ಇದು ಸ್ವಾತಂತ್ರ್ಯ, ಪ್ರತಿರೋಧ ಮತ್ತು ದೃಢತೆಯ ಸಂಗೀತವಾಗಿದೆ, ಇದನ್ನು ಪ್ರಸಿದ್ಧ ಗರ್ಬಾ ಸಂಗೀತ ರಾಗಕ್ಕೆ ಅಲಂಕರಿಸಲಾಗಿದೆ.  ಇದು ನಿಜವಾಗಿಯೂ ಉತ್ತರಾಧಿಕಾರ ಮತ್ತು ಸಂಸ್ಕೃತಿಯ ಆದೇಶಗಳನ್ನು ಪ್ರಶ್ನಿಸದೆ ಪಾಲಿಸಲು ಸಿದ್ಧವಿಲ್ಲದ ಗ್ರಾಮೀಣ ಮಹಿಳೆಯರ ಧ್ವನಿಯಾಗಿದೆ.

ಕಛ್‌ನಲ್ಲಿ ಮಾತನಾಡುವ ಹಲವು ಭಾಷೆಗಳಲ್ಲಿ ಒಂದಾದ ಗುಜರಾತಿಯಲ್ಲಿ ಬರೆಯಲಾಗಿರುವ ಈ ಜಾನಪದ ಗೀತೆಯನ್ನು ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಗ್ರಾಮೀಣ ಮಹಿಳೆಯರು ಬರೆದಿದ್ದಾರೆ.

ಇದನ್ನು ಯಾವಾಗ ಬರೆಯಲಾಗಿದೆ ಅಥವಾ ಅದನ್ನು ರಚಿಸಿದ ಮಹಿಳೆಯರು ಯಾರು ಎಂದು ಕಂಡುಹಿಡಿಯುವುದು ಕಷ್ಟ.  ಆದರೆ ಈ ಜನಪದ ಗೀತೆಯನ್ನು ಕೇಳುವವರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕೇಳುವ ಹೆಣ್ಣಿನ ಗಟ್ಟಿ ದನಿ ಕೇಳಿಸುತ್ತದೆ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು.

ಈ ಜಾನಪದ ಗೀತೆಯನ್ನು ರಚಿಸಿರುವ ನಿಖರವಾದ ಸಂದರ್ಭ ಮತ್ತು ಉದ್ದೇಶದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲವಾದರೂ, ಗುಜರಾತ್‌ನಾದ್ಯಂತ 2003ರ ಸುಮಾರಿಗೆ ಹಲವಾರು ಹಾಡುಗಳನ್ನು ಬರೆಯಲಾಗಿದೆ, ವಿಶೇಷವಾಗಿ ಕಛ್‌ನಲ್ಲಿ ನಡೆದ ಮಹಿಳೆಯರ ಭೂ ಮಾಲೀಕತ್ವ ಮತ್ತು ಜೀವನೋಪಾಯದ ಸಮಸ್ಯೆಗಳ ಮೇಲಿನ ಚರ್ಚೆಗಳು ಮತ್ತು ಕಾರ್ಯಾಗಾರಗಳ ದಾಖಲೆಗಳಲ್ಲಿ.  ಆ ಅವಧಿಯಲ್ಲಿ, ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನಗಳು ಸಾಮಾನ್ಯವಾಗಿ ಕೃಷಿ ಉತ್ಪಾದನೆಗೆ ಮಹಿಳೆಯರ ಕೊಡುಗೆ ಮತ್ತು ಭೂಮಿಯ ಮೇಲಿನ ಮಹಿಳೆಯರ ಮಾಲೀಕತ್ವದ ಕೊರತೆಯಂತಹ ವಿಷಯಗಳನ್ನು ಚರ್ಚಿಸಿದವು.  ಈ ಚರ್ಚೆಗಳ ಫಲವಾಗಿ ಈ ಜಾನಪದ ಗೀತೆ ಹುಟ್ಟಿದೆ ಎಂದು ನಾವು ಸ್ಪಷ್ಟವಾಗಿ ಹೇಳಲಾಗುವುದಿಲ್ಲ.

ಆದಾಗ್ಯೂ, ಈ ಜಾನಪದ ಹಾಡು ಈ ಪ್ರದೇಶದೊಳಗೆ ಮತ್ತು ಹೊರಗೆ ಎಲ್ಲೆಡೆ ತನ್ನ ಹೆಜ್ಜೆಗಳನ್ನು ಹರಡಿದೆ.  ಈ ಪಯಣದಲ್ಲಿ ಯಾವುದೇ ಜಾನಪದ ಗೀತೆಯಂತೆ ಕೆಲವು ಸಾಲುಗಳನ್ನು ಸೇರಿಸಿ, ಕೆಲವನ್ನು ಬದಲಿಸಿ, ಕೇಳುಗರಿಗೆ ಇಷ್ಟವಾಗುವಂತೆ ಗೀತರಚನೆಕಾರರು ಇದನ್ನು ತಿರುಚಿದ್ದಾರೆ.  ಇಲ್ಲಿ ಪ್ರಸ್ತುತಪಡಿಸಲಾದ ಈ ಜಾನಪದ ಗೀತೆಗೆ ನಖತ್ರಾ ತಾಲೂಕಿನ ನಂದುಬಾ ಜಡೇಜಾ ಧ್ವನಿ ನೀಡಿದ್ದಾರೆ.

ಸೂರ್ವಾಣಿ ಧ್ವನಿಮುದ್ರಿಸಿದ 341 ಹಾಡುಗಳಲ್ಲಿ ಇದೂ ಒಂದು.  ಸೂರ್ವಾಣಿ ಒಂದು ಸಮುದಾಯ ರೇಡಿಯೋ ಕೇಂದ್ರವಾಗಿದ್ದು, ಇದು 2008ರಲ್ಲಿ ಪ್ರಾರಂಭವಾಯಿತು.  ಕಛ್ ಮಹಿಳಾ ವಿಕಾಸ್ ಸಂಘಟನೆಯ ಮೂಲಕ ಸಂಗ್ರಹವು ಪರಿಗೆ ತಲುಪಿದೆ, ಇದು ಈ ಪ್ರದೇಶದ ಸಂಸ್ಕೃತಿ, ಭಾಷೆ ಮತ್ತು ಸಂಗೀತದ ವೈವಿಧ್ಯಮಯ ಪರಂಪರೆಯನ್ನು ತನ್ನ ಹಾಡುಗಳಲ್ಲಿ ಬಿಂಬಿಸುತ್ತದೆ.  ಈ ಸಂಕಲನವು ಕಛ್‌ನ ಸಂಗೀತ ಸಂಪ್ರದಾಯವನ್ನು ಸಂರಕ್ಷಿಸಲು ಕೊಡುಗೆ ನೀಡಿದೆ, ಅದು ಈಗ ಅವನತಿಯತ್ತ ಸಾಗುತ್ತಿದೆ.  ಈ ಸಂಪ್ರದಾಯವು ಮರುಭೂಮಿಯ ಜೌಗು ಪ್ರದೇಶದಲ್ಲಿ ಮುಳುಗುತ್ತಿದೆ ಎಂದು ತೋರುತ್ತದೆ.

ನಖತ್ರಾ ತಾಲೂಕಿನ ನಂದುಬಾ ಜಡೇಜಾ ಅವರ ಧ್ವನಿಯಲ್ಲಿ ಈ ಜಾನಪದ ಗೀತೆಯನ್ನು ಕೇಳಿ


Gujarati

સાયબા એકલી હું વૈતરું નહી કરું
સાયબા મુને સરખાપણાની ઘણી હામ રે ઓ સાયબા
સાયબા એકલી હું વૈતરું નહી કરું
સાયબા તારી સાથે ખેતીનું કામ હું કરું
સાયબા જમીન તમારે નામે ઓ સાયબા
જમીન બધીજ તમારે નામે ઓ સાયબા
સાયબા એકલી હું વૈતરું નહી કરું
સાયબા મુને સરખાપણાની ઘણી હામ રે ઓ સાયબા
સાયબા એકલી હું વૈતરું નહી કરું
સાયબા હવે ઘરમાં ચૂપ નહી રહું
સાયબા હવે ઘરમાં ચૂપ નહી રહું
સાયબા જમીન કરાવું મારે નામે રે ઓ સાયબા
સાયબાહવે મિલકતમા લઈશ મારો ભાગ રે ઓ સાયબા
સાયબા હવે હું શોષણ હું નહી સહુ
સાયબા હવે હું શોષણ હું નહી સહુ
સાયબા મુને આગળ વધવાની ઘણી હામ રે ઓ સાયબા
સાયબા એકલી હું વૈતરું નહી કરું
સાયબા મુને સરખાપણાની ઘણી હામ રે ઓ સાયબા
સાયબા એકલી હું વૈતરું નહી કરું

ಕನ್ನಡ

ನಾನು ಹೀಗೆ ಇರಲು ಬಯಸುವುದಿಲ್ಲ, ಗೆಣೆಕಾರ ಕೇಳು
ನಾನು ನಿನ್ನ ಸರಿಸಮ ನಿಲ್ಲಲು ಬಯಸುವೆ
ನಾನು ಹೀಗೆ ಇರಲು ಬಯಸುವುದಿಲ್ಲ, ಗೆಣೆಕಾರ ಕೇಳು
ನಾನು ನಿನ್ನಂತೆಯೇ ಹೊಲಗಳಲ್ಲಿ ದುಡಿದ್ದಿದ್ದೇನೆ
ಹೊಲ, ಗದ್ದೆಗಳೆಲ್ಲ ನಿನ್ನ ಹೆಸರಿಗೆ ಮಾತ್ರ ಏಕೆ?
ಹೊಲ ಗದ್ದೆಗಳನ್ನೆಲ್ಲ ನಿನ್ನ ಹೆಸರಿಗೆ ಬರೆಯಲಾಗಿದೆಯೇಕೆ ಹೇಳು
ನಾನು ಹೀಗೆ ಇರಲು ಬಯಸುವುದಿಲ್ಲ, ಗೆಣೆಕಾರ ಕೇಳು
ನಾನು ನಿನ್ನ ಸರಿಸಮ ನಿಲ್ಲಲು ಬಯಸುವೆ
ನಾನು ಹೀಗೆ ಇರಲು ಬಯಸುವುದಿಲ್ಲ, ಗೆಣೆಕಾರ ಕೇಳು
ನಾನಿನ್ನು ಸುಮ್ಮನೆ ಮನೆಯಲ್ಲಿ ಕೂರುವಳಲ್ಲ
ನಾಲಗೆಯ ಲಗಾಮು ನನಗೆ ಒಪ್ಪಿತವಲ್ಲ
ಪ್ರತಿ ಎಕರೆಯಲ್ಲೂ ನನ್ನ ಹೆಸರು ಬೇಕು
ಆಸ್ತಿ ಪತ್ರದಲ್ಲಿ ನನ್ನ ಪಾಲು ನನಗೆ ಬೇಕು
ಗೆಣೆಕಾರ ನಾ ಬಿಡಲಾರೆ ನನ್ನ ಪಾಲಿನ ಭೂಮಿಯನ್ನು
ಬಲವಂತದ ಕೆಲಸ ಮಾಡುವುದಿಲ್ಲ ನಾನಿನ್ನು
ಇನ್ನು ಇದೆಲ್ಲ ಸಹಿಸಲು ಸಾಧ್ಯವಿಲ್ಲ
ನನ್ನ ಸ್ವಂತ ಭೂಮಿಯಲ್ಲಿ ಹೊಸ ಬೆಳೆ ಬೆಳೆಯುತ್ತೇನೆ, ಪ್ರೀತಿಗೆಂದೂ ಮಿತಿಯಿಲ್ಲ
ನಾನು ಹೀಗೆ ಇರಲು ಬಯಸುವುದಿಲ್ಲ, ಗೆಣೆಕಾರ ಕೇಳು
ನಾನು ನಿನ್ನ ಸರಿಸಮ ನಿಲ್ಲಲು ಬಯಸುವೆ
ನಾನು ಹೀಗೆ ಇರಲು ಬಯಸುವುದಿಲ್ಲ, ಗೆಣೆಕಾರ ಕೇಳು


PHOTO • Priyanka Borar

ಹಾಡಿನ ವಿಧ : ಪ್ರಗತಿಪರ

ವಿಭಾಗ : ಸ್ವಾತಂತ್ರ್ಯದ ಹಾಡು

ಹಾಡು : 3

ಹಾಡಿನ ಶೀರ್ಷಿಕೆ : ಸಾಯಬಾ, ಎಕ್ಲಿ ಹುನ್ ವೈತಾರು ನಹೀ ಕರೂನ್

ಸಂಗೀತ ಸಂಯೋಜನೆ : ದೇವಲ್ ಮೆಹ್ತಾ

ಹಾಡುಗಾರರು : ನಖಾತ್ರ ತಾಲೂಕಿನ ನಂದೂಬಾ ಜಡೇಜಾ

ಬಳಸಲಾಗಿರುವ ಉಪಕರಣಗಳು : ಹಾರ್ಮೋನಿಯಂ, ಡ್ರಮ್, ಟ್ಯಾಂಬೋರಿನ್

ರೆಕಾರ್ಡ್ ಮಾಡಿದ ವರ್ಷ : 2016, ಕೆಎಮ್‌ವಿಎಸ್ ಸ್ಟುಡಿಯೋ

ಪ್ರೀತಿ ಸೋನಿ, ಅರುಣಾ ಧೋಲಾಕಿಯಾ, ಕಾರ್ಯದರ್ಶಿ, ಕೆಎಂವಿಎಸ್, ಅಮದ್ ಸಮೇಜಾ, ಯೋಜನಾ ಸಂಯೋಜಕ ಕೆಎಂವಿಎಸ್ ಇವರುಗಳ ಬೆಂಬಲಕ್ಕಾಗಿ ಮತ್ತು ಅಮೂಲ್ಯ ಸಹಾಯಕ್ಕಾಗಿ ಭಾರತಿಬೆನ್ ಗೋರ್ ಅವರಿಗೆ ವಿಶೇಷ ಧನ್ಯವಾದಗಳು

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Other stories by Pratishtha Pandya
Illustration : Priyanka Borar

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

Other stories by Priyanka Borar
Translator : Shankar N. Kenchanuru
shankarkenchanur@gmail.com

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru