ಭುವನೇಶ್ವರದಲ್ಲಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಮತ್ತು ನಂತರ ರಾಜ್ ಭವನದಲ್ಲಿ ಚಹಾ ಸೇವಿಸಲು ಒಡಿಶಾದ ರಾಜ್ಯಪಾಲರು ಮತ್ತು ಅವರ ಪತ್ನಿ ಲಕ್ಷ್ಮಿ 'ಇಂದಿರಾ' ಪಾಂಡಾರಿಗೆ ಆಹ್ವಾನವನ್ನು ಕಳುಹಿಸಿದ್ದರು. ಈ ಆಹ್ವಾನದೊಂದಿಗೆ ಕಾರಿಗೆ ವಿಶೇಷ 'ಪಾರ್ಕಿಂಗ್ ಪಾಸ್' ಸಹ ಕಳುಹಿಸಲಾಗಿತ್ತು. ಆದರೆ, ಈ ಆಹ್ವಾನಕ್ಕೆ ಲಕ್ಷ್ಮಿ ಪಾಂಡ ಉತ್ತರಿಸಲಿಲ್ಲ. ಅವರ ಸ್ವಾತಂತ್ರ್ಯ ದಿನದ ಆಚರಣೆಯಲ್ಲಿಯೂ ಅವರು ಭಾಗವಹಿಸಲಿಲ್ಲ.

ಲಕ್ಷ್ಮಿ ಪಾಂಡಾ ಅವರ ಬಳಿ ಯಾವುದೇ ಕಾರಿಲ್ಲ, ಅವರು ಕೊರಾಪುಟ್‌ ಜಿಲ್ಲೆಯ ಜಯಪುರ ಪಟ್ಟಣದ ಚಾಳ್‌ನಲ್ಲಿರುವ ಸಣ್ಣ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಈ ಕೋಣೆಯು ಅವರು ಎರಡು ದಶಕಗಳ ಕಾಲ ಕೊಳಗೇರಿಯೊಂದರಲ್ಲಿ ವಾಸಿಸುತ್ತಿದ್ದ ಮನೆಗಿಂತ ಉತ್ತಮವಾಗಿದೆ. ಕಳೆದ ವರ್ಷ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಅವರ ಹಿತೈಷಿಗಳು ಅವರಿಗೆ ಟಿಕೇಟ್‌ ಖರೀದಿಸಿ ನೀಡಿದ್ದರು.ಆದರೆ ಈ ವರ್ಷ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರು ತಮಗೆ ಬಂದಿದ್ದ ಆಹ್ವಾನ ಪತ್ರಿಕೆಯನ್ನು ತೋರಿಸಿ ನಕ್ಕರು. ಅವರಿಗೆ ಕಾರಿನೊಂದಿಗೆ ಇರುವ ಏಕೈಕ ಸಂಬಂಧವೆಂದರೆ: "ನಾಲ್ಕು ದಶಕಗಳ ಕೆಳಗೆ ನನ್ನ ದಿವಂಗತ ಪತಿ ಕಾರಿನ ಚಾಲಕನಾಗಿದ್ದರು." ಇಂಡಿಯನ್‌ ನ್ಯಾಷನಲ್‌ ಆರ್ಮಿಯ (ಎಎನ್‌ಐ) ಸೈನಿಕರಾಗಿದ್ದ ಅವರು ತಾನು ಬಂದೂಕು ಹಿಡಿದು ನಿಂತಿರುವ ಚಿತ್ರವನ್ನು ಇಂದಿಗೂ ಹೆಮ್ಮೆಯಿಂದ ಸಂರಕ್ಷಿಸಿ ಇರಿಸಿಕೊಂಡಿದ್ದಾರೆ.

Laxmi Panda outside her home
PHOTO • P. Sainath

ವ್ಯವಸ್ಥೆಯ ನಿರ್ಲ್ಯಕ್ಷದ ಕಾರಣದಿಂದಾಗಿ ಈ ಸ್ವಾತಂತ್ರ್ಯ ಸೇನಾನಿ ವಠಾರವೊಂದರ ಮುರುಕು ಮನೆಯಲ್ಲಿ ವಾಸಿಸಬೇಕಾಗಿದೆ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಗ್ರಾಮೀಣ ಭಾರತೀಯರಲ್ಲಿ ಲಕ್ಷ್ಮಿ ಕೂಡಾ ಒಬ್ಬರು. ಇವರು ನಾಯಕರು, ಮಂತ್ರಿಗಳು ಅಥವಾ ರಾಜ್ಯಪಾಲರಾಗಿ ಪ್ರಸಿದ್ಧರಾಗಲು ಹೋಗದೆ ಜನಸಮಾನ್ಯರಂತೆ ಬದುಕಿದವರು. ಸ್ವಾತಂತ್ರ್ತ ಹೋರಾಟದಲ್ಲಿ ದೊಡ್ಡ ತ್ಯಾಗ ಮಾಡಿ ಸ್ವಾತಂತ್ರ್ಯ ದೊರೆತ ನಂತರ ಎಂದಿನ ಸಾಮಾನ್ಯ ಜೀವನಕ್ಕೆ ಮರಳಿದವರು. ಈಗ ದೇಶವು ತನ್ನ 60ನೇ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುತ್ತಿರುವ ಈ ಹೊತ್ತು ಅವರಲ್ಲಿ ಬಹುಪಾಲು ಜನರು ತಮ್ಮ ಬದುಕು ಮುಗಿಸಿ ನಿರ್ಗಮಿಸಿದ್ದಾರೆ. ಉಳಿದಿರುವ ಕೆಲವರು ತಮ್ಮ 80 ಅಥವಾ 90 ರ ದಶಕದ ಅಂತ್ಯದಲ್ಲಿದ್ದಾರೆ ಮತ್ತು ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. (ಲಕ್ಷ್ಮಿಯವರು ಇದಕ್ಕೆ ಅಪವಾದ ತನ್ನ ತೀರಾ ಸಣ್ಣ ಪ್ರಾಯದಲ್ಲಿ ಐಎನ್‌ಎಗೆ ಸೇರಿಕೊಂಡು ಈಗ 80ರ ವಯಸ್ಸಿನಲ್ಲಿದ್ದಾರೆ). ದೇಶದ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ವೇಗವಾಗಿ ಕ್ಷೀಣಿಸುತ್ತಿದೆ.

ಒಡಿಶಾ ರಾಜ್ಯ ಸರಕಾರವು ಲಕ್ಷ್ಮಿಯವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಿ ಮಾನ್ಯತೆ ನೀಡಿದೆ. ಇದರ ಭಾಗವಾಗಿ ಅವರಿಗೆ ಮಾಸಿಕ ಪಿಂಚಣಿಯಾಗಿ 700 ರೂಪಾಯಿಗಳು ಸರಕಾರದಿಂದ ದೊರೆಯುತ್ತಿದೆ. ಕಳೆದ ವರ್ಷದವರೆಗೂ ಇದು 300 ರೂಪಾಯಿಗಳಷ್ಟೇ ಇತ್ತು. ಅದಾಗ್ಯೂ ಅವರಿಗೆ ಕಳುಹಿಸಬೇಕಿರುವ ಹಣವನ್ನು ಯಾವ ವಿಳಾಸಕ್ಕೆ ಕಳುಹಿಸಬೇಕೆಂದು ಯಾರಿಗೂ ತಿಳಿದಿರಲಿಲ್ಲ. ಅನೇಕ ಐಎನ್‌ಎ ಸದಸ್ಯರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅವರ ಭಾಗವಹಿಸುವಿಕೆಯನ್ನು ದೃಢಪಡಿಸಿದ್ದರೂ ಕೇಂದ್ರ ಸರಕಾರ ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸುತ್ತಿಲ್ಲ. "ನಾನು ಆ  ಸಮಯದಲ್ಲಿ ಜೈಲಿಗೆ ಹೋಗಿರಲಿಲ್ಲವೆಂದು ಕೇಮದ್ರ ನೆಪ ಹೇಳುತ್ತಿದೆ" ಎಂದು ಅವರು ಹೇಳುತ್ತಾರೆ. “ಮತ್ತದು ನಿಜವೂ ಹೌದು, ನಾನು ಜೈಲಿಗೆ ಹೋಗಿಲ್ಲ. ಆದರೆ ಆಗ ಐಎನ್‌ಎಯ ಅನೇಕ ಹೋರಾಟಗಾರರು ಜೈಲಿಗೆ ಹೋಗಿರಲಿಲ್ಲ. ಇದರರ್ಥ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲವೆಂದೆ? ನನ್ನ ಪಿಂಚಣಿಗಾಗಿ ನಾನು ಯಾಕೆ ಸುಳ್ಳು ಹೇಳಲಿ?”

ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಸೇನೆಯ ಕಿರಿಯ ಸದಸ್ಯರಲ್ಲಿ ಲಕ್ಷ್ಮಿ ಒಬ್ಬರು. ಆ ಸಮಯದಲ್ಲಿ ಬರ್ಮಾದ ಐಎನ್‌ಎ ಶಿಬಿರಕ್ಕೆ ಸೇರಿದ ಏಕೈಕ ಒಡಿಯಾ ಮಹಿಳೆ ಅವರಾಗಿದ್ದರು. ಈಗ ಆ ಸೇನೆಗೆ ಸಂಬಂಧಿಸಿದಂತೆ ಬದುಕಿರುವವರೂ ಇವರೊಬ್ಬರೇ. ಆ ಸಮಯದಲ್ಲಿ ತನಗಿಂತ ಹೆಚ್ಚು ಜನಪ್ರಿಯವಾಗಿದ್ದ ಲಕ್ಷ್ಮಿ ಸೆಹಗಲ್ ಅವರ ಹೆಸರಿನೊಂದಿಗೆ ಅವರ ಹೆಸರು ಗೊಂದಲವಾಗಬಹುದೆಂಬ ಕಾರಣಕ್ಕೆ, ನೇತಾಜಿ ತನಗೆ 'ಇಂದಿರಾ' ಎಂಬ ಹೊಸ ಹೆಸರನ್ನು ನೀಡಿದರು. "ಈ ಶಿಬಿರದಲ್ಲಿ ನಿಮ್ಮ ಹೆಸರು ಇಂದಿರಾ" ಎಂದು ಅವರು ನನಗೆ ಹೇಳಿದರು. ಆ ಸಮಯದಲ್ಲಿ ಇದೆಲ್ಲ ಅರ್ಥವಾಗದಷ್ಟು ಚಿಕ್ಕವಳಾಗಿದ್ದೆ. ಆದರೆ ಅಂದಿನಿಂದ ನನ್ನ ಹೆಸರು 'ಇಂದಿರಾ' ಆಗಿ ಮಾರ್ಪಟ್ಟಿದೆ.

Laxmi Panda

‘ಐಎನ್‌ಎ ಸೈನಿಕರಲ್ಲಿ ನಾವು ಅನೇಕರು ಜೈಲಿಗೆ ಹೋಗಿಲ್ಲ. ಇದರರ್ಥ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲವೆಂದೆ ?’

ಬರ್ಮಾ ರೈಲ್ವೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಲಕ್ಷ್ಮಿಯವರ ಪೋಷಕರು ಬ್ರಿಟಿಷ್ ಬಾಂಬ್ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಅದರ ನಂತರ “ನಾನು ಬ್ರಿಟಿಷರ ವಿರುದ್ಧ ಹೋರಾಡಲು ಬಯಸಿದ್ದೆ. ಐಎನ್‌ಎಯಲ್ಲಿರುವ ನನ್ನ ಹಿರಿಯ ಒಡಿಯಾ ಸ್ನೇಹಿತರು ನನ್ನನ್ನು ಯಾವುದರಲ್ಲೂ ತೊಡಗಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಿರಲಿಲ್ಲ. ಕಾರಣ ಆಗ ನಾನು ತುಂಬಾ ಚಿಕ್ಕವಳು. ಯಾವುದಾದರೂ ಶ್ರೇಣಿಯಲ್ಲಿ ಸೇರಿಸಿಕೊಳ್ಳುವಂತೆ ನಾನು ಬೇಡಿಕೊಂಡೆ. ನನ್ನ ಸಹೋದರ ನಕುಲ್ ರಥ್ ಕೂಡ ಸದಸ್ಯರಾಗಿದ್ದರು. ನಂತರ ಅವರು ಯುದ್ಧದಲ್ಲಿ ಕಣ್ಮರೆಯಾದರು. ವರ್ಷಗಳ ನಂತರ, ಎಷ್ಟೋ ವರ್ಷಗಳ ನಂತರ ಅವರು ಹೊರಬಂದು ಭಾರತೀಯ ಸೇನೆಯಲ್ಲಿ ಸೇರಿಕೊಂಡರು ಮತ್ತು ಕಾಶ್ಮೀರದಲ್ಲಿದ್ದರು ಎಂದು ಹೇಳಿದ್ದರು, ಆದರೆ ನಾನು ಹೇಗೆ ಹುಡುಕುವುದು? ಅದೆಲ್ಲ ಅರ್ಧ ಶತಮಾನದ ಹಿಂದಿನ ಕತೆ.

"ಶಿಬಿರದಲ್ಲಿ, ನಾನು ಲೆಫ್ಟಿನೆಂಟ್ ಜಾನಕಿಯವರನ್ನು ಭೇಟಿಯಾಗಿದ್ದೆ ಮತ್ತು ಲಕ್ಷ್ಮಿ ಸೆಹಗಲ್, ಗೌರಿ ಮತ್ತು ಇತರ ಪ್ರಸಿದ್ಧ ಐಎನ್ಎ ಹೋರಾಟಗಾರರನ್ನು ನೋಡಿದ್ದೆ" ಎಂದು ಅವರು ಹೇಳುತ್ತಾರೆ. "ನಾವು ಯುದ್ಧದ ನಂತರ ಬಹದ್ದೂರ್ ಸಮೂಹದೊಂದಿಗೆ ಸಿಂಗಾಪುರಕ್ಕೆ ಹೋದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಐಎನ್‌ಎಯ ತಮಿಳು ಬೆಂಬಲಿಗರೊಡನೆ ಉಳಿದಿದ್ದ ಅವರು ಅಲ್ಲಿಯೇ ಒಂದಷ್ಟು ತಮಿಳು ಶಬ್ಧಗಳನ್ನೂ ಕಲಿತಿದ್ದರು.

ತಾನು ಕಲಿತದ್ದು ನಿಜವೆಂದು ಸಾಬೀತುಪಡಿಸಲು ಅವರು ತಮ್ಮ ಹೆಸರಾದ 'ಇಂದಿರಾ' ಪದವನ್ನು ತಮಿಳಿನಲ್ಲಿ ಬರೆದು ತೋರಿಸಿದರು. ಐಎನ್ಎ ಸೇನೆಯ ಈ ಹಾಡನ್ನು ಹೆಮ್ಮೆಯಿಂದ ಹಾಡಿದರು: “ಕದಮ್ ಕದಮ್ ಬಡಾಯೇ ಜಾ, ಖುಷಿ ಕೆ ಗೀತ್ ಗಾಯೇ ಜಾ. ಯೇ ಜಿಂದಗಿ ಹೈ ಕೌಮ್ ಕಿ, ತೂ ಕೌಮ್ ಪೆ ಲುಟಾಯೆ ಜಾ [ಮುಂದೆ ಹೋಗೋಣ ಮತ್ತು ಒಂದೊಂದಾಗಿ ಹೇಳೋಣ. ಸಂತೋಷದ ಹಾಡುಗಳನ್ನು ಹಾಡೋಣ. ಈ ಜೀವನವನ್ನು ಸಮಾಜದ ಸಲುವಾಗಿ, ಸಮಾಜದ ಹಿತಕ್ಕಾಗಿ ತ್ಯಾಗ ಮಾಡೋಣ].

ಐಎನ್‌ಎ ಸಮವಸ್ತ್ರದಲ್ಲಿ ಬಂದೂಕಿನೊಂದಿಗೆ ಇರುವ ಅವರ ಫೋಟೋ ಕುರಿತು ಮಾತನಾಡಿದ ಅವರು, "ಇದು ಯುದ್ಧದ ನಂತರ ನಾವೆಲ್ಲರೂ ಒಂದೆಡೆ ಸೇರಿ ಪ್ರತ್ಯೇಕಗೊಳ್ಳುವ ಮೊದಲು ತೆಗೆದ ಫೋಟೋ. ಸ್ವಲ್ಪ ಸಮಯದ ನಂತರ, "ನಾನು 1951ರಲ್ಲಿ ಬರ್ಹಾಂಪುರದಲ್ಲಿ ಕಾಗೇಶ್ವರ ಪಾಂಡಾ ಅವರನ್ನು ವಿವಾಹವಾದೆ, ಆಗ ಒರಿಯಾ ಐಎನ್‌ಎ ಸದಸ್ಯರು ನಮ್ಮ ಮದುವೆಗೆ ಬಂದಿದ್ದರು."

ತನ್ನ ಐಎನ್‌ಎ ಒಡನಾಡಿಗಳ ನೆನಪುಗಳನ್ನು ಅವರು ಮರೆತಿಲ್ಲ. "ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ. ನನಗೆ ಮತ್ತೆ ಆ ಪರಿಚಿತರನ್ನು ಭೇಟಿಯಾಗಲು ಅವಕಾಶವಿದ್ದರೆ ಚೆನ್ನಾಗಿರುತ್ತದೆ. ಲಕ್ಷ್ಮಿ ಸೆಹಗಲ್ ಕಟಕ್‌ನಲ್ಲಿ ಮಾತನಾಡಲು ಬಂದಿದ್ದರೆಂದು ನನಗೆ ತಿಳಿದಿತ್ತು, ಆದರೆ ನನಗೆ ಅಲ್ಲಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಅವರನ್ನು ಒಮ್ಮೆಯಾದರೂ ನೋಡಲು ಸಾಧ್ಯವಾಗಿದ್ದರೆ ಚೆನ್ನಾಗಿರುತ್ತಿತ್ತು. ನನಗೆ ಕಾನ್ಪುರಕ್ಕೆ ಹೋಗಲು ಒಂದೇ ಒಂದು ಅವಕಾಶವಿತ್ತು - ಆದರೆ ಆಗ ನನಗೆ ಅನಾರೋಗ್ಯ ಕಾಡಿತು. ಈಗ, ಅಂತಹ ಅವಕಾಶ ಮತ್ತೆ ಬರುತ್ತದೆಯೇ?

1950ರ ದಶಕದಲ್ಲಿ, ಅವರ ಪತಿಗೆ ಚಾಲನಾ ಪರವಾನಗಿ ಸಿಕ್ಕಿತು “ಮತ್ತು ನಾವು ಹಿರಾಕುಡ್ ಬಳಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದೆವು. ಆ ಸಮಯದಲ್ಲಿ, ನಾನು ಸಂತೋಷವಾಗಿದ್ದೆ ಮತ್ತು ಜೀವನಕ್ಕಾಗಿ ನಾನೇ ದುಡಿಯಬೇಕಾಗಿರಲಿಲ್ಲ. ಆದರೆ ಅವರು 1976ರಲ್ಲಿ ನಿಧನರಾದರು. ಅಲ್ಲಿಂದ ನನ್ನ ತೊಂದರೆಗಳು ಪ್ರಾರಂಭವಾದವು.”

ಲಕ್ಷ್ಮಿ ಅಂಗಡಿಯಲ್ಲಿ ಸಹಾಯಕರಾಗಿ, ಕಾರ್ಮಿಕರಾಗಿ ಮತ್ತು ಮನೆ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಎಲ್ಲವೂ ಅಲ್ಪ ಸಂಬಳದ ಕೆಲಸವಾಗಿದ್ದವು. ಅವರ ಕುಡಿತದ ಚಟಕ್ಕೊಳಾಗದ ಮಗನಿಗೆ ಹಲವು ಮಕ್ಕಳಿದ್ದರು ಅವರೆಲ್ಲರೂ ದುರ್ಬಲ ಸ್ಥಿತಿಯಲ್ಲಿದ್ದಾರೆ.

Laxmi Panda showing her old photos
PHOTO • P. Sainath

ಲಕ್ಷ್ಮಿ ಪಾಂಡ ಅವರು ಸ್ವತಃ ಐಎನ್‌ಎ ಸಮವಸ್ತ್ರ ಧರಿಸಿ ಗನ್ ಹಿಡಿದಿರುವ ಫೋಟೋವನ್ನು ತೋರಿಸುತ್ತಿರುವುದು

"ನಾನು ಇಲ್ಲಿಯವರೆಗೆ ಏನನ್ನೂ ಕೇಳಿಲ್ಲ" ಎಂದು ಅವರು ಹೇಳಿದರು. "ನಾನು ನನ್ನ ದೇಶಕ್ಕಾಗಿ ಹೋರಾಡಿದೆ, ಪ್ರತಿಫಲಕ್ಕಾಗಿಯಲ್ಲ. ನನ್ನ ಕುಟುಂಬ ಸದಸ್ಯರಿಗಾಗಿ ನಾನು ಏನನ್ನೂ ಕೇಳಲಿಲ್ಲ. ಆದರೆ ಸದ್ಯಕ್ಕೆ, ಬದುಕಿನ ಅಂತಿಮ ಘಟ್ಟದಲ್ಲಿಯಾದರೂ ಸರಕಾರ ನನ್ನ ಹೋರಾಟವನ್ನು ಗುರುತಿಸಲಿ ಎನ್ನುವುದಷ್ಟೇ ನನ್ನ ನಿರೀಕ್ಷೆ"

ಕೆಲವು ವರ್ಷಗಳ ಹಿಂದೆ ಅನಾರೋಗ್ಯ ಮತ್ತು ಬಡತನದ ಕಾರಣ ಅವರ ಸ್ಥಿತಿ ಶೋಚನೀಯವಾಯಿತು. ಸ್ವಲ್ಪ ಸಮಯದ ನಂತರ, ಜೈಪುರದ ಪರೇಶ್ ರಥ್ ಎಂಬ ಯುವ ಪತ್ರಕರ್ತ ಅವರ ಬಗ್ಗೆ ಸುದ್ದಿ ಲೇಖನವನ್ನು ಪ್ರಕಟಿಸಿದರು. ಇದಲ್ಲದೆ, ಅವರು ಅವರನ್ನು ತನ್ನ ಸ್ವಂತ ಖರ್ಚಿನಲ್ಲಿ ಕೊಳೆಗೇರಿಯಿಂದ ಒಂದೇ ಕೋಣೆಯ ಮನೆಗೆ ಸ್ಥಳಾಂತರಿಸಿದರು ಮತ್ತು ಅವರ ವೈದ್ಯಕೀಯ ವೆಚ್ಚವನ್ನೂ ಸಹ ನೋಡಿಕೊಂಡರು. ಇತ್ತೀಚೆಗೆ, ಪಾಂಡಾ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ತನ್ನ ಮಗನ ಅಭ್ಯಾಸವನ್ನು ವಿರೋಧಿಸಿದರೂ ಅವರು ಪ್ರಸ್ತುತ ಅವನ ಮನೆಯಲ್ಲಿಯೇ ಇದ್ದಾರೆ. ರಥ್ ಸುದ್ದಿ ಪ್ರಕಟಿಸಿದ ನಂತರ ಅವರ ಕುರಿತು ಹೆಚ್ಚಿನ ಸುದ್ದಿ ಲೇಖನಗಳು ಹೊರಬಂದವು. ಅವರು ಒಮ್ಮೆ ರಾಷ್ಟ್ರೀಯ ಪತ್ರಿಕೆಯ ಮುಖಪುಟದಲ್ಲಿಯೂ ಸುದ್ದಿಯಾದರು.

"ನಾವು ಮೊದಲಿಗೆ ಸುದ್ದಿ ಲೇಖನವನ್ನು ಪ್ರಕಟಿಸಿದಾಗ, ಅವರಿಗೆ ಸ್ವಲ್ಪ ಸಹಾಯ ಸಿಕ್ಕಿತು" ಎಂದು ರಥ್ ಹೇಳಿದರು. "ಆಗಿನ ಕೊರಪುಟ್ ಜಿಲ್ಲಾಧಿಕಾರಿ ಉಷಾ ಪಾಧಿ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ರೂ. 10 ಸಾವಿರ ಮಂಜೂರು ಮಾಡಿದ್ದರು. ಸರ್ಕಾರಿ ಜಮೀನು ಮಂಜೂರು ಮಾಡಲಾಗುವುದು ಎಂದಿದ್ದರು. ಆದರೆ ಪಾಧಿಯವರಿಗೆ ವರ್ಗಾವಣೆಯಾಗಿದ್ದರಿಂದ ಜಿಲ್ಲೆಯನ್ನು ತೊರೆದರು. ಬಂಗಾಳದ ಕೆಲವರು ಅವರಿಗೆ ಒಂದಿಷ್ಟು ದೇಣಿಗೆ ಕಳುಹಿಸಿದ್ದಾರೆ. ”ಆದಾಗ್ಯೂ, ಸ್ವಲ್ಪ ಸಮಯದ ನಂತರ ಅವೆಲ್ಲವೂ ನಿಂತು ಹೋಗಿ ಅವರ ಬದುಕು ಮತ್ತೆ ಮೊದಲಿನಂತಾಯಿತು. "ಹಾಗಿದ್ದರೂ, ಇಲ್ಲಿ ಸಮಸ್ಯೆ ಕೇವಲ ಹಣವಲ್ಲ" ಎಂದು‌ ರಥ್ ವಿವರಿಸಿದರು. "ಕೇಂದ್ರ ಸರ್ಕಾರವು ಅವರಿಗೆ ಪಿಂಚಣಿ ನೀಡಿದ್ದರೂ ಸಹ, ಈ ವಯಸ್ಸಿನಲ್ಲಿ ಅವರು ಅದನ್ನು ಇನ್ನೂ ಎಷ್ಟು ವರ್ಷಗಳವರೆಗೆ ಬಳಸಲು ಸಾಧ್ಯವಾಗುತ್ತದೆ?" ವಾಸ್ತವವಾಗಿ, ಅವರು ಪಿಂಚಣಿಯನ್ನು ಅರ್ಹವಾದ ಮಾನ್ಯತೆ ಮತ್ತು ಗೌರವವೆಂದು ಪರಿಗಣಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅನೇಕ ನಿರಾಶಾದಾಯಕ ಪ್ರಯತ್ನಗಳ ನಂತರ, ಲಕ್ಷ್ಮಿಯವರಿಗೆ ಈ ಜಿಲ್ಲೆಯ ಪಂಜಿಯಾಗುಡ ಗ್ರಾಮದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಒಂದು ಸರ್ಕಾರಿ ಭೂಮಿಯ ತುಂಡನ್ನು ನೀಡಲಾಯಿತು. ಆದರೆ ಅವರು ಈಗಲೂ ಸರ್ಕಾರದ ಯೋಜನೆಯಡಿ ಅಲ್ಲಿ ಮನೆ ಕಟ್ಟಿಸಲು ಕಾಯುತ್ತಿದ್ದಾರೆ. ಸದ್ಯಕ್ಕೆ, ಅವರ ಹಳೆಯ ಕೋಣೆಗೆ ಹೊಂದಿಕೊಂಡಂತೆ ಉತ್ತಮವಾದ ಕೋಣೆಯನ್ನು ನಿರ್ಮಿಸಲು  ರಥ್ ಹಣವನ್ನು ನೀಡಿದ್ದಾರೆ ಮತ್ತು ಶೀಘ್ರದಲ್ಲೇ ಅವರನ್ನು ಅಲ್ಲಿಗೆ ಸ್ಥಳಾಂತರಿಸುವ ನಿರೀಕ್ಷೆಯಲ್ಲಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಅವರಿಗೆ ಈಗೀಗ ಒಂದಷ್ಟು ಗುರುತು ಸಿಗುತ್ತಿದೆ. ಕೆಲವು ಸಂಸ್ಥೆಗಳು ಅವರ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಮುಂದಾಗಿವೆ. ಆಗಸ್ಟ್ 14ರಂದು ಅವರು ನನಗೆ ಹೇಳಿದರು, "ನಾಳೆ, ನಾನು ಇಲ್ಲಿನ ದೀಪ್ತಿ ಶಾಲೆಯಲ್ಲಿ ಧ್ವಜವನ್ನು ಹಾರಿಸುತ್ತೇನೆ. ಅವರು ನನ್ನನ್ನು  ಆಹ್ವಾನಿಸಿದ್ದಾರೆ." ಅವಳು ಅದರ ಕುರಿತು ಹೆಮ್ಮೆಯಿಂದ ಹೇಳುತ್ತಾರೆ, ಆದರೆ ಅವರು "ಸಮಾರಂಭಕ್ಕೆ ಉಡಲು ಉತ್ತಮ ಸೀರೆಯಿಲ್ಲ" ಎಂದು ಅಸಮಾಧಾನಗೊಂಡಿದ್ದಾರೆ.

ಏತನ್ಮಧ್ಯೆ, ಈ ಐಎನ್ಎಯ ಹಿರಿಯ ಯೋಧೆ ತಮ್ಮ ಮುಂದಿನ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ವೃದ್ಧ ಮಹಿಳೆ ಹೇಳುತ್ತಾರೆ, "ನೇತಾಜಿ 'ಚಲೋ ಡೆಲ್ಲಿ' ಎಂದು ಹೇಳಿದ್ದರು. ಒಂದು ವೇಳೆ ಕೇಂದ್ರ ಸರ್ಕಾರವು ನನ್ನನ್ನು ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಸ್ವೀಕರಿಸದಿದ್ದರೆ ಆಗಸ್ಟ್ 15ರ ನಂತರ ನಾನು ಅದೇ ರೀತಿ ಮಾಡುತ್ತೇನೆ. ನಾನು ಸಂಸತ್ತಿನ ಮುಂದೆ ಧರಣಿ ಕೂರುತ್ತೇನೆ. ʼದಿಲ್ಲಿ ಚಲೋ,' ನಾನು ಕೂಡ. ಅದನ್ನೇ ಮಾಡಲಿದ್ದೇನೆ"

ಅವರು ಖಂಡಿತ ಅದನ್ನು ಮಾಡಲಿದ್ದಾರೆ, ಬಹುಶಃ ಆರು ದಶಕಗಳಷ್ಟು ತಡವಾಗಿ. ಆದರೆ, ಅವರ ಹೃದಯದಲ್ಲಿ ಭರವಸೆಯಿದೆ, ಅವರು ಹಾಡುವ ಹಾಡಿನಂತೆ: "ಕದಮ್‌ ಕದಮ್‌ ಬಡಾಯೇ ಜಾ..."

ಫೋಟೊಗಳು: ಪಿ. ಸಾಯಿನಾಥ್

P. Sainath
psainath@gmail.com

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Shankar N. Kenchanuru
shankarkenchanur@gmail.com

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru