ನಮ್ಮ ಕಥೆಯ ಕಥಾನಾಯಕನಾದ ಶಿವಾಜಿ ಥೋಮ್ರೆ ಹದಿಮೂರು ಎಕರೆ ಜಮೀನಿನ ಒಡೆಯ. ಹತ್ತಿ ಮತ್ತು ಜೋಳಗಳ ಬಿತ್ತನೆಗೆ ತಯಾರಾಗಿ ನಿಂತ ಥೋಮ್ರೆಯ ಜಮೀನಿನಲ್ಲಿ ಅಡ್ಡಾಡುತ್ತಿದ್ದ ನಮಗೆ ಜಮೀನಿನ ಒಂದು ಭಾಗದಲ್ಲಿ ಒಣಗಿದ ಕೆಲ ಮರಗಳ ಗುಂಪುಗಳು ಕಂಡಿದ್ದವು. ಇನ್ನು ಆ ಮರಗಳ ತಳಭಾಗವನ್ನು ನೋಡಿದರೆ ಅಲ್ಲಲ್ಲಿ ಅನಾಥವಾಗಿ ಬಿದ್ದ ಒಣನಿಂಬೆಗಳಂತಿದ್ದ ಹಣ್ಣುಗಳು. ಹೀಗೆ ಬಿದ್ದಿದ್ದ ಹಣ್ಣುಗಳಲ್ಲಿ ಒಂದನ್ನು ಎತ್ತಿ ``ಇದೋ ನೋಡಿ ಮೂಸಂಬಿ'' ಎಂದು ನಮಗೆ ತೋರಿಸಿದ ಶಿವಾಜಿ. ``ಮೂಸಂಬಿಯ ಒಂದು ಗಿಡಕ್ಕೆ ದಿನವೊಂದಕ್ಕೆ ಅರವತ್ತು ಲೀಟರ್ ನೀರಾದರೂ ಬೇಕು. ಇಲ್ಲಿಯ ಮೂಸಂಬಿಗಳಂತೂ ಸಂಪೂರ್ಣವಾಗಿ ಒಣಗಿಹೋಗಿವೆ'', ಎಂದಿದ್ದ ಆತ.

ಅಂದ ಹಾಗೆ ಶಿವಾಜಿ ಥೋಮ್ರೆಯ ಎರಡೆಕರೆ ಜಮೀನಿನ ಭಾಗದಲ್ಲಿ ಸದ್ಯ ನಾಲ್ಕುನೂರು ಮೂಸಂಬಿಯ ಮರಗಳಿವೆ. ಅಂದರೆ ದಿನವೊಂದಕ್ಕೆ ಇಪ್ಪತ್ತನಾಲ್ಕು ಸಾವಿರ ಲೀಟರುಗಳ ಅವಶ್ಯಕತೆಯು ಇಲ್ಲಿದೆ. ಮಳೆಗಾಲದಲ್ಲಿ ಉತ್ತಮ ಪ್ರಮಾಣದ ಮಳೆಯಾದರೆ ಸರಿ. ಚಳಿಗಾಲ ಮತ್ತು ಬೇಸಿಗೆಯಲ್ಲಂತೂ ಇಷ್ಟು ಪ್ರಮಾಣದ ನೀರು ಬೇಕೇ ಬೇಕು. ಹೀಗೆ ಈ ಬೆಳೆಗೆ ಬೇಕಾಗಿರುವ ನೀರಿನ ಪ್ರಮಾಣವನ್ನು ಗಮನಿಸಿದರೆ ಮೂಸಂಬಿಗಿಂತ ಉಳಿದ ಹಣ್ಣುಗಳೇ ವಾಸಿ ಎಂಬ ಅಭಿಪ್ರಾಯವು ಮೂಡಿದರೂ ತಪ್ಪಿಲ್ಲ. ಉದಾಹರಣೆಗೆ ದಾಳಿಂಬೆ ಬೆಳೆಯುವುದಾದರೆ ಬೇಸಿಗೆಯಲ್ಲೂ ಮರವೊಂದಕ್ಕೆ ಇಪ್ಪತ್ತು ಲೀಟರ್ ನೀರು ಒಂದು ದಿನಕ್ಕೆ ಸಾಕು.

ಅಸಲಿಗೆ ಶಿವಾಜಿಯ ತಂದೆ 2002 ರಲ್ಲಿ ಕರಾಜ್ಗಾಂವ್ ನಲ್ಲಿ ಈ ಮೂಸಂಬಿ ಗಿಡಗಳನ್ನು ನೆಟ್ಟಿದ್ದರು. ಸುಮಾರು ಸಾವಿರದ ಮುನ್ನೂರು ಜನಸಂಖ್ಯೆಯಿರುವ ಈ ಕರಾಜ್ಗಾಂವ್ ಮರಾಠಾವಾಡಾದ ಔರಂಗಾಬಾದ್ ನಗರದ ಹೊರಭಾಗದಲ್ಲಿದೆ. ಆಗ ಶಿವಾಜಿ ಇಪ್ಪತ್ತರ ತರುಣನಾಗಿದ್ದ. ``ಆಗ ನೀರೆಂಬುದು ಒಂದು ಸಮಸ್ಯೆಯೇ ಆಗಿರಲಿಲ್ಲ. ಮೂಸಂಬಿ ಬೆಳೆಯುವುದೆಂದರೆ ಆ ಕಾಲದಲ್ಲಿ ಒಂದು ಜಾಣ ಮತ್ತು ಲಾ¨ಭದಾಯಕ ನಡೆಯಾಗಿತ್ತು'', ಎನ್ನುತ್ತಾರೆ ಶಿವಾಜಿ. ಶಿವಾಜಿ ಥೋಮ್ರೆ ಹೇಳುವ ಪ್ರಕಾರ ಮೂಸಂಬಿಯ ಬೆಳೆಗಾಗಿ ಆ ಅವಧಿಯಲ್ಲಿ ಮಳೆಯನ್ನು ನೆಚ್ಚಿಕೊಳ್ಳಬಹುದಿತ್ತು. ಮೇಲಾಗಿ ಅವರ ಮನೆಯ ಬಾವಿಯಲ್ಲೂ ಕೂಡ ಆ ದಿನಗಳಲ್ಲಿ ಸಾಕಷ್ಟು ಪ್ರಮಾಣದ ನೀರಿತ್ತಂತೆ.

ಜಲ್ನಾದತ್ತ ಸಾಗುವ ಔರಂಗಾಬಾದ್ ಹೆದ್ದಾರಿಯುದ್ದಕ್ಕೂ ನೋಡಿದರೆ ಸುಮಾರು ಅರವತ್ತು ಕಿಲೋಮೀಟರುಗಳ ಬೆಲ್ಟ್ ನಲ್ಲಿ ಬರುವ ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಮೂಸಂಬಿ ತೋಟಗಳನ್ನು ಸಾಮಾನ್ಯವಾಗಿ ಕಾಣಬಹುದು. ಈ ಎಲ್ಲಾ ಮರಗಳೂ ಕೂಡ 2000 ಇಸವಿಯ ಮೊದಲ ಭಾಗದಲ್ಲಿ ನೆಟ್ಟಲ್ಪಟ್ಟಂಥವುಗಳು. ದೌರ್ಭಾಗ್ಯದ ಸಂಗತಿಯೆಂದರೆ ಹೀಗೆ ಮೂಸಂಬಿ ಮರಗಳನ್ನು ನೆಟ್ಟು ಬೆಳೆಸಿದ ಎಲ್ಲಾ ತೋಟಗಳ ಮಾಲೀಕರೂ ಕೂಡ ಸದ್ಯ ನಷ್ಟದಲ್ಲೇ ದಿನತಳ್ಳುತ್ತಿದ್ದಾರೆ.

ಮೂಸಂಬಿಯನ್ನು ಬೆಳೆಯುವುದೆಂದರೆ ಸುಲಭದ ಮಾತೇನೂ ಅಲ್ಲ. ಹಣ್ಣುಗಳನ್ನು ಬಿಡಲು ಶುರುವಾಗುವ ಮುನ್ನದ ನಾಲ್ಕೈದು ವರ್ಷಗಳ ಕಾಲ ಈ ಮರಗಳಿಗೆ ಉತ್ತಮ ಆರೈಕೆಯ ಅವಶ್ಯಕತೆಯಿರುತ್ತದೆ. ಈ ಹಂತವನ್ನು ದಾಟಿಯಾಯಿತು ಅಂದರೆ ಮುಂದಿನ ಇಪ್ಪತ್ತೈದರಿಂದ ಮೂವತ್ತು ವರ್ಷಗಳ ಕಾಲ ವರ್ಷಕ್ಕೆರಡು ಬಾರಿ ಫಲಗಳು ಸಿಗುವುದು ಖಚಿತ. ಆದರೆ ದುರಾದೃಷ್ಟವೆಂಬಂತೆ ಶಿವಾಜಿಗೆ ಮಾತ್ರ ಇಂಥಾ ಫಲಿತಾಂಶಗಳು ದೊರಕಿರಲಿಲ್ಲ. ಶಿವಾಜಿಯ ತೋಟಗಳಲ್ಲಿ ಮೂಸಂಬಿಗಳು ದೊರೆತಿದ್ದು ನಾಲ್ಕು ವರ್ಷಗಳ ಕಾಲ ಮಾತ್ರ (2006-2010).

ಕರಾಜ್ಗಾಂವ್ ಪ್ರದೇಶದ ಮೂಸಂಬಿ ಬೆಳೆಗಾರನಾದ ಶಿವಾಜಿ ಥೋಪ್ರೆ ಸಂಕಷ್ಟದಲ್ಲಿರುವ ತನ್ನ ಬೆಳೆಗಳ ಬಗ್ಗೆ ಹತಾಶೆಯಿಂದ ಮಾತನಾಡುತ್ತಿದ್ದಾನೆ.

2012 ರ ನಂತರದ ವರ್ಷಗಳಲ್ಲಿ ಮರಾಠಾವಾಡ ಪ್ರದೇಶವು ಸತತ ನಾಲ್ಕು ವರ್ಷಗಳ ಕಾಲ ಬರಗಾಲದ ಶಾಪಕ್ಕೀಡಾಗಿ ನೀರಿನ ತೀವ್ರ ಅಭಾವಕ್ಕೆ ತುತ್ತಾಗಿತ್ತು. ``ಕಟಾವಿನ ಮಾತು ಹಾಗಿರಲಿ. ನೀರಿನ ಪಸೆಯೂ ಸಿಕ್ಕದೆ ನಮ್ಮ ತೋಟವೆಲ್ಲಾ ಒಣಗಿ ಬೆರಳೆಣಿಕೆಯ ಮರಗಳಷ್ಟೇ ಬದುಕುಳಿದಿದ್ದವು'', ಅನ್ನುತ್ತಾರೆ ಶಿವಾಜಿ. 2016 ರ ಮಳೆಗಾಲವು ಮರಾಠಾವಾಡಾದ ರೈತರಿಗೆ ಕೊಂಚ ಸಮಾಧಾನವನ್ನು ಮೂಡಿಸಿದ್ದು ಹೌದಾದರೂ ಶಿವಾಜಿಯ ಜಮೀನಿನ ಭಾಗದಲ್ಲಿ ನಿರೀಕ್ಷಿತ ಮಳೆಯಾಗದೆ ಕಿಂಚಿತ್ತು ನಿರಾಳತೆಯೂ ಆತನಿಗೆ ಸಿಗಲಿಲ್ಲವಂತೆ.

ಚೆನ್ನಾದ ದಿನಗಳಲ್ಲಿ ಶಿವಾಜಿ ಥೋಮ್ರೆ ಸುಮಾರು ಹದಿನೈದರಿಂದ ಇಪ್ಪತ್ತು ಟನ್ನುಗಳಷ್ಟು ಮೂಸಂಬಿಗಳನ್ನು ಬೆಳೆದದ್ದೂ ಇದೆ. ``ಮಾರಾಟ ದರದ ಪ್ರಕಾರ ಟನ್ ಒಂದಕ್ಕೆ ಮೂವತ್ತು ಸಾವಿರ ರೂಪಾಯಿಗಳೆಂದು ಲೆಕ್ಕ ಹಿಡಿದರೂ ಈ ಬಾರಿ ಮೂರೂವರೆಯಿಂದ ನಾಲ್ಕು ಲಕ್ಷಗಳು ನನಗೆ ನಷ್ಟವಾಗಿದೆ'', ಎಂದು ಒಣಗಿದ ಮೂಸಂಬಿಗಳನ್ನು ಹೊಂದಿದ ಮರದಡಿಯಲ್ಲಿ ಕುಳಿತು ಲೆಕ್ಕ ಹಾಕುತ್ತಿದ್ದಾನೆ ಶಿವಾಜಿ. ``ಇನ್ನು ಈ ವರ್ಷ ತೋಟಕ್ಕೆಂದೇ ಖರ್ಚು ಮಾಡಿದ್ದ ಒಂದು ಲಕ್ಷವನ್ನು ಪ್ರತ್ಯೇಕವಾಗಿ ಲೆಕ್ಕ ಹಿಡಿಯಬೇಕು. ಕಳೆದ ಐದು ವರ್ಷಗಳಂತೂ ಮೂಸಂಬಿ ಹಣ್ಣಿಗೆ ಬಹಳ ಕೆಟ್ಟಕಾಲವೆಂಬಂತೆ ಸಾಬೀತಾಯಿತು'', ಎಂದು ಹೇಳುತ್ತಲೇ ಇದ್ದಾನೆ ಶಿವಾಜಿ.

ನಿರಂತರವಾಗಿ, ಎಂದೂ ಮುಗಿಯದಂತೆ ಕಾಣುತ್ತಿದ್ದ ಈ ಅವಧಿಯು ಶಿವಾಜಿಯ ಪತ್ನಿಯಾದ ಜ್ಯೋತಿಯನ್ನೂ ಕೂಡ ನಾಲ್ಕು ಕಾಸು ಸಂಪಾದಿಸುವಂತೆ ಮಾಡುವಷ್ಟರ ಮಟ್ಟಿಗೆ ತಂದುನಿಲ್ಲಿಸಿತ್ತು. ಜ್ಯೋತಿ ಬೇರೆ ಕೃಷಿ ಭೂಮಿಗಳಿಗೆ ತೆರಳಿ ಅಲ್ಲಿ ಕೃಷಿ ಕಾರ್ಮಿಕಳಾಗಿ ದುಡಿಯತೊಡಗಿದ್ದಳು. ``ದಿನಕೂಲಿಯಾಗಿ ನನಗೆ ನೂರೈವತ್ತು ರೂಪಾಯಿಗಳ ಆದಾಯ ಸಿಗುತ್ತದೆ. ಈ ಮೊತ್ತವು ಕುಟುಂಬದ ಆದಾಯಕ್ಕೂ ಒಂದು ಆಸರೆ. ಯಾಕೆಂದರೆ ಹಣದ ಅವಶ್ಯಕತೆಯು ಅಚಾನಕ್ಕಾಗಿ ಯಾವಾಗ ಬರುತ್ತದೆ ಎಂದು ಹೇಳಲಾಗುವುದಿಲ್ಲ ನೋಡಿ! ಏಳರ ಪ್ರಾಯದ ನನ್ನ ಸೋದರನ ಮಗಳು ಔರಂಗಾಬಾದಿನ ಆಸ್ಪತ್ರೆಯೊಂದರಲ್ಲಿ ಕಳೆದ ಎರಡು ದಿನಗಳಿಂದ ದಾಖಲಾಗಿದ್ದಾಳೆ. ಅದೇನೋ ಸಿಸ್ಟ್ ಆಪರೇಷನ್ ಆಗಬೇಕು ಎಂದು ವೈದ್ಯರು ಹೇಳಿದ್ದರು. ಈಗಾಗಲೇ ಇದಕ್ಕಾಗಿ ನಾವು ಸುಮಾರು ಹದಿನೈದು ಸಾವಿರಗಳನ್ನು ಖರ್ಚು ಮಾಡಿದ್ದೇವೆ'', ಎನ್ನುತ್ತಿದ್ದಾಳೆ ಜ್ಯೋತಿ.

ಹದಿನೆಂಟು ಮಂದಿ ಸದಸ್ಯರನ್ನು ಹೊಂದಿರುವ ತುಂಬುಕುಟುಂಬವು ಶಿವಾಜಿಯ ಕಷ್ಟದ ದಿನಗಳಲ್ಲಿ ಆಸರೆಯಾಗಿದ್ದಂತೂ ಸತ್ಯ. ಈ ತುಂಬುಕುಟುಂಬದ ಸಹಕಾರವಿಲ್ಲದಿದ್ದರೆ ಕೃಷಿಯನ್ನೇ ನಂಬಿಕೊಂಡು ಆತ ಜೀವನವನ್ನು ನಡೆಸಲಾಗುತ್ತಿರಲಿಲ್ಲ. ಅಂದಹಾಗೆ ಶಿವಾಜಿಯ ಕುಟುಂಬವು ಹಳ್ಳಿಯಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳ ಪುಟ್ಟ ಅಂಗಡಿಯೊಂದನ್ನು ನಡೆಸುತ್ತಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಶಿವಾಜಿ ಸ್ವತಃ ಬ್ಯುಸಿನೆಸ್ ಕರೆಸ್ಪಾಂಡೆಂಟ್ ಆಗಿ ದುಡಿಯುತ್ತಿದ್ದಾನೆ. ಈ ಹುದ್ದೆಯಿಂದಾಗಿ ಅವನಿಗೆ ಏಳು ಸಾವಿರ ರೂಪಾಯಿಗಳ ಮಾಸಿಕ ಆದಾಯವು ದೊರಕುತ್ತದೆ. ``ಕಳೆದ ಐದು ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲದ ಮೊತ್ತವು ಎಂಟು ಲಕ್ಷಗಳಷ್ಟಾಗಿದೆ. ಈಗಂತೂ ಮೂಸಂಬಿಯ ಬದಲಾಗಿ ಬೇರೇನನ್ನಾದರೂ ಬೆಳೆಯಲೇಬೇಕಾದ ಅನಿವಾರ್ಯತೆಯು ನಮ್ಮ ಮುಂದಿದೆ'', ಎನ್ನುತ್ತಾರೆ ಶಿವಾಜಿ.

ಈ ನಿಟ್ಟಿನಲ್ಲೇ ತನ್ನ ಜಮೀನಿನಿಂದ ಮೂಸಂಬಿಯನ್ನು ಸಂಪೂರ್ಣವಾಗಿ ಅಳಿಸಿಬಿಡುವ ಯೋಚನೆಯಲ್ಲಿದ್ದಾನೆ ಶಿವಾಜಿ. ಅಂದರೆ ಹದಿನೈದು ವರ್ಷಗಳ ಹಿಂದೆ ಅಪ್ಪ ನೆಟ್ಟ ಮರಗಳನ್ನು ಈಗ ಬುಡಸಮೇತ ಕಿತ್ತು ಉರುಳಿಸಬೇಕಿದೆ. ಶೀಘ್ರದಲ್ಲೇ ಈ ಯೋಜನೆಗಳು ಕಾರ್ಯರೂಪಕ್ಕೂ ಬಂದಿವೆ. ಶಿವಾಜಿ ಖುದ್ದು ಹೇಳುವಂತೆ 2017 ರ ಬೇಸಿಗೆಯಲ್ಲಿ ಸುಮಾರು ಐವತ್ತು ಮರಗಳನ್ನು ಬುಡಸಮೇತ ಕೀಳಲಾಗಿದೆ. ``ನಾನಾಗಲೇ ಜೆ.ಸಿ.ಬಿ ಯನ್ನು ಬಾಡಿಗೆಗೆ ತರಿಸಿಕೊಂಡಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉಳಿದ ಮುನ್ನೂರೈವತ್ತು ಮರಗಳನ್ನೂ ಕೂಡ ಕಡಿದು ಉರುಳಿಸುತ್ತೇವೆ. ಅಷ್ಟು ಪ್ರಮಾಣದ ನೀರಿನ ಅಗತ್ಯವಿರುವ ಮತ್ತು ಲಾಭದ ಸಾಧ್ಯತೆಗಳ ವಿಚಾರಕ್ಕೆ ಬಂದರೆ ತೀರಾ ಅನಿಶ್ಚಿತತೆಯುಳ್ಳ ಮೂಸಂಬಿಯನ್ನು ನಂಬಿ ಬದುಕುವ ಪ್ರಶ್ನೆಯೇ ಇಲ್ಲ'', ಎಂದು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟ ಮಾತಿನಲ್ಲಿ ತಿಳಿಸುತ್ತಾರೆ ಶಿವಾಜಿ ಥೋಪ್ರೆ.

PHOTO • Parth M.N.

ಔರಂಗಾಬಾದ್, ಜಲ್ನಾ ಮತ್ತು ನಂದೇದ್ ಪ್ರದೇಶಗಳಲ್ಲಿ ಬೆಳೆಯಲಾಗುವ ಮೂಸಂಬಿಗಳು ಮಹಾರಾಷ್ಟ್ರದಲ್ಲಷ್ಟೇ ಅಲ್ಲದೆ ಭಾರತದಾದ್ಯಂತ ಸರಬರಾಜಾಗುವ ಮೂಸಂಬಿಗಳು.

ಹಾಗೆ ನೋಡಿದರೆ ರಣಬಿಸಿಲೂ ಕೂಡ ಮೂಸಂಬಿಯ ಬೆಳೆಗೆ ಸೂಕ್ತವಾದುದಲ್ಲ. 2017 ರ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಂದೆರಗಿದ್ದ ಬಿಸಿಗಾಳಿಯ ಮಾರುತದಿಂದಾಗಿ ಸಾಕಷ್ಟು ಪ್ರಮಾಣದ ನಷ್ಟವಾಗಿತ್ತು. ಈ ಉಷ್ಣಹವೆಯಿಂದಾಗಿ ವಾತಾವರಣದ ತಾಪಮಾನವು ಬರೋಬ್ಬರಿ ನಲವತ್ತೈದು ಡಿಗ್ರಿಗಳಷ್ಟು ಏರಿತ್ತಂತೆ. ``ಮಿತಿಮೀರಿದ ಬಿಸಿಯಿಂದಾಗಿ ಹಣ್ಣಿನ ಕೋಶಗಳು ಸಡಿಲವಾಗುತ್ತವೆ. ಇಂಥಾ ಪರಿಸ್ಥಿತಿಗಳಲ್ಲಿ ಹಣ್ಣುಗಳು ಸಂಪೂರ್ಣವಾಗಿ ಬೆಳವಣಿಗೆಯಾಗುವ ಮೊದಲೇ ಬಿದ್ದುಹೋಗುವುದು ಸಾಮಾನ್ಯ'', ಎನ್ನುತ್ತಾರೆ ಶಿವಾಜಿ.

ಮರಾಠಾವಾಡಾದ ಜಲ್ನಾ, ಔರಂಗಾಬಾದ್ ಮತ್ತು ನಂದೇದ್ ಜಿಲ್ಲೆಗಳು ಈ ದೇಶದಲ್ಲೇ ಅತೀ ಹೆಚ್ಚು ಮೂಸಂಬಿಯನ್ನು ಬೆಳೆಯುವ ಪ್ರದೇಶಗಳಾಗಿವೆ. ಭಾರತದ ವಿವಿಧ ಪ್ರದೇಶಗಳಿಗೆ ಸರಬರಾಜಾಗುವ ಮೂಸಂಬಿಗಳಲ್ಲಿ ಸಿಂಹಪಾಲು ಈ ಪ್ರದೇಶಗಳದ್ದೇ. ಆದರೆ ಸದ್ಯದ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಮರಾಠಾವಾಡಾದ ಮೂಸಂಬಿ ಸಾಮ್ರಾಜ್ಯವು ಅವನತಿಯತ್ತ ಸಾಗುತ್ತಿರುವಂತೆ ಕಾಣುತ್ತಿದೆ. ಬಹಳಷ್ಟು ರೈತರು ಈಗ ಮೂಸಂಬಿಯಿಂದ ಕಡಿಮೆ ಪ್ರಮಾಣದ ನೀರಿನ ಅವಶ್ಯಕತೆಯಿರುವ ದಾಳಿಂಬೆಯಂತಹ ಹಣ್ಣುಗಳತ್ತ ಆಸಕ್ತಿಯನ್ನು ತೋರುತ್ತಿದ್ದಾರೆ. ಇನ್ನು ಕೆಲವರು ಸಾಂಪ್ರದಾಯಿಕ ಖಾರಿಫ್ ಋತುವಿನ ಬೆಳೆಗಳಾದ ಹತ್ತಿಯ ಕಡೆಗೂ ವಾಲಿಯಾಗಿದೆ.

2013 ರಲ್ಲೇ ಸುಮಾರು ಮೂವತ್ತು ಪ್ರತಿಶತಗಳಷ್ಟು ಮೂಸಂಬಿ ತೋಟಗಳನ್ನು ಅಳಿಸಿಹಾಕಲಾಗಿತ್ತು. ಮೂಸಂಬಿ ಮರಗಳನ್ನು ಹೊಂದಿದ್ದ ಮರಾಠಾವಾಡಾದ ಒಂದೂವರೆ ಲಕ್ಷ ಎಕರೆಗಳ ಜಮೀನು ಆಗಲೇ ಸಂಕಷ್ಟದ ಸ್ಥಿತಿಯನ್ನು ತಲುಪಿತ್ತು. ಮರಗಳನ್ನು ಜೀವಂತವಾಗಿಡುವ ಕೊನೆಯ ಮಾರ್ಗವಾಗಿ ರೈತರು ಚರಂಡಿಗಳ ಕಲುಷಿತ ನೀರನ್ನು ಅವಲಂಬಿಸಿ ಕೈಚೆಲ್ಲಿದ್ದರು. ಆರ್ಥಿಕವಾಗಿ ಕೊಂಚ ವಾಸಿ ಎಂಬಂತಿದ್ದ ರೈತರು ನೀರಿನ ಟ್ಯಾಂಕರುಗಳ ಮೇಲೆ ಖರ್ಚು ಮಾಡಿದ್ದೇ ಮಾಡಿದ್ದು. ಆದರೆ ಯಾವುದೂ ಬರಖತ್ತಾಗಲೇ ಇಲ್ಲ!

ವೀಡಿಯೋ: ಗಧೇ ಜಲಗಾಂವ್ ಹಳ್ಳಿಯ ರೈತನಾದ ಭಾವುಸಾಹೇಬ್ ಭೇರೆ ತಾನು ಮೂಸಂಬಿ ಮರಗಳನ್ನು ಉಳಿಸಿಕೊಳ್ಳಲು ಪಡಬೇಕಾಗಿ ಬಂದ ಪಾಡುಗಳನ್ನು ಹೇಳುತ್ತಿದ್ದಾನೆ.

ಕರಜ್ಗಾಂವ್ ಪ್ರದೇಶದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಗಧೆ ಜಲಗಾಂವ್ ಹಳ್ಳಿಯ ನಿವಾಸಿಯಾದ ಭಾವುಸಾಹೇಬ್ ಭೇರೆ ಇಂಥವರಲ್ಲೊಬ್ಬ. ಮೂವತ್ತನಾಲ್ಕರ ಪ್ರಾಯದ ಭಾವುಸಾಹೇಬ್ ಎಪ್ರಿಲ್ 2017 ರಲ್ಲಿ ಮೂಸಂಬಿ ಗಿಡಗಳನ್ನು ಜೀವಂತವಾಗಿಡಲೆಂದೇ ಸುಮಾರು ಐವತ್ತು ಸಾವಿರ ರೂಪಾಯಿಗಳನ್ನು ನೀರಿಗಾಗಿ ವ್ಯಯಿಸಿದ್ದ. ``ಎಲ್ಲವೂ ಒಣಗಿಹೋದವು. ನಾನು ಏನೇನೋ ಮಾಡಿ ಕೆಲ ಗಿಡಗಳನ್ನು ಉಳಿಸಿಕೊಂಡಿದ್ದಂತೂ ಹೌದು. ಆದರೂ ಇಪ್ಪತ್ತು ಗಿಡಗಳು ಸತ್ತುಹೋದವು'' ಎಂದು ತನ್ನ ಎರಡೂವರೆ ಎಕರೆಯ ತೋಟದಲ್ಲಿ ಹೆಜ್ಜೆಹಾಕುತ್ತಾ ಹತಾಶೆಯಿಂದ ನುಡಿಯುತ್ತಿದ್ದಾನೆ ಭಾವುಸಾಹೇಬ. ಮೂಸಂಬಿ ತೋಟದ ಪಕ್ಕದಲ್ಲಿರುವ ಎರಡೂವರೆ ಎಕರೆಭೂಮಿಯಲ್ಲಿ ಆತ ಹತ್ತಿ ಮತ್ತು ಜೋಳವನ್ನು ಬೆಳೆಯುತ್ತಿದ್ದಾನೆ.

ಎಲ್ಲರಂತೆ ಭಾವುಸಾಹೇಬನ ತೋಟಗಳೂ ಕೂಡ 2000 ಇಸವಿಯ ಅವಧಿಯಲ್ಲೇ ರೂಪತಾಳಿದವುಗಳು. ಈತ ಸ್ವತಃ ಹೇಳುವಂತೆ ಕೊನೆಯ ಐದು ವರ್ಷಗಳಂತೂ ಮೂಸಂಬಿ ಬೆಳೆಗಾರರಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ``ಸುಮಾರು ನಾಲ್ಕು ಲಕ್ಷಗಳ ಸಾಲದ ಭಾರ ನನ್ನ ಹೆಗಲ ಮೇಲಿದೆ. ಮೂರು ತಿಂಗಳ ಹಿಂದೆ ಮಗಳ ಮದುವೆ ಮಾಡಿಸಿದೆ. ಮನೆಯಲ್ಲೊಂದು ಮದುವೆಯ ಸಮಾರಂಭ ಅಂದರೆ ಖರ್ಚು ಅಷ್ಟಿಷ್ಟಲ್ಲ. ಹಾಗಿರುವಾಗ ಮೂಸಂಬಿಯಂತಹ ಬೆಳೆಯನ್ನು ನಂಬಿಕೊಂಡಿದ್ದರೆ ನಮ್ಮನ್ನು ದೇವರೇ ಕಾಪಾಡಬೇಕು. ಈಗ ಜಮೀನಿನಲ್ಲೇ ಚಿಕ್ಕದೊಂದು ಕೊಳದಂಥಾ ವ್ಯವಸ್ಥೆಯನ್ನು ಮಾಡಿಸಿದ್ದೇನೆ. ಇದಾದರೂ ನೀರಿನ ಸಮಸ್ಯೆಗಳಿಗೆ ಒಂದು ಪರಿಹಾರವನ್ನು ತರಬಲ್ಲದು ಎಂಬ ನಿರೀಕ್ಷೆ ನನ್ನದು'', ಎನ್ನುತ್ತಾರೆ ಭಾವುಸಾಹೇಬ.

PHOTO • Parth M.N.

``ಅತ್ತ ಮದುವೆಗೂ ಹಣ ಹೊಂದಿಸಬೇಕು, ಇತ್ತ ಮೂಸಂಬಿಯೇ ನಮ್ಮ ಆಪತ್ಭಾಂದವ ಅನ್ನುವಂತಹ ಪರಿಸ್ಥಿತಿಗಳಿದ್ದರೆ ಸಂಕಷ್ಟವಂತೂ ನಮಗೆ ಕಟ್ಟಿಟ್ಟ ಬುತ್ತಿ'', ಅನ್ನುತ್ತಿದ್ದಾರೆ ಭಾವುಸಾಹೇಬ್ ಭೇರೆ.

ಸದ್ಯ ಮಹಾರಾಷ್ಟ್ರ ಸರಕಾರವು ರಾಜ್ಯದ ರೈತರೆಲ್ಲರಿಗೂ ಜಮೀನಿನಲ್ಲಿ ಪುಟ್ಟ ಕೊಳಗಳನ್ನು ನಿರ್ಮಿಸಲು ಸಬ್ಸಿಡಿಗಳನ್ನು ಕೊಡುತ್ತಿದೆ. ಈ ರೀತಿಯಾದರೂ ನೀರಿನ ಸಂಗ್ರಹಣೆ ಮತ್ತು ಉಪಯುಕ್ತ ಬಳಕೆಗಳಾಗಲಿ ಎಂಬ ಯೋಜನೆ ಸರಕಾರದ್ದು. ನೀರನ್ನೇ ನಂಬಿಕೊಂಡಿರುವ ಮೂಸಂಬಿ ಬೆಳೆಗಾರರಂತೂ ಈ ಸಬ್ಸಿಡಿಯನ್ನು ಪಡೆದುಕೊಳ್ಳಲು ಬಯಸುತ್ತಿರುವ ಮುಂಚೂಣಿಯ ಆಕಾಂಕ್ಷಿಗಳಲ್ಲೊಬ್ಬರು. ಆದರೆ ಔರಂಗಾಬಾದಿನಲ್ಲಿರುವ ವಿಭಾಗೀಯ ಆಯುಕ್ತರ ಕಚೇರಿಯ ಅಂಕಿಅಂಶಗಳು ಮಾತ್ರ ಬೇರೆಯದನ್ನೇ ಹೇಳುತ್ತಿವೆ. ಈ ದಾಖಲೆಗಳ ಪ್ರಕಾರ 2016-17 ರಲ್ಲಿ ಮರಾಠಾವಾಡಾದ ಎಂಟು ಜಿಲ್ಲೆಗಳಲ್ಲಿ ಕೇವಲ 13613 ಕೊಳಗಳನ್ನಷ್ಟೇ ನಿರ್ಮಿಸಲಾಗಿದೆ. ಆದರೆ ಆಡಳಿತ ಮಂಡಳಿಯ ಗುರಿಯು 39600 ಕೊಳಗಳನ್ನು ನಿರ್ಮಿಸುವುದಾಗಿತ್ತು. ಇನ್ನು ಕೊಳಗಳನ್ನು ನಿರ್ಮಿಸಿದ ಈ 13613 ರೈತರ ಬಗ್ಗೆ ಹೇಳುವುದಾದರೆ ಇವರುಗಳಲ್ಲಿ ಕೇವಲ 4429 ರೈತರಿಗಷ್ಟೇ ಸಬ್ಸಿಡಿಯ ಭಾಗ್ಯವು ಲಭಿಸಿದೆ.

ಅದೇನೇ ಇರಲಿ. ಭಾವುಸಾಹೇಬ ಕೊನೆಯ ದಾಳವೆಂಬಂತೆ ತನ್ನ ಜಮೀನಿನಲ್ಲಿ ಈ ಕೊಳವನ್ನು ನಿರ್ಮಿಸಿದ್ದಾನೆ. ಇನ್ನು ಇದಕ್ಕಾಗಿ ಎರಡು ಲಕ್ಷದ ಮೊತ್ತವನ್ನೂ ಕೂಡ ವ್ಯಯಿಸಿದ್ದಾನೆ. ಈ ಬಾರಿಯಾದರೂ ಉತ್ತಮ ಪ್ರಮಾಣದ ಮಳೆಯಾಗಿ, ಕೊಳವು ತುಂಬಿ, ಮೂಸಂಬಿ ಬೆಳೆಗೆ ಆಸರೆಯಾಗಲಿದೆ ಎಂಬ ನಿರೀಕ್ಷೆ ಆತನದ್ದು. ``ಇದೇ ಕೊನೆ, ಈ ಪ್ರಯೋಗವೇನಾದರೂ ವಿಫಲವಾದಲ್ಲಿ ಮುಂದಿನ ವರ್ಷ ಇಲ್ಲಿ ಮೂಸಂಬಿ ತೋಟವೇ ನಿಮಗೆ ಕಾಣಸಿಗುವುದಿಲ್ಲ'', ಎಂದು ನುಡಿಯುತ್ತಿರುವ ಭಾವುಸಾಹೇಬನ ಮಾತುಗಳಲ್ಲಿ ನಿರೀಕ್ಷೆಗಳೂ, ಗೊಂದಲಗಳೂ ಏಕಕಾಲದಲ್ಲಿ ಕಣ್ಣುಮುಚ್ಚಾಲೆಯಾಡುತ್ತಿರುವಂತೆ ಕಾಣುತ್ತಿದೆ.

(Translation: Prasad Naik )

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Other stories by Parth M.N.
Translator : Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Prasad Naik