1980ರ ದಶಕದ ಬಾಲಿವುಡ್ ಸಿನಿಮಾದ ಹಾಡೊಂದು ಲೌಡ್ ಸ್ಪೀಕರಿನಲ್ಲಿ ಮೊಳಗುತ್ತಾ, ತೇಲಿಬರುತ್ತಿತ್ತು, ಕಾಡಿಸುತ್ತಿತ್ತು. ಆ ಕ್ಷಣದಲ್ಲಿ ಸೇರಿದ ಪ್ರೇಕ್ಷಕರನ್ನು- ಸಿಂಘುವಿನಲ್ಲಿ ಪ್ರತಿಭಟಿಸುತ್ತಿರುವ ರೈತಸಮುದಾಯ- ರಂಜಿಸಲು 45 ನಿಮಿಷದ ಪ್ರದರ್ಶನಕ್ಕೆ ಬಾಲಕಿ ರಾಣಿ ಸಿದ್ದವಾಗಿದ್ದಾಳೆ.

“ಯೇ ಆಂಸೂ ಯೆ ಜಜ್ಬಾತ್ ತುಮ್ ಬೇಚತೆ ಹೊ,
ಘರೀಬೋಂಕೆ ಹಾಲಾತ್ ತುಮ್ ಬೇಚತೆ ಹೊ,
ಅಮೀರೋಂಕೆ ಶಾಮ್ ಘರೀಬೋಂಕೆ ನಾಮ್

(ಈ ಕಣ್ಣೀರು ಈ ಆವೇಶವನು ನೀ ಮಾರುತಿರುವೆಯಾ,
ಬಡವರ ಪಾಡು ನೀ ಮಾರುತಿರುವೆಯಾ,
ಸಿರಿವಂತರ ಸಂಭ್ರಮ, ಬಡವರ ಹೆಸರಲಿ)

ಅದು ಸೆಪ್ಟೆಂಬರ್ 2021ರ ಸಮಯ. ಕೋವಿಡ್-19ರ ಮಾರಣಾಂತಿಕ ಎರಡನೇ ಅಲೆ ತಗ್ಗುತ್ತಾ ಬಂದಿತ್ತು ಮತ್ತು 26 ವರ್ಷದ ವಿಕ್ರಮ ನಟ್, ಮಡದಿ ಲಿಲ್, 22, ಮತ್ತು ಅವರ 12 ವರ್ಷದ ನಾದಿನಿ ರಾಣಿ ಎಲ್ಲರೂ ದೆಹಲಿ – ಹರ್ಯಾಣದ ಗಡಿ ಸಿಂಘುವಿಗೆ ವಾಪಾಸಾಗಿ ಆಟ ತೋರಿಸುತ್ತಿದ್ದಾರೆ.

ಕೋವಿಡ್- 19 ಸಾಂಕ್ರಾಮಿಕ ಶುರುವಾದ ಮೇಲೆ 2021ರ ಏಪ್ರಿಲ್ಲಿನಲ್ಲಿ ಎರಡನೇ ಸಲ, ಛತ್ತಿಸಗಡದ ಅವರ ಹಳ್ಳಿ ಬರಗಾವಿಗೆ ಹೋಗಿದ್ದರು. ಅದು ನಾನು ರೈತರ ಹೋರಾಟವನ್ನು ವರದಿ ಮಾಡುತ್ತಿದ್ದಾಗ ಅವರು ಮೊದಲು ಸಿಕ್ಕಿದ ಒಂದು ತಿಂಗಳ ನಂತರ. ರೈತರಿಗಾಗಿ ಆಟ ಆಡಲು ಮಾರ್ಚಿಯಲ್ಲಿ ಅವರು ಸಿಂಘುವಿಗೆ ಬಂದಿದ್ದರು. ಈಗಲೂ ಅವರು ಆಟ ತೋರಿಸುತ್ತಿದ್ದಾರೆ.

16- ಅಡಿ– ಉದ್ದದ, ಸುಮಾರು 4 ಕಿಲೋ ತೂಕದ, ಮರದ ದಡಿ ಅವಳ ಕೈಯಲ್ಲಿದೆ. ಎರಡು ಕಂಬಗಳ ನಡುವೆ ಬಿಗಿಯಾಗಿ ಎಳೆದು ಕಟ್ಟಿರುವ 18-20 ಅಡಿ ಉದ್ದದ ತೂಗಾಡುವ ಹಗ್ಗದ ಮೇಲೆ, ತಲೆಯ ಮೇಲೆ ಒಂದರ ಮೇಲೊಂದು ಪೇರಿಸಿದ ಹಿತ್ತಾಳೆ ಪಾತ್ರೆಗಳನ್ನು ಸಹಜವಾಗಿ ಸಂಭಾಳಿಸುತ್ತಾ, ಬರಿಗಾಲಿನಲ್ಲಿ ಸೊಗಸಾಗಿ ನಡೆಯುತ್ತ ಹೋದಳು. ಹಿತ್ತಾಳೆ ಪಾತ್ರೆಗಳ ತುದಿಯಲ್ಲಿ ಒಂದು ಸಣ್ಣ ಬಾವುಟವೊಂದು ಹಾರುತ್ತಿದೆ; ಅದರಲ್ಲಿ ಬರೆದಿತ್ತು: ರೈತರಿಲ್ಲದಿದ್ದರೆ ಅನ್ನವಿಲ್ಲ.

Rani Nat gets ready to walk on the wobbling cable with a plate beneath her feet. She moves with a long wooden staff, balancing brass pots on her head
PHOTO • Amir Malik
Rani Nat gets ready to walk on the wobbling cable with a plate beneath her feet. She moves with a long wooden staff, balancing brass pots on her head
PHOTO • Amir Malik

ಕಾಲಿನ ಕೆಳಗೆ ತಟ್ಟೆಯೊಂದನ್ನು ಇಟ್ಟುಕೊಂಡು, ತೂಗಾಡುವ ಹಗ್ಗದ ಮೇಲೆ ನಡೆಯಲು ಸಿದ್ದವಾಗಿರುವ ರಾಣೀ ನಟು. ತಲೆಯ ಮೇಲೆ ಹಿತ್ತಾಳೆ ಪಾತ್ರೆಗಳನ್ನು ಸಮತೋಲನ ಮಾಡಿಕೊಂಡು, ಕೈಯಲ್ಲಿ ಮರದ ದಡಿಯನ್ನು ಹಿಡಿದುಕೊಂಡು ನಡೆಯುತ್ತಾರೆ

ಒಂದೆರಡು ಸಲ ಹಗ್ಗದ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ನಡೆದಾಡಿದ ಮೇಲೆ, ರಾಣಿ ತನ್ನ ಕಾಲ ಕೆಳಕ್ಕೆ ತಟ್ಟೆಯನ್ನು ಇಟ್ಟುಕೊಂಡು, ಮೊಣಕಾಲಿನಲ್ಲಿ  ಮತ್ತದೇ ದೂರವನ್ನು ಕ್ರಮಿಸಿ, ಮತ್ತದೇ ಜೋಲಾಡುವ ಹಗ್ಗದ ಮೇಲೆ, ಮತ್ತೊಂದು ಸಲಕರಣೆ ಬೈಸಿಕಲ್ಲಿನ ರಿಮ್ಮಿನ ಮೇಲೆ ಸವಾರಿ ಮಾಡುತ್ತಾರೆ. ಸರಿಯಾಗಿ ಮತ್ತದೇ ಸಮಯದಲ್ಲಿ, ಅಂದರೆ ಅರ್ಧ ದೂರದಲ್ಲಿ ಸರಿಯಾಗಿ, ಕೆಳಗೆ ಏನೂ ಆಸರೆ ಇಲ್ಲದ, ಬರಿನೆಲದಿಂದ 10 ಅಡಿ ಎತ್ತರದಲ್ಲಿ, ಏಕಾಗ್ರತೆಯಿಂದ ದೃಢವಾಗಿ ನಿಂತು ಜನರ ಎದೆಯು ನೆಗೆದು ಬಯಲಿಗೆ ಬೀಳುವಂತೆ ಜೋರಾಗಿ ತಾಳಬದ್ದವಾಗಿ ಗಾಳಿಯಲ್ಲಿ ಜೋಲಾಡುತ್ತಾರೆ.

ವಿಕ್ರಮ್ ನಮಗೆ ಅಭಯ ನೀಡಿದರು “ಅವರು ಬೀಳುವುದಿಲ್ಲ ಬಿಡಿ. ಇದು ನಮ್ಮ ಶತಶತಮಾನಗಳಿಂದ ಬಂದ ಸಾಂಪ್ರದಾಯಿಕ ಕಲೆ. ತಲೆತಲಾಂತರಗಳಿಂದ ಈ ಕಲೆ ಬಂದಿದೆ. ನಾವು ಇದರಲ್ಲಿ ಪ್ರವೀಣರು” ಎಂದು ಸಂಗೀತ ಮತ್ತು ಲೌಡ್ ಸ್ಪೀಕರುಗಳನ್ನು ನೋಡಿಕೊಳ್ಳುತ್ತಲೇ ವಿವರಿಸಿದರು.

ದೊಂಬರಾಟದ ಕಲೆಗೆ ಹೆಸರಾದ ನಟ ಜಾತಿಯ ದಲಿತ ಸಮುದಾಯಕ್ಕೆ ಸೇರಿದ ಅಲೆಮಾರಿ ಕಲಾವಿದರಾದ ವಿಕ್ರಮ್ ಮತ್ತು ಕುಟುಂಬದವರು ದೆಹಲಿಯಿಂದ 1200 ಕಿಮೀ ದೂರದ ಛತ್ತಿಸಗಡದ ಜಂಜಗೀರ- ಚಂಪಾ ಜಿಲ್ಲೆಯವರು.

ವಿಕ್ರಮರ ಹೆಂಡತಿ ಲಿಲ್ ಹಗ್ಗದ ಕೆಳಗೆ ಆಚೀಚೆ ಓಡಾಡುತ್ತಿದ್ದರು. ಒಂದು ವೇಳೆ ರಾಣಿ ಕೆಳಗೆ ಬಿದ್ದರೆ ಅವಳನ್ನು ಹಿಡಿದುಕೊಳ್ಳುವುದು ಅವರಿಗೆ ಚೆನ್ನಾಗಿ ಗೊತ್ತು ಎಂದು ಖಾತ್ರಿಪಡಿಸಿದರು ವಿಕ್ರಮ್. “ರಾಣಿಯಷ್ಟು ಸಣ್ಣವಳಿದ್ದಾಗ ನಾನೂ ಹಗ್ಗದ ಮೇಲೆ ಆಟ ತೋರಿಸುತ್ತಿದ್ದೆ,” ಲಿಲ್ ಹೇಳುತ್ತಾ ಹೋದರು. ”ಆದರೆ ಈಗ ಆಗೋದಿಲ್ಲ. ಈಗ ನನ್ನ ಮೈ ಬಗ್ಗುವುದಿಲ್ಲ.” ಲಿಲ್ ಅನೇಕ ಬಾರಿ ಹಗ್ಗದಿಂದ ಕೆಳಗೆ ಬಿದ್ದಿದ್ದಾರೆ. “ರಾಣಿಗೆ ಮೂರು ವರ್ಷದವಳಿರುವಾಗಲೆ ಅಭ್ಯಾಸ ಮಾಡಲು ಶುರು ಮಾಡಿದಳು. ಬೇಗನೆ ಕಲಿತು ಪ್ರದರ್ಶನ ನೀಡುತ್ತಿದ್ದಾಳೆ” ಎಂದರು.

ವಿಕ್ರಮರವರು ಹೇಳುವಂತೆ ಬರಗಾವಿಯ ನಟರ ಮೊಹಲ್ಲಾದಲ್ಲಿ ಸುಮಾರು ಐದು ತಲೆಮಾರುಗಳಿಂದ ಹಗ್ಗದ ಮೇಲಿನ ದೊಂಬರಾಟವನ್ನು ಅಭ್ಯಾಸ ಮಾಡಿ ಪ್ರದರ್ಶನ ನೀಡುತ್ತಿರುವ ಕೆಲವೇ ಕುಟುಂಬಗಳಲ್ಲಿ ಅವರ ಕುಟುಂಬವೂ ಒಂದು. ಹೊಟ್ಟೆಪಾಡಿಗಾಗಿ ರಾಜಸ್ಥಾನ, ಪಂಜಾಬ್ ಮತ್ತು ಮಧ್ಯಪ್ರದೇಶಗಳಿಗೆಲ್ಲಾ ಹೋಗಿ ಬಂದಿದ್ದಾರೆ.

Left: Lil, Rani (centre) and Vikram moved to Singhu early this year. Right: Rani, 12, started practicing the high-wire dance when she was 3 years old
PHOTO • Amir Malik
Left: Lil, Rani (centre) and Vikram moved to Singhu early this year. Right: Rani, 12, started practicing the high-wire dance when she was 3 years old
PHOTO • Amir Malik

ಎಡಚಿತ್ರ: ಲಿಲ್, ರಾಣಿ (ಮಧ್ಯದಲ್ಲಿರುವವರು) ಮತ್ತು ವಿಕ್ರಮ್ ಈ ವರ್ಷದ ಆರಂಭದಲ್ಲಿ ಸಿಂಘುವಿಗೆ ಬಂದಿದ್ದರು. ಬಲಚಿತ್ರ: ರಾಣಿ, 12, ಹಗ್ಗದ ಮೇಲಿನ ದೊಂಬರ ಆಟವನ್ನು 3 ವರ್ಷದವಳಾಗಿರುವಾಗಲೆ ಅಭ್ಯಾಸ ಶುರು ಮಾಡಿದ್ದಳು

ವಿಕ್ರಮರವರು ದೆಹಲಿಯಲ್ಲಿದ್ದ ತನ್ನ ಅಜ್ಜನನ್ನು ಸೇರಿಕೊಂಡಾಗ ಕೇವಲ 9 ವರ್ಷದ ಬಾಲಕ. ತುಂಬಾ ಹಿರಿಯ ಕಲಾವಿದರಾಗಿದ್ದ ಅಜ್ಜ “ನೆಹರೂರವರು ಕೋಟಿನಲ್ಲಿ ಗುಲಾಬಿ ಇಟ್ಟುಕೊಂಡು ಓಡಾಡುತ್ತಿದ್ದ” ಕಾಲದಿಂದಲೇ ಪ್ರದರ್ಶನ ನೀಡುತ್ತಿದ್ದವರು.

ಕಳೆದ ವರ್ಷ ವಿಕ್ರಮ್ ಮತ್ತು ಅವರ ಕುಟುಂಬ ಪಶ್ಚಿಮ ದೆಹಲಿಯ ಪಟೇಲ್ ನಗರದ ರೈಲ್ವೆ ನಿಲ್ದಾಣದ ಕೊಳಗೇರಿಯೊಂದರಲ್ಲಿ ವಾಸವಿತ್ತು, ಆದರೆ ಮಾರ್ಚಿ 2020ಕ್ಕೆ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸುವ ಸ್ವಲ್ಪ ಮೊದಲಷ್ಟೆ ತಮ್ಮ ಹಳ್ಳಿಗೆ ಹಿಂದಿರುಗಿದ್ದರು. “ಕರೋನಾ ವೈರಸ್ ಹರಡುತ್ತಿದೆ ಎಂದು ಜನ ಹೇಳುತ್ತಿದ್ದರು. ನಮ್ಮಂತ ಬಡವರ ಪಾಲಿಗೆ ಆಸ್ಪತ್ರೆ, ಡಾಕ್ಟರು ಏನೂ ಸಿಗುವುದಿಲ್ಲ. ಅವರೆಲ್ಲಾ ಶ್ರೀಮಂತರಿಗೆ ಚಿಕಿತ್ಸೆ ಕೊಡುವುದರಲ್ಲಿ ಮುಳುಗಿರುತ್ತಾರೆ. ಜೊತೆಗೆ ಒಂದು ವೇಳೆ ನಮಗೆ ಸಾವು ಬರುವುದಾದರೆ, ನಾವು ಮಾತ್ರ ನಮ್ಮ ಅಪ್ಪ ಅಮ್ಮ ಮತ್ತು ಕುಟುಂಬ, ಸಂಬಂಧಿಕರಿರುವ ನಮ್ಮೂರಲ್ಲೇ ಸಾಯಲು ಬಯಸುತ್ತೇವೆ.” ಎಂದರು ವಿಕ್ರಮ್.

ನವೆಂಬರ್ 2020ರಲ್ಲಿ ಈ ಕುಟುಂಬವು ದೆಹಲಿಗೆ ಹಿಂದಿರುಗಿತು; ಊರಿನಲ್ಲಿ ಅವರಿಗೆ ಯಾವುದೇ ನಿಗದಿತ ಆದಾಯ ಇಲ್ಲ. ಮನರೇಗಾದ ಅಡಿಯಲ್ಲಿ ಸಿಗುವ ಕೂಲಿ ಕೆಲಸ ಮಾಡಿ ವಿಕ್ರಮ್ ಗಳಿಸುವ ಹಣ ಯಾವುದಕ್ಕೂ ಸಾಲುವುದಿಲ್ಲ. ಒಂದು ಕೋಣೆಯಷ್ಟು ದೊಡ್ಡ ಗುಂಡಿಯನ್ನು ಅಗೆದರೆ, ಪ್ರತಿಯಾಗಿ ರೂ. 180 ಸಿಗುತ್ತದೆ. ಉಳಿದ ತಂಗಳು ಅನ್ನಕ್ಕೆ ನೀರು ಕಲೆಸಿಕೊಂಡು ತಿನ್ನಬೇಕು. ಹೇಗೋ ಮಾಡಿ 9 ತಿಂಗಳಲ್ಲಿ ಎಂಟರಿಂದ ಒಂಬತ್ತು ಸಾವಿರ ಉಳಿತಾಯ ಮಾಡಿದೆ. ಅಷ್ಟೂ ಹಣವನ್ನು ರೈಲಿನ ಮೂಲಕ ದೆಹಲಿ ತಲುಪಲು ಖರ್ಚು ಮಾಡಿದೆವು. ಇಲ್ಲಿಗೆ ಬರುವಾಗಲೂ ಸಹ, ಬೇಗ ಖಾಲಿಯಾಗಬಾರದೆಂದು ಒಂದೊಂದೇ ಚಮಚ, ಅದೂ ಹಸಿವಾದಾಗ ಮಾತ್ರ ತಿನ್ನುತ್ತಿದ್ದೆವು.” ಎಂದರು ವಿಕ್ರಮ್.

2021ರ ಆರಂಭದ ದಿನಗಳಲ್ಲಿ ಅವರಿಗೆ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವುದು ಗೊತ್ತಾದಾಗ ಅವರು ಗಾಜಿಯಾಬಾದಿನಲ್ಲಿ ಪ್ರದರ್ಶನ ನೀಡುತ್ತಿದ್ದರು. ಅವರು ಆಗ ಪ್ರತಿಭಟನಾ ಸ್ಥಳದ ಸಮೀಪ ತಿಂಗಳಿಗೆ ರೂ. 2000ಕ್ಕೆ ಮನೆಯೊಂದನ್ನು ಬಾಡಿಗೆ ಪಡೆದುಕೊಂಡು, ಸಿಂಘುವಿನಲ್ಲಿ ಉಳಿದುಕೊಂಡು ಪ್ರದರ್ಶನ ನೀಡುತ್ತಿದ್ದಾರೆ. ನಾವು ರೈತರ ಕುಟುಂಬದಿಂದ ಬಂದಿಲ್ಲವಾದರೂ, ಅವರ ಕಷ್ಟ ನಮಗೂ ಗೊತ್ತಿದೆ ಎನ್ನುತ್ತಾರೆ ವಿಕ್ರಮ್. “ನಮಗೆ ಜಮೀನು ಇತ್ತೋ ಇಲ್ಲವೋ ಗೊತ್ತಿಲ್ಲ, ನಮ್ಮದೂ ಜಮೀನು ಇತ್ತೆಂದು ಮನೆಯಲ್ಲಿ ಹೇಳುತ್ತಾರೆ. ಒಂದೋ ಅದನ್ನು ಹಿರಿಯರು ಮಾರಿದ್ದಾರೆ ಅಥವಾ ಯಾರೋ ಒತ್ತುವರಿ ಮಾಡಿಕೊಂಡಿದ್ದಾರೆ.” ಎಂದರು ವಿಕ್ರಮ್.

ಸಿಂಘುವಿನಲ್ಲಿ ಇವರಿಗಾದ ಅನುಭವ ವಿಶಿಷ್ಟ ವಿಭಿನ್ನ. ಇವರು ಬೇರೆ ಜನರಂತೆ ಒರಟಲ್ಲ. “ಪ್ರತಿಭಟಿಸುತ್ತಿರುವ ರೈತರು ನಮ್ಮನ್ನು ಆದರದಿಂದ ಕಾಣುತ್ತಾರೆ” ಎನ್ನುತ್ತಾರೆ ಲಿಲ್

ವಿಡಿಯೋ ನೋಡಿ: ಸಿಂಘುವಿನಲ್ಲಿ ದೊಂಬರ ಕಲೆ: ಛತ್ತೀಸಗಡದ ನಟ ಜನಾಂಗದ ಕಲಾವಿದರು ಸಿಂಘು ಗಡಿಯಲ್ಲಿ

ಬಿಗಿಯಾಗಿ ಎಳೆದು ಕಟ್ಟಿದ ಹಗ್ಗದ ಮೇಲೆ ನಡೆದರೆ ಸಾಮಾನ್ಯವಾಗಿ ಅವರು ದಿನಕ್ಕೆ ರೂ. 400-500 ಸಂಪಾದನೆ ಮಾಡುತ್ತಿದ್ದರು, ಆದರೆ ಸಿಂಘುವಿನಲ್ಲಿ ದಿನಕ್ಕೆ ರೂ. 800- 1500 ಸಿಗುತ್ತಿದೆ. “ನಾವು ಇಲ್ಲಿಗೆ ಬಂದದ್ದು ಹಣ ಗಳಿಸಲು, ಆದರೆ ಈಗ ನಮಗೆ ರೈತರನ್ನು ಬೆಂಬಲಿಸಬೇಕಾದ ಅಗತ್ಯ ಅರ್ಥವಾಗಿದೆ. ನಾವು ಅವರೊಂದಿಗಿದ್ದೇವೆ. ಅವರನ್ನು ಇಲ್ಲಿಯವರೆಗೆ ಕರೆತಂದಿರುವ ಬೇಡಿಕೆಗಳು ಈಡೇರಲಿ ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ,” ಎಂದರು ಲಿಲ್. ನಾವೂ ರೈತರೊಂದಿಗಿದ್ದೇವೆ ಎಂಬುದನ್ನು ಹೃದಯಪೂರ್ವಕವಾಗಿಯೇ ಪ್ರದರ್ಶನದ ಮೂಲಕ ತೋರಿಸುತ್ತಿದ್ದೇವೆ ಎಂದು ಸೇರಿಸಿದರು ವಿಕ್ರಮ್. ಸೆಪ್ಟೆಂಬರ್ 2020ರಲ್ಲಿ ಸಂಸತ್ತಿನ ಮೂಲಕ ಹೇರಿದ ಮೂರು ಕೃಷಿ ಕಾನೂನುಗಳ ವಿರುದ್ದ ಅನೇಕ ತಿಂಗಳುಗಳಿಂದ ರೈತರು ದೃಡನಿಶ್ಚಯದಿಂದ ಹೋರಾಡುತ್ತಿದ್ದಾರೆ.

ದೆಹಲಿಯಲ್ಲಿ ಬೇರೆಯವರು ನಮ್ಮ ವಿರುದ್ದ ಬೇಧಭಾವ ಮಾಡುವಂತೆ ಪ್ರತಿಭಟನಾ ಸ್ಥಳದಲ್ಲಿರುವ ರೈತರು ಮಾಡುವುದಿಲ್ಲ. ರಾಣಿ ಮೊದಲು ನಗರಕ್ಕೆ ಬಂದಾಗ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂದು ಆಸೆಪಟ್ಟಿದ್ದಳು, ಆದರೆ ಎಷ್ಟು ಸಲ ಪ್ರಯತ್ನಿಸಿದರೂ ಕರೆದೊಯ್ಯಲಾಗಲಿಲ್ಲ. “ಮೆಟ್ರೋ ಗಾರ್ಡುಗಳು ನಮ್ಮನ್ನು ಒಳಗೆ ಬಿಡಲಿಲ್ಲ. ‘ನೀವು ಕೊಳಕಾಗಿದ್ದೀರಿ’ ಎಂದುಬಿಟ್ಟರು” ಎಂದು ವಿವರಿಸಿದರು. ಕೊನೆಗೆ ಮೆಟ್ರೋದಲ್ಲಿ ಹೋಗುವ ಸಲುವಾಗಿಯೇ ಬಟ್ಟೆಗಳನ್ನು ತೊಳೆದು ಹಾಕಿಕೊಂಡು ಹೋದಾಗಲೂ ಮೆಟ್ರೋ ಸವಾರಿ ಸಾಧ್ಯವಾಗಲಿಲ್ಲ ಎಂದು ವಿಕ್ರಮರವರು ನೆನಪಿಸಿಕೊಂಡರು. ಕೊನೆಗೆ ನಮ್ಮ ಸಲಕರಣೆಗಳು ಮತ್ತು ಸಾಮಾನುಗಳನ್ನು ಸಾಗಿಸಲು ಎಳೆಯುವ ಗಾಡಿಯೊಂದನ್ನು ಮಾಡಿಕೊಂಡು ಅದಕ್ಕೆ ಒಂದು ಮೋಟಾರ್ ಅಳವಡಿಸಿಕೊಂಡಿದ್ದೇವೆ. “ಅದೇ ನಮ್ಮ ಮೆಟ್ರೋ ಸವಾರಿ. ನಮ್ಮದೂ ಗಾಡಿ ಇದೆ. ಅದರಲ್ಲಿ ಕುಳಿತುಕೊಂಡೇ ನಾವು ದಿಲ್ಲಿಯನ್ನು ನೋಡುತ್ತೇವೆ” ಎಂದು ಹೇಳುತ್ತಾ ಹೋದರು.

“ಪಾರ್ಕುಗಳಲ್ಲಿ ಮತ್ತು ಮಾರ್ಕೆಟ್ಟುಗಳಲ್ಲಿ ನಾವು ಆಟ ತೋರಿಸಲು ಹೋದರೆ ಜನರು ನಮ್ಮನ್ನು ಅಲ್ಲಿಂದ ಓಡಿಸುತ್ತಾರೆ. ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ವಾಹನಗಳು ನಿಂತಾಗ, ಜಂಕ್ಷನಿನಲ್ಲಿ ನಾವು ಆಟ ತೋರಿಸುವಾಗ, ದಾರಿಯಲ್ಲಿ ಹೋಗುವವರು ಯಾರಾದರೂ 10 ರೂಪಾಯಿ ಕೊಟ್ಟರೆ ಅದೇ ನಮಗೆ ಖುಷಿ. ಆದರೆ ಅಲ್ಲಿಯೂ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಜನರು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಹೇಳುತ್ತಾರೆ” ಎಂದರು ವಿಕ್ರಮ್.

ಒಂದು ವಿಷಯವೆಂದರೆ ಸಿಂಘುವಿನಲ್ಲಿ ಇವರಿಗಾದ ಅನುಭವ ಬೇರೆಯದೇ ರೀತಿಯದು. ಕಠಿಣವಾಗಿ ನಡೆದುಕೊಳ್ಳುವ ಬೇರೆ ಜನರಂತಲ್ಲ, “ಪ್ರತಿಭಟಿಸುತ್ತಿರುವ ರೈತರು ನಮ್ಮನ್ನು ತುಂಬಾ ಆದರದಿಂದ ನೋಡಿಕೊಳ್ಳುತ್ತಾರೆ. ಅವರ ಕುಟುಂಬದ ಸದಸ್ಯರೇನೋ ಎಂಬಂತೆ ನಮಗೂ ಉಣಬಡಿಸುತ್ತಾರೆ. ಆಟ ತೋರಿಸಲು ಬೇರೆ ಕಡೆ ಹೋದಲ್ಲಿ ಬಯ್ಯುವಂತೆ ಇಲ್ಲಿ ಯಾರೂ ಯಾವಾಗಲೂ ಬಯ್ದದ್ದಿಲ್ಲ. ಇಲ್ಲಿ ಸಿಕ್ಕಿದಷ್ಟು ಗೌರವ ನಮಗೆ ಬೇರೆಲ್ಲೂ ಸಿಕ್ಕಿಲ್ಲ” ಎಂದು ಹೃದಯತುಂಬಿ ಹೇಳಿದರು ಲಿಲ್.

A flag fluttering on the pots atop Rani's head says, 'No Farmers, No Food'. It expresses the Nat family's solidarity with the protesting farmers
PHOTO • Amir Malik

ರಾಣಿಯ ತಲೆಯ ಮೇಲಿರುವ ಪಾತ್ರೆಗಳ ತುದಿಯಲ್ಲಿ ಹಾರಾಡುತ್ತಿರುವ ಪತಾಕೆಯಲ್ಲಿ ಬರೆದಿದೆ, ‘ರೈತರಿಲ್ಲದಿದ್ದರೆ ಅನ್ನವಿಲ್ಲ.’ ಪ್ರತಿಭಟನಾನಿರತ ರೈತರಿಗೆ ನಟ ಜನಾಂಗದ ಈ ಕುಟುಂಬದ ಬೆಂಬಲವನ್ನು ಅದು ಸಾರಿ ಹೇಳುತ್ತಿದೆ

“ಈ ಪ್ರಪಂಚ ನಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಮಾಧ್ಯಮದವರು ನಮ್ಮನ್ನು ಅಸಡ್ಡೆಯಿಂದ ಕಾಣುತ್ತಾರೆ. ಆದ್ದರಿಂದ ಅವರ ಜೊತೆ ನಾವು ಮಾತಾಡುವುದಿಲ್ಲ” ಎಂದರು ಲಿಲ್. ಮುಂದುವರೆದು “ಇದರ ಪರಿಣಾಮವಾಗಿ ಕೆಲವೊಮ್ಮೆ ಪೋಲೀಸರು ನಮ್ಮನ್ನು ಜೈಲಿಗೆ ಹಾಕುತ್ತಾರೆ. ಜೈಲಿನೊಳಗಡೆ ಬೆನ್ನು ನಮ್ಮದು, ಏಟು ಅವರದು” ಎಂದರು.

ಒಮ್ಮೆ ಸಿಂಘುವಿನಿಂದ ಸುಮಾರು 7 ಕಿಮೀ ದೂರದಲ್ಲಿ, ನರೇಲಾದಲ್ಲಿ ಆಟ ತೋರಿಸುವಾಗ “ಪೋಲೀಸರು ಬಂದು, ನಾವು ನಮ್ಮ ಜೀವದ ಜೊತೆಗೆ ಆಟ ಆಡುತ್ತಿದ್ದೇವೆ ಎಂದು ಹೇಳುತ್ತಾ, ನಮ್ಮ ಎರಡು ದಿನದ ಬೆವರಿನ ದುಡಿಮೆಯನ್ನು ಕಿತ್ತುಕೊಂಡು ಹೋದರು.” ಎಂದು ವಿಕ್ರಮ್ ದೂರಿದರು. ಇನ್ನೊಮ್ಮೆ ಅವರನ್ನು ಕಳ್ಳತನದ ಸಂಶಯದ ಮೇಲೆ ಗಾಜಿಯಾಬಾದ್ ಜೈಲಿಗೆ ಕರೆದುಕೊಂಡು ಹೋಗಿದ್ದರು. “ಅಗರ್ ಚುರಾನಾ ಹೋಗಾ ತೋ ಅಂಬಾನಿ ಕಾ ಅಲ್ಮೆರಾ ಚುರಾಯೇಂಗೆ” (“ನನಗೆ ಕದೀಬೇಕು ಅನ್ನಿಸಿದರೆ, ನಾನು ಅಂಬಾನಿ ತಿಜೋರಿನೇ ಕದೀತೀನಿ”) ಎಂದು ಪೋಲೀಸರಿಗೆ ಹೇಳಿದ್ದರು. “ಆದರೆ ನನ್ನ ಮೇಲೆ ಕರುಣೆಯಿಲ್ಲದೆ ಹೊಡೆದಿದ್ದರು”

ರೈತರು ಎಲ್ಲರಂತಲ್ಲ. “ಅವರು ನಮ್ಮನ್ನು ಒಂದಕ್ಷರ ಬಯ್ಯುವುದೂ ಇಲ್ಲ, ಜಾಗ ಖಾಲಿ ಮಾಡಿ ಎನ್ನುವುದೂ ಇಲ್ಲ. ವೇದಿಕೆಯಲ್ಲಿ ಪಾಠ ನಡೆಯುವಾಗ (ಗುರು ಗ್ರಂಥ ಸಾಹಿಬ್ ವಾಚನ) ಮಾತ್ರ ಲೌಡ್ ಸ್ಪೀಕರಿನ ಶಬ್ದವನ್ನು ಕಡಿಮೆ ಮಾಡುವಂತೆ ವಿನಯದಿಂದಲೇ ಅವರು ಹೇಳುತ್ತಾರೆ” ಎಂದರು ವಿಕ್ರಮ್.

ಸಾಂಕ್ರಾಮಿಕದ ಎರಡನೇ ಅಲೆಯಿಂದ ಬಚಾವಾಗಲು ಅವರು ತಮ್ಮ ಹಳ್ಳಿಗೆ ಹೋಗಬೇಕಾದಾಗ, ಸಿಂಘುವಿನಲ್ಲಿ ಅವರ ವಾಸ್ತವ್ಯ ಐದು ತಿಂಗಳಿಗಿಂತ ಮೊದಲೇ ಕೊನೆಯಾಯಿತು. ಈಗ ಅವರು ಸೆಪ್ಟೆಂಬರಿನಲ್ಲಿ ಹಿಂದಿರುಗಿದಾಗ, ಮುಂಚೆ ಇದ್ದ ಮನೆ ಬಾಡಿಗೆಗೆ ಸಿಗಲಿಲ್ಲ. ಪ್ರತಿಭಟನಾ ಸ್ಥಳದಲ್ಲಿ ರೈತರು ನಿರ್ಮಿಸಿದ ಚಿಕ್ಕ ಮನೆಗಳು ಹಾಗೂ ಟೆಂಟುಗಳು ಈಗಲೂ ಇವೆ. ಆದರೆ ಈಗ ಕೃಷಿ ಕೆಲಸಗಳು ಶುರುವಾಗಿರುವುದರಿಂದ, ಸಿಂಘುವಿನಲ್ಲಿ ಕೆಲವು ತಿಂಗಳುಗಳ ಮುಂಚೆ ಇದ್ದದ್ದಕ್ಕಿಂತ ಕಡಿಮೆ ಜನರಿದ್ದಾರೆ- ಅಂದರೆ ಆಟ ತೋರಿಸುವ ಅವರ ದುಡಿಮೆ ಮೊದಲಿಗಿಂತ ಕಡಿಮೆಯಾಗಿದೆ.

ವಿಕ್ರಮ್, ಲಿಲ್ ಮತ್ತು ರಾಣಿ ಸಿಂಘುವಿನ ಬಳಿ ಉಳಿದುಕೊಂಡೇ ಸ್ವಲ್ಪ ಹೆಚ್ಚು ದುಡಿಮೆ ಮಾಡಿಕೊಳ್ಳಲು ಹತ್ತಿರದ ಜಾಗಗಳಿಗೆ ಹೋಗುತ್ತಾರೆ. ರೈತರ ದೀರ್ಘಕಾಲದ ಹೋರಾಟಕ್ಕೆ ಬೆಂಬಲಾರ್ಥವಾಗಿ ವಾರದಲ್ಲಿ ಮೂರು ದಿನ ಅವರಿಗಾಗಿಯೇ ಆಟ ತೋರಿಸುತ್ತಾರೆ.

ಅನುವಾದ: ಮಂಜಪ್ಪ ಬಿ.ಎಸ್.

Amir Malik

ಅಮೀರ್ ಮಲಿಕ್ ಸ್ವತಂತ್ರ ಪತ್ರಕರ್ತ ಮತ್ತು 2022 ರ ಪರಿ ಫೆಲೋ.

Other stories by Amir Malik
Translator : B.S. Manjappa

ಮಂಜಪ್ಪ ಬಿ.ಎಸ್ ಇವರು ಒಬ್ಬ ಕನ್ನಡದ ಉದಯೋನ್ಮುಖ ಬರಹಗಾರ ಮತ್ತು ಅನುವಾದಕ.

Other stories by B.S. Manjappa