ಅದೊಂದು ಪುಟ್ಟ, ರೂಪುಗೆಟ್ಟ ಕಟ್ಟಡ. ಹಾಗೆ ನೋಡಿದರೆ ಸತಾರಾ ಜಿಲ್ಲೆಯ ಕಟ್ಗುನ್ ಹಳ್ಳಿಯ ಗ್ರಾಮಸ್ಥರಿಗೆ ಈ ಕಟ್ಟಡವು ಒಂದು ಹೆಮ್ಮೆಯ ಸ್ಮಾರಕದಂತೆ ಕಾಣಬೇಕಿತ್ತು. ಅವರ ಮನದಲ್ಲಿ ಇಂಥಾ ಪೂಜ್ಯ ಭಾವನೆಗಳು ಇರಬಹುದೇನೋ. ಆದರೆ ಹಳ್ಳಿಯ ಪಂಚಾಯತ್ ಮಾತ್ರ ಅಂತಹ ಯಾವುದೇ ವಿಶೇಷ ಪ್ರಾಮುಖ್ಯತೆಯನ್ನು ಈ ಕಟ್ಟಡಕ್ಕೆ ಕೊಟ್ಟಂತೆ ಕಾಣುತ್ತಿಲ್ಲ. ಇದು ಮಹಾರಾಷ್ಟ್ರ ಸರಕಾರದ ವಿಚಾರದಲ್ಲೂ ಸತ್ಯ.

ಇದು ಅಂತಿಂಥ ಮನೆಯೇನಲ್ಲ. ಈ ಮನೆಯು ಪ್ರಖ್ಯಾತ ಸಾಮಾಜಿಕ ಸುಧಾರಕರಾಗಿದ್ದ ಜ್ಯೋತಿಬಾ ಫುಲೆಯವರ ಪೂರ್ವಜರಿಗೆ ಸೇರಿದ್ದು. ಫುಲೆಯವರ ತಾತ ಈ ಮನೆಯನ್ನು ಕಟ್ಟಿಸಿದ್ದರು. ಸದ್ಯ ಈ ಕಟ್ಟಡವು ಅದೆಂಥಾ ದುಸ್ಥಿತಿಯಲ್ಲಿದೆಯೆಂದರೆ ಕಟ್ಟಡದ ಒಳಭಾಗದಲ್ಲಿ ಸಿಮೆಂಟಿನ ಪ್ಲಾಸ್ಟರ್ ಸಡಿಲವಾದ ತೇಪೆಗಳಂತೆ ನೆಲಕ್ಕುದುರಿ ಬೀಳುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ ಬಡಜನರಿಗೆಂದು ಪ್ರಧಾನಮಂತ್ರಿಯವರ ಹೆಸರಿನಲ್ಲಿ ರಚಿಸಲಾದ ಗೃಹನಿರ್ಮಾಣ ಯೋಜನೆ) ದ ಮನೆಗಳೇ ಇದಕ್ಕಿಂತ ಉತ್ತಮ ಸ್ಥಿತಿಯಲ್ಲಿವೆಯೇನೋ! ಈ ಗೃಹಯೋಜನೆಯ ಮನೆಯೊಂದನ್ನು ಮತ್ತೊಮ್ಮೆ ಕೆಟ್ಟದಾಗಿ ನವೀಕರಣಗೊಳಿಸಿ ನಿರ್ಮಿಸಿದರೆ ಹೇಗಿರುತ್ತೋ ಫುಲೆಯವರ ಈ ಚಾರಿತ್ರಿಕ ಮನೆಯು ಸದ್ಯ ಅಂತಹ ಸ್ಥಿತಿಯಲ್ಲಿದೆ.

ಅಸಲಿಗೆ ಈ ಮನೆಯನ್ನು ರಿಪೇರಿ ಮಾಡಲು ಮತ್ತು ಸ್ವಚ್ಛಗೊಳಿಸಲು ಹೆಚ್ಚಿನ ಸಮಯವೂ ಬೇಡ. ಅಷ್ಟು ಚಿಕ್ಕದಾಗಿದೆ ಈ ಮನೆ. ಇಂಥಾ ನವೀಕರಣಗಳಿಗಾಗಿ ಪಂಚಾಯತ್ ನ ಬಳಿ ಅವಶ್ಯಕ ಸಂಪನ್ಮೂಲವೂ ಇದೆ ಎಂಬುದನ್ನು ಲೆಕ್ಕ ಹಾಕಲು ಕಟ್ಟಡದ ಹಿಂಭಾಗದಲ್ಲಿ ಎದ್ದು ನಿಂತಿರುವ ಸುಸಜ್ಜಿತ ವ್ಯಾಯಾಮಶಾಲೆಯೇ ಸಾಕ್ಷಿ. ಇನ್ನು ಇದರ ವಿರುದ್ಧ ದಿಕ್ಕಿನಲ್ಲಿಯೇ ಫುಲೆಯವರ ಹೆಸರಿನಲ್ಲಿ ನಡೆಸಲಾಗುತ್ತಿರುವ ವಿದ್ಯಾಸಂಸ್ಥೆಯ ಶಿಥಿಲ ಕಟ್ಟಡವೊಂದಿದೆ. ಇದರದ್ದೇ ಒಂದು ಭಾಗವಾದ ತೆರೆದ ವೇದಿಕೆಯೂ ಕೂಡ ರಸ್ತೆಯ ಪಕ್ಕದಲ್ಲೇ ಇದೆ.


PHOTO • P. Sainath

ವಿಚಿತ್ರ ವೇದಿಕೆ: ಫುಲೆಯವರ ಹೆಸರಿಗಿಂತಲೂ ದೊಡ್ಡದಾಗಿ ಮತ್ತು ಸ್ಫುಟವಾಗಿ ಬರೆದಿರುವ ಪ್ರಾಯೋಜಕರ ಹೆಸರನ್ನು ಗಮನಿಸಿ.

ಈ ವೇದಿಕೆಯನ್ನು ಗಮನಿಸಿದರೆ ಎತ್ತರದಲ್ಲಿ ಅಳವಡಿಸಲಾಗಿರುವ ಒಂದು ನಾಮಫಲಕದಲ್ಲಿ `ಜಾನ್ಸನ್ ಟೈಲ್ಸ್' ಎಂದು ದೊಡ್ಡದಾಗಿ ಬರೆದಿರುವುದನ್ನು ಕಾಣಬಹುದು. ಇಂಗ್ಲಿಷ್ ಭಾಷೆಯ ಕ್ಯಾಪಿಟಲ್ ವರ್ಣಮಾಲೆಗಳಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆಯವರ ಹೆಸರಿಗಿಂತಲೂ ದೊಡ್ಡದಾಗಿ ಮತ್ತು ಸ್ಫುಟವಾಗಿ ಕಾಣಿಸುತ್ತಿರುವುದು ಈ ಪ್ರಾಯೋಜಕರ ಹೆಸರು. ಇದರ ಹಿಂದಿರುವ ಕೆಟ್ಟ ಅಭಿರುಚಿಯನ್ನು ಮನಗಾಣಲು ಈ ಒಂದು ದೃಶ್ಯವೇ ಸಾಕು. ಜ್ಯೋತಿಬಾ ಫುಲೆಯವರು ಒಂದು ಪಕ್ಷ ಈಗಿನ ಕಾರ್ಪೊರೇಟ್ ಯುಗದಲ್ಲಿ ಇರುತ್ತಿದ್ದರೆ ತಮ್ಮ ಚಳುವಳಿಗಳನ್ನು ಪ್ರಾಯೋಜಿಸಲು ಇಂಥಾ ಸಂಸ್ಥೆಗಳಿಗೆ ಮೊದಲು `ರೆವೆನ್ಯೂ ಮಾದರಿ'ಯೊಂದನ್ನು ಸಿದ್ಧಪಡಿಸಿ ಕೊಡಬೇಕಾಗಿಬರುತ್ತಿತ್ತು. ಆದರೆ ಫುಲೆಯವರ ಮಾದರಿಯು ನಿಂತಿದ್ದು ನ್ಯಾಯ, ಶಿಕ್ಷಣ ಮತ್ತು ಮಾನವಹಕ್ಕುಗಳ ತಳಹದಿಯ ಮೇಲೆ. ಜಾತಿ ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತು ತಲೆಯೆತ್ತಿ ಘನತೆಯಿಂದ ಜೀವನವನ್ನು ನಡೆಸುವ ವಿಚಾರಗಳ ಹಿನ್ನೆಲೆಯಲ್ಲಿ. ಜ್ಯೋತಿಬಾ ಫುಲೆಯವರ ಆದರ್ಶಗಳಿಗೆ ವ್ಯಂಗ್ಯವಾಡುವಂತೆ ``ವಿಶ್ವದಾದ್ಯಂತ ಜೀವನಶೈಲಿಗಳಿಗೆ ಹೊಸ ವ್ಯಾಖ್ಯಾನವನ್ನು ನಾವು ಕೊಡುತ್ತಿದ್ದೇವೆ'' ಎಂಬ ಅಡಿಬರಹವನ್ನಿಟ್ಟುಕೊಂಡು ಮೆರೆಯುತ್ತಿದೆ ಜಾನ್ಸನ್ ಟೈಲ್ಸ್. ಇನ್ನು ಆವರಣದೊಳಗಿರುವ ಕಟ್ಟಡದಷ್ಟೇ ಹಳೆಯದಾಗಿರುವ ಫುಲೆಯವರ ಮೂರ್ತಿಯೊಂದು ಈ ಹಳೆಯ ಮನೆಯ ಮತ್ತು ಗ್ರಾಮಸ್ಥರ ನೀರಿನ ಸಮಸ್ಯೆಗಳ ದುಸ್ಥಿತಿಗೆ ಪ್ರತಿಭಟಿಸುತ್ತಿರುವಂತೆ ಮನೆಗೆ ಬೆನ್ನುಹಾಕಿ ನಿಂತಿದೆ.

ನೇರ್ ಅಣೆಕಟ್ಟು ಮತ್ತು ಸರೋವರದಿಂದ ಕೇವಲ 20 ಕಿಲೋಮೀಟರುಗಳ ದೂರದಲ್ಲಿದ್ದರೂ ಕಟ್ಗುನ್ ಹಳ್ಳಿಯ 3300 ಗ್ರಾಮಸ್ಥರು ಮಾತ್ರ ನೀರಿನ ತೀವ್ರ ಅಭಾವದಿಂದ ಕಂಗೆಟ್ಟಿದ್ದಾರೆ. ಈ ಹಳ್ಳಿಯು 13 ತಹಸಿಲ್ ಗಳಲ್ಲೊಂದಾದ ಖಟವ್ ನ ಭಾಗವೂ ಹೌದು. ಪ್ರತೀವರ್ಷವೂ ಇಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆಗಳನ್ನು ಮಾಡಲು `ದುಷ್ಕಾಲ್ ಪರಿಷದ್' (ಬರಸಂಬಂಧಿ ಸಭೆ) ಗಳನ್ನು ನಡೆಸಲಾಗುತ್ತದೆ. ತನ್ನ ಮೂಲವಾದ ಹಳೇ ಮಹಾಬಲೇಶ್ವರ್ ನಿಂದ ಇಳಿಮುಖವಾಗಿ ಸಾಗುವ ಕೃಷ್ಣಾ ನದಿಯ ಮಾರ್ಗಮಧ್ಯದಲ್ಲಿರುವ ಕಟ್ಗುನ್ ಹಳ್ಳಿಯನ್ನು ನಾವಂದು ತಲುಪಿದ್ದೆವು.


PHOTO • P. Sainath

ಕಟ್ಟಡದ ಒಳಭಾಗದಲ್ಲಿ ತೇಪೆಯಂತೆ ಉದುರಿ ನೆಲಕ್ಕೆ ಬೀಳುತ್ತಿರುವ ಸಿಮೆಂಟ್ ಪ್ಲಾಸ್ಟರ್ ; ( ಬಲಭಾಗದಲ್ಲಿ ) ಮನೆಯ ಮತ್ತು ಹಳ್ಳಿಯ ದುಸ್ಥಿತಿಯನ್ನು ಪ್ರತಿಭಟಿಸುತ್ತಿರುವಂತೆ ಕಟ್ಟಡಕ್ಕೆ ಬೆನ್ನು ಹಾಕಿ ನಿಂತಿರುವ ಜ್ಯೋತಿಬಾ ಫುಲೆಯವರ ಪ್ರತಿಮೆ .

ಅಸಲಿಗೆ ತೀರಾ ದುಸ್ಥಿತಿಯಲ್ಲಿರುವುದು ಫುಲೆಯವರ ಪೂರ್ವಜರ ಮನೆಯಷ್ಟೇ ಅಲ್ಲ. ಇಲ್ಲಿಯ ನಿವಾಸಿಗಳ ಸ್ಥಿತಿಯೂ ಕೂಡ ಬಹುತೇಕ ಹೀಗೆಯೇ ಇದೆ. ಕಟ್ಗುನ್ ಹಳ್ಳಿಯ ಬಹುತೇಕ ಮಂದಿ ಉದ್ಯೋಗಗಳನ್ನು ಅರಸಿಕೊಂಡು ನಗರಗಳತ್ತ ಹೆಜ್ಜೆಹಾಕಿದ್ದಾರೆ. ಆದರೆ ವಿಪರ್ಯಾಸವೆಂದರೆ ಅಲ್ಲೂ ಬರಖತ್ತಾಗದೆ ಕೆಲವರು ಮರಳಿ ಬರುತ್ತಿದ್ದಾರೆ.

``ಅಲ್ಲಿ ನನಗೆ ತಿಂಗಳಿಗೆ 15,000 ರೂಪಾಯಿಗಳು ಸಿಗುತ್ತಿತ್ತು'', ಎಂದು ಮುಂಬೈಯಲ್ಲಿ ಖ್ಯಾತ ಚಿತ್ರನಿರ್ದೇಶಕರೊಬ್ಬರ ಕಾರುಚಾಲಕನಾಗಿ ಕೆಲಸ ಮಾಡುತ್ತಿದ್ದ ಗೌತಮ್ ಜವಾಲೆ ಹೇಳುತ್ತಿದ್ದಾನೆ. ``ಆದರೆ ಹೊರಗಿನಿಂದ ಬಂದ ನನ್ನಂತಹ ಮನುಷ್ಯನೊಬ್ಬ ಅಷ್ಟು ಚಿಕ್ಕ ಸಂಬಳದೊಂದಿಗೆ ಮುಂಬೈ ಮಹಾನಗರಿಯಲ್ಲಿ ಹೇಗಾದರೂ ಜೀವನವನ್ನು ಸಾಗಿಸಬಲ್ಲ? ಅತ್ತ ನಾನು ಬಿ.ಎಮ್.ಡಬ್ಲ್ಯೂ ಮತ್ತು ಮರ್ಸಿಡಿಸ್ ಬೆಂಝ್ ಗಳಂತಹ ವಿಲಾಸಿ ಕಾರುಗಳನ್ನು ಡ್ರೈವ್ ಮಾಡುತ್ತಿದ್ದೆ. ಆದರೆ ನನ್ನ ಸಂಬಳವು ಮಾತ್ರ ಯಾವ ಖರ್ಚಿಗೂ ಸಾಲುತ್ತಿರಲಿಲ್ಲ. ಹೀಗಾಗಿ ಅದನ್ನೆಲ್ಲಾ ಬಿಟ್ಟು ಮತ್ತೆ ಇಲ್ಲಿಗೇ ಮರಳಿ ಬಂದೆ'', ಅನ್ನುತ್ತಿದ್ದಾನೆ ಜವಾಲೆ.

`ಫುಲೆ ಫ್ಯಾಮಿಲಿ ಹೌಸ್' ಎಂದು ಬರೆದಿದ್ದ ಬಣ್ಣಗೆಟ್ಟ ಪುಟ್ಟ, ಶಿಥಿಲ ಕಟ್ಟಡವೊಂದರ ಎದುರು ನಿಂತುಕೊಂಡು ತನ್ನ ಕಥೆಯನ್ನು ನಮಗೆ ಹೇಳುತ್ತಿದ್ದಾನೆ ಜವಾಲೆ. ಹೌದು, ಅದೇ ಮನೆ! ಜ್ಯೋತಿಬಾ ಫುಲೆಯವರ ಪೂರ್ವಜರ ಮನೆ. ಫುಲೆಯವರ ಜನ್ಮವೂ ಈ ಮನೆಯಲ್ಲೇ ಆಗಿತ್ತೇ? ಈ ಬಗ್ಗೆ ಯಾರಿಗೂ ಯಾವ ಮಾಹಿತಿಯೂ ಇದ್ದಂತಿಲ್ಲ. ನಮಗೆ ತಿಳಿದಿರುವುದೆಂದರೆ ಜ್ಯೋತಿಬಾ ಫುಲೆಯವರ ತಾತನ ಮನೆಯಿದು ಎಂಬ ಸತ್ಯವಷ್ಟೇ. ಜ್ಯೋತಿಬಾ ಫುಲೆಯವರು ಎಲ್ಲಿ ಹುಟ್ಟಿದರು ಎಂಬ ಬಗೆಗಿನ ಮಾಹಿತಿಗಳನ್ನು ಕಲೆಹಾಕಿದರೆ ಒಂದಕ್ಕೊಂದು ವಿರೋದಾಭಾಸದಂತಿರುವ ಮಾಹಿತಿಗಳೇ ಸಿಕ್ಕುತ್ತವೆ. ಕಟ್ಗುನ್ ನಲ್ಲಿದ್ದ ಕೆಲ ಅಧಿಕಾರಿಗಳ ಕಿರುಕುಳವನ್ನು ತಡೆಯಲಾರದೆ ಫುಲೆಯವರ ಹೆತ್ತವರು ಊರುಬಿಟ್ಟು ಹೋಗುವ ಮುನ್ನ ಫುಲೆಯವರು ಹಳ್ಳಿಯ ಈ ಸ್ಥಳದಲ್ಲೇ ಹುಟ್ಟಿದರು ಎಂದು ಒಂದು ಮಾಹಿತಿಯ ಮೂಲವು ಹೇಳಿದರೆ, ಇನ್ನು ಕೆಲವು ಮಾಹಿತಿಗಳು ಅವರು ಪುಣೆ ಜಿಲ್ಲೆಯ ಖಾನ್ವಾಡಿಯಲ್ಲಿ ಹುಟ್ಟಿದರು ಎಂದು ಹೇಳುತ್ತವೆ. ಇನ್ನು ಹಲವು ಪ್ರಕಟಿತ ಮೂಲಗಳ ಪ್ರಕಾರ ಫುಲೆಯವರ ತಂದೆಯವರು ಪುಣೆಗೆ ತೆರಳಿದ ನಂತರವೇ ಫುಲೆಯವರು ಪುಣೆಯಲ್ಲಿ ಹುಟ್ಟಿದ್ದರಂತೆ.

ಯಾವ ಮಾಹಿತಿಯನ್ನು ಸತ್ಯವೆಂದು ನಂಬಬಹುದು ಎಂಬ ಬಗ್ಗೆ ನಮಗಂತೂ ಖಾತ್ರಿಯಿಲ್ಲ. ನಮಗೆ ಸದ್ಯ ತಿಳಿದಿರುವುದೆಂದರೆ ಇಷ್ಟೇ: ಜ್ಞಾನ, ಶಿಕ್ಷಣ ಮತ್ತು ನ್ಯಾಯಗಳು ನೆಲೆಸಿರಬೇಕಿದ್ದ ಜ್ಯೋತಿಬಾ ಫುಲೆಯವರ ಪೂರ್ವಜರ ಮನೆಯಲ್ಲಿ ಇಂದು ಉಳಿದಿರುವುದು ಇಂಗದ ದಾಹ ಮಾತ್ರ.

ಚಿತ್ರಗಳು : ಪಿ. ಸಾಯಿನಾಥ್

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Prasad Naik