“ಈ ಸಮಯಕ್ಕೆ ನಮ್ಮೂರಿನಲ್ಲಿ ಹಬ್ಬದ ವಾತಾವರಣವಿರುತ್ತಿತ್ತು.” ಎನ್ನುತ್ತಾರೆ ನಂದಾ ಗೋಟಾರ್ನೆ. ಪ್ರತಿ ವರ್ಷ ಅಕ್ಟೋಬರ್‌ ತಿಂಗಳ ಕೊನೆಯಲ್ಲಿ, ಗದ್ದೆಯ ಪಕ್ಕದಲ್ಲಿರುವ ಮೈದಾನವು ಭತ್ತ ಬಡಿಯುವ ಕಣವಾಗಿ ಸಿದ್ಧಗೊಂಡಿರುತ್ತಿತ್ತು. ಇಲ್ಲಿ ಗೇಟ್ಸ್‌ ಬುದ್ರುಕ್‌ನ ರೈತರು ಎತ್ತಿನ ಸಹಾಯದೊಂದಿಗೆ ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸುತ್ತಿದ್ದರು. ಈ ಪ್ರಕ್ರಿಯೆ ಸುಮಾರು ನವೆಂಬರ್‌ ತಿಂಗಳ ಮಧ್ಯ ಭಾಗದವರೆಗೂ ಮುಂದುವರೆಯುತ್ತಿತ್ತು.

ಈ ವರ್ಷ ಹೊಲದ ಪಕ್ಕದ ಮೈದಾನ ಮತ್ತು ಗದ್ದೆಗಳು ಕಳೆದ ತಿಂಗಳ ಕೊನೆಯಲ್ಲಿ ಕೆಸರಿನಿಂದ ತುಂಬಿದೆ. ಈ ಬಾರಿ ಭತ್ತದ ಕೊಯ್ಲಿಗೆ ತಯಾರಿ ನಡೆಸುವ ಬದಲು ನಂದಾ ಮತ್ತು ಅವರ ಪತಿ ಅಕೋಬರ್‌ 16 ಮತ್ತು 17ರಂದು ತಮ್ಮ 2 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ತೆರವುಗೊಳಿಸಬೇಕಾಯಿತು.

ಎರಡು ದಿನಗಳ ನಂತರ, ಅವರ ಜಮೀನಿನಲ್ಲಿ ಹಿಮ್ಮಡಿ ಮುಳುಗುವಷ್ಟು ನೀರು ಇತ್ತು, ಮತ್ತು 42 ವರ್ಷದ ನಂದಾ ಒದ್ದೆಯಾದ ಭತ್ತದ ಕಟ್ಟುಗಳನ್ನು ಒಣಗಿಸುತ್ತಿದ್ದರು. ಅವರು ತನ್ನ ಸೀರೆಯ ಅಂಚಿನಿಂದ ಕಣ್ಣೀರು ಒರೆಸುತ್ತಾ, "ಹೀಗೆ ಒಣಗಿಸುವುದರಿಂದ ಏನಾದರೂ ಪ್ರಯೋಜನ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ" ಎಂದರು. ನಂದಾ ಅವರ ಪತಿ ಕೈಲಾಶ್ ವಡಾ ತಾಲ್ಲೂಕಿನ ಖಾಸಗಿ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು ಸುಮಾರು ರೂ. 8,000 ಗಳಿಸುತ್ತಾರೆ. ಅವರಿಗೆ 14 ವರ್ಷದ ಮಗಳು ಮತ್ತು 10 ವರ್ಷದ ಮಗನಿದ್ದು, ಇಬ್ಬರೂ ಸ್ಥಳೀಯ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದುತ್ತಿದ್ದಾರೆ.

ಅಕ್ಟೋಬರ್‌ನಲ್ಲಿ, ಅನಿರೀಕ್ಷಿತವಾಗಿ ಸುರಿದ ಧಾರಾಕಾರ ಮಳೆ ನಂದಾ ಅವರ ಕುಟುಂಬ ಮತ್ತು ಬುದ್ರುಕ್‌ ಗೇಟ್ಸ್‌ನ 1,134 ಜನಸಂಖ್ಯೆಯ ಊರಿನ ಎಲ್ಲ ರೈತರ ಮೇಲೆ ಪರಿಣಾಮ ಬೀರಿತು.

ಕಾಮಿನಿ ಗೋಟಾರ್ನೆ ಅವರ ಹೊಲವೂ ಕೆಸರಿನಿಂದ ತುಂಬಿತ್ತು. "ಭತ್ತ ಪೂರ್ತಿ ಒದ್ದೆಯಾಗಿದೆ, ತೆನೆಯೆಲ್ಲ ಮಣ್ಣುಹಿಡಿದಿದೆ." ಎಂದು ಅವರು ಅಳಲು ತೋಡಿಕೊಂಡರು. ಅವರು ಮತ್ತು ಅವರ ಪತಿ ಮನೋಜ್ ಕೂಡ ಅಕ್ಟೋಬರ್‌ನಲ್ಲಿ ತಮ್ಮ ನಾಲ್ಕು ಎಕರೆ ಗದ್ದೆಯಲ್ಲಿ ಹಾನಿಗೊಳಗಾದ ಬೆಳೆಯನ್ನು ತೆರವುಗೊಳಿಸುತ್ತಿದ್ದರು, ಅಡ್ಡ ಮಲಗಿದ್ದ ಭತ್ತದ ಪೈರನ್ನು ಕುಡುಗೋಲಿನಿಂದ ಕತ್ತರಿಸುತ್ತಿದ್ದರು. ಇತರ ನಾಲ್ಕು ರೈತರು ಅವರಿಗೆ ಸಹಾಯ ಮಾಡುತ್ತಿದ್ದರು - ಎಲ್ಲರೂ ಹಳ್ಳಿಯಲ್ಲಿರುವ ಪರಸ್ಪರರ ಜಮೀನುಗಳಲ್ಲಿ ಕೆಲಸದಲ್ಲಿ ತೊಡಗಿದ್ದರು.
Nanda Gotarne drying paddy stalks; the accumulated water in her farm, which damaged the crop, remained after the stalks were cut (right)
PHOTO • Jyoti
Nanda Gotarne drying paddy stalks; the accumulated water in her farm, which damaged the crop, remained after the stalks were cut (right)
PHOTO • Jyoti

ನಂದಾ ಗೋಟಾರ್ನೆ ತನ್ನ ಗದ್ದೆಯಲ್ಲಿನ ಭತ್ತದ ಬೆಳೆಯನ್ನು ಕತ್ತರಿಸುತ್ತಿರುವುದು: ಅವರ ಗದ್ದೆಯನ್ನು ನಾಶ ಮಾಡಿದ ಮಳೆ ನೀರು ಬೆಳೆ ಕೊಯ್ಲು ಮಾಡಿದ ನಂತರವೂ ಗದ್ದೆಯಲ್ಲಿ ಉಳಿದಿತ್ತು

ಅಕ್ಟೋಬರ್ 14ರಂದು ನಾನು ಗದ್ದೆಗಳಿಗೆ ಭೇಟಿ ನೀಡಿದ ಸಮಯದಲ್ಲಿ, 45 ವರ್ಷದ ಮನೋಜ್, "ಈ ದೊಡ್ಡ ಬೇರುಗಳನ್ನು ನೋಡಿದ್ರಾ? ಭತ್ತ ಮೊಳಕೆ ಬಂದಿದೆ. ಈ ಭತ್ತದಿಂದ ಅಕ್ಕಿ ಮಾಡಿಸಿದರೆ ಪ್ರಯೋಜನವಿಲ್ಲ. ಕೊಯಿಲಿಗೆ ಬಂದ ಬೆಳೆಗಳಿಗೆ ಸಣ್ಣ ಮಳೆ ಕೂಡಾ ಸಾಕಷ್ಟು ಹಾನಿ ಮಾಡಬಲ್ಲದು. ಗದ್ದೆಯ ಶೇಕಡಾ 80ರಷ್ಟು ಬೆಳೆಗೆ ಸಂಪೂರ್ಣ ಹಾನಿಯಾಗಿದೆ" ಎಂದು ಅಳಲು ತೋಡಿಕೊಂಡರು.

ಆ ಸಣ್ಣ ಮಳೆಯ ಪ್ರಮಾಣ ಸುಮಾರು 9 ಮಿಲಿ‌ ಮೀಟರ್‌ನಷ್ಟಿತ್ತು. ಆದರೆ ನೀರು ನುಗ್ಗುವುದರೊಂದಿಗೆ ಬೆಳೆದ ಭತ್ತದ ಬೆಳೆಯನ್ನು ಹಾಲು ಮಾಡಲು ಈ ಮಳೆ ಸಾಕು. ಗೇಟ್ಸ್‌ ಬುದ್ರುಕ್‌ ಇರುವ ವಡಾ ತಾಲೂಕಿನಲ್ಲಿ ಅಕ್ಟೋಬರ್‌ 1ರಿಂದ 21ರ ನಡುವೆ 50.7 ಮಿ. ಮೀ ಮಳೆಯಾಗಿತ್ತು. ಈ ಸಮಯದ ಸಹಜ ಮಳೆ ಪ್ರಮಾಣ 41.8 ಮಿ. ಮೀನಷ್ಟಿರುತ್ತಿತ್ತು. ಭಾರತೀಯ ಹವಮಾನ ಇಲಾಖೆಯು ಅಕ್ಟೋಬರ್‌ 13ರಂದು ಕೊಂಕಣ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು.

ಆ ಮಳೆಯೊಂದಿಗೆ ಬೀಸಿದ ಜೋರು ಗಾಳಿ ಬೆಳೆದು ನಿಂತಿದ್ದ ಭತ್ತದ ಪೈರುಗಳನ್ನು ಅಡ್ಡ ಮಲಗಿಸಿತು. ಕಾಮಿನಿ ಮತ್ತು ಮನೋಜ್‌ ಅವರ ಭತ್ತದ ಬೆಳೆ ಅಕ್ಟೋಬರ್‌ 13ರಿಂದ ಮೂರು ದಿನಗಳ ಕಾಲ ಕೆಸರಿನಲ್ಲಿ ಮುಳುಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಕುಟುಂಬವು 15ರಿಂದ 20 ಕ್ವಿಂಟಾಲ್‌ ವಡಾ ಕೋಲಮ್‌ ತಳಿಯ ಅಕ್ಕಿಯನ್ನು ಅಕ್ಟೋಬರ್‌ ಕೊನೆಯಲ್ಲಿ ಇಳುವರಿ ಪಡೆಯುತ್ತಿತ್ತು. ಅದರಲ್ಲಿ 7-8 ಕ್ವಿಂಟಾಲ್‌ ಮಹಾಮಂಡಲದಲ್ಲಿ (ಭಾರತೀಯ ಆಹಾರ ನಿಗಮದ ಮಹಾರಾಷ್ಟ್ರ ವಿಭಾಗ) ಸುಮಾರು ಕ್ವಿಂಟಾಲ್‌ ಒಂದಕ್ಕೆ ರೂಪಾಯಿ 2,000-2,200ರ ಬೆಲೆಗೆ ಮಾರುತ್ತಿದ್ದರು. ಉಳಿದಿದ್ದನ್ನು ತಮ್ಮ ಬಳಕೆಗಾಗಿ ಇರಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಕಾಮಿನಿ ಹೇಳುವಂತೆ ಅವರ ಭತ್ತದ ಬೆಳೆ ಸಂಪೂರ್ಣ ಮುಳುಗಿ ಹೋಗಿದೆ. “ಈ ಭತ್ತದಿಂದ ಅಕ್ಕಿ ಮಾಡಿ ಊಟ ಮಾಡಲು ಸಾಧ್ಯವಿಲ್ಲ, ಅಲ್ಲದೆ ಇದನ್ನು ಹಸು ಎಮ್ಮೆಗಳಿಗೆ ಮೇವು ನೀಡಲು ಕೂಡ ಬಳಸಲು ಬರುವುದಿಲ್ಲ.”

ಯಾವುದೇ ನೀರಾವರಿ ಸೌಲಭ್ಯ ಲಭ್ಯವಿಲ್ಲದ ಗೋಟಾರ್ನೆ ಕುಟುಂಬವು ರಬಿ ಹಂಗಾಮಿನಲ್ಲಿ ಬೇಸಾಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮನೋಜ್‌ ತಮ್ಮ ಊರಿನಲ್ಲೇ ಒಂದು ಸಣ್ಣ ದಿನಸಿಯಂಗಡಿ ಇಟ್ಟುಕೊಂಡಿದ್ದಾರೆ. ಒಬಿಸಿ ವರ್ಗಕ್ಕೆ ಸೇರಿದ ಕೃಷಿಕರಾದ ಮನೋಜ್‌ ಮತ್ತು ಕಾಮಿನಿ ತಿಂಗಳಿಗೆ ಸುಮಾರು 10,000 ರೂಪಾಯಿ ಸಂಪಾದಿಸುತ್ತಾರೆ. ಇವರಿಗೆ ವೈಷ್ಣವಿ ಎನ್ನುವ 13 ವರ್ಷದ ಮಗಳಿದ್ದು ಅವಳು ಸ್ಥಳೀಯ ಜಿಲ್ಲಾ ಪರಿಷದ್‌ ಶಾಲೆಯಲ್ಲಿ ಓದುತ್ತಿದ್ದಾಳೆ.

ಅವರು ರೂ. ಈ ವರ್ಷದ ಜೂನ್‌ನಲ್ಲಿ ಭತ್ತ ಬೆಳೆಯುವ ಸಲುವಾಗಿ 15,000 ರೂಗಳನ್ನು  ಬೀಜಗಳು, ರಸಗೊಬ್ಬರಗಳು, ಕಾರ್ಮಿಕರು, ಬಾಡಿಗೆ ಟ್ರಾಕ್ಟರ್ ಇತ್ಯಾದಿಗಾಗಿ ವ್ಯಯಿಸಿದ್ದಾರೆ. ಜೂನ್‌ನಲ್ಲಿ ಜಿಲ್ಲೆಯಲ್ಲಿ 203 ಮಿ.ಮೀ.ನಷ್ಟು ಸಾಧಾರಣ ಮಳೆಯಾಗಿದೆ (ಈ ತಿಂಗಳಲ್ಲಿ ಪಾಲ್ಘರ್‌ನಲ್ಲಿ ಸರಾಸರಿ 411.9 ಮಿ.ಮೀ. ಮಳೆಯಾಗುತ್ತದೆ), ಸೆಪ್ಟೆಂಬರ್‌ನಲ್ಲಿ ಮುಂಗಾರಿನ ಅಂತ್ಯದ ವೇಳೆಗೆ ಸುಧಾರಣೆ ಕಂಡ ಮಳೆ ಮನೋಜ್ ಮತ್ತು ಕಾಮಿನಿಗೆ ಉತ್ತಮ ಇಳುವರಿ ಸಿಗುವ ಭರವಸೆ ಮೂಡಿತ್ತು.
Across the fields of Palghar, the paddy got spoilt (left) with the unexpected October rain, and farmers tried hard to save some of it
PHOTO • Jyoti
Across the fields of Palghar, the paddy got spoilt (left) with the unexpected October rain, and farmers tried hard to save some of it
PHOTO • Jyoti

ಪಾಲ್ಘಾರ್‌ನಲ್ಲಿ ಸುರಿದ ಅನಿರೀಕ್ಷಿತ ಅಕ್ಟೋಬರ್ ಮಳೆಯಿಂದ ಭತ್ತದ ಬೆಳೆ ಹಾಳಾಯಿತು (ಎಡ), ಮತ್ತು ರೈತರು ಅದರಲ್ಲಿ ಒಂದಿಷ್ಟನ್ನು ಉಳಿಸಿಕೊಳ್ಳಲು ಶ್ರಮಿಸಿದರು

ಕಳೆದ ವರ್ಷವೂ ಇದೇ ಸಮಯದಲ್ಲಿ ಮಳೆ ಬಂದು ಇಳುವರಿಯ ಗುಣಮಟ್ಟವನ್ನು ಹಾಳುಮಾಡಿತ್ತು. ಕುಟುಂಬವು 12 ಕ್ವಿಂಟಾಲ್‌ನಷ್ಟು ದೊರೆತಿದ್ದ ಇಳುವರಿಯಲ್ಲಿ ಅರ್ಧದಷ್ಟು ತನ್ನ ಬಳಕೆಗಾಗಿ ಇರಿಸಿಕೊಂಡು ಉಳಿದಿದ್ದನ್ನು ಮಾರಿತ್ತು. "ಕಳೆದ ವರ್ಷ ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಅಕ್ಕಿಯ ಗುಣಮಟ್ಟ ಚೆನ್ನಾಗಿರಲಿಲ್ಲ ಆದರೆ ತಿನ್ನಲು ಯೋಗ್ಯವಾಗಿತ್ತು." ಎಂದು ಮನೋಜ್‌ ಹೇಳಿದರು. "2018ರಲ್ಲಿ ಅಗಸ್ಟ್‌ ನಂತರ ಮಳೆಯೇ ಇರಲಿಲ್ಲ. 2019ರಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ಮಳೆಯಾಯಿತು. ಈ ವರ್ಷವೂ ಹಾಗೇ ಆಗಿದೆ. ಈ ಮಳೆಗೆ ಏನಾಗಿದೆಯೆಂದು ಅರ್ಥವೇ ಆಗುತ್ತಿಲ್ಲ ನನಗೆ."

ಪಾಲ್ಘಾರ್‌ ಜಿಲ್ಲೆಯ ಎಲ್ಲೆಡೆಯೂ ಅಕ್ಟೋಬರ್‌ ತಿಂಗಳ ಅಕಾಲಿಕ ಮಳೆಯಿಂದಾಗಿ ಈಗಲೂ ತೊಂದರೆ ಅನುಭವಿಸುತ್ತಿದ್ದಾರೆ. ಕೊಂಕಣ (ಪಾಲ್ಘಾರ್‌ ಇದಕ್ಕೆ ಸೇರಿದ್ದು) ಮತ್ತು ಬರ ಪೀಡಿತ ಮರಾಠವಾಡ, ಮಧ್ಯ ಮಹಾರಾಷ್ಟ್ರ, ಮತ್ತು ಪಶ್ಚಿಮ ಮಹಾರಾಷ್ಟ್ರದ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಈ ವರ್ಷ ಅಕ್ಟೋಬರ್ 1 ಮತ್ತು ಅಕ್ಟೋಬರ್ 21ರ ನಡುವೆ ಹೆಚ್ಚಿನ ಮಳೆಯಾಗಿದೆ (ಐಎಂಡಿ ಗುರುತಿಸಿರುವಂತೆ). ಈ ವಿನಾಶಕಾರಿ ಮಳೆಯು ಈ ಪ್ರದೇಶಗಳಲ್ಲಿ 27 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿವೆ.

ಈ ಅವಧಿಯಲ್ಲಿ ಸಾಮಾನ್ಯವಾಗಿ 73.6 ಮಿ.ಮೀ ಮಳೆಯಾಗುತ್ತಿದ್ದ ಕೊಂಕಣ ಪ್ರದೇಶದಲ್ಲಿ 171.7 ಮಿ.ಮೀ ಮಳೆಯಾಗಿದ್ದು, (ಮಹಾರಾಷ್ಟ್ರದ ಕೃಷಿ ಇಲಾಖೆಯ ಅಂಕಿ-ಅಂಶದಂತೆ). ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಭತ್ತ, ಸೋಯಾಬೀನ್, ಹತ್ತಿ, ಮೆಕ್ಕೆಜೋಳ, ಜೋಳ ಮತ್ತು ಹೆಚ್ಚಿನ ಖಾರಿಫ್ ಬೆಳೆಗಳು ಈ ಅಕಾಲಿಕ ಮಳೆಯಿಂದ ಹಾನಿಗೊಳಗಾಗಿವೆ.

ಗೇಟ್ಸ್ ಬುದ್ರೂಕ್‌ನಿಂದ ಸುಮಾರು 46 ಕಿಲೋಮೀಟರ್ ದೂರದಲ್ಲಿರುವ ಜವಾಹರ್ ತಾಲ್ಲೂಕಿನ ಖಡ್ಕಿಪಾಡಾ ಎನ್ನುವ ಹಾಡಿಯಲ್ಲಿ ವಾಸವಿರುವ 44 ವರ್ಷದ ದಾಮು ಭೋಯ್ ಕೂಡ ಈ ಬೆಳವಣಿಗೆಗಳಿಂದಾಗಿ ಸಾಕಷ್ಟು ಹತಾಶರಾಗಿದ್ದಾರೆ. ಇವರು ತನ್ನ ಎತ್ತರದ ಪ್ರದೇಶದಲ್ಲಿರುವ ಮೂರು ಎಕರೆ ಕೃಷಿ ಭೂಮಿಯಲ್ಲಿ ಬೆಳೆಯುತ್ತಿರುವ ಉದ್ದಿನ ಬೆಳೆಯನ್ನು ಕೀಟಗಳು ತಿನ್ನುತ್ತಿರುವುದನ್ನು ತೋರಿಸಿದರು. ಸೆಪ್ಟೆಂಬರ್‌ ತಿಂಗಳಿನಲ್ಲಿ ಸಸಿಗಳು ಆರೋಗ್ಯವಾಗಿದ್ದವು. ಆದರೆ ಅಕ್ಟೋಬರ್‌ ತಿಂಗಳ ಹಠಾತ್ ಮಳೆಯು ಕೀಟಗಳ ದಾಳಿಗೆ ನಾಂದಿ ಹಾಡಿತು.

"ಈಗ ನನ್ನ ಹೊಲ ಪೂರ್ತಿಯಾಗಿ ಕೀಟಗಳಿಂದ ತುಂಬಿ ಹೋಗಿದೆ, ಎಲೆ ಮತ್ತು ಕಾಯಿಗಳನ್ನು ಅವು ತಿನ್ನುತ್ತಿವೆ. ಅಕ್ಟೋಬರ್‌ ತಿಂಗಳು ಬಹಳ ನಿರ್ಣಾಯಕ, ನಾವು ತಿಂಗಳ ಮಧ್ಯಬಾಗದಿಂದ ಕಾಯಿಗಳನ್ನು ಕೀಳಲು ಪ್ರಾರಂಭಿಸುತ್ತೇವೆ. ಆದರೆ ಈ ಹಠಾತ್‌ ಮಳೆ ಕೀಟಗಳನ್ನು ತಂದಿದೆ, ಗಿಡದ ಬೇರುಗಳು ಕೊಳೆಯುತ್ತಿವೆ ಮತ್ತೆ ಕಾಯಿಗಳೂ ಸರಿಯಾಗಿ ಪಕ್ವವಾಗಲಿಲ್ಲ. ನಾನು ಸುಮಾರು 10,000 ರೂಪಾಯಿಗಳನ್ನು ಬೀಜ, ರಸಗೊಬ್ಬರಗಳಿಗಾಗಿ ಖರ್ಚು ಮಾಡಿದ್ದೆ ಈಗ ಎಲ್ಲವೂ ನಷ್ಟವಾದಂತೆಯೇ."
In Khadkipada hamlet, Damu Bhoye said, 'My farm is filled with bugs [due to the unseasonal rain], eating all the leaves and pods'
PHOTO • Jyoti
In Khadkipada hamlet, Damu Bhoye said, 'My farm is filled with bugs [due to the unseasonal rain], eating all the leaves and pods'
PHOTO • Jyoti

ʼಅಕ್ಟೋಬರ್‌ ತಿಂಗಳ ಅಕಾಲಿಕ ಮಳೆಯಿಂದಾಗಿ ನನ್ನ ಹೊಲದಲ್ಲಿನ ಬೆಳೆಯನ್ನು ಹುಳಗಳು ತಿನ್ನುತ್ತಿವೆʼ ಎಂದು ಖಡ್ಕಿಪಾಡ ಹಾಡಿಯ ದಾಮು ಬೋಯೆ ಹೇಳಿದರು

ಕೃಷಿಯ ಜೊತೆಗೆ, ದಾಮು ಮತ್ತು ಅವರ ಪತ್ನಿ ಗೀತಾ (40) ಮಹಿಳೆಯರ ಕುಪ್ಪಸವನ್ನು ಅಕ್ಕಪಕ್ಕದ ಊರಿನ ಜನರಿಗಾಗಿ ಹೊಲಿದುಕೊಡುತ್ತಾರೆ ಮತ್ತು ಇಂದರಿಂದ ಸಂಪಾದನೆ ಮಾಡಿದ್ದನ್ನು ಕೃಷಿ ಖರ್ಚಿಗಾಗಿ ಉಳಿಸುತ್ತಾರೆ. "ನಾವು ತಿಂಗಳಿಗೆ ಹೊಲಿಗೆಯಿಂದ 1,000ದಿಂದ 1,500 ರೂಪಾಯಿಗಳ ತನಕ ದುಡಿಯುತ್ತೇವೆ" ಎಂದು ದಾಮು ಹೇಳುತ್ತಾರೆ.

ಮತ್ತು ಪ್ರತಿ ವರ್ಷ ಕಟ್ಟಡ ಕೆಲಸಗಳಿಗಾಗಿ ನವೆಂಬರ್ ಅಂತ್ಯದಿಂದ ಮೇವರೆಗೆ ಮುಂಬೈ ಅಥವಾ ಥಾಣೆಗೆ ಹೋಗುತ್ತಾರೆ. "ನಾವು ಈ ಕೆಲಸದಿಂದ ಸುಮಾರು 50,000ದಿಂದ 60,000 ರೂ ಗಳಿಸುತ್ತೇವೆ. ಆದರೆ ಅದರಲ್ಲಿ ಸ್ವಲ್ಪವನ್ನೂ ಉಳಿಸಲು ಸಾಧ್ಯವಾಗುವುದಿಲ್ಲ." ಎಂದು ದಾಮು ಹೇಳಿದರು.

ಅವರ ಹಿರಿಯ ಮಗ, 25 ವರ್ಷದ ಜಗದೀಶ್, ಪಾಲ್ಘಾರ್‌ನ ವಿಕ್ರಮ್‌ಗಡ್ ತಾಲ್ಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವೇತನ ರೂ. ತಿಂಗಳಿಗೆ 15,000 ರೂಪಾಯಿಗಳು, "ಸದ್ಯಕ್ಕೆ ಅದೇ ದೊಡ್ಡ ಬೆಂಬಲ, ಮತ್ತು ನಾವು ಈಗ ಅವನ ಸಂಬಳದಿಂದ ಒಂದಿಷ್ಟು ಉಳಿಸಲು ಸಮರ್ಥರಾಗಿದ್ದೇವೆ" ಎಂದು ದಾಮು ಹೇಳಿದರು. ದಾಮು ಮತ್ತು ಗೀತಾ ಅವರ ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದು, ಕಿರಿಯ ಮಗ ಹಳ್ಳಿಯ ಜಿಲ್ಲಾ ಪರಿಷತ್ ಶಾಲೆಯಲ್ಲಿ 5ನೇ ತರಗತಿಯಲ್ಲಿದ್ದಾನೆ.

ಮಹಾರಾಷ್ಟ್ರದ ಡೆಹಾರಿ ಗ್ರಾಮದ ಹೊರವಲಯದಲ್ಲಿ, ದುರ್ಬಲ ಬುಡಕಟ್ಟು ಗುಂಪಾಗಿ ಪಟ್ಟಿ ಮಾಡಲಾಗಿರುವ ಕಟ್ಕರ್ ಸಮುದಾಯದ 25 ಕುಟುಂಬಗಳಿವೆ, ಎಲ್ಲಾ ಕುಟುಂಬಗಳು ಮುಖ್ಯವಾಗಿ ಒಂದು ಎಕರೆಗಳಿಂದ ಮೂರು ಎಕರೆವರೆಗೆ ಅರಣ್ಯ ಭೂಮಿಯಲ್ಲಿ ಭತ್ತ, ರಾಗಿ ಮತ್ತು ಉದ್ದನ್ನು ಬೆಳೆಯುತ್ತವೆ. "1955ರಿಂದ ಸಲ್ಲಿಸಿದ ನಿರಂತರ ಬೇಡಿಕೆಗಳ ನಂತರ, ನಾವೆಲ್ಲರೂ 2016ರಲ್ಲಿ ನಮ್ಮ ಹೆಸರಿನಲ್ಲಿ ಭೂಮಿ ಮಾಲಿಕತ್ವವನ್ನು ಪಡೆದುಕೊಂಡಿದ್ದೇವೆ (ಅರಣ್ಯ ಭೂಮಿಗೆ)" ಎಂದು ದಾಮು ಹೇಳಿದರು.

ಅವರ ಜಮೀನಿನಿಂದ ಸ್ವಲ್ಪ ದೂರದಲ್ಲಿ ಮೂರು ಎಕರೆ ತಗ್ಗು ಪ್ರದೇಶದ ಹೊಲದಲ್ಲಿ ಬೇಸಾಯ ಮಾಡುತ್ತಿರುವ 45 ವರ್ಷದ ಚಂದ್ರಕಾಂತ್ ಭೋಯೆ ಮತ್ತು ಅವರ ಪತ್ನಿ ಶಾಲು (40) ಅವರ ಬೆಳೆಗಳು ಕೂಡ ಅಕಾಲಿಕ ಮಳೆಯಿಂದ ನಷ್ಟಕ್ಕೀಡಾಗಿವೆ. ಅವರ ಭತ್ತದ ಬೆಳೆ ಕೂಡ ಅಕ್ಟೋಬರ್ 13-14ರಂದು ನೆರೆಯಲ್ಲಿ ಮುಳುಗಿತ್ತು. "ಆ ದಿನಗಳಲ್ಲಿ 4-5 ಗಂಟೆಗಳ ಕಾಲ ಭಾರೀ ಗಾಳಿಯೊಂದಿಗೆ ಮಳೆಯಾಯಿತು" ಎಂದು ಚಂದ್ರಕಾಂತ್ ಹೇಳಿದರು.
Chandrakant Bhoye and his family were counting on a good yield this time to be able to repay a loan
PHOTO • Jyoti
Chandrakant Bhoye and his family were counting on a good yield this time to be able to repay a loan
PHOTO • Jyoti

ಸಾಲದ ಮರುಪಾವತಿಗಾಗಿ ಚಂದ್ರಕಾಂತ್ ಭೋಯೆ ಮತ್ತು ಅವರ ಕುಟುಂಬ ಈ ಬಾರಿ ಉತ್ತಮ ಇಳುವರಿಯನ್ನು ಎದುರು ನೋಡುತ್ತಿತ್ತು

ಕುಟುಂಬವು ತನ್ನ ಸಂಬಂಧಿಕರಿಂದ ಪಡೆದ 15,000 ಸಾಲ ತೀರಿಸುವ ಸಲುವಾಗಿ ಈ ವರ್ಷ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿತ್ತು. "ಬೀಜ, ಗೊಬ್ಬರ ಇವೆಲ್ಲ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ ಹೀಗಾಗಿ ಸಂಬಂಧಿಕರ ಬಳಿ ಸಾಲ ಪಡೆದಿದ್ದೇನೆ. ಸಮಾನ್ಯವಾಗಿ ನಾನು ಬೆಳೆದ ಭತ್ತವನ್ನು ಮಾರುವುದಿಲ್ಲ. ಆದರೆ ಈ ಬಾರಿ ಸಾಲ ತೀರಿಸುವ ಸಲುವಾಗಿ 7-8 ಕ್ವಿಂಟಲ್‌ಗಳನ್ನು ಮಾರಾಟ ಮಾಡುವ ಬಗ್ಗೆ ಯೋಚಿಸಿದ್ದೆ” ಎಂದು 45 ವರ್ಷದ ಚಂದ್ರಕಾಂತ್ ಹೇಳಿದರು.

ಅವರು ಮತ್ತು ಶಾಲು ಪ್ರತಿ ವರ್ಷ 10-12 ಕ್ವಿಂಟಾಲ್ ಭತ್ತ ಕೊಯ್ಲು ಮಾಡುತ್ತಾರೆ. ನವೆಂಬರ್‌ ತಿಂಗಳಿನಿಂದ ಮೇ ತನಕ ಅವರ ಊರಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ದಹಾನು ಎಂಬಲ್ಲಿನ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ತಮ್ಮ ಗಳಿಕೆಯನ್ನು ಕೃಷಿಯಲ್ಲಿ ಹೂಡಿಕೆ ಮಾಡುತ್ತಾರೆ. 2019ರಲ್ಲಿ ಅವರು ಇಟ್ಟಿಗೆ ಗೂಡು ಕೆಲಸದಿಂದ 50,000 ರೂಪಾಯಿ ಸಂಪಾದಿಸಿದ್ದರು. "ಬಂದ್ (ಲಾಕ್‌ಡೌನ್)‌ಪ್ರಾರಂಭಗೊಂಡಿದ್ದರಿಂದ ಮಾಲಿಕ ನಮಗೆ ಹಣ ನೀಡಲಿಲ್ಲ, ನಾವು ಅಲ್ಲಿಂದ ನಡೆದು ಮನೆಗೆ ಬಂದೆವು." ಎಂದು ಎರಡು ಕೋಣೆಗಳ ಮಣ್ಣಿನ ಮನೆಯೆದುರು ತನ್ನ ನಾಲ್ಕು ವರ್ಷದ ಮಗಳು ರೂಪಾಲಿ ಮತ್ತು ಮೂರು ವರ್ಷದ ಮಗ ರೂಪೇಶ್ ಜೊತೆ ಕುಳಿತಿದ್ದ ಚಂದ್ರಕಾಂತ್‌ ಹೇಳಿದರು.

ಅವರು ಈಗ ಸಾಲದ ಕುರಿತು ಹೆಚ್ಚು ಚಿಂತಿತರಾಗಿದ್ದಾರೆ. "ಈ ಸಲ ನಾವು ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತೇವೆ" ಎಂದು ದೃಢ ನಿರ್ಧಾರದಿಂದ ಹೇಳಿದರು. "ಈ ಸಲ ಕೇವಲ ಐದು ಕ್ವಿಂಟಾಲ್‌ ಭತ್ತ ಮಾತ್ರವೇ ಸಿಕ್ಕಿತು. ಆದರೆ ಇಟ್ಟಿಗೆ ಭಟ್ಟಿಯಲ್ಲಿ ಈ ಬಾರಿ ಖಂಡಿತ ಹೆಚ್ಚು ಸಂಪಾದಿಸಲಿದ್ದೇನೆ" ಎಂದು ನವೆಂಬರ್‌ 8ರಂದು ಫೋನ್‌ ಮೂಲಕ ತಿಳಿಸಿದರು.

ಚಂದ್ರಕಾಂತ್ ಮತ್ತು ಶಾಲು ಅವರು ರೂಪಾಲಿ ಮತ್ತು ರೂಪೇಶ್ ಅವರೊಂದಿಗೆ ದಹಾನುನಲ್ಲಿರುವ ಇಟ್ಟಿಗೆ ಗೂಡಿಗೆ ನವೆಂಬರ್ 23ರೊಳಗೆ ಹೊರಡಲು ಯೋಜಿಸುತ್ತಿದ್ದು, ಅಕಾಲಿಕ ಮಳೆಯಿಂದಾದ ನಷ್ಟವನ್ನು ಮರೆತು ಬರುವ ತಿಂಗಳುಗಳಲ್ಲಿ ಹೆಚ್ಚು ಸಂಪಾದಿಸುವ ಭರವಸೆ ಹೊಂದಿದ್ದಾರೆ.‌
Unexpected rainfall in October hit all the farmers in Gates Budruk, a village of 1,134 people
PHOTO • Jyoti
Unexpected rainfall in October hit all the farmers in Gates Budruk, a village of 1,134 people
PHOTO • Jyoti
Unexpected rainfall in October hit all the farmers in Gates Budruk, a village of 1,134 people
PHOTO • Jyoti

ಅಕ್ಟೋಬರ್‌ನಲ್ಲಿ ಸುರಿದ ಅನಿರೀಕ್ಷಿತ ಮಳೆಯು 1,134 ಜನಸಂಖ್ಯೆಯ ಬುದ್ರೂಕ್ ಗೇಟ್ಸ್ ಗ್ರಾಮದ ಎಲ್ಲ ರೈತರ ಮೇಲೆ ಪರಿಣಾಮ ಬೀರಿತು

*****

"ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, 10 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಬೆಳೆಗಳ ನಾಶವಾಗಿದೆ" ಎಂದು ರಾಜ್ಯದ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್ ಅಕ್ಟೋಬರ್ 21ರಂದು ಟಿವಿ 9 ಮರಾಠಿಗೆ ತಿಳಿಸಿದರು.

ಅಕ್ಟೋಬರ್ 22 ರಂದು ಪಾಲ್ಘಾರ್‌ ಜಿಲ್ಲಾ ಆಯುಕ್ತರ ಕಚೇರಿಯ ಅಧಿಕಾರಿಗಳು "ಅಕ್ಟೋಬರ್ 16ರಿಂದ ಸಮೀಕ್ಷೆ ನಡೆಯುತ್ತಿದೆ" ಮತ್ತು ಬೆಳೆ ನಷ್ಟದ ಬಗ್ಗೆ ಅಥವಾ ಸಂತ್ರಸ್ತ ರೈತರ ಬಗ್ಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಅಕ್ಟೋಬರ್ 23ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ 10,000 ಕೋಟಿ ರೂಗಳನ್ನು ಘೋಷಿಸಿದ್ದರು.

ಗ್ರಾಮದ ರೈತರು ತಮ್ಮ ಬೆಳೆ ನಷ್ಟದ ಬಗ್ಗೆ ವರದಿ ಮಾಡಲು ತಲತಿಯ ಕಚೇರಿಗೆ ಹೋದ ನಂತರ - ಅಕ್ಟೋಬರ್ 27 ರಂದು, ವಡಾ ತಾಲ್ಲೂಕಿನ ತಲತಿಯ (ಕಂದಾಯ) ಕಚೇರಿಯ ಅಧಿಕಾರಿಗಳು ಗೇಟ್ಸ್ ಬುದ್ರೂಕ್‌‌ನಲ್ಲಿ ತಪಾಸಣೆ ನಡೆಸಿದರು. "ಅವರು ಎಲ್ಲಾ ಹಾನಿಗೊಳಗಾದ ಗದ್ದೆಗಳನ್ನು ನೋಡಿದರು, ಮೊಳಕೆಯೊಡೆದ ಭತ್ತದ ಪೈರಿನ ಫೋಟೋಗಳನ್ನು ತೆಗೆದುಕೊಂಡರು ಮತ್ತು ಪರಿಹಾರದ ಬಗ್ಗೆ ನಮಗೆ ತಿಳಿಸುವುದಾಗಿ ಹೇಳಿದರು" ಎಂದು ಮನೋಜ್ ಹೇಳಿದರು.

ಪಾಲ್ಘಾರ್‌ ಜಿಲ್ಲೆಯ ಎಲ್ಲಾ ನೆರೆ ಪೀಡಿತ ಹೊಲಗಳ ಪರಿಶೀಲನೆ ಪೂರ್ಣಗೊಂಡ ನಂತರ, ಮತ್ತು ಎಲ್ಲಾ ನಷ್ಟಗಳನ್ನು ಅಂದಾಜು ಮಾಡಿದ ನಂತರ, ರೈತರು ತಮ್ಮ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರವನ್ನು ಪಡೆಯುತ್ತಾರೆಂದು ನಿರೀಕ್ಷಿಸಲಾಗಿದೆ.

ಆದರೆ ಅದು ಇನ್ನೂ ಸಂಭವಿಸಿಲ್ಲ. ಮತ್ತು ಕಾಮಿನಿ, ಮನೋಜ್ ಮತ್ತು ಇತರ ರೈತರು ಪರಿಹಾರ ಪಡೆಯುವ ಬಗ್ಗೆ ಯಾವುದೇ ಆಶಾವಾದ ಹೊಂದಿಲ್ಲ. "ಕಳೆದ ವರ್ಷ ನನಗೆ ಪರಿಹಾರ ಸಿಗಲಿಲ್ಲ" ಎಂದು ಕಾಮಿನಿ ಹೇಳುತ್ತಾರೆ. ನಾನು ನಿಜವಾಗಿಯೂ ಏನನ್ನೂ ನಿರೀಕ್ಷಿಸಿರಲಿಲ್ಲ. "ಮುಂದಿನ ತಿಂಗಳು ಸಿಗುತ್ತದೆ, ಮುಂದಿನ ತಿಂಗಳು ನಿಮಗೆ ಹಣ ಸಿಗುತ್ತದೆ ಎಂದು ತಲತಿ ಕಚೇರಿ ಅಧಿಕಾರಿಗಳು ಹೇಳುತ್ತಲೇ ಇದ್ದರು, ಆದರೆ ನಮಗೆ ಯಾವುದೇ ಪರಿಹಾರ ಬಂದಿಲ್ಲ."

ಅನುವಾದ: ಶಂಕರ ಎನ್. ಕೆಂಚನೂರು

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Other stories by Jyoti
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru