ಅ‌ವರು ತಾನು ಗೆದ್ದಿರುವ ಬಹುಮಾನ ತೆಗೆದುಕೊಳ್ಳಲೆಂದು ವೇದಿಕೆಯೇರಿದ್ದರು. ಬಹುಮಾನ ಒಂದು ಪೈಸೆಯ ಹೊಳೆಯುವ ನಾಣ್ಯವಾಗಿತ್ತು. ಬಹುಮಾನ ಕೊಡುತ್ತಿದ್ದವರು ಮುನ್ಶಿ - ತನ್ನ ನಿಯಂತ್ರಣದಲ್ಲಿ ಹಲವು ಶಾಲೆಗಳನ್ನು ಹೊಂದಿರುವ ಹಿರಿಯ ಅಧಿಕಾರಿ. ಅದು 1939ನೇ ಇಸವಿ, ಪಂಜಾಬಿನಲ್ಲಿ 3ನೇ ತರಗತಿ ಓದುತ್ತಿದ್ದ ಅವರಿಗೆ ಆಗ ಕೇವಲ 11 ವರ್ಷ ವಯಸ್ಸಾಗಿತ್ತು. ಮುನ್ಷಿ ಆ ಹುಡುಗನ ತಲೆಯನ್ನು ನೇವರಿಸಿ ‘ಬ್ರಿಟಾನಿಯಾ ಜಿಂದಾಬಾದ್, ಹಿಟ್ಲರ್ ಮುರ್ದಾಬಾದ್’ ಎಂದು ಕೂಗಲು ಹೇಳಿದ. ಪುಟ್ಟ ಭಗತ್ ಸಿಂಗ್ (ಇವರ ಹೆಸರನ್ನು ಓದಿ ಇವರು ಹುತಾತ್ಮ ಭಗತ್‌ ಸಿಂಗ್‌ ಎಂದು ಗೊಂದಲ ಮಾಡಿಕೊಳ್ಳದಿರಿ.)  ಸಮಾರಂಭದಲ್ಲಿನ ಪ್ರೇಕ್ಷಕರತ್ತ ತಿರುಗಿ ಮತ್ತೆ ಜೋರಾಗಿ ಘೋಷಣೆ ಕೂಗಿದರು: "ಬ್ರಿಟಾನಿಯಾ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್."

ಅವರ ಈ ಉದ್ದಟತನದ ಫಲವೂ ಅವರಿಗೆ ದೊರೆಯಿತು. ಅವರನ್ನು ಮುನ್ಷಿ ಬಾಬು ತಾವೇ ಥಳಿಸಿದರು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಹೊರಹಾಕಿದರು. ಅಲ್ಲಿದ್ದ ಇತರ ವಿದ್ಯಾರ್ಥಿಗಳು ಗಾಬರಿಯಿಂದ ಮೌನವಾಗಿಬಿಟ್ಟರು ಮತ್ತು ನಂತರ ಅಲ್ಲಿಂದ ಓಡಿಹೋದರು. ಸ್ಥಳೀಯ ಶಾಲೆಗಳ ಪ್ರಾಧಿಕಾರ - ನಾವು ಇಂದು ಬ್ಲಾಕ್ ಶಿಕ್ಷಣ ಅಧಿಕಾರಿ ಎಂದು ಕರೆಯುವಂತಹ ಅಧಿಕಾರಿ - ಈಗಿನ ಪಂಜಾಬ್‌ನ ಹೋಶಿಯಾರ್‌ಪುರ್ ಜಿಲ್ಲೆಯ ಈ ಭಾಗದ ಉಪ ಆಯುಕ್ತರ ಒಪ್ಪಿಗೆಯೊಂದಿಗೆ ಪತ್ರವನ್ನು ನೀಡಿದರು. ಪತ್ರವು ಬಾಲಕನನ್ನು ಶಾಲೆಯಿಂದ ಹೊರಹಾಕುವುದನ್ನು ದೃಢಪಡಿಸಿತು, 11 ವರ್ಷದ ಈ ಹುಡುಗನನ್ನು 'ಅಪಾಯಕಾರಿ' ಮತ್ತು 'ಕ್ರಾಂತಿಕಾರಿ' ವಿವರಣೆಯಲ್ಲಿ ತಿಳಿಸಲಾಗಿತ್ತು.

ಇದನ್ನು ಸರಳವಾಗಿ ಹೇಳುವುದಾದರೆ ಭಗತ್ ಸಿಂಗ್ ಝುಗ್ಗಿಂಯಾ ಅಲ್ಲಿ ಇದ್ದ ಬಹಳ ಕಡಿಮೆ ಶಾಲೆಗಳಲ್ಲೂ ಇನ್ನು ಮುಂದೆ ಪ್ರವೇಶ ಪಡೆಯದಂತೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಯಿತು. ಅವರು ಇನ್ನು ಮುಂದೆ ಯಾವುದೇ ಶಾಲೆಯ ಗೇಟನ್ನು ದಾಟಿ ಹೋಗುವಂತಿರಲಿಲ್ಲ. ಅವರ ಹೆತ್ತವರಲ್ಲದೆ ಅನೇಕರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಬೇಡಿಕೊಂಡರು. ಆಗ ಒಳ್ಳೆಯ ಸಂಪರ್ಕಗಳನ್ನು ಹೊಂದಿದ್ದ ಜಮೀನ್ದಾರರಾಗಿದ್ದ ಗುಲಾಂ ಮುಸ್ತಫಾ ಅವರೂ ಭಗತ್‌ ಸಿಂಗ್‌ ಪರವಾಗಿ ಸಾಕಷ್ಟು ಕಠಿಣ ಪ್ರಯತ್ನಗಳನ್ನು ಮಾಡಿದರು. ಆದರೆ ಬ್ರಿಟಿಷರ ಗುಲಾಮರು ಕೆರಳಿದ್ದರು. ಒಂದು ಸಣ್ಣ ಹುಡುಗ ಅವರ ಘನತೆಯನ್ನು ಕೆಣಕಿದ್ದ. ಇದರ ನಂತರ ಭಗತ್ ಸಿಂಗ್ ಝುಗ್ಗಿಂಯಾ ತನ್ನ ಅಸಾಧಾರಣ ವರ್ಣರಂಜಿತ ಜೀವನದುದ್ದಕ್ಕೂ ಔಪಚಾರಿಕ ಶಿಕ್ಷಣಕ್ಕೆ ಮರಳಲಿಲ್ಲ.

ಆದರೆ ಅವರು ಅಧಿಕಾರದ ಮುಖದ ಮೇಲೆ ಬಲವಾದ ಹೊಡೆತ ನೀಡಿದವರ ಶಾಲೆಯಲ್ಲಿ ಮೊದಲೂ ಇದ್ದರು ಮತ್ತು ಈಗ ಅವರ 93ರ ವಯಸ್ಸಿನಲ್ಲೂ ಅಂತಹ ಶಾಲೆಯ ಒಬ್ಬ ಸ್ಟಾರ್ ಶಿಷ್ಯನಾಗಿ ಉಳಿದಿದ್ದಾರೆ.

ಹೋಶಿಯಾರ್‌ಪುರ್ ಜಿಲ್ಲೆಯ ರಾಮಗಢ ಎನ್ನುವ ಹಳ್ಳಿಯಲ್ಲಿರುವ ಅವರ ಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಾ ಅಂದಿನ ನಾಟಕವನ್ನು ನೆನಪಿಸಿಕೊಂಡು ನಗುತ್ತಿದ್ದರು. ಅಂದಿನ ಘಟನೆ ಅವರಲ್ಲಿ ಭಯ ಹುಟ್ಟಿಸಲಿಲ್ಲವೆ? ಅವರು ಹೇಳುತ್ತಾರೆ, "ಆಗ ಅದಕ್ಕೆ ನನ್ನ ಪ್ರತಿಕ್ರಿಯೆ ಏನಾಗಿತ್ತೆಂದರೆ - ಇನ್ನು ನಾನು ಬ್ರಿಟಿಷ್‌ ವಿರೋಧಿ ಹೋರಾಟದಲ್ಲಿ ಸೇರಿಕೊಳ್ಳಲು ಸ್ವತಂತ್ರ."

Bhagat Singh Jhuggian and his wife Gurdev Kaur, with two friends in between them, stand in front of the school, since renovated, that threw him out in 1939
PHOTO • Courtesy: Bhagat Singh Jhuggian Family

ತನ್ನನ್ನು 1939ರಲ್ಲಿ ತರಗತಿಯಿಂದ ಹೊರಹಾಕಿದ್ದ ಹಾಗೂ  ಈಗ ನವೀಕೃತಗೊಂಡಿರುವ ಶಾಲೆಯೆದುರು ಭಗತ್ ಸಿಂಗ್ ಝುಗ್ಗಿಂಯಾ ಮತ್ತು ಅವರ ಸ್ನೇಹಿತರು

ಅವರು ಹಾಗೆ ಮಾಡಲು ಸ್ವತಂತ್ರರು ಎನ್ನುವ ವಿಷಯ ಎಲ್ಲರಿಗೂ ತಿಳಿಯದೆ ಉಳಿಯಲಿಲ್ಲ. ಮೊದಲಿಗೆ ಅವರು ತನ್ನ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರಾದರೂ - ಅವರ ಖ್ಯಾತಿ ಈಗಾಗಲೇ ಎಲ್ಲೆಡೆ ಹರಡಿತ್ತು. ಪಂಜಾಬ್‌ನ ತೀವ್ರ ಸುಧಾರಣವಾದಿ ಭೂಗತ ಗುಂಪುಗಳು ಅವರನ್ನು ಸಂಪರ್ಕಿಸಲು ಪ್ರಾರಂಭಿಸಿದವು. ಹೀಗೆ ಅವರು 1914-15ರ ಗದರ್ ದಂಗೆ ನಡೆಸಿದ ಗದರ್ ಪಕ್ಷದ ಒಂದು ಭಾಗವಾದ ಕೀರ್ತಿ ಪಾರ್ಟಿಯಲ್ಲಿ ಸೇರಿಕೊಂಡರು.

ಈ ಗುಂಪು ಮಿಲಿಟರಿ ಮತ್ತು ಸೈದ್ಧಾಂತಿಕ ತರಬೇತಿಗಾಗಿ ಕ್ರಾಂತಿಕಾರಿ ರಷ್ಯಾಕ್ಕೆ ಹೋಗಿದ್ದ ಅನೇಕರನ್ನು ಒಳಗೊಂಡಿತ್ತು. ಗದರ್ ಚಳುವಳಿಯನ್ನು ಹತ್ತಿಕ್ಕಲಾದ ನಂತರ ಪಂಜಾಬ್‌ಗೆ ಹಿಂದಿರುಗಿದ ಅವರು, ಕೀರ್ತಿ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಗೆ ಕೊಡುಗೆ ನೀಡಿದ ಪತ್ರಕರ್ತರಲ್ಲಿ ಪ್ರಸಿದ್ಧರಾಗಿದ್ದ ಕ್ರಾಂತಿಕಾರಿ ಹುತಾತ್ಮ ಭಗತ್‌ ಸಿಂಗ್‌ ಕೂಡಾ ಒಬ್ಬರು. ಅವರು ವಾಸ್ತವವಾಗಿ ಮೇ 27, 1927ರಂದು ಬಂಧನಕ್ಕೊಳಗಾಗುವ ಮೊದಲು ಮೂರು ತಿಂಗಳ ಕಾಲ ಕೀರ್ತಿಯನ್ನು ನಡೆಸುತ್ತಿದ್ದರು, ಆಗ ಅದು ತನ್ನ ಸಂಪಾದಕರನ್ನು ಕಳೆದುಕೊಂಡಿತ್ತು. 1942ರ ಮೇ ತಿಂಗಳಲ್ಲಿ ಕೀರ್ತಿ ಪಕ್ಷವು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿತು.

ಇನ್ನೊಂದು ವಿಷಯವೆಂದರೆ, ಝುಗ್ಗಿಂಯಾ ಅವರಿಗೆ ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಹೆಸರನ್ನು ಇಟ್ಟಿದ್ದಲ್ಲ. "ಜನರು ಭಗತ್‌ ಸಿಂಗ್‌ ಕುರಿತು ಹಾಡುವುದನ್ನು ಕೇಳಿದ್ದೆ. ಅವರ ಕುರಿತು ಅನೇಕ ಹಾಡುಗಳಿದ್ದವು." 1931ರಲ್ಲಿ ಬ್ರಿಟೀಷರಿಂದ ಗಲ್ಲಿಗೇರಿಸಲ್ಪಟ್ಟ ಮಹಾನ್ ಕ್ರಾಂತಿಕಾರಿಯ ಮೇಲೆ ಆ ಅವಧಿಯಲ್ಲಿ ಹಾಡಲ್ಪಡುತ್ತಿದ್ದ ಕೆಲವು ಪದಗಳನ್ನು ಅವರು ನಮ್ಮೆದುರು ಗುನುಗಿದರು. ಆ ಮಹಾನ್‌ ಚೇತನದ ಹೆಸರಿನವರಾದ ಇವರು ಆಗ 3 ವರ್ಷದ ಮಗುವಾಗಿದ್ದರು.

ಶಾಲೆಯಿಂದ ಹೊರಹಾಕಲ್ಪಟ್ಟ ಮುಂದಿನ ವರ್ಷಗಳಲ್ಲಿ, ಯುವ ಭಗತ್ ಸಿಂಗ್ ಝುಗ್ಗಿಂಯಾ ಕ್ರಾಂತಿಕಾರಿ ಭೂಗತ ಹೋರಾಟದ ಸಂದೇಶ ವಾಹಕರಾದರು. ಅವರ ಕುಟುಂಬದ ಐದು ಎಕರೆಯ ಭೂಮಿಯಲ್ಲಿ ಕೆಲಸ ಮಾಡುವುದರ ನಡುವೆ, "ಅವರು ನನಗೆ ಹೇಳಿದ ಕೆಲಸಗಳನ್ನು ಮಾಡುತ್ತಿದ್ದೆ." ತನ್ನ ಹದಿಹರೆಯದಲ್ಲಿ ಅವರು ಮಾಡಿದ ಅಂತಹ ಕೆಲಸಗಳಲ್ಲಿ, ಬಿಡಿ ಬಿಡಿಯಾಗಿ ಎರಡು ಚೀಲಗಳಲ್ಲಿ ತುಂಬಲಾಗಿದ್ದ ಪ್ರಿಂಟಿಂಗ್‌ ಮಷೀನ್‌ ಒಂದನ್ನು 20 ಲೋಮೀಟರುಗಳಷ್ಟು ದೂರ ಕತ್ತಲಿನಲ್ಲಿ ಹೊತ್ತುಕೊಂಡು ನಡೆದು ಕ್ರಾಂತಿಕಾರಿಗಳ ರಹಸ್ಯ ಶಿಬಿರಕ್ಕೆ ತಲುಪಿಸಿದ್ದು ಕೂಡಾ ಒಂದು. ಇವರು ಅಕ್ಷರಶಃ, ಸ್ವಾತಂತ್ರ್ಯದ ಕಾಲಾಳಾಗಿದ್ದರು.

"ಅತ್ತಲಿಂದ ಬರುವಾಗ ನನ್ನ ಸಂಪರ್ಕದಲ್ಲಿರುವ ಸಂಗಾತಿಗಳಿಗೆ ನೀಡಲೆಂದು ಆಹಾರ ಮತ್ತು ಇತರ ಸಾಮಾಗ್ರಿಗಳಿಂದ ತುಂಬಿದ್ದ ಭಾರದ ಚೀಲವೊಂದನ್ನು ಹೊರಿಸಿ ಕಳುಹಿಸಿದ್ದರು. ಅದು ಕೂಡಾ ಅಷ್ಟೇ ದೂರದ ಹಾದಿಯಾಗಿತ್ತು" ಅವರ ಕುಟುಂಬವು ಸಹ ಭೂಗತ ಹೋರಾಟಗಾರರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸಿತ್ತು.

Prof. Jagmohan Singh (left), nephew of the great revolutionary Shaheed Bhagat Singh, with Jhuggian at his home in Ramgarh
PHOTO • P. Sainath

ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಸೋದರಳಿಯ ಪ್ರೊ. ಜಗಮೋಹನ್ ಸಿಂಗ್ (ಎಡಕ್ಕೆ), ಭಗತ್ ಸಿಂಗ್ ಝುಗ್ಗಿಂಯಾ ಅವರೊಂದಿಗೆ ರಾಮಗಢದ ಅವರ ಮನೆಯಲ್ಲಿ

ಅವರು ಹಾಗೆ ಸಾಗಿಸಿದ ಯಂತ್ರವನ್ನು 'ಉಡಾರ ಪ್ರೆಸ್' ಎಂದು ಕರೆಯಲಾಗುತ್ತಿತ್ತು (ಪದಶಃ, ಹಾರುವ ಪ್ರೆಸ್, ಆದರೆ ನಿಜವಾದ ಅರ್ಥ ಪೋರ್ಟಬಲ್/ಸಾಗಿಸಬಹುದಾದ). ಅದು ಬಿಡಿಸಿಡಲಾಗಿದ್ದ ಸಣ್ಣ ಮುದ್ರಣ ಯಂತ್ರವೋ ಅಥವಾ ಅಂತಹ ಯಂತ್ರವೊಂದರ ಭಾಗವೋ ಅಥವಾ ಸೈಕ್ಲೋಸ್ಟೈಲಿಂಗ್ ಯಂತ್ರವೋ ಎಂಬುದು ಸ್ಪಷ್ಟವಾಗಿಲ್ಲ. "ಅದು ದೊಡ್ಡ ಮತ್ತು ಭಾರವಾದ ಎರಕಹೊಯ್ದ ಕಬ್ಬಿಣದ ಬಿಡಿ ಭಾಗಗಳನ್ನು ಹೊಂದಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ತನ್ನ ಸಂದೇಶ ತಲುಪಿಸುವ ಕೆಲಸವನ್ನು ಅವರು ಹೆಚ್ಚು ಅಪಾಯವಿಲ್ಲದೆ ಪೂರೈಸಿದ್ದರು. ಹಾಗೆಂದು ಅವರು ಅವರು ಅಪಾಯಕಾರಿ ಕೆಲಸಗಳನ್ನು ಮಾಡಿರಲಿಲ್ಲವೆಂದಲ್ಲ. "ನಾನು ಪೊಲೀಸರಿಗೆ ಹೆದರುತ್ತಿದ್ದಕ್ಕಿಂತ ಹೆಚ್ಚು ಅವರು ನನಗೆ ಹೆದರುತ್ತಿದ್ದರು" ಎಂದು ಹೆಮ್ಮೆಪಡುತ್ತಾರೆ.

*****

ಅದರ ನಂತರ ದೇಶ ವಿಭಜನೆ ನಡೆಯಿತು.

ಈ ಕುರಿತು ಮಾತನಾಡುತ್ತಲೇ ಝುಗ್ಗಿಂಯಾ ಭಗತ್‌ ಸಿಂಗ್‌ ಹೆಚ್ಚು ಭಾವುಕರಾಗಿಬಿಟ್ಟರು. ಅಂದಿನ ಗಲಭೆಗಳು ಮತ್ತು ಸಾಮೂಹಿಕ ಕಗ್ಗೊಲೆಗಳ ಕುರಿತು ಮಾತನಾಡುತ್ತಾಈ ಹಿರಿಯ ಸಜ್ಜನರಿಗೆ ತನ್ನ ಕಣ್ಣೀರನ್ನು ತಡೆಯುವುದು ಕಷ್ಟವಾಯಿತು. “ಗುಂಪುಗಳಲ್ಲಿ ದೇಶದಿಂದ ದೇಶಕ್ಕೆ ಚಲಿಸುತ್ತಿದ್ದ ಸಾವಿರಾರು ಜನರನ್ನು ಗಡಿಗಳಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಲಾಗುತ್ತಿತ್ತು ಮತ್ತು ಕೊಲ್ಲಲಾಗುತ್ತಿತ್ತು. ಇಲ್ಲಿನ ಸುತ್ತಮುತ್ತಲೆಲ್ಲ ಹತ್ಯಾಕಾಂಡಗಳು ನಡೆಯುತ್ತಿದ್ದವು.”

"ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಸಿಂಬಲ್ಲಿ ಗ್ರಾಮದಲ್ಲಿ," ಶಾಲಾ ಶಿಕ್ಷಕ, ಬರಹಗಾರ ಮತ್ತು ಸ್ಥಳೀಯ ಇತಿಹಾಸಕಾರ ಅಜ್ಮೀರ್ ಸಿಧು ಹೇಳುತ್ತಾರೆ, "ಸುಮಾರು 250 ಜನರು, ಎಲ್ಲರೂ ಮುಸ್ಲಿಮರು, ಎರಡು ರಾತ್ರಿ ಮತ್ತು ಒಂದು ಹಗಲಿನಲ್ಲಿ ಹತ್ಯೆಗೀಡಾದರು. ಆದರೂ, ಗಢಶಂಕರ್ ಪೊಲೀಸ್ ಠಾಣೆಯ ಠಾಣೆದಾರರು ಇವುಗಳಲ್ಲಿ ಕೇವಲ 101 ಸಾವುಗಳನ್ನು ಮಾತ್ರವೇ ದಾಖಲಿಸಿದ್ದಾರೆ." ಎಂದು ಭಗತ್ ಸಿಂಗ್ ಝುಗ್ಗಿಂಯಾ ಅವರನ್ನು ನಾವು ಸಂದರ್ಶಿಸಿದಾಗ ನಮ್ಮೊಂದಿಗಿದ್ದ ಸಿಧು ಹೇಳುತ್ತಾರೆ

"ಆಗ 1947ರ ಆಗಸ್ಟ್ ಸಮಯದಲ್ಲಿ ಎರಡು ಬಗೆಯ ಗುಂಪಿನ ಜನರಿದ್ದರು" ಎಂದು ಭಗತ್ ಸಿಂಗ್ ಹೇಳುತ್ತಾರೆ. "ಒಂದು ಗುಂಪು ಮುಸ್ಲಿಮರನ್ನು ಕೊಲ್ಲುತ್ತಿದ್ದರೆ, ಇನ್ನೊಂದು ಗುಂಪು ಆಕ್ರಮಣಕಾರರಿಂದ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿತ್ತು.

"ನನ್ನ ಹೊಲದ ಬಳಿ ಒಬ್ಬ ಯುವಕನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ನಾವು ಆತನ ಸಹೋದರನಿಗೆ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಲು ಮುಂದಾಗಿದ್ದೆವು, ಆದರೆ ಆತ ಗಾಬರಿಗೊಂಡು ಗುಂಪಿನೊಂದಿಗೆ ಮುಂದೆ ಹೋದನು. ನಾವು ಆ ಶವವನ್ನು ನಮ್ಮ ಹೊಲದಲ್ಲಿ ಸಮಾಧಿ ಮಾಡಿದೆವು. ಇಲ್ಲಿ ಆಗಸ್ಟ್‌ 15 ಸಂಭ್ರಮದಿಂದ ಕೂಡಿರಲಿಲ್ಲ.” ಎನ್ನುತ್ತಾರವರು.

Bhagat Singh with his wife Gurdev Kaur and eldest son 
Jasveer Singh in 1965.
PHOTO • Courtesy: Bhagat Singh Jhuggian Family
Bhagat Singh in the late 1970s.
PHOTO • Courtesy: Bhagat Singh Jhuggian Family

ಭಗತ್ ಸಿಂಗ್ ತಮ್ಮ ಪತ್ನಿ ಗುರುದೇವ್ ಕೌರ್ ಮತ್ತು ಹಿರಿಯ ಮಗ ಜಸ್ವೀರ್ ಸಿಂಗ್ ಅವರೊಂದಿಗೆ ಇರುವ 1965 ರ ಚಿತ್ರ. ಬಲ: ಅವರ 1970 ರ ದಶಕದ ಉತ್ತರ ಕಾಲದ ಭಾವಚಿತ್ರ

ಗಡಿಯನ್ನು ದಾಟುವಲ್ಲಿ ಯಶಸ್ವಿಯಾದವರಲ್ಲಿ ಒಮ್ಮೆ ಭಗತ್ ಸಿಂಗ್ ಅವರನ್ನು ಶಾಲೆಗೆ ಮರಳಿ ಕರೆತರಲು ಪ್ರಯತ್ನಿಸಿದ್ದ ದೊಡ್ಡ ಭೂಮಾಲೀಕ ಗುಲಾಂ ಮುಸ್ತಫಾ ಕೂಡಾ ಒಬ್ಬರು.

"ಆದಾಗ್ಯೂ," ಭಗತ್ ಸಿಂಗ್ ಹೇಳುತ್ತಾರೆ, "ಮುಸ್ತಫಾ ಅವರ ಮಗ, ಅಬ್ದುಲ್ ರೆಹಮಾನ್, ಒಂದಷ್ಟು ಕಾಲ ಇಲ್ಲಿಯೇ ಉಳಿದಿದ್ದ ಮತ್ತು ಅವನು ತೀವ್ರ ಅಪಾಯದಲ್ಲಿದ್ದ. ನನ್ನ ಕುಟುಂಬವು ಒಂದು ರಾತ್ರಿ ನಮ್ಮ ಮನೆಗೆ ರೆಹಮಾನ್‌ನನ್ನು ಯಾರಿಗೂ ತಿಳಿಯದಂತೆ ಕರೆತಂದಿತು. ಆಗ ಅವನ ಬಳಿಯೊಂದು ಕುದುರೆಯಿತ್ತು”

ಆದರೆ ಮುಸ್ಲಿಮರನ್ನು ಬೇಟೆಯಾಡುವ ಗುಂಪುಗಳು ಇದರ ಸುಳಿವನ್ನು ಪಡೆದುಕೊಂಡವು. "ಹೀಗೆ ಒಂದು ರಾತ್ರಿ ಸ್ನೇಹಿತರು ಮತ್ತು ಒಡನಾಡಿಗಳ ಜಾಲದ ಮೂಲಕ ನಾವು ಅವನನ್ನು ಕಳ್ಳ ದಾರಿಯಲ್ಲಿ ಕರೆತಂದೆವು. ಅವನು ಒಂದೇ ಬಾರಿಗೆ ಗಡಿಯನ್ನು ದಾಟಲು ಯಶಸ್ವಿಯಾದ."  ಮುಂದಿನ ದಿನಗಳಲ್ಲಿ, ಅವರು ಕುದುರೆಯನ್ನು ಗಡಿ ದಾಟಿಸಿ ಅವನಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾದರು. ಮುಸ್ತಫಾ, ಹಳ್ಳಿಯ ಸ್ನೇಹಿತರಿಗೆ ಬರೆದ ಪತ್ರಗಳಲ್ಲಿ ಭಗತ್ ಸಿಂಗ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಮುಂದೊಂದು ದಿನ ಭಾರತದಲ್ಲಿ ಅವರನ್ನು ಭೇಟಿ ಮಾಡುವ ಭರವಸೆ ನೀಡಿದರು. “ಆದರೆ ಅವರು ಮರಳಿ ಬರಲಿಲ್ಲ.”

ವಿಭಜನೆಯ ಕುರಿತು ಮಾತನಾಡುತ್ತಾ ಭಗತ್ ಸಿಂಗ್ ದುಃಖಿತರಾದರು ಮತ್ತು ಅಸ್ವಸ್ಥತೆಯನ್ನು ಅನುಭವಿಸತೊಡಗಿದರು. ಅವರು ಪುನಃ ಮಾತನಾಡುವ ಮೊದಲು ಕೆಲವು ಕ್ಷಣ ಮೌನವಾದರು. ಹೋಶಿಯಾರ್‌ಪುರದ ಬಿರಾಂಪುರ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಸಭೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ 17 ದಿನಗಳ ಕಾಲ ಅವರನ್ನು ಜೈಲಿಗೆ ಹಾಕಲಾಗಿತ್ತು.

1948ರಲ್ಲಿ, ಅವರು ಸಿಪಿಐನೊಂದಿಗೆ ವಿಲೀನಗೊಂಡ ಹಿಂದಿನ ಕೀರ್ತಿ ಪಕ್ಷದಿಂದ ಬೇರ್ಪಟ್ಟ ಗುಂಪು ಲಾಲ್ (ಕೆಂಪು) ಕಮ್ಯುನಿಸ್ಟ್ ಪಕ್ಷದ ಹಿಂದ್ ಯೂನಿಯನ್‌ಗೆ ಸೇರಿದರು.

ಆದರೆ ತೆಲಂಗಾಣ ಮತ್ತು ಇತರೆಡೆಗಳಲ್ಲಿ ನಡೆದ ದಂಗೆಗಳ ನಂತರ 1948 ಮತ್ತು 1951ರ ನಡುವೆ ಎಲ್ಲಾ ಕಮ್ಯುನಿಸ್ಟ್ ಗುಂಪುಗಳನ್ನು ನಿಷೇಧಿಸಲಾಯಿತು. ಭಗತ್ ಸಿಂಗ್ ಮತ್ತೆ ಹಗಲಿನಲ್ಲಿ ರೈತ ಪಾತ್ರಕ್ಕೂ, ರಾತ್ರಿಯಲ್ಲಿ ರಹಸ್ಯ ಸಂದೇಶವಾಹಕನ ಪಾತ್ರಕ್ಕೂ ಮರಳಿದರು. ಮತ್ತು ಸಕ್ರಿಯ ಕಾರ್ಯಕರ್ತರಿಗೆ ಆಶ್ರಯವನ್ನೂ ನೀಡುತ್ತಿದ್ದರು. ಅವರು ತಮ್ಮ ಜೀವನದ ಈ ಹಂತವನ್ನು ಒಂದು ವರ್ಷ ಭೂಗತವಾಗಿ ಕಳೆದರು.

ನಂತರ, 1952ರಲ್ಲಿ, ಲಾಲ್ ಪಕ್ಷವು ಭಾರತದ ಕಮ್ಯುನಿಸ್ಟ್ ಪಕ್ಷದೊಂದಿಗೆ ವಿಲೀನಗೊಂಡಿತು. ಪುನಃ 1964ರಲ್ಲಿ ವಿಭಜನೆಯಾದಾಗ, ಅವರು ಹೊಸದಾಗಿ ರೂಪುಗೊಂಡ ಸಿಪಿಐ-ಎಮ್‌ ಜೊತೆ ಸೇರಿಕೊಂಡು ಅಲ್ಲೇ ಉಳಿದರು.

Jhuggian (seated, centre) with CPI-M leader (late) Harkishan Singh Surjeet (seated, right) at the height of the militancy in Punjab 1992
PHOTO • Courtesy: Bhagat Singh Jhuggian Family

1992ರಲ್ಲಿ ಪಂಜಾಬ್ ನಲ್ಲಿ ಉಗ್ರವಾದ ಉತ್ತುಂಗದಲ್ಲಿದ್ದಾಗ ಸಿ.ಪಿ.ಐ.ಎಂ. ನಾಯಕ (ದಿವಂಗತ) ಹರ್ಕಿಷನ್ ಸಿಂಗ್ ಸುರ್ಜೀತ್ ಅವರೊಂದಿಗೆ

ಆ ಅವಧಿಯಲ್ಲಿ ಅವರು ಭೂಮಿ ಮತ್ತು ರೈತರಿಗೆ ಸಂಬಂಧಿಸಿದ ಇತರ ಹೋರಾಟಗಳಲ್ಲಿ ಭಾಗವಹಿಸಿದರು. ಭಗತ್ ಸಿಂಗ್ ಅವರನ್ನು 1959ರಲ್ಲಿ ಖುಷ್ ಹಸಿಯಾತಿ ತೆರಿಗೆ ಮೋರ್ಚಾ (ಸುಧಾರಣೆ ವಿರೋಧಿ ತೆರಿಗೆ ಹೋರಾಟ) ಸಮಯದಲ್ಲಿ ಬಂಧಿಸಲಾಯಿತು. ಅವರ ಅಪರಾಧ: ಕಂಡಿ ಪ್ರದೇಶದ ರೈತರನ್ನು ಸಂಘಟಿಸಿದ್ದು.  ಇದರಿಂದ ಸಿಟ್ಟಿಗೆದ್ದ ಪ್ರತಾಪ್ ಸಿಂಗ್ ಕೈರೋನ್ ಸರ್ಕಾರವು ಅವರ ಎಮ್ಮೆ ಮತ್ತು ಮೇವು ಕತ್ತರಿಸುವ ಯಂತ್ರವನ್ನು ವಶಪಡಿಸಿಕೊಂಡು ಅವುಗಳನ್ನು ಹರಾಜು ಮಾಡುವ ಮೂಲಕ ಅವರನ್ನು ಶಿಕ್ಷಿಸಿತು. ಆದರೆ ಎರಡನ್ನೂ ಸಹ ಗ್ರಾಮಸ್ಥರೊಬ್ಬರು ಹನ್ನೊಂದು ರೂಪಾಯಿಗಳಿಗೆ ಖರೀದಿಸಿ ಕುಟುಂಬಕ್ಕೆ ಹಿಂದಿರುಗಿಸಿದರು.

ಭಗತ್ ಸಿಂಗ್ ಕೂಡ ಈ ಪ್ರತಿಭಟನೆಯ ಸಮಯದಲ್ಲಿ ಲುಧಿಯಾನ ಜೈಲಿನಲ್ಲಿ ಮೂರು ತಿಂಗಳು ಕಳೆದರು.  ಮತ್ತೆ, ಅದೇ ವರ್ಷದ ಕೊನೆಯಲ್ಲಿ ಪಟಿಯಾಲಾ ಜೈಲಿನಲ್ಲಿ ಮೂರು ತಿಂಗಳು.

ಅವರು ತಮ್ಮ ಬದುಕಿನುದ್ದಕ್ಕೂ ವಾಸಿಸುತ್ತಿದ್ದ ಊರು ಮೊದಲಿಗೆ ಝುಗ್ಗಿಯಾಗಿತ್ತು (ಕೊಳೆಗೇರಿ ವಾಸಸ್ಥಳಗಳು) ಮತ್ತು ಅಲ್ಲಿರುವವರನ್ನು ಝುಗ್ಗಿಂಯಾ ಎಂದು ಕರೆಲಾಗುತ್ತದೆ.  ಹೀಗಾಗಿಯೇ ಅವರಿಗೆ ಭಗತ್ ಸಿಂಗ್ ಝುಗ್ಗಿಂಯಾ ಎಂಬ ಹೆಸರು.  ಇದು ಈಗ ಗಢ್‌ಶಂಕರ್ ತಾಲ್ಲೂಕಿನ ರಾಮಗಢ ಗ್ರಾಮದ ಭಾಗವಾಗಿದೆ.

1975ರಲ್ಲಿ, ಅವರು ಮತ್ತೆ ಒಂದು ವರ್ಷ ಭೂಗತರಾಗಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದರು.  ಈ ಸಮಯದಲ್ಲಿ ಅವರು ಜನರನ್ನು ಸಂಘಟಿಸುವುದು, ಅಗತ್ಯವಿದ್ದಾಗ ಸಂದೇಶಗಳನ್ನು ತಲುಪಿಸುವುದು ಮತ್ತು ತುರ್ತುಪರಿಸ್ಥಿತಿ ವಿರೋಧಿ ಸಾಹಿತ್ಯ ಪಸರಿಸುವುದನ್ನು ಮಾಡುತ್ತಿದ್ದರು.

ಈ ಎಲ್ಲಾ ವರ್ಷಗಳ ಕಾಲ ಅವರು ತಮ್ಮ ಗ್ರಾಮ ಮತ್ತು ಸುತ್ತಲಿನ ಪ್ರದೇಶದಲ್ಲಿ ಬೇರೂರಿದ್ದರು.  3ನೇ ತರಗತಿಯನ್ನು ದಾಟದ ವ್ಯಕ್ತಿಯಾದ ಅವರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೋರಾಡುತ್ತಿರುವ ತನ್ನ ಸುತ್ತಲಿನ ಯುವಕರ ಕುರಿತು ಆಳವಾದ ಆಸಕ್ತಿ ಹೊಂದಿದ್ದುರು.  ಅವರಿಂದ ಸಹಾಯ ಪಡೆದ ಅನೇಕರು ಇಂದು ಬದುಕಿನಲ್ಲಿ ಒಳ್ಳೆಯ ಸ್ಥಿತಿಯಲ್ಲಿದ್ದಾರೆ, ಕೆಲವರು ಸರ್ಕಾರಿ ಸೇವೆಗೂ ಸೇರಿದ್ದಾರೆ.

*****

1990:  ಭಗತ್ ಸಿಂಗ್ ಕುಟುಂಬಕ್ಕೆ ಅವರ ಕೊಳವೆಬಾವಿ ಮತ್ತು ಭಯೋತ್ಪಾದನೆ ಬಹಳ ಹತ್ತಿರದಲ್ಲಿದೆಯೆಂದು ತಿಳಿಯಿತು. ಭಾರಿ ಶಸ್ತ್ರಸಜ್ಜಿತ ಖಲಿಸ್ತಾನಿ ಹಿಟ್ ಸ್ಕ್ವಾಡ್ ಅವರ ಹೊಲಗಳಲ್ಲಿ ವಿರಮಿಸಿತ್ತು, ಅವರ ಮನೆಯಿಂದ ಕೇವಲ 400 ಮೀಟರ್ ದೂರದಲ್ಲಿದ್ದ ಕೊಳವೆ ಬಾವಿಯ ಮೇಲೆ ಕೆತ್ತಲಾಗಿದ್ದ ಅವರ ಹೆಸರಿನಿಂದ ಅವರು ಏನು ಮಾಡಲಿದ್ದಾರೆಂಬುದು ಸ್ಪಷ್ಟವಿತ್ತು  ಅಲ್ಲಿ ಅವರು ಹೊಂಚುಹಾಕಿ ಮಲಗಿದ್ದರು - ಆದರೆ ಅದು ಗಮನಕ್ಕೆ ಬಂದಿತ್ತು.

1984ರಿಂದ 1993ರವರೆಗೆ ಪಂಜಾಬ್ ಭಯೋತ್ಪಾದನೆಯಿಂದ ಹಿಂಸೆಗೊಳಗಾಗಿತ್ತು. ಈ ಸಮಯದಲ್ಲಿ ನೂರಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು, ಹತ್ಯೆ ಮಾಡಲಾಯಿತು ಅಥವಾ ಬೇರೆ ರೀತಿಯಲ್ಲಿ ಕೊಲ್ಲಲಾಯಿತು. ಅವರಲ್ಲಿ ಸಿ.ಪಿ.ಐ., ಸಿ.ಪಿ.ಐ.ಎಂ ಮತ್ತು ಸಿ.ಪಿ.ಐ.-ಎಂಎಲ್ ನ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಖಲಿಸ್ತಾನಿಗಳಿಗೆ ಬಲವಾದ ಪ್ರತಿರೋಧವನ್ನು ತೋರಿಸಿದ್ದರು. ಈ ಅವಧಿಯಲ್ಲಿ ಭಗತ್ ಸಿಂಗ್ ಯಾವಾಗಲೂ ಹಿಟ್ ಲಿಸ್ಟಿನಲ್ಲಿದ್ದರು.

Bhagat Singh Jhuggian at the tubewell where the Khalistanis laid an ambush for him 31 years ago
PHOTO • Vishav Bharti

31 ವರ್ಷಗಳ ಹಿಂದೆ ಖಲಿಸ್ತಾನಿಗಳು ಅವರಿಗಾಗಿ ಹೊಂಚು ಹಾಕಿದ್ದ ಕೊಳವೆ ಬಾವಿ ಬಳಿ ನಿಂತಿರುವ ಭಗತ್ ಸಿಂಗ್ ಝುಗ್ಗಿಂಯಾ

ಆದರೆ 1990ರಲ್ಲಿ, ಆ ಲಿಸ್ಟಿನಲ್ಲಿ ಬರೆದಿದ್ದು ನಿಜವಾಗುವುದರಲ್ಲಿತ್ತು. ಅವರ ಮೂವರು ಮಕ್ಕಳು ಛಾವಣಿಯ ಮೇಲೆ ಕಾವಲಿಗಿದ್ದರು, ಪೊಲೀಸರು ಅವರಿಗೆ ಬಂದೂಕುಗಳನ್ನು ನೀಡಿದ್ದರು.ಆ ಸಮಯದಲ್ಲಿ ಸರ್ಕಾರವು ಪ್ರಾಣಕ್ಕೆ ಬೆದರಿಕೆ ಇರುವವರಿಗೆ ಸಹಾಯ ನೀಡುತ್ತಿತ್ತು ಮತ್ತು ಆತ್ಮರಕ್ಷಣೆಗಾಗಿ ಆಯುಧಗಳನ್ನು ಹೊಂದಲು ಅನುಮತಿಯನ್ನು ಸಹ ನೀಡುತ್ತಿತ್ತು.

“ಅವರು ನಮಗೆ ನೀಡಿದ್ದ ಬಂದೂಕುಗಳು ಅಷ್ಟೇನೂ ಒಳ್ಳೆಯ ಬಂದೂಕುಗಳಾಗಿರಲಿಲ್ಲ. ಹೀಗಾಗಿ ನಾನು 12 ಬೋರ್‌ನ ಶಾಟ್ ಗನ್ ಅನ್ನು ಎರವಲು ಪಡೆದೆ ಮತ್ತು ನಂತರ ಸ್ವತಃ ಒಂದು ಸೆಕೆಂಡ್ ಹ್ಯಾಂಡ್ ಕೂಡ ಖರೀದಿಸಿದೆ" ಎಂದು ಭಗತ್ ಸಿಂಗ್ ಆ ಅವಧಿಯನ್ನು ನೆನಪಿಸಿಕೊಳ್ಳುತ್ತಾರೆ.

ಅವರ ಮಗ 50 ವರ್ಷದ ಪರಮ್‌ಜಿತ್ ಹೇಳುತ್ತಾರೆ, "ಒಮ್ಮೆ, ನಾನು ಭಯೋತ್ಪಾದಕರಿಂದ ನನ್ನ ತಂದೆಗೆ ಬಂದಿದ್ದ ಬೆದರಿಕೆ ಪತ್ರವನ್ನು ತೆರೆದು ಓದಿದೆ.'ಅದರಲ್ಲಿ ನಿಮ್ಮ ಚಟುವಟಿಕೆಗಳನ್ನು ನಿಲ್ಲಿಸಿ ಇಲ್ಲವಾದಲ್ಲಿ ನಿಮ್ಮ ಇಡೀ ಕುಟುಂಬವು ಅಳಿಸಿಹೋಗುತ್ತದೆ.' ಎಂದು ಬರೆದಿತ್ತು. ನಾನು ಅದನ್ನು ಮತ್ತೆ ಯಾರೂ ಓದಿಲ್ಲವೆಂಬಂತೆ ಕಾಣಿಸುವ ಹಾಗೆ ಮತ್ತೆ ಲಕೋಟೆಯಲ್ಲಿಟ್ಟೆ. ಇದಕ್ಕೆ ನಮ್ಮ ತಂದೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಕುತೂಹಲವಿತ್ತು. ಅವರು ಅದನ್ನು ತಣ್ಣಗೆ ಓದಿ ಮಡಚಿ ತಮ್ಮ ಜೇಬಿನಲ್ಲಿರಿಸಿಕೊಂಡರು. ಕೆಲವು ಕ್ಷಣಗಳ ನಂತರ, ಅವರು ನಾವು ಮೂವರನ್ನು ಛಾವಣಿಗೆ ಕರೆದೊಯ್ದು ಎಚ್ಚರಿಕೆಯಿಂದಿರುವಂತೆ ಸೂಚಿಸಿದರು. ಆದರೆ ಕಾಗದದ ಕುರಿತು ಒಂದು ಮಾತನ್ನೂ ಆಡಲಿಲ್ಲ.”

ಆದರೆ 1990ರ ಆ ಬಿಕ್ಕಟ್ಟು ಬೆನ್ನು ಮೂಳೆಯಲ್ಲಿ ಚಳುಕು ಹುಟ್ಟಿಸುವಂತಿತ್ತು. ಈ ಧೈರ್ಯಶಾಲಿ ಕುಟುಂಬವು ಕೊನೆಯವರೆಗೂ ಹೋರಾಡುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಎಕೆ-47ಗಳು ಮತ್ತು ಇತರ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ತರಬೇತಿ ಪಡೆದ ಹಿಟ್ ಸ್ಕ್ವಾಡ್‌ನ ಗುಂಡಿನ ದಾಳಿಯೆದುರು ಅವರು ಬದುಕುಳಿಯುತ್ತಿರಲಿಲ್ಲ ಎನ್ನುವುದರಲ್ಲಿಯೂ ಸಂದೇಹವಿರಲಿಲ್ಲ.

ಆ ಸಮಯದಲ್ಲೇ ತೀವ್ರಗಾಮಿಗಳು ಅವರ ಹೆಸರನ್ನು ಕೊಳವೆ ಬಾವಿಯ ಕಟ್ಟೆಯ ಮೇಲೆ ಬರೆದು ಹೋಗಿದ್ದು."ಅವರಲ್ಲಿ ಒಬ್ಬ ಇತರರ ಕಡೆಗೆ ತಿರುಗಿ 'ಭಗತ್ ಸಿಂಗ್ ಝುಗ್ಗಿಂಯಾ ನಮ್ಮ ಗುರಿಯಾಗಿದ್ದಲ್ಲಿ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದ," ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೇಳುತ್ತಾರೆ. ನಂತರ ಹಿಟ್‌ ಸ್ಕ್ವಾಡ್ ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿ ಅಲ್ಲಿಂದ ತೆರಳಲು ನಿರ್ಧರಿಸಿತು.

ನಂತರ ತಿಳಿದು ಬಂದ ಸಂಗತಿಯೆಂದರೆ ಅಲ್ಲಿ ಬಂದಿದ್ದ ತೀವ್ರಗಾಮಿಗಳ ಪೈಕಿ ಒಬ್ಬನ ತಮ್ಮ ಭಗತ್‌ ಸಿಂಗ್‌ ಅವರಿಂದ ಸಹಾಯ ಪಡೆದ ಹಳ್ಳಿಗರಲ್ಲಿ ಒಬ್ಬನಾಗಿದ್ದ. ಮತ್ತು ಆತ ಪಟ್ವಾರಿಯಾಗಿ ಸರ್ಕಾರಿ ಸೇವೆಗೆ ಸೇರಿದ್ದ."ಅವರು ಹಿಂದೆ ಸರಿದ ಎರಡು ವರ್ಷಗಳವರಗೂ, ಅದೇ ಅಣ್ಣ ನನಗೆ ಸುಳಿವು ಮತ್ತು ಎಚ್ಚರಿಕೆಗಳನ್ನು ಕಳುಹಿಸುತ್ತಿದ್ದ" ಎಂದು ಭಗತ್ ಸಿಂಗ್ ನಗುತ್ತಾ ಹೇಳುತ್ತಾರೆ. ಯಾವಾಗ ಮತ್ತು ಎಲ್ಲಿಗೆ ಹೋಗಬಾರದು..." ಇದು ಅವರ ಜೀವಕ್ಕೆ ಹಾನಿಗೊಳಿಸುವ ಮತ್ತಷ್ಟು ಪ್ರಯತ್ನಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿತು.

Bhagat Singh with his wife Gurdev Kaur at their home in Ramgarh. Right: He has sold off his 12-bore gun as, he says, now even ‘a child could snatch it from my hands’
PHOTO • Vishav Bharti
Bhagat Singh with his wife Gurdev Kaur at their home in Ramgarh. Right: He has sold off his 12-bore gun as, he says, now even ‘a child could snatch it from my hands’
PHOTO • P. Sainath

ಭಗತ್ ಸಿಂಗ್ ತನ್ನ ಪತ್ನಿ ಗುರುದೇವ್ ಕೌರ್ ಜೊತೆ ರಾಮಗಢದ ತಮ್ಮ ಮನೆಯಲ್ಲಿ. ಬಲ: ಅವರು ಹೇಳುವಂತೆ ಅವರು ತನ್ನ 12 ಬೋರ್ ಗನ್ ಅನ್ನು ಮಾರಿದರು, 'ನಾನು ಈಗಿರುವ ಸ್ಥಿತಿಯಲ್ಲಿ ಒಂದು ಮಗು ಕೂಡಾ ಅದನ್ನು ನನ್ನ ಕೈಯಿಂದ ಕಸಿದುಕೊಳ್ಳಬಹುದು '

ಕುಟುಂಬವು ಘಟನೆಯ ಬಗ್ಗೆ ಮಾತನಾಡುವ ರೀತಿ ಬಹುತೇಕ ಬೆದರಿದ ದನಿಯಲ್ಲಿತ್ತು. ಅದರ ಕುರಿತ ಭಗತ್‌ ಸಿಂಗ್‌ ಅವರ ವಿಶ್ಲೇಷಣೆ ಸಾಕಷ್ಟು ಚಿಕಿತ್ಸಕ ದೃಷ್ಟಿಯಲ್ಲಿತ್ತು. ಅವರು ಈ ವಿಷಯಕ್ಕಿಂತಲೂ ದೇಶ ವಿಭಜನೆಯ ಕುರಿತು ಮಾತನಾಡುವಾಗ ಹೆಚ್ಚು ಭಾವುಕರಾಗಿದ್ದರು. ಅವರ ಪತ್ನಿ ಈ ಘಟನೆ ಆ ಸಮಯದಲ್ಲಿ ಕುರಿತು ಹೆದರಿರಲಿಲ್ಲವೆ? "ನಾವು ದಾಳಿಯನ್ನು ಎದುರಿಸಬಹುದು ಎಂಬ ವಿಶ್ವಾಸವಿತ್ತು" ಎಂದು 78 ವರ್ಷದ ಗುರುದೇವ್ ಕೌರ್ ಅತ್ಯಂತ ಶಾಂತವಾಗಿ ಹೇಳುತ್ತಾರೆ. ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಒಕ್ಕೂಟದ ಹಿರಿಯ ಕಾರ್ಯಕರ್ತೆಯಾದ ಅವರು ಹೇಳುತ್ತಾರೆ: "ನನ್ನ ಮಕ್ಕಳು ಬಲಶಾಲಿಗಳಾಗಿದ್ದರು, ನನಗೆ ಯಾವುದೇ ಭಯವಿರಲಿಲ್ಲ - ಮತ್ತು ಊರು ಕೂಡಾ ನಮ್ಮ ಬೆಂಬಲಕ್ಕಿತ್ತು."

ಗುರುದೇವ್ ಕೌರ್ 1961ರಲ್ಲಿ ಭಗತ್ ಸಿಂಗ್ ಅವರನ್ನು ವಿವಾಹವಾದರು - ಅದು ಅವರ ಎರಡನೇ ಮದುವೆ. ಅವರ ಮೊದಲ ಪತ್ನಿ 1944ರಲ್ಲಿ ಮದುವೆಯಾದ ಕೆಲವು ವರ್ಷಗಳ ನಂತರ ನಿಧನರಾದರು ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದಾರೆ. ಗುರುದೇವ್ ಕೌರ್ ಮತ್ತು ಅವರಿಗೆ ಅವರ ಮದುವೆಯಿಂದ ಮೂವರು ಗಂಡು ಮಕ್ಕಳು ಜನಿಸಿದ್ದರು, ಆದರೆ ಹಿರಿಯ ಮಗ ಜಸ್ವೀರ್ ಸಿಂಗ್ 2011ರಲ್ಲಿ ತನ್ನ 47ನೇ ವಯಸ್ಸಿನಲ್ಲಿ ನಿಧನರಾದರು. ಇನ್ನಿಬ್ಬರು ಈಗ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ 55 ವರ್ಷದ ಕುಲದೀಪ್ ಸಿಂಗ್ ಮತ್ತು ಅಪ್ಪ ಅಮ್ಮನೊಡನೆ ವಾಸಿಸುತ್ತಿರುವ ಪರಮಜಿತ್.

ಅವರ ಬಳಿ ಈಗಲೂ 12 ಬೋರ್‌ ಗನ್‌ ಇದೆಯೇ?: ಇಲ್ಲ ಈಗ ಅದು ನನ್ನ ಬಳಿಯಿಲ್ಲ.ಈಗ ಅದರಿಂದ ಏನು ಪ್ರಯೋಜನವಿದೆ-ಸಣ್ಣ ಮಗು ಕೂಡ ಅದನ್ನು ನನ್ನ ಕೈಯಿಂದ ಕಿತ್ತುಕೊಳ್ಳಬಹುದು,” ಎಂದು 93 ವರ್ಷದ ಹಿರಿಯಜ್ಜ ನಗುತ್ತಾರೆ.

1992ರ ವಿಧಾನಸಭಾ ಚುನಾವಣೆಗಳು ಅಪಾಯವನ್ನು ಮರಳಿ ಅವರ ಮನೆ ಬಾಗಿಲಿಗೆ ತಂದವು. ಪಂಜಾಬಿನಲ್ಲಿ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಖಲಿಸ್ತಾನಿಗಳು ಚುನಾವಣೆಯನ್ನು ನಿಷ್ಕ್ರಿಯಗೊಳಿಸುವುದರತ್ತ ಅಷ್ಟೇ ಸ್ಪರ್ಧೆ ನೀಡಿದರು, ಅವರು ಅಭ್ಯರ್ಥಿಗಳನ್ನು ಕೊಲ್ಲಲು ಪ್ರಾರಂಭಿಸಿದರು. ಭಾರತೀಯ ಚುನಾವಣಾ ಕಾನೂನಿನ ಪ್ರಕಾರ, ಪ್ರಚಾರದ ಸಮಯದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಅಭ್ಯರ್ಥಿಯ ಸಾವು ಆ ಕ್ಷೇತ್ರದಲ್ಲಿ ಚುನಾವಣೆಯನ್ನು 'ಮುಂದೂಡಲು' ಅಥವಾ ಹಿಂತೆಗೆದುಕೊಳ್ಳಲು ಕಾರಣವಾಗುತ್ತದೆ. ಪ್ರತಿ ಅಭ್ಯರ್ಥಿಯೂ ಜೀವವೂ ಅಪಾಯದಲ್ಲಿತ್ತು.

ವಾಸ್ತವವಾಗಿ, ಹಿಂದೆಂದೂ ಕಂಡಿರದಂತಹ ಮಟ್ಟದ ಹಿಂಸಾಚಾರವು 1991ರ ಜೂನ್ ತಿಂಗಳಿನಲ್ಲಿ ಈ ಚುನಾವಣೆಗಳನ್ನು ಮುಂದೂಡಲು ಕಾರಣವಾಯಿತು. ಆ ವರ್ಷದ ಮಾರ್ಚ್ ಮತ್ತು ಜೂನ್ ನಡುವೆ, ಏಷ್ಯನ್ ಸರ್ವೇ ಜರ್ನಲ್ ನಲ್ಲಿ ಗುರುಹರ್ಪಾಲ್ ಸಿಂಗ್ ಅವರ ಒಂದು ಪ್ರಬಂಧವು ಹೇಳುವಂತೆ "24 ರಾಜ್ಯ ಮತ್ತು ಸಂಸದೀಯ ಅಭ್ಯರ್ಥಿಗಳು ಕೊಲ್ಲಲ್ಪಟ್ಟರು; ಎರಡು ರೈಲುಗಳಲ್ಲಿ 76 ಪ್ರಯಾಣಿಕರನ್ನು ಕಗ್ಗೊಲೆ ಮಾಡಲಾಯಿತು; ಮತ್ತು ಮತದಾನಕ್ಕೆ ಒಂದು ವಾರ ಮೊದಲು ಪಂಜಾಬ್ ಅನ್ನು ಗಲಭೆ ಪೀಡಿತ ಪ್ರದೇಶವೆಂದು ಘೋಷಿಸಲಾಯಿತು."

Bhagat Singh, accompanied by a contingent of security men, campaigning in the Punjab Assembly poll campaign of 1992, which he contested from Garhshankar constituency
PHOTO • Courtesy: Bhagat Singh Jhuggian Family

ಭಗತ್ ಸಿಂಗ್, ಭದ್ರತಾ ಸಿಬ್ಬಂದಿಯೊಂದಿಗೆ, 1992ರ ಪಂಜಾಬ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪ್ರಚಾರ ನಡೆಸಿದರು, ಅವರು 1992ರಲ್ಲಿ ಗಢಶಂಕರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು

ಆದ್ದರಿಂದ ತೀವ್ರಗಾಮಿಗಳ ಗುರಿ ಸ್ಪಷ್ಟವಾಗಿತ್ತು. ಸಾಧ್ಯವಿರುವಷ್ಟೂ ಅಭ್ಯರ್ಥಿಗಳನ್ನು ಕೊಲ್ಲುವುದು. ಇದಕ್ಕೆ ಸ್ಪಂದನೆಯಾಗಿ ಸರ್ಕಾರ ಅಭ್ಯರ್ಥಿಗಳಿಗೆ ಅಭೂತಪೂರ್ವ ಮಟ್ಟದ ಭದ್ರತೆ ಒದಗಿಸಿತು. ಅವರಲ್ಲಿ, ಘಢಶಂಕರ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಭಗತ್ ಸಿಂಗ್ ಝುಗ್ಗಿಂಯಾ ಕೂಡಾ ಒಬ್ಬರಾಗಿದ್ದರು. ಅಕಾಲಿ ದಳದ ಎಲ್ಲಾ ಬಣಗಳು ಮತದಾನವನ್ನು ಬಹಿಷ್ಕರಿಸಿದವು. "ಪ್ರತಿಯೊಬ್ಬ ಅಭ್ಯರ್ಥಿಗೂ 32 ವ್ಯಕ್ತಿಗಳ ಭದ್ರತಾ ತುಕಡಿಯನ್ನು ಒದಗಿಸಲಾಗಿತ್ತು, ಮತ್ತು ಹೆಚ್ಚು ಪ್ರಮುಖ ನಾಯಕರಿಗೆ ಈ ಭದ್ರತಾ ಸಿಬಂಧಿಯ ಸಂಖ್ಯೆ 50 ಅಥವಾ ಅದಕ್ಕಿಂತ ಹೆಚ್ಚಾಗಿತ್ತು." ಸಹಜವಾಗಿ, ಇದೆಲ್ಲವು ಮತದಾನದ ಅವಧಿಗೆ ಮಾತ್ರವಾಗಿತ್ತು.

ಭಗತ್ ಸಿಂಗ್ ಅವರ 32 ಜನರ ತುಕಡಿ ಏನು ಮಾಡುತ್ತಿತ್ತು? "ಇಲ್ಲಿನ ನನ್ನ ಪಕ್ಷದ ಕಚೇರಿಯಲ್ಲಿ 18 ಭದ್ರತಾ ಸಿಬ್ಬಂದಿ ಇದ್ದರು. ಇನ್ನೂ 12 ಜನರು ಯಾವಾಗಲೂ ನನ್ನೊಂದಿಗಿರುತ್ತಿದ್ದರು ಮತ್ತು ನಾನು ಪ್ರಚಾರಕ್ಕೆ ಹೋದಲ್ಲೆಲ್ಲಾ ಬರುತ್ತಿದ್ದರು. ಮತ್ತು ಇಬ್ಬರು ಯಾವಾಗಲೂ ನನ್ನ ಕುಟುಂಬದೊಂದಿಗೆ ಮನೆಯಲ್ಲಿರುತ್ತಿದ್ದರು." ಚುನಾವಣೆಗೆ ಮೊದಲು ವರ್ಷಗಳ ಕಾಲ ಭಯೋತ್ಪಾದಕ ಹಿಟ್ ಲಿಸ್ಟಿನಲ್ಲಿದ್ದ ಅವರಿಗೆ ಅಪಾಯಗಳು ಹೆಚ್ಚಿದ್ದವು. ಆದರೆ ಅವರು ಇದೆಲ್ಲವನ್ನೂ ದಾಟಿ ಬಂದರು. ಸೇನೆ, ಅರೆಸೈನಿಕ ಪಡೆ ಮತ್ತು ಪೊಲೀಸ್ ಸಿಬ್ಬಂದಿಯ ಬೃಹತ್ ಭದ್ರತಾ ಕಾರ್ಯಾಚರಣೆಯು ತೀವ್ರಗಾಮಿಗಳನ್ನು ಎದುರಿಸಿತು - ಮತ್ತು ಹೆಚ್ಚಿನ ಸಾವು-ನೋವುಗಳಿಲ್ಲದೆ ಚುನಾವಣೆಗಳು ನಡೆದವು.

"ಅವರು 1992ರ ಚುನಾವಣೆಯಲ್ಲಿ ತಮ್ಮನ್ನು ತಾವು ಹೆಚ್ಚಿನ ಆದ್ಯತೆಯ ಗುರಿಯನ್ನಾಗಿ ಮಾಡಿಕೊಳ್ಳುವ ಮೂಲಕ ಸ್ಪರ್ಧಿಸಿದ್ದರು, ಖಲಿಸ್ತಾನಿಗಳ ಗಮನವನ್ನು ತಮ್ಮತ್ತ ತಿರುಗಿಸುವ ಮೂಲಕ ತಮ್ಮ ಕಿರಿಯ ಕಾಮ್ರೇಡ್‌ಗಳನ್ನು ಉಳಿಸುವುದು ಸಾಧ್ಯವೆಂದು ಅವರು ನಂಬಿದ್ದರು" ಎಂದು ಪರಮ್‌ಜಿತ್ ಹೇಳುತ್ತಾರೆ.

ಭಗತ್ ಸಿಂಗ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೆದುರು ಸೋತರು. ಆದರೆ ಅವರು ಇತರೆಡೆ ಹಲವು ಗೆಲುವು ಸಾಧಿಸಿದ್ದರು.1957ರಲ್ಲಿ ರಾಮಗಢ ಮತ್ತು ಚಕ್ ಗುಜ್ಜರನ್ ಎಂಬ ಎರಡು ಹಳ್ಳಿಗಳ ಸರಪಂಚ್ ಆಗಿ ಚುನಾಯಿತರಾಗಿದ್ದರು. ಅವರು ನಾಲ್ಕು ಬಾರಿ ಸರಪಂಚ್ ಆಗಿದ್ದರು, ಅವರ ಕೊನೆಯ ಅವಧಿಯ 1998ರಲ್ಲಿತ್ತು.

ಅವರು 1978ರಲ್ಲಿ ನವಾನಶಹರ್ (ಈಗ ಶಹೀದ್ ಭಗತ್ ಸಿಂಗ್ ನಗರ) ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಆಯ್ಕೆಯಾದರು.ಆ ಗೆಲುವು ಅಕಾಲಿ ದಳದ ನಿಷ್ಠ ಸನ್ಸರ್ ಸಿಂಗ್ ಎನ್ನುವ ಪ್ರಬಲ ಭೂಮಾಲೀಕನನ್ನು ಸೋಲಿಸುವ ಮೂಲಕ ದೊರೆತಿತ್ತು.1998ರಲ್ಲಿ, ಅವರು ಮತ್ತೆ ಈ ಹುದ್ದೆಗೆ ಸರ್ವಾನುಮತದಿಂದ ಆಯ್ಕೆಯಾದರು.

*****

After being expelled from school in Class 3, Bhagat Singh Jhuggian never returned to formal education, but went to be a star pupil in the school of hard knocks (Illustration: Antara Raman)

ಭಗತ್‌ ಸಿಂಗ್‌ ಝುಗ್ಗಿಂಯಾ ಅವರನ್ನು 3ನೇ ತರಗತಿಯಲ್ಲಿ ಶಾಲೆಯಿಂದ ಹೊರಹಾಕಿದ ನಂತರ ಅವರು ಮತ್ತೆ ಶಾಲೆಗೆ ಮರಳಲಿಲ್ಲ, ಆದರೆ ಅವರು ಇಂದಿಗೂ ಅಧಿಕಾರದ ಮುಖದ ಮೇಲೆ ಬಲವಾದ ಹೊಡೆತ ನೀಡಿದವರ ಶಾಲೆಯ ಒಬ್ಬ ಸ್ಟಾರ್ ಶಿಷ್ಯನಾಗಿ ಉಳಿದಿದ್ದಾರೆ.

ಅವರನ್ನು ಥಳಿಸಿ ಶಾಲೆಯಿಂದ ಹೊರಹಾಕಿದ ನಂತರದ ಆ ಎಂಟು ದಶಕಗಳ ಕಾಲವೂ ಭಗತ್ ಸಿಂಗ್ ಝುಗ್ಗಿಂಯಾ ರಾಜಕೀಯವಾಗಿ ಜಾಗೃತರಾಗಿದ್ದರು, ಎಚ್ಚರದಿಂದಿದ್ದರು ಮತ್ತು ಸಕ್ರಿಯರಾಗಿದ್ದರು. ರೈತರ ಪ್ರತಿಭಟನೆಗಳಲ್ಲಿ ನಡೆಯುತ್ತಿರುವ ಎಲ್ಲವನ್ನೂ ಅವರು ತಿಳಿಯಲು ಬಯಸುತ್ತಾರೆ. ಅವರು ತಮ್ಮ ಪಕ್ಷದ ರಾಜ್ಯ ನಿಯಂತ್ರಣ ಆಯೋಗದಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಜಲಂಧರ್‌ನ ದೇಶ್ ಭಗತ್ ಯಾದ್‌ಗಾರ್ ಸಭಾಂಗಣವನ್ನು ನಡೆಸುವ ಸಂಸ್ಥೆಯ ಟ್ರಸ್ಟಿಯೂ ಹೌದು. ಇತರ ಯಾವುದೇ ಸಂಸ್ಥೆಗಳಿಗಿಂತ ಹೆಚ್ಚಾಗಿ, ಡಿಬಿವೈಎಚ್ ಪಂಜಾಬ್‌ನ ಕ್ರಾಂತಿಕಾರಿ ಚಳುವಳಿಗಳನ್ನು ದಾಖಲಿಸುವುದು, ದಾಖಲೆಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಸ್ಮರಣೀಯವಾಗಿಸುವ ಕೆಲಸವನ್ನು ಮಾಡುತ್ತದೆ. ಇದು ಗದರ್ ಚಳುವಳಿಯ ಕ್ರಾಂತಿಕಾರಿಗಳು ಸ್ಥಾಪಿಸಿದ ಟ್ರಸ್ಟ್.

"ಇಂದಿಗೂ,ಈ ಪ್ರದೇಶದಿಂದ ರೈತರ ಸಮಸ್ಯೆಗಳ ಕುರಿತು ಹೋರಾಡಲು (ದೆಹಲಿಯ ಗಡಿಯಲ್ಲಿರುವ ಪ್ರತಿಭಟನಾ ಶಿಬಿರಗಳಿಗೆ ಸೇರಲು ಹೊರಡುವಂತಹ ಮೆರವಣಿಗೆಗಳು) ಜಾಥಾಗಳು ಹೊರಡುವ ಮೊದಲು, ಕಾಮ್ರೇಡ್ ಭಗತ್ ಸಿಂಗ್ ಅವರ ಮನೆಗೆ ಅವರ ಆಶೀರ್ವಾದ ಪಡೆಯಲು ಹೋಗುತ್ತಾರೆ" ಎಂದು ಅವರ ಸ್ನೇಹಿತ ದರ್ಶನ್ ಸಿಂಗ್ ಮಟ್ಟು ಹೇಳುತ್ತಾರೆ. ಸಿ.ಪಿ.ಐ.ಎಂ.ನ ಪಂಜಾಬ್ ರಾಜ್ಯ ಸಮಿತಿಯ ಸದಸ್ಯರಾಗಿರುವ ಮಟ್ಟು ಅವರು "ಹಿಂದಿನ ದಿನಳಿಗೆ ಹೋಲಿಸಿದರೆ ದೈಹಿಕವಾಗಿ ನಿರ್ಬಂಧಿತರಾಗಿದ್ದಾರೆ. ಆದರೆ ಅವರ ಬದ್ಧತೆ ಮತ್ತು ತೀವ್ರತೆ ಅಂದಿನಂತೆಯೇ ಇಂದೂ ಬಲವಾಗಿದೆ.ಈಗಲೂ ಅವರು ರಾಮಗಢ ಮತ್ತು ಗಢಶಂಕರ್‌ನಲ್ಲಿ, ಶಹಜಹಾನ್‌ಪುರದಲ್ಲಿ ಬಿಡಾರ ಹೂಡಿರುವ ಪ್ರತಿಭಟನಾ ನಿರತ ರೈತರಿಗಾಗಿ ಅಕ್ಕಿ, ತೈಲ, ಬೇಳೆ, ಇತರ ವಸ್ತುಗಳು ಮತ್ತು ಹಣವನ್ನು ಸಂಗ್ರಹಿಸುವ ಪ್ರಯತ್ನದ ಭಾಗವಾಗಿದ್ದಾರೆ. ಜೊತೆಗೆ ತಮ್ಮ ಪಾಲಿನದನ್ನೂ ನೀಡಿದ್ದಾರೆ"

ನಾವು ಹೊರಡಲು ಅನುವಾದಾಗ ನಮ್ಮನ್ನು ಬೀಳ್ಕೊಡಲು ತಮ್ಮ ವಾಕರ್‌ ಸಹಾಯದಿಂದ ನಡೆದು ಬಂದರು. ಭಗತ್‌ ಸಿಂಗ್‌ ತಾವು ಯಾವು ದೇಶದ ಸ್ವಾತಂತ್ರ್ಯದ ಹೋರಾಟಕ್ಕಾಗಿ ಹೊರಾಡಿದರೂ ಆ ದೇಶದ ಇಂದಿನ ಸ್ಥಿತಿಯ ಕುರಿತು ಸಂತೃಪ್ತಿ ಹೊಂದಿಲ್ಲದಿರುವದನ್ನು ನಾವು ತಿಳಿಯಬೇಕೆಂದು ಬಯಸಿದರು. ರಾಷ್ಟ್ರವನ್ನು ನಡೆಸುತ್ತಿರುವ ಯಾರೂ ಸ್ವಾತಂತ್ರ್ಯ ಚಳುವಳಿಯ ಯಾವುದೇ ಪರಂಪರೆಯನ್ನು ಹೊಂದಿಲ್ಲವೆಂದು ಅವರು ಹೇಳುತ್ತಾರೆ. ಅವರುಗಳು ಪ್ರತಿನಿಧಿಸುತ್ತಿರುವ ರಾಜಕೀಯ ಶಕ್ತಿಗಳು ಎಂದೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ. ಅವರಲ್ಲಿನ ಒಬ್ಬನೂ ಕೂಡಾ. ಅವರನ್ನು ಅಧಿಕಾರದಿಂದ ಹೊರ ಹಾಕದಿದ್ದರೆ ಅವರು ಈ ದೇಶವನ್ನು ನಾಶಪಡಿಸುತ್ತಾರೆ" ಎಂದು ಆತಂಕದಿಂದ ಹೇಳುತ್ತಾರೆ.

ಮತ್ತು ಮುಂದುವರೆದು ಹೇಳುತ್ತಾರೆ “ಆದರೆ ನಾನು ಹೇಳುವುದನ್ನು ನಂಬಿ, ಇವರ ಸಾಮ್ರಾಜ್ಯದ ಸೂರ್ಯನೂ ಮುಳುಗಲಿದ್ದಾನೆ.”

ಲೇಖಕರ ಟಿಪ್ಪಣಿ: ಚಂಡೀಗಢದ ದಿ ಟ್ರಿಬ್ಯೂನ್‌ನ ವಿಶವ್ ಭಾರ್ತಿ ಮತ್ತು ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಸೋದರಳಿಯ ಪ್ರೊ. ಜಗಮೋಹನ್ ಸಿಂಗ್ ಅವರಿಗೆ ಅವರ ಅಮೂಲ್ಯ ಮಾಹಿತಿಗಳು ಮತ್ತು ಸಹಾಯಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು. ಅಜ್ಮೀರ್ ಸಿಧು ಅವರ ದಯಾಪರ ಸಹಾಯ ಮತ್ತು ಒಳನೋಟಗಳಿಗಾಗಿ ಅವರಿಗೂ ಧನ್ಯವಾದಗಳು ಸಲ್ಲುತ್ತವೆ.

ಅನುವಾದ: ಶಂಕರ ಎನ್. ಕೆಂಚನೂರು

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N Kenchanuru