चाण्डालश्च वराहश्च कुक्कुटः श्वा तथैव च ।
रजस्वला च षण्ढश्च नैक्षेरन्नश्नतो द्विजान् ॥

ಒಬ್ಬ ಚಂಡಾಲ, ಊರಿನ ಹಂದಿ, ಹುಂಜ, ನಾಯಿ,
ಮುಟ್ಟಾದ ಹೆಂಗಸು ಮತ್ತು ನಪುಂಸಕ ದ್ವಿಜರು ತಿನ್ನುವುದನ್ನು ನೋಡಬಾರದು.

— ಮನುಸ್ಮೃತಿ 3.239

ಈ ಒಂಬತ್ತು ವರ್ಷದ ಹುಡುಗ ಕೇವಲ ನೋಡಿದ್ದಲ್ಲ, ಅವನು ಮಾಡಿದ ಪಾಪವು ಇನ್ನಷ್ಟು ಧೈರ್ಯವನ್ನು ಬೇಡುವಂತಹದ್ದು. 3ನೇ ತರಗತಿಯ ವಿದ್ಯಾರ್ಥಿ ಇಂದ್ರ ಕುಮಾರ್ ಮೇಘವಾಲ್ ತನ್ನ ಬಾಯಾರಿಕೆ ತಡೆಯಲಾಗದೆ ಮೇಲ್ಜಾತಿಯ ಶಿಕ್ಷಕರಿಗೆಂದು ಮೀಸಲಿಟ್ಟ ಮಡಕೆಯಿಂದ ನೀರು ಕುಡಿದುಬಿಟ್ಟಿದ್ದ.

ಇದಕ್ಕೆ ಅವನು ಶಿಕ್ಷೆ ಎದುರಿಸಲೇಬೇಕಿತ್ತು. ರಾಜಸ್ಥಾನದ ಸುರಾನಾ ಗ್ರಾಮದ ಸರಸ್ವತಿ ವಿದ್ಯಾ ಮಂದಿರದ 40 ವರ್ಷದ ಮೇಲ್ಜಾತಿಯ ಶಿಕ್ಷಕ ಚೈಲ್ ಸಿಂಗ್ ಅವನನ್ನು ನಿರ್ದಯವಾಗಿ ಥಳಿಸಿದ.

ಸಹಾಯಕ್ಕಾಗಿ 25 ದಿನಗಳ ಕಾಲ 7 ಆಸ್ಪತ್ರೆಗೆ ಭೇಟಿ ನೀಡಿದ ನಂತರ, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಜಲೋರ್ ಜಿಲ್ಲೆಯ ಈ ಪುಟ್ಟ ಬಾಲಕ ಅಹಮದಾಬಾದ್ ನಗರದಲ್ಲಿ ಕೊನೆಯುಸಿರೆಳೆದನು.

ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಪದ್ಯವನ್ನು ಕೇಳಿರಿ

ಜಾಡಿಯೊಳಗಿನ ಹುಳಗಳು

ಒಂದಾನೊಂದು ಕಾಲದಲ್ಲಿ
ಶಾಲೆಯಲ್ಲೊಂದು ಜಾಡಿಯಿತ್ತು.
ಆ ಶಾಲೆಯಲ್ಲಿ ಗುರು ದೇವರಾಗಿದ್ದ,
ಅಲ್ಲಿ ಮೂರು ತುಂಬಿದ ಚೀಲಗಳಿದ್ದವು
ಒಂದು ಬ್ರಾಹ್ಮಣನಿಗೆ,
ಮತ್ತೊಂದು ರಾಜನಿಗೆ,
ದಲಿತರು ತರುವ ಒಂದು ಪೈಸೆಗಾಗಿ ಇನ್ನೊಂದು.

ಒಂದು ಎಲ್ಲೂ ಇಲ್ಲದ ಜಗತ್ತಿನಲ್ಲಿ
ಎರೆಡರಡು ಕಾಲದಲ್ಲಿ,
ಜಾಡಿಯೊಂದು ಮಗುವಿಗೆ ಹೇಳಿಕೊಟ್ಟಿತ್ತು –
“ಬಾಯಾರಿಕೆಯೆನ್ನುವುದು ಒಂದು ಅಪರಾಧ.
ನಿನ್ನ ಗುರು ದ್ವಿಜ,
ಮತ್ತು ಮಗೂ, ನೀನೊಂದು ಹುಳು,
ಬದುಕೆನ್ನುವುದು ಒಂದು ಹಸಿ ಗಾಯ
ನಿನ್ನನ್ನು ಜಾಡಿಯೊಂದರೊಳಗೆ ಇರಿಸಲಾಗಿದೆ.”

ಈ ಜಾಡಿಗೆ ವಿಲಕ್ಷಣವಾದ ಹೆಸರಿತ್ತು: ಸನಾತನಿ ದೇಶ,
"ನಿನ್ನ ಚರ್ಮವೊಂದು ಪಾಪ.
ಮಗೂ, ನಿನ್ನದು ಶಾಪಗ್ರಸ್ತ ಜನಾಂಗ."
ಆದರೂ ಅವನು ತನ್ನ ಕಾಗದದಂತಹ ತೆಳುವಾದ
ಒಣ ನಾಲಗೆಯೆನ್ನು ತಣಿಸಲು
ಧೈರ್ಯ ಮಾಡಿ ಒಂದು ಹನಿ ಕುಡಿದೇಬಿಟ್ಟ.

ಅಯ್ಯೋ!
ಅವನ ಬಾಯಾರಿಕೆ ತಡೆಯಲಾಗದಷ್ಟು ಹೆಚ್ಚಿತ್ತು,
ಪುಸ್ತಕದಲ್ಲಿ ಹೇಳಿದ್ದರಲ್ಲವೆ: “ಕೊಡು, ಪ್ರೀತಿಸು ಮತ್ತು ಹಂಚಿಕೋ” ಎಂದು?
ಧೈರ್ಯಮಾಡಿ ತನ್ನ ತಣ್ಣನೆಯ ಕೈಯಿಂದ ಹುಡುಗ ಮಡಕೆಯ ಮುಟ್ಟಿಯೇಬಿಟ್ಟ
ಗುರುವು ದೇವಮಾನವ,
ಮತ್ತು ಅವನು ಒಂಬತ್ತು ವರ್ಷದ ಬಾಲಕ.

ಗುದ್ದು, ಒದೆಗಳು
ಮತ್ತು ಚಂದದ ಕೋಲು ಬಳಸಿ
ಹೆಸರಿಲ್ಲದ ಆಕ್ರೋಶದಿಂದ
ಹುಡುಗನನ್ನು ಥಳಿಸಿ ಪಳಗಿಸಲಾಯಿತು.
ದೇವಮಾನವ ತುಂಟ ಪದ್ಯದಂತೆ ನಕ್ಕ

ಎಡಗಣ್ಣಿನಲ್ಲಿ ಗಾಯ
ಬಲಗಣ್ಣಿನಲ್ಲಿ ಹುಳು,
ತುಟಿಗಳು ಕಪ್ಪಾಗಿದ್ದವು
ಗುರುವಿನ ಸಂಭ್ರಮಕ್ಕಾಗಿ.
ಅವನ ಬಾಯಾರಿಕೆ ಪವಿತ್ರವಾಗಿತ್ತು
ಅವನ ಧರ್ಮವು ಪರಿಶುದ್ಧವಾಗಿತ್ತು,
ಹೃದಯವು ಸಾವನ್ನೇ ಸಹಿಸುವ
ಕೇವಲ ಒಂದು ರಂಧ್ರವಾಗಿತ್ತು.

ಅಲ್ಲಿ ಒಂದು ನಿಟ್ಟುಸಿರು ಮತ್ತು “ಏಕೆ” ಎನ್ನುವ ಪ್ರಶ್ನೆಯೊಡನೆ
ದ್ವೇಷ ಉತ್ತುಂಗದಲ್ಲಿತ್ತು
ಬಾಯಾರಿಕೆಗೆ ಹೆಸರಿಡಲಾಗಿತ್ತು
ಆಕ್ರೋಶ ಪಳಗಿಸಲಾಗದಂತೆ ಬೆಳೆದಿತ್ತು
ಕಪ್ಪು ಹಲಗೆ ಸುಡುಗಾಡಿನ ನೊಣದಂತೆ ನರಳುತ್ತಿತ್ತು.

ಒಂದಾನೊಂದು ಕಾಲದಲ್ಲಿ ಶಾಲೆಯೊಂದರಲ್ಲಿ ಹೆಣವೊಂದಿತ್ತು
ಹೌದು ಸರ್!‌, ಹೌದು ಸರ್‌, ಅಲ್ಲಿ ಮೂರು ತುಂಬಿದ ಹನಿಗಳಿದ್ದವು
ಒಂದು ಮಂದಿರಕ್ಕೆ,
ಒಂದು ರಾಜನಿಗೆ,
ದಲಿತರು ಮುಳಗುವ ಮಡಕೆಗಾಗಿ ಇನ್ನೊಂದು.

ಅನುವಾದ: ಶಂಕರ. ಎನ್. ಕೆಂಚನೂರು

Joshua Bodhinetra

ಜೋಶುವಾ ಬೋಧಿನೇತ್ರ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ಯ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾ ವಿಷಯ ವ್ಯವಸ್ಥಾಪಕರು. ಅವರು ಕೋಲ್ಕತ್ತಾದ ಜಾದವಪುರ ವಿಶ್ವವಿದ್ಯಾಲಯದಿಂದ ತುಲನಾತ್ಮಕ ಸಾಹಿತ್ಯದಲ್ಲಿ ಎಂಫಿಲ್ ಪಡೆದಿದ್ದಾರೆ ಮತ್ತು ಬಹುಭಾಷಾ ಕವಿ, ಅನುವಾದಕ, ಕಲಾ ವಿಮರ್ಶಕ ಮತ್ತು ಸಾಮಾಜಿಕ ಕಾರ್ಯಕರ್ತರೂ ಹೌದು.

Other stories by Joshua Bodhinetra
Illustration : Labani Jangi

ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

Other stories by Labani Jangi
Editor : Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Other stories by Pratishtha Pandya
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru