಹುಲ್ಲು, ಇರುವೆಗಳು ಮತ್ತು ಅಪರೂಪಕ್ಕೊಮ್ಮೆ ಅಕ್ಕಿಯನ್ನು ಮಾರುತ್ತಾರೆ. ಅವರು ಮಾರುವ ಸಣ್ಣ ಪ್ರಮಾಣದ ಇರುವೆಗಳು ಆಕೆಗೆ ಗರಿಷ್ಟ ಇಪ್ಪತ್ತು ರೂಪಾಯಿ ಸಂಪಾದಿಸಿ ಕೊಡುತ್ತವೆ. ಆದರೆ ನಾವು ಆಕೆಯನ್ನು ಭೇಟಿಯಾದ ದಿನ ಅವರ ಬಳಿ ಇರುವೆಯಿರಲಿಲ್ಲ. ಒಂದು ಸಣ್ಣ ಹುಲ್ಲಿನ ಕಟ್ಟು ಮಾತ್ರವೇ ಇತ್ತು.

Top left: The apis cerana indica or the 'bee', resting on the oleander plant. Top right: Oecophylla smaragdina, the weaver ant, making a nest using silk produced by its young one. Bottom left: Daphnis nerii, the hawk moth, emerges at night and helps in pollination. Bottom right: Just before the rains, the winged form female termite emerges and leaves the the colony to form a new colony. The small ones are the infertile soldiers who break down organic matter like dead trees. These termites are also food for some human communities who eat it for the high protein content
PHOTO • Yeshwanth H M ,  Abin Ghosh

ಮೇಲು ಸಾಲಿನ ಎಡ ಚಿತ್ರ: ಆಪಿಸ್ ಸೆರಾನಾ ಇಂಡಿಕಾ ಅಥವಾ 'ಜೇನು ನೊಣ', ಒಲಿಯಂಡರ್ ಸಸ್ಯದ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು. ಮೇಲು ಸಾಲಿನ ಬಲ ಚಿತ್ರ: ನೇಕಾರ ಇರುವೆ ಒಕೊಫಿಲ್ಲಾ ಸ್ಮರಗ್ಡಿನಾ, ಅದರ ಎಳೆಯಿಂದ ಉತ್ಪಾದಿಸಲ್ಪಟ್ಟ ರೇಷ್ಮೆ ಬಳಸಿ ಗೂಡು ತಯಾರಿಸುತ್ತದೆ. ಕೆಳ ಸಾಲಿನ ಎಡ ಚಿತ್ರ: ಡಫ್ನಿಸ್ ನೆರಿ, ಹಸಿರು ಪತಂಗ ರಾತ್ರಿಯಲ್ಲಿ ಹೊರಬರುತ್ತದೆ ಮತ್ತು ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತದೆ. ಕೆಳ ಸಾಲಿನ ಬಲ ಚಿತ್ರ: ಮಳೆಗೆ ಸ್ವಲ್ಪ ಮುಂಚೆ, ರೆಕ್ಕೆ ಹೊಂದಿರುವ ಸ್ತ್ರೀ ಗೆದ್ದಲು ಹುಳು ಹೊರಹಾರುತ್ತದೆ ಮತ್ತು ವಸಾಹತು ಬಿಟ್ಟು ಹೊಸ ವಸಾಹತು ರೂಪಿಸುತ್ತದೆ. ಸಣ್ಣ ಗೆದ್ದಲುಗಳು ಸತ್ತ ಮರಗಳಂತಹ ಸಾವಯವ ಪದಾರ್ಥಗಳನ್ನು ಕರಗಿಸುವ ಬಂಜೆ ಸೈನಿಕರು. ಈ ಗೆದ್ದಲುಗಳನ್ನು ಕೆಲವು ಮಾನವ ಸಮುದಾಯಗಳು ಹೆಚ್ಚಿನ ಪ್ರೋಟೀನ್ ಅಂಶಕ್ಕಾಗಿ ತಿನ್ನುತ್ತವೆ

"ನಾವು ಹಲೈಂಗಿ [ಕೆಂಪು ಇರುವೆಗಳು] ತಿನ್ನುತ್ತೇವೆ" ಎಂದು ಮುನ್ನಿಬಾಯ್ ಹೇಳುತ್ತಾರೆ. “ಹಿಂದೆ, ನಾವು ಸುಲಭವಾಗಿ ಕಾಡಿನಲ್ಲಿ ಇರುವೆಗಳನ್ನು ಕಾಣಬಹುದಿತ್ತು. ನಾವು ಮಹಿಳೆಯರೇ ಅವುಗಳನ್ನು ಸಂಗ್ರಹಿಸಬಹುದಿತ್ತು. ಆದರೆ ಈಗ ಅವುಗಳ ಸಂಖ್ಯೆ ಬಹಳವಾಗಿ ಕ್ಷೀಣಿಸಿದೆ. ಈಗ ಅವು ಎತ್ತರದ ಮರಗಳಲ್ಲಿ ಮಾತ್ರ ಕಂಡುಬರುತ್ತವೆ. ಈಗ ಅವುಗಳನ್ನು ನಾವು ಹಿಡಿದು ತರಲು ಸಾಧ್ಯವಿಲ್ಲ, ಪುರುಷರು ಮರವನ್ನು ಏರಿ ತರಬಹುದಾದರೂ ಅವರು ಬಿದ್ದು ಪೆಟ್ಟು ಮಾಡಿಕೊಳ್ಳಬಹುದೆಂಬ ಭಯ ನಮ್ಮನ್ನು ಕಾಡುತ್ತಿರುತ್ತದೆ."

ಭಾರತವು ಕೀಟಗಳ ಕೊನೆಗಾಲವನ್ನು ನೋಡುತ್ತಿದೆ. “ಕೀಟಗಳು ಪ್ರಮುಖ ಪ್ರಭೇದಗಳಾಗಿವೆ. ಅವು ಕಣ್ಮರೆಯಾದರೆ, ವ್ಯವಸ್ಥೆ  ನಾಶವಾಗುತ್ತದೆ ”ಎಂದು ಎನ್‌ಸಿಬಿಎಸ್‌ನ ಸಹಾಯಕ ಪ್ರಾಧ್ಯಾಪಕ ಡಾ. ಸಂಜಯ್ ಸಾನೆ ಹೇಳುತ್ತಾರೆ. ಅವರು ವನ್ಯಜೀವಿ ಕ್ಷೇತ್ರ ಕೇಂದ್ರಗಳಲ್ಲಿ ಎರಡು  ಹಸಿರು ಪತಂಗ ವೀಕ್ಷಣಾ ಅಧ್ಯಯನಗಳನ್ನು ನಡೆಸುತ್ತಿದ್ದಾರೆ - ಒಂದು ಮಧ್ಯಪ್ರದೇಶದ ಪಚ್‌ಮಾರ್ಚಿಯಲ್ಲಿ ಮತ್ತು ಇನ್ನೊಂದು ಕರ್ನಾಟಕದ ಅಗುಂಬೆಯಲ್ಲಿ. "ಸಸ್ಯವರ್ಗ, ಕೃಷಿ ಪದ್ಧತಿಗಳು ಮತ್ತು ತಾಪಮಾನದಲ್ಲಿನ ಬದಲಾವಣೆಗಳು ಎಲ್ಲಾ ಜಾತಿಯ ಕೀಟಗಳ ಕುಸಿತಕ್ಕೆ ಕಾರಣವಾಗುತ್ತಿವೆ. ಇಡೀ ಕೀಟ ಸಂತತಿ ಅಳಿದು ಹೋಗುತ್ತಿದೆ.”

"ಕೀಟಗಳು ತಾಪಮಾನದಲ್ಲಿನ ಹೆಚ್ಚಿನ ವ್ಯತ್ಯಾಸವನ್ನು ತಾಳಿಕೊಳ್ಳುವುದಿಲ್ಲ" ಎಂದು ಝೂವಾಲಾಜಿಕಲ್‌ ಸರ್ವೆ ಆಫ್ ಇಂಡಿಯಾ (ಝಡ್‌ಎಸ್‌ಐ) ನಿರ್ದೇಶಕ ಡಾ. ಕೈಲಾಸ್ ಚಂದ್ರ ಹೇಳುತ್ತಾರೆ. "0.5 ಡಿಗ್ರಿ ಸೆಲ್ಸಿಯಸ್‌ನಷ್ಟು ಒಂದು ಸಣ್ಣ ಬದಲಾವಣೆಯು ಸಹ ಅವುಗಳ ಪರಿಸರ ವ್ಯವಸ್ಥೆಯ ಸಮತೋಲನವನ್ನು ಅಸ್ತವ್ಯಸ್ಥಗೊಳಿಸಬಲ್ಲದು ಮತ್ತು ಶಾಶ್ವತ ಬದಲಾವಣೆಗಳಿಗೆ ಕಾರಣವಾಗಬಹುದು." ಕಳೆದ ಮೂರು ದಶಕಗಳಲ್ಲಿ, ಈ ಕೀಟಶಾಸ್ತ್ರಜ್ಞರು ಚಿಟ್ಟೆಗಳು ಮತ್ತು ಏರೊಪ್ಲೇನ್‌ ಚಿಟ್ಟೆಗಳು ಸೇರಿದಂತೆ ಜೀರುಂಡೆಗಳಲ್ಲಿ ಶೇಕಡಾ 70ರಷ್ಟು ಕುಸಿತವನ್ನು ದಾಖಲಿಸಿದ್ದು, ಜೊತೆಗೆ, ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಕೆಂಪು ಪಟ್ಟಿಯಲ್ಲಿ ‘ಅಳಿವಿನಂಚಿನಲ್ಲಿರುವವು’ ಎಂದು ಗುರುತಿಸಲಾಗಿದೆ. "ನಮ್ಮ ಮಣ್ಣು ಮತ್ತು ನೀರಿನಲ್ಲಿ ಸೋರಿಕೆಯಾದ ಕೀಟನಾಶಕಗಳ ವ್ಯಾಪಕ ಬಳಕೆಯು ಸ್ಥಳೀಯ ಕೀಟಗಳು, ಜಲಚರ ಕೀಟಗಳು, ವಿಶಿಷ್ಟ ಪ್ರಭೇದಗಳನ್ನು ನಾಶಪಡಿಸಿದೆ ಮತ್ತು ನಮ್ಮ ಕೀಟಗಳ ಜೀವವೈವಿಧ್ಯತೆಯನ್ನು ಧ್ವಂಸಗೈದಿವೆ" ಎಂದು ಡಾ. ಚಂದ್ರ ಹೇಳುತ್ತಾರೆ.''

"ಹಳೆಯ ಕೀಟಗಳು ಕಣ್ಮರೆಯಾಗಿವೆ, ಆದರೆ ನಾವು ಹೊಸ ಕೀಟಗಳನ್ನು ಕಾಣುತ್ತಿದ್ದೇವೆ" ಎಂದು 35 ವರ್ಷದ ಲೋಟನ್ ರಾಜ್‌ಭೋಪಾ ಹೇಳುತ್ತಾರೆ. ಅವರು ಮಧ್ಯಪ್ರದೇಶದ ತಮಿಯಾ ತಹಸಿಲ್‌ನ ಘಾಟಿಯಾ ಪಾದದ ಮಾವಾಸಿ ಬುಡಕಟ್ಟು ಜನಾಂಗದವರು. "ಅವು ದೊಡ್ಡ ಸಂಖ್ಯೆಯಲ್ಲಿ ದಾಳಿ ಮಾಡುತ್ತವೆ, ಅವುಗಳು ಸಂಖ್ಯೆಯಲ್ಲಿ ಎಲ್ಲಾ ಬೆಳೆಯನ್ನೂ ತಿನ್ನಬಲ್ಲಷ್ಟು ಇರುತ್ತವೆ. ನಾವು ಅವುಗಳಿಗೆ 'ಭಿನ್ ಭಿನಿ' [ಅಸಂಖ್ಯಾತ] ಎಂದು ಹೊಸ ಹೆಸರನ್ನೂ ಇಟ್ಟಿದ್ದೇವೆ," ಅವರು ವ್ಯಂಗ್ಯವಾಗಿ ಹೇಳುತ್ತಾರೆ. "ಮತ್ತು ಈ ಹೊಸ ಕೀಟಗಳು ಕೆಟ್ಟ ಕೀಟಗಳಾಗಿವೆ. ಕೀಟನಾಶಕಗಳನ್ನು ಬಳಸಿದರೆ, ಅವುಗಳ ಸಂಖ್ಯೆಯು ಬೆಳೆಯುತ್ತಲೇ ಇರುತ್ತದೆ."

Ant hills in the Satpura tiger reserve of MP. 'Deforestation and fragmentation coupled with climate change are leading to disturbed habitats', says Dr. Himender Bharti, India’s ‘Ant Man’
PHOTO • Priti David
Ant hills in the Satpura tiger reserve of MP. 'Deforestation and fragmentation coupled with climate change are leading to disturbed habitats', says Dr. Himender Bharti, India’s ‘Ant Man’
PHOTO • Priti David

ಮಧ್ಯಪ್ರದೇಶದ ಸತ್ಪುರ ಹುಲಿ ಮೀಸಲು ಪ್ರದೇಶದಲ್ಲಿನ ಇರುವೆ ಹುತ್ತಗಳು. 'ಅರಣ್ಯನಾಶ ಮತ್ತು ಅರಣ್ಯ ವಿಘಟನೆ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ತೊಂದರೆಗೊಳಗಾದ ಆವಾಸಸ್ಥಾನಗಳಾಗಿ ಮಾರ್ಪಡಲು ಕಾರಣವಾಗುತ್ತಿದೆ' ಎಂದು ಭಾರತದ ‘ಆಂಟ್ ಮ್ಯಾನ್’ ಡಾ. ಹಿಮೆಂದರ್ ಭಾರತಿ ಹೇಳುತ್ತಾರೆ.

ಉತ್ತರಖಂಡದ ಭೀಮ್ತಾಲ್‌ನಲ್ಲಿರುವ ಚಿಟ್ಟೆ ಸಂಶೋಧನಾ ಕೇಂದ್ರದಲ್ಲಿ, ಸಂಸ್ಥಾಪಕ ಪೀಟರ್ ಸ್ಮೆಟಾಸೆಕ್, 55, ಹಿಮಾಲಯದುದ್ದಕ್ಕೂ ಜಾಗತಿಕ ತಾಪಮಾನ ಏರಿಕೆಯು ಶ್ರೇಣಿಯ ಪಶ್ಚಿಮ ಭಾಗದಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ತಾಪಮಾನವನ್ನು ಉಂಟುಮಾಡುತ್ತಿದೆ ಎಂದು ದೀರ್ಘಕಾಲ ಅಭಿಪ್ರಾಯಪಟ್ಟಿದ್ದಾರೆ. ಮೊದಲು ಶುಷ್ಕ ಮತ್ತು ಶೀತದಿಂದ ಕೂಡಿದ್ದ ಚಳಿಗಾಲವು ಈಗ ಸೆಕೆ ಮತ್ತು ತೇವಾಂಶವನ್ನು ಹೊಂದಿರುತ್ತದೆ. ಹಾಗಾಗಿ ಪಶ್ಚಿಮ ಹಿಮಾಲಯದ ಚಿಟ್ಟೆಗಳ ಪ್ರಭೇದಗಳು (ಬೆಚ್ಚಗಿನ ಮತ್ತು ಆರ್ದ್ರ ವಾತಾವರಣಕ್ಕೆ ಒಗ್ಗಿಕೊಂಡಿರುವವು) ಈಗ ಪೂರ್ವಕ್ಕೆ ಬಂದು ಅವುಗಳನ್ನು ವಾಸದ ಪ್ರದೇಶವನ್ನಾಗಿ ಮಾಡಿಕೊಳ್ಳಲು ಪ್ರಾರಂಭಿಸಿವೆ.

ಭಾರತವು ಪ್ರಮುಖ ಜೀವವೈವಿಧ್ಯತೆಯ ತಾಣವಾಗಿದ್ದು, ಶೇಕಡಾ 2.4ರಷ್ಟು ಭೂಪ್ರದೇಶವನ್ನು ಹೊಂದಿದೆ. ಈ ಗ್ರಹದಲ್ಲಿನ ಸುಮಾರು 7%ರಿಂದ 8% ಜೀವಿ ಪ್ರಭೇದಗಳು ಭಾರತದಲ್ಲಿ ಕಂಡುಬರುತ್ತವೆ. ಡಿಸೆಂಬರ್ 2019ರ ಹೊತ್ತಿಗೆ, ಭಾರತದಲ್ಲಿದ್ದ ಕೀಟ ಪ್ರಭೇದಗಳ ಸಂಖ್ಯೆ 65,466 ಎಂದು ಎಸ್‌ಎಸ್‌ಐನ ಡಾ. ಚಂದ್ರ ಹೇಳುತ್ತಾರೆ. ಆದಾಗ್ಯೂ, “ಇದು ಸಾಮಾನ್ಯ ಅಂದಾಜು ಮಾತ್ರವಾಗಿದ್ದು. ಸಂಭವನೀಯ ಅಂಕಿ ಅಂಶವು ಕನಿಷ್ಠ 4ರಿಂದ 5 ಪಟ್ಟು ಹೆಚ್ಚಿದೆ. ಆದರೆ ಅನೇಕ ಪ್ರಭೇದಗಳು ಅವುಗಳನ್ನು ದಾಖಲಿಸುವ ಮೊದಲೇ ನಿರ್ನಾಮವಾಗಿರುತ್ತವೆ.”

*****

"ಹವಾಮಾನ ಬದಲಾವಣೆಯೊಂದಿಗೆ ಆವಾಸಸ್ಥಾನಗಳಲ್ಲಿನ ಅರಣ್ಯನಾಶ ಮತ್ತು ಅರಣ್ಯದ ಕುಸಿತವು ತೊಂದರೆಗೊಳಗಾದ ಆವಾಸಸ್ಥಾನಗಳಿಗೆ ಕಾರಣವಾಗುತ್ತಿದೆ" ಎಂದು ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ವಿಕಸನೀಯ ಜೀವಶಾಸ್ತ್ರಜ್ಞ ಡಾ. ಹಿಮೇಂದರ್ ಭಾರತಿ ಹೇಳುತ್ತಾರೆ, ಅವರು ಭಾರತದ ‘ಇರುವೆ ಮನುಷ್ಯ’ ಎಂದೇ ಪ್ರಸಿದ್ಧರಾಗಿದ್ದಾರೆ. "ಇತರ ಕಶೇರುಕಗಳಿಗೆ ಹೋಲಿಸಿದರೆ ಇರುವೆಗಳು ಒತ್ತಡಕ್ಕೆ ಹೆಚ್ಚು ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತವೆ. ಇದಕ್ಕಾಗಿಯೇ ಭೂಪ್ರದೇಶ ಮತ್ತು ಪ್ರಭೇದಗಳ ವೈವಿಧ್ಯತೆಯ ಬದಲಾವಣೆಗಳನ್ನು ಅಳೆಯಲು ಅವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ."

ಭಾರತದಲ್ಲಿ ಇರುವೆಗಳ 828 ಸ್ವೀಕಾರಾರ್ಹ ಮುಖ್ಯ ಮತ್ತು ಉಪಜಾತಿಗಳ ಮೊದಲ ಪಟ್ಟಿಯನ್ನು ತಯಾರಿಸಿದ ಗೌರವವೂ ಡಾ. ಭಾರ್ತಿಯವರಿಗೆ ಹೋಗುತ್ತದೆ. "ಆಕ್ರಮಣಕಾರಿ ಪ್ರಭೇದಗಳು, ಬದಲಾವಣೆಗಳಿಗೆ ಹೊಂದಿಕೊಳ್ಳುವಲ್ಲಿ ವೇಗವಾಗಿರುತ್ತವೆ ಮತ್ತು ಸ್ಥಳೀಯ ಜಾತಿಗಳನ್ನು ಸ್ಥಳಾಂತರಿಸುತ್ತವೆ. ಅವು ಸ್ಥಳೀಯ ಜೀವಿಗಳ ಆವಾಸ ಸ್ಥಾನವನ್ನು ಆಕ್ರಮಿಸಿಕೊಂಡು ತಮ್ಮದಾಗಿಸಿಕೊಳ್ಳುತ್ತವೆ." ಎಂದು ಅವರು ನಮ್ಮನ್ನು ಎಚ್ಚರಿಸುತ್ತಾರೆ.

PHOTO • Priti David

ಮೇಲಿನ ಎಡ ಚಿತ್ರ: 'ಇಂದು ಮಾರಾಟ ಮಾಡಲು ಇರುವೆಗಳು ಸಿಗಲಿಲ್ಲ' ಎಂದು ಛೋಟೆಡಂಗರ್‌ನ ವಾರದ ಸಂತೆಯಲ್ಲಿ ಸಿಕ್ಕ ಮುನ್ನೀಬಾಯ್ ಕಚ್ಲಾನ್ (ಮೇಲಿನ ಎಡ) ಹೇಳುತ್ತಾರೆ. ಮೇಲಿನ ಬಲ ಚಿತ್ರ: 'ಕಳೆದ ವರ್ಷ, ಈ ಫುಂಡಿ ಕೀಟಗಳು ನನ್ನ ಹೆಚ್ಚಿನ ಭತ್ತದ ಬೆಳೆಗಳನ್ನು ತಿಂದು ಹಾಕಿದವು' ಎಂದು ಪಾಗರಾ ಗ್ರಾಮದ ಪಾರ್ವತಿ ಬಾಯಿ ಹೇಳುತ್ತಾರೆ. ಕೆಳಗಿನ ಎಡ ಚಿತ್ರ: ನೀಲಗಿರಿಯಲ್ಲಿರುವ ಕಾಂಚಿ ಕೊಯಿಲ್ ತನ್ನ ಬಾಲ್ಯದಲ್ಲಿ ಕಾಣುತ್ತಿದ್ದ ಮಿಂಚುಹುಳುಗಳ ಬಗ್ಗೆ ಮಾತನಾಡುತ್ತಾರೆ. ಕೆಳಗಿನ ಬಲ ಚಿತ್ರ: ಛತ್ತೀಸ್‌ಗಢದ ಎಮ್ಮೆ ಸಾಕಣೆಗಾರರಾದ ವಿಶಾಲ್ ರಾಮ್ ಮಾರ್ಕ್ಹಮ್ ಹೇಳುತ್ತಾರೆ; 'ಈಗ ಭೂಮಿ ಮತ್ತು ಕಾಡುಗಳು ಮನುಷ್ಯನ ಆಸ್ತಿಯಾಗಿವೆ'

ಕೊನೆಗೆ ಈ ಹಾನಿಕಾರಕ ಕೀಟಗಳೇ ಗೆಲ್ಲುತ್ತವೆಯೆಂದು ತನಗೆ ಅನ್ನಿಸುತ್ತದೆಯೆಂದು 50 ವರ್ಷದ ಮಾವಾಸಿ ಬುಡಕಟ್ಟು ಮಹಿಳೆ ಪಾರ್ವತಿ ಬಾಯ್ ಹೇಳುತ್ತಾರೆ. ಹೋಶಂಗಾಬಾದ್ ಜಿಲ್ಲೆಯ ಪಾಗರಾ ಎಂಬ ಹಳ್ಳಿಯಲ್ಲಿ ವಾಸಿಸುವ ಅವರು, “ನಾವು ಈಗ ಈ ‘ಫುಂಡಿ ಕೀಡಾʼ [ತುಂಬಾ ತೆಳುವಾದ ಮತ್ತು ಸಣ್ಣ ಕೀಟಗಳು] ದಾಳಿಯನ್ನು ಎದುರಿಸುತ್ತಿದ್ದೇವೆ. ಕಳೆದ ವರ್ಷ ಅವು ನನ್ನ ಒಂದು ಎಕರೆ ಗದ್ದೆಯ ಹೆಚ್ಚಿನ ಭತ್ತದ ಬೆಳೆಯನ್ನು ತಿಂದು ಹಾಕಿದ್ದವು.” ಎನ್ನುತ್ತಾರೆ. ಆ ಸಾಲಿನಲ್ಲಿ ಸುಮಾರು 9,000 ರೂಪಾಯಿಗಳ ನಷ್ಟವಾಗಿದೆಯೆಂದು ಅವರು ಅಂದಾಜಿಸುತ್ತಾರೆ.

ಪಾರ್ವತಿ ಬಾಯಿಯವರ ಊರಿನಿಂದ ಒಂದು ಸಾವಿರ ಕಿಲೋಮೀಟರ್ ದೂರದಲ್ಲಿರುವ ದಕ್ಷಿಣದ ನೀಲಗಿರಿ ಪರ್ವತ ಶ್ರೇಣಿಯಲ್ಲಿನ ಸಸ್ಯವಿಜ್ಞಾನಿ ಡಾ. ಅನಿತಾ ವರ್ಗೀಸ್ ಗಮನಿಸಿದಂತೆ: “ಸ್ಥಳೀಯ ಸಮುದಾಯಗಳು ಬದಲಾವಣೆಗಳನ್ನು ಮೊದಲು ಗಮನಿಸುತ್ತವೆ.” ನೀಲಗಿರಿಯಲ್ಲಿನ ಕೀಸ್ಟೋನ್ ಫೌಂಡೇಶನ್‌ನ ಉಪ ನಿರ್ದೇಶಕರಾಗಿರುವ ಅವರು, “ಕೇರಳದ ಜೇನು ಬೇಟೆಗಾರರು ಎಪಿಸ್ ಸೆರಾನಾ ಜೇನುನೊಣಗಳು ನೆಲಕ್ಕೆ ಹತ್ತಿರದ ಮರಗಳಿಗಿಂತ ಹೆಚ್ಚು ಪೊಟರೆಗಳಿರುವ ಗೂಡುಗಳಿಗೆ ತಮ್ಮ ಆವಾಸಸ್ಥಾನವನ್ನು ಬದಲಿಸಿರುವುದನ್ನು ಗಮನಿಸಿದ್ದಾರೆ. ಅವರ ಅವಲೋಕನಗಳ ಪ್ರಕಾರ ಅವುಗಳು ಹಾಗೆ ಮಾಡಲು  ಕಾರಣ ಜೇನು ಕದಿಯುವ ಕರಡಿಗಳ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಹೆಚ್ಚುತ್ತಿರುವ ಮಣ್ಣಿನ ತಾಪಮಾನ. ಸಾಂಪ್ರದಾಯಿಕ ಜ್ಞಾನ ಹೊಂದಿರುವ ಸಮುದಾಯಗಳು ಮತ್ತು ವಿಜ್ಞಾನಿಗಳು ಪರಸ್ಪರ ಸಂವಹನಕ್ಕಾಗಿ ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿದೆ.” ಎಂದು ಅನಿತಾ ಹೇಳುತ್ತಾರೆ.

ಅದೇ ನೀಲಗಿರಿಯಲ್ಲಿನ 62 ವರ್ಷದ ಕಟ್ಟುನಾಯಕನ್ ಬುಡಕಟ್ಟು ಜನಾಂಗದ ಕಾಂಚಿ ಕೋಲಿ, ತನ್ನ ಬಾಲ್ಯದಲ್ಲಿ ರಾತ್ರಿಗಳನ್ನು ಬೆಳಗಿಸುತ್ತಿದ್ದ ಹೊಳೆಯುವ ಮಿಂಚುಹುಳುಗಳ ಬಗ್ಗೆ ಮಾತನಾಡುವಾಗ ಅವರ ಕಣ್ಣುಗಳು ಹೊಳೆಯುತ್ತವೆ. “ಮಿನ್ಮಿನಿ ಪೂಚಿ (ಮಿಂಚು ಹುಳ) ಮರದ ಮೇಲೆ ರಥದಂತೆ ಕಾಣುತ್ತಿದ್ದವು. ನಾನು ಚಿಕ್ಕವಳಿದ್ದಾಗ, ಅವು ಹಿಂಡುಗಳಲ್ಲಿ ಬರುತ್ತಿದ್ದವು ಮತ್ತು ಮರಗಳ ಮೇಲೆ ಕುಳಿತಾಗ ಮರಗಳು ತುಂಬಾ ಸುಂದರವಾಗಿ ಕಾಣುತ್ತಿದ್ದವು. ಇತ್ತೀಚಿನ ದಿನಗಳಲ್ಲಿ, ಅವು ಕಣ್ಮರೆಯಾಗುತ್ತಿವೆ."

ಮತ್ತೊಮ್ಮೆ ಛತ್ತೀಸ್‌ಗಢಕ್ಕೆ ಹೋದರೆ, ಅಲ್ಲಿನ ಧಮ್ತಾರಿ ಜಿಲ್ಲೆಯ ಜಬ್ರಾ ಅರಣ್ಯದ ಗೊಂಡ್ ಕೃಷಿಕ ವಿಶಾಲ್ ರಾಮ್ ಮಾರ್ಕಮ್, 50ರ ಹರೆಯದಲ್ಲಿರುವ ಇವರು ಅರಣ್ಯ ಸಾವನ್ನಪ್ಪಿದೆ ಎಂದು ದುಃಖದಿಂದ ಹೇಳುತ್ತಾರೆ. “ಭೂಮಿ ಮತ್ತು ಕಾಡುಗಳು ಈಗ ಮನುಷ್ಯನ ವಶದಲ್ಲಿವೆ. ನಾವು ಕಾಡಿಗೆ ಬೆಂಕಿಯನ್ನು ಹಚ್ಚುತ್ತೇವೆ, ಹೊಲಗಳಲ್ಲಿ ಮತ್ತು ನೀರಿನಲ್ಲಿ ಡಿಎಪಿ [ಡೈಮಮೋನಿಯಮ್ ಫಾಸ್ಫೇಟ್]ಯನ್ನು ಸಿಂಪಡಿಸುತ್ತೇವೆ. ಪ್ರತಿ ವರ್ಷ 7-8 ದೊಡ್ಡ ಪ್ರಾಣಿಗಳು ಇಂತಹ ವಿಷಕಾರಿ ನೀರನ್ನು ಕುಡಿಯುವುದರಿಂದ ಸಾಯುತ್ತವೆ. ಈ ವಾತಾವರಣದಲ್ಲಿ ಮೀನು, ಪಕ್ಷಿಗಳೇ ಬದುಕಲು ಸಾಧ್ಯವಾಗುತ್ತಿಲ್ಲ ಇನ್ನು ಸಣ್ಣ ಕೀಟಗಳು ಅಲ್ಲಿ ಹೇಗೆ ಬದುಕಬಲ್ಲವು?”

ಕವರ್ ಫೋಟೋ: ಯಶ್ವಂತ್ ಎಚ್.‌ ಎಮ್

ಈ ಲೇಖನವನ್ನು ಸಿದ್ಧಪಡಿಸಲು ಅಮೂಲ್ಯವಾದ ಸಹಾಯ ಮತ್ತು ಬೆಂಬಲ ನೀಡಿದ ಮೊಹಮ್ಮದ್ ಆರಿಫ್ ಖಾನ್, ರಾಜೇಂದ್ರ ಕುಮಾರ್ ಮಹಾವೀರ್, ಅನುಪ್ ಪ್ರಕಾಶ್, ಡಾ.ಸವಿತಾ ಚಿಬ್ ಮತ್ತು ಭಾರತ್ ಮೆರುಗು ಅವರಿಗೆ ವರದಿಗಾರರು ತನ್ನ ಧನ್ಯವಾದಗಳನ್ನು ಅರ್ಪಿಸುತ್ತಾರೆ. ತನ್ನ ಒಳನೋಟಗಳನ್ನು ಉದಾರವಾಗಿ ಹಂಚಿಕೊಂಡಿದ್ದಕ್ಕಾಗಿ ವಿಧಿವಿಜ್ಞಾನ ಕೀಟಶಾಸ್ತ್ರಜ್ಞರಾದ ಡಾ. ಮೀನಾಕ್ಷಿ ಭಾರ್ತಿ ಅವರಿಗೂ ಧನ್ಯವಾದಗಳು.

ಹವಾಮಾನ ಬದಲಾವಣೆಯ ಕುರಿತು ಪರಿ (PARI)ಯ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಯುಎನ್‌ಡಿಪಿ ಬೆಂಬಲಿತ ಉಪಕ್ರಮದ ಒಂದು ಭಾಗವಾಗಿದ್ದು, ಆ ವಿದ್ಯಮಾನಗಳನ್ನು ಪರಿ ಸಾಮಾನ್ಯ ಜನರ ಜೀವಂತ ಅನುಭವ ಮತ್ತು ಧ್ವನಿಗಳ ಮೂಲಕ ಸೆರೆಹಿಡಿಯುತ್ತದೆ.

ಅನುವಾದಕರು: ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

ಅನುವಾದ: ಶಂಕರ ಎನ್. ಕೆಂಚನೂರು

Reporter : Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Other stories by Priti David

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Series Editors : Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Other stories by Sharmila Joshi
Translator : Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N Kenchanuru