"ನೋಡಿ, ನಮ್ಮ ಮೋಟಾರ್ ಕೆಸರಿನಲ್ಲಿ ಹೂತುಹೋಗಿದೆ." ದೇವೇಂದ್ರ ರಾವತ್ ಕೆಸರಿನಲ್ಲಿ ಸಿಲುಕಿದ ತನ್ನ ಪಂಪಿಂಗ್ ಸೆಟ್‌ ಹೊರತೆಗಯಲು ಪ್ರಯತ್ನಿಸುತ್ತಿರುವಾಗ ಸ್ವಲ್ಪ ಸಿಟ್ಟಿನಲ್ಲಿರುವಂತೆ ಕಾಣುತ್ತಿದ್ದರು.  ಅವರು ತಿಂಗಳುಳಿಂದ ಮೋಟಾರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಮಧ್ಯಪ್ರದೇಶದ ಸುಂಧ್ ಗ್ರಾಮದ ಈ 48 ವರ್ಷದ ರೈತ ಹೇಳುತ್ತಾರೆ, “ಪ್ರವಾಹದಿಂದ ಹೊಲಗಳಲ್ಲಿ ಉಂಟಾದ ಸವಕಳಿಯಿಂದಾಗಿ ನಮ್ಮ ಮೂರು ಮೋಟಾರ್‌ಗಳು ಮಣ್ಣಿನಲ್ಲಿ ಹೂತುಹೋಗಿವೆ. ಒಂದು ಬಾವಿಯೂ ಮುಚ್ಚಿ ಹೋಗಿದೆ. ನಾವು ಏನು ಮಾಡಬೇಕು?"

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ನರ್ವಾರ್ ತೆಹಸಿಲ್‌ನಲ್ಲಿ ಬರುವ ಈ ಗ್ರಾಮವು ಸಿಂಧ್ ನದಿಯ ಎರಡು ತೊರೆಗಳ ನಡುವೆಯಿದೆ. ಆಗಸ್ಟ್ 2021ರಲ್ಲಿ, ಸಿಂಧ್ ನದಿಯ ಪ್ರವಾಹವು 635 ಜನರ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ದೊಡ್ಡ ವಿನಾಶವನ್ನು ಉಂಟುಮಾಡಿತು (ಜನಗಣತಿ 2011). ದೇವೇಂದ್ರ ಹೇಳುತ್ತಾರೆ, “ಇಂತಹ  ನೆರೆಯನ್ನು ನಾವು ಹಿಂದೆಂದೂ ನೋಡಿರಲಿಲ್ಲ. ನಮ್ಮ ಗ್ರಾಮದ ಸುತ್ತಲೂ ನೀರು ತುಂಬಿತ್ತು. ನಮ್ಮ 30 ಬಿಘಾ [ಸುಮಾರು 18 ಎಕರೆ] ಭತ್ತದ ಬೆಳೆ ಪ್ರವಾಹದಿಂದ ನಾಶವಾಯಿತು. ನನ್ನ ಕುಟುಂಬದ ಆರು ಬಿಘಾ ಜಮೀನು [ಸುಮಾರು 3.7 ಎಕರೆ] ಶಾಶ್ವತವಾಗಿ ಕೊಚ್ಚಿಹೋಗಿವೆ.”

ಎಲ್ಲಾ ಕಡೆ ನೀರಿನಿಂದ ಆವೃತವಾಗಿರುವ, ಕಾಳಿ ಪಹಾರಿ ಪಂಚಾಯತ್‌ನ ವ್ಯಾಪ್ತಿಯ ಸುಂಧ್ ಹೆಸರಿನ ಈ ಊರು ದ್ವೀಪದಂತಿದೆ. ಇಲ್ಲಿನ ಜನರು ಸಾಮಾನ್ಯ ದಿನಗಳಲ್ಲಿಯೂ ಹೆಚ್ಚುವರಿ ನೀರು ಬಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಈಜುತ್ತಾ ಅಥವಾ ನೀರಿನಲ್ಲಿ ಮುಳುಗಿ ರಸ್ತೆ ದಾಟಬೇಕು.

ದೇವೇಂದ್ರ ಹೇಳುವ ಪ್ರಕಾರ, "ಪ್ರವಾಹದ ಸಮಯದಲ್ಲಿ, ಊರು ಮೂರು ದಿನಗಳವರೆಗೆ ಪ್ರವಾಹ ನೀರಿಲ್ಲಿ ಮುಳುಗಿತ್ತು." ಆ ಸಮಯದಲ್ಲಿ ಸರ್ಕಾರಿ ದೋಣಿ ಬಂದು ಜನರನ್ನು ಇಲ್ಲಿಂದ ಹೊರಕ್ಕೆ ಕರೆದೊಯ್ದಿದ್ದರು, ಆದರೆ 10-12 ಜನರು ಊರಿನಲ್ಲೇ ಉಳಿದರು. ಜನರು ಹತ್ತಿರದ ಮಾರುಕಟ್ಟೆಯಲ್ಲಿ ಅಥವಾ ಸಂಬಂಧಿಕರ ಹಳ್ಳಿಯಲ್ಲಿ ಉಳಿದುಕೊಂಡರು. ಪ್ರವಾಹದ ಸಂದರ್ಭದಲ್ಲಿ ವಿದ್ಯುತ್ ಕೂಡ ಸ್ಥಗಿತಗೊಂಡಿತ್ತು, ಅದು ಒಂದು ತಿಂಗಳ ನಂತರ ಮರಳಿ ಬಂದಿತು ಎಂದು ದೇವೇಂದ್ರ ಹೇಳುತ್ತಾರೆ.

PHOTO • Rahul

ಸುಂಧ್ ಗ್ರಾಮದ ದೇವೇಂದ್ರ ರಾವತ್ ಅವರು ಸಿಂಧ್ ನದಿಯಲ್ಲಿ ಸಿಲುಕಿದ ಮೋಟಾರನ್ನು ಹಿಂದೆಗೆಯಲು ಪ್ರಯತ್ನಿಸುತ್ತಿದ್ದಾರೆ

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ , ಮೇ 14 ಮತ್ತು ಜುಲೈ 21ರ ನಡುವೆ, ಪಶ್ಚಿಮ ಮಧ್ಯಪ್ರದೇಶದಲ್ಲಿ ಶೇಕಡಾ 20ರಿಂದ 59ರಷ್ಟು ಕಡಿಮೆ ಮಳೆಯಾಗಿದೆ.

ಆದಾಗ್ಯೂ, ಜುಲೈ 28 ಮತ್ತು ಆಗಸ್ಟ್ 4ರ ನಡುವೆ, ಇದು ಸರಾಸರಿ ಮಳೆಯ 60 ಪ್ರತಿಶತ ಅಥವಾ ವಾಡಿಕೆಗಿಂತಲೂ ಹೆಚ್ಚಿನ ಮಳೆಯನ್ನು ಪಡೆದಿದೆ. ಈ ಕಾರಣದಿಂದಾಗಿ, ಸಿಂಧ್‌ನ ಎರಡು ದೊಡ್ಡ ಅಣೆಕಟ್ಟುಗಳಾದ ಮಡಿಖೇಡಾದ ಅಟಲ್ ಸಾಗರ್ ಅಣೆಕಟ್ಟು ಮತ್ತು ನಾರ್ವಾರ್‌ನ ಮೋಹಿನಿ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದ್ದು, ಊರು ಜಲಾವೃತಗೊಂಡಿದೆ. ಅಟಲ್ ಸಾಗರ್ ಅಣೆಕಟ್ಟಿನ ಎಸ್‌ಡಿಒ ಜಿಎಲ್ ಬೈರಾಗಿ, “ಅಣೆಕಟ್ಟನ್ನು ತೆರೆಯುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿರಲಿಲ್ಲ. ಅಣೆಕಟ್ಟೆ ಉಳಿಸಲು ನೀರು ಬಿಡಲೇಬೇಕಿತ್ತು. 2021ರ ಆಗಸ್ಟ್ 2 ಮತ್ತು 3ರಂದು ಭಾರೀ ಮಳೆಯಾಗಿದ್ದರಿಂದ ಇಂತಹ ಪರಿಸ್ಥಿತಿಗಳು ಉದ್ಭವಿಸಿದವು.”

ಮಧ್ಯಪ್ರದೇಶದಲ್ಲಿ ವಿಪರೀತ ಮಳೆಯಾದರೆ ಅದು ಸಿಂಧ್ ನದಿಯ ಮೇಲೆ ತುಲನಾತ್ಮಕವಾಗಿ ಹೆಚ್ಚು ಪರಿಣಾಮ ಬೀರುತ್ತದೆ. ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯಲ್ಲಿರುವ ಬರ್ಕತುಲ್ಲಾ ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ನದಿಗಳ ಪರಿಣಿತ ವಿಪಿನ್ ವ್ಯಾಸ್ ಹೇಳುತ್ತಾರೆ, “ಸಿಂಧ್ ಗಂಗಾ ಜಲಾನಯನ ಪ್ರದೇಶದ ಒಂದು ಭಾಗವಾಗಿದೆ. ಇದು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತದೆ ಮತ್ತು ಹಿಮಾಲಯದ ನದಿಯಲ್ಲ; ಮತ್ತು ಇದರಿಂದಾಗಿ ಈ ನದಿ ಮಳೆ ನೀರಿನ ಮೇಲೆ ಅವಲಂಬಿತವಾಗಿದೆ.”

ದೇವೇಂದ್ರ ಅವರ ಪ್ರಕಾರ, ಈ ವಿಪತ್ತು ಬೆಳೆ ಚಕ್ರದ ಮೇಲೂ ಪರಿಣಾಮ ಬೀರಿದೆ, "ಭತ್ತ ಮತ್ತ್ ಎಳ್ಳು ಬೆಳೆಗಳು ಹಾಳಾಗಿವೆ, ನಮಗೆ ಈ ಬಾರಿ ಗೋಧಿ ಕೃಷಿಯನ್ನು ಅಷ್ಟು ಚೆನ್ನಾಗಿ ಮಾಡಲು ಸಾಧ್ಯವಾಗಲಿಲ್ಲ." ಸಿಂಧ್ ಕರಾವಳಿ ಪ್ರದೇಶಗಳಲ್ಲಿ ಸಾಸಿವೆ ಬೆಳೆಯಲಾಗುತ್ತದೆ. ಅತಿವೃಷ್ಟಿಯಿಂದಾಗಿ ಸಾಸಿವೆ ಬೆಳೆಯುವ ಪ್ರದೇಶ ಹೆಚ್ಚಿದೆ ಎನ್ನುತ್ತಾರೆ ಸ್ಥಳೀಯ ಹಲವು ರೈತರು.

PHOTO • Rahul
PHOTO • Aishani Goswami

ಎಡ: ದೇವೇಂದ್ರ ಮತ್ತು ಅವರ ಸೋದರಳಿಯ ರಾಮನಿವಾಸ್ ರಾವತ್ ಮತ್ತು ಇನ್ನೊಬ್ಬ ಗ್ರಾಮಸ್ಥರು ಪ್ರವಾಹದಿಂದ ನಾಶವಾದ ಜಮೀನಿನ ಮುಂದೆ ನಿಂತಿದ್ದಾರೆ. ಬಲ: ರಾಮ್‌ನಿವಾಸ್ ರಾವತ್ (ಬಿಳಿ ಅಂಗಿ) ಹೇಳುತ್ತಾರೆ, 'ಋತುಮಾನದ ಏರಿಳಿತಗಳಿಂದಾಗಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆಗಳು ನಾಶವಾಗುತ್ತವೆ'

ಹವಾಮಾನ ವೈಪರೀತ್ಯದಿಂದ ಆಗಿರುವ ಹಾನಿಯ ಬಗ್ಗೆ ಮಾತನಾಡಿದ ದೇವೇಂದ್ರ ಅವರ ಸೋದರಳಿಯ ರಾಮ್‌ನಿವಾಸ್, “ಋತುಮಾನದ ಏರುಪೇರುಗಳಿಂದಾಗಿ, ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆಗಳು ನಾಶವಾಗುತ್ತವೆ. ಇದಲ್ಲದೆ, ಹೆಚ್ಚಿನ ಶಾಖದಿಂದ [ಸಸ್ಯಗಳಿಗೆ] ಹಾನಿಯಾಗುವ ಅಪಾಯವಿದೆ."

ಪ್ರವಾಹದ ನಂತರ ಗ್ರಾಮದ ಪಟವಾರಿ ಮತ್ತು ಸರಪಂಚರು ಗ್ರಾಮಸ್ಥರ ಸ್ಥಿತಿಗತಿ ವಿಚಾರಿಸಲು ಬಂದಿದ್ದು, ಆಗ ಪರಿಹಾರ ನೀಡುವುದಾಗಿ ಹೇಳಿದ್ದರು ಎಂದು ಅವರು ಹೇಳುತ್ತಾರೆ.

ಹಾನಿಗೊಳಗಾದ ಭತ್ತದ ಬೆಳೆಗೆ ಅವರ ಕುಟುಂಬವು ಪ್ರತಿ ಬಿಘಾ ಒಂದಕ್ಕೆ 2,000 ರೂ.ನಂತೆ ಪರಿಹಾರವನ್ನು ಪಡೆದುಕೊಂಡಿದೆ ಎಂದು ದೇವೇಂದ್ರ ಹೇಳುತ್ತಾರೆ. ನೆರೆಮನೆಯ ರಾಮ್‌ನಿವಾಸ್, “ಪ್ರವಾಹದಿಂದ ನಮ್ಮ ಭತ್ತದ ಬೆಳೆ ನಾಶವಾಗಿರದಿದ್ದರೆ, ಅದನ್ನು ಮಾರಾಟ ಮಾಡಿ ಕನಿಷ್ಠ ಮೂರ್ನಾಲ್ಕು ಲಕ್ಷ ರೂಪಾಯಿಗಳ ಲಾಭವನ್ನು ಗಳಿಸುತ್ತಿದ್ದೆವು,” ಎಂದು ಹೇಳಿದರು.

ದೇವೇಂದ್ರರ ಕುಟುಂಬದ ಆದಾಯದ ಮೂಲ ಕೃಷಿ ಮಾತ್ರ, ಅವರ ಕುಟುಂಬದ ಯಾವುದೇ ಸದಸ್ಯರು ಯಾವುದೇ ಇತರ ಉದ್ಯೋಗ ಅಥವಾ ವ್ಯಾಪಾರ ಮಾಡುವುದಿಲ್ಲ. 2020ರಲ್ಲಿ, ಕರೋನಾ ಸೋಂಕು ಪ್ರಾರಂಭವಾದ ನಂತರವೇ ದೇವೇಂದ್ರ ಅವರ ಕುಟುಂಬದ ಕಷ್ಟಗಳು ಪ್ರಾರಂಭವಾದವು. ಸತತ ಎರಡು ವರ್ಷಗಳಿಂದ, ಕರೋನಾ ಸೋಂಕಿನ ಪರಿಣಾಮ ಮತ್ತು ನಂತರದ ಲಾಕ್‌ಡೌನ್‌ನಿಂದ, ಅವರ ಬೆಳೆಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿಯಿತು. 2021ರಲ್ಲಿ, ಕರೋನಾ ಎರಡನೇ ಅಲೆಯ ಸಮಯದಲ್ಲಿ, ಎಲ್ಲಿಯೂ ಹೋಗುವುದು ಕಷ್ಟವಾದಾಗ, ಅವರ ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳು ಮದುವೆಯಾದರು. ಅವರಲ್ಲಿ ಒಬ್ಬರು ದೇವೇಂದ್ರರ ಮಗಳು ಮತ್ತು ಇನ್ನೊಬ್ಬರು ಅವರ ಸೊಸೆ. ದೇವೇಂದ್ರ ಹೇಳುತ್ತಾರೆ, "ಕರೋನಾದಿಂದಾಗಿ, ಎಲ್ಲವೂ ದುಬಾರಿಯಾಗುತ್ತಿತ್ತು, ಆದರೆ ನಾವು ಈಗಾಗಲೇ ಮದುವೆಯನ್ನು ನಿಗದಿಪಡಿಸಿದ್ದೆವು, ಆದ್ದರಿಂದ ಅದನ್ನು ಪೂರ್ಣಗೊಳಿಸಬೇಕಾಗಿತ್ತು."

ನಂತರ ಆಗಸ್ಟ್ 2021ರ ಆರಂಭದಲ್ಲಿ ಎದುರಾದ ಹಠಾತ್ ಪ್ರವಾಹವು ಅವರ ಕುಟುಂಬದ ಸಮಸ್ಯೆಗಳನ್ನು ಹೆಚ್ಚಿಸಿತು.

PHOTO • Aishani Goswami
PHOTO • Rahul

ಎಡ: ಪ್ರವಾಹದಿಂದಾಗಿ ಸಿಂಧ್ ತೀರದ ಹಲವು ಮರಗಳು ಬಿದ್ದಿವೆ. ಬಲ: ಭಾರೀ ಮಳೆಯ ಹಿನ್ನೆಲೆಯಲ್ಲಿ ನಾರ್ವಾರ್ ತಾಲೂಕಿನ ಮೋಹಿನಿ ಅಣೆಕಟ್ಟಿನ ಗೇಟ್‌ಗಳನ್ನು ತೆರೆಯಲಾಗಿದ್ದು, ಗ್ರಾಮಕ್ಕೆ ನೀರು ನುಗ್ಗಿದೆ

*****

ದಾತಿಯಾ ಜಿಲ್ಲೆಯ ಇಂದರ್‌ಗಢ್ ತಹಸಿಲ್‌ನ ತಿಲೈತಾ ಗ್ರಾಮದ ರೈತ ಸಾಹಬ್ ಸಿಂಗ್ ರಾವತ್ ಅವರು ಸಿಂಧ್ ನದಿಯ ದಡದಲ್ಲಿರುವ ತಮ್ಮ ಜಮೀನನ್ನು ಹತಾಶೆಯಿಂದ ನೋಡುತ್ತಿದ್ದರು. "ಅಕಾಲಿಕ ಮಳೆಯು 12½ ಬಿಘಾ ಜಮೀನಿನಲ್ಲಿದ್ದ [ಸುಮಾರು 7.7 ಎಕರೆ] ಕಬ್ಬಿನ ಬೆಳೆಗಳನ್ನು ನಾಶಪಡಿಸಿತು" ಎಂದು ಅವರು ನಮಗೆ ತಿಳಿಸಿದರು. 2021ರಲ್ಲಿ ಚಳಿಗಾಲದಲ್ಲಿ ಹೆಚ್ಚು ಮಳೆಯಾಗಿ ರೈತರಿಗೆ ಸಾಕಷ್ಟು ಹಾನಿಯಾಗಿದೆ ಎನ್ನುತ್ತಾರೆ ಅವರು.

ಸುಂಧ್‌ನಲ್ಲಿರುವ ಮನೆಗಳು ಎತ್ತರದಲ್ಲಿವೆ, ಆದ್ದರಿಂದ ಪ್ರವಾಹದಿಂದ ಯಾವುದೇ ಜೀವ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಆದರೆ, ಉಳಿದ ಗ್ರಾಮಗಳ ಹಣೆಬರಹ ಅಷ್ಟೊಂದು ಚೆನ್ನಾಗಿರಲಿಲ್ಲ. ಕಲಿಪಹರಿ ಗ್ರಾಮ ಪಂಚಾಯತ್‌ನ ನಿವಾಸಿ ಸುಮಿತ್ರಾ ಸೇನ್, ತಮ್ಮ ಗ್ರಾಮದ ಜನರು ಚೀಲಗಳಲ್ಲಿ ಐದು ಕೆಜಿ ಧಾನ್ಯಗಳನ್ನು ಹಾಕಿಕೊಂಡು ನೀರಿನ ಮಟ್ಟವನ್ನು ಗಮನಿಸುತ್ತಾ ಎತ್ತರದ ಸ್ಳಗಳಿಗೆ ಹೋಗಲು ಕಾಯುತ್ತಿದ್ದರು ಎಂದು ಹೇಳುತ್ತಾರೆ.

ಸುಮಿತ್ರಾ ಸೇನ್, ಸುಮಾರು 45 ವರ್ಷ, ಅವರು ಹತ್ತಿರದ ಶಾಲೆಯಲ್ಲಿ ಅಡುಗೆ ಕೆಲಸ ಮತ್ತು ಕೂಲಿ ಕೆಲಸ ಮಾಡುತ್ತಾರೆ. ಆಕೆಯ 50 ವರ್ಷದ ಪತಿ ಧನಪಾಲ್ ಸೇನ್ ಕಳೆದ 8-9 ವರ್ಷಗಳಿಂದ ಅಹಮದಾಬಾದ್‌ನ ಖಾಸಗಿ ಪೌಚ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಿರಿಯ ಮಗ ಅತೀಂದ್ರ ಸೇನ್ (16) ಸಹ ಅಲ್ಲಿ ಕೆಲಸ ಮಾಡುತ್ತಾನೆ. ಕ್ಷೌರಿಕ ಸಮುದಾಯಕ್ಕೆ ಸೇರಿದ ಸುಮಿತ್ರಾ ಅವರು ಸರ್ಕಾರದಿಂದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವವರು) ಕಾರ್ಡ್ ಪಡೆದಿದ್ದಾರೆ.

ದತಿಯಾ ಜಿಲ್ಲೆಯ ಸೆವಂಧಾ ವಿಭಾಗದ ಮದನ್‌ಪುರ ಗ್ರಾಮದ ನಿವಾಸಿ ವಿದ್ಯಾರಾಮ್ ಬಘೇಲ್ ಅವರು ತಮ್ಮ ಮೂರು ಬಿಘಾ (ಸುಮಾರು ಎರಡು ಎಕರೆ) ಜಮೀನು ಪ್ರವಾಹದಲ್ಲಿ ನಾಶವಾಗಿದೆ ಎಂದು ಹೇಳಿದರು. "ನನ್ನ ಎಲ್ಲಾ ಬೆಳೆಗಳು ನಾಶವಾದವು, ಮತ್ತು ಹೊಲದಲ್ಲಿ ಮರಳು ತುಂಬಿಕೊಂಡಿದೆ."

PHOTO • Rahul
PHOTO • Rahul
PHOTO • Rahul

ಎಡ: ಅಕಾಲಿಕ ಮಳೆಗೆ ರೈತ ಸಾಹಬ್ ಸಿಂಗ್ ರಾವತ್ ಅವರ ಸುಮಾರು 7.7 ಎಕರೆ ಕಬ್ಬು ಬೆಳೆ ನಾಶವಾಗಿದೆ. ಬಲ: ಸುಮಿತ್ರಾ ಸೇನ್ ಅವರ ಕಲಿಪಹರಿ ಗ್ರಾಮದ ಎಲ್ಲರೂ ಪ್ರವಾಹದ ಭೀತಿಯಿಂದ ಚೀಲದಲ್ಲಿ ಐದು ಕಿಲೋ ಧಾನ್ಯವನ್ನು ಹೊತ್ತು ಎತ್ತರದ ಸ್ಥಳಕ್ಕೆ ತೆರಳಲು ಸಿದ್ಧರಾಗಿದ್ದರು. ಕೆಳಚಿತ್ರ: ವಿದ್ಯಾರಾಮ ಬಾಗೇಲ್ ಅವರ ಹೊಲದಲ್ಲಿ ಮರಳು ತುಂಬಿತ್ತು

*****

ಈ ನದಿಗೆ ಸೇತುವೆ ನಿರ್ಮಿಸಲು ಆಡಳಿತವು ಸಿದ್ಧವಿಲ್ಲ. ಏಕೆಂದರೆ ಅದರ ವೆಚ್ಚವು ಇಲ್ಲಿನ ಆಸ್ತಿಗಿಂತ ಹೆಚ್ಚಾಗಬಹುದು ಎಂದು ಸುಂಧ್ ಗ್ರಾಮದ ಜನರು ಸಂವಾದದಲ್ಲಿ ಹೇಳಿಕೊಂಡರು. ಗ್ರಾಮದಲ್ಲಿ ಸುಮಾರು 700 ಬಿಘಾ ಕೃಷಿ ಭೂಮಿ ಇದ್ದು, ಅದರ ಒಡೆತನ ಗ್ರಾಮಸ್ಥರಿಗೆ ಮಾತ್ರ ಸೇರಿದೆ. ರಾಮ್‌ನಿವಾಸ್ ಹೇಳುತ್ತಾರೆ, "ನೆಲೆಸಲು ಬೇರೆ ಸ್ಥಳಕ್ಕೆ ಹೋದರೂ, ನಾವು ಕೃಷಿ ಮಾಡಲು ಇಲ್ಲಿಗೇ ಬರಬೇಕಾಗುತ್ತದೆ."

ಹವಾಮಾನದಲ್ಲಿನ ಬದಲಾವಣೆ, ಅಕಾಲಿಕ ಮಳೆ, ನದಿಗಳಿಗೆ ಅಣೆಕಟ್ಟುಗಳ ನಿರ್ಮಾಣ ಮತ್ತು ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಮುಳುಗಡೆ ಮತ್ತು ಪ್ರವಾಹದ ಅಪಾಯವನ್ನು ಹೆಚ್ಚಿಸಬಹುದು, ಆದರೆ ದೇವೇಂದ್ರ ಮತ್ತು ಅವರ ಕುಟುಂಬವು ತಮ್ಮ ಭೂಮಿಯನ್ನು ಬಿಡುವುದಿಲ್ಲವೆಂಬ ಸಂಕಲ್ಪಕ್ಕೆ ಅಂಟಿಕೊಂಡಿದೆ. ದೇವೇಂದ್ರ ರಾವತ್ ಹೇಳುತ್ತಾರೆ, “ನಾವು ಈ ಊರನ್ನು ಬಿಡುವುದಿಲ್ಲ. ನಮ್ಮ ಭೂಮಿಗೆ ಬದಲಾಗಿ ಆಡಳಿತವು ನಮಗೆ ಅದೇ ಪ್ರಮಾಣದ ಭೂಮಿಯನ್ನು ನೀಡಿದಾಗ ಮಾತ್ರವೇ ನಾವು ಇಲ್ಲಿಂದ ತೆರಳುವ ಕುರಿತು ಯೋಚಿಸುತ್ತೇವೆ."

ಅನುವಾದ: ಶಂಕರ. ಎನ್. ಕೆಂಚನೂರು

Rahul

ರಾಹುಲ್ ಸಿಂಗ್ ಜಾರ್ಖಂಡ್ ಮೂಲದ ಸ್ವತಂತ್ರ ವರದಿಗಾರ. ಅವರು ಪೂರ್ವ ರಾಜ್ಯಗಳಾದ ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದ ಪರಿಸರ ವಿಷಯಗಳ ಬಗ್ಗೆ ವರದಿ ಮಾಡುತ್ತಾರೆ.

Other stories by Rahul
Aishani Goswami

ಐಶಾನಿ ಗೋಸ್ವಾಮಿ ಅಹ್ಮದಾಬಾದ್ ಮೂಲದ ವಾಟರ್ ಪ್ರಾಕ್ಟೀಷನರ್ ಮತ್ತು ವಾಸ್ತುಶಿಲ್ಪಿ. ಅವರು ಜಲ ಸಂಪನ್ಮೂಲ ಎಂಜಿನಿಯರಿಂಗ್ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ನದಿಗಳು, ಅಣೆಕಟ್ಟುಗಳು, ಪ್ರವಾಹಗಳು ಮತ್ತು ನೀರನ್ನು ಅಧ್ಯಯನ ಮಾಡುತ್ತಾರೆ.

Other stories by Aishani Goswami
Editor : Devesh

ದೇವೇಶ್ ಓರ್ವ ಕವಿ, ಪತ್ರಕರ್ತ, ಚಲನಚಿತ್ರ ನಿರ್ಮಾಪಕ ಮತ್ತು ಅನುವಾದಕ. ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿಂದಿ ಭಾಷಾ ಸಂಪಾದಕ ಮತ್ತು ಅನುವಾದ ಸಂಪಾದಕರಾಗಿದ್ದಾರೆ.

Other stories by Devesh
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru