``ಆ ರಕ್ಷಣಾ ಜಾಕೆಟ್ಟನ್ನು ಧರಿಸಿಕೊಂಡರೆ ಥೇಟು ಗಗನಯಾತ್ರಿಯಂತೆ ನೀನು ಕಾಣುತ್ತೀ'', ಎಂದು ಮುನಿಸಿಪಲ್ ಅಧಿಕಾರಿಯೊಬ್ಬರು ಅರವತ್ತರ ಪ್ರಾಯದ ಮಣಿಗೆ ಹೇಳಿದ್ದರಂತೆ. ಅಂದಹಾಗೆ ಮಣಿ ಕೊಯಮತ್ತೂರು ಪುರಸಭಾ ನಿಗಮದಲ್ಲಿ ದುಡಿಯುತ್ತಿರುವ ಒಬ್ಬ ಕೆಲಸಗಾರ. ಬ್ಲಾಕ್ ಆಗಿರುವ ಒಳಚರಂಡಿಗಳಿಗೆ ಮತ್ತು ಮೋರಿಗಳಿಗೆ ಇಳಿದು ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ಆತನದ್ದು. ``ಸರ್, ಮೊದಲು ನೀವೇ ಒಮ್ಮೆ ಧರಿಸಿ ನೋಡಿ. ನಂತರ ನಾನು ಕೂಡ ಅದನ್ನೇ ತೊಟ್ಟುಕೊಳ್ಳುವೆ'', ಎಂದು ಆ ಅಧಿಕಾರಿಯ ವ್ಯಂಗ್ಯದ ಮಾತಿಗೆ ವಿನಯದಿಂದಲೇ ಪ್ರತಿಕ್ರಯಿಸಿದ್ದ ಮಣಿ.

``ಭಾರತದಲ್ಲಿ ಯಾವ ಅಧಿಕಾರಿಯಾದರೂ ರಕ್ಷಣಾ ಜಾಕೆಟ್ಟುಗಳನ್ನು ಮತ್ತು ಆಮ್ಲಜನಕದ ಮಾಸ್ಕ್ ಗಳನ್ನು ಬಳಸಲು ನಮ್ಮಂಥವರಿಗೆ ಹೇಳಿದನೆಂದರೆ ಒಂದೋ ಆತನಿಗೆ ಈ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಕಿಂಚಿತ್ತು ಜ್ಞಾನವೂ ಇರುವುದಿಲ್ಲ ಅಥವಾ ಸುಮ್ಮನೆ ಬಾಯಿಮಾತಿಗಷ್ಟೇ ಹಾಗೆಂದು ಹೇಳಿಕೊಂಡಿರುತ್ತಾನೆ. ಏಕೆಂದರೆ ಅವುಗಳನ್ನು ಧರಿಸಿ ಇಳಿಯೋಣವೆಂದರೆ ಚರಂಡಿಗಳಲ್ಲಿ ಕೈಕಾಲುಗಳನ್ನಾಡಿಸಲು ಅಷ್ಟು ಸ್ಥಳಾವಕಾಶವೇ ಇರುವುದಿಲ್ಲ. ಅಲ್ಲಿ ಸಿಗುವ ಒಂದಿಷ್ಟು ಜಾಗದಲ್ಲಿ ಒಳಚಡ್ಡಿಯನ್ನುಟ್ಟುಕೊಂಡು ಇಳಿಯಲು ಮತ್ತು ಕೊಂಚ ಕೆಲಸ ಮಾಡಲು ಮಾತ್ರ ಸಾಧ್ಯ. ಅಷ್ಟಕ್ಕೂ ಇವರೆಲ್ಲಾ ನಮಗೆ ಟೋಪಿ ಹಾಕುವವರೇ. ಯಾರಿಗೂ ನಮ್ಮ ಬಗ್ಗೆ ಕಾಳಜಿಯೇ ಇಲ್ಲ. ಯಾಕೆಂದರೆ ಮಲಮೂತ್ರಗಳ ಕೊಳಚೆಗೆ ಬೀಳುವುದು ನಮ್ಮ ದೇಹವಲ್ಲವೇ? ನಾವು ಈ ಜಾತಿಯಲ್ಲಿ ಹುಟ್ಟಿದ ತಪ್ಪಿಗೆ ಇವೆಲ್ಲವನ್ನೂ ಮಾಡಲೇಬೇಕು ಎಂಬ ಪೊಗರು ಅವರದ್ದು'', ತನ್ನನ್ನು ತಾನು ಮಣಿ ಎಂಬ ಪುಟ್ಟ ನಾಮಧೇಯದೊಂದಿಗೆ ಕರೆದುಕೊಳ್ಳುವ ವೃದ್ಧ ಕೆಲಸಗಾರ ಹೇಳುತ್ತಾನೆ.

ಆದರೂ ಮಣಿಗೆ ತನ್ನ ವೃತ್ತಿಯ ಬಗ್ಗೆ ಒಂದು ಅಭಿಮಾನವಿದೆ. ತನ್ನ ಹಲವಾರು ವರ್ಷಗಳ ಅನುಭವವನ್ನು ಆತ ಇತರ ಕೆಲಸಗಾರರನ್ನು ತರಬೇತುಗೊಳಿಸಲೂ ಬಳಸುತ್ತಾನೆ. ಚರಂಡಿಗಳಲ್ಲಿ ಇಳಿಯುವುದರಿಂದ ಹಿಡಿದು ವಿಷಾನಿಲಗಳನ್ನು ಹೇಗೆ ನಿಭಾಯಿಸಬಹುದು ಎಂಬ ವೃತ್ತಿಯ ಸೂಕ್ಷ್ಮವಿದ್ಯೆಗಳನ್ನು ಆತ ಅವರಿಗೆ ಕಲಿಸುತ್ತಾನೆ. ``ಎಲ್ಲರೂ ನಮಗೆ ಪಾಠ ಹೇಳಲು ಬರುವವರೇ. ಆದರೆ ಅಸಲಿ ಪರಿಸ್ಥಿತಿಯು ಹೇಗಿದೆಯೆಂದು ನಮಗಷ್ಟೇ ಗೊತ್ತು. ನಮ್ಮಂತಹ ಕೆಲಸಗಾರರ ಮೃತ್ಯುಗಳನ್ನು ತಡೆಯಬೇಕಾದರೆ ಒಳಚರಂಡಿ ವ್ಯವಸ್ಥೆಯನ್ನು ಸರಕಾರವು ಆಧುನೀಕರಣಗೊಳಿಸಲೇ ಬೇಕು. ಬೇರೆಲ್ಲಾ ಮಾತುಗಳು ಸುಮ್ಮನೆ ಕಣ್ಣಿಗೆ ಮಣ್ಣೆರಚುವ ತಂತ್ರಗಳಷ್ಟೇ'', ಎನ್ನುತ್ತಾನೆ ಆತ.

ಮಣಿ ಚಿಕ್ಕವನಿದ್ದಾಗ ಆತನ ತಂದೆ ಸುಬ್ಬನ್ ಮತ್ತು ತಾಯಿ ಪೊನ್ನಿ ಕೊಯಮತ್ತೂರಿನ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಕೆಲಸಗಾರರಾಗಿ ದುಡಿಯುತ್ತಿದ್ದರಂತೆ. ``ಆ ದಿನಗಳಲ್ಲಿ ಆಸ್ಪತ್ರೆಯ ಆವರಣದಲ್ಲೇ ನಾವು ನೆಲೆಸಿದ್ದೆವು. ಶಾಲೆ ಮುಗಿಸಿದ ನಂತರ ಆಸ್ಪತ್ರೆಗೆ ತೆರಳಿ ಕ್ಷಕಿರಣ, ಇ.ಸಿ.ಜಿ, ಪೋಸ್ಟ್ ಮಾರ್ಟಮ್ ಗಳಂತಹ ಚಟುವಟಿಕೆಯಲ್ಲಿ ನಾನು ಅಲ್ಲಿಯ ಸಿಬ್ಬಂದಿಗಳಿಗೆ ನೆರವಾಗುತ್ತಿದ್ದೆ. ಅದು ಅರವತ್ತರ ದಶಕದ ಮಾತು... ಆಗ ದಿನವೊಂದಕ್ಕೆ ಐದರಿಂದ ಹತ್ತು ಪೈಸೆಯನ್ನು ಈ ಕೆಲಸಕ್ಕಾಗಿ ನನಗೆ ಕೊಡುತ್ತಿದ್ದರು. ಎಂಟನೇ ತರಗತಿಗೆ ನನ್ನ ವಿದ್ಯಾಭ್ಯಾಸವು ನಿಂತುಹೋಯಿತು. ನಂತರ ನಾನು ಹೊಟ್ಟೆಪಾಡಿಗಾಗಿ ಈ ಕೆಲಸವನ್ನು ಮಾಡತೊಡಗಿದೆ'', ಎಂದು ತನ್ನ ನೆನಪಿನ ಬುತ್ತಿಯನ್ನು ಬಿಚ್ಚುತ್ತಾನೆ ಮಣಿ.

ಅಸಲಿಗೆ ಮಣಿ ಚಕ್ಲಿಯಾರ್ ಜಾತಿಗೆ ಸೇರಿದವನು. ಆತನೊಬ್ಬ ದಲಿತ. ಶಾಲೆಯಲ್ಲಿ ಶಿಕ್ಷಕರು ಮತ್ತು ಸಹಪಾಠಿಗಳು ಸದಾ ಇವನನ್ನು `ತೋಟಿ' ಎಂಬ ಹೆಸರಿನಲ್ಲಿ ತಮಾಷೆ ಮಾಡುತ್ತಿದ್ದ ಕಾರಣದಿಂದ ಬೇಸತ್ತ ಮಣಿ ಶಾಲೆಯನ್ನೇ ಬಿಟ್ಟಿದ್ದ (`ತೋಟಿ' ಎಂಬುದು ಈ ವೃತ್ತಿಯನ್ನು ಅವಲಂಬಿಸಿರುವ ಕೆಳಜಾತಿಯವರನ್ನು ಹಂಗಿಸಲು ಕರೆಯಲಾಗುವ ಒಂದು ಕೀಳುಮಟ್ಟದ ಪದ). ತರಗತಿಯಲ್ಲಿ ಅವನನ್ನು ಪ್ರತ್ಯೇಕವಾಗಿ ಕುಳ್ಳಿರಿಸಲಾಗುತ್ತಿತ್ತಂತೆ. ``ನಾನು ಕೊಳಚೆಗುಂಡಿಗಳನ್ನು ಶುದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದರಿಂದ ಶಾಲೆಯಲ್ಲಿ ಎಲ್ಲರೂ ನನ್ನನ್ನು ಕೆಟ್ಟದಾಗಿ ಹೀಗಳೆಯುತ್ತಿದ್ದರು. ನನ್ನ ಶಿಕ್ಷಕರಂತೂ ನನ್ನನ್ನು ಇತರರಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡುತ್ತಿದ್ದರು'', ಎನ್ನುತ್ತಾನೆ ಮಣಿ.

ಅಂದಹಾಗೆ ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಕಸ ಗುಡಿಸುವ ಕೆಲಸವನ್ನು ಮಾಡುತ್ತಿರುವ ಮಣಿಯ ಪತ್ನಿ ನಾಗಮ್ಮ ತಿಂಗಳಿಗೆ ಹದಿನೈದು ಸಾವಿರದಷ್ಟು ದುಡಿಯುತ್ತಾಳೆ. ಆಕೆಯ ತಂದೆ ನೆಸಯ್ಯರ್ ಮತ್ತು ತಾಯಿ ಕಿರುಬ ಕೂಡ ಇದೇ ವೃತ್ತಿಯಲ್ಲಿದ್ದರಂತೆ. ``ನಾನು ಆರನೇ ತರಗತಿಯವರೆಗೆ ಸೈಂಟ್ ಮೇರೀಸ್ ನಲ್ಲಿ ಓದಿದೆ. ಅದೊಂದು ಮಿಷನರಿಗಳ ಶಾಲೆಯಾಗಿದ್ದರಿಂದ ಅಲ್ಲೇನೂ ನನಗೆ ಸಮಸ್ಯೆಗಳಿರಲಿಲ್ಲ. ಆದರೆ ಹೊರಜಗತ್ತಿಗೆ ಮಾತ್ರ ನಾನು ಅಸ್ಪøಶ್ಯರಿಗಿಂತ ಕಡೆಯಾಗಿದ್ದೆ. ನಾನು ಕ್ರೈಸ್ತಳಾಗಿದ್ದರಿಂದ ನನಗೆ ಮೀಸಲಾತಿಯು ಸಿಗಲಿಲ್ಲ. ಹೀಗಾಗಿ ಪುರಸಭೆಯಲ್ಲಿ ಸಿಗಬಹುದಾದ ಉದ್ಯೋಗವೂ ಕೈತಪ್ಪಿಹೋಯಿತು. ಆದರೆ ಬಹಳ ಚಿಕ್ಕ ವಯಸ್ಸಿನಲ್ಲೇ ವಿವಾಹವಾದ ನಾನು ಎಮ್. ನಾಗಮ್ಮ ಆಗಿದ್ದೆ. ಹಿಂದೂ ಹೆಸರಿದ್ದ ಒಂದೇ ಒಂದು ಕಾರಣದಿಂದ ಈ (ಕಸಗುಡಿಸುವ) ಸರಕಾರಿ ಉದ್ಯೋಗವು ನನಗೆ ಸಿಕ್ಕಿತು'', ಎನ್ನುತ್ತಾರೆ ನಾಗಮ್ಮ. 2020 ರಲ್ಲಿ ನಿವೃತ್ತಿಯಾಗಲಿರುವ ಆಕೆ ಕಳೆದ ಮೂವತ್ತು ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ.

ಇತ್ತ ಮಣಿ ಕೂಡ ತನ್ನ ಇಪ್ಪತ್ತೇಳನೇ ವಯಸ್ಸಿನಿಂದ ಇದೇ ವೃತ್ತಿಯಲ್ಲಿದ್ದು ಸದ್ಯ ತಿಂಗಳಿಗೆ 16000 ರೂಪಾಯಿಗಳಷ್ಟು ಸಂಪಾದಿಸುತ್ತಿದ್ದಾನೆ. ಅದಕ್ಕಿಂತಲೂ ಮುನ್ನ ಆತ ಗುತ್ತಿಗೆ ಕಾರ್ಮಿಕನಾಗಿ ದುಡಿಯುತ್ತಿದ್ದನಂತೆ. ``ಕಳೆದ ಹಲವು ವರ್ಷಗಳಿಂದ ನನ್ನೀ ದೇಹವು ಈ ಮಲಮೂತ್ರ, ಕೊಳಚೆಗಳಿಗೆ ಒಗ್ಗಿಕೊಂಡಿದೆ. ಆದರೆ ನನ್ನ ಆರಂಭದ ದಿನಗಳು ನನಗಿನ್ನೂ ನೆನಪಿವೆ. ಆಗ ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ ಕೇವಲ ಒಳಚಡ್ಡಿಯಲ್ಲಿ ಚರಂಡಿಗಿಳಿಯಲು ನಾನು ಅದೆಷ್ಟು ಕಷ್ಟಪಡುತ್ತಿದ್ದೆ! ಸುಮಾರು ಒಂದು ವರ್ಷ ನಾಚಿಕೆಯಿಂದಲೇ ನಾನು ಕುಗ್ಗಿಹೋಗಿದ್ದೆ. ತುಂಬಿದ ಬೀದಿಯಲ್ಲಿ ನಗ್ನವಾಗಿ ನಿಂತಿರುವಂತಿನ ಭಾವವು ನನ್ನಲ್ಲಿ ಮೂಡುತ್ತಿತ್ತು. ಆದರೆ ಕಾಲ ಮತ್ತು ಪ್ರತಿಕೂಲ ಪರಿಸ್ಥಿತಿಗಳು ಎಲ್ಲವನ್ನೂ ಕಲಿಸಿಬಿಡುತ್ತವೆ. ನಮ್ಮ ಜಾತಿ ನಮ್ಮ ಭಾಗ್ಯವನ್ನೇ ಹೊತ್ತು ತಂದಿದೆ. ಹಣೆಬರಹವಾಗಿ ಬರೆಸಿದೆ. `ತೋಟಿ'ಯಾಗಿ ಹುಟ್ಟಿರುವ ಪ್ರತಿಯೊಬ್ಬನೂ ಸಾಯುವವರೆಗೂ ಮತ್ತೊಬ್ಬನ ಮಲವನ್ನೇ ಹೊರಬೇಕು. ಸಮಾಜವೂ ನಮ್ಮನ್ನು ಈ ಕೂಪಕ್ಕೇ ದೂಡುತ್ತದೆ. ಈ ನರಕದಿಂದ ಪಾರಾಗಲು ಆತ್ಮವಿಶ್ವಾಸ, ಕುಟುಂಬದ ಸದಸ್ಯರ ಸಹಕಾರ ಹೀಗೆ ಎಲ್ಲವೂ ಬೇಕಾಗುತ್ತದೆ. ನಮಗಂತೂ ಈ ಭಾಗ್ಯವು ದಕ್ಕಲಿಲ್ಲ. ಆದರೆ ಕನಿಷ್ಠಪಕ್ಷ ನಮ್ಮ ಮಕ್ಕಳಿಗಾದರೂ ನಾವು ಹೊಸ ದಾರಿಗಳನ್ನು ನಿರ್ಮಿಸಿಕೊಟ್ಟಿದ್ದೇವೆ'', ಎಂದು ಹೇಳುತ್ತಲೇ ಇದ್ದಾನೆ ಮಣಿ.

ತಮ್ಮ ಪೀಳಿಗೆಯೊಂದಿಗೇ ಈ ಜಾತಿಯಾಧಾರಿತ ವೃತ್ತಿಯು ಕೊನೆಯಾಗಬಹುದು ಎಂಬ ಆಸೆ ಮಣಿ ಮತ್ತು ನಾಗಮ್ಮರದ್ದು. ಈ ಭೇದಭಾವಗಳು ತಮ್ಮ ಮಕ್ಕಳ ಪಾಲಿಗೂ ಬರುವುದು ಅವರಿಗಿಷ್ಟವಿಲ್ಲ. ಅದನ್ನು ನೋಡಲು ಅವರು ಶಕ್ತರೂ ಅಲ್ಲ. ``ನನಗಿರುವುದು ಒಂದೇ ಕನಸು. ಅದೇನೆಂದರೆ ನಮ್ಮ ಮಕ್ಕಳು ಈ ಮಲಮೂತ್ರಗಳಿಂದ, ಅಪಾಯಕಾರಿ ವಿಷಾನಿಲಗಳಿಂದ ದೂರವಿರಬೇಕು. ನನ್ನ ಮತ್ತು ನನ್ನ ಪತ್ನಿಯ ಜೀವನವಿಡೀ ಈ ಕನಸನ್ನು ಸಾಕಾರಗೊಳಿಸುವುದರಲ್ಲೇ ಕಳೆದುಹೋಯಿತು'', ಎನ್ನುತ್ತಾನೆ ಮಣಿ. ಮಣಿ-ನಾಗಮ್ಮ ದಂಪತಿಗಳ ಮಗಳು ತುಳಸಿ ವಿವಾಹಿತೆಯೂ, ಜವಳಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕಿಯಾಗಿಯೂ

ಆಗಿದ್ದಾರೆ. ಇನ್ನು ಮಗನಾದ ಮೂರ್ತಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.


ತಮ್ಮ ವೃತ್ತಿ ಮತ್ತು ಜಾತಿಗಂಟಿಕೊಂಡಿರುವ ಕಳಂಕದ ಬಗ್ಗೆ ಹೇಳುತ್ತಿದ್ದಾರೆ ಮಣಿ ಮತ್ತು ನಾಗಮ್ಮ .

ಒಳಚರಂಡಿಗೆ ಇಳಿಯುವ ಮುನ್ನ ಚರಂಡಿಯ ಪರಿಸ್ಥಿತಿಯನ್ನು ಲೆಕ್ಕಹಾಕುವ ವಿಧಾನವನ್ನು ತೋರಿಸಿಕೊಡುವೆನೆಂದು ಮಣಿ ನಮಗೆ ಮೊದಲೇ ಭರವಸೆಯನ್ನು ನೀಡಿದ್ದ. ಮರುದಿನವೇ ಮಣಿ ನನಗೆ ಕರೆ ಮಾಡಿ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿಯ ಮುಂದಿರುವ ಬ್ಲಾಕ್ ಆದ ಒಳಚರಂಡಿಯ ಸಮಸ್ಯೆ ಹೇಗೆ ಪರಿಹರಿಸುತ್ತೇವೆ ನೋಡಿ ಎಂದು ಕರೆದಿದ್ದ. ನಾವೆಲ್ಲರೂ ನೋಡುತ್ತಿರುವಂತೆಯೇ ಲಾರಿಯೊಂದರ ಮರೆಗೆ ಹೋದ ಮಣಿ ಬಟ್ಟೆಬಿಚ್ಚಿ ಹೊರಬಂದಿದ್ದು ಬರೀ ಒಳಚಡ್ಡಿಯಲ್ಲಿ. ತನ್ನ ವೃತ್ತಿಜೀವನದ ಕರಾಳ ಅನುಭವವನ್ನು ಮಣಿ ಮನೋಜ್ಞವಾಗಿ ಹೀಗೆ ವಿವರಿಸುತ್ತಾನೆ ನೋಡಿ: ``ಕಳೆದ ಹಲವಾರು ವರ್ಷಗಳಿಂದ ಇಂಥಾ ಅದೆಷ್ಟೋ ಒಳಚರಂಡಿಗಳಿಗೆ ನಾನು ಇಳಿದಿದ್ದೇನೆ. ಆದರೆ ಪ್ರತೀಬಾರಿ ಇಳಿಯುವಾಗಲೂ ನಾನು ಜೀವಂತ ಬದುಕುಳಿದು ಮರಳುವುದಿಲ್ಲವೋ ಏನೋ ಎಂಬ ಭಯವು ನನ್ನನ್ನು ಕಾಡುತ್ತಿರುತ್ತದೆ. ಹೀಗಾಗಿ ಪ್ರತೀಬಾರಿಯೂ ಈ ಕೊಳಚೆಗುಂಡಿಗೆ ಇಳಿಯುವ ಮುನ್ನ ಕಣ್ಣುಗಳನ್ನು ಮುಚ್ಚಿ ಮಗಳ ಮುಖವನ್ನು ನೆನಪಿಸಿಕೊಳ್ಳುತ್ತೇನೆ. ಹೀಗೆ ಮಾಡಿದ ನಂತರವೇ ನಾನು ಈ ಕೊಳಚೆಗೆ ಹಾರುವುದು. ನನ್ನ ಮಗಳು ನನಗೆ ಅದ್ಯಾವುದೋ ಅದೃಷ್ಟದ ವರವಿದ್ದಂತೆ. ಕೆಲವು ಬಾರಿ ಸಂಕಷ್ಟದ ಸಮಯಗಳಲ್ಲಿ ಅವಳ ನಾಮಬಲದಿಂದಲೇ ನಾನು ಹೊರಬಂದಿದ್ದೂ ಇದೆ. ಅದೃಷ್ಟವಶಾತ್ ಈವರೆಗೂ ಸುರಕ್ಷಿತವಾಗಿ ನಾನು ಹೊರಬಂದಿದ್ದೇನೆ''.

ಆದರೆ ಎಲ್ಲರೂ ಮಣಿಯಷ್ಟು ಅದೃಷ್ಟವಂತರಲ್ಲವಲ್ಲಾ? ಈ ವರ್ಷ ಎಪ್ರಿಲ್ ಒಂದರಿಂದ ಜುಲೈ ಹತ್ತರ ನಡುವೆ ಮಣಿಯಂತಹ ಮೂವತ್ತೊಂಬತ್ತು ಕೆಲಸಗಾರರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕುಗಳಲ್ಲಿ ಕರ್ತವ್ಯನಿರತರಾಗಿದ್ದಾಗ ಅಸುನೀಗಿದ್ದಾರೆ ಎಂದು ಪಾರ್ಲಿಮೆಂಟ್ ಸದಸ್ಯರಿಗೆ ಸಫಾಯಿ ಕರ್ಮಚಾರಿ ಆಂದೋಲನದ ತಂಡದಿಂದ ನೀಡಲಾಗಿದ್ದ ದಾಖಲೆಯ ಒಂದು ಅಂಕಿಅಂಶವು ತಿಳಿಸುತ್ತದೆ. ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕು ಎಂದು ಹೋರಾಡುತ್ತಿರುವ ಸಮುದಾಯ ಸಂಘಟನೆಯೊಂದರ ಆಂದೋಲನವಿದು.

ಇತ್ತ ಇತರ ಕೆಲಸಗಾರರು ಕೊಳಚೆಗುಂಡಿಯ ಮುಚ್ಚಳವನ್ನು ತೆರೆಯುತ್ತಿರುವಂತೆಯೇ ಒಳಚಡ್ಡಿಯನ್ನಷ್ಟೇ ಧರಿಸಿ ನಿಂತಿರುವ ಮಣಿ ಗುಂಡಿಯೊಳಕ್ಕೆ ಇಳಿಯಲು ತಯಾರಾಗಿದ್ದಾನೆ. ಅಷ್ಟರಲ್ಲಿ ಮತ್ತೊಬ್ಬ ಕಾರ್ಮಿಕನು ಬೆಂಕಿಕಡ್ಡಿಯೊಂದನ್ನು ಹಚ್ಚಿ ಕೊಂಚ ಕೆಳಗಿಳಿಸಿ ವಿಷಾನಿಲಗಳ ಇರುವಿಕೆಯ ಬಗ್ಗೆ ಲೆಕ್ಕಹಾಕುತ್ತಾನೆ. ಒಮ್ಮೆ ಇವರಿಂದ ಹಸಿರು ನಿಶಾನೆಯು ಸಿಕ್ಕ ಕೂಡಲೇ ಗುಂಡಿಯತ್ತ ಬರುವ ಮಣಿ ಮೆಲ್ಲನೆ ಇಳಿದು ಗುಂಡಿಯೊಳಗೆ ಸೇರಿಹೋಗುತ್ತಾನೆ.

ಹೀಗೆ ಕೊಳಚೆ ಗುಂಡಿಗಿಳಿದಿರುವ ಮಣಿ ಒಂದು ಪಕ್ಷ ಜೀವಂತವಾಗಿ ಮರಳಿ ಬರದೇ ಹೋದರೆ? ಉಳಿದ ಕಾರ್ಮಿಕರೇನೋ ನಿರ್ಲಿಪ್ತರಾಗಿರುವಂತೆ ಕಾಣುತ್ತಿದ್ದಾರೆ. ಅವರಿಗದು ನಿತ್ಯದ ದಿನಚರಿ. ``ನಿತ್ಯವೂ ಭಯದಲ್ಲೇ ದಿನತಳ್ಳುವವಳು ನಾನು. ಇಷ್ಟು ಮಾನಸಿಕ ಒತ್ತಡವನ್ನು ಸಹಿಸಿಕೊಂಡು ಸಾಮಾನ್ಯರಂತೆ ಸಹಜ ಜೀವನವನ್ನು ನಡೆಸುವುದು ತುಂಬಾ ಕಷ್ಟ. ಮಣಿಗೆ ನಿತ್ಯವೂ ಕುಡಿಯುವ ಚಟ. ಈ ಬಗ್ಗೆ ಯಾವಾಗಲೂ ನಾನು ಅವನೊಂದಿಗೆ ಕಿತ್ತಾಡುತ್ತಿರುತ್ತೇನೆ. ಆದರೆ ಇಂಥದ್ದೊಂದು ಅಮಲಿನ ನೆರವಿಲ್ಲದೆ ಈ ಮಟ್ಟಿನ ದುರ್ಭರ ಕೆಲಸವನ್ನು ಮಾಡುವುದು ಕಷ್ಟ ಎಂಬುದರ ಅರಿವೂ ನನಗಿದೆ. ಒಳಚರಂಡಿಗಳಲ್ಲಿ, ಸೆಪ್ಟಿಕ್ ಟ್ಯಾಂಕುಗಳಲ್ಲಾಗುವ ದುರ್ಮರಣದ ಸುದ್ದಿಗಳನ್ನು ಓದಿದಾಗಲೆಲ್ಲಾ ನನಗೆ ಬಹಳ ಸಂಕಟವಾಗುತ್ತದೆ. ಇಂಥಾ ಕೆಲಸಗಾರನೊಬ್ಬನ ಪತ್ನಿಯೊಬ್ಬಳ ತಳಮಳಗಳು ನನಗೆ ಅರ್ಥವಾಗುತ್ತವೆ. ನಮ್ಮ ಜಾತಿಯವರನ್ನು ಯಾರೂ ಮನುಷ್ಯರಂತೆ ಕಾಣುವುದೇ ಇಲ್ಲ. ಈ ಜಾತೀಯತೆಯ ಕಳಂಕವನ್ನು ಹೊತ್ತುಕೊಂಡೇ ನಾವಿನ್ನು ಸಾಯಬೇಕೇನೋ'', ಎಂದು ದುಃಖದಿಂದ ಹೇಳುತ್ತಿದ್ದಾರೆ ನಾಗಮ್ಮ.

ಇದಾದ ಕೆಲಹೊತ್ತಿನ ನಂತರ ಮಣಿ ಆ ಕೊಳಚೆಗುಂಡಿಯಿಂದ ಮೇಲಕ್ಕೆ ಬಂದಿದ್ದಾನೆ. ಅವನ ಮೈಯಿಡೀ ಗಲೀಜು, ಕೆಸರು, ಇನ್ನೂ ಏನೇನೋ. ಹೀಗೆ ಮೇಲೆ ಬಂದ ಮಣಿ ಕೈಯಿಂದ ತನ್ನ ಮುಖವನ್ನು ತೊಳೆದಾದ ನಂತರ ಅವನ ಕಣ್ಣುಗಳು ನನಗೆ ಕಾಣತೊಡಗಿವೆ. ``ಅಬ್ಬಾ... ಈ ಬಾರಿಯೂ ಅದೃಷ್ಟವು ನನ್ನ ಜೊತೆಗಿತ್ತು'', ಎನ್ನುತ್ತಿದ್ದಾನೆ ಮಣಿ.
Bhasha Singh

ಭಾಷಾ ಸಿಂಗ್ ಸ್ವತಂತ್ರ ಪತ್ರಕರ್ತೆ ಮತ್ತು ಬರಹಗಾರರು ಮತ್ತು 2017 ಪರಿ ಫೆಲೋ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತ ಅವರ ಪುಸ್ತಕವಾದ 'ಅದೃಶ್ಯ ಭಾರತ್', (ಹಿಂದಿ) ಅನ್ನು 2012ರಲ್ಲಿ (ಇಂಗ್ಲಿಷಿನಲ್ಲಿ 'ಅನ್‌ಸೀನ್' 2014) ಪೆಂಗ್ವಿನ್ ಪ್ರಕಟಿಸಿತು. ಅವರ ಪತ್ರಿಕೋದ್ಯಮವು ಉತ್ತರ ಭಾರತದ ಕೃಷಿ ಸಂಕಟ, ಪರಮಾಣು ಸ್ಥಾವರಗಳ ರಾಜಕೀಯ ಮತ್ತು ನೈಜ ವಾಸ್ತವತೆಗಳು ಮತ್ತು ದಲಿತ, ಲಿಂಗ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಕೇಂದ್ರೀಕೃತಗೊಂಡಿದೆ.

Other stories by Bhasha Singh
Translator : Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Prasad Naik