ಫೆಬ್ರವರಿ 18, 1983ರಂದು ನೆಲ್ಲಿ ಹತ್ಯಾಕಾಂಡ ನಡೆದಾಗ ರಶೀದ್ ಬೇಗಂಗೆ ಕೇವಲ ಎಂಟು ವರ್ಷ. “ಅವರು ಎಲ್ಲೆಡೆಯಿಂದ ಜನರನ್ನು ಸುತ್ತುವರೆದು ನಂತರ ಒಂದು ಕಡೆಗೆ ಓಡಿಸತೊಡಗಿದರು. ಹಾಗೆ ಓಡುತ್ತಿರುವವರ ಮೇಲೆ ಬಾಣಗಳನ್ನು ಬಿಟ್ಟರು; ಕೆಲವರ ಕೈಯಲ್ಲಿ ಬಂದೂಕು ಕೂಡಾ ಇತ್ತು. ಈ ರೀತಿಯಾಗಿ ಅವರು ಹಲವರನ್ನು ಕೊಂದರು. ಅಲ್ಲಿ ಕೆಲವರ ಕುತ್ತಿಗೆ ಕತ್ತರಿಸಲ್ಪಟ್ಟಿತ್ತು. ಕೆಲವರ ಎದೆಯ ಮೇಲೆ ಹಲ್ಲೆ ನಡೆಸಲಾಗಿತ್ತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಆ ದಿನ, ಆರು ಗಂಟೆಗಳ ಅವಧಿಯಲ್ಲಿ, ಮಧ್ಯ ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ನೆಲ್ಲಿ (ಅಥವಾ ನೆಲಿ) ಪ್ರದೇಶದಲ್ಲಿ ಬಂಗಾಳ ಮೂಲದ ಸಾವಿರಾರು ಮುಸ್ಲಿಮರನ್ನು ಕೊಲ್ಲಲಾಯಿತು. ಅಲಿಸಿಂಗಾ, ಬಸುಂಧರಿ ಜಲಾಹ್, ಬೋರ್ಬೋರಿ, ಭುಗ್ದುಬಾ ಬಿಲ್, ಭುಗ್ದುಬಾ ಹಬಿ, ಖುಲಾಪಥರ್, ಮತಿಪರ್ಬತ್, ಮುಲಾಧಾರಿ, ನೆಲಿ ಮತ್ತು ಸಿಲ್ಭೇಟಾ ಗ್ರಾಮಗಳು ಹೆಚ್ಚು ಹಾನಿಗೊಳಗಾದ ಕೆಲವು ಗ್ರಾಮಗಳಾಗಿವೆ. ಅಧಿಕೃತ ವರದಿಗಳು ಸಾವಿನ ಸಂಖ್ಯೆಯನ್ನು ಸುಮಾರು 2,000 ಎಂದು ಹೇಳುತ್ತವೆ, ಆದರೆ ಅನಧಿಕೃತ ಅಂದಾಜಿನ ಪ್ರಕಾರ ಇದು 3,000-5,000.

ಮನೆಯಲ್ಲಿ ರೂಮಿ ಎಂದು ಕರೆಯಲ್ಪಡುವ ರಶೀದಾ ಹತ್ಯಾಕಾಂಡದಲ್ಲಿ ಬದುಕುಳಿದವರು. ಆದರೆ ತನ್ನ ನಾಲ್ವರು ತಂಗಿಯರು ಸಾಯುವುದನ್ನು ಮತ್ತು ತಾಯಿ ತೀವ್ರವಾಗಿ ಗಾಯಗೊಂಡಿರುವುದನ್ನು ಅವರು ಕಣ್ಣಾರೆ ನೋಡಬೇಕಾಯಿತು. "ಅವರು ನನ್ನ ಮೇಲೆ ಈಟಿಯಿಂದ ದಾಳಿ ಮಾಡಿದರು ಮತ್ತು ನನ್ನ ಸೊಂಟಕ್ಕೆ ಗುಂಡು ಹಾರಿಸಿದರು. ಒಂದು ಗುಂಡು ನನ್ನ ಕಾಲನ್ನು ಸೀಳಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

1979ರಿಂದ 1985ರವರೆಗೆ ಅಸ್ಸಾಂನಲ್ಲಿ ನಡೆದ ವಿದೇಶಿಯರ ವಿರುದ್ಧದ ಆಂದೋಲನದಿಂದ ಭುಗಿಲೆದ್ದ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಹತ್ಯೆಗಳು ನಡೆದವು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು) ಮತ್ತು ಅದರ ಮಿತ್ರಪಕ್ಷಗಳು ಇದರ ನೇತೃತ್ವ ವಹಿಸಿದ್ದವು. ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಹಾಕಬೇಕು ಮತ್ತು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕು ಎನ್ನುವುದು ಅವರ ಒತ್ತಾಯವಾಗಿತ್ತು.

ವೀಡಿಯೊ ನೋಡಿ: Facing History and Ourselves: ನೆಲ್ಲಿ ಹತ್ಯಾಕಾಂಡವನ್ನು ನೆನಪಿಸಿಕೊಂಡ ರಶೀದಾ ಬೇಗಂ

ಫೆಬ್ರವರಿ 1983ರಲ್ಲಿ, ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು ಎಎಎಸ್‌ಯುನಂತಹ ಗುಂಪುಗಳು ಮತ್ತು ಕೆಲವು ವಿಭಾಗದ ಸಾಮಾನ್ಯ ಜನರ ಪ್ರತಿರೋಧದ ಹೊರತಾಗಿಯೂ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗೆ ಕರೆ ನೀಡಿತು. ಎಎಎಸ್‌ಯು ಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಿತು. ಆದರೂ, ಫೆಬ್ರವರಿ 14ರಂದು ನಡೆದ ಚುನಾವಣೆಯಲ್ಲಿ ಬಂಗಾಳ ಮೂಲದ ಹಲವಾರು ಮುಸ್ಲಿಮರು ಮತ ಚಲಾಯಿಸಿದರು. ಈ ಸಮುದಾಯವು ಆ ರಾಜ್ಯದಲ್ಲಿ ಬಿದೆಕ್ಸಿ (ವಿದೇಶಿ) ಎಂಬ ಹಣೆಪಟ್ಟಿಯೊಂದಿಗೆ ವಾಸಿಸುತ್ತಿತ್ತು ಮತ್ತು ದೈಹಿಕ ಮತ್ತು ಮಾನಸಿಕ ಹಿಂಸಾಚಾರಕ್ಕೆ ಗುರಿಯಾಗುತ್ತಿತ್ತು. ಅವರ ಪಾಲಿಗೆ ತಮ್ಮ ಮತ ಚಲಾಯಿಸುವುದು ತಮ್ಮ ಭಾರತೀಯ ಪೌರತ್ವದ ಹಕ್ಕನ್ನು ಪ್ರತಿಪಾದಿಸಲು ಇದ್ದ ಒಂದು ಮಾರ್ಗವಾಗಿತ್ತು. ಅದೇನೇ ಇದ್ದರೂ, ಫೆಬ್ರವರಿ 18ರಂದು ಈ ಸಮುದಾಯದ ಮೇಲೆ ಗುಂಪುಗಳು ನಡೆಸಿದ ಹಿಂಸಾಚಾರಕ್ಕೆ ಚುನಾವಣೆ ತಕ್ಷಣದ ಕಾರಣವಾಗಿದೆ ಎಂದು ನಂಬಲಾಗಿದೆ.

"ನಾನು ಕೂಡಾ ಒಂದು ಕಾಲದಲ್ಲಿ ವಿದೇಶೀಯರ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿದ್ದೆ. ಆಗ ನಾನು ಚಿಕ್ಕವಳಾಗಿದ್ದೆ ಮತ್ತು ಈ ವಿಷಯಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಈಗ ನನ್ನ ಹೆಸರು ಎನ್ಆರ್‌ಸಿಯಲ್ಲಿ ಇಲ್ಲದ ಕಾರಣ ಅವರು ನನ್ನನ್ನು ವಿದೇಶೀಯಳನ್ನಾಗಿ ಮಾಡಿದ್ದಾರೆ" ಎಂದು ರೂಮಿ ಹೇಳುತ್ತಾರೆ. ಅಸ್ಸಾಂನಲ್ಲಿ 2015 ಮತ್ತು 2019ರ ನಡುವೆ ನಡೆದ ಪೌರತ್ವ-ಗುರುತಿಸುವಿಕೆ ಚಟುವಟಿಕೆಯ ನವೀಕರಿಸಿದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್‌ಸಿ)ಯಲ್ಲಿ ಅವರ ಹೆಸರು ಕಾಣೆಯಾಗಿದೆ, ಇದರಲ್ಲಿ 1.9 ಮಿಲಿಯನ್ ಜನರ ಹೆಸರು ಕಾಣೆಯಾಗಿದೆ. "ನನ್ನ ತಾಯಿ, ತಂದೆ, ಸಹೋದರ, ಸಹೋದರಿ - ಎಲ್ಲರ ಹೆಸರು ಅದರಲ್ಲಿದೆ. ನನ್ನ ಗಂಡನ ಹೆಸರು ಮತ್ತು ಮಕ್ಕಳ ಹೆಸರುಗಳನ್ನು ಸಹ ಸೇರಿಸಲಾಗಿದೆ. ನನ್ನ ಹೆಸರು ಏಕಿಲ್ಲ?" ಎಂದು ಅವರು ಹೇಳುತ್ತಾರೆ.

ಬಂಗಾಳ ಮೂಲದ ಮುಸ್ಲಿಮರ ಪೌರತ್ವ ಮತ್ತು ಕೆಲವು ಸಂದರ್ಭಗಳಲ್ಲಿ ಬಂಗಾಳಿ ಹಿಂದೂಗಳ ಪೌರತ್ವದ ಕುರಿತಾಗಿ ಇರುವ ಅನುಮಾನವು ದಶಕಗಳಷ್ಟು ಹಳೆಯದು ಮತ್ತು ಬ್ರಿಟಿಷ್ ವಸಾಹತುಶಾಹಿ ಮತ್ತು ಭಾರತೀಯ ಉಪಖಂಡದ ವಿಭಜನೆಯವರೆಗೆ ಇದು ವಿಸ್ತರಿಸುತ್ತದೆ. ರೂಮಿ ಎಂಟು ವರ್ಷದವರಿದ್ದಾಗ ಎದುರಿಸಿದ್ದ ಪ್ರಶ್ನೆಯನ್ನು ಇಂದಿಗೂ ಎದುರಿಸುತ್ತಿದ್ದಾರೆ.

ವೀಡಿಯೊ ಶು ಭಶ್ರೀ ಕೃಷ್ಣನ್ ಸಂಯೋಜಿಸಿದ ' Facing History and Ourselves ( ಫೇಸಿಂಗ್ ಹಿಸ್ಟರಿ ಅಂಡ್ ಅವರ್ ಸೆಲ್ವ್ಸ್ ) ' ಚಿತ್ರದ ಭಾಗವಾಗಿದೆ . ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ್ ತನ್ನ ಆರ್ಕೈವ್ಸ್ ಮತ್ತು ಮ್ಯೂಸಿ ಯಮ್ಸ್ ಕಾರ್ಯಕ್ರಮದ ಅಡಿಯಲ್ಲಿ ಫೌಂಡೇಷನ್ ಯೋಜನೆಯನ್ನು ಕಾರ್ಯಗತಗೊಳಿಸಿದೆ . ನವದೆಹಲಿಯ ಗೋಥೆ - ಇನ್ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನದ ಭಾಗಶಃ ಬೆಂಬಲದಿಂದ ಇದು ಸಾಧ್ಯವಾಗಿದೆ . ಶೇರ್ - ಗಿಲ್ ಸುಂದರಂ ಆರ್ಟ್ಸ್ ಫೌಂಡೇಶನ್ ಕೂಡ ಯೋಜನೆಗೆ ಬೆಂಬಲ ನೀಡಿದೆ .

ಅನುವಾದ: ಶಂಕರ. ಎನ್. ಕೆಂಚನೂರು

Subasri Krishnan

ಸುಭಶ್ರೀ ಕೃಷ್ಣನ್ ಓರ್ವ ಚಲನಚಿತ್ರ ನಿರ್ಮಾಪಕರಾಗಿದ್ದು, ಅವರ ಕೃತಿಗಳು ಪೌರತ್ವದ ಪ್ರಶ್ನೆಗಳನ್ನು ನೆನಪಿನ ಮಸೂರದ ಮೂಲಕ, ವಲಸೆ ಮತ್ತು ಅಧಿಕೃತ ಗುರುತಿನ ದಾಖಲೆಗಳ ಪರೀಕ್ಷೆಯ ಮೂಲಕ ಸಮಸ್ಯೆಯನ್ನು ನೋಡುತ್ತವೆ. ಅವರ ಯೋಜನೆ 'Facing History and Ourselves' ಅಸ್ಸಾಂ ರಾಜ್ಯದಲ್ಲಿ ಮಾದರಿಯಲ್ಲಿ ಸಮಸ್ಯೆಯನ್ನು ನೋಡುತ್ತದೆ. ಅವರು ಪ್ರಸ್ತುತ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎಜೆಕೆ ಸಮೂಹ ಸಂವಹನ ಸಂಶೋಧನಾ ಕೇಂದ್ರದಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ.

Other stories by Subasri Krishnan
Text Editor : Vinutha Mallya

ವಿನುತಾ ಮಲ್ಯ ಅವರು ಪತ್ರಕರ್ತರು ಮತ್ತು ಸಂಪಾದಕರು. ಅವರು ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಂಪಾದಕೀಯ ಮುಖ್ಯಸ್ಥರಾಗಿದ್ದರು.

Other stories by Vinutha Mallya
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru