“ʼನಿಮ್ಮ ಮನೆಯ ಹುಡುಗಿಯೊಬ್ಬಳು ಮನೆಯಿಂದ ಹೊರಗೆ ಹೋಗಿ ಹಣ ಸಂಪಾದನೆ ಮಾಡುವುದೇ?ʼ ಇದು ನಮ್ಮ ಮಾವನವರನ್ನು ಜನರು ಕೇಳುತ್ತಿದ್ದ ಪ್ರಶ್ನೆ. ನಾನೊಬ್ಬಳು ಪೇಟೆಯಲ್ಲಿ ಬೆಳೆಸಲ್ಪಟ್ಟ ಮಗಳಲ್ಲ, ಹೀಗಾಗಿ ನಮಗೆ ನಿಯಮಗಳು ಸಾಕಷ್ಟು ಬಿಗಿಯಿರುತ್ತವೆ,” ಎನ್ನುತ್ತಾರೆ ಫಾತಿಮಾ ಬೀಬಿ.
ತನ್ನ ಕಪ್ಪು ನಿಕಾಬಿನಿಂದ ಜಾಣ್ಮೆಯಿಂದ ಹೊರಬಂದ ಫಾತಿಮಾ ಅದನ್ನು ಮುಂಬಾಗಿಲಿನ ಬಳಿಯ ಮೊಳೆಗೆ ನೇತುಹಾಕಿ, ಮಾತನಾಡುತ್ತಲೇ ತನ್ನ ಮನೆಯನ್ನು ಹೊಕ್ಕರು. "ನಾನು ಚಿಕ್ಕ ಹುಡುಗಿಯಾಗಿದ್ದಾಗ, ನನ್ನ ವ್ಯಾಪ್ತಿ ಅಡುಗೆಮನೆಯಷ್ಟೇ ಎಂದು ಭಾವಿಸಿದ್ದೆ - ಅಡುಗೆ ಮಾಡುವುದು ಮತ್ತು ಮನೆಯನ್ನು ನಿರ್ವಹಿಸುವುದು," ಎಂದು ಅವರು ಹಿಂದಿನ ದಿನಗಳನ್ನು ನೆನೆಸಿಕೊಂಡು ನಗುತ್ತಾ ಹೇಳುತ್ತಾರೆ. "ನಾನು ಏನನ್ನಾದರೂ ಮಾಡಬೇಕೆಂದು ಪ್ರಯತ್ನಿಸಲು ನಿರ್ಧರಿಸಿದಾಗ, ನನ್ನ ಕುಟುಂಬವು ಹೊರಗೆ ಹೋಗಿ ಏನಾದರೂ ಸಾಧಿಸಲು ನನಗೆ ಎಲ್ಲಾ ಸ್ವಾತಂತ್ರ್ಯವನ್ನು ನೀಡಿತು. ನಾನು ಮುಸ್ಲಿಂ ಯುವತಿ ಇರಬಹುದು, ಆದರೆ ನಾನು ನಾನು ಮಾಡಲು ಸಾಧ್ಯವಿಲ್ಲದಿರುವುದು ಯಾವುದೂ ಇಲ್ಲ", ಎಂದು ಈ 28 ವರ್ಷದ ಧೈರ್ಯವಂತ ಮಹಿಳೆ ಹೇಳುವಾಗ ಆಕೆಯ ದುಪ್ಪಟ್ಟಾದಲ್ಲಿದ್ದ ಬೆಳ್ಳಿ ಬಣ್ಣದ ಚುಕ್ಕಿಗಳು ಮಧ್ಯಾಹ್ನದ ಬೆಳಕಿಗೆ ಫಳಫಳನೆ ಹೊಳೆಯುತ್ತಿದ್ದವು.
ಫಾತಿಮಾ ಉತ್ತರ ಪ್ರದೇಶದ ಪ್ರಯಾಗರಾಜ್ (ಹಿಂದಿನ ಅಲಹಾಬಾದ್) ಜಿಲ್ಲೆಯ ಮಾಹೆವಾ ಪಟ್ಟಣದ ನಿವಾಸಿ, ಅಲ್ಲಿನ ಬದುಕಿಗೆ ಆ ಊರಿನಲ್ಲಿ ಹರಿಯುವ ಯಮುನಾ ನದಿಯದೇ ವೇಗ. ಇಂದು ಫಾತಿಮಾ ಬದುಕಿನ ಓಟದಲ್ಲಿ ಓಡುತ್ತಾ ಓರ್ವ ನುರಿತ ಕುಶಲಕರ್ಮಿ ಮತ್ತು ಕರಕುಶಲ ಉದ್ಯಮಿಯಾಗಿದ್ದಾರೆ. ಮೂಂಜ್ ಎನ್ನುವ ವಿವಿಧ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಇದು ಮೊನಚಾದ ಜೊಂಡು ಮಾದರಿಯ ಸರ್ಪತ್ ಹುಲ್ಲಿನ ಎಸಳಿಂದ ತಯಾರಿಸಿದ ಉತ್ಪನ್ನಗಳ ಶ್ರೇಣಿ.
ಬಾಲಕಿ ಫಾತಿಮಾಳಿಗೆ ತಾನು ಮುಂದೆ ಏನಾಗಬೇಕು ಎನ್ನುವುದರ ಕುರಿತು ಯಾವುದೇ ಕಲ್ಪನೆ ಇದ್ದಿರಲಿಲ್ಲ. ಆದರೆ ಮೊಹಮ್ಮದ್ ಶಕೀಲ್ ಅವರೊಂದಿಗಿನ ವಿವಾಹವು ಅವರನ್ನು ಮಾಹೆವಾಗೆ ಮತ್ತು ಅನುಭವಿ ಮೂಂಜ್ ಕುಶಲಕರ್ಮಿ, ಅತ್ತೆ, ಆಯೇಷಾ ಬೇಗಂ ಅವರ ಮನೆಗೆ ಕರೆತಂದಿತು.














