"ಸಬ್ ಮಾಚ್ ಶೇಶ್ [ಎಲ್ಲಾ ಮೀನುಗಳು ಮುಗಿದಿವೆ]," ಎಂದು ಮುರಳಿ ತಮ್ಮ ಹರಕು ಮುರುಕು ಬೆಂಗಾಲಿಯಲ್ಲಿ ಹೇಳುತ್ತಾರೆ, ನಿರಾಶೆಯಿಂದ ಆದರೆ ನಗುತ್ತಾ. "ಶೋಬ್ ಕಿಚ್ಚು ಡಿಫರೆಂಟ್ [ಎಲ್ಲವೂ ಬದಲಾಗಿದೆ]," ನಾವು ಎರಡು ವರ್ಷಗಳ ಹಿಂದೆ ಜಲಧಾ ಗ್ರಾಮದ ಬಳಿಯ ರಾಮನಗರ ಮೀನು ಮಾರುಕಟ್ಟೆಯಲ್ಲಿ ಭೇಟಿಯಾದಾಗಿನಿಂದ, ಮುರಳಿ ಅವರ ಅನುಭವ ಹಂಚಿಕೊಳ್ಳುತ್ತಾರೆ. ಬಂಗಾಳಕೊಲ್ಲಿಯಲ್ಲಿ ಮೀನುಗಳು ಕಣ್ಮರೆಯಾಗುತ್ತಿರುವುದನ್ನು ಸಹ ಮುರಳಿ ಗಮನಿಸಿದ್ದಾರೆ.

ಇವರು ಸಾಗರದ ಮಧ್ಯದಲ್ಲಿ 'ಕಾಲೋ ಜೋನ್' ಬಗ್ಗೆ ಮಾತನಾಡುತ್ತಾರೆ. 2017ರಲ್ಲಿ, ವಿಜ್ಞಾನಿಗಳು ಈ ಪ್ರದೇಶದ ಸುಮಾರು 60,000 ಚದರ ಕಿಲೋಮೀಟರ್ ವಲಯವನ್ನು 'ನಿಷ್ಕ್ರಿಯ ಪ್ರದೇಶ (Dead area)' ಎಂದು ವರದಿ ಮಾಡಿದ್ದಾರೆ. ಇಲ್ಲಿನ ನೀರಿನಲ್ಲಿ ಅತ್ಯಲ್ಪ ಪ್ರಮಾಣದ ಆಮ್ಲಜನಕವಿದೆ, ಸಾರಜನಕ ಇಲ್ಲವಾಗಿದೆ ಮತ್ತು ಬಹುತೇಕ ಸಮುದ್ರ ಜೀವಿಗಳೇ ಇಲ್ಲದಾಗಿದೆ. ಇದು ನೈಸರ್ಗಿಕ ಪ್ರಕ್ರಿಯೆಗಳು ಮತ್ತು ಮಾನವನ ಮಧ್ಯಸ್ಥಿಕೆಗಳ ಫಲಿತಾಂಶವಾಗಿದೆ ಎಂದು ವರದಿಗಳು ಹೇಳುತ್ತವೆ.

ಬೆಸ್ತ ಮೀನುಗಾರ ಸಮುದಾಯಕ್ಕೆ ಸೇರಿದ ಮುರಳಿ (ಅವರ ಕೊನೆಯ ಹೆಸರು ಲಭ್ಯವಿಲ್ಲ), ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಗೋವುಂಡ್ಲಪಾಲೆಂ ಗ್ರಾಮದಲ್ಲಿ (ಜನಗಣತಿಯ ಗುಂಡ್ಲಪಾಲೆಂ) ಬೆಳೆದರು. ಎರಡು ದಶಕಗಳಿಂದ, ಅವರು ಅಕ್ಟೋಬರ್-ಮಾರ್ಚ್ ಮೀನುಗಾರಿಕೆ ಋತುವಿನಲ್ಲಿ ಬಂಗಾಳ ಕೊಲ್ಲಿ ಕರಾವಳಿಯ ಪುರ್ಬಾ ಮೇದಿನಿಪುರ್ ಜಿಲ್ಲೆಯ ರಾಮನಗರ ಬ್ಲಾಕ್ನಲ್ಲಿರುವ ಜಲಧಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಅವರು ಹಲವು ವರ್ಷಗಳಿಂದ ಇಲ್ಲಿದ್ದು ಒಂದಿಷ್ಟು ಬಂಗಾಳಿ ಭಾಷೆಯನ್ನು ಕಲಿತಿದ್ದು ಅದಕ್ಕೆ ಇಂಗ್ಲಿಷ್ ಮತ್ತು‌ ಹಿಂದಿ ಮಿಶ್ರಣ ಮಾಡಿ ಮಾತನಾಡುತ್ತಾರೆ.

ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಕರಾವಳಿಯುದ್ದಕ್ಕೂ ಅನೇಕ ಬಂದರುಗಳಲ್ಲಿ ಕುಟುಂಬ ಮತ್ತು ಸ್ನೇಹಿತರನ್ನು ಹೊಂದಿರುವ ಹೆಗ್ಗಳಿಕೆ ಮುರಳಿ ಅವರದು. "ಜಾಫ್ನಾದಿಂದ ಜಂಬೂದ್ವೀಪ್ ವರೆಗೆ, ಎಲ್ಲರೂ ಕುಟುಂಬದವರು," ಎಂದು ಹರ್ಷಚಿತ್ತದಿಂದ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನನಗೆ ಹೆಚ್ಚಿನ ವಿವರಗಳನ್ನು ಹೇಳುವುದಿಲ್ಲ, ಆದರೆ ಅವರ ಸ್ನೇಹಿತ ಸ್ವಪನ್ ದಾಸ್ ಅವರಿಗೆ ನನ್ನನ್ನು ಪರಿಚಯಿಸಿದರು - "ಐ ಅಮರ್ ಭಾಯ್" [ಅವರು ನನ್ನ ಸಹೋದರ]," ಸುಮಾರು 40 ರ ಮುರಳಿ ಹೇಳುತ್ತಾರೆ.

Murali
PHOTO • Neha Simlai
An owner-captain of a modified fishing boat, Sobahan Shordaar guides his boat FB Manikjaan through the waters of coastal Bangladesh
PHOTO • Neha Simlai

2000ದ ದಶಕದ ಆರಂಭದಿಂದಲೂ ಇಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ ಎಂದು ಮುರಳಿ (ಎಡ) ಹೇಳುತ್ತಾರೆ. ಸೋಬಹಾನ್ ಶೋರ್ದಾರ್ ಒಡೆತನದ ಮೀನುಗಾರಿಕೆ ದೋಣಿಯಲ್ಲಿ (ಬಲಕ್ಕೆ) ಕಾಲೋಚಿತವಾಗಿ ಉದ್ಯೋಗಗಳನ್ನು ಹುಡುಕುತ್ತಾರೆ

35 ವರ್ಷದ ಸ್ವಪನ್ ಕೂಡ ಸಾಕಷ್ಟು ಪ್ರಯಾಣಿಸಿದ್ದಾರೆ. ಈ ಮಾರುಕಟ್ಟೆಯ ವಲಸೆಗಾರರಲ್ಲಿ ಇವರಿಬ್ಬರು ಸೇರಿದ್ದಾರೆ ಮತ್ತು ಅವರು ದೈನಂದಿನ ಕೂಲಿ ಮತ್ತು ಆಹಾರಕ್ಕಾಗಿ ಮೀನುಗಾರಿಕೆ ದೋಣಿಗಳಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ. ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ, ಅವರು ರೂ.3,000 ಮತ್ತು ರೂ.10,೦೦೦ ತಿಂಗಳಿಗೆ  (ಮೀನು ಹಿಡಿಯುವ ಕೌಶಲದ ಮೇಲೆ ನಿಂತಿದೆ).

ನಾವು ಮೂವರೂ ನಿಧಾನವಾಗಿ ದಕ್ಷಿಣ ಇಪ್ಪತ್ನಾಲ್ಕು ಪರಗಣ ಜಿಲ್ಲೆಯ ಅಬ್ಜಖಾಲಿ ಗ್ರಾಮಕ್ಕೆ ಹೋಗುತ್ತೇವೆ, ಮೊದಲು ಬಸ್‌ನಲ್ಲಿ ಮತ್ತು ನಂತರ ದೋಣಿಯಲ್ಲಿ, ದಾರಿಯಲ್ಲಿ ಜಂಬೂದ್ವೀಪ (ಜನಗಣತಿಯಲ್ಲಿ ಜಮ್ಮು ದ್ವೀಪ) ದಲ್ಲಿ ನಿಲ್ಲುತ್ತೇವೆ. ನಾವು ಮೀನುಗಾರಿಕೆ ಮತ್ತು ಪ್ರಸಿದ್ಧ ಕೆಂಪು ಏಡಿಗಳನ್ನು ನೋಡಲು, ಸಮೀಕ್ಷೆ ಮಾಡುವುದಕ್ಕಾಗಿ ಅಬ್ಜಖಾಲಿಗೆ ಹೋಗುತ್ತಿದ್ದೇವೆ. ಸಾಗರ್ ದ್ವೀಪ ಮತ್ತು ಫ್ರೇಸರ್‌ಗುಂಜ್‌ನಿಂದ ಸುತ್ತುವರಿದಿರುವ ಜಂಬೂದ್ವೀಪದಲ್ಲಿ ವರ್ಷದ ಅರ್ಧದಷ್ಟು ಜನವಸತಿಯಿಲ್ಲ. ಅಕ್ಟೋಬರ್ ನಿಂದ ಮಾರ್ಚ್ ವರೆಗೆ, ಇದು ಮೀನುಗಾರಿಕೆ ಶಿಬಿರವಾಗುತ್ತದೆ, ಉಪಖಂಡದ ವಿವಿಧ ಭಾಗಗಳಿಂದ ಮೀನು ಕಾರ್ಮಿಕರು ಆಕ್ರಮಿಸಿಕೊಂಡಿದ್ದಾರೆ. ನಾನು ಸ್ವಪನ್ ಮನೆಗೆ ಯಾವಾಗ ಹಿಂತಿರುಗುತ್ತಾರೆ ಎಂದು ಕೇಳಿದಾಗ, ಅವರು ಮುಗುಳ್ನಕ್ಕು, "ಆದರೆ ಇದೇ ನನ್ನ ಮನೆ" ಎಂದು ಹೇಳುತ್ತಾರೆ.

ಈ ಕಾಲೋಚಿತ ಮೀನುಗಾರಿಕೆ ಚಟುವಟಿಕೆ ಮತ್ತು ಮೀನು ಕಾರ್ಮಿಕರ ತಾತ್ಕಾಲಿಕ ಮನೆಗಳು ಸ್ಥಳೀಯವಾಗಿ ಸಬರ್ ಎಂದು ಕರೆಯಲ್ಪಡುತ್ತವೆ. ದೀರ್ಘಕಾಲದವರೆಗೆ, ಮೀನುಗಾರರ ಜನಸಂಖ್ಯೆಯು ಜಂಬೂದ್ವೀಪದಂತಹ ತಗ್ಗು ದ್ವೀಪಗಳಲ್ಲಿ ತಾತ್ಕಾಲಿಕ ಹಳ್ಳಿಗಳನ್ನು ಸ್ಥಾಪಿಸಿದೆ. ಈ ಪ್ರತಿಯೊಂದು ಮೀನುಗಾರಿಕಾ ಗ್ರಾಮವು ಹಲವಾರು ಕುಂತಿಗಳು ಅಥವಾ ಘಟಕಗಳಿಂದ ಮಾಡಲ್ಪಟ್ಟಿದೆ; ಪ್ರತಿ ಕುಂತಿಯು 1-10 ಮೀನುಗಾರಿಕಾ ದೋಣಿಗಳಿಗೆ 'ಮಾಲೀಕ' ಜವಾಬ್ದಾರಿಯನ್ನು ಹೊಂದಿರುತ್ತಾನೆ. ಅವರು ಎಲ್ಲಿಂದ ಬಂದವರು ಎಂಬುದನ್ನು ಲೆಕ್ಕಿಸದೆ, ಮೀನು ಕಾರ್ಮಿಕರು ಎಲ್ಲರೂ ಒಬ್ಬರಿಗೊಬ್ಬರು ತಿಳಿದಿರುತ್ತಾರೆ ಮತ್ತು ಆಗಾಗ್ಗೆ, ಇಡೀ ಕುಟುಂಬ ಸಮೇತವಾಗಿ ಹತ್ತಿರದ ಪ್ರದೇಶಗಳಿಂದ ದೋಣಿ ಸಿಬ್ಬಂದಿಯಾಗಿ ಕೆಲಸ ಮಾಡಲು ಅಥವಾ ಚಳಿಗಾಲದ ಗಾಳಿಯಲ್ಲಿ ಮೀನುಗಳನ್ನು ಒಣಗಿಸಲು ಇಲ್ಲಿಗೆ ಬರುತ್ತಾರೆ.

2000ದ ದಶಕದ ಆರಂಭದಿಂದಲೂ, ಕಟ್ಟುನಿಟ್ಟಾದ ಗಡಿ ನಿಯಂತ್ರಣದಿಂದಾಗಿಯೂ, ಕೆಲವು ತಿಂಗಳುಗಳ ಕಾಲ ಇಲ್ಲಿ ನೆಲೆಸುವುದು ಕಷ್ಟಕರವಾಗಿದೆ ಎಂದು ಮುರಳಿ ಮತ್ತು ಸ್ವಪನ್ ಹೇಳುತ್ತಾರೆ, ಮತ್ತು ದೋಣಿಗಳಲ್ಲಿನ ಕೆಲಸಗಳು ಇನ್ನು ಮುಂದೆ ಸಿಗುವುದು ಕಷ್ಟಕರವಾಗಿದೆ. "ಮೀನು ಮುಗಿದಿದೆ, ಮತ್ತು ಈಗ ಹೆಚ್ಚಿನ ಪೊಲೀಸರು [ಗಸ್ತು] ಇದ್ದಾರೆ ಆದ್ದರಿಂದ ಕೆಲಸ ಮುಗಿದಿದೆ."  ಎನ್ನುತ್ತಾರೆ ಮುರಳಿ.

Fishing boats engaged in sabar near Jambudwip
PHOTO • Neha Simlai
The Indian Sundarbans
PHOTO • Neha Simlai

ಎಡ: ಜಂಬೂದ್ವೀಪದಂತಹ ದ್ವೀಪಗಳಲ್ಲಿ ಮೀನುಗಾರರು ಕ್ಷಣಿಕ ಗ್ರಾಮಗಳನ್ನು ಸ್ಥಾಪಿಸಿದರು. ಬಲ: ಆದರೆ ಸುಂದರಬನದಲ್ಲಿ ಸಾಮಾನ್ಯವಾಗಿದ್ದ ಮೀನುಗಳು ಕಣ್ಮರೆಯಾಗುತ್ತಿವೆ

'ಡೆಡ್ ಝೋನ್' ಮತ್ತು ಕ್ಷೀಣಿಸುತ್ತಿರುವ ಮೀನುಗಳ ಹೊರತಾಗಿ, ಇವರು ಮತ್ತು ಇತರ ಮೀನುಗಾರರು, ಕಮರ್ಷಿಯಲ್ ಚೈನೀಸ್, ಸಿಂಗಾಪುರದ ಮತ್ತು ಆಳವಾದ ಸಮುದ್ರಗಳಲ್ಲಿನ ಇತರ ಟ್ರಾಲರ್‌ಗಳೊಂದಿಗೆ ಸ್ಪರ್ಧಿಸಲು ಕಷ್ಟಪಡುತ್ತಿದ್ದಾರೆ. ಮತ್ತು 1990 ರ ದಶಕದ ಉತ್ತರಾರ್ಧದಿಂದ ಸಮುದ್ರ ಮೀನುಗಾರಿಕೆಯ ವಾಣಿಜ್ಯೀಕರಣದ ಬೆಳವಣಿಗೆಯೊಂದಿಗೆ, ಕ್ಯಾಚ್ ದರಗಳು ಸಹ ಸ್ಥಿರವಾಗಿ ಇಳಿಮುಖವಾಗಿವೆ. ಇಂಧನ ಬೆಲೆಯೂ ಏರಿಕೆಯಾಗಿದ್ದು, ಸಣ್ಣ ದೋಣಿಗಳ ನಿರ್ವಹಣೆ ದುಬಾರಿಯಾಗಿದೆ. "ಎಲ್ಲವೂ ವಿಭಿನ್ನವಾಗಿದೆ ... ಸಮುದ್ರ, ಮೀನು, ನಮ್ಮ ಕೆಲಸ... ಎಲ್ಲವೂ" ಎಂದು ಮುರಳಿ ಹೇಳುತ್ತಾರೆ.

ವಿದೇಶಿ ಟ್ರಾಲರ್‌ಗಳು ತಮ್ಮ ಸ್ವಂತ ಸಿಬ್ಬಂದಿಯೊಂದಿಗೆ ಬಂದು ಸಮುದ್ರದ ತಳದಿಂದ ಹೇಗೆ ಎಲ್ಲವನ್ನೂ ತಮ್ಮ ಬಲೆಗಳಲ್ಲಿ ದೋಚಿಕೊಂಡು ಹೋಗುತ್ತಾರೆ ಎಂದು ಸ್ವಪನ್ ಮಾತನಾಡುತ್ತಾರೆ. ಕೆಲವು ಜಾತಿಗಳ ಮೀನುಗಳನ್ನು ಹುಡುಕುವುದು ಸಹ  ಕಷ್ಟವಾಗುತ್ತಿರುವುದನ್ನುಇವರು ಗಮನಿಸಿದ್ದಾರೆ. ಈಗ ಸುಂದರಬನದಲ್ಲಿ ಸಾಮಾನ್ಯವಾಗಿದ್ದ ಚಾಪಿಲಾ, ಮೋಲಾ, ಕಜ್ಲಿ ಮತ್ತು ಬಟಾಸಿಯಂತಹ ಸಿಹಿನೀರಿನ ಮೀನುಗಳು ಕೂಡ ವೇಗವಾಗಿ ಕಣ್ಮರೆಯಾಗುತ್ತಿವೆ.

ಅಕ್ವಾಟಿಕ್ ಇಕೋಸಿಸ್ಟಮ್ ಹೆಲ್ತ್ ಅಂಡ್ ಮ್ಯಾನೇಜ್‌ಮೆಂಟ್ ಜರ್ನಲ್‌ನಲ್ಲಿನ ಕಾಗದದ ಪ್ರಕಾರ, ಗಂಗಾ-ಬ್ರಹ್ಮಪುತ್ರ ಡೆಲ್ಟಾದಲ್ಲಿ ಜಲಚರಗಳನ್ನು ಬೆಳೆಸಲು ಬಳಸಲಾಗುವ ನದಿಗಳು ಮತ್ತು ಸರೋವರಗಳ ಕನಿಷ್ಠ ತಾಪಮಾನದಲ್ಲಿ 0.5 ರಿಂದ 1.4 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ಇದು ಮೀನುಗಾರಿಕೆ ಮಾತ್ರವಲ್ಲದೆ ಇತರ ಜೀವನೋಪಾಯಕ್ಕೆ ಸೀಮಿತ ಪ್ರವೇಶವನ್ನು ಹೊಂದಿರುವ ಮೀನುಗಾರರ ಆದಾಯದ ಮೇಲೂ ಪರಿಣಾಮ ಬೀರಿದೆ. ಅವರು ಈಗ ಇತರ ಉದ್ಯೋಗಗಳಿಗೆ ತೆರಳಲು ಮತ್ತು ಕೆಲಸಕ್ಕಾಗಿ ವಲಸೆ ಹೋಗುವಂತೆ ಒತ್ತಾಯಿಸಲಾಗುತ್ತಿದೆ.

ಮೀನುಗಾರರು ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ವಿವರಿಸಲು ಕ್ಲೈಮೇಟ್ ಚೇಂಜ್ ಎಂಬ ಪದವನ್ನು ಬಳಸದಿರಬಹುದು, ಆದರೆ ಅವರು ಅದೆಲ್ಲವನ್ನೂ ಜೀವಂತ ಅನುಭವಿಸುತ್ತಿದ್ದಾರೆ, ಇದರ ಪರಿಣಾಮವು ಅವರ ಬದುಕು, ಸಂಪಾದನೆ ಇದೆಲ್ಲದರ ಮೇಲೆ ಬೀರುವ ಪರಿಣಾಮಗಳನ್ನು ಅರಿತಿದ್ದಾರೆ. ಮುರಳಿಗೆ ಈ ವರ್ಷ, ಶಬರ ಇನ್ನು ಮುಂದೆ ಕಾರ್ಯಸಾಧ್ಯವಲ್ಲ ಎನ್ನುವುದು ಅರಿವಾಯಿತು. ಮೀನು ಹಿಡಿಯಲು ಬೇರೆಡೆಗೆ ಹೋಗಬೇಕಾಗುತ್ತದೆ ಎಂದು ಅವರಿಗೆ ತಿಳಿದಿದೆ. ಸ್ವಪನ್‌ ಪಾಲಿಗೆ, ಸಾಂಪ್ರದಾಯಿಕ ಮೀನುಗಾರಿಕೆ ಅವರ ಏಕೈಕ ಕೌಶಲ ಮತ್ತು ಕೆಲವೇ ವರ್ಷಗಳಲ್ಲಿ ಅದು ತನಗೆ ಯಾವುದೇ ಸಂಪಾದನೆ ತರುವುದಿಲ್ಲ ಎಂದು ಅವರು ತಿಳಿದಿರುತ್ತಾರೆ. ಅವರು ಮುಂದಿನ ವರ್ಷ ಇಲ್ಲಿಗೆ ಹಿಂತಿರುಗುತ್ತಾರೆಯೇ ಅಥವಾ ಇನ್ನೊಂದು ಸೀಸನ್ ಇದೆಯೇ ಎಂಬುದು ಖಚಿತವಾಗಿಲ್ಲ

ಅನುವಾದ: ಏಕತ ಹರ್ತಿ ಎಚ್ ವೈ

Neha Simlai

ನೇಹಾ ಸಿಮ್ಲೈ ದೆಹಲಿ ಮೂಲದ ಸಲಹೆಗಾರರಾಗಿದ್ದಾರೆ, ಅವರು ದಕ್ಷಿಣ ಏಷ್ಯಾದಾದ್ಯಂತ ಪರಿಸರ ಸುಸ್ಥಿರತೆ ಮತ್ತು ಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಾರೆ.

Other stories by Neha Simlai
Translator : Ekatha Harthi Hiriyur

ಏಕತಾ ಹರ್ತಿ ಎಚ್ ವೈ ಅವರು ಕರ್ನಾಟಕದ ಹಿರಿಯೂರಿನವರು. ಪ್ರಸ್ತುತ ಅವರು ಮುಂಬೈನ ಕಾಲೇಜ್ ಆಫ್ ಸೋಷಿಯಲ್ ವರ್ಕ್ ನಿರ್ಮಲಾ ನಿಕೇತನದಲ್ಲಿ ಓದುತ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಎಂಎನ್ಸಿ ಮತ್ತು ಎನ್‌ಜಿಒಗಳಲ್ಲಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ ಅವರು ಪ್ರಸ್ತುತ ಮಹಿಳೆಯರು, ದಲಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

Other stories by Ekatha Harthi Hiriyur