ಒಂದಿಷ್ಟು ಸಮಯದ ಹಿಂದೆ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಟ್ಕನಂಗ್ಲೆ ತಾಲ್ಲೂಕಿನ ಖೋಚಿ ಎಂಬ ಹಳ್ಳಿಯ ರೈತರು, ಒಂದು ಎಕರೆ ಜಮೀನಿನಲ್ಲಿ ಯಾರು ಗರಿಷ್ಠ ಕಬ್ಬನ್ನು ಉತ್ಪಾದಿಸುತ್ತಾರೆ ಎಂಬ ಬಗ್ಗೆ ಪರಸ್ಪರ ಸ್ಪರ್ಧೆಗಿಳಿದರು. ಈ ಆಚರಣೆಯು ಸುಮಾರು ಆರು ದಶಕಗಳಷ್ಟು ಹಳೆಯದು ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ರೀತಿಯ ಆರೋಗ್ಯಕರ ಸ್ಪರ್ಧೆಯು ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲಗಳನ್ನು ನೀಡುತ್ತಿತ್ತು: ಕೆಲವು ರೈತರು ಎಕರೆಗೆ 80,000-100,000 ಕಿಲೋಗಳಷ್ಟು ಬೆಳೆಯುತ್ತಿದ್ದರು, ಇದು ಸಾಮಾನ್ಯ ಇಳುವರಿಯ ಸುಮಾರು 1.5 ಪಟ್ಟು ಹೆಚ್ಚು.

ಆಗಸ್ಟ್ 2019ರಲ್ಲಿ ಆ ಆಚರಣೆಯು ಹಠಾತ್ತಾಗಿ ಕೊನೆಗೊಂಡಿತು, ಆ ಅಲ್ಲಿ ಸುರಿದ ಮಳೆಯು ಗ್ರಾಮದ ಹಲವಾರು ಭಾಗಗಳನ್ನು ಸುಮಾರು 10 ದಿನಗಳವರೆಗೆ ಮುಳುಗಿಸಿ ಅದರ ಕಬ್ಬಿನ ಬೆಳೆಯ ಹೆಚ್ಚಿನ ಭಾಗವನ್ನು ಹಾನಿಗೊಳಿಸಿತು. ಎರಡು ವರ್ಷಗಳ ನಂತರ, ಜುಲೈ 2021ರಲ್ಲಿ, ಮತ್ತೆ ಸುರಿದ ಭಾರಿ ಮಳೆ ಮತ್ತು ಪ್ರವಾಹವು ಖೋಚಿಯ ಕಬ್ಬು ಮತ್ತು ಸೋಯಾಬೀನ್ ಬೆಳೆಗಳಿಗೆ ಮತ್ತೊಮ್ಮೆ ಭಾರಿ ಹಾನಿಯನ್ನುಂಟು ಮಾಡಿತು.

"ರೈತರು ಈಗ ಪೈಪೋಟಿಗಿಳಿಯುವುದಿಲ್ಲ; ಬದಲಾಗಿ, ತಾವು ಬೆಳೆದ ಕಬ್ಬಿನ ಕನಿಷ್ಠ ಅರ್ಧದಷ್ಟು ಉಳಿಯಲಿ ಎಂದು ಅವರು ಪ್ರಾರ್ಥಿಸುತ್ತಾರೆ," ಎಂದು 42 ವರ್ಷದ ಗೇಣಿದಾರ ರೈತ ಮಹಿಳೆ ಮತ್ತು ಖೋಚಿ ನಿವಾಸಿ ಗೀತಾ ಪಾಟೀಲ್ ಹೇಳುತ್ತಾರೆ. ಕಬ್ಬಿನ ಉತ್ಪಾದನೆಯನ್ನು ಹೆಚ್ಚಿಸಲು ಬೇಕಿರುವ ಎಲ್ಲಾ ತಂತ್ರಗಳನ್ನು ಕಲಿತಿದ್ದೇನೆ ಎಂದು ಒಮ್ಮೆ ನಂಬಿದ್ದ ಗೀತಾ, ಎರಡು ಪ್ರವಾಹಗಳಲ್ಲಿ 8 ಲಕ್ಷ ಕಿಲೋ ತೂಕಕ್ಕೂ ಹೆಚ್ಚು ಕಬ್ಬನ್ನು ಕಳೆದುಕೊಂಡರು. "ಏನೋ ತಪ್ಪಾಗಿದೆ," ಎಂದು ಅವರು ಹೇಳುತ್ತಾರೆ. ಹವಾಮಾನ ಬದಲಾವಣೆ ಕುರಿತು ಅವರು ಗಮನವಹಿಸಿಲ್ಲ.

"ಮಳೆಯ ಮಾದರಿ [2019ರ ಪ್ರವಾಹದಿಂದ] ಸಂಪೂರ್ಣವಾಗಿ ಬದಲಾಗಿದೆ," ಎಂದು ಅವರು ಹೇಳುತ್ತಾರೆ. 2019ರವರೆಗೆ ಅವರು ಒಂದು ನಿರ್ದಿಷ್ಟ ಬೆಳೆ ಮಾದರಿಯನ್ನು ಹೊಂದಿದ್ದರು. ಪ್ರತಿ ಕಬ್ಬಿನ ಕಟಾವಿನ ನಂತರ, ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ನ ಆಸುಪಾಸಿನಲ್ಲಿ, ವಿಭಿನ್ನ ಬೆಳೆಯನ್ನು ಬೆಳೆಯುತ್ತಿದ್ದರು - ಸೋಯಾಬೀನ್, ಭುಯಿಮುಗ್ (ನೆಲಗಡಲೆ), ವಿವಿಧ ರೀತಿಯ ಅಕ್ಕಿ, ಶಾಲು (ಹೈಬ್ರಿಡ್ ಜೋಳ) ಅಥವಾ ಸಜ್ಜೆ – ಇವು ಮಣ್ಣು ತನ್ನ ಪೋಷಕಾಂಶಗಳನ್ನು ಉಳಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ. ಅವರ ಬದುಕು ಮತ್ತು ಕೆಲಸದಲ್ಲಿ ಒಂದು ಸ್ಥಿರವಾದ ಮತ್ತು ಪರಿಚಿತವಾದ ಲಯವಿತ್ತು. ಅದು ಇಂದು ಇಲ್ಲವಾಗಿದೆ.

"ಈ ವರ್ಷ [2022] ಮಾನ್ಸೂನ್ ಒಂದು ತಿಂಗಳು ತಡವಾಗಿತ್ತು. ಆದರೆ ಮಳೆ ಪ್ರಾರಂಭವಾದಾಗ, ಒಂದು ತಿಂಗಳೊಳಗೆ ಗದ್ದೆಗಳು ಬಹುತೇಕ ಜಲಾವೃತಗೊಂಡವು." ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆಯಾದ ಕಾರಣ ಹೊಲಗದ್ದೆಗಳ ದೊಡ್ಡ ಪ್ರದೇಶಗಳು ಸುಮಾರು ಎರಡು ವಾರಗಳ ಕಾಲ ಮುಳುಗಿದ್ದವು; ಆಗತಾನೇ ಕಬ್ಬು ಬೆಳೆದಿದ್ದ ರೈತರು ಅತಿಯಾದ ನೀರು ಬೆಳೆಗಳಿಗೆ ಹಾನಿಯುಂಟುಮಾಡಿದ್ದರಿಂದ ವ್ಯಾಪಕ ನಷ್ಟವನ್ನು ಅನುಭವಿದರು. ನೀರಿನ ಮಟ್ಟವು ಮತ್ತಷ್ಟು ಹೆಚ್ಚಾದರೆ ಜನರು ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಪಂಚಾಯತ್ ಎಚ್ಚರಿಕೆಗಳನ್ನು ಸಹ ನೀಡಿತು.

Geeta Patil was diagnosed with hyperthyroidism after the 2021 floods. 'I was never this weak. I don’t know what is happening to my health now,' says the says tenant farmer and agricultural labourer
PHOTO • Sanket Jain

2021ರ ಪ್ರವಾಹದ ನಂತರ ಗೀತಾ ಪಾಟೀಲ್ ಹೈಪರ್ ಥೈರಾಯ್ಡಿಸಮ್‌ನಿಂದ ಬಳಲುತ್ತಿದ್ದರು. 'ನಾನೆಂದೂ ಇಷ್ಟು ದುರ್ಬಲಳಾಗಿರಲಿಲ್ಲ. ಈಗ ನನ್ನ ಆರೋಗ್ಯಕ್ಕೆ ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ,' ಎಂದು ಗೇಣಿ ಕೃಷಿಕರು ಮತ್ತು ಕೃಷಿ ಕಾರ್ಮಿಕರಾದ ಅವರು ಹೇಳುತ್ತಾರೆ

ಅದೃಷ್ಟವಶಾತ್, ಗೀತಾ ಒಂದು ಎಕರೆಯಲ್ಲಿ ಬೆಳೆದ ಭತ್ತವು ಪ್ರವಾಹದಿಂದ ಬಚಾವ್‌ ಆಗಿತ್ತು ಮತ್ತು ಅದರಿಂದ ಅಕ್ಟೋಬರ್‌ ತಿಂಗಳಿನಲ್ಲಿ ಉತ್ತಮ ಫಸಲು ಮತ್ತು ಸ್ವಲ್ಪ ಆದಾಯವನ್ನು ನಿರೀಕ್ಷಿಸಿದ್ದರು. ಆದರೆ, ಅಕ್ಟೋಬರ್ ಮತ್ತೆ ಅಭೂತಪೂರ್ವ ಮಳೆಯನ್ನು ತಂದಿತು (ಈ ಪ್ರದೇಶದ ಜನರು ಇದನ್ನು 'ಧಾಗ್ಫುಟಿ' ಅಥವಾ ಮೇಘಸ್ಫೋಟ ಎಂದು ವಿವರಿಸುತ್ತಾರೆ) - ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ಮಳೆಯು ಕೊಲ್ಹಾಪುರ ಜಿಲ್ಲೆಯೊಂದರಲ್ಲೇ 78 ಹಳ್ಳಿಗಳಲ್ಲಿ ಸುಮಾರು ಒಂದು ಸಾವಿರ ಹೆಕ್ಟೇರ್ ಕೃಷಿಭೂಮಿಯನ್ನು ನಾಶಪಡಿಸಿತು.

"ನಾವು ಸುಮಾರು ಅರ್ಧದಷ್ಟು ಭತ್ತವನ್ನು ಕಳೆದುಕೊಂಡಿದ್ದೇವೆ," ಎಂದು ಗೀತಾ ಹೇಳುತ್ತಾರೆ, ಭಾರಿ ಮಳೆಯನ್ನು ತಡೆದುಕೊಳ್ಳುವ ಕಬ್ಬಿನಿಂದಲೂ ಕಡಿಮೆ ಇಳುವರಿ ಬರುತ್ತಿದೆ. ಅವರ ಸಂಕಟಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. "ಗೇಣಿ ರೈತರಾಗಿ, ನಾವು ಉತ್ಪನ್ನದ 80 ಪ್ರತಿಶತವನ್ನು ಭೂಮಾಲೀಕರಿಗೆ ನೀಡಬೇಕು," ಎಂದು ಅವರು ಹೇಳುತ್ತಾರೆ.

ಗೀತಾ ಮತ್ತು ಅವರ ಕುಟುಂಬವು ನಾಲ್ಕು ಎಕರೆ ಭೂಮಿಯಲ್ಲಿ ಕಬ್ಬು ಬೆಳೆಯುತ್ತಾರೆ. ಸಾಮಾನ್ಯ ಸಮಯದಲ್ಲಿ, ಉತ್ಪಾದನೆಯು ಕನಿಷ್ಠ 320 ಟನ್ ಆಗಿರುತ್ತದೆ. ಇದರಲ್ಲಿ, ಅವರು ಕೇವಲ 64 ಟನ್‌ಗಳನ್ನು ಮಾತ್ರ ಇಟ್ಟುಕೊಳ್ಳಲು ಸಾಧ್ಯವಾಯಿತು, ಉಳಿದದ್ದು ಭೂಮಾಲೀಕರಿಗೆ ಹೋಯಿತು; ಕುಟುಂಬದ ಕನಿಷ್ಠ ನಾಲ್ಕು ಸದಸ್ಯರ 15 ತಿಂಗಳ ಕಠಿಣ ಪರಿಶ್ರಮಕ್ಕೆ 64 ಟನ್‌ಗಳು ಎಂದರೆ ಸರಿಸುಮಾರು 1,79,200 ರೂ.ಗಳಾಗಿವೆ. ಕೇವಲ ಉತ್ಪಾದನಾ ವೆಚ್ಚವನ್ನು ಮಾತ್ರ ಭರಿಸುವ ಭೂಮಾಲೀಕನು 716,800 ರೂ.ಗಳನ್ನು ಗಳಿಸುತ್ತಾನೆ.

2019 ಮತ್ತು 2021ರ ಪ್ರವಾಹದಲ್ಲಿ ಕಬ್ಬಿನ ಬೆಳೆಯನ್ನು ಪೂರ್ತಿಯಾಗಿ ಕಳೆದುಕೊಂಡಾಗ, ಗೀತಾ ಅವರ ಕುಟುಂಬಕ್ಕೆ ಒಂದೇ ಒಂದು ರೂಪಾಯಿಯೂ ಸಿಗಲಿಲ್ಲ. ಕಬ್ಬು ಬೆಳೆದರೂ ಅದರಿಂದ ಅವರಿಗೆ ಕಾರ್ಮಿಕರ ಕೂಲಿಯನ್ನು ಸಹ ಪಾವತಿಸಲಾಗಿಲ್ಲ.

ಕಬ್ಬಿನಿಂದ ಉಂಟಾದ ನಷ್ಟದ ಜೊತೆಗೆ, ಆಗಸ್ಟ್ 2019ರ ಪ್ರವಾಹದಲ್ಲಿ ಅವರ ಮನೆ ಭಾಗಶಃ ಕುಸಿದಾಗ ಅವರು ದೊಡ್ಡ ಹೊಡೆತವನ್ನೇ ಅನುಭವಿಸಿದರು. "ಅದನ್ನು ರಿಪೇರಿ ಮಾಡಲು ನಮಗೆ ಸುಮಾರು 25,000 ರೂಪಾಯಿಗಳು ಖರ್ಚಾದವು," ಎಂದು ಗೀತಾ ಅವರ ಪತಿ ತಾನಾಜಿ ಹೇಳುತ್ತಾರೆ, ಸರ್ಕಾರವು "ಕೇವಲ 6,000 ರೂಪಾಯಿಗಳನ್ನು ಪರಿಹಾರವಾಗಿ ನೀಡಿತು." ಪ್ರವಾಹದ ನಂತರ ತಾನಾಜಿಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾಯಿತು.

2021ರಲ್ಲಿ ಪ್ರವಾಹವು ಅವರ ಮನೆಗೆ ಮತ್ತೆ ಹಾನಿ ಉಂಟುಮಾಡಿತು, ಇದರಿಂದಾಗಿ ಎಂಟು ದಿನಗಳ ಕಾಲ ಮತ್ತೊಂದು ಗ್ರಾಮಕ್ಕೆ ಸ್ಥಳಾಂತರಗೊಳ್ಳಬೇಕಾಯಿತು. ಈ ಬಾರಿ, ಕುಟುಂಬಕ್ಕೆ ತಮ್ಮ ಮನೆಯನ್ನು ರಿಪೇರಿ ಮಾಡಲು ಸಾಧ್ಯವಾಗಲಿಲ್ಲ. "ಇಂದಿಗೂ, ನೀವು ಗೋಡೆಗಳನ್ನು ಸ್ಪರ್ಶಿಸಿದರೆ, ಅವುಗಳ ತೇವ ಕೈಗೆ ಅಂಟುತ್ತದೆ," ಎಂದು ಗೀತಾ ಹೇಳುತ್ತಾರೆ.

After the 2019 floods, Tanaji Patil, Geeta’s husband, was diagnosed with hypertension; the last three years have seen a spike in the number of people suffering from non-communicable diseases in Arjunwad
PHOTO • Sanket Jain

2019ರ ಪ್ರವಾಹದ ನಂತರ, ಗೀತಾ ಅವರ ಪತಿ ತಾನಾಜಿ ಪಾಟೀಲ್ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಕಳೆದ ಮೂರು ವರ್ಷಗಳಲ್ಲಿ ಅರ್ಜುನವಾಡದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ

A house in Khochi village that was damaged in the 2019 and 2021 floods
PHOTO • Sanket Jain

2019 ಮತ್ತು 2021ರ ಪ್ರವಾಹದಲ್ಲಿ ಹಾನಿಗೊಳಗಾದ ಖೋಚಿ ಗ್ರಾಮದ ಮನೆ

ಅದು ತಂದೊಡ್ಡಿರುವ ಆಘಾತವು ಸಹ ತಾಜಾವಾಗಿದೆ. "ಮಳೆ ಬಂದಾಗ ಮತ್ತು ಛಾವಣಿಯ ಮೂಲಕ ನೀರು ಜಿನುಗಿದಾಗ, ಪ್ರತಿಯೊಂದು ಹನಿಯೂ ನನಗೆ ಪ್ರವಾಹದ ನೆನಪು ತರುತ್ತದೆ," ಎಂದು ಅವರು ಹೇಳುತ್ತಾರೆ. "ಅಕ್ಟೋಬರ್ [2022] ಎರಡನೇ ವಾರದಲ್ಲಿ ಭಾರಿ ಮಳೆಯಾದಾಗ, ನನಗೆ ಒಂದು ವಾರದವರೆಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ."

ಈ ಕುಟುಂಬವು 2021ರ ಪ್ರವಾಹದಲ್ಲಿ 160,000 ರೂ.ಗಳ ಬೆಲೆಬಾಳುವ ತಮ್ಮ ಎರಡು ಮೆಹ್ಸಾನಾ ಎಮ್ಮೆಗಳನ್ನು ಸಹ ಕಳೆದುಕೊಂಡಿದೆ. "ಈ ಸಾವು ಅದರ ಹಾಲು ಮಾರಾಟದಿಂದ ಸಿಗುತ್ತಿದ್ದ ನಮ್ಮ ದೈನಂದಿನ ಆದಾಯವನ್ನು ಕಸಿದುಕೊಂಡಿತು," ಎಂದು ಅವರು ಹೇಳುತ್ತಾರೆ. ಒಂದು ಹೊಸ ಎಮ್ಮೆಯನ್ನು ಕುಟುಂಬವು 80,000 ರೂ. ನೀಡಿ ಮತ್ತೆ ಖರೀದಿಸಿತು. "ಗದ್ದೆಗಳಲ್ಲಿ ನಿಮಗೆ ಸಾಕಷ್ಟು ಕೆಲಸ ಸಿಗದಿದ್ದಾಗ [ಪ್ರವಾಹ ಮತ್ತು ದುರ್ಗಮ ಹೊಲಗಳ ಕಾರಣದಿಂದಾಗಿ] ಜಾನುವಾರುಗಳ ಹಾಲು ಮಾತ್ರ ಆದಾಯದ ಮೂಲವಾಗಿ ಉಳಿಯುತ್ತದೆ," ಎಂದು ಅವರು ಎಮ್ಮೆಯನ್ನು ಖರೀದಿಸಲು ಕಾರಣವನ್ನು ವಿವರಿಸುತ್ತಾರೆ. ಅವರು ಕೃಷಿ ಕಾರ್ಮಿಕರಾಗಿಯೂ ದುಡಿದು ಗಳಿಸಲು ಯತ್ನಿಸುತ್ತಿದ್ದಾರೆಯಾದರೂ ಕೆಲಸ ಸಿಗುತ್ತಿಲ್ಲ.

ಗೀತಾ ಮತ್ತು ತಾನಾಜಿ ಸ್ವಸಹಾಯ ಗುಂಪುಗಳು ಮತ್ತು ಖಾಸಗಿ ಲೇವಾದೇವಿಗಾರರು ಸೇರಿದಂತೆ ವಿವಿಧ ಸ್ಥಳಗಳಿಂದ ಸುಮಾರು 2 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದಿದ್ದಾರೆ. ತಮ್ಮ ಬೆಳೆಗಳು ಮತ್ತೊಂದು ಪ್ರವಾಹದ ನಿರಂತರ ಭೀತಿಯಲ್ಲಿರುವುದರಿಂದ, ಅವರು ಈಗ ಸಾಲವನ್ನು ಸಕಾಲದಲ್ಲಿ ಮರುಪಾವತಿಸಲು ಸಾಧ್ಯವಾಗದಿದ್ದರೆ ಏನು ಮಾಡುವುದೆನ್ನುವ ಭಯದಲ್ಲಿದ್ದಾರೆ, ಇದು ಅವರ ಬಡ್ಡಿ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮಳೆಯ ಮಾದರಿ, ಇಳುವರಿ, ಆದಾಯದ ಅನಿಶ್ಚಿತತೆಯ ಗೀತಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

"ಜುಲೈ 2021ರ ಪ್ರವಾಹದ ನಂತರ, ನಾನು ಸ್ನಾಯು ದೌರ್ಬಲ್ಯ, ಕೀಲುಗಳಲ್ಲಿ ಬಿಗಿತ ಮತ್ತು ಉಸಿರಾಟದ ತೊಂದರೆಯನ್ನು ಸಹ ಅನುಭವಿಸಲು ಪ್ರಾರಂಭಿಸಿದೆ," ಎಂದು ಅವರು ಹೇಳುತ್ತಾರೆ. ಅವರ ನಾಲ್ಕು ತಿಂಗಳುಗಳವರೆಗೆ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದಳು, ಕಾಲಾನಂತರದಲ್ಲಿ ಅವು ಕಡಿಮೆಯಾಗುತ್ತವೆ ಎಂದು ನಂಬಿದ್ದರು.

"ಒಂದು ದಿನ, ಇದು ಎಷ್ಟು ಅಸಹನೀಯವಾಗಿತ್ತೆಂದರೆ, ನಾನು ವೈದ್ಯರನ್ನು ಸಂಪರ್ಕಿಸಬೇಕಾಯಿತು," ಎಂದು ಅವರು ಹೇಳುತ್ತಾರೆ. ಗೀತಾ ಹೈಪರ್ ಥೈರಾಯ್ಡಿಸಮ್‌ನಿಂದ ಬಳಲುತ್ತಿದ್ದರು; ಒತ್ತಡವು ಅವರ ಸ್ಥಿತಿಯನ್ನು ವೇಗವಾಗಿ ಹದಗೆಡಿಸುತ್ತಿದೆ ಎಂದು ವೈದ್ಯರು ಹೇಳಿದರು. ಒಂದು ವರ್ಷದಿಂದ ಗೀತಾ ತಿಂಗಳಿಗೆ 1,500 ರೂ.ಗಳನ್ನು ಔಷಧಿಗಳಿಗಾಗಿ ಖರ್ಚು ಮಾಡುತ್ತಿದ್ದಾರೆ. ಚಿಕಿತ್ಸೆಯು ಇನ್ನೂ 15 ತಿಂಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ.

Reshma Kamble, an agricultural labourer at work in flood-affected Khutwad village.
PHOTO • Sanket Jain
Flood rescue underway in Kolhapur’s Ghalwad village in July 2021
PHOTO • Sanket Jain

ಎಡ: ಪ್ರವಾಹ ಪೀಡಿತ ಖುತ್ವಾಡ್ ಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರಾದ ರೇಷ್ಮಾ ಕಾಂಬಳೆ. ಬಲ: 2021ರ ಜುಲೈಯಲ್ಲಿ ಕೊಲ್ಹಾಪುರದ ಘಲ್ವಾಡ್ ಗ್ರಾಮದಲ್ಲಿ ಪ್ರವಾಹ ರಕ್ಷಣೆ ಕಾರ್ಯ ನಡೆಯುತ್ತಿದೆ

On the outskirts of Kolhapur’s Shirati village, houses (left) and an office of the state electricity board (right) were partially submerged by the flood waters in August 2019
PHOTO • Sanket Jain
PHOTO • Sanket Jain

ಕೊಲ್ಹಾಪುರದ ಶಿರತಿ ಗ್ರಾಮದ ಹೊರವಲಯದಲ್ಲಿರುವ ಮನೆಗಳು (ಎಡ) ಮತ್ತು ರಾಜ್ಯ ವಿದ್ಯುತ್ ಮಂಡಳಿಯ (ಬಲ) ಕಚೇರಿ ಆಗಸ್ಟ್ 2019ರಲ್ಲಿ ಪ್ರವಾಹದ ನೀರಿನಿಂದ ಭಾಗಶಃ ಮುಳುಗಡೆಯಾಗಿವೆ

ಕೊಲ್ಹಾಪುರದ ಪ್ರವಾಹ ಪೀಡಿತ ಚಿಖಾಲಿ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿ ಡಾ. ಮಾಧುರಿ ಪನ್ಹಾಲ್ಕರ್, ಈ ಪ್ರದೇಶದಲ್ಲಿನ ಹೆಚ್ಚು ಹೆಚ್ಚು ಜನರು ಪ್ರವಾಹದಿಂದ ಉಂಟಾದ ದುಃಖ ಮತ್ತು ಹೆಚ್ಚುತ್ತಿರುವ ಆರ್ಥಿಕ ಮತ್ತು ಭಾವನಾತ್ಮಕ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಿರುವ ಕುರಿತು ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಕರ್ವೀರ್ ತಾಲ್ಲೂಕಿನಲ್ಲಿರುವ ಈ ಗ್ರಾಮವು ಸಾಮಾನ್ಯವಾಗಿ ನೀರಿನ ಮಟ್ಟ ಹೆಚ್ಚಾದಾಗ ಮುಳುಗುವ ಮೊದಲ ಹಳ್ಳಿಗಳಲ್ಲಿ ಒಂದಾಗಿದೆ.

ಕೇರಳದ ಐದು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 2019ರ ಪ್ರವಾಹದ ನಾಲ್ಕು ತಿಂಗಳ ನಂತರ 374 ಕುಟುಂಬಗಳ ಮುಖ್ಯಸ್ಥರ ಕುರಿತು ನಡೆಸಿದ ಸಂಶೋಧನೆಯು ಎರಡು ಪ್ರವಾಹಗಳನ್ನು ಅನುಭವಿಸಿದವರು ಒಂದೇ ಪ್ರವಾಹವನ್ನು ಅನುಭವಿಸಿದವರಿಗಿಂತ ಹೆಚ್ಚು ಅಸಹಾಯಕತೆಯನ್ನು (ಇದೇ ರೀತಿಯ ಪರಿಸ್ಥಿತಿಗೆ ಈ ಹಿಂದೆ ಒಡ್ಡಿಕೊಂಡಿದ್ದರಿಂದಾಗಿ ನಕಾರಾತ್ಮಕ ಪರಿಸ್ಥಿತಿಯನ್ನು ನಿಷ್ಕ್ರಿಯವಾಗಿ ಒಪ್ಪಿಕೊಳ್ಳುವುದು) ಪ್ರದರ್ಶಿಸುತ್ತಾರೆ ಎಂದು ಕಂಡುಬಂದಿದೆ.

"ನಕಾರಾತ್ಮಕ ಮಾನಸಿಕ ಪರಿಣಾಮಗಳನ್ನು ತಡೆಗಟ್ಟಲು ಆಗಾಗ್ಗೆ ಸಂಭವಿಸುವ ನೈಸರ್ಗಿಕ ವಿಪತ್ತುಗಳಿಗೆ ಸಾಕ್ಷಿಯಾದವರಿಗೆ ವಿಶೇಷ ಗಮನ ನೀಡಬೇಕು," ಎಂದು ಸಂಶೋಧನೆಯ ಕೊನೆಯಲ್ಲಿ ಹೇಳಲಾಗಿದೆ .

ಕೊಲ್ಹಾಪುರದ ಹಳ್ಳಿಗಳಲ್ಲಿ - ಮತ್ತು ಹಾಗೆಯೇ ಗ್ರಾಮೀಣ ಭಾರತದಲ್ಲಿ ವಾಸಿಸುವ 833 ಮಿಲಿಯನ್ ಜನರಿಗೆ (ಜನಗಣತಿ 2011) - ಮಾನಸಿಕ ಆರೋಗ್ಯ ರಕ್ಷಣೆಯನ್ನು ಪಡೆಯುವುದು ಹೇಳುವುದಕ್ಕಿಂತ ಸುಲಭವಾಗಿದೆ. "ನಾವು ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಬೇಕು. ಆದಾಗ್ಯೂ, ಪ್ರತಿಯೊಬ್ಬರೂ ಅಷ್ಟು ದೂರ ಪ್ರಯಾಣಿಸಲು ಸಾಧ್ಯವಿಲ್ಲ," ಎಂದು ಡಾ. ಪನ್ಹಾಲ್ಕರ್ ಹೇಳುತ್ತಾರೆ.

ಗ್ರಾಮೀಣ ಭಾರತದಲ್ಲಿ ಕೇವಲ 764 ಜಿಲ್ಲಾ ಆಸ್ಪತ್ರೆಗಳು ಮತ್ತು 1,224 ಉಪ-ಜಿಲ್ಲಾ ಆಸ್ಪತ್ರೆಗಳಿವೆ (ಗ್ರಾಮೀಣ ಆರೋಗ್ಯ ಅಂಕಿಅಂಶಗಳು, 2020-21), ಅಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಮನಃಶಾಸ್ತ್ರಜ್ಞರನ್ನು ನೇಮಕ ಮಾಡಲಾಗುತ್ತದೆ. "ನಮಗೆ ಕನಿಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಆರೈಕೆ ವೃತ್ತಿಪರರು ಬೇಕಾಗಿದ್ದಾರೆ, ಉಪ-ಕೇಂದ್ರಗಳಲ್ಲಿ ಅಲ್ಲದಿದ್ದರೂ," ಎಂದು ವೈದ್ಯರು ಹೇಳುತ್ತಾರೆ. 2017ರಲ್ಲಿ ಪ್ರಕಟವಾದ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ , ಭಾರತದಲ್ಲಿ ಪ್ರತಿ 1 ಲಕ್ಷ ಜನರಿಗೆ 1 (0.07)ಕ್ಕಿಂತ ಕಡಿಮೆ ಮನೋವೈದ್ಯರಿದ್ದಾರೆ.

*****

Shivbai Kamble was diagnosed with hypertension, brought on by the stress and fear of another flood
PHOTO • Sanket Jain

ಶಿವಬಾಯಿ ಕಾಂಬ್ಳೆ ಅವರಿಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾಯಿತು, ಇದಕ್ಕೆ ಕಾರಣವಾಗಿದ್ದು ಇನ್ನೊಂದು ಪ್ರವಾಹದ ಭಯ

62 ವರ್ಷದ ಶಿವಬಾಯಿ ಕಾಂಬ್ಳೆ ಅವರು ಅರ್ಜುನವಾಡದಲ್ಲಿ ಹಾಸ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಕೊಲ್ಹಾಪುರದ ಈ ಗ್ರಾಮದಲ್ಲಿ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಶುಭಾಂಗಿ ಕಾಂಬ್ಳೆ, "ಇಲ್ಲಿನ ಕೃಷಿ ಕಾರ್ಮಿಕರಲ್ಲಿ ಅವರೊಬ್ಬರೇ, ಜೀ ಹಸತ್ ಖೇಲತ್ ಕಾಮ್ ಕರ್ತೆ (ಅವರ ಮುಖದ ಮೇಲೆ ಮುಗುಳ್ನಗೆಯೊಂದಿಗೆ ಕೆಲಸ ಮಾಡುತ್ತಾರೆ)" ಎಂದು ಹೇಳುತ್ತಾರೆ.

ಆದಾಗ್ಯೂ, 2019ರ ಪ್ರವಾಹದ ಮೂರು ತಿಂಗಳೊಳಗೆ, ಶಿವಬಾಯಿಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾಯಿತು. "ಹಳ್ಳಿಯ ಪ್ರತಿಯೊಬ್ಬರೂ ಆಶ್ಚರ್ಯಚಕಿತರಾದರು, ವಿಶೇಷವಾಗಿ ಅವರು ಎಂದಿಗೂ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಜನರು ತಿಳಿದಿದ್ದ ವ್ಯಕ್ತಿ," ಎಂದು ಶುಭಾಂಗಿ ಹೇಳುತ್ತಾರೆ, ಇಂತಹ ಸಂತೋಷವಾಗಿ ಬದುಕುವ ಮಹಿಳೆಗೂ ಈ ಕಾಯಿಲೆ ಹೇಗೆ ಬಂತೆಂದು ಕಂಡುಹಿಡಿಯುವ ಸಲುವಾಗಿ ಅವರು 2020ರ ಆರಂಭದಲ್ಲಿ ಶಿವಬಾಯಿ ಅವರೊಂದಿಗೆ ಅವರ ವಿಸ್ತೃತ ಸಂಭಾಷಣೆಗಳನ್ನು ಆರಂಭಿಸಿದರು.

"ಮೊದಮೊದಲು, ಅವರು ತನ್ನ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿರಲಿಲ್ಲ; ಯಾವಾಗಲೂ ನಗುತ್ತಿರುತ್ತಿದ್ದರು," ಎಂದು ಶುಭಾಂಗಿ ನೆನಪಿಸಿಕೊಳ್ಳುತ್ತಾರೆ. ಆದಾಗ್ಯೂ, ತಲೆತಿರುಗುವಿಕೆ ಮತ್ತು ಜ್ವರ ಬರುವುದು ಸೇರಿದಂತೆ ಶಿವಬಾಯಿಯ ಹದಗೆಡುತ್ತಿರುವ ಆರೋಗ್ಯವು ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಸೂಚಿಸುತ್ತಿತ್ತು. ತಿಂಗಳುಗಳ ಸಂಭಾಷಣೆಯ ನಂತರ, ಆಶಾ ಕಾರ್ಯಕರ್ತೆಯು ಅಂತಿಮವಾಗಿ ಶಿವಬಾಯಿಯ ಸ್ಥಿತಿಗೆ ಪುನರಾವರ್ತಿತ ಪ್ರವಾಹಗಳು ಕಾರಣ ಎನ್ನುವುದನ್ನು ಕಂಡುಕೊಂಡರು.

2019ರ ಪ್ರವಾಹವು ಶಿವಬಾಯಿ ಅವರ ಕಚ್ಛಾ ಮನೆಯನ್ನು ಧ್ವಂಸಗೊಳಿಸಿತು, ಭಾಗಶಃ ಇಟ್ಟಿಗೆಗಳಿಂದ ಮತ್ತು ಒಣಗಿದ ಕಬ್ಬಿನ ಗರಿಗಳು, ಜೋಳದ ಪೈರು ಮತ್ತು ಹುಲ್ಲಿನಿಂದ ಭಾಗಶಃ ನಿರ್ಮಿಸಲಾದ ಅರೆ-ಶಾಶ್ವತ ರಚನೆಯಾಗಿತ್ತದು. ನಂತರ ಅವರ ಕುಟುಂಬವು ತಗಡಿನ ಗುಡಿಸಲನ್ನು ನಿರ್ಮಿಸಲು ಸುಮಾರು 100,000 ರೂ.ಗಳನ್ನು ಖರ್ಚು ಮಾಡಿತು, ಅದು ಇನ್ನೊಂದು ಪ್ರವಾಹವನ್ನು ತಡೆಯಬಲ್ಲದು ಎಂದು ಅವರು ನಂಬೊಕೊಂಡಿದ್ದರು.

ಕಷ್ಟದ ಮೇಲೆ ಕಷ್ಟವೆಂಬಂತೆ, ಲಭ್ಯ ಕೆಲಸದ ಕೆಲಸದ ದಿನಗಳ ಸಂಖ್ಯೆಯಲ್ಲಿ ತೀವ್ರ ಕುಸಿತದಿಂದಾಗಿ ಕುಟುಂಬದ ಆದಾಯದಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ. ಸೆಪ್ಟೆಂಬರ್ ಮಧ್ಯಭಾಗದಿಂದ ಸುಮಾರು 2022ರ ಅಕ್ಟೋಬರ್ ಅಂತ್ಯದವರೆಗೆ ಶಿವಬಾಯಿಗೆ ಒಂದೂ ಕೆಲಸ ಸಿಗಲಿಲ್ಲ, ಹೊಲಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದ ಕಾರಣ ಹೊಲದಲ್ಲಿ ಕೆಲಸ ಮಾಡುವುದು ಸಾಧ್ಯವಿರಲಿಲ್ಲ ಮತ್ತು ರೈತರೂ ಕಾರ್ಮಿಕರನ್ನು ನೇಮಿಸಿಕೊಳ್ಳಲು ಆರ್ಥಿಕ ಕಾರಣಗಳಿಂದಾಗಿ ಹಿಂಜರಿಯುತ್ತಿದ್ದರು.

"ಅಂತಿಮವಾಗಿ, ನಾನು ದೀಪಾವಳಿಗೆ ಮೊದಲು (ಅಕ್ಟೋಬರ್ ಕೊನೆಯ ವಾರ) ಮೂರು ದಿನಗಳ ಕಾಲ ಹೊಲಗಳಲ್ಲಿ ಕೆಲಸ ಮಾಡಿದೆ, ಆದರೆ ಮಳೆ ಮರಳಿ ಬಂದಿತು ಮತ್ತು ಆ ಕೆಲಸವನ್ನು ಸಹ ಇಲ್ಲವಾಗಿಸಿತು," ಎಂದು ಅವರು ಹೇಳುತ್ತಾರೆ.

ಅವರ ಕ್ಷೀಣಿಸುತ್ತಿರುವ ಆದಾಯವು ಅವರ ಚಿಕಿತ್ಸೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. “ಅನೇಕ ಬಾರಿ ಕೈಯಲ್ಲಿ ಹಣವಿಲ್ಲದೆ ಔಷಧಿಯನ್ನೇ ತಗೊಂಡಿಲ್ಲ,” ಎನ್ನುತ್ತಾರವರು.

ASHA worker Maya Patil spends much of her time talking to women in the community about their health
PHOTO • Sanket Jain

ಆಶಾ ಕಾರ್ಯಕರ್ತೆ ಮಾಯಾ ಪಾಟೀಲ್ ತಮ್ಮ ಹೆಚ್ಚಿನ ಸಮಯವನ್ನು ಸಮುದಾಯದ ಮಹಿಳೆಯರೊಂದಿಗೆ ಅವರ ಆರೋಗ್ಯದ ಕುರಿತಾಗಿ ಮಾತನಾಡಲು ಕಳೆಯುತ್ತಾರೆ

ಕಳೆದ ಮೂರು ವರ್ಷಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ (ಎನ್‌ಸಿಡಿ) ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅರ್ಜುನವಾಡಾದ ಸಮುದಾಯ ಆರೋಗ್ಯ ಅಧಿಕಾರಿ (ಸಿಎಚ್ಒ) ಡಾ. ಏಂಜಲೀನಾ ಬೇಕರ್ ಹೇಳುತ್ತಾರೆ. 2022ರಲ್ಲಿ, ಅರ್ಜುನವಾಡಾದ 5,641 ಜನಸಂಖ್ಯೆಯಲ್ಲಿ (ಜನಗಣತಿ 2011) 225ಕ್ಕೂ ಹೆಚ್ಚು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳುತ್ತಾರೆ.

"ನಿಜವಾದ ಸಂಖ್ಯೆಗಳು ಇನ್ನೂ ಹೆಚ್ಚಿರುತ್ತವೆ, ಆದರೆ ಅನೇಕ ಜನರು ಪರೀಕ್ಷೆಗೆ ಒಳಗಾಗಲು ಮುಂದೆ ಬರುವುದಿಲ್ಲ," ಎಂದು ಅವರು ಹೇಳುತ್ತಾರೆ. ಆಗಾಗ್ಗೆ ಬರುವ ಪ್ರವಾಹಗಳು, ಕುಸಿಯುತ್ತಿರುವ ಆದಾಯ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗಿ ಉಂಟಾಗುವ ಒತ್ತಡವು ಎನ್‌ಸಿಡಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದು ಅವರು ದೂಷಿಸುತ್ತಾರೆ. [ಇದನ್ನೂ ಓದಿ: ಕೊಲ್ಲಾಪುರದ ಆಶಾ ಕಾರ್ಯಕರ್ತರ ಮಾನಸಿಕ ಆರೋಗ್ಯದಲ್ಲಿ ಏರುಪೇರು ]

"ಪ್ರವಾಹ ಪೀಡಿತ ಊರಿನ ಅನೇಕ ಹಿರಿಯ ಗ್ರಾಮಸ್ಥರು ಆತ್ಮಹತ್ಯೆಯ ಭಾವನೆ ಹೊಂದಿದ್ದಾರೆ; ಅಂತಹ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ," ಎಂದು ಡಾಕ್ಟರ್ ಬೇಕರ್ ಹೇಳುತ್ತಾರೆ, ನಿದ್ರಾಹೀನತೆ ಪ್ರಕರಣಗಳಲ್ಲಿಯೂ ಹೆಚ್ಚಳವಾಗಿದೆ.

ಪತ್ರಕರ್ತರು ಮತ್ತು ಅರ್ಜುನವಾಡದ ಪಿಎಚ್.ಡಿ ವಿದ್ವಾಂಸರಾದ ಚೈತನ್ಯ ಕಾಂಬಳೆ ಹೇಳುತ್ತಾರೆ, ಅವರ ಪೋಷಕರು ಗೇಣಿ ರೈತರು ಮತ್ತು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, "ಕೆಟ್ಟ ನೀತಿಗಳಿಂದಾಗಿ, ಕೃಷಿ ಕಾರ್ಮಿಕರು ಮತ್ತು ಗೇಣಿದಾರ ರೈತರು ಪ್ರವಾಹದ ಹೆಚ್ಚಿನ ಹೊರೆಯನ್ನು ಹೊರುತ್ತಾರೆ. ಒಬ್ಬ ಹಿಡುವಳಿದಾರ ರೈತನು ಉತ್ಪನ್ನದ 75-80 ಪ್ರತಿಶತವನ್ನು ಭೂಮಾಲೀಕರಿಗೆ ಪಾವತಿಸುತ್ತಾನೆ, ಮತ್ತು ಪ್ರವಾಹಗಳು ಎಲ್ಲವನ್ನೂ ನಾಶಗೊಳಿಸಿದಾಗ, ಪರಿಹಾರ ಭೂಮಿಯ ಮಾಲಿಕನಿಗೆ ದೊರೆಯುತ್ತದೆ."

ಅರ್ಜುನವಾಡದ ಬಹುತೇಕ ಎಲ್ಲಾ ರೈತರು ಪ್ರವಾಹದಿಂದ ತಮ್ಮ ಬೆಳೆಗಳನ್ನು ಕಳೆದುಕೊಳ್ಳುತ್ತಾರೆ. "ಬೆಳೆಯನ್ನು [ಪ್ರವಾಹಕ್ಕೆ] ಕಳೆದುಕೊಳ್ಳುವ ದುಃಖವು ಮತ್ತೊಂದು ಉತ್ತಮ ಉತ್ಪನ್ನ ಬರುವವರೆಗೆ ಹೋಗುವುದಿಲ್ಲ. ಆದರೆ ಪ್ರವಾಹಗಳು ನಮ್ಮ ಬೆಳೆಗಳನ್ನು ಕಸಿದುಕೊಳ್ಳುತ್ತಲೇ ಇರುತ್ತವೆ", ಎಂದು ಚೈತನ್ಯ ಹೇಳುತ್ತಾರೆ. "ಈ ಒತ್ತಡವು ಸಾಲಗಳನ್ನು ಸುಸ್ತಿ ಮಾಡುವ ಚಿಂತೆಯಿಂದ ಮತ್ತಷ್ಟು ಉಲ್ಬಣಗೊಳ್ಳುತ್ತದೆ."

ಮಹಾರಾಷ್ಟ್ರ ಸರ್ಕಾರದ ಕೃಷಿ ಇಲಾಖೆಯ ಪ್ರಕಾರ, 2022ರ ಜುಲೈ ಮತ್ತು ಅಕ್ಟೋಬರ್ ನಡುವೆ ರಾಜ್ಯದ 24.68 ಲಕ್ಷ ಹೆಕ್ಟೇರ್ ಭೂಮಿಯ ಮೇಲೆ ನೈಸರ್ಗಿಕ ವಿಪತ್ತುಗಳು ಪರಿಣಾಮ ಬೀರಿವೆ. ಕೇವಲ ಅಕ್ಟೋಬರ್ ತಿಂಗಳಲ್ಲಿ, ಆ ಅಂಕಿಅಂಶಗಳ ಪ್ರಕಾರ 22 ಜಿಲ್ಲೆಗಳಲ್ಲಿ 7.5 ಲಕ್ಷ ಹೆಕ್ಟೇರ್ ಭೂಮಿ ಬಾಧಿತವಾಗಿದ್ದವು. ಅಕ್ಟೋಬರ್ 28, 2022ರವರೆಗೆ ರಾಜ್ಯದಲ್ಲಿ 1,288 ಮಿ.ಮೀ ಮಳೆಯಾಗಿದೆ - ಸರಾಸರಿ ಮಳೆಯ ಶೇಕಡಾ 120.5ರಷ್ಟು. ಮತ್ತು ಜೂನ್ ಮತ್ತು ಅಕ್ಟೋಬರ್ ನಡುವೆ 1,068 ಮಿ.ಮೀ. [ಇದನ್ನೂ ಓದಿ: ಇಲ್ಲಿ ಮಳೆಯೊಡನೆ ಸಂಕಟವೂ ಸುರಿಯುತ್ತದೆಮಳೆ ]

The July 2021 floods caused massive destruction to crops in Arjunwad, including these banana trees whose fruits were on the verge on being harvested
PHOTO • Sanket Jain
To ensure that sugarcane reaches a height of at least seven feet before another flood, farmers are increasing the use of chemical fertilisers and pesticides
PHOTO • Sanket Jain

ಎಡ: ಜುಲೈ 2021ರ ಪ್ರವಾಹವು ಅರ್ಜುನವಾಡದಲ್ಲಿ ಈ ಬಾಳೆ ಗಿಡಗಳು ಸೇರಿದಂತೆ, ಬೆಳೆಗಳಿಗೆ ಭಾರಿ ಹಾನಿಯನ್ನುಂಟು ಮಾಡಿತು, ಅದರ ಹಣ್ಣುಗಳು ಕಟಾವಿನ ಅಂಚಿನಲ್ಲಿದ್ದವು. ಬಲ: ಕಬ್ಬು ಮತ್ತೊಂದು ಪ್ರವಾಹದ ಮೊದಲು ಕನಿಷ್ಠ ಏಳು ಅಡಿ ಎತ್ತರವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈತರು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಹೆಚ್ಚಿಸುತ್ತಿದ್ದಾರೆ

An anganwadi in Kolhapur’s Shirati village surrounded by water from the August 2019 floods
PHOTO • Sanket Jain
Recurrent flooding rapidly destroys farms and fields in several villages in Shirol taluka
PHOTO • Sanket Jain

ಎಡ: ಕೊಲ್ಲಾಪುರದ ಶಿರತಿ ಗ್ರಾಮದ ಅಂಗನವಾಡಿಯು ಆಗಸ್ಟ್ 2019ರ ಪ್ರವಾಹದಿಂದ ನೀರಿನಿಂದ ಆವೃತವಾಗಿದೆ; ಶಿರತಿ 2021ರಲ್ಲಿ ಮತ್ತೊಂದು ಪ್ರವಾಹವನ್ನು ಎದುರಿಸಿತು. ಬಲ: ಪುನರಾವರ್ತಿತ ಪ್ರವಾಹವು ಶಿರೋಲ್ ತಾಲ್ಲೂಕಿನ ಹಲವಾರು ಗ್ರಾಮಗಳ ಹೊಲಗಳು ಮತ್ತು ಗದ್ದೆಗಳನ್ನು ತ್ವರಿತವಾಗಿ ನಾಶಪಡಿಸುತ್ತದೆ

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರಿ ಸಮಿತಿಯ ವರದಿಗೆ ಕೊಡುಗೆ ನೀಡಿದ ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಪ್ರೊಫೆಸರ್ ಸುಬಿಮಲ್ ಘೋಷ್ ಹೇಳುತ್ತಾರೆ, "ನಾವು ಹವಾಮಾನ ವಿಜ್ಞಾನಿಗಳು ಮುನ್ಸೂಚನೆಗಳನ್ನು ಸುಧಾರಿಸುವ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ, ಆದರೆ ನಾವು ವಾಸ್ತವವಾಗಿ ಈ ಹವಾಮಾನ ಮುನ್ಸೂಚನೆಗಳನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವಿಕೆಗೆ ಬದಲಾಯಿಸುವಲ್ಲಿ ಸೋಲುತ್ತೇವೆ.

ಭಾರತೀಯ ಹವಾಮಾನ ಇಲಾಖೆಯು ನಿಖರವಾಗಿ ಮುನ್ಸೂಚನೆ ನೀಡುವ ಸಾಮರ್ಥ್ಯದಲ್ಲಿ ಅದ್ಭುತ ಸುಧಾರಣೆಗಳನ್ನು ಮಾಡಿದೆ, ಆದರೆ ರೈತರು ಅದನ್ನು ಬಳಸುವುದಿಲ್ಲ ಏಕೆಂದರೆ ಅವರು ಅದನ್ನು ನಿರ್ಧಾರ ತೆಗೆದುಕೊಳ್ಳುವಿಕೆಯಾಗಿ ಪರಿವರ್ತಿಸಲು ಅಸಮರ್ಥರಾಗಿದ್ದಾರೆ [ಬೆಳೆಗಳನ್ನು ಉಳಿಸುವಂತೆ].

ಪ್ರೊ. ಘೋಷ್ ಅವರು ರೈತರ ಸಮಸ್ಯೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಹವಾಮಾನ ಅನಿಶ್ಚಿತತೆಗೆ ಉತ್ತಮ ಪ್ರತಿಕ್ರಿಯೆಯನ್ನು ವಿನ್ಯಾಸಗೊಳಿಸಲು ಒಳಗೊಳ್ಳುವಿಕೆಯ ಮಾದರಿಯನ್ನು ಪ್ರತಿಪಾದಿಸುತ್ತಾರೆ. "ಕೇವಲ [ಪ್ರವಾಹ] ನಕ್ಷೆಯನ್ನು ರಚಿಸುವುದರಿಂದ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ," ಎಂದು ಅವರು ಹೇಳುತ್ತಾರೆ.

"ನಮ್ಮ ದೇಶಕ್ಕೆ, ಹೊಂದಾಣಿಕೆಯು ಹೆಚ್ಚು ಮುಖ್ಯವಾಗಿದೆ ಏಕೆಂದರೆ ನಾವು ಹವಾಮಾನದ ಪರಿಣಾಮಗಳನ್ನು ನೋಡುತ್ತಿದ್ದೇವೆ ಮತ್ತು ನಮ್ಮ ಜನಸಂಖ್ಯೆಯ ಹೆಚ್ಚಿನವರು ಅದಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ," ಎಂದು ಅವರು ಹೇಳುತ್ತಾರೆ. "ನಾವು ನಮ್ಮ ಹೊಂದಾಣಿಕೆ ಶಕ್ತಿಯನ್ನು ಬಲಪಡಿಸಬೇಕು."

*****

45 ವರ್ಷದ ಭಾರತಿ ಕಾಂಬ್ಳೆ ತಮ್ಮ ತೂಕವು ಸುಮಾರು ಅರ್ಧದಷ್ಟು ಕಡಿಮೆಯಾದಾಗ, ಅದು ತೊಂದರೆಯ ಸಂಕೇತವೆನ್ನುವುದನ್ನು ಅರಿತುಕೊಂಡರು. ಆಶಾ ಕಾರ್ಯಕರ್ತೆ ಶುಭಾಂಗಿ ಅರ್ಜುನವಾಡದ ನಿವಾಸಿಯಾದ ಈ ಕೃಷಿ ಕೂಲಿ ಮಹಿಳೆಗೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಅವರು ಮಾರ್ಚ್ 2020ರಲ್ಲಿ ಹೈಪರ್ ಥೈರಾಯ್ಡಿಸಮ್‌ನಿಂದ ಬಳಲುತ್ತಿದ್ದರು.

ಗೀತಾ ಮತ್ತು ಶಿವಬಾಯಿಯವರಂತೆ, ಭಾರತಿ, ಪ್ರವಾಹದಿಂದ ಉಂಟಾದ ಒತ್ತಡದ ಆರಂಭಿಕ ಲಕ್ಷಣಗಳನ್ನು ತಾನು ನಿರ್ಲಕ್ಷಿಸಿದ್ದಾಗಿ ಅವರು ಒಪ್ಪಿಕೊಳ್ಳುತ್ತಾರೆ. "2019 ಮತ್ತು 2021ರ ಪ್ರವಾಹದಿಂದ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಾನು [ಹತ್ತಿರದ ಹಳ್ಳಿಯ ಪ್ರವಾಹ ಪರಿಹಾರ ಶಿಬಿರದಿಂದ] ಹಿಂದಿರುಗಿದಾಗ, ನನಗೆ ಒಂದೇ ಒಂದು ಕಾಳು ಧಾನ್ಯವೂ ಸಿಗಲಿಲ್ಲ. ಪ್ರವಾಹವು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು," ಎಂದು ಅವರು ಹೇಳುತ್ತಾರೆ.

Bharti Kamble says there is less work coming her way as heavy rains and floods destroy crops , making it financially unviable for farmers to hire labour
PHOTO • Sanket Jain

ಭಾರಿ ಮಳೆ ಮತ್ತು ಪ್ರವಾಹಗಳು ಬೆಳೆಗಳನ್ನು ನಾಶಪಡಿಸುವುದರಿಂದ ಕೆಲಸ ಕಡಿಮೆಯಾಗುತ್ತಿದೆ ಎಂದು ಭಾರತಿ ಕಾಂಬ್ಳೆ ಹೇಳುತ್ತಾರೆ, ಇದರಿಂದ ರೈತರು ಕಾರ್ಮಿಕರನ್ನು ನೇಮಿಸಿಕೊಳ್ಳಲು ಆರ್ಥಿಕವಾಗಿ ಸಾಧ್ಯವಾಗುವುದಿಲ್ಲ

Agricultural labourer Sunita Patil remembers that the flood waters rose to a height o 14 feet in the 2019 floods, and 2021 was no better
PHOTO • Sanket Jain

ಕೃಷಿ ಕಾರ್ಮಿಕರದ ಸುನೀತಾ ಪಾಟೀಲ್ ಅವರು 2019ರ ಪ್ರವಾಹದಲ್ಲಿ ಪ್ರವಾಹದ ನೀರು 14 ಅಡಿ ಎತ್ತರಕ್ಕೆ ಏರಿತು ಮತ್ತು 2021 ಉತ್ತಮವಾಗಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ

2019ರ ಪ್ರವಾಹದ ನಂತರ, ಅವರು ತಮ್ಮ ಮನೆಯನ್ನು ಪುನರ್ನಿರ್ಮಿಸಲು ಸ್ವಸಹಾಯ ಗುಂಪುಗಳು ಮತ್ತು ಖಾಸಗಿ ಲೇವಾದೇವಿಗಾರರಿಂದ 3 ಲಕ್ಷ ರೂ.ಗಳ ಸಾಲವನ್ನು ತೆಗೆದುಕೊಂಡರು. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಲು ಮತ್ತು ಬೆಳೆಯುವ ಬಡ್ಡಿದರಗಳನ್ನು ತಪ್ಪಿಸಲು ಎರಡು ಪಾಳಿಗಳಲ್ಲಿ ಕೆಲಸ ಮಾಡುವುದು ಅವರ ಯೋಜನೆಯಾಗಿತ್ತು. ಆದಾಗ್ಯೂ, 2022ರ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಶಿರೋಲ್ ತಾಲ್ಲೂಕಿನ ಹಳ್ಳಿಗಳಲ್ಲಿ ಬೀಸಿದ ಬಿಸಿಗಾಳಿಗಳು ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.

"ಕಠಿಣ ಬಿಸಿಲಿನಿಂದ ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಬಳಿ ಕೇವಲ ಹತ್ತಿಯ ಟವೆಲ್ ಮಾತ್ರ ಇತ್ತು," ಎಂದು ಅವರು ಹೇಳುತ್ತಾರೆ. ಅದು ಯಾವುದೇ ರಕ್ಷಣೆಯಾಗಿರಲಿಲ್ಲ ಮತ್ತು ಶೀಘ್ರದಲ್ಲೇ ಅವರು ತಲೆತಿರುಗುವಿಕೆಯನ್ನು ಅನುಭವಿಸಲು ಪ್ರಾರಂಭಿಸಿದರು. ಅವರು ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಕಾರಣ ತಾತ್ಕಾಲಿಕ ಪರಿಹಾರಕ್ಕಾಗಿ ನೋವು ನಿವಾರಕಗಳನ್ನು ಅವಲಂಬಿಸಿದರು. ಅವುಗಳ ಸಹಾಯದಿಂದ ಕೆಲಸ ಮಾಡುವುದನ್ನು ಮುಂದುವರಿಸಲು ಸಾಧ್ಯವಾಯಿತು.

ಮಾನ್ಸೂನ್ ಬಂದರೆ, ಹೇರಳವಾದ ಬೆಳೆಗಳಿಂದಾಗಿ ತನಗೆ ಸಾಕಷ್ಟು ಕೆಲಸ ಸಿಗುತ್ತದೆ ಎಂದು ಅವಳು ಆಶಿಸಿದ್ದರು. "ಆದಾಗ್ಯೂ, ಮೂರು ತಿಂಗಳುಗಳಲ್ಲಿ (ಜುಲೈ 2022 ರಿಂದ) 30 ದಿನಗಳವರೆಗೆ ಸಹ ನನಗೆ ಕೆಲಸ ಸಿಗಲಿಲ್ಲ," ಎಂದು ಅವರು ಹೇಳುತ್ತಾರೆ.

ಅನಿರೀಕ್ಷಿತ ಮಳೆಯು ತಮ್ಮ ಬೆಳೆಗಳನ್ನು ನಾಶಪಡಿಸುತ್ತಿರುವುದರಿಂದಾಗಿ, ಕೊಲ್ಹಾಪುರದ ಪ್ರವಾಹ ಪೀಡಿತ ಹಳ್ಳಿಗಳ ಅನೇಕ ರೈತರು ವೆಚ್ಚ ಕಡಿತದ ಕ್ರಮಕ್ಕೆ ಮುಂದಾಗಿದ್ದಾರೆ. "ಜನರು ಕೃಷಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬದಲು ಕಳೆನಾಶಕಗಳನ್ನು ಬಳಸಲು ಪ್ರಾರಂಭಿಸಿದ್ದಾರೆ," ಎಂದು ಚೈತನ್ಯ ಹೇಳುತ್ತಾರೆ. "ಕೂಲಿ ಕಾರ್ಮಿಕರಿಗೆ ಸುಮಾರು 1,500 ರೂ.ಗಳ ವೆಚ್ಚವಾಗುತ್ತಿದ್ದರೆ, ಕಳೆನಾಶಕಗಳ ಬೆಲೆ 500 ರೂ.ಗಿಂತ ಕಡಿಮೆಯಿತ್ತು."

ಇದು ಹಲವಾರು ವಿನಾಶಕಾರಿ ಪರಿಣಾಮಗಳನ್ನು ಬೀರಿದೆ. ವೈಯಕ್ತಿಕ ಮಟ್ಟದಲ್ಲಿ, ಇದು ಈಗಾಗಲೇ ತೀವ್ರ ಆರ್ಥಿಕ ಒತ್ತಡವನ್ನು ಅನುಭವಿಸುತ್ತಿರುವ ಭಾರತಿವರಂತಹ ಜನರ ಕೆಲಸವನ್ನು ಕಿತ್ತುಕೊಳ್ಳುತ್ತದೆ. ಕೆಲಸದ ಲಭ್ಯತೆಯಿಂದ ಉಂಟಾಗುವ ಹೆಚ್ಚುವರಿ ಮಾನಸಿಕ ಒತ್ತಡವು ಅವರ ಹೈಪರ್ ಥೈರಾಯ್ಡಿಸಮ್ ಇನ್ನಷ್ಟು ತೀವ್ರಗೊಳ್ಳುವಂತೆ ಮಾಡುತ್ತದೆ.

ಭೂಮಿ ಕೂಡ ಈ ನಡೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಶಿರೋಲ್‌ನ ಕೃಷಿ ಅಧಿಕಾರಿ ಸ್ವಪ್ನಿತಾ ಪಡಲ್ಕರ್, 2021ರಲ್ಲಿ ತಾಲ್ಲೂಕಿನಲ್ಲಿ 9,402 ಹೆಕ್ಟೇರ್ (23,232 ಎಕರೆ) ಭೂಮಿ ಲವಣಯುಕ್ತವಾಗಿದೆ ಎಂದು ಹೇಳುತ್ತಾರೆ. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅನಿಯಂತ್ರಿತ ಬಳಕೆ, ಅಸಮರ್ಪಕ ನೀರಾವರಿ ಪದ್ಧತಿಗಳು ಮತ್ತು ಏಕಬೆಳೆ ಪದ್ಧತಿಗಳು ಇದಕ್ಕೆ ಕೆಲವು ಕಾರಣಗಳಾಗಿವೆ ಎಂದು ಅವರು ವಿವರಿಸುತ್ತಾರೆ.

Farmers in the area are increasing their use of pesticides to hurry crop growth before excessive rain descends on their fields
PHOTO • Sanket Jain

ಈ ಪ್ರದೇಶದ ರೈತರು ತಮ್ಮ ಹೊಲಗಳಲ್ಲಿ ಅತಿಯಾದ ಮಳೆ ಬೀಳುವ ಮೊದಲು ಬೆಳೆ ಬೆಳವಣಿಗೆಯನ್ನು ತ್ವರಿತಗೊಳಿಸಲು ಕೀಟನಾಶಕಗಳ ಬಳಕೆಯನ್ನು ಹೆಚ್ಚಿಸುತ್ತಿದ್ದಾರೆ

Saline fields in Shirol; an estimated 9,402 hectares of farming land were reported to be saline in 2021 owing to excessive use of chemical fertilisers and pesticides
PHOTO • Sanket Jain

ಶಿರೋಲ್‌ನ ಲವಣಯುಕ್ತ ಮಣ್ಣಿನ ಹೊಲಗಳು; ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದಾಗಿ 2021ರಲ್ಲಿ ಅಂದಾಜು 9,402 ಹೆಕ್ಟೇರ್ ಕೃಷಿ ಭೂಮಿ ಲವಣಯುಕ್ತವಾಗಿದೆ ಎಂದು ವರದಿಯಾಗಿದೆ

2019ರ ಪ್ರವಾಹದ ನಂತರ, ಕೊಲ್ಹಾಪುರದ ಶಿರೋಲ್ ಮತ್ತು ಹಟ್ಕನಂಗ್ಲೆ ತಾಲ್ಲೂಕಿನ ಅನೇಕ ರೈತರು "ಪ್ರವಾಹಕ್ಕೆ ಮೊದಲು ಉತ್ಪನ್ನಗಳನ್ನು ಕೊಯ್ಲು ಮಾಡುವ ಸಲುವಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ತೀವ್ರವಾಗಿ ಹೆಚ್ಚಿಸಿದ್ದಾರೆ" ಎಂದು ಚೈತನ್ಯ ಹೇಳುತ್ತಾರೆ.

ಡಾ. ಬೇಕರ್ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಅರ್ಜುನವಾಡದ ಮಣ್ಣಿನಲ್ಲಿ ಆರ್ಸೆನಿಕ್ ಅಂಶವು ಗಮನಾರ್ಹವಾಗಿ ಹೆಚ್ಚಾಗಿದೆ. "ರಾಸಾಯನಿಕ ಗೊಬ್ಬರಗಳು ಮತ್ತು ವಿಷಕಾರಿ ಕೀಟನಾಶಕಗಳ ಹೆಚ್ಚುತ್ತಿರುವ ಬಳಕೆಯು ಇದಕ್ಕೆ ಪ್ರಾಥಮಿಕ ಕಾರಣವಾಗಿದೆ," ಎಂದು ಅವರು ಹೇಳುತ್ತಾರೆ.

ಮಣ್ಣು ವಿಷಯುಕ್ತವಾದಾಗ, ಜನರು ಅದರ ಪರಿಣಾಮ ಅನುಭವಿಸದೆ ಇರಲು ಸಾಧ್ಯವೇ? "[ನೆಲದಲ್ಲಿ ಬೆರೆತ ವಿಷದ] ಪರಿಣಾಮವಾಗಿ ಅರ್ಜುನವಾಡ ಒಂದರಲ್ಲೇ 17 ಕ್ಯಾನ್ಸರ್ ರೋಗಿಗಳಿದ್ದಾರೆ, ಟರ್ಮಿನಲ್ ಹಂತದಲ್ಲಿರುವವರನ್ನು ಹೊರತುಪಡಿಸಿ," ಎಂದು ಅವರು ಹೇಳುತ್ತಾರೆ. ಇವುಗಳಲ್ಲಿ ಸ್ತನ ಕ್ಯಾನ್ಸರ್, ಲ್ಯುಕೇಮಿಯಾ, ಗರ್ಭಕಂಠದ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ ಸೇರಿವೆ. "ದೀರ್ಘಕಾಲದ ಕಾಯಿಲೆಗಳು ಹೆಚ್ಚುತ್ತಿರುವಾಗ, ರೋಗಲಕ್ಷಣಗಳ ಹೊರತಾಗಿಯೂ ಅನೇಕ ಜನರು ವೈದ್ಯರನ್ನು ಸಂಪರ್ಕಿಸುವುದಿಲ್ಲ," ಎಂದು ಅವರು ಹೇಳುತ್ತಾರೆ.

ಖೋಚಿ ಮೂಲದ ಕೃಷಿ ಕಾರ್ಮಿಕರಾದ ಸುನೀತಾ ಪಾಟೀಲ್ ಅವರು ತಮ್ಮ 40ರ ದಶಕದ ಕೊನೆಯಲ್ಲಿ, 2019ರಿಂದ ಸ್ನಾಯು ಮತ್ತು ಮೊಣಕಾಲು ನೋವು, ಆಯಾಸ ಮತ್ತು ತಲೆತಿರುಗುವಿಕೆಯನ್ನು ಅನುಭವಿಸುತ್ತಿದ್ದಾರೆ. "ಇದಕ್ಕೆ ಕಾರಣವೇನು ಎಂದು ನನಗೆ ಅರ್ಥವಾಗುತ್ತಿಲ್ಲ," ಎಂದು ಅವರು ಹೇಳುತ್ತಾರೆ. ಆದರೆ ತಾನು ಎದುರಿಸುತ್ತಿರುವ ಒತ್ತಡದ ಮಟ್ಟವು ಮಳೆಯೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಖಚಿತವಾಗಿ ಹೇಳುತ್ತಾರೆ. "ಭಾರಿ ಮಳೆಯಾದ ನಂತರ, ನನಗೆ ಮಲಗಲು ಕಷ್ಟವಾಗುತ್ತದೆ," ಎಂದು ಅವರು ಹೇಳುತ್ತಾರೆ. ಮತ್ತೊಂದು ಪ್ರವಾಹದ ಭಯವು ಅವಳನ್ನು ಭಯಭೀತಗೊಳಿಸುತ್ತದೆ ಮತ್ತು ಎಚ್ಚರವಾಗಿರಿಸುತ್ತದೆ.

ಹೆಚ್ಚಿನ ವೈದ್ಯಕೀಯ ವೆಚ್ಚಗಳಿಗೆ ಹೆದರಿ, ಸುನೀತಾ ಮತ್ತು ಇತರ ಹಲವಾರು ಪ್ರವಾಹ ಪೀಡಿತ ಮಹಿಳಾ ಕೃಷಿ ಕಾರ್ಮಿಕರು ತಮ್ಮ ಸಮಸ್ಯೆಗಳಿಗೆ ಉರಿಯೂತ ಶಮನಕಾರಿ ನೋವು ನಿವಾರಕ ಔಷಧಿಗಳನ್ನು ಅವಲಂಬಿಸಿದ್ದಾರೆ. "ನಾವೇನು ಮಾಡಲು ಸಾಧ್ಯ? ವೈದ್ಯರ ಬಳಿಗೆ ಹೋಗುವುದು ಕೈಗೆಟುಕುವುದಿಲ್ಲ, ಹೀಗಾಗಿ ನಾವು ನೋವು ನಿವಾರಕಗಳನ್ನು ಅವಲಂಬಿಸಿದ್ದೇವೆ, ಅವು ತುಂಬಾ ಕಡಿಮೆ ಬೆಲೆಗೆ ಸಿಗುತ್ತವೆ, ಸುಮಾರು 10 ರೂಪಾಯಿಗೆ," ಎಂದು ಅವರು ಹೇಳುತ್ತಾರೆ.

ನೋವು ನಿವಾರಕಗಳು ತಾತ್ಕಾಲಿಕವಾಗಿ ತಮ್ಮ ನೋವನ್ನು ಕಡಿಮೆ ಮಾಡುತ್ತಿರುವಾಗ, ಗೀತಾ, ಶಿವಬಾಯಿ, ಭಾರತಿ, ಸುನೀತಾ ಮತ್ತು ಇತರ ಸಾವಿರಾರು ಜನರು ಅನಿಶ್ಚಿತತೆ ಮತ್ತು ಭಯದ ಶಾಶ್ವತ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ.

"ನಾವು ಇನ್ನೂ ಮುಳುಗಿ ಹೋಗಿಲ್ಲ, ಆದರೆ ನಾವು ಪ್ರತಿದಿನ ಪ್ರವಾಹದ ಭಯದಲ್ಲಿ ಮುಳುಗುತ್ತಿದ್ದೇವೆ" ಎಂದು ಗೀತಾ ಹೇಳುತ್ತಾರೆ.

ಈ ವರದಿಯು ಇಂಟರ್‌ನ್ಯೂಸ್ ಅರ್ಥ್ ಜರ್ನಲಿಸಂ ನೆಟ್‌ವರ್ಕ್ ವರದಿಗಾರರಿಗರ ಒದಗಿಸಿರುವ ಸ್ವತಂತ್ರ ಪತ್ರಿಕೊದ್ಯಮ ಅನುದಾನದ ಮೂಲಕ ಸಿದ್ಧಪಡಿಸಲಾದ  ಸರಣಿಯೊಂದರ ಭಾಗವಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Other stories by Sanket Jain
Editor : Sangeeta Menon

ಸಂಗೀತಾ ಮೆನನ್ ಮುಂಬೈ ಮೂಲದ ಬರಹಗಾರು, ಸಂಪಾದಕರು ಮತ್ತು ಸಂವಹನ ಸಲಹೆಗಾರರು.

Other stories by Sangeeta Menon
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru