ಕಳೆದ ವರ್ಷದ ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಆದಿಲಕ್ವ್ಮಿಗೆ (72) ಏರನ್ನು ಹತ್ತಿ ತನ್ನ ಮನೆಯನ್ನು ತಲುಪುವುದು ಕಷ್ಟವಾಗುತ್ತಿದೆ. ಬೆಂಗಳೂರಿನ ದಕ್ಷಿಣ ಭಾಗದ ಸುದ್ದಗುಂಟೆ ಪಾಳ್ಯದಲ್ಲಿರುವ ಭವಾನಿ ನಗರದ ಕೊಳೆಗೇರಿ ಕಾಲೋನಿಯಲ್ಲಿನ ಆಕೆಯ ಮನೆಯಲ್ಲಿರುವುದು ಏಕೈಕ ಕೊಠಡಿಯಷ್ಟೇ. ಕುಟುಂಬದ ಇತರೆ ಆರು ಜನರ ವಾಸವೂ ಅಲ್ಲಿಯೇ.

ಸುಮಾರು 30 ವರ್ಷಗಳ ಹಿಂದೆ ಆದಿಲಕ್ಷ್ಮಿ ಮತ್ತು ಆಕೆಯ ಪತಿ ಕುನ್ನಯ್ಯ ರಾಮ್ (83) ಕೆಲಸವನ್ನರಸಿ ತಮಿಳು ನಾಡಿನ ಮಧುರೈ ಜಿಲ್ಲೆಯಿಂದ ಬೆಂಗಳೂರಿಗೆ ವಲಸೆ ಬಂದರು. ಕುನ್ನಯ್ಯ ರಾಮ್, ತನಗೆ ದೊರೆತ ಬಡಗಿಯ ಕೆಲಸದಲ್ಲಿ ತೊಡಗಿರುತ್ತಿದ್ದರೆ, ಆದಿಲಕ್ಷ್ಮಿಯು ತನ್ನ ಇಬ್ಬರು ಗಂಡು ಹಾಗೂ ಹೆಣ್ಣುಮಕ್ಕಳ ಪಾಲನೆ ಪೋಷಣೆಯಲ್ಲಿ ಮಗ್ನಳಾದಳು.

ವಯಸ್ಸಾಗಿದೆಯೆಂದಾಕ್ಷಣ ನಾನು ಊಟಕ್ಕೆ ಅರ್ಹಳಲ್ಲವೆಂದೇ? ಮಾಹೆಯಾನ ಪ್ರತಿಯೊಬ್ಬ ವ್ಯಕ್ತಿಗೆ ನೀಡಲಾಗುವ ಏಳು ಕೆ. ಜಿ. ಅಕ್ಕಿಯನ್ನು ಆಕೆ ಹಾಗೂ ಆಕೆಯ ಪತಿಗೆ ನಿರಾಕರಿಸಿದಾಗಿನಿಂದಲೂ ಆದಿಲಕ್ಷ್ಮಿ ಈ ಪ್ರಶ್ನೆಯನ್ನು ಅನೇಕ ಬಾರಿ ಪುನರುಚ್ಚರಿಸಿದ್ದಾಳೆ. ಅಕ್ಕಿಯೊಂದಿಗೆ ಉಪ್ಪು, ಸಕ್ಕರೆ, ತಾಳೆ ಎಣ್ಣೆ ಹಾಗೂ ಸಾಬೂನುಗಳನ್ನು ಸಹ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದ್ದು, ಇದಕ್ಕೆ ಅವರು 150 ರೂ.ಗಳನ್ನು ಪಾವತಿಸತಕ್ಕದ್ದು. ಆದರೆ ಇದನ್ನೂ ಸಹ ಅವರಿಗೆ ನಿಲ್ಲಿಸಲಾಗಿದೆ.

ಈ ವಯೋವೃದ್ಧ ದಂಪತಿಗಳಿಗೆ ಪಡಿತರವನ್ನು ನಿರಾಕರಿಸಿದ್ದೇಕೆ? ಅವರು ಆಗಾಗ್ಗೆ ಭೇಟಿ ನೀಡುವ ಇವರ ಮನೆಯಿಂದ ಸುಮಾರು ಎರಡು ಕಿ. ಮೀ. ದೂರದ ಸಾರ್ವಜನಿಕ ವಿತರಣಾ ಕೇಂದ್ರದಲ್ಲಿ ಈ ಇಬ್ಬರ ಬೆರಳ ಗುರುತಿನ ದೃಢೀಕರಣವು ವಿಫಲಗೊಂಡಿತು. ಈ ಕಾರ್ಯನಿರ್ವಹಣೆಗೆಂದೇ ಚಿಕ್ಕ ಯಂತ್ರಗಳನ್ನು ಬೆಂಗಳೂರಿನ ಪಡಿತರ ವಿತರಣಾ ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಈ ಜಿಲ್ಲೆಯಲ್ಲಿ ಇಂತಹ ಸುಮಾರು 1,800 ವಿತರಣಾ ಕೇಂದ್ರಗಳಿವೆ.

An elderly man sitting on the floor with a young girl standing behind him
PHOTO • Vishaka George
An elderly man and woman standing outside houses
PHOTO • Vishaka George

ಬೆರಳ ಗುರುತಿನ ದೃಢೀಕರಣವು ವಿಫಲಗೊಂಡ ಕಾರಣ, ಕುನ್ನಯ್ಯ ರಾಂ ಮತ್ತು ಅದಿಲಕ್ಷ್ಮಿಗೆ ಆರು ತಿಂಗಳಿನಿಂದಲೂ ಪಡಿತರವು ದೊರೆತಿರುವುದಿಲ್ಲ.

ಭಾರತದಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಆಧಾರ್ ನ ವಿವರಗಳನ್ನು ರೇಷನ್ ಕಾರ್ಡ್‍ಗಳೊಂದಿಗೆ ಸಂಪರ್ಕಿಸಲಾಗಿದ್ದು, ಜನರು ತಮ್ಮ ಮಾಸಿಕ ಪಡಿತರವನ್ನು ಪಡೆಯಲು ಹೋದಾಗಲೆಲ್ಲ ಪ್ರತಿ ಬಾರಿಯೂ ತಮ್ಮ ಬೆರಳ ಗುರುತನ್ನು ದೃಢೀಕರಿಸತಕ್ಕದ್ದು.  2017 ರ ಜೂನ್ ಮಾಹೆಯ ಗಡುವನ್ನು ನೀಡಿದ್ದಾಗ್ಯೂ, ಕರ್ನಾಟಕದಲ್ಲಿ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಆಧಾರ್ ನೊಂದಿಗೆ ಸಂಪರ್ಕಿಸುವುದನ್ನು ಎಂದಿನಿಂದ ಕಡ್ಡಾಯಗೊಳಿಸಲಾಯಿತು ಎಂಬುದರ ವಿವರಗಳಲ್ಲಿ ಏಕರೂಪತೆಯಿಲ್ಲ. ರಾಜ್ಯದ ಸುಮಾರು ಎಂಟು ಮಿಲಿಯನ್ (ಈ ಅಂದಾಜಿನಲ್ಲಿ ವ್ಯತ್ಯಾಸವಾಗಲೂಬಹುದು) ಬಿ.ಪಿ.ಎಲ್ ಕಾರ್ಡುದಾರರನ್ನು ಕುರಿತಂತೆ ಇದು ತನ್ನ ಮಹತ್ತರ ಪರಿಣಾಮವನ್ನು ಬೀರಿದೆ. ಆಧಾರ್‍ಗೆ ಸಂಪರ್ಕಿಸಿಲ್ಲದ ಪಡಿತರ ಚೀಟಿಗಳನ್ನು "ಖೋಟಾ ಚೀಟಿಗಳೆಂದು" ಪರಿಗಣಿಸಲಾಗುತ್ತದೆಂದು ಕರ್ನಾಟಕದ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಯು.ಟಿ. ಖಾದರ್, ಮಾಧ್ಯಮ ಪ್ರತಿನಿಧಿಗಳೊಂದಿಗೆ ತಿಳಿಸಿರುತ್ತಾರೆ.

2009 ರಲ್ಲಿ ಆರಂಭಗೊಂಡ ಆಧಾರ್ ಗುರುತಿನ ವ್ಯವಸ್ಥೆಯು; ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನ "ಐಚ್ಛಿಕ" ವ್ಯವಸ್ಥೆಯಾಗಿತ್ತು. ದಿನಗಳೆದಂತೆ ಎಲ್.ಪಿ.ಜಿ ಸಂಪರ್ಕ, ಸ್ಕಾಲರ್‍ಶಿಪ್‍ಗಳು ಮುಂತಾದ ವಿವಿಧ ಸರ್ಕಾರಿ ಯೋಜನೆಗಳನ್ನು ಪಡೆಯಲು ಆಧಾರ್‍ನ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಯಿತು. ಖಾಸಗಿ ನಿರ್ವಾಹಕರಿಂದ ಒದಗಿಸಲಾಗುವ ಬ್ಯಾಂಕ್ ಖಾತೆ, ಮೊಬೈಲ್ ದೂರವಾಣಿ ಸಂಪರ್ಕಗಳನ್ನೂ ಒಳಗೊಂಡಂತೆ ವಿವಿಧ ಸೇವೆಗಳಿಗೆ ಆಧಾರ್ ಗುರುತಿನ ಸಂಖ್ಯೆಯನ್ನು ಸಹ ಸಂಯೋಜಿಸಲಾಗುತ್ತಿದೆ. ಸದರಿ ವ್ಯವಸ್ಥೆಯಲ್ಲಿನ ದೋಷಗಳು, ವಂಚನೆ ಹಾಗೂ ಭಾರತೀಯ ಪ್ರಜೆಗಳ ಮೇಲಿನ ಬೃಹತ್ ಸರ್ಕಾರಿ ಕಣ್ಗಾವಲಿನ ಸಂಭಾವ್ಯತೆಗಳ ಬಗ್ಗೆ ಹೆಚ್ಚಿನ ಟೀಕೆಗಳು ಕೇಳಿಬರುತ್ತಿವೆ. ಅಲ್ಲದೆ ಆಧಾರ್ ‍ನ ಸಾಂವಿಧಾನಿಕ ಸಿಂಧುತ್ವವನ್ನು ಆಕ್ಷೇಪಿಸಲಾದ ಅಧಿಕ ಸಂಖ್ಯೆಯ ಅಹವಾಲುಗಳ ಬಗ್ಗೆ ಉಚ್ಛ ನ್ಯಾಯಾಲಯವು ಪ್ರಸ್ತುತದಲ್ಲಿ ವಿಚಾರಣೆ ನಡೆಸುತ್ತಿದೆ.

2016 ರ ಆರಂಭದಲ್ಲಿಯೇ ತಮ್ಮ ಆಧಾರ್ ಚೀಟಿಗಳನ್ನು ಪಡೆದಿದ್ದಾಗ್ಯೂ, ಕುನ್ನಯ್ಯ ರಾಂ ಮತ್ತು ಆದಿಲಕ್ಷ್ಮಿಯವರಿಗೆ ಯಾವುದೇ ಲಾಭವಿಲ್ಲ. "ನಮಗೆ ವಯಸ್ಸಾಗಿದ್ದು, ನಮ್ಮ ಬೆರಳ ಗುರುತುಗಳು ಹೊಂದಾಣಿಕೆಯಾಗುವುದಿಲ್ಲವೆಂಬ ಕಾರಣಕ್ಕೆ [ಪಡಿತರ ಅಂಗಡಿಲ್ಲಿನ ಯಂತ್ರದೊಂದಿಗೆ], ಮತ್ತೊಮ್ಮೆ ದಾಖಲಾತಿ ಮಾಡುವಂತೆ ತಿಳಿಸಲಾಯಿತು [ಆಧಾರ್ ಕೇಂದ್ರದಲ್ಲಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ]", ಎನ್ನುತ್ತಾರೆ ಕುನ್ನಯ್ಯ ರಾಂ.

ಆದರೆ ಇಲ್ಲಿ ಮತ್ತೊಂದು ಸಮಸ್ಯೆಯಿದೆ: "ದಾಖಲಾತಿಯ ಪ್ರಕ್ರಿಯೆಗೆ ಬೆರಳ ಗುರುತನ್ನು ಬಳಸುತ್ತಿದ್ದು, ಸೌಲಭ್ಯಗಳನ್ನು ಪಡೆಯಲು, ಬೆರಳ ಗುರುತನ್ನು ಪಾಸ್‍ವರ್ಡ್‍ನಂತೆ ಬಳಸಲಾಗುತ್ತದೆ. ದೈಹಿಕ ಶ್ರಮದ ಕೆಲಸಗಾರರ ಕೈಗಳು ಅವರ ಕೆಲಸದ ದೆಸೆಯಿಂದಾಗಿ ಸೀಳುಬಿಟ್ಟರುವುದನ್ನು ಆಧಾರ್‍ನ ತಂತ್ರಜ್ಞಾನವು ಗುರುತುಹಿಡಿಯುವುದಿಲ್ಲ ಅಥವ ವೃದ್ಧಾಪ್ಯದಿಂದಾಗಿ ಬೆರಳ ಗುರುತುಗಳಲ್ಲಿ ಬದಲಾವಣೆಯಾಗುತ್ತದೆ", ಎನ್ನುತ್ತಾರೆ, ಆರ್ಟಿಕಲ್ 19 ಎಂಬ ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಯಲ್ಲಿ ಕಾನೂನು ಸಂಶೋಧಕಿಯಾದ ವಿದುಷಿ ಮರ್ದ. ಇವರು ಈ ಹಿಂದೆ ಬೆಂಗಳೂರಿನ ದಿ ಸೆಂಟರ್ ಫಾರ್ ಇಂಟರ್‍ನೆಟ್ ಅಂಡ್ ಸೊಸೈಟಿ ಇನ್ ಬೆಂಗಳೂರು ಎಂಬಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆಧಾರ್ ವ್ಯವಸ್ಥೆಯು, ತಾನು ರಕ್ಷಣೆಯನ್ನು ಒದಗಿಸುತ್ತೇನೆಂದು ಹೇಳುವ ಜನ ವರ್ಗವನ್ನು ಕುರಿತಂತೆ ಸಮಸ್ಯಾತ್ಮಕ ತಂತ್ರಜ್ಞಾನವನ್ನು ಬಳಸುತ್ತಿದೆ.

An old woman's hands
PHOTO • Vishaka George
An old man's hands
PHOTO • Vishaka George

ಆದಿಲಕ್ಷ್ಮಿ ಹಾಗೂ ಕುನ್ನಯ್ಯ ರಾಂ ಅವರ ಅಂಗೈಗಳಂತೆಯೇ ಈ ಸೀಳುಬಿಟ್ಟ ಅಂಗೈಗಳೂ ಸಹ ಬೆರಳ ಗುರುತಿನ ಮೇಲೆ ಪ್ರಭಾವ ಬೀರುತ್ತವೆ. ಆಧಾರ್‍ನ ತಾಂತ್ರಿಕ ವ್ಯವಸ್ಥೆಯಲ್ಲಿ ಈ ಸಮಸ್ಯೆಯನ್ನು ಸರಿಪಡಿಸುವ ಯಾವುದೇ ಮಾರ್ಗವಿಲ್ಲ.

ಆದಿಲಕ್ಷ್ಮಿ ಹಾಗೂ ಕುನ್ನಯ್ಯ ರಾಂ, ಕಟ್ಟಡ ಕಾರ್ಮಿಕನಾದ ತಮ್ಮ ಹಿರಿಯ ಮಗನೊಂದಿಗೆ ವಾಸಿಸುತ್ತಾರೆ. ಈತನಿಗೆ ಪತ್ನಿ ಹಾಗೂ ಮೂರು ಮಕ್ಕಳಿದ್ದಾರೆ (ಬಡಗಿಯ ಕೆಲಸವನ್ನು ನಿರ್ವಹಿಸುವ ಇವರ ಕಿರಿಯ ಮಗನು ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ).

"ಈಗಲೂ ನಮ್ಮ ಮಗನ ಮೇಲೆ ಅವಲಂಬಿತರಾಗಿರುವುದು ನಮ್ಮ ಘನತೆಗೆ ತಕ್ಕುದಲ್ಲ. ಆತನಿಗೂ ಮೂರು ಮಕ್ಕಳನ್ನು ಸಲಹುವ ಹಾಗೂ ಅವರಿಗೆ ವಿದ್ಯಾಭ್ಯಾಸವನ್ನು ಒದಗಿಸುವ ಜವಾಬ್ದಾರಿಯಿದೆ. ಅವರು ತಮ್ಮ ಪಡಿತರವನ್ನು ನಮ್ಮೊಂದಿಗೇಕೆ ಹಂಚಿಕೊಳ್ಳಬೇಕು?", ಎನ್ನುತ್ತಾರೆ ಅಸಹಾಯಕ ಆದಿಲಕ್ಷ್ಮಿ.

ಐನೂರು ರೂ.ಗಳ ಅವರ ವೃದ್ಧಾಪ್ಯ ವೇತನವು ಪ್ರತಿ ತಿಂಗಳ ಆರೋಗ್ಯಕ್ಕೆ ಸಂಬಂಧಿಸಿದ ಬಾಬ್ತುಗಳಿಗೆ ವೆಚ್ಚವಾಗುತ್ತದೆ. ಇತ್ತೀಚೆಗೆ ಆದಿಲಕ್ಷ್ಮಿಗೆ ಕಣ್ಣಿನಪೊರೆಯ ಶಸ್ತ್ರಚಿಕಿತ್ಸೆಯಾಯಿತಲ್ಲದೆ, ಅಪಘಾತದಿಂದ ಕಾಲು ಮುರಿದಿದ್ದು, ಅದರಿಂದ ಚೇತರಿಸಿಕೊಳ್ಳುತಿದ್ದಾರೆ. ಕುನ್ನಯ್ಯ ರಾಂಗೆ ಹೃದಯಕ್ಕೆ ಸಂಬಂಧಿಸಿದ ವ್ಯಾಧಿಯಿದ್ದು, ಮಂಡಿಗಳು ಬಲಹೀನವಾಗಿವೆಯಲ್ಲದೆ ಆಗಾಗ ತಲೆಸುತ್ತು ಬರುತ್ತದೆ.

ನಾನು ಮಾತನಾಡಿಸಿದ ಪಡಿತರ ಅಂಗಡಿಯ ಸಹಾಯಕನು ತನ್ನ ಹೆಸರನ್ನು ಬರೆಯದಂತೆ ವಿನಂತಿಸಿ, ವೃದ್ಧರಿಗೆ ಬಿ.ಪಿ.ಎಲ್ ಕಾರ್ಡ್ ಇದ್ದರಷ್ಟೇ ಸಾಕಲ್ಲವೇ? ಎನ್ನುತ್ತಾನೆ. ಕುಟುಂಬದ ಒಬ್ಬ ವ್ಯಕ್ತಿ ಆತ ಅಥವ ಆಕೆಯ ಬೆರಳ ಗುರುತನ್ನು ಪ್ರಮಾಣೀಕರಿಸತಕ್ಕದ್ದು. ಹೀಗಿರುವಾಗ ಪತಿ ಮತ್ತು ಪತ್ನಿಯರಿಬ್ಬರ ಬಯೋಮೆಟ್ರಿಕ್ ಹೊಂದಿಕೆಯಾಗದಿದ್ದಲ್ಲಿ...?

"ನನಗೆ ಅವರು ಬಹಳ ದಿನಗಳಿಂದ ಪರಿಚಯವಿದ್ದಾಗ್ಯೂ, ಯಂತ್ರದ ತಪಾಸಣೆಯಲ್ಲಿ ಅವರು ಯಶಸ್ವಿಯಾಗದಿದ್ದಲ್ಲಿ, ನಾನು ಅವರಿಗೆ ರೇಶನ್ ನೀಡುವಂತಿಲ್ಲ" ಎನ್ನುತ್ತಾನೆ ಆತ. ಅವರು ಮತ್ತೊಮ್ಮೆ ನೋಂದಣಿ ಮಾಡಿಸಿ, ಬೆರಳ ಗುರುತನ್ನು ಪ್ರಮಾಣೀಕರಿಸತಕ್ಕದ್ದು. ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವ ಇತರೆ ದಾಖಲಾತಿ ಕೇಂದ್ರಗಳಿಗೆ ತೆರಳಿ ಮತ್ತೊಮ್ಮೆ ದಾಖಲಾತಿ ಮಾಡಿಸತಬಹುದಾಗಿದೆ. ಬೆರಳ ಗುರುತು ಮತ್ತೊಮ್ಮೆ ವಿಫಲವಾದಲ್ಲಿ ಇದರ ಪರಿಹಾರವೇನೆಂಬುದು ಯಾರಿಗೂ ತಿಳಿದಿಲ್ಲ. ಬೆರಳುಗಳು ಮಾತ್ರ ಅವೇ ಆಗಿರುತ್ತವೆ.

A young boy and girl holding their Aadhaar cards
PHOTO • Vishaka George

ಕಾಟನ್‍ಪೇಟ್ ಬಜಾರಿನ ಕಿಶೋರ್ ಮತ್ತು ಕೀರ್ತನಾಳಿಗೂ ಸಹ ತಾಂತ್ರಿಕ ದೋಷದಿಂದಾಗಿ ಪಡಿತರವನ್ನು ನಿರಾಕರಿಸಲಾಗಿದೆ.

ಆದಿಲಕ್ಷ್ಮಿಯು ಹತ್ತು ಅಡಿಗಿಂತಲೂ ಕಡಿಮೆಯಿರುವ ಇಳಿಜಾರಿನಲ್ಲಿ ನಡೆಯಲು ಸಹ ಕಷ್ಟಪಡುತ್ತಾಳೆ. ಇಂತಹ ನಾಗರಿಕರು, ನಗರದ ಎಲ್ಲೆಡೆ ತಿರುಗಾಡಿ, ತನ್ನ ಇರುವನ್ನು ದೃಢೀಕರಿಸುವ ವ್ಯವಸ್ಥೆಗೆ ತೊಡಗಬೇಕೆಂಬ ಸರ್ಕಾರದ ನಿರೀಕ್ಷೆ ಉಚಿತವೇ?

"ಹಿರಿಯ ನಾಗರಿಕರು, ಮಕ್ಕಳು, ಅಂಗವಿಕಲರು, ದೈಹಿಕ ದುಡಿಮೆಯಲ್ಲಿ ತೊಡಗಿರುವವರು ಮುಂತಾಗಿ ಮಿಲಿಯಾಂತರ ಭಾರತೀಯರು ಯಂತ್ರಗಳು ತಮ್ಮ ಬಯೋಮೆಟ್ರಿಕ್ ಅನ್ನು ಗುರುತಿಸಲಾರದ ಕಠೋರ ವಾಸ್ತವದೊಂದಿಗೆ ಬಲವಂತದ ಬದುಕು ಸಾಗಿಸುತ್ತಿದ್ದಾರೆ. ಈ ತಂತ್ರಜ್ಞಾನದ ವ್ಯವಸ್ಥೆಯಡಿ ಸದರಿ ಸಮಸ್ಯೆಯನ್ನು ಸರಿಪಡಿಸುವ ಯಾವುದೇ ಪರಿಹಾರವಿಲ್ಲ. ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಜನರು ವಿವಿಧ ಇಲಾಖೆಗಳಿಗೆ ಸುತ್ತಬೇಕಾಗುತ್ತದೆ", ಎನ್ನುತ್ತಾರೆ ಬೆಂಗಳೂರಿನ ನ್ಯಾಶನಲ್ ಲಾ ಕಾಲೇಜಿನ ಪ್ರಾಧ್ಯಾಪಕ ಹಾಗೂ ಆಹಾರದ ಹಕ್ಕನ್ನು ಕುರಿತ ಹೋರಾಟಗಾರ ಕ್ಷಿತಿಜ್ ಅರಸ್.

ಆದಿಲಕ್ಷ್ಮಿಯವರ ಮನೆಯಿಂದ 200 ಮೀಟರ್‍ಗಿಂತಲೂ ಕಡಿಮೆ ದೂರದಲ್ಲಿ ನೆಲೆಸಿರುವ ವಿಜಯಲಕ್ಷ್ಮಿ, ಹಿಂದೊಮ್ಮೆ ಕಟ್ಟಡ ಕಾರ್ಮಿಕರಾಗಿದ್ದು, ಈಗ ತರಕಾರಿ ಮಾರಾಟದಲ್ಲಿ ನಿರತರಾಗಿರುವ ವೃದ್ಧೆ. ಇವರಿಗೂ ಸಹ ಒಂದು ವರ್ಷದಿಂದಲೂ ಪಡಿತರವು ಲಭ್ಯವಿಲ್ಲ: "ಇದು ಬಯೋಮೆಟ್ರಿಕ್ ವೈಫಲ್ಯದ ಮತ್ತೊಂದು ಉದಾಹರಣೆ. ಈ ಸಮಸ್ಯೆಯನ್ನು ನಿವಾರಿಸುವ ನನ್ನ ಎರಡು ಪ್ರಯತ್ನಗಳೂ ವಿಫಲಗೊಂಡವು" ಎನ್ನುವ ಆಕೆ, ದಿನನಿತ್ಯ ತರಕಾರಿ ಮಾರಾಟದಿಂದ ಸಂಪಾದಿಸುವ ನೂರೈವತ್ತು ರೂ.ಗಳಲ್ಲಿ ತಮ್ಮ ಖರ್ಚುಗಳನ್ನು ನಿಭಾಯಿಸುತ್ತಾರೆ.

ಆಧಾರ್ ವ್ಯವಸ್ಥೆಯ ತಾಂತ್ರಿಕ ದೋಷದಿಂದಾಗಿ ಕೇವಲ ವೃದ್ಧರಷ್ಟೇ ಅಲ್ಲದೆ, ದೈಹಿಕ ದುಡಿಮೆಯಲ್ಲಿ ತೊಡಗಿದ ಕೆಲಸಗಾರರು ಹಾಗೂ ಮಕ್ಕಳೂ ಸಹ ಬಾಧಿತರಾಗಿದ್ದಾರೆ.

ಬೆಂಗಳೂರಿನ ಪಶ್ಚಿಮಕ್ಕಿರುವ ಕಾಟನ್‍ಪೇಟ್ ಬಜಾರಿನ ಕಿಕ್ಕಿರಿದ ಕೊಳೆಗೇರಿಯೊಂದರಲ್ಲಿ ಒಡಹುಟ್ಟಿದವರುಗಳಾದ 14 ರ ವಯಸ್ಸಿನ ಕಿಶೋರ್ ಹಾಗೂ 13 ರ ಕೀರ್ತನ, ಬಯೋಮೆಟ್ರಿಕ್ ಹೊಂದಾಣಿಕೆಯಾಗದ ಕಾರಣ, ಎರಡು ವರ್ಷಗಳಿಂದಲೂ ತಮ್ಮ ಪಾಲಿನ ಪಡಿತರವನ್ನು ಪಡೆದಿರುವುದಿಲ್ಲ. ಯಾವುದೇ ಮಗುವು ತನ್ನ 15 ನೇ ವಯಸ್ಸಿಗಿಂತಲೂ ಮುಂಚೆಯೇ ತನ್ನ ದಾಖಲಾತಿಯನ್ನು ಮಾಡಿಸಿದ್ದಲ್ಲಿ, ಆ ವಯಸ್ಸಿಗೆ ಬಂದ ನಂತರ ಮತ್ತೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸತಕ್ಕದ್ದು. ಈ ಮಧ್ಯಂತರದಲ್ಲಿ, ಬಯೋಮೆಟ್ರಿಕ್ ಹೊಂದಾಣಿಕೆಯಾಗದಿದ್ದಲ್ಲಿ...? ಪಡಿತರವು ಲಭ್ಯವಿಲ್ಲ. ಈ ಮಕ್ಕಳ ಹೆತ್ತವರು ಮುನಿಸಿಪಲ್ ಕಾರ್ಪೊರೇಷನ್ ಜಾಡಮಾಲಿಗಳಾಗಿದ್ದು, ಅವರಿಬ್ಬರ ಒಟ್ಟಾರೆ ವೇತನವು ಮಾಹೆಯಾನ ರೂ. 12,000.

ಪ್ರತಿಭಾವಂತ ವಿದ್ಯಾರ್ಥಿಯಾದ ಕಿಶೋರ್, ಎರಡು ವರ್ಷಗಳ ಹಿಂದೆ ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗೆ ಸೇರಿದನಾದರೂ, ಖರ್ಚಿನ ಹೆಚ್ಚಳ ಹಾಗೂ ಪಡಿತರದ ನಿರಾಕರಣೆಯಿಂದಾಗಿ ಹೆತ್ತವರು ಖಾಸಗಿ ಶಾಲೆಯಿಂದ ಆತನನ್ನು ಬಿಡಿಸಿ, ಸರ್ಕಾರಿ ಶಾಲೆಗೆ ದಾಖಲಿಸಿದರು. ಈಗ ಆತನು ಹಾಲನ್ನು ಸರಬರಾಜು ಮಾಡಿ ಕುಟುಂಬದ ಖರ್ಚಿಗೆ ಸಹಕರಿಸುತ್ತಿದ್ದಾನೆ. ಮುಂಜಾನೆ 4 ಕ್ಕೆ ಏಳುವ ಆತ, 6 ಕ್ಕೆ ಮನೆಯಿಂದ ತೆರಳಿ, ಬೆಳಗಿನ ಸರಬರಾಜನ್ನು ನಿರ್ವಹಿಸುತ್ತಾನೆ. ಅಪರಾಹ್ನ 4 ಕ್ಕೆ ಶಾಲೆ ಮುಗಿದ ನಂತರ ಸಂಜೆಯ ಹಾಲಿನ ಸರಬರಾಜಿಗೆ ಓಡುತ್ತಾನೆ. 8 ಕ್ಕೆ ಆತನ ಕೆಲಸವು ಮುಗಿಯುತ್ತದೆ.

ಶಾಲೆಯವರು ನೀಡಿರುವ ಮನೆಗೆಲಸವನ್ನು (ಹೋಂವರ್ಕ್) ಆತ ಹೇಗೆ ನಿಭಾಯಿಸುತ್ತಾನೆ? "ಶಾಲೆಯಲ್ಲೇ ಸಾಧ್ಯವಾದಷ್ಟನ್ನು ಮುಗಿಸುತ್ತೇನೆ", ಎನ್ನುತ್ತಾನೆ ಆತ. ದಿನನಿತ್ಯದ 8 ಗಂಟೆಗಳ ಕೆಲಸದಿಂದ ತಾನು ಸಂಪಾದಿಸುವ 3,500 ರೂ.ಗಳನ್ನು ಅವನು ಹೆತ್ತವರಿಗೆ ನೀಡುತ್ತಾನೆ. ಈ ಆದಾಯದಿಂದ ಅವರು ಕುಟುಂಬದ ಕಿರಾಣಿ ಸರಕುಗಳ ವೆಚ್ಚವನ್ನು ನಿಭಾಯಿಸುತ್ತಾರೆ. ಆಗಾಗ್ಗೆ ತಮ್ಮ ನೆರೆಹೊರೆಯವರಿಂದ ಅವರು ಪ್ರತಿ ಕೆ.ಜಿ.ಗೆ 15 ರೂ.ಗಳಂತೆ ಅಕ್ಕಿಯನ್ನು ಖರೀದಿಸುತ್ತಾರೆ. ಆದರೆ ಇಬ್ಬರು ಮಕ್ಕಳಿಗೂ ಪಡಿತರ ದೊರೆತಿದ್ದಲ್ಲಿ, ಪ್ರತಿಯೊಬ್ಬರಿಗೂ 7 ಕೆ. ಜಿ. ಅಕ್ಕಿಯು ಉಚಿತವಾಗಿ ದೊರೆಯುತ್ತಿತ್ತು.

ಹೋರಾಟಗಾರ್ತಿ ರೇಷ್ಮ ಅವರ ಮಾತಿನಲ್ಲಿ ಹೇಳುವುದಾದರೆ; ಹಲವಾರು ವರ್ಷಗಳಿಂದ ಅವರು ಅದೇ ಪಡಿತರ ಅಂಗಡಿಗೆ ತೆರಳುತ್ತಿದ್ದಾಗ್ಯೂ ಸಹ ಅದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಅಲ್ಲಿನ "ವಿತರಕನು ಅವರನ್ನು ಗುರುತಿಸಬಲ್ಲನೇ ಹೊರತು, ಯಂತ್ರವು ಗುರುತಿಸಲಾರದು".

ಅನುವಾದ: ಶೈಲಜ ಜಿ. ಪಿ.

Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Vishaka George
Translator : Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Shailaja G. P.