2010 ರಲ್ಲಿ ಎಲ್ಲೆಲ್ಲೂ ಬೀಜಮಂತ್ರದಂತೆ ಪಠಿಸಲಾಗುತ್ತಿದ್ದ ``ಟ್ರ್ಯಾಕ್ಟರ್ ಸಾಲ'' ಎಂಬ ಗುಂಗಿನ ದಿನಗಳವು. ಬ್ಯಾಂಕುಗಳಲ್ಲೂ, ಮಧ್ಯವರ್ತಿಗಳಲ್ಲೂ, ಗ್ರಾಮಸ್ಥರಲ್ಲೂ, ಟ್ರ್ಯಾಕ್ಟರ್ ಶೋರೂಮುಗಳಲ್ಲೂ ಹೀಗೆ ಎಲ್ಲೆಲ್ಲೂ 'ಟ್ರ್ಯಾಕ್ಟರ್ ಸಾಲ'ದ್ದೇ ಗುಲ್ಲೋ ಗುಲ್ಲು. ಹೀಗೆ ಎಲ್ಲರಂತೆಯೇ ಈ ಸಮೂಹಸನ್ನಿಯ ಮಾತುಗಳು ಹೀರಾಬಾಯಿ ಫಕೀರಾ ರಾಥೋಡ್ ಎಂಬ ಹೆಣ್ಣುಮಗಳ ಕಿವಿಗೂ ಬಿದ್ದಿತ್ತು. ಹೀರಾಬಾಯಿ ರಾಥೋಡ್ ಔರಂಗಾಬಾದ್ ಜಿಲ್ಲೆಯ ಕನ್ನದ್ ಗ್ರಾಮದ ನಿವಾಸಿ. ಹೀರಾಬಾಯಿಯ ಪತಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಇವರದ್ದು ಮೂಲತಃ `ಬಂಜಾರಾ' ಎಂಬ ಹೆಸರಿನ ಆದಿವಾಸಿ ಅಲೆಮಾರಿ ಜನಾಂಗ. ಇದೇ ಗ್ರಾಮದಲ್ಲಿ ಮೂರೂವರೆ ಎಕರೆ ಜಮೀನು ಕೂಡ ಹೀರಾಬಾಯಿಯ ಕುಟುಂಬವು ಹೊಂದಿತ್ತು. ``ಟ್ರ್ಯಾಕ್ಟರ್ ಸಾಲವನ್ನು ಗಿಟ್ಟಿಸುವುದು ಮತ್ತು ತೀರಿಸುವುದು ಅತೀ ಸುಲಭದ ಕೆಲಸ'', ಎಂದು ಟ್ರ್ಯಾಕ್ಟರ್ ಶೋರೂಮಿನ ಸೇಲ್ಸ್-ಮ್ಯಾನ್ ಕೂಡ ಹೀರಾಬಾಯಿಯಲ್ಲಿ ಹೇಳಿ ತನ್ನ ಪ್ರಮೋಷನ್ ಗೆ ಗಾಳ ಹಾಕಿದ್ದ. ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನ ಸ್ಥಳೀಯ ಶಾಖೆಯೂ ಗ್ರಾಮಸ್ಥರನ್ನು ಕರೆಕರೆದು ಟ್ರ್ಯಾಕ್ಟರ್ ಹೆಸರಿನಲ್ಲಿ ಸಾಲ ಕೊಡುತ್ತಿದ್ದುದಲ್ಲದೆ ಸಂಬಂಧಿ ದಾಖಲಾತಿ ಕೆಲಸಗಳನ್ನೂ ತ್ವರಿತವಾಗಿ ಮುಗಿಸುತ್ತಿತ್ತು. ಈ `ಟ್ರ್ಯಾಕ್ಟರ್ ಸಾಲ' ವೆಂಬ ಹೊಸ ವ್ಯವಸ್ಥೆಯನ್ನು ಅಕ್ಕಪಕ್ಕದವರಿಂದ ಕೇಳಿ ತಿಳಿದುಕೊಂಡ ಹೀರಾಬಾಯಿ ತನ್ನ ಮತ್ತು ತನ್ನ ಕುಟುಂಬದ ಏಳಿಗೆಯ ಕನಸು ಕಂಡದ್ದು ಸುಳ್ಳಲ್ಲ.


ಅಂತೂ ಹೀರಾಬಾಯಿ ಈ `ಟ್ರ್ಯಾಕ್ಟರ್ ಸಾಲ'ದ ಕಡೆಗೆ ಒಂದು ಹೆಜ್ಜೆ ಮುಂದಿಟ್ಟಾಗಿತ್ತು. ಆರು ಲಕ್ಷದ ಮೂವತ್ತೈದು ಸಾವಿರ ಬೆಲೆಯ ಟ್ರ್ಯಾಕ್ಟರ್ ಒಂದನ್ನು ಖರೀದಿಸಲು ಐದು ಲಕ್ಷದ ಎಪ್ಪತ್ತೈದು ಸಾವಿರದ ಮೊತ್ತದ ಸಾಲವನ್ನು ಸ್ಥಳೀಯ ಬ್ಯಾಂಕು ಹೀರಾಬಾಯಿಗೆ ನೀಡಿತು. ಈ ಸಾಲದ ಮೊತ್ತವನ್ನು ಮುಂದಿನ ಏಳು ವರ್ಷಗಳಲ್ಲಿ 15.9% ರ ಬಡ್ಡಿದರದಲ್ಲಿ ಹೀರಾಬಾಯಿ ಭರಿಸಬೇಕಿತ್ತು. ಸಾಲ ಪಡೆದುಕೊಳ್ಳುವವರೆಗೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದ್ದರೂ ಮುಂದಿನ ದಿನಗಳು ದುರಾದೃಷ್ಟವಶಾತ್ ಹಾಗೆಯೇ ಮುಂದುವರಿಯಲಿಲ್ಲ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಹೀರಾಬಾಯಿ ಮರು ಪಾವತಿಸಿದ ಮೊತ್ತವು ಬರೋಬ್ಬರಿ ಏಳೂವರೆ ಲಕ್ಷವನ್ನು ಮೀರಿದೆ. ಮುಗಿಯದ ಕಥೆಯಂತೆ ಕಾಣುವ ಈ ಸಾಲವನ್ನು ಬಡ್ಡಿಸಮೇತ ಕಟ್ಟುತ್ತಾ ಹೀರಾಬಾಯಿ ಬಳಲಿ ಬೆಂಡಾಗಿದ್ದರು. ಮಾರ್ಚ್ ಬಳಿಕ ಒನ್ ಟೈಂ ಸೆಟ್ಲ್-ಮೆಂಟ್ (ಒ.ಟಿ.ಎಸ್) ಎಂದು ಕರೆಯಲ್ಪಡುವ, ಉಳಿದ ಮೊತ್ತವನ್ನು ಒಂದೇ ಬಾರಿ ಪಾವತಿಸುವ ಸೂಚನೆಯು ಬ್ಯಾಂಕಿನಿಂದ ಬಂದಮೇಲಂತೂ ತಮ್ಮ ಸಂಬಂಧಿಕರ, ಸ್ನೇಹಿತರ ಕೈಕಾಲು ಹಿಡಿದು ಹೀರಾಬಾಯಿ ತನ್ನ ಸಾಲದ ಋಣವನ್ನು ತೀರಿಸಿ ನಿಟ್ಟುಸಿರು ಬಿಟ್ಟರು. ತನ್ನನ್ನು ವರ್ಷಗಳ ಕಾಲ ಕಾಡಿದ ಸಾಲದ ಶೂಲವು ತನ್ನ ಮಕ್ಕಳ ತಲೆಯ ಮೇಲೆ ತೂಗುಕತ್ತಿಯಂತೆ ತೂಗುವುದು ಹೀರಾಬಾಯಿಗೆ ಸುತಾರಾಂ ಇಷ್ಟವಿರಲಿಲ್ಲ. ``ಟ್ರ್ಯಾಕ್ಟರ್ ಸಾಲವನ್ನು ಪಡೆದುಕೊಂಡಿದ್ದು ನಾನು ನನ್ನ ಜೀವನದಲ್ಲಿ ಮಾಡಿದ್ದ ಅತೀ ದೊಡ್ಡ ತಪ್ಪುಗಳಲ್ಲೊಂದು'', ಎಂದು ಹೀರಾಬಾಯಿ ಹೇಳಿ ಮರುಗುತ್ತಾರೆ.


ಒಟ್ಟಾರೆಯಾಗಿ ಅಷ್ಟೇನೂ ಸ್ಥಿತಿವಂತರಲ್ಲದ, ಬಂಜಾರಾ ಆದಿವಾಸಿಯಾದ ಹೀರಾಬಾಯಿ ಐದು ಲಕ್ಷದ ಎಪ್ಪತ್ತೈದು ಸಾವಿರ ಮೊತ್ತದ ಸಾಲವನ್ನು ತೆಗೆದುಕೊಂಡ ತಪ್ಪಿಗಾಗಿ ಬಡ್ಡಿಯ ಮೇಲೆ ಬಡ್ಡಿ ಕಟ್ಟುತ್ತಾ ಒಂಭತ್ತು ಲಕ್ಷದ ಮೊತ್ತವನ್ನು ಬ್ಯಾಂಕಿಗೆ ಮರುಪಾವತಿಸಿದ್ದರು. ಇತ್ತೀಚೆಗಿನ ವರ್ಷಗಳಲ್ಲಂತೂ ಮಹಾರಾಷ್ಟ್ರದ ಬರಗಾಲ ಪೀಡಿತ ಮರಾಠವಾಡಾ ಪ್ರದೇಶದಲ್ಲಿ ಟ್ರ್ಯಾಕ್ಟರ್ ಹಾಗಿರಲಿ, ಮಳೆಯಿಲ್ಲದೆ ವ್ಯವಸಾಯವೇ ಬಹುತೇಕ ನಿಂತುಹೋಗಿದೆ. ಇದು ಕನ್ನದ್ ಗ್ರಾಮದ ಹೀರಾಬಾಯಿಯೊಬ್ಬಳ ಕಥೆಯಷ್ಟೇ ಅಲ್ಲ. ದೇಶದೆಲ್ಲೆಡೆ ಇಂಥಾ ಅದೆಷ್ಟೋ ಮಂದಿ ಹೀರಾಬಾಯಿಯರಿದ್ದಾರೆ. ಹಲವರಂತೂ ಸಂಕಷ್ಟದ ಸಮಯದಲ್ಲಿ ಪಡೆದುಕೊಂಡ ಸಾಲವನ್ನು ಮರುಪಾವತಿಸುವ ಸ್ಥಿತಿಯಲ್ಲೇ ಇಲ್ಲ. ಮಹಾರಾಷ್ಟ್ರದಲ್ಲಂತೂ ಸಾಲದ ಸಮಸ್ಯೆಯಿಂದಲೇ ನೇಣಿಗೆ ಕೊರಳೊಡ್ಡಿದ ಅದೆಷ್ಟೋ ರೈತರ ದುಃಖದ ಕಥೆಯಿದೆ. 2005-2006 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮರಾಠಾವಾಡ ಪ್ರದೇಶವೊಂದರಲ್ಲೇ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸಾಲಗಳನ್ನು ಕೊಟ್ಟು ಕೈಸುಟ್ಟುಕೊಂಡಿದೆ.


``ಬ್ಯಾಂಕುಗಳಂತೂ ಟ್ರ್ಯಾಕ್ಟರ್ ಸಾಲದ ಸಮೂಹಸನ್ನಿಯಲ್ಲಿ ಮೈಮರೆತಿದ್ದವು'', ಎಂದು ಆಲ್ ಇಂಡಿಯಾ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಂಪ್ಲಾಯೀಸ್ ಫೆಡರೇಷನ್ನಿನ ಕಾರ್ಯದರ್ಶಿಯಾದ ದೇವಿದಾಸ್ ತುಲ್ಜಾಪೂರ್ಕರ್ ಹೇಳುತ್ತಾರೆ. ``ಸಿಕ್ಕಸಿಕ್ಕವರಿಗೆಲ್ಲಾ ಟ್ರ್ಯಾಕ್ಟರ್ ಸಾಲವನ್ನು ಕೊಟ್ಟು ಆದಷ್ಟು ಬೇಗ ತಮ್ಮ ವಾರ್ಷಿಕ ಟಾರ್ಗೆಟ್ ಗಳನ್ನು ಪೂರ್ಣಗೊಳಿಸುವುದು ಸರ್ಕಾರಿ ಅಧೀನದ ಬ್ಯಾಂಕುಗಳ ಮುಖ್ಯ ಗುರಿಯಾಗಿತ್ತು. ಹೀಗಾಗಿ ಈ ಸಾಲವನ್ನು ಪ್ರಥಮ ಆದ್ಯತೆಯ ವ್ಯವಸಾಯ ಸಾಲದ ವಿಭಾಗದಲ್ಲಿ ಪರಿಗಣಿಸಿ, ದಾಖಲಾತಿಯ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಬ್ಯಾಂಕ್ ತನ್ನ ಕೈತೊಳೆದುಕೊಳ್ಳುತ್ತಿತ್ತು. ಮೊದಲೇ ತನ್ನದೇ ಆದ ಸಮಸ್ಯೆಗಳಿಂದ ಹಂಚಿಹರಿದುಹೋಗಿದ್ದ ಸಮಾಜದ ಕೆಲವು ವರ್ಗಗಳಿಗೆ ಈ ಹೊಸ ಸಾಲದ ರುಚಿ ತೋರಿಸಿ ಇನ್ನಷ್ಟು ಸಂಕಷ್ಟಗಳನ್ನು ಬಡ್ಡಿಯ ರೂಪದಲ್ಲಿ ಬ್ಯಾಂಕ್ ತಂದು ಹಾಕಿತು. ಹೀರಾಬಾಯಿಯಂತೆ ಹಲವರು ಸಾಲವನ್ನು ಮರುಪಾವತಿಸಿದ್ದರೂ ಒ.ಟಿ.ಎಸ್ ಮಾಡುವ ಭಾಗ್ಯ ಎಲ್ಲರಿಗೂ ಒದಗಿರಲಿಲ್ಲ. ಉಳಿದವರಂತೂ ಸಾಲವನ್ನು ಮರುಪಾವತಿಸುವ ಸ್ಥಿತಿಯಲ್ಲೇ ಇರಲಿಲ್ಲ'', ಎಂದು ಅವರು ನೆನಪಿಸುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನ ಸ್ಥಳೀಯ ಶಾಖೆಯೊಂದರಲ್ಲೇ ಸಾಲವನ್ನು ಮರುಪಾವತಿ ಮಾಡಲಾಗದ ಕನಿಷ್ಠ ನಲವತ್ತೈದು ಫಲಾನುಭವಿಗಳ ಖಾತೆಗಳನ್ನು ಅವಲೋಕಿಸಿದರೆ ಈ ಬಾಕಿ ಮೊತ್ತವು ಬರೋಬ್ಬರಿ 2.7 ಕೋಟಿಯನ್ನು ಮೀರುತ್ತದೆ. ರಾಜ್ಯವೊಂದರ, ಚಿಕ್ಕ ಜಿಲ್ಲೆಯ, ಪುಟ್ಟ ಬ್ಯಾಂಕ್ ಶಾಖೆಯ ಒಂದು ವರ್ಗದ ಬಾಕಿ ಮೊತ್ತವೇ ಇಷ್ಟಾದರೆ, ಇನ್ನು ದೇಶದಾದ್ಯಂತ ಲೆಕ್ಕವಿಲ್ಲದಷ್ಟು ಬ್ಯಾಂಕುಗಳ ಬಾಕಿ ಮೊತ್ತವನ್ನು ಲೆಕ್ಕಹಾಕಿದರೆ ಅದು ಎಷ್ಟಾಗಬೇಡ?


02-IMG_1208-PS-The Benz and the Banjara.jpg

`ಎಲ್ಲಾ ಬಗೆಯ ವಾಹನಗಳಿಗೆ ಸಾಲವನ್ನು ಕೊಡುತ್ತೇವೆ'' ಎಂದು ಗ್ರಾಹಕರನ್ನು ಸೆಳೆಯುತ್ತಿರುವ, ಬ್ಯಾಂಕಿನ ಕೌಂಟರ್ ಒಂದರಲ್ಲಿ ಇರಿಸಲಾದ ಒಂದು ಪುಟ್ಟ ಆಕರ್ಷಕ ಮಾಡೆಲ್. ಕೆಲವು ವರ್ಷಗಳ ಹಿಂದೆ ಒಂದು ಪುಟ್ಟ ಜಾಗವನ್ನು ಟ್ರ್ಯಾಕ್ಟರ್ ಆಕ್ರಮಿಸಿಕೊಂಡಿತ್ತೋ ಏನೋ!


ಕನ್ನದ್ ಗ್ರಾಮದ ತೆಲ್ವಾಡಿ ತಾಂಡಾದ ನಿವಾಸಿ ವಸಂತ್ ದಲ್ಪಟ್ ರಾಥೋಡ್ ಒಂದು ಲಕ್ಷದ ಎಪ್ಪತ್ತು ಸಾವಿರ ಮೊತ್ತವನ್ನು (ಒ.ಟಿ.ಎಸ್) ಸೇರಿದಂತೆ ಏಳು ಲಕ್ಷದ ಐವತ್ಮೂರು ಸಾವಿರದ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕಿಗೆ ಮರುಪಾವತಿಸಿದ್ದ. ಈತ ಬಂಜಾರಾ ಆದಿವಾಸಿ ಜನಾಂಗದವನು. ಇದೇ ಜನಾಂಗದ ಮತ್ತೊಬ್ಬ ವ್ಯಕ್ತಿ, ಅಂಬಾ ಕಾಲೋನಿಯ ನಿವಾಸಿ ಅಮರ್ ಸಿಂಗ್ ಮುಖಾರಾಂ ರಾಥೋಡ್ ನ ಬಾಕಿ ಮೊತ್ತ ಹನ್ನೊಂದು ಲಕ್ಷಕ್ಕೂ ಹೆಚ್ಚಿದೆ. ಆದರೆ ಈತ ಬ್ಯಾಂಕಿನಿಂದ ಪಡೆದುಕೊಂಡ ಸಾಲದ ಮೊತ್ತ ಇದರ ಅರ್ಧದಷ್ಟೂ ಇಲ್ಲ. ಇದು ಬಡ್ಡಿ ಲೆಕ್ಕಾಚಾರದ ಮಹಿಮೆ! ಅಮರ್ ಸಿಂಗ್ ಮರುಪಾವತಿಸಿದ ಮೊತ್ತವು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ ಇದ್ದುದಲ್ಲದೆ ಮತ್ತು ಆತ ಭವಿಷ್ಯದಲ್ಲಿ ಈ ಸಾಲವನ್ನು ತೀರಿಸುವ ಯಾವ ಲಕ್ಷಣವೂ ಇಲ್ಲ. ಬ್ಯಾಂಕಿನವರು ಇವನ ಬೇಟೆಗಾಗಿ ಗ್ರಾಮದ ಮೂಲೆಮೂಲೆಯಲ್ಲಿ ಹೊಂಚುಹಾಕುತ್ತಿದ್ದಾರೆ. ಇವನ ಕೆಲವು ನೆರೆಹೊರೆಯವರು ``ಅಮರ್ ಸಿಂಗ್'' ಎಂಬ ಹೆಸರಿನ ವ್ಯಕ್ತಿಯೇ ಇಲ್ಲ ಎಂದು ಸತ್ಯದ ಮುಖಕ್ಕೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಅವನ ಮನೆಯಲ್ಲಿ ಟ್ರ್ಯಾಕ್ಟರ್ ಹಾಗಿರಲಿ, ಮುಟ್ಟುಗೋಲು ಹಾಕಿಕೊಳ್ಳಲು ಅರ್ಹವಾದಂತಹ ಯಾವ ವಸ್ತುವೂ ಇಲ್ಲ. ಕೆಲವೊಮ್ಮೆ ಶ್ರೀಮಂತ ವ್ಯಕ್ತಿಯೊಬ್ಬ ಬಡವನೊಬ್ಬನ ಹೆಸರಿನಲ್ಲಿ ಸಾಲ ತೆಗೆದುಕೊಂಡು ಮಾಯವಾಗುವುದೂ ಉಂಟು. ಬಹುಷಃ ಇದು ಇಲ್ಲೂ ಆಗಿರಲೂಬಹುದು. ಉಳಿದ ಗ್ರಾಮಗಳಲ್ಲೂ, ಇತರೆ ಸರ್ಕಾರಿ ಅಧೀನದ ಬ್ಯಾಂಕುಗಳಲ್ಲೂ ಇಂಥಾ ತರಹೇವಾರಿ ಕೇಸುಗಳಿವೆ.


``ಈ ಸಾಲಗಳನ್ನು ಚಾಲ್ತಿಯಲ್ಲಿಲ್ಲದ ಖಾತೆ/ಸಂಪತ್ತುಗಳೆಂದು ಪರಿಗಣಿಸಿಯೇ ಇಲ್ಲ'' ಎಂದು ದೇವಿದಾಸ್ ಹೇಳುತ್ತಾರೆ. ಹೀಗೆ ಲೆಕ್ಕಹಾಕುತ್ತಾ ಹೋದರೆ ಗೋಲ್-ಮಾಲ್ ಆಗಿರುವ ಬಾಕಿ ಮೊತ್ತವು ಹಲವು ಕೋಟಿಗಳನ್ನು ಮೀರುತ್ತದೆ. ಇಷ್ಟಕ್ಕೂ ಆಗುವುದೇನೆಂದರೆ ಬ್ಯಾಂಕುಗಳು ಈ ಮಾದರಿಯ ಖಾತೆಗಳ ಕೇಸುಗಳನ್ನು ``ಇನ್ನೂ ಚಾಲ್ತಿಯಲ್ಲಿದೆ'' ಎಂದೇ ತನ್ನ ಕಡತಗಳಲ್ಲಿ ದಾಖಲಿಸುತ್ತಾರೆ. ಹೀಗಾಗಿ ಮಂಜೂರಾದ ಸಾಲಕ್ಕಿಂತಲೂ ಹೆಚ್ಚಿನ ಬಾಕಿ ಮೊತ್ತವನ್ನು ಈ ಕಡತಗಳಲ್ಲಿ ಕಾಣಬಹುದು. ಹಲವು ಪ್ರಕರಣಗಳಲ್ಲಿ ಒಂದೇ ಒಂದು ನಯಾಪೈಸೆಯೂ ಫಲಾನುಭವಿಯಿಂದ ಬ್ಯಾಂಕಿಗೆ ಮರುಪಾವತಿಯಾಗಿರುವುದಿಲ್ಲವೆಂಬುದೂ ಒಪ್ಪಲೇಬೇಕಾದ ಸತ್ಯ. ಸಾಲದ ಮರುಪಾವತಿಯ ಸಮಯವು ಕಳೆದು ವರ್ಷಗಳು ಕಳೆದುಹೋಗಿದ್ದರೂ ಈ ಖಾತೆಗಳನ್ನು ``ಚಾಲ್ತಿಯಲ್ಲಿರುವ / ನಿಯಮಿತ'' ಎಂದೇ ದಾಖಲಿಸಲಾದ ಕಾಗದಪತ್ರಗಳು ಬ್ಯಾಂಕುಗಳಲ್ಲಿ ಮಣಗಟ್ಟಲೆ ಸಿಗುತ್ತವೆ. ಇಂಥಾ ಖಾತೆಗಳಿಗೊಂದು ಗತಿಕಾಣಿಸದ ಬ್ಯಾಂಕುಗಳು ಎಂದಿನವರೆಗೆ ಹೀಗೆ ``ಗಣೇಶನ ಮದುವೆ'' ಆಟವನ್ನು ಆಡುತ್ತವೆ ಎಂಬುದನ್ನು ಕಾದುನೋಡಬೇಕು. ಹಲವು ಬಾರಿ ಮಧ್ಯವರ್ತಿಗಳ ಉಪಸ್ಥಿತಿಯಲ್ಲಿ ಬ್ಯಾಂಕಿನಿಂದ ಸಾಲವನ್ನು ಪಡೆಯುವವರೂ ಕೂಡ ಮೂರ್ಖರಾಗುವುದುಂಟು. ಸಾಮಾನ್ಯವಾಗಿ ಸಾಲವನ್ನು ಟ್ರ್ಯಾಕ್ಟರ್, ಟ್ರಾಲಿ ಮತ್ತು ತತ್ಸಂಬಂಧಿ ಉಪಕರಣಗಳ ಖರೀದಿಗಾಗಿ ನೀಡಲಾಗುತ್ತದೆ. ಆದರೆ ತಲೆಯಲ್ಲಿ ಟ್ರ್ಯಾಕ್ಟರ್ ಒಂದನ್ನೇ ತುಂಬಿಕೊಂಡ ಜನರಿಗೆ ಸಾಲದ ಮೊತ್ತದಲ್ಲಿ ಸಿಗುವ ಉಳಿದ ಪರಿಕರಗಳು ಮರೆತುಹೋಗಿರುತ್ತವೆ ಅಥವಾ ಈ ವಿಷಯವನ್ನು ಮಧ್ಯವರ್ತಿಗಳು ಮರೆಮಾಚಿ ಚಳ್ಳೆಹಣ್ಣು ತಿನ್ನಿಸಿರುತ್ತಾರೆ. ಮತ್ತು ಈ ಮೊತ್ತವು ಈ ದಲ್ಲಾಳಿಗಳ ಜೇಬು ಸೇರಿರುತ್ತದೆ.


ಈ ಡಿಫಾಲ್ಟರುಗಳ ಭೂತವು ಬೆಂಝ್ ಕಂಪೆನಿಯನ್ನೂ ಬಿಟ್ಟಿಲ್ಲ ಎಂದು ಬ್ಯಾಂಕುಗಳು ಹೇಳುತ್ತವೆ. ಔರಂಗಾಬಾದ್ ನ ಓರ್ವ ಉದ್ಯಮಿಯು ಹೇಳುವ ಪ್ರಕಾರ ಕಾರು ಖರೀದಿಸಿದ ಆಸಾಮಿಗಳು ಎರಡರಿಂದ ಮೂರಕ್ಕೂ ಹೆಚ್ಚು ಬಾರಿ ಕಾರನ್ನು ಪುನಃ ಮಾರಾಟ ಮಾಡಿದರಂತೆ. ಅಚಾನಕ್ಕಾಗಿ ಬಂದ ದರ ರಿಯಾಯಿತಿಯ ಲಾಭವನ್ನು ಪಡೆದುಕೊಂಡ ಬುದ್ಧಿವಂತರು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆದುಕೊಂಡು ಕಾರನ್ನು ಖರೀದಿಸಿ, ನಂತರ ಶೀಘ್ರದಲ್ಲೇ ಖರೀದಿಸಿದ ಹೊಚ್ಚಹೊಸ ಕಾರನ್ನು ಹೆಚ್ಚಿನ ಬೆಲೆಗೆ ಮಾರುತ್ತಿದ್ದರು.


2004 ರಿಂದ 2014 ರ ಕಾಲಘಟ್ಟದಲ್ಲಿ ಟ್ರ್ಯಾಕ್ಟರುಗಳ ಮಾರಾಟವು ದೇಶದಾದ್ಯಂತ ಅಜಮಾಸು ಮೂರು ಪಟ್ಟು ಹೆಚ್ಚಿತು ಎಂದು ನಡೆಸಲಾದ ಒಂದು ಅಧ್ಯಯನದ ವರದಿಯು ದಾಖಲಿಸುತ್ತದೆ. ಈ ವರದಿಯ ಪ್ರಕಾರ 2013 ರಲ್ಲಿ ಭಾರತವು ಆರು ಲಕ್ಷದ ಹತ್ತೊಂಭತ್ತು ಸಾವಿರ ಟ್ರ್ಯಾಕ್ಟರುಗಳನ್ನು ಮಾರುಕಟ್ಟೆಗೆ ಬಿಟ್ಟಿತ್ತು, ಅಂದರೆ ಪ್ರಪಂಚದಲ್ಲೇ ಮೂರನೇ ಒಂದರ ಭಾಗದಷ್ಟು. ಹಲವರು ಈ ಸಂಖ್ಯೆಗಳನ್ನಾಧರಿಸಿ ಭಾರತದ ಗ್ರಾಮೀಣ ಭಾಗವು ಪ್ರಗತಿಯತ್ತ ದಾಪುಗಾಲಿಕ್ಕುತ್ತಿದೆ, ಈ ಸಂಖ್ಯೆಗಳು ಗ್ರಾಮೀಣ ಪ್ರದೇಶದ ಉನ್ನತಿಯ ಪ್ರತೀಕ ಎಂದು ಷರಾ ಬರೆದರು. ಹೆಚ್ಚಿದ ಆದಾಯದ ಪರಿಣಾಮದಿಂದಾಗಿ ಹಲವರ ಜೀವನಮಟ್ಟವು ಸುಧಾರಿಸಿದ್ದು ಸತ್ಯವಾಗಿದ್ದರೂ, ಇದು ಸಾಧ್ಯವಾಗಿದ್ದು ಈ ಹಟಾತ್ ಸಾಲದ ವಿಲಕ್ಷಣ ಸೌಲಭ್ಯದಿಂದ. ಜಾತಿಗಣತಿ ಮತ್ತು ಸೋಷಿಯೋ ಎಕಾನಮಿಕ್ ವರದಿಗಳು ಇಂದಿಗೂ ಎಂಟು ಶೇಕಡಾದಷ್ಟು ಗ್ರಾಮೀಣ ಭಾಗವಷ್ಟೇ ಹತ್ತುಸಾವಿರ ರೂಪಾಯಿಗೂ ಹೆಚ್ಚಿನ ಆದಾಯವನ್ನು ತರುವ ಸದಸ್ಯನನ್ನು ಕಾಣುವ ಭಾಗ್ಯವನ್ನು ಹೊಂದಿದೆ ಎಂದು ಹೇಳುತ್ತವೆ. ಆದರೂ ಕೆಲವು ಲೇಖಕರು, ಅಂಕಣಕಾರರು, ಆರ್ಥಿಕ ತಜ್ಞರು ಈ `ಟ್ರ್ಯಾಕ್ಟರ್ ಸಾಲ'ದಿಂದ ಉತ್ಪತ್ತಿಯಾದ ಸಂಖ್ಯೆಯನ್ನೇ ಎದುರಿಗಿಟ್ಟುಕೊಂಡು ಇದು ಭಾರತದ ಗ್ರಾಮೀಣ ಭಾಗವು ಪ್ರಗತಿಯತ್ತ ಮುನ್ನಡೆಯುತ್ತಿರುವ ಸಂಕೇತ ಎಂದು ವಾದಿಸುತ್ತಾರೆ. ಆದರೆ ಔರಂಗಾಬಾದ್ ನ ಕೆಲ ಮಧ್ಯವರ್ತಿಗಳು ಹೇಳುವ ಪ್ರಕಾರ ಟ್ರ್ಯಾಕ್ಟರುಗಳ ಮಾರಾಟದ ಪ್ರಮಾಣವು ಶೇಕಡಾ ಐವತ್ತರಷ್ಟು ಕುಸಿದಿದೆ. ಗ್ರಾಮೀಣ ಭಾರತದ ಪರಿಸ್ಥಿತಿಯನ್ನು ಅಂದಾಜಿಸಲು ಇದಕ್ಕಿಂತ ಹೆಚ್ಚಿನ ಪುಸ್ತಕದ ಬದನೆಕಾಯಿ ಮಾದರಿಯ ಸಾಕ್ಷಿಗಳೇನೂ ಬೇಕಿಲ್ಲ.


ಬೆಂಝ್ ಕಾರುಗಳು ಲಕ್ಷುರಿ ವಿಭಾಗದ ಕಾರುಗಳೆನ್ನುವುದು ಸತ್ಯ. ಟ್ರ್ಯಾಕ್ಟರ್ ಗಳು ಇದಕ್ಕಿಂತ ಹೊರತಾದವುಗಳೆಂಬುದೂ ಅಷ್ಟೇ ಸತ್ಯ. ಆದರೆ 2004 ರಿಂದ 2014 ರ ಕಾಲಾವಧಿಯಲ್ಲಿ ಟ್ರ್ಯಾಕ್ಟರ್ ನ ಹೆಸರಿನಲ್ಲಿ ಪಡೆದುಕೊಂಡ ಸಾಲವದ ಮೊತ್ತವನ್ನು ತೋರಿಸಿ `ಗ್ರಾಮೀಣ ಭಾರತವು ಪ್ರಗತಿಪಥದಲ್ಲಿದೆ' ಎನ್ನುವುದು, ಒಂದೇ ದಿನದಲ್ಲಿ ನೂರೈವತ್ತು ಮರ್ಸಿಡಿಸ್ ಬೆಂಝ್ ಕಾರುಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಿ `ಈ ಮೂಲಕ ಔರಂಗಾಬಾದ್ ಜಿಲ್ಲೆಯು ಜಾಗತಿಕ ಹೂಡಿಕೆಯ ಭೂಪಟದಲ್ಲಿ ಸೇರಿಹೋಗಿದೆ' ಎನ್ನುವುದಷ್ಟೇ ಬಾಲಿಶ ಮತ್ತು ಹಾಸ್ಯಾಸ್ಪದ. 64,330 ರೂಪಾಯಿಗಳೊಂದಿಗೆ ಮರಾಠಾವಾಡವು ಮಹಾರಾಷ್ಟ್ರದಲ್ಲೇ ಅತ್ಯಂತ ಕಡಿಮೆ ಪರ್-ಕ್ಯಾಪಿಟಾ ಆದಾಯವನ್ನು ಹೊಂದಿರುವ ಪ್ರದೇಶ. ಅಂದರೆ ಮಹಾರಾಷ್ಟ್ರದ ಉಳಿದ ಭಾಗಗಳಿಗಿಂತ ಇದು ನಲವತ್ತು ಶೇಕಡಾಗಿಂತಲೂ ಕಮ್ಮಿ. ಅದರಲ್ಲೂ ಮುಂಬೈಗೆ ಹೋಲಿಸಿದರೆ ಮರಾಠಾವಾಡದ ಈ ಸಂಖ್ಯೆಯು ಶೇಕಡಾ ಎಪ್ಪತ್ತಕ್ಕಿಂತಲೂ ಕಮ್ಮಿ. ಇವೆಲ್ಲದರಿಂದ ಕಂಗೆಟ್ಟುಹೋಗಿರುವ ಬ್ಯಾಂಕುಗಳು ದಿವಾಳಿಯೆದ್ದರೂ ಆಶ್ಚರ್ಯವಿಲ್ಲ. ಈಚೆಗಂತೂ ಅಗೆಯಲು ಉಪಯೋಗಿಸಲಾಗುವ ಮಧ್ಯಮ ಮತ್ತು ಭಾರೀ ಯಂತ್ರೋಪಕರಣಗಳ ಬಳಕೆಗಳು ಮಹಾರಾಷ್ಟ್ರದಲ್ಲಷ್ಟೇ ಅಲ್ಲದೆ ದೇಶದಾದ್ಯಂತ ಹೆಚ್ಚಾಗಿ, ಈ ಉಪಕರಣಗಳಿಗೇ ಸರ್ಕಾರಗಳು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆಯೇ ಹೊರತು ಪಿಕ್ಕಾಸು ಹಿಡಿದು ಅಗೆಯುವ ಕೂಲಿವರ್ಗವನ್ನಲ್ಲ.


``ಹಲವು ಮಂದಿ ಇಂಥಾ ದೊಡ್ಡ ಮೊತ್ತದ ಸಾಲವನ್ನು ಪಡೆದುಕೊಂಡು, ನಂತರ ಭರಿಸಲಾಗದೆ ದಿವಾಳಿಯಾಗುವುದಂತೂ ಸತ್ಯ'', ಎಂದು ಗುತ್ತಿಗೆದಾರರಾದ, ಮಾಜಿ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರೂ ಆದ ಔರಂಗಾಬಾದ್ ಜಿಲ್ಲೆಯ ಖುಲ್ಟಾಬಾದ್ ನ ನಿವಾಸಿ ಹಾಜಿ ಅಕ್ಬರ್ ಬೇಗ್ ಹೇಳುತ್ತಾರೆ. ಇವರೇ ಹೇಳುವಂತೆ ಖುಲ್ಟಾಬಾದ್ ನ ಜನಸಂಖ್ಯೆ ಹತ್ತೊಂಭತ್ತು ಸಾವಿರದ ಆಸುಪಾಸು. ಈ ಪುಟ್ಟ ಖುಲ್ಟಾಬಾದ್ ನಲ್ಲೇ ಮೂವತ್ತಕ್ಕೂ ಹೆಚ್ಚು ಜೆ.ಸಿ.ಬಿ ಯಂತ್ರಗಳಿವೆ. ಇನ್ನು ಮಹಾರಾಷ್ಟ್ರದಾದ್ಯಂತ ಲೆಕ್ಕಹಾಕಿದರೆ ಎಷ್ಟಾಗುತ್ತದೆ ಎಂಬುದು ದೇವರಿಗೇ ಪ್ರೀತಿ. ರಾಜ್ಯ ಸರ್ಕಾರದ ಜಲ ಸಂರಕ್ಷಣಾ ಯೋಜನೆಗಳಲ್ಲೊಂದಾದ ಜಲಯುಕ್ತ್-ಶಿವರ್ ಅಭಿಯಾನ್ ನಂಥಾ ಮಹಾಯೋಜನೆಗಳಲ್ಲಿ ಜೆ.ಸಿ.ಬಿ ಯಂತ್ರಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಲಾಗುವುದರಿಂದ ಜನಸಾಮಾನ್ಯರು ಸ್ವಾಭಾವಿಕವಾಗಿಯೇ ಈ ಯಂತ್ರದೆಡೆಗೆ ಆಕರ್ಷಿತರಾಗಿದ್ದಾರೆ. ಜೆ.ಸಿ.ಬಿ ಯಂತ್ರವೊಂದು ಬರೋಬ್ಬರಿ ಇಪ್ಪತ್ತೊಂಭತ್ತು ಲಕ್ಷ ಬೆಲೆಬಾಳುತ್ತದಾದರೂ ಹಲವು ಸ್ಥಳೀಯ ಖಾಸಗಿ ಮತ್ತು ಫೈನಾನ್ಸ್ ಕಂಪೆನಿಗಳಿಂದ ಸಾಲವನ್ನು ಪಡೆದು ಜೆ.ಸಿ.ಬಿ ಗಳನ್ನು ಜನರು ಖರೀದಿಸುತ್ತಿದ್ದಾರೆ. ಹೀಗೆ ಖರೀದಿಸಿದ ಹಲವರಲ್ಲಿ ನಾನೂ ಒಬ್ಬ. ಆದರೆ ನಾನು ಬ್ಯಾಂಕುಗಳ ಬಾಗಿಲು ತಟ್ಟದೆ, ನನ್ನಲ್ಲಿದ್ದ ಹಳೆಯ ಉಪಕರಣಗಳನ್ನು ಮಾರಾಟಮಾಡಿ ಮತ್ತು ನನ್ನ ಸ್ನೇಹಿತರ-ಸಂಬಂಧಿಗಳ ನೆರವಿನಿಂದ ಹಣವನ್ನು ಹೊಂದಿಸಿದೆ'', ಎಂದು ಬೇಗ್ ಹೇಳುತ್ತಾರೆ.


``ಬ್ಯಾಂಕಿನ ಸಾಲದ ಕಂತುಗಳ ಮತ್ತು ದೈತ್ಯಯಂತ್ರದ ನಿಯಮಿತ ದುಬಾರಿ ನಿರ್ವಹಣೆಗಳ ನಂತರವೂ ಒಂದು ತಕ್ಕಮಟ್ಟಿನ ಮೊತ್ತವು ಕೈಸೇರಬೇಕೆಂದಾದರೆ ಕನಿಷ್ಠ ಒಂದು ಲಕ್ಷವಾದರೂ ಒಂದು ತಿಂಗಳಲ್ಲಿ ಸಂಪಾದನೆಯಾಗಬೇಕು. ಅಂದರೆ ಅಷ್ಟರ ಮೊತ್ತದ ಕೆಲಸವೂ ಯಂತ್ರವನ್ನು ಖರೀದಿಸಿದವನಿಗೆ ಸಿಗಬೇಕು. ಕೆಲವು ಋತುಗಳಲ್ಲಿ ಇದು ಸಾಧ್ಯವಾದರೂ ಮಳೆಗಾಲ ಬರುತ್ತಿದ್ದಂತೆ ಜೆ.ಸಿ.ಬಿ ಗಳು ಮೂಲೆಸೇರುತ್ತವೆ. ಇಡೀ ಖುಲ್ಟಾಬಾದ್ ನ ಮೂವತ್ತು ಜೆ.ಸಿ.ಬಿ. ಯಂತ್ರಗಳು ಹಾಗಿರಲಿ, ಮಳೆಗಾಲದಲ್ಲಿ ನೆಟ್ಟಗೆ ಮೂರು ಜೆ.ಸಿ.ಬಿ ಗಳು ಕೆಲಸ ಮಾಡಿದರೆ ಅದೇ ದೊಡ್ಡ ಸಂಗತಿ. ಇಂಥಾ ಸಮಯದಲ್ಲಿ ಸಾಲ ಪಡೆದು ಯಂತ್ರಗಳನ್ನು ಖರೀದಿಸಿದವರು ಏನು ಮಾಡುತ್ತಾರೆ? ಕಾಮಗಾರಿ ಪ್ರದೇಶದ ಪ್ರಾಯೋಗಿಕ ಅನುಭವವಿಲ್ಲದವರೂ ಕೂಡ ಪೋಕ್ಲೈನ್ ಹೈಡ್ರಾಲಿಕ್ ಯಂತ್ರಗಳ ಹಿಂದೆ ಮುಗಿಬಿದ್ದಿದ್ದಾರೆ. ಈ ಯಂತ್ರಗಳು ಜೆ.ಸಿ.ಬಿ ಗಳಿಗಿಂತಲೂ ಎರಡು ಪಟ್ಟು ದುಬಾರಿಯವು. ಈಚೆಗಂತೂ ಕೆಲವೇ ಕೆಲವು ಗುತ್ತಿಗೆದಾರರಿಗೆ ಮತ್ತು ಉತ್ತಮ ಸಂಪರ್ಕವಿರುವ ಉದ್ದಿಮೆದಾರರಿಗಷ್ಟೇ ಕಾಂಟ್ರಾಕ್ಟುಗಳು ಸಿಗುತ್ತಿವೆ. ಸ್ವಾಭಾವಿಕವಾಗಿಯೇ ಈ ಬೃಹತ್ ಸಾಲಗಳು ಇವರನ್ನು ಕಂಗಾಲಾಗಿಸಲಿವೆ. ನೂರರಲ್ಲಿ ಹತ್ತರಷ್ಟು ಜನರು ಸಾಲವನ್ನು ಮರುಪಾವತಿಸಬಹುದೋ ಏನೋ, ಆದರೆ ಉಳಿದವರಿಗಂತೂ ದಿವಾಳಿತನವು ಕಟ್ಟಿಟ್ಟ ಬುತ್ತಿ'', ಎನ್ನುವುದು ಹಾಜಿ ಬೇಗ್ ರ ಅನುಭವದ ಮಾತುಗಳು.


ಇತ್ತ ಕನ್ನದ್ ಗ್ರಾಮದ ಮೂಲೆಯೊಂದರಲ್ಲಿ ನಮ್ಮನ್ನು ನೋಡುತ್ತಾ, ನಾವು ಬ್ಯಾಂಕಿನಿಂದ ಬಂದವರೇನೋ ಎಂದು ಹೀರಾಬಾಯಿ ದಿಗಿಲುಗೊಳ್ಳುತ್ತಾರೆ. ``ಮುಂದೇನು?'' ಎನ್ನುವ ದೊಡ್ಡ ಪ್ರಶ್ನಾರ್ಥಕ ಪ್ರಶ್ನೆಯು ಅವಳ ದನಿಯಲ್ಲಿದೆ. ಅದೂ ಕೂಡ ಐದು ಲಕ್ಷದ ಎಪ್ಪತ್ತೈದು ಸಾವಿರ ಮೊತ್ತದ ಸಾಲವನ್ನು ಒಂಭತ್ತು ಲಕ್ಷ ಕೊಟ್ಟು ತೀರಿಸಿದ ಹೊರತಾಗಿ. ಆರು ಲಕ್ಷದ ಮೂವತ್ತೈದು ಸಾವಿರ ಮೊತ್ತದ್ದೆಂದು ಹೇಳಲಾಗುವ ಹೀರಾಬಾಯಿಯ ಟ್ರ್ಯಾಕ್ಟರ್ ಅದಕ್ಕಿಂತ ಕಮ್ಮಿ ಬೆಲೆಯದ್ದಾಗಿದ್ದರೂ ಅಚ್ಚರಿಯಿಲ್ಲ. ``ಬ್ಯಾಂಕಿಗೆ ಕೊಡಬೇಕಾಗಿದ್ದು ಇನ್ನೂ ಏನಾದರೂ ಬಾಕಿಯಿದೆಯೇ?'' ಎಂದು ಹೀರಾಬಾಯಿ ಆತಂಕದಿಂದ ಕೇಳಿದರೆ, ``ಇಲ್ಲಮ್ಮಾ... ನಿನ್ನ ಸಾಲ ಪೂರ್ಣವಾಗಿ ಮರುಪಾವತಿಯಾಗಿದೆ, ಅದೂ ಸ್ವಲ್ಪ ಹೆಚ್ಚಾಗಿಯೇ'' ಎಂದು ನಾವು ಅಭಯದ ಮಾತನ್ನು ಕೊಡಲು ಪ್ರಯತ್ನಿಸುತ್ತೇವೆ.

ಹೀರಾಬಾಯಿ ಗೊಂದಲದಲ್ಲೇ ನಿಟ್ಟುಸಿರಾಗಲು ಯತ್ನಿಸುತ್ತಾಳೆ.


03-P1040127(Crop)-PS-The Benz and the Banjara.jpg

‘ಬಂಜಾರಾ' ಜನಾಂಗದ ಹೀರಾಬಾಯಿ ತನ್ನ ಕುಟುಂಬದ ಸದಸ್ಯರೊಂದಿಗೆ


ಮೂಲ ಲೇಖಕರು : ಪಿ.ಸಾಯಿನಾಥ್ ``ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ''ದ ಸ್ಥಾಪಕ-ಸಂಪಾದಕರು. ಹಲವು ದಶಕಗಳಿಂದ ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುತ್ತಾ ಬಂದಿರುವ ಹಿರಿಯ ಪತ್ರಕರ್ತರಾಗಿರುವ ಇವರು ಬಲುಚರ್ಚಿತ ``ಎವೆರಿಬಡಿ ಲವ್ಸ್ ಗುಡ್ ಡ್ರಾಟ್'' (ಕನ್ನಡಕ್ಕೆ ಜಿ ಎನ್ ಮೋಹನ್ ಅನುವಾದಿಸಿದ `ಬರ ಅಂದ್ರೆ ಎಲ್ಲರಿಗೂ ಇಷ್ಟ') ಪುಸ್ತಕದ ಲೇಖಕರೂ ಹೌದು.


ಅನುವಾದ : ಪ್ರಸ್ತುತ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರ,ಅಂಕಣಕಾರ.


(Translation: Prasad Naik)


Prasad Naik is an engineer, and a freelance writer and columnist. He works in the Republic of Angola for Crazy Frog Media Features .


ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath