2022ರ ಅಕ್ಟೋಬರ್‌ ತಿಂಗಳ ಒಂದು ಸಂಜೆ, ಬಳ್ಳಾರಿಯ ವಡ್ಡು ಗ್ರಾಮದ ಸಮುದಾಯ ಕೇಂದ್ರದ ಜಗುಲಿಯಲ್ಲಿ ಹಿರಿಯ ಮಹಿಳೆಯೊಬ್ಬರು ತನ್ನ ಬಡಕಲು ಬೆನ್ನನ್ನು ಕಂಬಕ್ಕೆ ಒರಗಿಸಿ ಕಾಲು ಚಾಚಿ ವಿಶ್ರಾಂತಿ ಪಡೆಯುತ್ತಿದ್ದರು. ಅವರು ಆ ದಿನ ಸಂಡೂರು ತಾಲ್ಲೂಕಿನ ಗುಡ್ಡಗಾಡು ರಸ್ತೆಗಳಲ್ಲಿ 28 ಕಿಲೋಮೀಟರ್‌ ನಡೆದು ದಣಿದಿದ್ದರು. ಅಲ್ಲದೆ ಅವರು ಮರುದಿನ ಇನ್ನೂ 42 ಕಿಲೋಮೀಟರ್‌ ದೂರ ನಡೆಯುವುದಿತ್ತು.

ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘ (ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘ) ಆಯೋಜಿಸಿರುವ ಎರಡು ದಿನಗಳ ಪಾದಯಾತ್ರೆಯಲ್ಲಿ ಸಂಡೂರಿನ ಸುಶೀಲಾನಗರ ಗ್ರಾಮದ ಗಣಿ ಕಾರ್ಮಿಕರಾದ ಹನುಮಕ್ಕ ರಂಗಣ್ಣ ಕೂಡಾ ಭಾಗವಹಿಸಿದ್ದಾರೆ. ಉತ್ತರ ಕರ್ನಾಟಕದ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಈ ಪ್ರತಿಭಟನಾಕಾರರು 70 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಇದು ಹದಿನಾರನೇ ಬಾರಿಗೆ ಅವರು ಇತರ ಗಣಿ ಕಾರ್ಮಿಕರೊಂದಿಗೆ ಈ ರೀತಿ ಬೀದಿಗಿಳಿದಿರುವುದು. ಸಾಕಷ್ಟು ಪರಿಹಾರ ಮತ್ತು ಪರ್ಯಾಯ ಜೀವನೋಪಾಯ ಒದಗಿಸಬೇಕೆನ್ನುವುದು ಅವರ ಬೇಡಿಕೆ.

1990ರ ದಶಕದ ಉತ್ತರಾರ್ಧದಲ್ಲಿ ಕೆಲಸದಿಂದ ಹೊರಹಾಕಲ್ಪಟ್ಟ ಬಳ್ಳಾರಿಯ ನೂರಾರು ಮಹಿಳಾ ಕೂಲಿಕಾರ್ಮಿಕರಲ್ಲಿ ಇವರೂ ಒಬ್ಬರು. "ಈಗ ನಂಗೆ 65 ವರ್ಷ ಆಗಿದೆ ಅನ್ಕೊ… ಮಷಿನರಿಗಳು ಬಂದ್ಬಿಟ್ಟೋ. ಆವಾಗ ನಾವು ಕೆಲಸ ಬಿಟ್ವಿ… ಈಗ ನಾವು ಕೆಲಸ ಬಿಟ್ಟು ಹತ್ತು ಹದಿನೈದು ವರ್ಷ ಆಗಿರಬಹುದು ನೋಡು…" ಎಂದು ಅವರು ಹೇಳುತ್ತಾರೆ. " ಇದೇ ರೊಕ್ಕ ರೊಕ್ಕ [ಪರಿಹಾರ] ಅಂತ ಇದ್ದವ್ರೆಲ್ಲಾ ಸತ್ತೋಗ್ಬಿಟ್ರು. ಈಗ್ ಬರ್ತೈತಿ ಆಗ್ ಬರ್ತೈತಿ ಅಂತ..ನಮ್ ಯಜಮಾನ ಹೋಗ್ಬಿಟ್ಟಾ... ಈಗ್ ನಾವ್ ಉಳ್ಕೊಂಡ್ವಿ... ಪಾಪಿಗಳು. ಈ ಪಾಪಿಗೆ ಸಿಗ್ತೈತೋ...ನಾವೂ ಕೂಡ ಹೋಗ್ತೀವೋ ಗೊತ್ತಿಲ್ಲ.”

"ನಾವು ಪ್ರತಿಭಟಿಸಲು ಬಂದಿದ್ದೇವೆ. ಎಲ್ಲೆಲ್ಲಿ ಸಭೆ ಇರುತ್ತದೋ ಅಲ್ಲಿ ನಾನು ಭಾಗವಹಿಸುತ್ತೇನೆ. ಈ ಸಲ ಕೊನೆಯದಾಗಿ ಒಮ್ಮೆ ಪ್ರಯತ್ನಿಸಿ ನೋಡೋಣವೆಂದು ಬಂದಿದ್ದೇವೆ” ಎಂದು ಅವರು ಹೇಳುತ್ತಾರೆ.

Left: Women mine workers join the 70 kilometre-protest march organised in October 2022 from Sandur to Bellary, demanding compensation and rehabilitation.
PHOTO • S. Senthalir
Right: Nearly 25,000 mine workers were retrenched in 2011 after the Supreme Court ordered a blanket ban on iron ore mining in Bellary
PHOTO • S. Senthalir

ಎಡ: ಪರಿಹಾರ ಮತ್ತು ಪುನರ್ವಸತಿ ನೀಡಬೇಕೆಂದು ಒತ್ತಾಯಿಸಿ 2022ರ ಅಕ್ಟೋಬರ್‌ ತಿಂಗಳಿನಲ್ಲಿ ಸಂಡೂರಿನಿಂದ ಬಳ್ಳಾರಿಯವರೆಗೆ ಆಯೋಜಿಸಲಾದ 70 ಕಿಲೋಮೀಟರ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಹಿಳಾ ಗಣಿ ಕಾರ್ಮಿಕರು ಭಾಗವಹಿಸಿದರು. ಬಲ: ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ 2011ರಲ್ಲಿ ಸುಮಾರು 25,000 ಗಣಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಯಿತು

*****

ಕರ್ನಾಟಕದ ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ಪ್ರದೇಶಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯು 1800ರ ಇಸವಿಯಷ್ಟು ಹಳೆಯದಾಗಿದ್ದು, ಆಗ ಬ್ರಿಟಿಷ್ ಸರ್ಕಾರವು ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸಿತ್ತು. ಸ್ವಾತಂತ್ರ್ಯದ ನಂತರ, ಭಾರತ ಸರ್ಕಾರ ಮತ್ತು ಬೆರಳೆಣಿಕೆಯಷ್ಟು ಖಾಸಗಿ ಗಣಿ ಮಾಲೀಕರು 1953ರಲ್ಲಿ ಕಬ್ಬಿಣದ ಅದಿರು ಉತ್ಪಾದನೆಯನ್ನು ಪ್ರಾರಂಭಿಸಿದರು; ಅದೇ ವರ್ಷದಲ್ಲಿ 42 ಸದಸ್ಯರೊಂದಿಗೆ ಬಳ್ಳಾರಿ ಜಿಲ್ಲಾ ಗಣಿ ಮಾಲೀಕರ ಸಂಘವನ್ನು ಸ್ಥಾಪಿಸಲಾಯಿತು. ನಲವತ್ತು ವರ್ಷಗಳ ನಂತರ, 1993ರಲ್ಲಿ ತರಲಾದ ರಾಷ್ಟ್ರೀಯ ಖನಿಜ ನೀತಿಯು ಗಣಿಗಾರಿಕೆ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳನ್ನು ಪರಿಚಯಿಸಿತು, ವಿದೇಶಿ ನೇರ ಹೂಡಿಕೆಯನ್ನು ಆಹ್ವಾನಿಸಿತು, ಕಬ್ಬಿಣದ ಅದಿರು ಗಣಿಗಾರಿಕೆಯಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಖಾಸಗಿ ಕಂಪನಿಗಳನ್ನು ಪ್ರೋತ್ಸಾಹಿಸಿತು ಮತ್ತು ಉತ್ಪಾದನೆಯನ್ನು ಉದಾರೀಕರಣಗೊಳಿಸಿತು, ಮುಂದಿನ ಕೆಲವು ವರ್ಷಗಳಲ್ಲಿ ಬಳ್ಳಾರಿಯಲ್ಲಿ ಖಾಸಗಿ ಗಣಿಗಾರಿಕೆ ಕಂಪನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು, ಜೊತೆಗೆ ಗಣಿಗಾರಿಕೆಯಲ್ಲಿ ದೊಡ್ಡ ಪ್ರಮಾಣದ ಯಾಂತ್ರೀಕರಣವನ್ನು ಅಳವಡಿಸಿಕೊಳ್ಳಲಾಯಿತು. ಯಂತ್ರಗಳು ಹೆಚ್ಚಿನ ದೈಹಿಕ ಕೆಲಸಗಳನ್ನು ಆಕ್ರಮಿಸಲು ಪ್ರಾರಂಭಿಸುತ್ತಿದ್ದಂತೆ, ಅದಿರನ್ನು ಅಗೆಯುವುದು, ಪುಡಿಮಾಡುವುದು, ಕತ್ತರಿಸುವುದು ಮತ್ತು ಜರಡಿ ಮಾಡುವ ಕೆಲಸವನ್ನು ಹೊಂದಿದ್ದ ಮಹಿಳಾ ಕಾರ್ಮಿಕರು ಗಣಿಗಾರಿಕೆಯಲ್ಲಿ ಅಪ್ರಸ್ತುತರಾದರು.

ಈ ಬದಲಾವಣೆಗಳು ಕಾಣಿಸಿಕೊಳ್ಳುವ ಮೊದಲು ಗಣಿಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರ ನಿಖರವಾದ ಸಂಖ್ಯೆಯ ಬಗ್ಗೆ ಯಾವುದೇ ದಾಖಲೆಗಳಿಲ್ಲವಾದರೂ, ಪ್ರತಿ ಇಬ್ಬರು ಪುರುಷ ಕಾರ್ಮಿಕರೊಡನೆ ಕನಿಷ್ಠ ನಾಲ್ಕರಿಂದ ಆರು ಮಹಿಳೆಯರು ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದರು ಎಂಬುದು ಇಲ್ಲಿನ ಗ್ರಾಮಸ್ಥರಲ್ಲಿರುವ ಸಾಮಾನ್ಯ ಜ್ಞಾನವಾಗಿದೆ. "ಮೆಷೀನ್‌ಗಳು ಬಂದ ನಂತರ ನಮಗೆ ಕೆಲಸ ಕಡಿಮೆಯಾಗತೊಡಗಿತು. ಕಲ್ಲುಗಳನ್ನು ಒಡೆದು ಲೋಡ್‌ ಮಾಡುವಂತಹ ನಮ್ಮ ಕೆಲಸಗಳನ್ನು ಮೆಷೀನ್‌ಗಳು ಮಾಡತೊಡಗಿದವು” ಎಂದು ಹನುಮಕ್ಕ ನೆನಪಿಸಿಕೊಳ್ಳುತ್ತಾರೆ.

“ಗಣಿ ಮಾಲಿಕರು ನಮಗೆ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದರು. ಲಕ್ಷ್ಮಿ ನಾರಾಯಣ ಮೈನಿಂಗ್ ಕಂಪನಿ (ಎಲ್ಎಂಸಿ) ನಮಗೆ ಪರಿಹಾರವೆಂದು ಏನನ್ನೂ ಕೊಟ್ಟಿಲ್ಲ” ಎಂದು ಅವರು ಹೇಳುತ್ತಾರೆ. “ನಾವು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆವು, ಆದರೆ ನಮಗೆ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ” ಇದೇ ಘಟನೆಯೊಡನೆ ಅವರ ಬದುಕಿನ ಇನ್ನೊಂದು ನೆನಪು ಕೂಡಾ ತಳುಕು ಹಾಕಿಕೊಂಡಿದೆ: ಅದು ಅವರ ನಾಲ್ಕನೇ ಮಗುವಿನ ಜನನ.

2003ರಲ್ಲಿ, ಅವರು ಖಾಸಗಿ ಒಡೆತನದ ಎಲ್ಎಂಸಿಯಲ್ಲಿ ಕೆಲಸ ಕಳೆದುಕೊಂಡ ಕೆಲವು ವರ್ಷಗಳ ನಂತರ, ರಾಜ್ಯ ಸರ್ಕಾರವು 11,620 ಚದರ ಕಿಲೋಮೀಟರ್ ಭೂಮಿಯನ್ನು ಖಾಸಗಿ ಗಣಿಗಾರಿಕೆಗಾಗಿ ಕಾಯ್ದಿರಿಸಿತು. ಇದರೊಂದಿಗೆ, ಚೀನಾದಲ್ಲಿ ಉಂಟಾದ ಅದಿರಿನ ಬೇಡಿಕೆಯಲ್ಲಿನ ಅಭೂತಪೂರ್ವ ಏರಿಕೆಯು, ಈ ವಲಯದಲ್ಲಿನ ಚಟುವಟಿಕೆಯಲ್ಲಿ ತ್ವರಿತ ಬೆಳವಣಿಗೆಗೆ ಕಾರಣವಾಯಿತು. 2006ರಲ್ಲಿ 2.15 ಕೋಟಿ ಮೆಟ್ರಿಕ್ ಟನ್ ಇದ್ದ ಕಬ್ಬಿಣದ ಅದಿರು ರಫ್ತು 2010ರ ವೇಳೆಗೆ ಶೇ.585ರಷ್ಟು ಏರಿಕೆಯಾಗಿ 12.57 ಕೋಟಿ ಮೆಟ್ರಿಕ್ ಟನ್ನುಗಳಿಗೆ ತಲುಪಿತು. ಕರ್ನಾಟಕ ಲೋಕಾಯುಕ್ತದ (ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸುವ ರಾಜ್ಯ ಮಟ್ಟದ ಪ್ರಾಧಿಕಾರ) ವರದಿಯ ಪ್ರಕಾರ, 2011ರ ವೇಳೆಗೆ ಜಿಲ್ಲೆಯಲ್ಲಿ ಸುಮಾರು 160 ಗಣಿಗಳಿದ್ದು, ಸುಮಾರು 25,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದಾಗ್ಯೂ, ಅನಧಿಕೃತ ಅಂದಾಜಿನ ಪ್ರಕಾರ 1.5-2 ಲಕ್ಷ ಕಾರ್ಮಿಕರು ಸ್ಪಾಂಜ್ ಐರನ್ ಉತ್ಪಾದನೆ, ಉಕ್ಕಿನ ಗಿರಣಿಗಳು, ಸಾರಿಗೆ ಮತ್ತು ಭಾರೀ ವಾಹನಗಳ ಕಾರ್ಯಾಗಾರಗಳಂತಹ ಸಂಬಂಧಿತ ಚಟುವಟಿಕೆಗಳ ಕೆಲಸಗಾರರ ಪಟ್ಟಿಗೆ ಸೇರಿಸಲ್ಪಟ್ಟಿದ್ದಾರೆ.

A view of an iron ore mining in Ramgad in Sandur
PHOTO • S. Senthalir
A view of an iron ore mining in Ramgad in Sandur
PHOTO • S. Senthalir

ಸಂಡೂರಿನ ರಾಮಗಡದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯ ನೋಟ

ಉತ್ಪಾದನೆ ಮತ್ತು ಉದ್ಯೋಗಗಳಲ್ಲಿನ ಈ ಏರಿಕೆಯ ಹೊರತಾಗಿಯೂ ಹನುಮಕ್ಕನಂತಹ ಮಹಿಳಾ ಕಾರ್ಮಿಕರಿಗೆ ಗಣಿಗಳಲ್ಲಿ ಮತ್ತೆ ಕೆಲಸ ದೊರೆಯಲಿಲ್ಲ. ಕೆಲಸದಿಂದ ವಜಾಗೊಂಡಿದ್ದಕ್ಕಾಗಿ ಪರಿಹಾರವೂ ದೊರೆಯಲಿಲ್ಲ.

*****

2006 ಮತ್ತು 2010ರ ನಡುವೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ನಡೆಸಲಾದ ಕಂಪನಿಗಳ ವಿವೇಚನಾರಹಿತ ಗಣಿಗಾರಿಕೆಯು ರಾಜ್ಯದ ಬೊಕ್ಕಸಕ್ಕೆ 16,085 ಕೋಟಿ ರೂ.ಗಳ ನಷ್ಟವನ್ನು ಉಂಟುಮಾಡಿದೆ ಎಂದು ವರದಿಯಾಗಿದೆ. ಗಣಿ ಹಗರಣದ ತನಿಖೆಗಾಗಿ ನಿಯೋಜಿಸಲ್ಪಟ್ಟ ಲೋಕಾಯುಕ್ತ ತನ್ನ ವರದಿಯಲ್ಲಿ ಹಲವಾರು ಕಂಪನಿಗಳು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ದೃಢಪಡಿಸಿದೆ; ಇದರಲ್ಲಿ ಹನುಮಕ್ಕ ಕೊನೆಯದಾಗಿ ಕೆಲಸ ಮಾಡಿದ ಲಕ್ಷ್ಮಿ ನಾರಾಯಣ ಮೈನಿಂಗ್ ಕಂಪನಿ ಕೂಡ ಸೇರಿದೆ. ಲೋಕಾಯುಕ್ತ ವರದಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ 2011ರಲ್ಲಿ ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆದೇಶಿಸಿತ್ತು.

ಆದಾಗ್ಯೂ, ಒಂದು ವರ್ಷದ ನಂತರ, ನ್ಯಾಯಾಲಯವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲವೆಂದು ಕಂಡುಬಂದಂತಹ ಕೆಲವು ಗಣಿಗಳನ್ನು ಮತ್ತೆ ತೆರೆಯಲು ಅನುಮತಿ ನೀಡಿತು. ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದಂತೆ, ನ್ಯಾಯಾಲಯವು ಗಣಿ ಕಂಪನಿಗಳನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಿದೆ: 'ಎ', ಯಾವುದೇ ನಿಯಮ ಉಲ್ಲಂಘನೆ ಮಾಡದಿರುವುದು ಅಥವಾ ಕನಿಷ್ಠ ಉಲ್ಲಂಘನೆ; 'ಬಿ', ಕೆಲವು ಉಲ್ಲಂಘನೆಗಳನ್ನು ಮಾಡಿರುವುದು; ಮತ್ತು 'ಸಿ', ಹಲವಾರು ಉಲ್ಲಂಘನೆಗಳನ್ನು ಮಾಡಿರುವ ಸಂಸ್ಥೆಗಳು. ಕನಿಷ್ಠ ಉಲ್ಲಂಘನೆಗಳ ಆರೋಪ ಹೊಂದಿರುವ ಗಣಿಗಳನ್ನು 2012ರಿಂದ ಹಂತ ಹಂತವಾಗಿ ಮತ್ತೆ ತೆರೆಯಲು ಅನುಮತಿಸಲಾಯಿತು. ಸಿಇಸಿ ವರದಿಯು ಗಣಿಗಾರಿಕೆ ಗುತ್ತಿಗೆಯನ್ನು ಪುನರಾರಂಭಿಸಲು ಸಿದ್ಧಪಡಿಸಬೇಕಾದ ಪುನರುಜ್ಜೀವನ ಮತ್ತು ಪುನರ್ವಸತಿ (ಆರ್ & ಆರ್) ಯೋಜನೆಗಳ ಉದ್ದೇಶಗಳು ಮತ್ತು ಮಾರ್ಗಸೂಚಿಗಳನ್ನು ಸಹ ರೂಪಿಸಿದೆ.

ಈ ಅಕ್ರಮ ಗಣಿಗಾರಿಕೆ ಹಗರಣವು ಆಗ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಪತನಕ್ಕೂ ಕಾರಣವಾಯಿತು. ಜೊತೆಗೆ ಬಳ್ಳಾರಿಯಲ್ಲಿನ ನೈಸರ್ಗಿಕ ಸಂಪತ್ತಿನ ಮೇಲೆ ನಡೆದ ವ್ಯಾಪಕ ಶೋಷಣೆಯ ಕುರಿತು ಕೂಡಾ ಗಮನ ಸೆಳೆಯಿತು. ಆದರೆ ಇಲ್ಲಿ ಜನರ ಗಮನಕ್ಕೆ ಬಾರದೆ ಹೋಗಿದ್ದೆಂದರೆ ಯಾವುದೇ ಪರಿಹಾರವಿಲ್ಲದೆ ರಸ್ತೆಗೆ ಬಿದ್ದ 25,000 ಗಣಿ ಕಾರ್ಮಿಕರು. ಇವರು ಎಲ್ಲಿಯೂ ಮುಖ್ಯ ಸುದ್ದಿಯಾಗಲೇ ಇಲ್ಲ.

ಹೀಗೆ ಅನಾಥರಾದ ಕಾರ್ಮಿಕರು ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘವನ್ನು ರಚಿಸಿ ಪರಿಹಾರ ಮತ್ತು ಮರು ಉದ್ಯೋಗಕ್ಕಾಗಿ ಒತ್ತಾಯಿಸಿದರು. ಸಂಘಟನೆಯು ಮೆರವಣಿಗೆಗಳು ಹಾಗೂ ಧರಣಿಗಳನ್ನು ಆಯೋಜಿಸಲು ಆರಂಭಿಸಿತು. ಅಲ್ಲದೆ ಕಾರ್ಮಿಕರ ದುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ 2014ರಲ್ಲಿ 23 ದಿನಗಳ ಉಪವಾಸ ಸತ್ಯಾಗ್ರಹವನ್ನು ಸಹ ಕೈಗೊಂಡಿತು.

Left: A large majority of mine workers, who were retrenched, were not re-employed even after the Supreme Court allowed reopening of mines in phases since 2012.
PHOTO • S. Senthalir
Right: Bellary Zilla Gani Karmikara Sangha has been organising several rallies and dharnas to draw the attention of the government towards the plight of workers
PHOTO • S. Senthalir

ಎಡ: 2012ರಿಂದ ಹಂತಹಂತವಾಗಿ ಗಣಿಗಳನ್ನು ಪುನರಾರಂಭಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರವೂ ಕೆಲಸದಿಂದ ತೆಗೆದುಹಾಕಲ್ಪಟ್ಟ ಗಣಿ ಕಾರ್ಮಿಕರಲ್ಲಿ ಹೆಚ್ಚಿನವರು ಮರು ನೇಮಕಗೊಂಡಿಲ್ಲ. ಬಲ: ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘವು ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಲವಾರು ಪ್ರತಿಭಟನಾ ಮೆರವಣಿಗೆಗಳು ಮತ್ತು ಧರಣಿಗಳನ್ನು ಆಯೋಜಿಸುತ್ತಿದೆ

Hanumakka Ranganna, who believes she is 65, is among the hundreds of women mine manual workers who lost their jobs in the late 1990s
PHOTO • S. Senthalir

1990ರ ದಶಕದ ಉತ್ತರಾರ್ಧದಲ್ಲಿ ಕೆಲಸ ಕಳೆದುಕೊಂಡ ನೂರಾರು ಮಹಿಳಾ ಗಣಿ ಕಾರ್ಮಿಕರಲ್ಲಿ 65 ವರ್ಷದ ಹನುಮಕ್ಕ ರಂಗಣ್ಣ ಕೂಡ ಒಬ್ಬರು

ಗಣಿ ಪ್ರಭಾವಿತ ಪರಿಸರದ ಪುನಶ್ಚೇತನಕ್ಕಾಗಿ ರೂಪಿಸಲಾಗಿರುವ ಸಮಗ್ರ ಪರಿಸರ ಯೋಜನೆಯಡಿ ತಮ್ಮ ಬೇಡಿಕೆಗಳನ್ನೂ ಸೇರಿಸಬೇಕೆಂದು ಸಂಘಟನೆ ಒತ್ತಾಯಿಸುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ, ಬಳ್ಳಾರಿಯ ಗಣಿಗಾರಿಕೆ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಸಂವಹನ ಮತ್ತು ಸಾರಿಗೆ ಮೂಲಸೌಕರ್ಯವನ್ನು ಕೇಂದ್ರೀಕರಿಸಿದ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗಾಗಿ ಮತ್ತು ಈ ಪ್ರದೇಶದ ಪರಿಸರ ಮತ್ತು ಪರಿಸರವನ್ನು ಪುನಃಸ್ಥಾಪಿಸಲು ಕರ್ನಾಟಕ ಗಣಿಗಾರಿಕೆ ಪರಿಸರ ಪುನಃಸ್ಥಾಪನೆ ನಿಗಮವನ್ನು 2014ರಲ್ಲಿ ಸ್ಥಾಪಿಸಲಾಯಿತು. ಪರಿಹಾರ ಮತ್ತು ಪುನರ್ವಸತಿಗಾಗಿ ತಮ್ಮ ಬೇಡಿಕೆಯನ್ನು ಈ ಯೋಜನೆಯಲ್ಲಿ ಸೇರಿಸಬೇಕೆನ್ನುವುದು ಕಾರ್ಮಿಕರ ಬಯಕೆ. ತಾವು ಸುಪ್ರೀಂ ಕೋರ್ಟ್ ಮತ್ತು ಕಾರ್ಮಿಕ ನ್ಯಾಯಮಂಡಳಿಗಳಲ್ಲಿ ಅರ್ಜಿಗಳನ್ನು ಸಹ ಸಲ್ಲಿಸಿರುವುದಾಗಿ ಒಕ್ಕೂಟದ ಅಧ್ಯಕ್ಷ ಗೋಪಿ ವೈ ಹೇಳುತ್ತಾರೆ.

ಈ ರೀತಿಯಾಗಿ ಒಗ್ಗೂಡಿದ ಸಂಘಟನೆಯನ್ನು ಕಂಡ ಹನುಮಕ್ಕನವರಿಗೆ ಈ ಸಂಘಟನೆ ಅನ್ಯಾಯವಾಗಿ ಕೆಲಸದಿಂದ ವಜಾ ಮಾಡಲ್ಪಟ್ಟ ಮಹಿಳಾ ಕಾರ್ಮಿಕರಿಗೂ ನ್ಯಾಯ ಕೊಡಿಸಬಲ್ಲದು ಎನ್ನಿಸಿತು. ಇದರೊಂದಿಗೆ ಅವರು ಪರಿಹಾರ ಮತ್ತು ಪುನರ್ವಸತಿಗಾಗಿ ಕೋರಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಲು ಅವರು 4,000ಕ್ಕೂ ಹೆಚ್ಚು ಕಾರ್ಮಿಕರೊಂದಿಗೆ (2011ರಲ್ಲಿ ವಜಾಗೊಂಡ 25,000 ಕಾರ್ಮಿಕರಲ್ಲಿ) ಸೇರಿಕೊಂಡರು. 1992-1995ರವರೆಗೆ ನಾವು ಬರಿಯ ಹೆಬ್ಬೆಟ್ಟುಗಳಾಗಿದ್ದೆವು. ಆಗ ಮುಂದಾಳತ್ವ ವಹಿಸಿ ಮಾತನಾಡುವವರೇ ಇದ್ದಿರಲಿಲ್ಲ [ಕಾರ್ಮಿಕರ ಪರವಾಗಿ]” ಎಂದು ತಾನು ಕಾರ್ಮಿಕ ಸಂಘಟನೆಯಿಂದ ಪಡೆದ ಬಲ ಮತ್ತು ಬೆಂಬಲದ ಕುರಿತಾಗಿ ಹೇಳುತ್ತಾರೆ. “ಎಲ್ಲೆಲ್ಲಿ – [ಸಂಘಟನೆಯ] ಒಂದ್ ಸಭೆ ಬಿಟ್ಟಿಲ್ಲ ನೋಡು. ಹಂಗ್ ಓಡಾಡಿದೀವೀ. ಹೊಸಪೇಟೆ, ಬಳ್ಳಾರಿ, ಎಲ್ಲ ಕಡಿಗೆ ಹೋಗಿದ್ವಿ ನಾವು...ಎಲ್ಲರೂ ಹೋಗಿದ್ವಿ...ನಾವು ಒಂದ್ ಐದು ಮಂದಿ ಯಾರು ತಪ್ಸಿಲ್ಲ. ಸರಕಾರ ನಮಗೆ ಕೊಡಬೇಕಿರುವುದನ್ನು ಕೊಡಲಿ” ಎನ್ನುತ್ತಾರೆ ಹನುಮಕ್ಕ

*****

ತಾನು ಗಣಿ ಕೆಲಸಕ್ಕೆ ಸೇರಿ ಎಷ್ಟು ವರ್ಷಗಳಾದವು ಎನ್ನುವುದು ಹನುಮಕ್ಕನಿಗೆ ನೆನಪಿಲ್ಲ. ಅವರು ರಾಜ್ಯದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿರುವ ವಾಲ್ಮೀಕಿ ಸಮುದಾಯದಲ್ಲಿ ಜನಿಸಿದರು. ಬಾಲ್ಯದಲ್ಲಿ ಅವರ ಮನೆ ಕಬ್ಬಿಣದ ಅದಿರು ನಿಕ್ಷೇಪಗಳಿಂದ ಸಮೃದ್ಧವಾಗಿದ್ದ ಬೆಟ್ಟಗಳಿಂದ ಸುತ್ತುವರೆದಿದ್ದ ಊರಾದ ಸುಶೀಲಾನಗರದಲ್ಲಿತ್ತು. ಅಲ್ಲಿನ ಅಂಚಿನಲ್ಲಿದ್ದ ಸಮುದಾಯಗಳು ತಮ್ಮ ಹೊಟ್ಟೆಪಾಡಿಗಾಗಿ ಯಾವು ಕೆಲಸ ಮಾಡುತ್ತಿದ್ದರೋ ಹನುಮಕ್ಕ ಕೂಡಾ ಅದೇ ಕೆಲಸದಲ್ಲಿ ತೊಡಗಿದರು – ಅವರು ಗಣಿಗಳಲ್ಲಿ ಕೆಲಸ ಮಾಡತೊಡಗಿದರು.

“ನನ್‌ ಲೈಫ್‌ನಾಗ ನಾನ್ ಸಣ್ಣಾಕಿ ಇದ್ದಾಗಿಂದ್ಲೂ [ಗಣಿಯಲ್ಲಿ] ಕೆಲಸ ಮಾಡೀನಿ” ‍ಎಂದು ಅವರು ಹೇಳುತ್ತಾರೆ. “ನಾನು ಹಲವಾರು ಗಣಿ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ, ಕಲ್ಲು... ಒಬ್ರು ಹಿಂಗೆ ತಿರ್ವೋದು ಒಬ್ರು ನೀರು ಹಾಕೋದು...ಮ್ಯಾಲೆ ರಪ್ಪ ರಪ್ಪ ರಪ್ಪಾ...ಬಡಿಯೋದು ಬದಿಯೋದು...ಹಿಂಗೆ ತಿರುವ್ತಿದ್ದರೇ ನಾವೂ ಹಿಂಗೆ ಹೊಡಿಬೇಕು. ಎಲ್ಲ ಕಷ್ಟ ಬಿದ್ವಿ ಬಿಡು...ನಮ್ ಕಷ್ಟ ಯಾರು ಬೀಳಲ್ಲ ಈಗ. ಇಂಥಾ ಗುಂಡು ಸುತ್ತಿ ತೊಗೊಂಡು ಹೊಡ್ದು ಈ ಈ ಸೈಜ್ ಮಾಡ್ಕೊಡ್ತಿದ್ವಿ.” ಸಣ್ಣ ವಯಸ್ಸಿನಲ್ಲೇ ಅವರು ಬೆಟ್ಟ ಹತ್ತುವುದರಲ್ಲಿ ಪಳಗಿದ್ದರು, ಶಿಲೆಗಳಲ್ಲಿ ರಂಧ್ರ ಕೊರೆಯಲು ಜಂಪರ್‌ ಬಳಸುತ್ತಿದ್ದರು. ಅವುಗಳನ್ನು ಸ್ಫೋಟಿಸಲು ರಾಸಾಯನಿಕ ತುಂಬುವ ಕೆಲಸವನ್ನು ಸಹ ಮಾಡುತ್ತಿದ್ದರು. ಅದಿರು ಗಣಿಗಾರಿಕೆಯಲ್ಲಿ ಬಳಸಲಾಗುವ ಎಲ್ಲಾ ಭಾರದ ಉಪಕರಣಗಳನ್ನು ಬಳಸುವ ಪರಿಣತಿ ಅವರಿಗಿತ್ತು. “ಆವಾಗ ಮಿಷಿನರಿ ಇರಲಿಲ್ಲಮ್ಮ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಹೆಂಗಸರು ಜೋಡಿಯಾಗಿ ಕೆಲಸ ಮಾಡುತ್ತಿದ್ದೆವು [ಬ್ಲಾಸ್ಟಿಂಗಿನ ನಂತರ] ಒಬ್ಬರು ಸಡಿಲವಾಗಿರುವ ಅದಿರಿನ ತುಣುಕುಗಳನ್ನು ಅಗೆದು ತೆಗೆದರೆ ಇನ್ನೊಬ್ಬರು ಅದನ್ನು ಸಣ್ಣ ತುಣುಕುಗಳನ್ನಾಗಿ ಒಡೆಯುತ್ತಿದ್ದರು. ಶಿಲೆಗಳನ್ನು ಮೂರು ಮಾದರಿಗಳಲ್ಲಿ ಒಡೆಯುತ್ತಿದ್ದೆವು. ಅದಿರಿನಲ್ಲಿದ್ದ ಧೂಳನ್ನು ಜರಡಿ ಮಾಡಿದ ನಂತರ ಮಹಿಳೆಯರು ಅದಿರನ್ನು ತಲೆಯ ಮೇಲೆ ಹೊತ್ತು ಟ್ರಕ್ಕುಗಳಿಗೆ ಲೋಡ್‌ ಮಾಡುತ್ತಿದ್ದರು. ಎಲ್ಲ ಕಷ್ಟ ಬಿದ್ವಿ ಬಿಡು. ನಮ್‌ ಕಷ್ಟ ಯಾರೂ ಬೀಳಲ್ಲ ಈಗ.”

“ನನ್ನ ಗಂಡ ಕುಡುಕನಾಗಿದ್ದ. ಐದು ಹೆಣ್ಣು ಮಕ್ಕಳನ್ನು ನಾನೇ ಸಾಕಬೇಕಾಯಿತು. ಆ ಥರ ಹಂಗ್ ಕಸ್ಟ್ ಬಿದ್ವಿಯಮ್ಮ ನಾವು. ಆವಾಗ ನಮಿಗೆ ಎಂಟಾಣಿಗೆ (50) ಒಂದ್ ಟನ್ ಅಂತ ಆಗ. ಅವಾಗ ಊಟದ್ದೆ ಭಾಳ ಕಷ್ಟ... ಒಂದ್ ಆಳಿಗೆ ಅರ್ಧ ರೊಟ್ಟಿ... ಆವಾಗ ಹೊಲದಾಗ ಪಲ್ಯ ಬೆಳಿತಿತ್ತಲ್ಲಾ. ಹರ್ಕೊಂಡ್ ಬರೋರ... ಉಪ್‌ ಹಾಕಿ … ಕುಚ್‌ ಬಿಡೋದ್... ಉಂಡೆ ಮಾಡಿ ಬಿಡೋದ್ …ಒಂದೊಂದ್ ಉಂಡೆ ಒಬ್ಬಬ್ಬರಿಗೆ ಪಲ್ಲೆ...ಉಂಡೆ ಉಂಡೆ ತೆಗ್ಬಿಡೋದು.‌ ನಿನಗೆ ಒಂದ್ ಉಂಡೆ ಅರ್ದ ರೊಟ್ಟಿ....ಪಲ್ಯನೆ ಹೊಟ್ಟೆ ತುಂಬ್ತಿತಿರೋದು. ಬದ್ನೆಕಾಯಿ ಚಟ್ನಿ...ಇಷ್ಟು ದಪ್ಪ...ಇಷ್ಟು ಉದ್ದ...ಆ ಬದ್ನೆಕಾಯೀನ ಕಟಿಗೆ ಬೆಂಕಿಯಾಗ ಹಾಕ್ಬಿಡೋದು. ಫುಲ್ ತೇದ್ ಬಿಡೋದು. ಬಿಚ್ಚೋದು...ಬಿಚ್ಚಿ ಅದಕ್ಕೆ ಉಪ್ಪು ಸೌರ್ಬಿ ಡೋದು...ಸೌರಿ...ಅದನ್ನೇ ತಿಂದು ನೀರು ಕೂಡು ಮಕ್ಕೊಂಡ್ಬಿಡೋದು...ಹಾಂಗೆಲ್ಲಾ ಕಾಲ ಕಳಿದ್ವಮ್ಮ ನಾವು." ಶೌಚಾಲಯಗಳು, ಕುಡಿಯುವ ನೀರು ಅಥವಾ ರಕ್ಷಣಾ ಸಾಧನಗಳಿಲ್ಲದೆ ಕೆಲಸ ಮಾಡುತ್ತಿದ್ದ ಹನುಮಕ್ಕನಿಗೆ ಹೊಟ್ಟೆ ತುಂಬುವಷ್ಟು ಸಂಪಾದನೆ ಮಾಡುವುದು ಸಾಧ್ಯವಾಗಿರಲಿಲ್ಲ.

At least 4,000-odd mine workers have filed a writ-petition before the Supreme Court, demanding compensation and rehabilitation
PHOTO • S. Senthalir

ಕನಿಷ್ಠ 4,000 ಗಣಿ ಕಾರ್ಮಿಕರು ಪರಿಹಾರ ಮತ್ತು ಪುನರ್ವಸತಿ ಕೋರಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ

Hanumakka Ranganna (second from left) and Hampakka Bheemappa (third from left) along with other women mine workers all set to continue the protest march, after they had stopped at Vaddu village in Sandur to rest
PHOTO • S. Senthalir

ಹನುಮಕ್ಕ ರಂಗಣ್ಣ (ಎಡದಿಂದ ಎರಡನೆಯವರು) ಮತ್ತು ಹಂಪಕ್ಕ ಭೀಮಪ್ಪ (ಎಡದಿಂದ ಮೂರನೆಯವರು) ಮತ್ತು ಇತರ ಮಹಿಳಾ ಗಣಿ ಕಾರ್ಮಿಕರು ವಿಶ್ರಾಂತಿಗಾಗಿ ಸಂಡೂರಿನ ವಡ್ಡು ಗ್ರಾಮದಲ್ಲಿ ನಿಂತ ನಂತರ ಪ್ರತಿಭಟನಾ ಮೆರವಣಿಗೆಯನ್ನು ಮುಂದುವರಿಸಲು ಸಜ್ಜಾಗಿದ್ದಾರೆ

ಅವರ ಊರಿನ ಮತ್ತೊಬ್ಬ ಗಣಿ ಕಾರ್ಮಿಕರಾದ ಹಂಪಕ್ಕ ಭೀಮಪ್ಪನ ಎನ್ನುವವರ ಕತೆಯೂ ಇದೇ ರೀತಿಯಿದೆ. ಪರಿಶಿಷ್ಟ ಜಾತಿಯಡಿ ಪಟ್ಟಿ ಮಾಡಲಾಗಿರುವ ಸಮುದಾಯಕ್ಕೆ ಸೇರಿದವರಾದ ಅವರು ಭೂರಹಿತ ಕೃಷಿ ಕಾರ್ಮಿಕರೊಬ್ಬರನ್ನು ಮದುವೆಯಾದರು. “ನನಗೆ ಮದುವೆಯಾದಾಗ ಎಷ್ಟು ವಯಸ್ಸಾಗಿತ್ತು ಎನ್ನುವುದು ಕೂಡಾ ನೆನಪಿಲ್ಲ. ಸಣ್ಣ ಹುಡುಗಿಯಾಗಿದ್ದಾಗಲೇ ಕೆಲಸ ಮಾಡಲು ಆರಂಭಿಸಿದೆ. ಇನ್ನೂ ಆಗ ನಾನು ದೊಡ್ಡಾಕಿ ಆಗಿರ್ಲಿಲ್ಲ” ಎಂದು ಅವರು ಹೇಳುತ್ತಾರೆ. “75 [ಟನ್ನಿಗೆ] ಪೈಸೆಯಿಂದ ಮಾಡಿವ್ನಿ ನೋಡು ನಾನು. 75 ಪೈಸೆ ಕೂಲಿ ಕೊಟ್ರೆ ವಾರದತಂಕ ದುಡಿದ್ರೆ 7 ರೂಪಾಯಿ ಕೂಡ ಬರ್ತಿರ್ಲಿಲ್ಲಮ್ಮ... ಅತ್ಕೋತ ಬಂದೀವ್ನಿ ನಾನು. ಇಷ್ಟೇ ಕೊಟ್ಟರಲ್ಲ ನಮಗೆ ಪಗಾರು ಅಂತ.”

ಐದು ವರ್ಷಗಳ ಕಾಲ ದಿನಕ್ಕೆ 75 ಪೈಸೆ ಸಂಪಾದಿಸುತ್ತಿದ್ದ ಹಂಪಕ್ಕ ಅವರಿಗೆ ನಂತರ 75 ಪೈಸೆ ಹೆಚ್ಚಳ ಮಾಡಲಾಗಿತ್ತು. ಮುಂದಿನ ನಾಲ್ಕು ವರ್ಷಗಳವರೆಗೆ, ಅವರು ದಿನಕ್ಕೆ 1.50 ರೂ.ಗಳನ್ನು ಗಳಿಸಿದರು, ನಂತರ ಅವರಿಗೆ 50 ಪೈಸೆಯ ಮತ್ತೊಂದು ವೇತನ ಏರಿಕೆ ನೀಡಲಾಯಿತು. "ನಾನು 10 ವರ್ಷಗಳ ನಂತರ ದಿನಕ್ಕೆ 2 ರೂಪಾಯಿಗಳನ್ನು ಸಂಪಾದಿಸುತ್ತಿದ್ದೆ [ಒಂದು ಟನ್ ಅದಿರನ್ನು ಒಡೆಯಲು]" ಎಂದು ಅವರು ಹೇಳುತ್ತಾರೆ. "ನಾನು ಪ್ರತಿ ವಾರ 1.50 ರೂಪಾಯಿಗಳನ್ನು ಸಾಲದ ಮೇಲಿನ ಬಡ್ಡಿಯಾಗಿ ಪಾವತಿಸುತ್ತಿದ್ದೆ ಮತ್ತು 10 ರೂಪಾಯಿ ಸಂತೆಗೆ ಖರ್ಚಾಗುತ್ತಿತ್ತು... ಅಗ್ಗವಾಗಿ ಸಿಗುತ್ತಿದ್ದ ಕಾರಣ ನುಚ್ಚಕ್ಕಿ ಖರೀದಿಸುತ್ತಿದ್ದೆವು."

ಆಗ ಹೆಚ್ಚು ಸಂಪಾದಿಸಲು ಅವರಿಗೆ ಹೊಳೆದ ಒಳ್ಳೆಯ ದಾರಿಯೆಂದರೆ ಹೆಚ್ಚು ಹೆಚ್ಚು ದುಡಿಯುವುದು. ಬೆಳಗಿನ ನಾಲ್ಕು ಗಂಟೆಗೆ ಎದ್ದು ಆಹಾರ ತಯಾರಿಸಿ ಕಟ್ಟಿಕೊಂಡು 6 ಗಂಟೆಗೆ ಕೆಲಸಕ್ಕೆ ಹೊರಟು ಗಣಿಗಳಿಗೆ ಹೋಗುವ ಲಾರಿಗಳಿಗಾಗಿ ಕಾಯುತ್ತಿದ್ದರು. ಬೇಗ ಹೋದರೆ ಒಂದಷ್ಟು ಹೆಚ್ಚು ಅದಿರು ಒಡೆಯಬಹುದೆನ್ನುವುದು ಅವರ ಯೋಚನೆ. “ಆಗ ಊರಿನಿಂದ ಬಸ್ಸುಗಳಿರಲಿಲ್ಲ. ನಾವು [ಟ್ರಕ್‌] ಚಾಲಕನಿಗೆ 10 ಪೈಸೆ ಕೊಟ್ಟು ಹೋಗುತ್ತಿದ್ದೆವು. ಮುಂದೆ ಅದು 50 ಪೈಸೆಗಳಿಗೆ ಏರಿತು” ಎಂದು ಹಂಪಕ್ಕ ನೆನಪಿಸಿಕೊಳ್ಳುತ್ತಾರೆ.

ಸಂಜೆ ಮನೆಗೆ ಮರಳುವುದು ಕೂಡಾ ಸುಲಭದ ಕೆಲಸವಾಗಿರಲಿಲ್ಲ. ನಾಲ್ಕೈದು ಇತರ ಕಾರ್ಮಿಕರೊಂದಿಗೆ ಅದಿರು ತುಂಬಿದ ಲಾರಿಯಲ್ಲಿ ಬರಬೇಕಿತ್ತು. “ಕೆಲವೊಮ್ಮೆ ಲಾರಿ ತೀವ್ರ ತಿರುವು ತೆಗೆದುಕೊಂಡಾಗ ನಮ್ಮಲ್ಲಿ ಮೂರ್ನಾಲ್ಕು ಜನರು ರಸ್ತೆಗೆ ಬೀಳುತ್ತಿದ್ದೆವು. ಆದರೆ ಎಂದೂ ನೋವಾಗಿದ್ದಿಲ್ಲ. ಮತ್ತೆ ಅದೇ ಲಾರಿ ಹತ್ತಿ ಮನೆಗೆ ಬರುತ್ತಿದ್ದೆವು.” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅವರು ಹೆಚ್ಚುವರಿ ಅದಿರು ಒಡೆದಿದ್ದರೂ ಅದಕ್ಕೆ ಹಣ ಕೊಡುತ್ತಿರಲಿಲ್ಲ. “ನಾವು ಮೂರು ಟನ್‌ ಅದಿರು ಬೇರ್ಪಡಿಸಿದ್ದರೆ ಕೇವಲ ಎರಡು ಟನ್ನುಗಳಿಗೆ ಮಾತ್ರ ಹಣ ನೀಡಲಾಗುತ್ತಿತ್ತು. ಏನನ್ನೂ ಪ್ರಶ್ನಿಸುವ ಸ್ಥಿತಿಯಲ್ಲಿ ನಾವಿರಲಿಲ್ಲ ಆಗ.”

Mine workers stop for breakfast in Sandur on the second day of the two-day padayatra from Sandur to Bellary
PHOTO • S. Senthalir
Mine workers stop for breakfast in Sandur on the second day of the two-day padayatra from Sandur to Bellary
PHOTO • S. Senthalir

ಸಂಡೂರಿನಿಂದ ಬಳ್ಳಾರಿಯವರೆಗಿನ ಎರಡು ದಿನಗಳ ಪಾದಯಾತ್ರೆಯ ಎರಡನೇ ದಿನ ಸಂಡೂರಿನಲ್ಲಿ ಉಪಾಹಾರಕ್ಕಾಗಿ ನಿಂತಿರುವ ಗಣಿ ಕಾರ್ಮಿಕರು

Left: Hanumakka (centre) sharing a light moment with her friends during the protest march.
PHOTO • S. Senthalir
Right: Hampakka (left) along with other women mine workers in Sandur
PHOTO • S. Senthalir

ಎಡ: ಹನುಮಕ್ಕ (ಮಧ್ಯ) ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ ತನ್ನ ಸಹಜೀವಿಗಳೊಂದಿಗೆ ಸಂತಸದ ಕ್ಷಣವೊಂದರಲ್ಲಿ. ಬಲ: ಹಂಪಕ್ಕ (ಎಡ) ಮತ್ತು ಸಂಡೂರಿನ ಇತರ ಮಹಿಳಾ ಗಣಿ ಕಾರ್ಮಿಕರು

ಆಗಾಗ ಅದಿರು ಕಳ್ಳತನವಾಗುತ್ತಿತ್ತು. ಇದಕ್ಕಾಗಿ ಮೇಸ್ತ್ರಿ ಸಂಬಳ ನಿರಾಕರಿಸುವ ಮೂಲಕ ಕಾರ್ಮಿಕರಿಗೆ ದಂಡ ವಿಧಿಸುತ್ತಿದ್ದ. “ವಾರಕ್ಕೆ ಮೂರ್ನಾಲ್ಕು ಬಾರಿ ನಾವು ಅಲ್ಲೇ ಉಳಿದುಕೊಳ್ಳುತ್ತಿದ್ದೆವು. ದೀಪ ಹಚ್ಚಿ ಅಲ್ಲೇ ನೆಲದ ಮಲಗುತ್ತಿದ್ದೆವು. ಕಲ್ಲುಗಳನ್ನು [ಅದಿರು] ರಕ್ಷಿಸಿ ನಮ್ಮ ಸಂಬಳ ಪಡೆಯಲು ಇದನ್ನು ಮಾಡುವುದು ನಮಗೆ ಅನಿವಾರ್ಯವಾಗಿತ್ತು.”

ಗಣಿಯಲ್ಲಿ 16ರಿಂದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಕಾರಣ ಕಾರ್ಮಿಕರಿಗೆ ಮೂಲಭೂತ ಸ್ವಚ್ಛತೆ ಕಡೆಗೂ ಗಮನ ನೀಡಲಾಗುತ್ತಿರಲಿಲ್ಲ. “ನಾವು ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದೆವು. ಅದು ಸಂತೆಗೆ ಹೋಗುವ ದಿನ.”

1998ರಲ್ಲಿ ಈ ಮಹಿಳೆಯರನ್ನು ಕೆಲಸದಿಂದ ವಜಾ ಮಾಡುವ ಸಮಯದಲ್ಲಿ ಇವರಿಗೆ ಟನ್‌ ಒಂದಕ್ಕೆ ಹದಿನೈದು ರೂಪಾಯಿಗಳನ್ನು ನೀಡಲಾಗುತ್ತಿತ್ತು. ಆಗ ಅವರು ದಿನವೊಂದಕ್ಕೆ ಐದು ಟನ್‌ ಅದಿರನ್ನು ಲೋಡ್‌ ಮಾಡಿ 75 ರೂ. ಮನೆಗೆ ಕೊಂಡೊಯ್ಯುತ್ತಿದ್ದರು. ದೊಡ್ಡ ಪ್ರಮಾಣದ ಅದಿರುಗಳನ್ನು ವಿಂಗಡಿಸಿದರೆ ದಿನಕ್ಕೆ 100 ರೂಪಾಯಿ ಸಿಗುತ್ತಿತ್ತು.

ಗಣಿ ಕೆಲಸ ಇಲ್ಲವಾದ ನಂತರ ಹನುಮಕ್ಕ ಮತ್ತು ಹಂಪಮ್ಮ ಬದುಕು ನಡೆಸುವುದಕ್ಕಾಗಿ ಕೃಷಿ ಕೆಲಸಗಳತ್ತ ಗಮನಹರಿಸಿದರು. “ನಮಗೆ ಕೂಲಿ ಕೆಸವಷ್ಟೇ ಸಿಕ್ಕಿತು. ಕಳೆ ತೆಗೆಯುವುದು, ಕಲ್ಲು ಹೆಕ್ಕುವುದು ಮತ್ತು ಜೋಳ ಕೊಯ್ಲು ಮಾಡುವ ಕೆಲಸಗಳಿಗೆ ಹೋಗುತ್ತಿದ್ದೆವು. ಒಂದು ಕಾಲದಲ್ಲಿ ದಿನಕ್ಕೆ ಐದು ರೂಪಾಯಿಗೆ ಕೂಲಿ ಮಾಡಿದ್ದೆವು. ಈಗ 200 ರೂಪಾಯಿ ಕೊಡುತ್ತಾರೆ.” ಎಂದು ಹನುಮಕ್ಕ ಹೇಳುತ್ತಾರೆ. ಮಗಳು ಅವರ ಕಾಳಜಿ ವಹಿಸಿಕೊಳ್ಳುತ್ತಿರುವುದರಿಂದ ಹನುಮಮಕ್ಕ ಈಗ ಹೆಚ್ಚು ಕೆಲಸಕ್ಕೆ ಹೋಗುತ್ತಿಲ್ಲ. ಹಂಪಮ್ಮ ಕೂಡ ಮಗನ ಜೊತೆ ಇರಲು ಆರಂಭಿಸಿದಾಗಿನಿಂದ ತಾವು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ.

“ನಮ್ಮ ಮೈಮ್ಯಾಗಿನ ರಕ್ತಾನ... ಕಲ್ಲಿಗೆ ಒಂದೀಟು ರಕ್ತ ಕೊಟ್ಟು ಕೆಲ್ಸ ಮಾಡಿವಿವಮ್ಮಾ... ನಮ್ದು ಯವ್ವನ ಎಲ್ಲ ಕಲ್ಲಿಗೆ ಕೊಟ್ಟು... ಸಿಪ್ಪೆ ಹಂಗೆ ನಮ್ಮನ್ನ ಹಿಂಡಿ ತೆಗ್ದುಬಿಟ್ಟಾರ.” ಎಂದು ಹನುಮಕ್ಕ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

S. Senthalir

ಸೆಂದಳಿರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರು. ಅವರು ಲಿಂಗ, ಜಾತಿ ಮತ್ತು ಶ್ರಮದ ವಿಭಜನೆಯ ಬಗ್ಗೆ ವರದಿ ಮಾಡುತ್ತಾರೆ. ಅವರು 2020ರ ಪರಿ ಫೆಲೋ ಆಗಿದ್ದರು

Other stories by S. Senthalir
Editor : Sangeeta Menon

ಸಂಗೀತಾ ಮೆನನ್ ಮುಂಬೈ ಮೂಲದ ಬರಹಗಾರು, ಸಂಪಾದಕರು ಮತ್ತು ಸಂವಹನ ಸಲಹೆಗಾರರು.

Other stories by Sangeeta Menon
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru